ಪ್ರಹಸನ

ಎಂದಾದರೂ ನಿಮಗನಿಸಿತ್ತೆ?
ಜಗತ್ತಿಗೆ ಸಾಕ್ಷಿ ಕೊಡಬೇಕಾ-
ಗಬಹುದೆಂದು;
ನೀವು ಬಯಸಿದ್ದಿರಿ- ಬದುಕಲು-
ನಿಮ್ಮದೇ ಬದುಕನ್ನು- ಎಂದು..

ಲಕ್ಷ- ಕೋಟಿ ಜನ ಉಸಿರಾಡಿದ
ಗಾಳಿಯೇ ಇರಬಹುದು;
ಆದರೆ- ಶ್ವಾಸಕೋಶದೊಳಗೆ ಹರಿದಾಡಿದ
ಉಸಿರು- ನಿಮ್ಮದೇ-
ಆಗಿದೆ ಎಂದು..

ಹೂವು-ಹಕ್ಕಿಗಳೆಲ್ಲ ವಿಶ್ವಾತ್ಮನ ಸೃಷ್ಟಿ-
ಯೇ ಇರಬಹುದು;
ಆದರೆ- ಅವು ತಂದ ಮುದ, ಹಿಗ್ಗು
ನಿಮ್ಮೊಳಗ ಅರಳಿಸುವುದೆಂದು..

ಒಡಂಬಡಿಕೆಗಳ ಕಂತೆ-ಕಂತೆ
ಕಂತಿನಲ್ಲೂ ಸಿಗಬಹುದೆಲ್ಲೆಲ್ಲೂ;
ಆದರೆ- ಕ್ಷಣಭಂಗುರತೆಯ ತಿರುಳ
ನೀವು ಹೀರಿಕೊಂಡಿರುವಿರೆಂದು..

ಏನು, ಎತ್ತ, ಏಕೆ… ಪ್ರಶ್ನೆಗಳೇ
ಕಾಡಬಹುದು ದನಿಯಾಗಿ;
ಆದರೆ- ನಿಗೂಢತೆಯ ಒಡಪು
ಬಿಡಿಸಬೇಕಾದವರು-
ನೀವೇ- ಎಂದು..

ಹುಸಿನಗುವಿನ ಕೊಸರಾಟಕೆ
ಬುದ್ಬುದದ ಜೀವರಾಶಿ
ಬೀಳುತೇಳುವ ಪ್ರಹಸನ!

ಅನಿಸಿತ್ತೆ ನಿಮಗೆ- ಎಂದಾದರೂ?
ಒಂದಲ್ಲ- ಒಂದು ದಿನ-
ಸ್ವಸ್ತಿವಾಚನದಭಯದಾನ-
ಒದಗೀತು ಅಯಾಚಿತ- ಎಂದು..

ಅಥವಾ,

ಒಂದು ಕವಿತೆ ಮೂಡಿದ ಕ್ಷಣ!-
ಮೀರಬಲ್ಲಿರಿ ನೀವು ಎಲ್ಲ-
ಎಲ್ಲವನ್ನೂ;
ಸಾಕ್ಷಿ-ಪುರಾವೆಗಳ-
ಹಂಗು-ಗೊಡವೆಯನ್ನೂ!!- ಎಂದು.