“ಐನೂರು ಮಂದಿ ಪುಂಡರು ಬೀರಣ್ಣ ಬಂಟನ ನೇತೃತ್ವದಲ್ಲಿ ಸಿಳ್ಳು ಹಾಕುತ್ತಾ, ಕೇಕೆಯಿಕ್ಕುತ್ತಾ ಬಾಯಿಗೆ ಬಂದಂತೆ ಒದರುತ್ತಾ ಬರುತ್ತಿದ್ದರು. ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪಕ್ಕೆ ಗುಲ್ಲು ಮುಟ್ಟುವುದೆ ತಡ ಇಕ್ಕಡೆಗಳಿಂದಲೂ “ಢಂ ಢಂ” ಎಂಬ ಶಬ್ದವಾಯಿತು. ಭಯಂಕರ ಹೊಗೆಯೆದ್ದಿತು. ಬೆಂಕಿ ಉರಿಯಿತು. ಒಂದೇ ಸವನೆ ಎಡೆಬಿಡದೆ ಫಿರಂಗಿಗಳು ಘರ್ಜಿಸಿದುವು. ಗುಲ್ಲಿನ ಪುಂಡರು ಬೆದರಿ ದಿಕ್ಕುಪಾಲಾದರು. ಕಂಪೆನಿಯ ಸೈನ್ಯ ಬಂದಿದೆಯೆಂದು ಭ್ರಮಿಸಿ ಸಿಕ್ಕಿದತ್ತ ಓಡಿದರು. ಹಿಂಬಾಲಿಸಿದ ಬಾಚನು ತನ್ನ ಬಡಿಗೆಯನ್ನು “ರೊಂಯ್ಯ ರೊಂಯ್ಯ”ನೆಂದು ಗಾಳಿಯಲ್ಲಿ ಬೀಸುತ್ತಾ ಒಂದು ಪೆಟ್ಟಿಗೆ ನಾಲ್ಕೆಂಟಾಳುಗಳನ್ನು ಕೆಡಹುತ್ತಾ ಅವರನ್ನು ಮುತ್ತಿದನು. ಎದುರುಗಡೆಯಿಂದ ಸುಬ್ಬಯ್ಯನು, ಹಿಂದಿನಿಂದ ಬಾಚನು ಮುತ್ತಿಗೆ ಹಾಕಿ ಹಲವರನ್ನು ಕೊಂದು ಕೆಡಹಿದರು. ಹಲವರು ಸೆರೆ ಸಿಕ್ಕಿದರು. ಉಳಿದವರು ಹೆದರಿ ಸಿಕ್ಕಿಸಿಕ್ಕಿದತ್ತ ಓಡಿದರು.”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಒಂಬತ್ತನೆಯ ಕಥಾನಕ.
ಸೂರ್ಯನು ಆಗ ತಾನೆ ಮೂಡಿ ಎರಡು ಮಾರು ಮೇಲೇರಿದ್ದನು. ತಂಗಾಳಿ ಮೆಲ್ಲ ಮೆಲ್ಲನೆ – ಹೆದರಿ ಹೆದರಿ ಬೀಸುತ್ತಿತ್ತು. ಸಂಪಿಗೆಯ ಕಂಪನ್ನು – ತಂಗಾಳಿ ದಿಕ್ಕು ದಿಕ್ಕಿಗೂ ಹೊತ್ತೊಯ್ಯುತ್ತಿತ್ತು. ಕೂಡಲು ಬಯಲಿಡಿ ಅದರ ಪರಿಮಳಕ್ಕೆ ಘಮ ಘಮಿಸುತ್ತಿತ್ತು. ಒಂದು ಕಡೆಯಿಂದ ಆಹ್ಲಾದಕರವಾದ ತಂಪಿನ ಕಂಪನ್ನು ಹೊತ್ತೊಯ್ಯವ ತಂಗಾಳಿ, ಇನ್ನೊಂದು ಕಡೆಯಿಂದ ಪ್ರಶಾಂತವಾದ ಬೆಳಗ್ಗಿನ ಹವೆ. ಎಂಥಾ ವಿರಾಗಿಯನ್ನೂ ರೋಮಾಂಚನಗೊಳಿಸಿ ಬಡಿದೆಬ್ಬಿಸುತ್ತಿತ್ತು. ಇಂತಹ ಪ್ರಶಾಂತ ವಾತಾವರಣದಲ್ಲಿ ಸುಬ್ಬಯ್ಯನ ದರ್ಬಾರು ನೆರೆದಿತ್ತು.
ಸಂಪಿಗೆ ಚಾವಡಿಯ ತೂಗುಯ್ಯಾಲೆಯಲ್ಲಿ ಸುಬ್ಬಯ್ಯನು ರಾಜಠೀವಿಯಿಂದ ಮಂಡಿಸಿದ್ದನು. ಕಾಸರಗೋಡು, ಅಂಗಡಿಮೊಗರು, ಮೊಗ್ರಾಲು, ಪಾಡಿ – ಈ ನಾಲ್ಕು ಮಾಗಣೆಗಳ ಪ್ರಮುಖರೂ ಅಲ್ಲಿ ನೆರೆದಿದ್ದರು. ಗಹನವಾದ ವಿಷಯದ ಕುರಿತು ಚರ್ಚಿಸುತ್ತಿದ್ದರು. ಸುಬ್ಬಯ್ಯನ ಮುಖ ಗಂಭೀರವಾಗಿತ್ತು. ಸಭಿಕರೆಲ್ಲರೂ ಮುಖ ಮುಖ ನೋಡುತ್ತಿದ್ದರು. ಸಭೆಯಲ್ಲಿ ತೂಗುಯ್ಯಾಲೆಯ “ಕಿರೀಂ ಕಿರೀಂ” ಶಬ್ದವೊಂದನ್ನು ಬಿಟ್ಟರೆ ಬೇರಾವ ಶಬ್ದವೂ ಕೇಳಿಸುತ್ತಿರಲಿಲ್ಲ. ಸಭಿಕರ ವದನದಲ್ಲಿ ಮೌನದ ಕರಾಳ ಛಾಯೆ ಆವರಿಸಿತ್ತು.
ಸುಬ್ಬಯ್ಯನ ಗಂಭೀರವಾದ ವಿಶಾಲ ಮುಖದಲ್ಲಿ ತಿರುವಿ ಹುರಿ ಮಾಡಿದ ಮೊನಚಾದ ಗಲ್ಲಿ ಮೀಸೆ! ತೇಜಃಪುಂಜವಾದ ಕಣ್ಣುಗಳು ಹೊಳೆಯುತ್ತಿದ್ದುವು. ಅವುಗಳಿಂದ ಅಪೂರ್ವಕಾಂತಿ ಹೊರಸೂಸುತ್ತಿತ್ತು. ಸುಮಾರು ಅರುವತ್ತರ ಪ್ರಾಯದ ನಸುಕರಿದಾದ ದೀರ್ಘ ದೇಹ ಅವನದು. ಅದಕ್ಕೊಪ್ಪಿದ ವಿಶಾಲವಾದ ಎದೆಕಟ್ಟು ಮೈಮಾಟ ಠೀವಿಯ ಸೂಚಕವಾಗಿತ್ತು. ಕೆಂಪು ಜರಿಯ ರುಮಾಲನ್ನು ತಲೆಗೆ ಪೇಟದಂತೆ ಸುತ್ತಿಕೊಂಡಿದ್ದನು. ಬಿಳಿ ಕಸೆಯ ಧೋತ್ರವನ್ನು ‘ಪಂಚೆಕಚ್ಚೆ’ (ಮುಂದೆಯೂ ಹಿಂದೆಯೂ ನೆರಿಬಿಟ್ಟು ಕಚ್ಚೆ ಹಾಕುವ ಒಂದು ಪದ್ಧತಿ) ಹಾಕಿ ಉಟ್ಟಿದ್ದನು. ತೆಳುವಾದ “ಎಲವಸ್ತ್ರ”ವೊಂದನ್ನು ಮೈತುಂಬಾ ಹೊದ್ದುಕೊಂಡಿದ್ದನು. ಹಣೆಗೆ ಕಸ್ತೂರಿಯ ತಿಲಕವನ್ನಿಟ್ಟು ಕುತ್ತಿಗೆಯಲ್ಲಿ ಮಾಣಿಕ್ಯದ ಸರವನ್ನು ಧರಿಸಿದ್ದನು. ಕೈಗೆ ವಜ್ರದ ಮುಂಗೈ ಸರಪಳಿ, ಕಿವಿಯಲ್ಲಿ ವಜ್ರದ ‘ಗಾಳಿವಂಟಿ’ (ನೇತಾಡುವ ಕುಂಡಲ), ಹತ್ತು ಬೆರಳಿಗೂ ವಿವಿಧ ಹರಳುಗಳ ಉಂಗುರಗಳು, ರಾಜಠೀವಿಯ ಪ್ರತೀಕವಾಗಿದ್ದುವು. ಸುಬ್ಬಯ್ಯನು ತೂಗುಯ್ಯಾಲೆಯಲ್ಲಿ ದಿವ್ಯ ತೇಜಸ್ಸಿನಿಂದ ಶೋಭಿಸುತ್ತಿದ್ದನು.
ಅಷ್ಟರಲ್ಲಿ ಓರ್ವ ದೂತನು ಓಡೋಡಿ ಬಂದು “ಒಡೆಯಾ ‘ಗುಲ್ಲು’ (ಹಿಂದೆ ಒಂದು ಪುಂಡರ ತಂಡಕ್ಕೆ ಜನರಿಟ್ಟಿದ್ದ ಹೆಸರು) ಸೀರೆ ಹೊಳೆ ದಾಟಿ ಬರುತ್ತಿದೆ. ಸಿಕ್ಕಿ ಸಿಕ್ಕಿದವರನ್ನೆಲ್ಲಾ ಸದೆಬಡಿದು ಸುಲಿದು ಸಾಗುತ್ತಿದೆ. ಕೊಳ್ಳೆಯಿಡುವುದು, ಸುಡುವುದು, ಪ್ರತಿಭಟಿಸಿದವರನ್ನು ಜೀವಂತ ಚರ್ಮ ಸುಲಿದು ಚಿತ್ರ ಹಿಂಸೆ ಕೊಡುವುದು, ನೋಡಿದಲ್ಲೆಲ್ಲ ಕಾಣಿಸುವ ನೋಟ. ಸ್ತ್ರೀಯರ ಮಾನಾಪಹರಣ, ಹಗಲು ದರೋಡೆ, ಬಲಾತ್ಕಾರದ ಸುಲಿಗೆ ಹಿಂಸೆಗಳು ನಡೆಯದ ಜಾಗವಿಲ್ಲ. ‘ಕೊಳ್ಳಿಭೂತ’ಗಳಂತೆ ತಿರುಗುತ್ತಿದ್ದಾರೆ ಭಟರು. ಚಿರಂಜೀವಿ ಸುಬ್ರಾಯನ ಬಲಗೈ ಬಂಟನಾದ ಬೀರಣ್ಣನೆಂಬವನ ಮುಂದಾಳ್ತನದಲ್ಲಿ ಗುಲ್ಲು ಇತ್ತ ಸಾಗಿ ಬರುತ್ತಿದೆ” ಎಂದು ಸೇಂಕುತ್ತಾ, ನಡುಗುತ್ತಾ, ಬಿಕ್ಕುತ್ತಾ ಅರಿಕೆ ಮಾಡಿಕೊಂಡನು. ಸಭೆಯಲ್ಲೆಲ್ಲಾ ಹಾಹಾಕಾರವೆದ್ದಿತು. ಒಬ್ಬೊಬ್ಬರೊಂದೊಂದು ವಿಧವಾಗಿ ಸಲಹೆಗಳನ್ನಿತ್ತರು.
ಯಾವುದೂ ಸುಬ್ಬಯ್ಯನಿಗೆ ಹಿಡಿಸಲಿಲ್ಲ. ತನ್ನ ಬಲಗೈ ಬಂಟನಾದ ಪುಳ್ಕೂರು ಬಾಚನ ಮುಖವನ್ನು ನೋಡಿದನು. “ನಿನ್ನ ಅಭಿಪ್ರಾಯವೇನು” ಎಂದು ಸನ್ನೆಯಿಂದ ಕೇಳಿದನು. ಬಾಚನು ತನ್ನ ಹುರಿ ಮೀಸೆಗೆ ಕೈಯಿಕ್ಕಿ ಜುಟ್ಟಿನ ಕಟ್ಟನ್ನು ಸರಿಪಡಿಸುತ್ತಾ ವೀರಾವೇಶದಿಂದ – “ಬುದ್ಧಿಯವರು ಅಷ್ಟಕ್ಕೆ ಹೆದರಬೇಕೇ? ನನ್ನ ಈ ತಾಳೆ ಮರದ ದೊಣ್ಣೆಯೊಂದಿದ್ದರೆ ಸಾಕು. ದೊಣ್ಣೆಯ ಒಂದೆ ಬೀಸಾಟಕ್ಕೆ ಈ ಪುಂಡರ ರುಂಡಗಳನ್ನು ಕ್ಷಣಮಾತ್ರದಲ್ಲಿ ಚೆಂಡಾಡಿ ಧೂಳೀಪಟ ಮಾಡಿಬಿಡುವೆನು. ಬಡಿಗೆಯೊಂದು ಕೈಯಲ್ಲಿದ್ದರೆ ಹುಲಿಯೆ ಬರಲಿ – ಸಿಂಹವೆ ಮುತ್ತಲಿ – ಆನೆಗಳ ದಂಡೆ ಎದುರಾಗಲಿ ನನಗೆ ಗಣ್ಯವಿಲ್ಲ! ಮತ್ತೆ ಈ ಪುಂಡು ಪೋಕರಿಗಳು ನನಗೊಂದು ಲೆಕ್ಕವೆ? ಅವರನ್ನೆಲ್ಲಾ ಬಡಿದು – ಪುಡಿಗಟ್ಟಿ ಉಳಿದವರನ್ನು ಹೆಡೆಮುರಿಗಟ್ಟಿ ಈ ಚಾವಡಿಯ ಮುಂದೆ ದನಿಯವರ ಪಾದಗಳಡಿಯಲ್ಲಿ ಕೆಡಹುವೆನು! ನೋಡುತ್ತಿರಿ” ಎಂದು ಬಡಿಗೆಯನ್ನು ಗಾಳಿಯಲ್ಲಿ ಗಿರಗಿರನೆ ಬೀಸಿದನು. ಬಾಚನ ಈ ಮಾತಿನಿಂದ ಎಲ್ಲರಲ್ಲೂ ವೀರಾವೇಶ ತುಂಬಿತು. ಎಲ್ಲರೂ ಕತ್ತಿ, ದೊಣ್ಣೆ, ಹಾರೆ, ಗುದ್ದಲಿ, ಬಡಿಗೆ, ಕೋವಿಗಳನ್ನು ಹಿಡಿದುಕೊಂಡು ಸಿದ್ಧರಾದರು.
ಕಬ್ಬಿಣದ ಕವಚಗಳನ್ನು ತೊಟ್ಟವರಂತಿದ್ದ ಮೈಕಟ್ಟಿನ ಕಟ್ಟುಮಸ್ತಾಗಿ ವಿಶಾಲವಾದ ಎದೆಯುಳ್ಳ ಮೂಲದ ಹೊಲೆಯರು, ದಷ್ಟಪುಷ್ಟವಾಗಿ ಬೆಳೆದು ಗಟ್ಟಿಮುಟ್ಟಾಗಿದ್ದ ಹೊಂತಕಾರಿ ಒಕ್ಕಲಿಗರು, ಸುಬ್ಬಯ್ಯನ ಸಂಪಿಗೆ ಚಾವಡಿಯಲ್ಲಿ ನೆರೆದರು. ಎಲ್ಲರ ನರನಾಡಿಗಳಲ್ಲೂ ಬಾಚನ ಆವೇಶದ ಮಾತುಗಳಿಂದ ರಕ್ತ ಬಿಸಿಯಾಗಿ ಹರಿಯುತ್ತಿತ್ತು. ಮುನ್ನೂರು ಮಂದಿ ಧಾಂಡಿಗರು ಅಲ್ಲಿ ನೆರೆದರು. ನೂರೈವತ್ತು ಮಂದಿ ಸುಬ್ಬಯ್ಯನ ನೇತೃತ್ವದಲ್ಲೂ, ಅಷ್ಟೆ ಮಂದಿ ಬಾಚನ ಮುಂದಾಳುತನದಲ್ಲೂ ದಂಡುಗಟ್ಟಿ ನಡೆದರು. ಎಲ್ಲರಿಗೂ ಎಲ್ಲಿಲ್ಲದ ವೀರಾವೇಶ ಧೈರ್ಯಗಳು ಬಂದಿದ್ದುವು. ಎರಡೂ ದಂಡುಗಳು ಉಳಿಯತ್ತಡ್ಕಕ್ಕೆ ಬಂದುವು. ಬಾಚನ ಪಂಗಡವನ್ನು ಉಳಿಯತ್ತಡ್ಕದ ಮಧೂರ ತಪ್ಪಲಿನಲ್ಲಿ ಹಳೆಯ ಕೋಟೆಯ ಕಣಿಯಲ್ಲಿ ಮರೆಯಾಗಿ ಕುಳಿತಿರುವಂತೆ ಸುಬ್ಬಯ್ಯನು ಅಪ್ಪಣೆಯಿತ್ತನು. ಕೋಟೆಯ ಹಳೆಯ ಬುರುಜುಗಳು, ಕುರುಚಲು ಕಾಡುಪೊದೆಗಳು ಅವರಿಗೆ ಅಡಗಿರಲು ಸಹಾಯಕವಾದುವು.
ಸುಬ್ಬಯ್ಯನ ಮೇಲ್ತನಿಕೆಯ ದಂಡಾಳುಗಳು ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪ ಹಳೆಯ ಕೋಟೆಯ ಗೋಡೆಗೆ ಅಡ್ಡವಾಗಿ ಅಡಗಿದರು. ಪೊದೆಗಳೆಡೆಯಲ್ಲಿ ಹೊಂಚು ಹಾಕಿ ಕಾದರು. ಸುತ್ತಲೂ ಕಾಡುಬಲ್ಲೆಗಳು ತುಂಬಿ ಇವರ ಸುಳಿವು ಗುಲ್ಲಿನ ಪುಂಡರಿಗೆ ಸಿಗದಂತಿತ್ತು. ಮಧ್ಯಾಹ್ನವಾಯಿತು. ಪುಂಡರ ಸುದ್ದಿ ಇಲ್ಲ. ಸುಬ್ಬಯ್ಯನ ದಂಡು ಬೇಸರವಿಲ್ಲದೆ ಎಚ್ಚರದಿಂದ ಕಣ್ಣಿಗೆ ಎಣ್ಣೆ ಹಾಕಿ ಕಾದಿತ್ತು. ಒಂದು ಹುಳವೂ ಅತ್ತ ಆ ದಿನ ಸುಳಿಯಲಿಲ್ಲ. ಕತ್ತಲಾಯಿತು. ಮರುದಿನ ಬೆಳಗೂ ಆಯಿತು. ಹೊತ್ತು ಮೀರಿ ಮೇಲೇರುತ್ತಿತ್ತು. ದೂರದ ಗುಡ್ಡದ ತುದಿಯಿಂದ ತುತ್ತೂರಿಯ ಶಬ್ದ, ಕದಿನದ ಶಬ್ದ ಕೇಳಿಬಂದಿತು. “ಗುಲ್ಲು ಬಂತೋ ಗುಲ್ಲು” ಎಂದು ಬಾನೆತ್ತರಕ್ಕೆ ಕೇಕೆ ಹಾಕಿ ಬೊಬ್ಬಿಡುತ್ತಾ ಸಿಳ್ಳು ಹಾಕುತ್ತಾ ಬರುತ್ತಿದ್ದರು ವೈರಿಯಾಳುಗಳು.
ಉಳಿಯತ್ತಡ್ಕದಲ್ಲಿ ಉರುಳಿಟ್ಟರು
ಈಗ ಬಾಚ ಸುಮ್ಮನಿರಲಿಲ್ಲ. ಎಚ್ಚರ ವಹಿಸಿ ಸುಬ್ಬಯ್ಯನಿಗೆ ಗುಲ್ಲು ಬರುವ ವಾರ್ತೆ ತಿಳಿಸಿದನು. ಇತ್ತ ಸುಬ್ಬಯ್ಯನಾದರೋ ತಾನು ತಂಗಿದ್ದ ಸ್ಥಳದಲ್ಲಿ ಸುತ್ತಲೂ ಕಬ್ಬಿಣದ ಮುಳ್ಳು ಬೇಲಿಯನ್ನು ಮಾಡಿಸಿ ಕಾಯುತ್ತಿದ್ದನು. ರೆಪ್ಪೆ ಮುಚ್ಚದೆ ಕ್ಷಣವನ್ನು ಯುಗವಾಗಿ ಎಣಿಸುತ್ತಾ ಹೊತ್ತು ಕಳೆಯುತ್ತಿದ್ದನು. ದಂಡಾಳುಗಳೆಲ್ಲರೂ ಒಂಟಿಕಾಲಿನ ಮೇಲೆ ನಿಂತಿದ್ದರು. ಪುಂಡರು ಉಳಿಯತ್ತಡ್ಕ ಗುಡ್ಡವನ್ನೇರುತ್ತಿದ್ದರು. ಅವರ ಬೊಬ್ಬೆಯ ಅಬ್ಬರ ಕಿವಿಗಡಚಿಕ್ಕುತ್ತಿತ್ತು. ಬಾಚನೂ ಮಾತಾಡಲಿಲ್ಲ. ಅಲ್ಲಿಂದ ಹಿಂದೆ ಸರಿದು ನಿಂತನು. ತನ್ನ ದಂಡಾಳುಗಳಿಗೆ ಸದ್ದಿಲ್ಲದೆ ಬಳಸಿ ಬರುವಂತೆ ಸೂಚಿಸಿ ಪುಂಡರನ್ನು ಹಿಂಬಾಲಿಸಲು ಅಪ್ಪಣೆಯಿತ್ತನು.
ಬಾಚನು ತನ್ನ ಹುರಿ ಮೀಸೆಗೆ ಕೈಯಿಕ್ಕಿ ಜುಟ್ಟಿನ ಕಟ್ಟನ್ನು ಸರಿಪಡಿಸುತ್ತಾ ವೀರಾವೇಶದಿಂದ – “ಬುದ್ಧಿಯವರು ಅಷ್ಟಕ್ಕೆ ಹೆದರಬೇಕೇ? ನನ್ನ ಈ ತಾಳೆ ಮರದ ದೊಣ್ಣೆಯೊಂದಿದ್ದರೆ ಸಾಕು. ದೊಣ್ಣೆಯ ಒಂದೆ ಬೀಸಾಟಕ್ಕೆ ಈ ಪುಂಡರ ರುಂಡಗಳನ್ನು ಕ್ಷಣಮಾತ್ರದಲ್ಲಿ ಚೆಂಡಾಡಿ ಧೂಳೀಪಟ ಮಾಡಿಬಿಡುವೆನು.
ಐನೂರು ಮಂದಿ ಪುಂಡರು ಬೀರಣ್ಣ ಬಂಟನ ನೇತೃತ್ವದಲ್ಲಿ ಸಿಳ್ಳು ಹಾಕುತ್ತಾ, ಕೇಕೆಯಿಕ್ಕುತ್ತಾ ಬಾಯಿಗೆ ಬಂದಂತೆ ಒದರುತ್ತಾ ಬರುತ್ತಿದ್ದರು. ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪಕ್ಕೆ ಗುಲ್ಲು ಮುಟ್ಟುವುದೆ ತಡ ಇಕ್ಕಡೆಗಳಿಂದಲೂ “ಢಂ ಢಂ” ಎಂಬ ಶಬ್ದವಾಯಿತು. ಭಯಂಕರ ಹೊಗೆಯೆದ್ದಿತು. ಬೆಂಕಿ ಉರಿಯಿತು. ಒಂದೇ ಸವನೆ ಎಡೆಬಿಡದೆ ಫಿರಂಗಿಗಳು ಘರ್ಜಿಸಿದುವು. ಗುಲ್ಲಿನ ಪುಂಡರು ಬೆದರಿ ದಿಕ್ಕುಪಾಲಾದರು. ಕಂಪೆನಿಯ ಸೈನ್ಯ ಬಂದಿದೆಯೆಂದು ಭ್ರಮಿಸಿ ಸಿಕ್ಕಿದತ್ತ ಓಡಿದರು.
ಹಿಂಬಾಲಿಸಿದ ಬಾಚನು ತನ್ನ ಬಡಿಗೆಯನ್ನು “ರೊಂಯ್ಯ ರೊಂಯ್ಯ”ನೆಂದು ಗಾಳಿಯಲ್ಲಿ ಬೀಸುತ್ತಾ ಒಂದು ಪೆಟ್ಟಿಗೆ ನಾಲ್ಕೆಂಟಾಳುಗಳನ್ನು ಕೆಡಹುತ್ತಾ ಅವರನ್ನು ಮುತ್ತಿದನು. ಎದುರುಗಡೆಯಿಂದ ಸುಬ್ಬಯ್ಯನು, ಹಿಂದಿನಿಂದ ಬಾಚನು ಮುತ್ತಿಗೆ ಹಾಕಿ ಹಲವರನ್ನು ಕೊಂದು ಕೆಡಹಿದರು. ಹಲವರು ಸೆರೆ ಸಿಕ್ಕಿದರು. ಉಳಿದವರು ಹೆದರಿ ಸಿಕ್ಕಿಸಿಕ್ಕಿದತ್ತ ಓಡಿದರು. ಮೊದಲೆ ದಟ್ಟವಾದ ಕಬ್ಬಿಣದ ಮುಳ್ಳು ಬೇಲಿಯನ್ನು ಮಾಡಿಸಿದ್ದುದರಿಂದ ದಾರಿ ಸಿಗದೆ ಓಡುತ್ತಿದ್ದವರನ್ನು ಹಿಂದಿನ ಬಾಚನ ದಂಡಾಳುಗಳು ಸೆರೆ ಹಿಡಿದರು. ಒಂದೆ ಸವನೆ ಫಿರಂಗಿಗಳು ಗರ್ಜನೆಗೈಯ್ಯುತ್ತಾ ಸಿಡಿಯುತ್ತಿದ್ದುವು. ಸಿಡಿದ ಗುಂಡುಗಳಿಂದ ಹಲವರ ಮೈ ಸುಟ್ಟುವು. ಸುಬ್ಬಯ್ಯನ ಮತ್ತು ಬಾಚನ ಕತ್ತಿ, ಕೋವಿ, ದೊಣ್ಣೆಯ ಆಳುಗಳು ಎಲ್ಲ ಕಡೆಯಿಂದಲೂ ಬಳಸಿ ಮುತ್ತಿ ಹೊಡೆದು ಬಡಿದರು. ಕಡಿದು ಕುತ್ತಿದರು.
ಬೀರಣ್ಣ ಸುಬ್ಬಯ್ಯರಿಗೆ ಖಾಡಾ-ಖಾಡಿಯಾಗಿ ಮುಖಾಮುಖಿ ಯುದ್ಧ ಸಾಗಿತು. ಬೀರಣ್ಣನು ತನ್ನ ಕೋವಿಯನ್ನೆತ್ತಿದನು. ಸುಬ್ಬಯ್ಯನು ತನ್ನ ಬಡಿಗೆಯನ್ನು ಬೀಸಿದನು. ದೊಣ್ಣೆಯ ಪೆಟ್ಟು ಕೋವಿಗೆ ತಾಗಲು ಗುಂಡೊಂದು ಸಿಡಿಯಿತು. ಅದೃಷ್ಟವಶದಿಂದ ಸಿಡಿದ ಗುಂಡು ತಲೆಗೆ ತಾಗದೆ ಮುಂಡಾಸಿಗೆ ತಾಗಿ ತೂತು ಕೊರೆದು ಹೊರಟುಹೋಯಿತು. ದೊಣ್ಣೆಯ ಪೆಟ್ಟಿಗೆ ಬೀರಣ್ಣನ ಕೋವಿ ನಿಸ್ತೇಜವಾಗಿ ನೆಲಕ್ಕೆ ಬಿದ್ದಿತು. ಕೋವಿ ನೆಲಕ್ಕೆ ಬೀಳುವುದಕ್ಕೂ ಬಾಚನು ಹಿಂದಿನಿಂದ ಬಂದು ಆತನನ್ನು ಹಿಡಿಯುವುದಕ್ಕೂ ಸರಿಹೋಯಿತು. ಬಾಚನ ಬಂಧನದಿಂದ ಬೀರಣ್ಣನು ಮಿಸುಕಾಡದಂತಾಗಿ ಕಣ್ಣು ಕಣ್ಣು ಬಿಟ್ಟನು. ಕೈಗೆ ಕೋಳ ತೊಡಿಸಿ ಆತನನ್ನು ಬಂಧಿಸಿದರು. ಜಪ್ತಿ ಮಾಡಿದಾಗ ಸೊಂಟದಲ್ಲೊಂದು ತಾಯಿತ ಸಿಕ್ಕಿತು. ಅದರ ಬಲದಿಂದಲೆ ಈ ಪುಂಡಾಟಕ್ಕಿಳಿದಿದ್ದನು. ಸುಬ್ಬಯ್ಯನು ಅದನ್ನು ಸ್ವಾಧೀನಪಡಿಸಿಕೊಂಡನು. ಬೀರಣ್ಣನು ಹಲ್ಲು ಕಳೆದ ವಿಷದ ಹಾವಿನಂತೆ ನಿರ್ವೀರ್ಯನಾದನು. ಅವನೊಡನೆ ಬಂದಿದ್ದ ಪುಂಡರೆಲ್ಲ ಸುಬ್ಬಯ್ಯನಿಗೆ ಶರಣಾದರು.
ಗುಲ್ಲಿನ ಪುಂಡರನ್ನು ಸುಬ್ಬಯ್ಯನು ಉಪಾಯದಿಂದ ಬಲೆಯಲ್ಲಿ ಕೆಡೆ ಬೀಳಿಸಿ ಸೆರೆಹಿಡಿದನು. ಕಂಪೆನಿಯವರ ದಂಡೆಂದು ಮೊದಲೆ ಭ್ರಮಿಸಿ ಹೆದರಿ ಕಂಗೆಟ್ಟಿದ್ದ ಪುಂಡರು ಸುಬ್ಬಯ್ಯ ಬಾಚರ ಹೊಡೆತಗಳನ್ನು ತಡೆಯಲಾರದೆ ಶರಣಾಗಲೇಬೇಕಾಯಿತು. ಮರುದಿನ ಬೀರಣ್ಣನನ್ನು ಸೆರೆಯಿಂದ ಬಿಡಿಸಿ ಕೈಕೋಳದಲ್ಲಿ ಓಲಗ ಚಾವಡಿಗೆ ತಂದು ಯುದ್ಧ ತಂತ್ರಗಳನ್ನೆಲ್ಲಾ ಅವನಿಗೆ ತೋರಿಸಿದನು. ಮುಳಿ ಹುಲ್ಲುರಿದ ಬೂದಿ, ಕದಿನಗಳ ಹೊದಿಕೆಗಳು ರಾಶಿ ರಾಶಿಯಾಗಿ ಬಿದ್ದಿದ್ದುವು. ಕದಿನಕ್ಕೆ ಸಿಡಿಮದ್ದಿನೊಂದಿಗೆ ರೂಪಾಯಿ ನಾಣ್ಯ ಗಾತ್ರದ ಜೋಡು ಮುಕ್ಕಾಲು ಪಾವಲಿಗಳನ್ನು ಜಡಿದು ಬೆಂಕಿ ಕೊಡಿಸಿ ಫಿರಂಗಿ ಎಂದು ಭ್ರಮೆ ಹುಟ್ಟಿಸಿದ ಬುದ್ಧಿವಂತಿಕೆಯನ್ನು ವಿವರಿಸಿದನು. ಬೀರಣ್ಣ ಬಂಟನು ನಾಚಿಕೆಯಿಂದ ತಗ್ಗಿದ ತಲೆಯನ್ನು ಎತ್ತಲಿಲ್ಲ. ತಾಯಿತವನ್ನು ಕಳೆದುಕೊಂಡು ವಿಷ ಕಳಿದ ಹಾವಿನಂತಾಗಿದ್ದ ಬಂಟನು ಮರುಮಾತಾಡದಿದ್ದನು. ತಲೆ ತಗ್ಗಿಸಿ ನಿಂತಿದ್ದ ಅವನ ತಲೆಯನ್ನು ಬೋಳಿಸಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿ ಬಿಟ್ಟುಬಿಟ್ಟನು. ಇನ್ನೆಂದೂ ಇಂತಹ ದುಷ್ಕಾರ್ಯದಲ್ಲಿ ತೊಡಗದಂತೆ ಎಚ್ಚರಿಸಿ ಓಡಿಸಿಬಿಟ್ಟನು.
ಕುಂಬಳೆ ಸೀಮೆಯನ್ನು ಪೀಡಿಸುತ್ತಿದ್ದ ಗುಲ್ಲಿನ ಪುಂಡರ ಕೊಲೆ ಸುಲಿಗೆಗಳನ್ನು ಪಿಡುಗನ್ನು ಅವಸಾನಗೊಳಿಸಿ ತಾನು ಮಾಡಿದ ಎಲ್ಲಾ ಕಾರ್ಯಗಳ ವಿವರಗಳನ್ನು ಮಂಗಳೂರಲ್ಲಿದ್ದ ಬಿಳಿಯ ಕಲೆಕ್ಟರ್ ದೊರೆಗೆ ವರದಿ ಮಾಡಿ ಅದಕ್ಕೆ ಸಾಕ್ಷಿಯಾಗಿ ಗುಂಡಿನಿಂದ ತೂತಾದ ತನ್ನ ಮುಂಡಾಸನ್ನು ಹಾಜರುಪಡಿಸಿದನು. ಕಲೆಕ್ಟರರು ಅತ್ಯಾನಂದಗೊಂಡು ಸುಬ್ಬಯ್ಯನ ಶೌರ್ಯಕ್ಕಾಗಿ, ಆತನು ಮಾಡಿದ ಮಹಾಕಾರ್ಯಕ್ಕಾಗಿ ಒಂದು ಸೇರು ತೂಕದ ಎರಡು ಚಿನ್ನದ ಬಳೆಗಳನ್ನೂ, ವಿಕ್ಟೋರಿಯಾ ಮಹಾರಾಣಿಯ ಮುದ್ರೆಯಿರುವ ಒಂದು ಚಿನ್ನದ ಖಡ್ಗವನ್ನೂ ಕೊಟ್ಟು ಬಿರುದು ಬಾವಲಿಗಳನ್ನಿತ್ತು ಸನ್ಮಾನಿಸಿದರು. ಬ್ರಿಟಿಷ್ ಸರಕಾರದ ಮುದ್ರೆಯುಳ್ಳ ಒಂದು ಸನದನ್ನೂ ಕೊಟ್ಟು ಗೌರವಿಸಿದರು.
(ಕೃತಜ್ಞತೆಗಳು: ಈ ಭಾಗವನ್ನು ರಾಧಾಕೃಷ್ಣ ಉಳಿಯತ್ತಡ್ಕರು ಸಂಪಾದಿಸಿದ ‘ಸಿರಿಬಾಗಿಲು’ ಗ್ರಂಥದಿಂದ ಆರಿಸಲಾಗಿದೆ. ಈ ಬರಹವನ್ನು ಬಳಸಿಕೊಳ್ಳಲು ಅನುಮತಿಯಿತ್ತ ಸಿರಿಬಾಗಿಲು ವೆಂಕಪ್ಪಯ್ಯನವರ ಪುತ್ರ ರಾಮಕೃಷ್ಣ ಮಯ್ಯ ಅವರಿಗೆ ಮತ್ತು ಸಂಪಾದಕರಿಗೆ ಕೃತಜ್ಞತೆಗಳು).
ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ
ಸಿರಿಬಾಗಿಲು ವೆಂಕಪ್ಪಯ್ಯ
ಕಾಸರಗೋಡಿನ ಸಿರಿಬಾಗಿಲು ಎಂಬ ಊರಿನ ಪೋಸ್ಟ್ ಮಾಸ್ಟರ್ ಆಗಿದ್ದ ಸಿರಿಬಾಗಿಲು ವೆಂಕಪ್ಪಯ್ಯ ಕನ್ನಡನಾಡಿನ ಒಬ್ಬ ಅಪೂರ್ವ ಸಾಹಿತಿ. ಅವರು ಸ್ಥಳೀಯ ಇತಿಹಾಸ ಸಂಶೋಧನೆಯಲ್ಲಿ ಆಸಕ್ತಿ ಇದ್ದ ಚಿಂತಕ ಮತ್ತು ಬರಹಗಾರ. ಖ್ಯಾತ ಯಕ್ಷಗಾನ ಕವಿ ಪಾರ್ತಿ ಸುಬ್ಬ ಉಡುಪಿ ಜಿಲ್ಲೆಯ ಬ್ರಹ್ಮಾವರದವನೆಂದು ಶಿವರಾಮ ಕಾರಂತರು ವಾದಿಸಿದಾಗ, ಅವನು ಕಾಸರಗೋಡಿನ ಕಣಿಪುರದವನೆಂದು ಆಧಾರಸಹಿತ ಸಿದ್ಧಮಾಡಿದವರು ಸಿರಿಬಾಗಿಲು ವೆಂಕಪ್ಪಯ್ಯ. ಅವರು 1969 ರಲ್ಲಿ ಪ್ರಕಟಿಸಿದ ‘ಜಗಜಟ್ಟಿ ಬಾಚ’ ಒಂದು ಅಪೂರ್ವ ಸ್ಥಳೀಯ ಇತಿಹಾಸ ಕೃತಿ. ಪ್ರಸ್ತುತ ಎರಡು ಅಧ್ಯಾಯಗಳು ಆ ಕೃತಿಯಿಂದ ಆರಿಸಲ್ಪಟ್ಟಿವೆ. ವೆಂಕಪ್ಪಯ್ಯ ಖ್ಯಾತ ಶಿಶು ಸಾಹಿತಿಯೂ ಆಗಿದ್ದರು. ಅವರ ಬರಹಗಳಲ್ಲಿ ಕಾಲಂಶ ಮಾತ್ರ ಈಗ ಲಭ್ಯವಿದೆ. ಅವರ ಲಭ್ಯ ಕೃತಿಗಳನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಂಸ್ಮರಣ ಸಮಿತಿ ಪ್ರಕಟಿಸಿದೆ. (ಸಂಪಾದಕರು ರಾಧಾಕೃಷ್ಣ ಉಳಿಯತ್ತಡ್ಕ).
ಕಲ್ಯಾಣಪ್ಪನ ಕ್ರಾಂತಿ : 1837 ರಲ್ಲಿ ಬ್ರಿಟಿಷರ ವಿರುದ್ಧ ಒಂದು ಸಶಸ್ತ್ರ ಕ್ರಾಂತಿ ನಡೆಯಿತು. ಅದನ್ನು ಈಗ ದಕ್ಷಿಣ ಕನ್ನಡದ ಸ್ವಾತಂತ್ರ್ಯ ಹೋರಾಟ ಎಂದು ಕರೆಯಲಾಗುತ್ತಿದೆ. ಅಮರಸುಳ್ಯದ ಕ್ರಾಂತಿ, ಮಂಗಳೂರ ಕ್ರಾಂತಿ, ಕೊಡಗು ಕೆನರಾ ಬಂಡಾಯ ಎಂಬ ನಾಮಾಂತರಗಳೂ ಸಿಗುತ್ತವೆ. ಆದರೆ ಹಿಂದೆ ಇದನ್ನು ಸರ್ವೇಸಾಮಾನ್ಯವಾಗಿ ‘ಕಲ್ಯಾಣಪ್ಪನ ಕಾಟಕಾಯಿ’ ಅಥವಾ ‘ಗುಲ್ಲು’ ಎಂಬ ಹೆಸರುಗಳಿಂದ ಕರೆಯುತ್ತಿದ್ದುದು ಕಂಡುಬರುತ್ತದೆ. ಕಲ್ಯಾಣಸ್ವಾಮಿಯ ಪಡೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಹಿಂದಿನವರ ಬರಹಗಳಲ್ಲಿ ಕಾಣಸಿಗುವುದಿಲ್ಲ. ಈಗಿನ ಲೇಖಕರು ಇದನ್ನು ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸುತ್ತಾರೆ. ಆದರೆ ಆ ಕಾಲದ ಜನರು ಇದನ್ನು ‘ಕಾಟಕಾಯಿ’ ಮತ್ತು ‘ಗುಲ್ಲು’ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಕಲ್ಯಾಣಪ್ಪನ ಸೈನ್ಯದ ಮುಖಂಡರ ಉದ್ದೇಶ ಏನೇ ಆಗಿರಲಿ, ಆ ಕಾಲದಲ್ಲಿ ಪುಂಡರ ತಂಡಗಳು ವ್ಯಾಪಕವಾಗಿ ಕೊಲೆ ಸುಲಿಗೆಗಳಲ್ಲಿ ತೊಡಗಿ ಅರಾಜಕತೆಯನ್ನು ಸೃಷ್ಟಿಸಿದ್ದನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಹಲವು ಐತಿಹ್ಯಗಳು ಈ ಪುಂಡಾಟಿಕೆಗಳ ಬಗ್ಗೆ ಸಾಕ್ಷಿ ನುಡಿಯುತ್ತವೆ. ಇನ್ನು ಮುಂದೆ ಬರುವ ಕಥಾನಕಗಳಲ್ಲಿ ಈ ವಿದ್ಯಮಾನವನ್ನು ವಿವಿಧ ಕಾಲಘಟ್ಟಗಳಲ್ಲಿ ಲೇಖಕರು ಹೇಗೆ ದಾಖಲಿಸಿರುವರೆನ್ನುವುದನ್ನು ಕಾಣಬಹುದು.
ಕಲ್ಯಾಣಪ್ಪನ ಕ್ರಾಂತಿ: ಕೊಡಗಿಗೆ ಸೇರಿದ್ದ ಅಮರ ಸುಳ್ಯ ಪ್ರದೇಶವನ್ನು ಬ್ರಿಟಿಷರು ಕೆನರಾ ಜಿಲ್ಲೆಗೆ ಸೇರಿಸಿದುದು; ಅಲ್ಲದೆ ಧಾನ್ಯದ ರೂಪದಲ್ಲಿ ಕೊಡುತ್ತಿದ್ದ ತೆರಿಗೆಯನ್ನು ಹಣದ ರೂಪದಲ್ಲಿಯೇ ಕೊಡಬೇಕೆಂದು ಆದೇಶಿಸಿದುದು ಕಲ್ಯಾಣಪ್ಪನ ಕ್ರಾಂತಿ (ಆಗಿನವರ ಪ್ರಕಾರ ‘ಕಾಟಕಾಯಿ)ಗೆ ಕಾರಣ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಪ್ರಚಾರ, ಚಿತಾವಣೆ, ಒತ್ತಾಯಗಳ ಪಾತ್ರವೂ ಇದರ ಹಿಂದೆ ಇತ್ತೆನ್ನುವ ಸೂಚನೆ ಸಿಗುತ್ತದೆ.
ಬ್ರಿಟಿಷರು ಕೊಡಗಿನ ರಾಜನನ್ನು ಪದಚ್ಯುತಗೊಳಿಸಿ, ಕೊಡಗನ್ನು ತಮ್ಮ ನೇರ ಆಳ್ವಿಕೆಯಡಿ ತಂದಾಗ ಕೊಡಗಿನಲ್ಲಿ ರಾಜನ ಉತ್ತರಾಧಿಕಾರಿಗಳೆಂದು ಮೊದಲು ಸ್ವಾಮಿ ಅಪರಂಪಾರ ಮತ್ತು ನಂತರ ಕಲ್ಯಾಣಸ್ವಾಮಿ ಎಂಬಿಬ್ಬರು ಹೋರಾಟಗಾರ ನಾಯಕರು ಮೂಡಿಬಂದರು. ಕೊಡಗಿನ ದಿವಾನನಾಗಿದ್ದ ಸ್ಥಾನಿಕ ಬ್ರಾಹ್ಮಣ ಲಕ್ಷ್ಮೀನಾರಾಯಣಯ್ಯನನ್ನು ಅಲ್ಲಿನ ಬ್ರಿಟಿಷ್ ಆಡಳಿತಗಾರನಾದ ಕ್ಯಾಪ್ಟನ್ ಲೀ ಹಾರ್ಡಿಯು ವಜಾಗೊಳಿಸಿ ಬಂಧನದಲ್ಲಿಟ್ಟ. ಅವನ ತಮ್ಮ ಅಟ್ಲೂರಿನ ಜಮೀನುದಾರ ರಾಮಪ್ಪಯ್ಯ, ಸುಳ್ಯದ ಶಾನುಭಾಗ ಶಂಕರನಾರಾಯಣಯ್ಯ, ಹಲವು ಊರುಗಳಲ್ಲಿದ್ದ ಅವರ ಬಂಧುಗಳು ಬ್ರಿಟಿಷರ ವಿರುದ್ಧ ಸೈನ್ಯ ಕೂಡಿಸುವಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದರು. ಸುಳ್ಯದ ಶೂರರಾದ ಗೌಡ ಜಮೀನುದಾರರ – ಮುಖ್ಯವಾಗಿ ಕೆದಂಬಾಡಿ ರಾಮಯ್ಯ ಗೌಡನ – ನೇತೃತ್ವದಲ್ಲಿ ಕಲ್ಯಾಣಪ್ಪನ ಸೈನ್ಯ ಜಮಾವಣೆಯಾಯಿತು. ಈ ನಡುವೆ ನಿಜವಾದ ಕಲ್ಯಾಣಸ್ವಾಮಿಯನ್ನು ಬ್ರಿಟಿಷರು ಬಂಧಿಸಿದಾಗ, ಸುಳ್ಯದ ಹೋರಾಟಗಾರರು ಅವನ ಬಂಧನದ ಸುದ್ದಿಯನ್ನು ಅಡಗಿಸಿಟ್ಟು ಪುಟ್ಟಬಸಪ್ಪ ಎಂಬವನಿಗೆ ಕಲ್ಯಾಣಸ್ವಾಮಿಯ ವೇಷ ತೊಡಿಸಿ ಕಲ್ಯಾಣಪ್ಪ ಎಂದು ಬಿಂಬಿಸಿದರು. ಯಾವುದೋ ಭಿನ್ನಾಭಿಪ್ರಾಯ ಬಂದು (ಅವನು ತಮ್ಮ ಪಿತೂರಿಯನ್ನು ಬ್ರಿಟಿಷರಿಗೆ ವರದಿ ಮಾಡಬಹುದು ಎಂದು) ಅಟ್ಲೂರಿನ ರಾಮಪ್ಪಯ್ಯನನ್ನು ಕೊಲ್ಲುವುದರ ಮೂಲಕ ಕಲ್ಯಾಣಸ್ವಾಮಿಯ ಸೈನ್ಯದ ಪ್ರಸ್ಥಾನ ಪ್ರಾರಂಭವಾಯಿತು. ನಂದಾವರದ ಅರಸು ಲಕ್ಷ್ಮಪ್ಪ ಬಂಗರಸನೂ ಅವರ ಜತೆಗೆ ಸೇರಿಕೊಂಡು ಮಂಗಳೂರಿನತ್ತ ನುಗ್ಗಿದ.
“ಕೊಡಗಿನ ಅರಸ ಕಲ್ಯಾಣಸ್ವಾಮಿ ಅಪಾರ ಸೈನ್ಯದೊಂದಿಗೆ ಬಂದು ಬ್ರಿಟಿಷರನ್ನು ಸೋಲಿಸಿ ಸರಕಾರ ಸ್ಥಾಪನೆ ಮಾಡಲಿದ್ದಾನೆ; ಮುಂದೆ ತೆರಿಗೆಯ ಹೊರೆ ತಗ್ಗುತ್ತದೆ” ಎಂಬ ಪ್ರಚಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೋರಾಟಗಾರರನ್ನು ಕೂಡಿಸುವ ಅಭಿಯಾನ ನಡೆದಿತ್ತು. “ರಾಜಭಕ್ತಿಯುಳ್ಳ ನನ್ನ ಪ್ರಜೆಗಳೆಲ್ಲರೂ ಆಯುಧ ಸಹಿತರಾಗಿ ಬಂದು ನನ್ನನ್ನು ಸೇರಬೇಕು” ಎಂದು ಇಸ್ತಿಹಾರುಗಳನ್ನು ಎಲ್ಲ ಊರುಗಳಿಗೂ ತಲುಪಿಸಲಾಗಿತ್ತು. ಮೂರು ವರ್ಷ ಭೂಕಂದಾಯ ಇರುವುದಿಲ್ಲ ಮುಂತಾದ ಕೊಡುಗೆಗಳ ಪ್ರಸ್ತಾವನೆಯೂ ಅದರಲ್ಲಿತ್ತು. ಹೋರಾಟಗಾರರ ಯೋಜನೆಯಂತೆ ಸುಳ್ಯ ಸೀಮೆಯಲ್ಲಿ ಸಂಘಟಿತವಾದ ಸೈನ್ಯ ಮೂರು ಕವಲುಗಳಾಗಿ ಬ್ರಿಟಿಷರನ್ನು ಪದಚ್ಯುತಗೊಳಿಸಲು ಹೊರಟಿತು. ಒಂದು ಕವಲು ಕೊಡಗಿನತ್ತ ಹೊರಟಿತು. ಕೊಡಗಿನತ್ತ ಹೊರಟ ಸೈನ್ಯವನ್ನು ಬ್ರಿಟಿಷರು ದಾರಿಯಲ್ಲೇ ಸೋಲಿಸಿದರು. ಕ್ಯಾಪ್ಟನ್ ಲೀ ಹಾರ್ಡಿಯು ದಿವಾನ್ ಬೋಪಯ್ಯನ ನೇತೃತ್ವದಲ್ಲಿ ಸೈನ್ಯವನ್ನು ಕಳುಹಿಸಿ ಕ್ರಾಂತಿಕಾರಿಗಳನ್ನು ಚದುರಿಸಿದ.
ಇನ್ನೊಂದು ಸೈನ್ಯ ಕುಂಬಳೆ, ಮಂಜೇಶ್ವರಗಳ ದಾರಿಯಾಗಿ ಅಲ್ಲಿನ ಸರಕಾರದ ಖಜಾನೆಗಳನ್ನು ವಶಪಡಿಸಿಕೊಂಡು, ಜನರಿಂದ ಧನಸಹಾಯವನ್ನು ಕ್ರೋಢೀಕರಿಸಿಕೊಂಡು ಮಂಗಳೂರಿಗೆ ತಲುಪಿತು. ಅದೇ ವೇಳೆಗೆ ಕಲ್ಯಾಣಪ್ಪನ ನೇತೃತ್ವದ ಮುಖ್ಯ ಸೈನ್ಯ ಬೆಳ್ಳಾರೆ ಹಾಗೂ ಪುತ್ತೂರುಗಳಲ್ಲಿದ್ದ ಬ್ರಿಟಿಷರ ಖಜಾನೆಗಳನ್ನು ಮತ್ತು ಕಛೇರಿಗಳನ್ನು ವಶಪಡಿಸಿಕೊಳ್ಳುತ್ತಾ ಜನಬೆಂಬಲ (?) ಸೇರಿಸಿಕೊಳ್ಳುತ್ತಾ ಪುತ್ತೂರು, ಬಂಟವಾಳದ ಮಾರ್ಗವಾಗಿ ಪಾಣೆಮಂಗಳೂರಿಗೆ ತಲುಪಿತು. ಅಲ್ಲಿ ಬಂಗ ಅರಸನ ಸೈನ್ಯವೂ ಇವರನ್ನು ಸೇರಿಕೊಂಡಿತು. ಈ ಸೈನ್ಯ ಮಂಗಳೂರಿಗೆ ತಲುಪುವ ಮುನ್ನವೇ ಮಂಗಳೂರಿನಲ್ಲಿದ್ದ ಬ್ರಿಟಿಷರು ಕಣ್ಣಾನೂರಿಗೆ ಪಲಾಯನ ಮಾಡಿದರು. 13 ದಿನಗಳ ನಂತರ ಬ್ರಿಟಿಷರು ತಲಚೇರಿ ಹಾಗೂ ಬೆಂಗಳೂರುಗಳಿಂದ ಹೆಚ್ಚಿನ ಸೈನ್ಯ ತಂದು ಹೋರಾಟಗಾರರನ್ನು ಸೆರೆಹಿಡಿದು ಶಿಕ್ಷೆ ವಿಧಿಸಿದರು.
ಕಲ್ಯಾಣಪ್ಪ (ಅಲಿಯಾಸ್ ಪುಟ್ಟಬಸಪ್ಪ), ಲಕ್ಷ್ಮಪ್ಪ ಬಂಗರಸ ಮತ್ತು ಉಪ್ಪಿನಂಗಡಿ ಮಂಜ ಎನ್ನುವವರಿಗೆ ಗಲ್ಲುಶಿಕ್ಷೆಯಾಯಿತು. ಬೀರಣ್ಣ ಬಂಟ ಎಂಬವನಿಗೆ ‘ಮರಣಾಂತ’ ಶಿಕ್ಷೆ ಆಯಿತೆಂದು ದಾಖಲೆ ಹೇಳುತ್ತದೆ (ಇದು ಗಲ್ಲು ಶಿಕ್ಷೆಯೋ, ಆಜೀವಪರ್ಯಂತ ಸೆರೆಮನೆವಾಸವೋ ಎನ್ನುವುದು ಸ್ಪಷ್ಟವಿಲ್ಲ). ಉಳಿದವರಿಗೆ ವಿವಿಧ ರೀತಿಯ ಶಿಕ್ಷೆಗಳಾದವು. ಹಲವರನ್ನು ಅಂಡಮಾನಿಗೆ ಕಳಿಸಲಾಯಿತು. ಕೊಡಗಿನಲ್ಲಿಯೂ ಹಲವರನ್ನು ಹಿಡಿದು ಶಿಕ್ಷೆ ವಿಧಿಸಲಾಯಿತು. ಈ ಘಟನೆ ಈಗ ದಕ್ಷಿಣ ಕನ್ನಡದ ಸ್ವಾತಂತ್ರ್ಯ ಸಮರ ಎಂದು ಪ್ರಸಿದ್ಧಿ ಪಡೆದಿದೆ. ಆದರೆ ಕಳೆದ ಶತಮಾನಗಳಲ್ಲಿ ಇದನ್ನು ದಕ್ಷಿಣ ಕನ್ನಡದವರು ‘ಕಲ್ಯಾಣಪ್ಪನ ಕಾಟಕಾಯಿ’ ಎಂದೇ ಕರೆಯುತ್ತಿದ್ದರು. ಅದೇ ಹೆಸರಿನಲ್ಲಿ ಯಕ್ಷಗಾನ ಪ್ರಸಂಗವೂ ಇತ್ತು. (ಪ್ರಸಂಗಕರ್ತರು ಆಲೆಟ್ಟಿಯ ರಾಮಣ್ಣ ಶಗ್ರಿತ್ತಾಯ). ಬ್ರಿಟಿಷರಿಂದ ಸೋಲಿಸಲ್ಪಟ್ಟ ಕಲ್ಯಾಣಪ್ಪನ ಸೈನಿಕರನ್ನು ಈ ಜಿಲ್ಲೆಯವರು ‘ಕೊತ್ತಳಿಗೆ ವೀರರು’ (ತೆಂಗಿನ ಮಡಲಿನ ದಂಡಿನಲ್ಲಿ ಮಾಡಿದ ಆಯುಧಗಳನ್ನು ಹಿಡಿದುಕೊಂಡ ಹಾಸ್ಯಾಸ್ಪದ ವೀರರು) ಎಂದು ಲೇವಡಿ ಮಾಡುತ್ತಿದ್ದರು. ಜನಸಾಮಾನ್ಯರಲ್ಲಿ ಕಲ್ಯಾಣಪ್ಪನ ಸೈನಿಕರು ತಮ್ಮ ಉದ್ಧಾರಕ್ಕೆ ಹೋರಾಡಿದವರೆಂಬ ಭಾವನೆ ಆ ಕಾಲದಲ್ಲಿ ಇದ್ದುದಕ್ಕೆ ದಾಖಲೆಯಿಲ್ಲ.
ಕಲ್ಯಾಣಪ್ಪನ ಹೋರಾಟದ ಕಾಲದಲ್ಲಿ ಜಿಲ್ಲೆಯ ಸ್ಥಿತಿ : ಕಲ್ಯಾಣಸ್ವಾಮಿಯ ಸೈನ್ಯಕ್ಕೆ ಧನಸಹಾಯವನ್ನು ಕೂಡಿಸುವ ನೆವನದಿಂದ ಊರೂರನ್ನು ಕೊಳ್ಳೆಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವನ ಹೆಸರು ಹೇಳಿಕೊಂಡು ಚಿರಂಜೀವಿ ಸುಬ್ರಾಯನಂತಹ ಪುಂಡರು ದರೋಡೆಗಾರರಾಗಿ ತಿರುಗಾಡಿಕೊಂಡಿದ್ದರು. ಚಿರಂಜೀವಿ ಸುಬ್ರಾಯನ ಗುಲ್ಲನ್ನು ಬ್ರಿಟಿಷರಿಗೆ ನಿಷ್ಠೆಯಿಂದಿದ್ದ ಕೂಡಲು ಶಾನುಭೋಗರು ಅಡಗಿಸಿದುದು ಹೇಗೆಂಬ ಚಿತ್ರಣ ಚಿತ್ರಣ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ಬೇಕಲ ರಾಮನಾಯಕರ ಐತಿಹ್ಯ ಕತೆಗಳಲ್ಲಿವೆ. ಸಿರಿಬಾಗಿಲು ವೆಂಕಪ್ಪಯ್ಯನವರು ‘ಜಗಜಟ್ಟಿ ಬಾಚ’ ಎಂಬ ಕೃತಿಯಲ್ಲಿ ಬಾಚನ ಸಾಹಸಗಳನ್ನು ಕುರಿತು ಹೇಳುವಾಗ ಈ ಪ್ರಸಂಗವನ್ನೂ ದಾಖಲಿಸಿದ್ದಾರೆ. ಅವರು ಕೂಡ್ಲು ಶಾನುಭೋಗರ ಮನೆಯಲ್ಲಿ ಮತ್ತಿತರ ಕಡೆ ಸಿಕ್ಕಿದ ದಾಖಲೆಗಳನ್ನು ಆಧರಿಸಿ ಬೇಕಲ ರಾಮನಾಯಕರಿಗಿಂತ ಹೆಚ್ಚಿನ ಮಾಹಿತಿಗಳನ್ನು ನೀಡಿದ್ದಾರೆ. ಸಹಜವಾಗಿ ಅವರ ಆವೃತ್ತಿ ಹೆಚ್ಚು ಸರಿಯಾಗಿದೆ.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.
ಚಿರುವೈಲು ಅಂದರೆ ಸಿರಿಬಾಗಿಲಿನ ಹಳೆಯ ಹೆಸರೇ….?