ಆಸ್ಟ್ರೇಲಿಯಾದ ಎಂದೆಂದಿಗೂ ತಿಳಿಯಾಗಿಲ್ಲದ ಇಬ್ಬಗೆಯೆಂದರೆ ಆಸ್ಟ್ರೇಲಿಯನ್ ಅಬೊರಿಜಿನಲ್ ಜನಜೀವನದ ಮುಖ್ಯಭಾಗವಾದ ಸಂಗೀತ ಮತ್ತು ಆಸ್ಟ್ರೇಲಿಯಕ್ಕೆ ಬರಮಾಡಿಕೊಂಡ ಪಾಶ್ಚಾತ್ಯ ಸಂಗೀತ. ಅಬೊರಿಜಿನಲ್ ಜನರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ವಸಾಹತುಶಾಹಿಗಳು ಪ್ರಯತ್ನಿಸಿದರೂ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಸಂಗೀತ, ನೃತ್ಯ ಮತ್ತು ಚಿತ್ರಕಲೆಗೆ ಗಮನ ಕೊಟ್ಟು, ಅವುಗಳಲ್ಲಿರುವ ವಿಶೇಷಣಗಳನ್ನು ಗುರುತಿಸಿದರು. ಅನೇಕ ಬಿಳಿಯರು ಚಾಣಾಕ್ಷತೆಯಿಂದ ತಮ್ಮ ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಅಬೊರಿಜಿನಲ್ ಚಿತ್ರಕಲೆಯನ್ನು ಸಾಕಷ್ಟು ಬಳಸಿಕೊಂಡು ಚಿತ್ರಕಾರರನ್ನು ದುಡಿಸಿಕೊಂಡರು. ಆದರೆ ಅದೇ ರೀತಿಯಲ್ಲಿ ಅದೇ ಮಟ್ಟಕ್ಕೆ ಅಬೊರಿಜಿನಲ್ ಸಂಗೀತ ಮತ್ತು ನೃತ್ಯ ಕಲೆಗಳನ್ನು ಲಾಭಕ್ಕಾಗಿ ಬಳಸಿಕೊಳ್ಳಲು ಆಗಲಿಲ್ಲ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
ಪರದೇಶದಲ್ಲಿರುವವರಿಗೆ ಯಾವಾಗಲೂ ಎರಡು ಪ್ರಪಂಚಗಳಲ್ಲಿನ ಬದುಕು. ಹುಟ್ಟಿದ ತವರು ಮತ್ತು ಅಪ್ಪಿಕೊಂಡ ಹೊರನಾಡು ಎರಡರಲ್ಲೂ ಸಲ್ಲಬೇಕಾದ ಅನಿವಾರ್ಯ. ಕೆಲವರಿಗೆ ತಾವು ಬಿಟ್ಟುಬಂದ ತವರಿನ ಕೊರಗು ನಿರಂತರ. ಹಾಗೆಯೇ ನಿತ್ಯಜೀವನದ ಹೊರನಾಡಿನ ಬಗ್ಗೆ ಕುತೂಹಲದೊಂದಿಗೆ ಒಂದಷ್ಟು ಅಸಮಾಧಾನವಿದ್ದೇ ಇರುತ್ತದೆ. ಈ ಎರಡೂ ಪ್ರಪಂಚಗಳ ನಡುವೆ ಅವರು ಕಟ್ಟುವ ಸೇತುವೆಗಳಿಗೆ ಲೆಕ್ಕವೇ ಇಲ್ಲ.
ಅಂತಹ ಸೇತುವೆಯೊಂದು ಆಗಾಗ ನಡೆಸುವ ಸಂಸ್ಕೃತಿ ಸಂಜೆಗಳು. ಇಂತಹುದೆ ಒಂದು ಸಂಗೀತ ಸಂಜೆಯನ್ನು ಹೋದ ಭಾನುವಾರ ಕ್ವೀನ್ಸ್ಲ್ಯಾಂಡ್ ಕನ್ನಡಿಗರ ಸಂಸ್ಕೃತಿ ಮತ್ತು ಕ್ರೀಡಾ ಸಮಿತಿಯು ಏರ್ಪಡಿಸಿತ್ತು. ಈ ಸಮಿತಿಯು ಹೊಸದಾಗಿ ಹುಟ್ಟಿದೆ. ಹೊಸತರ ಸಂಭ್ರಮದಲ್ಲಿ ಆಕಾಂಕ್ಷೆಯಿಂದ ಏರ್ಪಡಿಸಿದ್ದು ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟ ಡಾ.ರಮೇಶ್ ಅರವಿಂದ್ ಜೊತೆಗಿನ ಸಂವಾದ ಮತ್ತು ಪ್ರಸಿದ್ಧ ಹಾಡುಗಾರ ಗುರುಕಿರಣ್ ಸಂಗೀತ ತಂಡದ ಕಾರ್ಯಕ್ರಮ. ಇವರೆಲ್ಲರೂ ಹಿಂದಿನ ದಿನ ಶನಿವಾರದಂದು ಮೆಲ್ಬೋರ್ನ್ ಕನ್ನಡ ಸಂಘವು ಏರ್ಪಡಿಸಿದ್ದ ಇಂತಹುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಮಧ್ಯರಾತ್ರಿಯ ತನಕವೂ ಎಲ್ಲರನ್ನು ರಂಜಿಸಿ, ಬೆಳಿಗ್ಗೆ ವಿಮಾನವೇರಿ ಬ್ರಿಸ್ಬೇನಿಗೆ ಬಂದಿದ್ದರು. ಸಂಜೆ ತಡವಾಗಿ ಶುರುವಾದ ಕಾರ್ಯಕ್ರಮದಲ್ಲಿ ಸಹಜವಾಗಿಯೇ ಕೆಲವರು ಆಯಾಸವಾಗಿಗೊಂಡಿದ್ದು ಕಂಡಿತು.
ಸಜ್ಜನ ನಟನೆಂದು ಹೆಸರಾದ ಸುಂದರ ನಗುಮೊಗದ ಡಾ.ರಮೇಶ್ ತಾವು ವೇದಿಕೆಗೆ ಬಂದ ಕೂಡಲೇ ಪ್ರೇಕ್ಷಕರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ನಂತರ ವೇದಿಕೆ ಬಿಟ್ಟು ಕೆಳಗಿಳಿದು ಬಂದು ಪ್ರೇಕ್ಷಕರೊಂದಿಗೆ ಬೆರೆತು ಮಾತನಾಡಿದ ಸಹಜತೆ ಬ್ರಿಸ್ಬೇನ್ ಕನ್ನಡಿಗರನ್ನು ಮೋಡಿಮಾಡಿತ್ತು. ಅವರ ಸಲೀಸಾದ ನೇರನುಡಿ, ‘ಸ್ಟಾರ್’ ನಟನ ಆಡಂಬರವಿಲ್ಲದ ವ್ಯಕ್ತಿತ್ವ, ಅವರೇ ಹಂಚಿಕೊಂಡ ಜೀವನದ ತುಣುಕುಗಳು ಇಷ್ಟವಾಗಿತ್ತು. ವಿಶೇಷವೆಂದರೆ ಪ್ರೇಕ್ಷಕರಲ್ಲಿ ಒಬ್ಬರು ತಾವು ರಮೇಶ್ ಅವರ ಕಾಲೇಜು ಸಹಪಾಠಿ ಎಂದು ಪರಿಚಯಿಸಿಕೊಂಡರು. ಇನ್ನೂ ವಿಶೇಷವೆಂದರೆ ರಮೇಶ್ ಅವರ ಹೆಂಡತಿ ಅರ್ಚನಾ ನನ್ನ ಕಾಲೇಜು ಸಹಪಾಠಿ. ನಾವಿಬ್ಬರೂ ಬೆಂಗಳೂರಿನ ಜಯನಗರದಲ್ಲಿರುವ NMKRV ಮಹಿಳಾ ಪದವಿ ಕಾಲೇಜಿನಲ್ಲಿ ಓದಿದ್ದು. ಆ ದಿನಗಳಲ್ಲಿ ಚಿತ್ರರಂಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ರಮೇಶ್ ತಮ್ಮ ಬೈಕ್ ಓಡಿಸಿಕೊಂಡು ಅರ್ಚನಾಳನ್ನು ಕಾಣಲು ನಮ್ಮ ಕಾಲೇಜಿಗೆ ಬರುತ್ತಿದ್ದದ್ದು ನಮಗೆಲ್ಲಾ ‘ಹೌದೇನೇ, ಹೌದೇನೇ’ ಎನ್ನುವಂಥ ಕುತೂಹಲದ ವಿಷಯವಾಗಿತ್ತು. ಮುಂದೆ ತರಂಗ ಪತ್ರಿಕೆಯಲ್ಲಿ ಆ ವೇಳೆಗೆ ಪ್ರಸಿದ್ಧ ನಟರಾಗಿದ್ದ ರಮೇಶ್ ಅವರ ಜೀವನಕಥೆ ಪ್ರಕಟವಾಗಿ, ಅವರು ಅರ್ಚನಾಳನ್ನು ಮದುವೆಯಾಗಿದ್ದು, ಅವರಿಗೆ ಮಕ್ಕಳಾದದ್ದು ಕುರಿತು ಓದಿದ್ದೆ. ಹೋದ ವಾರ ಬ್ರಿಸ್ಬೇನಿನ ಕಾರ್ಯಕ್ರಮಗಳ ನಡುವೆ ಒಂದು ನಿಮಿಷ ಅರ್ಚನಾಳನ್ನು ಕಂಡು ಮಾತನಾಡಿಸಿದ್ದೂ ಮಾಡಿದೆ. ಅವರಿಗೆ ಗೊಂದಲವೂ ಕಕ್ಕಾಬಿಕ್ಕಿಯೂ ಆಯಿತೆಂದು ಕಾಣುತ್ತದೆ. ನಾನಂತೂ ಮುಂದಿನ ಕಾರ್ಯಕ್ರಮ ಗುರುಕಿರಣ್ ಮತ್ತು ತಂಡದವರ ಸಂಗೀತ ಸಂಜೆಯಲ್ಲಿ ಕನ್ನಡ ಹಾಡುಗಳ ಸಾಗರದಲ್ಲಿ ಮುಳುಗಿ, ಆನಂದಿಸಿ ಮನೆಗೆ ಹೋದೆ.
ಆಸ್ಟ್ರೇಲಿಯಾದ ಎಂದೆಂದಿಗೂ ತಿಳಿಯಾಗಿಲ್ಲದ ಇಬ್ಬಗೆಯೆಂದರೆ ಆಸ್ಟ್ರೇಲಿಯನ್ ಅಬೊರಿಜಿನಲ್ ಜನಜೀವನದ ಮುಖ್ಯಭಾಗವಾದ ಸಂಗೀತ ಮತ್ತು ಆಸ್ಟ್ರೇಲಿಯಕ್ಕೆ ಬರಮಾಡಿಕೊಂಡ ಪಾಶ್ಚಾತ್ಯ ಸಂಗೀತ. ಅಬೊರಿಜಿನಲ್ ಜನರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ವಸಾಹತುಶಾಹಿಗಳು ಪ್ರಯತ್ನಿಸಿದರೂ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಸಂಗೀತ, ನೃತ್ಯ ಮತ್ತು ಚಿತ್ರಕಲೆಗೆ ಗಮನ ಕೊಟ್ಟು, ಅವುಗಳಲ್ಲಿರುವ ವಿಶೇಷಣಗಳನ್ನು ಗುರುತಿಸಿದರು. ಅನೇಕ ಬಿಳಿಯರು ಚಾಣಾಕ್ಷತೆಯಿಂದ ತಮ್ಮ ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಅಬೊರಿಜಿನಲ್ ಚಿತ್ರಕಲೆಯನ್ನು ಸಾಕಷ್ಟು ಬಳಸಿಕೊಂಡು ಚಿತ್ರಕಾರರನ್ನು ದುಡಿಸಿಕೊಂಡರು. ಆದರೆ ಅದೇ ರೀತಿಯಲ್ಲಿ ಅದೇ ಮಟ್ಟಕ್ಕೆ ಅಬೊರಿಜಿನಲ್ ಸಂಗೀತ ಮತ್ತು ನೃತ್ಯ ಕಲೆಗಳನ್ನು ಲಾಭಕ್ಕಾಗಿ ಬಳಸಿಕೊಳ್ಳಲು ಆಗಲಿಲ್ಲ. ಅವುಗಳನ್ನು ಅನುಕರಿಸಲು, ಹೊರದೇಶಗಳಿಗೆ ರಫ್ತು ಮಾಡಲು, ಪುಕ್ಕಟೆ ಬಳಸಿಕೊಳ್ಳಲು ಕಷ್ಟ ಏಕೆಂದರೆ ಅವರಲ್ಲಿನ ವಿವಿಧ ಬಗೆಗಳ ಸಂಗೀತ, ನೃತ್ಯ ಕಲೆಗಳು ಸಂಕೀರ್ಣವಾದವು. ಕಾಲಕ್ರಮೇಣ ತಮ್ಮ ಜನ್ಮ ಕುಟುಂಬಗಳಿಂದ ಬೇರ್ಪಡಿಸಲ್ಪಟ್ಟು ಅನಾಥಾಲಯಗಳಲ್ಲಿ, ಸಾಕು ಕುಟುಂಬಗಳಲ್ಲಿ ಬೆಳೆಸಲ್ಪಟ್ಟ ಅನೇಕ ಅಬೊರಿಜಿನಲ್ ಮಕ್ಕಳು ಕ್ರೈಸ್ತ ಧರ್ಮದ, ಚರ್ಚ್ ಸಂಗೀತ ಕ್ರಮಗಳಲ್ಲಿ ತರಬೇತಿ ಪಡೆದರು. ಅವರಲ್ಲಿ ಕೆಲವರು ಪ್ರಸಿದ್ಧ ಹಾಡುಗಾರರಾದರು. ಇದರ ಜೊತೆಜೊತೆಗೇ ಅವರ ಜನಕುಲಗಳ ವಿಭಿನ್ನ ಪ್ರಾಕಾರಗಳ ಸಂಗೀತವೂ, ನೃತ್ಯಬಗೆಗಳೂ ಬೆಳೆದವು. ಅನೇಕ ಅಬೊರಿಜಿನಲ್ ಯುವಕ-ಯುವತಿಯರು ಈ ಎರಡೂ ಪ್ರಪಂಚಗಳಲ್ಲಿ ಕಾಲಿಟ್ಟು ಅಲ್ಲಿಯೂ ಇಲ್ಲಿಯೂ ಸಲ್ಲುತ್ತ ಮುನ್ನಡೆದಿದ್ದಾರೆ.
ಆ ಮುನ್ನೆಡೆಯ ಪ್ರಗತಿಪಥದ ಬೆಳವಣಿಗೆ ಸ್ಪಷ್ಟವಾಗಿದ್ದು ನೆನ್ನೆ ಪ್ರಕಟವಾದ ARIA ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ. ೩೬ನೇ ವಾರ್ಷಿಕ ಆಸ್ಟ್ರೇಲಿಯನ್ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಷನ್ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಾನು ನೋಡಿದ್ದು ಟಿವಿ ಪರದೆಯ ಮೇಲೆ. ಈ ಬಾರಿ ನಾನು ಆಸಕ್ತಿ ವಹಿಸಿ ಕಾರ್ಯಕ್ರಮವನ್ನು ನೋಡಲು ಕಾರಣವಾಗಿದ್ದು ಈ ವರ್ಷ ಲೋಕವನ್ನು ತ್ಯಜಿಸಿ ಹೋದ ನನ್ನಿಷ್ಟದ ಪ್ರಸಿದ್ಧ ಹಾಡುಗಾರ್ತಿ ಒಲಿವಿಯಾ ನ್ಯೂಟನ್-ಜಾನ್, ಅಂಕಲ್ ಆರ್ಚೀ ರೋಚ್ ಅವರನ್ನು ನೆನಪಿಸಿಕೊಂಡಿದ್ದು ಮತ್ತು ಆರ್ಚೀ ರೋಚ್ ಅವರ ಕಡೆಯ ಆಲ್ಬಮ್ ‘ಒನ್ ಸಾಂಗ್’ ಪ್ರಶಸ್ತಿಗಳಿಸಿದ್ದು. ಅಲ್ಲದೇ ಸುಪ್ರಸಿದ್ಧ ಅಬೊರಿಜಿನಲ್ ರಂಗನಟ ಮತ್ತು ಚಿತ್ರನಟ ಜಾಕ್ ಚಾರ್ಲ್ಸ್ ಅವರನ್ನು ನೆನಪಿಸಿಕೊಂಡದ್ದು.
ಕಾರ್ಯಕ್ರಮದಲ್ಲಿ ಪ್ರಧಾನವಾಗಿ ಕಂಡಿದ್ದು ಅಬೊರಿಜಿನಲ್ ಸಂಗೀತಗಾರರು, ಅವರ ತಂಡಗಳು, ಹಾಡುಗಾರರು. ಒಂದು ಮಟ್ಟಿಗೆ ಹೇಳುವುದಾದರೆ ಅವರ ಹಾಜರಾತಿ ಸಂಖ್ಯೆಯಲ್ಲೂ, ಪ್ರಭಾವದಲ್ಲೂ ಎತ್ತಿ ಕಾಣಿಸುತ್ತಿತ್ತು. ಆಸ್ಟ್ರೇಲಿಯನ್ ಬಿಳಿಯರನ್ನು ಮೀರಿಸುವಂತೆ ಸ್ವಲ್ಪ ಅಧಿಕವಾಗಿಯೆ ಅಂಟಿಸಿಕೊಂಡಿದ್ದ ಮೇಕ್ ಅಪ್ ಮತ್ತು ಉಡುಗೆತೊಡಿಗೆಗಳಲ್ಲಿ ಮಿಂಚುತ್ತಿದ್ದ ಅಬೊರಿಜಿನಲ್ ಆರ್ಟಿಸ್ಟ್-ಗಳು ವೇದಿಕೆಯ ಮೇಲೆ ಅಬೊರಿಜಿನಲ್ rap ಮತ್ತು ಹಿಪ್ ಹಾಪ್ ಹಾಡುಗಾರಿಕೆ, ಅವರದ್ದೇ ಆದ ಮೂಲ ಕುಲ-ಹಾಡುಗಾರಿಕೆಗಳಲ್ಲಿ ಸಾಟಿಯಿಲ್ಲದಂತೆ ಪೈಪೋಟಿ ಹೂಡಿದ್ದರು. ಅದೆಷ್ಟು ಬಗೆಗಳ ಆಲ್ಬಮ್ ಗಳು ಬಂದಿವೆ, ಅದೆಷ್ಟು ಮಂದಿ ಯುವಜನತೆ ಸಂಗೀತಕಲೆ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ! ಮೂಲತಃ ಹಾಡುಗಾರರಾದ ಅಬೊರಿಜಿನಲ್ ಜನರು ತಮ್ಮದಲ್ಲ ಮತ್ತೊಂದು ವಿಭಿನ್ನ ಪ್ರಪಂಚಕ್ಕೆ ಕಾಲಿರಿಸಿ, ನಿಧಾನವಾಗಿ ಅದನ್ನು ಅರ್ಥಮಾಡಿಕೊಂಡು, ಬಿಳಿಯರ ವ್ಯವಸ್ಥೆಯಲ್ಲಿ ಪಳಗುತ್ತಾ ಈಗ ಮುಖ್ಯವಾಹಿನಿಯಲ್ಲಿ ಮಿಂಚುತ್ತಿರುವುದು ಬಹಳ ಸಂತೋಷದ ವಿಷಯ.
ARIA ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಡಾಂಝಲ್ ಜೇಮ್ಸ್ ಬೇಕರ್. ಬೇಕರ್ ಬಾಯ್ ಎಂದು ಮನೆಮಾತಾಗಿರುವ ಇಪ್ಪತ್ತಾರು ವಯಸ್ಸಿನ ಡಾಂಝಲ್ ಬೇಕರ್ (Danzal Baker) ಒಬ್ಬ ಹಿಪ್ ಹಾಪ್ ಹಾಡುಗಾರ, ನೃತ್ಯಗಾರ ಮತ್ತು ನಟ. ಆಸ್ಟ್ರೇಲಿಯದ ನೆತ್ತಿಭಾಗದಲ್ಲಿರುವ ನಾರ್ತರ್ನ್ ಟೆರ್ರಿಟೋರಿ ಯ ರಾಜಧಾನಿ ಡಾರ್ವಿನ್ ನಲ್ಲಿ ಹುಟ್ಟಿ, Townsville ಮತ್ತು ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಲ್ಲಿ ಓದಿದ್ದು, performing arts ಗಳಲ್ಲಿ ತರಬೇತಿ ಪಡೆದಿದ್ದು. ಈ ಹುಡುಗ ಅಪ್ಪಟ ಅಬೊರಿಜಿನಲ್ Yolngu – Burralung – Gela ಕುಲಗಳಿಗೆ ಸೇರಿದವನು. ತನ್ನ ಕುಲದ Yolgnu ಭಾಷೆಯನ್ನು ಇಂಗ್ಲಿಷ್ ಭಾಷೆಯೊಡನೆ ಮೇಳೈಸಿ ಹಾಡು ಕಟ್ಟುವ, ಹಾಡುವ, ಅಭಿನಯಿಸುವ ಪ್ರತಿಭಾವಂತ. ಇವನಿಗೆ ಬ್ರಿಸ್ಬೇನ್ ನಲ್ಲಿ ಪ್ರೋತ್ಸಾಹ ಕೊಟ್ಟವರು ಅಬೊರಿಜಿನಲ್ ಹಿರಿಯ ನಟ ಜಾಕ್ ಚಾರ್ಲ್ಸ್. ತನ್ನ ತಾರುಣ್ಯದ ಮೊದಲ ವರ್ಷಗಳಲ್ಲಿ ಡಾಂಝಲ್ ಕಿರುಪರದೆಯ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿದ. ತನ್ನ ಬಹು ಹೆಸರಾಂತ Yolngu ಕುಲದ ಸಂಗೀತದ ಛಾಪನ್ನು ಪಸರಿಸಿದ. ಅಲ್ಲಿಂದ ಹಿಂದೆ ನೋಡದೆ ಸಂಗೀತಗಾರನಾಗಿ, ನೃತ್ಯಗಾರನಾಗಿ ರೂಪಿಸಿಕೊಳ್ಳುತ್ತ ಮುನ್ನೆಡೆದ. ಈ ಬಾರಿಯ ARIA ಸಂಗೀತ ಸಂಜೆಯಲ್ಲಿ ಅವನಿಗೆ ಸಂದ ಪ್ರಶಸ್ತಿಗಳು ಐದು – ಎಲ್ಲವೂ ಮುಂಚೂಣಿಯ ‘ಬೆಸ್ಟ್’ ಎಂಬ ಪ್ರಶಸ್ತಿಗಳು. ವೇದಿಕೆಯ ಮೇಲೆ ಮಾತನಾಡುವಾಗ ‘ತಾನು ಆತ್ಮವಿಶ್ವಾಸವಿರುವ ಒಬ್ಬ Yolngu ಹಾಡುಗಾರ. ತನ್ನ ಅಬೊರಿಜಿನಲ್ ಕಪ್ಪು ಜನರು ಕಲೆಗಳಿಗೆ ಹೆಸರಾದವರು. ಅವುಗಳಿಗೆ ಮನ್ನಣೆ ಸಲ್ಲುತ್ತಿರುವುದು ಸಂತೋಷವಾಗಿದೆ’ ಎಂದ. ಅವನ ಜೊತೆಯಲ್ಲಿ ನಿಂತು ಮಾತನಾಡಿದ ತಂಡದವರು ಕೂಡ ‘ತಮ್ಮ ಕಪ್ಪು ಜನರು ಇಷ್ಟೆಲ್ಲಾ ಪ್ರಶಸ್ತಿಗಳನ್ನು ಗಳಿಸುತ್ತಿರುವುದು ಇದೇ ಮೊದಲ ಬಾರಿ. ಇದು ಆರಂಭವಷ್ಟೇ,’ ಎಂದರು. ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ‘ಬೇಕರ್ ಬಾಯ್’ ಇದೆ ವರ್ಷ ಇಂಗ್ಲೆಂಡಿನ ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೆಗಳ ಮುಕ್ತಾಯ ಸಮಾರಂಭದಲ್ಲಿ ಹಾಡಿದ್ದು ಮತ್ತೊಂದು ಮೈಲಿಗಲ್ಲು. ತನ್ನ ಹಿರಿಯರಂತೆ ತಾನೂ ಕೂಡ ಸಂಗೀತ ಮತ್ತು ಇತರ ಕಲೆಗಳ ಮೂಲಕ ತಮ್ಮ ಯುವಜನತೆಗೆ ಮಾದರಿಯಾಗಿದ್ದೀನಿ ಎಂದಿದ್ದಾರೆ ಡಾಂಝಲ್ ಜೇಮ್ಸ್ ಬೇಕರ್.
ಆಸ್ಟ್ರೇಲಿಯಾದಲ್ಲಿ ತವರು ಮತ್ತು ಪರಕೀಯ ಎಂಬ ಎರಡೂ ಪ್ರಪಂಚಗಳಲ್ಲಿ ಸಲ್ಲುತ್ತಾ ನಮ್ಮಂತಹ ವಲಸೆಗಾರರು ಮತ್ತು ನಾಡಿನ ಮೂಲ ಅಬೊರಿಜಿನಲ್ ಜನರು ಕಟ್ಟುತ್ತಿರುವ ಸೇತುವೆಗಳು ಮತ್ತಷ್ಟು ಗಟ್ಟಿಯಾಗಲಿ ಎಂದು ಹಾರೈಸೋಣ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.