“ತ್ರಾನ್ಸ್‌ತ್ರೋಮೆರ್-ರನ್ನು ಓದಲು ಅತ್ಯುತ್ತಮ ಸಮಯವೆಂದರೆ ರಾತ್ರಿ, ಮೌನವಿರಬೇಕು ಮತ್ತು ಒಂಟಿಯಾಗಿರಬೇಕು; ತ್ರಾನ್ಸ್‌ತ್ರೋಮೆರ್-ರನ್ನು ಓದುವುದೆಂದರೆ ನಂಬಲಸಾಧ್ಯವಾದುದಕ್ಕೆ ಶರಣಾಗುವುದು. ಹಾಸಿಗೆಯಿಂದ ಎದ್ದು ಮನೆ ಏನು ಹೇಳುತ್ತಿದೆ ಮತ್ತು ಹೊರಗೆ ಗಾಳಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಲಿಸುವುದು. ಅವರ ಪ್ರತಿಯೊಬ್ಬ ಓದುಗ ಅವರನ್ನು ತನ್ನ ಖಾಸಗಿ ರಹಸ್ಯವಾಗಿ ಓದುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ತೋಮಾಸ್ ತ್ರಾನ್ಸ್‌ತ್ರೋಮೆರ್-ರ
(Tomas Tranströmer, 1931–2015) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

2011-ರಲ್ಲಿ ಸಾಹಿತ್ಯಕ್ಕಾಗಿರುವ ನೊಬೆಲ್ ಪ್ರಶಸ್ತಿಯನ್ನು ತೋಮಾಸ್ ತ್ರಾನ್ಸ್‌ತ್ರೋಮೆರ್-ರಿಗೆ ನೀಡಿ ಗೌರವಿಸುತ್ತಾ, ನೊಬೆಲ್ ಸಮಿತಿಯು ತ್ರಾನ್ಸ್‌ತ್ರೋಮೆರ್-ರ ಕಾವ್ಯದ ಬಗ್ಗೆ ಈ ಮಾತನ್ನು ಹೇಳಿತ್ತು:”ತಮ್ಮ ಸಾಂದ್ರೀಕೃತ, ಪಾರದೀಪಕ ರೂಪಕಗಳ ಮೂಲಕ ಅವರು ವಾಸ್ತವಕ್ಕೆ ಹೊಸ ದ್ವಾರವೊಂದನ್ನು ನಮಗೆ ತೆರೆಯುತ್ತಾರೆ.”

ತ್ರಾನ್ಸ್‌ತ್ರೋಮೆರ್-ರ ಕವಿತೆಗಳು ಎಚ್ಚರ ಮತ್ತು ಕನಸುಗಳ ನಡುವಿನ ಗಡಿ ಪ್ರದೇಶದಲ್ಲಿ ರಚಿಸಲಾಗಿದೆ. ಸೂಕ್ಷ್ಮವಾಗಿ ಗಮನಿಸಿದ ಚಿತ್ರಗಳನ್ನು ಜೋಡಿಸಿ ರಚಿಸಲಾದ ಇವರ ಕವನಗಳು ವಿದ್ಯುತ್ ವಲಯವೊಂದರ ವಿರುದ್ಧ ಧ್ರುವಗಳ ನಡುವೆ ಇರುವಂತಹ ಉದ್ವೇಗವನ್ನು ಉಂಟುಮಾಡುತ್ತದೆ; ಇದರಲ್ಲಿ ಹೇಳಲಾಗದವುಗಳನ್ನು ತೀಕ್ಷ್ಣವಾದ ಬಾಹ್ಯರೇಖೆಗಳಲ್ಲಿ ಸೂಚಿಸಲಾಗುತ್ತದೆ. ಸ್ವೀಡೆನ್ ಪ್ರಾಂತದ ಸುದೀರ್ಘ ಚಳಿಗಾಲಗಳು, ಋತುಗಳ ಲಯ ಮತ್ತು ಪ್ರಕೃತಿಯ ಸ್ಪರ್ಶಗೋಚರ, ಭಾವಾತ್ಮಕ ಪರಿಸರದ ಸೌಂದರ್ಯವನ್ನು ತೋಮಾಸ್ ತ್ರಾನ್ಸ್‌ತ್ರೋಮೆರ್-ರ ಕವಿತೆಗಳು ಸೆರೆಹಿಡಿಯುತ್ತವೆ. ತ್ರಾನ್ಸ್‌ತ್ರೋಮೆರ್-ರ ಕಾವ್ಯವು ದೈನಂದಿನ ಜೀವನದ ನಿಯತಕಾರ್ಯಗಳ ಅಂತರ್ನಿಹಿತ ನಿಗೂಢತೆ ಮತ್ತು ಕೌತುಕದಿಂದ ಕೂಡ ನಿರೂಪಿಸಲ್ಪಟ್ಟಿದೆ, ಈ ಗುಣವು ಅವರ ಕವಿತೆಗಳಿಗೆ ಒಂದು ಧಾರ್ಮಿಕ ಆಯಾಮವನ್ನು ನೀಡುತ್ತದೆ.

ಆಧುನಿಕತಾವಾದ (Modernism), ಅಭಿವ್ಯಕ್ತಿವಾದ (Expressionism) ಮತ್ತು ಅತಿ-ಯಥಾರ್ಥತಾವಾದ (Surrealism) ಸಿದ್ಧಾಂತಗಳ ಬುನಾದಿಯ ಮೇಲೆ ನಿರ್ಮಿಸಲಾದ ತ್ರಾನ್ಸ್‌ತ್ರೋಮೆರ್-ರ ಕಾವ್ಯವು ವಿಘಟನೆ ಮತ್ತು ಪ್ರತ್ಯೇಕತೆಯ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಬಲ ರೂಪಕಗಳನ್ನು ಒಳಗೊಂಡಿದೆ. “ಅವರು ಒಂದು ನಿರ್ದಿಷ್ಟ ರೀತಿಯ, ಅನೇಕವೇಳೆ ಚೌಪದಿಗಳಲ್ಲಿ ರಚಿಸಲಾದ, ಎಪಿಫ್ಯಾನಿಕ್ ಭಾವಪದ್ಯ (epiphanic lyric) ಬರೆಯುವ ಕೌಶಲ್ಯವನ್ನು ಸಾಧಿಸಿದ್ದಾರೆ. ಈ ಭಾವಪದ್ಯಗಳಲ್ಲಿ ಪ್ರಕೃತಿಯು ಸಕ್ರಿಯವಾದ, ಚೈತನ್ಯದಾಯಕ ಕರ್ತೃವಾಗಿರುತ್ತೆ ಮತ್ತು ‘ಸ್ವಯಂ’ (ಸ್ವಯಂ ಎಂಬುದು ಅಸ್ತಿತ್ವದಲ್ಲಿರುವುದಾದರೆ) ವಸ್ತುವಾಗಿದೆ,” ಎಂದು ಕವಿ-ವಿಮರ್ಶಕರಾದ ಕೇಟೀ ಪೀಟರ್ಸನ್ ಹೇಳುತ್ತಾರೆ. ಟಾಮ್ ಸ್ಲೀಘ್ ಅವರ ಪ್ರಕಾರ, “ತ್ರಾನ್ಸ್‌ತ್ರೋಮೆರ್-ರ ಕವಿತೆಗಳು ಆಳಗಳು ವಾಸಿಸುವ ಸ್ಥಳಗಳನ್ನು ಕಲ್ಪಿಸುತ್ತವೆ, ಹೊಸದಾಗಿ ಅಗೆದ ಬಾವಿಯೊಳಗೆ ಅಂತರ್ಜಲ ಚಿಮ್ಮಿ ನುಗ್ಗುವ ಹಾಗೆ.”

Tomas Tranströmer. Foto Lütfi Özkök.
Bonniers arkiv.

ಮಹತ್ತರವಾದುದನ್ನು ಮತ್ತು ಅದ್ಭುತವಾದುದನ್ನು ಲೌಕಿಕದಿಂದ ಹೊರತೆಗೆಯುವ ಸಾಮರ್ಥ್ಯ ಕಾವ್ಯದ ವಿಲಕ್ಷಣ ಶಕ್ತಿಗಳಲ್ಲಿ ಒಂದು. ತೋಮಾಸ್ ತ್ರಾನ್ಸ್‌ತ್ರೋಮೆರ್-ರಲ್ಲಿ ಈ ಸಾಮರ್ಥ್ಯ ಹೇರಳವಾಗಿದೆ. 1950-ರ ದಶಕದಲ್ಲಿ ಅವರ ಬರವಣಿಗೆಯ ಆರಂಭದಿಂದ, ತ್ರಾನ್ಸ್‌ತ್ರೋಮೆರ್-ರ ಕಾವ್ಯವು ಅದರ “ದೈನಂದಿನ ನೆಲೆಗಳಿಂದ” ನಿರೂಪಿಸಲ್ಪಟ್ಟಿದೆ ಮತ್ತು ಓದುಗರಿಗೆ ಆಶ್ಚರ್ಯಪಡಲು ಮತ್ತು ಅವರ ಗಮನ ಕೇಂದ್ರೀಕರಿಸಲು ಅವಕಾಶ ನೀಡುವ ಸರಳತೆಯನ್ನು ಹುಡುಕುವ ಪ್ರಯತ್ನವಾಗಿದೆ. ಅವರ ಕವನಗಳು ಶ್ರೀಮಂತ, ತೀಕ್ಷ್ಣ ಮತ್ತು ಅಸಲಾದ ರೂಪಕಗಳಿಂದ ಗುರುತಿಸಲ್ಪಡುತ್ತವೆ. ಪ್ರಕೃತಿ ಮತ್ತು ಸಂಗೀತ, ಇವೆರಡು ತ್ರಾನ್ಸ್‌ತ್ರೋಮೆರ್-ರ ವಿಶೇಷ ಆಸಕ್ತಿಗಳಾಗಿದ್ದವು ಹಾಗೂ ಅವರ ಕಾವ್ಯದ ಮೇಲೆ ಆಳವಾದ ಪ್ರಭಾವ ಬೀರಿವೆ.

1931-ರಲ್ಲಿ ಸ್ಟಾಕ್‌ಹೋಮ್‌-ನಲ್ಲಿ ಜನಿಸಿದ ತ್ರಾನ್ಸ್‌ತ್ರೋಮೆರ್, ತಮ್ಮ ಪ್ರೌಢಶಿಕ್ಷಣವನ್ನು ಅದೇ ನಗರದಲ್ಲಿ ಪಡೆದರು. ಇದೇ ಸಮಯದಲ್ಲಿ ಅವರು ಕವನಗಳನ್ನು ಬರೆಯಲು ಪ್ರಾರಂಭಿಸಿದರು ಹಾಗೂ ಸಾಹಿತ್ಯ ಪತ್ರಿಕೆಗಳಲ್ಲಿ ಅವರ ಕವನಗಳು ಪ್ರಕಟವಾಗುತ್ತಿದ್ದವು. ಅವರ ಮೊದಲ ಕವನಗಳ ಸಂಗ್ರಹ, 17 Poems (17 ಕವಿತೆಗಳು), 1954-ರಲ್ಲಿ ಪ್ರಕಟವಾಯಿತು. ಸ್ಟಾಕ್‌ಹೋಮ್‌ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿ, ಕಾವ್ಯ ಮತ್ತು ಮನೋವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡಿದರು. 1956-ರಲ್ಲಿ ಮನಶ್ಶಾಸ್ತ್ರಜ್ಞರಾಗಿ ಪದವಿ ಪಡೆದರು. ತ್ರಾನ್ಸ್‌ತ್ರೋಮೆರ್ ತಮ್ಮ ವ್ಯಾಪಕವಾದ ಸಾಹಿತ್ಯಜೀವನದಲ್ಲಿ 15 ಕವನ ಸಂಕಲನಗಳನ್ನು ಪ್ರಕಟಿಸಿದರು ಹಾಗೂ ಐವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅವನ ಕವನಗಳನ್ನು ಅನುವಾದಿಸಲಾಗಿದೆ.

ನೊಬೆಲ್ ಪ್ರಶಸ್ತಿಯ ಜೊತೆಗೆ, ಅವರಿಗೆ ಸಂದ ಹಲವಾರು ಗೌರವಗಳಲ್ಲಿ ಕಾವ್ಯದಲ್ಲಿ ಶ್ರೇಷ್ಠತೆಗಾಗಿ Griffin Trust-ನಿಂದ Lifetime Recognition Award, ಅಫ್ಟನ್‌ಬ್ಲಾಡೆಟ್ಸ್ (Aftonbladets) ಸಾಹಿತ್ಯ ಪ್ರಶಸ್ತಿ, ಕವನಕ್ಕಾಗಿ ಬೋನಿಯರ್ (Bonnier) ಪ್ರಶಸ್ತಿ, ಸಾಹಿತ್ಯಕ್ಕಾಗಿ ನ್ಯೂಸ್ಟಾಡ್ ಅಂತರರಾಷ್ಟ್ರೀಯ ಪ್ರಶಸ್ತಿ (Neustadt International Prize for Literature), ಊವ್ರಾಲಿಡ್ಸ್ (Oevralids) ಪ್ರಶಸ್ತಿ, ಜರ್ಮನಿಯ ಪೆಟ್ರಾರ್ಖ್ (Petrarch Prize), ಮತ್ತು ಸ್ವೀಡಿಷ್ ಅಕಾಡೆಮಿಯ ನಾರ್ಡಿಕ್ ಪ್ರಶಸ್ತಿ (Swedish Academy’s Nordic Prize) ಸೇರಿವೆ.

1990-ರಲ್ಲಿ ತ್ರಾನ್ಸ್‌ತ್ರೋಮೆರ್-ಗೆ ಪಾರ್ಶ್ವವಾಯು ತಗುಲಿತು. ಇದರಿಂದ ಅವರು ಬಹಳ ನೋವನ್ನು ಅನುಭವಿಸಿದರು. ಆರು ವರ್ಷಗಳ ಮೌನದ ನಂತರ ಅವರು 1996-ರಲ್ಲಿ Sorgegondolen (Grief Gondola) ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ಅವರ ಪಾರ್ಶ್ವವಾಯುವಿಗೆ ಮುಂಚಿತವಾಗಿ, ಅವರು ಮನಶ್ಶಾಸ್ತ್ರಜ್ಞರಾಗಿ ಬಹುಕಾಲ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರು ಬಾಲಾಪರಾಧಿಗಳು, ಅಂಗವಿಕಲರು, ಕೈದಿಗಳು ಮತ್ತು ಮಾದಕ ವ್ಯಸನಿಗಳ ಪುನರುದ್ಧಾರಕ್ಕಾಗಿ ಕೆಲಸ ಮಾಡಿದರು. 2015-ರಲ್ಲಿ ತ್ರಾನ್ಸ್‌ತ್ರೋಮೆರ್ ತಮ್ಮ ಕೊನೆಯುಸಿರೆಳೆದರು.

ಖ್ಯಾತ ನೈಜೀರಿಯನ್-ಅಮೇರಿಕನ ಬರಹಗಾರರಾದ ಟೇಜೂ ಕೋಲ್ (Teju Cole), ತ್ರಾನ್ಸ್‌ತ್ರೋಮೆರ್-ರಿಗೆ ನೊಬೆಲ್ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಬರೆದ ಲೇಖನದಲ್ಲಿ (Miracle Speech: The Poetry of Tomas Tranströmer), ಅವರ ಕಾವ್ಯದ ಬಗ್ಗೆ ಹೀಗನ್ನುತ್ತಾರೆ:

“ತ್ರಾನ್ಸ್‌ತ್ರೋಮೆರ್-ರನ್ನು ಓದಲು ಅತ್ಯುತ್ತಮ ಸಮಯವೆಂದರೆ ರಾತ್ರಿ, ಮೌನವಿರಬೇಕು ಮತ್ತು ಒಂಟಿಯಾಗಿರಬೇಕು; ತ್ರಾನ್ಸ್‌ತ್ರೋಮೆರ್-ರನ್ನು ಓದುವುದೆಂದರೆ ನಂಬಲಸಾಧ್ಯವಾದುದಕ್ಕೆ ಶರಣಾಗುವುದು. ಹಾಸಿಗೆಯಿಂದ ಎದ್ದು ಮನೆ ಏನು ಹೇಳುತ್ತಿದೆ ಮತ್ತು ಹೊರಗೆ ಗಾಳಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಲಿಸುವುದು. ಅವರ ಪ್ರತಿಯೊಬ್ಬ ಓದುಗ ಅವರನ್ನು ತನ್ನ ಖಾಸಗಿ ರಹಸ್ಯವಾಗಿ ಓದುತ್ತಾರೆ. ಅವರ ಕವಿತೆಗಳು ಬೆಳಗುವ ಸರಳತೆಯಿಂದ ತುಂಬಿದೆ; ಈ ಸರಳತೆ ನಿಮ್ಮ ಅಹಂಕಾರವನ್ನು ಗೂಡಿನಿಂದ ಹೊರತಳ್ಳುವವರೆಗೂ ಹಿಗ್ಗುತ್ತಿರುತ್ತದೆ; ಆಗ ನೀವು ಒಂಟಿಯಾಗಿರುವಿರಿ, ಸತ್ಯದ ಜತೆ. ತ್ರಾನ್ಸ್‌ತ್ರೋಮೆರ್-ರ ಕವಿತೆಯಲ್ಲಿ ನೀವು ತೆರವನ್ನು ಬೇರೆ ರೀತಿಯಾಗಿ ತುಂಬುವಿರಿ; ದೇಹವು ಒಂದು ವಸ್ತುವಾಗುತ್ತದೆ, ಮನಸ್ಸು ತೇಲುತ್ತದೆ, ವಸ್ತುಗಳಿಗೆ ಜೀವವಿರುತ್ತದೆ, ಮತ್ತು ವಸ್ತುವಲ್ಲದವುಗಳು, ಪರಿಕಲ್ಪನೆಗಳು ಸಹ, ಜೀವಂತವಾಗಿರುತ್ತವೆ. ತ್ರಾನ್ಸ್‌ತ್ರೋಮೆರ್-ರ ಕವಿತೆಗಳಲ್ಲಿ ಕವಿ ಯಾವುದೋ ಒಂದರ ಜಾಡು ಹಿಡಿದುಕೊಂಡು ಹೋಗುವುದನ್ನು ಬಹಳವಾಗಿ ಕಾಣುತ್ತೇವೆ, ಹತ್ತಿರದಿಂದ ಹಾಗೂ ದೂರದಿಂದ ವೀಕ್ಷಿಸುವುದನ್ನು ಕಾಣುತ್ತೇವೆ, ಮತ್ತು ಮರಗಳು, ಗತಕಾಲಗಳು, ಮನೆಗಳು, ತಾಣಗಳು, ಮೌನಗಳು ಹಾಗೂ ಬಯಲುಗಳು, ಇವೆಲ್ಲಾ ಕಾವಲು-ವೀಕ್ಷಕರ ವ್ಯಕ್ತಿತ್ವಗಳನ್ನು (invigilative personae) ಪಡೆದುಕೊಳ್ಳುತ್ತವೆ. ಇಲ್ಲಿ ಹಲವು ಕನಸುಗಳಿವೆ.”

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ತೋಮಾಸ್ ತ್ರಾನ್ಸ್‌ತ್ರೋಮೆರ್-ರ ಏಳು ಕವನಗಳಲ್ಲಿ ಮೊದಲ ಐದು ಕವನಗಳನ್ನು ರಾಬಿನ್ ಫುಲ್ಟನ್ (Robin Fulton), ಆರನೆಯ ಕವನವನ್ನು ಮಲೆನಾ ಮೋರ್ಲಿಂಗ್ (Malena Mörling) ಮತ್ತು ಜೊನಸ್ ಎಲೆರ್ಸ್ತರೋಮ್ (Jonas Ellerström), ಹಾಗೂ ಏಳನೆಯ ಕವನವನ್ನು ರಾಬರ್ಟ್ ಬ್ಲಾಯ್ (Robert Bly) ಅವರುಗಳು ಮೂಲ ಸ್ವೀಡಿಷ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.


ಬೆಳಗ್ಗಿನ ಹಕ್ಕಿಗಳು
ಮೂಲ: Morning Birds

ನಾನು ಕಾರನ್ನು ಎಬ್ಬಿಸಿದೆ
ಅದರ ಮುಂಗಾಜಿನ ಮೇಲೆ ಪರಾಗದ ಹೊದಿಕೆಯಿತ್ತು.
ನಾನು ಕೂಲಿಂಗ್ ಗ್ಲಾಸ್ ಏರಿಸಿಕೊಂಡೆ.
ಹಕ್ಕಿಯುಲಿ ದಟ್ಟವಾಯಿತು.

ಅಷ್ಟರಲ್ಲಿ ಇನ್ನೊಬ್ಬ
ಅಲ್ಲಿ ತುಕ್ಕು ಹಿಡಿದು ಕೆಂಪಾಗಿ
ಬಿಸಿಲಿನಲ್ಲಿ ಮಿನುಗುತ್ತ ನಿಂತಿರುವ
ದೊಡ್ಡ ಗೂಡ್ಸ್ ಬಂಡಿಯ ಪಕ್ಕದಲ್ಲಿರುವ
ರೈಲ್ವೇ ಸ್ಟೇಷನಿನಲ್ಲಿ ದಿನಪತ್ರಿಕೆ ಕೊಳ್ಳುತ್ತಾನೆ.

ಇಲ್ಲೆಲ್ಲಿಯೂ ಖಾಲೀ ಜಾಗವಿಲ್ಲ.

ಈ ಬೆಚ್ಚನೆಯ ವಸಂತದ ಮಧ್ಯೆ ತಣ್ಣಗಿನ ಕಾರಿಡಾರ್ ಒಂದರಿಂದ
ಯಾರೋ ಓಡಿ ಬಂದು
ಹೇಗೆ ಮೇಲೆ ಹೆಡ್-ಆಫ಼ೀಸಿನಲ್ಲಿ ತನ್ನನ್ನು
ನಿಂದಿಸಿದರು ಎಂದು ಹೇಳುತ್ತಾನೆ.

ಆ ಪ್ರಕೃತಿಚಿತ್ರದ ಹಿಂಬಾಗಿಲಿನಿಂದ
ಕಪ್ಪು ಬಿಳಿ ಬಣ್ಣದ
ಮ್ಯಾಗಪೈ ಹಕ್ಕಿಯೊಂದು ಬರುತ್ತದೆ.
ಕಪ್ಹಕ್ಕಿಯೊಂದು ಸರಸರ ಆಚೀಚೆ ಹಾರಾಡುತ್ತಿದೆ,
ಹಗ್ಗದಲ್ಲಿ ಒಣಗುತ್ತಿರುವ ಬಿಳಿ ಬಟ್ಟೆಗಳ ಬಿಟ್ಟು
ಉಳಿದವೆಲ್ಲ ಇದ್ದಲಕಡ್ಡಿಯಿಂದ ರಚಿಸಿದ ರೇಖಾಚಿತ್ರವಾಗುತ್ತದೆ:
ಪಾಲೆಸ್ಟ್ರೀನನ ಬಹುಧ್ವನೀಯ ಮೇಳದ ಹಾಗೆ.

ಇಲ್ಲೆಲ್ಲಿಯೂ ಖಾಲೀ ಜಾಗವಿಲ್ಲ.

ನಾನು ಸ್ವತಃ ಕುಗ್ಗುತ್ತಿರುವಾಗ
ನನ್ನ ಕವನ ಬೆಳೆಯುತ್ತಿರುವ ಪರಿ ನೋಡಿ ಅದ್ಭುತವೆನಿಸುತ್ತದೆ.
ಅದು ಬೆಳೆಯುತ್ತದೆ, ನನ್ನ ಸ್ಥಾನ ತೆಗೆದುಕೊಳ್ಳುತ್ತದೆ.
ನನ್ನನ್ನು ಪಕ್ಕಕ್ಕೆ ದೂಡುತ್ತದೆ.
ನನ್ನನ್ನು ಗೂಡಿನಿಂದ ಹೊರಗೆಸೆಯುತ್ತದೆ.
ಕವನ ತಯಾರಗುತ್ತದೆ.


ರಾತ್ರಿಪುಸ್ತಕದ ಒಂದು ಪುಟ
ಮೂಲ: A Page of the Nightbook

ಮೇ ತಿಂಗಳಿನ ಒಂದು ರಾತ್ರಿ ನಾನು ದಡಕ್ಕಿಳಿದೆ
ತಣ್ಣನೆಯ ಚಂದ್ರಕಾಂತಿಯಲ್ಲಿ,
ಹುಲ್ಲು ಹಾಗೂ ಹೂಗಳು ಬೂದುಬಣ್ಣದ್ದಾಗಿದ್ದರೂ
ಹಸಿರಿನ ಕಂಪಿತ್ತು ಅಲ್ಲಿ.

ಸರಿಯುತ್ತೇರಿದೆ ದಿಣ್ಣೆಯ ಮೇಲೆ
ಆ ವರ್ಣದೃಷ್ಟಿಮಂದ ರಾತ್ರಿಯಲಿ,
ಆಗ ಅಲ್ಲಿದ್ದ ಬಿಳಿ ಬಂಡೆಗಳು
ಚಂದ್ರನಿಗೆ ಸನ್ನೆ ಮಾಡುತ್ತಿದ್ದವು.

ಕೆಲವೇ ನಿಮಿಷಗಳಷ್ಟು ಉದ್ದದ
ಅವಧಿಯಾಗಿತ್ತು,
ಐವತ್ತೆಂಟು ವರುಷಗಳಷ್ಟು ಅಗಲ.

ನನ್ನ ಹಿಂದೆ
ಸೀಸದಂತೆ ಹೊಳೆವ ನೀರಿನಾಚೆ ಇದೆ
ಇದರ ಇನ್ನೊಂದು ದಡ
ಮತ್ತಲ್ಲಿದ್ದರು ಆಳುವವರು.

ಜನರಿಗಲ್ಲಿ ಭವಿಷ್ಯವಿದೆ
ಮುಖದ ಬದಲು.


ಮರ ಮತ್ತು ಆಕಾಶ
ಮೂಲ: The Tree and the Sky

ಅಗೋ ಅಲ್ಲೊಂದು ಮರ ನಡೆದಾಡುತ್ತಿದೆ ಮಳೆಯಲ್ಲಿ,
ಓಡಿತದು ರಭಸವಾಗಿ ನಮ್ಮನ್ನು ದಾಟಿ ಈ ಸುರಿವ ಮಬ್ಬಿನಲ್ಲಿ.
ಏನೋ ಕೆಲಸದ ಮೇಲೆ ಓಡುತ್ತಿದೆ ಅದು. ಅದು ಮಳೆಯಿಂದ ಚೈತನ್ಯ
ಶೇಖರಿಸಿಕೊಳ್ಳುತ್ತೆ, ಹಣ್ಣಿನ ತೋಪಿನಲ್ಲಿ ಕಪ್ಪುಲಿಗ ಹಕ್ಕಿಯ ಹಾಗೆ.
ಮಳೆ ನಿಂತಾಗ, ನಿಲ್ಲುತ್ತೆ ಮರವೂ ಸಹ.
ಅಗೋ ಅಲ್ಲಿದೆ ಅದು, ತಿಳಿಯಾದ ರಾತ್ರಿಗಳಲ್ಲಿ ಶಾಂತವಾಗಿ
ಕಾಯುತ್ತಿದೆ, ನಮ್ಮಂತೆಯೇ, ಆ ಕ್ಷಣಕ್ಕಾಗಿ,
ಆಕಾಶದಲ್ಲಿ ಹಿಮಸುಮಗಳು ಅರಳುವ ಹೊತ್ತಿಗಾಗಿ.


ರಾತ್ರಿಗೀತ
ಮೂಲ: Nocturne

ಒಂದು ಹಳ್ಳಿಯ ಮೂಲಕ ಕಾರ್ ನಡೆಸಿಕೊಂಡು ಹೋಗುತ್ತಿದ್ದೆ ರಾತ್ರಿಯಲ್ಲಿ,
ಮನೆಗಳು ಎದ್ದು ನಿಂತವು ಕಾರಿನ ಮುಂದೀಪಗಳ ಝಳಪಿನಲ್ಲಿ –
ಅವು ಎಚ್ಚರವಾಗಿವೆ, ಅವಕ್ಕೆ ಬಾಯಾರಿದೆ, ಕುಡಿಯಬೇಕೆಂದಿದೆ.
ಮನೆಗಳು, ಹಟ್ಟಿಗಳು, ನಾಮಫಲಕಗಳು, ತೊರೆದ ವಾಹನಗಳು –
ಈಗ ತಮ್ಮನ್ನು ಜೀವದರಿವೆಯಿಂದ ತೊಡಿಸಿಕೊಳ್ಳುತ್ತವೆ –
ಜನ ಮಲಗಿದ್ದಾರೆ;

ಕೆಲಮಂದಿ ಪ್ರಶಾಂತವಾಗಿ ಮಲಗಬಲ್ಲರು, ಕೆಲವರ ಮುಖಭಾವಗಳು
ಅನಂತತೆಗಾಗಿ ಕಠಿಣ ವ್ಯಾಯಾಮ ಮಾಡುತ್ತಿರುವಂತೆ ಕಿವುಚಿರುತ್ತದೆ.
ಗಾಢನಿದ್ರೆಯಲ್ಲಿದ್ದರೂ ಅವರು ಬಿಟ್ಟುಕೊಡಲ್ಲ.
ಅವರು ಇಳಿಬಿಟ್ಟ ತಡೆ-ಗೇಟುಗಳ ಹಾಗೆ ವಿರಾಮದಲ್ಲಿರುವಾಗ
ಜೀವನರಹಸ್ಯ ಅವರೆದುರು ಹಾದು ಹೋಗುತ್ತದೆ.

ಹಳ್ಳಿಯ ಹೊರಗೆ ದೂರದೂರದವರೆಗೆ ರಸ್ತೆ ಹಾಸಿದೆ ಅಡವಿಮರಗಳ ಮಧ್ಯೆ.
ಮತ್ತೆ ಆ ಮರಗಳು, ಆ ಮರಗಳು ಮೌನವಾಗಿವೆ ತಮ್ಮ ತಮ್ಮೊಳಗಿನ ಮೈತ್ರಿಯಲ್ಲಿ.
ಅವುಗಳಿಗೆ ಒಂದು ತರಹದ ನಾಟಕೀಯ ರಂಗಿದೆ, ಅಗ್ನಿಬೆಳಕಿನ ಹಾಗೆ.
ಒಂದೊಂದು ಎಲೆಯೂ ಎಷ್ಟು ಸ್ಫುಟ!
ನನ್ನನ್ನು ಮನೆಯವರೆಗೂ ಹಿಂಬಾಲಿಸಿಕೊಂಡು ಬರುತ್ತವೆ.

ನಾನು ಮಲಗಲು ಮೈಚಾಚುವೆ, ನನ್ನ ಕಣ್ಣರೆಪ್ಪೆಗಳ ಹಿಂದಿನ
ಕತ್ತಲ ಗೋಡೆಯ ಮೇಲೆ ವಿಚಿತ್ರ ಚಿತ್ರಗಳು ಹಾಗೂ
ತಮ್ಮನ್ನು ತಾವೆ ಗೀಚಿಸಿಕೊಳ್ಳುತ್ತಿರುವ ಸಂಜ್ಞೆಗಳನ್ನು ಕಾಣುವೆ.
ಎಚ್ಚರ ಮತ್ತು ಕನಸಿನ ನಡುವಿನ ಸೀಳುಕಿಂಡಿಯೊಳಗೆ
ಒಂದು ದೊಡ್ಡ ಪತ್ರದ ಲಕೋಟೆ ತನ್ನನ್ನು ತೂರಿಸಿಕೊಳ್ಳಲು
ನಿರರ್ಥಕವಾಗಿ ಪ್ರಯತ್ನಿಸುತ್ತದೆ.


ನೆನಪುಗಳು ನನ್ನನ್ನು ನೋಡುತ್ತವೆ
ಮೂಲ: Memories Look at Me

ಜೂನ್ ಮಾಸದ ಒಂದು ಬೆಳಗ್ಗೆ, ಬಹಳ ಹೊತ್ತೇನೂ ಆಗಿಲ್ಲ
ಏಳುವುದಕ್ಕೆ, ಆದರೆ ಬಹಳ ಹೊತ್ತಾಗಿದೆ ಮತ್ತೆ ಮಲಗುವುದಕ್ಕೆ.

ನಾನು ಮನೆಯಿಂದ ಹೊರಗೆ ಹೋಗಲೇ ಬೇಕು – ಪಚ್ಚೆಪಯಿರು ನೆನಪುಗಳಿಂದ
ದಟ್ಟವಾಗಿ ಹಬ್ಬಿದೆ, ನೆಟ್ಟನೋಟವಿಟ್ಟು ನನ್ನನ್ನು ಹಿಂಬಾಲಿಸುತ್ತವೆ.

ಅವು ಕಾಣಲಿಕ್ಕೆ ಸಿಕ್ಕುವುದಿಲ್ಲ, ಹಿನ್ನೆಲೆಯೊಂದಿಗೆ ಸಂಪೂರ್ಣವಾಗಿ
ಲೀನವಾಗಿವೆ ಅವು, ಅಸಲಿ ಗೋಸುಂಬೆಗಳು.

ಅವು ಎಷ್ಟು ಹತ್ತಿರವೆಂದರೆ ಅವುಗಳ ಉಸಿರಾಟ ನನಗೆ ಕೇಳಿಸುತ್ತೆ
ಹಕ್ಕಿಹಾಡು ಕಿವುಡಾಗಿಸುವಷ್ಟು ಜೋರಾಗಿದ್ದಾಗ್ಯೂ.


ಹಳಿಗಳು
ಮೂಲ: Tracks

ಮುಂಜಾನೆ ಎರಡು ಘಂಟೆ: ಹೊರಗೆ ಬೆಳದಿಂಗಳು.
ರೈಲುಬಂಡಿ ನಿಂತಿದೆ
ಯಾವುದೋ ಬಯಲಿನ ಮಧ್ಯದಲ್ಲಿ. ದೂರದಲ್ಲಿ,
ಯಾವುದೋ ಶಹರದ ಬೆಳಕುಗಳು
ಕ್ಷಿತಿಜದ ಉದ್ದಕ್ಕೂ ತಣ್ಣಗೆ ಮಿನುಗುತಿವೆ.

ಒಂದು ಕನಸಿನೊಳಗೆ
ಒಬ್ಬಾಕೆ ಬಹು ಆಳಕ್ಕೆ ಇಳಿದು
ಮರಳಿ ಕೋಣೆಗೆ ಬಂದಾಗ.
ಅವಳಲ್ಲಿದ್ದಳು ಎಂದು ಅವಳಿಗೆ ಹೇಗೆ
ಎಂದೂ ನೆನಪಾಗುವುದಿಲ್ಲವೋ, ಹಾಗೆ.

ಒಂದು ಖಾಯಿಲೆಯೊಳಗೆ
ಒಬ್ಬಾತ ಬಹು ದೂರ ಹೋದಾಗ
ಅವನು ಕೆಳೆದ ದಿನಗಳೆಲ್ಲವೂ ಹೇಗೆ
ಒಂದು ದುಂಬಿವಿಂಡಿನ ತರಹ ಕ್ಷಿತಿಜದ ಉದ್ದಕ್ಕೂ ಕೆಲವು
ತಣ್ಣನೆ ಮಿನುಗುವ ವಿರಳ ಚುಕ್ಕೆಗಳಾಗುತ್ತವೆಯೋ, ಹಾಗೆ.

ಆ ರೈಲುಬಂಡಿ ನೆಟ್ಟಗೆ ನಿಶ್ಚಲವಾಗಿ ನಿಂತಿದೆ.
ಎರಡು ಘಂಟೆ: ತೀವ್ರ ಬೆಳದಿಂಗಳು, ಕೆಲವೇ ನಕ್ಷತ್ರಗಳು.


ಅರೆನಿರ್ಮಿತ ಸ್ವರ್ಗ
ಮೂಲ: The Half-Finished Heaven

ಹೇಡಿತನ ತನ್ನ ಪಥದಿಂದ ಸರಿಯುತ್ತೆ.
ಸಂಕಟ ತನ್ನ ಪಥದಿಂದ ಸರಿಯುತ್ತೆ.
ರಣಹದ್ದು ತನ್ನ ಉಡ್ಡಯನ-ಪಥದಿಂದ ಸರಿಯುತ್ತೆ.

ಬೆಳಕು ಉತ್ಸಾಹದಿಂದ ಬಯಲಿಗೆ ಓಡಿಕೊಂಡು ಬರುತ್ತೆ,
ದೆವ್ವಗಳೂ ಒಂದು ಗುಟುಕು ಮದಿರೆಯೇರಿಸುತ್ತವೆ.

ನಮ್ಮ ತೈಲಚಿತ್ರಗಳು ಗಾಳಿ ಬೆಳಕನ್ನು ಕಾಣುತ್ತವೆ,
ಹಿಮಯುಗ-ಕಾಲದ ಸ್ಟೂಡಿಯೋಗಳ ಕೆಂಪು ಮೃಗಗಳು ಅವು.

ಎಲ್ಲವೂ ಸುತ್ತ-ಮುತ್ತ ನೋಡಲು ಪ್ರಾರಂಭಿಸುತ್ತವೆ.
ಸಾವಿರ ಸಂಖ್ಯೆಯಲ್ಲಿ ನಾವು ಸೂರ್ಯನ ಬಿಸಿಲಿಗೆ ಹೊರಬರುತ್ತೇವೆ.

ಪ್ರತಿ ವ್ಯಕ್ತಿ ಒಂದು ಅರೆ-ತೆರೆದ ಬಾಗಿಲು
ಎಲ್ಲರಿಗಾಗಿರುವ ಕೋಣೆಗೆ ಕರೆದೊಯ್ಯುತ್ತದೆ.

ಕೊನೆಯಿಲ್ಲದ ಬಯಲು ನಮ್ಮ ಕೆಳಗೆ.

ನೀರು ಮಿನುಗುತಿದೆ ಮರಗಳ ನಡುವೆ.

ಭೂಮಿಯೊಳಗೆ ನೋಡಲು ಇರುವ ಕಿಂಡಿ ಆ ಕೆರೆ.