ಕಾಯಿಯ ಬೆನ್ನಿಗೆ ಉಪ್ಪು ಸವರಿ.

ಹೂವಾಗಿ ಅರಳಿ
ರೆಂಬೆ-ಕೊಂಬೆಯ ಮಡಿಲ
ಮಿಡಿಯಾಗಿ ಮರೆಯಾಗಿ ಬೆಳೆದು
ಕಿರಿ-ಹಿರಿಯ ಹಂಗ ತೊರೆದು
ರುಚಿಗೆ ತಕ್ಕಷ್ಟೇ ಬೆಲೆ ಕಟ್ಟಿ
ಹಸಿರು ಪತ್ತಲ ತೊಟ್ಟುವಳ; ಪೇಟೆ
ಹಳದಿ ರೇಷ್ಮೆ ಸೀರೆಗೆ
ಮ್ಯಾಚಿಂಗ್ ಮೋಹಕ್ಕೆ
ಮೋಸ್ಟ್ ವಾಂಟೆಡ್ ಕುಶಲತೆಗೆ
ಅಸಂಖ್ಯ ಕಣ್ಣುಗಳಿಂದ
ಉರಿದ ವಿದ್ಯುತ್ ಶಾಖಕ್ಕೆ
ಎಸೆದ ಸಿಡಿಲಿನ ಹೊಡೆತಕ್ಕೆ ಸಿಲುಕಿಸಿದೆ.

ಒಡನಾಡಿ ಹಕ್ಕಿ-ಪಕ್ಕಿಗಳ
ತಪ್ಪದ ಕಾಟ-ಕಾದಾಟ
ಬೀಸುವ ಗಾಳಿಗೆ, ಸುರಿವ ಮಳೆಗೆ
ಹೂವಂತ ಎಳೆ
ಮಿಡಿಮಾವು ಮೂರ್ಛೆ ಬಿದ್ದಿದೆ!

ಕತ್ತಲಲ್ಲಿ ಕುಂತು ಕತ್ತು ಮುದ್ದಿಸುವಾಗ
ತುಂಬು ಬೆಳಕ, ಕುಣಿಸು ಮನವ
ಕರುಣಿಸು ಘಮವ, ಸಡಿಲಿಸು ಎದೆಯ
ಮೋಹಕತೆಯಲ್ಲಿ ಮುಳುಗಿಸು
ಕೋಮಲತೆಯ ಬೆವರು ಸುರಿಸಿ
ಗಂಧ ಹರಿಸಿ, ಸ್ಪರ್ಶದ ಕಿಡಿ ಹೊತ್ತಿಸುವ
ಹೊತ್ತು ಆಘ್ರಾಣಿಸದವರಾರಿಹರು?

ಎಲ್ಲಾ ವಸಂತದ ರಸವೋ?
ತಿಂಗಳ ಕೆಂಪು ಹುಣ್ಣಿಮೆಯ
ಹರಿಯುವ ಚಂದಿರನ ದಿನ?
ಚಿಗುರು ಹೊತ್ತ ಸಹೋದರಿಗೂ
ನಿನ್ನ ಕಾಡುವ, ರುಚಿ ನೋಡುವ ಚಪಲ!

ಹಗಲಿನ ನಶೆಗೂ
ಕಾಯಿಯ ಬೆನ್ನಿಗೆ ಉಪ್ಪು ಸವರಿ
ಆಶ್ವಾದಿಸುವ ವಾಹಕತೆಗೆ,
ಮತ್ತೆರಿಸುವ ಬಗೆಗೆ
ಪರಿಮಳ ಬೀರಿ ಎಲ್ಲರ ಗಮನ ಹೀರಿ
ಸೆಳೆಯುವ ನೀನು
ಲೋಹವೋ?
ಅಲೋಹವೋ?
ಯಾರ ಕೇಳಿ ಅಪಹಾಸ್ಯಕ್ಕೆ ಸಿಲುಕಲಿ?

ಬೆನ್ನ ಹುರಿಯ ಹಗ್ಗದ ಹಿಗ್ಗುವ ನಾರೆ?
ಆಳದ ಶೂನ್ಯದ ತಡಕಾಟಕ್ಕೆ
ಆಳವಾಗಿ ಹರಿತವಾಗಿ ಝೇಂಕರಿಸಿ,
ಹಲ್ಲು ಕಚ್ಚಿ
ತುಟಿ ಪಕಳೆಗಳು ನಾಚಿಕೆ ಬಿಟ್ಟು,
ಚೀಪಿ ಚಪ್ಪರಿಸಿ
ಹಣ್ಣೆದೆಯ ಮಧುಪಾನದಲ್ಲಿ
ಮುಳುಗಿ, ಮುಗುಚಿ
ನಿತ್ರಾಣ ಮರೆಮಾಚಿ
ಹಣ್ಣೋ? ಕಾಯೋ? ಕಾಯದೆ
ಬೆವರು ಹರಿಸಿ, ಜೊಲ್ಲು ಸುರಿಸಿ
ಪ್ರವಾಹ ಭೀತಿಗೆ ನಲುಕದೆ
ಬಿತ್ತುವ ನೆಪದಲ್ಲಿ ಕೊನೆಗೆ ದೊರೆತ
ಅಮಾಯಕ ಬೀಜ ಎಕ್ಸ್ ? ಇಲ್ಲ ವಾಯ್?

ಪ್ಲೀಜ್…
ಹೇಳು, ಸದ್ದೇ ಸದ್ದು ಮಾಡದಿರು!

ಸುಮಿತ್ ಮೇತ್ರಿ ಮೂಲತಃ ವಿಜಯಪುರ ಜಿಲ್ಲೆಯ ಹಲಸಂಗಿಯವರು.
ಕವಿತೆ/ಲಹರಿ/ಕಥೆ/ಪ್ರಬಂಧಗಳನ್ನು ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ.
ಸದ್ಯ ರಾಯಚೂರು ಜಿಲ್ಲೆಯಲ್ಲಿ   ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)