ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರಕ್ಕೆ ಭಾರತದ ಹೆಸರುವಾಸಿ ರೆಸ್ಟರೆಂಟ್ ‘ಶರವಣ ಭವನ’ ಕಾಲಿಟ್ಟಿದೆ. ಇದೇನು ಒಂದು ಹೇಳಿಕೊಳ್ಳುವಂತಹ ಸುದ್ದಿಯಾ ಎಂದು ಹುಬ್ಬೇರಿಸಬೇಡಿ ಎಂಬ ಕಳಕಳಿಯ ವಿನಂತಿ. ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ ಶರವಣ ಭವನವು ಬಂದು ನೆಲೆಯೂರಿ ಅಲ್ಲಿನ ಎಲ್ಲರೂ ಊಟ ತಿಂಡಿಗಳನ್ನು ಸವಿಯುತ್ತಿದ್ದಾಗ ಆಸ್ಟ್ರೇಲಿಯಾದ ಬೇರೆ ನಗರಗಳಲ್ಲಿ ದಕ್ಷಿಣ ಭಾರತೀಯರು ಹೊಟ್ಟೆ ಉರಿಸಿಕೊಳ್ಳುತ್ತಿದ್ದರು. ಅಂತೂಇಂತೂ ಶರವಣ ಭವನವು ಸಿಡ್ನಿಯ ಉತ್ತರಕ್ಕೆ ಅಂದರೆ ನಮ್ಮ ಬ್ರಿಸ್ಬೇನ್ ನಗರಕ್ಕೆ ಕಾಲಿಟ್ಟಿದೆ. ಅದರ ಭಕ್ತರು ಏನನ್ನುತ್ತಾರೋ ಕಾದು ನೋಡಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ಅವರಿಗೂ ನನಗೂ ಎಳ್ಳಷ್ಟೂ ಸಂಬಂಧವಿಲ್ಲ. ಆದರೆ ಅವರನ್ನು ಹಲವಾರು ಬಾರಿ ನೋಡಿದ್ದೆನಲ್ಲಾ, ಅವರ ಬಗ್ಗೆ ಕೇಳಿದ್ದೆನಲ್ಲಾ, ಹಾಗಾಗಿ ಭಾವನೆಗಳ ಬಂಧ ಎನ್ನುತ್ತಾರಲ್ಲ, ಅದಿದೆ. ಸಾಗರೋಪಾದಿ ಭಾವನೆಗಳು ಹರಿದಾಡುತ್ತಿವೆ. ಗೊತ್ತಿದೆ, ಪ್ರಪಂಚದಾದ್ಯಂತ ಇರುವ ಕನ್ನಡಿಗರು ಅಪರ್ಣಾರ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಎಲ್ಲಾ ಪತ್ರಿಕೆಗಳು ಅವರ ಬಗ್ಗೆ ಬರೆದಿದ್ದಾಗಿದೆ. ಫೇಸ್ಬುಕ್, ವಾಟ್ಸಾಪ್ ನಲ್ಲಂತೂ ಅಪರ್ಣಾರ ಅದೆಷ್ಟು ಫೋಟೋಗಳು, ಯೂಟ್ಯೂಬ್ ವಿಡಿಯೋಗಳು ಹರಿದಾಡುತ್ತಿವೆ. ಎಲ್ಲರೂ ಪ್ರೀತಿ ತೋರುವವರೇ. ಈ ಅಪಾರ ಪ್ರೀತಿಯ ಸಮುದ್ರಕ್ಕೆ ನನ್ನದೊಂದು ಹನಿ ಸೇರಲಿ.

ಅಪರ್ಣಾರನ್ನು ಕನ್ನಡದ ರಾಜಕುಮಾರಿ ಎಂದು ಕರೆಯಲು ನನಗೆ ಇಷ್ಟವಾಗುತ್ತಿದೆ. ಅವರ ವ್ಯಕ್ತಿತ್ವದಲ್ಲಿ ಚೆಲುವು, ಒನಪು, ಘನತೆ, ಮಮತೆ, ಅನುಭೂತಿ ಎಲ್ಲವೂ ಇತ್ತು. ಹೋದ ವರ್ಷ ನಾನು ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೋ’ ಹತ್ತಿ ಓಡಾಡುವಾಗ, ಕುಳಿತು ಅಪರ್ಣಾರ ದನಿ ಕೇಳಿದಾಗ ಅವರ ನೆನಪು ಬಂದಿತ್ತು. ದೂರದರ್ಶನ ಕೇಂದ್ರದಲ್ಲಿ ಅವರನ್ನು ದೂರದಿಂದ ನೋಡಿದ್ದು, ಒಂದೆರಡು ಬಾರಿ ಸರಕಾರೇತರ ಸಂಸ್ಥೆಗಳು ನಡೆಸಿದ್ದ ಕಾರ್ಯಕ್ರಮಗಳಿಗೆ ಅವರು ನಿರೂಪಣೆ ಮಾಡುವಾಗ ಅವರನ್ನು ಹತ್ತಿರದಿಂದ ನೋಡಿದ್ದು ನೆನಪಾಗಿತ್ತು. ಜೊತೆಯಲ್ಲಿ ನಾನು ‘ಮನೋನಂದನ’ ಸಂಸ್ಥೆಯ ಕುಸುಮಾ ಮತ್ತು ನೀಲಿ ಅವರ ಮನೆಗೆ ಹೋದಾಗ ಮಾತಿನ ಮಧ್ಯೆ ಅವರ ಮನೆಯಲ್ಲೇ ಅಪರ್ಣಾರು ಒಬ್ಬ ಪ್ರತಿಭಾನ್ವಿತ ಆರ್ಕಿಟೆಕ್ಟ್‌ರನ್ನು ಮದುವೆಯಾಗಿದ್ದು ತಿಳಿದು ಖುಷಿಯಾಗಿತ್ತು. ಮತ್ತೊಬ್ಬರ ಬಗ್ಗೆ ನಾವು ಸಂತೋಷಿಸುವುದಕ್ಕೆ ಕಾಸು ಕೊಡಬೇಕಿಲ್ಲ. ಅಪರ್ಣಾರು ಹಾಗೆ ಬೇಷರತ್ತಾಗಿ ನಿರ್ಮಲ ಮನಸ್ಸಿನಿಂದ, ನಿಷ್ಕಳಂಕವಾಗಿ ಸಂತೋಷಿಸುತ್ತಿದ್ದರು. ಟಿವಿ ಪರದೆಯ ಮೇಲಾಗಲಿ, ಮೆಟ್ರೋ ದನಿಯಲ್ಲಾಗಲಿ, ಸ್ಟೇಜಿನ ಮೇಲಾಗಲಿ, ಸ್ನೇಹಿತೆಯರ ಜೊತೆಗಿರುವ ಫೋಟೋದಲ್ಲಾಗಲೀ, ಅಪರ್ಣಾರ ಕಕ್ಕುಲತೆಯ ವ್ಯಕ್ತಿತ್ವ ಪ್ರಕಟವಾಗುತ್ತಿತ್ತು. ನಾಡಿಗೊಂದು ಇಂತಹ ಸಮ-ಬೆಸಗಳನ್ನು ಅರಿತ ರಾಜಕುಮಾರಿ ಬೇಕೇಬೇಕು.

*****

ಇನ್ನು ಆಸ್ಟ್ರೇಲಿಯಾ ಸುದ್ದಿಗೆ ಬರೋಣ. ಯಾಕೆಂದರೆ ಇದು ‘ಆಸ್ಟ್ರೇಲಿಯಾ ಪತ್ರ’.

ಪ್ಯಾರಿಸ್ ಒಲಂಪಿಕ್ಸ್, ಮನೆಗೆ ಬೆಂಕಿ ಹತ್ತಿ ಉರಿದಿದ್ದು, ಇನ್ನಷ್ಟು ಕೌಟುಂಬಿಕ ಹಿಂಸೆ ಪ್ರಕರಣಗಳು, ಪೊಲೀಸರು ಮತ್ತು ಮೂಲನಿವಾಸಿಗಳ ನಡುವಿನ ತಿಕ್ಕಾಟಗಳು, ಸಾವು-ನೋವು, ರಾಜಕಾರಣಿಗಳು ಒಬ್ಬರನ್ನೊಬ್ಬರು ದೂಷಿಸುವುದು, ಮುಂದಿನ ವಾರ ಚಳಿ ಹೆಚ್ಚಾಗಿ ಹಿಮ ಬೀಳುವ ಸೂಚನೆ, ಏನೆಲ್ಲಾ ಸುದ್ದಿಗಳಿವೆ. ಇವೇನೂ ಹೊಸವಲ್ಲ.

ಹೊಸದಲ್ಲದ ಆದರೆ ಪ್ರತಿವರ್ಷವೂ ಮತ್ತಷ್ಟು ಚೈತನ್ಯ ಹುಟ್ಟಿಸುವ NAIDOC ವಾರ ನಾಳೆ ಭಾನುವಾರಕ್ಕೆ ಮುಗಿಯುತ್ತದೆ. ಹೋದವರ್ಷ ನಡೆದ, ದೇಶದ ಸಂವಿಧಾನದಲ್ಲಿ ಮೂಲನಿವಾಸಿಗಳ ಪ್ರಾತಿನಿಧ್ಯವನ್ನು ಗುರುತಿಸುವ, ರೆಫೆರೆಂಡಮ್ ಪ್ರಯತ್ನ ಸೋತಿದ್ದರ ನೋವು ಇನ್ನೂ ಹಸಿಯಾಗಿರುವಾಗಲೇ ಈ ಬಾರಿಯ ‘ನಿಮ್ಮೊಳಗಿನ ಬೆಂಕಿಯು ಮತ್ತಷ್ಟು ಜ್ವಲಿಸಲಿ’ ಎನ್ನುವ NAIDOC ಸಂದೇಶ ಹಿತ ತಂದಿದೆ. ದೇಶೀಯ ಮಟ್ಟದಲ್ಲಿ ಆಂಟಿ ಡಲ್ಸಿ ಫ್ಲವರ್ಸ್ ಅವರಿಗೆ ಲೈಫ್ ಟೈಮ್ ಸಾಧನೆ ಪ್ರಶಸ್ತಿ ಸಿಕ್ಕಿದೆ. ಅಬೊರಿಜಿನಲ್ ಹಿರಿಯರಾದ ಆಂಟಿ ಡಲ್ಸಿ ಫ್ಲವರ್ಸ್ ತಮ್ಮ ಬದುಕನ್ನು ತಮ್ಮ ಜನರ ಆರೋಗ್ಯ ಸುಧಾರಣೆಗಾಗಿ ಮೀಸಲಿಟ್ಟವರು. ಅದಲ್ಲದೆ ೧೯೬೭ ರ, ಮೂಲನಿವಾಸಿಗಳಿಗೆ ಮತ ಹಕ್ಕು ಸಿಗುವತ್ತ ನಡೆದ ಆಂದೋಲನದಲ್ಲಿ ಮತ್ತು ಆ ವರ್ಷ ಜರುಗಿದ ರೆಫೆರೆಂಡಮ್‌ನಲ್ಲಿ ಅವರು ಬಹುಮುಖೇನ ಕೆಲಸ ಮಾಡಿದ್ದರು.

*****

ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರಕ್ಕೆ ಭಾರತದ ಹೆಸರುವಾಸಿ ರೆಸ್ಟರೆಂಟ್ ‘ಶರವಣ ಭವನ’ ಕಾಲಿಟ್ಟಿದೆ. ಇದೇನು ಒಂದು ಹೇಳಿಕೊಳ್ಳುವಂತಹ ಸುದ್ದಿಯಾ ಎಂದು ಹುಬ್ಬೇರಿಸಬೇಡಿ ಎಂಬ ಕಳಕಳಿಯ ವಿನಂತಿ. ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ ಶರವಣ ಭವನವು ಬಂದು ನೆಲೆಯೂರಿ ಅಲ್ಲಿನ ಎಲ್ಲರೂ ಊಟ ತಿಂಡಿಗಳನ್ನು ಸವಿಯುತ್ತಿದ್ದಾಗ ಆಸ್ಟ್ರೇಲಿಯಾದ ಬೇರೆ ನಗರಗಳಲ್ಲಿ ದಕ್ಷಿಣ ಭಾರತೀಯರು ಹೊಟ್ಟೆ ಉರಿಸಿಕೊಳ್ಳುತ್ತಿದ್ದರು. ಅಂತೂಇಂತೂ ಶರವಣ ಭವನವು ಸಿಡ್ನಿಯ ಉತ್ತರಕ್ಕೆ ಅಂದರೆ ನಮ್ಮ ಬ್ರಿಸ್ಬೇನ್ ನಗರಕ್ಕೆ ಕಾಲಿಟ್ಟಿದೆ. ಅದರ ಭಕ್ತರು ಏನನ್ನುತ್ತಾರೋ ಕಾದು ನೋಡಬೇಕು.

****

ನಾಳೆ ಒಂದು ಹುಟ್ಟುಹಬ್ಬಕ್ಕೆ ಹೋಗುವುದಿದೆ. ಸುಮಾರು ಐವತ್ತು ಜನ ಸೇರುವ ಅಂದಾಜಿದೆ. ಒಬ್ಬರು ವಿಧವಿಧ ಹರ್ಬಲ್ ಟೀಗಳನ್ನು ಮಾಡಲಿದ್ದಾರೆ. ನಾಲ್ಕು ಜನರು ನಾಲ್ಕು ತರಹದ ಕೇಕ್ ಬೇಯಿಸಿ ತರಲಿದ್ದಾರೆ. ನಾನು ಚನ್ನಾಮಸಾಲಾ ಮಾಡಲಿದ್ದೀನಿ. ಜೊತೆಗೆ ಈ ಬಾರಿ ಹೇರಳವಾಗಿರುವ ನಿಂಬೆಹಣ್ಣನ್ನು ಬಳಸಿ ಚಟ್ನಿ ಮಾಡಿದ್ದೀನಿ. ನನ್ನದೊಂದು ಚಿಕ್ಕ ಪ್ರಾತ್ಯಕ್ಷಿಕೆ ಇದೆ. ಹುಟ್ಟುಹಬ್ಬವೆಂದರೆ ಇದೆಲ್ಲಾ ಇದೆಯಾ ಎಂದುಕೊಂಡರೆ ಅದು ನಿಜ. ಇದು ನಮ್ಮ ಕೈತೋಟ ಗುಂಪಿನ ಸದಸ್ಯರು ನಡೆಸುತ್ತಿರುವ ‘edible exchange hut’ ನ ಎರಡನೇ ಹುಟ್ಟುಹಬ್ಬ. ಸದಸ್ಯರಿಗೆ ಸಂಭ್ರಮ. ಈ hut ನಲ್ಲಿರುವ ಎಲ್ಲವೂ ಎಡಿಬಿಲ್, ಅಂದರೆ ಆಹಾರ ಗಿಡಗಳು, ಬಳ್ಳಿಗಳು, ಬೀಜಗಳು, ತರಕಾರಿ, ಹಣ್ಣುಗಳು. ಎಲ್ಲವೂ ನಮ್ಮ ಕೈತೋಟಿಗರ ಮನೆಗಳಿಂದ ಬರುವುದು. ನಾವು ಬೆಳೆದಿದ್ದನ್ನ, ನಮಗಿಷ್ಟವಿದ್ದಲ್ಲಿ ಅಥವಾ ಹೆಚ್ಚಾಗಿದ್ದಲ್ಲಿ, ತೆಗೆದುಕೊಂಡು ಹೋಗಿ hut ನಲ್ಲಿರಿಸಿ ಅಲ್ಲಿ ಬೇರೆ ಕೈತೋಟಿಗರು ತಂದಿಟ್ಟಿರುವುದರಲ್ಲಿ ಕೆಲವನ್ನು ಪಡೆಯುವುದು. ಲೇನಾ-ದೇನಾ, ಕೊಡು-ಕೊಳ್ಳು ವಹಿವಾಟು. ಕಡ್ಡಾಯವಾಗಿ ಪ್ರತಿಯೊಬ್ಬರೂ ತಾವು ಕೊಡುವದರ ಒಂದು ಫೋಟೋ, ಪಡೆದಿದ್ದರ ಒಂದು ಫೋಟೋ ಮತ್ತು ಇಡೀ hut ನ ಒಂದು ಫೋಟೋ ತೆಗೆದುಕೊಂಡು ಅದನ್ನು ಈ ಕೈತೋಟಿಗರ ಗುಂಪಿನ ಫೇಸ್ಬುಕ್ ಪೇಜಿನಲ್ಲಿ ಹಂಚಿಕೊಳ್ಳಬೇಕು. ಇದು ಸದಸ್ಯರ ಪ್ರಾಮಾಣಿಕತೆ ತೋರುವುದು. ಅಲ್ಲದೆ hut ಗೆ ಏನೆಲ್ಲಾ ಬಂತು, ಹೋಯ್ತು ಎನ್ನುವುದರ ಅಂದಾಜು ಕೂಡ ಇರುತ್ತದೆ. Hut ಒಬ್ಬ ಸದಸ್ಯರ ಮನೆಯಂಗಳದಲ್ಲಿ ಇದೆ. ಅವರೂ ಕೂಡ ಗಮನವಿಡುವುದಕ್ಕೆ ಸುಲಭವಾಗುತ್ತದೆ. ನನ್ನದೊಂದು ಪ್ರಾತ್ಯಕ್ಷಿಕೆ ಇರುವುದು ಹಟ್‌ಗೆ ಬರುವ ಕೈತೋಟಿಗರ ದೈನಂದಿನ ರೂಢಿಯಲ್ಲಿರದ ತರಕಾರಿ, ಸೊಪ್ಪು, ಇತ್ಯಾದಿಗಳ ಬಗ್ಗೆ ಮಾತನಾಡಿ, ಅವನ್ನು ನಮ್ಮ ದಿನನಿತ್ಯದ ಊಟ-ತಿಂಡಿಯಲ್ಲಿ ಹೇಗೆ ಬಳಸಬಹುದು ಎನ್ನುವುದು. ಉದಾಹರಣೆಗೆ, ಕೆಲವು ಸದಸ್ಯರು ಒಂದೆಲಗ, ದೊಡ್ಡಪತ್ರೆ, ಅರಿಶಿನ, ಬ್ರಾಹ್ಮಿ, ಹೇರಳೆಕಾಯಿ, ಸೋರೆಕಾಯಿ, ಹಾಗಲಕಾಯಿ, ಬಾಳೆದಿಂಡು, ನುಗ್ಗೆಕಾಯಿ ಸೊಪ್ಪು, ಚಕ್ರಮುನಿ ಸೊಪ್ಪು, ಅವರೆಕಾಯಿ, ಇಂತಹುವನ್ನು ಹೇಗೆ ಉಪಯೋಗಿಸುವುದು ಎಂದು ಕೇಳುತ್ತಿರುತ್ತಾರೆ. ನಾಳೆ ಅವುಗಳನ್ನು ತೋರಿಸಿ, ಹೇಗೆಲ್ಲಾ ಬಳಸಬಹುದು ಎಂದು ವಿವರಿಸಲಿದ್ದೀನಿ.