ಬರವಣಿಗೆ ಎಂದರೆ ಸೋದ್ದಿಶ್ಯವಾದ ಒಂದು ಬಹಿರಂಗ ಬೌದ್ಧಿಕ ಕಸರತ್ತು ಅಥವಾ ತೀರ ಖಾಸಗಿಯಾದ ಒಂದು ಆತ್ಮಶೋಧದ ಗೀಳು ಎಂಬ ಎರಡೂ ಅತಿರೇಕಗಳ ಹಂಗು ಕಳಚಿಕೊಂಡು, ತಮ್ಮ ಸಮೃದ್ಧ ಅನುಭವ ಪ್ರಪಂಚದ ಸಾಗರದೊಳಗೆ ಪಟ್ಟೆಪಟ್ಟೆ ಚಡ್ಡಿ ಹಾಕಿಕೊಂಡು ಜಿಗಿದು ಈಸುವವರು ಶ್ರೀನಿವಾಸ ವೈದ್ಯ. ಅವರು ಈಸಿದಷ್ಟೂ, ಓದುಗರಾದ ನಾವು ಇದ್ದು ಜಯಿಸುತ್ತೇವೆ. ಅಂತರಂಗ-ಬಹಿರಂಗ, ವ್ಯಕ್ತಿ-ಸಮಾಜ ಎಂದೆಲ್ಲ ಕಾಲ್ಪನಿಕ ಗಡಿರೇಖೆ ಹಾಕಿಕೊಳ್ಳದೇ ಒಟ್ಟಂದದಲ್ಲಿ ಸಮಾಜವನ್ನು ತುಂಬಾ ಅಚ್ಛೆಯಿಂದ, ಅಷ್ಟೇ ಅಚ್ಚರಿಯಿಂದ ಅನುಭವಿಸಿದ ಈ ಜೀವಿಯ ಬರವಣಿಗೆಯಲ್ಲಿ ಬದುಕು ತನ್ನೆಲ್ಲ ನೆಳಲು ಬೆಳಕುಗಳೊಂದಿಗೆ ಬಸಿಯುತ್ತದೆ. ಇದು ಹೀಗೇಕೆ ಎಂದೆಲ್ಲ ಕೇಳದೇ, ಅರೆ ಇದು ಹೀಗಿದೆಯಲ್ಲ ಎಂದು ಸೋಜಿಗದಿಂದ ಇರವನ್ನು ಅನುಭವಿಸುವ ಅರಿವಿನ ದಾರಿ ಇದು. `ಅರಿವೇ ಗುರು’ ಎಂದರೆ, `ಹೌದ್ರೀ, ಆದರೆ ಅದೂ ಅಲ್ಲಲ್ಲಿ ಸ್ವಲ್ಪ ಹರಿದಿರ್ತದೆ’ ಎಂದು ಗಹಗಹಿಸಿ ನಗುವ ವೈದ್ಯರ ವಿನೋದ ಅಪ್ಪಟ. ಯಾವ ಹಪಹಪಿ, ತರಾತುರಿ ಇಲ್ಲದೇ ನಿವೃತ್ತಿಯ ನಂತರವೇ ಬರವಣಿಗೆಯಲ್ಲಿ ಪೂರ್ಣಪ್ರವೃತ್ತರಾಗಿರುವ ವೈದ್ಯರ ಕತೆಕಾದಂಬರಿಗಳನ್ನು ಓದುವುದೆಂದರೆ ಎಂದೋ ಎಲ್ಲೋ ಕಾಣೆಯಾಗಿದ್ದ ಬಂಧು ಬಳಗವನ್ನೆಲ್ಲ ದಾರಿಯಲ್ಲಿ ಮತ್ತೆ ಭೆಟ್ಟಿಯಾದಂತೆ.
-ಜಯಂತ ಕಾಯ್ಕಿಣಿ
(“ದೇಶ ಕಾಲ” ಪತ್ರಿಕೆಯ ವಿಶೇಷಾಂಕದಲ್ಲಿ ಪ್ರಕಟಿತ)
ಕವಿ, ಕಥೆಗಾರ, ಕನ್ನಡದ ಜನಪ್ರಿಯ ಸಿನೆಮಾ ಗೀತ ರಚನೆಗಾರ. ಮೂಲತ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಈಗ ಇರುವುದು ಬೆಂಗಳೂರು.