ಸಂತ್ರಸ್ತ

ಪ್ರಳಯದ ಆಳಕ್ಕೇ ಕೈಹಾಕಿ
ಹೊರಗೆಳೆದ ರಗಳೆಗಳಲ್ಲಿ
ನಿನ್ನನ್ನು ಕಳೆದುಕೊಂಡ
ನಾನು ಸಂತ್ರಸ್ತ!

ಏಕಾಂತಕ್ಕೆಂದು ಕಟ್ಟಿಸಿಕೊಂಡ ಕೋಣೆಯಲ್ಲಿ
ಏಕಾಂಗಿಯಾಗಿ ಉಳಿದಿದ್ದೇನೆ!
ನೀನ್ಯಾವ ಕುಸಿವ ಗುಡ್ಡದ ಚಾರಣಿಗನೋ,
ಯಾವ ಉಕ್ಕುವ ನದಿಯ ಈಜುಗಾರನೋ,
ಯಾವ ಉರಿವ ಕಾರ್ಖಾನೆಯ ಕೆಲಸಗಾರನೋ?

ನನ್ನ ಇಂಗಾಲದ ಹೆಜ್ಜೆಗುರುತುಗಳೇ ಏನು
ನಿನ್ನನ್ನು ನುಂಗಿಹಾಕಿದ್ದು?
ನೋವಿನ ಗೀತೆ ಹಾಡಲೂ
ಎದೆಗಾರಿಕೆ ಬೇಕೆನಿಸಿದೆ
ಸಾವಿನ ನಿಘೂಡತೆಗೇ
ಮೋಹಗೊಂಡಿದ್ದೇನೆ;
‘ಹಂತಹಂತವಾಗಿ
ಸಾವು ಕಾಣುವುದೂ ಯೋಗವೇ’
ಎಂಬ ನಿನ್ನ ನರಳಾಟದ ದನಿಗೆದುರಾಗಿ
ನಿನ್ನನ್ನು ಹಿಡಿದಿಟ್ಟುಕೊಳ್ಳುವ
ಭರವಸೆಯ ಕಟ್ಟಿಕೊಂಡಿದ್ದೆ.

ಕ್ಷಿತಿಜದ ಮೊನೆಯ ಮೇಲೆ ನಿಂತು
ಕೊನೆಯ ಕಾಣಲಾಗದೇ
ಉರುಳಿದಷ್ಟೂ ಉರುಳಿಸಿಕೊಂಡು ಹೋಗುವ
ದುರಂತಗಳಲ್ಲಿ
ಪರಿಧಿಯಾಚೆಗೆ ಕಿತ್ತೆಸೆಯಲ್ಪಟ್ಟವನು ನೀನು;
ನಿನ್ನ ಅವಶೇಷವೂ ಅವಸಾನವಾಗಿ ಹೋಗಿರಬಹುದು.

ನೆಲ ನುಣುಪಾಗಿ ಕನ್ನಡಿಯಂತಾಗಿದೆ
ನಿನ್ನ ಪ್ರತಿಬಿಂಬವೂ ಇಲ್ಲ
ನೋಡುವುದಕ್ಕೆ.

ನಿನ್ನ ಆಕಾರ ಹೇಗಿತ್ತೆಂಬ ನೆನಪುಗಳಿಗೆಲ್ಲ
ಹೊಗೆ ಕವಿದಿದೆ
ಧೂಳೆದ್ದಿದೆ
ಮಂಜು ಮುಸುಕಿದೆ;
ಇಂತಹ ಹಲವಾರುಬ ಗೆಯ
ಪರದೆಗಳನ್ನು ಸರಿಸುವ ಕಾರ್ಯದಲ್ಲಿ
ನನ್ನ ಕಾರ್ಯಕರ್ತರು ನಿರತರಾಗಿದ್ದಾರೆ.

ಪ್ರಳಯದ ಆಳಕ್ಕೇ ಕೈಹಾಕಿ
ಹೊರಗೆಳೆದ ರಗಳೆಗಳಲ್ಲಿ
ನಿನ್ನನ್ನು ಕಳೆದುಕೊಂಡ
ನಾನು ಸಂತ್ರಸ್ತ!

ಮಾಸಿದಗೆರೆಗಳು

ರಂಗೋಲಿಯ ಗೆರೆಗಳು ಹಬ್ಬುವುದಿಲ್ಲ
ಮೊಂಡಾಗಿ ಮುದುಡಿಕೊಳ್ಳುತ್ತವೆ
ಬಿಡಿಸುವ ಕೈಗಳಿಗೆ
ಕೆಲಸದಿಂದ ಬಿಡುವಿಲ್ಲ.

ಅಂಗಳಗಳು ಹಿಂಜರಿದು ಅಡಗಿಕೊಳ್ಳುತ್ತವೆ
ಆವೇಶ ಬಂದಂತೆ ಓಡಾಡುವ
ಚಕ್ರಗಳ ಕಂಪನಕ್ಕೆ.

ಬಾಗಿಲ ಮುಂದೆ
ಮತ್ತೊಂದು ಮನೆಬಾಗಿಲು ಕಂಡು
ರಂಗೋಲಿಯನ್ನೆಲ್ಲಿ ಇಡುವುದೆಂದು
ಗಾಬರಿಯಾಗಿ ನಿಂತ ಮುದುಕಿ
ಈ ನಗರಕ್ಕೆ ಹೊಸಬಳೇ ಇರಬೇಕು!

ಬೀದಿ ನಾಯಿಗಳಿಗೂ ಗೊತ್ತಾಗಿಬಿಡುತ್ತದೆ
ರಸ್ತೆಮೇಲಿನ ರಂಗೋಲಿ ಕಂಡು
ಇಂದೇನೋ ಹಬ್ಬವೇ ಇರಬೇಕೆಂದು.

ಬಣ್ಣಗಳು ಮಾಸಿ ಕುಳಿತಿರುತ್ತವೆ
ಅಂಗಡಿಗಳಲ್ಲಿ,
ಮತ್ತೊಂದಿಷ್ಟು ಮುನಿಸಿಕೊಂಡು
ಮನೆಯ ಮೂಲೆಯೊಂದರಲ್ಲಿ.

 

ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.