ಶಾಲೆಯ ಪಠ್ಯದ ಭಾಗವಾಗಿ ಪತ್ರಲೇಖನ ಇರುತ್ತಿತ್ತು. ಮಕ್ಕಳ ಪತ್ರಕ್ಕಾಗಿ ಹೆತ್ತವರು, ಹೆತ್ತವರ ಪತ್ರಕ್ಕಾಗಿ ಮಕ್ಕಳು ಕಾಯುತ್ತಿದ್ದರು. ಹಬ್ಬ ಅಥವಾ ವಿಶೇಷ ಸಂದರ್ಭಗಳ್ಲಿ ಶುಭಾಶಯ ಅಥವಾ ಹಾರೈಕೆಯ ಪತ್ರಗಳಿಗೆ ಹೆಚ್ಚಿನ ಮಾನ್ಯತೆ ಇತ್ತು. ಕಳಿಸುವವರು ಮತ್ತು ಪಡೆಯುವವರ ನಡುವೆ ಇದೊಂದು ಸ್ನೇಹಸೇತುವಾಗಿತ್ತು. ಈಗಿನಂತೆ ದೂರವಾಣಿಯ ಸಂಪರ್ಕ ಇಲ್ಲದಿದ್ದುದರಿಂದ ಪತ್ರವೇ ಸರ್ವಸ್ವವಾಗಿತ್ತು. ತಪ್ಪಿಲ್ಲದೆ ಬರೆಯಲು, ಬರೆದುದನ್ನು ಓದಲು ಕೈಬರಹ ಅನಿವಾರ್ಯವಾಗಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನಾರನೆಯ ಕಂತಿನಲ್ಲಿ ಕೈ ಬರಹದ ಕುರಿತ ಬರಹ ನಿಮ್ಮ ಓದಿಗೆ
ನನ್ನ ಪಾಟಿ ಕರಿಯದು ಸುತ್ತುಕಟ್ಟು ಬಿಳಿಯದು
ಬರೆಯಲಿಕ್ಕೆ ಬರುವುದು ಬಹಳ ಚಂದ ಇರುವುದು
ಅಪ್ಪ ದುಡ್ಡು ಕೊಟ್ಟರು ಬಳಪ ಒಂದು ತಂದೆನು
ಅ ಆ ಇ ಈ ಬರೆದೆನು ಅಮ್ಮನ ಮುಂದೆ ಹಿಡಿದೆನು …….
ಹೀಗೆ ಮುಂದುವರಿಯುತ್ತದೆ ಈ ಶಿಶುಗೀತೆ. ಇದನ್ನು ಬರೆದವರ ಬಗೆಗಿನ ಮಾಹಿತಿ ಲಭ್ಯವಾಗಲಿಲ್ಲ. ಒಂದು ಕಾಲಕ್ಕೆ ಮಕ್ಕಳು ಬಹಳ ಖುಶಿಯಿಂದ ಇದನ್ನು ಹಾಡಿ ಕುಣಿಯುತ್ತಿದ್ದರು. ಬಳಪದಿಂದ ಪಾಟಿಯ ಮೇಲೆ ಬರೆಯುತ್ತಿದ್ದ ಕಾಲದಲ್ಲಿ ಬರೆದ ಗೀತೆಯಿದು. (ಈಗಲೂ ಜಾಲತಾಣಗಳಲ್ಲಿ ಇದನ್ನು ತಪ್ಪುತಪ್ಪಾಗಿ ಹಾಡುವುದು ದೊರೆಯುತ್ತದೆ) ನಾವು ಶಾಲೆಗೆ ಹೋಗುತ್ತಿದ್ದಾಗ ಪ್ರಾಥಮಿಕ ಶಾಲೆಯ ಮಕ್ಕಳು ಬರೆಯುತ್ತಿದ್ದುದು ಬಳಪದಿಂದ ಪಾಟಿಯ ಮೇಲೆ. (ಅದಕ್ಕೂ ಹಿಂದೆ ಅಕ್ಷರಗಳನ್ನು ಕೈಯಿಂದ ಅಥವಾ ಕಡ್ಡಿಯಿಂದ ಮರಳಿನ ಮೇಲೆ ಬರೆಯಿಸುತ್ತಿದ್ದರಂತೆ) ಕಾಗುಣಿತವನ್ನು ತಿದ್ದಿತಿದ್ದಿ ಬರೆದು ಕಲಿಯಬೇಕಿತ್ತು. ಅಕ್ಷರ ಡೊಂಕಾದರೆ, ಬರೆದುದು ತಪ್ಪಾಗಿದ್ದರೆ ಅದನ್ನು ತಿದ್ದಿ ಬರೆಯಬಹುದಿತ್ತು. ನಾವು ಸೊಟ್ಟಸೊಟ್ಟಾಗಿ ಬರೆದರೆ ನಮ್ಮ ಗುರುಗಳು ಇದೆಂಥ ಕಾಗೆಕಾಲು ಗುಬ್ಬಿಕಾಲು ಅಕ್ಷರ ಎಂದು ಬೈಯುತ್ತಿದ್ದರು. ಗುಂಡಾಗಿ ಬರೆಯುವುದನ್ನು ಕಲಿಯಲು ಕಾಪಿ ಪುಸ್ತಕದಲ್ಲಿ ಬರೆಯುವುದು ನಮ್ಮ ಶಿಕ್ಷಣದ ಭಾಗವಾಗಿತ್ತು. ಕಾಪಿ ಪುಸ್ತಕದಲ್ಲಿ ಅಚ್ಚಾಗಿರುತ್ತಿದ್ದ ಮೇಲಿನ ಸಾಲನ್ನು ಕೆಳಗೆ ಕೊಟ್ಟಿರುವ ಗೆರೆಯ ಒಳಗಡೆ ಸರಿಯಾಗಿ ಬರೆಯುವ ಮೂಲಕ ನಮ್ಮ ಅಕ್ಷರಗಳನ್ನು ಸುಧಾರಿಸಿಕೊಳ್ಳಲು ಅವಕಾಶವಿತ್ತು.
ನಮ್ಮ ಕಾಲದ ಅನೇಕರಿಗೆ ಈಗಲೂ ನೆನಪಿರಬಹುದು; ʻಶುದ್ಧಬ್ರಹ್ಮ ಪರಾತ್ಪರ ರಾಮʼ ಎನ್ನುವ ಬಾಲರಾಮಾಯಣದ ಪಠ್ಯವನ್ನು ನಾವು ಕಾಪಿಪುಸ್ತಕದಲ್ಲಿ ಬರೆಯುತ್ತಿದ್ದೆವು. ಕನ್ನಡವಾದರೆ ನಾಲ್ಕು ಸಾಲಿನ ಗೆರೆಗಳು ಇರುತ್ತಿದ್ದವು. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಸಲಾಗುತ್ತಿತ್ತು. ಅನಂತರ ಇಂಗ್ಲಿಷ್ ಅಕ್ಷರಗಳನ್ನು ಸುಂದರವಾಗಿ ಬರೆಯಲು ಮೂರು ಸಾಲು ಗೆರೆಗಳಿರುವ ಪುಸ್ತಕದಲ್ಲಿ ಬರೆಯಬೇಕಿತ್ತು. ನಮಗೆ ಪರೀಕ್ಷೆಯಲ್ಲಿ ಸ್ಫುಟವಾದ ಅಕ್ಷರಗಳಿಗೆ ಐದು ಅಂಕಗಳು ಇರುತ್ತಿದ್ದವು. ಈಗಿನ ಮಕ್ಕಳಿಗೆ ಹೇಳಿದರೆ ಇದೊಂದು ಅಜ್ಜಿಕತೆಯಂತೆ ಕಾಣಬಹುದು. ಹಾಗೆ ಬರೆಯುತ್ತಿದ್ದುದೇ ಶ್ರೇಷ್ಟ ಎಂದು ಹೇಳಹೊರಟಿಲ್ಲ. ಬದಲಾವಣೆ ಎನ್ನುವುದು ಜೀವಂತ ಸಮಾಜದ ಲಕ್ಷಣವೇ ಆಗಿರುವಾಗ ಹಲವು ರೀತಿಯ ಬದಲಾವಣೆಗೆ ನಾವು ತೆರೆದುಕೊಂಡಿದ್ದೇವೆ. ಬದಲಾವಣೆಗೆ ಎರಡು ಮುಖಗಳಿರುತ್ತವೆ. ಇದೂ ಕೂಡ ಹಾಗೆಯೇ. ಒಮ್ಮೆ ಹಿಂದಿರುಗಿ ನೋಡುವ ಕುತೂಹಲ ಅಷ್ಟೆ.
ಅಳಿಸಿ ಬರೆಯುವ ವಿಷಯವನ್ನು ಪ್ರಸ್ತಾಪಿಸಿದೆ. ಕುಮಾರವ್ಯಾಸ ಹೀಗೆ ಹೇಳುತ್ತಾನೆ: ʻಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆʼ ಎನ್ನುವುದಾಗಿ. ʻಕರ್ನಾಟ ಭಾರತ ಕಥಾಮಂಜರಿʼಯಂತಹ ಮಹಾಕಾವ್ಯವನ್ನು ಬರೆದಿರುವ ಮಹಾಕವಿಗೆ ಅದು ಸಾಧ್ಯವಾಗಿದೆಯೇ ವಿನಾ ಜನಸಾಮಾನ್ಯರಿಗೆ ಬಹಳ ಕಷ್ಟ. ನನ್ನಂಥವರಿಗೆ ಏನನ್ನೇ ಬರೆಯಲಿ, ಮತ್ತೆ ಮತ್ತೆ ಅಳಿಸಿ ಬರೆಯುವ ರೂಢಿ. ಬರೆದುದನ್ನು ಅಳಿಸಿ ಬರೆಯದಂತಹ ಸಾಮರ್ಥ್ಯವನ್ನು ಉಳ್ಳವರು ಈ ಕಾಲದಲ್ಲಿಯೂ ಇದ್ದರು/ ಇದ್ದಾರೆ. ಕೇವಲ ಏಳನೆಯ ತರಗತಿವರೆಗೆ ಓದಿದ್ದ ಯಕ್ಷಗಾನ ಭಾಗವತರೊಬ್ಬರು ಹತ್ತಾರು ಸಾವಿರ ಪದ್ಯಗಳನ್ನು ಅಳಿಸದೆ ಬರೆಯುತ್ತಿದ್ದರು. ನನ್ನ ಗೆಳತಿಯೊಬ್ಬರ ಬರವಣಿಗೆಯ ಪ್ರಮಾಣವನ್ನು ಕಂಡು ಅವರನ್ನು ಕೇಳಿದ್ದೆ: ಇಷ್ಟೊಂದು ಬರೆಯಲು ಸಮಯ ಹೇಗೆ ಸಿಗುತ್ತದೆ ಎಂದು. ಅವರು ಬರೆಯುವ ಕವನ, ಕತೆ, ಕಾದಂಬರಿ, ವಿಮರ್ಶೆ ಯಾವುದಿರಲಿ ಅಳಿಸದೆ ಬರೆಯುವುದು ಅವರ ಬರವಣಿಗೆಯ ರೀತಿ ಎನ್ನುವುದು ತಿಳಿಯಿತು.
ಪಾಟಿಯ ಮೇಲೆ ಬರೆಯುತ್ತಿದ್ದ ಮುಂದಿನ ಘಟ್ಟದಲ್ಲಿ ಕಾಗದದ ಬಳಕೆಯೇ ವ್ಯಾಪಕವಾಗಿತ್ತು. ಬಳಪದ ಸ್ಥಾನದಲ್ಲಿ ಪೆನ್ಸಿಲ್ ಮತ್ತು ಪೆನ್ನುಗಳು ಬಂದವು. ಬರೆಯುವ ರೂಢಿ ಮುಂದುವರಿಯಿತು. ಒಳ್ಳೆಯ ಕೈಬರಹ ಕೌಶಲ್ಯಪೂರ್ಣವಾದುದು. ಅದು ಈ ಕಾಲಕ್ಕೆ ಅಪರೂಪವೇ. ಎಲ್ಲ ಕಡೆಯೂ ಇರುವ ಧಾವಂತ ಇಲ್ಲಿಯೂ ಇದೆ. ಕೈಬರಹದ ವಿಷಯಕ್ಕೆ ಬಂದರೆ ಕೆಲವರ ಬರವಣಿಗೆ ʻಮಮ ಲಿಖಿತಂ ಮಮಗಸಾಧ್ಯಂ ಮಮ ಪುತ್ರ ಲಿಖಿತಂ ಬ್ರಹ್ಮಗಸಾಧ್ಯಂʼ ಎನ್ನುವಂತಹುದು. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ, ಅನೇಕ ವೈದ್ಯರ ಕೈಬರಹ. ಕೆಲವು ವೈದ್ಯರು ಬರೆದುಕೊಟ್ಟಿರುವ ಚೀಟಿಯನ್ನು ನಾವು ಎಷ್ಟೇ ತಿಣುಕಾಡಿದರೂ ಓದಲಾರೆವು. ಮೊದಲೇ ಅದು ನಮಗೆ ತಿಳಿಯದ ವೈದ್ಯಲೋಕ, ಜೊತೆಗೆ ಅವರ ಕೈಬರಹ ನಮಗೆ ಓದಲಿಕ್ಕೆ ಸಾಧ್ಯವಾಗದಂತೆ ಇರುತ್ತದೆ. ಮೆಡಿಕಲ್ ಸ್ಟೋರಿನವರು ಮಾತ್ರ ಅದನ್ನು ಅರ್ಥಮಾಡಿಕೊಂಡು ಔಷಧಿ ಕೊಡಬಲ್ಲರು ಅಷ್ಟೆ. ಒಮ್ಮೊಮ್ಮೆ ಅಲ್ಲಿಯೂ ಎಡವಟ್ಟಾಗುವುದಿದೆ. ಯಾವುದೋ ಮಾತ್ರೆಯನ್ನು ಕೊಟ್ಟು ರೋಗಿಯ ಸ್ಥಿತಿ ವ್ಯತ್ಯಾಸವಾದುದನ್ನು ಒಮ್ಮೆ ನಾವೇ ಅನುಭವಿಸಿದ್ದಿದೆ. ಇನ್ನೊಂದು ಉದಾಹರಣೆ, ಶಾನುಭೋಗರು ಬರೆಯುತ್ತಿದ್ದ ಮೋಡಿ ಅಕ್ಷರಗಳು. ಅದನ್ನು ಕೂಡ ಓದುವುದು ಸುಲಭವಿರಲಿಲ್ಲ. ನಮ್ಮ ಆಸ್ತಿಯ ವಿವರಗಳನ್ನು ಓದಿ ತಿಳಿಯೋಣ ಎಂದರೆ ಅವರನ್ನೇ ಕೇಳಿ ತಿಳಿದುಕೊಳ್ಳಬೇಕಿತ್ತು. ಇನ್ನೊಂದು ಕುತೂಹಲದ ಸಂಗತಿ ಎಂದರೆ ʻಎದೆ ಸೀಳಿದರೆ ಮೂರಕ್ಷರ ಇಲ್ಲ ನಂಗೆ ಆಚಾರ ಹೇಳೋಕೆ ಬಂದʼ ಎಂದು ಹೇಳುವುದಿತ್ತು. ಇದು ಶಿಕ್ಷಣದ ವಿಷಯವಷ್ಟೇ ಆಗಿರದೆ, ಅಕ್ಷರದ ಬಗೆಗಿನ ಅಭಿಮಾನವಾಗಿಯೂ ಕಾಣುತ್ತದೆ.
ಕೆಲವರ ಕೈಬರಹ ಓದುವುದೇ ಖುಶಿ ಎನಿಸುತ್ತದೆ. ಕೆಲವೊಬ್ಬರು ಮುತ್ತು ಪೋಣಿಸಿದಂತೆ ಬರೆಯುತ್ತಾರೆ. ನನ್ನ ಪರಿಚಯದವರೊಬ್ಬರು ಪುಟದ ಮೊದಲ ಸಾಲಿನಲ್ಲಿ ಬರವಣಿಗೆ ಪ್ರಾರಂಭಿಸಿದರೆ ಕೊನೆಯ ಸಾಲಿನವರೆಗೂ ತುಸುವೂ ಡೊಂಕಿಲ್ಲದಂತೆ ಬರೆಯುವವರು. ಗೆರೆಯೇ ಇಲ್ಲದ ಹಾಳೆಯ ಮೇಲಿನ ಬರವಣಿಗೆಯೂ ಅದೇ ರೀತಿಯದು. ಗುಂಡಾದ ಅಕ್ಷರ ಅಷ್ಟೇ ಅಲ್ಲ, ಸಾಲುಗಳು ತುಸುವೂ ಕೆಳಗೆ ಮೇಲೆ ಆಗದಂತೆ ಬರೆಯುತ್ತಾರೆ. ನೂರಾರು ಪುಟಗಳ ಬರವಣಿಗೆಯಲ್ಲಿಯೂ ಭಿನ್ನತೆ ಕಾಣಿಸುವುದಿಲ್ಲ. ಕೈಬರಹದ ಬಗೆಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆಗಳೂ ನಡೆದಿವೆ. ಕೈಬರಹವು ಬರೆದವರ ವ್ಯಕ್ತಿತ್ವದ ವಿಶೇಷತೆಯನ್ನು ಅರಿಯುವ ದಿಸೆಯಲ್ಲಿ ಅರಿಸ್ಟಾಟಲ್‌ನ ಕಾಲದಿಂದಲೂ ಸಂಶೋಧನೆಗಳು ನಡೆಯುತ್ತ ಬಂದಿವೆ. ಕೈಬರಹದ ಮೂಲಕ ಅವರವರ ಮನೋಭಾವವನ್ನು ವಿಶ್ಲೇಷಿಸಲು ಸಾಧ್ಯ ಎನ್ನುತ್ತಾರೆ ಕೈಬರಹ ತಜ್ಞರು. ಕೈಬರಹವು ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಬಹಳ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.
ಶಾನುಭೋಗರು ಬರೆಯುತ್ತಿದ್ದ ಮೋಡಿ ಅಕ್ಷರಗಳು. ಅದನ್ನು ಕೂಡ ಓದುವುದು ಸುಲಭವಿರಲಿಲ್ಲ. ನಮ್ಮ ಆಸ್ತಿಯ ವಿವರಗಳನ್ನು ಓದಿ ತಿಳಿಯೋಣ ಎಂದರೆ ಅವರನ್ನೇ ಕೇಳಿ ತಿಳಿದುಕೊಳ್ಳಬೇಕಿತ್ತು. ಇನ್ನೊಂದು ಕುತೂಹಲದ ಸಂಗತಿ ಎಂದರೆ ʻಎದೆ ಸೀಳಿದರೆ ಮೂರಕ್ಷರ ಇಲ್ಲ ನಂಗೆ ಆಚಾರ ಹೇಳೋಕೆ ಬಂದʼ ಎಂದು ಹೇಳುವುದಿತ್ತು. ಇದು ಶಿಕ್ಷಣದ ವಿಷಯವಷ್ಟೇ ಆಗಿರದೆ, ಅಕ್ಷರದ ಬಗೆಗಿನ ಅಭಿಮಾನವಾಗಿಯೂ ಕಾಣುತ್ತದೆ.
ಕೈಬರಹ ಕುರಿತಂತೆ ʻಕ್ಯಾಲಿಗ್ರಫಿʼ ಎನ್ನುವ ಒಂದು ಶಾಖೆಯೇ ಇದೆ. ಆಯಾ ಕಾಲಘಟ್ಟದಲ್ಲಿ ವಿವಿಧ ಭಾಷೆಗಳಲ್ಲಿ, ದೇಶಗಳಲ್ಲಿ ಹಲವು ಬಗೆಯ ಪರಿಕರಗಳನ್ನು ಬಳಸಿ ಬರೆಯಲಾಗಿರುವ ಸಂಗತಿಯನ್ನು ಗಮನಿಸಬಹುದು. ಹಿಂದೆಲ್ಲ ಕಲ್ಲು, ತಾಮ್ರದ ಹಾಳೆಗಳು, ತಾಳೆಗರಿಗಳು, ಭೂರ್ಜ್ವಪತ್ರಗಳು ಬರವಣಿಗೆಗೆ ಬಳಕೆಯಾಗುತ್ತಿದ್ದವು. ಹೀಗೆ ಬರೆಯುತ್ತಿದ್ದ ಕೈಬರಹಗಳು ನಮ್ಮ ದೇಶದಲ್ಲಿ ಉಪಲಬ್ಧವಿವೆ. ಶಿಲಾಶಾಸನಗಳನ್ನು, ತಾಮ್ರಪತ್ರಗಳನ್ನು ಹಾಗೂ ತಾಳೆಗರಿಗಳನ್ನು ಶತಮಾನಗಳ ಕಾಲ ರಕ್ಷಿಸಿಡುವ ಪರಿಪಾಠವಿತ್ತು. ಕುಂಚದಿಂದ, ಕಡ್ಡಿಗಳಿಂದ ಬರೆಯಲಾಗುತ್ತಿತ್ತು. ಬರೆಯಬಲ್ಲವರಿಂದ ಅವುಗಳನ್ನು ಬರೆಯಿಸುತ್ತಿದ್ದರು. ಬರೆದವರು ಇದರಲ್ಲಿ ತಮ್ಮ ಹೆಸರನ್ನೂ ಬರೆಯುತ್ತಿದ್ದರು. ಸಾಧಾರಣವಾಗಿ ಆಳುವ ವರ್ಗದವರು ಹೀಗೆ ಬರೆಯಿಸುತ್ತಿದ್ದರು. ವಿಷಯವನ್ನು ಸಂಗ್ರಹಿಸುವ ಒಂದು ವಿನ್ಯಾಸವಾಗಿ ಅವು ಬಳಕೆಯಲ್ಲಿದ್ದದವು. ʻಇದು ಹೀಗೆಯೇʼ ಎಂದು ಹೇಳಿದರೆ ʻಅದೇನು ಶಿಲಾಶಾಸನವೇ?ʼ ಎಂದು ಕೇಳುವ ರೂಢಿಯಿದೆ. ಅಂದರೆ ಇವೆಲ್ಲವೂ ಒಮ್ಮೆ ಬರೆದರೆ ಮತ್ತೆ ಅಳಿಸಿ ಬರೆಯಲು ಆಗದವು. ರಾಜಮಹಾರಾಜರು ಇತರ ರಾಜರಿಗೆ ಅಥವಾ ತಮ್ಮ ಕೆಳಗಿನ ಅಧಿಕಾರಿಗಳಿಗೆ ಇಲ್ಲವೆ ಪಾಳೆಯಗಾರರಿಗೆ ರಾಯಸವನ್ನು ಕಳುಹಿಸಲು ಬಟ್ಟೆಯ ಮೇಲೆ ಕುಂಚದಿಂದ ಬರೆಯಿಸುತ್ತಿದ್ದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಬಟ್ಟೆಯ ಮೇಲಿನ ಬರಹವನ್ನು ಬದಲಿಸಿರುವ ಉದಾಹರಣೆಯೂ ದೊರೆಯುತ್ತದೆ. ʻಚಂದ್ರಹಾಸʼ ಕತೆಯಲ್ಲಿ ಈ ಪತ್ರವನ್ನು ತಂದವನಿಗೆ ವಿಷವನ್ನು ಕೊಡತಕ್ಕದ್ದು ಎಂದು ದುಷ್ಟಬುದ್ಧಿ ಬರೆದು ಕಳಿಸಿರುವುದನ್ನು ಓದಿದ ಅವನ ಮಗಳು ವಿಷಯೆ ʻವಿಷಯೆಯನ್ನುʼ ಎಂದು ತಿದ್ದುತ್ತಾಳೆ. ಇದರಿಂದಾಗಿ ಕತೆಯೇ ಬೇರೆಯಾಗುತ್ತದೆ.
ಒಂದು ಕಾಲದಲ್ಲಿ ಬರಹಗಾರರ, ಕಲಾವಿದರ ಕೈಬರಹಗಳನ್ನು ರಕ್ಷಿಸಿಡುವ ಪದ್ಧತಿ ಇತ್ತು. ಅಂಥವರು ಬಳಸುತ್ತಿದ್ದ ವಸ್ತುಗಳೊಂದಿಗೆ ಅವರ ಕೈಬರಹಕ್ಕೂ ಸ್ಥಾನವಿತ್ತು. ʻಓಹ್ ಅವರ ಅಕ್ಷರ ಎಷ್ಟು ಮುದ್ದಾಗಿತ್ತುʼ ಎಂದೋ ʻಎಂತಹ ಮೋಡಿ ಅಕ್ಷರʼ ಎಂದೋ ಉದ್ಘಾರ ತೆಗೆಯುವುದೂ ಇತ್ತು. ಇಪ್ಪತ್ತನೆಯ ಶತಮಾನದ ಕೆಲವು ಹೆಸರಾಂತ ಕನ್ನಡ ಬರಹಗಾರರು ಬಳಸುತ್ತಿದ್ದ ಇತರ ವಸ್ತುಗಳೊಂದಿಗೆ ಅವರ ಅಕ್ಷರಗಳು ಮತ್ತು ಸಹಿಗಳನ್ನು ಕಾಪಿಡಲಾಗಿದೆ. ಈಗಲೂ ಕೆಲವರು ಲೇಖಕರ ಸಹಿಯನ್ನು ಪಡೆಯುವ ರೂಢಿಯಿದೆ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋದಾಗ ಕೆಲವೊಮ್ಮೆ ಇದನ್ನು ಗಮನಿಸಬಹುದು. ಪುಸ್ತಕವನ್ನು ಕೊಂಡವರು ಲೇಖಕರಿಂದ ಸಹಿಯನ್ನು ಪಡೆಯುತ್ತಾರೆ. ಹಿಂದೆ ಶಿಕ್ಷಣ ಮುಗಿಸಿ ಆ ಸಂಸ್ಥೆಯಿಂದ ಹೊರಹೋಗುತ್ತಿದ್ದ ವಿದ್ಯಾರ್ಥಿಗಳು ಅಧ್ಯಾಪಕರ, ಸಹಪಾಠಿಗಳ ಸಹಿಯನ್ನು ಪಡೆದು ಜೋಪಾನ ಮಾಡುವುದಿತ್ತು. ಅನಂತರದಲ್ಲಿಯೂ ಪತ್ರವ್ಯವಹಾರ ಮಾಡುವುದಿತ್ತು. ಮನೆಯವರಿಗೆ, ಸಂಬಂಧಿಕರಿಗೆ ಪತ್ರ ಬರೆಯುವುದು ರೂಢಿಯಲ್ಲಿತ್ತು. ʻಹೋಗಿ ತಲುಪಿದ್ದಕ್ಕೆ ಎರಡು ಸಾಲು ಬರೆಯಬಹುದಿತ್ತುʼ ಎನ್ನುವ ಆಕ್ಷೇಪ ಸಾಮಾನ್ಯವಾದುದಾಗಿತ್ತು.
ಶಾಲೆಯ ಪಠ್ಯದ ಭಾಗವಾಗಿ ಪತ್ರಲೇಖನ ಇರುತ್ತಿತ್ತು. ಮಕ್ಕಳ ಪತ್ರಕ್ಕಾಗಿ ಹೆತ್ತವರು, ಹೆತ್ತವರ ಪತ್ರಕ್ಕಾಗಿ ಮಕ್ಕಳು ಕಾಯುತ್ತಿದ್ದರು. ಹಬ್ಬ ಅಥವಾ ವಿಶೇಷ ಸಂದರ್ಭಗಳ್ಲಿ ಶುಭಾಶಯ ಅಥವಾ ಹಾರೈಕೆಯ ಪತ್ರಗಳಿಗೆ ಹೆಚ್ಚಿನ ಮಾನ್ಯತೆ ಇತ್ತು. ಕಳಿಸುವವರು ಮತ್ತು ಪಡೆಯುವವರ ನಡುವೆ ಇದೊಂದು ಸ್ನೇಹಸೇತುವಾಗಿತ್ತು. ಈಗಿನಂತೆ ದೂರವಾಣಿಯ ಸಂಪರ್ಕ ಇಲ್ಲದಿದ್ದುದರಿಂದ ಪತ್ರವೇ ಸರ್ವಸ್ವವಾಗಿತ್ತು. ತಪ್ಪಿಲ್ಲದೆ ಬರೆಯಲು, ಬರೆದುದನ್ನು ಓದಲು ಕೈಬರಹ ಅನಿವಾರ್ಯವಾಗಿತ್ತು. ಇನ್ನು ಪ್ರೇಮಿಗಳ ವಿಷಯಕ್ಕೂ ಕೈಬರಹಕ್ಕೂ ಅವಿನಾಭಾವ. ಆಗಾಗ ಪತ್ರದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದ ಪ್ರೇಮಿಗಳು ಒಲವಿನವರ ಕೈಬರಹವನ್ನು ಕಾಪಿಟ್ಟು ಬೇಕಾದಾಗಲೆಲ್ಲ ಅದನ್ನು ಓದಿ ಸವಿಯುವುದೇ ರೋಚಕ ವಿಷಯವಾಗಿತ್ತು.
ಕೈಬರಹ ಹೇಗೇ ಇದ್ದಿರಲಿ ಕೆಲವರ ಸಹಿಯನ್ನು ಓದುವುದು ಮಾತ್ರ ಅಸಾಧ್ಯ. ಈ ಸಹಿ ಎನ್ನುವುದು ಒಮ್ಮೊಮ್ಮೆ ತಮಾಶೆಯಾಗಿಯೂ ಕಾಣುವುದಿದೆ. ಪರಿಚಯದವರೊಬ್ಬರು ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದಾಗ ಅವರ ಸಹಿಯನ್ನು ನೋಡಿ ನಾವು ನಗುತ್ತಿದ್ದೆವು. ಸಹಿ ಮಾಡಲು ಇರುವ ಸ್ಥಳ ಅವರಿಗೆ ಸಾಲುತ್ತಿರಲಿಲ್ಲ. ಇನ್ನು ಅವರು ಬರೆಯುತ್ತಿದ್ದ ನೋಟ್ ಓದಲು ಭಗವಂತನೇ ಬರಬೇಕಿತ್ತು. ಈಗ ಅನೇಕರಿಗೆ ಬರವಣಿಗೆ ಎಂದರೆ ಅಲರ್ಜಿ ಎನ್ನುವ ಮಟ್ಟಿನ ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ. ಪತ್ರ ಬರೆಯುತ್ತಿದ್ದ ಕಾಲದಿಂದ ವಾಟ್ಸಾಪ್ ಮೆಸ್ಸೇಜ್‌ಗೆ ನಾವು ಬದಲಾಗಿದ್ದೇವೆ.
ಕಂಪ್ಯೂಟರಿನಲ್ಲಿ ಅಳಿಸಿ ಬರೆಯುವುದು ಬಹಳ ಸುಲಭ. ಬರೆದಿರುವುದನ್ನು ಸ್ಥಳಾಂತರಿಸುವುದು ಬರವಣಿಗೆಯ ಸಹಜತೆಯೇ ಆಗಿದೆ. ಇದನ್ನೂ ನಾವು ಅಳವಡಿಸಿಕೊಳ್ಳುತ್ತ ಬಂದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಹೊಸಹೊಸ ಸಂಶೋಧನೆಗಳ ಫಲವಾಗಿ ನಾವು ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಟೈಪಿಸುವ ಕೆಲಸಕ್ಕೂ ವಿರಾಮ ಕೊಡಬಹುದು. ನಮಗೆ ಬೇಕಿರುವ ಭಾಷೆಯ ಕೀಬೋರ್ಡ್ ಓಪನ್ ಮಾಡಿಕೊಂಡು ನಾವು ಹೇಳುತ್ತ ಹೋದರೆ ಅಲ್ಲಿ ಬರೆಯುವ ಸವಲತ್ತು ದೊರೆಯುತ್ತದೆ. ಕೃತಕ ಬುದ್ಧಿಮತ್ತೆಯ ಪರಿಣಾಮದಿಂದ ನಾವು ಇನ್ನಷ್ಟು ಆಲಸ್ಯವನ್ನು ಬೆಳೆಸಿಕೊಳ್ಳಲು ಅವಕಾಶವಾಗಿದೆ. ಜರ್ಮನಿಯಲ್ಲಿ ಒಂದು ಆವಿಷ್ಕಾರ ಆಗಿರುವುದನ್ನು ಓದಿದಾಗ ಆಶ್ಚರ್ಯವಾಯಿತು. ಗಾಳಿಯ ಕೈಬರಹ. ನಾವು ಗಾಳಿಯಲ್ಲಿ ಕೈಯಾಡಿಸಿದರೆ ನಮ್ಮ ಕೈನ ತಿರುಗುವಿಕೆಯನ್ನು ಗ್ರಹಿಸಿ ಅದನ್ನು ಲಿಪಿಗೆ ಇಳಿಸುವ ಸವಲತ್ತು. ಅದಿನ್ನೂ ಸಂಶೋಧನೆಯ ಹಂತದಲ್ಲಿಯೇ ಇದೆಯಂತೆ. ಈಗಿನ ಸಂಶೋಧನೆಯ ವೇಗವನ್ನು ಗಮನಿಸದರೆ ಶೀಘ್ರದಲ್ಲಿಯೇ ಅಂತಹುದೊಂದು ದಿನ ಬರಬಹುದು.
ಮಕ್ಕಳ ವಿಷಯಕ್ಕೆ ಬಂದರೆ ಈಗ ಎಲ್ಲ ಕಡೆಯೂ ಸ್ಮಾರ್ಟ್ ತರಗತಿಗಳು ಪ್ರಾರಂಭವಾಗುತ್ತಿವೆ. ಶಿಕ್ಷಕರು ಬೋರ್ಡಿನ ಮೇಲೆ ತಮ್ಮ ಕೈಬರಹವನ್ನು ಮೂಡಿಸುವ ಅಗತ್ಯವೇ ಇಲ್ಲ. ಡಿಜಿಟಲ್ ಮೂಲಕ ಎಲ್ಲವನ್ನು ಮಕ್ಕಳಿಗೆ ಸುಲಭವಾಗಿ ತಿಳಿಸಬಹುದು/ತೋರಿಸಬಹುದು. ಬರೆಯಲು ಸೀಮೆಸುಣ್ಣ ಬೇಡ, ಬರೆದುದನ್ನು ಅಳಿಸಲು ಡಸ್ಟರ್ ಅಗತ್ಯವಿಲ್ಲ. ಸದ್ಯಕ್ಕೆ ಮಕ್ಕಳು ಪುಸ್ತಕಗಳನ್ನು ಹಿಡಿದು ಶಾಲೆಗೆ, ಕಾಲೇಜಿಗೆ ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಟ್ಯಾಬ್ ಹಿಡಿದು ಹೋಗುವ ದಿನಗಳು ದೂರವಿರಲಾರದು. ಆಗ ಕೈಬರಹ ಎನ್ನುವುದಕ್ಕೆ ಅರ್ಥವೇ ಉಳಿಯದು. ಎಷ್ಟೋ ಸಂಗತಿಗಳು ಇತಿಹಾಸವನ್ನು ಸೇರಿವೆ. ಆ ಸಾಲಿಗೆ ಇದೂ ಸೇರಬಹುದೇನೋ.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.
ತಮ್ಮ ಬರಹ ನನಗೆ ಬಾಲ್ಯದ ಸವಿನೆನಪುಗಳನ್ನು ಮೆಲಕು ಹಾಕುವಂತೆ ಮಾಡಿತು. ಅಕ್ಷರ ದುಂಡಗಾಗಬೇಕೆಂದು ತಿದ್ದಿ ತೀಡಿ ಬರೆದಿದ್ದು, ನಾಲ್ಕನೇ ಕ್ಲಾಸಿನವರೆಗೂ ಪಾಟಿಯಲ್ಲೇ Homework ಮಾಡುತ್ತಿದ್ದುದು. ಇದನ್ನೆಲ್ಲ ಈಗ ಮಕ್ಕಳಿಗೆ ಹೇಳಿದರೆ ನಾವು ಶಿಲಾಯುಗದಿಂದ ಬಂದಿದ್ದೇವೆ ಎಂಬಂತೆ ನೋಡುತ್ತಾರೆ.
ಬರಹದ ಬಗ್ಗೆ ಅಚ್ಚು ಮೆಚ್ಚಿನ ಮಾಹಿತಿ. ಖುಷಿಯಿಂದ ಓದಿಸಿಕೊಂಡು ಹೋದ ಲೇಖನ. ತಮಗೆ ಧನ್ಯವಾದಗಳು.