ಆಸ್ಟ್ರೇಲಿಯಾದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ಬರಲಿವೆ. ಬಹುಸೂಕ್ಷ್ಮವಾಗಿ ಅವಲೋಕಿಸಿದರೆ ದಾಳಿಗೀಡಾದ ಧರ್ಮದ ಜನಸಮುದಾಯದ ದನಿಗೆ ಈಗಾಗಲೇ ಒಂದು ನಿರ್ದಿಷ್ಟ ಬಲ ಬಂದಿದೆ. ಇದು ಮತ್ತಷ್ಟು ಬೆಳೆಯುವ ಸೂಚನೆಗಳಿವೆ. ದೂರದ ಅಮೆರಿಕೆಯಲ್ಲಿ ಈ ಜನಸಮುದಾಯವು ಎಲ್ಲಾ ಮಟ್ಟಗಳಲ್ಲೂ ಆಳವಾದ ಪ್ರಭಾವ ಮತ್ತು ಹಿಡಿತವನ್ನು ಹೊಂದಿದೆ. ಮತ್ತೊಂದು ವಸಾಹತುಶಾಹಿ ಸಮಾಜವಾದ ಆಸ್ಟ್ರೇಲಿಯಾದಲ್ಲೂ ಹಾಗಾಗಬಹುದೆ? ದಾಳಿ ನಡೆಸಿದ ಅಪ್ಪ-ಮಗ ಜೋಡಿಯಲ್ಲಿ, ಅಪ್ಪನ ಬಳಿ ಇದ್ದದ್ದು ಭಾರತೀಯ ಪಾಸ್ಪೋರ್ಟ್. ಆತ ಭಾರತದ ಹೈದರಾಬಾದ್ ಮೂಲದವರು. ಈ ಮಾಹಿತಿಯಿಂದ ಆಸ್ಟ್ರೇಲಿಯಾ-ಭಾರತ ದೇಶಗಳ ಮಧ್ಯೆ ಹೊಸ ಮಾತುಕತೆ ಉಂಟಾಗಬಹುದೆ?
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
‘ಶಮನವಾಗಬೇಕಿದೆ ಶತಮಾನಗಳ ನೋವು’ ಎಂದು ನಾನು ೨೦೨೩ ರ ಅಕ್ಟೋಬರ್ ತಿಂಗಳಲ್ಲಿ ಬರೆದಿದ್ದೆ. ಆಗ ಆಸ್ಟ್ರೇಲಿಯಾ ದೇಶದ ಮೂಲನಿವಾಸಿಗಳನ್ನು ಸಂವಿಧಾನದಲ್ಲಿ ಗುರುತಿಸುವಂತೆ ತಿದ್ದುಪಡಿ ಬರಲಿ, ಪಾರ್ಲಿಮೆಂಟಿನಲ್ಲಿ ತಮ್ಮ ಜನರಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತನಾಡಲು ಅವರದ್ದೇ ಒಂದು ಸಮಿತಿಯ ರಚನೆಯಾಗಿ, ಅವರ ದನಿಗೊಂದು ಪ್ರಾಮುಖ್ಯತೆ ಸಿಗಲಿ ಎನ್ನುವ ‘Voice Referendum’ ಮತ ಚಲಾವಣೆಯ ಸಂದರ್ಭವದು. ಇದರಿಂದ ಶತಮಾನಗಳ ಕಾಲ ಮಡುಗಟ್ಟಿರುವ ಅವರ ದುಃಖ, ನೋವು ಶಮನವಾಗಲಿ ಎಂಬ ಆಶಯವಿತ್ತು. ಆದರೇನು, ಆಸ್ಟ್ರೇಲಿಯನ್ನರು ಈ ಆಶಯದ ವಿರುದ್ಧ ಮತ ಹಾಕಿ ಅದನ್ನು ಮಣ್ಣುಪಾಲು ಮಾಡಿದರು.
ತಮ್ಮ ಆಶಯವನ್ನು ಮುನ್ನೆಲೆಗೆ ತರಲು ಮೂಲಜನರು (First Nations peoples ಎನ್ನುತ್ತಾರೆ) ಅವಿರತ ಪ್ರಯತ್ನ ಮಾಡಿದ್ದರು. ೨೦೨೩ ರಲ್ಲಿ ಅವರಿಗೆ ಪ್ರೋತ್ಸಾಹ, ಬೆಂಬಲ ಕೊಟ್ಟಿದ್ದು ಆಗ ಹೊಸದಾಗಿ ಚುನಾಯಿತರಾಗಿ, ಮೊಟ್ಟಮೊದಲ ಬಾರಿ ಕೇಂದ್ರ ಸರಕಾರವನ್ನು ರಚಿಸಿದ್ದ ಪ್ರಧಾನಿ ಅಂತೋನಿ ಆಲ್ಬನೀಸಿ ಮತ್ತು ಅವರ ಲೇಬರ್ ಪಕ್ಷದ ಮಂತ್ರಿಗಳು. ಕೇಂದ್ರೀಯ ಮಟ್ಟದಲ್ಲಿ ‘Voice Referendum’ ಮತ ನೆಲಕಚ್ಚಿದರೂ ಕೆಲ ರಾಜ್ಯ ಸರಕಾರಗಳು ಅದನ್ನು ಮುಂದುವರೆಸಿ ಈಗ ವಿಕ್ಟೋರಿಯಾ ರಾಜ್ಯದಲ್ಲಿ ಮೂಲಜನರ ಸಮುದಾಯಗಳ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದು ಅವರಿಗೆ ಸಲ್ಲಬೇಕಿದ್ದ ಮಾನ್ಯತೆ ಸಿಕ್ಕಿದೆ.
ಕಡೆಗೂ ಹೀಗೆ ಸಮಾನತೆ, ಮಾನ್ಯತೆ, ಸೌಹಾರ್ದತೆಗಳತ್ತ ಆಸ್ಟ್ರೇಲಿಯಾ ಹೆಜ್ಜೆ ಹಾಕುತ್ತಿದ್ದಾಗ ಹೋದ ಭಾನುವಾರ ಸಿಡ್ನಿ ನಗರದ ಪೂರ್ವದಲ್ಲಿರುವ ವಿಶ್ವಪ್ರಸಿದ್ಧಿ ಪಡೆದ Bondi ಬೀಚಿನಲ್ಲಿ ಶಾಂತಿ, ಸಾಮರಸ್ಯವನ್ನು ಕಲಕಿದ ದುರ್ಘಟನೆ ನಡೆದಿದೆ. ತಮ್ಮ ವೈಯಕ್ತಿಕ ಧರ್ಮದ ನಂಬಿಕೆಗಳಿಗೆ ಬದ್ಧರಾಗಿದ್ದ ಅಪ್ಪ-ಮಗನ ಜೋಡಿಯೊಂದು ೧೪ ರಂದು ಸಂಜೆ ಅಲ್ಲಿ ಸೇರಿದ್ದ ಮತ್ತೊಂದು ಧರ್ಮವನ್ನು ಪಾಲಿಸುತ್ತಿದ್ದ, ತಮ್ಮ ಧಾರ್ಮಿಕ ಹಬ್ಬವನ್ನು ಆಚರಿಸುತ್ತಿದ್ದ ಜನರ ಗುಂಪಿನ ಮೇಲೆ ಗುಂಡು ಚಲಾಯಿಸಿದ್ದರಿಂದ ಹದಿನೈದು ಜನರು ಸತ್ತಿದ್ದಾರೆ. ಸತ್ತವರಲ್ಲಿ ಕೆಲವರು ಬೇರೆಬೇರೆ ಧರ್ಮಗಳಿಗೆ ಸೇರಿದವರು. ನಂತರ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಗುಂಡು ಹಾರಿಸುತ್ತಿದ್ದ ಅಪ್ಪ ಸತ್ತಿದ್ದಾರೆ. ಗಾಯಗೊಂಡ ಮಗ ಆಸ್ಪತ್ರೆಯಲ್ಲಿದ್ದಾನೆ. ಅವನ ಮೇಲೆ ನ್ಯೂ ಸೌತ್ ವೇಲ್ಸ್ ರಾಜ್ಯ ಪೊಲೀಸರು ‘ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ಕೊಂದು, ಗಾಯಪಡಿಸಿ, ಸಾರ್ವಜನಿಕ ಜೀವನದಲ್ಲಿ ಭಯ ಉಂಟುಮಾಡಿದ’ ಆರೋಪಗಳನ್ನು ಹೊರಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಧರ್ಮದ ಹೆಸರಿನಲ್ಲಿ ನಡೆದಿರುವ ಗಲಭೆಗಳು ಬಹಳ ಕಡಿಮೆ. ನಾನು ಆಸ್ಟ್ರೇಲಿಯಾಕ್ಕೆ ಬಂದ ಹೊಸತರಲ್ಲಿ ಯೂನಿವರ್ಸಿಟಿಯಲ್ಲಿ ಸ್ನೇಹಿತರು, ಸಹೋದ್ಯೋಗಿಗಳು, ‘ಆಸ್ಟ್ರೇಲಿಯಕ್ಕೊಂದು ತನ್ನದೇ ಆದ ಧರ್ಮವೂ ಇಲ್ಲ, ಸಂಸ್ಕೃತಿಯೂ ಇಲ್ಲ. ಎಲ್ಲವೂ ಎರವಲು ಪಡೆದಿದ್ದು. ಮೂಲನಿವಾಸಿಗಳನ್ನು ಹೊರತುಪಡಿಸಿದರೆ ನಾವೆಲ್ಲರೂ ವಲಸಿಗರು, ಬಹುಸಂಸ್ಕೃತಿಗಳ ಪಟ್ಟಿಗೆ ಸೇರಿದವರು’ ಎಂದು ತಮಾಷೆ ಮಾಡುತ್ತಿದ್ದರು. ಎಲ್ಲರಿಗೂ ತಂತಮ್ಮ ಪಾಡಿಗೆ ತಂತಮ್ಮ ಧರ್ಮಗಳನ್ನು ಆಚರಿಸುವುದು, ಯಾವುದನ್ನೂ ಆಚರಿಸದೇ ಇರುವುದು ಎಲ್ಲವೂ ರೂಢಿಯಾಗಿತ್ತು. ಈ ಧರ್ಮ-ಸಹಿಷ್ಣುತೆ ನನಗೆ ಇಷ್ಟವಾಗಿತ್ತು. ಆದರೆ ಸಮಸ್ಯೆಗಳು ಇದ್ದದ್ದು ಬೇರೆ ಕಡೆ ಎಂದು ನಿಧಾನವಾಗಿ ಅನುಭವದ ಮೂಲಕ ಅರಿವಾಗಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಮಾತನಾಡುವ ಭಾಷೆಗಳ ಬಗ್ಗೆ, ತೊಡುವ ಉಡುಗೆಗಳು, ತಿನ್ನುವ ಆಹಾರವಿಧಗಳು, ಮತ್ತು ಮೈಚರ್ಮದ ಬಣ್ಣದ ಬಗ್ಗೆ ಅಸಹನೆಯಿತ್ತು. ಇವನ್ನು ಆಧರಿಸಿ ಬಿಳಿಯ ಆಂಗ್ಲೊ-ಆಸ್ಟ್ರೇಲಿಯನ್ನರು ತಮ್ಮ ರೇಸಿಸಮ್ ಮನೋಭಾವವನ್ನು ಧಾರಾಳವಾಗಿ, ಬಹಿರಂಗವಾಗಿ ತೋರುತ್ತಿದ್ದರು. ಆದರೆ ಇವುಗಳನ್ನೆ ಕಾರಣವಾಗಿಟ್ಟುಕೊಂಡು ಜಟಾಪಟಿ ನಡೆಸಿದ್ದಿಲ್ಲ. ಏಕೆಂದರೆ ಕಾನೂನಿನ ಭಯವಿದೆ. ಇದಕ್ಕೆ ಅಪವಾದವೆಂದರೆ ೨೦೦೫ ಡಿಸೆಂಬರ್ ನಲ್ಲಿ ನಡೆದ ಕ್ರೋನುಲ್ಲಾ ಗಲಭೆ.
ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಜನಸಮುದಾಯಗಳ ನಡುವೆ ದೊಡ್ಡಮಟ್ಟದ ಗಲಭೆಗಳು ನಡೆದಿರುವುದು ಬೆರಳೆಣಿಕೆಯಷ್ಟು. ಆದರೆ, ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ೨೦೦೫ ರ ಡಿಸೆಂಬರ್ ತಿಂಗಳಲ್ಲಿ Cronulla ಗಲಭೆ ನಡೆದಿತ್ತು. ಆಗ ನಾನು ಸಮೀಪದ (ಘಟ್ಟ ಇಳಿದರೆ ಸಿಗುವ) Wollongong ನಲ್ಲಿ ವಾಸವಿದ್ದೆ. ಎರಡೂ ಪ್ರದೇಶಗಳು ಸಮುದ್ರತೀರದಲ್ಲಿವೆ. Cronulla ಎನ್ನುವ ಬಡಾವಣೆ ಸಿಡ್ನಿಯ ಹೊರಗಡೆ ವಲಯದಲ್ಲಿದೆ. Illawara Escarpment ಎನ್ನುವ ಘಟ್ಟದ ಮೇಲಿದೆ. ಗಲಭೆಯ ಹಿನ್ನೆಲೆ ಸರಳವಾದದ್ದು. ಸ್ಥಳೀಯ ಆಂಗ್ಲೊ-ಆಸ್ಟ್ರೇಲಿಯನ್ ಯುವಕರು ತಮ್ಮೂರಿನ ಬೀಚ್ ಗೆ ಬರುತ್ತಿದ್ದ ಮಧ್ಯ-ಪೂರ್ವ ರಾಷ್ಟ್ರ ಸಂಸ್ಕೃತಿಗಳ ಜನರನ್ನು ಸಹಿಸದೆ, ನಮ್ಮೂರಿನ ಬೀಚಿಗೆ ಇವರು ಬರಬಾರದು ಎಂದು, ‘ನಮ್ಮ ಬೀಚನ್ನು ವಾಪಸ್ ಪಡೆಯೋಣ ಬನ್ನಿ’ ಎಂದು ಘೋಷಣೆ ಹೊರಡಿಸಿ ಸಾವಿರಾರು ಮಂದಿ ಗುಂಪು ಕಟ್ಟಿಕೊಂಡು ಗಲಭೆ ನಡೆಸಿದ್ದರು. ಅವರ ದ್ವೇಷ, ಅಸಹನೆಗಳ ತೀವ್ರತೆ ಎಷ್ಟಿತ್ತು ಅಂದರೆ ಇವತ್ತಿಗೂ ಮಧ್ಯ-ಪೂರ್ವ ರಾಷ್ಟ್ರ ಸಂಸ್ಕೃತಿಗಳ ಕೆಲ ಜನರು ಆ ಬೀಚಿಗೆ ಹೋಗಲು ಹಿಂದೇಟು ಹೊಡೆಯುತ್ತಾರೆ. ಇಲ್ಲಿ ಧರ್ಮಗಳು ಯಾವುದೇ ಪಾತ್ರ ವಹಿಸಿರಲಿಲ್ಲ. Cronulla ಗಲಭೆಗೆ ಕಾರಣ ರೇಸಿಸಮ್ ಎಂದು ಹಲವಾರು ತನಿಖಾ ವರದಿಗಳು ಮತ್ತು ಅಂದಿನ ಆಸ್ಟ್ರೇಲಿಯನ್ ರೇಸ್ ಡಿಸ್ಕ್ರಿಮಿನೇಷನ್ ಕಮೀಷನರ್ ಅಧಿಕೃತವಾಗಿ ಹೇಳಿದ್ದಾರೆ. ಇದನ್ನು ಅಲ್ಲಗೆಳೆದು ಅಂದಿನ ಪ್ರಧಾನಮಂತ್ರಿ ಜಾನ್ ಹೊವಾರ್ಡ್ ‘ಆಸ್ಟ್ರೇಲಿಯನ್ನರು ರೇಸಿಸ್ಟ್ ಗಳಲ್ಲ. Cronulla ಗಲಭೆಯು ರೇಸಿಸಮ್ ಕಾರಣದಿಂದ ಉಂಟಾಗಿದ್ದು ಎಂದು ನಾನು ನಂಬುವುದಿಲ್ಲ’ ಎಂದಿದ್ದರು.

ಇರಲಿ, ಈಗ ಕಳೆದ ಭಾನುವಾರ ೧೪ ರ ಸಂಜೆ ನಡೆದ, ಕೇವಲ ಇಬ್ಬರೇ ಇಬ್ಬರು ನಡೆಸಿದ ದುರ್ಘಟನೆಗೆ ವಾಪಾಸ್ ಬರೋಣ. ಇಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎರಡು ಧರ್ಮಗಳನ್ನು ಪಾಲಿಸುತ್ತಿದ್ದ ಜನರ ನಂಬಿಕೆಗಳು ಮತ್ತು ಆಚರಣೆಗಳು. ಜಾಗತಿಕ ಮಟ್ಟದಲ್ಲಿ ಈ ಎರಡೂ ಧರ್ಮಗಳು ಬಲಾಢ್ಯವಾದವು; ಅವನ್ನು ಪಾಲಿಸುವ ಜನರೂ ಕೂಡ ಅಷ್ಟೇ ಬಲಾಢ್ಯರು, ಪ್ರಭಾವವುಳ್ಳವರು. ಆಸ್ಟ್ರೇಲಿಯಾದಿಂದ ಬಹುದೂರವಿರುವ ಪ್ರಾಂತ್ಯದಲ್ಲಿರುವ ಎರಡು ದೇಶಗಳಲ್ಲಿ ಈ ಧರ್ಮಗಳಿಗೆ ಸೇರಿದ ಜನರಲ್ಲಿ ಕಿತ್ತಾಟ ನಡೆದಿದೆ. ಕಿತ್ತಾಟ ಎನ್ನುವುದಕ್ಕಿಂತಲೂ ಯುದ್ಧ, ಮಾರಣಹೋಮ ನಡೆದಿದೆ. ಎರಡರಲ್ಲಿ ಒಂದು ಚಿಕ್ಕ ದೇಶ. ದೊಡ್ಡ ದೇಶದ ದಾಳಿಯಿಂದ ಈ ಚಿಕ್ಕ ದೇಶದಲ್ಲಿ ಅನೇಕ ನಾಗರಿಕರು ಸತ್ತಿದ್ದಾರೆ. ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಇವುಗಳ ವರದಿಗಳು, ಚಿತ್ರಗಳು ಪ್ರಪಂಚದಾದ್ಯಂತ ಹರಿದಾಡುತ್ತಿವೆ. ಎರಡೂ ಧರ್ಮಗಳ ನಡುವೆ ದೊಡ್ಡ ಕಂದಕವಿದೆ. ಈ ವಿಭಜನೆಯ ಕಂದಕದಲ್ಲಿ ಜನ ಬೀಳುತ್ತಲೇ ಇದ್ದಾರೆ.
ಆ ಕಂದಕದ ಪ್ರಭಾವ Bondi ಬೀಚ್ ದುರಂತದಲ್ಲಿ ಕಾಣಿಸಿದೆ. ಈಗ ಗಮನಿಸಬೇಕಾದ ವಿಷಯಗಳು ಹಲವಾರಿವೆ. ಮುಖ್ಯವಾದದ್ದು ಆಸ್ಟ್ರೇಲಿಯನ್ ಪ್ರಧಾನಿ ಅಂತೋನಿ ಆಲ್ಬನೀಸಿ ಪದೇಪದೇ ಹೇಳುತ್ತಿರುವ ಮಾತು – ‘ಈ ಸಮಯದಲ್ಲಿ ನಾವು ನಮ್ಮಲ್ಲಿನ ಒಗ್ಗಟ್ಟು, ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ವಿಭಜನೆಗೆ ಮುಂದಾಗಬಾರದು. ಪರಸ್ಪರ ಸೌಹಾರ್ದತೆಯನ್ನು ಎತ್ತಿ ಹಿಡಿಯಬೇಕು. ರಾಜಕೀಯ ಒಡಕು, ಹೀಗಳಿಕೆ, ಬೆರಳುಮಾಡಿ ತೋರಿಸಿ ದೂಷಿಸುವುದು ಇತ್ಯಾದಿಗಳಿಂದ ಯಾವುದೇ ಸುಧಾರಣೆಗಳಾಗುವುದಿಲ್ಲ. ಎಲ್ಲರೂ ಸೇರಿ ಸಮಸ್ಯೆಗಳನ್ನು ಅರಿತುಕೊಂಡು ನಮ್ಮ ಸಮಾಜದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡೋಣ.’ ಅವರ ಮಾತಿಗೆ ಇರುವ ಹಿನ್ನೆಲೆ ದೊಡ್ಡದು.
ಪ್ರಧಾನಿಯ ಮತ್ತು ಅವರ ಸರಕಾರದ ನಿಲುವುಗಳ ಬಗ್ಗೆ ಅನೇಕ ದೋಷಾರೋಪಗಳು ಎದ್ದಿವೆ. ಈ ವರ್ಷ ಅವರ ಸರಕಾರವು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ದೇಶಗಳ ಬಗ್ಗೆ ತೆಗೆದುಕೊಂಡ ನಿರ್ಧಾರಗಳನ್ನು ಬೆಟ್ಟುಮಾಡಿ ತೋರಿಸಿ ಅವುಗಳಿಂದಲೇ ಈ ದುರ್ಘಟನೆ ನಡೆದಿದ್ದು ಎಂದು ಆರೋಪ ಹೊರಿಸಲಾಗಿದೆ. ಇಸ್ರೇಲ್ ದೇಶದ ಮುಖಂಡರು ಆಲ್ಬನೀಸಿ ಒಬ್ಬ ಬಲಹೀನ ರಾಜಕೀಯ ನಾಯಕ, ಎಂದಿದ್ದಾರೆ. ದೇಶದೊಳಗೆ, ವಿರೋಧಪಕ್ಷಗಳು ಮತ್ತು ಹಲವಾರು ರಾಜಕೀಯ ಪಕ್ಷಗಳವರು ನೇರವಾಗಿ ಪ್ರಧಾನಿಯನ್ನೇ ದೂಷಿಸಿದ್ದಾರೆ. ಇವರಲ್ಲಿ ಅನೇಕರು ಘಟನೆ ನಡೆದ ಮೊದಲ ಮೂರು-ನಾಲ್ಕು ದಿನಗಳಲ್ಲಿ ಕೇಂದ್ರ ಸರಕಾರವನ್ನು ಉಗುಳಿ, ತೆಗಳಿ, ಹೀನಾಯಿಸಿ ಮಾತನಾಡಿ ಆಸ್ಟ್ರೇಲಿಯಾದ ಆತ್ಮಕ್ಕೆ ಗುಂಡೇಟು ಬಿದ್ದಿದೆ, ನಾವೆಲ್ಲರೂ ಈ ಆತ್ಮವನ್ನು ರಕ್ಷಿಸಬೇಕು, ಎಂದೆಲ್ಲಾ ಹೇಳಿದ್ದರು.
ಕೆಲ ಮುಖ್ಯ ಸರಕಾರಿ ವಿಭಾಗಗಳ ಪ್ರಕಾರ, ಆಸ್ಟ್ರೇಲಿಯನ್ ಕೇಂದ್ರ ಸರಕಾರವು ಈ ದುರ್ಘಟನೆಯನ್ನು ತಪ್ಪಿಸಬಹುದಿತ್ತು. ಕೆಲವು ತಿಂಗಳುಗಳ ಹಿಂದೆ ಸರಕಾರದ ಗೂಢಚರ್ಯೆ ವಿಭಾಗವು ಕೊಟ್ಟಿದ್ದ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಂಡು ಈಗ ದುರ್ಘಟನೆಗೆ ಈಡಾದ ಧಾರ್ಮಿಕ ಜನಸಮುದಾಯಕ್ಕೆ ಬಹು ಹಿಂದೆಯೇ ಹೆಚ್ಚಿನ ಸುರಕ್ಷತೆಯನ್ನು ಒದಗಿಸಬಹುದಾಗಿತ್ತು. ಸ್ವಲ್ಪಮಟ್ಟಿಗೆ ಸರಕಾರದ ಬೇಜವಾಬ್ದಾರಿಯು ಇಲ್ಲಿ ಕೆಲಸ ಮಾಡಿದೆ. ಇವಕ್ಕೆಲ್ಲಾ ಉತ್ತರವಾಗಿ ಪ್ರಧಾನಿ ಆಲ್ಬನೀಸಿ, ‘ಹೌದು, ಈ ದುರಂತ ಘಟನೆಯ ಜವಾಬ್ದಾರಿಯನ್ನು ತಾನು ಹೊರುತ್ತೀನಿ. ಪ್ರಧಾನಿಯಾಗಿ ನಾಯಕತ್ವ ವಹಿಸಿರುವ ತಮ್ಮ ಸರಕಾರವು ಕೂಡ ಜವಾಬ್ದಾರಿಯಾಗಿದೆ’ ಎಂದಿದ್ದಾರೆ. ಜೊತೆಗೆ, ಸಾಮರಸ್ಯ, ಸೌಹಾರ್ದತೆಗಳ ಅಗತ್ಯವನ್ನು ಮತ್ತೆ ಒತ್ತಿ ಹೇಳಿದ್ದಾರೆ. ವಾರಪೂರ್ತಿ ಪ್ರತಿಯೊಂದು ದಿನವೂ ಘಟನೆಗೆ ಸಂಬಂಧಿಸಿದ ಜನರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಧೈರ್ಯ ಹೇಳಿದ್ದಾರೆ. ಜನರೊಡನೆ ಬೆರೆತು ದುಃಖ ಹಂಚಿಕೊಂಡಿದ್ದಾರೆ. ರಾಜ್ಯ ಸರಕಾರದೊಡನೆ ಸಮಸಮನಾಗಿ ನಿಂತು ಕೆಲಸ ಮಾಡುತ್ತಾ ಭರವಸೆ ತುಂಬಿದ್ದಾರೆ. ಅವರ ಮಾತು, ನಡೆಗಳನ್ನು ಅನೇಕರು ‘ಪ್ರಾಮಾಣಿಕವಾದದ್ದು’ ಎಂದು ಹೇಳಿ ಮೆಚ್ಚುತ್ತಿದ್ದಾರೆ. ಅನೇಕರಲ್ಲಿ ಮರು-ವಿಶ್ವಾಸ ಮೂಡಿಸಿದೆ. ಎಲ್ಲರಲ್ಲೂ ಸಾಮರಸ್ಯ, ಸಹನೆ, ಶಾಂತಿಗಳ ಭಾವನೆ ಕಾಣುತ್ತಿದೆ.
Bondi ಬೀಚ್ ಪೆವಿಲಿಯನ್ ಮುಂದೆ ಸಾರ್ವಜನಿಕರು, ಸರಕಾರದವರು ಸತ್ತವರಿಗೆ ಸಂತಾಪ, ಗೌರವ ಸೂಚಿಸಿ ಇಡುತ್ತಿರುವ ಹೂಗುಚ್ಛಗಳು ಸಣ್ಣ ಗುಡ್ಡದಂತೆ ಕಾಣುತ್ತಿದೆ. ಭಾವನೆಗಳು ಭರಪೂರ ಹರಿದಿವೆ. ಕೇಂದ್ರ ಸರಕಾರವು ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ‘ಗನ್ ಬಯ್ ಬ್ಯಾಕ್’ ಎನ್ನುವುದು ಒಂದು. ಅನಗತ್ಯವಾಗಿ ಗನ್, ರೈಫಲ್ ಮುಂತಾದ ಆಯುಧಗಳನ್ನು ಹೊಂದಿರುವವರಿಂದ ಅವನ್ನು ವಾಪಸ್ ಪಡೆಯುವುದು. ಒಬ್ಬ ವ್ಯಕ್ತಿ, ಕಾನೂನಿನ ಅಡಿ ಸಮರ್ಪಕವಾದ ಉದ್ದೇಶವಿದ್ದರೆ ಮಾತ್ರ, ಕೇವಲ ನಾಲ್ಕು ಆಯುಧಗಳನ್ನು ಹೊಂದತಕ್ಕದ್ದು ಎನ್ನುವ ಹೊಸ ಕಾನೂನು ಬಂದಿದೆ. ಧಾರ್ಮಿಕ-ಸಂಬಂಧಿತ ಉಗ್ರ ನಡೆನುಡಿಗಳ ಬಗ್ಗೆ ನಿಷ್ಠುರ ಕ್ರಮಗಳನ್ನು ಘೋಷಿಸಿದ್ದಾರೆ. ಅಂತಹವರನ್ನು ಗುರುತಿಸಿ ಅವರನ್ನು ವಾಪಸ್ ಅವರ ಹುಟ್ಟು-ದೇಶಗಳಿಗೆ ಕಳಿಸುವುದಾಗಿ ಹೇಳಲಾಗಿದೆ. ಇದರಿಂದ ಫ್ರೀಡಂ ಆಫ್ ಸ್ಪೀಚ್ ಗೆ ಧಕ್ಕೆಯಾಗುತ್ತದೆ ಎನ್ನುವ ಮಾತು ಎದ್ದಿದೆ.
ಒಟ್ಟಾರೆ ಹೇಳುವುದಾದರೆ ಆಸ್ಟ್ರೇಲಿಯಾದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ಬರಲಿವೆ. ಬಹುಸೂಕ್ಷ್ಮವಾಗಿ ಅವಲೋಕಿಸಿದರೆ ದಾಳಿಗೀಡಾದ ಧರ್ಮದ ಜನಸಮುದಾಯದ ದನಿಗೆ ಈಗಾಗಲೇ ಒಂದು ನಿರ್ದಿಷ್ಟ ಬಲ ಬಂದಿದೆ. ಇದು ಮತ್ತಷ್ಟು ಬೆಳೆಯುವ ಸೂಚನೆಗಳಿವೆ. ದೂರದ ಅಮೆರಿಕೆಯಲ್ಲಿ ಈ ಜನಸಮುದಾಯವು ಎಲ್ಲಾ ಮಟ್ಟಗಳಲ್ಲೂ ಆಳವಾದ ಪ್ರಭಾವ ಮತ್ತು ಹಿಡಿತವನ್ನು ಹೊಂದಿದೆ. ಮತ್ತೊಂದು ವಸಾಹತುಶಾಹಿ ಸಮಾಜವಾದ ಆಸ್ಟ್ರೇಲಿಯಾದಲ್ಲೂ ಹಾಗಾಗಬಹುದೆ? ದಾಳಿ ನಡೆಸಿದ ಅಪ್ಪ-ಮಗ ಜೋಡಿಯಲ್ಲಿ, ಅಪ್ಪನ ಬಳಿ ಇದ್ದದ್ದು ಭಾರತೀಯ ಪಾಸ್ಪೋರ್ಟ್. ಆತ ಭಾರತದ ಹೈದರಾಬಾದ್ ಮೂಲದವರು. ಈ ಮಾಹಿತಿಯಿಂದ ಆಸ್ಟ್ರೇಲಿಯಾ-ಭಾರತ ದೇಶಗಳ ಮಧ್ಯೆ ಹೊಸ ಮಾತುಕತೆ ಉಂಟಾಗಬಹುದೆ? ಕಾದು ನೋಡಬೇಕು.
ಈ ದುರ್ಘಟನೆ ನಡೆದ ಎರಡನೇ ದಿನ ನನ್ನ ಸಹೋದ್ಯೋಗಿಯೊಬ್ಬರು ‘ಇದು ಅಮೆರಿಕೆಯಲ್ಲಿ ದಿನನಿತ್ಯವೂ ನಡೆಯುವ ಕತೆ. ಅಲ್ಲಿ ಪ್ರತಿವರ್ಷವೂ ಇಂತಹ ಹಲವಾರು ಗನ್-ಕಿಲ್ಲಿಂಗ್ ಘಟನೆಗಳು ನಡೆಯುತ್ತಿವೆ. ಒಂದು ಘಟನೆಯೇ ಆಸ್ಟ್ರೇಲಿಯನ್ನರಿಗೆ ಈ ಪಾಟಿ ನಡುಕ ತಂದಿರುವುದು ಕುತೂಹಲವಾಗಿದೆ’ ಎಂದರು. ಭಾರತದಲ್ಲೂ ಇದು ಸರ್ವೇಸಾಮಾನ್ಯ. ದಕ್ಷಿಣಗೋಳದಲ್ಲಿರುವ ಈ ದೇಶದಲ್ಲಿ ನಡೆಯುವ ಅನೇಕ ವಿಷಯಗಳು ಜಾಗತಿಕ ಗಮನ ಸೆಳೆಯುವುದಿಲ್ಲ. ಆಸ್ಟ್ರೇಲಿಯಾ ಎಂದರೆ ಸುಂದರ ಬೀಚ್ ದೇಶ. ಆದರೆ ಇಲ್ಲಿನ ಸಮಸ್ಯೆಗಳ ಮಾತು ಬೇಡ.
ಡಿಸೆಂಬರ್ ೧೪ ರ Bondi ಘಟನೆ ನಮ್ಮಲ್ಲಿ ನಡುಕ ತಂದಿದ್ದು ನಿಜ. ತಲ್ಲಣವುಂಟು ಮಾಡಿದ್ದೂ ನಿಜ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಇರುವುದೇ ಇಪ್ಪತ್ತಾರು ಮಿಲಿಯನ್ ಜನರು. ಅದರಲ್ಲಿ ಶೇಕಡಾ ಮೂವತ್ತು ಭಾಗ ಹೊರದೇಶಗಳಲ್ಲಿ ಹುಟ್ಟಿದವರು. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಬಹುಸಂಸ್ಕೃತಿ ಅಸ್ಮಿತೆಗೆ ಇಂತಹ ಒಂದು ಘಟನೆಯಿಂದಲೇ ಕೊಡಲಿಪೆಟ್ಟು ಬೀಳುತ್ತದೆ. ನಮ್ಮಂತಹ ಮಿಲಿಯನ್ ಗಟ್ಟಲೆ ವಲಸೆಗಾರರ ಮೇಲೆ ಅದು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿಗೂ-ಇಲ್ಲಿಗೂ ಹೋಲಿಸುವುದು ಸರಿಯೇ ಎಂಬ ಪ್ರಶ್ನೆಯೇಳುತ್ತದೆ.

ಆಗ ಆಸ್ಟ್ರೇಲಿಯನ್ ಪ್ರಧಾನಿ ಆಲ್ಬನೀಸಿ ಅವರ ಮಾತು ಸರಿಯೆನ್ನಿಸುತ್ತದೆ – ‘ನಾವು ವಿಭಜನೆಗೆ, ಒಡಕಿಗೆ ಅವಕಾಶ ಕೊಡಕೂಡದು. ಒಗ್ಗಟ್ಟು, ಸಾಮರಸ್ಯ, ಸೌಹಾರ್ದತೆ ನಮ್ಮೆಲ್ಲರನ್ನೂ ಕಾಪಾಡುತ್ತದೆ.’ ಸಂಘಟಿತ ಆರೋಗ್ಯಕರ ಸಮಾಜವಾಗಿ ನಾವು ಆಸ್ಟ್ರೇಲಿಯಾವನ್ನು ಮುನ್ನಡೆಸಬೇಕು. ಒಂದು ದೊಡ್ಡ ಸಮುದಾಯವನ್ನಾಗಿ ನೋಡಿದಾಗ ಇಲ್ಲಿರುವ ಒಬ್ಬೊಬ್ಬರ ಕ್ಷೇಮ, ಸೌಖ್ಯ ನಮ್ಮೆಲ್ಲರ ಜವಾಬ್ದಾರಿ. ಹೌದು, ಸಾಮರಸ್ಯವೇ ಇಲ್ಲಿ ಸಲ್ಲುವುದು.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

