ಅವೆಲ್ಲ ಅಮ್ಮ ಬೆಳೆಸಿದ ಹೂಗಳು. ಮನೆಯ ಮುಂದೆ ಹೂ ಬೆಳೆಸಲು ಜಾಗವೂ ಇಲ್ಲ, ಹಿಡಿ ಮಣ್ಣೂ ಇಲ್ಲ. ಹಾಗಂತ ಅಮ್ಮ ಸುಮ್ಮನಿರೋಲ್ಲ. ಬೇರೆಯವರ ಟೆರೆಸ್ಸಿನ ಮೇಲೇ, ತನ್ನ ಗಾರ್ಡನ್ನನ್ನು ಬೆಳೆಸುತ್ತಿದ್ದಾರೆ. ಮನೆಯಹಾಗೆ ಇಷ್ಟಗಲ ಮೊಗವರಳಿಸಿಕೊಂಡು ನಿಲ್ಲುವ ಒಂದೊಂದೂ ಹೂಗಳನ್ನ ಅವಳು ಪ್ರೀತಿಯಿಂದ ನೋಡ್ತಾರೆ. ಮನೆಗೆ ಹೋದವರ ಮುಂದೆಲ್ಲ ಅದರ ಅಂದಚಂದದ ಗುಣಗಾನ ಮಾಡ್ತಾ, ಅಕಸ್ಮಾತ್ ಯಾರಾದ್ರೂ ಹೇಳದೇ ಕೇಳದೇ ಹೂಗಳನ್ನ ಕಿತ್ತುಬಿಟ್ರೆ ಮುಗೀತುಸಹಸ್ರ ನಾಮಾರ್ಚನೆ ಗ್ಯಾರಂಟಿ. ಯಾರ್ಯಾಕೆ ಮೊಮ್ಮಗಳು ಹೂವಿಗೆ ಕೈ ಹಾಕಿದ್ರೂ ಸರಿ.. ಬೈಗುಳ ತಿನ್ನೋದು ಕಟ್ಟಿಟ್ಟ ಬುತ್ತಿಯೇ.
ರೂಪಶ್ರೀ ಕಲ್ಲಿಗನೂರ್ ಅಂಕಣ

 

ನಗರದ ಜೀವನ ಎಂದರೆ ಹೇಗಂಥ ಸಣ್ಣ ಉದಾಹರಣೆ ಕೊಡುತ್ತೇನೆ. ನಮ್ಮನೆಯ ಟೆರೆಸ್ಸು ನೆತ್ತಿಯ ಮೇಲಿದೆ. ಬಾಗಿಲಿಂದ ಮೆಟ್ಟಿಲಿಗೆ ನಾಲ್ಕು ಹೆಜ್ಜೆ, ಇಪ್ಪತ್ತು ಮೆಟ್ಟಿಲು ಹಿಡಿದರೆ, ಇಪ್ಪತ್ನಾಲ್ಕು ಹೆಜ್ಜೆ ದೂರದಲ್ಲಿದೆಯಷ್ಟೇ. ಆದರೂ ಅಲ್ಲಿಗೆ ಹೋಗೋದು ವರ್ಷಕ್ಕೆ ಎರಡರಿಂದ ಮೂರು ಸಾರಿಯಷ್ಟೇ! ಅದೂ ರೊಟೀನ್ ಬದುಕಿಗೊಂದು ಬ್ರೇಕ್ ಸಿಕ್ಕಾಗ ಮಾತ್ರ… ಒಂದು ದೊಡ್ಡ ಕಪ್ಪಿನ ತುಂಬಾ ಚಾ ಹಿಡಿದು…. ಯಾವೊಂದೂ ಅವಸರವಿಲ್ಲದೆ, ಒಂದೊಂದೂ ಮೆಟ್ಟಿಲನ್ನು ಎಣಿಸಿಕೊಂಡು ಹೋಗಲು ಅನುಕೂಲ ಸಿಕ್ಕಾಗ ಮಾತ್ರವೇ….

ಹಾಗೆ ಯಾವಾಗಲಾದರೊಮ್ಮೆ ಟೆರೆಸ್ಸಿಗೆ ಹೋದಾಗ, ಅದರ ನಾಲ್ಕೂ ಗೋಡೆಗಳ ಪಕ್ಕದಲ್ಲಿ ಹೆಜ್ಜೆ ಹಾಕಿ, ಸುತ್ತಮುತ್ತಲಿನದೆಲ್ಲವನ್ನ ನೋಡುತ್ತೇನೆ. ದಿಗಂತದಾದ್ಯಂತ ನೋಡುವ ಶಕ್ತಿಯಿರುವ ಕಣ್ಣುಗಳು ಚಲಿಸಲು ಹೆಚ್ಚು ವ್ಯಾಪ್ತಿಯೇ ಸಿಗುವುದಿಲ್ಲ. ಅದನ್ನೂ ಮನುಷ್ಯನ ಗಳಿಗೆ ಕೊಂಡುಬಿಟ್ಟಿದೆ ಅನ್ನಿಸುತ್ತೆ. ಕಣ್ಣಿಗೇ ಉಸಿರು ಕಟ್ಟಿದ ಅನುಭವವಾಗುತ್ತೆ. ಹಿಂದೆಲ್ಲ ಸಂಜೆಯ ಅಥವಾ, ಬಿಡುವಿನ ಹೊತ್ತುಗಳಲ್ಲಿ, ಜನ ತಮ್ಮ ಮನೆಯ ಮುಂದೆ ಕೂತು ಮಾತನಾಡುತ್ತಿದ್ದರು. ಸೈಟುಗಟ್ಟಲೇ ಜಾಗವಲ್ಲದಿದ್ದರೂ, ಪುಟ್ಟ ಹುಡುಗರಿಬ್ಬರು ಪ್ಲಾಸ್ಟಿಕ್ ಬ್ಯಾಟ್ ಬಾಲುಗಳನ್ನು ಆಡುವಷ್ಟಾದರೂ ಇರುತ್ತಿತ್ತು. ಈಗ ಅದೇನೂ ಇಲ್ಲ. ಮನೆ ಮುಂದಿನ ಅಷ್ಟಿಷ್ಟು ಜಾಗವನ್ನೂ, ವಾಹನಗಳು ಆಕ್ರಮಿಸಿಕೊಂಡಾಗಿದೆ. ಆದರೀಗ ಒಂದು ಮನೆಯಿಂದ ಇನ್ನೊಂದು ಮನೆಗೆ ಒಂದಿಷ್ಟೂ ಉಸಿರಾಡಲು ಜಾಗವಿಲ್ಲ. ಹತ್ತು ಮನೆಗೆ ಒಂದು ಮರವಾದರೂ ಇದೆಯೇ ಇಲ್ಲವೋ. ಬೆಂಗಳೂರಿನ ಹಲವೆಡೆಗಳಲ್ಲಿ ಅಲ್ಲೊಂದು ಕೆರೆಯಿತ್ತಂತೆ, ಇಲ್ಲೊಂದು ಕೆರೆಯಿತ್ತಂತೆ ಅನ್ನೋ ಮಾತುಗಳನ್ನ ಕೇಳಿದ್ದೇವೆ. ಅವನ್ನು ನುಂಗಿದವರಿಗಷ್ಟೇ ಅದರ ಆಳ-ಅಗಲ ಗೊತ್ತು. ಹಾಗಾಗಿ ನಾವೆಲ್ಲ ಅದರ ಮೇಲೆ ಕಟ್ಟಿರೋ ಮೂವ್ವತ್ತು-ನಲ್ವತ್ತು ಮಹಡಿಯುಳ್ಳ ಗೋರಿಗಳನ್ನು ನೋಡುತ್ತಿದ್ದೇವಷ್ಟೇ.

ಶಹರದ ಯಾವುದೇ ಮನೆಯ ಹೊರಗಡೆ ಬಂದು ನಿಲ್ಲಲಿ, ಸುತ್ತಮುತ್ತೆಲ್ಲ ಬರೀ ಸಿಮೆಂಟಿನ ಮಹಲುಗಳು. ಒಂದಕ್ಕಿಂತ ಒಂದು ಎತ್ತರ, ಒಂದಕ್ಕಿಂದ ಒಂದು ಆಕರ್ಷಕ. ಉದ್ದುದ್ದ ಕಟ್ಟಡಗಳ ಮೇಲೆ ಗಾಜು ಅಳವಡಿಸಿರೋದನ್ನ ನೋಡಿದಾಗ ಮನಸ್ಸು ಹಿಂಡಿ ಹಿಪ್ಪೆಯಾಗುತ್ತದೆ. ಅದೆಷ್ಟು ಪಕ್ಷಿಗಳು ಆ ಗಾಜಿಗೆ ಡಿಕ್ಕಿ ಹೊಡೆದು ಪ್ರಾಣ ತೆತ್ತಿದ್ದಾವೋ. ಈಗೀಗ ಮನುಷ್ಯ ಸಾವಿಗೇ ಅನುಕಂಪದ ಭಾವ ಬತ್ತುತ್ತಿರುವಾಗ, ಹಕ್ಕಿಗಳ ಸಾವಿನ ಲೆಕ್ಕವಿಡುವವರು ಯಾರು?

*******

“ಅಮ್ಮಾವ್ರೇ ಹೂನೆಲ್ಲಾ ಹಂಗೇ ಒಣಗಿಸಿ ಬಿಡಬಾರ್ದು. ಅವನ್ನ ಕಿತ್ತು ದೇವ್ರು ತಲೆ ಮೇಲ್ ಇಡ್ಬೇಕು. ಅಂದ್ರೆನೇ ಹೂವಿಗೆ ಮುಕ್ತಿ ಸಿಗೋದು.” ಅಮ್ಮನ ಆರೈಕೆಯಲ್ಲಿ, ಹೂಕುಂಡಗಳಲ್ಲಿ ಬೆಳೆದ ಗಿಡಗಳು ಇಷ್ಟಗಲ ಹೂ ಬಿಟ್ಟಾಗಲೆಲ್ಲ ಬಸ್ಸಮ್ಮನ ಬಾಯಿಯಿಂದ ಬರೋ ಮಾತು ಇದೊಂದೇ. ಇಂಥ ಮಾತನ್ನ ಬಸ್ಸಮ್ಮನ ಬಾಯಲ್ಲಿ ಅದೆಷ್ಟು ಬಾರಿ ಕೇಳಿದ್ದಾಳೋ. ಆದ್ರೆ ಒಂದುಸಲವೂ ಆಕೆಯ ಆ ಮಾತನ್ನ ಕಿವಿಗೆ ಹಾಕಿಕೊಂಡಿದ್ದೇ ಇಲ್ಲ. ಬದಲಿಗೆ ಅಮ್ಮನಿಗೆ ಆ ಮಾತು ಕೇಳಿದಾಗಲೆಲ್ಲ ನಕ್ಕುಬಿಡ್ತಾಳೆ. “ಅಯ್ಯೋ ಹಂಗೆಲ್ಲ ಏನೂ ಇಲ್ಲ ಬಸ್ಸಮ್ಮ. ಹೂ ನೋಡು ಎಷ್ಟು ಚಂದ ಕಾಣ್ತೇತಿ. ಕೀಳಾಕಂತೂ ಮನಸ್ಸು ಬರಂಗಿಲ್ಲ. ದೇವರಿಗೋಸ್ಕರ ಇಷ್ಟು ಚಂದನ ಹೂ ಕೀಳೋದ? ಇಲ್ಲಪ್ಪ” ಅಂತ ತಣ್ಣಗೆ ಹೇಳಿಬಿಡ್ತಾಳೆ. ಆಗ ಬಸಮ್ಮನ ಮುಖ ನೋಡಬೇಕು “ಅಲ್ಲಾ ಈವಮ್ಮ ಹೂ ಬೆಳ್ಸೋದು ಮತ್ಯಾತಕ್ಕೇ ಅಂತೀನಿ, ದೇವ್ರ ಮುಡಿಗೇರದೇ ಇರೋ ಹೂ, ಪಾಪ ಬಾಡಿ ಸ್ವರ್ಗ ಕಾಣ್ದೇ ಹೋಗ್ತದಲ್ಲ ಸಿವನೇ” ಅನ್ನೋದು ಅವರ ವಾದ.

ಆದ್ರೆ ಅವೆಲ್ಲ ಅಮ್ಮ ಬೆಳೆಸಿದ ಹೂಗಳು. ಮನೆಯ ಮುಂದೆ ಹೂ ಬೆಳೆಸಲು ಜಾಗವೂ ಇಲ್ಲ, ಹಿಡಿ ಮಣ್ಣೂ ಇಲ್ಲ. ಹಾಗಂತ ಅಮ್ಮ ಸುಮ್ಮನಿರೋಲ್ಲ. ಬೇರೆಯವರ ಟೆರೆಸ್ಸಿನ ಮೇಲೇ, ತನ್ನ ಗಾರ್ಡನ್ನನ್ನು ಬೆಳೆಸುತ್ತಿದ್ದಾರೆ. ಮನೆಯಹಾಗೆ ಇಷ್ಟಗಲ ಮೊಗವರಳಿಸಿಕೊಂಡು ನಿಲ್ಲುವ ಒಂದೊಂದೂ ಹೂಗಳನ್ನ ಅವಳು ಪ್ರೀತಿಯಿಂದ ನೋಡ್ತಾರೆ. ಮನೆಗೆ ಹೋದವರ ಮುಂದೆಲ್ಲ ಅದರ ಅಂದಚಂದದ ಗುಣಗಾನ ಮಾಡ್ತಾ, ಅಕಸ್ಮಾತ್ ಯಾರಾದ್ರೂ ಹೇಳದೇ ಕೇಳದೇ ಹೂಗಳನ್ನ ಕಿತ್ತುಬಿಟ್ರೆ ಮುಗೀತು… ಸಹಸ್ರ ನಾಮಾರ್ಚನೆ ಗ್ಯಾರಂಟಿ. ಯಾರ್ಯಾಕೆ ಮೊಮ್ಮಗಳು ಹೂವಿಗೆ ಕೈ ಹಾಕಿದ್ರೂ ಸರಿ.. ಬೈಗುಳ ತಿನ್ನೋದು ಕಟ್ಟಿಟ್ಟ ಬುತ್ತಿಯೇ.

ಇಂಥ ಅಮ್ಮನಿಗೆ ಊರಿಗೆ ಹೋಗೋದಂದ್ರೆ ಒಂದೇ ಚಿಂತೆ. ಅದು ಗಿಡಗಳದ್ದಷ್ಟೇ. ಬೆಳೆದ ಮಕ್ಕಳು ತಮ್ಮನ್ನು ತಾವು ನೋಡಿಕೊಳ್ತಾರೆ ಅಂತ ಭರವಸೆ ಇದೆ. ಆದ್ರೆ ಗಿಡಗಳ ಬಗ್ಗೆ ಹಾಗಂದುಕೊಳ್ಳೋಕಾಗೋದಿಲ್ವಲ್ಲ. ಹಾಗಾಗಿಯೇ ಊರಿಗೆ ಹೊರಡೋ ಮುಂಚೆ, ಎಲ್ಲಾ ಗಿಡಗಳಿಗೂ ಮರೆಯದೇ ನೀರು ಹಾಕಲು ಹೇಳಿಯೇ ಅವರು ಊರಿನ ಬಸ್ಸು ಹತ್ತೋದು.

ಮನೆಯ ಮುಂದೇನೂ ಅಗಾಧವಾದ ಜಾಗವಿಲ್ಲ. ಆದ್ರೆ ಮಣ್ಣಿನ ಕುಂಡಗಳಿಂದ ಹಿಡಿದು, ಗಿಡ ನೆಡಲು ಯೋಗ್ಯವಾದ ಗಟ್ಟಿಯಾದ ಯಾವುದೇ ವಸ್ತುವನ್ನು ಅಮ್ಮ ಉಪಯೋಗಕ್ಕಿಲ್ಲ ಅಂತ ಬಿಸಾಕುವುದಿಲ್ಲ. ಮುರಿದಿದ್ದರೆ ಅದನ್ನು ಆದಷ್ಟು ನೆಟ್ಟಗೆ ಮಾಡಿ, ದಾಸವಾಳವೋ, ಗುಲಾಬಿಯೋ ಅಥವಾ ಇನ್ಯಾವುದೋ ದೊಡ್ಡ ಗಿಡದ ಟೊಂಗೆಯನ್ನು ಮುರಿದು ಅದರಲ್ಲಿ ಮಣ್ಣು ತುಂಬಿ ಗಿಡ ನೆಡುತ್ತಾಳೆ. ಮನೆ ಮುಂದೆ ಜಾಗವಿಲ್ಲ, ಮೊದಲನೆ ಮಹಡಿಯಲ್ಲಿರೋದೆಲ್ಲ ಅಮ್ಮನಿಗೆ ಕಾರಣಗಳೇ ಅಲ್ಲ. ಮನೆ ಮುಂದಿನ, ಅಂದ್ರೆ ಬೇರೆ ಮನೆಯ ಟೆರೇಸ್ ನ ಮೇಲೆಯೇ ಹತ್ತಿಪ್ಪತ್ತು ಗಿಡಗಳನ್ನ ಇಟ್ಟಿದ್ದಾರೆ. “ಅಮ್ಮ ಅಲ್ಯಾಕೆ ಪಾಟ್ ಇಡ್ತಿಯಾ? ಅವ್ರು ಬೈಕೊಳಲ್ವ?” ಅಂದ್ರೆ ಅವರೂ ನೋಡಿ ಸುಮ್ನಿದಾರೆ ಬಿಡು ಅಂದು ನಕ್ಕುಬಿಡ್ತಾರೆ. ಹೀಗೆ ಅಮ್ಮ ಊರಿಗೆ ಹೋಗಿ ವಾಪಸ್ಸು ಬಂದಾಗ ಮೊದಲು ನೋಡೋದು ತಾನು ಸಲುಹಿದ ಗಿಡಗಳನ್ನೇ. ಪ್ರತಿದಿನ ಫೋನಿನಲ್ಲಿ ನಮ್ಮನ್ನ ವಿಚಾರಿಸಿಕೊಳ್ಳುತ್ತಾರಾದರೂ ವಾಪಸ್ಸು ಬಂದಾಗ ಅವರ ಮನಸ್ಸು ಹೂಕುಂಡಗಳತ್ತಲೇ ಓಡುತ್ತದೆ.

ಅವರು ಊರಲ್ಲಿದ್ದಾಗಿನಂತೆ ಈಗಲೂ ನಳನಳಿಸುತ್ತಿವೆಯಾದ್ರೆ ಸರಿ. ಇಲ್ಲವಾದಲ್ಲಿ, ಅಂದ್ರೆ ನಾವೇನೋ ನಮ್ಮನಮ್ಮ ಕಲಸಗಳಲ್ಲಿ ಅವುಗಳಿಗೆ ನೀರುಣ್ಣಿಸೋದನ್ನು ಮರೆತು, ಗಿಡಗಳ ಮುಖ ಬಾಡಿಬಿಟ್ಟರೆ, ನಮ್ಮ ಕಥೆ ಮುಗಿದಂತೆಯೇ ಲೆಕ್ಕ. ಅವು ಸಂಪೂರ್ಣವಾಗಿ ಸುಧಾರಿಸಿಕೊಂಡು ಮೊದಲಿನಂತಾಗುವವರೆಗೂ ಬೈಗುಳಗಳ ಕಾಟ ತಪ್ಪಿದ್ದಲ್ಲ. ನಮ್ಮನ್ನು ನೋಡಿಕೊಂಡಷ್ಟೇ ಅಕ್ಕರೆಯಿಂದ ಹೂಗಿಡಗಳನ್ನೂ ಸಾಕುತ್ತಾಳೆ ಅಮ್ಮ. ನಮ್ಮ ನಿರ್ಲಕ್ಷ್ಯದಿಂದ ಯಾವುದಾದರೂ ಹೂ ಗಿಡ ಸತ್ತುಹೋದರಂತೂ ಇನ್ನಿಲ್ಲದಂತೆ ಮರಗುತ್ತಾಳೆ. ಹಾಗೆ ಅಮ್ಮ ಮತ್ತೆ ಅತ್ತೆಯ ಗಿಡಗಳ ಪ್ರೀತಿಯನ್ನು ಕಂಡು ನಾನೂ ಒಂದಷ್ಟು ಗಿಡಗಳನ್ನು ಕೊಂಡು ತಂದು ಟೆರೆಸ್ಸಿನ ಮೇಲೆ ಹಾಕಿದ್ದೆನಷ್ಟೇ. ಎರಡು-ಮೂರು ದಿನವಷ್ಟೇ ಅದು ನೀರು ಕಂಡದ್ದು. ಆಮೇಲೆ ನೋಡಿದಾಗ ಗಿಡ ಸತ್ತು ಬಿದ್ದಿತ್ತು. ನಿಜಕ್ಕೂ ಬೇಸರವಾಗಿತ್ತು ಆವತ್ತು. ಎಂಥಹ ಓಟದ ದಿನಚರಿ ಈ ಪಟ್ಟಣದ್ದು ಅನ್ನಿಸಿತ್ತು.

ಸದಾ ಕಿಟಿಕಿಟಿ ಅನ್ನೋ ಗೌಜಿನ ಪಟ್ಟಣ ವಾಸ ನಮ್ಮಿಬ್ಬರಿಗೂ ಇಷ್ಟವಿಲ್ಲ. ಅದಕ್ಕೆ ಸರಿಯಾಗಿಯೇ ಇಷ್ಟವಾದಾಗ ಹೋಗಲೊಂದು ಮಲೆನಾಡಿನಲ್ಲಿ ಮನೆಯಿದೆ. ಹಾಗಾಗಿ ತಿಂಗಳಿಗೊಮ್ಮೆಯಾದರೂ ಊರಿಗೆ ಹಾಜರಿ ಕೊಡೋದೆ. ಮಲೆನಾಡಿನ ಊರುಗಳಲ್ಲಿ ಬಹಳ ಇಷ್ಟವಾಗೋದು ಅಂದ್ರೆ ಅಲ್ಲಿನ ಗಡಿಯಾರವಂದ್ರೆ ನೀವು ನಂಬಲೇಬೇಕು. ಯಾಕಂದ್ರೆ ಬೆಳಗ್ಗೆ ಬೇಗನೆದ್ದು ಒಂದು ವಾಕಿಂಗ್ ಮುಗಿಸಿ, ಅಡುಗೆ ಮಾಡಿ, ತಿಂಡಿ ತಿನ್ನುವಷ್ಟರಲ್ಲಿ ಸೂರ್ಯ ಬಹುತೇಕ ನೆತ್ತಿ ಮೇಲೆ ಬಂದಿರುತ್ತಾನೆ. ಇಡೀದಿನ ಬೆರಳೆಣಿಕೆಯಷ್ಟು ಕೆಲಸ ಮಾಡಿ ಮುಗಿಸುವ ಹೊತ್ತಿಗೆ ಇಡೀ ದಿನ ಕಳೆದೇ ಹೋಗಿರತ್ತೆ. ಅರೇ ಎಲ್ಲಿ ಹೋಯ್ತು ಇವತ್ತಿನ ಸಮಯವೆಲ್ಲ ಅಂತ ಹುಡುಕಾಡಬೇಕು. ಅಷ್ಟು ಅವಸರ ಇಲ್ಲಿನ ಸಮಯಕ್ಕೆ. ಕಾಲ ರೇಸ್ ಕುದುರೆಯ ಮೇಲೆ ಕೂತು, ಅದರ ಹಿಂದೆ ಓಡುವ ನಮ್ಮನ್ನು ತಿರುತಿರುಗಿ ನೋಡುತ್ತ, ನಗುತ್ತ ಓಡುತ್ತಿದೆಯೇನೋ ಅನ್ನಿಸುತ್ತೆ. ಆದ್ರೆ ಊರಿಗೆ ಬಂದ್ರೆ ಚಿತ್ರಣ ಪೂರ್ತಿ ಬೇರೇಯೇ!

ಊರಿನಲ್ಲಿ ಅತ್ತೆಯದ್ದೂ ಇದೇ ಕತೆ. ಅವರು ಕೆಲಸಕ್ಕೆ ಹೋಗುವವರು. ಮನೆಯ ಸುತ್ತ ಮುತ್ತೆಲ್ಲ ಇರೋ ಸಾಕಷ್ಟು ಜಾಗವನ್ನು ಅದೆಷ್ಟು ಚಂದ ಬಳಸಿಕೊಂಡಿದ್ದಾರೆ. ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲೂ ಒಂದು ದಿನವೂ ಗಿಡಗಳಿಗೆ ನೀರು ಹಾಕುವುದನ್ನು ಮರೆಯುವುದಿಲ್ಲ. ಆಫೀಸಿಗೆ ಹೋಗಿ ಬರುವಾಗೆಲ್ಲ ರಸ್ತೆಯಲ್ಲಿ ನರ್ಸರಿ ಕಂಡರೆ ಕಾರು ತಾನಾಗೇ ಸ್ಟಾಪ್ ಆಗುತ್ತೇನೋ. ಇಳಿದುಹೋಗಿ ಅವರಿಷ್ಟದ ಆ್ಯಂಥೋರಿಯಮ್ ಅಥವಾ ಬೋಗನ್ ವಿಲ್ಲಾ ಗಿಡವನ್ನೋ ತಂದು ಡಿಕ್ಕಿಯಲ್ಲಿ ತುಂಬಿಕೊಂಡು ಹೋಗದೇಇರುವವರಲ್ಲ.

ಮಲೆನಾಡಿನ ಕಡೆ ಕೆಲಸಕ್ಕೆ ಜನ ಸಿಗೋದು ಕಡಿಮೆಯೇ. ಹಾಗಾಗಿ ತಮ್ಮ ನೌಕರಿಯ ಜೊತೆಗೇ ಮನೆಯ ಸಮಸ್ತ ಕೆಲಸಗಳೆಲ್ಲವೂ ಅವರದ್ದೇ. ಹಾಗಾಗಿ ಐವತ್ತಾರರ ವಯಸ್ಸಿನ ಅವರಿಗೆ ಬೆಳಗಾಗೋದು ಬೆಳಕ್ಕೆ ನಾಲ್ಕು ಗಂಟೆಗೇನೇ. ರನ್ ಮಿಷಿನ್ನಿನಂತೆ ಇಡೀ ದಿನ ಕೆಲಸ ಮಾಡಿ ಆಯಾಸಗೊಳ್ಳುವ ಅವರ ದಣಿವು ಆರೋದು ತಮ್ಮ ನೆಚ್ಚಿನ ಗಿಡಗಳಿಗೆ ನೀರುಣಿಸುವಾಗಲೇ. ಬೆಂಗಳೂರಿಗೆ ಬನ್ನಿ ಅಂತ ಕರೆದಾಗಲೆಲ್ಲ ಅವರಿಗೂ ತಮ್ಮ ಗಿಡಗಳದ್ದೇ ಚಿಂತೆ. “ಒಂದು ದಿನಾ ನೀರು ಹಾಕ್ದಿದ್ರೆ ಗಿಡಾ ಬಾಡಿಹೋಗ್ತವೆ ಕಣೇ. ಮಳೆಗಾಲ ಬರ್ಲಿ. ಆಗ ಆರಾಮವಾಗಿ ಬಂದು ನಾಲ್ಕು ದಿನಾ ಇದ್ದು ಹೋಗ್ತೀನಿ” ಅಂತಾರೆ. ಹಾಗಂದಮೇಲೆ ಹೇಗಾದರೂ ಬಲವಂತ ಪಡಿಸೋದು.

ಅತ್ತೆ ಜೊತೆಗೂಡಿ ಅಡುಗೆ ಮಾಡಿ, ಮನೆಯೊಳಗೆ, ಮನೆಯ ಸುತ್ತಣ ಶುಚಿಗೊಳಿಸೋದು ಎಲ್ಲ ಕೆಲಸಗಳೂ ಒಂದರಹಿದೊಂದಂತೆ ಮುಗಿದುಹೋಗುತ್ತವೆ. ಎಲ್ಲ ಮುಗಿದಾದ ಮೇಲೆ ಉಸ್ಸಪ್ಪಾ ಅಂತ ಕೂತು ಗಡಿಯಾರದ ಮೇಲೆ ಕಣ್ಣು ಹೋದರೆ ಕಣ್ಣು-ಮನಸ್ಸುಗಳೆಲ್ಲ ಶಾಕ್ ಹೊಡೆದಂತಾಗುತ್ತೆ. ಎಷ್ಟೆಲ್ಲ ಕೆಲಸ ಮಾಡಿ ಮುಗಿಸಿದರೂ ಗಂಟೆ ಒಂಭತ್ತು ದಾಟಿರುವುದಿಲ್ಲ. ಹೊರಗೆ ಇನ್ನೂ ಹೂಬಿಸಲು ನಳನಳಿಸುತ್ತಿರುತ್ತೆ. ಇಷ್ಟು ಹೊತ್ತಿಗೆ ಹಿತ್ತಲಲ್ಲಿ ಅಡ್ಡಾಡಿಕೊಂಡು ಬರುವ ಸ್ಟೇಸಿ ಪೋರ್ಟಿಕೋದಲ್ಲಿ ಕೂತು ಧ್ಯಾನಸ್ಥ ಸ್ಥಿತಿಗೆ ಜಾರಿಬಿಡುತ್ತಾಳೆ. ಒಮ್ಮೆಮ್ಮೆ ಎಷ್ಟರಮಟ್ಟಿಗೆ ಅವಳು ಧ್ಯಾನದಲ್ಲಿ ಮುಳುಗಿರುತ್ತಾಳೆಂದರೆ, ತಾನು ನಾಯಿ, ಗೇಟು ಕಾಯುವ ಕೆಲಸವೊಂದನ್ನು ತನಗೆ ಕೊಟ್ಟಿದ್ದಾರೆನ್ನುವುದನ್ನೂ ಮರೆತುಬಿಡುತ್ತಾಳೆ. ಮನೆಸುತ್ತೆಲ್ಲ ಹೂವು-ಹಣ್ಣಿನ ಗಿಡಮರಗಳು ಬಹುತೇಕ ಎಲ್ಲಕಾಲದಲ್ಲೂ ಅಲ್ಲಿನ ವಾತಾವರಣವನ್ನು ಉಲ್ಲಾಸಭರಿತವಾಗಿಟ್ಟಿರುತ್ತವೆ. ಜೊತೆಗೆ ಸದಾ ಕಿವಿಗೆ ಬೀಳುವ ಹಕ್ಕಿಗಳ ಚಿಲಿಪಿಲಿ, ಬೇಡವೆಂದರೂ ಕಿವಿಯಲ್ಲಿ ಗುಂಯ್ ಗುಡುವ ಜೀರುಂಡೆಯ ಸದ್ದು… ಹೀಗೆ ಸುತ್ತಮುತ್ತಲ ನಿಚ್ಚಳ ವಾತಾವರಣದಲ್ಲಿ ಅವಳದ್ದು ಸುಖೀ ಜೀವನ.

ರಸ್ತೆಯಮೇಲೆ ದೃಷ್ಟಿ ನೆಟ್ಟು ಕೂತ ಅವಳಿಗೆ ಯಾವಾಗಲೋ ಒಮ್ಮೆ ರಸ್ತೆಯಲ್ಲಿ ಹಾದುಹೋಗುವ ವಾಹನಗಳನ್ನು ನೋಡುವುದೇ ಅತೀ ಇಷ್ಟದ ಕೆಲಸವೆನ್ನಿಸುತ್ತೆ. ತೀರಾ ಗೇಟ್ ನತ್ತ ಯಾರಾದ್ರೂ ಸುಳಿದಾಗ ಭೌ ಅನ್ನುವುದ ಹೊರತು, ಮತ್ತೇನೂ ಅವಳಿಗೆ ಕೆಲಸವಿಲ್ಲ. ಕೊಟ್ಟದ್ದರಲ್ಲಿ ಇಷ್ಟವಾದದ್ದನ್ನ ತಿನ್ನೋದು, ಇಷ್ಟವಾಗದಿದ್ದಲ್ಲಿ ಅದನ್ನ ತಿರಸ್ಕರಿಸಿ ಮುಷ್ಕರ ಹೂಡೋದು. ಬೇಸರವಾದ್ರೆ, ರಾಣಿಯಂತೆ ಮೆರೆಯುತ್ತಿದ್ದವಳ ಪಾಲನ್ನು ಕಿತ್ತುಕೊಳ್ಳಲು ಬಂದಿರೋ ಗೆಳೆಯ ಮೈಕಿಯನ್ನ ಸಂಕಷ್ಟದಲ್ಲಿ ಸಿಕ್ಕಿಹಾಕಿಸಿ ಸಂಭ್ರಮಿಸೋದು ಅವಳ ನೆಚ್ಚಿನ ಹವ್ಯಾಸ. ಹಾಗಾಗಿಯೇ ಅವಳನ್ನು ನೋಡಿದಾಗೆಲ್ಲ ಹೊಟ್ಟೆ ಉರಿಯುತ್ತದೆ. ಯಾಕಂದ್ರೆ ಎಷ್ಟು ಅವಸರವಸರವಾಗಿ ಕೆಲಸ ಮಾಡಿದ್ರೂ ಬೆಂಗಳೂರಿನ ಸಮಯ ಒಂಚೂರು ನಮಗಾಗಿ ಕಾಯಲ್ಲ. ಸಮಯದ ಹಿಂದೆ ಇನ್ನಿಲ್ಲದಂತೆ ಓಡಬೇಕು. ಹಳ್ಳಿಗಳಿಗೆ ಮತ್ತು ಪಟ್ಟಣಗಳಿಗೆ ಪ್ರತ್ಯೇಕ ಗಡಿಯಾರವಿದೆಯೇನೋ ಅನ್ನುವಷ್ಟು ವ್ಯತಿರಿಕ್ತ ಸಮಯದ ಚಲನೆಯಲ್ಲಿ.