ಸಿಟಿ ಮಾರ್ಕೆಟ್ ಸುತ್ತಲಿನ ಪುಟ್ಟಪುಟ್ಟ ಗಲ್ಲಿಗಳ ಹೆಸರು ಓದುತ್ತಾ ಹೋದಂತೆ ಕಣ್ಣೆದುರು ಜ್ಞಾಪಕ ಚಿತ್ರಶಾಲೆ ತೆರೆದುಕೊಳ್ಳುತ್ತೆ. ಒಮ್ಮೆ ರೈಲ್ವೆ ಪ್ಲಾಟ್ ಫಾರ್ಮ್ ರಸ್ತೆಯಲ್ಲಿ ಹೋಗಬೇಕಾದರೆ ಅಲ್ಲಿನ ಮೂಲೆ ಮನೆಯ ಗೋಡೆ ಅಂಚಿನಲ್ಲಿ ಒಂದು ಕನ್ನಡ ಫಲಕ ಕಾಣಿಸಿತು. ಅಡ್ಡಾದಿಡ್ಡಿಯಾಗಿ ಕಲ್ಲಿನಲ್ಲಿ ಕೆತ್ತಿದ್ಧ ಒಂದುಫಲಕ ಆಲ್ಲಿ ಗೋಡೆಗೆ ಅಳವಡಿಸಿದ್ದರು. ಅದರ ಮೇಲೆ ನಶ್ಯದ ಪಿಲ್ಲಣ್ಣ ರಸ್ತೆ ಅಂತ ಹೆಸರು. ಆ ಹೆಸರು ನೋಡಿದೆನಾ ಸುತ್ತ ಮುತ್ತ ಇಂತಹದೇ ಹೆಸರು ಇರಬಹುದು ಅಂತ ಆಕಡೆ ಹೋದಾಗಲೆಲ್ಲ ಹುಡುಕೋದು ಮಾಡ್ತಾ ಇದ್ದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೈದನೆಯ ಕಂತು ನಿಮ್ಮ ಓದಿಗೆ

ಹಿಂದಿನ ಸಂಚಿಕೆಯಲ್ಲಿ ಮಲ್ಲೇಶ್ವರದ ಸಂಗೀತ ವಿದ್ವಾಂಸರ ಹಾಗೂ ಗಣ್ಯಾತಿ ಗಣ್ಯರ ಕಿರು ಪರಿಚಯ ಮಾಡಿದ್ದೆ. ಇನ್ನೂ ಸುಮಾರು ಪ್ರಾತಃ ಸ್ಮರಣೀಯರು ಬಿಟ್ಟುಹೋಗಿದ್ದಾರೆ ಎನ್ನುವ ನೋವು ನನ್ನಲ್ಲಿದೆ.

ನಂತರ ಶೇಷಾದ್ರಿ ಪುರಕ್ಕೆ ಪ್ರವೇಶ ಮಾಡಿದ್ದೆವು. ಅಲ್ಲಿನ ಒಂದು ದುರಂತದ ನೆನಪು ಹಂಚಿಕೊಂಡಿದ್ದೆ. RMS ರಸ್ತೆಯಿಂದ ಬಂದಿದ್ದ ಒಂದು ವ್ಯಾನ್ ಆರ್ಯವಿದ್ಯಾ ಶಾಲೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಅಲ್ಲಿ ಜೋಡಿಸಿದ್ದ ಕಲ್ಲು ಚಪ್ಪಡಿ ಅಲ್ಲೇ ಕೂತಿದ್ದ ಮೂವರು ಮಕ್ಕಳ ಮೇಲೆ ಬಿದ್ದು ಅವರು ಸಾವಿಗೆ ಈಡಾದರು ಎನ್ನುವ ಸಂಗತಿ ತಿಳಿಸಿದ್ದೆ. ಮೃತ ಮಕ್ಕಳಲ್ಲಿ ಅಂದಿನ ಸಚಿವ ನಾಗಪ್ಪ ಆಳ್ವ ಅವರ ಮಗ ಇದ್ದ ಮತ್ತು ಬಹುಶಃ ಜೀವರಾಜ್ ಆಳ್ವ ಈ ಹುಡುಗನ ಅಣ್ಣ ಅಥವಾ ತಮ್ಮ ಅಂತ ಸೇರಿಸಿದ್ದೆ. ಜೀವರಾಜ್ ಆಳ್ವ, ರಾಮಕೃಷ್ಣ ಹೆಗಡೆ ಅವರ ಜತೆ ಇದ್ದರು ಮತ್ತು ತುಂಬಾ ಚಿಕ್ಕ ವಯಸ್ಸಿಗೇ(೫೪) ಕಾಲವಾದರು. ಬದುಕಿದ್ದರೆ ಬಹುಶಃ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದರೇನೋ.

ಹೀಗೇ ಕಣ್ಣಾಡಿಸುತ್ತಿರುವಾಗ ಮೈಸೂರು ಹೈಕೋರ್ಟಿನ ಒಂದು ದಾವೆಯ ಪ್ರತಿ ಕಣ್ಣಿಗೆ ಬಿತ್ತು. ಶ್ರೀ ನಾಗಪ್ಪ ಆಳ್ವ ಅವರ ಮಗ ಅಪಘಾತದಲ್ಲಿ ದಾರುಣವಾಗಿ ಮೃತ ಪಟ್ಟ ಸಂಗತಿಗೆ ಸಂಬಂಧ ಪಟ್ಟ ದಾವೆ ಅದು. ಅದರ ಪ್ರಕಾರ ಮೃತಬಾಲಕ ಜೀವರಾಜ್ ಆಳ್ವ ಅವರ ಅಣ್ಣ. ಆಗತಾನೇ ಮಿಡಲ್ ಸ್ಕೂಲಿಗೆ ಕಾಲಿಟ್ಟಿದ್ದ ಮಗುವಿನ ದಾರುಣ ಸಾವು ಎಂತಹ ತಂದೆ ತಾಯಿಯರನ್ನೇ ಆಗಲಿ ನೋವಿನ ಹೊಂಡಕ್ಕೆ ದೂಕುವುದು ಸಹಜ. ಈ ನೋವನ್ನು ನುಂಗಿ ತಮ್ಮ ದೈನಂದಿನ ರಾಜಕೀಯದಲ್ಲಿ ಮತ್ತೆ ತೊಡಗಿಸಿಕೊಂಡ ನಾಗಪ್ಪ ಆಳ್ವ ಅವರ ಬಗ್ಗೆ ಅಭಿಮಾನ ಮೂಡಿತು.

ನನಗೆ ಶೇಷಾದ್ರಿಪುರದ ಮೊದಲ ನೆನಪು ಅಥವಾ ಪ್ರಸ್ತಾಪ ನೆನಪಾಗುವುದು ಅರವತ್ತರ ದಶಕದ ಒಂದು ಪ್ರಸಂಗದಿಂದ. ನಮ್ಮ ಎರಡನೇ ಅಣ್ಣ ರಾಜು ಎಸೆಲ್ಸಿ ಮುಗಿಸಿ ಕಾಲೇಜು ಸೇರಲು ರೆಡಿ ಇದ್ದ. ಆಗ ರಾಜಾಜಿನಗರದಲ್ಲಿ ಕಾಲೇಜು ಇರಲಿಲ್ಲ. ಹಾಗೆ ನೋಡಿದರೆ ಹೈಸ್ಕೂಲು ಸಹ ಇರಲಿಲ್ಲ. ನಮ್ಮ ರಾಜು ಮಲ್ಲೇಶ್ವರದ ಸರ್ಕಾರಿ ಬಾಯ್ಸ್ ಪ್ರೌಢ ಶಾಲೆಯಲ್ಲಿ ಎಸ್ಸೆಲ್ಸಿ ಮುಗಿಸಿದ್ದು. ಕಾಲೇಜಿಗೆ ಸೇರಲು ಆಗ ಶೇಷಾದ್ರಿಪುರಂ ಕಾಲೇಜಿಗೆ ಸೇರಿದ. ಆಗ ಅದಕ್ಕೆ ಸುಬ್ಬಣ್ಣನ ದೊಡ್ಡಿ ಅಂತ ಕರೆಯುತ್ತಾ ಇದ್ದರು. ಸುಬ್ಬಣ್ಣ ಯಾರು ಅಂತ ನನಗೆ ಆಗ ಗೊತ್ತಿರಲಿಲ್ಲ, ದೊಡ್ಡಿ ಅಂದರೂ ಗೊತ್ತಿರಲಿಲ್ಲ. ಈಗಲೂ ಅಷ್ಟೇ, ಸುಬ್ಬಣ್ಣ ಅಂದರೆ ತಿಳಿಯದು. ಆದರೆ ದೊಡ್ಡಿ ಪದ ಒಂದು ಸ್ಲಾಂಗ್ ಪದ ಅಂತ ಗೊತ್ತಿತ್ತು ಮತ್ತು ಪ್ರಾಣಿಗಳನ್ನು ಕೂಡಿ ಹಾಕುವ ಜಾಗ ಅಂತ ನಂತರ ಅರ್ಥ ಮಾಡಿಕೊಂಡಿದ್ದೆ…!

ದೊಡ್ಡಿ ಪದ ಈ ಅರ್ಥ ಕೊಡುತ್ತೆ.. ಕೊಟ್ಟಿಗೆ ಎಂಬುದು ಜಾನುವಾರುಗಳನ್ನು ಕಟ್ಟಿ ಸಾಕಲು ಮಾಡಿರುವ ಒಂದು ವಸತಿ ವ್ಯವಸ್ಥೆ. ಎತ್ತು, ದನ, ಎಮ್ಮೆ, ಕುರಿಗಳಂತಹ ಪಶು ಸಂಗೋಪನೆಯಲ್ಲಿ ತೊಡಗಿರುವವರು, ಅವುಗಳನ್ನು ಕಟ್ಟಿ ಸಲಹುವ ತಾಣ ಕೊಟ್ಟಿಗೆಯಾಗಿದೆ. ಹಟ್ಟಿ, ದೊಡ್ಡಿ ಎಂದೂ ಇದನ್ನು ಕರೆಯುತ್ತಾರೆ.

ವಿದ್ಯಾರ್ಥಿಗಳನ್ನು ಒಟ್ಟಾರೆ ಕುರಿಗಳ ಹಾಗೆ ಕೂಡಿ ಹಾಕುತ್ತಾರೆ. ಅದರಿಂದ ಅದು ದೊಡ್ಡಿ ಅಂತ ಅರ್ಥೈಸಿಕೊಂಡಿದ್ದೆ. ನಾನು ಓದಿದ ಸರ್ಕಾರಿ ಶಾಲೆಗಳಲ್ಲಿ ನಮ್ಮನ್ನು ಹಾಗೆ ದೊಡ್ಡಿಯಲ್ಲಿ ಕೂಡಿ ಹಾಕುವ ಹಾಗೆ ಕೂಡಿಸುತ್ತಿದ್ದರು….! ನಿಧಾನಕ್ಕೆ ಇದು ಅಂದರೆ ಸುಬ್ಬಣ್ಣ ದೊಡ್ಡಿ ಶೇಷಾದ್ರಿ ಪುರ ಕಾಲೇಜಾಯಿತು, ಸುಬ್ಬಣ್ಣನ ದೊಡ್ಡಿ ಎನ್ನುವ ಹೆಸರನ್ನು ಬೇರು ಸಮೇತ ತೆಗೆಯಿತು ಮತ್ತು ಈಗ ಬೆಂಗಳೂರಿನಲ್ಲಿ ಇದರ ಶಾಖೆಗಳು ಸಹಾ ಇವೆ. ಅಂದಹಾಗೆ ಈ ಪ್ರದೇಶಕ್ಕೆ ಶೇಷಾದ್ರಿ ಪುರ ಎನ್ನುವ ಹೆಸರು ಹೇಗೆ ಬಂತು ಎನ್ನುವ ಯೋಚನೆ ಸಣ್ಣ ವಯಸ್ಸಿನಲ್ಲಿಯೇ ಬಂದಿದ್ದರೂ ಅದರ ಆಳಕ್ಕೆ ಇಳಿದಿರಲಿಲ್ಲ. ರಾಜಾಜಿ ನಗರಕ್ಕೆ ತಮಿಳುನಾಡಿನ ಹಿರಿಯ ಮುತ್ಸದ್ದಿ ಮತ್ತು ಚಿಂತಕ ಚಕ್ರವರ್ತಿ ರಾಜಗೋಪಾಲಾಚಾರಿ ಅವರಿಂದ ಹೆಸರು ಬಂತು ಅಂತ ಸೋಪ್ ಫ್ಯಾಕ್ಟರಿ ಮುಂದೆ ಇದ್ದ ಕಲ್ಲಿನ ಫಲಕ ನೋಡಿ ತಿಳಿದಿದ್ದೆ. ಜಯನಗರ ನಮ್ಮ ಮಹಾರಾಜರ ಹೆಸರಿಂದ (ಜಯಚಾಮರಾಜ ಒಡೆಯರ್)ಬಂದಿತು ಅಂತ ಗೊತ್ತಿತ್ತು. ಮಲ್ಲೇಶ್ವರದ ಹೆಸರು ಅಲ್ಲಿನ ಕಾಡು ಮಲ್ಲೇಶ್ವರನ ದೇವಸ್ಥಾನದಿಂದ ಬಂದದ್ದು. ಚಾಮರಾಜ ಪೇಟೆ ಮತ್ತೆ ನಮ್ಮ ಮಹಾರಾಜರ ನೆನಪಿಗೆ. ಬೆಂಗಳೂರಿನಂತಹ ರಾಜ್ಯದ ರಾಜಧಾನಿಯ ಒಂದು ಪ್ರತಿಷ್ಠಿತ ಬಡಾವಣೆಗೆ ಜಯಪ್ರಕಾಶ ನಾರಾಯಣ ನಗರ ಅಂತ ಹೆಸರು ಇದೆ. ಇದು ಯಾವುದು ಅಂತ ಗೊತ್ತಾಗಲಿಲ್ಲ ತಾನೇ? ಅದೇ ಈಗ ಜೆಪಿ ನಗರ ಅಂತ ಹೆಸರುವಾಸಿ ಆಗಿರೋದು. ನಮ್ಮ ರಾಜ್ಯದ ಅನೇಕ ಪ್ರಸಿದ್ಧ ನಗರ ಪ್ರದೇಶಗಳು ನಮ್ಮ ಲೋಕಲ್ ಪ್ರಸಿದ್ಧರ ಹೆಸರಿನಿಂದ ಫೇಮಸ್ ಆಗಿಲ್ಲ! ಕೆಲವು ಚಿಕ್ಕ ಪುಟ್ಟ ರಸ್ತೆಗಳಿಗೆ ಇಟ್ಟಿರುವ ಹೆಸರಿನ ಮೂಲ ಪುರುಷ ಅಥವಾ ಮಹಿಳೆ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ. ಹಾಗೆ ನೋಡಿದರೆ ಬೆಂಗಳೂರಿನ ರಸ್ತೆಗಳ ಹೆಸರು ಹೊತ್ತವರ ಹಿರಿಮೆ ಕುರಿತ ಬರಹಗಳು ನಮ್ಮ ಇಂದಿನ ಮುಂದಿನ ಪೀಳಿಗೆಗೆ ಅವಶ್ಯವಾದ ಅಗತ್ಯ ಎಂದು ನನ್ನ ಅನಿಸಿಕೆ. ದೇವೇಗೌಡರ, ಹನುಮಂತಯ್ಯ ಅವರ ದಾನಪ್ಪ ಜತ್ತಿ ಅವರ ಹೆಸರಿನ ಒಂದು ಬಡಾವಣೆ ಇಲ್ಲದ ದಾರಿದ್ರ್ಯ ನಮ್ಮದು. bmtc ಬಸ್ಸಿನಲ್ಲಿ ಓಡಾಡ ಬೇಕಾದರೆ ರಿಂಗ್ ರೋಡಿನ ಒಂದು ಸ್ಟಾಪಿಗೆ ಯಾರೀ ಯಾರ್ರೀ ಕೇಳಿದ್ದು ದೇವೇಗೌಡ ಪೆಟ್ರೋಲ್ ಬಂಕ್ ಅಂತ, ಬಂಕ್ ಬಂತು ಇಳೀ ರೀ ಅಂತ ಕಂಡಕ್ಟರ್ ಗಂಟಲು ಹರಿಯುವ ಹಾಗೆ ಕೂಗುವುದನ್ನು ಕೇಳಿಸಿಕೊಂಡಿದ್ದೇನೆ. ಇದು ಒಂದು ವಿಚಿತ್ರ, ಯಾರೂ ಹೆಸರೇ ಇಡದೆ ಹುಟ್ಟಿಕೊಂಡಿದ್ದು. ದೇಶದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರ ಆಡಳಿತ ಅವಧಿಯಲ್ಲಿ ಅವರ ಸೊಸೆಗೆ ಈ ಪೆಟ್ರೋಲ್ ಬಂಕ್ ಅಲಾಟ್ ಆಯಿತು. ಯಾರೋ ತಗಾದೆ ತೆಗೆದರು ಪ್ರಭಾವ ಉಪಯೋಗಿಸಿ ಸೊಸೆಗೆ ಬಂಕ್ ಕೊಡಿಸಿದ್ದಾರೆ ಆಂತ. ನ್ಯಾಯಾಲಯ ಈ ಅಲಾಟ್ ಮೆಂಟ್ ಕ್ಯಾನ್ಸಲ್ ಮಾಡಿತು. ಹೊಸ ಪ್ರಕ್ರಿಯೆ ಪ್ರಕಾರ ಅರ್ಜಿ ಆಹ್ವಾನಿಸಿ ಅಭ್ಯರ್ಥಿ ಆಯ್ಕೆ ಆಗಬೇಕು ಅಂತ ಸೂಚನೆ ನೀಡಿತು. ಅರ್ಜಿ ಆಹ್ವಾನಿಸಿದರು. ದೇವೇಗೌಡರ ಸೊಸೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದರು! (ಸೊಸೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸುವ ಹಾಗೆ ನೋಡಿಕೊಳ್ಳಲಾಯಿತು ಎಂದು ಕೆಲವರು ಕುಹಕ ಆಡುತ್ತಾರೆ). ಹಾಗಾಗಿ ಅವರಿಗೇ ಪೆಟ್ರೋಲ್ ಬಂಕ್ ನಡೆಸುವ ಅವಕಾಶ ಸಿಕ್ಕಿತು. ಆದರೂ ಹೆಸರು ದೇವೇಗೌಡರಿಗೆ ಬಂದು ಪೆಟ್ರೋಲ್ ಬಂಕ್ ಅವರ ಹೆಸರಿನಲ್ಲಿಯೇ ಇದ್ದು bmtc ಇದನ್ನು ಮಾನ್ಯ ಮಾಡಿದೆ! ಒಂದು ಕುಹಕದ ಹಾಗೆ ಮೊದಮೊದಲು ಈ ಹೆಸರು ಪ್ರಯೋಗವಾಗಿ ಈಗ ಮಾನ್ಯತೆ ಪಡೆದಿದೆ! ರಾಜಾಜಿನಗರದಲ್ಲಿ ಅರವತ್ತರ ದಶಕದಲ್ಲಿ ಸಿದ್ದರಾಮನ ದಿಣ್ಣೆ ಎನ್ನುವ ಒಂದು ಗ್ರಾಮೀಣ ಲುಕ್ ಇದ್ದ ಸ್ಥಳ ಇತ್ತು. ಅದೇ ಸ್ಥಳವನ್ನು ಈಗ ನಮ್ಮ ಮುಮ ಅವರ ಹೆಸರಲ್ಲಿ ಸಿದ್ದರಾಮಯ್ಯ ಪುರ ಎಂದು ಮಾಡಬಹುದಿತ್ತು.

ಇದೇ ಸಮಯದಲ್ಲಿ ನನಗೆ ಪೂಜ್ಯ ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ ಎನ್ನುವ ಹಲವು ಸಂಪುಟಗಳ ನೆನಪು ಒದ್ದುಕೊಂಡು ಬರುತ್ತೆ. ಅದರಲ್ಲಿ ಅವರು ವಿವರಿಸಿರುವ ವ್ಯಕ್ತಿಗಳು ಮತ್ತು ಅಂದಿನ ಬೆಂಗಳೂರು, ಅಲ್ಲಿನ ರಸ್ತೆಗಳು ಇವುಗಳನ್ನು ಓದುತ್ತಾ ಓದುತ್ತಾ ನಮ್ಮ ಪರಂಪರೆಯ ಬಗ್ಗೆ ಮತ್ತು ಅವರು ಚಿತ್ರಿಸಿರುವ ಅಂದಿನ ದಿನಗಳ ಬಗ್ಗೆ ಹೆಮ್ಮೆ ಅನಿಸುತ್ತದೆ. ಒಂದು ಸಲ ಅವರ ಜ್ಞಾಪಕ ಚಿತ್ರ ಶಾಲೆ ಓದಿ ಸಿಟಿ ಮಾರ್ಕೆಟ್ ಬಳಿ ಗುಂಡೋಪಂತರ ರಸ್ತೆ ಹುಡುಕಿ ಹೋಗಿದ್ದೆ! ಸಿಟಿ ಮಾರ್ಕೆಟ್ ಸುತ್ತಲಿನ ಪುಟ್ಟಪುಟ್ಟ ಗಲ್ಲಿಗಳ ಹೆಸರು ಓದುತ್ತಾ ಹೋದಂತೆ ಕಣ್ಣೆದುರು ಜ್ಞಾಪಕ ಚಿತ್ರಶಾಲೆ ತೆರೆದುಕೊಳ್ಳುತ್ತೆ. ಒಮ್ಮೆ ರೈಲ್ವೆ ಪ್ಲಾಟ್ ಫಾರ್ಮ್ ರಸ್ತೆಯಲ್ಲಿ ಹೋಗಬೇಕಾದರೆ ಅಲ್ಲಿನ ಮೂಲೆ ಮನೆಯ ಗೋಡೆ ಅಂಚಿನಲ್ಲಿ ಒಂದು ಕನ್ನಡ ಫಲಕ ಕಾಣಿಸಿತು. ಅಡ್ಡಾದಿಡ್ಡಿಯಾಗಿ ಕಲ್ಲಿನಲ್ಲಿ ಕೆತ್ತಿದ್ಧ ಒಂದುಫಲಕ ಆಲ್ಲಿ ಗೋಡೆಗೆ ಅಳವಡಿಸಿದ್ದರು. ಅದರ ಮೇಲೆ ನಶ್ಯದ ಪಿಲ್ಲಣ್ಣ ರಸ್ತೆ ಅಂತ ಹೆಸರು. ಆ ಹೆಸರು ನೋಡಿದೆನಾ ಸುತ್ತ ಮುತ್ತ ಇಂತಹದೇ ಹೆಸರು ಇರಬಹುದು ಅಂತ ಆಕಡೆ ಹೋದಾಗಲೆಲ್ಲ ಹುಡುಕೋದು ಮಾಡ್ತಾ ಇದ್ದೆ. ಅಲ್ಲೇ ಓಬಳಪ್ಪ ರಸ್ತೆ, ಪೈಲ್ವಾನ್ ಕೃಷ್ಣಪ್ಪ ರಸ್ತೆ, ಪಾಪಣ್ಣ ರಸ್ತೆ… ಮೊದಲಾದ ಫಲಕ ಕಂಡಿದ್ದು. ಒಂದು ದುರಂತ ಅಂದರೆ ಇವರು ಯಾರೂ ಅಲ್ಲಿ ವಾಸ ಮಾಡ್ತಾ ಇರೋರಿಗೆ ಆಗಲಿ ನಮ್ಮಂತಹ ದಾರಿಹೋಕರಿಗಾಗಲಿ ಗೊತ್ತಿಲ್ಲದಿರುವುದು. ಒಂದು ಕಾಲದಲ್ಲಿ ಜನಾನುರಾಗಿ ಆಗಿದ್ದೋರು ಕಾಲ ಸರಿದ ಹಾಗೆ ಜನರ ಮನಸಿನಿಂದ ಮರೆಯಾಗುತ್ತಾರೆ. ಒಂದೆರೆಡು ಪೀಳಿಗೆ ಸಮಯದಲ್ಲಿ ನಾಮಾವಶೇಷ ಸಹ ಆಗಿಬಿಡುತ್ತಾರೆ.

ಈ ಕತೆ ಅರಸೀಕೆರೆ ಸುತ್ತ ಹೋದಾಗ ಭೈರಪ್ಪ ಅವರ ಕತೆಗಳ ಹಲವು ಊರುಗಳ ಚಿತ್ರ ಕಣ್ಣ ಮುಂದೆ ಬರುತ್ತದೆ. ಬೈರಪ್ಪ ಅವರ ಕಾದಂಬರಿಗಳಲ್ಲಿ ಬರುವ ಸುಮಾರು ಹಳ್ಳಿ, ಗ್ರಾಮಗಳ ಹೆಸರು ಅಲ್ಲಿ ನಿಮಗೆ ಕಾಣುತ್ತವೆ ಮತ್ತು ಬೈರಪ್ಪ ಅವರ ಕಾದಂಬರಿ ನೆನಪು ಒದ್ದುಕೊಂಡು ಕಣ್ಮುಂದೆ ಬರುತ್ತದೆ.

ನಮ್ಮ ಹಿರಿಯ ಸಾಹಿತಿಗಳು ಮತ್ತು ದೇಶಭಕ್ತರ ಹೆಸರು ಅಷ್ಟಾಗಿ ಎಲ್ಲೂ ವಿಜೃಂಭಿಸಿಲ್ಲ. ಬೆಂಗಳೂರಿನಲ್ಲಿ ಜೆ ಪಿ ನಗರ ಇದ್ದ ಹಾಗೆ ಬೇರೆ ರಾಜ್ಯದಲ್ಲಿ ನಿಜಲಿಂಗಪ್ಪ ನಗರ ಅಥವಾ ಜತ್ತಿ ಪುರ ಅಥವಾ ದೇವೇಗೌಡ ನಗರ ಇದ್ದ ಹಾಗಿಲ್ಲ. ಅಲ್ಲಿವರೆಗೂ ಯಾಕೆ ಹೋಗಬೇಕು, ನಮ್ಮ ರಾಜ್ಯದಲ್ಲೇ ನಮ್ಮ ಸಾಹಿತಿಗಳು ರಾಜಕಾರಣಿಗಳನ್ನು ನೆನಪಿಗೆ ತರುವ ಯಾವ ನಗರ ಹಳ್ಳಿ, ಗಲ್ಲಿ ಸಹ ಇಲ್ಲ. ಬೆಂಗಳೂರಿನ ಮತ್ತಿ ಕೆರೆಯಲ್ಲಿ ಒಂದು ದೊಡ್ಡ ಪಾರ್ಕ್ ನಿರ್ಮಾಣ ಆಯಿತು. ಅದಕ್ಕೆ ಯಾರಾದರೂ ಕನ್ನಡ ಸಾಹಿತಿಗಳ ಹೆಸರು ಇಡಬೇಕು ಅನ್ನುವ ಒತ್ತಾಸೆ ಸಹ ಇತ್ತು. ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅವರ ಹೆಸರೂ ಓಡಾಡಿದವು. ಕೊನೆಗೆ ಆ ಪಾರ್ಕ್‌ಗೆ ಜಯಪ್ರಕಾಶನಾರಾಯಣ ಪಾರ್ಕ್ ಅಂತ ಹೆಸರು ಇಟ್ಟು ಅದು ಕಾಲಾನಂತರ ಜೇಪೀ ಪಾರ್ಕ್ ಆಯಿತು, ಜೇಪೀ ನಗರ ಆದಹಾಗೆ.

ಮೈಸೂರಿನಲ್ಲಿ ಅನಂತ ಮೂರ್ತಿ ವೃತ್ತ, ಗಿರೀಶ್ ಕಾರ್ನಾಡ್ ವೃತ್ತ ಮತ್ತು ಭೈರಪ್ಪ ವೃತ್ತ ಇದೆ. ಬೆಂಗಳೂರಿನಲ್ಲಿ ಇವನ್ನು ಕಾಣೆ. ಬೆಂಗಳೂರಿನಲ್ಲಿ ಇವರು ಮೂವರ ಹೆಸರಿನ ಒಂದು ಕಂಬ ಸಹ ಇಲ್ಲ ಅಥವಾ ನನ್ನ ಕಣ್ಣಿಗೆ ಬಿದ್ದಿಲ್ಲ.

ಮತ್ತೊಂದು ಪ್ರಸಂಗ ನೆನಪಾಗ್ತಾ ಇದೆ. ನಾನು ಕೆಲಸ ಮಾಡುತ್ತಿದ್ದ ಕೇಂದ್ರ ಸಾರ್ವಜನಿಕ ಉದ್ದಿಮೆಯ ಕನ್ನಡ ಪರ ಸಂಘಟನೆ ತನ್ನ ರಜತ ಮಹೋತ್ಸವ ಆಚರಿಸಬೇಕಾದರೆ ಸುತ್ತ ಮುತ್ತಲಿನ ವೃತ್ತ, ಪಾರ್ಕು, ರಸ್ತೆಗಳಿಗೆ ಕನ್ನಡ ಸಾಹಿತಿಗಳ ಹೆಸರು ನಾಮಕರಣ ಮಾಡುವುದರ ಬಗ್ಗೆ ಒಂದು ಯೋಜನೆ ರೂಪಿಸಿತ್ತು. ಅದರಂತೆ ಜಿ ಪಿ ರಾಜರತ್ನಂ, ಕುವೆಂಪು ಹೆಸರು ಎರಡು ಸರ್ಕಲ್‌ಗೆ ಅಂತ ನಿರ್ಧಾರ ಆಯಿತು. ಒಂದು ಸುಮಾರು ದೊಡ್ಡದು ಅನ್ನುವ ಪಾರ್ಕ್‌ಗೆ ಅನಕೃ ಅವರ ಹೆಸರು ಸೂಚನೆ ಆಯಿತು. ಜಿ ಪಿ ರಾಜರತ್ನಂ, ಕುವೆಂಪು ಹೆಸರು ಎರಡು ಸರ್ಕಲ್‌ಗೆ ಅಂಗೀಕಾರ ಆಯಿತು. ಅನಕೃ ಅವರದ್ದು ನಿರ್ಧಾರ ಆಗಬೇಕಾದರೆ ಆಡಳಿತ ವರ್ಗದ ಪರ ಒಬ್ಬ ಪ್ರಮುಖರು ಕಾರ್ಖಾನೆಗೆ ಹೆಸರು ತಂದವರ ಹೆಸರು ಇರಲಿ ಅಂದರು. ಅನಕೃ ಹೆಸರಿಗೆ ಬದಲು ಕಾರ್ಖಾನೆಯ ಹಿರಿಯ ನಿವೃತ್ತ ಅಧಿಕಾರಿ ಹೆಸರು ಪಾರ್ಕಿಗೆ ಬಂತು. ಅನಕೃ ಅದೃಷ್ಟ ಹೀನರು ಅನಿಸಿತು! ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು ಗಾದೆ ಅನ್ವಯ ಆಯಿತು. ಈ ಲೇಖನ ಬರೆದ ನಂತರ ರವಾನೆಗೆ ಮೊದಲು ಚಿಕ್ಕಮಗಳೂರಿಗೆ ಹೋಗಿದ್ದೆ. ಚನ್ನರಾಯಪಟ್ಟಣದ ಹೆದ್ದಾರಿಯಲ್ಲಿ ಒಂದು ಆಶ್ಚರ್ಯ ಕಂಡಿತು. ಅಲ್ಲಿನ ಒಂದು ಸರ್ಕಲ್‌ಗೆ ಅನಕೃ ಹೆಸರಿದೆ! ಅದೇನು ಸಂತೋಷ ಆಯ್ತು ಅಂತೀರಿ..! ಆ ಸರ್ಕಲ್‌ಗೆ ದೂರದಿಂದಲೇ ವಾಹನದಲ್ಲಿ ಹೋಗುತ್ತಾ ಕೈ ಮುಗಿದೆ! ನಮ್ಮ ನಾಡಿಗೆ ನುಡಿಗೆ ಹೆಸರು ತಂದ ವ್ಯಕ್ತಿ ಶಕ್ತಿಗಳು ಇಡೀ ರಾಜ್ಯದ ತುಂಬಾ ಹಬ್ಬಬೇಕು. ಬೆಂಗಳೂರಿನಲ್ಲಿ ಒಂದು ರಾಮಮೂರ್ತಿ ನಗರ ಅಂತ ಇದೆ. ನಮ್ಮ ಕನ್ನಡ ಚಳುವಳಿಯ ಮ. ರಾಮಮೂರ್ತಿ ಅವರ ನೆನಪಿಗೆ ಈ ನಗರ ಆಗಿದ್ದರೆ ಅದು ಖುಷಿ ಪಡಬೇಕಾದ ಸಂಗತಿ. ಹೆಗಡೆ ನಗರ, ಶಿವರಾಮ ಕಾರಂತ ಬಡಾವಣೆ, ಮೊದಲಾದ ಪ್ರದೇಶಗಳು ಈಚೆಗೆ ಹುಟ್ಟಿದ್ದು ಅದರ ನಿರ್ವಹಣೆಯ ಲೋಪದೋಷಗಳಿಗೆ ಒಳಗಾದವರು ಆಯಾ ಹೆಸರು ಹೊತ್ತ ಹಿರಿಯರನ್ನು ಶಪಿಸುವ ಹಾಗಾಗಿದೆ.

ನಮ್ಮ ಕಂಟರ್ಮೆಂಟಿನ ಸುಮಾರು ಹೆಸರುಗಳು ಇಂಗ್ಲಿಷ್ ಪೀಳಿಗೆ ಅವು. ಇನ್ನೊಂದು ನೂರು ವರ್ಷದ ನಂತರ ಅಲ್ಲಿನ ಎಷ್ಟೋ ರಸ್ತೆಗಳಿಗೆ, ಪುಟ್ಟ ಪ್ರದೇಶಗಳಿಗೆ ಅಂತಹ ಹೆಸರು ಯಾಕೆ ಇಟ್ಟರು ಅಂತ ಸಂಶೋಧನೆ ಮಾಡಲೇ ಬೇಕು ಹಾಗಾಗುತ್ತದೆ., ಮರ್ಫಿ ಟೌನ್, ಬೆನ್ಸನ್ ಟೌನ್, ಜಾನ್ಸನ್ ಮಾರ್ಕೆಟ್, ವೀಲರ್ ರಸ್ತೆ, ಫ್ರೇಜರ್ ಟೌನ್.. ಮೊದಲಾದ ಹೆಸರುಗಳನ್ನು ನೋಡುತ್ತಿದ್ದರೆ ಇವರು ಯಾರ ಬಗ್ಗೆಯೂ ಏನೂ ಗೊತ್ತಿಲ್ಲದ ನಮ್ಮ ಬಗ್ಗೆ ಜಿಗುಪ್ಸೆ ಮೂಡುತ್ತೆ. ಬೆಂಗಳೂರಿನ ಸುಮಾರು ಬಡಾವಣೆಗಳು ಹೀಗೆ ಪ್ರತಿಷ್ಠಿತರ ಹೆಸರಿನಿಂದ ಕಂಗೊಳಿಸುತ್ತಿವೆ. ಅಂತಹ ಪ್ರತಿಷ್ಠಿತರ ಹೆಸರು ಹೊಂದಿರುವ ಹಲವು ಏರಿಯಾಗಳಲ್ಲಿ ಒಂದು ಈ ಶೇಷಾದ್ರಿಪುರ. ಶೇಷಾದ್ರಿ ಪುರ ಇಂಗ್ಲಿಷಿನ ವರು ಮತ್ತು ತಮಿಳರ ಬಾಯಲ್ಲಿ ಶೇಷಾದ್ರಿ ಪುರಂ ಆಗಿದೆ!

(ಶೇಷಾದ್ರಿ ಅಯ್ಯರ್)

ಇನ್ನು ಇಂದಿನ ನಮ್ಮ ಕಥಾನಾಯಕ ಶೇಷಾದ್ರಿ, ಶೇಷಾದ್ರಿಪುರದ ಹೆಸರು ಕೊಟ್ಟ ಹಿರಿಯರ ಬಗ್ಗೆ ನಿಮಗೆ ಹೇಳಬೇಕು. ಅದಕ್ಕೆ ಮೊದಲು ಮತ್ತೊಂದು ನೆನಪು. GAS ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ನಮ್ಮ ಅಚ್ಚುಮೆಚ್ಚಿನ ಭೇಟಿಯ ಸ್ಥಳಗಳಲ್ಲಿ ಕಬ್ಬನ್ ಪಾರ್ಕ್‌ನಲ್ಲಿನ ಲೈಬ್ರರಿ ಸಹ ಒಂದು. ಅದನ್ನು ನೋಡಿದರೆ ಬ್ರಿಟಿಷ್ ವಸಾಹತು ಶಾಹಿಯ ಒಂದು ತುಣುಕು ಅನಿಸುತ್ತಿತ್ತು. ಇದಕ್ಕೆ ಪೂರಕವಾಗಿ ಎಷ್ಟೋ ವರ್ಷಗಳ ನಂತರ ಪ್ರೊ ಎಂ. ಡಿ.ನಂಜುಂಡಸ್ವಾಮಿ ಅವರು ಹೇಳಿದ್ದ ಒಂದು ಮಾತು ಈಗ ಮನಸಿಗೆ ಬಂತು. ಬ್ರಿಟಿಷರು ನಮ್ಮ ಆಚಾರ ವಿಚಾರ ದೈನಂದಿನ ನಡವಳಿಕೆಗಳು ಇವುಗಳ ಮೇಲೆ ಎಂತಹ ಅಚ್ಚಳಿಯದ ಪ್ರಭಾವ ಬೀರಿದ್ದರು ಎಂದು ಒಮ್ಮೆ ವಿವರಿಸುತ್ತಾ ಇದ್ದರು. ಅವರು ಅಂದರೆ ಬ್ರಿಟಿಷರು ಗೋಡೆಗಳ ಮೇಲೆ ಹೊಡೆದು ಹೋಗಿರೋ ಬಣ್ಣ ಬದಲಾಯಿಸೋದು ಸಹ ನಮಗೆ ಆಗ್ತಾ ಇಲ್ಲ. ಊಳಿಗಮಾನ್ಯ ಪದ್ಧತಿಯಲ್ಲಿ ನಾವು ಅಷ್ಟರ ಮಟ್ಟಿಗೆ ಹುದುಗಿ ಹೋಗಿದ್ದೇವೆ ಅಂತ ಸ್ವಾಮಿ ಅವರ ವಾದ. ಅದಕ್ಕೆ ಪೂರಕವಾಗಿ ಅವರು ಕೊಡುತ್ತಿದ್ದ ಉದಾಹರಣೆ ನಾಲ್ಕೋ ಐದೋ ಬಿಲ್ಡಿಂಗ್‌ಗಳು. ಅದರಲ್ಲಿ ಈ ಪಬ್ಲಿಕ್ ಲೈಬ್ರರಿ ಸಹ ಒಂದು. ಕಡು ಕೆಂಪು ಇಟ್ಟಿಗೆ ಬಣ್ಣದ ಕಟ್ಟಡ ಇದು. ಒಳ ಹೊಕ್ಕರೆ, ನಿಂತು ಮಬ್ಬು ಕತ್ತಲಿಗೆ ಕಣ್ಣು ಹೊಂದಿಸಿಕೊಂಡ ನಂತರ ಹಜಾರ ಕಾಣುತ್ತಿತ್ತು. ಹಜಾರದ ಎರಡೂ ಕಡೆ ಜೋಡಿಸಿರುವ ನಿಂತು ಪೇಪರು ಹರಡಿ ಓದಬಹುದಾದ ಟೇಬಲ್ಲುಗಳು. ಇಂತಹ ಟೇಬಲ್ ನಾನು ಮೊಟ್ಟಮೊದಲ ಸಲ ನೋಡಿದ್ದು ಇಲ್ಲಿ. ಅದರ ಮೇಲೆ ಕನ್ನಡವೂ ಸೇರಿದ ಹಾಗೆ ಹಲವು ಭಾಷೆಗಳ ಪೇಪರ್‌ಗಳು. ಅದನ್ನು ದಾಟಿ ಒಳನಡೆದರೆ ಎಡಕ್ಕೆ ಬಲಕ್ಕೆ ವಿಶಾಲವಾದ ಜಾಗದಲ್ಲಿ ಅಳವಡಿಸಿರುವ ದೊಡ್ಡ ದೊಡ್ಡ ಟೇಬಲ್ಲೂ, ಅದರ ಸುತ್ತ ಕಪಾಟಿನಲ್ಲಿ ಜೋಡಿಸಿರುವ ಹಳೆಯ ತಾತನ ಕಾಲದ ಹಲವು ಭಾಷೆಗಳ ಪುಸ್ತಕಗಳು. ಒಂದು ಮೂಲೆಯಲ್ಲಿ ರೆಫರೆನ್ಸ್ ಪುಸ್ತಕಗಳ ಬೀರು. ಅದರ ಪಕ್ಕ ಮರದ ಮೆಟ್ಟಲು, ಡಬ ಡಬಾ ಶಬ್ದ ಮಾಡುತ್ತಾ ಅದನ್ನು ಹತ್ತಿ ಮೇಲೆ ಮಹಡಿಗೆ ಹೋದರೆ ಅಲ್ಲೂ ವಿಶಾಲವಾದ ಹಾಲ್, ಕಬೋರ್ಡಿನ ತುಂಬಾ ಇರುವ ಪುಸ್ತಕಗಳು ಮತ್ತು ಕಬೋರ್ಡಿನ ಮೇಲೆ ವಿಷಯಸೂಚಿ ವಿವರಗಳು. ಎರಡೂ ಕಡೆ ಗುಮಾಸ್ತರು ಮತ್ತು ಅವರ ಪಕ್ಕ ಪುಸ್ತಕಗಳ ಬಿನ್ ಕಾರ್ಡ್. ಬಿನ್ ಕಾರ್ಡ್ ಹೀಗೆಂದರೆ ಏನು? ಒಂದು ಪುಟ್ಟ ವಿವರ. ನಿಮಗೆ ಯಾವುದೋ ಪುಸ್ತಕ ಬೇಕು ಅನ್ನಿ, ಅಲ್ಲಿರುವ ಗುಮಾಸ್ತರ ಬಳಿ ಕೇಳಿದರೆ ಅವರು ಪಕ್ಕದಲ್ಲಿನ ಜೋಡಿಸಿ ಇಟ್ಟಿರುವ ಡಬ್ಬ ಹುಡುಕಿ ಕಾರ್ಡ್ (ಇದೇ ಬಿನ್ ಕಾರ್ಡ್) ತೆಗೆದು ನಿಮಗೆ ಬೇಕಿರುವ ಪುಸ್ತಕ ಎಲ್ಲಿದೆ ಎಂದು ಲೊಕೇಶನ್ ಹೇಳುತ್ತಾರೆ. ಸುಮಾರು ಸಲ ನಾವೇ ಬಿನ್ ಕಾರ್ಡ್ ಹುಡುಕಿ ಪುಸ್ತಕ ತೆಗೆದುಕೊಳ್ಳುತ್ತಿದ್ದೆವು. ಅಂದ ಹಾಗೆ ಈ ಕಟ್ಟಡದ ಮೇಲೆ ಸರ್ ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್ ಎನ್ನುವ ಇಂಗ್ಲಿಷ್ ಫಲಕ ಇತ್ತು. ಸೈಕಲ್ ಕಟ್ಟಡದ ಪಕ್ಕ ಇರಿಸಿ ನಾವು ಲೈಬ್ರರಿ ಹೋಗುತ್ತಿದ್ದೆವು. ಇದು ಕೆಲಸಕ್ಕೆ ಸೇರುವವರೆಗೆ ಮತ್ತು ಕೆಲವು ವರ್ಷ ಮುಂದುವರೆಯಿತು.

ಈ ಕಟ್ಟಡದ ಬಣ್ಣ ಕಡು ಕೆಂಪು ಇಟ್ಟಿಗೆ ಬಣ್ಣ ಅಂತ ಹೇಳಿದೆ. ಇದೇ ಬಣ್ಣ ನಮ್ಮ ಅಟಾರಾ ಕಚೇರಿಗೂ ಇತ್ತು, ಗವರ್ನಮೆಂಟ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿಗೆ ಇತ್ತು, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿಗೆ ಇತ್ತು ಮತ್ತು ನಮ್ಮ ಹೈಕೋರ್ಟ್ ಕಟ್ಟಡಕ್ಕೂ ಇತ್ತು. ಗವರ್ನಮೆಂಟ್ ಲಾ ಕಾಲೇಜಿಗೂ ಇದೇ ಬಣ್ಣ ಇತ್ತು, ಸೆಂಟ್ರಲ್ ಕಾಲೇಜಿಗೂ ಇದೇ ಬಣ್ಣ! ಇನ್ನೂ ಕೆಲವು ಆಗಿನ ಕಾಲದ ಕಟ್ಟಡಗಳಿಗೆ ಇದೇ ಬಣ್ಣ. ಇದು ನಮ್ಮ ಪ್ರೊ ಎಂ ಡಿ ಎನ್ ಅವರ ಪ್ರಕಾರ ದಾಸ್ಯದ ಸಂಕೇತ! ಬ್ರಿಟಿಷರ ಕಪಿಮುಷ್ಟಿಯಿಂದ ಹೊರಕ್ಕೆ ಬಾರದ ನಮ್ಮ ಮೈಂಡ್ ಸೆಟ್!!

ಕಬ್ಬನ್ ಪಾರ್ಕ್‌ನ ಒಂದು ವಿಶಾಲವಾದ ಬಿಲ್ಡಿಂಗ್ ಮೇಲೆ ಶೇಷಾದ್ರಿ ಅಯ್ಯರ್ ಹೆಸರು ನೋಡಿದಾಗ ಅಂತಹ ಕುತೂಹಲ ಹುಟ್ಟಿರಲಿಲ್ಲ. ನಂತರ ಅವರ ಜೀವನ ಚರಿತ್ರೆ ಓದಬೇಕಾದರೆ ಹೆಚ್ಚಿನ ವಿವರ ತಿಳಿಯಿತು. ಮತ್ತೆ ಈ ಕಟ್ಟಡಕ್ಕೆ ತೊಂಭತ್ತರಲ್ಲಿ ಭೇಟಿ ಮಾಡಬೇಕಾಯಿತು. ಅದರ ಸಂಕ್ಷಿಪ್ತ ವಿವರ ನೀಡಿ ಮುಂದಕ್ಕೆ ಹಾರ್ತಿನಿ.

ಕತೆ ಪತೆ ಬರೆಯೋ ಹುಚ್ಚು ಅಂಟಿಸಿಕೊಂಡದ್ದು ಹೇಳಿದ್ದೆ. ಮಾಸ್ತಿ ಟ್ರಸ್ಟ್ ಒಂದು ಪ್ರಕಟಣೆ ಹೊರಡಿಸಿತ್ತು. ಪತ್ರಿಕೆಗಳಲ್ಲಿ ಪ್ರಕಟ ಆಗಿರುವ ಪುಸ್ತಕ ರೂಪದಲ್ಲಿ ಬಂದಿಲ್ಲದಿರುವ ಕತೆಗಳ ಸಂಕಲನಕ್ಕೆ ಧನ ಸಹಾಯ ನೀಡುವ ವಿಷಯ ಅದು. ಕತೆಗಳನ್ನು ಕಳಿಸಿದರೆ ಒಂದು ಆಯ್ಕೆ ಸಮಿತಿ ಅದನ್ನು ಪರಿಶೀಲಿಸಿ ಉತ್ತಮ ಅನಿಸುವ ಕತೆಗಳ ಮುದ್ರಣಕ್ಕೆ ಧನ ಸಹಾಯ ಮಾಡುವ ಕ್ರಮ. ಈ ವೇಳೆಗೆ ನನ್ನದೂ ಸುಮಾರು ಕತೆಗಳು ಪ್ರಕಟ ಆಗಿದ್ದವು. ನನ್ನ ಆತ್ಮೀಯರಾದ ಭಾಷ್ಯಮ್ ತನುಜೆ ಲಲಿತಾ ಮತ್ತು ರಾಮಮೂರ್ತಿ ಹಾಗೂ ಭಾಗ್ಯ ಜಯಸುದರ್ಶನ ಅವರು ನನ್ನ ಕತೆಗಳನ್ನು ಕಳಿಸಲು ಹೇಳಿದರು. ಕಳಿಸಿದೆ ಮತ್ತು ಅದು ಆಯ್ಕೆ ಸಹಾ ಆಗಿಬಿಟ್ಟಿತು. ನನ್ನ ಸಂಗಡ ಶ್ರೀ ಎಂ ಎಸ್ ಶ್ರೀರಾಮ್ ಹಾಗೂ ಶ್ರೀಮತಿ ಭಾಗೀರಥಿ ಹೆಗಡೆ ಅವರೂ ಸಹ ಆಯ್ಕೆ ಆಗಿದ್ದರು. ಸಂಕಲನ ಪ್ರಕಟಿಸಿ ಪುಸ್ತಕದ ಪ್ರತಿ ತಂದು ಒಪ್ಪಿಸಿದರೆ ಸಹಾಯಧನ ಕೊಡ್ತೀವಿ ಅಂತ ಟ್ರಸ್ಟ್‌ನವರು ಹೇಳಿದರು. ಕೈಲಿ ಕಾಸಿಲ್ಲ, ಬೇಡ ಈ ಚೇಷ್ಟೆ ಅಂತ ನಿರ್ಧಾರ ಮಾಡಿದ್ದೆ. ಲಲಿತಾ ಅಯ್ಯೋ ಕಾಸಿಲ್ಲ ಅಂತ ಅಷ್ಟಕ್ಕೇ ಬಿಡ್ತಾರಾ, ನಾನು ಇಳಾದ ವಿಜಯ ಅವರಿಗೆ ಹೇಳ್ತೀನಿ. ಅವರು ಪ್ರಿಂಟ್ ಮಾಡಿಕೊಟ್ಟ ಮೇಲೆ ನೀವು ದುಡ್ಡು ಕೊಡಬಹುದು ಅಂದರು, ಇಳಾ ಅವರಿಗೆ ರೆಕಮೆಂಡ್‌ ಮಾಡಿದರು. ಹೀಗೆ ನನ್ನ ವೈಶಾಖ ಎನ್ನುವ ಸಂಕಲನ ಪ್ರಿಂಟ್ ಆಯ್ತು. ಅದಕ್ಕೆ ಶ್ರೀ ನರಸಿಂಹ ಮೂರ್ತಿ ವಿಸ್ತೃತ ಮುನ್ನುಡಿ ಬರೆದು ಕೊಟ್ಟರು, ಶ್ರೀ ಈಶ್ವರ ಚಂದ್ರ ಒಂದು ಒಳ್ಳೆಯ ಬ್ಲರ್ಬ್ ಕೊಟ್ಟರೂ. ಶ್ರೀ ಪಂಜು ಗಂಗೊಳ್ಳಿ ಅದಕ್ಕೊಂದು ಅರ್ಥ ಪೂರ್ಣ ಮುಖಪುಟ ರಚಿಸಿದರು. ಮೊದಲನೇ ಮುದ್ರಣದ ಪುಸ್ತಕ ನಮ್ಮ ಕಾರ್ಖಾನೆಯಲ್ಲಿ ಗೆಳೆಯರು ಪ್ರಮೋಟ್ ಮಾಡಿ ಮಾರಾಟ ಮಾಡಿದರು. ಸರಕಾರದ ಒಂದು ಯೋಜನೆ ಪ್ರಕಾರ ಪುಸ್ತಕದ ಮುನ್ನೂರು ಪ್ರತಿ ಕೊಳ್ಳುವ ಒಂದು ಯೋಜನೆ ಇತ್ತು. ಅದಕ್ಕೆ ಅರ್ಜಿ, ಪುಸ್ತಕ ಜತೆಗೆ ಕಾಪಿ ರೈಟ್ ಮಾಡಿದ ಪ್ರತಿ ಸಲ್ಲಿಸಬೇಕಿತ್ತು. ಸರಿ ಕಾಪಿ ರೈಟ್ ಎಲ್ಲಿ ಮಾಡುತ್ತಾರೆ ಅಂತ ವಿಚಾರಿಸಿದಾಗ ಅದೂ ಈ ಲೈಬ್ರರಿಯಲ್ಲೇ ಇರುವ ಒಂದು ಕಚೇರಿಯಲ್ಲಿ ಅಂತ ತಿಳೀತು. ಆಗ ಎಷ್ಟೋ ವರ್ಷದ ನಂತರ ಈ ಸ್ಥಳಕ್ಕೆ ಬಂದು ಕಾಪೀರೈಟ್ ಮಾಡಿಸಿದ್ದೆ. ಇದು ೮೯/೯೦ರಲ್ಲಿ. ಎರಡನೇ ಮುದ್ರಣ ಮಾಡಿಸಿ ಸರ್ಕಾರ ಕೊಳ್ಳುತ್ತೆ ಅಂತ ಕಾದೆ. ಇಷ್ಟೆಲ್ಲ ಸರ್ಕಸ್ ಮಾಡಿದರೂ ಸರ್ಕಾರದಿಂದ ಸಗಟು ಖರೀದಿಗೆ ಪುಸ್ತಕ ಆಯ್ಕೆ ಆಗಲಿಲ್ಲ. ಅವರದ್ದೇ ನಿಯಮ ಮೀರಿ ಕೆಲವು ಹತ್ತನೇ ಮುದ್ರಣದ ಪ್ರತಿ ಕೊಂಡಿತ್ತು. ಇದು ಯಾರಿಗಾದರೂ ಹೊಟ್ಟೆ ಉರಿಸಬೇಕು, ನನಗೂ ಉರಿಯಿತು..! ಹೈಕೋರ್ಟ್‌ನಲ್ಲಿ ದಾವೆ ಹೂಡಿ ನನ್ನ ಹಾಗೆ ಆಯ್ಕೆ ಪಟ್ಟಿಯಿಂದ ಆಚೆ ಇದ್ದ ಕೆಲವು ಸ್ನೇಹಿತರು ನ್ಯಾಯ ಕೇಳಿದೆವು. ಗೆಳೆಯ ನಟರಾಜ ಈ ಸಮಯಕ್ಕೆ ಕಾರ್ಖಾನೆ ಕೆಲಸ ಬಿಟ್ಟು ವಕೀಲ ಆಗಿದ್ದ ಮತ್ತು ಈ ಕೇಸ್ ಅವನೇ ನಡೆಸಿದ್ದು. ಸರ್ಕಾರಿ ಅಧಿಕಾರಿ ಒಬ್ಬರು ಫೋನ್ ಮಾಡಿ ಕರೆಸಿಕೊಂಡು ನಮ್ಮ ಪುಸ್ತಕ ಕೊಂಡುಕೊಳ್ಳುವ ಆದೇಶ ನೀಡಿದರು. ಈಗ ನಿಮ್ಮ ಕೇಸು ಇನ್ಫ್ರಕ್ಚುಒಸ್ infructuos ಮಾಡಿದ್ದೀನಿ ಅಂತ ಬಾಯ ತುಂಬಾ ನಕ್ಕಿದ್ದರು. ಮನೆಗೆ ಬಂದು ಈ ಪದದ ಅರ್ಥ ಹುಡುಕಿದ್ದೆ. ಕೇಸು ನಿಷ್ಪ್ರಯೋಜಕ ಮಾಡಿದ್ದರು, ಪುಸ್ತಕ ಕೊಳ್ಳುವುದರ ಮೂಲಕ. Cause of Action ಇಲ್ಲ ಅಂದಮೇಲೆ ಕೇಸು ಬಿದ್ದ ಲೆಕ್ಕ ತಾನೇ… ನಮ್ಮ ಪುಸ್ತಕ ಮಾರಾಟ ಆಗಿತ್ತಲ್ಲ, ನಾವೂ ಕೇಸು ಮುಂದುವರಿಸಲಿಲ್ಲ…!
ಕತೆ ಎಲ್ಲಿಂದ ಎಲ್ಲಿಗೋ ಎಳೆದುಕೊಂಡು ಹೋಗ್ತಾ ಇದೆ!

ಮತ್ತೆ ಶೇಷಾದ್ರಿಪುರದ ಹಳಿ ಹತ್ತೋಣ.

ಶೇಷಾದ್ರಿ ಪುರದ ಹೆಸರಿಗೆ ಕಾರಣಕರ್ತ ಆದ ಶೇಷಾದ್ರಿ ಅಯ್ಯರ್ ಅವರ ಬಗ್ಗೆ ಒಂದು ಪುಟ್ಟ ವಿವರ ಇಲ್ಲಿದೆ. ವಿಕಿಪೀಡಿಯದ ನೆರವಿನಿಂದ ಸುಮಾರು ಸಂಗತಿ ಸಂಗ್ರಹವಾಗಿದೆ.

ಶೇಷಾದ್ರಿ ಅಯ್ಯರ್ ಮೂಲತಃ ತಮಿಳುನಾಡಿನ ತಂಜಾವೂರು ಜಿಲ್ಲೆಯ ಗಣಪತಿ ಅಗ್ರಹಾರದವರಾದವರು. ಇವರ ಪೂರ್ವಿಕರಾದ ಗೌರಿ ಶೇಷಾದ್ರಿ ಅಯ್ಯರ್ ಎಂಬುವರು ೨೦೦ ವರ್ಷಗಳ ಹಿಂದೆ ೧೭೮೪ ರಲ್ಲಿ ಕುಮಾರಪಟ್ಟಣಂಗೆ ವಲಸೆ ಬಂದಿದ್ದರು. ಜನಿಸಿದ ಕೆಲವೇ ತಿಂಗಳುಗಳಲ್ಲೇ ತಮ್ಮ ತಂದೆ ಅನಂತಕೃಷ್ಣರವರನ್ನು ಕಳೆದುಕೊಂಡರು. ಬಳಿಕ ಅನಂತಕೃಷ್ಣ ಅಯ್ಯರ್‌ ಅವರ ಮೊದಲ ಪತ್ನಿ ನಾರಾಯಣಿಯವರ ಪುತ್ರ ವೆಂಕಟ ಸುಬ್ರಹ್ಮಣ್ಯ ಅಯ್ಯರ್, ಅಂದರೆ ಶೇಷಾದ್ರಿ ಅಯ್ಯರ್ ಅವರ ಮಲ ಅಣ್ಣ ಇವರ ಪೋಷಣೆಯ ಹೊಣೆಯನ್ನು ಹೊತ್ತರು. ತನ್ನ ನಾಲ್ಕನೇ ವರ್ಷದಿಂದ ಹನ್ನೊಂದನೇ ವರ್ಷದವರೆಗೆ ಖಾಸಗಿಯಲ್ಲಿಯೇ ಪಂಡಿತರಿಂದ ಸಂಸ್ಕೃತ, ತಮಿಳು ಹಾಗೂ ವೇದಾಧ್ಯಯನವನ್ನು ಕೊಚ್ಚೀನಿನಲ್ಲಿ ನಡೆಸಲಾಯ್ತು. ನಂತರ ಕೊಚಿಚ್‌ನ ಫ್ರೀ ಚರ್ಚ್ ಮಿಷನ್‌ನ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆದರು. ತಮ್ಮ ಹೈಸ್ಕೂಲ್‌ ಶಿಕ್ಷಣವನ್ನು ತಿರುವನಂತಪುರದಲ್ಲಿ ಪಡೆದರು. ೧೮೬೩ರಲ್ಲಿ ಮೆಟ್ರಿಕ್‌ ಪರೀಕ್ಷೆಯಲ್ಲಿ ಇಡೀ ಮದ್ರಾಸ್‌ ಪ್ರಾಂತ್ಯಕ್ಕೆ ಮೊದಲಿಗರಾಗಿ ತೇರ್ಗಡೆಯಾದರು.[೨] ಇದಕ್ಕಾಗೆ ಇವರು ಕಾನ್ನೋಲಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದರು. ಮದರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ, ವಿಶ್ವವಿದ್ಯಾಲಯಕ್ಕೇ ಮೊದಲಿಗರಾಗಿ ೧೮೬೬ರಲ್ಲಿ ತಮ್ಮ ಬಿ.ಎ. ಪದವಿ ಪಡೆದರು.

ಬಿ.ಎ. ಪದವಿ ಮುಗಿಸಿ ಮದರಾಸ್‌ನಲ್ಲಿ ಕೆಲಸಮಾಡುತ್ತಿರುವಾಗಲೇ ಆ ಸಮಯದಲ್ಲಿ ಮೈಸೂರು ದೀವಾನಾರಾಗಿದ್ದ ಸಿ.ವಿ.ರಂಗಾಚಾರ್ಲುರವರಿಗೆ ಪರಿಚಿತರಾದರು. ೧೮೬೮ ರಲ್ಲಿ ಮೈಸೂರು ಸಾಮ್ರಾಜ್ಯದ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು ರಂಗಾಚಾರ್ಲುರವರು ಶೇಷಾದ್ರಿ ಅಯ್ಯರ್‌ರವರನ್ನು ಮೈಸೂರಿಗೆ ಕರೆಸಿಕೊಂಡರು. ರಂಗಾಚಾರ್ಲುರವರು ಆ ಸಂದರ್ಭದಲ್ಲಿ ಆಡಳಿತಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿಯನ್ನು ನೀಡಿದರು. ಬಳಿಕ ಶೇಶಾದ್ರಿ ಅಯ್ಯರ್‌ರವರು ಮೈಸೂರು ಸಂಸ್ಥಾನದಲ್ಲಿ ಹಲವು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. ಈ ಮಧ್ಯದಲ್ಲೇ ೧೮೭೪ರಲ್ಲಿ ಮದ್ರಾಸ್ ವಿಸ್ವವಿದ್ಯಾಲಯದಿಂದ ನ್ಯಾಯ ಶಾಸ್ತ್ರದಲ್ಲಿ ಬಿ.ಎಲ್. ಪದವಿಯನ್ನು ಪಡೆದರು.

ರಂಗಾಚಾರ್ಲು ಅವರ ಕರೆಯ ಮೇರೆಗೆ ಮೈಸೂರಿಗೆ ಆಗಮಿಸಿದ ಅಯ್ಯರ್ ಮೊದಲು ಅಷ್ಟಗ್ರಾಮವಿಭಾಗದ ಶಿರಸ್ತೆದಾರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತಮ್ಮ ದಕ್ಷತೆಯಿಂದ ಬಹಳ ಒಳ್ಳೆಯ ಹೆಸರು ಪಡೆದು ಕ್ಷಿಪ್ರವಾಗಿ ಮುಂಬಡ್ತಿಯನ್ನು ಪಡೆಯುತ್ತಾ ಹೋದರು.

ಮೈಸೂರ್ ಸಂಸ್ಥಾನದ ಅಷ್ಟಗ್ರಾಮ್ ಡಿವಿಶನ್‌ನ ಶಿರಸ್ತೆದಾರ, ಕಾನೂನು ಕಾರ್ಯದರ್ಶಿ, ಪ್ರಧಾನ ಶಿರಸ್ತೆದಾರ, ಕೋರ್ಟ್ ಆಫ್ ದ ಜುಡಿಶಿಯಲ್ ಕಮೀಶನರ್. ಉಪ ಜಿಲ್ಲಾಧಿಕಾರಿ, ಮೈಸೂರಿನ ಜಿಲ್ಲಾಧಿಕಾರಿ’, ಜಿಲ್ಲಾ ನ್ಯಾಯಾಧೀಶ ತುಮಕೂರಿನ ಸೆಶನ್ ಜಡ್ಜ್ ಆಫ್ ಅಷ್ಟಗ್ರಾಮ್ ಡಿವಿಶನ್’ ಈ ಹುದ್ದೆಗಳ ಬಳಿಕ ೧೯೮೩ರಲ್ಲಿ ರಂಗಾಚಾರ್ಲುರವರ ನಿಧನದ ಬಳಿಕ ದಿವಾನ ಹುದ್ದೆಯನ್ನು ಸ್ವೀಕರಿಸಿದರು.

ಇವರ ಕೊಡುಗೆಗಳು: ೧೮೮೩ ರಲ್ಲಿ ಬೆಂಗಳೂರು ಮತ್ತು ಗುಬ್ಬಿಯಲ್ಲಿ ,೧೮೮೯ ರಲ್ಲಿ ಬೆಂಗಳೂರು, ಹಿಂದೂಪುರ, ಹರಿಹರ ಮತ್ತು ಕೆಜಿಎಫ್ ಹಾಗೂ ೧೮೮೯ ರಲ್ಲಿ ಮೈಸೂರು ಮತ್ತು ನಂಜನಗೂಡು, ಬೇಲೂರು ಮತ್ತು ಶಿವಮೊಗ್ಗಗಳಲ್ಲಿ ರೈಲು ಮಾರ್ಗಗಳನ್ನು ನಿರ್ಮಿಸಿದ್ದಾರೆ.

೧೯೦೦ ರಲ್ಲಿ ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದಿಸಲು ಯೋಜನೆ ಕಾರ್ಯಾರಂಭ ಮಾಡಿತು. ವಿದ್ಯುತ್ ಅನ್ನು ಮೊದಲ ಕೆಜಿಎಫ್‌ಗೆ ೧೯೦೨ ರಲ್ಲಿ ಪೂರೈಸಲಾಯಿತು. ಬಳಿಕ ೧೦೯೫ ರಲ್ಲಿ ಬೆಂಗಳೂರು ನಗರಕ್ಕೆ ಪೂರೈಸಲಾಯಿತು. ದೇಶದಲ್ಲೇ ಮೋದಲ ವಿದ್ಯುತ್ ಸಂಪರ್ಕ ಪಡೆದ ನಗರ ಎಂಬ ಖ್ಯಾತಿ ಬೆಂಗಳೂರಿಗಿದೆ. ಖಾಸಗಿಯಾಗಿ ಮೊದಲ ವಿದ್ಯುತ್ ಅನ್ನು ೧೮೮೭ ಗೋಕಾಕ್ ಜಲಪಾತದಲ್ಲಿ ಉತ್ಪಾದಿಸಲಾಯಿತು. ಆದರೆ ಸರ್ಕಾರಿ ಸ್ವಾಮ್ಯದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದು ಶಿವನ ಸಮುದ್ರಲ್ಲಿ ೧೯೦೦ ಆಗಸ್ಟ್ ೧೦ ರಂದು.

ಬೆಂಗಳೂರು ನಗರಕ್ಕೆ ಹೆಸರುಘಟ್ಟದ ಕೆರೆಯಿಂದ ನೀರು ಪೂರೈಸಲಾಯಿತು. ಚಿತ್ರದುರ್ಗದ ಹಿರಿಯೂರಿನಲ್ಲಿ ಮಾರಿ ಕಣಿವೆ ಜಲಾಶಯವನ್ನು ೩೯ ಲಕ್ಷ ವೆಚ್ಚದಲ್ಲಿ ನಿರ್ಮಿಸಿದರು. ಹೇಮಾವತಿ ನದಿಗೆ ಮತ್ತು ಭದ್ರಾವತಿ ಪಟ್ಟಣ ಸೇರಿದಂತೆ ಅನೇಕ ಕಡೆ ಸೇತುವೆಗಳನ್ನು ಹಾಗೂ ೨೫ ಕೆರೆಗಳನ್ನು ನಿರ್ಮಿಸಲಾಯಿತು.

೧೮೮೩ ರಲ್ಲಿ ಮೈಸೂರು ದಿವಾನ್ ಆಗಿ ಹದಿನೆಂಟು ವರ್ಷಗಳ ಕಾಲ ಮೈಸೂರು ಆಡಳಿತ ನಡೆಸಿದರು. ಮೈಸೂರು ಸಿವಿಲ್ ಸರ್ವಿಸ್‌ನಲ್ಲಿ ಕಂದಾಯ ಕಮಿಷನರ್ ಆಗಿ ಕೆಲಸ ಮಾಡಿದ್ದಾರೆ. ಅವರು ೧೮೮೧ ರಿಂದ ೧೮೯೧ ರವರೆಗೆ ಶೇಷಾದ್ರಿ ಅಯ್ಯರ್ ಅವರ ಖಾಸಗಿ-ಕಾರ್ಯದರ್ಶಿಯಾಗಿದ್ದರು. ಅವರು ರಾಜರ ಸಂಸ್ಥಾನದ ಸುದೀರ್ಘ ಸೇವೆ ಸಲ್ಲಿಸಿದ ದಿವಾನರಾಗಿದ್ದಾರೆ. ಕರ್ನಾಟಕದ ಕೋಲಾರ ಚಿನ್ನದ ಗಣಿ ಕ್ಷೇತ್ರಗಳು ಅವರ ಅವಧಿಯಲ್ಲಿ ಸ್ಥಾಪಿಸಲ್ಪಟ್ಟವು. ಅವರು ೧೮೮೯ ರಲ್ಲಿ ಲಾಲ್‌ಭಾಗ್‌ನಲ್ಲಿ ಪ್ರಸಿದ್ಧ ಗ್ಲಾಸ್ ಹೌಸ್ ಅನ್ನು ಹಾಗು ೧೯೦೦ ರಲ್ಲಿ ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ನಿರ್ಮಿಸಿದರು.

೧೮೬೫ ರಲ್ಲಿ ಶೇಷಾದ್ರಿ ಅಯ್ಯರ್ ಧರ್ಮಸಮವರ್ಧಿನಿ ಅವರನ್ನು ವಿವಾಹವಾದರು. ದಂಪತಿಗೆ ನಾಲ್ಕು ಗಂಡು ಮಕ್ಕಳು (ಕೆ. ಎಸ್. ದೊರೆಸ್ವಾಮಿ ಅಯ್ಯರ್, ಕೆ.ಎಸ್.ಕೃಷ್ಣ ಐಯರ್,ಕೆ. ಎಸ್. ವಿಶ್ವನಾಥ ಅಯ್ಯರ್ ಮತ್ತು ಕೆ.ಎಸ್. ರಾಮಸ್ವಾಮಿ ಅಯ್ಯರ್) ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದರು. ೧೩ ಸೆಪ್ಟೆಂಬರ್ ೧೯೦೧ ರಂದು ಶೇಷಾದ್ರಿಯವರ ಮರಣದ ಮೊದಲು ಕೆಲವೇ ದಿನಗಳಲ್ಲಿ ಧರ್ಮಸಮವರ್ಧಿನಿ ನಿಧನರಾದರು.

ಬೆಂಗಳೂರಿನ ಕಬ್ಬನ್‌ ಪಾರ್ಕಿನಲ್ಲಿ ಇರುವ ಲೈಬ್ರರಿಯ ಮುಂಭಾಗದಲ್ಲಿ ಶೇಷಾದ್ರಿ ಅಯ್ಯರ್‌ ಅವರ ಪ್ರತಿಮೆ ಇದೆ. ಇವರು ರಾಜ್ಯಕ್ಕೆ ಸಲ್ಲಿಸಿದ ಸೇವೆಯ ಕುರುಹು ಅಂದರೆ ಶೇಷಾದ್ರಿಪುರಂ. ಇವರು ದಿವಾನರಾಗಿದ್ದ ಸಮಯದ ಒಂದು ಪ್ರಸಂಗ ಸುಮಾರು ವರ್ಷಗಳ ಹಿಂದೆ ಓದಿದ್ದೆ. ಅದರ ನೆನಪಿನಿಂದ ಕೆಲವು ವಾಕ್ಯಗಳು..

…..ಶೇಷಾದ್ರಿ ಅಯ್ಯರ್ ಅವರ ಕುಟುಂಬ ತಿಂಗಳಿಗೆ ಒಮ್ಮೆ ಬೆಂಗಳೂರಿಗೆ ಬಂದು ಕೆಲವು ದಿವಸ ಇರುತ್ತಿದ್ದರು. ಅವರಿಗೆ ಬೆಂಗಳೂರಿನ ಚಳಿ ಹಿಡಿಸುತ್ತಿರಲಿಲ್ಲ. ಉಬ್ಬಸ ಬಂದು ಗತ ಪ್ರಾಣರಾಗುತ್ತಿದ್ದರು. ಅದರಿಂದ ಇಲ್ಲಿ ಒಂದು ವಾರ ಇದ್ದರೆ ಒಂದು ತಿಂಗಳು ತವರಿನಲ್ಲಿ. ಅವರ ಜತೆ ಸುಮಾರು ಮುನ್ನೂರು ನಾಲ್ಕು ನೂರು ಜನ ಸಿಬ್ಬಂದಿ ನೆಂಟರು ಇಷ್ಟರೂ ಬರುತ್ತಿದ್ದರು. ಅಷ್ಟು ಜನರನ್ನು ಸುಧಾರಿಸಲು ಹೇರಳವಾಗಿ ಆಳು ಕಾಳು, ಅವರ ಅಡುಗೆಯವರು ಮತ್ತಿತರ ಸಿಬ್ಬಂದಿ ಜತೆಗೆ ಇರುತ್ತಿದ್ದರು. ಬೊಕ್ಕಸದ ಹಣ ಅಪಾರವಾಗಿ ವೆಚ್ಚ ಆಗುತ್ತಿತ್ತು…..(ಇದು ಒಂದು ತುಣುಕು)

ಇವರ ಕಾಲದಲ್ಲಿಯೇ ಸುಮಾರು ತಮಿಳರು ಇವರ ಊಳಿಗ ಕೆಲಸಕ್ಕೆ ಇಲ್ಲಿಗೆ ವಲಸೆ ಬಂದರು. ಊಳಿಗರಾಗಿ ಬಂದವರೂ ಸಹ ಸ್ಥಳಿಯರಿಗಿಂತಲೂ ತಾವು ಎಲ್ಲಾ ಮಟ್ಟದಲ್ಲೂ ಶ್ರೇಷ್ಠರು ಎನ್ನುವ ಭಾವನೆ ಹೊಂದಿದ್ದರು. ಸ್ಥಳೀಯ ಜನರನ್ನು ಕಂಡರೆ ಒಂದು ರೀತಿಯ ಅಸಡ್ಡೆ ಮತ್ತು ದಡ್ಡರು ಎನ್ನುವ ಭಾವನೆ ಅವರಿಗೆ. ಸ್ಥಳೀಯರಿಗಿಂತಲೂ ತಾವು ಅತಿ ಮೇಲೆ ಇರುವವರು ಎನ್ನುವ ಭಾವ ಮತ್ತು ನಡವಳಿಕೆ ಅವರ ಪ್ರತಿಯೊಂದು ಮಾತಿನಲ್ಲೂ ಎದ್ದು ಕಾಣುತ್ತಿತ್ತು….

ಇದು ನವರತ್ನ ರಾಮರಾಯರ ಕೆಲವು ನೆನಪುಗಳು ಪುಸ್ತಕದಿಂದ..

… ನವರತ್ನ ರಾಮರಾಯರು ಒಂದು ಸಭೆಯಲ್ಲಿ ಭಾಗವಹಿಸಿ ಹೊರ ಬಂದರು. ಊಳಿಗ ಗುಂಪಿನ ಒಬ್ಬರ ಮಾತು ಇವರಿಗೆ ಕೇಳಿಸಲಿ ಎನ್ನುವ ಉದ್ದೇಶದಿಂದಲೇ ಒಂದು ಮಾತು ಎಸೆದರು.

……..ರಾಗಿಮುದ್ದೆ ತಿನ್ನೋರು ಅದಕ್ಕೇ ಅವರ ತಲೆ ತುಂಬಾ (ಬುದ್ಧಿಸಹ) ಲದ್ದಿ ಹಾಗೆ ಅಂತ ಒಬ್ಬ ದಿವಾನರ ಊಳಿಗ ಪರಿವಾರಕ್ಕೆ ಸೇರಿದ ತಮಿಳು ನಂಟ ರಾಮರಾಯರ ಎದುರು ಲೇವಡಿ ಮಾಡಿದ.

..ನಮ್ಮ ಕಡೆ ತಿಂದದ್ದು ಹೊರ ಹೋಗಲು ಬೇರೆ ಜಾಗ ಇದೆ, ನಿಮ್ಮ ಕಡೆ ನೀವು ಹೇಳಿದ ಹಾಗೆ ಅದಕ್ಕೆ ಅದೇ ಜಾಗ ಇರಬಹುದು ಅಂತ ರಾಮರಾಯರು ಉತ್ತರಿಸಿದರು.

ಬಹುಶಃ ಅಂದಿನ ತಮಿಳರ ಮನೋಸ್ಥಿತಿಯ ಪ್ರತಿರೂಪ ಇಂದಿಗೂ ಹಲವು ತಮಿಳರಲ್ಲಿ ಹರಿದು ಬಂದಿದೆ. ತಾವು ಶ್ರೇಷ್ಠ ಎನ್ನುವ ಒಣ ಜಂಭದ ಜತೆಗೆ ಅಲ್ಲಿಹುದು ನಮ್ಮನೆ, ಇಲ್ಲಿಹುದು ಸುಮ್ಮನೆ ಅನ್ನುವ ಹಾಗಿರುತ್ತಾರೆ. ಇಲ್ಲಿ ಅನ್ನ ತಿನ್ನುತ್ತಾ ನೂರುವರ್ಷ ಕಳೆದಿದ್ದರೂ ಇಲ್ಲಿನ ಭಾಷೆ, ಇಲ್ಲಿನ ರೀತಿ ಇಲ್ಲಿನ ಜನ ಅವರಿಗೆ ಬೇಡ. ನನ್ನ ಔದ್ಯೋಗಿಕ ಜೀವನದಲ್ಲಿ ಇಂತಹ ಸುಮಾರು ಜನ ನನಗೆ ಪರಿಚಿತರು..! ಬೆಂಗಳೂರಿನ ತಮಿಳು ಜನರ ಪ್ರದೇಶಗಳಲ್ಲಿ ಒಂದು ಸುತ್ತು ಹಾಕಿದರೆ ನಾವು ಎಲ್ಲಿದ್ದೀವಿ ಅನಿಸುತ್ತೆ. ಈ ಮನೋಭೂಮಿಕೆಯಲ್ಲಿಯೇ ಹಲವು ವರ್ಷಗಳು ಬೆಳೆದ ಇವರು ಸಾಮಾನ್ಯವಾಗಿ ಜನರ ಮುಖ್ಯ ವಾಹಿನಿಯಿಂದ ಅಂತರ ಕಾಪಾಡಿಕೊಳ್ಳುತ್ತಾರೆ. ನಾಡು ನುಡಿಯ ಪ್ರಶ್ನೆ ಬಂದಾಗ ಒಲವು ಅತ್ತ ಹರಿಯುತ್ತೆ ಮತ್ತು ಕಾವೇರಿ ವಿಷಯ ಬಂದರಂತೂ ಸಂಪೂರ್ಣ ತಮಿಳು ನಾಡಿನ ಸರ್ಕಾರದ ಪರ ಇರುತ್ತಾರೆ. ಇಬ್ಬರು ತಮಿಳರು ಹತ್ತು ಜನ ಬೇರೆ ಭಾಷಿಗರ ಸೇರಿದರೆ ಅಲ್ಲಿನ ರಾಜಕೀಯ, ಅಲ್ಲಿನ ಸಿನಿಮಾ ದೇವರು ಇವರದ್ದೇ ಪುರಾಣ. ಇಲ್ಲಿನ ಭಾಷೆ ಬೇಡ ಇಲ್ಲಿನ ಜನ ಬೇಡ, ಇಲ್ಲಿನ ಸಿನಿಮಾ ಬೇಡ….. ಆದರೆ ಇಲ್ಲಿನ ನೀರು ನೆಲ ತಂಪು ಹವೆ… ಇದು ಯಾವುದನ್ನೂ ಬಿಡುವುದೂ ಇಲ್ಲ! ಇದು ಒಂದು ಟಿಪಿಕಲ್ ತಮಿಳನ ಮನೋಭಾವ. ಈ ಮೈಂಡ್ ಸೆಟ್‌ನಿಂದ ಕೆಲವರು ಹೊರಬಂದಿದ್ದಾರೆ ಆದರೂ ಮೆಜಾರಿಟಿ ಜನಕ್ಕೆ ಇದೇ ಭ್ರಮೆ ಇದೆ! We are great ಎಂದು ನಂಬುತ್ತಾರೆ ಮತ್ತು ಆ ನಂಬಿಕೆಯ ಐವರಿ ಟವರ್ ನಿಂದ ಹೊರಬರುವ ಪ್ರಯತ್ನ ಸಹ ಮಾಡರು..!

(ಇನ್ನೂ ಇದೆ….)