ಪೈಪ್‌ ಹೊರಟ ದಾರಿಯಲ್ಲಿ ಪೈಪ್‌ ಎಲ್ಲಾದರೂ ಒಡೆದಿದೆಯೇ ಎಂದು ಪರೀಕ್ಷಿಸುತ್ತಾ ಬಂದೆವು. ಒಂದೆರಡು ಕಡೆ ಪೈಪ್‌ ಒಡೆದಿತ್ತು. ಇದು ಹೇಗಾಗಿರಬಹುದು ಎಂದು ಕೇಳಿದಾಗ ಮಕ್ಕಳೇ ಉತ್ತರ ಕೊಟ್ಟರು. ‘ಸಾರ್‌ ನೀರು ಪ್ರೆಷರ್‌ ನಲ್ಲಿ ಬಂದರೆ ಪೈಪ್‌ ಒಡೆಯುತ್ತದೆʼ ಎಂಬ ಸರಳವಾದ ಭೌತಶಾಸ್ತ್ರವನ್ನು ನನಗೆ ಕಲಿಸಿ ಕೊಟ್ಟಿದ್ದರು. ಅದೇ ವಿಷಯದ ಮೇಲೆ ಕೇಳಲಾದ ಪ್ರಶ್ನೆಗೆ ಉತ್ತರಿಸಲಾಗದ ಮಕ್ಕಳು ನಿಜ ಜೀವನದಲ್ಲಿ ಅದನ್ನು ಬಳಸಿದ್ದರು.ಕೆಲವು ಕಡೆ ಪೈಪ್‌ ಲೈನ್‌ ಜಜ್ಜಿ ಹುಡಿಯಾದಂತಿತ್ತು.  ಎಲ್ಲೋ ದನಾನೋ ಕಾಟೀನೋ ಓಡಿಕೊಂಡು ಹೋಗುವಾಗ ಪುಡಿಯಾಗಿರಬೇಕು ಸಾರ್‌  ಎಂದು ಮಕ್ಕಳೇ ನನಗೆ ವಿವರಿಸಿದ್ದರು.
ಗಣಿತ ಮೇಷ್ಟರ ಶಾಲಾ ಡೈರಿ ಸರಣಿಯಲ್ಲಿ ಅರವಿಂದ ಕುಡ್ಲ ಬರಹ

 

ಮಹಾನಗರವಾಸಿಯಾಗಿದ್ದ ನನಗೆ ನೇರ ಮಲೆನಾಡ ವಾಸ ದೊರಕ್ಕಿದ್ದು ಸೌಭಾಗ್ಯವೋ ದೌರ್ಭಾಗ್ಯವೋ ಗೊತ್ತಿಲ್ಲ. ಮನೆಯಿಂದ ಐದು ನಿಮಿಷ ನಡೆದರೆ ಸಿಗುವ ಮುಖ್ಯರಸ್ತೆಯ ಬಸ್ ಸ್ಟಾಂಡ್‌ ನಲ್ಲಿ ನಿಂತರೆ ಸಾಕು ಎರಡೆರಡು ನಿಮಿಷಕ್ಕೂ ಒಂದು ಬಸ್‌ ಕರೆದುಕೊಂಡು ಹೋಗಲು ಬಂದು ಬಿಡುತ್ತಿತ್ತು. ಬೇಕಾದಕಡೆಗೆ ಹೋಗಲು ಕಷ್ಟವೇ ಇರಲಿಲ್ಲ. ಅಂತಹ ಮಂಗಳೂರು ಮಹಾನಗರಿಯಿಂದ ನೂರು ಕಿಲೋಮೀಟರ್‌ ದೂರದ ಪುಟ್ಟ ಹಳ್ಳಿ ಸಂಸೆಯಲ್ಲಿ ನನ್ನ ಸರಕಾರಿ ನೌಕರಿ ಪ್ರಾರಂಭ. ಆ ಹಳ್ಳಿಯಲ್ಲಿ ಸರಿಯಾದ ಬಾಡಿಗೆ ಮನೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಪಕ್ಕದ ಊರಾದ ಕಳಸದಲ್ಲಿ ನನ್ನ ಹೊಸ ಶಾಲೆಯ ಶಿಕ್ಷಕ ಮಿತ್ರರೇ ಒಂದು ಪೇಯಿಂಗ್‌ ಗೆಸ್ಟ್‌ ವ್ಯವಸ್ಥೆ ಮಾಡಿಸಿ ಕೊಟ್ಟರು. ಸುತ್ತಮುತ್ತಲಿನ ಹತ್ತು ಹದಿನೈದು ಕಿಲೋಮೀಟರ್‌ ವ್ಯಾಪ್ತಿಯ ಹೆಚ್ಚಿನ ಸರಕಾರಿ ನೌಕರರು ಕಳಸದಲ್ಲೇ ಬಾಡಿಗೆ ಮನೆ ಮಾಡಿಕೊಂಡು ಓಡಾಡುತ್ತಿದ್ದರು.

ಬೆಳಗ್ಗಿನ ಉಪಾಹಾರ ಮುಗಿಸಿ ಸುಮಾರು ಹತ್ತು ನಿಮಿಷ ನಡೆದರೆ ಬಸ್ ನಿಲ್ದಾಣ ತಲುಪುತ್ತಿದ್ದೆವು. ಸರಿಯಾಗಿ ಎಂಟೂ ಮುಕ್ಕಾಲು ಗಂಟೆಗೆ ಜೈನ್‌ ಟ್ರಾವಲ್ಸ್‌ ಬಸ್ಸು ಬಂದಿರುತ್ತಿತ್ತು. ಬೆಳಗ್ಗೆ ಏಳುಗಂಟೆಯ ಕೊರೆಯುವ ಚಳಿಯಲ್ಲಿ ಕೊಟ್ಟಿಗೆಹಾರದಿಂದ ಹೊರಟು ನಡುವೆ ಸಿಗುವ ಬಾಳೂರು, ಕೆಳಗೂರು, ಹಿರೇಬೈಲ್‌ ಮರಸಣಿಗೆ ಮುಂತಾದ ಊರುಗಳನ್ನು ದಾಟಿ ಕಳಸ ತಲುಪುವಾಗ ತನ್ನೊಳಗೆ ಆ ದಾರಿಯಾಗಿ ಬರುವ ಶಾಲಾ ಕಾಲೇಜು ಮಕ್ಕಳನ್ನೆಲ್ಲ ತುಂಬಿಕೊಂಡು ಬಂದು ಕಳಸದ ಊರಿನಲ್ಲಿ ಇಳಿಸಿ ಹಗುರಾಗಿ ಮುಂದೆ ಸಂಸೆ, ಕುದುರೆಮುಖದ ದಾರಿಯಾಗಿ ಕಾರ್ಕಳದ ಕಡೆಗೆ ಹೋಗುವ ಪ್ರಯಾಣಿಕರಿಗಾಗಿ ತಯಾರಾಗುತ್ತಿತ್ತು. ನಮ್ಮ ಶಾಲೆಯ ಹೆಚ್ಚಿನ ಶಿಕ್ಷಕರೆಲ್ಲ ಅದೇ ಬಸ್‌ ಹತ್ತಿ ನಮ್ಮ ಕಾರ್ಯಕ್ಷೇತ್ರ ಸಂಸೆಗೆ ಸುಮಾರು ಇಪ್ಪತ್ತು ನಿಮಿಷದ ಅಂಕುಡೊಂಕಿನ ಹಾದಿಯ ಪ್ರಯಾಣ ಬೆಳೆಸುತ್ತಿದ್ದೆವು. ಆ ಬಸ್ಸು ಬಾರದೇ ಇದ್ದರೆ ಮುಂದಿನ ಬಸ್‌ ಬರಲು ಕನಿಷ್ಠ ಇನ್ನೊಂದು ಗಂಟೆ ಕಾಯಬೇಕು.

ಶಾಲಾ ಕಾಲೇಜು ಮಕ್ಕಳನ್ನೆಲ್ಲ ತುಂಬಿಕೊಂಡು ಬಂದು ಕಳಸದ ಊರಿನಲ್ಲಿ ಇಳಿಸಿ ಹಗುರಾಗಿ ಮುಂದೆ ಸಂಸೆ, ಕುದುರೆಮುಖದ ದಾರಿಯಾಗಿ ಕಾರ್ಕಳದ ಕಡೆಗೆ ಹೋಗುವ ಪ್ರಯಾಣಿಕರಿಗಾಗಿ ತಯಾರಾಗುತ್ತಿತ್ತು. ನಮ್ಮ ಶಾಲೆಯ ಹೆಚ್ಚಿನ ಶಿಕ್ಷಕರೆಲ್ಲ ಅದೇ ಬಸ್‌ ಹತ್ತಿ ನಮ್ಮ ಕಾರ್ಯಕ್ಷೇತ್ರ ಸಂಸೆಗೆ ಸುಮಾರು ಇಪ್ಪತ್ತು ನಿಮಿಷದ ಅಂಕುಡೊಂಕಿನ ಹಾದಿಯ ಪ್ರಯಾಣ ಬೆಳೆಸುತ್ತಿದ್ದೆವು. ಆ ಬಸ್ಸು ಬಾರದೇ ಇದ್ದರೆ ಮುಂದಿನ ಬಸ್‌ ಬರಲು ಕನಿಷ್ಠ ಇನ್ನೊಂದು ಗಂಟೆ ಕಾಯಬೇಕು.

ಸಂಸೆ ಬಸದಿಯ ಹತ್ತಿರವೇ ಇಳಿದು ಎದುರಿಗೇ ಕಾಣುವ ಗುಡ್ಡದ ಮೇಲಿನ ನಮ್ಮ ಶಾಲೆಗೆ ನಮ್ಮೆಲ್ಲರ ಚಾರಣ ಪ್ರಾರಂಭ. ಅದ್ಯಾಕೆ ಶಾಲೆಯನ್ನು ಈ ಗುಡ್ಡದ ಮೇಲೆ ಮಾಡಿದರೋ, ಹಿಂದೆ ಊರಿನ ಸ್ಮಶಾನವೂ ಈ ಕಡೆಗೇ ಇತ್ತಂತೆ ಎಂದು ಹಿರಿಯ ಶಿಕ್ಷಕ ಮಿತ್ರರೊಬ್ಬರು ಹೇಳುತ್ತಿದ್ದರೆ, ಇನ್ನೂ ಇಪ್ಪತ್ತೈದರ ಹುಡುಗನಾದ ನನಗೆ ಪ್ರತಿದಿನ ಶಾಲೆಯ ಗುಡ್ಡ ಏರುವುದೇ ಒಂದು ಮಜವಾದ ಕೆಲಸ. ಒಂದು ಫೋರ್‌ ವೀಲರ್‌ ಜೀಪು ಮಾತ್ರ ಹತ್ತಬಹುದಾದ ಮಣ್ಣಿನ ರಸ್ತೆಯಲ್ಲಿ ಮಳೆಗಾಲದಲ್ಲಿ ಮೇಲೆ ಹತ್ತುವುದೇ ಒಂದು ಸಾಹಸವಾಗಿತ್ತು. ಇನ್ನು ಶಾಲೆಯಲ್ಲಿ ನಡೆಯಬೇಕಾದ ನಿತ್ಯದ ಬಿಸಿಊಟಕ್ಕೆ ಬೇಕಾದ ಅಕ್ಕಿ, ಬೇಳೆ ಸಾಮಾನುಗಳನ್ನು ತಲುಪಿಸುವವರು ಅದನ್ನು ಶಾಲೆಯವರೆಗೆ ತಲುಪಿಸಲು ಹರಸಾಹಸ ಪಡುತ್ತಿದ್ದರು. ಹೆಚ್ಚಾಗಿ ಶಾಲೆಯ ಮಕ್ಕಳು, ಶಿಕ್ಷಕರಾದ ನಾವು ಎಲ್ಲರೂ ಸೇರಿಯೇ ದಿನಸಿ ಮತ್ತು ಗ್ಯಾಸ್‌ ಸಿಲಿಂಡರ್‌ ಶಾಲೆ ತಲಪುತ್ತಿತ್ತು.

ಗುಡ್ಡದ ಮೇಲಿನ ಈ ಶಾಲೆಗೆ ನೀರು ಸರಬರಾಜು ವ್ಯವಸ್ಥೆ ಹೇಗೆ ಅನ್ನುವುದೇ ಒಂದು ಸೋಜಿಗ. ನಾನು ಶಾಲೆಗೆ ಸೇರಿದ ಹೊಸತರಲ್ಲಿ ಅಂದುಕೊಂಡದ್ದೇ ಬೇರೆ. ಕೆಳಗೆ ಹರಿಯುವ ಸೋಮಾವತಿ ನದಿಯಿಂದ ನೀರನ್ನು ಪಂಪ್‌ ಮಾಡಿ ಶಾಲೆಯ ನೀರಿನ ಟ್ಯಾಂಕ್‌ ತುಂಬುತ್ತದೆ ಎಂದುಕೊಂಡಿದ್ದೆ ನಾನು. ಆದರೆ ಆ ಊರಿನಲ್ಲಿ ಮಳೆಗಾಲದಲ್ಲಿ ವಿದ್ಯುತ್‌ ಇರುತ್ತಿದ್ದುದೇ ಅಪರೂಪ. ಎಲ್ಲಾದರೂ ಮಳೆಗಾಲದಲ್ಲಿ ಕರೆಂಟ್‌ ಹೋದರೆ ಮರಳಿ ಬರಲು ಎರಡು ಮೂರು ದಿನಗಳಾದರೂ ಬೇಕಿತ್ತು. ಮತ್ತೊಮ್ಮೆ ಕೆಲವೇ ಗಂಟೆಗಳಲ್ಲಿ ಮತ್ತೆ ಕರೆಂಟ್‌ ಹೋಗುವ ಸಾಧ್ಯತೆಗಳು ಇಲ್ಲದೇ ಇರಲಿಲ್ಲ. ಜೂನ್‌ ತಿಂಗಳಿನಲ್ಲಿ ಪ್ರಾರಂಭವಾಗುವ ಮಳೆರಾಯನ ಆರ್ಭಟ ಸಪ್ಟೆಂಬರ್‌ ತಿಂಗಳವರೆಗೂ ಮುಂದುವರೆಯುತ್ತಿತ್ತು.
ಶತದಿನೋತ್ಸವ ಆಚರಿಸದೆ ಮಳೆಗಾಲ ನಿಂತದ್ದಿಲ್ಲ ಅನ್ನುತ್ತಿದ್ದರು. ಹೀಗಿರುವಾಗ ಪಂಪ್‌ ಮಾಡಿ ನೀರು ತಲುಪಿಸುವುದು ಅಸಾಧ್ಯದ ಮಾತು.

ಹಾಗಾದರೆ ನಮ್ಮ ಶಾಲೆಗೆ ನೀರು ಹೇಗೆ ಬರುತ್ತದೆ. ಮಳೆಗಾಲದಲ್ಲಿ ಸುರಿಯುವ ಮಳೆನೀರಿಗೇ ತಟ್ಟೆ ಹಿಡಿದು ಮಕ್ಕಳು ತಮ್ಮ ತಟ್ಟೆ ಮತ್ತು ಕೈ ತೊಳೆದುಕೊಳ್ಳುತ್ತಿದ್ದರು. ಮಳೆನಿಂತ ಮೇಲೆ ಹೇಗೆ? ನನ್ನ ಕುತೂಹಲಕ್ಕೆ ಉತ್ತರವಾಗಿ ಸಹಶಿಕ್ಷಕರೊಬ್ಬರು ಹೇಳಿದರುʼ ಗುಡ್ಡದ ಮೇಲಿನ ಝರಿಯಿಂದ ನಮಗೆ ವರ್ಷ ಪೂರ್ತಿ ನೀರು ಬರುತ್ತದೆ. ನಾವು ಹೊಳೆಯಿಂದ ನೀರು ಪಂಪ್‌ ಮಾಡುವ ಅವಶ್ಯಕತೆಯೇ ಇಲ್ಲ ಎಂದು. ಅವರು ಹಾಗೆಂದಾಗ ನನಗೆ ಅರ್ಥವಾದದ್ದು ಹೀಗೆ. ಗುಡ್ಡದ ಮೇಲೊಂದು ಜಲಪಾತ ಇದೆ. ಅದರಿಂದ ಸದಾ ನೀರು ಬರುತ್ತದೆ ಎಂದು. ಚಳಿಗಾಲ ಮುಗಿದು ಬೇಸಗೆ ಬರುವ ಫೆಬ್ರವರಿ ತಿಂಗಳಿನಲ್ಲಿ ಒಮ್ಮೆ ನೀರು ಬರುವುದು ನಿಂತು ಹೋದಾಗ ಪೈಪ್‌ ಲೈನ್‌ ದುರಸ್ತಿಗೆಂದು ಹೊರಟ ಪಿಟಿ ಮಾಸ್ಟರರು ಮತ್ತು ಕೆಲವು ಮಕ್ಕಳ ಜೊತೆ ನಾನೂ ಹೊರಟೆ.

ನಮ್ಮ ಶಾಲೆ ಇದ್ದುದೇ ಒಂದು ಗುಡ್ಡದ ಮೇಲೆ ಎಂದಾದರೆ ಅದರ ಹಿಂದಿನ ಇನ್ನೊಂದು ಗುಡ್ಡದ ಮೇಲೆ ನೀರಿನ ಝರಿ. ಅಲ್ಲಿಗೆ ತಲುಪಲು ಸುಮಾರು ಅರ್ಧಗಂಟೆ ಗುಡ್ಡ ಹತ್ತಬೇಕು. ಅಲ್ಲಿ ತಲುಪಿದಾಗ ಹುಲಿನೋಡಲು ಹೋದವನಿಗೆ ಇಲಿಯ ದರ್ಶನವಾದ ಹಾಗಾಯಿತು. ನಾನೇನೋ ಝರಿ ಎಂದರೆ ಜಲಪಾತ ಗುಡ್ಡದಿಂದ ನೀರು ಸುರಿಯುತ್ತದೆ ಎಂದುಕೊಂಡಿದ್ದರೆ ಇದು ಅಂಗೈ ಅಗಲದ ಪುಟ್ಟ ನೀರಿನ ಹರಿವು. ನಾಲ್ಕಾರು ಕಲ್ಲುಗಳನ್ನು ಅಡ್ಡ ಇಟ್ಟು ಅದಕ್ಕೊಂದು ಪುಟ್ಟ ಅಣೆಕಟ್ಟಿನ ತರಹ ಮಾಡಿ ಅದರ ಬುಡದಲ್ಲಿ ಪೈಪ್‌ ಅಳವಡಿಸಿ ಅಲ್ಲಿಂದ ನೀರು ನಮ್ಮ ಶಾಲೆಯ ಮೇಲಿದ್ದ ನೀರಿನ ಟ್ಯಾಂಕ್‌ ತಲುಪುತ್ತಿತ್ತು.

ಅಲ್ಲಿ ಅಗತ್ಯ ಸ್ವಚ್ಛತೆಗಳನ್ನು ಮಾಡಿ ಅಲ್ಲಿಂದ ಪೈಪ್‌ ಹೊರಟ ದಾರಿಯಲ್ಲಿ ಪೈಪ್‌ ಎಲ್ಲಾದರೂ ಒಡೆದಿದೆಯೇ ಎಂದು ಪರೀಕ್ಷಿಸುತ್ತಾ ಬಂದೆವು. ಒಂದೆರಡು ಕಡೆ ಪೈಪ್‌ ಒಡೆದಿತ್ತು. ಇದು ಹೇಗಾಗಿರಬಹುದು ಎಂದು ಕೇಳಿದಾಗ ಮಕ್ಕಳೇ ಉತ್ತರ ಕೊಟ್ಟರು. ‘ಸಾರ್‌ ನೀರು ಪ್ರೆಷರ್‌ ನಲ್ಲಿ ಬಂದರೆ ಪೈಪ್‌ ಒಡೆಯುತ್ತದೆʼ ಎಂಬ ಸರಳವಾದ ಭೌತಶಾಸ್ತ್ರವನ್ನು ನನಗೆ ಕಲಿಸಿ ಕೊಟ್ಟಿದ್ದರು. ಅದೇ ವಿಷಯದ ಮೇಲೆ ಕೇಳಲಾದ ಪ್ರಶ್ನೆಗೆ ಉತ್ತರಿಸಲಾಗದ ಮಕ್ಕಳು ನಿಜ ಜೀವನದಲ್ಲಿ ಅದನ್ನು ಬಳಸಿದ್ದರು.
ಇನ್ನೂ ಕೆಲವು ಕಡೆ ಪೈಪ್‌ ಲೈನ್‌ ಜಜ್ಜಿ ಹುಡಿಯಾದಂತಿತ್ತು. ಅರೆ ಪ್ರೆಷರ್‌ ಹೆಚ್ಚಾದರೆ ಹೀಗೂ ಹುಡಿಯಾಗುತ್ತದೆಯಾ ಎಂದು ಆಶ್ಚರ್ಯ ಪಟ್ಟ ನನಗೆ
ಮಕ್ಕಳ ಸಾಮಾನ್ಯ ಜ್ಞಾನದ ಉತ್ತರ ತಯಾರಾಗಿತ್ತು. ಎಲ್ಲೋ ದನಾನೋ ಕಾಟೀನೋ ಓಡಿಕೊಂಡು ಹೋಗುವಾಗ ಪುಡಿಯಾಗಿರಬೇಕು ಸಾರ್‌, ನಮ್ಮಲ್ಲೂ ಹೀಗೇ ಆಗ್ತಿರುತ್ತದೆ ಎಂದರು. ಸರಿ ಹಾಗಾದ್ರೆ ನಾಳೆ ಬೇಕಾದ ವಸ್ತುಗಳನ್ನು ತಂದು ಜೋಡಿಸೋಣ ಎಂದೆ. ಮಕ್ಕಳು ನಗುತ್ತಾ ಅದೆಲ್ಲಾ ಬರೋವಾಗ್ಲೇ ಹಿಡ್ಕೊಂಡು ಬಂದಿದ್ದೇವೆ. ಈಗಲೇ ಸರಿಮಾಡಿಕೊಂಡು ಹೋಗೋಣ ಎಂದು ಕೆಲವೇ ನಿಮಿಷಗಳಲ್ಲಿ ಪೈಪ್ಲೈನ್‌ ದುರಸ್ತಿ ಮಾಡಿ ಮುಗಿಸಿದರು. ಅವರ ಜೀವನಾನುಭವ ಮತ್ತು ಸಾಮಾನ್ಯ ಜ್ಞಾನದ ಮುಂದೆ ನನ್ನ ಡಿಗ್ರಿಗಳಿಗೆಲ್ಲ ಬೆಲೆಯೇ ಇಲ್ಲದಂತಾಗಿತ್ತು.

ಈ ಒಂದು ಘಟನೆಯಿಂದ ನಾನು ಬಹಳಷ್ಟು ಕಲಿತೆ. ಆ ಮಕ್ಕಳ ಮನೆಗಳಲ್ಲೂ ಬಾವಿನೀರಿನ ವ್ಯವಸ್ಥೆ ಕಡಿಮೆಯೇ ಅಂತೆ. ಹೆಚ್ಚಿನ ಮನೆಗಳಲ್ಲಿ ಗುಡ್ಡದಿಂದ ಬರುವ ಝರಿ ನೀರೇ ಎಲ್ಲ ಬಳಕೆಗೂ ಸಲ್ಲುತ್ತದೆ. ಹಾಗಾಗಿ ಕರೆಂಟ್‌ ಇಲ್ಲದಿದ್ರೂ ನಮಗೆಂದೂ ನೀರಿನ ಕೊರತೆ ಆಗಿಲ್ಲ. ಗುಡ್ಡದಿಂದ ಹರಿದುಬರುವ ನೀರನ್ನು ಮನೆಯಿಂದ ಎತ್ತರದ ಜಾಗದಲ್ಲಿ ಶೇಖರಿಸಿ ಬಳಸುತ್ತೇವೆ. ಕೆಲವು ಮನೆಗಳಲ್ಲಿ ಬಟ್ಟೆ ಮತ್ತು ಪಾತ್ರೆ ತೊಳೆಯಲು, ನೀರು ಮನೆಯೊಳಗೇ ಹರಿದು ಬರುತ್ತದೆ. ಅಡಿಕೆ ದಬ್ಬೆಗಳನ್ನು ಬಳಸಿ ಬೇಕಾದಲ್ಲಿಗೆ ನೀರು ಹಾಯಿಸುತ್ತೇವೆ ಎಂದು ಮಲೆನಾಡಿನ ನೀರಾವರಿ ವಿಧಾನದ ಹೊಸ ಲೋಕವನ್ನೇ ನನ್ನ ಮುಂದೆ ತೆರೆದಿಟ್ಟರು.

ನಾನು ದೊಡ್ಡ ಕಾಲೇಜಿನಲ್ಲಿ ಓದಿದವನು, ನನಗೆ ಬಹಳಷ್ಟು ತಿಳಿದಿದೆ ಎಂಬ ನನ್ನ ಅಹಂಕಾರಗಳೆಲ್ಲ ಗುಡ್ಡದಮೇಲೆ ಮಣ್ಣಪಾಲಾಗಿ ಹೋಯಿತು. ನಾವು ಮನೆಯ ನಲ್ಲಿ ಕೆಟ್ಟುಹೋದರೆ, ನಲ್ಲಿ ರಿಪೇರಿ ಮಾಡುವಾತನನ್ನು ಬರಹೇಳಿ ಅವನು ಸಮಸ್ಯೆ ಏನೆಂದು ತಿಳಿದು ಆನಂತರ ಅಂಗಡಿಗೆ ಹೋಗಿ ವಸ್ತುಗಳನ್ನು ತಂದು ದುರಸ್ತಿ ಮಾಡುವುದು ಸಾಮಾನ್ಯ ರೂಢಿ. ಅದೇ ಈ ಹಳ್ಳಿಯ ಮಕ್ಕಳು ದುರಸ್ತಿಗೆ ಬೇಕಾದ ವಸ್ತುಗಳನ್ನು ಮೊದಲೇ ತಯಾರುಮಾಡಿ ಇಟ್ಟುಕೊಡು ಹೊರಟಾಗ ಅದನ್ನು ತೆಗೆದುಕೊಂಡೇ ಬಂದು ದುರಸ್ತಿ ಮಾಡಿ ಮುಗಿಸಿದ್ದರು. ತಮ್ಮ ಊರಿನ ನೀರಾವರಿ ವ್ಯವಸ್ಥೆಯ ಜ್ಞಾನ, ಅದರಲ್ಲಿ ಬರುವ ತೊಂದರೆಗಳು, ಸರಿಪಡಿಸುವ ವಿಧಾನ ಮತ್ತು ಬೇಕಾಗುವ ಸಾಮಾಗ್ರಿ ಇವೆಲ್ಲದರ ಪರಿಚಯ ಆ ಮಕ್ಕಳನ್ನು ಅದಾಗಲೇ ಜೀವನಕ್ಕೆ ತಯಾರು ಮಾಡಿತ್ತು.

ತರಗತಿ ಕೋಣೆಯ ಒಳಗೆ ಇದೇ ವಿದ್ಯಾರ್ಥಿಗಳು ನಾನು ಹೇಳಿಕೊಡುವ ಲೆಕ್ಕ ಅರ್ಥವಾಗದೇ, ಪರೀಕ್ಷೆಯಲ್ಲಿ ಉತ್ತರಿಸಲಾಗದೇ ಒದ್ದಾಡುತ್ತಾರೆ, ಆದರೆ ಜೀವನದ ಲೆಕ್ಕಾಚಾರದಲ್ಲಿ ಎಷ್ಟು ಪಕ್ಕಾ ಇದ್ದಾರೆ ಎಂದು ನಾನು ಬಹಳ ಯೋಚಿಸುವ ಹಾಗೆ ಮಾಡಿತು. ಹಾಗಾದರೆ ಈ ಮಕ್ಕಳು ಕನಿಷ್ಠ ಅಂಕತೆಗೆದು ಪರೀಕ್ಷೆಯಲ್ಲಿ ಪಾಸಾಗುವಂತಾಗಲು ನಾನೇನು ಮಾಡಬೇಕು ಎಂದು ಯೋಚನೆ ಮಾಡುವಂತೆ ಮಾಡಿತು. ನಾನು ಶಿಕ್ಷಕ ಕಲಿಸುವುದಕ್ಕಾಗಿ ಇರುವವನು ಎಂಬ ಅಹಂಕಾರದ ಮೊಟ್ಟೆ ಒಡೆದು ನಿಜವಾಗಿ ನಾನೇನು ಮಾಡಬೇಕು ಎಂಬುದನ್ನು ಹೊಸತಾಗಿ ಕಲಿಯುವಂತೆ ಮಾಡಿತ್ತು.