ಕೆಲವು ಸಂಬಂಧಗಳು ಅಪ್ರಜ್ಞಾಪೂರ್ವಕವಾಗಿ ಕಳೆದುಹೋಗಬಹುದು. ಇನ್ನು ಕೆಲವು ಅಸಹಾಯಕತೆಯಿಂದ ಕಳೆದುಹೋಗುಬಹುದು. ಆದರೆ ಕೆಲವು ಸಂಬಂಧಗಳನ್ನು ನಾವೇ ಪ್ರಜ್ಞಾಪೂರ್ವಕವಾಗಿ ಮುರಿಯಬೇಕಾಗುತ್ತದೆ. ಒಬ್ಬ ಗೆಳೆಯ ನನ್ನಿಂದ ಅನೇಕ ರೀತಿಯಲ್ಲಿ ಉಪಕೃತನಾಗಿದ್ದ, ಸ್ನೇಹಶೀಲವಾಗಿಯೂ ಇದ್ದ. ಆದರೆ ನನಗೆ ಏನೂ ಗೊತ್ತಾಗುತ್ತಿಲ್ಲ ಎನ್ನುವ ಭ್ರಮೆಯಲ್ಲಿ ನನ್ನ ವಿರುದ್ಧವಾಗಿ ಹಿಂದುಗಡೆ ಕೆಲಸ ಮಾಡುತ್ತಿದ್ದ. ಒಂದೆರಡು ಸಲ ಇದು ಗಮನಕ್ಕೆ ಬಂದಾಗ ಸಮಯ-ಸಂದರ್ಭ ಕಾಕತಾಳೀಯವಾಗಿರಬೇಕು ಎಂದು ಸುಮ್ಮನಾದೆ. ಆದರೆ ಬೇರೆ ಸ್ನೇಹಿತರು ಕೂಡ ಇದನ್ನೆಲ್ಲ ಗಮನಕ್ಕೆ ತಂದಾಗ, ನಾನು ಗೆಳೆಯನಿಗೆ ನೇರವಾಗಿ ಹೇಳಿ ನಮಸ್ಕಾರ ಮಾಡಬೇಕಾಯಿತು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ನಾಲ್ಕನೆಯ ಪ್ರಬಂಧ ನಿಮ್ಮ ಓದಿಗೆ

ದಯವಿಟ್ಟು ಕಿರಿಕಿರಿ ಮಾಡಿಕೊಳ್ಳಬೇಡಿ!

ಏನಪ್ಪಾ, ಇದು, ಎಲ್ಲರೂ ಮನುಷ್ಯರೊಡನೆ ಮಧುರವಾದ ಸಂಬಂಧವನ್ನು ರೂಢಿಸಿಕೊಳ್ಳಬೇಕು, ಕಾಪಾಡಿಕೊಳ್ಳಬೇಕು ಎಂದು ಬರೆದರೆ, ಈ ಪ್ರಬಂಧಕಾರನು ಸಂಬಂಧಗಳನ್ನು ಏಕೆ ತೊರೆಯಬೇಕು ಎಂಬ ಇನ್ನೊಂದು ಪ್ರಬಂಧ ಬರೆಯುತ್ತಿದ್ದಾನೆ ಎಂದೆನಿಸಬಹುದು. ಆದರೆ ಇದು ಅಧಿಕಪ್ರಸಂಗ ಎಂದು ಪ್ರಬಂಧ ಓದಿದ ಮೇಲೆ ನಿಮಗೆ ಖಂಡಿತ ಅನಿಸುವುದಿಲ್ಲ ಎಂಬ ಭರವಸೆ ಕೊಡುತ್ತೇನೆ.

ಒಪ್ಪಿಕೊಳ್ಳುತ್ತೇನೆ! ಮನುಷ್ಯ ಸಂಬಂಧಗಳ ಬಗ್ಗೆ ಬರೆಯುವುದು ಬಲು ಕಷ್ಟ. ಏಕೆಂದರೆ, ಪ್ರತಿಯೊಬ್ಬರಿಗೂ ಈ ವಿದ್ಯಮಾನವನ್ನು ಕುರಿತಂತೆ ಆಗುವ ಅನುಭವ, ಅನುಭವಿಸುವ ನೋವು ನಲಿವು ಎಲ್ಲವೂ ವಿಶಿಷ್ಟ, ವೈಯಕ್ತಿಕ. ಒಬ್ಬರ ಅನುಭವ, ವಿಚಾರ ಇದ್ದಹಾಗೆ ಇನ್ನೊಬ್ಬರದು ಇರುವುದಿಲ್ಲ. ನಾವು ತೀವ್ರವಾಗಿ ದ್ವೇಷಿಸುವ ಒಬ್ಬ ಗೆಳೆಯನಲ್ಲೇ ಇನ್ನೊಬ್ಬರಿಗೆ ಎಲ್ಲ ಕಲ್ಯಾಣ ಗುಣಗಳು ಕಾಣಬಹುದು. ಒಬ್ಬರ ಇನ್ನೊಬ್ಬರ ಪ್ರಶ್ನೆ ಏಕೆ, ನನಗೇ ಒಬ್ಬ ಮನುಷ್ಯ ಈವತ್ತು ಸಕಲ ಕಲ್ಯಾಣ ಗುಣಗಳ ಮೊತ್ತವಾಗಿ, ಸಾಕಾರ ಮೂರ್ತಿಯಾಗಿ ಕಂಡವನು, ಇನ್ನು ಕೆಲವೇ ವರ್ಷಗಳಲ್ಲಿ ಪರಮ ನೀಚನಾಗಿ ಕಾಣಬಹುದು. ನನ್ನ ಗೆಳೆಯನ ಮಗನೊಬ್ಬ ತನ್ನ ಹೆಂಡತಿಯನ್ನು ಬಿಟ್ಟ. ಕೊಟ್ಟ ಕಾರಣಗಳು ಹೀಗಿದ್ದವು – ಅವಳಿಗೆ ಲೈಂಗಿಕ ಕುತೂಹಲವಿಲ್ಲ, ಆಸ್ಥೆಯಿಲ್ಲ, ನೆಂಟರಿಷ್ಟರ ಜೊತೆ ಬೆರೆಯಲಾರಳು, ಯಾವುದರಲ್ಲೂ ಅಚ್ಚುಕಟ್ಟಿಲ್ಲ – ಹೀಗೆ ಹತ್ತು ಹಲವು ಕಾರಣಗಳು. ನಂತರ ಆ ಹುಡುಗಿ ನಮ್ಮ ವಲಯದಲ್ಲೇ ಇನ್ನೊಂದು ಮದುವೆ ಆದಳು. ಎರಡು ಮುದ್ದಾದ ಮಕ್ಕಳು, ಅನ್ಯೋನ್ಯ ಶೃಂಗಾರಮಯವಾದ ದಾಂಪತ್ಯ, ಗಂಡನ ಎಲ್ಲ ವ್ಯಾಪಾರ, ಸಂಬಂಧಗಳನ್ನು ಜಾಣತನದಿಂದ ನಿರ್ವಹಿಸುವ ಚಾಣಾಕ್ಷತೆ, ಸ್ನೇಹಶೀಲತೆ. ಆ ಹುಡುಗಿಯನ್ನು ತಿರಸ್ಕರಿಸಿದ್ದವ ಕೈ ಕೈ ಹಿಸುಕಿಕೊಂಡ. ನನ್ನ ಪರಿಚಯದ ಹಿರಿಯ ನಾಯರ್‌ ಅಧಿಕಾರಿಯೊಬ್ಬರಿದ್ದರು. ಕಡು ಬ್ರಾಹ್ಮಣ ದ್ವೇಷಿ. ಅವರ ಗ್ರಹಚಾರಕ್ಕೆ ಇಬ್ಬರು ಗಂಡು ಮಕ್ಕಳೂ ಬ್ರಾಹ್ಮಣ ಕನ್ಯೆಯರನ್ನು ಮದುವೆ ಆದರು. ಕೆಲವೇ ವರ್ಷಗಳಲ್ಲಿ ಹಿರಿಯ ನಾಯರ್‌ಗೆ ಜಗತ್ತಿನಲ್ಲಿರುವ ಎಲ್ಲ ಕಲ್ಯಾಣ ಗುಣಗಳು ಬ್ರಾಹ್ಮಣರಲ್ಲೇ ಕಾಣಲಾರಂಭಿಸಿದವು. ತಮಾಷೆಗೆಂದು ನಾವೇ ಬ್ರಾಹ್ಮಣರ ಕೆಟ್ಟ ಗುಣಗಳನ್ನು ಹುಡುಕಿ ಅವರ ಮುಂದೆ ಗೇಲಿ ಮಾಡುತ್ತಿದ್ದೆವು. ಇದೆಲ್ಲ ನಿಜವಿದ್ದರೂ ಎಲ್ಲ ಮನುಷ್ಯ ಸಂಬಂಧಗಳಿಗೂ, ಗಂಡ-ಹೆಂಡತಿ ಸಂಬಂಧಗಳಿಗೂ ಸೇರಿದಂತೆ, ಅನ್ವಯಿಸಬಹುದಾದ ಕೆಲವು ಸಾಮಾನ್ಯ ಸೂತ್ರಗಳಿರುತ್ತವೆ.

ಯಾವ ಸಂಬಂಧವೂ ಈವತ್ತು ಇದ್ದ ಹಾಗೆ ನಾಳೆ ಇರುವುದಿಲ್ಲ, ಇರಬೇಕಾಗಿಲ್ಲ (Course of true love is never smooth). ಸಂಬಂಧ ಉಳಿದುಕೊಂಡರೂ ಒಂದೇ ತೀವ್ರತೆಯಲ್ಲಿರುವುದಿಲ್ಲ. ಹಾಗೆಂದು ನಾವು ಬಯಸುವುದೂ ಇಲ್ಲವೇನೋ? ನಮ್ಮ ಆಸಕ್ತಿ ಆದ್ಯತೆಗಳು ಬದಲಾಗಬಹುದು. ಸೋದರ ಭಾವದ ಗೆಳೆಯನೆಂದು ಭಾವಿಸಿದ್ದವನು ಹತ್ತಿಕ್ಕುವ ಸ್ಪರ್ಧಿಯಾಗಬಹುದು. ನಮಗಿಂತಲೂ ಬೆಚ್ಚನೆಯ ಪ್ರೀತಿ, ಅನುರಾಗ, ಭದ್ರತೆಯ ಭಾವನೆ ಇನ್ನೊಬ್ಬರಲ್ಲಿ ಸಿಗಬಹುದು. ಪ್ರಾಪಂಚಿಕ ಅನುಕೂಲ ಕೂಡ ಆಗಬಹುದು. ಸಂಬಂಧದ ಚಲನೆ ಆ ಕಡೆಗಿರಬಹುದು. ಇದು ಕೆಲವು ಸಲ ನಮ್ಮ ಅರಿವಿಗೆ ಬರುತ್ತದೆ. ಅರಿವಿಗೆ ಬಂದರೂ ಏನೂ ಮಾಡುವ ಹಾಗಿಲ್ಲ. ಬೇಸರವಾಗುತ್ತದೆ, ನೋವಾಗುತ್ತದೆ, ಅಸಹಾಯಕತೆ ಮೂಡುತ್ತದೆ. ಆದರೂ ಒಪ್ಪಿಕೊಳ್ಳುತ್ತೇವೆ. ಇಂತಹ ಕ್ಷಣಗಳಲ್ಲಿ ಸ್ವತಃ ನಾವು ಕೂಡ ಗೆಳೆಯರಿಂದ, ಒಡನಾಡಿಗಳಿಂದ ದೂರವಾದ, ವಿಮುಖವಾದ ರೀತಿಯನ್ನು ನೆನಸಿಕೊಂಡು ಪೆಚ್ಚಾಗುತ್ತೇವೆ. ಲೋಕ ಇರುವುದೇ ಹೀಗಲ್ಲವೇ ಎಂಬ ಒಣಸಮಾಧಾನ ಮಾಡಿಕೊಳ್ಳುತ್ತೇವೆ. ಇದರಲ್ಲೆಲ್ಲ ಬಹುಪಾಲು ಅನುಕೂಲಸಿಂಧು ಅಂಶವೂ ಇರುತ್ತದೆ. ಸಂಬಂಧಗಳಿಂದ Mutual benefit ಆಗಬೇಕು ಎಂದು ಒಬ್ಬ ಗೆಳೆಯ ಹೇಳುತ್ತಿದ್ದ. ಅವನು ತುಂಬಾ ಪ್ರಭಾವಶಾಲಿಯಾದ್ದರಿಂದ, ಅವನ ಒಡನಾಟ ಸಿಗುವುದೇ ಕಷ್ಟವಾದ್ದರಿಂದ, ಆ ಸೂತ್ರವನ್ನು ಒಪ್ಪಿಕೊಂಡು ನಾನು ಅವನ ಬಾಲಂಗೋಚಿಯಾಗಿದ್ದೆ. ಕೆಲವೇ ವರ್ಷಗಳಲ್ಲಿ ಆತ ಇನ್ನೊಬ್ಬರ ಕಡೆ ಚಲಿಸಿದ. ನನ್ನ ದೃಷ್ಟಿಯಲ್ಲಿ ಆ ವ್ಯಕ್ತಿಗೆ ಯಾವ ರೀತಿಯ ಪ್ರತಿಭೆ, ಬದ್ಧತೆಯೇ ಇರಲಿಲ್ಲ. ಆದರೆ ನನ್ನ ಗೆಳೆಯನಿಗೆ Mutual benefit ಆಗುತ್ತಿತ್ತು. ಆವಾಗ ನನಗೆ ಅರ್ಥವಾಯಿತು, Mutual benefit ಅಂದರೆ ಬರೇ ಒಮ್ಮುಖವಾದ Personal benefit ಎಂದು.

ಕೆಲವು ಸಂಬಂಧಗಳು ಅಪ್ರಜ್ಞಾಪೂರ್ವಕವಾಗಿ ಕಳೆದುಹೋಗಬಹುದು. ಇನ್ನು ಕೆಲವು ಅಸಹಾಯಕತೆಯಿಂದ ಕಳೆದುಹೋಗುಬಹುದು. ಆದರೆ ಕೆಲವು ಸಂಬಂಧಗಳನ್ನು ನಾವೇ ಪ್ರಜ್ಞಾಪೂರ್ವಕವಾಗಿ ಮುರಿಯಬೇಕಾಗುತ್ತದೆ. ಒಬ್ಬ ಗೆಳೆಯ ನನ್ನಿಂದ ಅನೇಕ ರೀತಿಯಲ್ಲಿ ಉಪಕೃತನಾಗಿದ್ದ, ಸ್ನೇಹಶೀಲವಾಗಿಯೂ ಇದ್ದ. ಆದರೆ ನನಗೆ ಏನೂ ಗೊತ್ತಾಗುತ್ತಿಲ್ಲ ಎನ್ನುವ ಭ್ರಮೆಯಲ್ಲಿ ನನ್ನ ವಿರುದ್ಧವಾಗಿ ಹಿಂದುಗಡೆ ಕೆಲಸ ಮಾಡುತ್ತಿದ್ದ. ಒಂದೆರಡು ಸಲ ಇದು ಗಮನಕ್ಕೆ ಬಂದಾಗ ಸಮಯ-ಸಂದರ್ಭ ಕಾಕತಾಳೀಯವಾಗಿರಬೇಕು ಎಂದು ಸುಮ್ಮನಾದೆ. ಆದರೆ ಬೇರೆ ಸ್ನೇಹಿತರು ಕೂಡ ಇದನ್ನೆಲ್ಲ ಗಮನಕ್ಕೆ ತಂದಾಗ, ನಾನು ಗೆಳೆಯನಿಗೆ ನೇರವಾಗಿ ಹೇಳಿ ನಮಸ್ಕಾರ ಮಾಡಬೇಕಾಯಿತು. ಇನ್ನೊಂದು ಸಂಬಂಧದಲ್ಲಿ ನನ್ನ ಮಕ್ಕಳು, ಅವರ ಮಕ್ಕಳಿಗಿಂತ ಯಾವ ರೀತಿಯಲ್ಲೂ ಮುಂದುವರೆಯಬಾರದು, ಯಾವ ಪರೀಕ್ಷೆಯಲ್ಲೂ ಹೆಚ್ಚು ಅಂಕಗಳನ್ನು ಗಳಿಸಬಾರದು ಎಂದೆಲ್ಲಾ ನಿಯಮ ವಿಧಿಸಲು ಪ್ರಾರಂಭಿಸಿದರು. ನಮ್ಮಲ್ಲಿ ಎಷ್ಟೇ ಬದಲಾವಣೆ, ಬೆಳವಣಿಗೆಗಳಾಗಿದ್ದರೂ, ಅದನ್ನು ಒಪ್ಪುತ್ತಿರಲಿಲ್ಲ. ಗೇಲಿ ಮಾಡಲು ಕೂಡ ಪ್ರಾರಂಭಿಸಿದರು. ಈ ಕುಟುಂಬದ ಮುಖ್ಯಸ್ಥರು ಸಾಮಾಜಕವಾಗಿ ಗಣ್ಯರು. ಆದ್ದರಿಂದ ನಮಗೆ ಅವರ ಸಂಬಂಧವನ್ನು ಬಿಡಲು ಭಯ ಕೂಡ. ಕೊನೆಗೆ ಉಸಿರಾಡುವುದೇ ಕಷ್ಟವಾಗಿ ಸಂಬಂಧ ಬಿಡಬೇಕಾಯಿತು.

ಹೀಗೆ ನಿಮಗೆ ಪ್ರತಿಯೊಬ್ಬರಿಗೂ ಅವರವರದೇ ಕಾರಣಗಳು, ನೋವು, ಅವಮಾನಗಳಿರುತ್ತವೆ. ಸಂಬಂಧಗಳನ್ನು ತೊರೆಯುತ್ತೀರಿ. ಹೀಗೆ ತೊರೆಯುವಾಗ ಸಂಬಂಧಪಟ್ಟವರಿಗೆ ಹೇಳಿ ತೊರೆಯಬೇಕೋ, ಇಲ್ಲ ಹಾಳು ಪೀಡೆ ಕಾಲ ಕ್ರಮೇಣ ಕಳೆದುಹೋಗಲಿ ಎಂದು ಸುಮ್ಮನಾಗಬೇಕೋ? ಇದು ಅವರವರ ಸ್ವಭಾವಕ್ಕೆ ಬಿಟ್ಟದ್ದು. ನನ್ನ ಪ್ರಕಾರ ನೇರವಾಗಿ ಹೇಳಿ, ನಮ್ಮ ನಿಲುವನ್ನು ವಿವರಿಸಿ ಸಂಬಂಧ ತೊರೆಯುವುದೇ ಒಳ್ಳೆಯದು. ಹೀಗೆ ಮಾಡಿದಾಗಲೆಲ್ಲ ನನ್ನ, ನನ್ನ ಕುಟುಂಬದ ಸಂತೋಷ, ನೆಮ್ಮದಿ, ಸ್ವಾತಂತ್ರ್ಯ ವಿಸ್ತರಿಸಿದೆ.

ಹೀಗೆ ತೊರೆಯಬೇಕಾದ ಸಂಬಂಧಗಳು ಆಪ್ತ ಸಂಬಂಧಗಳಾಗಿರುತ್ತವೆ. ದೀರ್ಘಕಾಲದ ಸಂಬಂಧಗಳೂ ಆಗಿರುತ್ತವೆ. ಹಾಗಿರುವಾಗ ಹೇಗೋ ಹೊಂದಾಣಿಕೆ ಮಾಡಿಕೊಂಡು, ಬದುಕಿನಲ್ಲಿ ಉಳಿದಿರುವ ನಾಲ್ಕು ದಿನ ಹಾಗೇ ಕಳೆಯಬಾರದೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಜಾನ್‌ ಅಪ್‌ಡೈಕ್‌ ಎಂಬ ಲೇಖಕನ ಪ್ರಕಾರ, ಆಪ್ತ ಸಂಬಂಧಗಳಲ್ಲೇ, ದೀರ್ಘಕಾಲೀನ ಸಂಬಂಧಗಳಲ್ಲೇ ಹಿಂಸೆ, ಶೋಷಣೆ ಜಾಸ್ತಿ. ಅಂತಹ ಸಂಬಂಧಗಳನ್ನು ಗಮನಿಸಿ ಸೂಕ್ತ ಕಾಲದಲ್ಲಿ ತೊರೆಯುವುದೇ ಸರಿಯಾದ ಮಾರ್ಗ ಎಂಬುದು ಆತನ ಬುದ್ಧಿಮಾತು. ಈ ನೋಟವನ್ನು ಒಪ್ಪಿದ ಮಿತ್ರರೊಬ್ಬರು ಒಂದು ಉಪಾಯದ ಮಾರ್ಗವನ್ನು ಕಂಡುಕೊಂಡಿದ್ದರು. ಎರಡು-ಮೂರು ವರ್ಷವಾದ ನಂತರ ಸಂಬಂಧಗಳಿಂದ ಏನಾದರೂ ನೆಪ ತೆಗೆದು ದೂರವಾಗಿಬಿಡುತ್ತಿದ್ದರು. ಆದರೆ ಎಲ್ಲರ ಒಳ್ಳೆಯ ಅಭಿಪ್ರಾಯವು ತಮ್ಮ ಪರವಾಗಿರುವಂತೆ ಸಕಲರೊಡನೆ ಉಗುರು ಬೆಚ್ಚಗಿನ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ಸಂಬಂಧ ತೊರೆಯುವ ಸಂದರ್ಭ ಬಂದಾಗ ಕಾರಣಗಳನ್ನು ಎಲ್ಲರಿಗೂ ತಿಳಿಸಬೇಕೆ ಬೇಡವೇ ಎಂಬ ಪ್ರಶ್ನೆ ಎದುರಾಗುತ್ತದೆ. ಸಂಬಂಧಪಟ್ಟವರಿಗೆ ತಿಳಿಸಿದರೆ ಸಾಕು ಎಂಬುದು ಎಲ್ಲರೂ ಒಪ್ಪುವ ಮಾತು. ಆದರೆ ಕೆಲವು ಸಂಬಂಧಗಳು ವಿಚಿತ್ರವಾಗಿರುತ್ತವೆ. ಒಂದು ಗುಂಪಾಗಿ ನಾವು ಎಲ್ಲ ಸ್ನೇಹಿತರು ಒಂದು ಸಂಬಂಧವನ್ನು ಬಹಿಷ್ಕರಿಸಿ ಹಾಗೆಂದು ಜಗತ್ತಿಗೆಲ್ಲ ಸಾರಬೇಕಾಯಿತು. ಎಲ್ಲರೂ ಸಮಾನಸ್ಕಂದರೇ, ಅನುಕೂಲಸ್ಥರೇ, ನಯನಾಜೂಕಿನವರೇ. ಆತ ಕೂಡ. ಆದರೆ ಆತನಿಗೆ ಇನ್ನೊಬ್ಬರ ದಾಂಪತ್ಯ ಸಂಬಂಧಗಳ ಬಗ್ಗೆಯೇ ಗೀಳು. ಯಾರು ಎಷ್ಟು ಸುಖವಾಗಿದ್ದಾರೆ, ಆಗಿಲ್ಲ ಎಂಬುದರ ಬಗ್ಗೆಯೇ ಆತನಿಗೆ ಕಾಳಜಿ. ಕಾಳಜಿ ಮಾತ್ರವಾಗಿದ್ದರೆ ಪರವಾಗಿಲ್ಲ, ತನ್ನ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ತೇಲಿಬಿಡುತ್ತಿದ್ದ, ಚರ್ಚಿಸುತ್ತಿದ್ದ. ಎಲ್ಲ ಹೆಂಗಸರು ತನಗೆ ಆಪ್ತರು. ಸಮಸ್ಯೆಗಳನ್ನೆಲ್ಲ ನನ್ನ ಹತ್ತಿರ ಬಂದು ನಿವೇದಿಸಿಕೊಳ್ಳುತ್ತಾರೆ ಎಂಬ ಪ್ರಚಾರ ಬೇರೆ. ನಮ್ಮ ಗುಂಪಿನಲ್ಲಿ ಯಾರೊಬ್ಬರಿಗೂ ಖಾಸಗಿ ಬದುಕು, ಗುಟ್ಟುಗಳು ಉಳಿಯುವುದೇ ಕಷ್ಟವಾಯಿತು. ಬುದ್ಧಿಮಾತು ಕೂಡ ಹೇಳಿಸಿದೆವು. ಪ್ರಯೋಜನವಾಗಲಿಲ್ಲ. ಕೊನೆಗೆ ಸಾರ್ವಜನಿಕವಾಗಿ ಘೋಷಿಸಿ ಸಂಬಂಧ ತೊರೆಯಬೇಕಾಯಿತು. ನೋವಿನ ಸಂಗತಿಯೆಂದರೆ, ನಮ್ಮ ನಿಲುವಿನಿಂದಾಗಿ ಆತನ ಹೆಂಡತಿ-ಮಕ್ಕಳಿಗೆ ಮುಜುಗರವಾಯಿತು, ಹಿಂಸೆಯಾಯಿತು.

ಒಮ್ಮೊಮ್ಮೆ ನಮಗೆ ಆಪ್ತರಾಗಿದ್ದವರು ನಮ್ಮನ್ನು ನೋಡುವ ದೃಷ್ಟಿಕೋನ ಬದಲಿಸಕೊಂಡಾಗ ಸಂಬಂಧ ತೊರೆಯಬೇಕಾಗುತ್ತದೆ. ನನ್ನದು ಮತ್ತು ಒಬ್ಬ ಗೆಳೆಯನದು ಒಂದೇ ಜೀವನಶೈಲಿ, ಮನೋಧರ್ಮ, ಕೌಟುಂಬಿಕ ಆಕಾಂಕ್ಷೆಗಳು. ಇದ್ದಕ್ಕಿದ್ದಂತೆ ಜೀವನದ ಒಂದು ಹಂತದಲ್ಲಿ ಆತನ ನಿಲುವು, ಧೋರಣೆ ಬದಲಾಯಿತು. ಕಾರಣಗಳು ಗಂಭೀರವಾಗಿರಲಿಲ್ಲ. ಆತನ ಜಾತಿಯವರು ಮಂತ್ರಿಗಳಾದರು, ಅಧಿಕಾರಸ್ಥರಾದರು. ಗೆಳೆಯನ ಮನೆತನದೊಡನೆ ವೈವಾಹಿಕ ಸಂಬಂಧ ಕೂಡ ಬೆಳೆಯಿತು. ಅಜೀವ ಗೆಳೆಯನೆಂದು ನಾನು ತಿಳಿದಿದ್ದವನು ತನ್ನ ಹೊಸ ಸಂಬಂಧಕ್ಕನುಗುಣವಾಗಿ ನನ್ನನ್ನೂ, ನನ್ನ ಕುಟುಂಬವನ್ನೂ ಒಂದು ನಿರ್ದಿಷ್ಟ ವಿಚಾರ, ಜಾತಿ, ಜೀವನಶೈಲಿಯ ಪ್ರತೀಕವಾಗಿ ಕಾಣಲು ಪ್ರಾರಂಭಿಸಿದ. ಅದು ತಪ್ಪೆಂದು, ನಾವು ಒಂದು ಸಾಧಾರಣ ಕುಟುಂಬದವರು, ನಾವು ಯಾವುದೇ ಜೀವನಶೈಲಿ, ವಿಚಾರ, ಧರ್ಮಗಳನ್ನು ಪ್ರತಿನಿಧಿಸುವುದಕ್ಕಾಗಿ ಹುಟ್ಟಿಲ್ಲವೆಂದು ತಿಳಿಸಿದರೂ, ಆತ ನಮ್ಮನ್ನು ಕೀಳಾಗಿ ಕಾಣಲಾರಂಭಿಸಿದ. ಸಂಬಂಧ ಬೇಡವೆಂದರೂ, ಇಲ್ಲ ಇಲ್ಲ ನೀವು ನಾನು ನೋಡುತ್ತಿರುವ ಕ್ರಮವನ್ನು ಸಹಿಸಿಕೊಳ್ಳಲೇಬೇಕು ಎಂದು ಹಿಂಸೆ ಮಾಡಿದ. ಸಂಬಂಧವನ್ನು ತೊರೆಯದೇ ಏನು ಮಾಡಬೇಕು ಹೇಳಿ?

ವಿದ್ಯಾವಂತರಾಗಿದ್ದರೂ, ಅಗರ್ಭ ಶ್ರೀಮಂತರಾಗಿದ್ದರೂ, ಸಾಕ್ಷಾತ್‌ ಸೋದರರೇ ಆಗಿದ್ದರೂ ಸಂಬಂಧವನ್ನು ತೊರೆಯಬೇಕಾಗುತ್ತದೆ. ಇಡೀ ದೇಶಕ್ಕೆ ಪ್ರಸಿದ್ಧವಾದ ಒಂದು ವಣಿಕ ಕುಟುಂಬದ ಒಡೆಯನಿಗೆ ಇಬ್ಬರು ಗಂಡು ಮಕ್ಕಳು. ಮಕ್ಕಳ ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಬಂತು. ಅದೂ ಮಕ್ಕಳ ವಿಷಯಕ್ಕೆ. ಯಾರ ಮಕ್ಕಳು ಎಷ್ಟು ಬುದ್ಧಿವಂತರು ಎಂಬ ಕಾರಣಕ್ಕೆ. ಜೊತೆಗೆ ಒಬ್ಬ ಮಗ ಅಂತರ್‌ಜಾತೀಯ ವಿವಾಹವಾಗಿದ್ದ. ಶ್ರೀಮಂತ ತಂದೆಗೆ ಇಂತಹ ವಿವಾಹದಿಂದ ಹುಟ್ಟುವ ಮೊಮ್ಮಕ್ಕಳಿಗೆ ಆಸ್ತಿಪಾಸ್ತಿ ಕೊಡುವ ಮನಸ್ಸಿರಲಿಲ್ಲ. ಸ್ವಂತ ಜಾತಿಯೊಳಗೇ ಮದುವೆಯಾಗಿದ್ದ ಮಗನ ಮಕ್ಕಳಿಗೇ ಆಸ್ತಿ ನೀಡುವ ಆಸೆ. ಅಷ್ಟು ದೊಡ್ಡ ಕುಟುಂಬವಾಗಿದ್ದರೂ ಭಿನ್ನ ರೀತಿಯ ವಿವಾಹವಾಗಿದ್ದ ಮಗನ ಕುಟುಂಬಕ್ಕೆ ದಿನನಿತ್ಯ ಕಿರುಕುಳ, ಹಿಂಸೆ. ಕೇವಲ ಆತ್ಮಗೌರವವನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಕುಟುಂಬ ಕಾನೂನಿನ ಪ್ರಕಾರವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಸಂಬಂಧ ತೊರೆದು, ಮಧ್ಯಮವರ್ಗದ ಜೀವನಶೈಲಿಯಲ್ಲಿ ಬದುಕು ಸವೆಸಬೇಕಾಯಿತು. ಬೇಸರದ ಒಂದೇ ಸಂಗತಿಯೆಂದರೆ, ತಂದೆ ಯಾವ ಮಗನ ಪರವಾಗಿ ನಿಂತಿದ್ದನೋ ಆ ಮಗನ ಕುಟುಂಬ ಸಕಲ ರೀತಿಯ ಏಳಿಗೆಯನ್ನು ಕಂಡಿತು.

ಏನೂ ಕಾರಣವಿಲ್ಲದೆ ಬದಲಾಗುವ, ಒಳಸರಿಯುವ ಮನುಷ್ಯನ ಸ್ವಭಾವದಿಂದಲೂ ಸಂಬಂಧ ಯಾರ ಪ್ರಯತ್ನವಿಲ್ಲದೆಯೂ ತೊರೆದುಹೋಗಬಹುದು. ಗೆಳೆಯನೊಬ್ಬನಿದ್ದ. ಆತನಿಗೂ, ಪತ್ನಿಗೂ ಇದ್ದ ಒಂದೇ ಒಂದು ನಂಬಿಕೆಯೆಂದರೆ, ಯಾರೊಬ್ಬರೂ ಇನ್ನೊಬ್ಬರನ್ನು ನಿಜವಾಗಿ ಪ್ರೀತಿಸುವುದಿಲ್ಲವೆಂಬುದು. ಯಾವುದೇ ಒಡನಾಟವನ್ನು ಹತ್ತು-ಇಪ್ಪತ್ತು ವರ್ಷಗಳ ಕಾಲ ಪರೀಕ್ಷಿಸದೆ ಒಪ್ಪಿಕೊಳ್ಳಬಾರದೆಂಬ ನಿಲುವು ಅವನದು. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಮಗೆ ಸಾಧ್ಯವಾಗುವುದಿರಲಿ, ಅಂತಹ ಪರೀಕ್ಷೆಗೆ ಅಭ್ಯರ್ಥಿಯಾಗಿ ಕೂರುವಷ್ಟು ಧೈರ್ಯವೂ ಇರಲಿಲ್ಲ. ನಾವ್ಯಾರೂ ಅವನನ್ನು ತೊರೆಯಲಿಲ್ಲ. ಅವನೇ ಎಲ್ಲರನ್ನೂ ತೊರೆದುಹೋದ. ಇನ್ನೂ ತೊರೆಯುತ್ತಲೇ ಇದ್ದಾನೆ.

ಗಂಡು-ಹೆಣ್ಣಿನ ಸಂಬಂಧದಲ್ಲಿ ಒಂದು ಹಂತದ ನಂತರ ತೊರೆಯುವುದರಿಂದ ಪರಸ್ಪರ ಅನುಕೂಲವಾಗುತ್ತದೆ ಎಂಬ ಒಂದು ಅಭಿಪ್ರಾಯವೂ ಇದೆ. ದಾಂಪತ್ಯ, ಕುಟುಂಬವೆಂಬುದು ಒಂದು ಅನಿವಾರ್ಯ ಸಂಸ್ಥೆ ನಿಜ. ಆದರೆ ದಾಂಪತ್ಯ ಜೀವನವೆಂಬುದು ಒಂದೇ ಗಂಡು ಹೆಣ್ಣಿನ ನಡುವೆ ಮಾತ್ರವೇ ಆಗಬೇಕಾಗಿಲ್ಲ ಎಂಬುದನ್ನು ಪಾಶ್ಚಿಮಾತ್ಯ ಸಮಾಜ ಮಾತ್ರ ಹೇಳುತ್ತಿಲ್ಲ, ಗಂಡು-ಹೆಣ್ಣಿನ ಸಂಬಂಧದಲ್ಲಿ ಪರಸ್ಪರ ಅನುರಾಗ ಮುಖ್ಯವೇ ಹೊರತು, ಎಲ್ಲ ಸನ್ನಿವೇಶಗಳಲ್ಲೂ ಗಂಡು-ಹೆಣ್ಣು ಗಂಡ-ಹೆಂಡತಿಯರಾಗುವ ಅವಶ್ಯಕತೆಯಿಲ್ಲವೆಂದು ಮಾಸ್ತಿಯವರೇ ಬರೆಯುತ್ತಾರೆ. ಕಾರಂತರು ಕೂಡ ದಾಂಪತ್ಯದ ವಿಚ್ಛೇದನದಿಂದಲೇ ಹಲವು ಸಲ ಅನುಕೂಲಕರ ಬೆಳವಣಿಗೆಗಳು ಆಗುತ್ತವೆ ಎಂದು ಅಭಿಪ್ರಾಯ ಪಡುತ್ತಾರೆ. ಮದುವೆಯಾಗುವಾಗ ಗಂಡು-ಹೆಣ್ಣುಗಳಿಗಿರುವ ಪರಸ್ಪರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಿಲ್ಲವಾಗಿ, ಪರಸ್ಪರ ತೊರೆಯುವುದು ಅನಿವಾರ್ಯ ಮಾತ್ರವಲ್ಲ, ಮೌಲಿಕ ಕೂಡ ಎಂದು ವಿಚ್ಛೇದನಾ ಪರಿಣಯದ ಪರಿಣತರು ಹೇಳುವರು. ನಾನು ಸಾಕಷ್ಟು ಹತ್ತಿರದಿಂದ ಬಲ್ಲ ಒಂದು ಪಾರ್ಸಿ ಕುಟುಂಬದಲ್ಲಿ ಮಗ-ಮಗಳಿಬ್ಬರ ವಿವಾಹವು ಸರಿಯಾಗಿ ಕುದುರದೆ ಇಬ್ಬರೂ ವಿಚ್ಛೇದನಕ್ಕೆ ತಯಾರಾದರು. ಮಕ್ಕಳ ವಿವಾಹಗಳೇಕೆ ಸರಿಯಾಗಿ ಕುದುರುವುದಿಲ್ಲ ಎಂದು ತಂದೆ-ತಾಯಿಗಳ ನಡುವೆಯೇ ತೀವ್ರ ಭಿನ್ನಾಭಿಪ್ರಾಯ, ಮನಸ್ತಾಪ. ಇದು ಯಾವ ಹಂತಕ್ಕೆ ಹೋಯಿತೆಂದರೆ, ತಂದೆ-ತಾಯಿಗಳು ಕೂಡ ವಿಚ್ಛೇದನಕ್ಕೆ ಕೋರ್ಟ್‌ ಹತ್ತಿದರು. ಮುಂಬೈ ಬಿಟ್ಟು ಹತ್ತು-ಹನ್ನೆರಡು ವರ್ಷಗಳ ನಂತರ ತಿಳಿದುಬಂದದ್ದೆಂದರೆ, ಮೂರೂ ಸಂಸಾರಗಳ ಸದಸ್ಯರು ತೊರೆದ ನಂತರ ಸುಖವಾಗಿದ್ದಾರೆಂಬುದು. ತೊರೆಯುವಿಕೆ ಕುಟುಂಬದ ಎಲ್ಲ ಸದಸ್ಯರ ನೆರವಿಗೆ ಬಂದಿತ್ತು.

ಏಕೆ ನನಗೆ ಈ ರೀತಿಯ ತೊರೆಯುವಿಕೆಯ ಬಗ್ಗೆ ಇನ್ನಿಲ್ಲದ ಆಕರ್ಷಣೆ. ನನ್ನ ಬಾಲ್ಯದ ಅನುಭವವೇ? ನಾನು ಪಡೆದ ಶಿಕ್ಷಣವೇ? ನಾ ಕಂಡ ಶಿಕ್ಷಕ-ಶಿಕ್ಷಕಿಯರೇ? ನನಗೆ ಸಿಕ್ಕಿದ ಪಾಠ ಹೇಳಿಕೊಟ್ಟ ಮೇಡಂಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತೊರೆದವರೇ, ತೊರೆಸಿಕೊಂಡವರೇ ಆಗಿದ್ದರು. ಗಾಯತ್ರಿ ಮೇಡಂನ್ನು ತೊರೆದಿದ್ದ ಗಂಡ ಹಿಂಸೆ ಮಾಡುತ್ತಲೇ ಇದ್ದ. ಜಾನಕಮ್ಮನ ಗಂಡ ಹೆಂಡತಿಯನ್ನು ತೊರೆದುಬಿಟ್ಟಿದ್ದ. ಮುಂದಿನ ಹಂತವಾಗಿ ಮಗನನ್ನು ಕೂಡ ತಾಯಿಯಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದ. ಸುನಂದಾ ಮೇಡಂ ಡಬಲ್‌ ಎಂ.ಎ ಮಾಡಿದ್ದರೂ, ಗಂಡಸರ ಸಹವಾಸವೇ ಬೇಡವೆಂದು ಸಂಸಾರ ಹೂಡದೆ ಕೂಡ ಸಂಸಾರವನ್ನು ತೊರೆದಿದ್ದರು. ಲೈಂಗಿಕ ಜಾತಕ ಕಾದಂಬರಿಯ ಸದಾಶಿವಯ್ಯ, ಶಿವನಾಗಮ್ಮ ಎದುರು ಮನೆಯಲ್ಲೇ ಇದ್ದು, ಗಂಡ-ಹೆಂಡತಿ ಮೂವತ್ತು-ನಲವತ್ತು ವರ್ಷಗಳ ವರೆಗೆ ಮಾತನಾಡದೆ ಜೀವನ ಕಳೆದರು. ಮಿಲ್‌ ನರಸಿಂಹಯ್ಯ, ಮನೆ ಒಳಗೇ ಮಲಗದೆ ಇಡೀ ಸಂಸಾರವನ್ನು ತೊರೆದಿದ್ದ. ನಂದಿನಿ ಮೇಡಂ ಮೊದಲು ಗಂಡನನ್ನು ತೊರೆದಿದ್ದರು. ಮಗ ಜಯರಾಂ ಮದುವೆ ಆದಮೇಲೆ, ಅವನನ್ನು, ಸೊಸೆಯನ್ನು ತೊರೆದು ರಮಣಾಶ್ರಮಕ್ಕೆ ಹೋಗಿ ಸೇರಿಕೊಂಡು ಸಂಗೀತ ಶಿಕ್ಷಕಿಯಾದರು.

ಊರವರೆಲ್ಲರ ಸಂಗತಿ ಬೇಡ. ನಮ್ಮ ಮನೆಯಲ್ಲೇ, ದಾಯಾದಿಗಳಲ್ಲೇ, ನಮ್ಮಜ್ಜಿ ಅವರಣ್ಣ-ಅತ್ತಿಗೆ ಜೊತೆ ಸುಮಾರು ಆರೇಳು ದಶಕಗಳ ಕಾಲ ಮಾತಾಡದೆ, ಪಕ್ಕದ ಮನೆಯಲ್ಲೇ ಇದ್ದರು. ಹೀಗೆ ತೊರೆದು ಇರುವುದು ತಮ್ಮ ಆತ್ಮಗೌರವಕ್ಕೆ ಅಗತ್ಯವಾಗಿತ್ತು ಎಂದು ಅಜ್ಜಿ ಪದೇ ಪದೇ ಹೇಳಿಕೊಳ್ಳುತ್ತಿದ್ದಾಗ ನನಗೆ ಅರ್ಥವಾಗುತ್ತಿರಲಿಲ್ಲ. ಈಗ ಅವರ ನಿಲುವು ಅತ್ಯಗತ್ಯವಾಗಿತ್ತು ಅನಿಸುತ್ತದೆ. ಇನ್ನೊಬ್ಬ ಬಂಧು ಎಲ್ಲರ ಜೊತೆ ಜಗಳ ಕಾಯ್ದು ವರ್ಷಾನುಗಟ್ಟಲೆ ಮಾತು ಬಿಟ್ಟವರ, ಸಂಬಂಧ ತೊರೆದವರ ಪಟ್ಟಿಯನ್ನು ಇಟ್ಟುಕೊಂಡಿದ್ದರು. ಸ್ವತಃ ಅವರೇ ಒಬ್ಬ ಹತ್ತಿರ ಹನ್ನೆರಡು ವರ್ಷ ಮಾತನಾಡದೆ ಮತ್ತೆ ಅವರಿಬ್ಬರೂ ಮಾತನಾಡುವಂತೆ ಮೊದಲು ಮಾರುತಿ ಗುಡಿಗೆ ಕರೆಸಿ ಇಬ್ಬರ ಮುಖವನ್ನೂ ಎಣ್ಣೆಯಲ್ಲಿ ಪರಸ್ಪರ ತೋರಿಸಿ ನಂತರ ಮಾತನಾಡುವಂತೆ ಮಾಡಿದ ಶಾಸ್ತ್ರವನ್ನು ಕೂಡ ನೋಡಿದ್ದೆ. ಹೀಗೆ ಇವರಿಬ್ಬರೂ ಮಾನಾಡುವಂತೆ ಮೊದಲು ಮಾಡಲು ವಿದೇಶಾಂಗ ಸಚಿವರ ಶೃಂಗಸಭೆಗಳಿಗೆ ನಡೆಸಿದಷ್ಟು ಪೂರ್ವ ತಯಾರಿಯನ್ನು ನಡೆಸಲಾಗಿತ್ತು. ಕ್ಯಾಕರಿಸಿ ಉಗಿದು ಸಂಬಂಧ ತೊರೆಯುವುದು ಒಂದು ನುಡಿಗಟ್ಟೇ ಆಗಿತ್ತು. ಹೀಗೆ ಕ್ಯಾಕರಿಸಿ ಉಗಿದು, ನಿನ್ನ ಸಂಬಂಧ ತೊರೆದುಬಿಟ್ಟೆ ಎಂದು ಘೋಷಿಸುವ ಸ್ಥಳ ನಮ್ಮಜ್ಜಿ ಮನೆಯ ಮುಂದೆ ಇದ್ದುದರಿಂದ ಎರಡು-ಮೂರು ದಿನಕ್ಕೊಮ್ಮೆ ಇಂತಹ ಪ್ರಸಂಗಗಳನ್ನು ನಾನು ನೋಡುತ್ತಲೇ ಇದ್ದೆ.

ಮುಂದೆ ನಾನು ಸೇರಿಕೊಂಡ ನಯನಾಜೂಕಿನ ಮಧ್ಯಮವರ್ಗದಲ್ಲಿ ಎಲ್ಲವೂ ಮುಸುಕಿನೊಳಗಿನ ಗುದ್ದಾಟವೇ! ಆದ್ದರಿಂದ ಏನೋ ಒಂದು ವಿಶಿಷ್ಟವಾದ ಅನುಭವವನ್ನು ಕಳೆದುಕೊಂಡಂತಾಗಿ ಜೀವನದಲ್ಲಿ ಕೊರೆಯ ಭಾವನೆಯನ್ನು ಅನುಭವಿಸಿದೆ. ಆದರೆ ಬಾಲ್ಯ ಜೀವನದ ಪರಿಣಾಮವೋ ಏನೋ, ನಾನು ಸಂಬಂಧ ತೊರೆಯುವುದಿರಲಿ, ನನ್ನ ಸಂಬಂಧವನ್ನು ತೊರೆದುಹೋಗುವವರ ಸಂಖ್ಯೆ ಕೂಡ ಸಾಕಷ್ಟಿತ್ತು. ಊರಿಂದ ಊರಿಗೆ ವರ್ಗವಾಗುತ್ತಾ ಹೋಗುವಾಗ ಯಾವ-ಯಾರ ಸಂಬಂಧವೂ ಶಾಶ್ವತವಾಗಿ ಉಳಿಯುವುದಿಲ್ಲ ಎನ್ನುವುದು ರೂಢಿಯ ಮಾತು. ಹಾಗಿಲ್ಲದೆ ಕೂಡ ನನ್ನನ್ನು ಪ್ರಜ್ಞಾಪೂರ್ವಕವಾಗಿ ತೊರೆದುಹೋದವರ ಬಗ್ಗೆ ಕೂಡ ಒಂದು ವಿಶ್ವಕೋಶ ತಯಾರಿಸಿದೆ. ನನ್ನನ್ನು ಏಕೆ ತೊರೆದುಹೋದರು ಎಂಬುದರ ಕಾರಣಗಳನ್ನು ಹಂಚಿಕೊಳ್ಳಲು ತುಂಬಾ ಮುಜುಗರವಾಗುತ್ತದೆ. ಪರಸ್ಪರ ಅನುಕೂಲ, ಒತ್ತಾಸೆಗಳಿಲ್ಲದ್ದರಿಂದ ಹೀಗಾಗಿ ಹೋಯಿತು ಎನ್ನುವುದು ಒಂದು ಸಾರ್ವತ್ರಿಕ ಕಾರಣ, ಎಲ್ಲರಿಗೂ ಅನ್ವಯಿಸುವಂಥದ್ದು.


ಇದೆಲ್ಲವೂ ಕೊನೆಗೆ ವೈಯಕ್ತಿಕ ವಿಚಾರ, ನೋವಿನ ವಿಚಾರ ಎಂಬುದೂ ನಿಜ. ಒಂದು ಹಂತದ ನಂತರ ಸಂಬಂಧ ನನಗೆ ಅಗತ್ಯವಿಲ್ಲ, ಇಂಥವರ ಸಂಬಂಧ ನನಗೆ ಒಗ್ಗುವುದಿಲ್ಲ ಎಂದು ಹೇಳಿ ತೊರೆದುಹೋಗುವ ಹಕ್ಕು ಪ್ರತಿಯೊಬ್ಬರಿಗೂ ಇದ್ದೇ ಇದೆ. ಆದರೆ ಮುಂದಿನ ಸಂಬಂಧಗಳನ್ನು ಕೂಡ ಹೀಗೆ, ಇದೇ ಕಾರಣಕ್ಕೆ ತೊರೆದುಹೋಗುವುದಿಲ್ಲ ಎಂದು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿಲ್ಲ. ಬದುಕಿನ ಯಾವುದೇ ಹಂತದಲ್ಲಾದರೂ, ಯಾರಿಗೇ ಆದರೂ, ಜೀವನ ಸಾಗಿಸುವುದಕ್ಕೆ ಮೂರು-ನಾಲ್ಕು ಸಂಬಂಧಗಳು ಸಾಕಂತೆ. ಇದಕ್ಕಿಂತ ಹೆಚ್ಚಿಗೆ ಒಡನಾಟವಿದ್ದರೆ, ಅದೆಲ್ಲ ಸಂಬಂಧವಲ್ಲ, ಸಂಪರ್ಕವಾಗುತ್ತದೆ. ಇನ್ನೂ ಮುಖ್ಯವಾಗಿ ನಾವು ಇನ್ನೊಬ್ಬರ ಸಂಬಂಧವನ್ನು ತೊರೆದುಬಿಡುವ ಹಾಗೆ ಇನ್ನೊಬ್ಬರಿಗೂ ನಮ್ಮೊಡನೆ ಇರುವ ಸಂಬಂಧವನ್ನು ಯಾವ ಕಾರಣವೂ ಇಲ್ಲದೆ ತೊರೆದಬಿಡುವ ಹಕ್ಕಿದೆ ಎಂಬುದನ್ನು ಕೂಡ ಮನ್ನಿಸಬೇಕು.