ನಮ್ಮಲ್ಲಿ ತಂಪು ಜಾಸ್ತಿಯಾದ್ದರಿಂದ ಹಾವುಗಳು ಹೆಚ್ಚಾಗಿ ಇರಲಿಲ್ಲವೆನ್ನಿಸುತ್ತದೆ. ಒಂದು ನಿರುಪದ್ರವಿ ಹಾವಿನ ಬಗ್ಗೆ ಹೇಳಬೇಕು ಅದೆಂದರೆ ಹಸಿರು ಹಾವು. ಹಸಿರು ದಂಟಿಗೆ ಸುತ್ತಿಕೊಂಡು, ಸಪೂರ ಕೋಲಿನಂತೇ ಡೊಂಕಾಗಿ ನಿಂತು ಹುಳ ಹುಪ್ಪಡಿ ಹಿಡಿಯುವ ಈ ಹಾವನ್ನು ಗುರುತಿಸುವುದೇ ಕಷ್ಟ. ನಾವೇ ಅದೆಷ್ಟೋ ಸಲ, ಮುಳ್ಳಣ್ಣು ಕೊಯಿದು ಕೊಳ್ಳುವಾಗಲೋ, ಜಾಜಿ ಹೂ ಕೊಯ್ಯುವಾಗಲೋ ಟೊಂಗೆಯ ಜೊತೆಗೇ ಎಳೆದು ಬಿಡುತ್ತಿದ್ದೆವು. ಆಗ ಅದು ಗಾಬರಿಬಿದ್ದು, ಸರಕ್ಕನೆ ಕೆಳಗಿಳಿದು ಓಡುತ್ತಿತ್ತು. ಅದು ಹೋಗಿ ಎಷ್ಟು ಹೊತ್ತಿನ ತನಕ, ನಾವು ಜೀವ ಬಾಯಿಗೆ ಬಂದವರಂತೇ ಭಯದಿಂದ ಇಷ್ಟಗಲ ಕಣ್ಣುಮಾಡಿ ಮಾತು ಮರೆತು ನಿಂತಿರುತ್ತಿದ್ದೆವು!!
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನಾಲ್ಕನೆಯ ಕಂತು
ಕಾಡೆಂದರೆ, ಕೇವಲ ಕ್ರೂರ ಜೀವಿಗಳ ಆಶ್ರಯದಾಣವಲ್ಲ. ಅದು ವೈವಿಧ್ಯಮಯ ಜೀವ ಪ್ರಪಂಚ. ಎಷ್ಟೋ ಸಾರಿ, ಈ ಜೀವಿಗಳ ನಡುವೆ ಒಂದು ಸೂಕ್ಷ್ಮ ಹೊಂದಾಣಿಕೆ, ಒಪ್ಪಂದ ಇರುವಂತೆ ಭಾಸವಾಗುತ್ತದೆ. ಕಾಡಲ್ಲಿ ಏನಾದರೂ ಅಪಾಯದ ಸೂಚನೆ ಬಂತೆಂದರೆ, ಅದನ್ನು ಬಹುಶಃ ಎಲ್ಲ ಪ್ರಾಣಿಗಳ ಗಮನಕ್ಕೆ ತರುವುದು ಮಂಗ. ಅಲ್ಲಿ ಏನಾದರೂ ಅಸಹಜ ದನಿ, ಶಬ್ಧ, ಅಪರಿಚಿತ ಜೀವಿಗಳ ಓಡಾಟವನ್ನು ಎಲ್ಲಕ್ಕಿಂತ ಮೊದಲು ಗ್ರಹಿಸುವ ಮಂಗಗಳು, ಆ ಕ್ಷಣವೇ “ಗೂಕ್….ಗೂಕ್” ಎಂದು ವಿಚಿತ್ರ ಸಪ್ಪಳ ಮಾಡುತ್ತ ಅವಸರದಿಂದ ಮರದಿಂದ ಮರಕ್ಕೆ ಹಾರತೊಡಗುತ್ತವೆ. ಅದು ನೆಲದ ಮೇಲಿನ ಪ್ರಾಣಿಗಳಿಗೆ ಬಚ್ಚಿಟ್ಟುಕೊಳ್ಳಲು ಸೂಚನೆಯಂತಿರುತ್ತದೆ.
ಇನ್ನು, ಬಿಳಿ ಮೈಯ್ಯ ಕಪ್ಪು ಚುಕ್ಕೆಗಳನ್ನು ಹೊಂದಿದ ಇಷ್ಟುದ್ದ ಕೊಕ್ಕಿನ, ಮೊಟ್ಟೆಗಳ್ಳ ಹಕ್ಕಿ ವಿಚಿತ್ರ ರೀತಿ ಶೀಟಿ ಹೊಡೆದಂತೆ ಕೂಗಿದ್ದು ಕೇಳಿದರೆ ಸಾಕು, ಮರದ ಮೇಲಿನ ಎಲ್ಲ ಹಕ್ಕಿಗಳೂ ಒಗ್ಗಟ್ಟಿನಿಂದ ಅದರ ಮೇಲೆ ಎರಗಲು ಸಿದ್ಧರಾಗುತ್ತವೆ.
ಹಾಗೇ ನೀಲಿ ಕಪ್ಪು ಮಿಶ್ರಿತ ಹಕ್ಕಿಗಳಿಗೂ ದನ ಕರುಗಳಿಗೂ ಭಾರೀ ದೋಸ್ತಿ. ಒಮ್ಮೊಮ್ಮೆ ಬಯಲು ಜಾಗದಲ್ಲಿ ಈ ದನಕರು ಮಲಗಿದ್ದಾಗ, ಈ ಹಕ್ಕಿಗಳು ಅವುಗಳ ಮುಖದ ಹತ್ತಿರ ಬಂದು ಕಿಚಗುಡುತ್ತವೆ. ಅದೇನು ಕೋಡ್ ವರ್ಡೋ ಯಾರಿಗೆ ಗೊತ್ತು? ಆ ಕ್ಷಣ ದನಗಳು ಕೈ ಕಾಲು ಸಡಿಲಿಸಿ ಮುಖ ಇಳಿಬಿಟ್ಟು ಮಲಗುತ್ತವೆ. ಆಗ ಈ ನುರಿತ ಹಕ್ಕಿಗಳು ಅವುಗಳ ಮೈ ಸಂದು ಗೊಂದುಗಳಲ್ಲಿ ಕೊಕ್ಕು ತೂರಿಸಿ, ಇಡೀ ಮೈ ಜಾಲಾಡಿ ಕಚ್ಚಿ ಕುಳಿತ ಉಣುಗನ್ನು (ಉಣ್ಣೆಯನ್ನು) ಹೆಕ್ಕಿ ಹೆಕ್ಕಿ ಕಬಳಿಸುತ್ತವೆ. ಆ ದನಗಳು ಅದೇನೋ ಹಿತಾನುಭವವಾದಂತೆ ಅರ್ಧ ನಿಮಲಿತ ನೇತ್ರದಿಂದ ಮಲಗಿರುತ್ತವೆ. ಈ ಥೆರಪಿ ನೋಡಲು ಬಹಳ ಮಜವೆನ್ನಿಸುತ್ತಿತ್ತು ನಮಗೆ. ಈ ರೀತಿ ಅದೆಷ್ಟು ಜೀವಿಗಳ ನಡುವೆ ಇಂಥ ಅನೌಪಚಾರಿಕ ಬಂಧ ಬೆಳೆದಿರುತ್ತದೆಯೋ ಬಲ್ಲವರಾರು?
ನಮ್ಮ ಸುತ್ತಲಿನ ಕಾಡಲ್ಲಿ ಮೊಲಗಳು ಬಹಳ ಇದ್ದವು. ಆದರೆ ಅವೆಂದೂ ಕಣ್ಣಿಗೆ ಕಾಣುತ್ತಿರಲಿಲ್ಲ. ರಾತ್ರಿ ಹೊತ್ತು ಗದ್ದೆಗೆ ಬಂದು ಮೆಂದು ರಾಶಿ ಹಿಕ್ಕೆ ಹಾಕಿ ಹೋಗುತ್ತಿದ್ದಾಗಲೇ ನಮಗೆ ಅವುಗಳ ಇರುವಿಕೆ ಗೊತ್ತಾಗುತ್ತಿತ್ತು. ಹಾಗೇ ಕಟ್ಟಿಗೆಗಾಗಿಯೋ, ದರಕಿಗಾಗಿಯೋ ಹೋದಾಗ ಪಳಕ್ಕನೆ ಕಾಣಿಸಿ ಮರೆಯಾಗುವ ಕಾನು ಕುರಿ. ಕಬ್ಬಿನ ಗದ್ದೆಗೆ ಸದಾ ದಾಳಿಯಿಡುವ ನರಿಗಳು ಇವೆಲ್ಲ ಸಾಕಷ್ಟು ಪ್ರಮಾಣದಲ್ಲಿ ನಮ್ಮ ಕಾಡಲ್ಲಿ ಇದ್ದವು.
ವೈವಿಧ್ಯಮಯ ಹಕ್ಕಿಗಳಿಗಂತೂ ಕೊರತೆಯೇ ಇರಲಿಲ್ಲ. ಬೆಳಗ್ಗೆ ಆಗತಾನೇ ಅರಳಿ ನಿಂತ ದಾಸವಾಳದ ಒಳಗೆ ಕೊಕ್ಕು ಇಳಿಸಿ, ಇಳಿಸಿ ಹೊರತೆಗೆಯುವ ನೀಲಿ, ಹಳದಿ, ಕೇಸರಿ, ಹಸಿರು, ಕೆಂಪು ಹೀಗೇ ಬಣ್ಣ ಬಣ್ಣದ ಕಿರು ಬೆರಳು ಗಾತ್ರದ ಪುಟಾಣಿ ಹಕ್ಕಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅವುಗಳ ಮೈ ಅಳತೆಗಿಂತಲೂ ಕೊಕ್ಕೇ ಉದ್ದವಾಗಿರುತ್ತಿತ್ತು.
ಇದಕ್ಕೂ ವೈವಿಧ್ಯಮಯ ಹಕ್ಕಿಗಳನ್ನು ನೋಡಬೇಕೆಂದರೆ, ಪೈರುಗಟ್ಟಿದ ಭತ್ತದ ಗದ್ದೆಗೆ ಬರಬೇಕು. ಭತ್ತ ಆಗತಾನೇ ಹಾಲುದುಂಬಿ ಮೈತುಂಬಿಕೊಂಡು ಉದ್ದುದ್ದ ತೆನೆಯಾಗಿ ತಲೆಯೆತ್ತಿ ನಿಲ್ಲುವ ವೇಳೆಯಲ್ಲಿ, ಕಾಡಲ್ಲಿರುವ ಪಕ್ಷಿ ಪ್ರಪಂಚಕ್ಕೆ ಅದ್ಯಾರು ಸಂದೇಶ ಮುಟ್ಟಿಸುತ್ತಾರೋ ದೇವರೇ ಬಲ್ಲ. ಹೊತ್ತು ಮೂಡುತ್ತಲೇ ಕಿಚ್ ಪಿಚ್ ಕಿಚ್ ಅಂತ ಗಲಾಟೆ ಹಾಕುತ್ತಲೇ ಹಿಂಡುಗಟ್ಟಿ ದಾಂಗುಡಿಯಿಟ್ಟು, ಒಂದೆಡೆಯಿಂದ ಭತ್ತದ ಕಾಳನ್ನು ಕಬಳಿಸ ತೊಡಗುತ್ತಿದ್ದವು. ಆಗೆಲ್ಲ ಡಬ್ಬಿ ಬಡಿಯುತ್ತ, ಹಾ, ಹಾ ಎಂದು ಕೆಟ್ಟ ದನಿ ತೆಗೆದು ಕೂಗುತ್ತ ಅವುಗಳನ್ನು ಓಡಿಸುವ ಫುಲ್ ಟೈಂ ಡ್ಯೂಟಿ ನಮ್ಮಂಥ ಮಕ್ಕಳದಾಗುತ್ತಿತ್ತು. ಎಷ್ಟೋ ಸಾರಿ ಅವುಗಳನ್ನು ಓಡಿಸಲು ಪಟಾಕಿಯನ್ನೇ ಹೊಡೆಯ ಬೇಕಾಗುತ್ತಿತ್ತು. ಹಾಲು ತುಂಬಿ ಕಾಳು ಗಟ್ಟಿಯಾಗುವ ತನಕ ಈ ಹಕ್ಕಿಗಳ ಕಾಟವಾದರೆ, ಬಲಿತ ಮೇಲೆ ಗಿಳಿಗಳ ಕಾಟ. ಉಳಿದ ಹಕ್ಕಿಗಳು ಒಂದೊಂದು ಕಾಳಾಗಿ ತಿಂದರೆ, ಈ ಗಿಳಗಳ ಹಿಂಡು ಇಡೀ ತೆನೆಯನ್ನೇ ಚಕ್ಕನೆ ಕೊಯಿದು ಹೊತ್ತೊಯ್ಯುತ್ತಿದ್ದವು. ಏನೇ ಅನ್ನಿ ಎಲ್ಲ ಹಕ್ಕಿಗಳಿಗಿಂತ ಈ ಗಿಳಿಗಳು ಚಂದ. ಬಾಳೇ ಗಿಳಿ, ಪಟ್ಟೆ ಗಿಳಿ, ಉದ್ದುದ್ದ ಬಾಲದಂತ ಕದಿರು ಗಿಳಿ ಇನ್ನೂ ಅದೆಷ್ಟೋ ವೈವಿಧ್ಯಮಯ ಗಿಳಿಗಳು ಶಿಳ್ಳೆ ಹೊಡೆದಂತೆ ಕೂಗುತ್ತ ಚೊಂಚು ಕುಣಿಸುತ್ತ, ವೈಯ್ಯಾರದಿಂದ ನಿತ್ಯ ಗದ್ದೆಗೆ ಬಂದು ದಾಂದಲೆ ಹಾಕುತ್ತಿದ್ದವು.

ದಿನಾ ಸೂರ್ಯೋದಯಕ್ಕೆ ಮೊದಲೇ “ಕ್ಕೊ ಕ್ಕೊ ವ್ವೋ ಕ್ಕೊ ಕ್ಕೊ” ಎಂದು ಕಿರುಚುತ್ತಿದ್ದ ಕಾಡು ಕೋಳಿಗಳು, ಹಗಲ ನೀರವದ ನಡುವೆ “ಕೊಟ್ ಕೊಟ್ ಕೊಟ್” ಎಂದು ತೀಕ್ಷ್ಣ ಸದ್ದು ಮಾಡುವ ಬೋಳು ನೆತ್ತಿಯ, ಉದ್ದ ಕೊಕ್ಕಿನ ಮರಕುಟಿಗ ಇವುಗಳು ಕಾಡಿನ ಏಕತಾನತೆಯನ್ನು ತೊಡೆಯುವ ಕೆಲಸಮಾಡುತ್ತಿದ್ದವೋ ಏನೋ.
ಇನ್ನೊಂದು ಅಪರೂಪದ ಹಕ್ಕಿ ಮುಳ್ಳಕ್ಕಿ.(ಚಿಪಕ್ಕಿ) ಇದನ್ನು ಒಮ್ಮೆಯೂ ನಾನು ನೋಡಿಲ್ಲ. ಇವು ಪೊದೆಗಳ ನಡುವೆ ತಗ್ಗು ತೆಗೆದು, ಮಣ್ಣಿನಡಿ ಅವಿತಿರುತ್ತಾವಂತೆ. ಇವಕ್ಕೆ ಎತ್ತರಕ್ಕೆ ಹಾರಲು ಬಾರದು. ಅದಕ್ಕೇ ವೈರಿಗಳು ಆಕ್ರಮಣ ಮಾಡಲು ಬಂದೊಡನೇ ಒಮ್ಮೆ ಮೈ ಜಾಡಿಸಿ, ಟುಂಯ್ ಟುಂಯ್ ಎಂದು ಆ ದಿಕ್ಕಿನತ್ತ ಬಾಣದಂತಹಾ ಮುಳ್ಳನ್ನು ಬಿಡುತ್ತದೆಯಂತೆ. ಕಾಡಲ್ಲಿ ಓಡಾಡುವಾಗ ಇಂಥ ಮುಳ್ಳುಗಳನ್ನು ನಾವು ತುಂಬ ಕುತೂಹಲದಿಂದ ಆಯ್ದು ತರುತ್ತಿದ್ದೆವು. ಅದೊಂಥರಾ ಹಳೆಯ ಕಾಲದಲ್ಲಿ ಮಸಿಯಲ್ಲಿ ಅದ್ದಿ ಬರೆಯುವ ಲೇಖನಿಯಂತೇ ಇರುತ್ತಿತ್ತು. ಇವು ಪಳ ಪಳ ಹೊಳೆಯುತ್ತ ಬಹಳ ಸುಂದರವಾಗಿರುತ್ತಿದ್ದರಿಂದ ನಾವು ಎಲ್ಲಿ ಸಿಕ್ಕಿದರೂ ಬಿಡುತ್ತಿರಲಿಲ್ಲ. ಆದರೆ, ಆಯಿ ಅದನ್ನು ಮನೆಯೊಳಗೆ ತರಲು ಬಿಡುತ್ತಿರಲಿಲ್ಲ. ಜೋರು ಮಾಡಿ ಬಿಸಾಡಲು ಹೇಳುತ್ತಿದ್ದಳು. ಯಾಕೋ ಗೊತ್ತಿಲ್ಲ.

ನಮ್ಮಲ್ಲಿ ತಂಪು ಜಾಸ್ತಿಯಾದ್ದರಿಂದ ಹಾವುಗಳು ಹೆಚ್ಚಾಗಿ ಇರಲಿಲ್ಲವೆನ್ನಿಸುತ್ತದೆ. ಒಂದು ನಿರುಪದ್ರವಿ ಹಾವಿನ ಬಗ್ಗೆ ಹೇಳಬೇಕು ಅದೆಂದರೆ ಹಸಿರು ಹಾವು. ಹಸಿರು ದಂಟಿಗೆ ಸುತ್ತಿಕೊಂಡು, ಸಪೂರ ಕೋಲಿನಂತೇ ಡೊಂಕಾಗಿ ನಿಂತು ಹುಳ ಹುಪ್ಪಡಿ ಹಿಡಿಯುವ ಈ ಹಾವನ್ನು ಗುರುತಿಸುವುದೇ ಕಷ್ಟ. ನಾವೇ ಅದೆಷ್ಟೋ ಸಲ, ಮುಳ್ಳಣ್ಣು ಕೊಯಿದು ಕೊಳ್ಳುವಾಗಲೋ, ಜಾಜಿ ಹೂ ಕೊಯ್ಯುವಾಗಲೋ ಟೊಂಗೆಯ ಜೊತೆಗೇ ಎಳೆದು ಬಿಡುತ್ತಿದ್ದೆವು. ಆಗ ಅದು ಗಾಬರಿಬಿದ್ದು, ಸರಕ್ಕನೆ ಕೆಳಗಿಳಿದು ಓಡುತ್ತಿತ್ತು. ಅದು ಹೋಗಿ ಎಷ್ಟು ಹೊತ್ತಿನ ತನಕ, ನಾವು ಜೀವ ಬಾಯಿಗೆ ಬಂದವರಂತೇ ಭಯದಿಂದ ಇಷ್ಟಗಲ ಕಣ್ಣುಮಾಡಿ ಮಾತು ಮರೆತು ನಿಂತಿರುತ್ತಿದ್ದೆವು!!
ಮುಂದುವರಿಯುವುದು…

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
