ಕೊಂಚವೂ ನಾಚಿಕೆಯಿರದ
ಶಿಶಿರ ತೂರಿದ ವಸ್ತ್ರಗಳ
ಬಾಚುವ ಕಾಯಕದ ಮರುತ
ಚಂದ್ರಮನೆದೆಗೆ
ತೂರುವ ಹಿಮದ ಚೂರಿ,
ಚಂದ್ರನ ಉಸಿರ ಕುಳಿಗಾಳಿಗೆ
ಮೈಯೊಡ್ಡಿ ಥರಥರ ನಡುಗುತ್ತಾ
ಇವರ ಕಪ್ಪು ಬಿಳಿಯಾಟಕೆ ನಾ ಒಬ್ಬಳೇ ನಿಂತು ನಗುತ್ತೇನೆ.
ನವಿಲುಗರಿಯ ಕಣ್ಣೋಟಕೇ
ಸೋತುಹೋಗುವ ಅಕ್ಕ
ಬಿಳಿಸೆರಗು ಜಾರುವುದ
ಲೆಕ್ಕಿಸದೇ
ಹಸಿರು ಸೆರಗಿನಿಂದ
ಸದಾ ಕಣ್ಣೊರೆಸಿಕೊಳ್ಳುವಳು,
ನನಗೋ ಕಿಬ್ಬೊಟ್ಟೆಯ
ಯಾವುದೋ ಸಂದಿನಲಿ
ಸಾಗರ ಭೋರ್ಗರೆಯುತ್ತ
ತಿಮಿಂಗಲಗಳ ಸಾಕುತ್ತದೆ.
ಅವನೋ ತಣ್ಣಗಿನ
ಮಂಜಿನ ಕತ್ತರಿ
ಅಲುಗು ತಾಗುತ್ತಲೇ
ಬೊಬ್ಬಿರಿಯುವ ಬೊಬ್ಬೆ.
ಹಾವಿನಂತೆ ಬಳಸುವ
ಮಂಜುಗಡ್ಡೆಯ ಕಾವಿನಲಿ
ಕೆಂಪಾಗಿ ಬಾಡಿದ
ಅವೆಷ್ಟೋ ಜಾಜಿಮಲ್ಲಿಗೆ
ನೆಲದ ಬಸಿರು ಸೇರಿ
ಬಿಡುವ ನಿಡಿದುಸಿರು
ಅಪ್ಪಳಿಸಿ ನನ್ನ ಕಿವಿಗಳು
ತೂತಾಗಿ ಸೋರುತಿವೆ.
ಈ ಚಾಟಿಯೇಟು
ನಿಲ್ಲುವುದೆಂದು ಮರುಳೇ..?
ಶುಭಶ್ರೀ ಪ್ರಸಾದ್ ಮೈಸೂರು ವಿ.ವಿ. ಇಂದ ಕನ್ನಡ ಸಾಹಿತ್ಯದಲ್ಲಿ ಪಿ.ಹೆಚ್.ಡಿ ಪದವಿ ಪಡೆದವರು.
‘ಹಣತೆಬೆಳಕು’ ಕವನ ಸಂಕಲನ, ‘ಒಡಲ ಕರೆಗೆ ಓಗೊಟ್ಟು’ ಕಥಾಸಂಕಲನ ಮತ್ತು ‘ಕನ್ನಡ ಸಾಹಿತ್ಯದಲ್ಲಿ ದೇಗುಲ ಪರಿಕಲ್ಪನೆ’ ಸಂಶೋಧನಾ ಕೃತಿ ಪ್ರಕಟಗೊಂಡ ಪುಸ್ತಕಗಳು.
ಸದ್ಯ ಮಂಡ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ.
ವಾರ್ತಾವಾಚನ ಹಾಗೂ ಕಾರ್ಯಕ್ರಮ ನಿರೂಪಣೆ ಇವರ ಹವ್ಯಾಸಗಳು
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ