ಇವನೇನಾ ಆ ಸಾಹೇಬ… ಕುದುರೆ ಗಾಡಿಯ ಮೇಲೆ ಬಂದು ದಿಕ್ಕೆಟ್ಟವರಿಗೆ ಹೊಸ ಬಟ್ಟೆ ದಾನ ಮಾಡುತ್ತಿದ್ದವನು ಎನಿಸಿ ಅಚ್ಚರಿಗೊಂಡೆ. ಆ ಕಾಲಕ್ಕೇ ಆತ ವಿಪರೀತ ಲಂಚಕೋರನಾಗಿ ಹಲವು ಬಾರಿ ಸಸ್ಪೆಂಡ್ ಆಗಿದ್ದ. ಡಿಸ್‌ಮಿಸ್ ಒಂದೇ ಬಾಕಿ ಇದ್ದದ್ದು. ಆ ಮನೆಯೂ ಅವನದಾಗಿರಲಿಲ್ಲ. ಬಾಡಿಗೆ ಮನೆ ಅದು. ಅದರ ಅಳತೆಯೊ ಹತ್ತು ಬೈ ಹತ್ತು ಅಡಿ ಮಾತ್ರ. ಮೇಲೆ ತಗಡು ಹಾಸಿದ್ರು. ಸಾಲಾಗಿ ಅದೇ ತರದ ಇನ್ನೂ ನಾಲ್ಕು ಮನೆಗಳಿದ್ದವು. ಅಂತಹ ಬಂಗಲೆಯಲ್ಲಿದ್ದ ಮನುಷ್ಯ!
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹೊಸ ಕಂತು
ಹಳ್ಳಿಯಿಂದ ಬಂದು ಮೈಸೂರು ತಲುಪಿದಾಗ ಎರಡು ಗಂಟೆಯಾಗಿತ್ತು. ಆಗ ನಗರದ ಬಸ್ ನಿಲ್ದಾಣವೇ ಬಹಳ ಜನಸಂದಣಿಯದು. ಗ್ರಾಮಾಂತರ ಭಾಗಗಳಿಂದ, ಮೈಸೂರು ಬೆಂಗಳೂರು ರಸ್ತೆಯಿಂದ ಬರುತ್ತಿದ್ದ ಬಸ್ಸುಗಳು ಬಹಳ ಕಡಿಮೆ ಇದ್ದವು. ಅದು ಆಗ ಬಸ್ ನಿಲ್ದಾಣವೆ ಆಗಿರಲಿಲ್ಲ. ಸುಮ್ಮನೆ ಒಂದು ಮರದ ಕೆಳಗೆ ಕೂತೆ. ಹಾಸ್ಟೆಲಿಗೆ ಹೋಗಿ ಇಷ್ಟು ಬೇಗ ಅಲ್ಲಿ ಏನು ಮಾಡಲಿ… ಗೆಳೆಯರೆಲ್ಲ ಊರಿಗೆ ಹೋಗಿದ್ದಾರಲ್ಲಾ ಎಂದು ಸಣ್ಣ ಸಣ್ಣ ಕಲ್ಲುಗಳ ಎತ್ತಿಕೊಂಡು ದಪ್ಪದೊಂದು ಕಲ್ಲಿಗೆ ಹೊಡೆದೊಡೆದು ಉರುಳಿಸುತ್ತಿದ್ದೆ. ಏನೊ ಸುಖ ಎನಿಸಿತು. ಸಣ್ಣ ಪುಟಾಣಿ ಕಲ್ಲು ದಪ್ಪ ಕಲ್ಲಿಗೆ ಹೊಡೆದು ಉರುಳಿಸಿಬಿಟ್ಟಿತು ಎಂದು ಏನೊ ಎಚ್ಚರವಾಯಿತು. ಆ ಆಟದಲ್ಲಿ ಬಹಳ ಹೊತ್ತು ಕಳೆದೆ. ಜನ ಸಂಚಾರ ಅಷ್ಟಿರಲಿಲ್ಲ. ಯಾರೊ ಒಬ್ಬ ಸೌತೆಕಾಯಿ ಮಾರುವವನು ವ್ಯಾಪಾರವಿಲ್ಲದೆ ನನ್ನ ಬಳಿ ಬಂದು ಕೂತ. ಭಾಗಶಃ ಬಿಸಿಲಿಗೆ ದಣಿದಿದ್ದ. ಒಂದು ತುಂಡು ಸೌತೆಕಾಯಿಗೆ ಹತ್ತು ಪೈಸೆ ಕೊಟ್ಟು ತಿಂದೆ. ಅವನು ಕಡಿಮೆಗೆ ಕೊಟ್ಟಿದ್ದ. ಯಾವೂರಿಂದ ಬಂದೆ ಎಂದು ವಿಚಾರಿಸಿದ. ಹೇಳಿದೆ. ತನ್ನದು ಸಾತನೂರು; ಈ ಪಟ್ಟಣಕ್ಕೆ ಬಂದು ಇಪ್ಪತ್ತು ವರ್ಷ ಆಯಿತು ಎಂದ. ತಟ್ಟನೆ ನನಗೆ ಶಾಂತಿಯ ನೆನಪಾಯಿತು. ಅವಳನ್ನು ನೋಡಲು ಆಗದಾಯಿತಲ್ಲಾ ಎಂದು ಬೇಸರಿಸಿ; ‘ಆ ವೂರೆಲಿ ಮಾದಯ್ಯ ಅಂತಾ ಪದ ಯೇಳುನಿದ್ದಾನಲ್ಲಾ; ನಿನಗೆ ಅವನು ಗೊತ್ತೇ’ ಎಂದು ಪ್ರಶ್ನಿಸಿದೆ. ‘ಅಯ್ ಇದೆನಪ್ಪಾ ಇಂಗೆ ಕೇಳ್ತಿಯಲ್ಲಾ; ಆ ಸೀಮೆಗೆಲ್ಲ ಅವುನೆ ತಾನೆ ಪದಯೇಳುನೂ… ನಾನೂ ಕೇಳಿವ್ನಿ. ಆವಾಗಾವಾಗ ವೂರ್ಗೆ ವೋಗ್ಬತ್ತಿರ್ತೀನಿ… ನಿಮ್ಮೂರ್ಗೆ ತಾನೇನಪ್ಪಾ ಅವುನ್ಮಗಳ ಲಗ್ನ ಮಾಡ್ಕೊಟ್ಟಿದ್ದುದೂ… ಚೆನ್ನಾಗ್ ಗೊತ್ತು. ಆ ಪಾಪಿ ಮುಂಡೆ ಮಗ ಬಾಳ್ಗೊಡುಸ್ದೆನೆ ಅವುನ್ಮಗಳ ಬಾಮಿಗೆ ತಳ್ಬುಟ್ನಂತಲ್ಲಾ… ಉದ್ದಾರ ಆದನೆ ಅವುನೂ… ಗೊತ್ತೆ ನಿನ್ಗವುನೂ’ ಎಂದು ತೀಕ್ಷ್ಣವಾಗಿ ದಿಟ್ಟಿಸಿ ಕೇಳಿದ. ಒಂದು ಕ್ಷಣ ಜೀವ ತಲ್ಲಣಿಸಿತು. ಮಾದಯ್ಯನ ಕಂಸಾಳೆಯ ಸದ್ದು ಕಿವಿಯಲ್ಲಿ ಮೊಳಗಿತು. ಸಾಕ್ಷಿ ಹೇಳು ಎಂದು ಕೂಗಿದಂತಾಯಿತು. ಬೆವರಿದೆ. ತೊದಲುತ್ತ ‘ಗೊತ್ತಿಲ್ಲ; ನಾನು ಅವುರ್ ಜಾತಿಯೋನಲ್ಲಾ’ ಎಂದು ಮಾತು ಬದಲಿಸಿದೆ. ಆತ ಬಯ್ಯುತ್ತಲೇ ಇದ್ದ.
ಅವನ ಮಾತಿನಿಂದ ಸ್ಪಷ್ಟವಾಯಿತು. ಅಪ್ಪನ ಬಗ್ಗೆ ಅವನಿಗೆ ಚೆನ್ನಾಗಿ ಗೊತ್ತಿತ್ತು. ಆ ಹಳೆಯ ಮಂಗಾಡಳ್ಳಿಯ ಹುಚ್ಚನ ಕೊಲೆಯ ಸಂಚಿನಲ್ಲಿ ಇದ್ದ ಅಪ್ಪನ ಪಾತ್ರವನ್ನು ನೆನೆಸುತ್ತಿದ್ದ. ಯಾವ್ಯಾವ ಮನುಷ್ಯರು ಯಾವ ಯಾವ ರೂಪದಲ್ಲಿ ಎದುರಾಗುವರೊ ಎಂಬ ವಿಸ್ಮಯ ಕಾಡಿತು. ನಮ್ಮೂರು ಕಡೆಯೋನು… ತಕೋ ಇನ್ನೊಂದಾ ಎಂದು ಸೌತೆಕಾಯಿ ಕೊಡಲು ಹತ್ತಿರ ಬಂದ. ‘ಬೇಡ ಬೇಡಾ’ ಎಂದು ಹಿಂದೆ ಸರಿದೆ. ಎಲ್ಲಿ ಅವನು ಗುರುತು ಹಿಡಿಯುವನೊ ಎಂಬ ಅಂಜಿಕೆ ಬಂತು. ‘ಮೊದ್ಲು ಕೊಟ್ಟಿದ್ದು ನೆನ್ನೆ ಸಂಜೆದೂ… ನೀರಾಕಿ ಇಟ್ಟಿದ್ದೆ. ಇದು ಚೆನ್ನಾಗದೆ ತಿನ್ನು’ ಎಂದು ಉಪ್ಪುಕಾರ ಹಾಕಿಕೊಟ್ಟ. ತಿಂದು ಅತ್ತ ಹೊರಡಲು ಮುಂದಾದೆ. ‘ನಿಮ್ಮೂರಿಂದ ಬಂದಾ… ಯಾರ್ಮಗಾ…’ ಎಂದ ಯಾವುದೊ ಹೆಸರು ಹೇಳಿ; ಬರ್ತೀನಿ ಎಂದು ಕಾಲಿಗೆ ಬುದ್ದಿ ಹೇಳಿದ್ದೆ. ಆಗ ನಾನು ಒಮ್ಮೆಯೂ ಸಿಟಿ ಬಸ್ಸಲ್ಲಿ ಸಂಚರಿಸುತ್ತಿರಲಿಲ್ಲ. ಕಾಯುವ ಹತ್ತುವ ಇಳಿಯುವ ತಾಳ್ಮೆಯೆ ಇರುತ್ತಿರಲಿಲ್ಲ. ಬರಬರನೆ ದಾಪುಗಾಲಲ್ಲಿ ರಸ್ತೆ ಬದಿಯಲ್ಲಿ ನಡೆಯುವುದೇ ರೂಢಿಯಾಗಿತ್ತು. ಬಸ್‌ಚಾರ್ಜ್‌ಗೆ ಎಷ್ಟೋ ಬಾರಿ ಕಾಸೇ ಇರುತ್ತಿರಲಿಲ್ಲ.
ನಗರ ಸುತ್ತಿ ಸಂಜೆಗೊ ರಾತ್ರಿಗೊ ಹಾಸ್ಟೆಲಿಗೆ ಹೋದರಾಯಿತು ಎಂದು ದೊಡ್ಡಗಡಿಯಾರದ ಬಳಿ ಬಂದೆ. ಹಳ್ಳಿಯ ಅದದೇ ಚಿತ್ರಗಳು ಕಣ್ಣಿಗೆ ಕಸ ಬಿದ್ದಂತೆ ಒತ್ತುತ್ತಲೇ ಇದ್ದವು. ಮಾರ್ಕ್ಸ್‌ವಾದಿ ಕಛೇರಿ ಅಲ್ಲೇ ಇತ್ತು. ಸುಮ್ಮನೆ ಒಳಗೆ ಹೋದೆ. ಹತ್ತಾರು ಬಗೆಯ ದಿನಪತ್ರಿಕೆ ವಾರಪತ್ರಿಕೆಗಳು ಅಲ್ಲಿದ್ದವು. ಕೆಲವರು ಓದುತ್ತಿದ್ದರು. ಮತ್ತೆ ಕೆಲವರು ರಾಜಕೀಯ ಚರ್ಚೆಗಳಲ್ಲಿ ಮುಳುಗಿ ರಷ್ಯಾ ದೇಶವನ್ನು ಹೊಗಳಿ ಸಾಮ್ರಾಜ್ಯಶಾಹಿ ಅಮೆರಿಕಾವನ್ನು ಖಂಡಿಸುತ್ತಿದ್ದರು. ಅವರು ಯಾವತ್ತೂ ಬಳಸುತ್ತಿದ್ದ ‘ಸಾಮ್ರಾಜ್ಯಶಾಹಿ’ ಪದಕ್ಕೆ ಬಹಳ ಕಾಲದ ತನಕ ಅರ್ಥವೇ ಗೊತ್ತಾಗಿರಲಿಲ್ಲ. ಅವರ ಪರಿಭಾಷೆಗಳು ವಿಚಿತ್ರವಾಗಿದ್ದು ನನ್ನನ್ನು ಅನ್ಯನನ್ನಾಗಿ ಮಾಡುತ್ತಿದ್ದವು. ಹೆಚ್ಚು ಹೊತ್ತು ಕೂರುವ ಯಾವ ಆತ್ಮೀಯತೆಯು ಅಲ್ಲಿರಲಿಲ್ಲ. ಅರ್ಧರ್ದ ಚಹಾ ಕೊಡಿಸಲು ಅವರಲ್ಲೆ ಸರದಿಯಿತ್ತು. ಚಹಾ ಸಿಗುವುದೇನೊ ಎಂದು ಕಾದೆ. ಸಿಗಲಿಲ್ಲ. ಅರಮನೆಯ ಒಳದಾರಿ ಹಿಡಿದು ಮಹಾರಾಜ ಕಾಲೇಜಿನ ಹಾಸ್ಟೆಲು ದಾರಿ ಕ್ರಮಿಸಿದೆ. ಸಂಜೆಯಾಗಿತ್ತು. ಕೃಷ್ಣ ಬೇಕರಿಯ ಪಕ್ಕದಲ್ಲೆ ಒಂದು ಚೋಟಾ ಟೀ ಬನ್ನು ಅಂಗಡಿಯಿತ್ತು. ಕಾಸಿತ್ತು. ಬನ್ನು ತಿನ್ನುತ್ತ ಚಹಾ ಗುಟುಕರಿಸಿದೆ. ರಾಮಸ್ವಾಮಿ ಸರ್ಕಲ್ ವಿಶಾಲವಾಗಿತ್ತು. ಸಂಜೆಗೆಲ್ಲ ಪಾದಚಾರಿಗಳ ಅಬ್ಬರ ತಂತಾನೆ ಹೆಚ್ಚಾಗುತ್ತಿತ್ತು. ತನ್ನದು ವ್ಯರ್ಥವಾದ ಬಾಳುವೆ ಎನಿಸುತಿತ್ತು. ಎತ್ತರದಿಂದ ಬೀದಿ ದೀಪಗಳ ಬೆಳಕು ಬಿರಿಯುತ್ತಿತ್ತು. ಸರ್ಕಲ್ಲಿನ ಕಲ್ಲು ಬೆಂಚಿನ ಮೇಲೆ ಒಬ್ಬನೆ ಬೇಸರದಲ್ಲಿ ಕೂತಿದ್ದೆ. ತಳುಕಿನ ಕನ್ನೆಯರು ನನ್ನೊಳಗೆ ಹೆಪ್ಪುಗಟ್ಟುತ್ತಿದ್ದ ಖಿನ್ನತೆಯನ್ನು ಬಿಡಿಸಲಾಗದು ಎಂಬಂತೆ ನಿರಾಸಕ್ತಿಯಿಂದ ಮುಂದೆ ಮುಂದೆ ಸಾಗುತ್ತಿದ್ದರು.
ಅಹಾ! ದೇವರೇ ನೀನೊಬ್ಬ ಮೋಸಗಾರ ಎಂದು ಶಪಿಸಿದೆ. ಆ ಗಂಧವತಿಯರ ಹಿಂದೆ ಓಡಿ ಹೋಗಲಾರದಂತೆ ನನ್ನನ್ನು ಬಂಧಿಸಿ ಕಟ್ಟಿಹಾಕಿ ಬಿಟ್ಟಿರುವೆಯಲ್ಲಾ ಎಂಬ ಹತಾಶೆಯಲ್ಲಿ ಕುಗ್ಗಿದ್ದೆ. ವೇದನೆಯಲ್ಲೂ ಸುಖವಿದೆ ಎಂದು ಆಗಲೇ ತಿಳಿದದ್ದು. ನಾನು ನಿರ್ಗತಿಕ ಎಂದು ಇಡೀಯಾಗಿ ಒಪ್ಪಿಕೊಂಡರೆ ಏನೋ ನಿರಾಳತೆ ಉಂಟಾಗುತ್ತಿತ್ತು. ಯಾರೂ ಇಲ್ಲ ಎಂದಾಗಲೇ ಏನೋ ಇದೆ ಎಂಬ ಸಣ್ಣ ಆತ್ಮವಿಶ್ವಾಸ ಮೂಡುತ್ತಿತ್ತು. ರಸ್ತೆ ಬದಿಯ ಗಮ್ಮನೆಯ ಬಗೆ ಬಗೆಯ ತಿಂಡಿಗಳು ಇನ್ನಿಲ್ಲದಷ್ಟು ಹಸಿವು ಆಸೆಗಳ ಹೆಚ್ಚಿಸಿ ಕಠಿಣ ಸವಾಲು ಒಡ್ಡುತ್ತಿದ್ದವು. ಅವನ್ನೆಲ್ಲ ಸುಲಭವಾಗಿ ಮೀರಬಹುದು ಎಂಬ ಅರಿವು ಮೂಡಿದ್ದು ಆಗಲೇ. ಈ ಯಾವ ಬೆಡಗು ಬಿನ್ನಾಣಗಳಿಗೂ ಬಯಕೆ ಬಾಯಾರಿಕೆಗಳಿಗೂ ತನಗೂ; ಈ ಸುತ್ತಲಿನ ಎಲ್ಲ ಸ್ಥಿತಿಗೂ ಯಾವ ಸಂಬಂಧಗಳೂ ಇಲ್ಲ ಎಂದು ಕಠಿಣವಾಗಿ ಮನಸ್ಸನ್ನು ನಿಯಂತ್ರಿಸಿದರೆ ಈ ಬಾಹ್ಯ ಸುಖಗಳೆಲ್ಲ ಒಂದರೆಗಳಿಗೆಯಲ್ಲೆ ಮಾಯವಾಗುತ್ತವೆ ಎಂಬುದು ನಿಜವಿತ್ತು. ತಾತನ ಎಷ್ಟೋ ಮಾತುಗಳು ಅಂತಹ ವೇಳೆಯಲ್ಲಿ ನೆನಪಾಗುತ್ತಿದ್ದವು. ದೀಪಗಳ ಅಲಂಕಾರಿಕ ಬೆಳಕಿನ ಸಮಯ ಹೋದದ್ದೆ ತಿಳಿಯಲಿಲ್ಲ. ರಸ್ತೆ ಬದಿಯಲ್ಲಿ ಏನಾದರು ತಿಂದು ಹೋಗುವ ಎನಿಸಿ ಎದ್ದು ಕೆಳಗಿಳಿದೆ. ಕಡಿಮೆ ಬೆಲೆಯ ತಳ್ಳು ಗಾಡಿಯಲ್ಲಿ ರುಚಿಯಾದ ಪಲಾವ್ ಸಿಗುತ್ತಿತ್ತು. ತಿಂದು ಹಾಸ್ಟೆಲು ಸೇರಿದೆ. ಇಡೀ ಹಾಸ್ಟೆಲು ಬಿಕೊ ಎನ್ನುತ್ತಿತ್ತು. ನಾನಿದ್ದ ಬ್ಲಾಕಿನಲ್ಲಿ ದೆವ್ವಗಳಿವೆ ಎಂದು ಹೆದರಿಸಿ ಬಿಟ್ಟಿದ್ದರು. ನನಗೆ ಭಯವೇ… ಏನೊ ನೆರಳು ಸರಿದಂತಾಯಿತು. ನಾನೇ ಒಂದು ದೆವ್ವ ನನಗಿಂತ ಇನ್ನಾವ ದೊಡ್ಡ ದೆವ್ವ ಬಂದೀತು ಎಂದು ರೂಂ ಒಳಗೆ ಮಲಗುವ ಬದಲು ಬೀಸುವ ತಂಗಾಳಿಯ ಕಾರಿಡಾರ್‌ನಲ್ಲಿ ಮಲಗುವ ಎಂದು ಚಾಪೆ ಹಾಸಿ ದಿಂಬು ಹಾಕಿ ಐದಾರು ಪುಸ್ತಕ ಹರವಿ ಗೋಡೆಗೆ ಒರಗಿ ಕಾಲು ಚಾಚಿ ನಿಟ್ಟುಸಿರು ಬಿಟ್ಟೆ. ಮರಮುಟ್ಟುಗಳ ಕಟ್ಟಡವಾಗಿದ್ದ ಆ ಕಾರಿಡಾರ್ ಭವ್ಯವಾಗಿತ್ತು. ಆಕಾಶ ಮಲ್ಲಿಗೆಯ ಸಾಲು ಮರಗಳು ಹೂ ಉದುರಿಸಿ ಘಮ್ಮೆನ್ನುತ್ತಿದ್ದವು. ತಂಗಾಳಿ ಬೀಸುತ್ತಲೆ ಇತ್ತು. ಸುಸ್ತಾಗಿದ್ದೆ. ಆಕಳಿಕೆ ಬರುತ್ತಿತ್ತು. ಕೆಳಗೆ ಅಲ್ಲಿ ದೂರದಲ್ಲಿದ್ದ ವಾಶ್ ರೂಂಗಳತ್ತ ಹೋಗಿ ಮುಖ ತೊಳೆದು ಬಂದೆ. ಅಲ್ಲೊಬ್ಬ ಇಲ್ಲೊಬ್ಬ ಎಂಬಂತೆ ಕೆಲವೇ ಕೆಲವರು ಸೀನಿಯರ್‌ಗಳು ಗಂಭೀರವಾಗಿ ಓದುತ್ತ ಬಾಗಿಲು ಮುಚ್ಚಿಕೊಂಡಿದ್ದರು. ಅಂತವರಲ್ಲಿ ಐ.ಎ.ಎಸ್., ಐ.ಪಿ.ಎಸ್. ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವವರೆ ಹೆಚ್ಚಿದ್ದರು. ನನ್ನ ರೂಂಮೇಟ್ ಊರಿಗೆ ಹೋಗಿದ್ದ. ಆಗಲೇ ಅವನಿಗೆ ತಾನೊಬ್ಬ ದೊಡ್ಡ ಅಧಿಕಾರಿ ಆಗಬೇಕೆಂಬ ಹಠವಿತ್ತು. ನನಗೂ ಒತ್ತಾಯಿಸುತ್ತಿದ್ದ. ಅದೊಂದು ತಮಾಷೆ ಎನಿಸುತ್ತಿತ್ತು. ನಾನೆಲ್ಲಿ, ಆ ಪರೀಕ್ಷೆ ಎಲ್ಲಿ ಎಂಬ ಸಂಕೋಚವಾಗುತ್ತಿತ್ತು. ಬಹಳ ಹೊತ್ತಾಗಿತ್ತು. ಸಣ್ಣದಾಗಿ ಚಳಿ ಆಗುತ್ತಿತ್ತು. ಸುತ್ತೆಲ್ಲ ವಿಶಾಲವಾದ ಮರಗಳಿದ್ದವು. ಒಳಗೆ ಬಂದು ಮಲಗಿದೆ. ಹೊರಳಾಟ. ಎಲ್ಲೊ ಇದ್ದಂತೆ; ಜಾರಿ ಬಿದ್ದು ಹೊಳೆಯಲ್ಲಿ ಈಜುಬಾರದೆ ತೇಲಿದಂತೆ ಕನಸು ಬಿದ್ದಿತ್ತು. ಅಲ್ಲೇ ನಿದ್ದೆ ಅಲ್ಲೇ ಎಚ್ಚರ! ಕನಸೊ ಕಲ್ಪನೆಯೊ; ಅವೆರಡು ಕೂಡಿದಂತೆ ಭ್ರಮೆ ಆದಂತಿತ್ತು. ಆ ಬಸ್ ನಿಲ್ದಾಣದಲ್ಲಿ ಸೌತೆಕಾಯಿ ಮಾರುತ್ತಿದ್ದವನು; ನಿರ್ಣಾಯಕ ಧನಿಯಲ್ಲಿ ಕೇಳುತ್ತಿದ್ದ; ‘ನಿಜಾ ಯೇಳೂ; ನೀನದೇ ವೂರ್ನೋನಾದ್ ಮ್ಯಾಲೆ ನಿನುಗದು ಗೊತ್ತಿರ್ತದೇ… ಆ ಮಾದೇವಮ್ಮ ಯಂಗೆ ಸತ್ಲೂ… ಯಾರ್ಕಾರ್ಣ… ನಿನುಗೆ ಗೊತ್ತಿಲ್ಲುವೇ; ನೀನಾಗ ಅಲ್ಲಿರ್ಲಿಲ್ಲುವೇ… ಅನ್ನಾಯವಾಗಿ ಅವುಳ ಕೊಂದೊನು ನಿನುಗೆ ಗೊತ್ತಿಲ್ಲುವೇ’ ಎಂದು ದೊಡ್ಡ ಪಂಚಾಯ್ತಿಯಲ್ಲಿ ನಿಲ್ಲಿಸಿ ಕೇಳಿದಂತಾಗಿ ಎದ್ದು ಕೂತಿದ್ದೆ. ಇದೇನಿದು ನಾಟಕವೇ… ಎಲ್ಲಿಯ ನಾನು; ಎಲ್ಲಿಯ ಇವನು? ಎಷ್ಟು ಖಚಿತವಾಗಿ ಕೇಳುವನಲ್ಲಾ…
ಅನಾಮಿಕನಾಗಿಯೂ ಎಲ್ಲ ತಿಳಿದಂತೆ ನನ್ನನ್ನೆ ಯಾಕೆ ಕೇಳಬೇಕಿತ್ತು ಇವನು ಎಂದು ಸಂಬಂಧಗಳ ಆಕಸ್ಮಿಕ ನಿಗೂಢತೆಯ ಬಿಡಿಸಲಾರದೆ ಮುಂಗೋಳಿಯ ಆ ಹೊತ್ತಲ್ಲಿ ಎದ್ದು ಕೂತಿದ್ದೆ. ಕೃಷ್ಣಮೂರ್ತಿಪುರಂನ ಶ್ರೀರಾಮ ದೇಗುಲದ ಗಂಟೆಗಳು ಮೊಳಗುತ್ತಿದ್ದವು. ಸುಬ್ಬಲಕ್ಷ್ಮಿಯ ಸುಪ್ರಭಾತ ರಿಂಗಣಿಸುತ್ತಿತ್ತು. ಆ ಹಳ್ಳಿಯಲ್ಲಿದ್ದಿದ್ದರೆ ತಾನೀಗ ಆ ಕೋಳಿ ಹಿಂಡಿನ ಸದ್ದಿಗೆ ಕಿವಿಗೊಡಬೇಕಿತ್ತು; ಇಲ್ಲವೇ ಹಂದಿಗೂಡಿನ ಕೆಲಸಕ್ಕೆ ಮುಂದಾಗಬೇಕಾಗುತ್ತಿತ್ತು. ಆಕಾಶ ಮಲ್ಲಿಗೆಯ ಹೂ ಉದುರಿ ನೆಲವೆಲ್ಲ ಮೊಸರು ಚೆಲ್ಲಿದಂತಾಗಿತ್ತು. ದಿಗಂತ ಕೆಂಪಡರುತಿತ್ತು. ಹಕ್ಕಿಗಳಾಗಲೇ ಹಾಡಿ ಸುಮ್ಮನೆ ಬಿಸಿಲಿಗಾಗಿ ಕಾಯುತ್ತಿದ್ದವು.
ನಿನ್ನೆ ಇದೇ ವೇಳೆಗೆ ತಾತ ಏನೇನು ಮಾಡಿಸಿದ್ದ ಎಂಬುದೆಲ್ಲ ತುಂಬಿ ಬಂತು. ತಾನು ಇನ್ನೊಮ್ಮೆ ಆ ಮರದಲ್ಲಿ ಜೋತು ಬಿದ್ದಿದ್ದ ಗಂಟೆಯ ಬಾರಿಸಬೇಕು ಎನಿಸುತಿತ್ತು. ರಾಮ ದೇಗುಲದ ಗಂಟೆಯ ಸದ್ದು ನನ್ನದಲ್ಲ ಎಂದುಕೊಂಡೆ. ಆ ಬ್ರಾಹ್ಮಣರ ನೂರೆಂಟು ಪೂಜೆಗಳೇ ತಾಳ್ಮೆ ಕೆಡಿಸುತ್ತಿದ್ದವು. ಅವರಿಗೂ ಅದೇ ಬಾರೀ ಧರ್ಮಶ್ರದ್ಧೆ ಭಕ್ತಿ ಎನಿಸಿತ್ತು. ಇವತ್ತು ಲೈಬ್ರರಿಗೆ ಹೋಗಿ ಬೇಕಾದ ಎಲ್ಲ ಪುಸ್ತಕಗಳ ರಾಶಿ ಹಾಕಿಕೊಂಡು ಕೂತುಬಿಡಬೇಕು ಎಂದುಕೊಂಡೆ. ಮನಸ್ಸು ಚಂಚಲವಾಯಿತು. ತಾತ ಹೇಳಿದ್ದು ನೆನಪಾಗಿ; ಹೌದೂ; ಅದೊಂದು ದರಿದ್ರ ಜವಾಬ್ದಾರಿಯ ಮುಗಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ. ಸ್ನಾನ ಮಾಡಿದೆ. ರೂಮೆಟ್ ಶ್ರೀಧರ ರೂಮಿಗೆ ಯಾವಾಗಲಾದರೂ ಬರುವುದಿತ್ತು. ಬೀಗದ ಕೀಲಿಯ ಅವನಿಗೆ ಗೊತ್ತಿದ್ದ ಜಾಗದಲ್ಲಿ ಬಚ್ಚಿಟ್ಟಿದ್ದೆ. ಅವನು ಅಶೋಕಪುರಂನಲ್ಲೆ ಇದ್ದ. ಅವನ ತಂದೆ ತನ್ನ ಎರಡನೇ ಮಡದಿಯ ಜೊತೆಗೆ ಇದ್ದರು. ವೃತ್ತಿಯಲ್ಲಿ ಶಿಕ್ಷಕರು. ಹಣಕಾಸಿನ ಕೊರತೆಯೆ ಶ್ರೀಧರನಿಗೆ ಇರಲಿಲ್ಲ. ನನ್ನ ಅನೇಕ ಖರ್ಚುಗಳಿಗೆ ಅವನೇ ಆಸರೆ ಆಗುತ್ತಿದ್ದ. ನನ್ನ ಚರಿತ್ರೆಯೆಲ್ಲ ಅವನಿಗೆ ಗೊತ್ತಿತ್ತು. ಈ ರಜೆಯಲ್ಲಿ ಏನೇನು ಕೆಲಸ ಮಾಡಬೇಕು ಎಂದು ಪಟ್ಟಿ ಮಾಡಿಕೊಂಡಿದ್ದೆ. ಮೊದಲಿಗೆ ಆ ದೊಡ್ಡಣ್ಣನ ಮನೆಗೆ ಹೋಗಿ ತಾನು ಇದೇ ನಗರದಲ್ಲಿ ಬಿ.ಎ. ಓದುತ್ತಿರುವುದನ್ನು ತಿಳಿಸಬೇಕು ಎಂದು ಅವನಿದ್ದ ಗಾಂಧಿ ನಗರಕ್ಕೆ ಬಂದೆ. ಆ ಹೊಲಗೇರಿ ಮಾದರ ಕೇರಿಗಳಿಗೆ ಯಾರು ಯಾಕೆ ಅಂತಹ ಹೆಸರುಗಳಿಟ್ಟರೊ ಗೊತ್ತಿಲ್ಲ. ಎಲ್ಲಿಯ ಗಾಂಧಿ ಎಲ್ಲಿಯ ಅಶೋಕ ಎಲ್ಲೆಲ್ಲಿನ ಅಸ್ಪೃಶ್ಯರ ಕೇರಿಗಳೊ ಪೇಟೆ ಪಟ್ಟಣ ಬೀದಿಗಳೊ… ಸ್ಲಮ್ಮುಗಳೊ ಏನೊ ಒಂದು ಹಮ್ಮು ಬಿಮ್ಮು ನನ್ನ ಕಾಲಿಗೆ ಮನಸ್ಸಿಗೆ ಚೈತನ್ಯ ನೀಡಿದ್ದವು.
ಹೇಳಿಕೊಳ್ಳಬೇಕು ಎಂಬ ತುಡಿತದಲ್ಲಿ ಏನೊ ಸಂಕಟ. ನನ್ನ ತಾಯಿಯನ್ನು ಇದೇ ದೊಡ್ಡಣ್ಣ ಹಾಗೂ ಅವನ ತಮ್ಮ ನನ್ನ ಅಪ್ಪ ಇಬ್ಬರೂ ಒಟ್ಟಾಗಿಯೇ ತಾನೆ ಕೊಂದುಬಿಟ್ಟದ್ದು ಎಂಬ ಸಂಕಟ ಮೈತುಂಬ ಬಿಸಿ ರಕ್ತದ ಜೊತೆ ಹರಿಯುತ್ತಿತ್ತು. ಮನಸ್ಸು ಹಿಂಜರಿಯುತ್ತಿತ್ತು. ತಾತ ಮುಂದೆ ನಡೀ ಎಂದು ಬೆನ್ನ ಹಿಂದೆ ತಳ್ಳಿಕೊಂಡು ಬಂದಂತಾಯಿತು.
ಎತ್ತರದಿಂದ ಬೀದಿ ದೀಪಗಳ ಬೆಳಕು ಬಿರಿಯುತ್ತಿತ್ತು. ಸರ್ಕಲ್ಲಿನ ಕಲ್ಲು ಬೆಂಚಿನ ಮೇಲೆ ಒಬ್ಬನೆ ಬೇಸರದಲ್ಲಿ ಕೂತಿದ್ದೆ. ತಳುಕಿನ ಕನ್ನೆಯರು ನನ್ನೊಳಗೆ ಹೆಪ್ಪುಗಟ್ಟುತ್ತಿದ್ದ ಖಿನ್ನತೆಯನ್ನು ಬಿಡಿಸಲಾಗದು ಎಂಬಂತೆ ನಿರಾಸಕ್ತಿಯಿಂದ ಮುಂದೆ ಮುಂದೆ ಸಾಗುತ್ತಿದ್ದರು.
ಅವನ ಮನೆ ಮುಂದೆ ನಿಂತಿದ್ದೆ ಎಂತಹ ದುಃಸ್ಥಿತಿ! ಇವನೇನಾ ಆ ಸಾಹೇಬ… ಕುದುರೆ ಗಾಡಿಯ ಮೇಲೆ ಬಂದು ದಿಕ್ಕೆಟ್ಟವರಿಗೆ ಹೊಸ ಬಟ್ಟೆ ದಾನ ಮಾಡುತ್ತಿದ್ದವನು ಎನಿಸಿ ಅಚ್ಚರಿಗೊಂಡೆ. ಆ ಕಾಲಕ್ಕೇ ಆತ ವಿಪರೀತ ಲಂಚಕೋರನಾಗಿ ಹಲವು ಬಾರಿ ಸಸ್ಪೆಂಡ್ ಆಗಿದ್ದ. ಡಿಸ್‌ಮಿಸ್ ಒಂದೇ ಬಾಕಿ ಇದ್ದದ್ದು. ಆ ಮನೆಯೂ ಅವನದಾಗಿರಲಿಲ್ಲ. ಬಾಡಿಗೆ ಮನೆ ಅದು. ಅದರ ಅಳತೆಯೊ ಹತ್ತು ಬೈ ಹತ್ತು ಅಡಿ ಮಾತ್ರ. ಮೇಲೆ ತಗಡು ಹಾಸಿದ್ರು. ಸಾಲಾಗಿ ಅದೇ ತರದ ಇನ್ನೂ ನಾಲ್ಕು ಮನೆಗಳಿದ್ದವು. ಅಂತಹ ಭಂಗಲೆಯಲ್ಲಿದ್ದ ಮನುಷ್ಯ! ಸದ್ಯ ಹೆಣ್ಣು ಮಗಳಿಗೆ ಮದುವೆ ಆಗಿತ್ತು. ನನ್ನ ತಮ್ಮನನ್ನು ದತ್ತು ತೆಗೆದುಕೊಂಡಿದ್ದರಲ್ಲವೇ… ಈಗವನು ಅವರ ಮನೆ ಬಿಟ್ಟಿದ್ದ. ಎಲ್ಲಿದ್ದಾನೆಂಬ ಗುರುತು ನನಗೆ ಇರಲಿಲ್ಲ. ಅದೊಂದು ಕೊಂಪೆ. ಅಂತವರ ಸಂಸಾರಗಳೆ ಅಲ್ಲಿದ್ದವು. ಬಾಗಿಲ ಕುಟ್ಟಿದೆ. ದೊಡ್ಡಮ್ಮ ಕದ ತೆಗೆದಳು. ಬಹಳ ಅಚ್ಚರಿ ಪಟ್ಟಳು. ‘ನೀನೇನೊ; ಗುರ್ತೆ ಸಿಗ್ಲಿಲ್ಲಾ… ಏನೊ ಕಾಲೇಜು ಉಡುಗ್ನಂಗೆ ಕಾಣ್ತಿಯಲ್ಲೊ’ ಎಂದು ಒಳ ಕರೆದಳು ಊಹೆ ಮಾಡಿಕೊಳ್ಳಿ ಅಷ್ಟು ಚಿಕ್ಕ ಜಾಗದಲ್ಲಿ ಏನಿರುತ್ತೆ ಏನಿರುವುದಿಲ್ಲ ಎಂದು. ಕಬ್ಬಿಣದ ಚೇರಿತ್ತು. ಟ್ರಂಕುಗಳಿದ್ದವು. ತುಕ್ಕು ಹಿಡಿದಂತಿದ್ದವು. ದಿಂಬುಗಳ ಅಲ್ಲಿ ಜೋಡಿಸಿದ್ದರು. ‘ಅಲ್ಲೇ ಕೂರಪ್ಪಾ’ ಎಂದಳು. ಕೂತೆ ಸಿಗರೇಟಿನ ಕಮಟು ವಾಸನೆ ತುಂಬಿತ್ತು. ತಳ ಹಿಡಿದು ನಜ್ಜುಗುಜ್ಜಾಗಿದ್ದ ಪಾತ್ರೆಗಳನ್ನು ಜೋಡಿಸಿದ್ದರು. ಐದಾರು ಸ್ಟೀಲ್ ಗ್ಲಾಸುಗಳು. ಒಂದು ಕಂಚಿನ ತಪ್ಪಲೆ. ಪುಟ್ಟ ಅಡ್ಡಗೋಡೆ ಇತ್ತು ಹಜಾರಕ್ಕೂ ಅಡುಗೆ ಮನೆಗೂ ಆ ಸಾಹೇಬ ಸಾಹುಕಾರನ ಒಂದು ಗತಕಾಲದ ಮಂಚ ಹಜಾರವನ್ನೆಲ್ಲ ನುಂಗಿಕೊಂಡು ತಿಗಣೆಗಳ ತವರು ಮನೆಯಾಗಿ ಕೂತಿತ್ತು. ಜಿಗುಪ್ಸೆ ಬಂತು.
ಒಂದು ಗ್ಲಾಸು ನೀರು ಕೊಟ್ಟಳು ದೊಡ್ಡಮ್ಮ. ಗ್ಲಾಸು ಚುಂಗು ವಾಸನೆ ಬೀರಿತು. ‘ಎಲ್ಲಿ ದೊಡ್ಡಮ್ಮಾ ದೊಡ್ಡಣ್ಣ’ ಎಂದು ಕೇಳಿದೆ. ‘ಅಯ್ಯೋ ನೆಕ್ಕಬರುಕೋಗದೆ ಬತ್ತದೆ ತಾಳಪ್ಪ ನೋಡುವಂತೆ’ ಎಂದು ಪ್ರಾಣಿ ರೂಪಕದಲ್ಲಿ ಉತ್ತರಿಸಿದಳು. ಅವನ ಜೊತೆ ಎಷ್ಟೆಲ್ಲ ನರಕ ಸಹಿಸಿರಬಹುದು ಎಂಬ ಪ್ರಮಾಣವನ್ನು ಅವಳ ದನಿಯಲ್ಲೆ ಲೆಕ್ಕಿಸಬಹುದಿತ್ತು. ಆಕೆ ಆ ಕಾಲದಲ್ಲೆ ನಾಲ್ಕು ಅಕ್ಷರ ಕಲಿತಿದ್ದಳು. ಅವಳ ತಂದೆ ಸ್ಕೂಲು ಮಾಸ್ತರರಾಗಿದ್ದರು. ನೋಡಲು ಥೇಟ್ ಬ್ರಾಹ್ಮಣರಂತಿದ್ದ ಅವರಪ್ಪ ನಮ್ಮಲ್ಲಿ ವಿಪರೀತ ಕೀಳರಿಮೆ ಹುಟ್ಟಿಸುತ್ತಿದ್ದರು. ಅಂತವನ ಮಗಳೀಗ ಆ ಕೊಂಪೆಯಲ್ಲಿ ಆ ಕುಡುಕನ ಜೊತೆ ವನವಾಸ ಮಾಡುತಿದ್ದಳು. ಮಂಚದ ಮೇಲೆ ಹಾಸಿಗೆಯೆ ಇರಲಿಲ್ಲ. ಚಾಪೆ ಇತ್ತು. ಅದೂ ಕಾಲ ಕಡೆ ಹರಿದಿತ್ತು. ಪುಟ್ಟ ಟೇಬಲ್ ಮೇಲೆ ಕೆಟ್ಟು ಎಷ್ಟೋ ಕಾಲವಾಗಿದ್ದ ಮೃತ ರೇಡಿಯೊ ಟವೆಲ್ ಹೊದ್ದುಕೊಂಡು ಮೌನವಾಗಿತ್ತು. ನೊಣಗಳು ಜೊಯ್‌ಗರೆಯುತ್ತಿದ್ದವು. ಬಾಗಿಲು ತೆರೆದರೆ ಪಕ್ಕದ ಮನೆಯ ಎತ್ತರದ ಗೋಡೆ ಬಾಗಿಲಿಗೆ ಅಂಟಿಕೊಂಡಂತೆ ಇತ್ತು. ಆ ಸಂದಿಯಲ್ಲೇ ಬಚ್ಚಲಿತ್ತು. ವಾಸನೆ ಎಂದರೆ ಕಡಿಮೆ; ಗತ ನಾತ ಎನ್ನಬೇಕು. ಬಾಗಿಲು ಮುಚ್ಚಿದಂತೆಯೇ ಇರಬೇಕು. ಮಕ್ಕಳು ಅಲ್ಲೇ ನಿಂತು ಕುಂತು ಮೂತ್ರ ವಿಸರ್ಜಿಸುತ್ತಿದ್ದರು. ಅವರವರ ಗದ್ದಲ ಅವರವರ ಸಂಸಾರಗಳ ಸರಿಗಮ ಪದನಿಸವಾಗಿದ್ದವು. ಮುಂದಿನ ವಾರ ಬರುವೆ ಎಂದು ಎದ್ದು ನಿಂತೆ. ‘ಊಟ ಮಾಡ್ಕಂಡು ಹೋಗುವಂತೆ ತಾಳೊ’ ಎನ್ನುವುದಕ್ಕೂ ಆ ದೊಡ್ಡಣ್ಣ ಬಾಗಿಲಿಗೆ ತೂರಾಡಿ ಬಂದು ಬಡಿದು ಮುಗ್ಗರಿಸಿದಂತೆ ಒಳಕ್ಕೆ ನುಗ್ಗಿ ಬರುವುದಕ್ಕೂ ಒಂದೇ ಆಯಿತು.
ಮನಸ್ಸು ಗಟ್ಟಿಮಾಡಿಕೊಂಡಿದ್ದರೂ ದಿಗಿಲು. ಎಷ್ಟೇ ಆಗಲಿ ಪಾತಕಿ. ದಿಟ್ಟಿಸಿ ನೋಡಿದ. ಯಾರೊ ಹುಡುಗನ ಜೊತೆ ಇದ್ದಾಳೆ ಎಂಬ ಗುಮಾನಿಯಿಂದ ಗಮನಿಸಿದ್ದ. ಅಂತಹ ಅನುಮಾನ ಪಿಶಾಚಿ ಅವನು. ‘ಒಹೋಹೊ ಯಾರೊ ನೀನೂ… ಉಡಿಕಂಡು ಬಂದಿದ್ದೀಯಲ್ಲೊ… ವಟ್ಟೆ ಪಾಡ್ಗೆ ಏನ್ಮಾಡ್ಕಂಡಿದ್ದೀಯೆ’ ಎಂದು ತಿರಸ್ಕಾರದಲ್ಲಿ ಕೇಳಿದ. ತಾನಿನ್ನೂ ಸಾಹೇಬ ಎಂಬ ಗತ್ತು ವಿಪರೀತ ಇತ್ತು. ಸಸ್ಪೆಂಡ್ ಆಗಿ ಮನೆಯಲ್ಲೆ ಇದ್ದ. ಅವನಿದ್ದ ವಟಾರದ ಪಕ್ಕದಲ್ಲೆ ದೊಡ್ಡದೊಂದು ಸಾರಾಯಿ ಅಂಗಡಿ ಇತ್ತು. ಯಾವತ್ತು ಅದು ನಿಶೆದಾರರ ಖಾಯಂ ತಾಣವಾಗಿತ್ತು. ಆಗ ತಾನೆ ಕುಡಿದಿದ್ದ. ವಿಪರೀತ ಸಾರಾಯಿಯ ಘಾಟು ವಾಸನೆ ಬಡಿಯುತ್ತಿತ್ತು. ಆ ಕಾಲಕ್ಕೆ ‘ಸವುರಿನ್’ ಕುಡಿಯುತ್ತಿದ್ದ, ಈಗ ಪಾಪರಾಗಿದ್ದ. ಒಂದೆರಡಲ್ಲ ಅವನ ಚಟ. ಬ್ಯಾಗಿನ ತುಂಬ ತರಾವರಿ ಲಾಟರಿಗಳ ಖರೀದಿಸಿ ತಂದು ತಂದು ಒಂದು ಲಾಟರಿಯೂ ಹೊಡೆಯದೆ ಅವೇ ಒಂದು ಮೂಟೆ ಚೀಲದಲ್ಲಿ ನೋಟುಗಳ ಕಂತೆಯಂತೆ ಬಿದ್ದಿದ್ದವು. ಲಾಟರಿ ಜೂಜಿಗೆ ಹಳೆಯ ಬಂಗಲೆಯನ್ನೆ ಕಳೆದುಕೊಂಡಿದ್ದ. ಕುದುರೆ ಬಾಲಕ್ಕೆ ದುಡ್ಡುಕಟ್ಟಿ ಬಾರೀ ಲುಕ್ಸಾನು ಮಾಡಿಕೊಂಡಿದ್ದ. ಸೂಳೆಯರ ಮನೆಯಲ್ಲಿ ನೋಟುಗಳ ಎರಚುತ್ತಿದ್ದ. ಅಷ್ಟೊಂದು ಲಂಚವಿತ್ತು. ರೆವೆನ್ಯೂ ಇಲಾಖೆಯಲ್ಲಿದ್ದ ಆತ; ಯಾರದಾರದೊ ನಿವೇಶನಗಳನ್ನು ರಾತ್ರೋರಾತ್ರಿ ಬದಲಿಸಿ ಮೂಲ ದಾಖಲೆಗಳನ್ನೆ ಹರಿದು ನೀರೊಲೆಗೆ ಹಾಕಿಬಿಡುತ್ತಿದ್ದ. ಸುಳ್ಳು ದಾಖಲೆ ಸೃಷ್ಠಿಸುವುದರಲ್ಲಿ ನಿಸ್ಸೀಮನಾಗಿದ್ದ. ಅದರಿಂದಲೇ ಆತ ನೌಕರಿಯಿಂದ ವಜಾಗೊಳ್ಳುವ ಬಿಕ್ಕಟ್ಟಿನಲ್ಲಿದ್ದ. ಬೆಳಿಗ್ಗೆಗ್ಗೇ ಕುಡಿಯುತಿದ್ದ. ತಾತ ಅವನ ಈ ಪವಾಡಗಳ ಬಗ್ಗೆ ವಿಷಾದದಿಂದ ವಿವರಿಸಿದ್ದ. ಆದರೂ ಅವನಿಗೂ ಒಂದು ಮಾತು ಹೇಳಿ ನಿನ್ನ ದಾರಿ ನೀನು ನೋಡಿಕೊ ಎಂದಿದ್ದರಲ್ಲೂ ಏನೊ ಒಂದು ಮರ್ಮ ಇರಬೇಕು ಎಂದುಕೊಂಡಿದ್ದೆ.
‘ಯೀಗ ಎಲ್ಲಿದ್ದಿಲಾ’ ಎಂದು ತೇಗಿದ. ಹುಳಿ ವಾಸನೆ. ಹೇಳಿದೆ, ‘ಹಾsss ನಿಜಾನೇನ್ಲಾ… ನಂತಾವೆ ಸುಳ್ಳೇಳಿಲಾ… ನೀನ್ಯಾವ್ ನನ್ನ ಲವಡವಾ ವೋದ್ತೀರುದೂ… ಯಾರ್ಲ ಕಾಲೇಜ್ಗೆ ಸೇರಿಸ್ದೋರೂ… ಎಂಜ್ಲೆತ್ಕಂದಿದ್ದ ನೀನು ಯೆಸೆಲ್ಸಿ ಯಾವಾಗ್ಲ ಪಾಸ್ಮಾಡ್ದೇ… ಅದೆಂಗ್ಲಾ ಬೀಯೆಗೆ ವೋದೇ… ಟಿಂಗ ಕಟ್ಬೇಡಾ… ಸರ್ಯಾಗೇಳ್ಲ ಯೇನ್ಮಾಡ್ಕಂದ್ದೀನಿ ಅಂತಾ’ ಎಂದು ಕೆಂಪು ಕಣ್ಣುಗಳ ಮುಳ್ಳಿಸಿದ. ಪಟಾಪಟಿ ದೊಗಳೆ ಚಡ್ಡಿ ನೆಟ್‌ಬನಿಯನ್‌ನಲ್ಲಿದ್ದ. ಎದೆ ಮೇಲೆ ವಿಪರೀತ ರೋಮ ಬೆಳೆದಿದ್ದವು. ಬಿಳಿಕೂದಲು ಹೆಚ್ಚಿದ್ದವು. ‘ಅವುನ್ನ ನೋಡುದ್ರೆ ಗೊತ್ತಾಗಲ್ವಾ… ಕಾಲೇಜು ಹುಡ್ಗ ಅಂತಾ? ಯಂಗೊ ಪಾಸ್ಮಾಡ್ಕಂದು ಮುಂದೆ ಬಂದವನೆ ಬಿಡೂ’ ಎಂದು ದೊಡ್ಡಮ್ಮ ಅಡ್ಡಿಪಡಿಸಿದಳು. ಸೀಮೆಣ್ಣೆ ಸ್ಟೌವ್ ಮೇಲೆ ಮುದ್ದೆಗೆ ಇಟ್ಟು ಇಳಿಸಿ ಎರಡೂ ಕಾಲುಗಳಲ್ಲಿ ಹಿಡಿದು ಮುದ್ದೆ ತಿರುವುತ್ತಿದ್ದಳು. ‘ಯೇನಮ್ಮೀ ಅವುನ್ಪರ್ವಾಗಿ ಮಾತಾಡ್ತೀದ್ದೀಯಲ್ಲಾ… ನಿನ್ಗೆ ಯೆಂಗಮ್ಮಿ ಕಂಡನೂ’ಎಂದು ಹೊಲಸು ಕಲ್ಪನೆಯಲ್ಲಿ ಬಾಯಿ ಮುಚ್ಚಿಸಲು ನೋಡಿದ. ಆಕೆ ಜಗಳ ಮಾಡುವ ಆಸಕ್ತಿ ತೋರಲಿಲ್ಲ. ‘ನಿಮ್ಗೆ ಅನುಮಾನ ಇದ್ರೆ ನೀವೆ ಬನ್ನಿ ಕಾಲೇಜ್ಗೆ… ವಿಚಾರ ಮಾಡಿ… ತಿಳ್ಕಳೀ’ ಎಂದೆ. ‘ಲೇಯ್ ಸೂಳೆ ಮಗ್ನೇ; ನನ್ಗೆ ಎದುರಾಡಿಲಾ; ನೀನ್ಯಾವ ಸಾಟುದ ಬೀಯೇನ್ಲಾ ಮಾಡ್ತಿರುದೂ… ‘ಲೇಯ್ ನನ್ಮುಂದೆ ನೀನೊಂದು ಕುಂಟು ರ್ವಾಮ ಕಲಾ’ ಎಂದು ಕೆಕ್ಕರಿಸಿ; ಎದೆಯ ರೋಮಗಳ ಪಚಕ್ಕನೆ ಕಿತ್ತು ನನ್ನ ಮುಖದ ಸಮೀಪ ಹಿಡಿದು; ತಕಲಾ; ಇವುತ್ರೆಲಿ ಕರಿಕೂದ್ಲು ಎಷ್ಟು ಬಿಳಿ ಕೂದ್ಲು ಎಷ್ಟವೆ ಅಂತಾ ಯೆಣಿಸಿ ಲೆಕ್ಕ ಯೇಳ್ಲ… ಆಗ ವಪ್ಕತಿನೀ’ ಎಂದು ಮುಖದ ಮೇಲೆ ಉಫ್ ಎಂದು ಕೂದಲುಗಳ ಉರುಬಿದ. ಸಿಟ್ಟು ನೆತ್ತಿಗೇರಿತು. ದೊಡ್ಡಮ್ಮ ಕಣ್ಣು ಅಮುಕಿದಳು. ತಾಳಿಕೊಂಡೆ. ‘ಲೇಯ್ ನೀನು ನಿಮ್ಮಪ್ಪುನ್ಗೆ ಉಟ್ಟಿದ್ರೆ ನಾಳಕೇ ನಿನ್ನ ಮಾಸ್ಕಾರ್ಡು ಕ್ಯಾಸ್ಟ್ ಸರ್ಟಿಪಿಕೇಟು ಎಲ್ಲಾ ರೆಕಾರ್ಡ್ನು ತಕಬಂದಿ ನನ್ನ ಕೈಗೆ ಕೊಡ್ಲಾ… ನೋಡ್ಬುಟ್ಟು ಆಗ ಯೇಳ್ತೀನಿ ಎಂದು ಸವಾಲು ಹಾಕಿದ. ‘ಆಯ್ತು. ತರ್ತಿನೀ’ ಎಂದೆ. ಮೂಲ ದಾಖಲೆಗಳೆಲ್ಲ ಕಾಲೇಜಿಗೆ ಅಡ್ಮಿಷನ್ ವೇಳೆ ಕೊಟ್ಟು ಬಿಟ್ಟಿದ್ದೆ. ಹೇಗಾದರು ರಿಕ್ವೆಸ್ಟ್ ಮಾಡಿ ತಂದು ಇವನ ಮುಖಕ್ಕೆ ಒಡ್ಡಬೇಕೆಂದು ರೋಸಿದ್ದೆ. ದೊಡ್ಡಮ್ಮ ಬೇಡ ಎಂಬಂತೆ ಸನ್ನೆ ಮಾಡಿದಳು.
ಉಚ್ಚೆ ಉಯ್ಯಲು ಬಚ್ಚಲಿನತ್ತ ಹೋದ. ತಕ್ಷಣವೇ ದೊಡ್ಡಮ್ಮ ಎಚ್ಚರಿಸಿದಳು. ಹಾಗೆ ತಂದು ಕೈಗೆ ಕೊಟ್ಟ ಕೂಡಲೆ ಅಲ್ಲೇ ಕ್ಷಣ ಮಾತ್ರದಲ್ಲಿ ಹರಿದು ಸುಟ್ಟುಹಾಕಿ ಬಿಡುತ್ತಾನೆಂದು ಅವನ ಸಂಚನ್ನು ತಿಳಿಸಿದಳು. ಮೂಲ ದಾಖಲೆಗಳನ್ನು ಸುಟ್ಟು ಹಾಕುವುದರಲ್ಲಿ ಅವನಿಗೆ ಅಪರಿಮಿತ ಸುಖವಿತ್ತು. ದಂಗಾದೆ. ‘ನಾನಿನ್ನು ಇಲ್ಲಿಗೆ ಯಾವತ್ತೂ ಬರೋದಿಲ್ಲ’ ಎಂದು ಹೊರ ಬಂದೆ. ಅದಾಗಲೆ ಕಿಟಕಿ ಬಾಗಿಲ ಸಂದಿಯಲ್ಲಿ ಗಮನಿಸಿದ್ದ ಸ್ಲಮ್ಮಿನ ವಠಾರದ ಅದೇ ಸಾಲು ಮನೆಯ ಕೆಲ ಹುಡುಗಿಯರು… ಯಾರೊ ಹೊಸಬ ಬಂದಿದ್ದಾನೆಂದು ಕುತೂಹಲದಿಂದ ಹೊರಗೆ ಕಾದಿದ್ದರು. ತಟ್ಟನೆ ಪ್ರತಿಕ್ರಿಯಿಸಿದ್ದರು. ಗೊತ್ತಾಗಿತ್ತು. ಅಲ್ಲಿಯ ಜೀವನ ಕ್ರಮವೇ ಹಾಗಿತ್ತು. ಹೊಸಬರನ್ನು ಮೊದಲಿಗೆ ತಾವೇ ತಮ್ಮ ವಶಕ್ಕೆ ತಂದುಕೊಳ್ಳಬೇಕು ಎಂಬ ಬಯಕೆ ಇತ್ತೇನೊ. ಅಡ್ಡಗಟ್ಟಿ ನಿಲ್ಲಿಸಿದ. ತೂರಾಡುತ್ತಿದ್ದ. ‘ಲೇಯ್ ನನುಗೇಳ್ದೆ ವೊಯ್ತೀದ್ದಿಯಾ… ನಿಮ್ಮಪ್ಪನಿಂದ ನಾನೆಷ್ಟು ಕೆಟ್ಟ ಯೆಸರು ತಕಂದೇ… ಮೂರ್ನೆಯವಳ ತಂದು ಕಟ್ಟಿದ್ನಲ್ಲೊ ಆ ನಿಮ್ಮಪ್ಪುನ್ಗೇ… ಆ ನಿಮ್ಮವ್ವ… ಬೋಸುಡಿ… ಅವುಳಾಗಿ ಅವುಳೇ ಬಾವಿಗೆ ಬಿದ್ಲು… ನನ್ನ ಜೈಲ್ಗೆ ಹಾಕಿಸ್ಬೇಕು ಅನ್ಕಂಡಿದ್ಲೇನೊ… ಕಿತ್ಕಂದ್ಲೇ ಅವುಳು ನಂದಾ… ಅಲ್ಲಾಡ್ಸುಕೂ ಆಗ್ಲಿಲ್ಲಾ ಕಲೇ ಲೇಯ್’ ಎಂದು ನನ್ನ ಕೊರಳ ಪಟ್ಟಿ ಹಿಡಿದು ಎಳೆದ. ಅವನ ದಪ್ಪ ಕೊರಳ ತಟಕ್ಕನೆ ಮುರಿದಂತೆ ತಿರುವಿ ಹಿಡಿದೆ. ಜಾರಿ ಬಿದ್ದ. ನಿರೀಕ್ಷಿಸಿರಲಿಲ್ಲ. ಬಚ್ಚಲಲ್ಲಿ ರೊಚ್ಚಾಗಿದ್ದ. ಮುಟ್ಟಲು ಅಸಹ್ಯವಾಗುತ್ತಿತ್ತು.
‘ಸರ್ಯಾಗಿ ಮಾಡ್ದೇ’ ಎಂದರು ಆ ಹುಡುಗಿಯರು. ಅವರತ್ತಲೂ ತಿರುಗಿ ನೋಡದೆ ಓಡಿದಂತೆ ಬಂದು ಎಫ್.ಟಿ.ಎಸ್. ಸರ್ಕಲ್ಲಿನಲ್ಲಿ ಅಕಸ್ಮಾತ್ ನಿಂತಿದ್ದ ಸಿಟಿ ಬಸ್ಸಿಗೆ ಜಿಗಿದು ನುಗ್ಗಿ ಟಿಕೇಟ್ ಪಡೆದು ನಗರ ನಿಲ್ದಾಣದಲ್ಲಿಳಿದು ಹುಚ್ಚನಂತೆ ಹಾಸ್ಟಲತ್ತ ದಾಪುಗಾಲಾಕಿದ್ದೆ. ವಿಪರೀತ ಬೆವೆತಿದ್ದೆ. ಮರಿಮಲ್ಲಪ್ಪ ಶಾಲೆಯ ರಸ್ತೆ ಅದು. ಆ ಬೀದಿಯಲ್ಲಿ ಭಾಗಶಃ ಬ್ರಾಹ್ಮಣರ ಮನೆಗಳಿದ್ದವು. ಅಲ್ಲಿಗೆ ಬಂದ ಕೂಡಲೆ ಮನಸ್ಸು ಹಗುರವಾಗಿತ್ತು. ಪಿಶಾಚಿಯಿಂದ ತಪ್ಪಿಸಿಕೊಂಡೆ ಎಂದು ತಿರುವು ದಾರಿ ದಾಟಿ ಹಾಸ್ಟೆಲಿಗೆ ಬಂದೆ. ಬಡ ವಿದ್ಯಾರ್ಥಿಗಳು ಸ್ವಂತ ಅಡುಗೆ ಮಾಡಿಕೊಂಡು ವಾಸ ಮಾಡಲು ಅವಕಾಶವಿತ್ತು. ನಾನೇ ದಟ್ಟ ದರಿದ್ರ ಬಡವ. ಮೀಸಲಾತಿ ಇರದಿದ್ದರೆ ನಾನಲ್ಲಿ ಕಾಲಿಡಲೂ ಸಾಧ್ಯವಿರಲಿಲ್ಲ. ಬಡ ಓಬಿಸಿ ಹುಡುಗರು ಊರುಗಳಿಂದಲೆ ಅಡುಗೆ ಬೇಕಾದ ಎಲ್ಲವನ್ನು ತಂದು ಏನೊ ಒಂದಿಷ್ಟು ಬೇಯಿಸಿಕೊಂಡು ಹೊಟ್ಟೆ ಪಾಡು ಮುಗಿಸಿ ಓದಿನಲ್ಲಿ ಯಾವಾಗಲು ಮಗ್ನರಾಗಿರುತ್ತಿದ್ದರು. ಅವರ ಸ್ನೇಹ ನನಗಿತ್ತು. ಆ ಸ್ನೇಹಿತ ಇವತ್ತು ಐ.ಎ.ಎಸ್. ಪಾಸು ಮಾಡಿ ವಿಧಾನ ಸೌಧದಲ್ಲಿ ಉನ್ನತ ಅಧಿಕಾರಿ ಆಗಿದ್ದಾನೆ. ಬಹಳ ಪ್ರತಿಭಾವಂತನಿದ್ದ. ಆತ ತನ್ನ ಪಾಂಡವಪುರದ ಮನೆಗೆ ಕರೆದೊಯ್ದು ತನ್ನ ತಾಯಿಯ ಕಡು ಕಷ್ಟವ ಪರಿಚಯಿಸಿ ಊಟ ಮಾಡಿಸಿದ್ದ. ಅವರ ತಾಯಿ ಹಾಲು ಮಾರಿ ಮಕ್ಕಳನ್ನು ಸಾಕುತ್ತಿದ್ದರು. ನೀನು ನನಗಿಂತ ಶಾರ್ಪ್ ಇದ್ದೀಯೆ… ಐ.ಎ.ಎಸ್. ಗೆ ತಯಾರಾಗು ಎಂದು ಒತ್ತಾಯಿಸುತ್ತಿದ್ದ. ಒಂಚೂರು ಆಸೆಯೂ ಬಂದಿತ್ತು. ಅವತ್ತಿನ ಸ್ಥಿತಿಯಲ್ಲಿ ನನಗೆ ಖಚಿತವಾದ ಯಾವ ಗುರಿಯು ಇರಲಿಲ್ಲ. ಸದಾ ನಾಳೆ ಹೇಗೆ ಎಂಬ ಚಿಂತೆಯಲ್ಲಿ ಕನಸುಗಳೆಲ್ಲ ದುಃಸ್ವಪ್ನಗಳಾಗಿ ತಲೆ ಮೇಲೆ ಸುತ್ತುವ ಕೀಟಲೆ ನೊಣಗಳಂತೆ ಕಾಡುತಿದ್ದವು. ಆ ಗೆಳೆಯ ಕೊಠಡಿಯಲ್ಲಿದ್ದ. ವಿಶಾಲ ರೂಮಿನಲ್ಲಿ ನಾಲ್ಕು ಬಡ ವಿದ್ಯಾರ್ಥಿಗಳಿರುತ್ತಿದ್ದರು. ಹೋದೆ. ಖುಷಿಯಿಂದ ಬರಮಾಡಿಕೊಂಡ. ಆಗ ತಾನೆ ಅಡುಗೆ ಮಾಡಿದ್ದ. ಇಬ್ಬರೂ ಉಂಡೆವು. ‘ರಜೆ ಬಂತಲ್ಲಾ; ಊರಿಗೆ ಹೋಗಿರ್ತಿಯೆ ಅನ್ಕಂಡಿದ್ದೆ. ನನ್ಗೂ ಬೋರಾಯ್ತಿತ್ತು. ಸದ್ಯ ಕಂಪನಿ ಸಿಕ್ದಲ್ಲಾ… ನನ್ನ ಜೊತೆಗೆ ಇರು. ಶ್ರೀಧರನೂ ಬರ್ತಾನೆ. ಕಂಬೈನ್ಡ್ ಸ್ಟಡೀ ಮಾಡುವ’ ಎಂದ. ನನಗೆ ಒಪ್ಪತ್ತಿನ ಕೂಳು ಸಿಕ್ಕರಾಗಿತ್ತು. ಹೂಂ ಎಂದೆ.
ಆ ಪಾಪಿ ನನ್ನ ಮುಖಕ್ಕೆ ಉರುಬಿದ್ದ ಕೂದಲುಗಳು ಕಣ್ಣಿಗೆ ಸಿಕ್ಕಿ ಹಾಕಿಕೊಂಡಿರುವಂತೆ ಕಿರಿಕಿರಿ ಆಗುತ್ತಿತ್ತು. ಯಾರಲ್ಲು ಹೇಳಿಕೊಳ್ಳುವಂತಿರಲಿಲ್ಲ. ಅವನು ಹುಡುಕಿಕೊಂಡು ಇಲ್ಲಿಗೆ ಬಂದು ಗಲಾಟೆ ಮಾಡಿ ಅಪಮಾನಿಸಿದರೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೆ. ‘ಯಾಕೋ; ಬೇಜಾರಲ್ಲಿದ್ದೀಯೆ’ ಎಂದು ಗೆಳೆಯ ಕೇಳಿದ. ಆ ಮಿತ್ರನ ಹೆಸರು ಉಮಾಶಂಕರ್. ‘ಊರಿಗೆ ಹೋಗಿದ್ದೆ ಕಣೋ; ಅಲ್ಲಿ ಇರೋಕಾಗ್ಲಿಲ್ಲ. ಹಳ್ಳಿನ ನೆನಿಸ್ಕೊತಿದ್ದೆ… ಅಲ್ಲಿಂದ ಇಲ್ಲಿತನಕ ಎಂಗೆ ಬಂದೆ ಅನ್ನುದೇ ಗೊತ್ತಾಗೋದಿಲ್ಲ. ಅಂತಾದ್ರಲ್ಲಿ ಬೇರೆಯವರಿಗೆ ನಾನು ಬಿ.ಎ. ಓದ್ತಾ ಇದ್ದೀನಿ ಅಂದ್ರೆ ಯಾರ್ತಾನೆ ನಂಬ್ತಾರೇ… ಬಿ.ಎ. ಅಂದ್ರೇನು ಅಂತಾನೆ ಗೊತ್ತಿಲ್ಲಾ; ಅದ್ಯಾವ್ದದು ಲಡಾಸ್ತರಡ ಬಿಸಾಕ್ಲಾ… ಪಸ್ಟು ಯೆಸೆಲ್ಸಿಯ ಪಾಸ್ಮಾಡ್ಲಾ ಅಂತಾರೆ… ಯಂಗೇಳ್ಬೇಕೊ ಗೊತ್ತಿಲ್ಲ’ ಎಂದೆ. ಗೆಳೆಯ ನಗಾಡಿದ. ಅದ್ಕೇ ಐ.ಎ.ಎಸ್. ಬರೀ; ಆಮ್ಯಾಕೆ ಎಲ್ರುಗೂ ತಕ್ಕ ಉತ್ರ ಕೊಟ್ಟಂಗಾಯ್ತದೆ’ ಎಂದ ಉಮಾಶಂಕರ. ಅಲ್ಲಿ ಓದಲು ಬರೆಯಲು ಅಷ್ಟು ಅನುಕೂಲಗಳಿರಲಿಲ್ಲ. ನನ್ನ ರೂಮಿಗೇ ಬಂದೆ. ನೆನ್ನೆಯಂತೆಯೆ ಕಾರಿಡಾರಿನಲ್ಲಿ ಮಲಗಿದೆ. ನನ್ನ ಓದಿನ ಸ್ವಭಾವವೇ ವಿಚಿತ್ರ. ಒಂದೇ ಸಲಕ್ಕೆ ಹತ್ತಾರು ಪುಸ್ತಕಗಳನ್ನು ಹರಡಿಕೊಂಡು ಅದಾದ ಮೇಲೆ ಇದೂ ಇದಾದ ಮೇಲೆ ಅದೂ ಎಂದು ಎಲ್ಲವನ್ನು ಒಟ್ಟೊಟ್ಟಿಗೆ ಓದುತ್ತಿದ್ದೆ. ಕ್ರಮಬದ್ಧ ಓದೆಂದರೆ ಆಗುವುದಿಲ್ಲ. ಮರೆತೆ ಆ ಕೂಡಲೆ ಆ ಪಾಪಿ ಪಾತಕಿಯ ಮಾತುಗಳ.
ಸಯ್ಯಾಜಿ ರಾವ್ ರಸ್ತೆ ಬದಿಯಲ್ಲಿ ಖರೀದಿಸಿದ್ದ ಹಳೆಯ ಪುಸ್ತಕಗಳ ತಿರುವಿ ಹಾಕುತ್ತಿದ್ದೆ. ಅದೇ ತಂಗಾಳಿ. ಎಷ್ಟು ಬೇಗ ಕಾಲ ಓಡಿ ಹೋಯಿತು ಎಂದು ಸಮಯ ನೋಡಿಕೊಂಡೆ. ಶ್ರೀಧರ ಪುಟ್ಟದೊಂದು ಟೇಬಲ್ ಕ್ಲಾಕ್ ಇಟ್ಟಿದ್ದ. ಬೋರಾಗಿ ‘ನರಭಕ್ಷಕ’ ಎಂಬ ಪುಸ್ತಕವ ಹಿಡಿದು ಯಾರು ಯಾವಾಗ ಎಲ್ಲಿ ಬರೆದದ್ದು ಎಂದು ಗಮನಿಸಿದೆ. ಯುವರಾಜ ಕಾಲೇಜಿನ ವಿಜ್ಞಾನದ ಪ್ರಾಧ್ಯಾಪಕರೊಬ್ಬರು ಅನುವಾದಿಸಿದ್ದ ಕೃತಿ. ಅವರ ಹೆಸರು ಸುಧಾಕರ್ ಎಂದು. ಮೂಲ ಲೇಖಕ ಜಿಮ್ ಕಾರ್ಬೇಟ್. 1955ರಲ್ಲಿ ಪ್ರಕಟವಾಗಿತ್ತು. ಆ ಕೃತಿಯ ಮೊದಲ ಪುಟವೇ ಬರಸೆಳೆದುಕೊಂಡಿತ್ತು. ಅಹಾ! ಅಬ್ಬಾ ಇವತ್ತು ರಾತ್ರಿಯೇ ಮುಗಿಸಿ ಬಿಡಬೇಕು ಎನಿಸಿತು. ಪ್ಯಾರ ಪ್ಯಾರವೂ ಮೈ ಜುಂ ಎಂಬಂತೆ ಕಣ್ಣಿಗೆ ನರಭಕ್ಷಕನ ಚಿತ್ರವನ್ನು ಬಿಡಿಸುತ್ತಿದ್ದವು. ನನ್ನ ಜೀವಮಾನದ ಆ ಮೊದಲು ಅಂತಹ ಒಂದೇ ಒಂದು ಪುಸ್ತಕವನ್ನು ಓದಿಯೇ ಇರಲಿಲ್ಲ. ಚಿಕ್ಕ ಪುಸ್ತಕವೇ ಆಗಿದ್ದರೂ ಮತ್ತೆ ಮತ್ತೆ ಎರಡೆರಡು ಬಾರಿ ಆ ಬರಹದ ಮೇಲೆ ಕೆಳಗೆ ಓದಿ ಬೆವೆತೆ. ಊಹೆಗೂ ನಿಲುಕಿರಲಿಲ್ಲ. ಅಂತಹ ಕಗ್ಗಾಡು; ನೀರವ ಮೌನದ ಮಚಾನಿನಲ್ಲಿ ನರಭಕ್ಷಕ ಹುಲಿಯ ಬೇಟೆಗಾಗಿ ಕಾದು ಕೂತು; ಸಪ್ಪಳವೇ ಇಲ್ಲದ ವ್ಯಾಘ್ರನ ಹೆಜ್ಜೆ ಸದ್ದನ್ನು ಗಾಳಿಯ ಅಲೆಯಲ್ಲಿ ಆಲಿಸಿ ತುಪಾಕಿಯನ್ನು ಮಲಗಿಕೊಂಡೇ ಹೆಗಲಿಗೆ ಒತ್ತಿಕೊಂಡು ಟ್ರಿಗರ್ ಮೇಲೆ ಬೆರಳಿಟ್ಟು ಆ ಕಗ್ಗತ್ತಲಲ್ಲಿ ಗುರಿ ಇಡಬೇಕು ಎಂದರೆ ಅದೇನು ಸಾಮಾನ್ಯ ಬೇಟೆಯೇ… ಅಬ್ಬಬ್ಬಾ ಬೇಟೆಯ ಆಚೆಗಿನ ಕಗ್ಗತ್ತಲೆಯಲ್ಲಿ ಹಸಿದ ಹುಲಿಯ ಕಣ್ಣುಗಳ ಮೇಲೆ ಹೆಡ್ ಟಾರ್ಚ್ ಅನ್ನು ಖಚಿತವಾಗಿ ಆ ಕ್ಷಣವೇ ಬಿಟ್ಟು ಢಮಾರ್ ಎನಿಸಬೇಕಾದರೆ ಅಸಾಮಾನ್ಯ ಕೌಶಲ್ಯವೇ ಇರಬೇಕೂ… ಯಾರು ಈ ಜಿಮ್ ಕಾರ್ಬೆಟ್… ಯಾರು ಇದನ್ನು ಅನುವಾದಿಸಿದವರು ಎಂದು ಮತ್ತೆ ಮತ್ತೆ ಓದಿದೆ. ಅಪಾರವಾದ ಕುತೂಹಲ ಮೆಟ್ಟಿಕೊಂಡಿತು.
ಈ ಲೋಕದ ಜಂಜಡಗಳಿಗೂ ತನಗೂ ಯಾವ ಸಂಪರ್ಕವೂ ಇಲ್ಲ ಎನಿಸಿತ್ತು. ಒಂದು ಬರಹ ಒಂದೇ ಒಂದು ಕ್ಷಣದಲ್ಲಿ ಮನುಷ್ಯರ ಈ ಎಲ್ಲ ನರಕವನ್ನು ಮಾಯ ಮಾಡಿಬಿಡುತ್ತದಲ್ಲಾ… ಬರೆದರೆ ಹೀಗೇ ಬರೆಯಬೇಕೂ… ಅದಾವುದು ಸುಖಪಿಕ ಚಿಗರೆಗಳ ಹಿಂಡಿನಲ್ಲಿ ಮಾಂದಳಿರಿನ ಬೀಡಿನಲಿ ಎಂದು ಬರೆಯುವರಲ್ಲ ಕವಿಗಳು… ಮನುಷ್ಯ ಮನುಷ್ಯರನ್ನು ನರಭಕ್ಷಕರಂತೆ ಬೇಟೆ ಆಡುವುದು ಗೊತ್ತೇ ಆಗುವುದಿಲ್ಲವೇ ಎಂದು ಆ ಪುಸ್ತಕವನ್ನು ಎದೆ ಮೇಲೆ ಇಟ್ಟುಕೊಂಡು ವರಾಂಡದ ಕತ್ತಲಿಗೆ ಕಣ್ಣು ನೆಟ್ಟು ಏನೇನೊ ಕಲ್ಪಿಸುತ್ತಿದ್ದೆ. ಆ ಎತ್ತರದ ಮರದಲ್ಲಿ ನಾನೇ ಮಚಾನುಕಟ್ಟಿ ನರಭಕ್ಷಕನ ಆಗಮನಕ್ಕಾಗಿ ನಟ್ಟಿರುಳಲ್ಲಿ ಕಾದಿರುವಂತೆ ಮೈಯೆಲ್ಲ ಕಣ್ಣು ಮಾಡಿಕೊಂಡೆ. ಪುಸ್ತಕವ ಓದಿ ಮುಗಿಸುವಲ್ಲಿ ಮೈಸೂರಿನ ಆ ದೊಡ್ಡ ಚರ್ಚಿನ ಗಂಟೆ ಸದ್ದೂ; ಅಲ್ಲಾಹುವಿನ ಕೂಗು ಹಕ್ಕಿಗಳ ಇಂಚರದಲ್ಲಿ ಮೊಳಗಿ ಧನ್ಯ ಎನಿಸಿತ್ತು. ಮತ್ತದೇ ರಾಮ ದೇಗುಲದ ಸಂಗೀತ. ಒಂದೆರಡು ತಾಸಾದರೂ ನಿದ್ದೆ ಬರಲಿ ಎಂದು ತೂಕಡಿಸುವ ಮನಸಿನ ಕಟ್ಟನ್ನು ಕಳಚಿದ್ದೆ. ಆಕಾಶಕ್ಕೆ ಹಾರಿದಂತೆ ನಿದ್ದೆ ಬಂದಿತ್ತು. ತಡವಾಗಿ ಎದ್ದಿದ್ದೆ. ಶ್ರೀಧರ ಬಂದು ಬಾಗಿಲು ಬಡಿದಿದ್ದ. ‘ಇದೇನೊ ಮಾರಾಯಾ; ಇಸ್ಟೊಂದು ನಿದ್ದೆಯಾ’ ಎಂದು ದಿಟ್ಟಿಸಿದ. ಸಾರಿ ಸಾರಿ ಎಂದು ಬಕೇಟ್ ತೆಗೆದುಕೊಂಡು ಸ್ನಾನದ ಮನೆ ಕಡೆ ಓಡಿದೆ. ‘ಬೇಗ ಬಾರೊ, ಒಂದ್ವರ್ಷ ಮಾಡ್ಬೇಡಾ’ ಎಂದು ಕೂಗಿದ. ರಜೆ ಇದ್ದಿದ್ದರಿಂದ ಬಿಸಿ ನೀರು ಇರಲಿಲ್ಲ. ಗಣಿಗಣಿನೆ ಕಾದು ಹೊಗೆ ಚಿಮ್ಮುವ ಬಿಸಿ ನೀರಿಗೆ ತಣ್ಣೀರು ಬೆರೆಸಿ ಸ್ನಾನ ಮಾಡಿದರೇ ಸಾಕಿತ್ತು; ಮನಸ್ಸು ಎಷ್ಟೇ ಕೆಟ್ಟಿದ್ದರೂ ಹಸನಾಗಲು. ತಣ್ಣೀರಲ್ಲೆ ಸ್ನಾನ ಮುಗಿಸಿ ಬಂದೆ. ‘ಯಾಕೋ ಇಷ್ಟು ಲೇಟು’ ಎಂದ. ನಿಜಕ್ಕೂ ನನ್ನ ಪುಣ್ಯ. ಅಷ್ಟೊಂದು ಪ್ರೀತಿಯ ಗೆಳೆಯರು ಎಲ್ಲೆಡೆ ಸಿಗುತ್ತಿದ್ದರು. ಜಿಮ್ ಕಾರ್ಬೆಟ್‌ನ ಬಗ್ಗೆ ಹೇಳಿದೆ. ‘ಸರಿ ಸರೀ, ಟಿಫನ್ಗೆ ಹೋಗೋಣ ರೆಡಿಯಾಗು’ ಎಂದ. ಖುಷಿಯಿಂದ ರಾಮಸ್ವಾಮಿ ಸರ್ಕಲ್ ಕೆಳಗಿಳಿದು ಹೋಟೆಲಿಗೆ ಬಂದೆವು. ಶ್ರೀಧರ ಬಹಳ ಧಾರಾಳನಾಗಿದ್ದ. ಬಗೆ ಬಗೆಯ ತಿಂಡಿ ಪದಾರ್ಥಗಳ ತಿನ್ನುವುದರಲ್ಲಿ ತುಂಬ ಸುಖ ಅವನಿಗೆ. ಅವನ ಜೊತೆಗೆ ಯಾರಾದರೂ ಒಬ್ಬರು ಇರಲೇ ಬೇಕು. ಮಸಾಲೆ ದೋಸೆಗೆ ಹೇಳಿದ. ಅಗಲವಾದ ಗರಿಗರಿಯಾದ ದೋಸೆ. ಬೆಣ್ಣೆ ಕರಗುತ್ತಿತ್ತು. ರುಚಿಯಾದ ಆಲೂಗಡ್ಡೆ ಪಲ್ಯ… ಕಾಯಿ ಚಟ್ನಿ. ಬಾಯಲ್ಲಿ ನೀರೂರಿತ್ತು. ‘ನಿಮ್ಮ ತಾತನ ಹೊಟ್ಲೆಲಿ ಹೀಗೇ ದೋಸೆ ಮಾಡ್ತಿದ್ದರಾ’ ಎಂದು ಕೇಳುತ್ತ ತಿನ್ನು ತಿನ್ನೆಂದು ಉತ್ತೇಜಿಸುತ್ತಿದ್ದ. ಅದಾದ ನಂತರ ಒಂದೊಂದು ಚೌ ಚೌ ಬಾತ್ ತಿಂದುಬಿಡೋಣ ಕಣೋ; ಲಾಸ್ಟೆಲಿ ಬ್ರೂ ಕಾಫಿ ಕುಡಿಯೋಣ’ ಎನ್ನುತ್ತಿದ್ದ.
ಅಂತಹ ಶ್ರೀಧರ ಕೆ.ಎ.ಎಸ್. ಪಾಸು ಮಾಡಿ ಈಗ ಜಿಲ್ಲೆಯೊಂದರ ಉನ್ನತ ಅಧಿಕಾರಿಯಾಗಿದ್ದಾನೆ. ಅವನ ಜೊತೆ ಯಾವುದನ್ನೂ ಬಚ್ಚಿಟ್ಟುಕೊಳ್ಳದೆ ಹೇಳಿಕೊಂಡಿದ್ದೆ. ‘ಆ ಕ್ಯಾರೆಕ್ಟರ್‌ಗಳನ್ನೆಲ್ಲ ಒಂದ್ಸಲ ನೋಡ್ಬೇಕು ಕಣೋ’ ಎನ್ನುತ್ತಿದ್ದ. ಛೇ ಆ ಪಾಪಿಗಳ ನೆರಳನ್ನೂ ನೋಡಬೇಡ ಎಂದಿದ್ದೆ. ಶ್ರೀಧರ ಜೊತೆಗಿದ್ದಾಗ ನಾನು ಯಾವುದೇ ಸ್ವಂತದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಸುಮ್ಮನೆ ಅವನ ಜೊತೆ ಸುತ್ತಾಡುವುದರಲ್ಲೇ ಏನೇನೊ ಕಲಿಯುತ್ತಿದ್ದೆ. ನಗರದ ಮೂಲೆ ಮೂಲೆಯೂ ಅವನಿಗೆ ಅಂಗೈಯಂತೆ ಗೊತ್ತಿತ್ತು. ಸುಮ್ಮನೆ ಎಲ್ಲ ಕಡೆ ಅಲೆಸುತ್ತಿದ್ದ. ಆ ಸುಖವೇ ಬೇರೆ. ಕಾಸು ಕೊಟ್ಟರೂ ಸಿಗುತ್ತಿರಲಿಲ್ಲ.
ವಿಪರೀತ ಇಂಗ್ಲೀಷ್ ವ್ಯಾಮೋಹಿ. ಅವನ ನಗರವಾಸಿ ಮೇಲ್ಜಾತಿ ಸ್ನೇಹಿತರನ್ನು ಪರಿಚಯಿಸುವಾಗ ಇಂಗ್ಲೀಷಿನಲ್ಲೆ ಮಾತಾಡು; ತಪ್ಪಾದರೂ ಪರವಾಗಿಲ್ಲ ಎಂದು ಒತ್ತಾಯಿಸುತ್ತಿದ್ದ. ಇಂಗ್ಲೀಷ್ ಮಾತಾಡಿದರೆ ನಮ್ಮ ಜಾತಿ ಅವರಿಗೆ ಗೊತ್ತಾಗಲ್ಲಾ; ಹಳ್ಳಿಗಮಾರ್ ಎಂದು ಭಾವಿಸೋದಿಲ್ಲಾ… ಅಟ್‍ಲಾಸ್ಟ್ ಗೊತ್ತಾದ್ರೂ ಬುದ್ಧಿವಂತರು ಎಂದು ಒಪ್ಪಿಕೊಳ್ಳುತ್ತಾರೆ ಎಂದು ಕಿವಿ ಮಾತು ಹೇಳುತ್ತಿದ್ದ. ಸತ್ಯ ಎನಿಸುತ್ತಿತ್ತು. ನಗರದಲ್ಲೆ ಬೆಳೆದವನಾಗಿದ್ದ. ಬ್ರಾಹ್ಮಣ ಹುಡುಗರೇ ಅವನಿಗೆ ಹತ್ತಿರವಿದ್ದವರು. ಖಾಕಿ ಚಡ್ಡಿ ಧರಿಸಿ ಕೆಂಪು ನಾಮ ಹಾಕಿ ಬೈಟಕ್ ಮಾಡುವುದನ್ನು ಸೌಮ್ಯವಾಗಿ ಖಂಡಿಸುತ್ತಿದ್ದ. ನನಗೆ ಅವೆಲ್ಲ ಅಷ್ಟಾಗಿ ಆಗ ಗೊತ್ತಿರಲಿಲ್ಲ. ಬಾಯಿ ರುಚಿ ಹಿಡಿದಿದ್ದ ಆತ ಯಾವ ಯಾವ ಬಡಾವಣೆ ರಸ್ತೆ ಸರ್ಕಲ್ಲುಗಳಲ್ಲಿ ಎಂತೆಂತಹ ತಿಂಡಿಗಳು ಸಿಗುತ್ತವೆ ಎಂಬ ಒಂದು ನಕಾಶೆಯನ್ನೆ ಇಟ್ಟುಕೊಂಡಿದ್ದ. ಅಲ್ಲೆಲ್ಲ ಕರೆದೊಯ್ದು ಕರಿದ ಪದಾರ್ಥಗಳ ತಿನಿಸುತ್ತಿದ್ದ. ಯಾರಾದರೂ ಎಡವಟ್ಟು ಮಾಡಿಕೊಂಡರೆ ಬಿದ್ದು ಬಿದ್ದು ನಗಾಡುತ್ತಿದ್ದ. ಹಾಸ್ಟೆಲಿಗೆ ಬಂದು ಊಟ ಮುಗಿಸಿದ ನಂತರ ನಗೆಪಾಟಲಿಗೆ ಈಡಾದವನ ಸ್ಥಿತಿಯನ್ನು ನೆನೆದು ಅಭಿನಯಿಸಿ ಹೇಳೊ; ಸಕತ್ತಾಗಿ ರೀ ಆಕ್ಟ್ ಮಾಡ್ತಿಯೆ ಕಣೋ ಎಂದು ಪೀಡಿಸುತ್ತಿದ್ದ. ನಾನೂ ಹಾಗೇ ಇದ್ದೆ. ಯಾವುದೇ ವ್ಯಕ್ತಿಯನ್ನು ಅಣಕು ಮಾಡಿ ನಡೆದಿದ್ದಕ್ಕೆ ಬಣ್ಣ ಕಟ್ಟಿ ಅಭಿನಯಿಸಿ ಪ್ರದರ್ಶನ ಮಾಡುತ್ತಿದ್ದೆ. ‘ಲೋ ಸಾಕು ತಾಳೋ; ಹೊಟ್ಟೆ ಕಳ್ಳೆಲ್ಲ ನುಲ್ಕೋತಿದ್ದಾವೇ.. ನಗೋಕಾಗ್ತಿಲ್ಲ’ ಎಂದು ತನ್ನ ದಪ್ಪ ಹೊಟ್ಟೆ ಮೇಲೆ ಕೈ ಆಡಿಸಿಕೊಳ್ಳುತ್ತಿದ್ದ. ಅವನಿಂದ ತುಂಬ ಪ್ರೀತಿ ಪಡೆದಿದ್ದೆ. ಗುಪ್ತವಾಗಿ ಎಡಪಂಥೀಯ ವಿಚಾರಗಳಲ್ಲಿ ಮುಂದಿದ್ದ. ಅಂತಹ ಚರಿತ್ರಕಾರರ ಬಗ್ಗೆ ಗಾಢವಾಗಿ ವಿವರಿಸಿ ಯುರೋಪಿಯನ್ ಚರಿತ್ರೆಯಲ್ಲಿ ಎಷ್ಟೆಲ್ಲ ಇದೆ ನೋಡು ಎಂದು ನನ್ನ ಅರಿವಿನ ಬಡತನವನ್ನು ನೀಗಿಸುತ್ತಿದ್ದ. ಅದೆಷ್ಟು ಹಿಂದಿ ಸಿನಿಮಾಗಳನ್ನು ತೋರಿಸಿದ್ದಾನೊ! ಲೆಕ್ಕವೆ ಇಲ್ಲಾ… ಅವನಿಗೆ ಯಾಕೆ ನನ್ನ ಮೇಲೆ ಅಷ್ಟೊಂದು ಪ್ರೀತಿ ಎಂಬುದೇ ಗೊತ್ತಿರಲಿಲ್ಲ. ಈವತ್ತಿಗೂ ಅವನು ನನ್ನ ಬಗ್ಗೆ ಅಷ್ಟೇ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾನೆ. ನಾನೇ ಅವನನ್ನು ಕಡಿಮೆ ಪ್ರೀತಿಸಿದ್ದೇನೆ.
ನಗರದ ಬೀದಿಗಳಲ್ಲಿ ಸುತ್ತಿ ಬಂದೆವೇನೊ ಎನಿಸುತ್ತಿತ್ತು. ಉಮಾಶಂಕರ್‍ನ ಮಾತಾಡ್ಸೋಣ ಬಾರೊ ಎಂದೆ. ‘ಬೇಡ ಸುಮ್ನಿರಪ್ಪಾ… ಸುತ್ತಿ ಸುತ್ತಿ ಸುಸ್ತಾಗಿವ್ನಿ’ ಅಂತಾ ಮಂಚದ ಮೇಲೆ ದೊಪ್ಪೆಂದು ಬಿದ್ದಂತೆ ಮಲಗಿದ. ‘ನೀನು ಮಲಗೊ; ನಾನೋಗಿ ಬರ್ತೀನಿ’ ಎಂದು ಬಾಗಿಲು ಮುಚ್ಚಿಕೊಂಡು ಹೋದೆ.
ಶಂಕರ್ ಓದುತ್ತ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಅವನಾಗಲೇ ರೂಂ ಬಳಿ ಬಂದು ನೋಡಿ ಬೀಗ ಹಾಕಿರುವುದ ಕಂಡು ನಿರಾಶೆಯಿಂದ ತನ್ನ ರೂಂ ಸೇರಿ ಗಾಢವಾಗಿ ಮುಳುಗಿದ್ದ. ‘ಊಟ ಆಯ್ತೇನೊ’ ಎಂದು ವಿಚಾರಿಸಿದ. ಶ್ರೀಧರ ಕರಕೊಂಡು ಹೋಗಿದ್ದ. ಎಲ್ಲ ಆಯ್ತು ಎಂದೆ. ಬರ್ತೀನಿ… ನಾಳೆ ಸಿಗುವಾ ಎನ್ನುತ್ತ ಹಿಂತಿರುಗಿ ಬಂದು ಅದೇ ಚಾಪೆಯ ಅದೇ ಜಾಗದಲ್ಲಿ ಹಾಸಿ ಗೋಡೆಗೆ ಒರಗಿ ಕಾಲು ನೀಡಿ ಜಿಮ್ ಕಾರ್ಬೆಟ್ ಪುಸ್ತಕವನ್ನು ಮತ್ತೆ ಹಿಡಿದುಕೊಂಡೆ. ಆ ನೀಚ ದೊಡ್ಡಣ್ಣ ಎನ್ನುವವನೇ ಒಂದು ನರಭಕ್ಷಕ ಹುಲಿಯಂತೆ ಭಾಸವಾದ. ಒಹ್! ಒಂದಲ್ಲಾ; ಒಟ್ಟಿಗೇ ಎರಡು ನರಭಕ್ಷಕ ಹುಲಿಗಳು ಜೊತೆಗೂಡಿ ಬೇಟೆಯಾಡುತ್ತವೆ ಎನಿಸಿ ತಂಗಾಳಿಯೇ ಬಿಸಿಗಾಳಿಯಾಗಿ ಬೀಸಿತು.
ನೆನ್ನೆ ಮೊನ್ನೆ ಆಚೆ ಆಚೆಯ ದಿನಗಳ ಎಲ್ಲ ಎಲ್ಲ ನರಕದ ಕೂಪಗಳೂ ಬಾಯಿ ತೆರೆದು ನುಂಗಲು ಬರುವಂತೆ ಕಂಡವು. ಆ ಹಳ್ಳಿಯಲ್ಲಿ ಕಳೆದಿದ್ದ ಒಂದೊಂದು ಇರುಳಲ್ಲೂ ನರಭಕ್ಷಕನಾಗಿದ್ದ ಅಪ್ಪನ ಬೇಟೆಯ ಜಾಡನ್ನು ತಪ್ಪಿಸಿಕೊಂಡೇ ಬದುಕಿದ್ದೆ ಎನಿಸಿತು. ಮೊನ್ನೆ ಊರಿಗೆ ಹೋಗಿದ್ದೆನಲ್ಲಾ; ಆಗ ಕೊಂದು ಬಿಡಬೇಕಿತ್ತು ಆ ಜಿಮ್ ಕಾರ್ಬೆಟ್ ಗುಂಡು ಹಾರಿಸಿದಂತೆ ಎಂದು ಕಲ್ಪಿಸಿಕೊಂಡೆ. ತಾತನ ಹಿತವಚನ, ಆ ಅರಳಿ ಮರದ ದೀರ್ಘ ಗಂಟೆಯ ಸದ್ದು; ಆ ತೊರೆ ಕೆರೆ… ಶಾಂತಿಯ ತಾಯಿಯ ನೆನಪು… ಎಂಡದ ಪೆಂಟೆಯ ಹೆಂಗಸರ ತುಂಟ ಕಣ್ಣುಗಳು; ಆ ಹಳ್ಳಿಯ ಅದೇ ಲಂಗದಾವಣಿಯ ಹುಡುಗಿಯರ ನಗೆ ಒಂದೊಂದಾಗಿ ಕೂಡಿ ಬಂದು; ನಾನು ಇರುವುದು ದಿಟವೇ… ಇದೆಲ್ಲ ಕನಸೇ ಎಂದು ಒಳ ಬಂದೆ. ಶ್ರೀಧರ ಗೊರಕೆ ಹೊಡೆಯುತ್ತಿದ್ದ. ನರಭಕ್ಷಕಗಳು ಕುಣಿಯುತ್ತಿದ್ದವು.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.