Advertisement
ಸೀತಕ್ಕನ ವಠಾರ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಸೀತಕ್ಕನ ವಠಾರ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಸ್ವಲ್ಪ ಹೊತ್ತು ಮಸೆದ ನಂತರ ತನ್ನ ತೋರು ಬೆರಳನ್ನು ಕತ್ತಿಯ ಅಲಗಿಗೆ ತಾಗಿಸುತ್ತಾ “ಹಾಂ, ಈಗ ಹರಿತ ಆಯ್ತು. ಕತ್ತಿ ಹರಿತ ಇಲ್ಲಂದ್ರೆ ಯಾವುದಕ್ಕೂ ಉಪ್ಯೋಗಿಲ್ಲ ನೋಡು. ಒಂದು ರೀತಿಯಲ್ಲಿ ಈ ಬಿಸಿ ಚಾ ಇದ್ದ ಹಾಗೆ. ಬಿಸಿಬಿಸಿ ಇದ್ದಾಗ ಮಾತ್ರ ಕುಡಿಬಹುದು, ಆದ್ರೆ ತಣ್ಣಗಾದ್ರೆ ಕುಡಿಯೋಕೆ ಆಗಲ್ಲ ಅಲ್ವಾ? ಸ್ಥಿತಿ ಮುಖ್ಯ, ಬರೇ ಚಾ ಅಲ್ಲ…” ಅಂತ ಹೇಳಿ ನಮ್ಮ‌ಮನೆ ಹಿಂದಿನ ತೋಟಕ್ಕೆ ತಾಗಿ ಇದ್ದ ಅವರ ಗದ್ದೆಗೆ ಹೋದ್ರು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ನಾಲ್ಕನೆಯ ಬರಹ

ಅವರು ಮನೆಗೆ ಬರುವುದೆಂದರೆ ಅದು‌ ಸುಮ್ಮನೆ ಅಲ್ಲ. ಅಲ್ಲಿ ಏನಾದರೊಂದು ಘಟಿಸಲೇಬೇಕು. ಊರಿನ ಎಲ್ಲಾ ಮನೆಯ ಒಗ್ಗರಣೆಯ ಪರಿಮಳವನ್ನು ಉಡಿಯಲ್ಲಿಯೇ ಕಟ್ಟಿಕೊಂಡು ಬರುವ ಅವರು ಮನೆಯೊಳಕ್ಕೆ ಕಾಲಿಟ್ಟರೆಂದರೆ ನಮ್ಮ ಮನದೊಳಗೆ ಶಾಂತವಾಗಿ ಹರಿಯುತಿದ್ದ ನದಿಯಲ್ಲಿ ತುಮುಲಗಳ ತೆರೆಗಳು ಹಿಂದುಮುಂದಿಲ್ಲದೇ ಎದ್ದವೆಂದೇ ಅರ್ಥ. ಯಾವುದಕ್ಕೂ ಮೊದಲು ಅವರ ಪರಿಚಯ ಮಾಡಿಕೊಳ್ಳುವ. ಅವರು ನಮ್ಮ ಊರಿನ ಎಪ್ಪತ್ತು ದಾಟಿದ ಒಂಟಿ ಮಹಿಳೆ ಸೀತಕ್ಕ. ನಮ್ಮ ಊರಿನಲ್ಲಿ ಅವರು ಯಾರಿಗೂ ಸಂಬಂಧದಲ್ಲಿ ಅಕ್ಕ ಅಲ್ಲ. ಆದರೂ ಅಬಾಲ ವೃದ್ಧರಾಗಿ ಎಲ್ಲರೂ ಅವರನ್ನು ಕರೆಯುವುದು ಮಾತ್ರ ಸೀತಕ್ಕ ಅಂತಾನೇ. ಹಾಗಂತ ಅವರನ್ನು ಬೆನ್ನು ಬಾಗಿದ, ಕೈಯಲ್ಲಿ ಕೋಲು ಹಿಡಿದುಕೊಂಡಿರುವ, ತಲೆ ಮೇಲೆ ಸೆರಗು ಹಾಕಿದ ಭಂಗಿಯಲ್ಲಿ ನೀವು ಯೋಚಿಸಿದರೆ ನಿಮ್ಮ ಊಹೆ ಖಂಡಿತಾ ತಪ್ಪಾಗುತ್ತದೆ. ಅವರು ನಮ್ಮ ಊರಿನಲ್ಲಿ ಅತ್ಯಂತ ಚಟುವಟಿಕೆಯ, ಲವಲವಿಕೆಯ ವ್ಯಕ್ತಿಗಳಲ್ಲಿ ಒಬ್ಬರು ಅಂತ ಯಾವುದೇ ಗೊಂದಲವಿಲ್ಲದೇ ಸಲೀಸಾಗಿ ಹೇಳಿಬಿಡಬಹುದು.

ಅಂತಹ ವ್ಯಕ್ತಿ ಯಾರ ಮನೆಗೂ ಹೋಗಿಲ್ಲ ಅಂದರೆ ಆ ದಿನ ಅವರಿಗೆ ಮೈ ಹುಷಾರಿಲ್ಲ ಅಂತಾನೇ ಲೆಕ್ಕ. ಮತ್ತು ಆ ದಿನ ಮಾತ್ರ ಸೀತಕ್ಕನ ನಾಯಿ ನಮ್ಮ ಮನೆಯ ಮುಂದೆ ಬಂದು ಕೂರೋದು ಮತ್ತು ಊಟ ಹಾಕುವವರೆಗೂ ಬಾಲ ಅಲ್ಲಾಡಿಸೋದು! ಮನೆಯಿಂದ ಸೀತಕ್ಕನ ಸವಾರಿ ಹೊರಟಿತೆಂದರೆ ಅವರ ಹಿಂದೆ ಅವರ ನಾಯಿಯೂ ಇರಲೇ ಬೇಕು. ಅವರನ್ನು ನೋಡುವಾಗಲೆಲ್ಲಾ ಮಲೆಗಳಲ್ಲಿ ಮದುಮಗಳು ಕಾದಂಬರಿಯ ನಾಯಿಗುತ್ತಿಯ ನೆನಪಾಗದೇ ಇರುವುದಿಲ್ಲ. ಆದರೆ ಈ ನಾಯಿಗೆ ಬೇರೆ ಹೆಸರೆಂಬುದಿಲ್ಲ. ಎಲ್ಲರಿಗೂ ಅದು ಸೀತಕ್ಕನ ನಾಯಿ ಅಷ್ಟೇ.

ಸೀತಕ್ಕ ಸೀದಾ ಸೀದಾ ಮನೆಯೊಳಗೆ ಕಾಲಿಟ್ಟದ್ದನ್ನು ನಾನಿದುವರೆಗೂ‌ ಕಂಡೇ ಇಲ್ಲ. ಅಂಗಳದಲ್ಲಿ ಬರುತ್ತಲೇ ಅವರಿಗೆ ಬೇಕಾದಷ್ಟು ವಿಷಯಗಳು ಸಿಗುತ್ತವೆ ನಮ್ಮನ್ನು ಮನೆಯ ಒಳಗಿನಿಂದ ಹೊರಗೆ ಬರುವಂತೆ ಮಾಡಲು. “ಛೇ, ಈ ಮರದ ಕಟ್ಟಿಗೆಗಳನ್ನು ಹೀಗೆ ಎಸೆದರೆ ಯಾವುದಕ್ಕಾದೀತು? ಕೊಟ್ಟಿಗೆಯಲ್ಲಿ ಜಾಗ ಇಲ್ವಾ? ಹಾಗೂ ನಿಮಗೆ ಇಲ್ಲಿಯೇ ಇಡಬೇಕಂದ್ರೂ, ಓ… ಆ ತೆಂಗಿನ ಮರಕ್ಕೆ ತಾಗುವ ಹಾಗೆ ಸರ್ತ ಇಡೋದಲ್ವಾ?..” ಅಂತಾನೋ, “ಅಯ್ಯೋ ದೇವ್ರೇ… ಆ ತೊಂಡೆ ಬಳ್ಳಿಯನ್ನು ಇನ್ನೂ ನೆಲದಲ್ಲಿಯೇ ಬಿಟ್ಟಿದ್ದೀರಲ್ವಾ, ನಿಮಗೆ ಮಂಡೆ ಸಮ ಉಂಟಾ? ನಾಲ್ಕು ಕಟ್ಟಿಗೆ ನೆಟ್ಟು ಅದ್ರ ಮೇಲಾದ್ರೂ ಬಿಡ್ಲಿಕ್ಕೆ ನಿಮಗೆಂತ ಮಂಡೆಮಾರಿ? ಚಪ್ಪರ ಆದ್ರೂ ನಾಲ್ಕು ದಿನ ತಡ ಆದ್ರೆ ನಡೀತದೆ…” ಅಂತಾನೋ ಅಥವಾ ಕಣ್ಣಿಗೆ ಬಿದ್ದ ಇನ್ಯಾವುದನ್ನೋ ಹೇಳಿ ಒಟ್ಟಾರೆ ನಮ್ಮನ್ನು ಹೊರಗೆ ಕರೆಯದೇ ಬಿಡುವುದಿಲ್ಲ ಈ ಸೀತಕ್ಕ. ನಾವು ಮನೆಯಿಂದ ಹೊರಗೆ ಬಂದು ಅವರ ಮಾತುಗಳಿಗೆಲ್ಲಾ ಹೂಂಗುಟ್ಟಿದರೆ ಬಚಾವ್! ಏನಾದ್ರೂ ಅದು ಹಾಗಲ್ಲ ಹೀಗಲ್ಲ ಅಂತ ಹೇಳಿಬಿಟ್ರೆ ಮುಗಿಯಿತು ಕತೆ. ಆ ದಿನ ನಮ್ಮ ಗ್ರಹಚಾರ ನೆಟ್ಟಗಿಲ್ಲ ಅಂತಾನೇ ಲೆಕ್ಕ. ಮತ್ತೆ ಆ ತೊಂಡೆಕಾಯಿಯ ಕೃಷಿ, ನಮ್ಮ ಅಪ್ಪ ಇದ್ದ ದಿನಗಳಲ್ಲಿ ಇದ್ದ ಕೃಷಿಯ ವೈಭವ ಮತ್ತು ಪರೋಕ್ಷವಾಗಿ ನನ್ನ ಕೈಯಿಂದ ಹಾಳಾಗುತ್ತಿರುವ ಈ ಕೃಷಿ ಎಲ್ಲದರ ಬಗ್ಗೆಯೂ ರಾತ್ರಿ ಊಟದ ಸಮಯದವರೆಗೂ ಹೇಳಿ, ಮತ್ತೊಮ್ಮೆ ಅವರ ಮಾತಿಗೆ ಎದುರು ಮಾತಾಡೋದಿಲ್ಲ ಅಂತ ಪ್ರಮಾಣ ಮಾಡುವಷ್ಟರ ಮಟ್ಟಿಗೆ ನಮ್ಮನ್ನು ಹಿಂಡಿಹಿಪ್ಪೆ ಮಾಡಿಬಿಡುತ್ತಾರೆ. ನಂತರಾದ್ರೂ ಮನೆಗೆ ನೆಟ್ಟಗೆ ಹೋಗ್ತಾರಾ? ಅದೂ ಇಲ್ಲ. ನಮ್ಮ ಮನೆಯಿಂದ ಅವರ ಮನೆಗೆ ಹೋಗುವ ದಾರಿಯಲ್ಲಿ ಸಿಗುವ ಐದಾರು ಮನೆಯವರೊಂದಿಗೆ ನನ್ನ ಬಗ್ಗೆ ದೂರು ಹೇಳಿ, ಅವರೂ ನಾಳೆ ತೊಂಡೆಕಾಯಿ ಬಳ್ಳಿಗೇಕೆ ಚಪ್ಪರ ಹಾಕಿಲ್ಲ ಅಂತ ಕೇಳ್ಲಿಕ್ಕೆ ನಮ್ಮ ಮನೆಗೆ ಬರುವ ಹಾಗೆ ಮಾಡಿ  ಹೋಗುತ್ತಾರೆ.

ಇಂತಹ ಸೀತಕ್ಕ ಗಂಡನ ಬಗ್ಗೆ ವಿಚಾರಿಸಿದರೆ ಮಾತ್ರ ಅಂತರ್ಮುಖಿಯಾಗುತ್ತಾಳೆ. ನಮಗೆ ಅರ್ಥವಾಗದ ತತ್ವಜ್ಞಾನ ಮಾತಾಡುತ್ತಾಳೆ. ಅಲ್ಲೀತನಕ ಓತಪ್ರೋತವಾಗಿ ಹರಿಯುತ್ತಿದ್ದ ಮಾತುಗಳು ಮಳೆ ನಿಂತ ಹಾಗೆ ನಿಂತು ಬಿಡುತ್ತವೆ. ನಾನು ಮತ್ತು ನನ್ನ ಓರಗೆಯವರು ನಮಗೆ ಬುದ್ಧಿ ಬರುವ ತನಕವೂ ಸೀತಕ್ಕನ ಗಂಡ ತೀರಿಕೊಂಡಿದ್ದಾರೆ ಅಂತಾನೇ ತಿಳ್ಕೊಂಡಿದ್ದೆವು. “ನನಗೂ ಸರಿಯಾಗಿ ಗೊತ್ತಿಲ್ಲ, ಆದ್ರೆ ಇವರೇ ಬಿಟ್ಟು ಬಂದದ್ದು ಅಂತ ಹೇಳ್ತಾರೆ. ನಾನು ಮದುವೆಯಾಗಿ ಈ ಮನೆಗೆ ಬಂದಾಗಿನಿಂದ ನೋಡ್ತಾ ಇದ್ದೇನೆ ಆವತ್ತಿನಿಂದ ಅವರು ಅದೇ ಮನೆಯಲ್ಲಿದ್ದಾರೆ…” ಅಂತ ಅಮ್ಮ ಒಮ್ಮೆ ಹೇಳಿದ್ದರು ಯಾವುದೋ ವಿಷಯಕ್ಕೆ ಸೀತಕ್ಕನ ಗಂಡನ ವಿಷಯ ಬಂದಾಗ. ನನಗೂ ಈ ಬಗ್ಗೆ ಕೂತೂಹಲವಿದ್ದರೂ ಅವರ ಬಾಯಿಗೆ ಹೆದರಿ ಕೆದಕ್ಲಿಕ್ಕೆ ಹೋಗುವ ಸಾಹಸ ಮಾಡಿರಲಿಲ್ಲ.

ಆದರೆ ಆ ಸಂದರ್ಭವೂ ಒಮ್ಮೆ ಬಂತು. ಹೀಗೆಯೇ ಅವತ್ತೊಮ್ಮೆ ಅಂಗಳದಲ್ಲಿಯೇ ನಿಂತು ನನ್ನ ಮೇಲಿನ ಮೇಲಿನ ಪ್ರೀತಿಯಿಂದ ಹಿಗ್ಗಾಮುಗ್ಗವಾಗಿ ತನ್ನ ಪ್ರಖರವಾದ ಮಾತಿನ ಬಾಣಗಳಿಂದ ನನ್ನನ್ನು ತಿವಿಯುತಿದ್ದಾಗ ಪ್ರತಿ ಆಕ್ರಮಣ ಮಾಡಲು ಏನೂ ತೋಚದೇ, “ಸೀತಕ್ಕಾ ನೀನ್ಯಾಕೆ ಗಂಡನನ್ನು ಬಿಟ್ಟು ಬಂದದ್ದು? ಕುಡಿತಿದ್ನಾ? ಅಥವಾ ಹೊಡಿತಿದ್ನಾ?…” ಅಂತ ಕೇಳಿಯೇ ಬಿಟ್ಟೆ. ಮೌನವೇ ಆವರಿಸಿ ಬಿಟ್ಟಿತು. ಮಾತೇ ಆಡ್ಲಿಲ್ಲ ಸೀತಕ್ಕ. ಹೋ… ಸಿಟ್ಟು ಬಂದಿರ್ಬೇಕು, ವಾಪಾಸು ಹೋಗ್ತಾರೆ ಈಗ ಅಂದ್ಕೊಂಡೆ. ಆದರೆ ಹಾಗೇನೂ ಮಾಡದೇ ತುಳಸೀ ಕಟ್ಟೆಯ ಹತ್ತಿರ ಇದ್ದ ಮಸೆಕಲ್ಲಿನ ಮೇಲೆ ಒಂದು ಕಾಲಿಟ್ಟು ತನ್ನ ಕತ್ತಿ ಮಸೆಯಲು ಶುರು ಮಾಡಿದ್ಳು, ಅದಕ್ಕಾಗಿಯೇ ಬಂದಿದ್ದೇನೆ ಎಂಬಂತೆ. ಸ್ವಲ್ಪ ಹೊತ್ತು ಮಸೆದ ನಂತರ ತನ್ನ ತೋರು ಬೆರಳನ್ನು ಕತ್ತಿಯ ಅಲಗಿಗೆ ತಾಗಿಸುತ್ತಾ “ಹಾಂ, ಈಗ ಹರಿತ ಆಯ್ತು. ಕತ್ತಿ ಹರಿತ ಇಲ್ಲಂದ್ರೆ ಯಾವುದಕ್ಕೂ ಉಪ್ಯೋಗಿಲ್ಲ ನೋಡು. ಒಂದು ರೀತಿಯಲ್ಲಿ ಈ ಬಿಸಿ ಚಾ ಇದ್ದ ಹಾಗೆ. ಬಿಸಿಬಿಸಿ ಇದ್ದಾಗ ಮಾತ್ರ ಕುಡಿಬಹುದು, ಆದ್ರೆ ತಣ್ಣಗಾದ್ರೆ ಕುಡಿಯೋಕೆ ಆಗಲ್ಲ ಅಲ್ವಾ? ಸ್ಥಿತಿ ಮುಖ್ಯ, ಬರೇ ಚಾ ಅಲ್ಲ…” ಅಂತ ಹೇಳಿ ನಮ್ಮ‌ಮನೆ ಹಿಂದಿನ ತೋಟಕ್ಕೆ ತಾಗಿ ಇದ್ದ ಅವರ ಗದ್ದೆಗೆ ಹೋದ್ರು. ಸೀತಕ್ಕನ ಜೊತೆ ಅವರ ಗಂಡನ ವಿಷಯ ಕೇಳ್ಬಾರ್ದು, ಕೇಳಿದ್ರೆ ಏನೇನೋ ಹೇಳ್ತಾರೆ ಅಂತ ಹೇಳೋದನ್ನ ನಾನೂ ಕೇಳಿದ್ದೆ. ನಿಜ ಆಯ್ತು. ಅವರೇನು ಹೇಳಿದ್ರು ಅಂತ ಅರ್ಥವಾಗದೇ ಬಹುಶಃ ಎಪ್ಪತ್ತು ದಾಟಿತಲ್ವಾ, ಅರಳು ಮರುಳು ಇರ್ಬೇಕು ಅಂದ್ಕೊಂಡೆ. ಇನ್ನು ಆ ವಿಷಯದಲ್ಲಿ ಕೇಳಲೇ ಬಾರದು ಅಂತ ನಿರ್ಧಾರ ಮಾಡಿ ಬೇರೆ ಕೆಲಸದಲ್ಲಿ ಮಗ್ನನಾದೆ.

ಸುಮಾರು ಅರ್ಧ ಗಂಟೆ ಕಳೆದಿರಬಹುದು, ಮತ್ತೆ ಸೀತಕ್ಕನ‌ ಮಾತು ಕೇಳಿ ಅಂಗಳಕ್ಕೆ ಕಾಲಿಟ್ಟೆ. ನನ್ನ ನೋಡುತ್ತಲೇ, “ಏನೋ, ನಿನಗೆ ನನ್ನ ಗಂಡನ ವಿಷಯ ಬೇಕಾ? ಹೌದು ನಾನೇ ಅವರನ್ನ ಬಿಟ್ಟು ಬಂದೆ. ಹಾಗಂತ ಈಗ ನಾನು ಯಾರ ಮನೆಯಲ್ಲಿಯೂ ಬೇಡಿ ಅನ್ನ ತಿನ್ತಾ ಇಲ್ಲ. ನಿನ್ನ ಮನೆಗೂ ಬಂದಿಲ್ಲ. ನಾಳೆ ಸತ್ತರೆ ನನ್ನ ಮನೆಯಲ್ಲಿಯೇ ಸಾಯ್ತೇನೆ… ನಿನ್ನೆ ಮೊನ್ನೆ ಹುಟ್ಟಿದೋರೆಲ್ಲಾ ಕೇಳುವ ಹಾಗಾಯ್ತು…” ಅಂತ ಅಷ್ಟು ಹೇಳ್ಲಿಕ್ಕೇ ವಾಪಾಸು ಬಂದವರಂತೆ ಬಂದು ದುಡುದುಡು ಅಂತ ಹೋಗಿ ಬಿಟ್ರು.” ಯಾಕೋ ಅವರನ್ನ ಕೆಣಕ್ಲಿಕ್ಕೆ ಹೋದದ್ದು” ಅಂತ ಅಮ್ಮ ಹೊರಗೆ ಬಂದು, “ನಿನಗೆ ಗೊತ್ತಿಲ್ಲ, ನೀನಿನ್ನೂ ಚಿಕ್ಕವನು ಆಗ. ಅವರ ಗಂಡ ಸೀತಕ್ಕನ ಮನೆಗೆ ಆವಾಗಾವಾಗ ಬರೋರು. ಆದ್ರೆ ಈ ಹೆಂಗಸಿನದ್ದೇ ಬಾಯಿ ಜೋರು. ಪ್ರತೀ ಸಲನೂ ಗಂಡನಿಗೆ ಬಯ್ದು ಅವಮಾನ ಮಾಡಿ ಮನೆಯೊಳಗೇ ಸೇರಿಸ್ಕೊಳ್ತಿರ್ಲಿಲ್ಲ. ಅದೂ ಎಂತ ಬಯ್ಗಳು ಅಂತಿಯಾ… ರಾಮ ರಾಮ ಅಸಹ್ಯ. ಆ ಗಂಡಸಿಗೆ ಹೇಗಾಗಿರ್ಬೇಕು? ರಾತ್ರಿ ತನ್ನ ಊರಿಗೆ ಹೋಗ್ಲಿಕ್ಕಾಗದೆ ಎಷ್ಟೋ ಸಾರಿ ನಮ್ಮ ಮನೆಯಲ್ಲಿ ಉಳ್ಕೊಳ್ತಿದ್ರು. ಅದೆಷ್ಟು ಸಲ ಅತ್ತು ಹೋಗಿಲ್ಲ ಅವರು. ತುಂಬಾ ಪಾಪದವ್ರು. ನಾನೂ ಇತ್ತೀಚೆಗೆ ಕೇಳಿದ ಸುದ್ದಿ, ಅವರಿಗೂ ಈಗ ಬೇರೆ ಮದುವೆಯಾಗಿ ಮಕ್ಳಿದ್ದಾರೆ ಅಂತ…” ಅಂತ ಹೇಳಿದಾಗ ಇನ್ನು ಈ ವಿಷಯದಲ್ಲಿ ಮಾತುಕತೆ ಬೇಡ ಅಂತ ಅನ್ನಿಸಿತು.

ಅವರಿಗೊಬ್ರು ಹತ್ತಿರದ ಸಂಬಂಧಿ ಇದ್ರು, ಹೆಸರು ಪಾಂಡು ಅಂತ. ಅವರು ಆಗಾಗ ಅವರ ಮನೆಗೆ ಬರೋದನ್ನ ನಾನು ನೋಡಿದ್ದೆ. ಈ ಪಾಂಡುವಿನ ಮೇಲೆ ಸೀತಕ್ಕನಿಗೆ ಒಂದು ರೀತಿಯ ಪುತ್ರವಾತ್ಸಲ್ಯ, ಎಲ್ಲಿಲ್ಲದ ಮಮಕಾರ. ಪ್ರತೀ ಸಲ ಸೀತಕ್ಕ ಮಾತಿಗೆ ನಿಂತಾಗ ಈ ಪಾಂಡುವಿನ ಹೆಸರು ಸುಳಿಯದೇ ಇರುವುದಿಲ್ಲ. ‘ನಮ್ಮ ಪಾಂಡು ಹೀಗೆ ಹೇಳ್ತಿದ್ದ’,  ‘ಒಮ್ಮೆ ಪಾಂಡು ಹತ್ರ ಹೇಳ್ಬೇಕು’ ಹೀಗೆ ಯಾವ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಾಂಡುವಿನ ಮೊರೆ ಹೋಗ್ತಿದ್ಳು ಸೀತಕ್ಕ. ಅಷ್ಟು ವಿಶ್ವಾಸ ಈ ಪಾಂಡುವಿನ ಮೇಲೆ. ಸುಮಾರು ಐದಾರು ವರ್ಷಗಳಿಂದ ಈಚೆಗೆ ಸೀತಕ್ಕನ ಮನೆಯ ಖಾಯಂ ಸದಸ್ಯನಾಗಿದ್ದ ಈ ಪಾಂಡು. ಆದರೆ ಇತ್ತೀಚೆಗೆ ಕೆಲವು ದಿನಗಳಿಂದ ನನ್ನ ಗಮನಕ್ಕೆ ಬಂದ ವಿಷಯವೆಂದರೆ, ಸೀತಕ್ಕನ ಮಾತುಗಳಲ್ಲಿ ಎಲ್ಲಿಯೂ ಈ ಪಾಂಡುವಿನ ಪ್ರಸ್ತಾಪ ಬಾರದೇ ಇರುವುದು! ಬಹಳ ಸಲ‌ ಯೋಚಿಸಿದ್ದೆ ಕೇಳ್ಬೇಕು ಅಂತ. ಆದರೆ ಅವರ ಗಂಡನ ವಿಷಯವಾಗಿ ಆದ ಮುಜುಗರದಿಂದಾಗಿ ಕೇಳಿರಲಿಲ್ಲ.

ಮೊನ್ನೆ ಅದಕ್ಕೂ ಒಂದು ಸಮಯ ಸಿಕ್ಕಿ, “ಸೀತಕ್ಕ, ಈಗ ನೀವು ಪಾಂಡುವಿನ ವಿಷಯ ಹೇಳುವುದೇ ಇಲ್ಲ, ಯಾಕೆ?” ಅಂತ ಕೇಳಿದರೆ ಸೀತಕ್ಕ ಏಕ್ ದಮ್‌ಗರಂ ಆದ್ಳು. ನಂತರ ಸ್ವಲ್ಪ ಸಾವರಿಸಿಕೊಂಡು ತಣ್ಣಗಿನ ಧ್ವನಿಯಲ್ಲಿ, “ಕೋಗಿಲೆಯ ಸ್ವರ ಚಂದ, ಹಾಡುತ್ತೆ ಅಂತ ಹೇಳಿ ಕಾಗೆ ಅದರ ಮೊಟ್ಟೆಯನ್ನು ತನ್ನ ಗೂಡಿನಲ್ಲಿಟ್ಟು ಮರಿ ಮಾಡಲ್ಲ. ತಿಳಿಯದೇ, ಇದು ಕೋಗಿಲೆಯ ಮೊಟ್ಟೆ ಅಂತ ಗೊತ್ತಾಗದೇ ಅದನ್ನೂ ಮರಿ ಮಾಡ್ತದೆ. ಗೊತ್ತಾದ ಮೇಲೆ ಓಡ್ಸುತ್ತೆ. ಆದ್ರೆ ಮನುಷ್ಯರಿಗೆ ಕೊನೆವರೆಗೂ ಗೊತ್ತಾಗಲ್ಲ ನೋಡು ಯಾರು ತನ್ನವರು ಯಾರು ಹೊರಗಿನವರು ಅಂತ… ಈ ಪಾಂಡು ಕೂಡಾ ಅಂತಹ ಒಂದು ಕೋಗಿಲೆ…” ಅಂತ ಹೇಳಿ ಮೌನವಾದ್ಳು. ಮತ್ತೆ ತಿಳಿದುಬಂದ ವಿಷಯವೇನೆಂದರೆ ಪಾಂಡು ಈ ಸೀತಕ್ಕನ ಬಳಿ ಇದ್ದ ಹತ್ತೆಕರೆ ಆಸ್ತಿಯ ಸಲುವಾಗಿ ಸೀತಕ್ಕನ ಹಿತೈಷಿಯಂತೆ ಇದ್ದ ಅವರ ಜೊತೆಯಲ್ಲಿ. ಈ ಮುದುಕಿ ಸತ್ತರೆ ಆಸ್ತಿ ತನ್ನ ಹೆಸರಿಗೆ ಮಾಡಿಸ್ಬಹುದು ಅಂತ. ಆದ್ರೆ ಯಾವಾಗ ಸೀತಕ್ಕ ತನ್ನ ಆಸ್ತಿನೆಲ್ಲಾ ಯಾವುದೋ ಅನಾಥಾಶ್ರಮಕ್ಕೆ ಈಗಾಗ್ಲೆ ವಿಲ್ ಮಾಡಿಸಿದ್ದಾಳೆ ಅಂತ ಗೊತ್ತಾಯ್ತೋ ಆ ನಂತರದಿಂದ ಈ ಪಾಂಡುವಿನ ಸವಾರಿ ಇತ್ತ ಬಂದಿಲ್ಲ. ಅವನ ವಿಷಯದಲ್ಲಿ ಸೀತಕ್ಕ ಸಾಕಷ್ಟು ನೊಂದುಕೊಂಡಿದ್ಳು ಮಾತ್ರವಲ್ಲದೇ ಮೊದಲಿನ ಲವಲವಿಕೆಯೂ ಅವಳಲ್ಲಿ ಕಾಣ್ತಾ ಇರ್ಲಿಲ್ಲ.

ಎರಡು ದಿನದಿಂದ ಸೀತಕ್ಕನ ನಾಯಿ ನಮ್ಮ ಮನೆಯಲ್ಲಿಯೇ ಊಟಕ್ಕೆ ಕಾಯುತ್ತಿತ್ತು. ಹೋ, ಸೀತಕ್ಕನಿಗೆ ಹುಷಾರಿರ್ಲಿಕ್ಕೆ ಇಲ್ಲ, ನೋಡ್ಕೊಂಡು ಬರ್ತೇನೆ ಅಂತ ಅಮ್ಮ ಅವರ ಮನೆಗೆ ಹೋದಾಗಲೇ ಗೊತ್ತಾದದ್ದು ಸೀತಕ್ಕ ಇಹಲೋಕ ತ್ಯಜಿಸಿದ್ದ ವಿಷಯ. ಇದ್ದಾಗ ಅತೀ ಹೆಚ್ಚು ಸದ್ದು ಮಾಡಿದ ಸೀತಕ್ಕನದ್ದು ಯಾರಿಗೂ ಭಾರವಾಗದ, ತನ್ನ ಇಚ್ಛೆಯ ತಣ್ಣನೆಯ ಸಾವು.

About The Author

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ