Advertisement
ಸುಂದರ ಕಾಡಿನ ರೋಚಕ ಕಥೆಗಳು-೧೦: ರೂಪಾ ರವೀಂದ್ರ ಜೋಶಿ ಸರಣಿ

ಸುಂದರ ಕಾಡಿನ ರೋಚಕ ಕಥೆಗಳು-೧೦: ರೂಪಾ ರವೀಂದ್ರ ಜೋಶಿ ಸರಣಿ

ಹಾಗೇ ಕಾಡು ಹಳ್ಳದ ಹಸೀ ಮಣ್ಣನ್ನು ಇಡೀ ಬಿರಟೆಗೆ ದಪ್ಪಗೆ ಮೆತ್ತಿ, ಒಂದೆಡೆ ಬೆಂಕಿ ಹಾಕಿ ಅದರೊಳಗೆ ಈ ಅಂಡೆ ಇಡುತ್ತಿದ್ದರಂತೆ. ಮಣ್ಣು ಮೆತ್ತಿರುವುದರಿಂದ ಅಂಡೆ ಸುಡದೇ ಒಳಗಡೆಯ ಅಕ್ಕಿ ಬೆಲ್ಲ ಹಾಲುಂಡು ಮೆತ್ತಗೆ ಬೆಂದು ರುಚಿಕಟ್ಟಾದ ಪಾಯಸ ರೆಡಿಯಾಗುತ್ತಿತ್ತಂತೆ. ಕತ್ತಿಯಲ್ಲಿ ಬಿದರ ಅಂಡೆ ಸೀಳಿ, ಒಳಗಿನ ಪಕ್ವಾನವನ್ನು ಕಾಡೆಲೆಯ ಮೇಲೆ ಹರಡಿಕೊಂಡು ಎಲ್ಲರೂ ಸೇರಿ ಲೊಟ್ಟೆಹೊಡೆಯುತ್ತ ತಿನ್ನುತ್ತಿದ್ದರಂತೆ. ಬಹುಶಃ ಈ ಆವಿಷ್ಕಾರ ನನ್ನ ಅಪ್ಪಯ್ಯನದೇ ಇರಬೇಕು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹತ್ತೊಂಭತ್ತನೆಯ ಕಂತು

ಹಿಂದಿನ ಅಧ್ಯಾಯದಲ್ಲಿ, ಈ ಕಾಡಿನ ಸಂಪತ್ತನ್ನು ಲೂಟಿ ಮಾಡುವವರ ಭಾನಗಡೆ, ಕಿತಾಪತಿಗಳು, ಅದರಿಂದ ಉಂಟಾಗುವ ಅನಾಹುತಗಳ ದುರಂತ ಕಥೆಯನ್ನು ಆರಂಭಿಸಿದ್ದೆ. ಈಗ ಅದನ್ನು ಸ್ವಲ್ಪ ತಡೆಹಿಡಿದು, ನಮ್ಮ ಕಾಡಿನಲ್ಲಿದ್ದ ಇನ್ನೊಂದು ಸಮೃದ್ಧ ಸಂಪತ್ತಿನ ಕುರಿತು ಈ ಅಧ್ಯಾಯದಲ್ಲಿ ವಿವರವಾಗಿ ನೋಡೋಣ.

ನಮ್ಮ ಕಾಡಲ್ಲಿ ಬಿದಿರು ತುಂಬ ಸಮೃದ್ಧವಾಗಿತ್ತು. ತನ್ನ ಸುತ್ತ ಬಲವಾದ ಮುಳ್ಳುಗಳನ್ನು ಹೊತ್ತು ಬೆಳೆಯುವ ಬಿದಿರಿನ ಉಪಯೋಗಗಳು ತುಂಬಾ ಇದೆ. ಬಿದಿರಿನ ಆಕಾರವೇ ಚೆಂದ. ಹೆಚ್ಚೂ ಕಡಿಮೆ ಒಂದೂ, ಒಂದೂವರೆ ಗೇಣಿಗೆ ಆ ಕಡೆ ಈ ಕಡೆ ಒಂದೊಂದು ಕವರು (ಟಿಸಿಲು) ಒಡೆಯುತ್ತ, ಅದು ಉದ್ದಕ್ಕೆ ಬೆಳೆಯುತ್ತ ಹೋಗುತ್ತದೆ. ಅದಕ್ಕೇ ಚೆನ್ನಾಗಿ ಬಲಿತ ಬಿದಿರು ಗಳವನ್ನು ಕಡಿದು, ಅದರ ಕವರನ್ನು ಒಂದಳತೆಯಲ್ಲಿ ಕತ್ತರಿಸಿ, ಗಟ್ಟಿ ಮುಟ್ಟಾದ ಏಣಿಯನ್ನು ತಯಾರಿಸಿಕೊಳ್ಳುತ್ತಿದ್ದರು. ಆಗೆಲ್ಲ ಈಗಿನಂತೆ ಲೋಹದ ಏಣಿಗಳು ಇರುತ್ತಿರಲಿಲ್ಲ. ಹಾಗಾಗಿ, ಮನೆಯ ಅಟ್ಟ, ಅಡಿಕೆ ಅಟ್ಟ, ಕೊಟ್ಟಿಗೆಯ ಅಟ್ಟ ಎಲ್ಲದಕ್ಕೂ ಈ ಬಿದಿರೇಣಿಯೇ ಆಧಾರ. ಸ್ಥಿತಿವಂತರು ಮಾತ್ರ ತಮ್ಮನೆ ಉಪ್ಪರಿಗೆ ಏರಲು ಒಳ್ಳೆಯ ಜಾತಿಯ ಮರದ ಏಣಿ ಮಾಡಿಸಿಕೊಳ್ಳುತ್ತಿದ್ದರು. ಹಾಗೇ ದೊಡ್ಡ ದೊಡ್ಡ ಮರ ಏರಿ ಸೊಪ್ಪು ಕಡಿಯಲು, ಕಾಯಿ ಕೀಳಲು ಹೀಗೇ ಈ ಬಿದಿರೇಣಿ ಬಹೂಪಯೋಗಿಯಾಗಿತ್ತು. ಅಷ್ಟೇ ಅಲ್ಲ. ಈ ಬಿದಿರಿನಲ್ಲೂ ಎರಡು ಮೂರು ಜಾತಿಗಳಿವೆ. ಅದರಲ್ಲಿ ಒಂದು ಜಾತಿಯ (ಶಮೆ ಬಿದಿರು) ಬಿದಿರಿನಿಂದ ತಡಿಕೆ (ಚಾಪೆಯ ಥರ) ಹೆಣೆಯುತ್ತಿದ್ದರು. ಈ ತಡಿಕೆಯ ಮೇಲೆ ಸುಲಿದ ಅಡಿಕೆ ಒಣಗಿಸುವುದಿತ್ತು. ಹೊಸದಾದ ತಡಿಕೆಗೆ ಅಡಿಕೆಯ ತೊಗರು, ಸಗಣಿ ಸೇರಿಸಿ ಚೆನ್ನಾಗಿ ಲೇಪಿಸುತ್ತಿದ್ದರು. ಅದು ಹುಳು ಹಿಡಿಯದಂತೆ, ಬೇಗ ಲಡ್ಡಾಗಿ ಹೋಗದಂತೆ ತಾಳಿಕೆ ಬರಲು ಈ ರೀತಿ ಉಪಾಯ ಮಾಡುತ್ತಿದ್ದರು. ಬೇಸಿಗೆಯಲ್ಲಿ ನಡೆಯುವ ಮದುವೆ ಮುಂಜಿಗಳಲ್ಲೂ ಇದರ ಉಪಯೋಗವಿತ್ತು. ಅಡಿಕೆ ಅಟ್ಟದ ಕೆಳಗಿನ ಅಂಗಳದ ಆವರಣದ ಸುತ್ತ ಗೋಡೆಯಂತೆ ಈ ತಡಿಕೆ ಕಟ್ಟಿ, ಒಂದು ಮೂಲೆಯಲ್ಲಿ ಬಾಳೆ ಕಂಬದ ಮಂಟಪ ಮಾಡಿಬಿಟ್ಟರೆ ಮುಗಿಯಿತು. ಕಾರ್ಯಕ್ರಮ ಮುಗಿಸಿ, ಅಂಗಳದಲ್ಲೇ ಎಲೆ ಹಾಕಿ ಊಟವೂ ಆಗಿಹೋಗುತ್ತಿತ್ತು

ಈ ಬಿದಿರು ಪೊಳ್ಳು. ಆದರೆ ಪ್ರತೀ ಒಂದು ಗಿಣ್ಣಿಗೆ ಒಳಗಡೆ ಸೀಲ್ ಮಾಡಿದಂತಿರುತ್ತದೆ. ಅದಕ್ಕೆ ಅದನ್ನು ಪುಟ್ಟ ಪುಟ್ಟ ಕೊಳವೆಗಳಂತೆ ಬೇರ್ಪಡಿಸಿಕೊಂಡು ಗೃಹೋಪಯೋಗಕ್ಕೂ ಬಳಸುತ್ತಿದ್ದರು. ಬಹಳ ಹಿಂದಿನ ಕಾಲದಲ್ಲಿ ಮನೆಯಲ್ಲಿ ಕಾಳುಕಡಿ ತುಂಬಿಸಲೆಲ್ಲ ಇಂಥದೇ ದಪ್ಪ ಬಿದಿರಿನ ಕೊಳವೆಗಳನ್ನು ಬಳಸುತ್ತಿದ್ದರಂತೆ. ಇದು ಬಡವರ ಮನೆಯಲ್ಲಿ ಡಬ್ಬಗಳಂತೇ ಉಪಯೋಗವಾಗುತ್ತಿತ್ತು.

ನನ್ನ ಆಯಿ ಮದುವೆಯಾಗಿ ಬರುವಾಗ, ಮನೆಯೆಂದರೆ ತಟ್ಟಿ ಬಿಡಾರವಾಗಿತ್ತಂತೆ (ಗೋಡೆಗಳ ಬದಲು ಬಿದಿರ ದಬ್ಬೆ ಒತ್ತಾಗಿ ನೆಟ್ಟು ಮರೆಮಾಡುವುದಕ್ಕೆ ತಟ್ಟಿ ಕಟ್ಟುವುದು ಎನ್ನುತ್ತಾರೆ) ಮನೆಯೊಳಗಡೆ ತಟ್ಟಿಗೆ, ನಮ್ಮಜ್ಜಿ ಎಲ್ಲೆಲ್ಲೂ ಇಂಥ ಬಿದಿರಿನ ಅಂಡೆಗಳನ್ನು ನೇತು ಬಿಟ್ಟಿದ್ದರಂತೆ. ಉಪ್ಪು, ಮೆಣಸು, ಎಣ್ಣೆ ಎಲ್ಲ ಇಂಥದ್ದರಲ್ಲೇ ಇಡುತ್ತಿದ್ದರಂತೆ. (ಅಡಿಗೆ ಮಾಡಲು ಗಡಿಗೆಗಳು ಇದ್ದವಂತೆ.) ಅದರಲ್ಲಿಟ್ಟ ವಸ್ತುಗಳು ಬೇಗ ಕೆಡುತ್ತಿರಲೇ ಇಲ್ಲ ಎಂದು ಆಯಿ ಹೇಳುತ್ತಿದ್ದಳು. ಮತ್ತೆ ಅಳತೆಯ ಪಾವು ಕೂಡಾ ಇದರದ್ದೇ. ನಾವು ಸಣ್ಣವರಿರುವಾಗಲೂ ಇಂಥ ಒಂದೆರಡು ಅಂಡೆಗಳಿದ್ದವು. ಅದರಲ್ಲಿ ಆಯಿ ಬೇಸಿಗೆಯ ಹಿತ್ತಲಲ್ಲಿ ಬೆಳೆಯುವದಕ್ಕೋಸ್ಕರ ವಿವಿಧ ತರಕಾರಿ ಬೀಜಗಳನ್ನು ಬೂದಿಯಲ್ಲಿ ಕಲಸಿ ಜೋಪಾನವಾಗಿ ಶೇಖರಿಸಿ  ಇಟ್ಟಿರುತ್ತಿದ್ದಳು.

ಈ ಬಿದಿರು ನಿಜಕ್ಕೂ ಬಹೂಪಯೋಗಿ. ಮನೆಯ ಮಾಡು, ಹೊಲಕ್ಕೆ ಬೇಲಿ, ಕೊನೆಗೆ ದನಕಾಯುವ ಹುಡುಗರ ಕೈಲಿ ಕೊಳಲಾಗಿಯೂ ಬಿದಿರು ಶೋಭಿಸುತ್ತಿತ್ತು.

ನನ್ನ ಅಪ್ಪಯ್ಯ ತನ್ನ ಎಳೆವೆಯಲ್ಲಿ ಈ ಬಿದಿರ ಕೊಳವೆಯನ್ನು ಹೇಗೆ ತಾವೆಲ್ಲ ಬಳಸುತ್ತಿದ್ದೆವು ಅನ್ನುವ ರಸವತ್ತಾದ ಕಥೆ ಯಾವಾಗಲಾದರೂ ಒಮ್ಮೆ ನೆನೆಸಿಕೊಳ್ಳುತ್ತಿದ್ದ. ಅದನ್ನೇ ನಿಮಗೆ ಹೇಳುವೆ. ಅಪ್ಪಯ್ಯ ಸಣ್ಣವನಿರುವಾಗ ವಾರಿಗೆಯವರ ಜೊತೆಗೆ ದನ ಮೇಯಿಸಲು ಹೋಗುತ್ತಿದ್ದನಂತೆ.  ಮಧ್ಯಾಹ್ನ ಹೊಟ್ಟೆ ಹಸಿಯುತ್ತಿಂತೆ. ಅದಕ್ಕೆ ಅವರೆಲ್ಲ ಒಂದು ಉಪಾಯ ಕಂಡುಕೊಂಡಿದ್ದರಂತೆ. ಗುಂಪಿನ ಯಾರಾದರೂ ಒಬ್ಬರು ಸಮಯ ಸಾಧಿಸಿ, ಒಂದಿಷ್ಟು ಅಕ್ಕಿ ಮತ್ತೂ ಬೆಲ್ಲವನ್ನು ಮನೆಯಿಂದ ಹಾರಿಸಿಕೊಂಡು ಬರುತ್ತಿದ್ದರಂತೆ.  ಕಾಡಿಗೆ ಹೋದ ಮೇಲೆ ದಪ್ಪನಾದ ಬಿದಿರು ಕಡಿದು ಒಂದು ಅಂಡೆ ಮಾಡಿಕೊಂಡು ಅಕ್ಕಿ, ಬೆಲ್ಲ ತುಂಬಿ, ಒಂದು  ಹಸುವಿನ ಹಾಲನ್ನು  ಆ ಅಂಡೆಯೊಳಗೆ ಹಿಂಡಿಕೊಂಡು, ಮೇಲೊಂದು ಬಿದಿರ ಬಿರಟೆಯನ್ನು ಮುಚ್ಚುತ್ತಿದ್ದರಂತೆ. ಹಾಗೇ ಕಾಡು ಹಳ್ಳದ ಹಸೀ ಮಣ್ಣನ್ನು ಇಡೀ ಬಿರಟೆಗೆ ದಪ್ಪಗೆ ಮೆತ್ತಿ, ಒಂದೆಡೆ ಬೆಂಕಿ ಹಾಕಿ ಅದರೊಳಗೆ ಈ ಅಂಡೆ ಇಡುತ್ತಿದ್ದರಂತೆ. ಮಣ್ಣು ಮೆತ್ತಿರುವುದರಿಂದ ಅಂಡೆ ಸುಡದೇ ಒಳಗಡೆಯ ಅಕ್ಕಿ ಬೆಲ್ಲ ಹಾಲುಂಡು ಮೆತ್ತಗೆ ಬೆಂದು ರುಚಿಕಟ್ಟಾದ ಪಾಯಸ ರೆಡಿಯಾಗುತ್ತಿತ್ತಂತೆ. ಕತ್ತಿಯಲ್ಲಿ ಬಿದರ ಅಂಡೆ ಸೀಳಿ, ಒಳಗಿನ ಪಕ್ವಾನವನ್ನು ಕಾಡೆಲೆಯ ಮೇಲೆ ಹರಡಿಕೊಂಡು ಎಲ್ಲರೂ ಸೇರಿ ಲೊಟ್ಟೆಹೊಡೆಯುತ್ತ ತಿನ್ನುತ್ತಿದ್ದರಂತೆ. ಬಹುಶಃ ಈ ಆವಿಷ್ಕಾರ ನನ್ನ ಅಪ್ಪಯ್ಯನದೇ ಇರಬೇಕು.

ಈ ಬಿದಿರಿಗೆ ‘ಕಟ್ಟೆ’  (ಒಂದು ಥರದ ರೋಗ) ಬರುವುದಿದೆ. ಇದು ಬಂತೆಂದರೆ, ಬಿದಿರು ಸಂಪೂರ್ಣ ನಾಶವಾಗುತ್ತದೆ. ಮುಂದೆ ಮತ್ತೆ ಅದು ಹುಟ್ಟಿ ಬರಲು, ಒಂದಿಷ್ಟು ವರ್ಷಗಳೇ ಬೇಕು. ಹೀಗೆ ೬೦ ವರ್ಷಕ್ಕೊಮ್ಮೆ ಕಟ್ಟೆ ಬರುತ್ತದೆ ಎನ್ನುತ್ತಿದ್ದರು. ಈ ಕಟ್ಟೆ ಬರುವುದೆಂದರೆ, ಬಿದಿರಿನಲ್ಲಿ ಭತ್ತದಂತೆ ತೆನೆ ಬಿಡುತ್ತದೆ. ನಾನು ತೀರ ಚಿಕ್ಕವಳಿರುವಾಗ, ಈ ಕಟ್ಟೆ ಬಂದಿತ್ತು. ಎಲ್ಲೆಡೆ, ಬಿದಿರಿನಲ್ಲಿ ತೆನೆ ಬಿಟ್ಟಿತ್ತು. ಪಕ್ಕಾ ಭತ್ತದ ಕಾಳಿನಂತೆ ಇರುವ ಇದನ್ನು ಅಕ್ಕಿ ಮಾಡಿ ಊಟ ಮಾಡುತ್ತಿದ್ದರಂತೆ. ಆಗೆಲ್ಲ ಎಲ್ಲಿಂದಲೋ ಗುಂಪು ಗುಂಪು ಜನ ಈ ಬಿದಿರಕ್ಕಿಗಾಗಿ ನಮ್ಮ ಕಾಡಿಗೆ ಬಂದಿದ್ದರು. ಆಗ ಆಯಿ “ಬಿದಿರಕ್ಕಿ ಆರಿಸವು ಬಂಜ. ಹುಶಾರಿ.” ಎಂದು ಕಾಡು ತಿರುಗಲು ಹೊರಡದಂತೆ ನಮ್ಮನ್ನು ತಡೆಯುತ್ತಿದ್ದಳು. ನಾವೂ ಹೆದರಿ ಕಾಡು ತಿರುಗುವುದೇ ಬಿಟ್ಟಿದ್ದೆವು. “ಅವರು ಮಕ್ಕಳನ್ನು ಕದ್ದುಕೊಂಡು ಹೋಗ್ತಾರಂತೆ” ಎಂದು ಜನ ಭೀತಿಯಿಂದ ಆಡಿಕೊಳ್ಳುತ್ತಿದ್ದರು. ಆಗೆಲ್ಲ ಈಗಿನಂತೆ ಸಮೃದ್ಧಿ ಇರಲಿಲ್ಲ. ಅದಕ್ಕೇ ಪಾಪ ಬಡಜನತೆ ಈ ಬಿದಿರಕ್ಕಿಯನ್ನಾದರೂ ಬೇಯಿಸಿ ತಿಂದು ಹೊಟ್ಟೆ ತುಂಬಿಸಿ ಕೊಳ್ಳೋಣವೆಂಬ ಆಸೆಯಿಂದ, ಎಲ್ಲೆಲ್ಲಿಂದಲೂ ಈ ಬಿದಿರಕ್ಕಿ ಅರಸಿ ಬರುತ್ತಿದ್ದಿರಬೇಕು ಎಂದು ಈಗ ಅನ್ನಿಸುತ್ತದೆ.

ಮುಂದುವರಿಯುವುದು….

About The Author

ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ