ಆಗಿನ್ನೂ ಶವ ವಾಹನ ಇರಲಿಲ್ಲ. ಬದಲಿಗೆ ಟ್ರಾಕ್ಟರ್, ಎತ್ತಿನ ಗಾಡಿ ಅಥವಾ ಜಟಕಾ ಗಾಡಿಯನ್ನು ಕೆಲವರು ಉಪಯೋಗಿಸಿದರೆ ಮತ್ತೆ ಸುಮಾರು ಜನ ಹೆಣ ಹೊತ್ತು ಹೋಗುವರು. ನಮ್ಮ ಕಾಲೋನಿಯ ಕೆಲವು ಕಾರ್ಮಿಕರು ಅವರದ್ದೇ ಒಂದು ಗುಂಪು ಮಾಡಿಕೊಂಡು ಯಾವುದಾದರೂ ಸಾವಿನ ಸುದ್ದಿ ಬಂದಕೂಡಲೇ ಶವ ಸಾಗಿಸಲು ಹೆಗಲು ಕೊಡಲು ಸಿದ್ಧರಿರುತ್ತಿದ್ದರು. ಚಟ್ಟ ಕಟ್ಟುವ ಸ್ಪೆಷಲಿಸ್ಟ್‌ಗಳೂ ಸಹ ಇದ್ದರು. ಆಗಿನ್ನೂ ಇವು ಯಾವುವೂ ಔಟ್ ಸೋರ್ಸ್ ಆಗಿರಲಿಲ್ಲ ಮತ್ತು ಈವೆಂಟ್ ಮ್ಯಾನೇಜ್ಜೆಮೆಂಟ್ ಇನ್ನೂ ಹುಟ್ಟಿರಲಿಲ್ಲ. ಇವೆಲ್ಲ ಒಂದು ಸೋಷಿಯಲ್ ಸರ್ವಿಸು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

ಹದಿನೆಂಟನೆ ಸಂಚಿಕೆಯಲ್ಲಿ ಬಳ್ಳಾರಿಯಲ್ಲಿ ಗೆಳೆಯ ಭೋಗೇಂದ್ರ ಅವರ ಮದುವೆಗೆ ಹೋಗಿದ್ದ ಸಂಗತಿ ನೆನೆದಿದ್ದೆ ಮತ್ತು ಅಲ್ಲಿನ ಘನ ಘೋರ ಬಿಸಿಲ ಬಗ್ಗೆ ಹೇಳಿದ್ದೆ. ಬಿಸಿಲಿನ ಪ್ರಖರತೆ ಹೇಗಿತ್ತು ಅಂದರೆ ಇಲ್ಲಿ ಜನ ಹೇಗೆ ವಾಸ ಮಾಡುತ್ತಾರೆ ಅನಿಸಿತ್ತು. ಇಲ್ಲಿಂದ ಅಂದರೆ ತಂಪಾದ ಏರ್ ಕಂಡೀಷನ್ ನಗರ ಬೆಂಗಳೂರಿನಿಂದ ಅಂತಹ ಸುಡುವ ಊರಿಗೆ ಕೆಲಸಕ್ಕೆ ಅಂತ ಬಂದವರು ಅದು ಹೇಗೆ ಜೀವನ ಹಿಡಿದುಕೊಂಡಿದ್ದಾರೆ ಅನಿಸಿತ್ತು. ಅಂತಹ ಕಡೆ ಸಹ ಒಬ್ಬ ಸ್ನೇಹಿತ ದುಡಿಯುತ್ತಿದ್ದ. ನಟರಾಜ್ ತಮ್ಮ ಪದ್ಮನಾಭ (ಪದ್ದಿ)ಆಗ ಅಲ್ಲೇ ರಾಜ್ಯ ಸರ್ಕಾರದ ಕೆಲಸದಲ್ಲಿದ್ದ, ಮತ್ತು ಒಂದು ಮನೆ ಸಹ ಮಾಡಿದ್ದ. ಅವನ ಮನೆಯಲ್ಲಿ ನಾವು ಉಳಿದುಕೊಂಡಿದ್ದೆವು. (ಇದು ಮರೆತ ಒಂದು ಸಂಗತಿ). ಅಂದರೆ ಮಾನವ ಎಂತಹ ಪರಿಸರಕ್ಕೆ ಬೇಕಾದರೂ ಒಗ್ಗಿಕೊಳ್ಳುತ್ತಾನೆ ಎಂದು ನಾವು ಹಿಂದೆ ಎಂದೋ ಓದಿದ ಪಾಠ ನಿಜವಾಗಿತ್ತು. ಪದ್ದಿ ಈಗೊಂದು ಎರಡು ಮೂರು ವರ್ಷದ ಹಿಂದೆ ದೇವರ ಪಾದ ಸೇರಿದ.

ಶಿವಗಂಗೆ ಬೆಟ್ಟ ಹತ್ತಿದ ಪ್ರಸಂಗ ವಿವರಿಸಿದೆ. ಇನ್ನೊಂದು ಹತ್ತು ಹದಿನೈದು ವರ್ಷ ಬದುಕಿದ್ದರೆ ಮತ್ತೊಮ್ಮೆ ಬೆಟ್ಟ ಹತ್ತುವ ನನ್ನ ಆಸೆ ಬಗ್ಗೆ ಹೇಳಿದ್ದೆ. ಬೆಟ್ಟ ಹತ್ತುವಾದಲ್ಲಿ, ಗೆ. ಹರಿಸರ್ವೋತ್ತಮ (ಈಗ ೭೦ ಪ್ಲಸ್)ನನ್ನ ಜತೆ ಬರುವುದಾಗಿ ಪ್ರತಿಕ್ರಿಯಿಸಿದ! ಜತೆಗೆ ಬರುವ ಗೆಳೆಯರು ಇದ್ದರೆ ಅದೆಲ್ಲಿಗೆ ಬೇಕಾದರೂ ಹೋಗಬಹುದು!

ಉಲ್ಲಂ ಉರಿವುದಯ್ಯಾ…
ಉಲ್ಲಂ ಉರಿವುದಯ್ಯಾ, ಮುರುಘಾ ಉನ್ನೆ ಕಾಣಾ ದೇ
ಉಲ್ಲಂ ಉರಿವುದಯ್ಯಾ ಉಲ್ಲಂ ಉರಿವುದು…..

ಈ ಚರಣ ದೊಂದಿಗೆ ಶುರು ಆಗುವ ಈ ಹಾಡಿಗೂ ನನಗೂ ಸುಮಾರು ಏಳು ದಶಕಗಳ ನಂಟು. ಮೊದಲ ಸಲ ಈ ಹಾಡು ಎಲ್ಲಿ ಕೇಳಿದೆ ಮತ್ತು ಯಾರು ಹಾಡಿದ್ದರು ಎನ್ನುವುದೂ ಸಹ ಇನ್ನೂ ತಲೆಯಲ್ಲಿ ಭದ್ರವಾಗಿ ಕೂತಿದೆ.

೫೭ರ ಸುಮಾರಿಗೆ ರಾಜಾಜಿನಗರ ಬಂದು ಸೇರಿಕೊಂಡೆವು ಅಂತ ಹೇಳಿದ್ದೆ; ನೆನೆದುಕೊಳ್ಳಿ. ಆಗ ಬಂದು ನಾವು ಬೆಂಗಳೂರು ಜೀವನ ಆರಂಭಿಸಿದ್ದು hmt ಕ್ವಾರ್ಟರ್ಸ್ ನಲ್ಲಿ. citb ಅವರು ಹೈದರಾಬಾದ್ ಮತ್ತು ಕಾಶ್ಮೀರಿ ನಿರಾಶ್ರಿತರಿಗೆ ಅಂತ ರಾಜಾಜಿನಗರದಲ್ಲಿ ಈ ವಸತಿ ಗೃಹಗಳನ್ನು ನಿರ್ಮಿಸಿದ್ದರು. ಇಂತಹ ಮನೆ ನಿರಾಶ್ರಿತರಿಗೆ ಸಂಪೂರ್ಣ ಹೊಂದಿಕೆ ಆಗಬಹುದು ಎನ್ನುವ ನಂಬಿಕೆ ಸರ್ಕಾರ ಹೊಂದಿತ್ತು. ನಿರಾಶ್ರಿತರ ನಾಯಕರು ಕೆಲವರು ಬಂದು ಮನೆಗಳನ್ನು ನೋಡಿದರು. ಇಂತಹ ಮನೆಗಳನ್ನು ನಮಗೆ ಕಟ್ಟಿಸಿದೆ ಸರ್ಕಾರ ಎನ್ನುವ ಕೃತಜ್ಞತೆ ಮತ್ತು ಮೆಚ್ಚುಗೆ ಬದಲು ಕಠಿಣ ಪ್ರತಿರೋಧ ತೋರಿದರು. ಇಷ್ಟು ಕೆಟ್ಟದಾಗಿರುವ ನಮ್ಮ ಜಾನುವಾರುಗಳನ್ನು ಸಹ ಇರಿಸಲು ಯೋಗ್ಯವಲ್ಲದ ಕೊಟ್ಟಿಗೆಗಳನ್ನು ನಮಗೆ ವಾಸಕ್ಕೆ ಅಂತ ಕಟ್ಟಿದ್ದೀರಿ… ಎನ್ನುವ ಧಾಟಿಯಲ್ಲಿ ಅವರ ಮಾತು ಹೊರಟಿತು. ಈ ಮನೆಗಳು ನಮಗೆ ಒಪ್ಪಿತವಿಲ್ಲ ಎಂದು ಮನೆ ನಿರಾಕರಿಸಿದರು. ಸರ್ಕಾರಕ್ಕೆ ಇದು ದೊಡ್ಡ ಮುಜುಗರದ ಸಂಗತಿ ಆಯಿತು.

ಐವತ್ತರ ದಶಕದ ಆರಂಭದಲ್ಲಿ ಹಲವು ಸಾರ್ವಜನಿಕ ಉದ್ದಿಮೆಗಳು ಕೇಂದ್ರ ಸರ್ಕಾರದ ಮೂಲಕ ಬೆಂಗಳೂರಿನಲ್ಲಿ ಆರಂಭಗೊಂಡಿದ್ದವು ಮತ್ತು ಪ್ರತಿಯೊಂದು ಉದ್ದಿಮೆಯೂ ಐನೂರು ಸಾವಿರ ಎಕರೆ ಮತ್ತು ಅದಕ್ಕೂ ಹೆಚ್ಚಿನ ಜಾಗವನ್ನು ಸರ್ಕಾರದಿಂದ ಪಡೆದಿದ್ದವು. (ಆಗ ಅಷ್ಟು ವಿಸ್ತಾರ ಜಾಗ ಹೊಂದಿದ್ದ ಉದ್ದಿಮೆಗಳು ಅವಸಾನದ ಅಂಚಿಗೆ ಬಂದಾಗ ನಮ್ಮ ರಾಜಕಾರಣಿಗಳು ಈ ಜಾಗಗಳನ್ನು ತುಂಬಾ ಕಡಿಮೆ ರೊಕ್ಕಕ್ಕೆ ಕಬಲಾಯಿಸಿದರು. ನಮ್ಮ hmt ಒಂದು ದೊಡ್ಡ ಉದಾಹರಣೆ, ಅಲ್ಲಿನ ಜಾಗಕ್ಕೆ ರಾಜಕೀಯದವರು ಈಗಲೂ ಜೊಲ್ಲು ಹರಿಸುತ್ತಾರೆ). ತಮ್ಮ ತಮ್ಮ ಕಾರ್ಖಾನೆ ಆಸುಪಾಸಿನಲ್ಲೇ ತಮ್ಮ ಜಾಗದಲ್ಲೇ ಕಾರ್ಮಿಕರಿಗೆ ಮನೆ ನಿರ್ಮಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದವು. ಈ ಹಂತದಲ್ಲಿ ನಿರಾಶ್ರಿತರು ಅವರಿಗಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ತಿರಸ್ಕರಿಸಿದ್ದು. ಸರ್ಕಾರದ ಹಿರಿಯ ತಲೆಗಳು ಸೇರಿದವು. ಅವರ ಮುಖ್ಯ ಸಮಸ್ಯೆ ಎಂದರೆ ಅಷ್ಟೊಂದು ಹಣ ಸುರಿದು ಕಟ್ಟಿದ ಮನೆಗಳ ಸದುಪಯೋಗ ಹೇಗೆ ಮಾಡುವುದು ಎಂದು. ಹಿರಿ ತಲೆಗಳು ಒಂದು ಪರಿಹಾರ ಹುಡುಕಿದವು. ಕಾರ್ಖಾನೆ ಕಾರ್ಮಿಕರಿಗೆ ಹೀಗೆ ನಿರ್ಮಿಸಿರುವ ಮನೆಗಳನ್ನು ನೀಡುವುದು ಮತ್ತು ಇತರ ನಾಗರಿಕ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವುದು. ಮನೆಗಳನ್ನು ಕಾರ್ಖಾನೆ ಆಡಳಿತಕ್ಕೆ ಕೊಟ್ಟು ಅವರೇ ಅದರ ಹಂಚಿಕೆ ಮತ್ತಿತರ ನಿಯಮ ರೂಪಿಸುವುದು…. ಹೀಗೆ ಈ ಯೋಜನೆ ಅಡಿಯಲ್ಲಿ ಕಾರ್ಖಾನೆಗಳು ಹಲವಾರು ಮನೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡವು. ಅವು ನೌಕರರಿಗೆ ಬಾಡಿಗೆ ರೂಪದಲ್ಲಿ ಅಲಾಟ್ ಆಯಿತು. ಆಗ ಮುಂಗಡ ಸಹ ಇಲ್ಲದೇ ಹೊಸ ಮನೆ ವಾಸಕ್ಕೆ ಸಿಕ್ಕಿದ್ದು ನೌಕರರ ಆರ್ಥಿಕ ಹೊರೆ ಇಳಿಸಿತು. ಹೀಗಾಗಿ hmt, hal, iti ಮುಂತಾದ ಸಾರ್ವಜನಿಕ ಉದ್ದಿಮೆಗಳ ನೌಕರರು ಇಲ್ಲಿನ ನಿವಾಸಿಗಳಾದರು.

ಈ ಸಾರ್ವಜನಿಕ ಉದ್ದಿಮೆಗಳು ಸ್ವಲ್ಪ ಸಮಯ ನೌಕರರಿಗಾಗಿ ಮನೆ ನಿರ್ಮಾಣ ಸ್ಥಗಿತ ಮಾಡಿತು. ಹೀಗೆ ಬೆಂಗಳೂರು ಈಗಿನ ಮಟ್ಟಕ್ಕೆ ಬೆಳೆಯಲು ಈ ಸಾರ್ವಜನಿಕ ಉದ್ದಿಮೆಗಳು ಸಹ ತಮ್ಮ ಕೊಡುಗೆಯನ್ನು ನೀಡಿದ್ದವು. ಇಂತಹ ಒಂದು ಮನೆ ನಮ್ಮ ದೊಡ್ಡ ಅಣ್ಣನಿಗೆ ಅಲಾಟ್ ಆಗಿದ್ದು ನಮ್ಮ ಪುರ ಪ್ರವೇಶ ಆಯಿತು! ಮನೆ ಒಂದು ರೂಮು ಒಂದು ಹಾಲು ಅಡಿಗೆ ಮನೆ ಬಚ್ಚಲು ಕಕ್ಕಸು ಈ ಸೌಕರ್ಯ ಹೊಂದಿದ್ದು ಒಂದು ಪುಟ್ಟ ಸಂಸಾರಕ್ಕೆ ಹೇಳಿ ಮಾಡಿಸಿದ್ದು. ಪುಟ್ಟ ಸಂಸಾರ ಅಂದರೆ ಗಂಡ ಹೆಂಡತಿ ಒಂದು ಎರಡು ಪುಟ್ಟ ಕೂಸು. ನಾವು ಮೂರು ಕಿರಿಯರು, ನಾಲ್ಕು ಹಿರಿಯರು ನಮ್ಮ ಬೆಂಗಳೂರು ಪಯಣ ಆರಂಭ ಮಾಡಿದೆವು. ಇದು ನಮ್ಮ ಪುರಪ್ರವೇಶ! ರಾಘವಾಂಕನ ಕಾವ್ಯದಲ್ಲಿ ಪುರದ ಪುಣ್ಯಂ ಪುರುಷ ರೂಪಿಂದ ಪೋಯಿತು ಎನ್ನುವ ಸಾಲು ಪುರ ಎಂದು ಟಂಕಿಸಿದಾಗ ನೆನಪಾಯಿತು. ಅಲ್ಲಿನ ಪ್ರಸಂಗ ಸಂಪೂರ್ಣ ಬೇರೆ, ಹೋಲಿಸುವ ಯಾವ ಗುಣವೂ ಇಲ್ಲ. ಅದು ಬಿಡಿ.

ಇಲ್ಲಿ ಬಂದು ಸೇರಿದ ಆರು ಏಳು ತಿಂಗಳಿಗೆ ಸರಿ ರಾತ್ರಿ ಹೊತ್ತಿನಲ್ಲಿ ಜೋರಾಗಿ ತಬಲಾ ಹಾರ್ಮೋನಿಯಂ ಶಬ್ದ ಕೇಳಿಸಿ ಎಚ್ಚರ ಆಯಿತು. ಆಗಲೇ ಮನೆಯವರು ಎದ್ದು ಕುಳಿತಿದ್ದರು. ಅವರ ಜತೆಗೆ ಆರು ವರ್ಷದ ನಾನೂ ಸಹ ಜಾಯಿನ್ ಆದೆ. ಎದ್ದು ಕೂತವರು ಆಡುತ್ತಿದ್ದ ಮಾತಿನಿಂದ ನಮ್ಮ ಎದುರು ರಸ್ತೆಯಲ್ಲಿ ಯಾರೋ ಪರಲೋಕ ವಾಸಿಯಾಗಿದ್ದಾರೆ ಎಂದು ತಿಳಿಯಿತು. ಪೂರ್ತಿ ಮಾತಿನ ಅರ್ಥ ಆಗಲಿಲ್ಲ. ಮಾರನೇ ದಿವಸ ಪರಲೋಕ ವಾಸಿ ಅಂದರೇನು ಅಂತ ನನ್ನ ಅಣ್ಣನನ್ನು ಕೇಳಿದೆ. ಅವನು ನನಗಿಂತ ಎರಡು ವರ್ಷ ದೊಡ್ಡವನು ಮತ್ತು ನನಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ಅವನು ತಿಳಿದುಕೊಂಡಿದ್ದ. ಪರಲೋಕ ವಾಸಿ ಅಂದರೆ ಸತ್ತು ಹೋಗೋದು ಅಂತ ವಿವರಿಸಿದ. ಎದುರು ರಸ್ತೆ ನಾಲ್ಕನೇ ಮನೆಯವರ ಅಜ್ಜ ಸತ್ತರು ಎಂದು ವಿವರಿಸಿದ. ಮುಂದಿನ ಕತೆಗೆ ಮೊದಲು ಕೊಂಚ ನಮ್ಮ ರಸ್ತೆಯ ಟೋಪೋಗ್ರಫಿ ಬಗ್ಗೆ ಹೇಳಬೇಕು.

ನಮ್ಮದು ಉತ್ತರ to ದಕ್ಷಿಣದ ರಸ್ತೆ. ನಮ್ಮ ಎದುರು ಪೂರ್ವ to ಪಶ್ಚಿಮ ರಸ್ತೆ. ಅಂದರೆ ನಮ್ಮ ರಸ್ತೆಗೆ ಪರ್ಪೆಂಡಿಕೂಲರ್ ಆಗಿ ಒಂದು ರಸ್ತೆ, ಅದರ ಹಿಂದೆ ಎರಡು ರಸ್ತೆಗಳು ಮತ್ತು ಮುಂದೆ ಎರಡು ರಸ್ತೆಗಳು ಎದುರು ರಸ್ತೆಯ ಮನೆಗಳ ಹಿಂಭಾಗ ನಮಗೆ ಎದುರು ಅಂದರೆ ಅವರ ಹಿತ್ತಲು ನಮಗೆ ಎದುರು. ಅವೂ ಸಹ ಜೋಡಿ ಮನೆಗಳು ಮತ್ತು ಅವುಗಳಲ್ಲಿ ಮುಖ್ಯವಾಗಿ ಬಿನ್ನಿಮಿಲ್ ಮತ್ತು ರಾಜಾ ಮಿಲ್ ನೌಕರರ ವಾಸ. ಅದೇತಕ್ಕೊ ಈ ನಾಲ್ಕು ರಸ್ತೆಯಲ್ಲಿ ಮಿಲ್ ನೌಕರರೇ ಇದ್ದದ್ದು. ಬಿನ್ನೀಮಿಲ್ ಆಗ ಒಳ್ಳೊಳ್ಳೆಯ ಬಟ್ಟೆ ತಯಾರಿಸುತ್ತಿದ್ದರೆ ರಾಜಾಮಿಲ್ ಪ್ರಾಡಕ್ಟ್ ಸಹ ಅದೇ ಆದರೂ ಮಾರುಕಟ್ಟೆಯಲ್ಲಿ ಬಿನ್ನಿಮಿಲ್ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಇತ್ತು ಎಂದು ದೊಡ್ಡವರು ಆಡುವ ಮಾತಿನಿಂದ ತಿಳಿದಿದ್ದೆ. ತಮಾಶೆಗೆ ಬನ್ನೂರು ಕುರಿ ಅಂತ ಬಿನ್ನಿಮಿಲ್‌ನವರಿಗೆ ಕೂಗುತ್ತಿದ್ದರು. ಬಿನ್ನಿಮಿಲ್ ಲೋಗೋ ಆಗ ಉಣ್ಣೆ ತುಪ್ಪಳ ತುಂಬಿದ ಕುರಿಯ ಬೊಂಬೆ. ಅದೇನು ಕಾರಣವೋ ತಿಳಿಯದು ಮುಂದಿನ ರಸ್ತೆಗಳಲ್ಲಿ ತಮಿಳರಿಗೆ ಮತ್ತು ತೆಲುಗರಿಗೆ ಆದ್ಯತೆ ಇತ್ತು.

ನಾವಿದ್ದ ಕಡೆ ಮನೆ ಅಲಾಟ್‌ಮೆಂಟಿಗೆ ಅದೇನೋ ವೈಜ್ಞಾನಿಕ ಚಿಂತನೆ ಹಾಕಿದ್ದರಂತೆ. ಅದರ ಪ್ರಕಾರ ಮೊದಲನೇ ಮನೆ ಲಿಂಗಾಯಿತರು, ಎರಡನೇದು ಕ್ರಿಶ್ಚಿಯನ್ಸು, ಮೂರನೇ ಮನೆ ಬ್ರಾಹ್ಮಿನ್ಸ್‌, ನಾಲ್ಕನೇದು ಮುಸ್ಲಿಮರು, ಐದನೆದು ಲಿಂಗಾಯತರು, ಆರನೇ ಮನೆ ಕುರುಬರು…. ಹೀಗೆ. ಅಂದರೆ ಒಂದೇ ಜಾತಿ ಅವರು ಅಕ್ಕ ಪಕ್ಕ ಇರಲಿಲ್ಲ…! ಜಾತ್ಯಾತೀತ ತತ್ವ ಪಾಲನೆಗೆ ಈ ಹಾದಿ ಅನುಸರಿಸಿದ್ದಾರೆ ಎಂದು ಹೇಳುವುದು ಕೇಳಿದ್ದೆ. ಆದರೆ ಈ ಅಲ್ಲೊಟ್ಮೆಂಟ್‌ನಲ್ಲಿ ಅವರ ಅರಿವಿಗೆ ಮೀರಿ ಲಿಂಗಾಯತರ ಮನೆ ಹಿಂದೆ ಲಿಂಗಾಯತರು, ಬ್ರಾಹ್ಮಣರ ಮನೆ ಹಿಂದೆ ಬ್ರಾಮಿನ್ಸ್ ಬಂದು ಬಿಟ್ಟಿದ್ದರು! ಮಿಲ್ ಕೆಲಸಗಾರರು ತಮಿಳು ತೆಲುಗು ಭಾಷಿಗರು. ಎದುರು ಹಿತ್ತಲಿನ ಎಡಭಾಗದಲ್ಲಿ ವೆಂಕಟಾಚಲ, ಅವರ ಹಿಂಭಾಗ ಗೋವಿಂದಪ್ಪ ಮತ್ತು ಹಾಲಮ್ಮ. ವೆಂಕಟಾಚಲ ಅವರ ಮನೆ ಪಕ್ಕ ಮುನಿರತ್ನಂ ಅಂತ ಕಮ್ಯುನಿಸ್ಟ್ ಲೀಡರ್, ಅವರದ್ದು ಮಿಲ್ ಸಂಘಟನೆಯ ಕಾರ್ಯ. ಇವರ ಮಕ್ಕಳು ಮಹಾಲಿಂಗ, ಕರುಣಾನಿಧಿ, ಅಂಬಳಗ ಅಂತ ನನ್ನ ಸ್ನೇಹಿತರು. ಹಾಲಮ್ಮ ಗೋವಿಂದಪ್ಪ ಮನೆ ಎದುರು ಆನಂದ, ಕೃಷ್ಣಮೂರ್ತಿ ಶ್ರೀನಿವಾಸಮೂರ್ತಿ ಅಂತ ಮೂರು ಹುಡುಗರು. ಅವರ ತಂದೆ ಹೆಸರು ನೆನಪಿಲ್ಲ. ಆನಂದ ಕನ್ನಡ ಚಳವಳಿಯಲ್ಲಿ ವಾಟಾಳ್ ನಾಗರಾಜರ ಬಲಗೈ. ಕೃಷ್ಣಮೂರ್ತಿ ಪ್ರೆಸ್‌ನಲ್ಲಿ ಕೆಲಸ, ಶ್ರೀನಿವಾಸ ಮೂರ್ತಿ ಓದಿನ ನಂತರ ಕಾಲೇಜಿನಲ್ಲಿ ಮೇಷ್ಟರು. ಇನ್ನ ನಮ್ಮ ಸುತ್ತಮುತ್ತ ಇದ್ದ ಪುಟ್ಟ ಮಕ್ಕಳು ಅಂದರೆ ನಾಗರಾಜ್, ಕುಟ್ಟಿ, ರಾಜೇಂದ್ರ, ಅಮೀನ್, ಹರಿ, ರಾಮು, ಮುರುಗದಾಸನ್, ಕಲ್ಯಾಣ್ ಸುಂದರ ಅಂತ….. ಹೀಗೆ, ನಮ್ಮ ಹುಡುಗರ ಸ್ನೇಹಿತರು.

ಒಂದು ರಾತ್ರಿ ಸರಿಹೊತ್ತಿನಲ್ಲಿ ತಬಲಾ, ಹಾರ್ಮೋನಿಯಂ ಶಬ್ದಗಳ ನಡುವೆ ಒಂದು ಗಂಡು ಧ್ವನಿ ಜೋರಾಗಿ ಕೇಳಿಸಿತು. ಅದು ಯಾವುದೋ ಹಾಡು. ಮೊದಮೊದಲಿಗೆ ಅರ್ಥ ಆಗಲಿಲ್ಲ. ಎದ್ದು ಕೂತೆ. ವಿಚಿತ್ರ ದನಿಯಲ್ಲಿ ಉಲ್ಲಂ ಉರಿವ್ ದೂ ಎಂದು ಹಾಡು, ಮತ್ತೆ ಮತ್ತೆ ಮತ್ತೆ ಅದೇ ಹಾಡು. ಅದೇನು ಅಂತ ಆಚೆ ಹೋಗಿ ನೋಡಬೇಕೆಂಬ ಕುತೂಹಲ. ಆಗಲೇ ಎದ್ದು ಕಂಬಳಿ ಸುತ್ತಿಕೊಂಡು ಕೂತಿದ್ದ ಅಮ್ಮ ಅಣ್ಣಂದಿರು ಸುಮ್ನೆ ಬಿದ್ಕೊ ಅಂತ ಗದರಿದರು. ಏನು ಹಾಡು ಬರ್ತಿದೆಯಲ್ಲಾ … ಅಂದೆ.
ಯಾರೋ ಸತ್ತಿದ್ದಾರೆ.. ಅಂತ ಉತ್ತರ ಬಂತು.

ಉಲ್ಲಂ ಉರಿವುದಯ್ಯಾ, ಮುರುಘಾ ಉನ್ನೆ ಕಾಣಾ ದೇ ಹಾಡು ವಿವಿಧ ರಾಗದಲ್ಲಿ, ವಿವಿಧ ಸ್ತರದಲ್ಲಿ, ವಿವಿಧ ಆಲಾಪನೆಯಲ್ಲಿ ಇಡೀ ರಾತ್ರಿ ಈ ಹಾಡು ಕೇಳಿತು. ಹಾಡು ಹಾಡಿದವರು ವೆಂಕಟಾಚಲ ಅಂತ ಗೊತ್ತಾಯಿತು ಮತ್ತು ಇಂತಹ ಸಾವಿನ ಮನೆಯಲ್ಲಿ ಹಾಡಲು ವೆಂಕಟಾಚಲ ಯಾವಾಗಲೂ ಮುಂದು ಎಂದು ಕಾಲಾನಂತರ ತಿಳಿಯಿತು. ಎದುರಿನ ನಾಲ್ಕು ರಸ್ತೆಯಲ್ಲಿ ಯಾವುದೇ ಮನೆಯಲ್ಲಿ ಈ ಹಾಡು ಕೇಳಿದರೆ ಅಲ್ಲಿ ಯಾವುದೋ ಸಾವು, ವೆಂಕಟಾಚಲ ಹಾಡ್ತಾ ಇದಾರೆ ಅಂತ ಖಚಿತ. ಈ ಹಾಡಿನ ಅರ್ಥ ನನಗೆ ಸುಮಾರು ವರ್ಷ ಗೊತ್ತೇ ಇರಲಿಲ್ಲ. ಸುಮಾರು ಹಿಂದಿ ತೆಲುಗು ಹಾಡುಗಳು ಅವುಗಳ ಮಾಧುರ್ಯದ ಕಾರಣದಿಂದಲೋ ಏನೋ ಆಕರ್ಷಿಸಿ ಬಿಡೋದು. ಅಂತಹ ಹಾಡು ತಲೆಯಲ್ಲಿ ಒಂದು ಕಡೆ ಭದ್ರವಾಗಿ ಕೂತು ಆಗಾಗ್ಗೆ ಹೊರಗೆ ಬರೋದು. ಈಗಲೂ ಸಹ ನನಗೆ ಹಿಂದಿ, ತಮಿಳ್, ತೆಲುಗು ಹಾಡುಗಳ ಭಾವಾರ್ಥ ತಿಳಿಯದು. ಆದರೆ ಹಾಡು ಆಗಾಗ್ಗೆ ಮನಸ್ಸಿನಿಂದ ಹೊರ ಹೊಮ್ಮುತ್ತದೆ.

ಸಾವು ಸಂಭವಿಸಿದ ನಂತರ ಸ್ಮಶಾನಕ್ಕೆ ಶವ ಸಾಗಿಸುವುದನ್ನು ನೋಡಲು ಅಥವಾ ಶವ ನೋಡಲು ಸಹ ಮನೆಯಲ್ಲಿ ಬಿಡುತ್ತಾ ಇರಲಿಲ್ಲ(ಇದು ಈಗಲೂ ಮುಂದುವರೆದಿದೆ. ನಮ್ಮ ಮೊಮ್ಮಕ್ಕಳನ್ನು ಹೆಣ ನೋಡಲು ನಾವು ಬಿಟ್ಟಿಲ್ಲ! ತುಂಬಾ ಆಪ್ತರು ತೀರಿದಾಗ ಪುಟ್ಟ ಮಕ್ಕಳನ್ನು ನೆಂಟರ ಮನೆಗೆ ಸಾಗಿಸುತ್ತೇವೆ) ಇದು ನಾನು ಪ್ರೈಮರಿ ಮುಗಿಸೋವರೆಗೆ ಮಾತ್ರ. ಆಗ ರಾಜಾಜಿನಗರದಲ್ಲಿ ಸರ್ಕಾರಿ ಶಾಲೆ ಇರಲಿಲ್ಲ ಮತ್ತು ಶ್ರಿರಾಮಪುರದ ಸರ್ಕಾರಿ ಶಾಲೆಗೆ ಐದನೇ ಕ್ಲಾಸು ಸೇರಿಸಿದರು. ನಮ್ಮ ಮೂರನೇ ಅಣ್ಣ ಶಾಮೂ ಆಗಲೇ ಅಲ್ಲಿ ಏಳನೇ ಕ್ಲಾಸು. ನಾನೂ ಅವನೂ ಜತೆ. ಕೆಲವು ಸಲ ಇಬ್ಬರೂ ಎಂದಿನ ಪ್ರಕಾಶ ನಗರದ ಹಳ್ಳದ ದಾರಿ ಬಿಟ್ಟು ಶ್ರಿರಾಮಪುರದ ಬಸ್ ಮಾರ್ಗದಲ್ಲಿ ಬರುತ್ತಿದ್ದೆವು. (ಆಗಿನ ಪ್ರಕಾಶ ನಗರದ ಒಂದು ಚಿತ್ರಣ ಮುಂದೆ ನಿಮಗೆ ಕೊಡುವ ಪ್ಲಾನ್ ಇದೆ!) ಬಸ್ ಮಾರ್ಗ ಎಂದರೆ ಮುಖ್ಯ ರಸ್ತೆ, ಹರಿಶ್ಚಂದ್ರ ಘಾಟ್ ಮುಂಭಾಗದಲ್ಲಿ ಹಾದು ಬರಬೇಕು. ಹರಿಶ್ಚಂದ್ರ ಘಾಟ್ ಅಂದರೆ ಸ್ಮಶಾನ. ಅಂದರೆ ಮನೆಯವರಿಗೆ ಗೊತ್ತಿಲ್ಲದ ಹಾಗೆ ಶವಗಳನ್ನು ನೋಡಲು ವಿಪುಲವಾದ ಅವಕಾಶಗಳು!

ಯಾವುದಾದರೂ ಶವ ಯಾತ್ರೆ ಇದ್ದರೆ ಅದನ್ನು ನೋಡುತ್ತಾ ನಿಲ್ಲುವುದು ಮತ್ತು ಅದು ಮುಂದಕ್ಕೆ ಹೋಗುವವರೆಗೆ ನಾವು ಅಲ್ಲೇ ನಿಲ್ಲುವುದು ಅದು ಹೇಗೋ ನಮ್ಮಲ್ಲಿ ಅಳವಡಿಕೆಯಾಗಿತ್ತು. ಆಗಿನ್ನೂ ಶವ ವಾಹನ ಇರಲಿಲ್ಲ. ಬದಲಿಗೆ ಟ್ರಾಕ್ಟರ್, ಎತ್ತಿನ ಗಾಡಿ ಅಥವಾ ಜಟಕಾ ಗಾಡಿಯನ್ನು ಕೆಲವರು ಉಪಯೋಗಿಸಿದರೆ ಮತ್ತೆ ಸುಮಾರು ಜನ ಹೆಣ ಹೊತ್ತು ಹೋಗುವರು. ನಮ್ಮ ಕಾಲೋನಿಯ ಕೆಲವು ಕಾರ್ಮಿಕರು ಅವರದ್ದೇ ಒಂದು ಗುಂಪು ಮಾಡಿಕೊಂಡು ಯಾವುದಾದರೂ ಸಾವಿನ ಸುದ್ದಿ ಬಂದಕೂಡಲೇ ಶವ ಸಾಗಿಸಲು ಹೆಗಲು ಕೊಡಲು ಸಿದ್ಧರಿರುತ್ತಿದ್ದರು. ಚಟ್ಟ ಕಟ್ಟುವ ಸ್ಪೆಷಲಿಸ್ಟ್‌ಗಳೂ ಸಹ ಇದ್ದರು. ಆಗಿನ್ನೂ ಇವು ಯಾವುವೂ ಔಟ್ ಸೋರ್ಸ್ ಆಗಿರಲಿಲ್ಲ ಮತ್ತು ಈವೆಂಟ್ ಮ್ಯಾನೇಜ್ಜೆಮೆಂಟ್ ಇನ್ನೂ ಹುಟ್ಟಿರಲಿಲ್ಲ. ಇವೆಲ್ಲ ಒಂದು ಸೋಷಿಯಲ್ ಸರ್ವಿಸು. ಈ ಸರ್ವಿಸ್ ಮಾಡೋರು ಹೆಣ ಹೋರೋಕ್ಕೆ ನಾವು ಇದೀವಿ ಅಂತ ತಮಾಶೆಗೆ ಹೇಳುತ್ತಿದ್ದರು. ಶವ ಸಾಗಣೆಯ ಗಾಡಿಗೆ ಹೂವು ಕಂಬ ಇತ್ಯಾದಿಗಳ ಅಲಂಕಾರ ಇರುತ್ತಿತ್ತು. ಅದಕ್ಕೆ ಪಲ್ಲಕ್ಕಿ, ತೊಟ್ಟಿಲು ಮುಂತಾದ ಹಲವು ರೀತಿಯ ಗೆಟ್ ಅಪ್ ಇರುತ್ತಿತ್ತು. ಅಲಂಕಾರಕ್ಕೆ ಎಂದೇ ಜನ ಮತ್ತು ಅವರು ಬೊಂಬು ಸಣ್ಣದಾಗಿ ಸೀಳಿ ಸೀಳಿ ಇವುಗಳನ್ನು ರೆಡಿ ಮಾಡುವರು. ಜತೆಗೆ ಅಳುವವರ ಒಂದು ಗ್ಯಾಂಗ್ ಇರುತ್ತಿತ್ತು. ಇವರಿಗೆ ಬಾಡಿಗೆ ಕೊಟ್ಟರೆ ಸಾಕು ಹೆಣದ ಮುಂದೆ ರಾಗ ರಾಗವಾಗಿ ಅಳುವರು. ಇದು ತಮಿಳರು ರೂಡಿಸಿದ್ದ ಸಂಪ್ರದಾಯ. ಹೆಣದ ಮುಂದೆ ಒಂದು ಜತೆ ಪುಟ್ಟ ಹಸುಗಳ ಬೆನ್ನಿಗೆ ತಮಟೆ ಕಟ್ಟಿ ಅದನ್ನು ಬಾರಿಸುತ್ತಾ ಮೆರವಣಿಗೆ ಸಾಗುತ್ತಿತ್ತು. ತಮಟೆ ಶಬ್ದ ಅಂದರೆ ಹೆಣ ಹೋಗುತ್ತಿದೆ ಎಂದು ಥಟ್ಟನೆ ಹೊಳೆಯುತ್ತಿತ್ತು.

ಬಾಡಿಗೆಗೆ ಅಳುವವರು ಸಿಕ್ಕ ಹಾಗೆಯೇ ಹೆಣದ ಮುಂದೆ ಕುಣಿಯಲು ಜನ ಸಹ ಸಿಗುತ್ತಿದ್ದರು. ತಮಿಳು ತೆಲುಗು ಭಾಷಿಕರು ಸತ್ತಾಗ ಈ ಕ್ರಮ ಅನಿವಾರ್ಯ. ಹೆಣ ಸಾಗುವ ದಾರಿಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಬೇರೆ ಬೇರೆ ಜನಾಂಗದವರು ತೀರಿದಾಗ ವಿಭಿನ್ನ ಸಂಪ್ರದಾಯ. ಶ್ರೀ ರಾಮಪುರದ ಹರಿಶ್ಚಂದ್ರ ಘಾಟ್ ಆಗ ಸುತ್ತಲಿನ ನಾಗರಿಕರಿಗೆ ಸ್ಮಶಾನದ ಅಗತ್ಯವನ್ನು ಪೂರೈಸುತ್ತಿತ್ತು. ಆಗ ನಮಗೆ ಹರಿಶ್ಚಂದ್ರ ಘಾಟ್ ಗೊತ್ತಿತ್ತು. ಮಿಕ್ಕ ಸ್ಮಶಾನಗಳು ಎಲ್ಲಿವೆ ಎನ್ನುವ ತಿಳುವಳಿಕೆ ಇರಲಿಲ್ಲ. ಕಳೆದ ವಾರ ನಮ್ಮ ಊರಿನ ಸ್ಮಶಾನಗಳ ಪಟ್ಟಿ ಮಾಡಿದೆ. ಹದಿನೈದಕ್ಕೂ ಹೆಚ್ಚು ಹೆಸರು ನೆನಪಿಗೆ ಬರಬೇಕೇ? ಯಾರಾದರೂ ಕಾರ್ಪೋರೇಶನ್ ಅಧಿಕಾರಿಗಳ ಮೂಲಕ ನಿಖರವಾದ ಹೆಸರು ಮತ್ತು ಏರಿಯಾ ಕೇಳಿ ತಿಳಿದುಕೊಳ್ಳಬೇಕು ಅನಿಸಿತು. ಹೊರ ವಲಯದಲ್ಲಿನ ಸ್ಮಶಾನಗಳು ನಿಧಾನಕ್ಕೆ ಬೆಂಗಳೂರು ಬೆಳೆದ ಹಾಗೆ ಹುಟ್ಟಿದವು. ಮೇಲ್ವರ್ಗದ ಜನರಲ್ಲಿ ಹೆಣ ಸುಡುವ ಸಂಪ್ರದಾಯ ಇದ್ದರೆ ಮಿಕ್ಕವರು ಅದನ್ನು ಹೂಳುತ್ತಿದ್ದರು. ಪಾರ್ಸಿ ಜನಾಂಗದಲ್ಲಿ ಹೆಣ ಸುಡುವ ಅಥವಾ ಹೂಳುವ ಪದ್ಧತಿ ಇಲ್ಲ. ಬದಲಿಗೆ ಹೆಣವನ್ನು ಅವರು ಎತ್ತರದ ಸ್ಥಳದಲ್ಲಿ ಇರಿಸಿ ಹದ್ದುಗಳು ತಿನ್ನಲು ಬಿಡುತ್ತಾರೆ. ಅದಕ್ಕೆ ಅಂದರೆ ಪಾರ್ಸಿಗಳ ಸ್ಮಶಾನಕ್ಕೆ tower of silence ಎಂದು ಹೆಸರು.

ನಗರ ಬೆಳೆಯುವ ಮೊದಲು ತೋಟ ಜಮೀನು ಇದ್ದವರು ತಮ್ಮ ಬಂಧುಗಳ ಹೆಣವನ್ನು ಅವರ ಜಾಗದಲ್ಲೇ ಹೂಳುತ್ತಿದ್ದರು. ಇದನ್ನು ನಿಷೇಧಿಸಿ ಮುನಿಸಿಪಾಲಿಟಿ ಕಾನೂನು ಮಾಡಿತು. ಕೆಲವು ವರ್ಷಗಳ ಹಿಂದೆ ನಮ್ಮ ಖ್ಯಾತ ಸಾಹಿತಿ ಒಬ್ಬರು ಅವರ ಪತ್ನಿಯ ಶವವನ್ನು ಅವರ ಜಾಗದಲ್ಲಿ ದಫನ್ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಅರವತ್ತರ ದಶಕದ ಆರಂಭದವರೆಗೆ ಎಲೆಕ್ಟ್ರಿಕ್ ಕ್ರೆಮೇಷನ್ ಅಂದರೆ ವಿದ್ಯುತ್ ಚಿತಾಗಾರ ಬೆಂಗಳೂರಿನಲ್ಲಿ ಇರಲಿಲ್ಲ. ಸೌದೆ ಉಪಯೋಗ ಆಗುತ್ತಿತ್ತು. ವಿದ್ಯುತ್ ಚಿತಾಗಾರದ ಆರಂಭದ ಮೊದಲು ಒಂದು ದೊಡ್ಡ ಜಿಜ್ಞಾಸೆ ಶುರು ಆಯಿತು. ಸೌದೆಯಲ್ಲಿ ಹೆಣ ಸುಟ್ಟಾಗ ಅದರ ಅಂದರೆ ಹೆಣದ ಮೂಳೆ ಸಿಗುತ್ತವೆ, ಅಸ್ತಿ ವಿಸರ್ಜನೆಗೆ ಅನುಕೂಲ. ವಿದ್ಯುತ್ ಚಿತಾಗಾರದಲ್ಲಿ ಮೂಳೆ ಸಿಗಲ್ಲ, ಅದರಿಂದ ಶಾಸ್ತ್ರೋಕ್ತವಾಗಿ ಅಸ್ತಿ ವಿಸರ್ಜನೆ ಆಗದು. ಅದರಿಂದ ಸೌದೆಯಲ್ಲೆ ಸುಡಬೇಕು… ಅಂತ ವಾದದ ತಿರುಳು. ಅಸ್ತಿ ವಿಸರ್ಜನೆ ಆದರೆ ಮಾತ್ರ ಸತ್ತವರು ಪಂಚ ಭೂತಗಳಲ್ಲಿ ವಿಲೀನರಾದರು ಎನ್ನುವುದು ನಮ್ಮ ಪುರಾಣಗಳು ವಿವರಿಸಿವೆ. ಸರ್ಕಾರ ಒಂದು ಸಮಿತಿ ನೇಮಿಸಿತು. ಇದರಲ್ಲಿ ಪುರೋಹಿತರು, ಶಾಸ್ತ್ರ ಪಾರಂಗತರು, ಸಮಾಜ ವಿಜ್ಞಾನಿಗಳು, ಅಪರ ಕರ್ಮ ತಜ್ಞರು ಮತ್ತು ವಿಚಾರವಂತರು ಇದ್ದರು. ಚಿತಾಗಾರದಲ್ಲಿ ಹೆಣ ಸುಟ್ಟ ನಂತರ ಅದರ ಮೂಳೆ ಸಿಗದಿದ್ದರೆ ಅಸ್ತಿ ವಿಸರ್ಜನೆ ಹೇಗೆ ಮಾಡಬಹುದು… ಅಂತ ಈ ಸಮಿತಿ ಸಲಹೆ ನೀಡಬೇಕಿತ್ತು. ಈ ಸಮಿತಿಯಲ್ಲಿ ಪ್ರೊ.ಧರ್ಮಲಿಂಗo ಸಹ ಇದ್ದರು( ಇದು ಅವರೇ ಹೇಳಿದ್ದು). ಸಮಿತಿ ಕೊಟ್ಟ ವರದಿಯಲ್ಲಿ ಹೆಣ ಸುಟ್ಟ ನಂತರ ಮೂಳೆ ಜತೆಗೆ ಬೂದಿ ಸಹ ಸಿಗತ್ತೆ, ಅದನ್ನೂ ವಿಸರ್ಜನೆ ಮಾಡಬಹುದು, ಶಾಸ್ತ್ರಕ್ಕೆ ಏನೂ ಚ್ಯುತಿ ಬರೋದಿಲ್ಲ.. ಎನ್ನುವ ವರದಿ ಬಂತು. ಅದರ ನಂತರ ನಿಧಾನಕ್ಕೆ ಈ ವ್ಯವಸ್ಥೆಗೆ ಜನ ಹೊಂದಿ ಕೊಂಡರು. ಈಗಲೂ ಕೆಲವು ಸಂಪ್ರದಾಯಸ್ಥ ಕುಟುಂಬಗಳು ಹೆಣ ಸುಡಲು ಸೌದೇಯನ್ನೇ ಉಪಯೋಗಿಸುತ್ತಾರೆ. ಕೆಲವು ಹಿರಿಯ ಜೀವಿಗಳು ತಮ್ಮ ಉಯಿಲಿನಲ್ಲಿ ತಮ್ಮ ದೇಹ ಸೌದೇ ಯಲ್ಲೆ ಸುಡತಕ್ಕದ್ದು ಎಂದು ಶಾಸನ ಬರೆದಿರುವುದು ನನಗೆ ಗೊತ್ತು. ನಮ್ಮ ಹಿರಿಯ ಕವಿಗಳೊಬ್ಬರ ಅಪೇಕ್ಷೆ ಸಹ ಇದೇ ಆಗಿದ್ದು, ಅವರ ಕಾಲಾ ನಂತರ ಅವರ ಇಚ್ಛೆಯನ್ನು ಪಾಲಿಸಲಾಯಿತು.

ಮಾರನೇ ದಿವಸ ಪರಲೋಕ ವಾಸಿ ಅಂದರೇನು ಅಂತ ನನ್ನ ಅಣ್ಣನನ್ನು ಕೇಳಿದೆ. ಅವನು ನನಗಿಂತ ಎರಡು ವರ್ಷ ದೊಡ್ಡವನು ಮತ್ತು ನನಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ಅವನು ತಿಳಿದುಕೊಂಡಿದ್ದ. ಪರಲೋಕ ವಾಸಿ ಅಂದರೆ ಸತ್ತು ಹೋಗೋದು ಅಂತ ವಿವರಿಸಿದ. ಎದುರು ರಸ್ತೆ ನಾಲ್ಕನೇ ಮನೆಯವರ ಅಜ್ಜ ಸತ್ತರು ಎಂದು ವಿವರಿಸಿದ. ಮುಂದಿನ ಕತೆಗೆ ಮೊದಲು ಕೊಂಚ ನಮ್ಮ ರಸ್ತೆಯ ಟೋಪೋಗ್ರಫಿ ಬಗ್ಗೆ ಹೇಳಬೇಕು.

ಹರಿಶ್ಚಂದ್ರ ಘಾಟ್ ಮೊದಮೊದಲು ನಗರದ ಹೊರಭಾಗದಲ್ಲಿದೆ ಅಂತ ಅಂತ ಇತ್ತು. ನಗರ ಬೆಳೆಯುತ್ತಾ ಬೆಳೆಯುತ್ತಾ ಹೋದಂತೆ ನಗರದ ಮಧ್ಯ ಭಾಗವೇ ಆಯಿತು. ಸುತ್ತ ಮುತ್ತ ಇರುವ ಮನೆಗಳಲ್ಲಿ ಹೆಣ ಸುಡುವ ಹೊಗೆ ಮತ್ತು ವಾಸನೆ ಆಗ ಇರುತ್ತಿತ್ತು. ನಿಧಾನಕ್ಕೆ ಅಲ್ಲಿನ ಜನ ಅದಕ್ಕೆ ಹೊಂದಿಕೊಂಡರು. ಈಗಲೂ ಹರಿಶ್ಚಂದ್ರ ಘಾಟ್ ಮುಂದೆ ಹೋದರೆ ಸುಟ್ಟ ವಾಸನೆ ಅಡರಿ ಹೊಟ್ಟೆ ತೊಳೆಸುತ್ತೆ ಅಂತ ನನಗೆ ಅನಿಸುತ್ತೆ, ಬಹುಶಃ ಇದು ಹಳೇ ನೆನಪಿನ ಪ್ರಭಾವ ಇರಲಿಕ್ಕೆ ಸಾಕು! ನಗರ ವಿಸ್ತಾರ ಆದ ಹಾಗೆ ಸ್ಮಶಾನದ ಜಾಗದ ಸಮಸ್ಯೆ ಉಲ್ಬಣ ಆಯಿತು. ಆದಷ್ಟೂ ಹೊರ ವಲಯಗಳಲ್ಲಿ ಸ್ಮಶಾನದ ಜಾಗ ನಿಗದಿ ಆಯಿತು. ಪರಿಸ್ಥಿತಿ ಇನ್ನೂ ಬಿಗಡಾಯಿಸಿರುವುದು ಮೊನ್ನೆ ಒಂದು ಸಾವಿಗೆ ಒಂದು ಸ್ಮಶಾನಕ್ಕೆ ಹೋದಾಗ ಗಮನಿಸಿದೆ. ಅಲ್ಲೊಂದು ಸರ್ಕಾರೀ ಆದೇಶದ ಬೋರ್ಡು, ಅದರಂತೆ ಸಮಾಧಿ ತೋಡಬಾರದು. ಕಾರಣ ಸ್ಥಳದ ಅಭಾವ. ಮುಂದೆ ಎಲ್ಲಾ ಹೆಣಗಳನ್ನು ಸುಡಲೇಬೇಕು ಎನ್ನುವ ಕಾನೂನು ಬಂದರೂ ಬಂದೀತು! ಸುಮಾರು ಹೊರದೇಶಗಳಲ್ಲಿ ಈ ಕಾನೂನು ಇದೆ. ಇದೇ ಈಗ ಒಂದು ಸಂಗತಿ ನೆನಪಿಗೆ ಬಂತು. ನಾನು ಈಗ ವಾಸವಿರುವ ವಿದ್ಯಾರಣ್ಯಪುರ ಶುರುವಿನ ದಿವಸಗಳ. ನಿವಾಸಿಗಳ ಒಂದು ಮೀಟಿಂಗ್‌ನಲ್ಲಿ ಒಬ್ಬರು ವಯೋವೃದ್ಧರ ಬೇಡಿಕೆ ಹೀಗಿತ್ತು. ನಮ್ಮ ಏರಿಯಾದಲ್ಲಿ ಒಂದು ಸ್ಮಶಾನ ಅಗತ್ಯ ಇದೆ, ಅದು ಬೇಕು…. ಅಂತ. ಮಿಕ್ಕ ನಿವಾಸಿಗಳು ಇದಕ್ಕೆ ತೀವ್ರ ವಿರೋಧ ಒಡ್ಡಿದರು, ಮನೆ ಮುಂದೆ ಪ್ರತಿ ನಿಮಿಷ ಹೆಣ ಹೋಗೋದು ಹೇಗೆ ಟಾಲರೇಟ್ ಮಾಡಕ್ಕೆ ಆಗ್ತದೆ…? ಅದೇ ಕಾರಣಕ್ಕೆ ಸುಮಾರು ನಿವಾಸಿಗಳು ಮನೆ ಪಕ್ಕ ನರ್ಸಿಂಗ್ ಹೋಂ ಬರುವುದನ್ನು ವಿರೋಧಿಸುತ್ತಾರೆ. ಇಲ್ಲಿ ಕಾರಣ ಕೊಂಚ ಬೇರೆಯದು. ರೋಗಿಗಳ ಸಂಬಂಧಿಗಳ ರೆಸ್ಟ್ ಪ್ಲೇಸ್ ಆಗುವ, ಅವರ ಗೋಳು ಪ್ರತಿನಿಮಿಷ ಆಲಿಸುವ ಹಗಲು ರಾತ್ರಿ ಆಂಬುಲೆನ್ಸ್‌ಗಳ ಓಡಾಟ… ಇವು ಯಾರಿಗೆ ಬೇಕು? ಮನೆ ಪಕ್ಕದಲ್ಲಿ ಸ್ಕೂಲು ಕಾಲೇಜು ಇದ್ದರೆ ಅಲ್ಲಿನ ಕಾಟ ಬೇರೆ ರೀತಿ. ಹುಡುಗರು ಹುಡುಗಿಯರು ಮನೆ ಮುಂದೆ ಗುಂಪು ಸೇರ್ತಾರೆ. ಆಂಟೀ ನೀರು ಕೊಡಿ, ಆಂಟೀ ನಿಮ್ಮ ಬಾತ್ ರೂಂ ಉಪಯೋಗಿಸಲು ಪರ್ಮಿಷನ್ ಕೊಡಿ.. ಆಂಟೀ ಈ ಲೆಟರ್ ಸುರೇಶಂಗೆ ಅದೇ ಬೆಳ್ಳಗೆ ನನ್ನ ಜತೆ ಇರ್ತಾನಲ್ಲಾ ಅವನಿಗೆ ಕೊಡಿ ಪ್ಲೀಸ್…. ಮುಂತಾದ ಕಾಟಗಳು ಇರುತ್ತವೆ. ಇವು ಯಾರಿಗೂ ಹೇಳಿಕೊಳ್ಳಲು ಆಗದ ಅನುಭವಿಸಲು ಸಹ ಆಗದ ಕಾಟ!

ಅರವತ್ತರ ದಶಕದಲ್ಲಿ ಹೆಣ ಸಾಗಿಸಲು ಒಂದು ವ್ಯವಸ್ಥೆ ರೂಪುಗೊಂಡಿತು. ಹೇರ್ಸೆ ವ್ಯಾನ್ ಶವ ಸಾಗಣೆ ವಾಹನ. ಇದು ಬಂದ ನಂತರ ಹೆಣ ಸಾಗಣೆ ಸುಲಭ ಆಯಿತು. ಹೆಣದ ಮೇಲೆ ಹೂವಿನ ಹಾರ ಹಾಕಿ ತಮ್ಮ ಗೌರವ ತೋರಿಸುವುದು ವಾಡಿಕೆ. ಈಗ ಯಾವುದೇ ಸಾವಿನ ಮನೆಗೆ ಹೋದರೂ ಹೂವಿನ ಹಾರ ಹಿಡಿದೇ ಹೋಗುತ್ತಾರೆ. ಹಾರ ದೊಡ್ಡದು ಇದ್ದಷ್ಟೂ ಹಾರ ಹಾಕಿದವನ ಲೆವೆಲ್ ಏರುತ್ತೆ. ಹೆಣ ಸಾಗಿಸಬೇಕಾದರೆ ಹೀಗೆ ಹಾಕಿದ ರಾಶಿ ರಾಶಿ ಹೂಗಳನ್ನು ವಾಹನದಲ್ಲಿ ಕುಳಿತವರು ರಸ್ತೆ ಉದ್ದಕ್ಕೂ ಎರಡೂ ಕಡೆ ಚೆಲ್ಲುತ್ತಾ ಹೋಗುತ್ತಾರೆ. ರಸ್ತೆಯಲ್ಲಿ ಓಡಾಡುವ ಜನರಿಗೆ, ವಾಹನ ಸವಾರರಿಗೆ ಇದೊಂದು ದೊಡ್ಡ ಹಿಂಸೆ. ನಾನು ನನ್ನಾಕೆ ಸಂಗಡ ಟೂ ವೀಲರ್‌ನಲ್ಲಿ ಹೋಗಬೇಕಾದರೆ ಹೂವಿನ ಮೇಲೆ ಗಾಡಿ ಹೋಗುವುದನ್ನು ತಪ್ಪಿಸಲು ದೊಡ್ಡ ಸರ್ಕಸ್ ಮಾಡುತ್ತೇನೆ! ಮುಂದೆ ಹೆಣದ ಗಾಡಿ ಹೋಗುತ್ತಿದ್ದರೆ, ಆ ರಸ್ತೆ ಅವಾಯ್ಡ್ ಮಾಡುವುದು, ಶ್ರೀರಾಮಪುರದ ಅಥವಾ ಯಾವುದೇ ಸ್ಮಶಾನದ ಮುಂದಿನ ಹಿಂದಿನ ರಸ್ತೆಗೆ ಹೋಗದಿರುವುದು, ತಮಟೆ ಶಬ್ದ ಕೇಳಿದರೆ ಆ ಏರಿಯಾ ಅವೊಯ್ಡ್ ಮಾಡುವುದು, bts ಬಸ್ಸಿನಲ್ಲಿ ಡೋಲು ನಾಗಸ್ವರ ಹೊತ್ತವರ ಪಕ್ಕ ಕೂರದಿರುವುದು… ಇದೆಲ್ಲಾ ನಾನು ನನ್ನಾಕೆ ಮೂಲಕ ಕಲಿತ ನನ್ನ ಜಾಗೃತಿ!

ನನ್ನ ಸ್ನೇಹಿತರೊಬ್ಬರು ಹೊಸದಾಗಿ ಮನೆ ಕಟ್ಟಿಸಿದರು. ಸೈಟ್ ಕೊಂಡಾಗ ಎಲ್ಲಾ ಸರಿಯಿತ್ತು. ಇವರು ಮನೆ ಕಟ್ಟಿ ಒಳಗೆ ಸೇರಿದ ಮೇಲೆ ಪಕ್ಕದ ಹಳ್ಳಿಯವರು ಅದು ತಮ್ಮ ಸ್ಮಶಾನದ ಜಾಗ ಅಂತ ತಗಾದೆ ತೆಗೆದರು. ಹೆಣಗಳನ್ನು ತಂದು ಇವರ ಮನೆ ಸುತ್ತ ಮುತ್ತ ಇರಿಸಿ ಅಲ್ಲೇ ಮಡಕೆ ಒಡೆಯುಔುದು, ಕೆಲವು ಸಲ ಅಪರ ಕ್ರಿಯೆ ಕೆಲಸ ಸಹ ಮಾಡುತ್ತಿದ್ದರು. ಇವರ ಗೋಳು ಅರಣ್ಯ ರೋಧನ ಆಗಿ ಇವರು ಮನೆ ಖಾಲಿಮಾಡಿ ನೆಮ್ಮದಿ ಕೊಂಡರು.

ನನ್ನ ಕಲಿಗು ಸೇಥಿ ಅಂತ ಓಡಿಸ್ಸದವನು. ಅವನ ಅಪ್ಪ ಬೆಂಗಳೂರು ನೋಡಲು ಬಂದವರು ಇಲ್ಲೇ ತೀರಿಕೊಂಡರು. ನಾವೇ ಮುಂದೆ ನಿಂತು ಕಾರ್ಯ ನಿರ್ವಹಣೆ ಮಾಡಿದೆವು. ಮತ್ತೊಬ್ಬರ ಸಾವಿನ ಸಂದರ್ಭ. ಯಾರೋ ಪುಣ್ಯಾತ್ಮ ಗಂಧದ ಕೊರಡು ಬೇಕು ಹೆಣ ಸುಡಲು ಅಂದ. ಇಡೀ ಬೆಂಗಳೂರು ಹುಡುಕಿ ಕೊನೆಗೆ ಕಾವೇರಿ ಎಂಪೋರಿಯಂ ನಿಂದ ಅರ್ಧ ಗೇಣು ಉದ್ದ, ಮುಕ್ಕಾಲು ಇಂಚು ದಪ್ಪದ ಗಂಧದ ಕಟ್ಟಿಗೆ ತಂದೆವು, ನಾಲ್ಕು ನೂರು ತೆತ್ತು.

ಹೆಣ ಸಾಗಿಸುವಾಗ ಕೆಲವು ಜನಾಂಗದವರು ಕಾಸನ್ನು ರಸ್ತೆಗೆ ಎಸೆಯುತ್ತಾರೆ. ನಾನು ಪ್ರತಿದಿವಸ ಕೆಲಸಕ್ಕೆ ನಡೆದು ಹೋಗುವ ಅಭ್ಯಾಸ. ಫಸ್ಟ್ ಶಿಫ್ಟ್ ಅಂದರೆ ಐದಕ್ಕೆ ಎದ್ದು ಐದೂವರೆಗೆ ಮನೆ ಬಿಟ್ಟು ಹೊರಡುತ್ತಿದ್ದೆ. ಪ್ರತಿದಿವಸ ನಾಲ್ಕಾಣೆ, ಎಂಟಾಣೆ, ಒಂದು ರೂಪಾಯಿ.. ಈ ರೀತಿ ಚಿಲ್ಲರೆ ಸಿಗೋದು. ಆರಿಸಿ ಆರಿಸಿ ಜೇಬಿಗೆ ಹಾಕುತ್ತಿದ್ದೆ. ಒಬ್ಬನೇ ನಡೆಯುತ್ತಿದ್ದೆ, ಅದರಿಂದ ನನಗೆ ಕಾಂಪಿಟ್ ಮಾಡುವವರು ಇಲ್ಲ. ರಾತ್ರಿ ಬಸ್ಸಿನಿಂದ ಲೇಟ್ ಬಸ್ಸಿನ ಪ್ರಯಾಣಿಕರು ಬೀಳಿಸಿಕೊಂಡು ಹೋದ ಕಾಸು ಇವು ಅಂತ ನನ್ನ ಲೆಕ್ಕ. ಒಮ್ಮೆ ಕಾರ್ಲ್ ಮಾರ್ಕ್ಸ್ ಹೀಗೆ ನಾನು ಕಾಸು ಹೆಕ್ಕಬೇಕಾದರೆ ಈ ಕಾಸು ಏನು ಮಾಡ್ತೀಯ ಅಂದ. ಕಾರ್ಲ್ ಮಾರ್ಕ್ಸ್ ನಾನು ಒಬ್ಬನೇ ನಡೆಯಬೇಕಾದರೆ ನನಗೆ ಜೋಡಿ. ಅಪಾರ ಜ್ಞಾನಿ, ಅವನ ಜ್ಞಾನ ನನಗೆ ತುಂಬುತ್ತಿದ್ದ.

ಈ ಕಾರ್ಲ್ ಮಾರ್ಕ್ಸ್ ಯಾರು ಅಂದರೆ ದಸ್ ಕ್ಯಾಪಿಟಲ್ ಎನ್ನುವ ಪುಸ್ತಕವನ್ನು ನೂರು ಇಪ್ಪತ್ತು ವರ್ಷ ಹಿಂದೇನೆ ಬರೆದು ನಮ್ಮನ್ನೆಲ್ಲ ಕ್ರಾಂತಿ ಮಾಡಲು ಇಷ್ಟು ವರ್ಷದ ನಂತರವೂ ಪ್ರೇರೇಪಿಸಿದವನು, ಪ್ರೆರೇಪಿಸುತ್ತಿರುವವನು. ನಮ್ಮ ಕಾಲದಲ್ಲಿ ದಸ್ ಕ್ಯಾಪಿಟಲ್ ಓದಿದವರು, ಕೊಂಡವರು, ಅದನ್ನು ನವ ಕರ್ನಾಟಕ ಬುಕ್ ಅಂಗಡಿಯಲ್ಲಿ ನೋಡಿದವರು…. ಎಲ್ಲರೂ ಕ್ರಾಂತಿಕಾರಿಗಳು! ಬಡವರಿಗೆ ಕೊಡ್ತೀನಿ ಅಂದೆ. ಬಡವರನ್ನು ಹೇಗೆ ಕಂಡು ಹಿಡೀತಿ.. ಅಂತ ಕೇಳಿದ. ಭಿಕ್ಷೆ ಬೇಡುವವರು ಬಡವರು ಅಂದೆ. ಇದು ಸಾಮಾನ್ಯ ಕಲ್ಪನೆ ಎಲ್ಲಾ ಕಾಲಕ್ಕೂ. ದೊಡ್ಡ ದೊಡ್ಡ ಬಂಡವಾಳ ಶಾಹಿಗಳು ಸಹ ಭಿಕ್ಷೆ ಬೇಡುತ್ತಾರೆ ಅಂದ. ನನ್ನ ಉತ್ತರ ಅವನಿಗೆ ಸಮಾಧಾನ ಕೊಡಲಿಲ್ಲ. ಸರಿ ಹಾಗಿದ್ದರೆ, ಬಡವರಿಗೆ ಕೊಡೋಲ್ಲ. ದೇವರ ಹುಂಡಿಗೆ ಹಾಕ್ತೀನಿ ಅಂದೆ. ರಸ್ತೆಯಲ್ಲಿ ಬಿದ್ದ ಸಾರ್ವಜನಿಕರ ದುಡ್ಡು ದೇವರಿಗೆ ಹಾಕಿ ಅದು ಹೇಗೆ ನೀನು ಪುಣ್ಯ ತಗೋತಿ… ಅಂದ. ನನಗೆ ಪುಣ್ಯ ಬೇಡ ಅಂತ ಬಿಡ್ತೀನಿ ಅಂದೆ. ಕರ್ಮ ಮಾಡಿ ಅದರ ಫಲ ಬೇಡ ಅನ್ನಲು ಸಾಧ್ಯವೇ…. ಅಂದ. ಮಾರ್ಕ್ಸ್ ಉತ್ತರ ಕೊಡಲು ತಬ್ಬಿಬ್ಬು ಹೊಡೆದಿದ್ದೆ! ಅದು ಹೇಗೋ ಅವತ್ತು ತಪ್ಪಿಸಿಕೊಂಡಿದ್ದೆ.

ಮತ್ತೆ ಒಂದು ಸಲ ನನ್ನ ಸ್ನೇಹಿತ ಪ್ರಭಾಕರ್ ಅನ್ನುವವರು ಜತೆಗೆ ಸಿಕ್ಕಿದರಾ. ಈ ಪ್ರಭಾಕರ್ ತುಂಬಾ ಸಾಧು ಮತ್ತು ನನಗೆ ತುಂಬಾ ಮೆಚ್ಚಿನವರು. ಅವರಿಗೂ ನಾನು ಹಾಗೇ. ದಾರಿ ಉದ್ದಕ್ಕೂ ಬಿದ್ದಿರೋ ಕಾಸು ನಾನು ಬಗ್ಗಿ ಬಗ್ಗಿ ತೆಗೆದು ತೆಗೆದು ಜೇಬಿಗೆ ಹಾಕೋದು ಅವರು ಮುಖ ಸಿಂಡರಿಸೋದು ನಡೀತು. ಅವರಿಗೆ ಬೇಸರ ಆಗುವಷ್ಟು ಮತ್ತು ನನಗೆ ಭಾರೀ ಖುಷಿ ಆಗುವಷ್ಟು ಚಿಲ್ಲರೆ ಕಾಸು ಅವತ್ತು ಸಿಕ್ಕಿದ್ದು. ಇದು ಹೆಣ ಸಾಗಿಸ ಬೇಕಾದರೆ ಹೆಣದ ಮೇಲೆ ಹಾಕಿರ್ತಾರೆ ಅಂದರು ವಾಕಿಂಗ್ ಮುಗೀತಾ ಬಂದ ಹಾಗೆ. ನಿನ್ನೆ ಯಾವುದೂ ಹೆಣ ಈ ರಸ್ತೇಲಿ ಹೋದ ಗುರುತೇ ಇಲ್ಲ ಇವರೇ ಅಂದೆ. ನೋಡಿ ಎಲ್ಲೂ ಹೂವು ಎರಚಿರಲಿಲ್ಲ, ರಾತ್ರಿ ತಮಟೆ ಬಾರಿಸಿದ ಶಬ್ದ ಸಹ ಕೇಳಿಸಲಿಲ್ಲ.. ಅಂದೆ. ರಸ್ತೆಯಲ್ಲಿ ಬಿದ್ದಿದ್ದ ಕಾಸೆಲ್ಲಾ ನಾನೇ ತಗೋತಾ ಇದೀನಿ ಅಂತ ಅವರಿಗೆ ಸಖತ್ ಹೊಟ್ಟೆಕಿಚ್ಚು ಅಂತ ನನಗೆ ಅನ್ನಿಸಬೇಕೆ ಅಥವಾ ಅದು ನನ್ನ ಭಾವನೆಯೋ… ನೆಕ್ಸ್ಟ್ ಸಿಗೋ ಕಾಸು ನೀವೇ ತಗೊಳ್ಳಿ… ಅಂದೆ, ಪಟ್ಟ ಬಿಟ್ಟು ಕೊಡುವ ಮುಖ್ಯ ಮಂತ್ರಿ, ಉಪ ಮುಖ್ಯ ಮಂತ್ರಿ ಶೈಲಿಯಲ್ಲಿ. ಅವರು ಮುಖ ಮತ್ತೂ ಸಿಂಡರಿಸಿದರು, ಹತ್ತು ಲೀಟರ್ ಹರಳೆಣ್ಣೆ ಕುಡಿದವರ ಹಾಗೆ. ಬೇಡ ಸಾರ್, ನನಗೆ ಇಷ್ಟ ಇಲ್ಲ. ರಸ್ತೇಲಿ ಬಿದ್ದದ್ದು ನಾನು ಹಾಗೆಲ್ಲಾ ತಗೊಳಲ್ಲ…. ಅಂದರು. ಅದು ಅವರ ಪ್ರಿನ್ಸಿಪಲ್ ಇರಬಹುದು, ಅವರು ಪಾಂಡವರ ಕಾಲದ ಧರ್ಮರಾಯನ ಕುಲದವರು ಅನಿಸಿತು. ಹೌದಾ ಪ್ರಭಾಕರ್ ಗುಡ್ , ವೆರಿ ಗುಡ್ ಅಂದೆ. ಟರ್ನಿಂಗ್ ಬಂತು.

ರಸ್ತೆ ತಿರುಗಿದೇವಾ… ಅಲ್ಲಿಂದ ನಮ್ಮ ಕ್ವಾರ್ಟರ್ಸ್ ಶುರು. ಅದೇ ರಸ್ತೇಲಿ ಮುಂದಕ್ಕೆ ನಡೆದರೆ ಫ್ಯಾಕ್ಟರಿ ಗೇಟು. ಒಂದು ನೂರು ರೂಪಾಯಿ ನೋಟು ಎಂಟು ಹತ್ತು ಸಲ ಮಡಚಿರೋದು ರಸ್ತೆ ಮೇಲೆ ಅನಾಥವಾಗಿ ಬಿದ್ದಿರೋದು ಕಾಣಬೇಕೇ… ಅದನ್ನು ತೆಗೆದು ಜೇಬಲ್ಲಿ ಹಾಕಿದೆ, ನೂರು ರೂಪಾಯಿ ನೋಟು ಯಾರೂ ಹೆಣಕ್ಕೆ ಹಾಕೋದಿಲ್ಲ…. ಅಂತ ಅವರಿಗೆ ಕೇಳಿಸುವ ಹಾಗೆ ಹೇಳಿದೆ! ಅದು ಸಿಕ್ಕಿದ್ದು ನಮ್ಮ ಫ್ಯಾಕ್ಟರಿ ಕ್ವಾರ್ಟರ್ಸ್ ರಸ್ತೇಲಿ. ಯಾರಾದರೂ ಎಂಪ್ಲಾಯಿ ಅಥವಾ ಅವನ ಹೆಂಡತಿ ಮಕ್ಕಳು ಅಪ್ಪ ಅಮ್ಮ ಅತ್ತೆ ಮಾವ ಭಾಮೈದ…. ಯಾರಾದರೂ ಕಿಟಕಿಯಿಂದ ನೋಡಿ ಬಿಟ್ಟಿದ್ದರೆ…. ಅಂತ ಅನಿಸಿತು. ಯಾವಾಗಲಾದರೂ ಬಂದು ಹಿಡಕೊಂಡು ಅವತ್ತು ನೀನು ರಸ್ತೇಲಿ ಬಿದ್ದಿದ್ದ ನೂರರ ನೋಟು ಅದು ನನ್ನದು, ಕೊಡು ಅಂತ ಕಾಲರ್ ಪಟ್ಟಿ ಹಿಡಕೊಂಡರೆ…….

ಒಂದು ತಿಂಗಳು ಆ ರಸ್ತೆ ಅವಾಯ್ಡ್ ಮಾಡಿದೆ. ಫ್ಯಾಕ್ಟರಿಲೀ ಸಹ ಯಾರೂ ಗುಮಾನಿಯಿಂದ ನನ್ನ ನೋಡುತ್ತಿಲ್ಲ ಅಂತ ಖಚಿತ ಪಡಿಸಿಕೊಂಡು ಮತ್ತೆ ಆ ರಸ್ತೆಗೆ ಕಾಲಿಟ್ಟೆ! ಉಲ್ಲಾಂ ಹಾಡು ಎಲ್ಲೆಲ್ಲಿಗೆ ಒಯ್ಯಿತು ನೋಡಿ. ಫ್ಯಾಕ್ಟರಿಗೆ ಸೇರಿದೆನಲ್ಲಾ. ಅವಾಗವಾಗ ನನಗೆ ನಾನೇ ಈ ಹಾಡು ಹೇಳಿಕೊಳ್ಳುತ್ತಿದ್ದೆ. ನಮ್ಮ ಸೆಕ್ಷನ್‌ನ ಪೊನ್ನುಸಾಮಿ ನಾನು ಈ ಹಾಡು ಆಗಾಗ ಹೇಳೋದು ಕೇಳುತ್ತಿದ್ದ. ಅದೇನು ಈ ಹಾಡು ಅಷ್ಟು ಹೇಳ್ತಿ.. ಅಂತ ಕೇಳಿದ. ವೆಂಕಟಾಚಲನಿಂದ ಈ ಹಾಡು ನನಗೆ ಬಂದ ಕತೆ ವಿವರಿಸಿದೆ.

ಜತೆಗೆ ಮುರುಘದಾಸ್ ಎನ್ನುವ ಗಾಯಕರು ಹಾಡಿದ್ದ ಈ ಹಾಡು ಕೇಳಿದ್ದೆ ರೇಡಿಯೋದಲ್ಲಿ. ಅದನ್ನ ಅವನಿಗೆ ಹೇಳಿದೆ. ಅದರ ಅರ್ಥ ಗೊತ್ತಾ ಅಂತ ಕೇಳಿದ. ದೇವರ ಹೆಸರು ಹೇಳಿದರೆ ಹೊಟ್ಟೆ ಒಳಗೆ ತುಂಬಾ ಉರಿಯುತ್ತೆ ಅಂತ ನನಗೆ ತಿಳಿದಿದ್ದ ಅರ್ಥ ವಿವರಿಸಿದೆ. ಹಾಡು ಉಲ್ಲಂ ಉರುವುದು ಅಲ್ಲ, ಉಳ್ಳಂ ಉರುವುದು ಅಂತ ಸರಿಪಡಿಸಿದ. ನಂತರ ಅದರ ಅರ್ಥ ಹೇಳಿದ. ದೇವರ ಪ್ರಾರ್ಥನೆ ಮಾಡುತ್ತಿದ್ದರೆ, ದೇವರನ್ನು ನೆನೆಯುತ್ತಿದ್ದರೆ ಮನಸು ಮೇಣದ ಬತ್ತಿ ಹಾಗೆ ಕರಗಿ ಕರಗಿ ಕರಗುತ್ತೆ…. ಅಂತ. ಅಬ್ಬಾ ಎಂತಹ ಅರ್ಥ ಹುದುಗಿದೆ ಈ ಹಾಡಿನಲ್ಲಿ ಅಂತ ಆಶ್ಚರ್ಯ ಆಯಿತು.

ಉಳ್ಳಮ್ ಉರಿವುದಯ್ಯಾ…. ಹಾಡು ಈಗಲೂ ನನ್ನನ್ನು ಸರಿ ರಾತ್ರಿಯಲ್ಲಿ ಬಡಿದು ಎಬ್ಬಿಸುತ್ತೆ. ವೆಂಕಟಾಚಲ ಕೂತಿರೋದು, ಅವನ ಕೈಯಲ್ಲಿನ ಖಂಜರ, ಅಕ್ಕ ಪಕ್ಕ ಹಾರ್ಮೋನಿಯಂ, ತಬಲಾ ಇದೆಲ್ಲಾ ಸ್ಪಷ್ಟವಾಗಿ ಗೋಚರವಾಗುತ್ತೆ. ನನ್ನ ಮೊದಲ ಸ್ಮಶಾನ ಭೇಟಿ ಇನ್ನೂ ನನಗೆ ನೆನಪಿದೆ. ಮೊದಲ ಪ್ರೇಮ. ಮೊದಲ ಮುತ್ತು, ಮೊದಲ ಸಂಬಳ.. ಇವೆಲ್ಲಾ ಅಚ್ಚಳಿಯದ ನೆನಪುಗಳು ಅಂತ ಕವಿಗಳು ಹೇಳುತ್ತಾರೆ. ಈ ಪಟ್ಟಿಗೆ ಅವರು ಮೊದಲ ಬಾರಿಯ ಸ್ಮಶಾನದ ಭೇಟಿ ಸೇರಿಸಲೆಬೇಕು ಅಂತ ನನ್ನ ವಾದ!

ತಂದೆ ತಾಯಿ ಇರುವವರು ಸ್ಮಶಾನಕ್ಕೆ ಹೋಗಬಾರದು ಎಂದು ಒಂದು ಅನ್ ರಿಟನ್ ರೂಲ್ ಇದೆಯಂತೆ ಮತ್ತು ಸುಮಾರು ಜನ ಈಗಲೂ ಇದನ್ನು ಪಾಲಿಸುತ್ತಾರೆ. ನನಗೆ ಗೊತ್ತಿರುವ ನನ್ನ ವಯಸ್ಸಿನ ಒಬ್ಬರು ಇಲ್ಲಿಯವರೆಗೆ ಸ್ಮಶಾನ ನೋಡಿಲ್ಲ ಎಂದು ಕಳೆದ ಬಾರಿ ನೆಂಟರೊಬ್ಬರು ಮೃತರಾದಾಗ ಹೇಳಿದರು. ಜೀವನದಲ್ಲಿ ಎಂಥಾ ಅನುಭವ ಮಿಸ್ ಆಗಿದೆ ಇವರಿಗೆ ಅಂತ ಅವರ ಬಗ್ಗೆ ಕರುಣೆ ಹುಟ್ಟಿತು! ವೆಂಕಟಾಚಲ ಅವರ ವಿಷಯ ಬಂದಾಗ ಒಂದು ಸಂಗತಿ ನೆನಪಿಗೆ ಬರೋದು ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಒಬ್ಬರು. ಹಿತ್ತಲಲ್ಲಿ ಇದ್ದ ಜಾಗದಲ್ಲೇ ವೆಂಕಟಾಚಲ ಒಂದು ಪುಟ್ಟ ಮನೆ ಕಟ್ಟಿ ಬಾಡಿಗೆಗೆ ಕೊಟ್ಟಿದ್ದರು. ಹೀಗೆ ಬಾಡಿಗೆಗೆ ಬಂದವರಲ್ಲಿ ಒಬ್ಬರು ಆಗಿನ BTS ನಲ್ಲಿ ಕಂಡಕ್ಟರ್ ಕೆಲಸ ಮಾಡುತ್ತಿದ್ದರು. ಅಪ್ಪಟ ಕನ್ನಡ ಪ್ರೇಮಿ. ಅವರ ಕನ್ನಡ ಪ್ರೇಮ ಎಷ್ಟು ಮತ್ತು ಹೇಗೆ ಇತ್ತು ಅಂದರೆ ಬೆಂಗಳೂರಿನ ಎಲ್ಲಾ ಸ್ಟಾಪ್‌ಗಳನ್ನು ಅಚ್ಚ ಕನ್ನಡದಲ್ಲಿ ಹೇಳುತ್ತಿದ್ದರು. ಒಂದು ಉದಾಹರಣೆ ಅಂದರೆ ಸೈಂಟ್ ಜೋಸೆಫ್ ಕಾಲೇಜು. ಅದಕ್ಕೆ ಇವರು ಸಂತ ಜೋಸೆಫರ ವಿದ್ಯಾಲಯ. ಇಳಿಯುವವರು ದಯವಿಟ್ಟು ಬನ್ನಿ, ಹತ್ತುವವರು ನಿಧಾನಕ್ಕೆ ಬನ್ನಿ. ನಿಮ್ಮ ನಿಮ್ಮ ಚೀಟಿಯನ್ನು ಕೇಳಿ ಪಡೆಯಿರಿ….. ಹೀಗೆ. ಯಾವ ರೂಟ್‌ಗೇ ಹೋಗಲಿ ಅಲ್ಲಿ ಎಲ್ಲವೂ ಕನ್ನಡ, ಕನ್ನಡ ಕನ್ನಡಮಯ. ಇವರ ಈ ಕನ್ನಡ ಪ್ರೇಮ ಬೇಗ ಎಷ್ಟು ಜನಪ್ರಿಯ ಆಯಿತು ಅಂದರೆ ಇವರ ಬಗ್ಗೆ ಲೇಖನಗಳು ಬಂದವು. ಒಂದು ವಾರ ಪತ್ರಿಕೆಯಲ್ಲಿ, ಬಹುಶಃ ಸುಧಾ ಇರಬೇಕು, ಕನ್ನಡದ ಗಾಡಿ ಎನ್ನುವ ಒಂದು ಹಾಸ್ಯ ಲೇಖನ ಬಂದಿತ್ತು. ಅವರು ಕಾದಂಬರಿ ಸಹ ಬರೆಯುತ್ತಿದ್ದರು ಎಂದು ಮಾಸಲು ಮಾಸಲು ನೆನಪು. ಆದರೆ ಅವರ ಹೆಸರು ಮಾತ್ರ ಇನ್ನೂ ಹಸಿರು ಹಸಿರಾಗಿದೆ. ಬಾಚಹಳ್ಳಿ ಸೂರ್ಯನಾರಾಯಣ ಅಂತ ಅವರ ಹೆಸರು. ಇವರನ್ನೇ ಮಾದರಿಯಾಗಿ ಇರಿಸಿಕೊಂಡು ನಂತರವೂ ಸುಮಾರು ಕಂಡಕ್ಟರ್‌ಗಳು ಬೆಂಗಳೂರಿನಲ್ಲಿ bts ಬಸ್ಸಿನಲ್ಲಿ ಕನ್ನಡದ ಗಾಢವಾದ ಕಂಪನ್ನು ಹರಿಸುತ್ತಾ ಬಂದಿದ್ದಾರೆ.

ಸ್ಮಶಾನದ ಸಂಗತಿ ಬಂದರೆ ಶ್ರೀರಾಮಪುರದ ನೆನಪು ಒದ್ದು ಬರುತ್ತೆ. ಒಂದೊಂದು ಸ್ಮಶಾನಕ್ಕೆ ನಾನು ನೀಡಿದ ಭೇಟಿಯ ನೆನಪುಗಳು ಒದ್ದುಕೊಂಡು ಬರುತ್ತವೆ. ನಿಮ್ಮ ಜತೆ ಒಂದು ವಾರ ಆದರೂ ನನ್ನ ಅನುಭವ ಹಂಚಿಕೊಳ್ಳಬಹುದು. ಇನ್ನೊಂದು ಸಲ ಮತ್ತೆ ಈ ನೆನಪು….