ಅನ್ಯಾಯ ಬುದ್ಧಿಯ ವಕೀಲರು ನ್ಯಾಯಬುದ್ಧಿಯ ರಾಜಸಭೆಗೆ ಬಂದರು. ಬರುವಾಗ ಮೂರು ಎತ್ತಿನ ಹೊರೆ ಕಾನೂನು ಪುಸ್ತಕಗಳನ್ನು ಸಂಗಡ ತಂದಿದ್ದರು. ನ್ಯಾಯ ಬುದ್ಧಿ ಅದನ್ನು ಕಂಡು ಅಂಜಿದ. ಅವನ ರಾಜ್ಯದಲ್ಲಿ ಕಾನೂನು ಕಾಯಿದೆಗಳು ಇರಲಿಲ್ಲ. ಸತ್ಯ ಅಹಿಂಸೆಗಳೇ ಅವರ ಕಾನೂನು. ಪ್ರಜೆಗಳು ಯಾವಾಗಲೂ ನ್ಯಾಯನೀತಿಗಳಿಗೆ ಅನುಸಾರವಾಗಿ ನಡೆಯುತ್ತಿದ್ದರು. ಆದರೆ ಕಾನೂನಿನಲ್ಲಿ ನ್ಯಾಯ ನೀತಿ ಸತ್ಯ ಅಹಿಂಸೆಗಳಿಗೆ ಸ್ಥಾನವಿಲ್ಲ. ಅರಸನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಮಂತ್ರಿಗಳು, ಸೇನಾಪತಿಗಳು ಅರಸನಿಗೆ ಯಾವ ಸಲಹೆಯನ್ನೂ ಕೊಡಲಾರದಾದರು. ಅರಸನು ದುಃಖಭವನದಲ್ಲಿ ಹೋಗಿ ಮಲಗಿದ.
ಡಾ.ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾ ಸರಣಿಯಲ್ಲಿ ಕಟಪಾಡಿ ಶ್ರೀನಿವಾಸ ಶೆಣೈ ಬರೆದ ಕತೆ
ನಮ್ಮ ಮನೆಯಾಚೆಗಿರುವುದು ಗಂಗಾಧರ ಶಾಸ್ತ್ರಿಗಳ ಮನೆ. ಆ ಮನೆಯಲ್ಲಿ ಸುಮಾರು 80-85 ವರ್ಷ ಪ್ರಾಯದ ಒಬ್ಬ ಮುದುಕಿ ಇದ್ದಳು. ಅವಳು ಶಾಸ್ತ್ರಿಗಳ ಅಜ್ಜಿ. ನಮಗೂ ಅಜ್ಜಿ! ಎಲ್ಲರೂ ಅವಳನ್ನು ಅಜ್ಜಿ ಅಜ್ಜಿ ಎಂದು ಕರೆವರು. ಅವಳು ಸಾಮಾನ್ಯ ಅಜ್ಜಿ ಆಗಿರಲಿಲ್ಲ. ಪುರಾಣ ಕಾಲದ ಕಥಾಸಾಹಿತ್ಯದಲ್ಲಿರುವ ಅಡುಗೂಲಜ್ಜಿಯಂತೆ ಅವಳಿದ್ದಳು. ತಾರುಣ್ಯದಲ್ಲಿ ಮಹಾ ಮಹಾ ಕಾರುಭಾರು ಮಾಡಿದವಳೆಂದು ಅವಳೇ ಹೇಳಿಕೊಳ್ಳುತ್ತಿದ್ದಳು. ಈಗ ಎನ್ಸೈಕ್ಲೊಪಿಡಿಯಗಳಿವೆಯಲ್ಲ ಅವುಗಳ ಹಾಗೆ ನಮ್ಮ ಅಜ್ಜಿಗೆ ಶಾಸ್ತ್ರ ಪುರಾಣ ಎಲ್ಲವೂ ತಿಳಿದಿದ್ದುವು. ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ಒಂದೂವರೆ ತಾಸು ಅವಳೊಡನೆ ಮಾತನಾಡಿ, ಸತ್ಯಯುಗದಲ್ಲಿ ಹುಟ್ಟಿದ ಅವಳಿಂದ ನಾವು ಕಲಿಯುಗದವರೆಂದು ಬೈದು ಭಂಗಿಸಿಕೊಳ್ಳದೆ ನಮಗೆ ನಿದ್ದೆಯೇ ಬೀಳುತ್ತಿರಲಿಲ್ಲ.
ಆ ದಿನ ರಾತ್ರಿ ಅಜ್ಜಿ ಚಾವಡಿಯಲ್ಲಿ ಹಾಸಿದ್ದ ಚಿಕ್ಕ ಚಾಪೆಯ ಮೇಲೆ ಕೂತು ಎಲೆಯಡಿಕೆ ಗುದ್ದುತಿದ್ದಳು. ನಾವು ಫಕ್ಕನೆ ಹೋಗಿ `ಅಜ್ಜಿ ಅಜ್ಜಿ’ ಎಂದು ಕರೆದೆವು.
ಎಲೆಯಡಿಕೆಯ ಮೇಲೆ ಬೀಳಬೇಕಾಗಿದ್ದ ಅಜ್ಜಿಯ ಒನಕೆ ಪೆಟ್ಟು ಕೈಮೇಲೆ ಬಿದ್ದಿತು. ಅವಳು ನೋವು ಸಹಿಸಲಾರದೆ -`ಥೂ! ಕಲಿಯುಗದ ಮಕ್ಕಳು!’ ಎಂದು ಮಾತಿನ ಪ್ರಾರಂಭಕ್ಕೆ ಆಶೀರ್ವಾದ ಕೊಟ್ಟಳು.
“ಅಜ್ಜೀ! ಅನಂತಶಯನದಲ್ಲಿ ಹೊಲೆಯರ ಮಕ್ಕಳು ದೇವಸ್ಥಾನಕ್ಕೆ ಹೋದರಂತೆ!”
“ಕಲಿಯುಗವಪ್ಪಾ, ಕಲಿಯುಗ”
“ಅಜ್ಜೀ, ನೀವು ಅಂದು ಯಾತ್ರೆಗೆ ಹೋಗಿದ್ದಿರಲ್ಲ. ಅನಂತಶಯನದ ಅನಂತಪದ್ಮನಾಭ ದೇವಸ್ಥಾನಕ್ಕೆ, ಅದರೊಳಗೆ ಹೊಲೆಯರ ಮಕ್ಕಳು ಹೋದರಂತೆ. ಹಿಂದಿನ ಕಾಲದಂತೆ ಗಲಭೆ ಗಲಾಟೆ ಯಾವುದೂ ಆಗಲಿಲ್ಲ ಅಜ್ಜಿ!”
“ಕಲಿಯುಗ, ಕಲಿಯುಗ!”
“ಅನಂತಶಯನದ ಅರಸರೇ ಹೀಗೆ ಮಾಡಬೇಕೆಂದು ಅಪ್ಪಣೆ ಕೊಟ್ಟಿದ್ದರು.”
“ಅದೇ ನಾನು ಹೇಳುವದು, ಕಲಿಯುಗವೆಂದು. ಯಥಾ ರಾಜ ತಥಾ ಪ್ರಜಾ!”
“ಇನ್ನೇನು ಅಜ್ಜಿ?”
“ಕಲಿಯುಗ, ಕಲಿಯುಗ, ಕಲಿಯುಗ! ಧರ್ಮವೇ ಮುಳುಗಿತು ಈ ಕಲಿಯುಗದಲ್ಲಿ. ಅಯ್ಯೋ ಯಾಕೆ ಬದುಕಿದೆನಪ್ಪಾ ಈ ಕಲಿಯುಗದಲ್ಲಿ?”
“ದೇವಸ್ಥಾನಕ್ಕೆ ಹೋಗಬೇಕಾದವರು ಹೋಗುವುದಿಲ್ಲ. ಹೋಗಬೇಕೆನ್ನುವವರು ಹೋದರೆ ಅದಕ್ಕೆ ಅಡ್ಡಿ ಮಾಡುವದೇಕೆ ಮತ್ತೆ ಅಜ್ಜಿ?”
“ನಿಮ್ಮ ಮಾಡು ಸುಡಲಿಕ್ಕೆ, ತೋಟೀ ಕೆಲಸಕ್ಕೆ ನೀವು ಹೋಗುತ್ತೀರಾ? ಹೋಗೀ ಹೋಗೀ, ಬಾಲ್ದಿ ಕುಂಟೆ ಹಿಡಿದು ಈಗಲೇ ಹೋಗಿ.”
“ಅಜ್ಜೀ, ನೀವು ತೋಟೀ ಕೆಲಸ ಮಾಡಲಿಲ್ಲವೇ? ಎಲ್ಲರೂ ಮಾಡುವುದಿಲ್ಲವೆ? ಹಾಗೆ ಮಾಡದಿದ್ದರೆ ಮಕ್ಕಳು ಹೇಗೆ ದೊಡ್ಡವರಾಗುತ್ತಾರೆ?”
“ನಿಜ, ನಿಜ, ನಿಜಕ್ಕೂ ನೀವು ಕಲಿಯುಗದ ಮಕ್ಕಳು. ಇಲ್ಲವಾದರೆ ಹಿರಿಯರ ಮಾತಿಗೆ ಹೀಗೆ ಪ್ರತಿಯಾಡುತ್ತೀರಾ?”
“ಹಾಗಲ್ಲ ಅಜ್ಜೀ! ಕರ್ಕಶವಾಗಿ ಕೂಗುವ ಕಾಗೆಗಳೂ ಅನ್ಯಾಯವಾಗಿ ಬಗಳುವ ನಾಯಿಗಳೂ ದೇವಸ್ಥಾನಕ್ಕೆ ಹೋಗಬಹುದಂತೆ. ಹೊಲೆಯರು ಹೋಗಬಾರದೇ? ಎಷ್ಟಾದರೂ ಅವರು ಮನುಷ್ಯರಲ್ಲವೇ?”
“ಇನ್ನೂ ಪ್ರತಿಯಾಡುತ್ತೀರಾ? ಕಲಿಯುಗದ ಮಕ್ಕಳು!”
“ಹಾಗಲ್ಲ ಅಜ್ಜಿ! ಯೇಸು ಯೇಸು ಎನ್ನುವ ಕ್ರಿಸ್ತಾನರೂ, ಅಲ್ಲಾ ಅಲ್ಲಾ ಎನ್ನುವ ಮುಸಲ್ಮಾನರೂ ದೇವಸ್ಥಾನಕ್ಕೆ ಹೋಗಬಹುದಂತೆ. ರಾಮಾ, ಕೃಷ್ಣಾ ಎನ್ನುವ ಹೊಲೆಯರು ಹೋಗಬಾರದೇ?”
“ಥೂ ! ಥೂ! ಎಷ್ಟು ಹೇಳಿದರೂ ಇಲ್ಲ!”
“ಪೀಕದಾನಿ ತಂದು ಕೊಡಬೇಕೆ, ಅಜ್ಜೀ?”
“ಕಲಿಯುಗವಪ್ಪಾ ಕಲಿಯುಗ! ಎಷ್ಟು ಹೇಳಿದರೂ ಕೇಳುವುದಿಲ್ಲ. ನಮ್ಮ ಶಾಸ್ತ್ರಗಳಲ್ಲಿ ಹಾಗೆ ಮಾಡಬೇಕೆಂದು ಹೇಳಿಯದೆ, ಕಂಡಿರಾ?”
“ನಿಮ್ಮ ಶಾಸ್ತ್ರಗಳು ಯಾವುವು ಅಜ್ಜೀ?”
“ಆ ಸಂಗತಿ ನಿಮಗೆ ಯಾಕೆ? ಕಲಿಯುಗದ ಮಕ್ಕಳು!”
“ಶಾಸ್ತ್ರಗಳಲ್ಲಿ ನ್ಯಾಯ, ನೀತಿ, ಮನುಷ್ಯತ್ವ ಮರೆತು ಕೆಲಸ ಮಾಡಬೇಕೆಂದು ಹೇಳಿದೆಯೇ ಅಜ್ಜಿ?”
“ಹೌದು! ನಿಮ್ಮದು ಕೊಳ್ಕೆಬೈಲು ಕಾನೂನು! ಕುತರ್ಕ ಮಾಡುವವರೊಡನೆ ಯಾರು ಮಾತನಾಡುತ್ತಾರೆ? ನಾನು ನಿಮ್ಮೊಡನೆ ಮಾತನಾಡುವುದಿಲ್ಲ ಹೋಗಿ, ಇಲ್ಲಿಂದ ಈಗಲೆ ಹೊರಡಿ.”
ಉತ್ತರ ಕೊಡಲಿಕ್ಕಾಗದಾಗ ಅಜ್ಜಿ ಮಾತು ಮಾತಿಗೆ “ಕಲಿಯುಗದ ಮಕ್ಕಳು, ಕೊಳೈಬೈಲು ಕಾನೂನು, ಸುಗ್ಗಿಬೈಲು ಕಾನೂನು, ಕಾರ್ತಿಬೈಲು ಕಾನೂನು” ಎನ್ನುತ್ತಿದ್ದಳು. ನಾವು ಅಜ್ಜಿಯ ಹತ್ತಿರ ಕೇಳಿದೆವು.
“ಹಾಗಲ್ಲ ಅಜ್ಜಿ! ಯೇಸು ಯೇಸು ಎನ್ನುವ ಕ್ರಿಸ್ತಾನರೂ, ಅಲ್ಲಾ ಅಲ್ಲಾ ಎನ್ನುವ ಮುಸಲ್ಮಾನರೂ ದೇವಸ್ಥಾನಕ್ಕೆ ಹೋಗಬಹುದಂತೆ. ರಾಮಾ, ಕೃಷ್ಣಾ ಎನ್ನುವ ಹೊಲೆಯರು ಹೋಗಬಾರದೇ?”
“ಅಜ್ಜೀ, ನೀವು ಕೊಳ್ಕೆಬೈಲು, ಸುಗ್ಗಿಬೈಲು, ಕಾರ್ತಿಬೈಲು ಎನ್ನುತ್ತೀರಲ್ಲ. ಅದು ಏನು ಅಜ್ಜಿ?”
ಅಜ್ಜಿ ಹೇಳತೊಡಗಿದಳು:
ಬಹು ಪುರಾತನ ಕಾಲದಲ್ಲಿ ನಾಲ್ಕೂರಿನಲ್ಲಿ ನ್ಯಾಯಬುದ್ಧಿ ಎಂಬ ಅರಸು ಇದ್ದ. ಅವನು ಧರ್ಮದಿಂದಲೂ, ನ್ಯಾಯದಿಂದಲೂ ರಾಜ್ಯವನ್ನು ಪರಿಪಾಲಿಸುತ್ತಿದ್ದ. ಕಾಲಕಾಲಕ್ಕೆ ಮಳೆ ಬೆಳೆ ಎಲ್ಲಾ ಸರಿಯಾಗಿ ಆಗಿ ಎಲ್ಲೆಲ್ಲಿಯೂ ಸುಭಿಕ್ಷ ಇರುತ್ತಿತ್ತು. ಪ್ರಜೆಗಳು ರಾಮರಾಜ್ಯದ ಸುಖವನ್ನು ಅನುಭವಿಸುತ್ತಿದ್ದರು.
ನೆರೆಯೂರಾದ ಆರೂರಿನಲ್ಲಿ ಅನ್ಯಾಯಬುದ್ಧಿ ಎಂಬ ಇನ್ನೊಬ್ಬ ಅರಸು ಇದ್ದ. ಅವನ ಹೆಸರಿಗೆ ತಕ್ಕಂತೆ ಅನ್ಯಾಯದಿಂದಲೂ ಅಧರ್ಮದಿಂದಲೂ ರಾಜ್ಯವನ್ನಾಳುತ್ತಿದ್ದ. ಅವನ ದುಷ್ಟ ವರ್ತನೆಯಿಂದ ಕ್ಷುಬ್ಧರಾದ ಪ್ರಜೆಗಳು ಅವನ ಸರ್ವನಾಶವಾಗಲಿ ಎಂದು ಶಪಿಸುತ್ತ ನಾಲ್ಕೂರಿಗೆ ಪಲಾಯನ ಮಾಡಿದರು; ಅವರು ಅಲ್ಲಿಯೇ ಮನೆಮಾರು, ಗುಡಿಗೋಪುರ ಕಟ್ಟಿಕೊಂಡು ನೆಮ್ಮದಿಯಿಂದ ಇರತೊಡಗಿದರು.
ಪ್ರಜೆಗಳು ನ್ಯಾಯಬುದ್ಧಿಯ ರಾಜ್ಯಕ್ಕೆ ಓಡಿಹೋಗಿ ಅನ್ಯಾಯಬುದ್ಧಿಗೆ ನಷ್ಟ ಮಾಡುವುದು ಅವನ ಗೂಢಾಚಾರರು ಬಂದು ಅವನಿಗೆ ತಿಳಿಸಿದರು. ಅವನು ಸಿಟ್ಟಿನಿಂದ ಸಂತಪ್ತನಾದ. ತನ್ನ ರಾಜ್ಯದ ಪ್ರಜೆಗಳನ್ನು ನ್ಯಾಯಬುದ್ಧಿಯ ಪುಸಲಾಯಿಸಿ ಕರಕೊಂಡು ಹೋಗಿರುವನೆಂದು ಅವನ ಮೇಲೆ ಆರೋಪವನ್ನು ಹೊರಿಸಿದ. ಕಾನೂನು ಮೇರೆಗೆ ಅಪರಾಧವನ್ನು ಸಾಬೀತು ಮಾಡಲಿಕ್ಕೆ ವಕೀಲರು ಬರುವರಾಗಿಯೂ, ಅವರನ್ನು ತರ್ಕದಲ್ಲಿ ಸೋಲಿಸದಿದ್ದರೆ, ಅಪರಾಧಕ್ಕೆ ತಕ್ಕ ದಂಡ ಕೊಡಬೇಕಾಗುವದೆಂದೂ ಅವನು ನ್ಯಾಯಬುದ್ಧಿಗೆ ತಿಳಿಸಿದ.
ಅನ್ಯಾಯ ಬುದ್ಧಿಯ ವಕೀಲರು ನ್ಯಾಯಬುದ್ಧಿಯ ರಾಜಸಭೆಗೆ ಬಂದರು. ಬರುವಾಗ ಮೂರು ಎತ್ತಿನ ಹೊರೆ ಕಾನೂನು ಪುಸ್ತಕಗಳನ್ನು ಸಂಗಡ ತಂದಿದ್ದರು. ನ್ಯಾಯ ಬುದ್ಧಿ ಅದನ್ನು ಕಂಡು ಅಂಜಿದ. ಅವನ ರಾಜ್ಯದಲ್ಲಿ ಕಾನೂನು ಕಾಯಿದೆಗಳು ಇರಲಿಲ್ಲ. ಸತ್ಯ ಅಹಿಂಸೆಗಳೇ ಅವರ ಕಾನೂನು. ಪ್ರಜೆಗಳು ಯಾವಾಗಲೂ ನ್ಯಾಯನೀತಿಗಳಿಗೆ ಅನುಸಾರವಾಗಿ ನಡೆಯುತ್ತಿದ್ದರು. ಆದರೆ ಕಾನೂನಿನಲ್ಲಿ ನ್ಯಾಯ ನೀತಿ ಸತ್ಯ ಅಹಿಂಸೆಗಳಿಗೆ ಸ್ಥಾನವಿಲ್ಲ. ಅರಸನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಮಂತ್ರಿಗಳು, ಸೇನಾಪತಿಗಳು ಅರಸನಿಗೆ ಯಾವ ಸಲಹೆಯನ್ನೂ ಕೊಡಲಾರದಾದರು. ಅರಸನು ದುಃಖಭವನದಲ್ಲಿ ಹೋಗಿ ಮಲಗಿದ. ಅನ್ನ ನೀರುಗಳನ್ನು ತೆಗೆದುಕೊಳ್ಳಲಿಲ್ಲ. ಹೆಂಡತಿ ಮಕ್ಕಳು – ಬಂಧುಗಳು ಬಾಂಧವರು ಬಹು ವಿಧವಾಗಿ ಸಮಜಾಯಿಸಿದರು. ಆದರೂ ಅವನು ಪಿಟ್ಟೆಂದು ಮಾತನಾಡಲಿಲ್ಲ.
ಈ ವರ್ತಮಾನವು ಹಳ್ಳಿ ಹಳ್ಳಿಗೂ ಹರಡಿತು. ಪ್ರಜೆಗಳು ವ್ಯಾಕುಲರಾದರು. ಇದನ್ನು ತಿಳಿದ ಒಂದು ಹಳ್ಳಿಯ ಒಬ್ಬ ರೈತನು ಓಡೋಡಿ ಬಂದು, ಅರಸನಿಗೆ ಸಾಷ್ಟಾಂಗವೆರಗಿ ತಾನು ಆತನ ದುಃಖ ಸಮಾಧಾನ ಮಾಡುವೆನೆಂದು, ಮಾತಿಗೆ ತಪ್ಪಿದರೆ ಪ್ರಾಣ ಕೊಡಲಿಕ್ಕೂ ಸಿದ್ಧನೆಂದು ತಿಳಿಸಿದನು. ಅರಸನು ಒಪ್ಪಿದ. ಎಲ್ಲರಿಗೂ ಸಂತೋಷವಾಯಿತು.
ಮರುದಿನ ಸಭೆ ಜರುಗಿತು. ಅನ್ಯಾಯಬುದ್ಧಿಯ ವಕೀಲರು ತಮ್ಮ ದೊಡ್ಡ ದೊಡ್ಡ ಕಾನೂನು ಪುಸ್ತಕಗಳೊಂದಿಗೆ ಉಚಿತಾಸನಗಳಲ್ಲಿ ಬಂದು ಕೂತರು. ಹಳ್ಳಿಯ ರೈತನು ವಕೀಲರ ಉಡುಗೆಯನ್ನು ಉಟ್ಟು ಬಂದಿದ್ದನು. ಅವನ ಹತ್ತಿರವೂ ಕೊಳ್ಕೆ, ಕಾರ್ತಿ ಮತ್ತು ಸುಗ್ಗಿ ಬೆಳೆಯ ಹುಲ್ಲನ್ನು ತುಂಬಿಸಿ ಪುಸ್ತಕಾಕಾರವಾಗಿ ಕಟ್ಟಿದ ಮೂರು ದೊಡ್ಡ ಹೊರೆಗಳಿದ್ದವು. ಈ ವಿಚಿತ್ರ ಪುಸ್ತಕಗಳನ್ನು ಕಂಡು ಆಶ್ಚರ್ಯಭರಿತರಾದ ಅನ್ಯಾಯಬುದ್ಧಿಯ ವಕೀಲರು ರೈತನೊಡನೆ ಕೇಳಿದರು –
“ಇದು ಯಾವ ಕಾನೂನು?”
“ಕೊಳ್ಕೆ ಬೈಲ್!”
“ಇದು?”
“ಕಾರ್ತಿಬೈಲ್!”
“ಮತ್ತೆ ಇದು?”
“ಇದೊ? ಸುಗ್ಗಿಬೈಲ್ ಕಾನುನು!”
ಅದುವರೆಗೆ ಕಾಣದ ಪುಸ್ತಕಗಳನ್ನು ಕಂಡೂ, ಕೇಳದ ಹೆಸರುಗಳನ್ನು ಕೇಳಿಯೂ ಅನ್ಯಾಯಬುದ್ಧಿಯ ವಕೀಲರು ಭ್ರಾಂತರಾದರು.
“ಈಗ ಹೊರಗೆ ಹೋಗಿ ಬರುತ್ತೇವೆ” ಎಂದು ಹೋದವರು ಪುನಃ ಹಿಂದಿರುಗಲಿಲ್ಲ.
ನ್ಯಾಯಬುದ್ಧಿಯ ಮಾನರಕ್ಷಣೆಯಾಯಿತು. ನಾಲ್ಕೂರು ರಾಜ್ಯವೂ ಸುರಕ್ಷಿತವಾಯಿತು. ಎಲ್ಲರೂ ಸುಖ ಸಂತೋಷದಿಂದ ಇರುತ್ತಿದ್ದರು.
“ಅಜ್ಜಿ!”
“ಏನು ಮಕ್ಕಳೇ?”
“ನಮ್ಮದು ಕೊಳ್ಕೆಬೈಲ್, ಸುಗ್ಗಿಬೈಲ್, ಕಾರ್ತಿಬೈಲ್ ಕಾನೂನು ಹೌದು ಅಜ್ಜಿ!”
“ಏನು ಹುಚ್ಚು ಮಾತು? ಕಲಿಯುಗದ ಮಕ್ಕಳು!”
“ಅಜ್ಜಿ! ಅನ್ಯಾಯದಿಂದಲೂ, ಅಧರ್ಮದಿಂದಲೂ ನಾಲ್ಕೂರು ಅರಸನನ್ನು ಕಾಪಾಡಲಿಕ್ಕೆ ಇದೇ ಕಾನೂನುಗಳು ಬೇಕಾದವು. ಈಗ ನಿಮ್ಮ ಶಾಸ್ತ್ರಗಳಿಂದ ಬೋಳೇಸ್ವಭಾವದ ಜನರನ್ನು ಕಾಪಾಡಲಿಕ್ಕೆ ಇವೇ ಕಾನೂನುಗಳು ಬೇಕು ಅಜ್ಜಿ!”
“ಹೋಗಿ, ಹೋಗಿ, ಎದುರು ನಿಲ್ಲಬೇಡಿ. ಕಲಿಯುಗದ ಮಕ್ಕಳು, ಕಲಿಯುಗದ ಮಕ್ಕಳು” ಎಂದು ಅಜ್ಜಿ ನಮ್ಮನ್ನು ಓಡಿಸಲಿಕ್ಕೆ ಬಂದಳು. ಅವಳು ಎದ್ದು ನಿಲ್ಲಬೇಕಾದರೆಯೇ ನಾವು ನಮ್ಮ ಮನೆಗಳನ್ನು ಸೇರಿದ್ದೆವು!
(ತ್ರಿವೇಣಿ, ಜನವರಿ 1937)
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.