ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು ನಿರೂಪಿಸುತ್ತ ಒಂದೊಂದೂ ಒಂದೊಂದು ಕಥೆಯ ಪಲ್ಲಕ್ಕಿಯಾಗಿ ಸಾಗುತ್ತ ಸುಬ್ರಾಯಪ್ಪನ ‘ಜೀವನ ಚರಿತ್ರೆ’ಯನ್ನು ಇದು ಹೀಗೇ ಎಂದು ನಿರ್ಧರಿಸಲಾಗದು ಅನ್ನುವ ಮಜಲಿಗೆ ಮುಟ್ಟುತ್ತದೆ.
ಶ್ರೀಧರ ಬಳಗಾರರ ಹೊಸ ಕಾದಂಬರಿ ‘ಮೃಗಶಿರ’ಕ್ಕೆ ಪ್ರೊ. ಓ.ಎಲ್ ನಾಗಭೂಷಣ ಸ್ವಾಮಿಯವರು ಬರೆದ ಮುನ್ನುಡಿ

 

ಶ್ರೀಧರ ಬಳಗಾರ ಅವರು ತಮ್ಮ ಹೊಸ ಕೃತಿ ‘ಮೃಗಶಿರ’ದ ಜೊತೆಯಲ್ಲಿ ನನ್ನ ಕೆಲವು ಅನಿಕೆಗಳನ್ನು ಸೇರಿಸಿಕೊಳ್ಳುವ ಔದಾರ್ಯ ತೋರಿದ್ದಾರೆ. ಬಳಗಾರ ಅವರ ಕಥೆ, ಕಾದಂಬರಿಗಳನ್ನು ಓದುವುದು ಯಾವತ್ತಿಗೂ ನನಗೆ ಸಂತೋಷ ತಂದಿದೆ.

ಯಾರು ಕೇವಲ ಕಥೆಯ ಕುತೂಹಲಕ್ಕಾಗಿ ಮಾತ್ರವೇ ಕಾದಂಬರಿಯನ್ನು ಓದುವುದಿಲ್ಲವೋ ಅಂಥ ಓದುಗರಿಗೆ ‘ಮೃಗಶಿರ’ದಲ್ಲಿ ಸಮೃದ್ಧ ಆಹಾರವಿದೆ. ಇಪ್ಪತ್ತನೆಯ ಶತಮಾನದ ಎರಡು-ಮೂರನೆಯ ದಶಕಗಳ ಬದುಕು ಉತ್ತರ ಕನ್ನಡ ಜಿಲ್ಲೆಯ ಕಾಡಿನ ಮಧ್ಯದ ಊರುಗಳಲ್ಲಿ ಹೇಗಿತ್ತು ಅನ್ನುವ ಜೀವಂತ ಲೋಕವನ್ನು ಬಳಗಾರರು ಭಾಷೆಯಲ್ಲಿ ಸೃಷ್ಟಿಸಿದ್ದಾರಲ್ಲ, ಆ ಲೋಕದಲ್ಲಿ ಮಗ್ನವಾಗಿ ಸಂಚರಿಸಬಹುದು. ಯಾರಿಗೆ ಒಂದೇ ಥರದ ಕನ್ನಡ ಓದಿ, ಕೇಳಿ ಬೇಸರವಾಗಿದೆಯೋ ಅವರು ಇಲ್ಲಿ ಇದು ಇಂಥ ಊರಿನ ಇಂಥ ಜನ ಆಡುವ ಕನ್ನಡ ಎಂದು ಓದುತ್ತಲೇ ಮನಸ್ಸಿನಲ್ಲಿ ಕೇಳಿಸಿಕೊಂಡು ನುಡಿಕುತೂಹಲ ತಣಿಸಿಕೊಳ್ಳಬಹುದು..

(ಶ್ರೀಧರ ಬಳಗಾರ- ಚಿತ್ರ ಸೌಜನ್ಯ: ಋತುಮಾನ)

ಈ ಕಾದಂಬರಿ ವ್ಯಾವಹಾರಿಕ ದೃಷ್ಟಿಯಿಂದ ಸ್ವಾತಂತ್ರ್ಯ ಪೂರ್ವದ ಕಾಲದ್ದು; ಕಾದಂಬರಿಯ ದೇಶ ಉತ್ತರ ಕನ್ನಡ ಜಿಲ್ಲೆ. ಕಾದಂಬರಿಯ ತಿರುಳು ಮಾತ್ರ ಕಾಲ, ದೇಶಗಳನ್ನು ಮೀರಿದ, ಕಾಮ ದ್ವೇಷ, ಮತ್ತು ಸತ್ಯಾನ್ವೇಷಣೆ. ರಚನೆಯ ದೃಷ್ಟಿಯಿಂದ ಇದು ಬೇರೆ ಬೇರೆ ನಿರೂಪಕರು ಹೊತ್ತು ಮುಂದೆ ಮುಂದೆ ಸಾಗಿಸುತ್ತ ಕೊನೆಗೆ ಓದುಗರ ಮನದಂಗಳದಲ್ಲಿ ತಂದಿಳಿಸುವ ‘ಕಥೆಗಳ ಪಲ್ಲಕ್ಕಿ.’ ಪರಿಣಾಮದ ದೃಷ್ಟಿಯಿಂದ ಬಹಳಷ್ಟು ಎಡೆಗಳಲ್ಲಿ ಭಾವಗೀತೆಯ ತೀವ್ರತೆಯೊಡನೆ ಓದುಗರನ್ನು ಪರವಶಗೊಳಿಸುವ, ‘ಎಂಬುದೆಲ್ಲದರ ಅರ್ಥ’ ಎಂದು ಕೆಣಕುವ ರಚನೆ.

‘ವ್ಯಕ್ತಿಯ ಅಹಂಕಾರದ ಅಸ್ತಿತ್ವದ ಕಥೆ ಎನಿಸದೆ ಮನುಷ್ಯ ಮಾತ್ರರಾದವರ ಯಾರದ್ದೂ ಆಗಬಹುದು ಎಂದು ಬೆಳದಿಂಗಳ ಅನಾದಿ ಹಾಡಲ್ಲಿ’ ಕಾದಂಬರಿಯ ಮುಖ್ಯ ನಿರೂಪಕನಿಗೆ ಅನಿಸುತ್ತದೆ. ಈ ಅನಾದಿ ಹಾಡನ್ನು ಹಾಡಬೇಕೆಂಬ ಒತ್ತಾಯಕ್ಕೆ ಕಾರಣ, ‘ಪುಸ್ತಕದಲ್ಲಿ ಶಾಶ್ವತ ಇರೊ ಆಸೆ ಇಲ್ಲೆ ಎನಗೆ; ಇಷ್ಟು ದಿನದ ಸುಳ್ಳಿನಿಂದ ಬಿಡುಗಡೆ ಆದ್ರೆ ಸಾಕು’ ಎನ್ನುತ್ತಾಳೆ ಒಬ್ಬ ನಿರೂಪಕಿ. ‘ಈಗ ನಾವು ಆಡುವ ಮಾತಿನಲ್ಲಿ ಮಾಡುವ ಕೆಲಸದಲ್ಲಿ ವಿಷ ಸೇರದ ಹಾಗೆ ನಿಮ್ಮ ಕೃತಿ ಪವಾಡ ಮಾಡಬೇಕು. ಸೇಡಿನ ಬೆಂಕಿ ನಂದಬೇಕು,’ ಎನ್ನುತ್ತಾನೆ ಇನ್ನೊಬ್ಬ ನಿರೂಪಕ.’ ‘ಚರಿತ್ರೆಯ ಪುಸ್ತಕಗಳಲ್ಲಿ ಬೀದಿಯಲ್ಲಿ ಘೋಷಣೆ ಕೂಗಿದವರ ಹೆಸರಿರುತ್ತದೆಯೆ ವಿನ: ಹೊಗೆಯ ಒಲೆ ಊದಿ ಹಿತ್ತಲ ಪ್ರಪಂಚದಲ್ಲೆ ಆಯುಷ್ಯ ಕಳೆದವರ ನೆನಪಿರುವುದಿಲ್ಲ.

ಪುಟ್ಟಣ್ಣ ಕುಟುಂಬಕ್ಕಾಗಿ ಪ್ರಾಣರ್ಪಣೆ ಮಾಡಿದವನು. ದೇಶದ ದೊಡ್ಡ ಕಥೆಗಳಲ್ಲಿ ಕೋಟೆಯ ಬಾಗಿಲನ್ನು ಕಾದವರಿಗೆ ಜಾಗವೇ ಇರುವುದಿಲ್ಲ’ ಎನ್ನುವುದು ಮತ್ತೊಂದು ನಿರೂಪಕ ದನಿ ಹೇಳುವ ಮಾತು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಹೆಸರುವಾಸಿಯಾದ ಸುಬ್ರಾಯನ ಜೀವನ ಚರಿತ್ರೆಗೆ ಸರಕು ಒದಗಿಸುವವರೆಲ್ಲ ಚರಿತ್ರೆಯಲ್ಲಿ ಎಂದೂ ದಾಖಲಾಗದವರೇ. ಈ ಎಲ್ಲ ನಿರೂಪಕರ ಮಾತನ್ನು ಪೋಣಿಸುವ ಮುಖ್ಯ ನಿರೂಪಕನಿಗೆ ತಾನು ‘ನೆನಪಿನಲ್ಲಿ ಹುಗಿದು ಹೋದ ಮನೆತನಗಳ ಕಥೆಗಳನ್ನು ಕೆದಕುವ ತಂಟೆಗೋರನಂತೆಯೊ, ಮುಗಿದು ಹೋದ ಪ್ರಕರಣಗಳಿಗೆ ಮರು ಜೀವ ಬರಿಸುವ ಪತ್ತೆದಾರಿ ಪೊಲಿಸ್ನಂತಯೊ’ ಕಂಡೇನು ಅನ್ನುವ ಅರಿವೂ ಇದೆ.

ಭಾಷೆಯನ್ನು ಬಳಸಿ ನಾವು ತಲುಪುವ ತೀರ್ಮಾನಗಳು, ಮಾಡಿಕೊಳ್ಳುವ ನಿರ್ಧಾರಗಳು ಎಲ್ಲವೂ ಅರ್ಧ ಸುಳ್ಳೋ, ಅರ್ಧ ಸತ್ಯವೋ, ಕಲ್ಪನೆಯೋ, ಸದಾಶಯಗಳೋ, ಸೇಡು-ಕೇಡಿನ ಬಯಕೆಗಳೋ ಆಗಿರುವುದನ್ನು ತಪ್ಪಿಸಲಾಗದೇನೋ; ಆದರೆ, ಮನುಷ್ಯರ ಇಂದ್ರಿಯಗಳು ಗ್ರಹಿಸುವ ಅನುಭವಗಳು ಮಾತ್ರ ವಾಸ್ತವ ಸತ್ಯ ಎಂದು ಲೇಖಕರಾಗಿ ಶ್ರೀಧರ ಬಳಗಾರರು ನಂಬಿದ್ದಾರೆ ಅನಿಸುತ್ತದೆ. ಹಾಗಾಗಿ ಇಂದ್ರಿಯಗಳ ಮೂಲಕ ಪಡೆಯುವ ಗ್ರಹಿಕೆಗಳಗೆ ನುಡಿಯರೂಪವನ್ನು ಕೊಡುವುದೇ ಅವರ ಬರವಣಿಗೆಯ ಮುಖ್ಯ ಭಾಗವಾಗಿ ಕಾಣುತ್ತದೆ.

ರಚನೆಯ ದೃಷ್ಟಿಯಿಂದ ಇದು ಬೇರೆ ಬೇರೆ ನಿರೂಪಕರು ಹೊತ್ತು ಮುಂದೆ ಮುಂದೆ ಸಾಗಿಸುತ್ತ ಕೊನೆಗೆ ಓದುಗರ ಮನದಂಗಳದಲ್ಲಿ ತಂದಿಳಿಸುವ ‘ಕಥೆಗಳ ಪಲ್ಲಕ್ಕಿ.’ ಪರಿಣಾಮದ ದೃಷ್ಟಿಯಿಂದ ಬಹಳಷ್ಟು ಎಡೆಗಳಲ್ಲಿ ಭಾವಗೀತೆಯ ತೀವ್ರತೆಯೊಡನೆ ಓದುಗರನ್ನು ಪರವಶಗೊಳಿಸುವ, ‘ಎಂಬುದೆಲ್ಲದರ ಅರ್ಥ’ ಎಂದು ಕೆಣಕುವ ರಚನೆ.

ಅಂಥವೆರಡು ವರ್ಣನೆಗಳನ್ನು ನೋಡಿ: ‘ಅವರೆಕಾಯಿ ಆಕಾರದ ಹೊಳಪಿನ ಆಕಾಶದ ನಕಾಶೆಯ ಕೆಳಗೆ, ಕಾಲವೇ ಅಸ್ತಂಗತವಾದಂತೆ ನೀರವವಿತ್ತು; ಎತ್ತರದ ಮರಗಳ ಬೆಟ್ಟದ ಸಾಲು ದಾಟಿ ನೆರೆ ಊರಿಗೆ ಹಾರಿ ಹೊಗುವ ಕಾಗೆಗಳ ಕೂಗೊ, ಗದ್ದೆ ಹಾಳಿಕಂಠದ ಕನ್ನಿನಲ್ಲಿ ಗೊಳೊಗೊಳೊನೆ ಸುರಿವ ಕೆರೆ ನೀರಿನ ಸದ್ದೊ, ದಿಗಂತದಲ್ಲಿ ನಿರ್ಗಮಿಸುತ್ತಿರುವ ಮೋಡದ ಚೂರಿನ ಆಕ್ರಂದನವೊ, ಮಹಾ ನಿರ್ಲಕ್ಷ್ಯದಲ್ಲಿ ಗದ್ದೆಯ ಬದಿ ಎತ್ತರಕ್ಕೆ ನಿಂತು ಗರಿ ಅಲ್ಲಾಡಿಸುವ ತೆಂಗಿನ ಮರಗಳ ನಿಟ್ಟುಸಿರೊ, ಬಿಕೋಗುಡುವ ಆಳುಗಳ ಬಿಡಾರದಲ್ಲಿ ಮಲಗಿದಲ್ಲೆ ಬೆಚ್ಚಿ ನಾಯಿ ಬೊಗಳುವುದೊ, ದಿನಕ್ಕೆರೆಡು ಸಲ ಹಾರುವ ಕಣ್ಣಿಗೆ ಕಾಣದ ಬೆಳ್ಳಿ ಮೀನಿನಂತ ವಿಮಾನಿನ ಹೂಂಕಾರವೊ ಏನೊ ಒಂದು ಮಂಪರು ಕವಿದ ಮನೆಯ ಪ್ರಾಚೀನ ಮೌನವನ್ನು ಕಲಕುತ್ತಿತ್ತು’ ಶುರುವಿನಲ್ಲಿ ಕಣ್ಣ ನೋಟ, ಆಮೇಲೆಲ್ಲ ಕಿವಿಗೆ ತಾಗುವ ದನಿಗಳ ಮೂಲಕ ‘ಪ್ರಾಚೀನ ಮೌನ’ವನ್ನು ರೂಪಿಸಿರುವ ಪರಿಯನ್ನು ಗಮನಿಸಿ. ಇನ್ನೊಂದು ಉದಾಹರಣೆ ಇದು: ‘ಒರೆಸಿದ ಒದ್ದೆ ನೆಲದಿಂದ ಹೊರಸೂಸುವ ವಸ್ತ್ರದ ಹಳಸಲು ವಾಸನೆ; ಪಕ್ಕದ ಸಾಗವಾನಿ ಮರಗಳಿಂದ ಉದುರಿದ ಎಲೆಗಳ ಅಂಗಳದಲ್ಲಿ ಪುಟಾಣಿ ಮರಿಗಳನ್ನು ಕರೆಯತ್ತಿರುವ ಕೋಳಿ; ಜಗಲಿಯ ಆಚೆ ತುದಿಯಲ್ಲಿ ಕ್ರಾಸ್ ತಳಿಯ ನೆರಳು-ಬೆಳಕಿನ ನೆಯ್ಗೆಯ ಆರಾಮು ಕುರ್ಚಿಯಲ್ಲಿ ಕುಳಿತ ಮಾಸ್ತರು ಬಿಸಿಲು ಕೋಲಿಗೆ ಪತ್ರಿಕೆಯ ಪುಟ ಹಿಡಿದು ಓದುತ್ತಿದ್ದರು..’ ಪಾತ್ರವನ್ನೂ ಪರಿಸರವನ್ನೂ ಓದುಗರ ಮನಸಿಗೆ ಇಳಿಸಲು ಲೇಖಕರು ಇಲ್ಲಿ ಕಣ್ಣು-ಮೂಗುಗಳ ಸಂಯೋಜನೆ ಬಳಸಿರುವುದನ್ನು ಗಮನಿಸಿ.

ಹೀಗೆ ಇಂದ್ರಿಯಾನುಭವಗಳನ್ನು ಹಿಡಿದಿಡುವುದು ಕವಿತೆಗೆ ಸಹಜವಾದ ಕರ್ತವ್ಯ, ಕಾದಂಬರಿಗೆ ವಿಶೇಷವಾದ ರುಚಿಯನ್ನು ಕೊಡುವ ಕೌಶಲ. ಇಂಥ ನುಡಿಭಾವಚಿತ್ರಣ ಬಳಗಾರರ ಈ ಕಾದಂಬರಿಯಲ್ಲೂ ಕಥೆಗಳಲ್ಲೂ ಹೇರಳವಾಗಿ ದೊರೆಯುತ್ತವೆ. ಓದುಗರ ಮನಸಿನಲ್ಲಿ ಉಳಿಯುತ್ತವೆ. ಸುತ್ತಲ ಪರಿಸರದ ವಸ್ತು, ದೃಶ್ಯಗಳ ಖಚಿತ, ಉದ್ದೇಶಪೂರ್ವಕ ವಿವರಣೆಯ ಮೂಲಕವೇ ಬಳಗಾರರು ಪಾತ್ರ ಮತ್ತು ಕಥೆಯ ಕ್ರಿಯೆಗಳಿಗೆ ಜೀವ ತುಂಬಿ ಮುನ್ನಡೆಸುತ್ತಾರೆ ಅನಿಸುತ್ತದೆ.

ಕಾದಂಬರಿಯ ಮೊದಲಲ್ಲೇ ಬರುವ ಸ್ವಾತಂತ್ರ್ಯ ಹೋರಾಟದ ವರ್ಣನೆಯೂ ಕಥೆಯ ಕೊನೆಗೆ ಬರುವ ‘ಹೊಸ್ಮನೆ ಮನೆತನದ ಇತಿಹಾಸ ವಿವರಿಸಬೇಕಿಲ್ಲ; ಹಲವು ತಲೆಮಾರುಗಳಿಂದ ಅವಿಭಕ್ತ ಕುಟುಂಬವಾಗಿಯೇ ಉಳಿದುಕೊಂಡಿದೆ; ಈ ಮನೆಯನ್ನು ಯಾರ ಕಾಲದಲ್ಲಿ ಕಟ್ಟಿದ್ದು ಎಂದು ಯಾರಿಗೂ ಸರಿಯಾಗಿ ನೆನಪಿಲ್ಲ; ಅನೇಕ ಸಲ ಮುರಿದು, ವಿಸ್ತರಿಸಿ ಕಟ್ಟಿದ ಮೂಲಪಾಯದ ಮನೆಯಂತೆ; ಹಳೆಯ ದಪ್ಪ ಬಾಗಿಲುಗಳು ಮತ್ತು ಹೊಗೆ ಕಪ್ಪಿನ ಮಜಭೂತ ಅಂಕಣಗಳು ಹೇಳುವ ಕಥೆಗಳನ್ನು ಕೇಳಬೇಕು; ಮನೆಯ ಅಂಗಳದಾಚೆ ಆಚೆ ಕೇರಿಯ ದಾರಿ ಪಕ್ಕದ ಹಲಸಿನ ಮರ ನನ್ನ ಅಪ್ಪಜ್ಜನ ಕಾಲದಿಂದ ಈಗ ಇದ್ದಂತಯೇ ಇತ್ತಂತೆ’ ಎಂಬ ಮಾತೂ ಇಡೀ ಕಥೆಯನ್ನು ಭಾರತದ ಚರಿತ್ರೆಗೆ ಒಡ್ಡಿದ ರೂಪಕದಂತೆ ಭಾವಿಸಬೇಕೋ ಅನಿಸುವಂತೆ ಮಾಡುತ್ತವೆ.

ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು ನಿರೂಪಿಸುತ್ತ ಒಂದೊಂದೂ ಒಂದೊಂದು ಕಥೆಯ ಪಲ್ಲಕ್ಕಿಯಾಗಿ ಸಾಗುತ್ತ ಸುಬ್ರಾಯಪ್ಪನ ‘ಜೀವನ ಚರಿತ್ರೆ’ಯನ್ನು ಇದು ಹೀಗೇ ಎಂದು ನಿರ್ಧರಿಸಲಾಗದು ಅನ್ನುವ ಮಜಲಿಗೆ ಮುಟ್ಟುತ್ತದೆ. ಯಾರ ಬದುಕನ್ನೂ ಯಾರೂ ಹಾಗೆ ಅಳತೆಮಾಡಿ ಬೆಲೆಕಟ್ಟಲಾಗದು, ಕಥೆಗಳೆಲ್ಲ ಕಥೆಗಳೇ, ಬದುಕು ಬದುಕೇ ಅನ್ನುವ ತತ್ವಕ್ಕೆ ಮುಟ್ಟಿದಂತೆ ಅನಿಸುತ್ತದೆ. ಅಂಥ ನಿಲುವಿಗೆ ಮುಟ್ಟಲೂ ಕಥೆ ಕಟ್ಟಿಕೊಳ್ಳುವುದು ಅಗತ್ಯ ಅನ್ನುವ ವ್ಯಂಗ್ಯವೂ ಮನಸಿಗೆ ಬರುತ್ತದೆ.

ಮೃಗಶಿರ ನಕ್ಷತ್ರದಲ್ಲಿ ಹುಟ್ಟಿದವರು ವಿದ್ಯಾವಂತರು ಉತ್ಸಾಹಿಗಳು ರಾಜಪೂಜಿತರು ಸನ್ಮಾರ್ಗದಲ್ಲಿ ನಡೆಯುವವರು ಚಂಚಲ ಚಿತ್ತರು ಮಧ್ಯಮ ದೇಹವನ್ನು ಉಳ್ಳವರು ಕೋಪ ಸ್ವಭಾವವುಳ್ಳವರು ಆಗಿರುತ್ತಾರೆ, ಪರೋಪಕಾರಿಯೂ ಸ್ನೇಹಿತರನ್ನು ಆದರಿಸುವರು. ಹೇಳಿದ ಮಾತುಗಳನ್ನು ಕೇಳುವುದಿಲ್ಲ ತಂದೆ ತಾಯಿಯ ಬಗ್ಗೆ ಪ್ರೀತಿ ಗೌರವ ಇರುವವರು ಈ ನಕ್ಷತ್ರದವರಿಗೆ ದೇಶಭಕ್ತಿ ಬಂಧು ಪ್ರೀತಿ ಅಧಿಕವಾಗಿರುತ್ತದೆ, ಸಂಗೀತ ಸಾಹಿತ್ಯದಲ್ಲಿ ಒಳ್ಳೆಯ ಅಭಿರುಚಿ ಇರುತ್ತದೆ’ ಅನ್ನುವುದು ಜ್ಯೋತಿಷ್ಯದ ಮಾತು. ಇವೆಲ್ಲ ಕಾದಂಬರಿಯ ನಾಯಕ ಪಾತ್ರಕ್ಕೆ ಅನ್ವಯವಾಗುವಂತಿದೆ. ಇದು ಬಿಟ್ಟರೆ ಕಾದಂಬರಿಯ ಶೀರ್ಷಿಕೆಯನ್ನು ಸಮರ್ಥಿಸುವುದು ಹೇಗೆಂದು ಹೊಳೆಯುತ್ತಿಲ್ಲ. ಮಹಾಕಾವ್ಯವೆಂಬುದಿಲ್ಲ, ಇರುವುದೆಲ್ಲ ಭಾವಗೀತೆಗಳ ಸರಣಿ ಅನ್ನುವ ಪ್ರಸಿದ್ಧ ಮಾತೊಂದಿದೆ, ಹಾಗೆಯೇ ‘ಮೃಗಶಿರ’ವು ಸುಬ್ರಾಯ-ಅಂತೆ-ಪುಟ್ಟಣ್ಣರ ಬದುಕಿನ ಬಿಡಿ ಕಥೆಗಳ ಸರಣಿಯಾಗಿದೆಯೋ ಅಂತಲೂ ಅನಿಸುತ್ತದೆ.

ಇದೆಲ್ಲ ಏನೇ ಇರಲಿ, ಶ್ರೀಧರ ಬಳಗಾರರಂಥ ಲೇಖಕರ ಕೃತಿಗಳ ಬಗ್ಗೆ ನಡೆಯಬಹುದಾಗಿದ್ದಷ್ಟೂ ಚರ್ಚೆ ನಡೆದಿಲ್ಲ ಅನ್ನುವುದು ಖೇದ ಹುಟ್ಟಿಸುತ್ತದೆ. ಇಂದ್ರಿಯಾನುಭವಗಳಿಗೆ ನುಡಿರೂಪ ಕೊಡುವ ಮೂಲಕವೇ ಕಥಾಕಲ್ಪನೆಯ ಲೋಕ ಸೃಷ್ಟಿಸುವ ಶ್ರೀಧರ ಬಳಗಾರ ಬರವಣಿಗೆಯ ಮುಖ್ಯಗುಣವಾಗಿ ಕಂಡಿದೆ. ಸುಮಾರು ನಾಲ್ಕು ದಶಕಗಳಿಂದ ಬರೆಯುತ್ತ ಉತ್ತರ ಕನ್ನಡದ ಲೋಕವನ್ನು ಚಿತ್ತಾಲ, ಕಾಯ್ಕಿಣಿ, ಇಂಥ ಲೇಖಕರಿಗಿಂತ ಭಿನ್ನವಾದ ರೀತಿಯಲ್ಲಿ ಆಪ್ತವಾಗಿಸುತ್ತ ಬಂದಿರುವ ಬಳಗಾರರಿಗೆ ಅವರು ಹೇಳಿರುವ ಒಳ್ಳೆಯ ಕಥೆಗಳಿಗೆ ಕೃತಜ್ಞ.

(ಪುಸ್ತಕ: ಮೃಗಶಿರ (ಕಾದಂಬರಿ), ಲೇಖಕರು: ಶ್ರೀಧರ ಬಳಗಾರ, ಬೆಲೆ: 150/-, ಪ್ರಕಾಶನ: ಅಭಿನವ, ಬೆಂಗಳೂರು)