ಅಲ್ಲಿಯವರೆಗೆ ಹೂವುಗಳೆಲ್ಲ ಮಳೆಮಾಯಿಯನ್ನೇ ಭಜಿಸುತ್ತ, ಮಳೆಗಾಲದಲ್ಲೇ ಅರಳುತ್ತಿದ್ದವು. ಆದರೆ ಒಂದು ದಿನ  ಪುಷ್ಪರಾಜ ತನ್ನವರನ್ನೆಲ್ಲ ಕರೆದು ಆಜ್ಞಾಪಿಸಿದ. “ನೋಡಿ ಹೂಗಿಡಗಳೆ, ಇನ್ನುಮುಂದೆ ನೀವೆಲ್ಲಾ ಬೇಸಿಗೆಯಲ್ಲಿಯೇ ಅರಳಬೇಕು. ಬೇಸಿಗೆಯಲ್ಲಿ ಭೂಮಿಯಮ್ಮ ತುಂಬ ಬಳಲಿರುತ್ತಾಳೆ. ನಮಗೆಲ್ಲ ಆಧಾರವಾಗಿರುವ ಭೂಮಿಯಮ್ಮನಿಗೆ ನಾವು ಸ್ವಲ್ಪವಾದರೂ ಸಂತೋಷವನ್ನು ಮೂಡಿಸಬೇಕು’’ ಎಂದು ಆದೇಶಿಸಿದ.  ಅಂದಿನಿಂದ ಹೂವುಗಳೆಲ್ಲ ಬೇಸಿಗೆಯಲ್ಲಿ ಅರಳಲು ಶುರುವಾದವು. ‘ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂದು ಭೂಮಿಯಮ್ಮ ನಕ್ಕಳು.  ಆದಿಯಲ್ಲಿ ನಡೆದ ಈ ಬದಲಾವಣೆಯ ಬಳಿಕ ಚರಾಚರ ಜಗತ್ತಿನಲ್ಲಿ ಸಾವಿರಾರು ಬದಲಾವಣೆಗಳು ಶುರುವಾದವು. ಮಳೆಮಾಯಿಯ ಸವಾರಿ ಕತೆಯೊಂದನ್ನು ಹೆಣೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ 

ಪೂರ್ವ:
ಕೋಟ್ಯಾನುಕೋಟಿ ವರ್ಷಗಳ ಹಿಂದೆ ಈ ಭೂಮಿ ಸೃಷ್ಟಿಯಾಯ್ತಲ್ಲ. ಆಗ ಸಾವಿರಾರು ವರ್ಷಗಳ ಕಾಲ ಬರೀ ಮಳೆ, ಬರೀ ಬಿಸಿಲೇ ಬಂದೂ ಬಂದೂ ಭೂಮಿಗೆ ಬೇಸರವಾಗಿ ಹೋಯಿತು.

ಈ ಏಕತಾನತೆಯ ಬದಲಿಗೆ ಏನಾದರೂ ವಿನೂತನವಾದ ಕೆಲಸ ಮಾಡೋಣ ಎಂದು ಯೋಚಿಸಿದ ಪ್ರಕೃತಿ ದೇವಿ ಋತುಗಳನ್ನು ರಚನೆ ಮಾಡಿದಳು. ಅವುಗಳಿಗೆ ಬೇಸಿಗೆ, ಮಳೆ ಚಳಿಗಾಲ ಎಂದು ಹೆಸರಿಟ್ಟು ಅವು ಅನುಕ್ರಮವಾಗಿ ಬರುವಂತೆ ಸೂಚನೆ ನೀಡಿದಳು.
ಆಗ ಮೂರು ಋತುಗಳ ಪೈಕಿ ಮಳೆಗಾಲದ್ದೇ ಜೋರು ಕಾರುಬಾರು ಆಗಿತ್ತು. ಭಾರೀ ಭಾರೀ ಕಗ್ಗಾಡುಗಳು, ಮೋಡದೊಡನೆ ಗುದ್ದಾಡುವಂತೆ ತೋರುವ ಭಾರೀ ಬೆಟ್ಟಗಳು, ಸಮುದ್ರದಂತೆ ಬೋರ್ಗರೆಯುತ್ತ ಓಡುವ ನದಿಗಳು…ಅಬ್ಬಬ್ಬಾ… ಮಳೆಗಾಲ ಶುರುವಾಯಿತೆಂದರೆ ಕಾಡುಗಳು ಮತ್ತಷ್ಟು ಸೊಕ್ಕಿನಿಂದ ಮೆರೆಯುತ್ತಿದ್ದವು. ಬೆಟ್ಟಗಳು ತರಾವಳಿಯ ಹಸಿರು ಅಂಗಿಗಳನ್ನು ಹಾಕಿಕೊಂಡು ಜಂಭ ಪಡುತ್ತಿದ್ದವು. ಹಸಿರಿನಲ್ಲಿಯೇ ನೂರು ನಮೂನೆಗಳು. ನದಿಗಳೊ…ಒಮ್ಮೆ ಮೃದುವಾದ ತಂತಿವಾದ್ಯದ ಸಗರಿಗಮಾ…ಗರಿಸ… ಸಂಗೀತದಂತೆ ಹರಿದರೆ, ಮತ್ತೆ ತರಿಕಿಟ..ತಕಿಟ ಎಂಬಂತೆ ಚೆಂಡೆಯ ಲಯಧ್ವನಿಯನ್ನು ಹೊಮ್ಮಿಸಿ ಹರಿಯುತ್ತಿದ್ದವು. ಮನಸ್ಸಾದರೆ ಡೋಲಿನ ಏರುಧ್ವನಿಯಲ್ಲಿ ಹರಿದು ರಂಪಾಟದಂತೆ ತೋರಿ ನಗಾರಿ ಧ್ವನಿಯನ್ನೂ ಮೀರಿ ಸದ್ದು ಮಾಡುತ್ತಿದ್ದವು.

ಇಂತಹ ಮಳೆಗಾಲವೆಂಬ ಸಾಮ್ರಾಜ್ಯದ ಮಹಾರಾಣಿಯೇ ಮಳೆಮಾಯಿ. ಆಕೆ ಚಿಗರೆಗಣ್ಣಿನ ಲಲನೆಯಲ್ಲ. ರವಿವರ್ಮನ ಚಿತ್ರಪಟದಂತೆ ಪ್ರೌಢಕಳೆಯ ತುಂಬು ಚೆಲುವೆ. ನಿಧಾನ ನಡಿಗೆಯ ಗಾಂಭೀರ್ಯದಲ್ಲಿ ಅವಳು ಋತುಮಾನವೆಂಬ ಚಕ್ರಾಧಿಪತ್ಯವನ್ನು ಆಳುತ್ತಿದ್ದಳು.
ಹೀಗೆ ಋತುಮಾನದ ಸಾರ್ವಭೌಮತೆಯಲ್ಲಿ ವಾತಾವರಣ ಕೂಡ ಮಳೆಗಾಲಕ್ಕೇ ಶರಣಾಗಿಬಿಡುತ್ತಿತ್ತು. ಹೂವುಗಳೆಲ್ಲಾ ಅರಳಿ ಮಳೆಮಾಯಿಗೆ ಶರಣಾಗುತ್ತಿದ್ದವು. ಭಾರೀ ಹನಿಗಳಿಗೆ ಸಾಧ್ಯವಾದಷ್ಟು ದಳವೊಡ್ಡಿ ನಿಲ್ಲುತ್ತಿದ್ದವು. ಹನಿಗಳೆಡೆಯಲ್ಲಿ ಅರಳುವ ಚಿಕಣಿ ಹೂಗಳು, ಧಾರೆನೀರಿಗೂ ಬಾಡದ ಜಕ್ಕಣಿ ಹೂಗಳು. ಕಂಪಿರುವ ಹೂಗಳು, ಕಮಟು ವಾಸನೆಯ ಹೂಗಳು, ಮತ್ತೇರಿಸುವ, ಗುಂಗು ಹಿಡಿಸುವ ಹೂರಾಶಿಗಳು. ಮಳೆ ಬಿಡುವು ಕೊಟ್ಟಾಗ ಮಾತ್ರ ಮಾಯಗಾರನಂತೆ ಅರಳುವ ಜಾದೂ ಹೂಗಳು…ಹೀಗೆ ನಮೂನೆಗಳೆಷ್ಟೊ ಲೆಕ್ಕವಿಟ್ಟವರಾರು. ಅದೇನೇ ಇರಲಿ. ಮಳೆಯ ಸೊಗಸು ಮುಗಿದು ಬೇಸಿಗೆ ಬಂತೆಂದರೆ ಮತ್ತೆ ಭೂಮಿಗೆ ಬಲು ಬೇಜಾರು ಬರುತ್ತಿತ್ತು. ಆರಂಭದಲ್ಲಿ ರವಿಕಿರಣಗಳ ನೇವರಿಕೆ ತುಸು ಬೆಚ್ಚನೆ ಎನಿಸಿದರೂ ಮತ್ತೆ ಮತ್ತೆ ಎಷ್ಟೂಂತ ಈ ಬಿಸಿಲ ರಾಶಿಯನ್ನು ಸಹಿಸಿಕೊಳ್ಳುವುದು. ಜೋರು ಮಳೆ ಸುರಿದರೆ ನೀರು ಹರಿದು ಹೋಗಿ ಸೇರಲು ಸಮುದ್ರವಿದೆ. ಆದರೆ ಜೋರಾಗಿ ಸುರಿವ ಬಿಸಿಲ ರಾಶಿಯನ್ನು ಒಂದೆಡೆ ಪೇರಿಸಲು ಏನಾದರೂ ತಾವು ಇದೆಯೇ…ಎಲ್ಲವನ್ನೂ ಭೂಮಿಯಮ್ಮನೇ ನುಂಗಬೇಕು. ಚಳಿಗಾಲವಂತೂ ಬೇಸಿಗೆ ಮತ್ತು ಮಳೆಗಾಲದ ಗಾಢ ಪ್ರಭಾವದಲ್ಲಿ ಮಂಕಾಗಿ ನಡುವೆ ಸಂದು ಹೋಗುತ್ತಿದ್ದುದರಿಂದ ಭೂಮಿಯಮ್ಮನಿಗೆ ಏನೂ ಸಹಾಯ ಆಗುತ್ತಿರಲಿಲ್ಲ. ಸಾಕಾಗಿ ಹೋಯಿತು ಅವಳಿಗೆ.

ಭೂಮಿಯಮ್ಮನ ಈ ಬೇಜಾರು ಕಂಡು ಹೂವುಗಳ ಲೋಕದ ಒಡೆಯ ಪುಷ್ಪರಾಜ ಒಮ್ಮೆ ಆಕೆಯ ಕುಶಲ ವಿಚಾರಿಸಿದ. ಬೆವರು ಒರೆಸಿಕೊಳ್ಳುತ್ತ ಭೂಮಿಯಮ್ಮ , ಈ ಸೂರ್ಯಕಿರಣಗಳಿಂದ ಸುಸ್ತಾಗುತ್ತಿರುವುದಾಗಿ ಕಷ್ಟ ಹೇಳಿಕೊಂಡಳು. ಆಗ ಪುಷ್ಪರಾಜನಿಗೊಂದು ಯೋಚನೆ ಹೊಳೆಯಿತು. ಹೂವರಳುವ ಕಾಯಕವನ್ನು ಮಳೆಗಾಲಕ್ಕೆ ಬದಲಾಗಿ ಬೇಸಿಗೆಯಲ್ಲಿ ಹಮ್ಮಿಕೊಂಡರೆ ಹೇಗೆ…

ಪುಷ್ಪರಾಜ ತನ್ನವರನ್ನೆಲ್ಲ ಕರೆದು ಆಜ್ಞಾಪಿಸಿದ. “ನೋಡಿ ಹೂಗಿಡಗಳೆ, ಇನ್ನುಮುಂದೆ ನೀವೆಲ್ಲಾ ಬೇಸಿಗೆಯಲ್ಲಿಯೇ ಅರಳಬೇಕು. ಬೇಸಿಗೆಯಲ್ಲಿ ಭೂಮಿಯಮ್ಮ ತುಂಬ ಬಳಲಿರುತ್ತಾಳೆ. ನಮಗೆಲ್ಲ ಆಧಾರವಾಗಿರುವ ಭೂಮಿಯಮ್ಮನಿಗೆ ನಾವು ಸ್ವಲ್ಪವಾದರೂ ಸಂತೋಷವನ್ನು ಮೂಡಿಸಬೇಕು’’ ಎಂದು ಆದೇಶಿಸಿದ.

ಅಂದಿನಿಂದ ಹೂವುಗಳೆಲ್ಲ ಬೇಸಿಗೆಯಲ್ಲಿ ಅರಳಲು ಶುರುವಾದವು. ‘ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂದು ಭೂಮಿಯಮ್ಮ ನಕ್ಕಳು.

ಆದಿಯಲ್ಲಿ ನಡೆದ ಈ ಬದಲಾವಣೆಯ ಬಳಿಕ ಚರಾಚರ ಜಗತ್ತಿನಲ್ಲಿ ಸಾವಿರಾರು ಬದಲಾವಣೆಗಳು ಶುರುವಾದವು. ಪುಷ್ಪರಾಜನ ಒಂದೇ ಆಜ್ಞೆ ಇಡೀ ಪ್ರಕೃತಿಯ ಮುಖವನ್ನೇ ಬದಲಿಸಿತು. ಹೂವುಗಳು ಬೇಸಿಗೆಯಲ್ಲಿಯೇ ಅರಳುವುದರಿಂದ ಅವುಗಳ ಬೆನ್ನಟ್ಟಿ ದುಂಬಿಗಳೂ ಬೇಸಿಗೆಯನ್ನೇ ಇಷ್ಟಪಟ್ಟವು. ಹೂವರಳಿದ ಮೇಲೆ ಹಣ್ಣುಗಳಾಗಲೇಬೇಕು ತಾನೆ. ಹಣ್ಣುಗಳ ಕಾರುಬಾರು ಬೇಸಿಗೆಯ ಸುಪರ್ದಿಗೆ ಬಂತು. ಹೀಗೆ ಕೆಲಸಕ್ಕೆ ಅನುಕೂಲವೆಂದು ಎಲ್ಲ ಜೀವಿಗಳು ಬೇಸಿಗೆಯತ್ತ ಮುಖ ಮಾಡಿದವು.

ಎಲ್ಲರೂ ಬೇಸಿಗೆಯ ಕಾರುಬಾರಿಗೆ ಶರಣಾಗಲು ಶುರು ಮಾಡಿದ್ದೇ, ಮಳೆಮಾಯಿಯ ಚಕ್ರಾಧಿಪತ್ಯದ ವಿಜೃಂಭಣೆ ಕಡಿಮೆಯಾಯಿತು. ವರ್ಷಕಾಲದ ಗುಂಗು, ಮಬ್ಬುಕತ್ತಲಿಗಿಂತ ಎಲ್ಲರಿಗೂ ಶಿಶಿರ, ವಸಂತದ ಬಟಾಬಯಲಿನ ಬೆಳಕು ಇಷ್ಟವಾಗಲಾರಂಭಿಸಿತು. ಹೀಗೆ ಸಾವಿರಾರು ವರ್ಷಗಳು ಕಳೆದ ಬಳಿಕ, ಋತುಗಳು ಸೇರಿ ವಸಂತ ಕಾಲಕ್ಕೆ ಋತುಗಳ ರಾಜ ಎಂಬುದಾಗಿ ಪಟ್ಟಾಭಿಷೇಕ ಮಾಡಿದರು.

ಉತ್ತರ :

ಎಷ್ಟು ಕಾಲ ಉರುಳಿತೋ ಲೆಕ್ಕ ಯಾರಿಗ್ಗೊತ್ತು. ಆಕಾಶದಲ್ಲಿ ನಕ್ಷತ್ರಗಳು ಎಷ್ಟಿವೆಯೋ ಅಷ್ಟು ವರ್ಷಗಳು ಉರುಳಿರಬಹುದು. ಮಳೆಮಾಯಿ ಅದೇ ಸೌಂದರ್ಯದಲ್ಲಿ ಕಂಗೊಳಿಸುತ್ತಾಳೆ. ಆದರೆ ಋತು ಚಕ್ರಾಧಿಪತ್ಯವನ್ನು ಆಳುತ್ತಿದ್ದಾಗ ಅವಳಲ್ಲಿ ಇದ್ದ ಹೊಳಪೊಂದು ಮಾಯವಾಗಿದೆ. ಅದಕ್ಕೆ ಬಲವಾದ ಕಾರಣವುಂಟು.

ಅವಳೀಗ ಮೊದಲಿನ ಹಾಗೆ ಭೂಮಿ ಮೇಲೆ ನಿರಾಳವಾಗಿ ಓಡಾಡುವಂತಿಲ್ಲ. ಭೂಮಿಯ ಮೇಲಿನ ಜೀವಿಗಳೆಲ್ಲ ಈಗ ಬೇಸಗೆಯ ಬೆಂಬತ್ತಿ ಓಡುತ್ತಿದ್ದಾರೆ. ಮನುಷ್ಯರೆಲ್ಲ ಸೇರಿ ಹೊಸದೊಂದು ಜ್ಞಾನ ಶಾಖೆಯನ್ನು ಕಂಡುಕೊಂಡಿದ್ದಾರೆ. ಅದಕ್ಕೆ ಎಂಜಿನಿಯರಿಂಗ್ ಎಂದು ಹೆಸರಿಟ್ಟುಬಿಟ್ಟಿದ್ದಾರೆ. ಮನೆಯ ನೆಲ ಸಪಾಟು ಮಾಡಲು, ಗೋಡೆಗಳ ಲಂಬವನ್ನು ಅಳೆಯಲೂ ಜಲಮಟ್ಟವನ್ನೇ ಬಳಸುತ್ತಿದ್ದವರು ಅದನ್ನು ಏಕಾಏಕಿ ಬಿಸುಟರು. ಸೌಧಗಳ ನಿರ್ಮಾಣದ ಮೂಲ ಮಂತ್ರವೆಂಬಂತೆ ಇದ್ದ ಜಲಮಟ್ಟ ಜನರ ಅಂತರಂಗದಲ್ಲಿಯೇ ನೀರಿಗಾಗಿ ಜಾಗವೊಂದನ್ನು ಮೀಸಲಿಟ್ಟಿತ್ತು. ಸಣ್ಣದೊಂದು ಶೀಷೆಯಂತಹ ರಚನೆಯೊಳಗೆ ಚೂರೇ ಅಲ್ಲಾಡುವ ನೀರು ಅದು. ಅಥವಾ ಕಡ್ಡಿಯಂತ ಕನ್ನಡಿಯ ರಚನೆಯೊಳಗೆ ಮಿನುಗುವ ನೀರು. ದೇವಸ್ಥಾನದಲ್ಲಿ ಅಂಗೈಗೆ ಹಾಕುವ ತೀರ್ಥದಂತೆ ಈ ನೀರು ಪ್ರತಿ ಜೀವಿಯ ಕಣ್ಣಿನಲ್ಲಿಯೂ ಮನೆ ಮಾಡಿಕೊಂಡಿತ್ತು. ಪ್ರತಿಜೀವಿಯ ಎದೆಯಲ್ಲಿಯೂ ಅಷ್ಟು ನೀರು ಇರಲೇಬೇಕಿತ್ತು. ಅದೇ ಅಲ್ಲವೇ ಅಮೃತ ಕಲಶ. ಮರಗಳ ಕಾಂಡದೊಳಗಿರುವ ಬಿಸಿಯ ನಡುವೆ ಇರುವ ಹನಿಯದು. ಸುಡುವ ಅಗ್ನಿಯ ಕೆನ್ನಾಲಗೆಯ ಮಧ್ಯದಲ್ಲಿರುವ ಹಸಿತೇವ ಅದು. ಆಡಿ ಬರುವ ಕಂದನ ಕೊಳಕು ಗಲ್ಲವನ್ನು ಸೆರಗಿನಲ್ಲಿ ಒರಸುತ್ತ, ಪಟ್ಟನೆ ಕೆನ್ನೆ ತಟ್ಟುವಾಗ ಅಮ್ಮನ ಕಂಗಳಲ್ಲಿ ತುಂಬುವ ತೃಪ್ತಿಯ ಹನಿಯದು. ಭೂಮಿಯಮ್ಮನೇ ಈ ಜಲಮಟ್ಟದ ಬಿಂದುವಿನಲ್ಲಿ ಕುಳಿತಿದ್ದಾಳೇನೋ ಎಂಬಂತೆ ಭಾಸವಾಗುತ್ತಿತ್ತು.

ಆದರೆ ಎಲ್ಲವೂ ಹಾಗೆಯೇ ಉಳಿಯುತ್ತದೆಯೇ. ಎಂಜಿನಿಯರ್ ಯಂತ್ರಗಳ ಉಸಾಬರಿಯಲ್ಲಿ ಜಲಮಟ್ಟ ಫಳ್ಳನೇ ಒಡೆದು ಹೋದುದು ಯಾವಾಗಾ…? ಮಾನವೆದೆಯ ಅಮೃತ ಕಲಶದಲ್ಲಿ ನೀರಿನ ಹನಿಗಳು ಆರಿ ಹೋದವೇ.. ಕಣ್ಣ ಪಾಪೆಯನ್ನು ಪೊರೆಯುವ ಜೀವ ಜಲ ಬಾಷ್ಪವಾಯಿತೆ…

ಹಾಗೆಯೇ ಅನಿಸುತ್ತದೆ. ಕಾಣದ ಇರಿಕುಗಳಲ್ಲಿ ಹುಟ್ಟಿ ಬೆಟ್ಟಗಳಲ್ಲಿ ಇಳಿದು, ಪರ್ವತಗಳನ್ನು ಅಕ್ಕರೆಯಿಂದ ಆವರಿಸಿಕೊಂಡು, ಪ್ರವಾಹವಾಗಿ ಧುಮುಕುತ್ತಾ ಹರಿಯುವ ನದಿಗಳು. ಓಡುವ ಹರಿಣದಂತೆ, ಮಂದಗಮನೆಯಂತೆ, ಮುಂದಕ್ಕೆ ಓಡಿ ಪಕ್ಕನೇ ಏನೋ ನೆನಪಾದವರಂತೆ ವಾಪಸ್ಸಾಗಿ, ಅಲ್ಲಲ್ಲಿ ಇಡೀ ಊರಿಗೇ ತಿರುವು ಹಾಕಿಕೊಂಡು, ಕೆಲವಡೆಗೆ ಗಡಿಯ ಗುರುತಾಗಿ, ಮತ್ತೆ ಕೆಲವೆಡೆ ಮಂಥರೆಯಂತೆ ಜಗಳ ಸೃಷ್ಟಿಸಿ, ಮಗದೊಂದೆಡೆ ಧರ್ಮ, ಊರುಗಳನ್ನೇ ಬೆಸೆಯುತ್ತಾ ಅಹಹಾ…ನದಿ ಹರಿಯುವ ಸೊಗಸಿಗೆ ಸಾಟಿಯುಂಟೇ… ಹರಿವ ದಿಕ್ಕಿಗೆ ಅಡ್ಡಿಯುಂಟೇ…

ಉಂಟು.

ನದಿ ಹರಿವ ದಿಕ್ಕಿಗೆ ಮಾತ್ರವಲ್ಲ… ಮಳೆಗೇ ಈಗ ಸಾವಿರ ಅಡ್ಡಿಗಳು. ಮಳೆ ಸೃಷ್ಟಿಯಾಗುವುದಾದರೂ ಹೇಗೆ ಗೊತ್ತೆ. ಮಲ್ಹಾರ ರಾಗಕ್ಕೆ ರಿಯಾಜ್ ಮಾಡಿದಷ್ಟೂ ಕಡಿಮೆ ಎಂಬ ಗಾಯಕಿಯಂತೆ ಮಳೆಮಾಯಿ ಪ್ರತಿಯೊಂದು ಹನಿಯನ್ನೂ ಕುಶಲ ಮಾತಾಡಿಸಿ, ಒಪ್ಪಮಾಡುತ್ತಾಳೆ. ಭೂಮಿಯ ಇಂಚಿಂಚುಗಳಿಂದ ಆಯ್ದ ಮುತ್ತು ಪೋಣಿಸಿದಂತೆ, ಒಂದೊಂದೇ ಹನಿಗಳನ್ನು ಹೆಕ್ಕಿ ಎಂಟು ತಿಂಗಳ ಕಾಲ ಜತನ ಮಾಡಿ ಮಳೆಮಾಯಿ ಮೋಡ ಸೃಷ್ಟಿ ಮಾಡುತ್ತಾಳೆ.

ಬೆವರು ಒರೆಸಿಕೊಳ್ಳುತ್ತ ಭೂಮಿಯಮ್ಮ , ಈ ಸೂರ್ಯಕಿರಣಗಳಿಂದ ಸುಸ್ತಾಗುತ್ತಿರುವುದಾಗಿ ಕಷ್ಟ ಹೇಳಿಕೊಂಡಳು. ಆಗ ಪುಷ್ಪರಾಜನಿಗೊಂದು ಯೋಚನೆ ಹೊಳೆಯಿತು. ಹೂವರಳುವ ಕಾಯಕವನ್ನು ಮಳೆಗಾಲಕ್ಕೆ ಬದಲಾಗಿ ಬೇಸಿಗೆಯಲ್ಲಿ ಹಮ್ಮಿಕೊಂಡರೆ ಹೇಗೆ…

ಆ ಹನಿಗಳು ಮಳೆಯಾಗಿ ಬೀಳದಂತೆ ವಿಷದ ಬಾಣಗಳನ್ನು ಎಸೆಯಲಾರಂಸಿದರು ಈ ಜನರು. ಮಳೆಮಾಯಿಯ ವಾತ್ಸಲ್ಯ ತೆಕ್ಕೆಯಿಂದ ಜಾರಿದ ಈ ಹನಿಗಳೆಲ್ಲ ಭೂಮಿಗೆ ಇಳಿಯಲಾರದೇ ಕಂಗಾಲಾದವು. ಬೆಳ್ಳನೆಯ ಎಳಸು ಮೋಡಗಳು ಪಕ್ವವಾಗಿ ಕಪ್ಪಾಗುವ ಕಾಲಕ್ಕಾಗಿ ಕಾದು ಕಾದು ಸೋತವು. ಅಲ್ಲೊಂದ ಇಲ್ಲೊಂದು ಬೆಳ್ಳನೆಯ ಮೋಡಗಳು ಪಕ್ವವಾಗಿ ಭೂಮಿ ತಲುಪಿದರೆ ಅಲ್ಲಿ ಸಂಭ್ರಮದ ಸ್ವಾಗತವೇ ಇಲ್ಲ ! ಕಡಲ ಮಕ್ಕಳಿಂದ ಪೂಜೆಯಿಲ್ಲ. ನಾಟಿಯ ಹಾಡಿಲ್ಲ. ಧೋಗುಟ್ಟುವ ಮಳೆಗೆ ಲಾಲಿಯಂತೆ ಹಾಡುವ ಹೆಂಗಸರ ದನಿಯಿಲ್ಲ. ಉಳುವಾತನು ದೂರದಲ್ಲಿ ಹೊರಡಿಸುವ ಗುಂಗುಹಿಡಿಸುವ ನಾದವಿಲ್ಲ. ಇದನ್ನು ಕಂಡ ಮಳೆಮಾಯಿಗೆ ಹೇಗಾಗಬೇಡ ? ಅವಳ ಕಣ್ಣಂಚಲ್ಲಿ ಜಿನುಗು…ಒಂದು ಕಾಲದಲ್ಲಿ ಸಾಮ್ರಾಜ್ಞಿಯಾಗಿ ಮೆರೆದ ಮಳೆ ಮಹಾರಾಣಿ, ಇಂದು ಭೂಮಿಯಲ್ಲಿ ಯಾಕೆ ಹೀಗೆ ಬದಲಾವಣೆ ಎಂಬುದು ಗೊತ್ತಾಗದೇ ಕೊರಗುತ್ತಾಳೆ…

*****

ಮಳೆಮಾಯಿ ಭೂಮಿ ಮೇಲೆ ಕೃಪೆ ತೋರಬೇಕಾದರೆ ಎಷ್ಟೊಂದು ಸುಂದರ ಹಂತಗಳಿವೆ ಗೊತ್ತೆ. ಆ ಸುಂದರ ವ್ಯವಸ್ಥೆಯಲ್ಲಿ, ಪ್ರೀತಿ ಮತ್ತು ರಾಗವೇ ಪ್ರಧಾನ.

ಪುಷ್ಪರಾಜನ ಆದೇಶದಂತೆ ಬೇಸಿಗೆಯಲ್ಲಿ ಅರಳುವ ಕೋಟ್ಯಂತರ ಹೂವುಗಳನ್ನು ಕಂಡು ಚಿಟ್ಟೆಗಳು ತಮ್ಮ ರಂಗು ರಂಗಿನ ರೆಕ್ಕೆಗಳ ಮೇಲೆ ಪ್ರೇಮದೋಲೆಗಳನ್ನು ಬರೆದುಕೊಂಡು ಭೂಮಿಯ ಉದ್ದಗಲಕ್ಕೂ ಸುತ್ತಾಡುತ್ತವೆ. ಮಳೆಗಾಗಿ ಭೂಮಿ ಸಿದ್ಧವಾಗಿರುವುದನ್ನು ಗಮನಿಸಿ, ಈ ವಿಷಯವನ್ನು ಹೊತ್ತು ಚಿಟ್ಟೆ ಸಂಕುಲಗಳು ಮಳೆಮಾಯಿಯ ಬಳಿಗೆ ಪ್ರಯಾಣ ಬೆಳೆಸುತ್ತವೆ.

ಏಳುಬಣ್ಣಗಳ ಚಿಟ್ಟೆಗಳು ಸಾಲು ಸಾಲಾಗಿ ಮಳೆಮಾಯಿಯ ಬಳಿಗೆ ಪ್ರಯಾಣ ಬೆಳೆಸುವ ಈ ದೃಶ್ಯವನ್ನೊಮ್ಮೆ ಕಂಡವರೆ ಧನ್ಯರು. ಬಣ್ಣದೋಕುಳಿಯೇ ಹರಿದು ಹೋದಂತೆ, ಹರಿವ ನದಿಯೊಳಗೆ ಏಳು ಬಣ್ಣಗಳ ಕಲಸಿ ಬಿಟ್ಟಂತೆ… ಚಿಟ್ಟೆ ಸಂಕುಲವೇ ಸಾರ್ಥದಂತೆ ಹೊರಡುತ್ತವೆ ಮಳೆಮಾಯಿಯ ಬಳಿಗೆ.

ಭೂಮಿಯಮ್ಮನೂ, ಅಲ್ಲಿರುವ ಜೀವರಾಶಿಗಳೂ ಮಳೆಗಾಗಿ ಕಾದಿರುವ ಕತೆಯನ್ನು ಈ ಚಿಟ್ಟೆ ಸಂಕುಲ ಬಗೆಬಗೆಯಾಗಿ ವರ್ಣಿಸುತ್ತವೆ. ಆ ವರ್ಣನೆ ಕೇಳುವಾಗ ಮಳೆಮಾಯಿಗೆ ಪುಳಕ. ದನವೊಂದು ಕರುವಿಗೆ ಕೆಚ್ಚಲಿಳಿಸುವಾಗ ಉಂಟಾಗುವ ವಾತ್ಸಲ್ಯದ ಪುಳಕ. ವರ್ಷವಿಡೀ ಆಸ್ಥೆಯಿಂದ ಸಿದ್ಧಪಡಿಸಿದ ಬಿಳಿಮೋಡಗಳು ಆ ರಾಗಕ್ಕೆ ರಂಗೇರಿ ಹೆಪ್ಪು ದಟ್ಟವಾಗಿ ಕಪ್ಪುಗಟ್ಟಲಾರಂಭಿಸುತ್ತವೆ…ಮೊಟ್ಟೆಯೊಂದು ಕಾವು ಪಡೆದು ಪಕ್ವವಾಗುವಂತೆ ಹನಿಗಳ ಪ್ರಸವೋತ್ಸವ ನಡೆಯುತ್ತದೆ.

ಆದರೆ ಇತ್ತೀಚೆಗೆ ಹಾಡುಗಳೇ ನೀರಸವಾಗಿವೆಯಲ್ಲಾ….ಚಿಟ್ಟೆಗಳು ಹೇಳುವ ಕತೆಗಳು ನೀರಸ. ರಾಗವೂ ರಸಹೀನ. ಭೂಮಿಯಲ್ಲಿ ಮಳೆ ಬೇಡ ಎನ್ನುವ ಜನರ ಕತೆಗಳೇ ಕತೆಗಳು. ಅದಕ್ಕೆ ಹಚ್ಚಿದ ರಾಗವೋ ಮಳೆಮಾಯಿಯ ಮನಸ್ಸನ್ನೇ ಮುದುಡಿಸುತ್ತಿದೆ. ಅವಳು ಬೇಸರಗೊಂಡಿದ್ದಾಳೆ. ಬಿಳಿಮೋಡಗಳು ಪಕ್ವವಾಗುವುದೇ ಇಲ್ಲ. ಹೇಗೋ ಏನೋ ಭೂಮಿಗೆ ತೆರಳಿದ ಕೆಲವೇ ಹನಿಗಳೂ ಎತ್ತ ಹೋಗಲಿ, ಏನು ಮಾಡಲಿ ಎಂಬ ಅರಿವಾಗದೇ ತಾಯಿ ಹಸುವನ್ನು ಕಾಣದೆ ಕಂಗಾಲಾದ ಕರುವಿನಂತಾಗಿವೆ. ಮಳೆಹನಿಯ ಅಳುವ ಕೇಳುವರಾರು…
ಮೋಟು ಮರದ ಎಲೆ ತುದಿಯಲ್ಲಿ
ಕೂತಿದೆ ಒಂದು ಮಳೆಯ ಹನಿ
ಅದರ ಕಣ್ಣ ತುದಿಯಲ್ಲಿ
ಮುತ್ತಿನಂತಿದೆ ಕಂಬನಿ
ಎಂದು ಚಿಟ್ಟೆಗಳು ಸೇರಿ ಹಾಡುತಿವೆ. ಮಳೆಮಾಯಿ ಕುಳಿತು ಆಲಿಸುತ್ತಿದ್ದಾಳೆ. ಕಪ್ಪುಗಟ್ಟಬೇಕಾದ ಮೋಡಗಳು ಈ ಬೇಸರದ ಹಾಡ ಕೇಳಿ ಮತ್ತಷ್ಟು ಹಗುರಾಗಿ ಆಕಾಶದಲ್ಲಿ ಮೇಲ ಮೇಲಕ್ಕೇರುತ್ತಿವೆ. ತುಂಬು ಸೌಂದರ್ಯದಿಂದ ರಂಗೇರಬೇಕಾದ ಮಳೆಮಾಯಿ ಮುಖ ಬಾಡುತಿದೆ. ಪ್ರತಿವರ್ಷ ತವರಿಗೆ ಹೋಗಿ ಸಂಭ್ರಮಿಸುವ ಗೃಹಿಣಿಗೆ ನೀ ಬರಬೇಡ ಎಂದು ತವರಿನಲ್ಲಿ ಹೇಳಿದರೆ ಹೇಗಾಗಬೇಡ… ಭೂಮಿಯ ಜನರು ಯಾಕೆ ಹೀಗಾಗಿದ್ದಾರೆ ಎಂದು ಅರಿವಾಗದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ. ಅತ್ತ ಚಿಟ್ಟೆಗಳ ಹಾಡು ಮುಂದುವರೆದಿದೆ..

ಹೌದು. ಈ ನದಿಗಳ ಪಾಡು ನೋಡಿದರೆ ಮನಸ್ಸು ಕಲಕುವಂತಾಗಿದೆ. ಓಡುವ ದಾರಿಯಲ್ಲಿ ಸಾವಿರಾರು ಅಡ್ಡಗೋಡೆಗಳು. ನಡೆಯಬೇಕಾದ ದಾರಿಯಲ್ಲಿ ಓಡುವಂತೆ ಅಟ್ಟಾಡಿಸಿ , ಒತ್ತಾಯಿಸಿ ಕಾಲುವೆ ಮಾಡಿಕೊಟ್ಟವರು ಹಲವರು.

ಇನಿಯನ ನೋಡಲು ಓಡೋಡಿ ಬರುವ ಪ್ರಿಯತಮೆ, ದೂರದಲ್ಲಿ ಅವನ ಚಹರೆ ಕಂಡ ಕೂಡಲೇ ಹೆಜ್ಜೆಗಳನ್ನು ನಿಧಾನಗೊಳಿಸುವಂತೆ, ಕನಸು ಲಜ್ಜೆಯ ಭಾರದಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಡುವಂತೆ ನದಿಯೊಂದು ಸಮುದ್ರದ ಬಳಿ ಬರುತ್ತಿದ್ದಂತೆಯೇ ನಿಧಾನವಾಗಿ ಹರಿಯುತ್ತಿದ್ದರೆ, ತಡೆಯಲು ನಿಂತಿವೆ ದೊಣ್ಣೆನಾಯಕನಂತಹ ಆಕಾಶಚುಂಬಿ ಕಟ್ಟಡಗಳು.

ಅಷ್ಟೇಕೆ…ಮನೆಯೊಳಗೆ ಗೊಣಗುತ್ತಾರೆ, ಈ ಶನಿ ಮಳೆಯ ದೆಸೆಯಿಂದ ಆಫೀಸು ಹೋಗಲಾಗದೆಂದು. ಅಂಗಳಕ್ಕೆ ಹನಿಗಳು ಬೀಳುವುದೇ ಪಾಪವೇನೋ ಎಂಬಂತೆ ಹಾಸಿದ್ದಾರೆ ಕಾಂಕ್ರೀಟು. ಬುರ್ರನೆ ಜಾರಿ ಹೋಗುವ ಹನಿಗಳ ಇನ್ನಷ್ಟು ದೂರಕ್ಕೆ ಅಟ್ಟಿಬಿಡುವುದೇ ಜನರಿಗೆ ಸಾಹಸ. ಸಮುದ್ರದತ್ತ ಹೋಗೋಣವೆಂದರೆ ದಾರಿಯೆಲ್ಲಿದೆ. ನದಿಯ ಅಳಿವೆ ಬಾಗಿಲಿನಲ್ಲೇ ‘ಸೀ ವ್ಯೂ’ ಎಂಬ ಉಮೇದಿನಲ್ಲಿ ಎದ್ದು ನಿಂತ ಸಾಲುಸಾಲು ರೆಸಾರ್ಟುಗಳು. ಮನೆಗಳು. ವಾಪಸ್ಸು ಬಂದರೆ ಮನೆಗಳು ಅಂಗಡಿಗಳು ಮುಳುಗುತಿವೆ. ಯಾರೋ ಟೀವಿ ಪೆಟ್ಟಿಗೆಯಲ್ಲಿ ಬೊಬ್ಬಿಡುತ್ತಿದ್ದಾರೆ ಪ್ರವಾಹ ಬಂದಿದೆಯೆಂದು. ಹರಿಯಲು ಒಂದಿಷ್ಟು ಜಾಗವನ್ನೇ ಕೊಡದೆ ಇಡೀ ನಗರವೇ ಕಿರುಚುತ್ತಿದೆ..ಹೋಗು ಮಳೆಯೇ ಹೋಗು ಎಂದು. ನಗರದ ಯುವಕರೆಲ್ಲ ಎಂಜಿನಿಯರ್ ಆಗಲು ಓದುತ್ತಿದ್ದಾರೆ. ಸುರಿವ ಮಳೆಗೆ ಕರೆಂಟು ಹೋಯಿತೆಂದು, ನನ್ನ ಓದು ಹಾಳಾಯಿತೆಂದು ಮಳೆಯ ಶಪಿಸುತ್ತಿದ್ದಾರೆ.

ಹಳ್ಳಿಗಳನ್ನೆಲ್ಲ ಸುಂದರ ನಗರವನ್ನಾಗಿಸುವ ಗೀಳಿಗೆ ಬಿದ್ದಿದ್ದಾರೆ. ರಸ್ತೆಯೆಲ್ಲಿರಬೇಕು, ಸಮುದಾಯ ಭವನ ಎಲ್ಲಿರಬೇಕು, ಸರ್ಕಾರದ ಕಚೇರಿ ಎಲ್ಲಿರಬೇಕು ಎಂಬ ಯೋಜನೆಗಳನ್ನು ರೂಪಿಸಲು ಜನರು ದಿನಗಟ್ಟಲೆ ತಂಪುಕೋಣೆಯಲ್ಲಿ ಕುಳಿತು ಚರ್ಚಿಸುತ್ತಾರೆ. ಬಹುದೂರದ ಊರಿನಿಂದ ತಮ್ಮೂರಿಗೆ ನೀರನ್ನು ಸುಲಭವಾಗಿ ತರುವುದು ಹೇಗೆಂದು ಚಿಂತನೆ ನಡೆಯುತ್ತಿದೆ.

ಇಲ್ಲಿ ಬಿದ್ದ ಹನಿ ನಾನು…ಎಲ್ಲಿ ಹೋಗಲಿ ಹೇಳಿ…ಎಂದು ಕೇಳುತಿದೆ ಪುಟ್ಟಹನಿಯೊಂದು. ಮನೆಯಿಂದ ಹೊರದಬ್ಬಿದ ಪುಟಾಣಿ ಕಂದನಂತೆ ತೋರುತಿದೆ.

ಊರಿನಲ್ಲಿ ಅಸ್ಪೃಶ್ಯತೆ ಆಚರಿಸಬಾರದೆಂದು ಠರಾವು ಮಾಡಿದ್ದಾರೆ. ಎಲ್ಲ ಸಮುದಾಯಕ್ಕೂ ಮಾನ್ಯತೆ ಸಿಗುವಂತೆ ಸಾಲುಸಾಲು ನಿಯಮಗಳನ್ನು ರೂಪಿಸಿದ್ದಾರೆ. ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು ಎಂದು ಚರ್ಚೆಗಳನ್ನು ಮಾಡಿದ್ದಾರೆ. ಯಾರು ಆಳಬೇಕು, ಯಾರು ವಿರೋಧಿಸಬೇಕು ಎಂದು ಗಲಾಟೆ ನಡೆಯುತ್ತಿದೆ. ಅವರಿಗೆಲ್ಲ ಬೇಕು ಬೇಕಾದ ಠರಾವು ಮಾಡುವಾಗ ಮಳೆಹನಿಯೊಂದು ಬಾಗಿಲ ಬಳಿ ನಿಂತು ಬೇಡಿಕೊಳ್ಳುತಿದೆ…ಹರಿದು ಹೋಗಲು ನನಗೊಂದಿಷ್ಟು ಜಾಗ ನೀಡಿ…ಎಂದು.
ಕೇಳುವರಾರು.
ಅತ್ತ ಹಳ್ಳಿಯ ದಾರಿಯಲ್ಲಿ ಬೇರೆಯದೇ ರಾಗ.
ಬೆಳೆದಿದೆ ಪೈರು ಕೊಯ್ಯುವರಿಲ್ಲ, ಬಲಿತಿದೆ ತೆನೆ ಮೊಗೆವವರಿಲ್ಲ, ಹನಿಗಳಿಗಾಗಿ ಕಾಯುವರಿಲ್ಲ, ಬಾವಿಯ ಮಣ್ಣನು ತೆಗೆಯುವುದಿಲ್ಲ. – ಬೇಸರದ ತೋಡಿ ರಾಗದಲ್ಲಿ ಚಿಟ್ಟೆಗಳು ಹಾಡ ಶುರು ಮಾಡಿವೆ. ಲಲತ್, ಮಾಲಕೌಂಸ್ ರಾಗವನ್ನೇ ಕೇಳಿ ಕೇಳಿ ಮಳೆಮಾಯಿ ಮುದುರಿ ಕುಳಿತಿದ್ದಾಳೆ…
ಮರಳೆಂಬ ಹಾಸುಗೆ ಇಲ್ಲದೆ ಗಾಯಗೊಂಡಿದೆ ನದಿ. ಅಂತಹ ನದಿ ತುಂಬುವುದೇ ಇಲ್ಲ. ಪ್ರವಾಹ ಬಾರದೇ ಹೊಲಗಳ ತುಂಬಾ ಕಳೆಗಳು ತುಂಬಿವೆ. ಕೃಷಿ ಕಾಯಕದ, ವಿಶಾಲ ಪಡಸಾಲೆಯ ಬೃಹತ್ ಮನೆಗಳಲ್ಲಿ ಒಂಟಿ ವೃದ್ಧರು. ಜೋರು ಮಳೆಯ ನೋಡಿ ಕಂಗಾಲಾಗುತ್ತಿದ್ದಾರೆ. ಮಳೆ ಸುರಿದರೂ ಬೆಳೆ ಬೆಳೆಯಲು ಸಾಧ್ಯವಾಗದೆಂದು, ಈ ಮಳೆಯಲ್ಲಿ ಇಷ್ಟು ಬಿಸಿನೀರು ಕಾಯಿಸಲು ಮಗನಿಲ್ಲವೆಂದು ನಿಟ್ಟುಸಿರಿಡುತ್ತಿದ್ದಾರೆ.


ಆಗ
ಓ…ಅಕೋ ಅಲ್ಲಿ…
ಭೂಮಿಯಲ್ಲಿ ಒಂದು ವಿಶಾಲವಾದ ಬಯಲು. ಮಕಮಲ್ಲಿನಂತಿದೆ ಹಸಿರು ಹಾಸು. ಅದರ ಮೇಲೆ ಬೆಳ್ಳನೆಯ ಪಾದಗಳನ್ನು ಊರಿಕೊಂಡು, ಅಂಬೆಗಾಲಿಕ್ಕಿಕೊಂಡು ಪುಟ್ಪುಟಾಣಿ ಕಂದಮ್ಮಗಳು ಸೇರಿದ್ದಾವೆ. ಭಾಷೆ, ಧರ್ಮದ ಹಂಗಿಲ್ಲದೆ, ತೊದಲು ಮಾತಿನಲ್ಲಿ ಏನೋ ಮಾತಾಡಿಕೊಳ್ಳುತ್ತಿದ್ದಾರೆ. ಸಭೆಯೆಂಬ ಒಪ್ಪ ಓರಣವಿಲ್ಲ. ಗತ್ತು ಗೈರತ್ತುಗಳಿಲ್ಲ. ತೊದಲು ಭಾಷೆಯೆಂದರೆ ದೇವಭಾಷೆಯೇ ಸೈ. ಆದರೆ ಎಲ್ಲ ಪುಟಾಣಿಗಳೂ ತಮ್ಮದೇ ಅಪ್ಪ ಅಮ್ಮಂದಿರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಪ್ಪ ಅಮ್ಮಂದಿರ ವಿರುದ್ಧವೇ ಪ್ರತಿಭಟನೆ, ಖಂಡನೆ. ಅವರ ತೊದಲು ಮಾತುಗಳನ್ನು ಪಾತರಗಿತ್ತಿಗಳು ಆಲಿಸುತ್ತಿವೆ. ಅವರು ಹೇಳುತ್ತಿದ್ದಾರೆ: ನಮಗೊಂದಿಷ್ಟು ನೀರು ಉಳಿಸಿ, ಒಂಚೂರು ಒಳ್ಳೆಯ ಗಾಳಿ ಕೊಡಿ. ಒಪ್ಪೊತ್ತಿನ ಊಟವನ್ನಾದರೂ ಉಳಿಸಿ..
ಆ ಮೇಘಮಲ್ಹಾರ ಕೇಳಿ ಮಳೆಮಾಯಿ ಕಣ್ಣಲ್ಲಿ ಮಿಂಚು.

ಇನ್ನೇಕೆ ತಡ.. ದೇವಭಾಷೆಯ ಆಲಾಪನೆಯೇ ಸಾಕಲ್ಲ ತೆರಳಲು… ಹಸಿರು ಪತ್ತಲ ಉಟ್ಟು ಸವಾರಿ ಹೊರಟೇಬಿಟ್ಟಳು ಮಳೆ ಮಹಾರಾಜ್ಞಿ ಭೂಮಿಯೆಡೆಗೆ.