ಮಗುವಿನ ಸಾಮರ್ಥ್ಯ, ಒಲವು, ಮನೋಧರ್ಮಗಳನ್ನು ತಿಳಿಯುವ ಭಾಷೆ, ಗಣಿತಕ್ಕೆ ನಂತರದ ಸ್ಥಾನ, ಮೊದಲು ಮಗು ಭಾವನಾತ್ಮಕವಾಗಿ ಹೇಗಿದೆಯೆಂದು ತಿಳಿದು, ಅಂದಾಜು ಮಾಡಿ ಪೋಷಕರಿಗೆ ತಿಳಿಸುತ್ತಾರೆ. ತನ್ನ ವಯಸ್ಸಿನವರೊಡನೆ ಹೇಗೆ ಸಂವಹನ ಮಾಡುತ್ತದೆ, ಒಂದು ತಂಡದ ಸದಸ್ಯನಾಗಿ ಹೇಗೆ ಕೆಲಸ ಮಾಡುತ್ತದೆ, ನೆರವು ನೀಡಬಲ್ಲದೆ, ನೆರವು ಪಡೆಯಬಲ್ಲದೆ, ಇತರರ ಸಾಮರ್ಥ್ಯವನ್ನು ಗೌರವಿಸಬಲ್ಲದೆ, ತನ್ನ ನಿಲುವನ್ನು ಇತರರ ಮೇಲೆ ಹೇರದೆ ತರ್ಕಬದ್ಧವಾಗಿ ವಿವರಿಸಬಲ್ಲದೆ, ತಪ್ಪನ್ನು ತಿದ್ದಿಕೊಳ್ಳಬಲ್ಲದೆ, ನಿರಾಶೆ, ವೈಫಲ್ಯಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಅನ್ಯ ಸಂಸ್ಕೃತಿ, ಹಿನ್ನೆಲೆಯಿಂದ ಬಂದ ಮಕ್ಕಳನ್ನು ಹೇಗೆ ಕಾಣುತ್ತದೆ…
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಐದನೆಯ ಬರಹ

 2019ರ ಪ್ರವಾಸದ ಸಂದರ್ಭದಲ್ಲಿ ಮೊಮ್ಮಗನ ಶಾಲೆಗೆ ನಾಲ್ಕಾರು ಸಲ ಹೋಗಿದ್ದೆ. ಹತ್ತಿರದಿಂದಲೇ ಕಂಡಿದ್ದೆ. ಶಾಲೆಯವರು ನೀಡುವ ಕ್ರಿಸ್‌ಮಸ್ ಪಾರ್ಟಿಗೆ ಹೋಗಿ ಬಿಸಿಬಿಸಿ ದ್ರಾಕ್ಷಾರಸವನ್ನು ಕೂಡ ಕುಡಿದಿದ್ದೆ. ಶಿಕ್ಷಣದ ರೀತಿಯ ಬಗ್ಗೆಯೂ ಕೇಳಿ ತಿಳಿದುಕೊಂಡಿದ್ದೆ. ಆದರೆ ನಾನು ತಿಳಿದುಕೊಂಡದ್ದೆಲ್ಲ ಸ್ಥೂಲವಾದದ್ದು ಎಂಬುದು ನಂತರ ಗೊತ್ತಾಯಿತು. ಉತ್ತಮ ತರಬೇತಿ ಮತ್ತು ಆಳವಾದ ಬದ್ಧತೆ ಹೊಂದಿದ ಶಿಕ್ಷಕರಿದ್ದಾರೆ. ಪ್ರತಿ ತರಗತಿಯಲ್ಲೂ ಹದಿನೈದು, ಇಪ್ಪತ್ತೇ ಮಕ್ಕಳು. ಹೋಂ ವರ್ಕ್ ಇಲ್ಲ. ಇಷ್ಟೇ ನನಗೆ ತಿಳಿದಿದ್ದು. ಹೆಚ್ಚು ತಿಳಿಯಲು ನನಗೇ ಕುತೂಹಲವಿರಲಿಲ್ಲವೆಂದು ಕಾಣುತ್ತದೆ.
 ಕೋವಿಡ್ ಬಂದಾಗ ಭಾರತದಲ್ಲಿ ಶಾಲೆಗಳು ಮುಚ್ಚಿದವು. ತೆರೆದಾಗಲೂ ಅರೆಮನಸ್ಸಿನಿಂದ ಶುರುವಾದವು. ಆನ್‌ಲೈನ್ ಶಿಕ್ಷಣ ಜಾರಿಗೆ ಬಂದರೂ ಪೋಷಕರಿಗಾಗಲೀ, ಮಕ್ಕಳಿಗಾಗಲೀ ತೃಪ್ತಿ, ಸಂತೋಷ ನೀಡಲಿಲ್ಲ. ಶಿಕ್ಷಣದ ಮಾತು ನಂತರ, ಮೊದಲು ಮಕ್ಕಳ ಪ್ರಾಣ ಉಳಿಸಿಕೊಳ್ಳೋಣ ಎಂಬ ಮಾತೇ ಕೇಳಿ ಬಂತು. ಅದು ಸರಿ ಕೂಡ ಎಂದೆನಿಸಿತು. ಆದರೆ ಒಂದೊಂದೂವರೆ ವರ್ಷ ಶಾಲೆಗಳನ್ನು ಮುಚ್ಚಿದ್ದರೂ ಮಕ್ಕಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ಕೊಡಲೇ ಬೇಕು. Crash courseಗಳ ಮೂಲಕ ಶಾಲೆ ಮುಚ್ಚಿರುವ ದಿನಗಳ ಪಾಠದ ಕೊರತೆಯನ್ನು ತುಂಬಬೇಕು ಎಂಬ ವಾದ ಶುರುವಾಗಿ, ಸಮಾಜದಲ್ಲಿ ಅಂಗೀಕಾರವನ್ನು ಕೂಡ ಪಡೆಯಿತು. ಮಕ್ಕಳು ಶಾಲೆಗಳಿಗೆ ಹೋಗದಿದ್ದಾಗ ಕಳೆದುಕೊಂಡಿರಬಹುದಾದ, ಕಳೆದುಕೊಂಡ ಸಹಪಾಠಿಗಳ ಒಡನಾಟ, ಕ್ರೀಡಾ ಅವಕಾಶ, ನಲಿದಾಟ, ಇದರಿಂದೆಲ್ಲ ಮಕ್ಕಳಿಗೆ ಶಾಶ್ವತವಾಗಿ ತಪ್ಪಿಹೋದ ಸಾಮಾಜಿಕ ಕೌಶಲ್ಯಗಳ ತರಬೇತಿ, ಅದರಿಂದ ಮಕ್ಕಳ ಮನೋಲೋಕದ ಮೇಲಾಗುವ ಪರಿಣಾಮದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಮತ್ತೆ ಶಾಲೆಗಳು ಪ್ರಾರಂಭವಾದ ನಂತರ ಇದನ್ನೆಲ್ಲ ನಾವು ಮರೆತೇಬಿಟ್ಟೆವು. ಎಂದಿನ ದಂದುಗಕ್ಕೆ ಬಿದ್ದೆವು.
ಭೂತಕಾಲ, ಇತಿಹಾಸ ಕುರಿತ ವಿಸ್ಮೃತಿಯ ಬಗ್ಗೆ ಮಾತನಾಡುತ್ತೇವೆ. ಕಣ್ಣೆದುರಿಗೇ ಇದೀಗ ನಡೆದ ದುರಂತ ನಮ್ಮೆಲ್ಲರ ಪ್ರತಿಯೊಂದು ಮನೆಯ ಮಕ್ಕಳು ಶಾಶ್ವತವಾಗಿ ಎದುರಿಸಬೇಕಾದ ನಷ್ಟ, ಇದೆಲ್ಲ ಎಷ್ಟು ಬೇಗ ಹಿನ್ನೆಲೆಗೆ ಹೊರಟುಹೋಯಿತು, ಏನೂ ಆಗೇ ಇಲ್ಲವೇನೋ ಎಂಬಂತೆ. ಅಸಡ್ಡೆ, ನಿರ್ಲಕ್ಷ್ಯದ ಪರಮಾವಧಿ ಇದು. ಅಂದರೆ ನಮ್ಮ ಜೀವನದ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಕೂಡ ಅಸಡ್ಡೆ, ನಿರ್ಲಕ್ಷ್ಯ.
 ಮಗಳ ಸಂಸಾರ ವಿದೇಶದಲ್ಲಿದ್ದುದರಿಂದ ಆತಂಕ ಹೆಚ್ಚಿತು. ಮಗನ ಸಂಸಾರವೂ ಕೂಡ ವಿದೇಶದಲ್ಲಿದ್ದರೂ ಮಗಳ ಕುಟುಂಬದ ಬಗ್ಗೆ ಆತಂಕ ಹೆಚ್ಚಾಗಲು ಕಾರಣ ಮೊಮ್ಮಗ ಚಿಕ್ಕವನಾಗಿದ್ದುದು. ಶಾಲೆಗೆ ಹೋಗಲು ಅಲ್ಲಿ ಪ್ರಾರಂಭಿಸಿದ್ದುದು. ಮಗಳು ನಂತರ ಹೇಳಿದ ಹಾಗೆ ಆ ದಿನಗಳು ತುಂಬಾ ಘೋರವಾದ ದಿನಗಳಂತೆ. ಯಾರೂ ಮನೆಯಿಂದ ಹೊರಗೆ ಹೋಗುವ ಹಾಗಿಲ್ಲ. ಇಪ್ಪತ್ತುನಾಲ್ಕು ಘಂಟೆಯೂ ಒಬ್ಬರ ಮುಖ ಒಬ್ಬರು ನೋಡುತ್ತಿರಬೇಕು. ಮಗನಿಗೆ ಆಟವಿಲ್ಲ, ತುಂಟಾಟವಿಲ್ಲ, ಗೆಳೆಯರಿಲ್ಲ. ದಿನದುದ್ದಕ್ಕೂ ಮಗನನ್ನು ಸಂಭಾಳಿಸುವುದು ಹೇಗೆ. ಜೊತೆಗೆ ಪ್ರತಿನಿತ್ಯವೂ ಸಾವಿನ, ನೋವಿನ ಸುದ್ದಿ ಕಂಗೆಡಿಸುತ್ತಿತ್ತು. ಯಾರಿಗಾದರೂ ಸರಿಯೇ ಹುಚ್ಚು ಹಿಡಿಯಬಹುದಾದ ಸಂದರ್ಭ. ಮೂವರೂ ಮನೆಯಿಂದ ಹೊರ ಬಂದು ಮನಸ್ಸಿಗೆ ತೋಚಿದ ದಿಕ್ಕಿನಲ್ಲಿ ಅಕ್ಕಪಕ್ಕದ ಬೀದಿಗಳನ್ನು ಸುತ್ತುತ್ತಿದ್ದೆವು. ನಮ್ಮನ್ನು ನಾವು ಖಿನ್ನತೆ, ಸಾಮಾಜಿಕ ವಿಮುಖತೆಯಿಂದ ರಕ್ಷಿಸಿಕೊಳ್ಳಲು ಇದೊಂದೇ ದಾರಿಯಾಗಿತ್ತು ಎಂದು ಮತ್ತೆ ಮತ್ತೆ ಮಗಳು ಹೇಳುತ್ತಲೇ ಇದ್ದಳು. ಭಾರತದಲ್ಲಿದ್ದ ನಾವು ಪ್ರತಿದಿನವೂ ಮಕ್ಕಳ ದೂರವಾಣಿ ಕರೆಗೆ ಕಾಯುತ್ತಿದ್ದೆವು. ಕಾದು ಕಂಗಾಲಾಗುತ್ತಿದ್ದೆವು. ಮಾತನಾಡಿದ ನಂತರ ಖಿನ್ನತೆಗೆ ಒಳಗಾಗುತ್ತಿದ್ದೆವು.

 ನೆದರ್‌ಲ್ಯಾಂಡ್ಸ್‌ನಲ್ಲಿ ಕೂಡ ಶಾಲೆ ಬಂದಾಯಿತು. ಒಂದೆರಡು ತಿಂಗಳಲ್ಲೇ ಹಾಗೆ ಶಾಲೆಗಳನ್ನು ಬಂದ್ ಮಾಡುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಶಾಶ್ವತವಾಗಿ ಕುಂಠಿತವಾಗುವುದೆಂದು, ಮಕ್ಕಳಿಂದೇನೂ ಕೋವಿಡ್/ಕರೋನಾ ಹರಡುವುದಿಲ್ಲವೆಂದು ಸರ್ಕಾರ, ಸಮಾಜ ಕಂಡುಕೊಂಡಿತು. ಈ ಒಂದೆರಡು ತಿಂಗಳ ಕಾಲಾವಧಿಯಲ್ಲೇ ಆನ್‌ಲೈನ್ ಶಿಕ್ಷಣ ನೀಡುತ್ತಿದ್ದರು. ಅದೂ ಕೂಡ ವೈಜ್ಞಾನಿಕವಾಗಿತ್ತು. ಮಕ್ಕಳು ಮನೆಯ ಆವರಣದಿಂದಲೇ ಈ ರೀತಿಯ ತರಗತಿಗಳಿಗೆ ಹಾಜರಾಗುತ್ತಿದ್ದರೂ, ತರಗತಿಯ ಸಮಯದಲ್ಲಿ ತಾಯಿ-ತಂದೆಗಳು ಹಾಜರಿರಬಾರದು, ಮಧ್ಯ ಪ್ರವೇಶಿಸಿಬಾರದು, ಆನ್‌ಲೈನ್ ತರಗತಿಗಳು ಕೂಡ ದಿನಕ್ಕೆ ಒಂದೆರಡು ಘಂಟೆ ನಡೆದರೆ ಸಾಕು, ಒಂದು ತರಗತಿ ಮತ್ತು ಇನ್ನೊಂದು ತರಗತಿಯ ನಡುವೆ ಸಮಯದ ಅಂತರವಿರಬೇಕು, ಮಗುವಿನ ಮನಸ್ಸಿನ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹೇರಬಾರದು, ಹೀಗೆ ಹಲವು ಮಕ್ಕಳ ಪರವಾದ ಸೂತ್ರಗಳು, ಷರತ್ತುಗಳು.
 ಮಕ್ಕಳು ಹೊರದೇಶಗಳಿಗೆ ಹೋದಾಗ ಅವರಿಗೆ, ನಮಗೆ ಆಗುವ ನಾನಾ ರೀತಿಯ ಲಾಭಗಳನ್ನು ಲೆಕ್ಕ ಹಾಕುತ್ತೇವೆ, ಹೆಮ್ಮೆ ಪಡುತ್ತೇವೆ. ಆದರೆ ನಮ್ಮ ಮಕ್ಕಳಿಗೆ ಕೋವಿಡ್ ದೆಸೆಯಿಂದಾಗಿ ತಪ್ಪಿಹೋಗಬಹುದಾಗಿದ್ದ ಶಾಲಾ ತರಗತಿಗಳು ಅಲ್ಲಿ ಮುಚ್ಚಲಿಲ್ಲ. ನಮ್ಮ ಮಗು ಈ ಕಾಲಾವಧಿಯಲ್ಲೂ ಬಾಲ್ಯಕಾಲದ ಸುಖ-ಸಂತೋಷಗಳನ್ನು ಸಹಜವಾಗಿ ಅನುಭವಿಸಿತು ಎಂದು ನಾವು ಸಂತೋಷ ಪಡುವುದಿಲ್ಲ, ಹೆಮ್ಮೆ ಪಡುವುದಿಲ್ಲ.
 ಈ ಸಂತೋಷ, ಹೆಮ್ಮೆಯ ಹಿನ್ನೆಲೆಯಲ್ಲೇ ನಾನು ಡಚ್ಚರ ಶಿಕ್ಷಣ ವ್ಯವಸ್ಥೆ, ಪ್ರಯೋಗ, ತಾತ್ವಿಕತೆಯನ್ನು ವಿವರವಾಗಿ ಗಮನಿಸಲು ಪ್ರಾರಂಭಿಸಿದೆ. ಪ್ರತಿಯೊಂದು ಮಗುವಿನ/ನಾಗರಿಕನ ವ್ಯಕ್ತಿ ವೈಶಿಷ್ಟ್ಯವನ್ನು ಗುರುತಿಸಬೇಕು, ಹಾಗೆ ಅವರವರೇ ಗುರುತಿಸಿಕೊಳ್ಳುವ ಹಾಗೆ ಪ್ರೋತ್ಸಾಹಿಸಬೇಕು ಎಂಬುದು ನೆದರ್‌ಲ್ಯಾಂಡ್ಸ್ ಶಿಕ್ಷಣ ಸಂಸ್ಕೃತಿಯ ಮೂಲ ತಿಳುವಳಿಕೆ, ಆದ್ಯತೆಯ ಮೊದಲ ಸೂತ್ರ. ಈ ಸೂತ್ರಕ್ಕನುಗುಣವಾಗಿ ಉಳಿದೆಲ್ಲ ವ್ಯವಸ್ಥೆ. ಕಲಿಕೆಯಲ್ಲೂ ಸ್ವಂತಿಕೆಯನ್ನು ಪ್ರೋತ್ಸಾಹಿಸಬೇಕು, ಪ್ರಶ್ನಾ ವಿಧಾನವನ್ನು, ವಿಷಯಗ್ರಹಣವನ್ನು ಪ್ರೋತ್ಸಾಹಿಸಬೇಕು, ಕಲಿಕೆ ಸಕ್ರಿಯವಾಗಿರಬೇಕು, ವಿದ್ಯಾರ್ಥಿ-ಶಿಕ್ಷಕ ಇಬ್ಬರೂ ಸಮಾನವಾಗಿ ಭಾಗವಹಿಸಬೇಕು, ಇದರ ಜೊತೆಗೆ ಮಕ್ಕಳು ಒಂದು ತಂಡದಲ್ಲಿ ಕೆಲಸ ಮಾಡುವುದನ್ನು, ಇತರರ ಜೊತೆ ಒಡನಾಡುವುದನ್ನು ಪ್ರೋತ್ಸಾಹಿಸಬೇಕು. ಕಲಿಕೆಯೆನ್ನುವುದು ಒಡನಾಟದ ಮೂಲಕವೇ ಆಗಬೇಕಾದಂಥದ್ದು ಅನ್ನುವುದನ್ನೂ ಶಾಲೆ-ವಿದ್ಯಾರ್ಥಿ, ಪೋಷಕರು, ಸಮಾಜ ಎಲ್ಲರೂ ಒಪ್ಪುತ್ತಾರೆ. ಹೀಗೇ ಕಲಿಯುವುದರಿಂದ, ಕಲಿಸುವುದರಿಂದ, ಇತರರೊಡನೆ ವರ್ತಿಸುವುದು ಹೇಗೆ, ಇನ್ನೊಬ್ಬರ ಬೆಳವಣಿಗೆಗೆ, ಭಾವನೆಗಳಿಗೆ ಸ್ಪಂದಿಸುವುದು ಹೇಗೆ ಎಂಬ ತಿಳುವಳಿಕೆ ಬಾಲ್ಯದಿಂದಲೇ ಮೂಡುತ್ತದೆ.
 ಕಲಿಯುವುದನ್ನು ಅನ್ವಯಿಕವಾಗಿ ಕಲಿಯಬೇಕು. ಕಲಿಯುತ್ತಿರುವ ಸಂಗತಿಗೂ, ಜಗತ್ತಿನ ಉಳಿದ ವಿದ್ಯಮಾನಗಳಿಗೂ ಯಾವ ರೀತಿಯ ಸಂಬಂಧವಿದೆ ಅನ್ನುವುದನ್ನು ಮಕ್ಕಳು ಅರಿತುಕೊಳ್ಳಬೇಕು. ವಸ್ತುವಿಗೆ ತೂಕವಿರುತ್ತದೆ ಅಂದರೆ ಏನು? ವಸ್ತುವೊಂದರ ತೂಕ ಭೂಮಿಯ ಮೇಲೆ, ಅಂತರಿಕ್ಷದಲ್ಲಿ, ಭೂಮಿಯ ಒಳಗಡೆ, ನೀರಿನಲ್ಲಿ ಬದಲಾಗುತ್ತದೆಯೇ ಹೇಗೆ, ಏಕೆ ಎಂಬುದನ್ನು ಕಲಿಸುವಾಗಲೇ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರದ ಪಾಠಗಳನ್ನು ಕೂಡ ಕಲಿಸುತ್ತಾರೆ. ಭೂಮಿಯ ಇತಿಹಾಸ ಹೇಳಿಕೊಡಲು ಮಕ್ಕಳಿಗೆ ಶಾಲೆಯ ಆವರಣದಲ್ಲೇ ಗುಹೆ, ಬಂಡೆಗಳ, ಉದ್ಯಾನವನಗಳ ನಿರ್ಮಾಣಕ್ಕೆ ಪ್ರೇರಣೆ, ಇದನ್ನೆಲ್ಲ ಅಗೆದಾಗ ಏನು ಸಿಗುತ್ತದೆ, ಸಿಗುವುದಿಲ್ಲ. ರೂಪಾಂತರವಾಗಿರುವುದು ಯಾವುದು? ಮೂಲವಸ್ತು ಯಾವುದು ಎಂಬುದರ ಕಡೆ ಗಮನ ಸೆಳೆಯಲಾಗುತ್ತದೆ. ನಾವು ಅಲ್ಲಿದ್ದಾಗ ಭಾರತದ ಚಂದ್ರಯಾನ ಪ್ರಯೋಗ ಯಶಸ್ವಿಯಾಯಿತು. ಮೊದಲ ಹಂತದಲ್ಲಿ ಮಾಹಿತಿ ಸಂಗ್ರಹಣೆಗೆ ಪ್ರಚೋದಿಸಿದರು. ನಂತರ ಮನೆಯಲ್ಲಿರುವ ಸಾಮಾನುಗಳಿಂದಲೇ, Spacecraft ನಿರ್ಮಾಣ. ಆಮೇಲೆ, Planetariumಗೆ ಭೇಟಿ. ಕೊನೆಯಲ್ಲಿ ವಿಜ್ಞಾನಿಯ ಭಾಷಣ.
 ಇದನ್ನೆಲ್ಲ ಹೇಳಿಕೊಡುವಾಗ ಶಬ್ದ, ಪದ ವಿನ್ಯಾಸದ ಬಗ್ಗೆ ಗಮನ. ಹೀಗೆ ಒಂದೇ ತರಗತಿಯಲ್ಲಿ ಅನೇಕ ಸಂಗತಿಗಳನ್ನು ಬೇರೆ ಬೇರೆ ಜ್ಞಾನಶಿಸ್ತುಗಳನ್ನು ಕಲಿಸಿಕೊಡುವುದರಿಂದ, ಭಾಷೆ, ಸಮಾಜ ವಿಜ್ಞಾನ, ವಿಜ್ಞಾನ, ಕಲೆ, ಇವುಗಳಿಗಿರುವ ಪರಸ್ಪರ ಸಂಬಂಧವನ್ನು ಕೂಡ ಸೂಚಿಸಲಾಗುತ್ತದೆ. ಈ ಶಿಸ್ತುಗಳ ನಡುವೆ ನಾವು ಮಾಡಿಕೊಂಡಿರುವ ಕೃತಕ ವಿಂಗಡಣೆ ತಪ್ಪೆಂದು ಕೂಡ ಸೂಚಿಸಲಾಗುತ್ತದೆ, ಸೂಚನೆಯನ್ನೇನೂ ಕೊಡದೆ.
 ಮಕ್ಕಳ ಗುಣಮಟ್ಟವನ್ನು ನಿರ್ಧರಿಸುವಾಗ ಗಮನವಿಡುವುದು ಮಕ್ಕಳ ನಡುವಿನ ಹೋಲಿಕೆಗಲ್ಲ, ಸ್ಪರ್ಧೆ ಏರ್ಪಡಿಸುವುದಕ್ಕೂ ಅಲ್ಲ. ತರಗತಿಯ ಎಲ್ಲ ವಿದ್ಯಾರ್ಥಿಗಳನ್ನೂ ಗಮನಿಸಿ, ತರಗತಿಯ ಸರಾಸರಿ ಮಟ್ಟ ಇಷ್ಟಿರಬಹುದೆಂದು ಅಂದಾಜು ಮಾಡಿ, ಪ್ರತಿಯೊಂದು ಮಗುವೂ ಆ ಸರಾಸರಿಯೊಡನೆ ತುಲನೆ ಮಾಡಿದಾಗ ಯಾವ ಹಂತದಲ್ಲಿದೆ ಎಂದು ಸೂಚಿಸುತ್ತಾರೆ. ಇಲ್ಲಿ ಶ್ರೇಣೀಕರಣವಿಲ್ಲ. ನಿಮ್ಮ ಮಗು ಯಾವ ಹಂತದಲ್ಲಿದೆ ಎಂದು ನಿಮಗೆ ಮತ್ತು ನಿಮ್ಮೆದುರಿಗೇ ಮಗುವಿಗೆ ತಿಳಿಸುತ್ತಾರೆ. ನೀವು ಎಷ್ಟೇ ತಿಣುಕಾಡಿದರೂ “ರ‍್ಯಾಂಕಿಂಗ್” ಗೊತ್ತಾಗುವುದಿಲ್ಲ. ನೋಡು ಮಗು, ಈಗ ನೀನು ಈ ಹಂತದಲ್ಲಿರುವೆ. ಇದರಿಂದ ಮುಂದೆ ಹೋಗಲು ಅಥವಾ ವಿಸ್ತಾರಗೊಳ್ಳಲು ನೀನು ಏನೇನು ಮಾಡಬಹುದು ಎಂದು ನಿನಗೇನನಿಸುತ್ತೆ ಎಂದು ಮಗುವಿನ ಬಾಯಿಂದಲೇ ಹೊರಡಿಸಿ, ಸರಿ, ಮುಂದಿನ ದಿನಗಳಲ್ಲಿ ಈ ದಿಕ್ಕಿನಲ್ಲಿ ಪ್ರಯತ್ನಿಸು ಎಂದು ಸೂಚಿಸಿ ಸುಮ್ಮನಾಗುತ್ತಾರೆ. ದಯವಿಟ್ಟು ಮಕ್ಕಳಿಗೆ ನೀವು ಪಾಠ ಮಾಡಲು ಹೋಗಬೇಡಿ, ತಿದ್ದಬೇಡಿ, ನಿಮಗೆ ಅದಕ್ಕೆಲ್ಲ ತರಬೇತಿಯಿಲ್ಲ. ಏನಾದರೂ ಸಮಸ್ಯೆಯಿದ್ದರೆ ನಮ್ಮ ಗಮನಕ್ಕೆ ತನ್ನಿ, ನೀವೇ ಸಮಸ್ಯೆಯಾಗಬೇಡಿ ಎಂದು ಪೋಷಕರನ್ನು ಮತ್ತೆ ಮತ್ತೆ ಎಚ್ಚರಿಸುತ್ತಲೇ ಇರುತ್ತಾರೆ.
ಮಗುವಿನ ಸಾಮರ್ಥ್ಯ, ಒಲವು, ಮನೋಧರ್ಮಗಳನ್ನು ತಿಳಿಯುವ ಭಾಷೆ, ಗಣಿತಕ್ಕೆ ನಂತರದ ಸ್ಥಾನ, ಮೊದಲು ಮಗು ಭಾವನಾತ್ಮಕವಾಗಿ ಹೇಗಿದೆಯೆಂದು ತಿಳಿದು, ಅಂದಾಜು ಮಾಡಿ ಪೋಷಕರಿಗೆ ತಿಳಿಸುತ್ತಾರೆ. ತನ್ನ ವಯಸ್ಸಿನವರೊಡನೆ ಹೇಗೆ ಸಂವಹನ ಮಾಡುತ್ತದೆ, ಒಂದು ತಂಡದ ಸದಸ್ಯನಾಗಿ ಹೇಗೆ ಕೆಲಸ ಮಾಡುತ್ತದೆ, ನೆರವು ನೀಡಬಲ್ಲದೆ, ನೆರವು ಪಡೆಯಬಲ್ಲದೆ, ಇತರರ ಸಾಮರ್ಥ್ಯವನ್ನು ಗೌರವಿಸಬಲ್ಲದೆ, ತನ್ನ ನಿಲುವನ್ನು ಇತರರ ಮೇಲೆ ಹೇರದೆ ತರ್ಕಬದ್ಧವಾಗಿ ವಿವರಿಸಬಲ್ಲದೆ, ತಪ್ಪನ್ನು ತಿದ್ದಿಕೊಳ್ಳಬಲ್ಲದೆ, ನಿರಾಶೆ, ವೈಫಲ್ಯಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಅನ್ಯ ಸಂಸ್ಕೃತಿ, ಹಿನ್ನೆಲೆಯಿಂದ ಬಂದ ಮಕ್ಕಳನ್ನು ಹೇಗೆ ಕಾಣುತ್ತದೆ, ಈಗ ತಾನು ವಾಸಿಸುತ್ತಿರುವ ದೇಶದ ಭಾಷೆಯ ಬಗ್ಗೆ ಮಗುವಿನ ನಿಲುವು ಏನಿದೆ, ಅದನ್ನು ಕಲಿಯುವುದರಲ್ಲಿ ಮಗುವಿಗೆ ಸಂತೋಷವಿದೆಯೇ, ಹೀಗೆ ಹತ್ತು ಹಲವು ಕೋನಗಳು. ಪಠ್ಯಕ್ಕೆ ಸಂಬಂಧಿಸಿದ ಮಾನದಂಡಗಳು ಇಷ್ಟೊಂದು ವಿಸ್ತಾರವಾಗಿಲ್ಲ, ಸೂಕ್ಷ್ಮವಾಗಿಲ್ಲ.
 ಗಣಿತದ ವಿವಿಧ ಆಯಾಮಗಳು, ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ, ಭಿನ್ನ ರಾಶಿ, ಅಳತೆ, ಸಂಖ್ಯಾ ಶಾಸ್ತ್ರ, ರೇಖಾ ಗಣಿತ, ಈ ನೆಲೆಗಳಲ್ಲಿ ಮಗುವನ್ನು ಗುರುತಿಸಲಾಗುತ್ತದೆ. ಕಲಿಯುವಿಕೆಯ ರೀತಿಯಲ್ಲಿಯೇ ಈ ಕೌಶಲ್ಯಗಳ ವೃದ್ಧಿಗೆ ಒತ್ತಿದೆ.
 ಭಾಷೆ, ಸಾಹಿತ್ಯಕ್ಕೆ ಬಂದರೆ, ಗ್ರಹಿಕೆ, ಅಭಿವ್ಯಕ್ತಿ, ಸೃಜನಶೀಲತೆ, ಎಲ್ಲವನ್ನೂ ಗಮನಿಸಲಾಗುತ್ತದೆ. ಪ್ರತಿಯೊಂದು ಮಗುವೂ ಓದುವ, ಬರೆಯುವ, ಮಾತನಾಡುವ, ಕೇಳಿಸಿಕೊಳ್ಳುವ ರೀತಿ ವಿಶಿಷ್ಟವಾಗಿರುತ್ತದೆ. ಆ ವಿಶಿಷ್ಟತೆಯನ್ನು ಪತ್ತೆ ಮಾಡುವುದು, ಪತ್ತೆ ಮಾಡಿ, ಪೋಷಕರ, ಮಗುವಿನ ಅರಿವಿಗೆ ತರುವ ರೀತಿಯಲ್ಲಿ ಫಲಿತವನ್ನು ತಿಳಿಸಲಾಗುತ್ತದೆ.
ಕ್ರೀಡೆ, ಸಂಗೀತ, ಕೌಶಲ್ಯಗಳು, ಪ್ರತಿದಿನದ ಶಿಕ್ಷಣದ ಭಾಗ. ಕ್ರೀಡೆಗೆಂದೇ ಪ್ರತ್ಯೇಕ ಸಮಯ, ಸ್ಥಳವಿಲ್ಲ. ದಿನದ ವೇಳಾಪಟ್ಟಿಯಲ್ಲೇ ಕಲಿಯಲು, ಊಟ ತಿಂಡಿ ಮಾಡಲು, ಆಟ ಆಡಲು, ಹಾಡಲು ವ್ಯವಸ್ಥೆಯಿದೆ. ವ್ಯವಧಾನವನ್ನು ಕೂಡ ಪ್ರೇರೇಪಿಸಲಾಗುತ್ತದೆ.
 ಪ್ರತಿ ಶೈಕ್ಷಣಿಕ ವರ್ಷದಲ್ಲೂ ಕೆಲವು ನಿರ್ದಿಷ್ಟ ವಿಷಯಗಳನ್ನು ಆಯ್ದು, ಮಕ್ಕಳಿಗೇ ವಿಷಯ ಸಂಗ್ರಹಿಸಲು, ಸಂಶೋಧನೆ ಮಾಡಲು, ಪರಸ್ಪರ ಚರ್ಚಿಸಲು ಪ್ರೇರೇಪಿಸಲಾಗುತ್ತದೆ.
 ಮಕ್ಕಳ ಮನೋದಿಗಂತವನ್ನು ವಿಸ್ತರಿಸುವ ಪ್ರಯತ್ನವಿದು. ಮೂರನೆಯ ತರಗತಿಯ ಮಕ್ಕಳಿಗೆ ವರ್ಷದುದ್ದಕ್ಕೂ ಸೂಚಿಸಲಾದ ವಿಷಯಗಳು ಹೀಗಿದ್ದವು:
Brain Wave
Explorers and Adventurers
Chocolate
Temples, Tombs and Treasures
Vanishing Rain Forests
How Humans work.
 ಒಂದು ತರಗತಿಗೆ ಒಬ್ಬರೇ ಶಿಕ್ಷಕರು. ಅವರೇ ಎಲ್ಲ ವಿಷಯಗಳನ್ನೂ ಕಲಿಸಬೇಕು. ಹೀಗೆ ಒಬ್ಬರೇ ಶಿಕ್ಷಕರು ಎಲ್ಲ ವಿಷಯಗಳನ್ನೂ ಕಲಿಸುವುದರಿಂದ, ಬೇರೆ ಬೇರೆ ಜ್ಞಾನಶಿಸ್ತುಗಳ ನಡುವೆ ಯಾವ ಶ್ರೇಣೀಕರಣವನ್ನೂ ಸೂಚಿಸಲು ಸಾಧ್ಯವಾಗುವುದಿಲ್ಲ. ಎಲ್ಲ ವಿಷಯಗಳ ಬಗ್ಗೆಯೂ ಸಮಾನವಾದ ಆಸಕ್ತಿ, ಪ್ರೀತಿ, ಗೌರವ ಮೂಡುತ್ತದೆ. ದಿನದುದ್ದಕ್ಕೂ, ವರ್ಷದುದ್ದಕ್ಕೂ ಶಿಕ್ಷಕರು ಮಗುವಿನ ಜೊತೆಯೇ ಇರುವುದರಿಂದ, ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಕುಟುಂಬದ ಸದಸ್ಯರು ಎಂಬ ಭಾವನೆ ಬರುತ್ತದೆ. ಪ್ರತಿ ದಿನವೂ ಮಗುವನ್ನು ಸ್ವಾಗತಿಸಲು, ಶಾಲೆ ಮುಗಿದ ನಂತರ ಬೀಳ್ಕೊಡಲು ಶಿಕ್ಷಕರು ಮೈದಾನಕ್ಕೆ, ಗೇಟಿನ ಬಳಿ ಬರುತ್ತಾರೆ. ಬೆಳಿಗ್ಗೆ ಆದ ತಕ್ಷಣ, ಎಷ್ಟೇ ಹಿಮ ಬೀಳುತ್ತಿರಲಿ, ಮಳೆ ಸುರಿಯುತ್ತಿರಲಿ, ಮಕ್ಕಳು ಶಾಲೆಗೆ ಹೋಗಲು ತವಕ ಪಡುತ್ತವೆ. ಶಾಲೆಯ ಗೇಟಿನ ಹತ್ತಿರ ಬಂದಾಗ ಮುಖ ಅರಳುತ್ತದೆ. ಸಕಲ ಚೇಷ್ಟೆಗಳು ಪ್ರಾರಂಭವಾಗುತ್ತವೆ. ನನಗೆ ಆಶ್ಚರ್ಯವಾದದ್ದು ಇದಕ್ಕಲ್ಲ. ಶಾಲೆ ಮುಗಿದ ಮೇಲೂ ಮಕ್ಕಳು ಇಷ್ಟೇ ಸಂತೋಷದಿಂದಲೇ ತುಂಟತನದಿಂದ ಕೇಕೆ ಹಾಕುತ್ತಾ, ಚೇಷ್ಟೆ ಮಾಡುತ್ತಾ ಹೊರಬರುವುದನ್ನು ನೋಡಿದಾಗ. ಮೊದಮೊದಲು ನನಗೆ ನಂಬುವುದಕ್ಕೇ ಕಷ್ಟವಾಗುತ್ತಿತ್ತು.

ಇಲ್ಲಿ ಶ್ರೇಣೀಕರಣವಿಲ್ಲ. ನಿಮ್ಮ ಮಗು ಯಾವ ಹಂತದಲ್ಲಿದೆ ಎಂದು ನಿಮಗೆ ಮತ್ತು ನಿಮ್ಮೆದುರಿಗೇ ಮಗುವಿಗೆ ತಿಳಿಸುತ್ತಾರೆ. ನೀವು ಎಷ್ಟೇ ತಿಣುಕಾಡಿದರೂ “ರ‍್ಯಾಂಕಿಂಗ್” ಗೊತ್ತಾಗುವುದಿಲ್ಲ. ನೋಡು ಮಗು, ಈಗ ನೀನು ಈ ಹಂತದಲ್ಲಿರುವೆ. ಇದರಿಂದ ಮುಂದೆ ಹೋಗಲು ಅಥವಾ ವಿಸ್ತಾರಗೊಳ್ಳಲು ನೀನು ಏನೇನು ಮಾಡಬಹುದು ಎಂದು ನಿನಗೇನನಿಸುತ್ತೆ ಎಂದು ಮಗುವಿನ ಬಾಯಿಂದಲೇ ಹೊರಡಿಸಿ, ಸರಿ, ಮುಂದಿನ ದಿನಗಳಲ್ಲಿ ಈ ದಿಕ್ಕಿನಲ್ಲಿ ಪ್ರಯತ್ನಿಸು ಎಂದು ಸೂಚಿಸಿ ಸುಮ್ಮನಾಗುತ್ತಾರೆ.

 ಶಿಕ್ಷಕರು ಬೇರೆ ಬೇರೆ ದೇಶಗಳಿಗೆ, ಭಾಷೆಗಳಿಗೆ, ಸಂಸ್ಕೃತಿಗಳಿಗೆ ಸೇರಿರಬೇಕು ಎಂಬ ಸೂತ್ರವನ್ನು ಅನುಸರಿಸಿಯೇ ಶಿಕ್ಷಕರ ವರ್ಗಾವಣೆ ಮಾಡಲಾಗುತ್ತದೆ. ಈ ರೀತಿಯ ವೈವಿಧ್ಯಮಯ ಶಿಕ್ಷಕರೊಡನೆ ಒಡನಾಡುವುದು ಕೂಡ ಸಾಂಸ್ಕೃತಿಕ ಕಲಿಯುವಿಕೆಯಷ್ಟೆ! ಇಂತಹ ಶಾಲೆಯಲ್ಲಿ, ಇಂತಹ ತರಗತಿಯಲ್ಲಿ, ಈ ವರ್ಷ ನಾನು ಓದುತ್ತಿದ್ದಾಗ ಈ ದೇಶದ, ಈ ಭಾಷೆಯ ಶಿಕ್ಷಕರು ನನಗೆ ಕಲಿಸಿದರು ಎಂಬುದು ಮಗುವಿಗೆ ಒಂದು ಚೇತೋಹಾರಿ ನೆನಪಾಗಬೇಕು ಎನ್ನುವುದು ಇಲ್ಲಿಯ ಶಾಲಾ ಆಡಳಿತದ ಇರಾದೆ.
ತರಗತಿಯ ಶಿಕ್ಷಕರು, ಪ್ರಿನ್ಸಿಪಾಲರು, ಶಾಲಾ ನಿರ್ದೇಶಕರು, ಈ ಮೂರೂ ಜನಕ್ಕೂ ಎಲ್ಲ ಮಕ್ಕಳು ವೈಯಕ್ತಿಕವಾಗಿ, ಆಳವಾಗಿ ಗೊತ್ತಿರುತ್ತಾರೆ. ಸ್ಪರ್ಧೆ, ಶ್ರೇಣೀಕರಣಕ್ಕೆ ಪ್ರೋತ್ಸಾಹವಿಲ್ಲ ಎನ್ನುವುದು ನಿಜ. ಪಠ್ಯದ ವಿಷಯದಲ್ಲಾಗಲೀ, ಪಠ್ಯೇತರ ವಿಷಯದಲ್ಲಾಗಲೀ, ಯಾವುದಾದರೂ ಮಗು ವಿಶೇಷ ಒಲವು, ಸಾಮರ್ಥ್ಯವನ್ನು ತೋರಿಸಿದರೆ, ಸಂತೋಷ, ಹೆಮ್ಮೆ ಪಟ್ಟು, ಅದು ಮಗುವಿಗೂ, ಪೋಷಕರಿಗೂ ಗೊತ್ತಾಗುವ ಹಾಗೆ ಮಾಡಿ, ಅದಕ್ಕೆ ಸಂಬಂಧಪಟ್ಟ ಪ್ರೋತ್ಸಾಹ, ನೆರವನ್ನು ಕೂಡ ನೀಡುತ್ತಾರೆ.
 ಪೋಷಕರಿಗೆ ಸ್ವಯಂ ಸೇವಕರಾಗಿ ಶಾಲೆಯ ಆಡಳಿತದೊಡನೆ ಬೆರೆಯಲು ಅವಕಾಶವಿದೆ. ಮಕ್ಕಳು ಊಟ ತಿಂಡಿ ಮಾಡುವಾಗ ಗಮನ ಕೊಡುವ ಸ್ವಯಂ ಸೇವಕರಾಗಬಹುದು. ಪ್ರವಾಸದ ಸಂದರ್ಭದಲ್ಲಿ ಜೊತೆಯಲ್ಲಿ ಹೋಗಬಹುದು. ಯಾವುದಾದರೂ ವಿಶೇಷ ಪರಿಣತಿಯಿದ್ದರೆ, ಶಾಲೆಗೆ ಬಂದು ಮಕ್ಕಳೊಡನೆ ಹಂಚಿಕೊಳ್ಳಬಹುದು. ಈ ಸಾಲಿನಲ್ಲಿ ಭಾರತೀಯ ಎಂಜಿನಿಯರ್ ಒಬ್ಬರು ಬಂದು ಮಕ್ಕಳಿಗೆ ಚಂದ್ರಯಾನ, ಬಾಹ್ಯಾಕಾಶದ ಕಾರ್ಯಕ್ರಮಗಳ ಬಗ್ಗೆ ಸಚಿತ್ರ ಉಪನ್ಯಾಸ ನೀಡಿದರು. ಮಕ್ಕಳು ಗಣಿತವನ್ನು ಏಕೆ ಹೆಚ್ಚಿನ/ವಿಶೇಷ ಆಸಕ್ತಿಯಿಂದ ಕಲಿಯಬೇಕು ಎಂದು ಮನನ ಮಾಡಿಕೊಟ್ಟರು.

 ಮನೆಯಿಂದ ಶಾಲೆಗೆ ಯಾವುದೇ ಪುಸ್ತಕ, ಪರಿಕರಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಎಲ್ಲವನ್ನೂ ಶಾಲೆಯಲ್ಲೇ ಇಡಬೇಕು. ಅಲ್ಲೇ ಉಪಯೋಗಿಸಬೇಕು, ಪಠ್ಯದಲ್ಲಿರುವ ಸೂಕ್ಷ್ಮ ವ್ಯತ್ಯಾಸ ಯಾರಿಗಾದರೂ ಗೊತ್ತಾಗುತ್ತದೆ. ನಮ್ಮಲ್ಲಿ ಏನನ್ನು ಕಲಿಸಬೇಕು, ಯಾವ ಯಾವ, ಯಾರ ಯಾರ ವಿಚಾರ, ಸಾಹಿತ್ಯವನ್ನು ಹೇಳಿಕೊಡಬೇಕು ಎಂಬುದರ ಕಡೆಗೇ ಹೆಚ್ಚು ಗಮನ. ಅಲ್ಲಿ ಕಲಿಸುವ ವಿಧಾನ, ಫಲಿತಗಳ ಕಡೆ ಹೆಚ್ಚು ಗಮನ.

 ಆರನೇ ತರಗತಿಯನ್ನು ಪ್ರವೇಶಿಸುವ ಹೊತ್ತಿಗೆ ಮಗುವಿನ ಒಲವು, ಸಾಮರ್ಥ್ಯ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಶಾಲೆ ಗುರುತಿಸಿ, ಪೋಷಕರಿಗೆ ತಿಳಿಸುತ್ತದೆ. ಈ ಕುರಿತು ಒಂದು ವರದಿ ತಯಾರಿಸಿ, ನೆದರ್‌ಲ್ಯಾಂಡ್ಸ್ ಶಿಕ್ಷಣ ವ್ಯವಸ್ಥೆಗೆ ಸಂಬಂಧಪಟ್ಟ ಯಾರಾದರೂ ಸರಿಯೇ ಈ ವರದಿಯನ್ನು ಗಮನಿಸಲು ಸಾಧ್ಯವಾಗುವಂತೆ ದಾಖಲಿಸಲಾಗುತ್ತದೆ. ಈ ವರದಿಯನ್ನು Academic and personal progress report ಎಂದು ಕರೆಯುತ್ತಾರೆ.
 ನೆದರ್‌ಲ್ಯಾಂಡ್ಸ್, ತನ್ನ ಸುತ್ತಮುತ್ತ ಇರುವ ಯುರೋಪಿನ ಉಳಿದ ದೇಶಗಳಿಗೆ ಹೋಲಿಸಿದರೂ ಒಂದು ಪುಟ್ಟ ದೇಶ. ಸಾಹಿತ್ಯಿಕ ಪರಿಭಾಷೆಯಲ್ಲಿ ಹೇಳುವುದಾದರೆ, ಸುಂದರವಾದ ನೆಮ್ಮದಿಯ ದೇಶ. ಉಳಿದ ದೇಶಗಳೊಡನೆ ಸ್ಪರ್ಧಿಸಲು ಸಾಧ್ಯವಿಲ್ಲ. ಇಚ್ಛೆಯೂ ಇದ್ದಂತಿಲ್ಲ. ರಾಷ್ಟ್ರೀಯ ಆದಾಯದ ಮಾನದಂಡದಲ್ಲಿ 18ನೇ ಸ್ಥಾನವನ್ನೂ, ತಲಾ ವಾರ್ಷಿಕ ಆದಾಯದಲ್ಲಿ 11ನೇ ಸ್ಥಾನವನ್ನೂ ಜಾಗತಿಕವಾಗಿ ಪಡೆದಿದೆ. ಮಕ್ಕಳ ನೆಮ್ಮದಿ, ಸಂತೋಷ, ಪ್ರಗತಿಗಿರುವ ಅವಕಾಶಗಳ ದೃಷ್ಟಿಯಿಂದ ನೆದರ್‌ಲ್ಯಾಂಡ್ಸ್, ಜಾಗತಿಕವಾಗಿ ಮೊದಲ ರ‍್ಯಾಂಕ್ ಪಡೆದಿದೆ. ಇದನ್ನು ಉಳಿಸಿಕೊಳ್ಳಲು ಉತ್ತಮ, ಪ್ರಯೋಗಶೀಲ ಶಿಕ್ಷಣ ವ್ಯವಸ್ಥೆಯೊಂದೇ ಸರಿಯಾದ ಮಾರ್ಗ ಎಂಬ ತಿಳುವಳಿಕೆ ಈ ಸಮಾಜಕ್ಕಿದೆ.

 ಒಂದು ದೇಶದ ಶಿಕ್ಷಣ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಮುಖ್ಯವಾಗಿ ಗಮನಿಸಬೇಕಾದದ್ದು, ಶಾಲಾ ಶಿಕ್ಷಣ ವ್ಯವಸ್ಥೆಯನ್ನು. ಈ ಬರಹದಲ್ಲಿ ನನ್ನ ಗಮನ ಆ ದಿಕ್ಕಿನಲ್ಲೇ ಇದೆ. ಜಾಗತೀಕರಣದ ಪರ್ವದಲ್ಲಿ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಾತ್ಮಕವಾಗಿರಬೇಕೆಂಬುದನ್ನು ಈ ದೇಶವೂ ಒಪ್ಪಿದೆ. ಸುಮಾರು 2500 International Programmeಗಳಲ್ಲಿ ಕಲಿಯಲು, ಭಾಗವಹಿಸಲು ಬೇರೆ ಬೇರೆ ದೇಶದ ವಿದ್ಯಾರ್ಥಿಗಳಿಗೆ ಅನುಕೂಲವಿದೆ, ಪ್ರೋತ್ಸಾಹವಿದೆ ಎಂದು ಶಿಕ್ಷಣಾ ಇಲಾಖೆಯ ಪ್ರಕಟಣೆಯೊಂದು ತಿಳಿಸುತ್ತದೆ. ಇಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದವರು ಇಲ್ಲೇ ಉದ್ಯೋಗ ಮಾಡುವ ಸಾಧ್ಯತೆಗಳು ಹೆಚ್ಚಾಗುವಂತೆ ವೀಸಾನೀತಿ, ಸೀಮಿತ ಪೌರತ್ವ, ಪೂರ್ಣ ಪ್ರಮಾಣದ ಪೌರತ್ವವನ್ನು ರೂಪಿಸಲಾಗಿದೆ.

 ಬೇರೆ ಬೇರೆ ಶಾಲೆಗಳಲ್ಲಿ ಓದುವ ಮಕ್ಕಳು, ಅವರ ಪೋಷಕರು, ನನ್ನ ಸೀಮಿತ ಪ್ರವಾಸದಲ್ಲಿ ಭೇಟಿಯಾದ ಬೇರೆ ಬೇರೆ ದೇಶಗಳ ಪೋಷಕರು ಇವರೆಲ್ಲರೊಡನೆ ನಡೆಸಿದ ಮಾತುಕತೆಯಿಂದ ಪಡೆದ ನೋಟಗಳ ಆಧಾರದ ಮೇಲೆ ಈ ಬರಹವನ್ನು ಮಾಡಿದ್ದೇನೆ. ಇದನ್ನು ಕ್ಷೇತ್ರ ಅಧ್ಯಯನ ಅಥವಾ ಸಂಶೋಧನಾ ಪ್ರಬಂಧವೆಂದು ಯಾರೂ ತಪ್ಪು ತಿಳಿಯಬಾರದೆಂದು ಕೋರುತ್ತೇನೆ.