ನಾನು ಎರಡು ವಿರೋಧ ಭಾವನೆಗಳ ಮಧ್ಯೆ ಛಿದ್ರವಾಗಿದ್ದೆ. ನನ್ನ ಭಯ ನನ್ನ ಕಣ್ಣುಗಳನ್ನು ಅಲ್ಲಿಂದ ಬೇರೆಡೆಗೆ ತಿರುಗಿಸಲು ಆದೇಶಿಸುತ್ತಿತ್ತು, ಆದರೆ ನನ್ನ ಕುತೂಹಲ ಮತ್ತೊಂದು ಬಾರಿ ನೋಡಲು ಕೋರಿಕೆ ಇಟ್ಟಿತ್ತು. ನನಗೆ ಗೊತ್ತಿತ್ತು ನಾನು ಇಲ್ಲಿ ನೋಡುವ ಪ್ರತಿ ನೋಟಕ್ಕೂ ದುಃಸ್ವಪ್ನಗಳು ಮತ್ತು ಯಾತನೆಯ ಮೂಲಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು. ಆದರೂ ಪ್ರತಿಬಾರಿ ಹೊಸದಾಗಿ ಆ ಜೀವಂತ ಸಮಾಧಿಯನ್ನ ನೋಡಲು ಮುಂದಾಗುತ್ತಿದ್ದೆ.
ಸ್ಮಿತಾ ಮಾಕಳ್ಳಿ ಅನುವಾದಿಸುತ್ತಿರುವ ಐಸಾಕ್ ಬಾಶೆವಿಸ್ ಸಿಂಗರನ ‘ಇನ್ ಮೈ ಫಾದರ್ಸ್ ಕೋರ್ಟ್‌ʼ ಆತ್ಮಕಥನದ ಸರಣಿಯ ನಾಲ್ಕನೆಯ ಕಂತು

 

ನಮ್ಮ ಮನೆಯಲ್ಲಿ ಸಬ್ಬತ್ ನ ರಾತ್ರಿ ಯಾವಾಗಲೂ ರಜೆಯ ವೈಶಿಷ್ಟ್ಯತೆಯಿಂದ ಕೂಡಿರೋದು, ವಿಶೇಷವಾಗಿ ಚಳಿಗಾಲದಲ್ಲಿ. ಸಂಜೆ ವೇಳೆಗೆ ಅಪ್ಪ ಅವನ ಧಾರ್ಮಿಕ ಕೂಟದವರೊಂದಿಗೆ ಸಬ್ಬತ್ ಮುಕ್ತಾಯದ ಊಟ ಮಾಡುತ್ತಿದ್ದ. ಮನೆಯಲ್ಲಿ ಬೆಳಕನೊತ್ತಿಸಿರಲಿಲ್ಲ. ಗಂಡಸರು “ದಿ ಸನ್ಸ್ ಆಫ್ ಮ್ಯಾನ್ಷನ್” ಮತ್ತು ಇತರ ಪಠಣಗಳನ್ನು ಹಾಡಿದರು. ಅವರೆಲ್ಲಾ ಹಳೆಯ ಚಾಲೆಹ್ ಮತ್ತು ಕಾರ್ಪ್ ಅಥವಾ ಹೆರಿಂಗ್ ಮೀನಿನ ಒಂದು ತುಂಡನ್ನು ತಿಂದರು. ನನ್ನಪ್ಪ ಅವನ ಜೀವಿತಾವಧಿ ಹ್ಯಾಸಿದಿಕ್ ರಬ್ಬಿಯಾಗಿರಲು ಪ್ರಯತ್ನಿಸಿದ್ದ ಮತ್ತು ಈಗ ಅವನು ತನ್ನ ಶಿಷ್ಯರಿಗೆ ಅದನ್ನೇ ಬೋಧಿಸುತ್ತಿದ್ದ.

ನಾನು ಯಾವಾಗಲೂ ಅವನ ಕುರ್ಚಿಯ ಹಿಂಬದಿ ನಿಂತು ಕೇಳಿಸಿಕೊಳ್ಳುತ್ತಿದ್ದೆ. ನನ್ನ ಅಪ್ಪ ಭಾರಿ ಭಾವೋದ್ವೇಗದಲ್ಲಿ ಲೌಕಿಕ ಸಂತೋಷಗಳ ವಿರುದ್ಧ ತನ್ನ ಮಾತಿನ ಚಾವಟಿ ಬೀಸುತ್ತಿದ್ದ. ಅವನು ಸ್ವರ್ಗದಲ್ಲಿರುವ ಧರ್ಮನಿಷ್ಠರ ಸಂತಸಗಳನ್ನ ಗುಣಗಾನ ಮಾಡುತ್ತಲೇ ಇರುತ್ತಿದ್ದ. ಚಿನ್ನದ ಕುರ್ಚಿಗಳಲ್ಲಿ ಕುಳಿತ ಅವರ ತಲೆಯ ಮೇಲಿನ ಕಿರೀಟಗಳನ್ನು, ಟೋರಾದ ರಹಸ್ಯಗಳ ಸಂದೇಹಗಳನ್ನು ಪರಿಹರಿಸುತ್ತಿದ್ದ. ಮತ್ತೆ ನನ್ನ ತಂದೆ ಮಾತನಾಡುವಾಗ, ಮೊದಲ ನಕ್ಷತ್ರಗಳು ಹೊರ ಬರುತ್ತಿದ್ದವು, ಮತ್ತೆ ಕೆಲವು ಬಾರಿ ಚಂದ್ರನೂ. ಅಪ್ಪನ ಆತ್ಮದ ಮತ್ತು “ಥ್ರೋನ್ ಆಫ್ ಗ್ಲೋರಿ”ಯ ಬಗೆಗಿನ ಮಾತುಗಳು ಯಾವಾಗಲೂ ನನ್ನ ತಲೆಯೊಳಗೆ ಒಡಗೂಡಿರುವುದೇ ಹೊಳೆಯುವ ನಕ್ಷತ್ರಗಳು, ಚಂದ್ರನ ಮುಖ, ಮೋಡಗಳ ಆಕಾರಗಳ ಜೊತೆಗೆ. ಟೋರಾದ ರಹಸ್ಯಗಳು ವಿಶ್ವದ ನಿಗೂಢತೆಗಳಲ್ಲಿ ಒಂದಾಗಿತ್ತು. ಮತ್ತೆ ಅದೇಗೋ ನಾನು ಸಂಜೆ ಸೂರ್ಯ ಕೆಳಗೆ ಹೋಗಿ, ಮೇಣದ ಬತ್ತಿಗಳನ್ನ ಹಚ್ಚುವವರೆಗೂ ಸಂಪೂರ್ಣ ಸೂಕ್ಷ್ಮತೆಯಿಂದ ಇದನ್ನ ಗ್ರಹಿಸಿರಲೇ ಇಲ್ಲ. ಇನ್ನೊಂದು ಕೋಣೆಯಲ್ಲಿ ನಮ್ಮಮ್ಮ ಮೆಲ್ಲಗೆ “ಗಾಢ್ ಆಫ್ ಅಬ್ರಹಾಂ” ಪ್ರಾರ್ಥನೆಯನ್ನು ಹೇಳುತ್ತಾ ಕುಳಿತಿರುತ್ತಿದ್ದಳು. ಆ ಸಮಯದಲ್ಲಿ ನಮ್ಮ ಮನೆಯಲ್ಲಿ ದೇವರ, ದೇವತೆಗಳ ಆತ್ಮಗಳು, ಗುಟ್ಟುಗಳು ಅಂತರ್ವ್ಯಾಪಿಸಿ ಬಿಡುತ್ತಿದ್ದವು ಮತ್ತು ವಿಶೇಷ ತವಕ ಹಾಗೂ ವಿವರಣೆಯನ್ನು ಧಿಕ್ಕರಿಸುವ ಹಂಬಲವನ್ನು ಕೂಡ.

ಕಡೆಗೂ ಅಚ್ಚುಮೆಚ್ಚಿನ ಸಬ್ಬತ್ ಮುಗಿದೇ ಹೋಯ್ತು. ಮತ್ತೆ ಹೊಸ ವಾರ ಪ್ರಾರಂಭವಾಯಿತು. ಲಾಟೀನುಗಳನ್ನು ಹೊತ್ತಿಸಲಾಯಿತು, ಸಂಜೆ ಪ್ರಾರ್ಥನೆಯನ್ನು ಹೇಳಲಾಯಿತು, ಮತ್ತೆ ಹೆಣಿಗೆಯುಳ್ಳ ಸಮಾಪ್ತಿ ದೀಪ ಪ್ರಕಾಶಿಸಿತು. ಅಪ್ಪ ವೈನಿನ ಮೇಲೆ ಅನುಗ್ರಹವನ್ನ ಹೇಳಿದ ನಂತರ, ಗಂಡಸರು ತಮ್ಮ‌ ಕೈ ಬೆರಳುಗಳನ್ನು ಅದರೊಳಗೆ ಅದ್ದಿ, ಇಡೀ ವಾರ ಸಮೃದ್ಧವಾಗಿರಲೆಂದು ತಮ್ಮ ಕಣ್ಣುಗಳಿಗೆ ಅದನ್ನು ಪ್ರೋಕ್ಷಿಸಿಕೊಂಡರು. ಚಳಿಗಾಲದ ತಿಂಗಳುಗಳಲ್ಲಿ ಅಮ್ಮ ಅಡುಗೆ ಮನೆಗೆ ಬಿಸಿ ಓಟ್ಸ್ ತರಿಯನ್ನ ತಯಾರಿಸಲು ಹೋಗುತ್ತಿದ್ದಳು. ಅಪ್ಪ “ದೇವರು ಈ ಭೂಮಿಯ ತುಂಬು ಫಲವನ್ನ ನಿಮಗೆ ಕೊಡಲಿ,” ಎಂಬ ಅಧ್ಯಾಯವನ್ನು ಪಠಿಸುತ್ತಿದ್ದ. ಜೊತೆಗೆ ಬಡ ಸಂತನೊಬ್ಬ ಪ್ರವಾದಿ ಎಲಿಜ್ ನನ್ನು ಗುಲಾಮಗಿರಿಗೆ 800,000 ದಷ್ಟು ಗುಲ್ಡನ್ ಗೆ ಮಾರಿದ ಕತೆಯನ್ನು ಕೂಡ. ನಂತರ ನಡುಮನೆಯನ್ನು ಬೆಚ್ಚಗಿರಿಸಲು ಅಗ್ಗಿಷ್ಟಿಕೆಗೆ ಬೆಂಕಿಯನ್ನು ಹೊತ್ತಿಸಲಾಯಿತು.

ಗಂಡಸರು ತಮ್ಮ ಸಬ್ಬತ್ ಉಡುಪಿನಲ್ಲಿ, ಚಹಾವನ್ನು ನಿಂಬೆಯೊಂದಿಗೆ ಹೀರುತ್ತಾ, ಹ್ಯಾಸಿದಿಕ್ ಮತ್ತು ಲೋಕದ ವ್ಯವಹಾರಗಳನ್ನು ಚರ್ಚಿಸುತ್ತಾ ಕುಳಿತ್ತಿದ್ದರು. ಮನೆಯೂ ಉರಿಯುತ್ತಿರುವ ಮೇಣದ, ಮಸಾಲೆಯ ಘಮ, ವಿಸ್ಮಯದ ವಾತಾವರಣ‌ ಮತ್ತು ಪವಾಡಗಳಿಂದ ತುಂಬಿಕೊಂಡಿತ್ತು. ಅಪ್ಪ ಧೂಮಪಾನಿಯಾಗಿದ್ದ. ಅವನು ಸಿಗರೇಟು ಅಥವಾ ಪೈಪನ್ನು ಸೇದುವ ಕ್ಷಣಕ್ಕಾಗಿ ಇಡೀ ಸಬ್ಬತನ್ನ ಸಮಾಧಾನದಿಂದ ಮತ್ತು ಅಷ್ಟೇ ತವಕದಿಂದ ಕಾಯುತ್ತಿದ್ದ.

ಈ ನಿರ್ದಿಷ್ಟ ಸಬ್ಬತಿನ ಸಂಜೆ, ಹೊಸದಾಗಿ ಮಂಜು ಸುರಿದಿತ್ತು. ಮತ್ತು ಆಚೆಗಿನ ಬಯಲು ವಿಶೇಷವಾದ ಹೊಳಪಿನಿಂದ ಕಂಗೊಳಿಸುತ್ತಿತ್ತು. ಹಿಮಾವೃತವಾದ ತಾಳೆ ಮರಗಳು ಕಿಟಕಿಗಾಜಿನ ಮೇಲೆ ಅರಳಿದ್ದವು, ಇದು ನನಗೆ ಇಸ್ರೇಲಿನ ಭೂಮಿಯ ನೆನಪು ತಂದಿತ್ತು.

ಈ ಆಶಾದಾಯಕ ಭರವಸೆಯ ಹಾರೈಕೆ ಮತ್ತು ಸಾರ್ಥಕತೆಯ ಉಲ್ಲಾಸದ ನಡುವೆ, ಬಾಗಿಲು ತೆರೆಯಿತು ಮತ್ತು ಒಬ್ಬ ಬಡ ಯಹೂದಿ ಒಳ ಬಂದನು. ಅವನು ಸಾಮಾನ್ಯ ನಿರ್ಗತಿಕನ ರೀತಿ ಇರದೇ ಕತೆಗಳಲ್ಲಿ ಬರುವ ಹಳೆಯ ಭಿಕ್ಷುಕನ ರೀತಿ ಇದ್ದ. ಅವನ ದೊಗಳೇ ನಿಲುವಂಗಿಯ ತುಂಬಾ ತೂತು ಮತ್ತು ತೇಪೆಯೇ ತುಂಬಿದ್ದವು, ಹತ್ತಿಯ ಪದರ ಮತ್ತು ರಟ್ಟು ಬಟ್ಟೆಯೂ ನೂಲುದಾರದ ಆಚೆಗೆ ಕಾಣಿಸುತ್ತಿದ್ದವು. ಅವನ ಟೊಪ್ಪಿ ಸುಲಿದುಕೊಂಡಿತ್ತು. ಅವನ ಗಡ್ಡ ಹಿಮಮಯವಾಗಿತ್ತು. ಹಾಗೇ ಅದರಿಂದ ಹಿಮ ಬಿಳಲುಗಳು ನೇತಾಡುತ್ತಿದ್ದವು ಅನ್ನಿಸುತ್ತೆ. ಆ ಮನುಷ್ಯ ಒಳಗೆ ಬರುವಾಗ ತನ್ನೊಂದಿಗೆ ಜಗತ್ತಿನ ಪ್ರತಿದಿನದ ಕಠೋರತೆಯನ್ನು ಹಾಗೂ ಹೊರಗಿನ ಚಳಿಯನ್ನು ಒಳತಂದಿದ್ದ.

“ಶುಭವಾರ, ರಬ್ಬಿ.”

“ನಿಮಗೂ ಕೂಡ ಶುಭವಾರ ಮತ್ತು ಹೊಸ ವರ್ಷ. ನಿಮಗೆ ಹೇಳಲು ಏನಿದೆ?”

ನಾನು ನನ್ನ ಕಣ್ಣಗಲಿಸಿದೆ. ಈ ಚಿಂದಿ ಮನುಷ್ಯ ನನಗೆ ಬಡತನಕ್ಕೆ ತಮ್ಮನ್ನೇ ತಾವು ಅರ್ಪಿಸಿಕೊಂಡು ನೀರು ಸಾಗಣೆ, ಸೌದೆ ಕಡಿಯುತ್ತಾ ಮತ್ತು ಭಿಕ್ಷೆ ಯಾಚಿಸುತ್ತಾ ಇದ್ದ ಮೂವತ್ತಾರು ಜನ ಸಂತರ ಕತೆಯನ್ನು ನೆನಪಿಗೆ ತಂದಿತು.

“ರಬ್ಬಿ, ನಾನೊಂದು ಪ್ರಶ್ನೆ ಕೇಳಬೇಕು.”

“ಸರಿ, ಕೇಳು.”

“ರಬ್ಬಿ, ಮನುಷ್ಯನೊಬ್ಬ ಸತ್ತ ಹೆಂಡತಿಯ ಪಕ್ಕ ಮಲಗಬಹುದೇ?”

ವಿಚಿತ್ರ ಮೌನವೊಂದು ಅಲ್ಲಿ ಸಂಭವಿಸಿತ್ತು. ನನ್ನ ಮೈಯ್ಯೊಳಗೆ ಕೊರೆಯುವ ಚಳಿಯೊಂದು ಹೋದ ಹಾಗೇ ಭಾಸವಾಯಿತು. ಗಂಡಸರೆಲ್ಲಾ ಬಿಳಚಿಕೊಂಡರು. ನನ್ನ ಅಪ್ಪನ ಮುಖ ಹೆಪ್ಪುಗಟ್ಟಿತ್ತು.

“ನೀನು ಏನು ಮಾತಾಡ್ತಾಯಿದ್ದೀಯ ಅಂತ ನನಗೆ ಅರ್ಥವಾಗ್ತ ಇಲ್ಲ,” ಎಂದು ಕೊನೆಯಲ್ಲಿ ಅಪ್ಪ ತೊದಲಿದ.

“ರಬ್ಬಿ, ನಾನು ಹುಚ್ಚನಲ್ಲ,” ಎಂದ ಆ ಮನುಷ್ಯ. “ನನ್ನ ಹೆಂಡತಿ ಈ ಶುಕ್ರವಾರ ತೀರಿಕೊಂಡಳು. ನಾನು ವಾಸಿಸುವ ನೆಲ ಮಾಳಿಗೆಯಲ್ಲಿ ಇಲಿಗಳು ಇವೆ. ಈ ಭಾನುವಾರ ಅವಳ ಅಂತ್ಯಸಂಸ್ಕಾರ ಜರುಗಲಿದೆ, ಹೆಣವನ್ನು ನೆಲದ‌ಮೇಲೆ ಇಡಲು ಸಾಧ್ಯವಿಲ್ಲ. ಏಕೆಂದರೆ ಇಲಿಗಳು ಅದನ್ನು, ದೇವರೇ ನಿಷೇಧಿಸು, ಬಿಡದೇ ಕಡಿದು ಚೂರು ಮಾಡುತ್ತವೆ. ನನ್ನ ಬಳಿ ಇರುವುದು ಒಂದೇ ಮಂಚ. ಅವಳು ಆ ಮಂಚದಲ್ಲಿಯೇ ಇರಬೇಕು. ಮತ್ತೇ ನಾನು, ನೆಲದಲ್ಲಿ ಮಲಗಲು ಸಾಧ್ಯವಿಲ್ಲ. ಆ ಇಲಿಗಳು ನನ್ನನ್ನು ಕೂಡ ಕಡಿಯುತ್ತವೆ. ನಾನು ಈಗಾಗಲೇ ಒಂದು ರಾತ್ರಿಯನ್ನು ಕೂತು ನಿದ್ದೆಯಿಲ್ಲದೇ ಕಳೆದಿದ್ದೇನೆ, ಆದರೆ ನನಗೆ ಈಗ ಶಕ್ತಿ ಉಳಿದಿಲ್ಲ. ಹಾಗಾಗಿ ನಾನು ತಿಳಿದುಕೊಳ್ಳ ಬಯಸುತ್ತೇನೆ, ನಾನು ಆ ಹೆಣದ ಜೊತೆಗೆ ಮಂಚದಲ್ಲಿಯೇ ಮಲಗಬಹುದೆ?”

ಆ ಮನುಷ್ಯ ಈ ಮಾತುಗಳನ್ನು ಪೂರ್ಣಗೊಳಿಸಿದ ಮೇಲೆ, ಹಿಂದೆಂದಿಗೂ ನೋಡಿರದೆ ಇದ್ದಂತಹದನ್ನು ನಾನು ನನ್ನ ಅಪ್ಪನ ಮುಖದಲ್ಲಿ ನೋಡಿದೆ. ಅದು ಕಣ್ಣೀರಿನಿಂದ ತುಂಬಿತ್ತು. ಅಲ್ಲೊಂದು ಉದ್ವೇಗವಿತ್ತು ಹಾಗೂ ಕಣ್ಣುಗಳು, ಕೆನ್ನೆಗಳು, ಕೆಂಪು ದಾಡಿಗಳೆಲ್ಲವು ತೋಯ್ದು ಹೋಗಿದ್ದವು. ಗಂಡಸರ ನಡುವೆ ಗದ್ದಲ ಶುರುವಾಯಿತು, ಅದರ ಬೆನ್ನಿಗೆ ಬೊಬ್ಬೆ ಎದ್ದಿತು. ಅಲ್ಲಿ ಬೂಟುಗಳ‌ ಉಜ್ಜುವಿಕೆ ಮತ್ತು ಮೇಜಿನ ಮೇಲೆ ಬೆರಳುಗಳ ತಟ್ಟುವಿಕೆ ನಡೆದಿತ್ತು. ಅಪ್ಪ ತನ್ನ ದೊಡ್ಡ ಕರವಸ್ತ್ರವನ್ನು ತನ್ನ ಕಣ್ಣು ಮತ್ತು ಮೂಗನ್ನೊರೆಸಲು ಹೊರ ತೆಗೆದ. ಮುರಿದ ಧ್ವನಿಯಲ್ಲಿ, ಹೇಳಿದ: “ಪುರುಷರೇ, ಕೇಳಿಸಿಕೊಂಡಿರಲ್ಲವೇ? ವ್ಯಥೆ, ವ್ಯಥೆಯೇ.”

ಅವನು ಸ್ವರ್ಗದಲ್ಲಿರುವ ಧರ್ಮನಿಷ್ಠರ ಸಂತಸಗಳನ್ನ ಗುಣಗಾನ ಮಾಡುತ್ತಲೇ ಇರುತ್ತಿದ್ದ. ಚಿನ್ನದ ಕುರ್ಚಿಗಳಲ್ಲಿ ಕುಳಿತ ಅವರ ತಲೆಯ ಮೇಲಿನ ಕಿರೀಟಗಳನ್ನು, ಟೋರಾದ ರಹಸ್ಯಗಳ ಸಂದೇಹಗಳನ್ನು ಪರಿಹರಿಸುತ್ತಿದ್ದ. ಮತ್ತೆ ನನ್ನ ತಂದೆ ಮಾತನಾಡುವಾಗ, ಮೊದಲ ನಕ್ಷತ್ರಗಳು ಹೊರ ಬರುತ್ತಿದ್ದವು, ಮತ್ತೆ ಕೆಲವು ಬಾರಿ ಚಂದ್ರನೂ.

“ದೇವರೇ ನಮ್ಮನ್ನು ಉಳಿಸು, ದೇವರೇ ನಮ್ಮನ್ನು ಉಳಿಸು.” ಅವನ ಅನುಯಾಯಿಗಳಲ್ಲೊಬ್ಬ ಹೇಳಿದ.

“ಎಲ್ಲೂ ಕೇಳಿರಲಿಲ್ಲ, ಎಲ್ಲೂ ಕೇಳಿರಲಿಲ್ಲ.” ಉತ್ತರಿಸಿದ ಮತ್ತೊಬ್ಬ.

“ಸರಿ, ಯಾಕೆ ಎಲ್ಲಾ ಮೌನವಾಗಿರೋದು? ಏನಾದರೂ ಮಾಡೋಣ.”

ತಮ್ಮ ಸಬ್ಬತಿನ ಸಾಟೀನ್ ಮೇಲು ದಗಲೆಯಲ್ಲಿ ಗಂಡಸರು ಹಣವಿಟ್ಟಿರಲ್ಲಿಲ್ಲ. ಆದರೇ ಅವರೆಲ್ಲರು ಅಲ್ಲಿಯೇ ಹತ್ತಿರದಲ್ಲೇ ವಾಸಿಸುತ್ತಿದ್ದರು.

ಆಗಲೇ ದುಡ್ಡು ತರಲು ಮನೆಗೆ ಓಡಿದರು. ಅಪ್ಪ, ತನ್ನ ತವರದ ಡಬ್ಬಿಯಲ್ಲಿ ದುಡ್ಡು ಇಟ್ಡಿದ್ದ. ಕೂಡಲೇ ಅದರಿಂದ ಕೆಲವು ನೋಟುಗಳನ್ನು ಹೊರತೆಗೆದ. ಅಮ್ಮನಿಗೆ ಈ ಗದ್ದಲ ಕೇಳಿ ಏನಾಗಿದೆಯೋ ಎಂದು ನೋಡಲು ಅಡುಗೆ ಮನೆಯಿಂದ ಓಡಿ ಬಂದಿದ್ದಳು. ಅವಳು ಬಿಳಚಿಕೊಂಡಳು. ಕೆಂಪಾದಳು ಮತ್ತೆ ಬಿಳಚಿಕೊಂಡಳು. ಇಂತಹ ಬಿಕ್ಕಟ್ಟುಗಳಲ್ಲಿ ಅಮ್ಮನ ಚೌರಿ ಟೋಪಿ ಜೀವಂತವಾಗಿದೆಯೇನೋ ಎಂಬಂತೆ ಕೆದರಿಕೊಂಡು ಬಿಡೋದು; ಹಲವು ಎಳೆಗಳು (ರೇಷ್ಮೆಯಿಂದ ಮಾಡಿತ್ತು, ಮನುಪ್ಯರ ಕೂದಲಿನಿಂದಲ್ಲಾ) ಅವಳ ಹಣೆ ಮತ್ತು ಕೆನ್ನೆಯ ಮೇಲೆ ಬಿದ್ದು ಬಿಡೋವು; ಹೇರುಪಿನ್ನು ಆಚೆ ನೆಗೆದು; ಅವಳ ತುರುಬು ಸಡಿಲವಾಗಿತ್ತು. ಅಮ್ಮ ಬಡಪಾಯಿಗೆ ಊಟ ತರಲು ಮತ್ತೆ ಅಡುಗೆ ಮನೆಗೆ ಹೋದಳು. ಮತ್ತೆ ಟೀ, ಬಿಸ್ಕತ್ತು ಹಾಗೂ ಉಳಿದ ಕತ್ತರಿಸಿದ ಮಾಂಸದ ಜೊತೆಗೆ ವಾಪಸ್ಸು ಬಂದಳು. ಆ ಬಡಪಾಯಿ ಕೈ ತೊಳೆಯಲು ನೀರಿನ ಪೀಪಾಯಿ ಎಡೆಗೆ ಹೋದ. ಒಬ್ಬ ಯುವಕ ಮರಳಿ ಆ ಮನುಷ್ಯನಿಗೆ ತಾತ್ಕಾಲಿಕವಾಗಿ ಮಂಚ ಸಿಕ್ಕಿದೆ ಎಂಬ ಸುದ್ದಿಯನ್ನು ಮನೆಗೆ ತಂದಿದ್ದ. ಅಕ್ಕಪಕ್ಕದ ಮನೆಯ ಹೆಂಗಸರು ನಮ್ಮ ಮನೆಗೆ ಬಂದರು, ತಮ್ಮ ಕೈಗಳನ್ನು ಹಿಸುಕಿಕೊಂಡರು, ಗಂಡಸರ ನಡುವೆ ತತ್ತರದಿಂದ ಓಡಾಡುತ್ತಿದ್ದರು.

“ನಾವು ಹೋಗಿ ನೋಡಬೇಕು,” ಯಾರೋ ಹೇಳಿದರು.

ನಮ್ಮ ಅಪ್ಪ ಹೆಣವಿರುವ ಕೋಣೆಗೆ ಹೋಗುವಂತಿರಲಿಲ್ಲ, ಏಕೆಂದರೆ ಅವನು ಪುರೋಹಿತ ವಂಶಸ್ಥನಾಗಿದ್ದ. ಆದರೆ ಬೇರೆ ಯಹೂದಿಗಳಿಗೆ ನಿಷಿದ್ಧವೇನು ಇರಲಿಲ್ಲ. ಇದರ ನಡುವೆ ಆ ಬಡ ಮನುಷ್ಯ ಊಟಮಾಡುತ್ತಾ ಚೇತರಿಸಿಕೊಳ್ಳುತ್ತಿದ್ದ, ಕೊಡುಗೆಗಳು ಎಲ್ಲಾ ಕಡೆಗಳಿಂದ ಹರಿದು ಬಂದವು. ಯಾರೋ ಮೆತ್ತನೆಯ ಹೊರಹೊದಿಕೆ, ಅಂಗಿ, ಒಂದು ಜೊತೆ ಕಾಲುಚೀಲಗಳು, ತುಪ್ಪುಳದ ಟೋಪಿಯನ್ನ ತಂದರು. ಅವರುಗಳು ಆ ಬಡ ಮನುಷ್ಯನಿಗೆ ಸಂಪೂರ್ಣ ಉಡುಗೆಗಳನ್ನು ಕೊಟ್ಟಿದ್ದರು. ಅವನು ಊಟವನ್ನು ಮುಗಿಸಿ ಅನುಗ್ರಹವನ್ನು ಹೇಳಿದ ನಂತರ, ಅವನ ಜೊತೆಗೆ ದೊಡ್ಡ ಗುಂಪೊಂದು ಅವನ ಮನೆಯಡೆಗೆ ಹೊರಟಿತು. ಒಬ್ಬ ಮಂಚವನ್ನು ಮಿಕ್ಕವರು ಆಹಾರವನ್ನು ಒಯ್ದುರು. ನನಗೆ ಅಲ್ಲಿ ಹೋಗಲು ಅನುಮತಿಯಿರಲಿಲ್ಲ ಏಕೆಂದರೆ ನಾನು ಕೂಡ ಪುರೋಹಿತ ವಂಶಸ್ಥನೇ ಆಗಿದ್ದೆ. ಅದರಾಚೆಗೆ ನನಗೆ ಬಾಲ್ಯದಲ್ಲಿ ಇಂತಹದರ ಬಗ್ಗೆ ಅಂಜಿಕೆ ಇತ್ತು. ಆದರೆ ನನ್ನ ಕುತೂಹಲ ಸ್ಪಷ್ಟವಾಗಿ ನನ್ನ ಭಯಗಳಿಗಿಂತ ಗಟ್ಟಿಯಾಗಿತ್ತು.

ಆ ಮನುಷ್ಯ ಕ್ರೋಚ್ಮಲ್ನ ಬೀದಿಯಲ್ಲಿ ವಾಸವಿದ್ದ ಮತ್ತು ನಾವು ಆ ಪ್ರಾಂಗಣ ತಲುಪಿದಾಗ, ಬಹುತೇಕ ಗಂಡಸರು ಹೊರಗೆ ನಿಂತರು. ಇತರರು ಬೇಗನೇ ಆ ಕತ್ತಲು ಮತ್ತು ಕೊಳಕಿನಿಂದ ಕೂಡಿದ ಮೆಟ್ಟಿಲುಗಳ ಕೆಳಗೆ ದಾರಿ ಮಾಡಿಕೊಂಡರು. ನಾನು ಬೇಗನೇ ಆ ನೆಲಮಾಳಿಗೆಯ ಕಿಟಕಿಯಿಂದ ಹೆದರಿಕೆಯ ದೃಶ್ಯವನ್ನು ನೋಡಿದೆ. ಅದೊಂದು ಸಾಧಾರಣವಾದ ನೆಲಮಾಳಿಗೆಯ ವಸತಿಯಾಗಿತ್ತು, ಆದರೆ ಅದೊಂದು ರೀತಿಯ ಗುಹೆ, ಭೂಮಿಯಲ್ಲಿಯ ಒಂದು ರಂಧ್ರದ ಹಾಗೆ. ಆ ಗೋಡೆಗಳು ಹೊಗೆ ಕೊಳವೆಗಳಷ್ಟೇ ಕಪ್ಪಗಿದ್ದವು. ಮಬ್ಬಾದ ಎರಡು ದೀಪಗಳು ಆ ಕತ್ತಲಲ್ಲಿ ಮಿನುಗುತ್ತಿದ್ದವು, ಮತ್ತೆ ಮಂಚದ ಮೇಲೆ ಕಂಬಳಿಯಿಂದ ಮುಚ್ಚಿದ್ದ ಮನುಷ್ಯಾಕೃತಿಯೊಂದು ಮಲಗಿತ್ತು. ನನಗೆ ಅದು ಸರಿಯಾಗಿ ನೋಡಲಾಗುತ್ತಿರಲಿಲ್ಲ. ಏಕೆಂದರೆ ಆ ಕಿಟಕಿಯ ಗಾಜುಗಳು ಹಿಮ ಮತ್ತು ಮಂಜುಗಡ್ಡೆಯಿಂದ ಅಸ್ಪಷ್ಟವಾಗಿದ್ದವು. ನೋಡುಗರ ಕುತೂಹಲದಿಂದಾಗಿ, ಅವರ ಚೆಚ್ಚಗಿನ ಉಸಿರಿನಿಂದಾಗಿ ನಡುಭಾಗದಲ್ಲಿ ಮಾತ್ರ ಸ್ವಲ್ಪ ಮಂಜುಗಡ್ಡೆ ಕರಗಿ, ಅಲ್ಲಿ ಸ್ವಲ್ಪ ಮಾತ್ರ ಸ್ಪಷ್ಟವಾಗಿ ಕಾಣುತ್ತಿತ್ತು. ಆ ಮನುಷ್ಯ ನೆಲಮಾಳಿಗೆಯಲ್ಲಿ ಬದುಕುತ್ತಿದ್ದ. ಆ ಅಂಧಕಾರದಲ್ಲಿ, ಚಳಿ ಮತ್ತು ಕೊಳಕಿನಲ್ಲಿ ತನ್ನ ಅತೀ ದರಿದ್ರ ಅಸ್ಥಿತ್ವವನ್ನು ಹೆಂಡತಿಯೊಂದಿಗೆ ಮುಂದುವರೆಸಿದ್ದ. ತನ್ನ ಮಾಂಸ ಮತ್ತು ಬ್ರೆಡ್ ನ ತುಂಡುಗಳ‌ ಮೇಲೆ ಆಕ್ರಮಣ ಮಾಡುತ್ತಿದ್ದ ಆ ತೆವಳುವ ಜೀವಿಗಳ ಗುಂಪುಗಳ ಮೇಲೆ ಯುದ್ಧ ಮಾಡುತ್ತಲೇ ಇದ್ದ. ಮತ್ತು ಈಗ ಆ ದುಷ್ಟ ಜಂತುಗಳು ಹುತಾತ್ಮ ಹೆಣವನ್ನು ತುಂಡರಿಸುವ ಬೆದರಿಕೆಯೊಡ್ಡಿವೆ.

ನಾನು ಎರಡು ವಿರೋಧ ಭಾವನೆಗಳ ಮಧ್ಯೆ ಛಿದ್ರವಾಗಿದ್ದೆ. ನನ್ನ ಭಯ ನನ್ನ ಕಣ್ಣುಗಳನ್ನು ಅಲ್ಲಿಂದ ಬೇರೆಡೆಗೆ ತಿರುಗಿಸಲು ಆದೇಶಿಸುತ್ತಿತ್ತು, ಆದರೆ ನನ್ನ ಕುತೂಹಲ ಮತ್ತೊಂದು ಬಾರಿ ನೋಡಲು ಕೋರಿಕೆ ಇಟ್ಟಿತ್ತು. ನನಗೆ ಗೊತ್ತಿತ್ತು ನಾನು ಇಲ್ಲಿ ನೋಡುವ ಪ್ರತಿ ನೋಟಕ್ಕೂ ದುಃಸ್ವಪ್ನಗಳು ಮತ್ತು ಯಾತನೆಯ ಮೂಲಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು. ಆದರೂ ಪ್ರತಿಬಾರಿ ಹೊಸದಾಗಿ ಆ ಜೀವಂತ ಸಮಾಧಿಯನ್ನ ನೋಡಲು ಮುಂದಾಗುತ್ತಿದ್ದೆ. ಕೆಳಗೆ ಉರಿಯುತ್ತಿದ್ದ ಮಬ್ಬು ಬೆಳಕು ಅಲ್ಲಿನ ಕತ್ತಲನ್ನು ಇನ್ನಷ್ಟು ಗಾಢವಾಗಿಸುತ್ತಿತ್ತು. ನನಗೆ ಅದು ಎಲ್ಲಾ ರೀತಿಯ ಕೆಟ್ಟ ಶಕ್ತಿಗಳು ಹಾಗೂ ಮೋಹಿನಿಯರು ಆಟವಾಡುತ್ತಾ ಇರುವ ಹೇಳಬಾರದ ಜಾಗವೆಂದೇ ಗೋಚರಿಸಿತು. ಅವು ಎಲ್ಲಾ ರೀತಿಯ ಭೀಕರವಾದ ರೂಪಗಳನ್ನು ತಾಳಿದಂತೆ ಇತ್ತು. ಯಾವ ಮನುಷ್ಯನಾದರೂ ಇಂತಹ ಪ್ರಪಾತದಲ್ಲಿ ಬದುಕಬಹುದೇ? ಇಂತಹ ಕೊಳಕು ಜಾಗದಲ್ಲಿ ಮನುಷ್ಯನೊಬ್ಬ ತನ್ನ ಸ್ವಾಸ್ಥ್ಯವನ್ನು ಸೀಮಿತದಲ್ಲಿರಿಸಲು ಸಾಧ್ಯವೇ? ನನಗೆ ಇದ್ದಕ್ಕಿದ್ದ ಹಾಗೆ ತಲೆಯೊಳಗೆ ಎಂತಹದ್ದೋ ಒಂದು ರೀತಿಯ ಬಿಗಿತ ಹಾಗೂ ಮಂಜಿನ‌ ನಡುಕ ನನ್ನ ಬೆನ್ನು ಮೂಳೆಯ ಕೆಳಗೆ ಓಡಿದಂತಾಯಿತು. ಇಲ್ಲಿ ವಾಸಿಸುತ್ತಿರುವವನೇ ಸ್ವತಃ ದೆವ್ವವಾಗಿರಲು ಸಾಧ್ಯವೇ?

ಗಂಡಸರು ಹಾಗೂ ಹೆಂಗಸರು ಆ ನೆಲಮಾಳಿಗೆಯಲ್ಲಿ ತಮ್ಮನ್ನು ತಾವು ಕಾರ್ಯನಿರತರನ್ನಾಗಿಸಿಕೊಂಡಿದ್ದರು. ಮತ್ತೆ ಯಾರೋ ಅಲ್ಲಿನ ಮೇಣದ ಬತ್ತಿ ಗಳನ್ನು ಸರಿಸಿದರು. ಅವರು ಏನನ್ನೋ ಎತ್ತುತ್ತಿದ್ದಂತೆ ಕಂಡುಬಂದರು. ನಾನು ತಿರುಗಿ ಓಡಲು ಸಿದ್ಧನಿದ್ದೆ. ಆದರೆ ಈಗ ನಾನು ಮನೆಗೆ ಒಬ್ಬನೇ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ಭಯ. ಏಕೆಂದರೆ ನಮ್ಮ ಮನೆಯ ಮೆಟ್ಟಿಲುಗಳನ್ನು ಕೆಲವು ಬಾರಿ ಹೊತ್ತಿಸಿರುತ್ತಿರಲ್ಲಿಲ್ಲ ಮತ್ತೆ ಒಂದಷ್ಟು ಬಾರಿ ಅವು ಹೊಗೆಬಿಡುವ ಸೀಮೆಎಣ್ಣೆಯ ಮುಚ್ಚಳವಿಲ್ಲದ ಚಿಮಣಿಯಲ್ಲಿ ಉರಿಯುತ್ತಾ ಇರುತ್ತಿದ್ದವು. ಒಬ್ಬ ಮನುಷ್ಯ ನನ್ನ ಜೊತೆ ವಾಪಸ್ಸು ಬರಲು ಒಪ್ಪಿದ. ನಾನು ಪೂರ್ತಿಯಾಗಿ ನಡುಗುತ್ತಿದ್ದೆ. ಜೊತೆಗೆ ನನ್ನ ಹಲ್ಲುಗಳು ಕಟಕಟಿಸುತ್ತಿದ್ದವು. ನನ್ನೊಳಗಿನ ಯಾವುದೋ ಒಂದು ಭಾಗ ಕೂಗಿ ಕೇಳಿತು, “ದೇವರು ಹೇಗೆ ಇದಕ್ಕೆ ಅವಕಾಶ ಕೊಟ್ಟ?”

ನಾನು ಮನೆಯ ಕಡೆ ಹೋದೆ, ನಮ್ಮಮ್ಮ ತನ್ನ ಕೈಗಳನ್ನ ಹಿಸುಕಲು ಶುರುವಿಟ್ಟಳು. “ಅಯ್ಯೋ ಸಂಕಟ ನನಗಿರಲಿ! ಈ ಮಗುವನ್ನೊಮ್ಮೆ ನೋಡಿ!”

ಅವರು ನನ್ನನ್ನು ಬೆಚ್ಚಗಾಗಿಸಿದರು. ಅಮ್ಮ ಮಂತ್ರವೊಂದನ್ನು ಪಠಿಸಿದಳು. ನನಗೆ ಟೀ ಮತ್ತು ಮುರಬ್ಬ ಹಾಗೂ ಮನೆಯಲ್ಲಿರುವ ಎಲ್ಲಾ ಒಳ್ಳೆಯ ಪದಾರ್ಥಗಳನ್ನು ಕೊಟ್ಟಳು. ಅಪ್ಪ ಅವನ ಓದಿನ ಕೋಣೆಯಲ್ಲಿ ಹಿಂದೆ ಮುಂದೆ ಶತಪಥ ತಿರುಗುತ್ತಿದ್ದ. ಅವನು ತನ್ನ ಗಡ್ಡವನ್ನು ಅಗಿಯುತ್ತಾ ಮತ್ತೆ ಹಣೆಯನ್ನು ಉಜ್ಜಿಕೊಳ್ಳುತ್ತಿದ್ದ. ಅವನು ಸ್ವಭಾವತಃ ನಂಬುವವನಾಗಿದ್ದ. ಆದರೆ ಈ‌ ಘಟನೆಯಿಂದಾಗಿ ಅವನೊಳಗೆ ಅನುಮಾನಗಳು ಜಾಗ್ರತವಾದವು.

“ಸ್ವರ್ಗದಲ್ಲಿರುವ ನಮ್ಮ ತಂದೆಯೇ….. ದುಃಖ!” ವಿಮೋಚನೆಗೆ ಇದು ಸಕಾಲ…. ಈ ಸಮಯ…. ಸಕಾಲ.”

ನಮ್ಮ ಸಬ್ಬತಿನ ರಾತ್ರಿ ಹಾಳಾಯಿತು ಮತ್ತು ಇಡೀ ವಾರ ಬಡಕಲಾಗಿತ್ತು. ಕಾರಣ ಅಪ್ಪ ಅಮ್ಮನಿಗೆ ಕೊಡಬೇಕಿದ್ದ ವಾರದ ಮೊತ್ತವನ್ನ ಆ ಬಡಪಾಯಿಗೆ ಕೊಟ್ಟಿದ್ದ. ನಂತರ ಮಾತಾಡೋದನ್ನ ಕೇಳಿದ್ದೆ, ನಿಜವಾಗಿ ಯಹೂದಿಯೊಬ್ಬನ ಮನೆಯಲ್ಲಿ ಒಂದೇ ಮಂಚ ಇರೋದು ಅಂದ್ರೆ ಬಹಳ‌ ವಿಚಿತ್ರ ಎಂದು. ಇದು ರೈತಾಪಿ ವರ್ಗದಲ್ಲಿ ಮಾಮುಲು. ಆದರೆ ಇಂತಹದನ್ನ ಕಡುಬಡುತನದಲ್ಲಿ ಇದ್ದ ಯಹೂದಿ ಮನೆಗಳಲ್ಲೂ ಕೇಳಿರಲಿಲ್ಲ. ಆದರೆ ಯಾರಿಗೆ ಗೊತ್ತು. ಬಹುಶಃ ಅವನ ಬಳಿ ಎರಡನೇಯ ಮಂಚ ಇದ್ದಿರಬಹುದು. ಅದು ಮುರಿದು ಹೋಗಿರಬಹುದು? ಒಂದು‌ ವೇಳೆ ಅವನು ಅದನ್ನು ಕಟ್ಟಿಗೆ ಉರಿಸಲು ಬಳಸಿರಲುಬಹುದು?

ದೊಡ್ಡ ಪಟ್ಟಣಗಳಲ್ಲಿ ಯಾವಾಗಲಾದರೊಮ್ಮೆ ಕಾಣಬಹುದಾದ ಇಂತಹ ಕೃತ್ಯಗಳು ಸಣ್ಣ ನಗರಗಳಲ್ಲಿ ಅಪರೂಪಕ್ಕೆ ಕಾಣಬಹುದಾಗಿತ್ತು. ಬಹಳ‌ ಸಮಯದವರೆಗೂ ನಮ್ಮ ಮನೆಯಲ್ಲಿ ಈ ಕ್ರೂರ ಅಧ್ಯಾಯದ ಬಗ್ಗೆ ಮಾತು ಮುಂದುವರೆದೆ ಇತ್ತು. ತದನಂತರ ತುಂಬಾ ದೀರ್ಘಾವಧಿಯವರೆಗೂ ನನಗೆ ದುಃಸ್ವಪ್ನಗಳು ಬಿಡದೆ ಕಾಡಿದವು. ನಂತರದಲ್ಲಿ ಅನೇಕಸಲ ಆ ಮನುಷ್ಯ ಜನರ ಬಳಿ ವ್ಯಾಪಾರ ಮತ್ತು ಇತರದಕ್ಕೆ ಬೆರೆಯೋದನ್ನ ನೋಡಿದ್ದೆ. ಆದರೆ ನನಗೆ ಅವನ‌ ಕಂಡರೆ ಎಂತಹದೋ ಭಯವಿತ್ತು. ನನಗೆ ಯಾವಾಗಲೂ ಆ ಸಬ್ಬತಿನ ಸಂಜೆಯ ಅವನ ಭೇಟಿ, ಮತ್ತವನ ಘೋರ ಪ್ರಶ್ನೆ ನನ್ನ ನೆನಪಿನಲ್ಲಿ ಉಳಿದುಹೋಗಿದೆ.