Advertisement
ಸಾವಿರದ ಮಕ್ಕಳ ಮಹಾಮಾತೆ: ಸುಮಾ ಸತೀಶ್ ಬರಹ

ಸಾವಿರದ ಮಕ್ಕಳ ಮಹಾಮಾತೆ: ಸುಮಾ ಸತೀಶ್ ಬರಹ

ಪ್ರಕೃತಿಯನ್ನು ತಾಯಾಗಿ ಆರಾಧಿಸುವ ಪರಂಪರೆ ನಮ್ಮದು. ಸುಗ್ಗಿಯ ಆಚರಣೆ, ಗೋಮಾಳಗಳು, ಊರಿಗೊಂದರಂತೆ ಇದ್ದ ಗುಂಡುದೋಪುಗಳು, ಇರುವೆ ಗೂಡಿಗೂ ನುಚ್ಚು ಎರೆವ ಸಂಸ್ಕೃತಿ, ಜಂಗಮಯ್ಯ, ಭಿಕ್ಷುಕ, ಆಯಗಾರರು, ದನಕರು, ಪ್ರಾಣಿ ಪಕ್ಷಿ ತಿಂದುಂಡ ನಂತರ ಮನೆಗೆ ಒಯ್ಯುವ ಸುಗ್ಗಿ ಆಚರಣೆ ಇಂತಹ ಸದಾಚಾರಗಳೆಲ್ಲಾ ನಮ್ಮ ನಡುವಿಂದ ಕಣ್ಮರೆಯಾಗಿದೆ. ಅಂತಹದ್ದರಲ್ಲಿ ಇಲ್ಲಿ ನಮಗೆ ಅನನ್ಯವೆನಿಸುವುದು ತಿಮ್ಮಕ್ಕ ಪ್ರಕೃತಿಯನ್ನು ಕೂಸಾಗಿ ಭಾವಿಸಿದ ಪರಿ. ಇದು ಇನ್ನೂ ಒಂದು ಹೆಜ್ಜೆ ಮಿಗಿಲಾದುದು. ನಮಗೊಂದು ಮಾನವೀಯ ಪರಂಪರೆಯನ್ನು ಹಾಸಿ ಕೊಟ್ಟಿರುವಂತಹದ್ದು.
ಸಾವಿರದ ಮಕ್ಕಳ ಮಹಾಮಾತೆ ಸಾಲುಮರದ ತಿಮ್ಮಕ್ಕನವರ ಕುರಿತು ಸುಮಾ ಸತೀಶ್ ಬರಹ

ನಿಂಗೆ ಮಕ್ಕಳಾಗಲಿಲ್ಲ ಅಂತಾವ ಮರಗಳನ್ನು ಬೆಳೆಸಿದ್ಯಲ್ಲ, ಆ ಮರಗಳು ನಿಂಗೆ ಮಕ್ಕಳಾದಂಗೋ?’

‘ ನಂಗೆ ಮಕ್ಕಳಿಲ್ಲ ಅಂತ ಯಾಕೆ ಹೇಳ್ತೀಯಾ? ಈ ಮರಗಳು ಮಾತ್ರಾನೇ, ನೋಡತ್ಲಾಗೆ ನಾನೆಟ್ಟ ಮರದ ನೆಳ್ಳಾಗೆ ಹಸಾ ಮನಗೈತೆ.‌ ಅದೂ ನಂಗೆ ಮಗಾನೇಯಾ. ನೋಡಿತ್ಲಾಗೆ ಆ ಮರದ ಬೊಡ್ಡೆತಾವ ಒಂದು ರಾಶಿ ಗೊದ್ದಗಳು ಗೂಡು ಮಾಡಿಕ್ಯಂಡವೆ. ಅವು ನನ್ನ ಮಕ್ಕಳಲ್ವೇ? ಆ ಮರದ ಮ್ಯಾಗೆ ತರಾವರಿ ಪಕ್ಸಿಗಳು ಮನೆ ಮಾಡಿಕ್ಯಂಡವೆ.‌ ಅವು ನನ್ ಮಕ್ಕಳಲ್ವೇ? ಅಲ್ಲಿರೋ ಅಳಿಲು, ಎಲೆ ತಿಂಬಾಕೆ ಬರೋ ದನಕರುಗಳೆಲ್ಲಾ ನನ್ ಮಕ್ಕಳೇಯಾ.’

‘ಹೆತ್ತರೆ ಒಂದು ಮಗಾ ಪಡೆದರೆ ನೂರಾರು ಮಕ್ಕಳು’ ಎಂಬ ಜನಪದರ ನುಡಿಗಟ್ಟನ್ನು ಅಕ್ಷರಶಃ ದಕ್ಕಿಸಿಕೊಂಡು ಬಾಳ್ವೆ ನಡೆಸುತ್ತಿರುವ ಮುಗ್ಧ ಮಾತೆ ಸಾಲುಮರದ ತಿಮ್ಮಕ್ಕ ಹಾಗೂ ನೆಲಮೂಲ ಕವಿ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಅವರ ನಡುವಿನ ಸಂದರ್ಶನದ ಸಂಭಾಷಣೆಯಿದು. ಆ ತಾಯಿಯ ಮುಗ್ಧ ಹೃದಯದ ಸ್ನಿಗ್ಧ ಭಾವವಿದು. ಈ ಸಂದರ್ಶನ ನಡೆದದ್ದೂ ಅವಳೆ ನೆಟ್ಟ ಮರದಡಿಯ ಆಸರೆಯಲ್ಲಿ.

ಬಹಳ ಸರಳವಾದ ಈ ಮಾತಿನಲ್ಲಿ ನಮ್ಮ ಎತ್ತರಕ್ಕೆ ನಿಲುಕದ ಬದುಕಿನ ಗಹನ ತತ್ವವಿದೆ. ನಮ್ಮೆದೆಗಳಿಗೆ ದಕ್ಕದ ಅಂತಃಕರಣದ ನೆಲೆಯಿದೆ. ಬದುಕಿನ ಅನಂತವಾದ ಈ ಸತ್ಯವನ್ನು ಅನಕ್ಷರಸ್ಥ ಹೆಣ್ಣುಮಗಳೊಬ್ಬಳು ಅರ್ಥೈಸಿದ ಪರಿ ಅದ್ಭುತ. ಅನಾದಿ ಕಾಲದಿಂದಲೂ ಸಾಕಷ್ಟು ಮಹನೀಯರು, ದಾರ್ಶನಿಕರು ಈ ತತ್ವವನ್ನು ಆಗೀಗ ಹೇಳುತ್ತಲೇ ಬಂದಿದ್ದಾರೆ. ಅವರಲ್ಲಿ ಬಹುತೇಕರು ಅಧ್ಯಯನ ಮಾಡಿಕೊಂಡು ಅರಿವನ್ನು ಪಡೆದವರು. ಆದರೆ ಜನಪದರು ಸರಳವಲ್ಲದ ಈ ವಿಷಯಗಳನ್ನು ಸಲೀಸಾಗಿ ಅರೆದು ಕುಡಿದು, ಅಷ್ಟೇ ನಿಸೂರಾಗಿ ತಿಳಿಸಬಲ್ಲವರಾಗಿದ್ದಕ್ಕೆ ಮೂಲ ಅವರು ಬದುಕನ್ನು ಕಂಡುಂಡ ಬಗೆ, ಸರಳವಾಗಿ ಬಾಳುವೆ ಮಾಡುತ್ತಲೇ ಸಹಜವಾಗಿ ಹೇಳುವ ಕಲೆಯನ್ನು ಪಡೆದದ್ದಕ್ಕೇ ಅಲ್ಲವೆ ಕವಿಯ ಮನದಲ್ಲಿ ‘ಕುರಿತೋದದೆಯುಂ‌ ಪರಿಣತಮತಿಗಳ್’ ಎಂದು ನೆಲೆಸಿರುವುದು. ಭೂಮ್ತಾಯಿ ಮೇಗಳ ಈ ಸಹಬಾಳ್ವೆಯ ಸಹಜ ಸೌಂದರ್ಯ ಅರಿಯುವ ಮನಸ್ಥಿತಿ ಇಂದು ಮಿಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರವಿದೆಯೇ ನಮ್ಮ‌ ಅಂತರಂಗದಲ್ಲಿ.

ನಮ್ಮ ಕಾಯಕ, ನಿಸರ್ಗಕ್ಕೆ ಎರವಾಗದ ರೀತಿಯಲ್ಲಿ ಸತ್ಯಶುದ್ಧ ಕಾಯಕವಾಗಬೇಕು. ಜೀವ ಸರಪಳಿಗೆ ಹಾನಿಯುಂಟಾಗುವ ಯಾವುದೇ ಕಾಯಕ ಸಲ್ಲದು ಎಂಬ ಜನಪದರ ಭಾವವನ್ನು ಪುಷ್ಟೀಕರಿಸಿದ್ದು ವಚನ ಚಳವಳಿ. ನಿಸರ್ಗಧರ್ಮದೆಡೆ ಸಹಜ ಒಲವನ್ನು 12 ನೆಯ ಶತಮಾನದ ಶರಣ ಸಂಸ್ಕೃತಿ ಅಪ್ಪಿಕೊಂಡಿತ್ತು. ವಚನಧರ್ಮ ಮಣ್ಣಿನ ಭಾಷೆಯೊಳಗಿನ ಧರ್ಮವಾಗಿತ್ತು. ಅದುವರೆಗೆ ಜನರಿಂದ ದೂರಾಗಿದ್ದ ಸಾಹಿತ್ಯವನ್ನು ಸಂಸ್ಕೃತದ ಸೆರೆಯಿಂದ ಬಿಡಿಸಿ, ಜನರೆದೆಯ ಭಾಷೆಯನ್ನು ಬಳಸಿ, ಎದೆಯ ದನಿಗೆ‌ ಮಾತಾಗಿದ್ದು ವಚನ ಸಾಹಿತ್ಯ. ದಯೆಯೇ ಧರ್ಮದ ಮೂಲ ಎಂಬ ಜನಪದ ಮೂಲದೊಳಗಣ ನಿಸರ್ಗ ಧರ್ಮವನ್ನು ಗೌರವಿಸಿದ ವಚನಕಾರರ ಒಂದೆರಡು ಉದಾಹರಣೆಗಳನ್ನು ತಿಮ್ಮಕ್ಕನ ಮನೋಭಾವದೊಂದಿಗೆ ಒಟ್ಟುಗೂಡಿಸಬಹುದು.

ದಸರಯ್ಯನೆಂಬ ಶರಣ ನಿತ್ಯವೂ ಹೂ ಕೊಯ್ದು ಶಿವಪೂಜೆಗೆ ಬಳಸುತ್ತಿದ್ದ. ಒಮ್ಮೆ ಅವನಿಗೆ ‘ಅಯ್ಯೋ ನೊಂದೆನು’ ಎಂಬ ಸುಕೋಮಲ ಹೂವಿನ ಆರ್ತ ದನಿ ಕೇಳಿದಂತಾಗಿ ಅಂದಿನಿಂದ ಗಿಡದಿಂದ ಉದುರಿ ಬಿದ್ದ ಹೂಗಳನ್ನು ಮಾತ್ರ ಆಯ್ದು ತರುತ್ತಿದ್ದ. ಅವನ ಚೆಂದದ ವಚನದಲ್ಲಿನ ಭಾವವಿದು.

ಉದುರಿ ಬೀಳುವನ್ನಕ್ಕ ನಿನ್ನ ಹಂಗು
ಉದುರಿ ಬಿದ್ದಲ್ಲಿ ಎನ್ನೊಡವೆ.

ಅವನು ಬದುಕನ್ನು ಕಂಡುಕೊಂಡ ಬಗೆಯನ್ನು ಅರುಹುವ ಈ ವಚನ ಸಾಗರದಷ್ಟು ವಿಷಯವನ್ನು ಅಡಕಿಸಿಕೊಂಡಿದೆ.

ಸರ್ವಮಯ ನಿನ್ನ ಬಿಂದುವಾದಲ್ಲಿ
ಆವುದನಹುದೆಂಬೆ, ಆವುದನಲ್ಲಾಯೆಂಬೆ
ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ
ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ
ತರುಲತೆ ಸ್ಥಾವರ ಜೀವಂಗಳೆಲ್ಲಾ
ನಿನ್ನ ಕಾರುಣ್ಯದಿಂದೊಗೆದವು
ಆರ ಹರಿದು ಇನ್ನಾರಿಗೆ ಅರ್ಪಿಸುವೆ
ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ
ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು

ಇದೇ ಅಲ್ಲವೇ ತಿಮ್ಮಕ್ಕ ಹೇಳಿದ್ದು. ಗಿಡಗಳೂ ಜೀವಿಗಳೆ. ಪ್ರಾಣಿಗಳೂ ಜೀವಿಗಳೆ. ಇರುವೆಂಬತ್ತು ಕೋಟಿ ಜೀವಿಗಳೊಂದಿಗೆ ನಾವೂ ಸಹಜೀವಿಗಳೆ.

ಮೋಳಿಗೆ ಮಾರಯ್ಯನೆಂಬ ಶರಣ ಮರಗಳನ್ನು ಕಡಿದರೆ ಅವು ನೋವನ್ನು ಉಣ್ಣುತ್ತವೆ, ಶಿಶುಹತ್ಯೆಗೆ ಸಮ ಎಂದು ನಂಬಿದ್ದವ‌. ಒಣಗಿದ ಕಡ್ಡಿಗಳ ಆರಿಸಿ ತರುವ ಕಾಯಕದಿಂದ ಬದುಕು ನಡೆಸುತ್ತಿದ್ದನು. ಹರಿಹರನ ರಗಳೆಗಳಲ್ಲಿ ಗಿಡಮರಗಳಿಂದ ಹೂವನ್ನು ಬೇಡಿ ತಂದು ಪೂಜಿಸುವ ಭಕ್ತರನ್ನು ಕಾಣಬಹುದು. ಅಂತಃಕರಣವನ್ನು ಭರಪೂರ ತುಂಬಿಕೊಂಡ ಇಂತಹ ಅಸಂಖ್ಯ ಜೀವಗಳು ಜನಪದರಲ್ಲಿ ಸಿಗುತ್ತಾರೆ. ಅಂತಹ ಜೀವಗಳಲ್ಲಿ ಕಲಿಗಾಲದ ಇಂದಿನ ವಿಕೃತ ಪರಿಸರ ವಿನಾಶಿ ಮನಗಳ ನಡುವೆಯೂ ಹಸಿರನ್ನು ಹಡೆದ ಶ್ರೇಷ್ಠ ಬದುಕು ತಿಮ್ಮಕ್ಕನದು. ಸಾಲುಮರದ ತಿಮ್ಮಕ್ಕ ನಮ್ಮ ನಡುವಿರುವ ದಂತ ಕತೆಯಂತೆ ಬದುಕುತ್ತಿರುವ ಜೀವ.

ತಿಮ್ಮಕ್ಕ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವಳು. 1911 ರ ಜುಲೈನಲ್ಲಿ ಜನಿಸಿದ್ದು. ಅಕ್ಷರ ಕಲಿಯದ ಬಡಕುಟುಂಬದ ಕುಡಿಯಾಗಿ, ಹತ್ತಿರದ ಕ್ವಾರಿಯೊಂದರಲ್ಲಿ ದಿನಗೂಲಿ ಮಾಡುತ್ತಾ ತುತ್ತಿನಚೀಲ ತುಂಬಿಸುತ್ತಿದ್ದಳು. ಬಿಕ್ಕಲ ಚಿಕ್ಕಯ್ಯನೆಂಬ ದನಕಾಯುವವನೊಡನೆ ಮದುವೆಯಾಯಿತು. ವರುಷಗಳು ಉರುಳಿದರೂ ತೊಟ್ಟಿಲು ತೂಗಲಿಲ್ಲ. ಆ ತಾಯಿಹೃದಯ ಬಸಿರ ಬೇಸರ ನೀಗಲು ಗಿಡ ನೆಡಲು ಯೋಚಿಸಿತು. ಪತಿಯೂ ಜೊತೆಗೂಡಿದ್ದು ಬಲ ತುಂಬಿತು. ಆ ಸುತ್ತಲಿನಲ್ಲಿ ಆಲದ ಮರಗಳು ಬೇಜಾನಿದ್ದವು. ಅವುಗಳ ಬೊಡ್ಡೆಗಳಿಂದ ಕಸಿಮಾಡಿ ಗಂಡ ಹೆಂಡತಿ ಆಲದ ಸಸಿಗಳನ್ನು ಸೃಷ್ಟಿಸಿದರು. ಅವುಗಳನ್ನು ನೆಡಲೂ ಸ್ವಂತದ್ದೆಂಬ ಭೂಮಿಕಾಣಿ ಇರಲಿಲ್ಲ. ರಸ್ತೆ ಬದಿಯಲ್ಲಿ ಅಲ್ಲಲ್ಲಿ ನೆಡುತ್ತಾ ಬಂದರು. ಕುದೂರಿನಿಂದ ಹುಲಿಕಲ್ ತನಕದ ರಾಜ್ಯ ಹೆದ್ದಾರಿ 94 ರಲ್ಲಿ ನಾಲ್ಕು ಕಿಮೀ ದೂರದವರೆಗೆ ಇವರ ಪಯಣ ನಡೆಯಿತು. ಆರಂಭದ ವರ್ಷದಲ್ಲಿ ಹತ್ತು ಗಿಡ ನೆಟ್ಟರೆ, ನಂತರ 15, ಮೂರನೆಯ ವರ್ಷ ಮತ್ತೆ 20 ಮರಗಳು ಇವರ ಬಾಳಿಗೆ ಬಂದವು. ನೆಟ್ಟು ಸುಮ್ಮನೆ ಕುಂತರಾದೀತೇ? ದಿನವೂ ಬಿಂದಿಗೆಗಳಲ್ಲಿ ನೀರು ಹೊತ್ತು ಹಾಕುತ್ತಿದ್ದರು. ದಂಪತಿ ನೀರುಣಿಸುವ ಜೊತೆಗೆ ಕೊಳಗದಲ್ಲಿ ಗೊಬ್ಬರವನ್ನೂ ಒಯ್ಯುತ್ತಿದ್ದರು. ಮಕ್ಕಳನ್ನು ರಕ್ಷಿಸುವ ಹೊಣೆ ಸುಮ್ಮನೆಯೇ? ತುಡುಗು ದನಗಳಿಂದ ಕಾಯಲು ಮುಳ್ಳು ಬೇಲಿ ಹೊದಿಸಿದರು. ಮುಂಗಾರು ಮಳೆಯ ಕಾಲದಲ್ಲಿ ನೆಟ್ಟರೆ ಮುಂದಿನ ಮುಂಗಾರಿಗೆ ಬೇರು ಬಿಟ್ಟು ಅರಳುತ್ತಿದ್ದವು. ಹೀಗೇ ಆ ತಾಯಿ ನೆಟ್ಟ ನೂರಾರು ಆಲದ ಬಿಳಲು

ನೆನ್ನೆಯಷ್ಟೇ ತೀರಿಕೊಂಡ ಈ ವೃಕ್ಷ ಮಾತೆ ಕಳೆದ ವರ್ಷದವರೆಗೂ ಶಾಲಾ ಕಾಲೇಜುಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿದ್ದಳು. ಪರಿಸರಕ್ಕೆ ಧಕ್ಕೆ ಮಾಡುವ ಕಾರ್ಯಗಳ ವಿರುದ್ಧ ಸೆಟೆದು ನಿಂತು ಹೋರಾಡಿದ್ದಳು. ಅವಳ ಕಾಯಕ ವಿಶ್ವವ್ಯಾಪಿಯಾಗಿ ಆದರಕ್ಕೆ ಪಕ್ಕಾಗಿದೆ. ಅಮೆರಿಕದ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕನವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ಇಡಲಾಗಿದೆ.

ನಂತರದ ದಿನಗಳಲ್ಲಿ ಆಲದ ಮರಗಳೊಂದಿಗೆ ಬೇರೆ ಬೇರೆ ರೀತಿಯ 8000 ಕ್ಕೂ ಹೆಚ್ಚಿನ ವಿವಿಧ ಗಿಡ ನೆಟ್ಟು ಪೋಷಿಸುವ ಮೂಲಕ ನಾಕು ಕಿಮೀ ಇದ್ದ ಅವಳ ಕಾಯಕದ ಹಾದಿ 45 ಕಿಮೀ ಆಗಿದೆಯೆಂದರೆ ಆ ತಾಯಿಯ ಕಸುವಿನ ಅಳವು ಅರಿಯಬಹುದು.

2016 ರಲ್ಲಿ ಬಿಬಿಸಿ ತಿಮ್ಮಕ್ಕನನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಸ್ಫೂರ್ತಿದಾಯಕ ಮಹಿಳೆಯರಲ್ಲಿ ಒಬ್ಬರೆಂದು ಗುರುತಿಸಿದೆ. ಕರ್ನಾಟಕ ಸರ್ಕಾರ ಪರಿಸರದ ರಾಯಭಾರಿಯಾಗಿ ನೇಮಿಸಿ ಗೌರವಿಸಿದೆ.

ಅವಳ ಸೇವೆಗೆ ಅರಸಿ ಬಂದು ಅಪ್ಪಿದ ಪ್ರಶಸ್ತಿ ಪುರಸ್ಕಾರಗಳು ನೂರಾರು. ಅವಳನ್ನು ಅಲಂಕರಿಸಿ ಆ ಪ್ರಶಸ್ತಿಗಳು ಪುನೀತವಾಗಿವೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ, ವೃಕ್ಷ ಮಿತ್ರ ಇವೆಲ್ಲವುಗಳಿಗೆ ಮಿಗಿಲಾಗಿ, ದೇಶದ ಉನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಇವರನ್ನು 2019 ರಲ್ಲಿ ಅರಸಿ ಬಂದಿತು. ಈ ಪ್ರಶಸ್ತಿ ಪ್ರದಾನವನ್ನು ಹೆಮ್ಮೆಯಿಂದ ವೀಕ್ಷಿಸುತ್ತಿದ್ದ ಎಲ್ಲರಿಗೂ ಕಣ್ತುಂಬಿ ಬಂದದ್ದು, ಆ ಮುಗ್ಧ ಜೀವ ಪ್ರಶಸ್ತಿ ವಿತರಿಸಿದ ರಾಷ್ಟ್ರಪತಿಗಳ ತಲೆ ಮೇಲೆ ಕೈಯಿಟ್ಟು ಹರಸಿದ್ದನ್ನು ನೋಡಿದಾಗ. ಮಮತೆಯ ಸೆಲೆ ಸದಾ ಉಕ್ಕಿ ಹರಿವ ಇಂತಹ ತಾಯಿಗೆ ಎಲ್ಲರೂ ಮಕ್ಕಳೆ.

ಅವಳು ನೆಟ್ಟ ಮರಗಳ ರಕ್ಷಣೆಯನ್ನು ಸರ್ಕಾರ ವಹಿಸಿಕೊಂಡಿದೆ. ಇಂದು ಅಮೂಲ್ಯ ಸಂಪತ್ತಾಗಿರುವ ಆ ಗಿಡಗಳನ್ನು ಹಣಕ್ಕಾಗಿ ನೆಡಲಿಲ್ಲ. ಲಾಭಕ್ಕಾಗಿ ಲಾಲಸೆ ಪಡಲಿಲ್ಲ. ಮಕ್ಕಳಾಗಿ ಲಾಲಿಸಿದಳು. ಇಂದಿಗೂ ಸರ್ಕಾರದ ಪಿಂಚಣಿ ಹಣದಿಂದ ಬದುಕು ನಡೆಸುತ್ತಿರುವ ಸರಳ ಜೀವನ.

ಪ್ರಕೃತಿಯನ್ನು ತಾಯಾಗಿ ಆರಾಧಿಸುವ ಪರಂಪರೆ ನಮ್ಮದು. ಸುಗ್ಗಿಯ ಆಚರಣೆ, ಗೋಮಾಳಗಳು, ಊರಿಗೊಂದರಂತೆ ಇದ್ದ ಗುಂಡುದೋಪುಗಳು, ಇರುವೆ ಗೂಡಿಗೂ ನುಚ್ಚು ಎರೆವ ಸಂಸ್ಕೃತಿ, ಜಂಗಮಯ್ಯ, ಭಿಕ್ಷುಕ, ಆಯಗಾರರು, ದನಕರು, ಪ್ರಾಣಿ ಪಕ್ಷಿ ತಿಂದುಂಡ ನಂತರ ಮನೆಗೆ ಒಯ್ಯುವ ಸುಗ್ಗಿ ಆಚರಣೆ ಇಂತಹ ಸದಾಚಾರಗಳೆಲ್ಲಾ ನಮ್ಮ ನಡುವಿಂದ ಕಣ್ಮರೆಯಾಗಿದೆ. ಅಂತಹದ್ದರಲ್ಲಿ ಇಲ್ಲಿ ನಮಗೆ ಅನನ್ಯವೆನಿಸುವುದು ತಿಮ್ಮಕ್ಕ ಪ್ರಕೃತಿಯನ್ನು ಕೂಸಾಗಿ ಭಾವಿಸಿದ ಪರಿ. ಇದು ಇನ್ನೂ ಒಂದು ಹೆಜ್ಜೆ ಮಿಗಿಲಾದುದು. ನಮಗೊಂದು ಮಾನವೀಯ ಪರಂಪರೆಯನ್ನು ಹಾಸಿ ಕೊಟ್ಟಿರುವಂತಹದ್ದು.

ಸಾಲುಮರದ ತಿಮ್ಮಕ್ಕನ ಬದುಕು ನಮ್ಮ ಮನದ ಬರಡುತನವನ್ನು ನೀಗಿಸಲಿ. ಬಂಜೆಯಾಗಿರುವ ಇಡೀ ಮನುಕುಲದ ಒಡಲನ್ನು ಚಿಗುರಿಸಲಿ. ಪರಿಸರವೆಂದರೆ ನಾವೇ ಎಂಬ ಅವಿನಾಭಾವ ಮೂಡಿಸಲಿ. ಪರಿಸರ ಮಾತೆಗೆ ನಾವು ತೀರಿಸಬಹುದಾದ ಬಹು ದೊಡ್ಡ ಋಣವಿದು.

About The Author

ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

1 Comment

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ