ಮೆಚ್ಚುಗೆಯ ಮಾಯಾದಂಡಕ್ಕೆ ಅತಿ ಹೆಚ್ಚಿನ ಮಹತ್ವ ಇರುತ್ತದೆ. ನಮಗೆ ತರಬೇತಿ ನೀಡುವಾಗಲು ಇದೆ ಅಂಶಗಳನ್ನು ಹೇಳಲಾಗುತ್ತದೆ. ಹೊಗಳಿಕೆಯಿಂದ ಲಾಭವೇ ಆಗುತ್ತದೆ. ಒಂದು ವೇಳೆ ಲಾಭವಾಗದಿದ್ದರೂ ಪರವಾಗಿಲ್ಲ ಈ ದಂಡವನ್ನ ಪದೇ ಪದೇ ಪ್ರಯೋಗಿಸಿ ಕಲಿಕೆಗೆ ಹುರಿದುಂಬಿಸಬೇಕು ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
ಅಂದು ಎಲ್ಲ ಮಕ್ಕಳು ನಾನು ಶಾಲೆಗೆ ಬರುವುದನ್ನೇ ಬಕಪಕ್ಷಿಯಂತೆ ಕಾಯುತ್ತಾ ಕುಳಿತಿದ್ದರು. ನಾನು ದಿನಂಪ್ರತಿ ಬರುತ್ತಿದ್ದ ಸಮಯಕ್ಕಿಂತ ಸ್ವಲ್ಪ ಬೇಗನೆ ಶಾಲೆಗೆ ಬಂದಿದ್ದೆ. ಗೇಟಿನ ಬಳಿಗೆ ಓಡಿ ಬಂದ ಮಕ್ಕಳು ನನ್ನ ಕೈಯಿಂದ ಬ್ಯಾಗನ್ನು ಕಸಿದುಕೊಂಡು ನನ್ನ ಕೈ ಹಿಡಿದು ಬರಬರ ಕರೆದುಕೊಂಡು ಹೋದರು. ನಾನೇನು ತಪ್ಪು ಮಾಡಿರುವೆನೇನೋ ಅದಕ್ಕೆ ಮಕ್ಕಳು ನನ್ನನ್ನು ಶಿಕ್ಷಿಸಲು ಕರೆದುಕೊಂಡು ಹೋಗುತ್ತಿದ್ದಾರಾ? ಎನ್ನಿಸುವಷ್ಟರ ಮಟ್ಟಿಗೆ ಮಕ್ಕಳು ನನ್ನನ್ನ ಶಾಲಾ ಕೊಠಡಿಗೆ ಕರೆದುಕೊಂಡು ಹೋದರು. ಏನಾಗುತ್ತಿದೆ? ಯಾಕೆ ಹೀಗೆ ಮಾಡುತ್ತಿದ್ದಾರೆ? ಎಂದು ಯೋಚಿಸುತ್ತಿರುವಾಗಲೇ, ಮಿಸ್ ಇವತ್ತು ಪ್ರೆಯರ್ ಮಾಡೋದು ಬೇಡ. ಒಂದು ದಿನ ಪ್ರೇಯರ್ ಮಾಡದಿದ್ದರೆ ಏನು ಆಗಲ್ಲ ಅಂದರು. ಯಾಕೆ ಇವತ್ತು ಮಕ್ಕಳು ಹೀಗೆ ವರ್ತಿಸುತ್ತಿದ್ದಾರೆ ಎಂದು ಅಚ್ಚರಿಯಾಗಿ ಅವರ ಮಾತಿಗೆ ಗೋಡೆ ಹಾಕಿ, ಎಲ್ಲಾ ಬೇಗ ಬನ್ನಿ ಮಕ್ಕಳೇ ಪ್ರಾರ್ಥನೆ ಮಾಡೋಣ. ಇದು ನಮ್ಮ ದಿನಚರಿ. ನಾವೆಂದೂ ಇದನ್ನು ತಪ್ಪಿಸಬಾರದು. ದಿನನಿತ್ಯ ನಾಡಗೀತೆ ರಾಷ್ಟ್ರಗೀತೆ ಹಾಡಿ ನಮ್ಮ ಭಾರತಾಂಬೆ ಮತ್ತು ಕನ್ನಡಾಂಬೆಗೆ ವಂದನೆ ಸಲ್ಲಿಸಬೇಕು. ಹಾಗೆ ತಾಯಿ ಶಾರದೆಗೆ ನಮಿಸಬೇಕು ಎಂದಾಗ ಆಸಕ್ತಿ ಇಲ್ಲದಿದ್ದರೂ ಮಕ್ಕಳು ನನ್ನ ಮಾತಿಗೆ ಮರು ನುಡಿ ಆಡದೆ ಬಂದು ಪ್ರಾರ್ಥನೆ ಮಾಡಿದರು. ಸರ ಸರನೇ ತರಗತಿ ಕೋಣೆ ಹೊಕ್ಕು ಹಾಜರಾತಿ ಕೈಗಿತ್ತು ಮಿಸ್, ಇಂದು ಯಾರೂ ಶಾಲೆ ತಪ್ಪಿಸಿಲ್ಲ. ಎಲ್ಲರೂ ಬಂದಿದ್ದಾರೆ. ನೀವು ಅಟೆಂಡೆನ್ಸ್ ಕೂಗುತ್ತಾ ತಡ ಮಾಡಬೇಡಿ. ಎಲ್ಲರಿಗೂ ಹಾಜರಿ ಹಾಕಿಬಿಡಿ ಎಂದು ಕಪ್ಪು ಹಲಗೆ ಮೇಲೆ ಅವರೇ ಅವಸರ ಅವಸರವಾಗಿ ದಿನಾಂಕ, ವಾರ, ಹಾಜರಾತಿ, ದಾಖಲಾತಿ ನಮೂದಿಸಿದರು.
ಮಕ್ಕಳು ಶಿಕ್ಷಕರೊಂದಿಗೆ ಅದೆಷ್ಟು ಸ್ವತಂತ್ರವಾಗಿ ಇರುತ್ತಾರೆ ಎಂದರೆ, ಒಮ್ಮೊಮ್ಮೆ ಇವರೇನು ಮಕ್ಕಳಾ? ಅಥವಾ ಅಧಿಕಾರಿಗಳಾ ಎಂಬ ಭ್ರಮೆಯು ಉಂಟಾಗುತ್ತದೆ. ಮಕ್ಕಳು ಅತ್ಯಂತ ಪ್ರೀತಿಯಿಂದ ಶಿಕ್ಷಕರಿಗೆ ಅಷ್ಟೊಂದು ಆರ್ಡರ್‌ಗಳನ್ನು, ಉಪದೇಶಗಳನ್ನು ಮಾಡುತ್ತಾರೆ. ಮಕ್ಕಳ ವಿಚಿತ್ರ ವರ್ತನೆ ನನ್ನನ್ನು ಕಾಡಲಾರಂಭಿಸಿತು. ಅದಕ್ಕೆ ಸರಿಯಾದ ಕಾರಣ ತಿಳಿಯಬೇಕು ಎನ್ನುವಷ್ಟರಲ್ಲಿ ಎಲ್ಲರೂ ತಮ್ಮ ಕೈಗಳಲ್ಲಿ ಹೋಂವರ್ಕ್ ಬುಕ್ ಹಿಡಿದು ಸಾಲಾಗಿ ನಿಂತರು. ಮಕ್ಕಳೇ ಏನಿವತ್ತು ವಿಚಿತ್ರವಾಗಿ ಆಡುತ್ತಿದ್ದೀರಿ ಅಂದೆ. ಅಯ್ಯೋ ಮಿಸ್ ನೀವು ಮರೆತು ಬಿಟ್ರಾ? ನಿನ್ನೆ ನೀವು ಏನು ಹೇಳಿದ್ದೀರಿ. ನೆನಪಿಲ್ಲ ಕಣ್ರೋ ಮಕ್ಕಳೇ ನನಗೂ ವಯಸ್ಸಾಯಿತು ಎಂದು ಹುಸಿ ನಗೆ ಬೀರಿದೆ. ನಿಮಗೆ ಎನ್ ಮಹಾ ವಯಸ್ಸಾಗಿದೆ, ಈಗಲೂ ಹುಡುಗಿ ಥರಾನೇ ಇದ್ದೀರಿ ಎಂದು ಹೊಗಳಿಕೆ ಜೊತೆಗೆ ಜವಾಬ್ದಾರಿಯನ್ನು ನೆನಪಿಸಿದರು. ನೆನಪಿಲ್ಲದಿದ್ದರೂ ನೆನಪಿರುವಂತೆ ನಟಿಸುತ್ತಾ ಮಕ್ಕಳ ಮುಂದೆ ನನ್ನ ಗೌರವ ಕಾಪಾಡಿಕೊಂಡು, ನನ್ನ ಮರೆವು ಮರೆಮಾಚಿ ನಿನ್ನೆ ನಾನು ಹೇಳಿದ್ದ ವಿಷಯ ಯಾರಿಗೆ ತುಂಬಾ ಚೆನ್ನಾಗಿದೆ ನೆನಪಿದೆ, ಅವರು ಮುಂದೆ ಬಂದು ಮರೆತಿರುವವರಿಗೆ ಹೇಳಿ ಎಂದೆನು. ಒಬ್ಬ ಹುಡುಗಿ ಎದ್ದು ಬಂದು ಮಿಸ್ ನೀವೇ ಬರೆದಿದ್ದ ‘ಎಲ್ಲರ ರಕ್ತದ ಬಣ್ಣ ಕೆಂಪು’ ಎಂಬ ನಾಟಕವನ್ನು ಕೊಟ್ಟಿದ್ದಿರಿ. ಅದನ್ನು ಸೂಕ್ತ ಅಂತರದೊಂದಿಗೆ ಲೇಖನ ಚಿಹ್ನೆ ಬಳಸಿ, ಕಾಗುಣಿತ ದೋಷಗಳಿಲ್ಲದಂತೆ ಮುದ್ದಾದ ಅಕ್ಷರಗಳಲ್ಲಿ ಬರೆದವರಿಗೆ ಕೌಂಟ್ ಲೆಸ್ ಸ್ಟಾರ್ ಹಾಕಿ ಸುಂದರವಾದ ಗುಲಾಬಿ ಹೂವು ಕೊಡುವೆ ಅಂದಿದ್ದಿರಿ. ನಾವೆಲ್ಲರೂ ತುಂಬಾ ಮುದ್ದಾಗಿ ಬರೆದುಕೊಂಡು ಬಂದಿದ್ದೇವೆ… ಎಂದು ಒಂದೇ ಉಸಿರಿಗೆ ಒದರಿ ಬಿಟ್ಟಳು. ನಾನಾಗ ನನ್ನ ಮರೆತ ತಲೆಗೊಮ್ಮೆ ಮೊಟಕಿಕೊಂಡು ವಿಷಯ ಹೇಳಿದ ವಿದ್ಯಾರ್ಥಿಯನ್ನು ಹೃದಯಪೂರ್ವಕವಾಗಿ ಅಭಿನಂದಿಸಿ ಮೆಚ್ಚಿಗೆ ಮಾತುಗಳನ್ನು ಆಡಿದೆ. ಭಾಷಾ ವಿಷಯಗಳಲ್ಲಿ ನಿತ್ಯ ಕಾಫಿ ರೈಟಿಂಗ್ ಕಡ್ಡಾಯವಾಗಿ ಬರೆಸುತ್ತಿರುವೆ. ಕೆಲವೊಮ್ಮೆ ಮಕ್ಕಳು ಟೀಚರ್ ಭಯಕ್ಕೆ ಕಾಟಾಚಾರದಿಂದ ಬರೆಯುವ ಸಂದರ್ಭಗಳು ಉಂಟು. ಅದಕ್ಕೆ ಬ್ರೇಕ್ ಹಾಕಿ ಮೂಲದಲ್ಲೆ ಅಕ್ಷರಗಳನ್ನ ಅಂದಗೊಳಿಸಲು, ತಪ್ಪಿಲ್ಲದಂತೆ ಬರೆಯುವುದನ್ನು ಅಭ್ಯಾಸ ಮಾಡಿಸಲು ಇಂತಹ ಮೆಚ್ಚುಗೆಯ ತಂತ್ರಗಳನ್ನು ಮಾನದಂಡಗಳಾಗಿ ಬಳಸುತ್ತೇವೆ.
ತರಗತಿಯಲ್ಲಿ ಬಹುತೇಕ ಮಕ್ಕಳು ಸ್ಪರ್ಧಾ ಮನೋಭಾವದಿಂದ ತುಂಬಾ ಚೆನ್ನಾಗಿ ಬರೆದಿದ್ದರು. ಯಾರನ್ನು ಹೊಗಳಬೇಕು? ಯಾರನ್ನು ಬಿಡಬೇಕು? ಯಾರನ್ನು ಅಭಿನಂದಿಸಬೇಕು? ಎಂಬುದೇ ತಿಳಿಯದಷ್ಟು ಸುಂದರವಾಗಿ ಎಲ್ಲರೂ ಬರೆದಿದ್ದರು. ಎಲ್ಲರ ಬರವಣಿಗೆಯು ಅವರ ಪೂರ್ವ ಬರಹಕ್ಕಿಂತ ಸಾಕಷ್ಟು ಸುಧಾರಿಸಿತ್ತು. ಇಂತಹ ಬೆಳವಣಿಗೆ ಮಕ್ಕಳಿಗೆ ಬಯ್ಯುವುದರಿಂದಾಗಲಿ, ಹೊಡೆಯುವುದರಿಂದ ಆಗಲಿ ಲಭಿಸುವುದಿಲ್ಲ. ಅಂತಹ ಅಪಾರ ಶಕ್ತಿ “ಮೆಚ್ಚುಗೆ” ಎಂಬ ಮಾಯಾದಂಡಕ್ಕಿದೆ. ಮಕ್ಕಳೇ ಹಿಂದಿನ ಎಲ್ಲರ ಬರಹ ಹಿಂದಿಗಿಂತ ಉತ್ತಮವಾಗಿದೆ ಆದರೂ ವಿಜಯಿ ಒಬ್ಬರನ್ನು ಘೋಷಿಸಲೇಬೇಕು ಎನ್ನುತ್ತಾ ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿಯನ್ನು ಗುರುತಿಸಿದೆ. ಮಕ್ಕಳೇ ನೀವೆಲ್ಲರೂ ಚೆನ್ನಾಗಿ ಬರೆದಿದ್ದೀರಿ, ಇವರಿಬ್ಬರು ನಿಮ್ಮೆಲ್ಲರಿಗಿಂತ ಸ್ವಲ್ಪ ಮುಂದಿದ್ದಾರೆ. ಹಾಗಾಗಿ ಇವರಿಗೆ ನಾನು ಕೌಂಟ್ ಲೆಸ್ ಸ್ಟಾರ್ ಹಾಕಿ ನಾಳೆ ಗುಲಾಬಿ ತಂದು ಕೊಡುವೆ ಎಂದಾಗ ನಾವು ಚೆನ್ನಾಗಿ ಬರೆದಿದ್ದೀವಿ. ಹಾಗಾದರೆ ನಮಗೆಲ್ಲ ಏನು ಇಲ್ವಾ ಮಿಸ್ ಎಂದರು. ನೀವು ಚೆನ್ನಾಗಿ ಬರೆದಿದ್ದೀರಿ. ನಿಮಗೆಲ್ಲ ನಾಳೆ ಚಾಕಲೇಟ್ ತಂದುಕೊಡುವೆ. ಈಗ ಫೈವ್ ಸ್ಟಾರ್ ಹಾಕುವೆ. ಮುಂದೆ ನೀವು ಕೂಡ ಕೌಂಟ್ ಲೆಸ್ ಸ್ಟಾರ್ ಪಡೆಯುವಂತಹ ಬರಹ ಬರೆಯಬೇಕು ಎಂದಾಗ ಎಲ್ಲರೂ ಖುಷಿಯಾಗಿ ಆಯ್ತು ಮಿಸ್, ಆಯ್ತು ಮಿಸ್ ಎಂದು ಸಂಭ್ರಮಿಸಿದರು. ಒಬ್ಬರ ಏಳಿಗೆಯನ್ನು ಕಂಡು ಕುರುಬುವ ದುರ್ಗುಣ ಕೇವಲ ದೊಡ್ಡವರಲ್ಲಿ ಮಾತ್ರ ಕಾಣುತ್ತದೆ. ಮಕ್ಕಳಲ್ಲಿ ಅಂತಹ ಯಾವ ಭಾವವೂ ನನಗೆ ಕಾಣಲಿಲ್ಲ. ನಿಷ್ಕಲ್ಮಶವಾದ ಅವರ ಮನಸ್ಸು ಒಳಿತನ್ನು ಕಂಡು ಸಂಭ್ರಮಿಸುತ್ತಿತ್ತು. ನಾವು ಅವರಂತೆ ಬರೆದು ಮಿಸ್ ಕಡೆಯಿಂದ ಮತ್ತೊಂದು ಸಲ ಕೌಂಟ್ ಲೆಸ್ ಸ್ಟಾರ್ ಹಾಕಿಸಿಕೊಳ್ಳಬೇಕು ಎಂಬ ಹಂಬಲ, ಆಕಾಂಕ್ಷೆ, ಕನಸು, ಅವರ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು.
ಪ್ರತಿದಿನ ಮಕ್ಕಳು ಟೀಚರ್‌ಗೆ ಹೋಂವರ್ಕ್ ತೋರಿಸುವಾಗ ಪ್ರತಿಯೊಬ್ಬರೂ ಪ್ರತಿಯೊಬ್ಬರ ಪುಸ್ತಕದ ಮೇಲು ಹದ್ದಿನ ಕಣ್ಣು ಇಟ್ಟಿರುತ್ತಾರೆ. ಯಾರ್ಯಾರಿಗೆ ಎಷ್ಟೆಷ್ಟು ಗುಡ್, ವೆರಿ ಗುಡ್, ಎಕ್ಸಲೆಂಟ್ ಬಿದ್ದವೆಂದು ನೋಡಿ ತಮಗೆ ಬಿದ್ದ ಮೆಚ್ಚುಗೆಯೊಂದಿಗೆ ಅದನ್ನು ಹೋಲಿಸಿಕೊಂಡು ಖುಷಿಪಡುತ್ತಾರೆ. ವಾರಕ್ಕೊಮ್ಮೆ ತಮಗೆ ಬಂದ ಮೆಚ್ಚುಗೆಗಳನ್ನೆಲ್ಲ ಕೌಂಟ್ ಮಾಡಿ ತಾವೇ ಚೆಕ್ ಲಿಸ್ಟ್ ಹಾಕಿಕೊಂಡು ಎಲ್ಲರಿಗೂ ನಾನು ಇಷ್ಟು ಗುಡ್, ವೆರಿ ಗುಡ್ ಪಡೆದಿರುವುದಾಗಿ ಹೇಳೋದು ನೋಡುವುದರ ನೋಡುವುದೇ ಅತ್ಯಂತ ಆನಂದದ ಕ್ಷಣಗಳು.
ಶಿಕ್ಷಣದಲ್ಲಿ ಮೆಚ್ಚುಗೆಯ ಮಾನದಂಡ ಅದೆಷ್ಟು ತೀವ್ರವಾಗಿ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುತ್ತದೆ ಎಂಬುದಕ್ಕೆ ನಮ್ಮ ಶಾಲೆಯಲ್ಲಿ ನಡೆದ ಘಟನೆಯನ್ನು ಹೇಳುವೆ. ಆರನೇ ತರಗತಿಯಲ್ಲಿದ್ದ ಹುಡುಗ ಒಬ್ಬನಿಗೆ ಬರಹವೇ ಬರುತ್ತಿರಲಿಲ್ಲ. ಮೌಖಿಕವಾಗಿ ಪಾಠದ ಯಾವುದೇ ಪ್ರಶ್ನೆ ಕೇಳಿದರು ಉತ್ತರಿಸುತ್ತಿದ್ದ. ಮಗ್ಗಿಯಲ್ಲಿ ಇಡೀ ತರಗತಿಗೆ ಅವನೇ ಮುಂದು. ಮಗ್ಗಿಯನ್ನು ಉಲ್ಟಾ ಕೂಡ ಹೇಳುತ್ತಿದ್ದ. ಪದ್ಯವನ್ನು ತಪ್ಪದೆ ಹಾಡುತ್ತಿದ್ದ… ಮಾತ್ರವಲ್ಲ ಪಾಠವನ್ನು ಕೂಡ ಶಿಕ್ಷಕರು ಹೇಳಿಕೊಟ್ಟಿದ್ದನ್ನೇ ನೆನಪಿಟ್ಟುಕೊಂಡು ಪದ್ಯದಂತೆಯೇ ಹೇಳಿಬಿಡುತ್ತಿದ್ದ. ಅವನಿಗೆ ಅಕ್ಷರ ಗುರುತಿಸಲು ಬಾರದು. ನನಗಂತೂ ಇವನ ಬಗ್ಗೆ ಆಶ್ಚರ್ಯ ಆಗುತ್ತಿತ್ತು.
ಅವನ ಮೆಮೊರಿ ಪವರ್ ಅಷ್ಟು ಅದ್ಭುತವಾಗಿತ್ತು. ನನ್ನಿಂದಲೂ ಅವನಿಗೆ ಅಕ್ಷರ ಕಲಿಸಲು ಗುರುತಿಸುವಿಕೆ ಕಲಿಸಲು ಸಾಧ್ಯವಾಗಿರಲಿಲ್ಲ. ಒಮ್ಮೆ ಶಾಲೆಗೆ ಶಾಲಾ ಇನ್ಸ್ಪೆಕ್ಟರ್ ಭೇಟಿ ನೀಡಿದರು. ಅದೇ ತರಗತಿಗೆ ಎಂಟ್ರಿ ಕೊಟ್ಟು ಅವರು ಕನ್ನಡ ಗಣಿತ ಇಂಗ್ಲಿಷ್ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಿ ಮಗ್ಗಿ ಹೇಳಿಸಿದರು. ಪದ್ಯ ಹಾಡಿಸಿದರು. ಆಗ ಅವರ ಪ್ರತಿ ಪ್ರಶ್ನೆಗೂ ಇದೇ ಹುಡುಗ ಸರ್ ನಾನು ನಾನು ಎಂದು ಉತ್ತರಿಸುತ್ತಿದ್ದ. ಅವರು ಅವನನ್ನು ಹೊಗಳುತ್ತಾ ಹೋದರು. ಕೊನೆಗೆ ನಮ್ಮನ್ನು ಕರೆದು ಒಂದಿಬ್ಬರನ್ನು ಬಿಟ್ಟು ಉಳಿದ ಮಕ್ಕಳೆಲ್ಲ ಚೆನ್ನಾಗಿ ಓದುತ್ತಾರೆ. ಚೆನ್ನಾಗಿ ಕಲಿಸಿದ್ದೀರಿ. ಕಲಿಕೆಯಲ್ಲಿ ಈ ಇಬ್ಬರು ಮಕ್ಕಳು ಸ್ವಲ್ಪ ಹಿಂದಿದ್ದಾರೆ. ಅವರಿಗೆ ಕಲಿಸಲು ಹೆಚ್ಚು ಪ್ರಾಧಾನ್ಯತೆ ನೀಡಿ. ದಡ್ಡರು ಅಂತ ಅವರನ್ನು ಕೈ ಸೋಸಿ ಬಿಡಬೇಡಿ. ವಿಭಿನ್ನ ಚಟುವಟಿಕೆಗಳ ಮೂಲಕ ಕಲಿಸಲು ಪ್ರಯತ್ನಿಸುತ್ತಿರಿ ಎಂಬ ಸಲಹೆಯಿತ್ತರು. ಇಂತಹ ಮಕ್ಕಳು ನಮ್ಮ ಸರ್ಕಾರಿ ಶಾಲೆಯಲ್ಲಿ ಮಾಣಿಕ್ಯ ಇದ್ದಂತೆ. ಅದೆಂತಹ ಉತ್ಸಾಹ, ಶ್ರದ್ಧೆ, ಆಸಕ್ತಿ …ಕೇಳಿದ ಪ್ರತಿ ಪ್ರಶ್ನೆಗೂ ಉತ್ತರ ಹೇಳುವ ಅವನ ಹುಮ್ಮಸ್ಸು ನನಗಂತೂ ತುಂಬಾ ಖುಷಿಯಾಯಿತು ಎಂದು ಮನಸಾರೆ ಹೊಗಳಿದರು. ಅವನನ್ನು ಹತ್ತಿರ ಕರೆದು ಬೆನ್ನು ತಟ್ಟಿ ಶೇಕ್ ಹ್ಯಾಂಡ್ ಕೊಟ್ಟು ನೀನು ಯಾವಾಗಲೂ ಹೀಗೆ ಓದಬೇಕು ಮುಂದೆ ನಿಮ್ಮ ಶಾಲೆಗೂ, ನಿಮ್ಮ ಮೇಷ್ಟ್ರಿಗೂ ಕೀರ್ತಿ ತರಬೇಕು ಎಂದು ಮನಸಾರೆ ಅಭಿನಂದಿಸಿದರು.
ಇನ್ಸ್ಪೆಕ್ಟರ್ ಹೋದ ನಂತರ ಎಲ್ಲಾ ಮಕ್ಕಳು ಬಿದ್ದು ಬಿದ್ದು ನಕ್ಕರು. ನಮ್ಮ ಶಾಲೆಯ ಅತಿ ದಡ್ಡ ಹುಡುಗ ಇನ್ಸ್ಪೆಕ್ಟರ್ ದೃಷ್ಟಿಯಲ್ಲಿ ಅತಿ ಜಾಣನಾದ ಮಿಸ್ ಎಂದು ಎಲ್ಲರೂ ಅವನ ಕಡೆ ವ್ಯಂಗ್ಯ ನಗೆ ಬೀರಿದರು. ಈ ವಿಷಯ ನೆನೆದು ನನಗೂ ನಗು ಬಂತು. ಮಕ್ಕಳ ಮುಂದೆ ಅದನ್ನು ತೋರಗೋಡಲಿಲ್ಲ. ನೋಡಿದೆಯಾ ನಿನ್ನನ್ನು ಇನ್ಸ್ಪೆಕ್ಟರ್ ಅದೆಷ್ಟು ಚೆನ್ನಾಗಿ ಹೊಗಳಿದರು. ಅದೆಷ್ಟು ಗೌರವ ಸಿಕ್ಕಿತು. ಅದಕ್ಕಾದರೂ ನೀನು ಕಲಿಯಬೇಕು ಎಂದು ಮುಖ್ಯ ಶಿಕ್ಷಕರು ಹೇಳಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅವನು ಒಂದನೇ ತರಗತಿಯಲ್ಲಿ ಕಲಿಯಬೇಕಿದ್ದ ಬರಹವನ್ನು ಆರನೇ ತರಗತಿಯಲ್ಲಿ ಕಲಿಯಲು ಪ್ರಾರಂಭಿಸಿದ. ಆದರೆ ಅವನ ಬುದ್ಧಿ ಮತ್ತು ಮೆಚ್ಚುಗೆಯ ಮಾತುಗಳು ಇವನಲ್ಲಿ ಹುಮ್ಮಸ್ಸು ಆಸಕ್ತಿ ಮೂಡಿಸಿದವು. ಅವನು ಅಂದಿನಿಂದ ಬರಹ ಕಲಿಯಲು ಪ್ರಾರಂಭಿಸಿದ. ಶಿಕ್ಷಕರೆಲ್ಲ ಅಚ್ಚರಿಪಡುವಂತೆ, ಇತರ ಮಕ್ಕಳು ಅಚ್ಚರಿಯ ನೋಟ ಬೀರುವಂತೆ ಕಲಿಕೆಯಲ್ಲಿ ತೊಡಗಿಕೊಂಡ. ಬರಹದಲ್ಲಿ ಹಿಡಿತ ಸಾಧಿಸಿದ. ಅವನ ಸಾಧನೆಯ ಹೆಜ್ಜೆಗಳು ತರಗತಿಯ ತುಂಬಾ ಮೂಡಿದವು. ಏಳನೇ ತರಗತಿ ಪಾಸಾಗಿ ಹೋಗುವಾಗ ಅವನೊಬ್ಬ ಸಂಪೂರ್ಣ ಕಲಿಕೆಯ ವಿದ್ಯಾರ್ಥಿಯಾಗಿದ್ದ. ಇಲ್ಲಿ ಕೆಲಸ ಮಾಡಿದ್ದು ಅದೇ ಹೊಗಳಿಕೆ, ಪ್ರೋತ್ಸಾಹ, ಶಹಭಾಷ್‌ಗಿರಿ.
ಈ ಮೆಚ್ಚುಗೆಯ ಮಾಯಾದಂಡಕ್ಕೆ ಅತಿ ಹೆಚ್ಚಿನ ಮಹತ್ವ ಇರುತ್ತದೆ. ನಮಗೆ ತರಬೇತಿ ನೀಡುವಾಗಲು ಇದೆ ಅಂಶಗಳನ್ನು ಹೇಳಲಾಗುತ್ತದೆ. ಹೊಗಳಿಕೆಯಿಂದ ಲಾಭವೇ ಆಗುತ್ತದೆ. ಒಂದು ವೇಳೆ ಲಾಭವಾಗದಿದ್ದರೂ ಪರವಾಗಿಲ್ಲ ಈ ದಂಡವನ್ನ ಪದೇ ಪದೇ ಪ್ರಯೋಗಿಸಿ ಕಲಿಕೆಗೆ ಹುರಿದುಂಬಿಸಬೇಕು ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತದೆ.
ಶಿಕ್ಷಣದಲ್ಲಿ ಮಕ್ಕಳ ಬೆನ್ನು ತಟ್ಟಿ ಪ್ರೋತ್ಸಾಹಿಸುವ ವಿಧಾನಕ್ಕೆ ಬಹಳ ಪ್ರಾಮುಖ್ಯವಿದೆ. ಇದಕ್ಕೆ ಅನುಸರಿಸುವ ವಿಧಾನಗಳು ಹಲವು. ಒಬ್ಬೊಬ್ಬ ಶಿಕ್ಷಕರು ಒಂದೊಂದು ರೀತಿ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುತ್ತಾರೆ. ಬಹಳ ಮುಖ್ಯವಾಗಿ ಶಿಕ್ಷಕರು ಪಾಠ ಮಾಡುವಾಗ ಆಸಕ್ತಿಯಿಂದ ಗಮನವಿಟ್ಟು ಕೇಳುವ ಮಕ್ಕಳಿಗೆ, ಪ್ರಶ್ನಿಸಿದಾಗ ಉತ್ತರಿಸುವ ಅಥವಾ ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ, ನೀಡಿದ ಕಾರ್ಯವನ್ನು ನಿಗದಿತ ಸಮಯದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುವ ಮಕ್ಕಳಿಗೆ, ಕಲೆ ಸಾಹಿತ್ಯ ಸಂಗೀತ ನೃತ್ಯ ಕ್ರೀಡೆ ಅಥವಾ ಇತರ ಕಲೆಗಳಲ್ಲಿ ವಿಶೇಷ ಸಾಧನೆ ಮಾಡ ಹೊರಟ ಮಕ್ಕಳಿಗೆ ಶಿಕ್ಷಕರು ನೀಡುವ ಈ ಮೆಚ್ಚುಗೆಯ ಮಾನದಂಡಗಳು ಮಕ್ಕಳನ್ನು ಮತ್ತಷ್ಟು ಮಗದಷ್ಟು ಗುರಿಯೆಡೆಗೆ ಕರೆದೊಯ್ಯುತ್ತವೆ. ಅಂತಹ ವಾತಾವರಣ ಸೃಷ್ಟಿಸಬೇಕಾಗಿರುವುದು ಮಾತ್ರ ಶಿಕ್ಷಕರ ಜವಾಬ್ದಾರಿ. ಮಗು ಒಂದು ಸಣ್ಣಪುಟ್ಟ ಪ್ರಯತ್ನ ಮಾಡಿದರೂ ಅದನ್ನು ಬೆನ್ನು ತಟ್ಟಿ ವೆರಿ ಗುಡ್, ತುಂಬಾ ಚೆನ್ನಾಗಿ ಮಾಡಿದ್ದೀಯಾ, ಇನ್ನು ಚೆನ್ನಾಗಿ ಮಾಡಲು ಪ್ರಯತ್ನಿಸು ಎಂದು ಒಂದು ನಗೆಯನ್ನೋ, ಒಂದೆರಡು ಚಪ್ಪಾಳೆಯನ್ನೋ ನೀಡಿದರು ಸಾಕು. ನಾಳೆ ಅದು ಅವನ ಬದುಕಿಗೆ ಒಂದು ಮಹಾನ್ ಏಣಿಯಾಗುತ್ತದೆ. ಅದರ ಬದಲು ನೀನೇನ್ ಮಹಾ ಮಾಡಿರೋದು ಅಂತ ಒಮ್ಮೆ ಕಾಲೆಳೆದರೂ ಸಾಕು ಆ ಮಗು ಇನ್ನೆಂದೂ ಮುಂದೆ ಬರಲು ಪ್ರಯತ್ನಿಸುವುದಿಲ್ಲ. ಈ ಎಚ್ಚರಿಕೆ ಇರಬೇಕಾದದ್ದು ಅತಿ ಅಗತ್ಯ.
ನಾನು ಹೆಚ್ ಪಿ ಎಸ್ ಶಾಲೆಯೊಂದಕ್ಕೆ ವರ್ಗಾವಣೆಯಾಗಿ ಹೋದಾಗ 4ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಕನ್ನಡ ವರ್ಣಮಾಲೆಯನ್ನು ಸರಿಯಾಗಿ, ಸ್ಪಷ್ಟವಾಗಿ, ತಪ್ಪಿಲ್ಲದಂತೆ ಬರೆಯಲು ಬರುತ್ತಿರಲಿಲ್ಲ. ಉಳಿದ ಮಕ್ಕಳು ಅವನಿಗೆ ಏನು ಹೇಳಿಕೊಟ್ಟರೂ ಹೇಗೆ ಹೇಳಿಕೊಟ್ಟರೂ ಕಲಿಯುವುದಿಲ್ಲ. ಮೊದಲಿದ್ದ ಟೀಚರ್ ಕಲಿಸಲು ತುಂಬಾ ಪ್ರಯತ್ನಿಸಿದರು. ಆದರೂ ಅವನು ಕಲಿಯಲಿಲ್ಲ. ನಮಗೆ ಪಾಠ ಮಾಡಿ ಎಂದು ಅದೇ ತರಗತಿಯ ಮಕ್ಕಳು ಅವನನ್ನು ಅವ ಅವಹೇಳನ ಮಾಡಿದಾಗ ಆ ಹುಡುಗ ಅವಮಾನ ಹಾಗೂ ಬೇಸರದಿಂದ ಸಂಕೋಚಿಸಿದ್ದ ಅದನ್ನು ಸೂಕ್ಷ್ಮವಾಗಿ ಗಮನಿಸಿದ ನಾನು ಹೇಗಾದರೂ ಮಾಡಿ ಅವನಿಗೆ ಕಲಿಸಲೇ ಬೇಕೆಂದು ಕರೆದು ಕಪ್ಪುಹಲಗೆಯ ಮೇಲೆ ವರ್ಣಮಾಲೆ ಬರೆದು ನಕಲು ಮಾಡಲು ತಿಳಿಸಿದೆ. ಅವನು ಬರೆದ ಅಕ್ಷರ ಖಂಡಿತ ನನಗೆ ಏನೂ ಅರ್ಥವಾಗಲಿಲ್ಲ. ಆದರೂ ನಾನು ಮುಖದಲ್ಲಿ ನಗು ತುಂಬಿಕೊಂಡು ಚೆನ್ನಾಗಿ ಬರೆದಿರುವೆ ಎಂದು ಹೊಗಳಿದೆ. ಆದರೆ ಮಕ್ಕಳೆಲ್ಲ ಅವನ ಲಿಪಿ ನೋಡು ಮಿಸ್‌ಗೆ ಹೇಗೆ ಚಂದ ಕಾಣಿಸ್ತೋ ಅಂತ ಮಾತನಾಡಿಕೊಂಡಿದ್ದು ನನ್ನ ಗಮನಕ್ಕೆ ಬಂದಿತು.
ನೋಡಪ್ಪ ನೀನು ಮೊದಲನೇ ಸಲವೇ ಇಷ್ಟು ಚಂದವಾಗಿ ಬರೆದಿದ್ದೀಯಾ. ಇನ್ನು ಒಂದು 10 ಸಲ ಬರೆದರೆ ಇವರಿಗಿಂತ ಅಂದವಾಗಿ ಬರೆಯುತ್ತೀಯಾ ಅಂದಾಗ ಒಂದು ದೊಡ್ಡ ದಿಗ್ವಿಜಯ ಗೆದ್ದೆಂತಹ ಸಂಭ್ರಮವೇ ಅವನ ಕಣ್ಣುಗಳಲ್ಲಿ ಕಾಣಿಸಿತು. ನಾನು ಒಂದೊಂದೇ ಅಕ್ಷರ ಬರೆಯುವ ರಚನೆ ವಿನ್ಯಾಸ ಆಕಾರವನ್ನು ತೋರಿಸಿಕೊಟ್ಟೆ. ಹೆಚ್ಚು ಕಡಿಮೆ ಒಂದೇ ತಿಂಗಳಲ್ಲಿ ಪ್ರಯತ್ನಿಸಿ ಅದ್ಭುತವಾಗಿ ಕಲಿತುಬಿಟ್ಟ. ಈ ಮಧ್ಯೆ ನಲಿಕಲಿ ಮಕ್ಕಳ ಜೊತೆ ಬುನಾದಿ ಸಾಮರ್ಥ್ಯಗಳನ್ನ ಕಲಿಸಿದೆ. ಸರಳ ಪದಗಳಿಂದ ಸಂಕೀರ್ಣತೆಗೆ ಅವನನ್ನು ಕರೆದುಕೊಂಡು ಹೋದೆ. ಸಂಖ್ಯೆಗಳು ಮೂಲ ಕ್ರಿಯೆಗಳು ಇವೆಲ್ಲವನ್ನು ನಲಿ ಕಲಿ ಮಕ್ಕಳೊಂದಿಗೆ ಸೇರಿಸಿ ಕಲಿಸಿದೆ. ಆ ಮಕ್ಕಳಿಗೆ ನಾಯಕನನ್ನಾಗಿ ಮಾಡಿದೆ. ನನಗೆ ಬಹುಬೇಗ ಬದಲಾವಣೆ ಕಂಡುಬಂದಿತ್ತು. ನಾನು ತಡ ಮಾಡದೆ ಅವನ ಉತ್ಸಾಹಕ್ಕೆ ಕುಂದು ಬಾರದೆಂದು ತಕ್ಷಣ 4ನೇ ತರಗತಿ ಮಕ್ಕಳೊಂದಿಗೆ ಸೇರಿಸಿದೆ. ಮೊದಲು ತಪ್ಪಿಲ್ಲದಂತೆ ಓದಲು ಕಲಿತ ನಂತರ ಬರಹಕ್ಕೆ ವಾಲಿದ. ಅವನು ಸಣ್ಣ ಪುಟ್ಟ ಬರಹಗಳನ್ನು ದೊಡ್ಡ ಸಾಧನೆ ಎಂಬಂತೆ ಪ್ರೋತ್ಸಾಹಿಸಿದೆ. ಅದನ್ನೆಲ್ಲ ಇತರ ಮಕ್ಕಳಿಗೆ ತೋರಿಸಿ ಅವರ ಮುಂದೆ ಹೊಗಳಿದೆ. ಅವರು ಮತ್ತಷ್ಟು ಶಹಭಾಷ್ ಗಿರಿ ನೀಡಿ ಅವನನ್ನು ಹುರಿದುಂಬಿಸುತ್ತಿದ್ದರು. ಇದಕ್ಕೆ ನಾನು ವ್ಯಯಿಸಿದ್ದು ಅತ್ಯಲ್ಪ ಶ್ರಮ ಎನ್ನಬಹುದು. ಗುಡ್, ವೆರಿ ಗುಡ್, ಎಕ್ಸಲೆಂಟ್, ಸ್ಟಾರ್ ಗಳು ಇವನನ್ನು ಆರೇಳು ತಿಂಗಳಲ್ಲಿ c+ ಯಿಂದ A ಗ್ರೇಡ್ ಗೆ ತಂದು ನಿಲ್ಲಿಸಿದವು. ಈಗ ಇವನು ಇತರ ಮಕ್ಕಳಂತೆ ಓದುತ್ತಾನೆ, ಬರೆಯುತ್ತಾನೆ. ಕೆಲವೊಮ್ಮೆ ಆ ಮಕ್ಕಳಿಗಿಂತ ಮುಂದೆ ಕೂಡ ಹೋಗುತ್ತಾನೆ ಎಂಬುದು ಹೆಮ್ಮೆಯ ಸಂಗತಿ.
ಹಾಗಾಗಿ ಶಿಕ್ಷಣದಲ್ಲಿ ಶಹಬ್ಬಾಸ್ ಗಿರಿ ತುಂಬಾ ಅಮೂಲ್ಯವಾದುದು.
ಶಿಕ್ಷೆಯಿಲ್ಲದೇ ಶಿಕ್ಷಣ ಕೊಡಲು ಇವು ಸರಳ ಹಾಗೂ ಜಾಣತನದ ತಂತ್ರಗಳಾಗಿವೆ.
ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಶಿಕ್ಷಕ ವೃತ್ತಿಯನ್ನು ಮನಸಾರೆ ಪ್ರೀತಿಸುವ ನಿಮಗೆ ಮೊದಲು ನಮ್ಮ ಅಭಿನಂದನೆಗಳು. ಪುಟ್ಟ ಮಕ್ಕಳ ಮನಸ್ಸನ್ನು ಅರಿತು ಅವರನ್ನು ಗೆಲ್ಲುವ ಕಲೆಯಲ್ಲಿ ತಾವು ಅತ್ಯಂತ ಯಶಸ್ವಿಯಾಗಿದ್ದಿರಿ. ಒಬ್ಬ ಸೃಜನಶೀಲ ವ್ಯಕ್ತಿ ಮಾತ್ರ ಈ ರೀತಿ ಯೋಚಿಸಬಲ್ಲ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ, ಅದರಲ್ಲಿಯೇ ಜೀವನದ ಸಾರ್ಥಕತೆಯನ್ನು ಕಾಣುತ್ತಿರುವ ತಮಗೆ ನಮ್ಮ ಮನದಾಳದ ಹಾರೈಕೆ. ನಿಮ್ಮಂಥ ಶಿಕ್ಷಕ, ಶಿಕ್ಷಕಿಯರ ಸಂಖ್ಯೆ ಹೆಚ್ಚಾಗಲಿ, ಆ ಮೂಲಕ ನಮ್ಮೆಲ್ಲ ಮಕ್ಕಳ ಬಾಳು ಬೆಳಕಾಗಲಿ ಎಂಬುದೇ ನಮ್ಮ ಮನದಾಸೆ.