ಕೊಂಡಯ್ಯ ನನ್ನ ಹಿಂದೆಯೇ ಬರುತ್ತಿದ್ದ. ಅವನ ಧೈರ್ಯಕ್ಕೆ ಅಚ್ಚರಿಗೊಂಡೆ. ‘ಶಹಬ್ಬಾಸ್’ ಎಂದುಕೊಂಡೆ. ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದರೆ, ಭಯ ಮತ್ತು ಥ್ರಿಲ್ ಉಂಟಾಗುತ್ತಿತ್ತು. ಅಲ್ಲಲ್ಲಿ ಬಿರುಕುಗಳು ಕಾಣಿಸಿದವು. ಅವುಗಳಲ್ಲಿ ಕೈಯಿಡುತ್ತಾ. ಮುಂದಕ್ಕೆ ಜರಿದೆವು. ಶಿಖರದ ತುದಿ ಸೇರಿ, ಅಲ್ಲಿ ಕುಳಿತೆವು. ಅಲ್ಲಿ ಕುಳಿತು ಸುತ್ತಲೂ ಇರುವ ಬೆಟ್ಟ ಗುಡ್ಡಗಳನ್ನು ನೋಡುತ್ತಿದ್ದರೆ ಅವೆಲ್ಲಾ ನಾವು ಗೆದ್ದ ರಾಜ್ಯಗಳಂತೆ ಕಾಣಿಸತೊಡಗಿದವು. ಮೇಲಕ್ಕೆ ಕೈ ಚಾಚಿದರೆ ಮೋಡಗಳು ಎಟುಕುತ್ತಿದ್ದವು. ತಲೆಯ ಮೇಲೆ ಮೋಡಗಳ ಕಿರೀಟವನ್ನು ಇಟ್ಟುಕೊಂಡ ಇಬ್ಬರು ಯುವರಾಜರಂತೆ ಹೊಳೆಯತೊಡಗಿದೆವು.
ಸೃಜನ್ ಅನುವಾದಿಸಿದ ತೆಲುಗಿನ ಡಾ.ವಿ.ಚಂದ್ರಶೇಖರರಾವ್ ಬರೆದ ಕತೆ ನಿಮ್ಮ ಈ ಭಾನುವಾರದ ಓದಿಗೆ
ಕಾಡಿನಲ್ಲಿ ಮೊಟ್ಟಮೊದಲ ಸಲ ತುರಾಯಿ ಹೂವಿನ ಮೊಗ್ಗೊಂದು ರೂಪ ತಾಳಿತ್ತು. ನಾನು ಮೂರು ದಿನಗಳಿಂದ ಕಾಯುತ್ತಿದ್ದೆ. ಅದು ಅರಳುವ ಅದ್ಭುತವಾದ ದೃಶ್ಯಕ್ಕಾಗಿ. ಕಾಡಿಗೆ ಉಳಿದ ಕೊನೆಯ ಭರವಸೆ ಈ ತುರಾಯಿ ಗಿಡ. ಮುತ್ತುಗದ ಹೂವಿನ ಗಿಡಗಳಿವೆಯಾದರೂ ಅವುಗಳಿಗೆ ಆತುರ ಜಾಸ್ತಿ. ಕೆಂಪಗೆ ಮಿರಮಿರನೆ ಹೊಳೆಯುತ್ತಾ ನಾವು ಗಮನಿಸುವ ಮೊದಲೇ ಹಠಮಾರಿಯಂತೆ, ಬೆತ್ತಲಾಗಿ ಬಿಡುತ್ತದೆ. ಈಗ ಮೊದಲ ಮೊಗ್ಗು ರೂಪ ತಳೆದಿದೆ. ಇನ್ನು ಅದ್ಭುತವಾದ ಸಂಗೀತ ಸಭೆ. ಎಲ್ಲ ಕಡೆಯಿಂದ ಸುತ್ತುವರೆಯುತ್ತಾ ಗದ್ದರ್ ನಂಥವರು ಯಾರೋ ಕೆಂಪು ಹಾಡುಗಳನ್ನು ಚೆಲ್ಲುತ್ತಾ ಹೊರಟಂತೆ. ಕಾಡು ಈಗ ಬೆಂಕಿಕೋಳಿಯಂತಿದೆ.
ಕಾಡಿನೊಳಕ್ಕೆ ಹೋಗಬೇಡವೆಂದು ಗೆಳೆಯರ ಸಲಹೆ. ಚರ್ಚೆಗಳ ಕನಸು ಮುಗಿದು, ಮತ್ತೇ ಕಾಡೊಳಗಿನ ಪೊದೆಗಳಿಗೆ ಬಂದೂಕುಗಳು ಮೊಳಕೆಯೊಡೆಯುತ್ತಿವೆಯೆಂದು ಎಚ್ಚರಿಕೆ ನೀಡಿದ್ದರು. ಆದರೂ ಕಣ್ತೆರೆಯುವ ತುರಾಯಿ ಮೊಗ್ಗುಗಳು, ಕೊಳಲು, ತಬಲಾ, ಪಿಟೀಲುಗಳ ರಾಗಗಳನ್ನು ಹೊಮ್ಮಿಸುವ, ಕೆಂಪನೆ ನವೆಂಬರ್ ತಿಂಗಳಿಗಾಗಿ ಎಷ್ಟೋ ದಿನಗಳಿಂದ ಎದುರು ನೋಡುತ್ತಿದ್ದೆ. ಒಂದು ವಾರದಿಂದ ಬಣ್ಣಗಳ ಚೀಲವನ್ನು, ಕ್ಯಾನ್ವಾಸನ್ನು ಹೊತ್ತುಕೊಂಡು ಅಲೆಯುತ್ತಿದ್ದೇನೆ. ಕೆಂಪು ಬಣ್ಣದ ತುರಾಯಿ ಮೊಗ್ಗುಗಳನ್ನು ಬಣ್ಣಗಳಾಗಿ ಅನುವಾದಿಸುವ ಅವಕಾಶ ಈಗ ದೊರೆತಿದೆ. ಕವಲೊಡೆದ ನದಿ, ಎತ್ತರವಾಗಿ ಬೆಳೆದ ಹುಲ್ಲು, ರಯ್ಯನೆ ಬೀಸುವ ಗಾಳಿಯ ಸದ್ದು. ನದಿಯ ಒಂದು ಬದಿಗೆ ಒರಗಿಕೊಂಡು ಹರಿವಿನ ದಡದಲ್ಲಿ ನಿಂತಿದ್ದೆ.
ಎತ್ತರವಾದ ಬೆಟ್ಟ ವೃದ್ಧ ತಪಸ್ವಿಯಂತೆ. ನದಿಯಲ್ಲಿ ಈಜುತ್ತಿರುವ (ದನಕಾಯುವ) ಹುಡುಗರ ಕೂಗು ಕೇಳಿಸುತ್ತಿತ್ತು. ನೀರಮೇಲಿನಿಂದ ತೇಲಿಬರುತ್ತಿರುವ ವಿಚಿತ್ರ ಪರಿಮಳದ ಕಾಡಿನ ವಾಸನೆ. ಮಕ್ಕಳ ಚೀರಾಟ, ತುರಾಯಿ ಹೂಗಳ ಸೌಂದರ್ಯದೊಂದಿಗೆ ಮತ್ತೊಂದು ದೃಶ್ಯಕಣ್ಣಿಗೆ ರಾಚಿತು. ನೂರಡಿಗಳ ದೂರದಲ್ಲಿ ಎತ್ತರವಾದ ಕಲ್ಲುಬಂಡೆಯ ಮೇಲೆ ಒಬ್ಬ ನಡುವಯಸ್ಸಿನ ಮನುಷ್ಯ ಕೂತಿದ್ದ. ಉದ್ದನೆಯ ಗಾಳವನ್ನು ನದಿಗೆ ಬಿಟ್ಟು(ಅದು ಮೀನು ಹಿಡಿಯಲು ಮಾತ್ರವಲ್ಲ, ನದಿಯೊಂದಿಗೆ ಸಂಭಾಷಿಸಲು ಕೂಡಾ) ನದಿ ಕಡೆಗೆ ನೋಡುತ್ತಾ ಕುಳಿತಿದ್ದ. (ಬೆಳಿಗ್ಗೆಯಿಂದ ಹಾಗೆಯೇ ನೋಡುತ್ತಿದ್ದಾನೆ). ತುರಾಯಿ ಮೊಗ್ಗುಗಳನ್ನು ನೋಡುತ್ತಾ ಕಾಡಿನಲ್ಲಿ ಹುಚ್ಚನಂತೆ ಅಲೆಯುತ್ತಿದ್ದ ನನಗೆ, ಈ ಸಾಧಾರಣ ಮನುಷ್ಯನ ರೂಪ ಯಾವ ಮೂಲೆಗೆ ಹೋದರೂ ಬೆನ್ನು ಹತ್ತುತ್ತಿತ್ತು. ನಿನ್ನೆ ಸಂಜೆ ಸುರಿದ ದೊಡ್ಡ ಮಳೆ ಕಾಡನ್ನೆಲ್ಲಾ ತೊಯ್ಸಿತ್ತು. ಚಿಕ್ಕ ಮೋಡವೊಂದು(ಕಪ್ಪು ಬಣ್ಣದ್ದು) ಆಕಾಶದಿಂದ ನೇತಾಡುತ್ತಿತ್ತು. ಬೆಟ್ಟದ ಮೇಲೆ ಸಿಡಿಲು. ಗಾಳಿಯೊಂದಿಗೆ ಆಚೀಚೆ ಹರಿದಾಡುವ ಮಿಂಚುಗಳು.
ವಿಶಾಲವಾದ ಮರದ ಕೆಳಗೆ, ನನ್ನ ಬಣ್ಣಗಳನ್ನು ಇಳಿಸಿಕೊಂಡು, ಕ್ರಮವಾಗಿ ಒಂದು ಮೂಡ್ ನೊಳಕ್ಕೆ ಹೋಗುವುದಕ್ಕೆ ಪ್ರಯತ್ನಿಸುತ್ತಿದ್ದೆ. ಆ ಮನುಷ್ಯನ ರೂಪ ನಿರಂತರ ದೃಶ್ಯದಂತೆ ಬೆನ್ನು ಹತ್ತಿತ್ತು. ಒಂದು ಮೀನು ಕೂಡ ಗಾಳಕ್ಕೆ ಬಿದ್ದಂತಿರಲಿಲ್ಲ. ಗಾಳವನ್ನು ಮೇಲಕ್ಕೆಳೆದು ಎರಡು ಮೂರು ಎರೆ ಹುಳುಗಳನ್ನು ಚುಚ್ಚಿ ಮತ್ತೇ ನೀರೊಳಕ್ಕೆ ಬಿಟ್ಟ. ಎಷ್ಟು ಸಲ ಗಾಳವನ್ನು ಮೇಲಕ್ಕೆತ್ತಿದರೂ ಅದು ಖಾಲಿಯಾಗಿಯೇ ಇರುತ್ತಿತ್ತು(ಮೀನುಗಳಿಗೆ ಊಟ ನೀಡಲು ಅವನು ಹಾಗೆ ಅಲ್ಲಿ ಕುಳಿತುಕೊಂಡಂತಿತ್ತು). ನಡುವೆ ಒಮ್ಮೆ ನನ್ನ ಕಡೆ ನೋಡಿ ಪರಿಚಯದ ನಗೆ ನಕ್ಕ. ಅವನ ಮುಖವನ್ನು ಎಲ್ಲೋ ನೋಡಿದಂತಿತ್ತು. ಸಪೂರವಾಗಿ, ನೀಳವಾಗಿ ಆತನ ವಯಸ್ಸು ಎಷ್ಟೆಂದು ಹೇಳಲಾಗದಂತಿತ್ತು ಅವನ ಮುಖ. ನೆರೆದ ಕೂದಲಿಗೆ ಮೆಹಂದಿ ಹಚ್ಚಿದಂತಿತ್ತು. ಕೆಂಪಗೆ, ಭಯಗೊಳಿಸುವಂತಿತ್ತು ಅವನ ತಲೆಗೂದಲು. ಅವನು ಹಾಗೆ ನದಿಯನ್ನು, ನದಿಯಾಚೆಯ ಬೆಟ್ಟವನ್ನು ನೋಡುತ್ತಲೇ ಇದ್ದ. ಆ ಮನುಷ್ಯನ ಧ್ಯಾನಸ್ಥಿತಿ ಮುಂದುವರಿದಿತ್ತು. ಪಕ್ಕದ ಊರಿನಿಂದ ಲೌಡ್ ಸ್ಪೀಕರ್ ನಲ್ಲಿ ಪ್ರಕಟಣೆಗಳು ಕೇಳಿಸುತ್ತಿದ್ದವು. ಊರಿನಲ್ಲಿ ಸಾಯಂಕಾಲ ನಡೆಯಲಿರುವ ಸಭೆಯನ್ನು ಕುರಿತು, ಒರಟು ದನಿಯಲ್ಲಿ, ಬಂದೂಕು ಹಾರಿಸಿದ ಸದ್ದಿನಂತೆ ಆ ಪ್ರಕಟಣೆಗಳು ಕೇಳಿಸುತ್ತಿದ್ದವು. ಮೀಸಲಾತಿ, ವರ್ಗೀಕರಣ, ಸಭೆ, ನಿರಶನ, ದಲಿತನಾಯಕರು, ಪದಗಳೆಲ್ಲಾ ಬೆರೆತು, ಒಮ್ಮೆಲೇ ಸ್ಫೋಟಿಸಿದ ಮದ್ದುಗುಂಡುಗಳ ಸದ್ದಿನಂತೆ ಕೇಳಿಸುತ್ತಿತ್ತು. ಆ ಶಬ್ದಕ್ಕೆ ಆ ಮನುಷ್ಯನ ಏಕಾಗ್ರತೆ ಭಂಗವಾದಂತಿತ್ತು. ಬೇಸರದಿಂದ ಎದ್ದು ನಿಂತು ಗಾಳವನ್ನು ಹೊರಕ್ಕೆಳೆದು, ದಾರವನ್ನು ಕೋಲಿಗೆ ಸುತ್ತಿ, ಏನೋ ನೆನೆಪಿಗೆ ಬಂದವನಂತೆ ಹಾಗೆಯೇ ಸ್ವಲ್ಪ ಹೊತ್ತು ನಿಂತುಕೊಂಡ.
ಮೊದಲ ಸಲ ಆ ಪ್ರದೇಶವನ್ನು ನೋಡುವವನಂತೆ ಸುತ್ತಲೂ ಪರೀಕ್ಷಿಸಿ ನೋಡಿದ. ಎತ್ತರವಾದ ಬೆಟ್ಟದಕಡೆ, ನದಿಯತ್ತ, ಮಕ್ಕಳ ಗಲಾಟೆ ಕೇಳುತ್ತಿದ್ದ ಕಡೆಗೆ, ಕೊನೆಯದಾಗಿ ನನ್ನ ಕಡೆ ಕುತೂಹಲದಿಂದ ತುಂಬಾ ಹೊತ್ತು ನೋಡಿದ. ಎದ್ದು ಪೂರ್ವ ದಿಕ್ಕಿನ ಕಡೆ ಹೆಜ್ಜೆ ಹಾಕುತ್ತಾ ದಿಢೀರನೇ ಏನೋ ನೆನಪಿಗೆ ಬಂದವನಂತೆ ನನ್ನ ಕಡೆ ಬಂದ.
ಕೆಂಪನೆ ದುಂಡನೆ ಮುಖ ಅವನದು. ಉದ್ದನೆಯ ಮೀಸೆ. ತಲೆಗೂದಲು ಮಾತ್ರ ಕೆಂಪು ಬಣ್ಣದಲ್ಲಿ ವಿಶೇಷವಾಗಿತ್ತು. ಕಣ್ಣುಗಳು ಮಿರಮಿರನೆ ಹೊಳೆಯುತ್ತ ಮಾದಕವಾಗಿ, ನಗುತ್ತಿರುವಂತೆ ಕಾಣುತ್ತಿದ್ದವು.
“ನನ್ನನ್ನು ಈ ಮೊದಲು ಎಲ್ಲಾದರೂ ನೋಡಿದ್ದೀಯಾ?” ಎಂದ ಯಾವ ಮುನ್ನುಡಿ ಇಲ್ಲದೇ.
“ಅದ್ಭುತವಾಗಿವೆಯೆಲ್ಲಾ!” ಎಂದ ಮರದ ಮೇಲಿನ ಹೂಗಳ ಕಡೆ, ನನ್ನ ಕ್ಯಾನ್ವಾಸ್ ಮೇಲಿದ್ದ ಹೂಗಳ ಕಡೆ ತೀಕ್ಷ್ಣವಾಗಿ ನೋಡುತ್ತಾ.
“ಜೂಡಾಸ್ ಟ್ರೀ ಅಂದ್ರೆ ಗೊತ್ತಾ ನಿನಗೆ?” ಎಂದ ನನ್ನ ಕಡೆ ಪ್ರಖರವಾಗಿ ನೋಡುತ್ತಾ.
“ನಾನೊಬ್ಬ ಶಾಲೆಮೇಷ್ಟ್ರು. ಇಪ್ಪತ್ತು ವರ್ಷಗಳಿಂದ ಇಲ್ಲೇ ಇದ್ದೇನೆ. ಪ್ರಾಜೆಕ್ಟ್ ನವರು ಆರಂಭಿಸಿದ್ದ ಶಾಲೆ. ಈಗ ಅಲ್ಲಿ ದಲಿತ ಕೇರಿಯ ಮಕ್ಕಳೇ ಓದುತ್ತಿದ್ದಾರೆ. ಒಬ್ಬಿಬ್ಬರು ಗಿರಿಜನ ಮಕ್ಕಳು” ಎಂದ ಸ್ವಗತದಂತೆ.
“ನೀನಿಷ್ಟು ಕಷ್ಟಪಟ್ಟು ಚಿತ್ರ ಮಾಡುತ್ತಿರುವ ತುರಾಯಿ ಮರವನ್ನು ಜೂಡಾಸ್ ಟ್ರೀ ಅಂತಲೂ ಕರೆಯುತ್ತಾರೆ. ಈ ಮರಕ್ಕೊಂದು ಇತಿಹಾಸವಿದೆ.”
“ಬೈಬಲ್ ನ್ಯೂಟೆಸ್ಟ್ಮೆಂಟ್, ಜೀಸಸ್ ಕ್ರೈಸ್ತನ ಕುರಿತು ನೀನು ಕೇಳಿರುತ್ತೀ. ಕ್ರೈಸ್ತನನ್ನು ಶಿಲುಬೆಗೇರಿಸಲು ಹಿಡಿದುಕೊಟ್ಟ ಶಿಷ್ಯನ ಹೆಸರು ಜೂಡಾ. ಆಮೇಲೆ ಪಶ್ಚಾತ್ತಾಪಪಟ್ಟು, ‘ಪವಿತ್ರ ರಕ್ತವನ್ನು ಮೋಸ ಮಾಡಿದ ಪಾಪಿ’ ಎಂದು ಆವೇದನೆಯಿಂದ, ಊರ ಹೊರಗಿನ ಒಂಟಿ ಮರಕ್ಕೆ ನೇಣುಹಾಕಿಕೊಂಡ. ಮಾರನೆಯದಿನ ಇಡೀ ಮರವೆಲ್ಲಾ ಹೊಳೆಯುತ್ತಾ, ಅದರ ಟೊಂಗೆಯ ತುಂಬಾ ಕೆಂಪು ಹೂವು(ಜೂಡಾಮರ ಕೆಂಪಗೆ ಹೊಳೆಯುತ್ತಿರುತ್ತದೆ) ಬಿಟ್ಟಿದ್ದವು. ಆ ಮರವೇ ಇದು ಎಂದು ಕ್ಷಣ ಹೊತ್ತು ನಿಂತು, “ಈ ಬಣ್ಣದ ಹೂಗಳನ್ನು ನೋಡಿ ಮೋಸ ಹೋಗಬೇಡ. ಇವುಗಳ ಸೌಂದರ್ಯವನ್ನು ನೋಡಿ ಮೋಹಕ್ಕೊಳಗಾಗ ಬೇಡ. ಇದು ನಂಬಿಕೆ ದ್ರೋಹದಿಂದ ಹುಟ್ಟಿದ ಸೌಂದರ್ಯ” ಎಂದು ಹೇಳಿದ ನಂತರ “ನನ್ನ ತಲೆಗೂದಲನ್ನು ನೋಡಿದ್ದೀಯಾ? ಕೆಂಪಗೇ ಮಿರಮಿರನೆ ಮಿಂಚುತ್ತಾ ಬಹುಶಃ ಜೂಡಾರಕ್ತ ನನ್ನೊಳಗೂ ಹರಿಯುತ್ತಿದೆಯೇನೋ?” ಎಂದು ಮತ್ತೆ ಕೆಲವು ಕ್ಷಣಗಳು ಸುಮ್ಮನಿದ್ದು “ನನ್ನ ಹೆಸರು ಉ.ಕೊಂಡಯ್ಯ. ನಾವಿಬ್ಬರೂ ಮುವತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸುತ್ತಾಡಿದ್ದೆವು. ಬಹುಶಃ ನಿನಗೆ ನೆನಪಿರಲಿಕ್ಕಿಲ್ಲ. ನೀನು ಈಗ ಸಿಟಿಯ ಮನುಷ್ಯನಾಗಿದ್ದೀಯಾ. ಐಎಎಸ್ ಪರೀಕ್ಷೆಯಂಥದು ಬರೆದಿದ್ದೀಯಂತೆ. ನಾವು ಮತ್ತೇ ಹೀಗೆ ಜುಡಾಸ್ ಮರದ ಹತ್ತಿರ ಭೇಟಿಯಾಗುತ್ತಿರುವುದು ಕಾಕತಾಳೀಯವಂತೂ ಅಲ್ಲ.” ಎಂದ.
“ಮೈಕ್ ನಲ್ಲಿ ಪ್ರಕಟಣೆ ಕೇಳಿದ್ದೀಯಲ್ಲ. ಅಲ್ಲಿ ಎರಡು ಕಾರ್ಯಕ್ರಮಗಳು ನಡೆಯಲಿವೆ. ಬಹುಶಃ ಹೊಡೆದಾಟಗಳು ಕೂಡಾ ನಡೆಯಬಹುದು. ಕೆಂಪನೆ ಜೂಡಾ ಹೂವಿನ ಬಣ್ಣದ ರಕ್ತ ಕೂಡಾ ಹರಿಯಬಹುದು. ಇನ್ನು ಕಾಡೆಲ್ಲಾ ಕೆಂಪು ಹೂಗಳ ಸೌಂದರ್ಯವೇ. ನಿನ್ನ ಕುಂಚಕ್ಕೆ ಸಿಗಲಾರದಷ್ಟು…”
“ಉ.ಕೊಂಡಯ್ಯ… ನೆನಪಿಗೆ ಬಂದೆನೇ?” ಎಂದು ಗಂಭೀರವಾಗಿ ಹೆಜ್ಜೆ ಹಾಕುತ್ತಾ ಊರಿನ ಕಡೆ ನಡೆಯತೊಡಗಿದ ಅವನು.
ನಾವು ನದಿ ದಡದ ಕಾಲ್ದಾರಿಯಲ್ಲಿ ಹೆಜ್ಜೆ ಹಾಕುವಾಗ ನೀರಿನಲ್ಲಿ ಈಜಾಡುತ್ತಿದ್ದ ಹುಡುಗನೊಬ್ಬ ಕಾಣಿಸಿದ. ಅವನು ಬಹುತೇಕ ನಗ್ನವಾಗಿದ್ದ. ಸೊಂಟದ ಸುತ್ತಲೂ ಒಂದು ತುಂಡು ಬಟ್ಟೆ. ನೀರಿನ ಮೇಲೆ ತೇಲಾಡುತ್ತಾ, ಕೈಗಳಿಂದ, ಆಕಡೆ ಈಕಡೆ ಪಟಪಟನೆ ಹೊಡೆಯುತ್ತಾ, ಮುಖವೆಲ್ಲಾ ನೀರಲ್ಲಿ ಮುಳುಗಿತ್ತಾದರೂ, ತಲೆಗೂದಲು ಮಾತ್ರ ಕಾಣುತ್ತಿತ್ತು. ಕಡುಕೆಂಪು ಬಣ್ಣದ ತಲೆಗೂದಲು. ಸೂಜಿಗಳಂತೆ ನಿಮಿರಿಕೊಂಡಿತ್ತು. ಅವನನ್ನು ತಕ್ಷಣ ಕಂಡುಹಿಡಿದೆ. ಕೊಂಡಯ್ಯ(ಮನೆ ಹೆಸರು ಉಮ್ಮೆಟಿ. ಶಾಲೆಯಲ್ಲಿ ಅವನನ್ನು ಉ.ಕೊಂಡಯ್ಯ ಎಂದು ಕರೆಯುತ್ತಾರೆ). ಅವನನ್ನು ಗುರುತು ಹಿಡಿಯುತ್ತಿರುವಂತೆ ನನ್ನೊಳಗೆ ಸರಸರನೆ ಸಿಟ್ಟು ಉಕ್ಕಿಬಂತು. ನಾಲ್ಕೈದು ಕಲ್ಲುಗಳನ್ನು ಆರಿಸಿದೆ. ನನ್ನನ್ನ ನೋಡುತ್ತಿದ್ದಂತೆ ಅವನ ಕಣ್ಣುಗಳಲ್ಲೂ ಭಯ. ಒಂಟಿಯಾಗಿ ಸಿಕ್ಕಿದ್ದಾನೆ. ದಡದ ಮೇಲಿಂದಲೇ “ಲೇಯ್, ಇವತ್ತು ನಿನ್ನ ಕತೆ ಮುಗಿದಂತೆ ಕಣೋ!” ಎಂದು ಕೂಗುತ್ತಾ ಕಲ್ಲುಗಳನ್ನು ಅವನ ಕಡೆ ಬೀಸಲಾರಂಭಿಸಿದೆ.
ಕೊಂಡಯ್ಯ ನನ್ನ ಶತ್ರು. ಇಷ್ಟು ದಿನಕ್ಕೆ ಸಿಕ್ಕ. ಅವನು ವೇಗವಾಗಿ ಆಚೆಯ ದಡಕ್ಕೆ ಈಜುತ್ತಿದ್ದ. ಆ ಕಡೆ ಬೆಟ್ಟವಿತ್ತು. ಬೆಟ್ಟದ ಮೇಲೆ ಹತ್ತಿ ಓಡಿ ಹೋಗಬೇಕೆಂದು ಅವನ ಪ್ಲಾನ್. ಕಲ್ಲೆಸೆಯುವುದು, ಹೊಡೆದಾಡುವುದು ನಮಗೆ ಹೊಸದೇನಲ್ಲ. ಆದರೆ ಯಾರೂ ಯಾವತ್ತೂ ಒಂಟಿಯಾಗಿ ಹೀಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ. ಸಾಧಾರಣವಾಗಿ ಕೊಂಡಯ್ಯನ ಬಳಿ ಗಿರಿಜನ ಹುಡುಗರಿಂದ ಪಟಾಯಿಸಿದ್ದ ಬಿಲ್ಲು-ಬಾಣ ಇರುತ್ತದೆ. ಅದು ಇರುವವರೆಗೂ ಅವನನ್ನು ಹೊಡೆಯುವುದು ನಮ್ಮ ಕೈಲಿ ಆಗುವುದಿಲ್ಲ.
ಗೆರಿಲ್ಲಾ ಯುದ್ಧತಂತ್ರ ಅವನದು. ಕಾಲಿನ ಮೇಲೆ ಬಾಣದಿಂದ ಹೊಡೆದು, ಮುಖದ ಮೇಲೆ ದಬದಬನೆ ಗುದ್ದಿ ನಿಮಿಷಗಳಲ್ಲಿ ಮಾಯವಾಗುತ್ತಾನೆ. ನಮ್ಮಿಬ್ಬರ ಶಾಲೆಗಳು ಬೇರೆ ಬೇರೆಯಾದರೂ(ನಮ್ಮ ಶಾಲೆಯಲ್ಲಿ ಅವರ ಮಕ್ಕಳನ್ನು ಸೇರಿಸಿಕೊಳ್ಳುವುದಿಲ್ಲವೆಂದು ಬೇರೆ ಶಾಲೆ ಮಾಡಿಕೊಂಡಿದ್ದಾರೆ) ಎರಡೂ ಶಾಲೆ ಬಿಡುವ ಸಮಯ ಮಾತ್ರ ಒಂದೇ. ಶಾಲೆಯ ಚೀಲದ ತುಂಬಾ ಕಲ್ಲುಗಳು ತುಂಬಿರುತ್ತವೆ.
“ಲೋ ಸಂಗೀತ(ನನ್ನ ಹೆಸರು ಸಂಗೀತರಾವ್) ಸತ್ತೆ ಕಣಲೋ ಇವತ್ತು!” ಎಂದು ಸರ್ರನೇ ಕಲ್ಲುಗಳನ್ನು ಎಸೆದು, ಕ್ಷಣಗಳಲ್ಲಿ ಪೊದೆಗಳಲ್ಲಿ ಮಾಯವಾಗುತ್ತಾನೆ. ಆದರೆ ಈ ದಿನ ಅವನು ಒಂಟಿಯಾಗಿ, ನಿರಾಯುಧನಾಗಿ ನನ್ನ ಕೈಗೆ ಸಿಕ್ಕಿದ್ದಾನೆ.
ಅವನು ನನ್ನ ಮುಖ್ಯವಾದ ಶತ್ರು. “ಅವರನ್ನು ನಂಬಬೇಡ. ಅವರ ನೆರಳೂ ಕೂಡಾ ನಮ್ಮ ಮೇಲೆ ಬೀಳಬಾರದು” ಎಂದು ನಮ್ಮ ಮನೆಯಲ್ಲಿ ಪ್ರತಿದಿನ ಹೇಳುತ್ತಿರುತ್ತಾರೆ. ಎರಡೂ ಜಾತಿಗಳ ನಡುವೆ ನಾಲ್ಕೈದು ಸಲ ಭಾರಿ ಹೊಡೆದಾಟಗಳೇ ನಡೆದಿವೆ. ಕೊಲೆ ಕೇಸು, ಕೋರ್ಟ್ ವಾಯಿದೆಗಳು ಇನ್ನೂ ನಡೆಯುತ್ತಲೇ ಇವೆ. ನನಗೆ ಆರು ವರ್ಷ ವಯಸ್ಸಿದ್ದಾಗ ಒಂದು ದಿನ ಮಧ್ಯರಾತ್ರಿ ನಮ್ಮ ಮನೆಯೊಳಗಿಂದ ಬೆಂಕಿಯ ಜ್ವಾಲೆಗಳು ಎದ್ದವು. ಸಾಮಾನುಗಳನ್ನು ತಲೆಯ ಮೇಲಿಟ್ಟುಕೊಂಡು ದೊಡ್ಡದಾಗಿ ಅಳುತ್ತಾ ಬೀದಿಗೆ ಓಡಿದೆವು. ಇದು ನಡೆದ ಒಂದುವಾರದಲ್ಲಿ ಅವರ ಮನೆಗಳಿಗೂ ಬೆಂಕಿಬಿತ್ತು. ಊರಿನ ಹೊರಗೆ ಒಂದು ಕಡೆ ಅವರ ಮನೆಗಳು, ಒಂದು ಕಡೆ ನಮ್ಮ ಮನೆಗಳೂ. ಅವರ ಬೀದಿಯ ಮೂಲಕ ಓಡಾಡಬೇಡಿರೆಂದು ನಮ್ಮ ಮನೆಯ ಹಿರಿಯರ ಆರ್ಡರ್.
ಒಟ್ಟಿನಲ್ಲಿ ಇವತ್ತು ಅವನು ನನಗೆ ಸಿಕ್ಕಿದ್ದಾನೆ. ಅವನು ಅದ್ಭುತ ಈಜುಗಾರ. ಏಟಿಗೆ ಸಿಗದಂತೆ ನೀರಿನಲ್ಲಿ ಮುಳುಗುತ್ತಾ, ತೇಲುತ್ತಾ ಇಡೀ ಹೊಳೆಯಲ್ಲಾ ಈಜುತ್ತಿದ್ದ. ಸುಂದರವಾದ ಮುಖ ಅವನದು. ಜೇನಿನ ಬಣ್ಣದ ಕಣ್ಣುಗಳು. ಮುಖದಲ್ಲಿ ಮುಗ್ಧತೆ. ಕಾಲುಗಂಟೆ ಅವನು ನನ್ನನ್ನು ತಪ್ಪಿಸಿಕೊಂಡು ನೀರಿನಲ್ಲಿ ಸುತ್ತುತ್ತಿದ್ದ.
ಇನ್ನು ಪ್ರಯೋಜನವಿಲ್ಲವೆಂದು ನಾನೂ ನೀರಿನೊಳಕ್ಕೆ ಧುಮುಕಿದೆ. ಅವನು ನನಗೆ ಸಿಗದಂತೆ ಹಾವಿನಂತೆ ಹರಿದಾಡುತ್ತಿದ್ದ. ಸಣ್ಣನೆ ತಿಳಿಗಾಳಿ ನೀರನ್ನು ಅಲ್ಲೋಲ ಕಲ್ಲೋಲ ಮಾಡುತ್ತಿತ್ತು. ನೀರಿನಲ್ಲಿ ಅವನ ಕೆಂಪುಬಣ್ಣದ ತಲೆಗೂದಲು ಹೊಳೆಯುತ್ತಲೇ ಇತ್ತು. ಹತ್ತಿರ ಹೋಗಿ ಅವನ ಶರಟನ್ನು ಹಿಡಿದು ಎಳೆದೆ. ಅವನ ಕಣ್ಣುಗಳಲ್ಲಿ ಭಯ. ತುಟಿಗಳು ನಡುಗುತ್ತಿದ್ದವು. “ಲೇಯ್! ಇವತ್ತು ನಿನ್ನ ಕಥೆ ಮುಗಿಯಿತು!” ಎಂದು ಕೂಗಿದೆ. ಅವನು ಜೋರಾಗಿ ನನ್ನ ಕೈಬಿಡಿಸಿಕೊಂಡು ದಡದ ಕಡೆ ಓಡಿದ. ಪೊದೆಯಲ್ಲಿಟ್ಟಿದ್ದ ಚಡ್ಡಿ ಮತ್ತು ಅಂಗಿಯನ್ನು ಹಾಕಿಕೊಂಡ. ನಾನಿನ್ನೂ ನೀರಿನಲ್ಲಿದ್ದೆ. ‘ಇನ್ನು ಇವನು ನನ್ನ ಕಡೆ ಕಲ್ಲೆಸೆಯುತ್ತಾನೆ’ ಎಂದುಕೊಂಡೆ.
ವಿಶಾಲವಾದ ಮರದ ಕೆಳಗೆ, ನನ್ನ ಬಣ್ಣಗಳನ್ನು ಇಳಿಸಿಕೊಂಡು, ಕ್ರಮವಾಗಿ ಒಂದು ಮೂಡ್ ನೊಳಕ್ಕೆ ಹೋಗುವುದಕ್ಕೆ ಪ್ರಯತ್ನಿಸುತ್ತಿದ್ದೆ. ಆ ಮನುಷ್ಯನ ರೂಪ ನಿರಂತರ ದೃಶ್ಯದಂತೆ ಬೆನ್ನು ಹತ್ತಿತ್ತು. ಒಂದು ಮೀನು ಕೂಡ ಗಾಳಕ್ಕೆ ಬಿದ್ದಂತಿರಲಿಲ್ಲ. ಗಾಳವನ್ನು ಮೇಲಕ್ಕೆಳೆದು ಎರಡು ಮೂರು ಎರೆ ಹುಳುಗಳನ್ನು ಚುಚ್ಚಿ ಮತ್ತೇ ನೀರೊಳಕ್ಕೆ ಬಿಟ್ಟ.
ಆದರೆ ಅವನು ಮಾತ್ರ ಮೌನವಾಗಿ ನನ್ನ ಬಳಿ ಬಂದ. ಹುಡುಗಿಯರ ಮುಖದಲ್ಲಿರುವ ಮೃದುತ್ವ ಇತ್ತು ಅವನ ಮುಖದಲ್ಲಿ. ಹತ್ತಿರ ಬಂದು “ಚಳಿಯಾಗುತ್ತಿಲ್ಲವಾ?” ಎಂದ. ನಾನು ಏನೂ ಮಾತಾಡಲಿಲ್ಲ. ಈಜುತ್ತಾ ದಡ ಸೇರಿದೆ. ‘ನಿನ್ನನ್ನು ಯಾರೋ ನಮ್ಮ ಜಾಗದಲ್ಲಿ ಈಜು ಹೊಡೆಯಲು ಹೇಳಿದ್ದು’ ಎಂದೆ ಗಡಸು ದನಿಯಿಂದ. “ನಿಮ್ಮ ಜಾಗಾನಾ? ಹಾಗೆಂದು ಎಲ್ಲಾದರೂ ಬರೆದಿದ್ದಾರಾ?” ಎಂದ. ಅವನ ಮುಖದಲ್ಲಿ ತೆಳು ನಗು. “ಇದನ್ನು ಕಂಡು ಹಿಡಿದಿದ್ದು ನಾವು. ಬೆಟ್ಟಗಳ ನಡುವೆ, ಇಷ್ಟುದಿನ ಯಾರೂ ಇದನ್ನು ನೋಡಿರಲಿಲ್ಲ” ಎಂದೆ ಅಸಹನೆಯಿಂದ.
ಅವನು ದಿಢೀರನೇ ನನ್ನ ಕಡೆ ತಿರುಗಿ, “ಕೈಗೆ ಸಿಕ್ಕರೂ ಯಾಕೆ ನನ್ನನ್ನು ಬಿಟ್ಟುಬಿಟ್ಟೆ?” ಎಂದ.
ಸ್ವಲ್ಪ ಹೊತ್ತು ಯೋಚಿಸಿ “ಬೇಕಂತಲೇ ನಿನ್ನನ್ನು ಬಿಟ್ಟೆ. ನಿನ್ನೊಂದಿಗೆ ಮಾತಾಡಬೇಕೆಂದು ನಿಂತೆ. ನಾವೆಂದರೆ ಏನೆಂದು ನಿಮಗೆ ಗೊತ್ತಾಗಬೇಕು. ತಲೆ ಇಲ್ಲದ ಮೂರ್ಖರು ನೀವು. ಆ ವಿಷಯ ನಿನಗೆ ಹೇಳಬೇಕೆಂದು. ‘ವಿಶ್ವಸಂಸ್ಥೆ’ ಎಂದರೆ ಗೊತ್ತ ನಿನಗೆ? ಅಲಿಪ್ತ ದೇಶಗಳೆಂದರೆ ಗೊತ್ತ ನಿನಗೆ? ಪ್ರಚ್ಛನ್ನಯುದ್ಧ ಎಂದರೆ? ಅರೆ ಅಸಲಿಗೆ ನೀನು ಸ್ವತಂತ್ರವಾಗಿ ‘ನನ್ನ ಹೆಸರು ಕೊಂಡಯ್ಯ’ ಎಂದು ಇಂಗ್ಲಿಷಿನಲ್ಲಿ ಹೇಳಬಲ್ಲೆಯಾ?’ ಎಂದೆ ಸಿಟ್ಟಿನಿಂದ.
“ಗಣಿತದಲ್ಲಿ ನನಗೆ 94 ಮಾರ್ಕ್ಸ್ ಗೊತ್ತ? ಅಲ್ಜಿಬ್ರಾಗೆ ನಾವೆಂದರೆ ಗಾಬರಿ?” ಎಂದ ಕೊಂಡಯ್ಯ ಆವೇಶದಿಂದ.
“ಲೇಯ್ ತೆಲಗು ಪದ್ಯವನ್ನು ತಪ್ಪುಗಳಿಲ್ಲದಂತೆ ಹೇಳಬಲ್ಲೆಯಾ? ಅಕಾಶಂಬುನ… ಪದ್ಯ ಹೇಳಲೇ ದಪ್ಪ ನಾಲಿಗೆಯವನೇ?” ಎಂದೆ ಸವಾಲು ಹಾಕುತ್ತಾ.
“ಆ ಪದ್ಯವೇನು? ನನಗೆ ಕವಿ ಜಾಷುವಾರ ಪದ್ಯಗಳೆಲ್ಲವೂ ಬಾಯಿಪಾಠ ಬರುತ್ತದೆ. ಗಬ್ಬಿಲ ಪದ್ಯಗಳನ್ನು ಬಡಬಡನೇ ಹೇಳಲೇ?” ಎಂದ.
ಮೆಲ್ಲಗೆ ಪೊದೆಗಳನ್ನು ದಾಟಿ ಮುಂದೆಕ್ಕೆ ನಡೆದೆವು. ಕೊಂಡಯ್ಯ ನನ್ನ ಶತ್ರು. ಅವನ ಹತ್ತಿರ ಶರಣಾಗತನಾಗೋದು ನನಗಿಷ್ಟವಿಲ್ಲ. “ಲೇಯ್ ಬೆಟ್ಟ ಹತ್ತೋದು ಬರುತ್ತಾ ನಿನಗೆ. ಈ ಎದುರಿಗಿರುವ ಬೆಟ್ಟವನ್ನು ಅರ್ಧಗಂಟೆಯಲ್ಲಿ ಹತ್ತಿ ಇಳಿಯಬಲ್ಲೆ ಗೊತ್ತ?” ಎಂದೆ ಗರ್ವದಿಂದ.
“ನಿನ್ನ ಬಗ್ಗೆ ನಮ್ಮ ಜನ ಹೇಳುತ್ತಿರುತ್ತಾರೆ. ಬೆಟ್ಟ ಹತ್ತುವಲ್ಲಿ, ನಿನ್ನ ನಂತರವೇ ಯಾರಾದರೂ?” ಎಂದು ಒಪ್ಪಿಕೊಂಡ ಅವನು.
ನನ್ನ ಕೆನ್ನೆಗಳು ಕೆಂಪಗಾದವು. ನಾವಿಬ್ಬರೂ ಶತ್ರುಗಳೆಂಬುದನ್ನು ಮರೆತೆವು. “ಇದೋ ಈ ಎದುರಿಗಿರುವ ಬೆಟ್ಟವನ್ನು ಹತ್ತಿದವನೇ ಗಂಡಸೆಂದರೆ. ಮಧ್ಯದವರೆಗೆ ಪೊದೆಗಳು, ಚಿಕ್ಕ ಚಿಕ್ಕ ಗಿಡಗಳಿರುತ್ತವೆಯಾದರೂ, ಅದು ನುಣ್ಣಗೆ ಜಾರುತ್ತಿರುತ್ತದೆ. ಎಲ್ಲಿ ಸ್ವಲ್ಪ ಹಿಡಿತ ತಪ್ಪಿದರೂ ಮೂಳೆ ಸಿಗೋದು ಕಷ್ಟ…” ಎಂದೆ ಗರ್ವದಿಂದ.
“ನಾನು ತುಂಬಾ ಸಲ ಅರ್ಧದವರೆಗೆ ಹತ್ತಿ ಹಿಂದಕ್ಕೆ ಬಂದೆ” ಅವನು ಹೇಳುತ್ತಿದ್ದರೆ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. “ನಿಜ ಹೇಳಬೇಕೆಂದರೆ ನಿಮ್ಮವರು ಅಷ್ಟೇ ದಮ್ ಇಲ್ದೋರು” ಎಂದೆ ಏನೋ ನೆನಪಿಗೆ ಬಂದಂತೆ. ಕೊಂಡಯ್ಯ ಏನೂ ಮಾತನಾಡಲಿಲ್ಲ. “ನನ್ನನ್ನು ಬೆಟ್ಟದ ಮೇಲಕ್ಕೆ ಕರ್ಕೊಂಡು ಹೋಗು. ಅರ್ಧದಿಂದ ಭಯ ನನಗೆ. ನೀನು ಜೊತೆಗಿದ್ದರೆ ಧೈರ್ಯದಿಂದ ಬರ್ತೇನೆ” ಎಂದ ಬೆಟ್ಟದ ಕಡೆ ನಡೆಯುತ್ತಾ.
“ದಢೂತಿ ದೇಹ ನಿನ್ನದು. ನೀನೇನು ಹತ್ತಬಲ್ಲೆ?” ಎಂದೆ.
“ಇಲ್ಲ, ನಾನು ಕೂಡಾ ಬರುತ್ತೇನೆ” ಎಂದು ನನ್ನೊಂದಿಗೆ ಹೆಜ್ಜೆ ಹಾಕಿದ.
ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಅರ್ಧದವರೆಗೆ ಯಾವ ತೊಂದರೆಯೂ ಆಗಲಿಲ್ಲ. ನಾನು ಚಕಚಕನೆ ಓಡುತ್ತಿದ್ದೆ. ನಡುಭಾಗದವರೆಗೂ ಹಸಿರು ಹುಲ್ಲಿತ್ತು. ಸಮಸ್ಯೆಯಾಗಲಿಲ್ಲ. ಎರಡು ಮೂರು ಕಡೆ ಅವನು ಜಾರುತ್ತಿದ್ದರೆ ಕೈಹಿಡಿದು ತಡೆದೆ. ಪೊದೆಗಳು, ಹುಲ್ಲಿನ ಹಾಸುಗಳು ಮುಗಿದ ನಂತರ, ಸಮತಟ್ಟಾದ ಇಳಿಜಾರಿಲ್ಲದ ಬೆಟ್ಟ ಆರಂಭವಾಯಿತು. ನುಣುಪಾದ, ತ್ರಿಭುಜಾಕಾರದ ಸಮತಟ್ಟಾದ ಹೊರಮೈ ಅದು. ಯಾವ ಕಡೆಯಿಂದ ನೋಡಿದರೂ ಹಿಡಿತ ಸಿಗುವುದಿಲ್ಲ. ಕುರಿ ಮೇಕೆಗಳಿಗೆ ಕೂಡಾ ಮೇಲೆ ಹತ್ತಲಾಗುವುದಿಲ್ಲ. ತುದಿಯವರೆಗೆ ಬಂದ ನಂತರ ಕೊಂಡಯ್ಯ ಹೆದರಿದ. ಅವನ ಕೈಗಳು ನಡುಗುವುದನ್ನು ಗಮನಿಸಿದೆ. ಮುಖದ ತುಂಬೆಲ್ಲಾ ಬೆವರು.
“ಇನ್ನೂ ಮುಂದಕ್ಕೆ ಬರ್ತೀಯಾ? ನಿಂತು ಬಿಡ್ತೀಯಾ?” ಎಂದೆ. ನುಣ್ಣಗೇ ಯಾವ ಆಧಾರವೂ ಇಲ್ಲದ ಬೆಟ್ಟದ ತುದಿಯನ್ನು ನೋಡಿ ಸ್ವಲ್ಪ ಹಿಂಜರಿದ.
“ಬೇಡಣ್ಣ, ಹಿಡಿತ ಸಿಕ್ತಾನೇ ಇಲ್ಲ. ನೀನು ಕೂಡ ಹತ್ತಬೇಡ” ಎಂದ. “ಹೋಗಲೇ ಭಡವಾ” ಎಂದು ನಾನು ಮುಂದಕ್ಕೆ ಚಲಿಸಿದೆ. ಶಿಖರದ ಮೇಲೆ ಅಲ್ಲಲ್ಲಿ ಮುಂದಕ್ಕೆ ಚಾಚಿದ್ದ ಚೂಪನೆ ಕಲ್ಲುಗಳಿದ್ದವು. ಕಾಲುಗಳನ್ನು ಅವುಗಳ ಮೇಲೆ ಒತ್ತಿ, ಎರಡು ಕೈಗಳಿಂದ ಮುಂದಕ್ಕೆ ಹರಿದಾಡತೊಡಗಿದೆ. ಕೊಂಡಯ್ಯ ನನ್ನೊಂದಿಗೆ ಮೇಲಕ್ಕೆ ಬರುತ್ತಿದ್ದ. ಸ್ವಲ್ಪ ದೂರ ಹೋದ ನಂತರ ನುಣ್ಣನೆ ಗ್ರಾನೈಟ್ ಮೇಲೆ ಅಲ್ಲಲ್ಲಿ ಬಿರುಕುಗಳೂ ಕಾಣಿಸಿದವು. ಹಾಗೆಯೇ ಬಿರುಕುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮೇಲಕ್ಕೆ ಜರಿಯತೊಡಗಿದೆ. ಅಂಚಿನ ಮೇಲೆ ಕಾಲನ್ನು ಬಲವಾಗಿ ಊರಿ, ಕೊಂಡಯ್ಯನ ಕೈಯನ್ನು ಹಿಡಿದುಕೊಂಡೆ. ಅಲ್ಲಿಂದ ನೋಡಿದರೆ ಕೆಳಗೆ ನದಿ ದಾರದ ಹುರಿಯಂತೆ ಕಾಣುತ್ತಿತ್ತು. ಕಾಡು ಇರುವೆಯ ಹುತ್ತದಂತೆ ಕಾಣುತ್ತಿತ್ತು. ಗಾಳಿ ಜೋರಾಗಿ ಬೀಸುತ್ತಿತ್ತು. ಇನ್ನೊಂದು ಇಪ್ಪತ್ತು ಹೆಜ್ಜೆ ಹೋದರೆ ಬೆಟ್ಟದ ತುದಿ ಬರುತ್ತದೆ. ಈ ಭಾಗವೆಲ್ಲಾ ನುಣುಪಾಗಿ ಹೊಳೆಯುತ್ತಿತ್ತು. ಹೊಟ್ಟೆಯಿಂದಲೇ ಜರಿಯುತ್ತಾ ಹೋಗಬೇಕು.
ಕೊಂಡಯ್ಯ ನನ್ನ ಹಿಂದೆಯೇ ಬರುತ್ತಿದ್ದ. ಅವನ ಧೈರ್ಯಕ್ಕೆ ಅಚ್ಚರಿಗೊಂಡೆ. ‘ಶಹಬ್ಬಾಸ್’ ಎಂದುಕೊಂಡೆ. ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದರೆ, ಭಯ ಮತ್ತು ಥ್ರಿಲ್ ಉಂಟಾಗುತ್ತಿತ್ತು. ಅಲ್ಲಲ್ಲಿ ಬಿರುಕುಗಳು ಕಾಣಿಸಿದವು. ಅವುಗಳಲ್ಲಿ ಕೈಯಿಡುತ್ತಾ. ಮುಂದಕ್ಕೆ ಜರಿದೆವು. ಶಿಖರದ ತುದಿ ಸೇರಿ, ಅಲ್ಲಿ ಕುಳಿತೆವು. ಅಲ್ಲಿ ಕುಳಿತು ಸುತ್ತಲೂ ಇರುವ ಬೆಟ್ಟ ಗುಡ್ಡಗಳನ್ನು ನೋಡುತ್ತಿದ್ದರೆ ಅವೆಲ್ಲಾ ನಾವು ಗೆದ್ದ ರಾಜ್ಯಗಳಂತೆ ಕಾಣಿಸತೊಡಗಿದವು. ಮೇಲಕ್ಕೆ ಕೈ ಚಾಚಿದರೆ ಮೋಡಗಳು ಎಟುಕುತ್ತಿದ್ದವು. ತಲೆಯ ಮೇಲೆ ಮೋಡಗಳ ಕಿರೀಟವನ್ನು ಇಟ್ಟುಕೊಂಡ ಇಬ್ಬರು ಯುವರಾಜರಂತೆ ಹೊಳೆಯತೊಡಗಿದೆವು. ನನ್ನ ಶತ್ರು ಮತ್ತು ನಾನು ಸೇರಿ ಸಾಧಿಸಿದ ವಿಜಯವಿದು. ಯಾತಕ್ಕೋ ಅವನನ್ನು ಶತ್ರುವೆಂದು ಭಾವಿಸಲು ಆಗಲಿಲ್ಲ. ನಮ್ಮ ಇಷ್ಟಗಳು, ಸಂತೋಷಗಳು, ಒಂದೇ ರೀತಿಯಾಗಿದ್ದವು. ಹೇಳಲಾಗದ ಸ್ನೇಹ ಭಾವವೊಂದು ನಮ್ಮನ್ನು ಆವರಿಸಿತು.
“ನಲ್ಲಮಲ ಬೆಟ್ಟಗಳ ಸಾಲಿನಲ್ಲಿ ಅತ್ಯಂತ ಎತ್ತರವಾದ ಬೆಟ್ಟವಿದು. ಯಾರೂ ಇಷ್ಟು ಎತ್ತರ ಏರಿರಲಿಲ್ಲ. ಈ ಬೆಟ್ಟಕ್ಕೆ ನಾವೇ ತೆನ್ ಸಿಂಗ್ ನೊರ್ಗೆ, ಎಡ್ಮಂಡ್ ಹಿಲರಿ” ಎಂದ ಕೊಂಡಯ್ಯ ಹೆಮ್ಮೆಯಿಂದ. ಇಬ್ಬರೂ ತುಂಬಾ ಹೊತ್ತು ಹರಟೆ ಹೊಡೆದೆವು. ಅದ್ಭುತವಾದ ವಿಹಾರವದು. ಸರೋವರ, ನದಿ ಕಾಡು, ಸಿಹಿಯಾದ ಹಣ್ಣುಗಳು, ಚಿಕ್ಕಂದಿನ ನೆನಪುಗಳು ಹಾಗೆ ಮಾತನಾಡಿಕೊಳ್ಳುತ್ತಲೇ ಇದ್ದೆವು. ಹರಟೆಗಳಲ್ಲಿ ನಮ್ಮದೇ ಆದ ಒಂದು ವರ್ತಮಾನವನ್ನು ಕಂಡುಹಿಡಿದೆವು. ನಮ್ಮ ದುಃಖಗಳು, ಹೋರಾಟಗಳು, ನಮ್ಮ ಪೂರ್ವಿಕರ ಅವಮಾನಗಳು, ಕಣ್ಣೀರು ಎಲ್ಲವನ್ನು ನೆನಪಿಗೆ ತಂದುಕೊಂಡೆವು. ನಮ್ಮಿಬ್ಬರ ರಕ್ತದಲ್ಲಿ ಪ್ರವಹಿಸುವ ಇತಿಹಾಸ ಒಂದೇ ಎಂದು ಅರಿತುಕೊಂಡೆವು. ಹತ್ತಿರದಿಂದ ನೋಡಿದರೆ ನಮ್ಮಿಬ್ಬರಲ್ಲಿ ಎಷ್ಟೊಂದು ಹೋಲಿಕೆಗಳು. ಮುಖ-ಮೂಗು, ದಪ್ಪನೆಯ ತುಟಿಗಳು, ಮಾತುಗಳ ಉಚ್ಛಾರಣೆ, ಇವೆಲ್ಲ ಅರ್ಥವಾಗುತ್ತಿದ್ದರೆ ಎಷ್ಟೊಂದು ಆಶ್ಚರ್ಯ ನನ್ನಲ್ಲಿ. ಮಾತುಗಳ ನಡುವೆ ಅವನ ಭುಜದ ಮೇಲೆ ಕೈ ಹಾಕಿದೆ. ಅದ್ಭುತವಾಗಿತ್ತು ಆ ಸ್ಪರ್ಶ. ಹಾಗೆಯೇ ಮಾತನಾಡುತ್ತಾ ಬೆಟ್ಟವನ್ನಿಳಿಯಲು ಪ್ರಾರಂಭಿಸಿದೆವು.
ಬೆಟ್ಟ ಇಳಿದು, ಕಾಡನ್ನು ದಾಟಿ ಇಬ್ಬರೂ ಊರಿನ ಕಡೆ ಹೆಜ್ಜೆ ಹಾಕತೊಡಗಿದೆವು. ಕುರಿಕಾಯುವ ಹುಡುಗರಿಬ್ಬರು ನಮ್ಮ ಕಡೆ ಆಶ್ಚರ್ಯದಿಂದ ನೋಡಿದರು. ಊರೊಳಕ್ಕೆ ಬಂದ ನಂತರ, ಅವರ ಬೀದಿಯಲ್ಲಿ ಕಟ್ಟಿಗೆ ಹೊಡೆಯುತ್ತಿದ್ದ ವೃದ್ಧನೊಬ್ಬ ನಮ್ಮನ್ನು ನೋಡಿ ಮುಖ ಸಿಂಡರಿಸಿದ. ಕೊಂಡಯ್ಯನಲ್ಲಿ ಕ್ರಮವಾಗಿ ಹೆದರಿಕೆ ಪ್ರಾರಂಭವಾಯಿತು.
“ನಾವು ದೂರದೂರವಾಗಿ ನಡೆಯೋಣ” ಎಂದ. ನಾನೇನೂ ಮಾತಾಡಲಿಲ್ಲ.
ಗಬಗಬನೆ ಹೆಜ್ಜೆಗಳನ್ನು ಹಾಕಿ, ನನ್ನಿಂದ ದೂರಸರಿದ ಕೊಂಡಯ್ಯ. ನಾನು ತಲೆಕೆಡಿಸಿಕೊಳ್ಳದೇ ಅವನ ಪಕ್ಕದಲ್ಲೇ ನಡೆಯುತ್ತಿದ್ದೆ. ಅವನು ನಿಧಾನವಾಗಿ ದೂರಸರಿಯುತ್ತಿದ್ದ. ದಿಢೀರನೇ ಕೆಳಕ್ಕೆ ಬಗ್ಗಿ, ನೆಲದ ಮೇಲಿಂದ ಕಲ್ಲೊಂದನ್ನು ತೆಗೆದು, “ತಲೆ ಒಡಿತೇನೆ” ಎಂದು ಕೂಗಿ ಕಲ್ಲನ್ನು ನನ್ನ ಕಡೆಗೆ ಬೀಸಿದ. ನಾನು ಮುಂದಕ್ಕೆ ಬಾಗಿ, ಅದನ್ನು ತಪ್ಪಿಸಿಕೊಂಡೆ. ಒಂದು ನಿಮಿಷ ನಿಂತು, ನಾನು ಕೂಡಾ ಒಂದು ಕಲ್ಲನ್ನು ಕೈಗೆ ತೆಗೆದುಕೊಂಡೆ.
ಉ.ಕೊಂಡಯ್ಯ ಹೊರಟು ಹೋಗಿ ತುಂಬಾ ಸಮಯವಾಗಿತ್ತು. ಗಾಳಿ ಜೋರಾಗಿ ಬೀಸುತ್ತಿತ್ತು. ಒಣಗಿದ ತರಗೆಲೆಗಳು ಸದ್ದು ಮಾಡುತ್ತಿದ್ದವು. ದೂರದಲ್ಲಿ ನೀರು ಹರಿಯುತ್ತಿರುವ ಸದ್ದು.
ಉ.ಕೊಂಡಯ್ಯನೊಂದಿಗಿನ ನನ್ನ ಚಿಕ್ಕಂದಿನ ನೆನಪು, ಕೆಲವು ನಿಮಿಷಗಳ ಕೆಳಗೆ ನಡೆದಂತಿದೆ. ನನ್ನ ಪ್ಯಾಂಟಿನ ಎರಡು ಜೇಬುಗಳು ಭಾರವಾಗಿ ಕಲ್ಲುಗಳಿಂದ ತುಂಬಿದಂತೆ ಅನಿಸತೊಡಗಿತು. ಬೆಟ್ಟದ ಕಡೆ ನೋಡಿದೆ. ಈಗ ನಾನು ಉ.ಕೊಂಡಯ್ಯ ಸೇರಿ ಮತ್ತೇ ಆ ಬೆಟ್ಟವನ್ನು ಏರಬಲ್ಲವೇ? ಎಂದು ಯೋಚಿಸತೊಡಗಿದೆ.
ಕಾಡಿನ ಆಚೆ ಊರಲ್ಲಿ ಗಲಾಟೆ ಕೇಳಿಸತೊಡಗಿತು. ಬಹುಶಃ ಉ.ಕೊಂಡಯ್ಯ ಹೇಳಿದಂತೆ ಎರಡು ಸಭೆಗಳು ಪ್ರಾರಂಭವಾಗಿರಬಹುದು.
******
ಡಾ. ವಿ. ಚಂದ್ರಶೇಖರರಾವ್:
ತೆಲುಗು ಕಥಾಲೋಕದಲ್ಲಿ ಮಾರ್ಮಿಕತೆ, ಮ್ಯಾಜಿಕ್ ರಿಯಲಿಸಂ, ಮಿಸ್ಟಿಸಿಸಂ ಬೆರೆಸಿ ಕಥೆಯನ್ನು ಅಸಂಗತ ಕಲಾಕೃತಿಯಂತೆ ಚಿತ್ರಿಸಬಲ್ಲ ಕಥೆಗಾರರು. ಮೂರು ದಶಕಗಳ ತಮ್ಮ ಕಥಾಯಾನದಲ್ಲಿ ಸಮಾಜದ ಸಂಘರ್ಷಗಳನ್ನು, ಒತ್ತಡಗಳನ್ನು, ಸಂಕೀರ್ಣ ಸಂದರ್ಭಗಳನ್ನು ಒಂದು decadence ಅನ್ನು ತಮ್ಮ ಪಾತ್ರಗಳಮೂಲಕ ಹೇಳಿಸುತ್ತಲೇ ಬದುಕಿನ ಕುರಿತು ಸಹಾನುಭೂತಿ, ಭರವಸೆ, ಒಂದಿಷ್ಟು ನಂಬಿಕೆಯನ್ನು ಸೃಷ್ಟಿಸುವುದು ತಮ್ಮ ಜವಾಬ್ದಾರಿಯೆಂದು ಹೇಳುತ್ತಾರೆ. I am a product of my times and politics of my times ಎನ್ನುವ ಚಂದ್ರಶೇಖರರಾವ್ ತೆಲುಗು ಕಥಾಸಾಹಿತ್ಯಕ್ಕೊಂದು ಹೊಸ ಟೆಕ್ಸ್ಚರ್ ಪರಿಚಯಿಸಿದ ಲೇಖಕರು.
ಜೀವನಿ, ಲೆನಿನ್ ಪ್ಲೇಸ್, ಮಾಯಾಲಾಂತರು, ದ್ರೋಹವೃಕ್ಷಂ ಇವರ ಕಥಾಸಂಕಲನಗಳು. ಐದು ಹಂಸಲು, ನಲ್ಲಮಿರಿಯಂ ಚೆಟ್ಟು, ಆಕು ಪಚ್ಚನಿ ದೇಶಂ- ಕಾದಂಬರಿಗಳು. ಜೂನ್ ಎಂಟು 2017ರಂದು ಡಾ. ವಿ. ಚಂದ್ರಶೇಖರರಾವ್ ವಿಧಿವಶರಾಗಿದ್ದಾರೆ.
ಕಲಾವಿದ ಮತ್ತು ಅನುವಾದಕ. ಓದಿದ್ದು ಸಂಡೂರು ಹಾಗು ಬಳ್ಳಾರಿ . ವೃತ್ತಿಯಿಂದ ಸಿವಿಲ್ ಇಂಜಿನೀಯರ್ .
ರಾಮ್ ಗೋಪಾಲ್ ವರ್ಮ ‘ ನನ್ನಿಷ್ಟ’ ಮೊದಲ ಅನುವಾದ. ‘ಪಚ್ಚೆ ರಂಗೋಲಿ’ ಮೊದಲ ಅನುವಾದ ಕಥೆ.
ಸದ್ಯ ಅನುವಾದ ಮತ್ತು ಪೈಂಟಿಂಗ್ಸ್ ಗಳಲ್ಲಿ ಬ್ಯುಸಿ .
ఐద
అద్భుతవాద Story మత్తు అనువాద..
Congratulations Srujan..?
ಕತೆಯ ವಿಷಯ ತುಂಬಾ ಗಹನವಾಗಿದೆ. ಸಮಾಜದಿಂದ ದೂರ ಹೋದಾಗ ಕಾಣುವ ವೈಯಕ್ತಿಕ ಪ್ರೀತಿ, ಸಾಮ್ಯತೆ ಒಳಗಡೆ ಬಂದಾಗ ಕಟ್ಟಳೆಗಳಿಗೊಳಗಾಗಿ ಕಳಚಿಕೊಳ್ಳುವುದು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪರಿಸರದ ವರ್ಣನೆಯಂತೂ ನಮ್ಮನ್ನು ಬೆಟ್ಟದ ತುದಿಗೆ ಕೊಂಡೊಯ್ಯುತ್ತದೆ. ಸಮರ್ಥವಾದ ಅನುವಾದ. ಅಭಿನಂದನೆ.
ಕತೆಯ ವಸ್ತು & ನಿರೂಪಣೆ ತಾಜಾ ಮತ್ತು ಡೀಪ್ ಅನ್ನಿಸಿತು . ಸೃಜನರ ಅನುವಾದಿತ ‘ನಾ ಇಷ್ಟಂ’ ಓದಿದ್ದೆ. ಇಲ್ಲಿ ಬೇರೆಯ ಸೃಜನರೇ ಕಂಡರು. ಚಂದ್ರಶೇಖರ ರಾಯರ ಇತರ ಕತೆ/ ಬರಹಗಳೂ ಕನ್ನಡದಲ್ಲಿ ಓದಲು ಸಿಗಲಿ ಎಂದು ಆಶಿಸುತ್ತೇನೆ….