ಅವರ ಅನೇಕ ಕವನಗಳ ಸರಳ ಮತ್ತು ನಿಷ್ಕಪಟ ಸ್ವರವು ಕಾಲ್ಪನಿಕ ಕಥೆಗಳು ಮತ್ತು ದಂತಕಥೆಗಳಿಗೆ ಹೆಚ್ಚು ಋಣಿಯಾಗಿದೆ, ಆದರೆ ಇತರ ಕವನಗಳಲ್ಲಿ ಇದು ನೇರವಾದ ಆದರೆ ಅತ್ಯಂತ ಸಾಮಾನ್ಯ ವಿಷಯಗಳ ಸೂಕ್ಷ್ಮ ವಿವರಣೆಯಾಗಿ ಮಾರ್ಪಡುತ್ತದೆ, ಹಾಗೂ ಒಮ್ಮೆಗೇ ತಮ್ಮ ಬಗ್ಗೆ ಮತ್ತು ಜಗತ್ತಿನ ಸ್ವರೂಪದ ಬಗ್ಗೆ ಗಮನಾರ್ಹವಾದದ್ದನ್ನು ಬಹಿರಂಗಪಡಿಸುತ್ತದೆ. ಆದಾಗ್ಯೂ, ಈ ತರಹದ ಸರಳತೆಯು ಮಾನವ ಜೀವನದ ಸಂಕೀರ್ಣತೆಯನ್ನು ನಿರಾಕರಿಸುವುದಿಲ್ಲ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ವೇರ್ನರ್ ಆಸ್ಪೆನ್‌ಸ್ತ್ರೋಮ್-ರ (Werner Aspenström, 1918–1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ವೇರ್ನರ್ ಆಸ್ಪೆನ್‌ಸ್ತ್ರೋಮ್ 1918-ರಲ್ಲಿ ಸ್ವೀಡನ್ನಿನ ದಲರ್ನಾ-ದಲ್ಲಿ (Dalarna) ಜನಿಸಿದರು ಹಾಗೂ ದಲರ್ನಾʼದ ಗ್ರಾಮಾಂತರ ಪ್ರದೇಶಗಳಲ್ಲಿ ಬಾಲ್ಯವನ್ನು ಕಳೆದು, ಯುವಕನಾಗಿ ರಾಜಧಾನಿ ಸ್ಟಾಕ್‌ಹೋಮ್-ಗೆ ತೆರಳಿದರು. ಒಬ್ಬ ಅಸಾಧಾರಣ ಸ್ವೀಡಿಷ್ ಕವಿ ಎಂದು ಹೆಸರು ಪಡೆದ ಆಸ್ಪೆನ್‌ಸ್ತ್ರೋಮ್, ಒಬ್ಬ ಪ್ರಬಂಧಕಾರರಾಗಿ ಮತ್ತು ಯಶಸ್ವಿ ನಾಟಕಕಾರರಾಗಿಯೂ ಪ್ರಸಿದ್ಧರಾದರು. ಕಾವ್ಯದಲ್ಲಿ ಸ್ಪಷ್ಟತೆ ಹಾಗೂ ಸಂಕ್ಷಿಪ್ತತೆ ಮತ್ತು ಗಹನವಾದ ಗಾಢತೆಯನ್ನು ಬಿಂಬಿಸುವಲ್ಲಿ ಪ್ರಾವೀಣ್ಯತೆ ಪಡೆದರಲ್ಲದೆ, ಏಕಕಾಲದಲ್ಲಿ ಶಾಸ್ತ್ರೀಯ ಮತ್ತು ಆಧುನಿಕ ಪ್ರವೃತ್ತಿಗಳನ್ನು ಪ್ರದರ್ಶಿಸಿದರು. 1949-ರಲ್ಲಿ ಪ್ರಕಟವಾದ ಮೂರನೇ ಕವನ ಸಂಕಲನ, ‘Snow-Legend,’ ಅವರಿಗೆ ಪ್ರಸಿದ್ಧಿ ತಂದಿತು, ಹಾಗೂ ತಮ್ಮ ಜೀವಮಾನದಲ್ಲಿ ಹದಿನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದರು.
1954-ರಲ್ಲಿ ಪ್ರಕಟವಾದ ಆಸ್ಪೆನ್‌ಸ್ತ್ರೋಮ್-ರ Hundarna (ನಾಯಿಗಳು) ಎಂಬ ಸಂಕಲನದ ಬಗ್ಗೆ ಬರೆಯುತ್ತಾ ವಿಮರ್ಶಕ ಫ್ರೆಡ್ರಿಕ್ ಫ್ಲೆಯ್ಶರ್ ಹೆಳುತ್ತಾರೆ, “ಸಾಮಾನ್ಯವಾಗಿ ಅವರ ಕಾವ್ಯವು ವಿವರಣಾತ್ಮಕ ಕಾವ್ಯ ಪ್ರಕಾರಕ್ಕೆ ಸೇರುತ್ತೆ: ಶ್ರದ್ಧೆಯಿಂದ ರಚಿಸಿದ ಸಂಗೀತದ ಹಿನ್ನೆಲೆಯಲ್ಲಿ ಪ್ರಕೃತಿಯಲ್ಲಿ ಧ್ಯಾನವನ್ನು ಬಿಂಬಿಸುತ್ತದೆ. ಅವರು 1940-ರ ಮತ್ತು 1950-ರ ಕಾಲದ ಕಾವ್ಯಗಳ ನಡುವೆ ಸೇತುವೆಯನ್ನು ರೂಪಿಸಿದ ಕವಿಗಳ ಗುಂಪನ್ನು ಪ್ರತಿನಿಧಿಸುತ್ತಾರೆ.
ಇಂಗ್ಲಿಷ್ ಕವಿಗಳಾದ ಥಾಮಸ್ ಗ್ರೇ ಅವರ ‘ಎಲಿಜಿ ರಿಟನ್ ಇನ್ ಅ ಕಂಟ್ರಿ ಚರ್ಚ್ಯಾರ್ಡ್’ ಹಾಗೂ ಜೇಮ್ಸ್ ಥಾಂಪ್ಸನ್ ಅವರ ‘ದ ಸೀಜ಼ನ್ಸ್’ ಕವನಗಳಿಂದ ಪ್ರಭಾವಿತವಾದ 18-ನೇ ಶತಮಾನದ ಅಂತ್ಯದ ಸ್ವೀಡಿಷ್ ಕಾವ್ಯದಲ್ಲಿ ಕಂಡುಬರುವ ಗ್ರಾಮೀಣ ರೊಮ್ಯಾಂಟಿಸಿಸಂನ ಮೂಲಭೂತ ವಿಷಯವನ್ನು Hundarna ಹೊಂದಿದೆ. 18-ನೇ ಶತಮಾನದ ಇಂಗ್ಲಿಷ್ ರೊಮ್ಯಾಂಟಿಸಿಸ್ಟ್ ಕವಿಗಳನ್ನು ನೆನಪಿಸುವಂತಹ ಮೈಥೊಲಾಜಿಕಲ್ ಭಾವವನ್ನು ಕೂಡ ಹಲವಾರು ಕವನಗಳಲ್ಲಿ ಕಾಣಬಹುದು. ಆಸ್ಪೆನ್‌ಸ್ತ್ರೋಮ್-ರ ಕವನಗಳಲ್ಲಿ ಕಂಡು ಬರುವ ಆತಂಕ-ಕಾಲ ಮತ್ತು ರೊಮ್ಯಾಂಟಿಸಿಜ಼ಮ್-ನ ಮಿಶ್ರಣ ಈ ಸಂಕಲನದ ಶೀರ್ಷಿಕೆಯ ಕವಿತೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ:
ಈ ರಾತ್ರಿ ವಿಶಾಲವಾಗಿದೆ.
ಆಕಾಶಗಳು ನಿಶ್ಶಬ್ದದಲ್ಲಿ ತಿರುಗುತ್ತಿವೆ.
ಚಂದ್ರ ತೇಲಿ ಹೋಗುತ್ತಿದ್ದಾನೆ ಹಿಮ-ದೋಣಿಯಲ್ಲಿ.
ಈ ಊಳಿಡುವ ನಾಯಿಗಳು,
ಏನನ್ನು ಕೋರುತ್ತಿವೆ ಇವು?
1983-ರಲ್ಲಿ ಆಸ್ಪೆನ್‌ಸ್ತ್ರೋಮ್-ರ Sorl ಎಂಬ ಹೆಸರಿನ ಅವರ ಒಂಬತ್ತನೆಯ ಕವನ ಸಂಕಲನ ಪ್ರಕಟವಾಯಿತು. ಅವರ ಮೊದಲ ಕವನ ಸಂಕಲನ ನಲವತ್ತು ವರ್ಷಗಳ ಹಿಂದೆ ಪ್ರಕಟವಾಗಿತ್ತು. Sorl ಸಂಕಲನವನ್ನು ಸಮೀಕ್ಷಿಸಿದ ಸ್ಟೀವನ್ ಪಿ. ಸೊಂಡ್ರುಪ್-ರ ಅಭಿಪ್ರಾಯದಲ್ಲಿ, “ಈ ನಾಲ್ಕು ದಶಕಗಳ ಅವಧಿಯಲ್ಲಿ ಆಸ್ಪೆನ್‌ಸ್ತ್ರೋಮ್ ಒಬ್ಬ ಅಸಾಧಾರಣ ತಿಳಿವಿನ ಮತ್ತು ಬಹುಮುಖ ಕವಿಯಾಗಿ ಹೊರಹೊಮ್ಮಿದ್ದಾರೆ. ಕೆಲವು ಸಾಮಾಜಿಕ ಪ್ರಶ್ನೆಗಳ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೂ, ಅವರ ಅನೇಕ ಸಮಕಾಲೀನರು ಬಳಸುವ ವಿಷಯಗಳು ಮತ್ತು ತಂತ್ರಗಳನ್ನು ದೂರವಿಟ್ಟು, ವೈಯಕ್ತಿಕ, ಮತ್ತು ಸಾಂಪ್ರದಾಯಿಕವಾದ ಭಾವಗೀತಾತ್ಮಕ ಅಭಿವ್ಯಕ್ತಿಯ ವಿಧಾನಗಳ ಪರವಾಗಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅವರ ಅನೇಕ ಕವನಗಳ ಸರಳ ಮತ್ತು ನಿಷ್ಕಪಟ ಸ್ವರವು, ಕಾಲ್ಪನಿಕ ಕಥೆಗಳು ಮತ್ತು ದಂತಕಥೆಗಳಿಗೆ ಹೆಚ್ಚು ಋಣಿಯಾಗಿದೆ, ಆದರೆ ಇತರ ಕವನಗಳಲ್ಲಿ ಇದು ನೇರವಾದ ಆದರೆ ಅತ್ಯಂತ ಸಾಮಾನ್ಯ ವಿಷಯಗಳ ಸೂಕ್ಷ್ಮ ವಿವರಣೆಯಾಗಿ ಮಾರ್ಪಡುತ್ತದೆ, ಹಾಗೂ ಒಮ್ಮೆಗೇ ತಮ್ಮ ಬಗ್ಗೆ ಮತ್ತು ಜಗತ್ತಿನ ಸ್ವರೂಪದ ಬಗ್ಗೆ ಗಮನಾರ್ಹವಾದದ್ದನ್ನು ಬಹಿರಂಗಪಡಿಸುತ್ತದೆ. ಆದಾಗ್ಯೂ, ಈ ತರಹದ ಸರಳತೆಯು ಮಾನವ ಜೀವನದ ಸಂಕೀರ್ಣತೆಯನ್ನು ನಿರಾಕರಿಸುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ಎಲ್ಲಾ ಮಾನವ ವ್ಯವಹಾರಗಳ ಅಂಶವಾಗಿರುವ ವಿರೋಧಾಭಾಸಗಳು ಮತ್ತು ಘರ್ಷಣೆಗಳನ್ನು ಆಸ್ಪೆನ್‌ಸ್ತ್ರೋಮ್ ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾರೆ.
ಅವರ ಹಿಂದಿನ ಸಂಕಲನಗಳಲ್ಲಿ ಕಂಡುಬರುವ ಈ ಹಲವು ಪ್ರವೃತ್ತಿಗಳನ್ನು ದೃಢೀಕರಿಸುವ ಮತ್ತು ವಿಸ್ತರಿಸುವ ಕವನಗಳ ಸಂಗ್ರಹವಾಗಿದೆ ಇದೆ. ಶೀರ್ಷಿಕೆಯ ‘Sorl’ ಎಂಬ ಪದ ‘ಮರ್ಮರ’ ಅಥವಾ ‘ಕಿರುದೆರೆ’-ಯನ್ನು ಸೂಚಿಸುತ್ತದೆ, ಹಾಗೆಯೇ ಇಲ್ಲಿರುವ ಕವಿತೆಗಳು ಸೂಕ್ತವಾದ ಸಂಯಮ ಮತ್ತು ಸೂಕ್ಷ್ಮತೆಯೊಂದಿಗೆ ಮಾತನಾಡುತ್ತವೆ. ಮಿಡತೆ, ಹೊಟೆಲ್ ರೂಮು, ಪ್ರೀತಿ, ಬಣ್ಣ, ಹಿಮ ಚಿರತೆ – ಇವೆಲ್ಲಾ ಈ ಸಂಕಲನದ ಕವನಗಳಲ್ಲಿ ಕಂಡು ಬರುವ ವೈವಿಧ್ಯಮಯವಾದ ವಿಷಯಗಳು. ಪ್ರತಿಯೊಂದನ್ನು ಸರಳವಾದ ಭಾಷೆಯಲ್ಲಿ ಪ್ರಸ್ತುತಪಡಿಸಲಾಗಿದೆ, ಆದರೆ ಈ ಸರಳತೆಯಲ್ಲೂ ಪ್ರತಿ ಕವನದಲ್ಲಿ ಓದುಗರು ಹೊಸ ಮುಖಗಳು ಅಥವಾ ಆಯಾಮಗಳನ್ನು ನೋಡುವ ಹಾಗೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಹಲವಾರು ಕವನಗಳಲ್ಲಿ ಅಭಿವ್ಯಕ್ತಿಯ ಮಿತವ್ಯಯತೆ ಗಮನಿಸುವ ಲಕ್ಷಣಗಳಲ್ಲಿ ಒಂದಾಗಿದೆ: ಕೇವಲ ಐದು ಚಿಕ್ಕ ಸಾಲುಗಳ ಕವಿತೆಗಳಿವೆ, ಆದರೆ ದೀರ್ಘವಾದ ಕವಿತೆಗಳು ಕೂಡ ಮೂವತ್ತು ಸಾಲುಗಳನ್ನು ಮೀರುವುದಿಲ್ಲ. ಈ ಕವನಗಳು ‘ಮರ್ಮರಗಳು’ ಅಥವಾ ‘ಕಿರುದೆರೆ’ಗಳಾಗಿರಬಹುದು, ಆದರೆ ಅವು ಅಲ್ಪವೇನಲ್ಲ. ಈ ಕವನಗಳ ಮೂಲವು ಮಾನವ ಅನುಭವದ ಆಳದಲ್ಲಿದೆ.”
ಆಸ್ಪೆನ್‌ಸ್ತ್ರೋಮ್-ರ ಹದಿಮೂರನೆಯ ಕವನ ಸಂಕಲನ ’Ty’ 1993-ರಲ್ಲಿ ಪ್ರಕಟವಾಯಿತು. ವಿಮರ್ಶಕ ರಾಬರ್ಟ್ ಫುಲ್ಟನ್-ರ ಪ್ರಕಾರ, ’Ty’ ಎಂದರೆ ನಿಘಂಟಿನ ಅರ್ಥದಲ್ಲಿ ”for, because,” ಆದರೆ ಇದು ಒಂದು ತರಹದ ಜಾರಿಕೆಯ ಪುಟ್ಟ ಪದವಾಗಿದ್ದು, ಸಂದರ್ಭಕ್ಕೆ ಅನುಗುಣವಾಗಿ ಸಾಕಷ್ಟು ವೈವಿಧ್ಯತೆಯೊಂದಿಗೆ ವರ್ತಿಸಬಹುದು. “Elegies and Other Poems” ಎಂಬುದು ಈ ಸಂಕಲನದ ಉಪಶೀರ್ಷಿಕೆ. ಇದು ವಿಚಾರಮಾಡತಕ್ಕಂತಹ ವಿಷಯ, ಏಕೆಂದರೆ ಇಲ್ಲಿನ ಮೂರು ಕವಿತೆಗಳಿಗೆ “ಎಲಿಜಿ” (ಚರಮಗೀತೆ) ಎಂಬ ಶೀರ್ಷಿಕೆ ಇದೆ ಎಂಬ ವಾಸ್ತವಕ್ಕಿಂತ ಹೆಚ್ಚಿನದನ್ನು ಸೂಚಿಸುತ್ತದೆ. ಆಸ್ಪೆನ್‌ಸ್ತ್ರೋಮ್ ತನ್ನ ಜೀವನದುದ್ದಕ್ಕೂ “ಎಲಿಜಿ”-ಗೆ ಹೋಲುವ ಹಲವಾರು ಕವನಗಳನ್ನು ಬರೆದರು. ‘ಎಲಿಜಿ’ಯ ಧ್ವನಿಯ ಹಲವು ತರದ ಅಭಿಪ್ರಾಯಗಳನ್ನು ಹಾಗೂ ಭಾವನೆಗಳನ್ನು ತನ್ನೊಂದಿಗೆ ಒಯ್ಯುವ ಸಾಧ್ಯತೆಗಳಿರುವ ಧ್ವನಿ. ಅವರ ಕಾವ್ಯಕ್ಕೆ ಅದರ ಸ್ವಂತ ನಾದವನ್ನು ನೀಡುವ ವಸ್ತುಗಳಲ್ಲಿ ಈ ‘ಎಲಿಜಿ’ಯ ಧ್ವನಿಯೂ ಒಂದು.
ಆಸ್ಪೆನ್‌ಸ್ಟ್ರಾಮ್ ತನ್ನ ಕೇಂದ್ರ ವಸ್ತುಗಳನ್ನು ಕೇಂದ್ರದಿಂದ ಆಚೆಯಿರುವ ವಿಷಯಗಳಲ್ಲಿ ಕಂಡುಕೊಳ್ಳುತ್ತಾರೆ, ಉದಾಹರಣೆಗೆ, ದಿನದ ಅಂಚಿನ ಭಾಗಗಳಲ್ಲಿ, ಒಂದು ರೈಲಿನಿಂದ ಹೊರಗೆ ಕಾಣುವ ದೃಶ್ಯಗಳಲ್ಲಿ, ಮಗುವಿನ ಅಥವಾ ಬೆಕ್ಕಿನ ದೃಷ್ಟಿಯಿಂದ ಕಂಡ ದೃಶ್ಯಗಳಲ್ಲಿ. ನಗರ ಕೇಂದ್ರಗಳಿಂದ ದೂರವಿರುವ ದಲರ್ನಾದಲ್ಲಿ ಕಳೆದ ಬಾಲ್ಯಕಾಲದ ನೆನಪುಗಳಲ್ಲಿ ಕಂಡುಕೊಳ್ಳುತ್ತಾನೆ. ಆಸ್ಪೆನ್‌ಸ್ಟ್ರಾಮ್ ತನ್ನ ಕಾವ್ಯ-ವಸ್ತುಗಳನ್ನು ಕನಸುಗಳಲ್ಲಿಯೂ ಕಂಡುಕೊಳ್ಳುತ್ತಾರೆ; ಅವರ ಅನೇಕ ಕವಿತೆಗಳು ಮತ್ತು ಗದ್ಯ ತುಣುಕುಗಳು ಕನಸುಗಳ ಘಟನೆಗಳ ಪೂರ್ಣ-ಎಚ್ಚೆತ್ತ ಆವೃತ್ತಿಯನ್ನು ನೀಡುವ ಪ್ರಯತ್ನಗಳಾಗಿವೆ. ಇಲ್ಲಿ, ಉದಾಹರಣೆಗೆ, “The Dream About the Giant Ice Cube” ಎಂಬ ಕವನದಲ್ಲಿ (ಒಂದು ಬೃಹತ್ ಮಂಜುಗಡ್ಡೆಯ ಬಗ್ಗೆ ಕಂಡ ಕನಸಿನ ಬಗ್ಗೆ), ಅವರು ಮಂಜುಗಡ್ಡೆಯೊಳಗೆ ಒಂದು ಇಡೀ ಚಟುವಟಿಕೆಯ ನಗರವನ್ನು ನೋಡುತ್ತಾರೆ:
ನನಗೆ ಅತಿ ಆಶ್ಚರ್ಯವೆನಿಸಿದ್ದು ಅಲ್ಲಿದ್ದ ಸಂಪೂರ್ಣ ಸ್ಪಷ್ಟತೆ.
ನಾನು ಇಲ್ಲಿಯವರೆಗೆ ನೋಡಿದ್ದು
ಗೀಚಿದ ಮತ್ತು ಅಸಮವಾದ ಕಿಟಕಿಗಳು.
ನಮ್ಮ ಬಯಕೆಯ ಮಂಜು ನಾವು ನೋಡುವುದನ್ನು ಮಬ್ಬುಗೊಳಿಸುತ್ತದೆ.
ತನ್ನ ಸಮೀಕ್ಷೆಯನ್ನು ಕೊನೆಗೊಳುಸುತ್ತಾ, ರಾಬರ್ಟ್ ಫುಲ್ಟನ್ ಹೇಳುತ್ತಾರೆ, ‘Ty’ ಸಂಕಲನದಲ್ಲಿ ಬರೀ ಇಪ್ಪತ್ಮೂರು ಕವನಗಳು ಮಾತ್ರ; ಒಟ್ಟು ಸೇರಿ ಸುಮಾರು 380 ಸಾಲುಗಳು ಅಷ್ಟೇ. ಕವಿಗೆ ಎಪ್ಪತ್ತರ ವಯಸ್ಸು ದಾಟಿದ್ದರೂ ಅವರು ಪಡಪೋಸಿಯೇನಲ್ಲ; ಅನೇಕ ತರುಣ ಕವಿಗಳು ಇಪ್ಪತ್ತು ಪುಟಗಳಲ್ಲಿ ಹೇಳಲು ಪ್ರಯತ್ನಿಸುವ ವಿಷಯಗಳನ್ನು ಇವರು ಇಪ್ಪತ್ತು ಪದಗಳಲ್ಲಿ ಸೂಚಿಸುತ್ತಾರೆ.”
ವೇರ್ನರ್ ಆಸ್ಪೆನ್‌ಸ್ತ್ರೋಮ್ ಅವರ ಕವನಗಳು ಜೀವನದ ಹಲವು ಮುಖಗಳನ್ನು ತೋರಿಸುತ್ತವೆ. ಅನಿರೀಕ್ಷಿತ ಮತ್ತು ನಿಖರವಾದ ರೂಪಕಗಳು ಮತ್ತು ಆಳವಾದ ಪ್ರತಿಫಲಿತ ಚಿಂತನೆಯನ್ನು ಹುಟ್ಟುಹಾಕುವ ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು ಬಾಲ್ಯದಲ್ಲಿ ಕಂಡು ಮೆಚ್ಚಿದ ಪ್ರಕೃತಿ ಮತ್ತು ಭೂದೃಶ್ಯಗಳು ಅವರ ಕಾವ್ಯದ ಸಾಮಾನ್ಯ ವಿಷಯಗಳಲ್ಲಿ ಒಂದಾಗಿದೆ.
ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ವೇರ್ನರ್ ಆಸ್ಪೆನ್‌ಸ್ತ್ರೋಮ್-ರ ಐದೂ ಕವನಗಳನ್ನು ಮಲೆನಾ ಮೋರ್ಲಿಂಗ್ (Malena Mörling) ಮತ್ತು ಜೊನಸ್ ಎಲೆರ್ಸ್ತರೋಮ್ (Jonas Ellerström) ಅವರು
ಮೂಲ ಸ್ವೀಡಿಷ್ ಭಾಷೆಯಿಂದ ಇಂಗ್ಲಿಷ್-ಗೆ ಅನುವಾದಿಸಿದ್ದಾರೆ.
1
ಈ ನಾಯಿಗಳು
ಮೂಲ: The Dogs
ಈ ರಾತ್ರಿ ವಿಶಾಲವಾಗಿದೆ.
ಆಕಾಶಗಳು ಮೌನವಾಗಿ ತಿರುಗುತ್ತಿವೆ.
ಚಂದ್ರ ತೇಲಿ ಹೋಗುತ್ತಿದ್ದಾನೆ ಹಿಮ-ದೋಣಿಯಲ್ಲಿ.
ಈ ಊಳಿಡುವ ನಾಯಿಗಳು,
ಏನನ್ನು ಅರಸುತ್ತಿವೆ ಇವು?
ಮೈರೋಮ ನಿಮಿರಿಸಿ ನಿಂತ ಆ ನಾಯಿ,
ಮಗುವಿನಂತೆ ಕುಂಯ್‌ಗುಡುವ ಆ ನಾಯಿ,
ತಾರೆಯ ಕಿಡಿಗಳನ್ನು ಕಸಿದ ಆ ನಾಯಿ –
ಈ ನಾಯಿಗಳು ಬಲಹೀನ,
ಇವುಗಳ ಬಾಯಾರಿಕೆ ಇಲ್ಲಿ ತಣಿಯದು.
ಯಾಕೆ ಇವು ಕಣಿವೆಗಳಲ್ಲಿ,
ಕುಳಿ ತುಂಬಿದ ಬಯಲುಗಳಲ್ಲಿ
ಅಂಡಲೆಯುತ್ತಿರುತ್ತವೆ?
ಏನ ಹುಡುಕುತ್ತಿವೆ ಇವು
ಬೆಟ್ಟಗಳ ಗವಿಗಳಲ್ಲಿ,
ತೊರೆದ ಶಹರುಗಳಲ್ಲಿ?
ಏನಿಲ್ಲ ಇಲ್ಲಿ
ತಾರೆಗಳು ಹಾಗೂ ದಪ್ಪ ತೊಗಲಿನ ಹಲ್ಲಿಗಳ ವಿನಾ,
ಮತ್ತೆ ರಾತ್ರಿ ವಿಶಾಲವಾಗಿದೆ,
ಆಕಾಶಗಳು ಮೌನವಾಗಿ ತಿರುಗುತ್ತಿವೆ.
2
ಮೆಟ್ಟುಗಳು ಹೊರಗೆ ಹೋಗಲು ಹಾತೊರೆಯುತ್ತವೆ
ಮೂಲ: Shoes Long to go Out
ಈಗ ತಾನೆ ಗುಡುಗುತ್ತಿತ್ತು ಆಕಾಶ.
ಈಗ ನಿಂತಿದೆ.
ನನ್ನ ಬಳಿ ನಾಯಿ ಇಲ್ಲ.
ಆದರೆ ಒಂದು ಜತೆ ಮರದ ಮೆಟ್ಟುಗಳಿವೆ.
ಬಾಗಿಲ ಬಳಿ ನಿಂತಿರುತ್ತವೆ
ಬೊಗಳುತ್ತಾ.
3
ನೀನು, ನಾನು, ಮತ್ತು ಈ ಜಗತ್ತು
ಮೂಲ: You and I and the World
ಕೇಳಬೇಡ ‘ನೀನು’ ಯಾರು ಅಥವಾ ‘ನಾನು’ ಯಾರೆಂದು
ಮತ್ತೆ ಯಾವುದು ‘ಯಾಕೆ’ ಇದೆ ಎಂದು, ಇದೆ ಅಷ್ಟೆ.
ಈ ಗೋಜಲುಗಳನ್ನೆಲ್ಲಾ ಪ್ರೊಫೆಸರ್-ಗಳು ಬಿಡಿಸುತ್ತಾರೆ,
ಅದು ಅವರ ಕಸುಬು.
ತಕ್ಕಡಿಯನ್ನು ಅಡುಕಳದ ಮೇಜಿನ ಮೇಲೆ ಇಡು
ವಾಸ್ತವತೆ ತನ್ನನ್ನು ತಾನೇ ತೂಗಿಸಿಕೊಳ್ಳಲಿ.
ಕೋಟು ತೊಟ್ಟುಕೊ.
ಕೋಣೆಯ ಬೆಳಕನ್ನು ಆರಿಸು.
ಬಾಗಿಲು ಬಂದು ಮಾಡು.
ಮೃತರ ದೇಹಗಳು ಕೆಡದಂತೆ ಮೃತರೇ
ಪರಿಮಳ ಪದಾರ್ಥಗಳ ಹಚ್ಚಿಕೊಳ್ಳಲಿ.
ನೋಡು ಈಗ ನಡೆದುಕೊಂಡು ಹೋಗುತ್ತಿದ್ದೇವೆ.
ಬಿಳಿ ಬಣ್ಣದ ರಬ್ಬರ್ ಬೂಟುಗಳನ್ನ ತೊಟ್ಟವನು
ನೀನು.
ಕಪ್ಪು ಬಣ್ಣದ ರಬ್ಬರ್ ಬೂಟುಗಳನ್ನ ತೊಟ್ಟವನು
ನಾನು.
ಮತ್ತೆ ನಮ್ಮಿಬ್ಬರ ಮೇಲೆ ಸುರಿಯುತ್ತಿರುವ ಮಳೆ,
ಅದು ಮಳೆ.
4
ವಿಶ್ವವೃಕ್ಷ
ಮೂಲ: The Tree of the World
ಕಳೆದ ರಾತ್ರಿ ನಾನು ವಿಶ್ವವೃಕ್ಷವ ಕಂಡೆ,
ನಿಗೂಢವಾಗಿತ್ತು, ಅಗಾಧ ನೆರಳು ಬೀರುತ್ತಿತ್ತು.
ಒಂದು ವಿಶಾಲವಾದ ಕಂದಿದ ಕಂದೀಲು-ಮರದಂತೆ
ಸ್ವರ್ಗದ ಬೆಳಗಿದ ಕಿಂಡಿಗಳನ್ನು ಕವಿಸಿತ್ತು.
ಶರತ್ಕಾಲದ ಮರ, ನೊಂದ ಮರ,
ಅಚಲ, ಜಿನುಗುತ್ತಿರುವ ತೊಗಟೆಯ ಮರ.
ಚಂಡಮಾರುತಗಳು ಬಹುಶಃ ಉಳಿದಿರಬಹುದು
ಹಾಗೂ ಇರಿಯುವ ಮನುಜ ಚೀತ್ಕಾರಗಳು,
ಆದರೆ ಇವೆಲ್ಲ ಎಲ್ಲೋ ಆಳದಲ್ಲಿ ಸಂಭವಿಸಿತು,
ಅಲ್ಲಿ ಮಾರ್ಪಿಗೆ ಯಾವುದೇ ಅಸ್ಪದ ಇರುವುದಿಲ್ಲ.
ವೃಕ್ಷವೊಂದನ್ನ ಕಂಡೆ
ಹಾಗೂ ಅದರಲ್ಲಿ
ಕೊಂಬೆಯಿಂದ ಕೊಂಬೆಗೆ
ಮೆಲ್ಲಮೆಲ್ಲನೆ ಜರಗುವ ಜಡಬಡಿದ
ಮರಣ ಪಕ್ಷಿಗಳನ್ನ ಕಂಡೆ.
5
ಆ ಭಾನುವಾರ
ಮೂಲ: The Sunday
ಮತ್ತೆ ಮರಳಿ ಬರಲಾರದೆಂದೇ
ನಾನೀ ದಿನವನ್ನು ಮರೆಯಲಾರೆ.
ಸೂರ್ಯ ಪೂರ್ವದಲ್ಲಿ ಉದಯಿಸಿದ,
ಆಕಾಶವನ್ನು ತಾರೆಗಳಿಗೆ ಮತ್ತು
ಒಂಟಿಯಾಗಿ ಈಜುತ್ತಿರುವ
ಒಂದು ಅಂತರೀಕ್ಷನೌಕೆಗೆ ಒಪ್ಪಿಸಿ
ಪಶ್ಚಿಮದಲ್ಲಿ ಅಸ್ತಮಿಸಿದ.
ಸದಾ ಕೆಂಪಗಿರುವ ಜೆರೇನಿಯಮ್ ಹೂಗಳ ಹಿಂದಿನಿಂದ
ರೇಡಿಯೋವೊಂದು ಮಾತಾಡುತ್ತಿತ್ತು, ಹಾಡುತ್ತಿತ್ತು,
ತೆರೆದ ಜನ್ನಲಿನ ದ್ವಾರಾ.
ಹೆಂಗಸೊಬ್ಬಳು ಕತ್ತರಿಯಿಂದ ಬ್ಲ್ಯಾಕ್-ಕರಂಟ್
ಹಣ್ಣುಗಳ ಗೊಂಚಲುಗಳನ್ನು ಕೊಯ್ದು
ಅಡಿಗೆಮನೆಗೆ ತರುತ್ತಾಳೆ.
ಹೊರಗೆ ಅಂಗಳದಲ್ಲಿ, ಸಂಜೆಯ ವಾರ್ತೆಗಳು
ಪ್ರಸಾರವಾಗುತ್ತಿರುವ ವೇಳೆ,
ಹುಡುಗನೊಬ್ಬ ಆಗಲೂ ಅಲ್ಲೇ ಕೂತಿದ್ದ
ತನ್ನ ಸ್ಕೂಟರಿನ ಪಕ್ಕದಲ್ಲಿ ಮಂಡಿಯೂರಿ,
ಸ್ಪಾರ್ಕ್ ಪ್ಲಗ್ಗಿನ ಕಿಡಿಗಳನ್ನು ನೋಡುತ್ತಾ ಖುಷಿಪಡುತ್ತಿದ್ದ.
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.