ಇನ್ನು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು, ಮರವನ್ನು ಗುಟ್ಟಾಗಿ ಕಡಿದು ಸಾಗಿಸುತ್ತಿದ್ದರು. ಅರಣ್ಯಾಧಿಕಾರಿಗಳ ಕಣ್ಣುತಪ್ಪಿಸಲು, ದಟ್ಟ ಕಾಡಿನ ನಡುವೆ, ರಾತ್ರಿಯ ಬೆಳದಿಂಗಳ ಬೆಳಕಲ್ಲೇ ಸ್ಥಳೀಯರ ಸಹಾಯದಿಂದ ಈ ಕೆಲಸ ಮುಗಿಸಿ, ಗಪ್ ಚಿಪ್ ಆಗಿ ದಿಮ್ಮಿ ಸಾಗಿಸಿ ಬಿಡುವ ನಿಪುಣರಿವರು. ಆಗೆಲ್ಲ ಹಳ್ಳಿಯಲ್ಲಿ ಕಾಲು ದಾರಿಗಳು ಮಾತ್ರ. ವಾಹನ ಸಂಚಾರಕ್ಕೆ ಅಲ್ಲೊಂದು ಇಲ್ಲೊಂದು ಮಣ್ಣು ರಸ್ತೆ. ಅದು ಬೇಸಿಗೆಗಷ್ಟೇ. ಮಳೆಗಾಲದಲ್ಲಿ ಆ ರಸ್ತೆಯಲ್ಲಿ ನಡೆದರೆ, ಮೊಣಕಾಲು ತನಕ ಹೂತು ಹೋಗುತ್ತಿತ್ತು. ಇನ್ನು ವಾಹನ ಸಂಚಾರ ನೆನೆಸುವುದೂ ಕಷ್ಟ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೆಂಟನೆಯ ಕಂತು
ನವಿಲಿಗೆ ಅದರ ಸುಂದರ ಗರಿಗಳೇ ಮಾರಕ. ಆನೆಗೆ ಅದರ ಅಮೂಲ್ಯವಾದ ದಂತವೇ ಮಾರಕ. ಈ ಗರಿ, ದಂತದಂಥ ಅಪರೂಪದ ವಸ್ತುಗಳ ದುರಾಸೆಗೆ ಬಿದ್ದು, ಮನುಷ್ಯ ಇವುಗಳನ್ನು ಬೇಟೆಯಾಡುವಂಥ ದುಷ್ಟ ಕಾರ್ಯಕ್ಕೆ ಕೈ ಹಾಕುತ್ತಾನೆ.
ಹಾಗೆಯೇ ಕಾಡುಗಳ ಅಂದ ಹೆಚ್ಚಿಸುವ, ಘನತೆ ಹೆಚ್ಚಿಸುವ ಅಮೂಲ್ಯವಾದ ಮರಮಟ್ಟುಗಳು, ಬೀಜ, ಹಣ್ಣು, ಕಾಯಿ, ಬೇರು ತೊಪ್ಪಲು ಮುಂತಾದವುಗಳ ಲೂಟಿಯಿಂದಾಗಿಯೇ ಕಾಡು ನಲುಗುತ್ತದೆ. ಭೂಮಿ ಬತ್ತಿ ಬಂಜರಾಗಿ ಪ್ರಕೃತಿಯ ಸಮತೋಲನವೇ ಕೆಡುತ್ತದೆ. ಇಂಥವನ್ನೆಲ್ಲಾ ನಾವು ಹಳ್ಳಿಗರು ನೋಡುತ್ತಲೇ ಬೆಳೆದು ಬಂದಿದ್ದೇವೆ. ನಮ್ಮ ಬಾಲ್ಯದಲ್ಲಿ, ಮಟ ಮಟ ಮಧ್ಯಾಹ್ನದ ವೇಳೆಯಲ್ಲೂ ತನ್ನೊಳಗೆ ಸೂರ್ಯಕಿರಣವನ್ನು ಬಿಟ್ಟುಕೊಳ್ಳದಷ್ಟು ದಟ್ಟವಾದ ಕಾಡು ಎಲ್ಲೆಡೆ ಇತ್ತು. ಅಷ್ಟೇಕೆ, ಸಣ್ಣ ಪ್ರಮಾಣದ ಮಳೆಬಿದ್ದರೂ ಕೊಡೆಗಳಂತೆ ಚಾಚಿದ್ದ ಮರದೆಲೆಗಳು ತಡೆದು ಬಿಡುತ್ತಿದ್ದವು. ಅಂಥ ಕಾಡು ಕಾಲ ಕ್ರಮೇಣ ದಟ್ಟತೆ ಕಳೆದುಕೊಂಡು, ವಿರಳವಾಗುತ್ತ ಸಾಗಿತು. ಅದಕ್ಕೆ, ಅದರ ಸುತ್ತಲಿನ ಮೂಲ ನಿವಾಸಿಗಳ ಕೈವಾಡವೂ ಸ್ವಲ್ಪ ಪ್ರಮಾಣದಲ್ಲಿ ಇದ್ದೀತು. ಆದರೆ, ಅದೆಷ್ಟೋ ಸಾರಿ, ರಕ್ಷಕರೇ ಭಕ್ಷಣೆಗೆ ನಿಂತಾಗ…!!??
ಇನ್ನು ಮುಂದಿನ ಭಾಗಗಳಲ್ಲಿ ಅಂಥದ್ದೇ ಅನೇಕ ಘಟನೆಗಳನ್ನು ತಮ್ಮೆದುರು ತೆರೆದಿಡುವವಳಿದ್ದೇನೆ.
ನಮಗೆ ತಿಳುವಳಿಕೆ ಬರುವುದರೊಳಗೇ ನಮ್ಮ ಸುತ್ತಲಿನ ಒಂದಿಷ್ಟು ಕಾಡನ್ನು ಕಡಿದು, ಅಲ್ಲೆಲ್ಲ ಸಾಗವಾನಿ, (ತೇಗ) ನೀಲಗಿರಿಯ ನೆಡುತೋಪುಗಳನ್ನು ಮಾಡಲಾಗಿತ್ತು. ಸಾಗವಾನಿ ತುಂಬ ಉಷ್ಣವಂತೆ. ಹಾಗಾಗಿ, ಅದರ ಕೆಳಗೆ ಇತರ ಗಿಡಗಳು ಬೆಳೆಯುವುದೇ ಇಲ್ಲ. ಹಾಗೇ ನೀಲಗಿರಿಯಿಂದ ಅಂತರ್ಜಲ ಬತ್ತುತ್ತದೆಯೆಂದು ತಿಳಿದವರು ಹೇಳಿದ್ದನ್ನು ಕೇಳಿರುವೆ. ಸರ್ಕಾರ ತನ್ನ ಫಾಯಿದೆಗಾಗಿ ಮಾಡಿಕೊಂಡ ಇಂಥ ನೆಡುತೋಪುಗಳೇ ಅರ್ಧ ಕಾಡನ್ನು ತಿಂದು ಹಾಕಿದ್ದು, ಕ್ರಮೇಣ ಮಳೆ ಕಡಿಮೆಯಾಗಿ ಮಲೆ ನಾಡು, ಬಯಲ ನಾಡಾಗತೊಡಗಿದ್ದು ಎಲ್ಲರ ಕಣ್ಣಿಗೂ ಎದ್ದು ಕಾಣುವ ಸತ್ಯ.
ನಮ್ಮ ಕಾಡಲ್ಲಿ ಮತ್ತಿ, ಹೊನ್ನೆ, ಬೀಟೆ, ಜಂಬೆ, ಎತ್ತುಗಲ, ಹೊಣಾಲ ಹೀಗೆ ಅನೇಕ ಬೆಲೆ ಬಾಳುವ ಜಾತಿಯ ಮರಗಳಿದ್ದವು. ಬಿದಿರು ಕೂಡಾ ಸಮೃದ್ಧವಾಗಿತ್ತು. ಆ ಕಾರಣ, ಆ ಕಾಲದಲ್ಲೂ ಕಾಡಿಗೆ ಅರಣ್ಯಾಧಿಕಾರಿಗಳ ಬಲವಾದ ರಕ್ಷಣೆ ಇತ್ತು. ನಮಗೆ ಹಳ್ಳಿಗರಿಗೆ ಉರುವಲಿಗಾಗಿ ಕಟ್ಟಿಗೆ ಕಡಿದುಕೊಳ್ಳಲು ಮಾತ್ರ ವಿನಾಯಿತಿ ಇತ್ತು. ಆದರೆ, ಮರ ಕಡಿಯುವಂತಿರಲಿಲ್ಲ. ಹಾಗೂ ಅಲ್ಲಿ ಇಲ್ಲಿ ಒಬ್ಬೊಬ್ಬರು ಚಾಲಾಕಿಯಿಂದ ಮರ ಮಟ್ಟು ಕಡಿದು ಕದ್ದೊಯ್ದು ಅದಕ್ಕೆ ಸಗಣಿ, ಮಣ್ಣು ಎಲ್ಲ ಮೆತ್ತಿಯೋ, ಮಣ್ಣೊಳಗೆ ಹೂತಿಟ್ಟೋ ಹಳೆಯದೆಂದು ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ಅದು ಹೇಗೋ ಯಾರಾದರೊಬ್ಬರು ಈ ಕಳ್ಳಾಟ ಗಮನಿಸಿ, ಇಲಾಖೆಗೆ ಮೂಗರ್ಜಿ ಬರೆದು ಅವರನ್ನು ಹಿಡಿದು ಕೊಟ್ಟು ಬಿಡುತ್ತಿದ್ದರು. ಇದು ಜನ ಸಾಮಾನ್ಯನ ಪಾಡು. ಹಾಗಂತ ಕಾನೂನು ಎಲ್ಲರಿಗೂ ಒಂದೇ ರೀತಿ ಅಂತ ಹೇಳಲಾಗದು.
ಇಂಥ ಕಟ್ಟು ನಿಟ್ಟಾದ ಕಾನೂನಿನ ಕಣ್ಣಿಗೂ ಮಣ್ಣು ತೂರಿ ಕಾಡನ್ನು ಕಬಳಿಸುವ ವ್ಯವಸ್ಥಿತ ಪಿತೂರಿಗಳು ಸಾಕಷ್ಟು ನಡೆಯುತ್ತಲೇ ಇರುತ್ತಿತ್ತು. ಇದು ಈಗಲೂ… ಮುಂದೆಯೂ..
ಇದಕ್ಕೊಂದು ಒಳ್ಳೆಯ ಉದಾಹರಣೆ ಕೊಡುವೆ. ಆ ಕಾಲದಲ್ಲಿ ಈಗಿನಂತೆ, ಸುಧಾರಿತ ಉರುವಲುಗಳ ಆವಿಷ್ಕಾರ ಆಗಿರಲಿಲ್ಲ. ಹಾಗಾಗಿ ಪಟ್ಟಣದಲ್ಲೂ ಬಹುತೇಕರು ಉರುವಲಿಗೆ, ಕಟ್ಟಿಗೆಯನ್ನೇ ಅವಲಂಬಿಸಿದ್ದರು. ಹಳ್ಳಿಯವರಿಗೇನೋ ಕಾಡಲ್ಲಿ ಹೇರಳವಾಗಿ ದೊರೆಯುತ್ತಿತ್ತು. ಆದರೆ, ಪಟ್ಟಣಿಗರು ಇವನ್ನು ಕೊಂಡೇ ತೆಗೆದುಕೊಳ್ಳಬೇಕಿತ್ತು. ಅದಕ್ಕೆ ಸರ್ಕಾರ ಗುತ್ತಿಗೆದಾರರಿಗೆ ಜಲಾವು ಕಟ್ಟಿಗೆ ಕಡಿಯಲು ಪರ್ಮಿಟ್ ಕೊಡುತ್ತಿತ್ತು. ಹಾಗೆ ಕಟ್ಟಿಗೆ ಕಡಿಯಲು ಬಂದ ಗುತ್ತಿಗೆ ದಾರರು, ಕಟ್ಟಿಗೆಯ ಜೊತೆ ಸಾಕಷ್ಟು ಮರ ಮಟ್ಟುಗಳನ್ನೂ ಕದ್ದು ಕಡಿದು, ಕಟ್ಟಿಗೆಯಡಿ ಮುಚ್ಚಿ ಸಾಗಿಸುತ್ತಿದ್ದರು. ಇದು ಕೆಲವೇ ಕೆಲವಾದರೂ ಅಧಿಕಾರಿಗಳ ಸಹಕಾರವಿಲ್ಲದೇ ಹೇಗೆ ಸಾಧ್ಯ ಹೇಳಿ?

ಇನ್ನು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು, ಮರವನ್ನು ಗುಟ್ಟಾಗಿ ಕಡಿದು ಸಾಗಿಸುತ್ತಿದ್ದರು. ಅರಣ್ಯಾಧಿಕಾರಿಗಳ ಕಣ್ಣುತಪ್ಪಿಸಲು, ದಟ್ಟ ಕಾಡಿನ ನಡುವೆ, ರಾತ್ರಿಯ ಬೆಳದಿಂಗಳ ಬೆಳಕಲ್ಲೇ ಸ್ಥಳೀಯರ ಸಹಾಯದಿಂದ ಈ ಕೆಲಸ ಮುಗಿಸಿ, ಗಪ್ ಚಿಪ್ ಆಗಿ ದಿಮ್ಮಿ ಸಾಗಿಸಿ ಬಿಡುವ ನಿಪುಣರಿವರು. ಆಗೆಲ್ಲ ಹಳ್ಳಿಯಲ್ಲಿ ಕಾಲು ದಾರಿಗಳು ಮಾತ್ರ. ವಾಹನ ಸಂಚಾರಕ್ಕೆ ಅಲ್ಲೊಂದು ಇಲ್ಲೊಂದು ಮಣ್ಣು ರಸ್ತೆ. ಅದು ಬೇಸಿಗೆಗಷ್ಟೇ. ಮಳೆಗಾಲದಲ್ಲಿ ಆ ರಸ್ತೆಯಲ್ಲಿ ನಡೆದರೆ, ಮೊಣಕಾಲು ತನಕ ಹೂತು ಹೋಗುತ್ತಿತ್ತು. ಇನ್ನು ವಾಹನ ಸಂಚಾರ ನೆನೆಸುವುದೂ ಕಷ್ಟ. ಆಗ ಹಳ್ಳಿಗಳೆಲ್ಲ ನಡುಗಡ್ಡೆಗಳಂತೇ ಆಗುತ್ತಿದ್ದವು. ಯಾವೊಬ್ಬ ಅರಣ್ಯಾಧಿಕಾರಿಯೂ ಇತ್ತ ತಲೆ ಹಾಕುವುದೂ ಅಸಾಧ್ಯ. ಅದು ಕಾಡುಗಳ್ಳರಿಗೆ ಸುಗ್ಗಿಯ ಕಾಲ. ದಟ್ಟ ಕಾಡಲ್ಲಿ ಮರ ಕಡಿದು ಮುಚ್ಚಿಟ್ಟು, ಬೇಸಿಗೆ ಬರುತ್ತಲೇ ಕಳ್ಳದಾರಿಯಲ್ಲಿ ಸಾಗಿ ಹೋಗುತ್ತಿದ್ದವು.
ಇದನ್ನು ತಪ್ಪಿಸುವದಕ್ಕೋಸ್ಕರವೇ ಅರಣ್ಯ ಇಲಾಖೆಯವರು ಕೆಲವು ಪ್ರಾಮಾಣಿಕ ಹಳ್ಳಿಗರನ್ನು ಆಯ್ಕೆ ಮಾಡಿಕೊಂಡು, ಅವರನ್ನು ವನರಕ್ಷಕರನ್ನಾಗಿ ಗುಪ್ತವಾಗಿ ಆಯ್ಕೆ ಮಾಡತೊಡಗಿದರಂತೆ. ಆತ ಯಾರಿಗೂ ತಿಳಿಯದ ರೀತಿಯಲ್ಲಿ ಅರಣ್ಯದ ಮೇಲೆ ಒಂದು ಕಣ್ಣಿಟ್ಟು, ಇಂಥ ಕಾನೂನು ಬಾಹೀರ ಚಟುವಟಿಕೆಗಳನ್ನು ಸದ್ದಿಲ್ಲದೇ ಸುದ್ದಿ ಮುಟ್ಟಿಸುತ್ತಿದ್ದನಂತೆ.
ಇಂಥ ಒಬ್ಬ ಮನುಷ್ಯ ನಮ್ಮನೆಗೆ ತುಂಬಾ ಬೇಕಾದವನಾಗಿದ್ದ. ಆದರೆ, ಆಗ ಯಾರಿಗೂ ಆತನ ಕೆಲಸದ ಬಗ್ಗೆ ತಿಳಿದೇ ಇರಲಿಲ್ಲ. ಆತನ ಹೆಸರು ನರೇಂದ್ರ ಶಾಸ್ತ್ರಿ. ತುಂಬಾ ತಮಾಷೆ, ನಗು, ಮಾತು ಉಳ್ಳ ಆತ ಬಹಳ ಚುರುಕಿನ ಯುವಕ. ಯಾವಾಗ ಬಂದರೂ ಅಪ್ಪಯ್ಯನ ಜೊತೆ ತಾಸು ಗಟ್ಟಲೇ ಹರಟೆ ಹೊಡೆದು, ನಮ್ಮನ್ನೂ ಎಲ್ಲ ಮಾತಾಡಿಸಿ ಹೋಗುತ್ತಿದ್ದ.
ಬಹುಶಃ ನಾನು ೭-೮ ನೇ ತರಗತಿಯಲ್ಲಿದ್ದಾಗ ಅನ್ನಿಸುತ್ತದೆ. ಒಂದು ದಿನ ಒಂದು ಸುದ್ದಿ. ಅದೇ… ನರೇಂದ್ರ ಶಾಸ್ತ್ರಿಯ ಅಕಾಲಿಕ ಮರಣದ ಸುದ್ದಿ ಬರಸಿಡಿಲಿನಂತೇ ಬಂದೆರಗಿತ್ತು. ಆತನ ಮನೆಯ ಹತ್ತಿರದ ಕಾಡಲ್ಲಿ ಕಾಡ್ಗಿಚ್ಚು ಹತ್ತಿತ್ತಂತೆ. ಆತ ಅದನ್ನು ನಂದಿಸಲು ಹೋಗಿ, ಕೊನೆಗೆ ಆ ಹೊಗೆಯ ನಡುವೆ ಉಸಿರು ಕಟ್ಟಿ ಸತ್ತು ಹೋದನಂತೆ!! ಸಾವೆಂದರೆ, ಏನು ಎಂದೂ ತಿಳಿಯದ ನಾವೆಲ್ಲ ಮರ ಮರ ಮರುಗಿದ್ದೆವು. ಕಣ್ಣೀರು ಹಾಕಿದ್ದೆವು. ಸಧ್ಯ ಅವನಿಗೆ ಇನ್ನೂ ಮದುವೆ ಆಗಿರಲಿಲ್ಲ ಎಂಬುದೇ ಸಮಾಧಾನ.
ಆದರೆ, ಆತ ಸತ್ತು ಹಲವು ತಿಂಗಳ ನಂತರ, ಅವನ ಸಾವಿನ ಕುರಿತಾದ ಸತ್ಯ ಊರವರ ಬಾಯಲ್ಲಿ ಅಲ್ಲಲ್ಲಿ ಪಿಸುಗುಡತೊಡಗಿತ್ತು. “ಶಾಸ್ತ್ರಿ ತಾನಾಗಿ ಸತ್ತಿದ್ದಲ್ವಂತೆ. ಅವನನ್ನು ಕೊಂದದ್ದಂತೆ!! ಆತ ಅರಣ್ಯದ ಗುಪ್ತ ಕಾವಲು ಗಾರನಾಗಿದ್ದನಂತೆ. ಯಾರೋ ದೊಡ್ಡ ಜನ, ಕಾಡಲ್ಲಿ ಕಳ್ಳ ನಾಟು (ಮರದ ದಿಮ್ಮಿ) ಕಡಿದದ್ದನ್ನು ಆತ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸುವವನಿದ್ದ. ಮೂಗಾಳಿ ಹತ್ತಿದ ಅವರು ಆತನನ್ನು ಕೊಂದು, ಕಾಡ್ಗಿಚ್ಚಲ್ಲಿ ನೂಕಿದರಂತೆ…”
ಈ ಸುದ್ದಿ ತಿಳಿದ ದಿನ ಅದೆಷ್ಟು ಹೆದರಿಕೆಯಾಗಿತ್ತೆಂದರೆ, ಅಬ್ಬಾ!!! ಪಾಪ ಆತನ ಮುಖವೇ ಅದೆಷ್ಟೋ ದಿನ ಕಣ್ಮುಂದೆ ಬರುತ್ತಿತ್ತು.

ಇಂಥ ಅದೆಷ್ಟು ಜೀವಗಳು ಕಾಡುಗಳ್ಳರ ಕೈಲಿ ಹತಗೊಂಡು ಸದ್ದಿಲ್ಲದೇ ಮಣ್ಣಡಿಗೆ ಆಗುತ್ತಿದ್ದವೋ ದೇವರೇ ಬಲ್ಲ…
ಮುಂದುವರಿಯುವುದು.

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
