ಅದ್ಯಾವ ಗಳಿಗೆಯಲ್ಲಿ ನಮ್ಮೂರಿನ ಮಂದಿಯ ತಲೆಯೊಳಗೆ ‘ಟೈಟಾನಿಕ್’ ಹುಳು ಬಿಟ್ಟಿದ್ದರೋ ಕಾಣೆ. “ಹಡಗು ಮುಳುಗೋ ಸಿನ್ಮಾ ನೋಡೋಕೆ ಹೋಗ್ತಿದ್ದೀವಿ,” ಅಂತ ಹಲ್ಕಿರಿಯುತ್ತ, ಕೂಲಿಯನ್ನೂ ಬಿಟ್ಟು ಬಸ್ಸು ಹತ್ತಿದ್ದ ನಮ್ಮೂರ ಮಂದಿಯ ಹುರುಪು ನೆನೆದರೆ ಹೆಮ್ಮೆ, ಪ್ರೀತಿ. ಆ ಸಿನಿಮಾ ತರೀಕೆರೆಯ ಟಾಕೀಸಿನಲ್ಲಿ ಇದ್ದ ಅಷ್ಟೂ ದಿನ ಊರಿನ ಒಂದಲ್ಲ ಒಂದು ತಲೆ ಮಾರ್ನಿಂಗ್ ಶೋ ಕಂಡದ್ದಿದೆ. ನನಗೆ ಬುದ್ಧಿ ಬಂದ ನಂತರದಲ್ಲಿ, ಹೀಗೆ ಊರಿಗೆ ಊರೇ ಪಟ್ಟಣಕ್ಕೆ ಹೋಗಿ ನೋಡಿಬಂದ ಸಿನಿಮಾ ಬೆರಳೆಣಿಕೆಯಷ್ಟು.
‘ಸೊಗದೆ’ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್ ಬರಹ.
ಹೆಚ್ಚೂಕಡಿಮೆ ಹತ್ತಡಿ ದೂರದಲ್ಲಿದ್ದ ಹುಡುಗನೊಬ್ಬನ ಮೇಲೆ ಆಕೆ ಪಾಯಸದಂಥ ಕೆಸರನ್ನು ಎರಚಿದ್ದು, ಅಂವ ಮೊದಲಿಗೆ ಗಾಬರಿಯಾದರೂ ಸಾವರಿಸಿಕೊಂಡು, ಅಷ್ಟೂ ಹಲ್ಲು ಬಿಟ್ಟು ಜೋರು ನಕ್ಕದ್ದು, ತಕ್ಷಣ ಆಕೆಯೂ ನಗು ಜೋಡಿಸಿದ್ದು… ಕಣ್ಣಂಚಲ್ಲಿ ಅವತ್ತಿನ ಕೆಸರಿನಷ್ಟೇ ಹಸಿಯಾಗಿದೆ. ಅವರಿಬ್ರೂ ಈಗ ಎಂತ ಮಾಡ್ತಿದ್ದಾರೋ, ಎಲ್ಲಿದ್ದಾರೋ ತಿಳಿಯದು. ಆದರೆ, ಅವತ್ತಿನ ಆ ದೃಶ್ಯ ಮಾತ್ರ ನಮ್ಮೂರಿನಲ್ಲಿ ದೊಡ್ಡ ಪುಕಾರಿನ ರೂಪ ತಳೆದು ಸಿಹಿಗಾಳಿಯಾಗಿತ್ತು. ಕೇಮೆ ಬಿಟ್ಟು ಅರಳಿಕಟ್ಟೆಯಲ್ಲಿ ಕುಂತು ಅನಿತಾ ಬೀಡಿ ಎಳೆಯುವ ತಲೆಗಳದ್ದೆಲ್ಲ, “ಕಾಲೇಜು ಹುಡ್ಗೀರು ಭಾರೀ ಜೋರಿದ್ದಾರೆ,” ಅಂತ ಫರ್ಮಾನು.
ಯೌವ್ವನದ ಪ್ರೀತಿ-ಪ್ರೇಮಗಳೆಲ್ಲ ಮಾವಿನ ತೋಪು, ಹಳ್ಳದ ಸಾಲು, ಹೊಗೆಸೊಪ್ಪಿನ ಖಾಲಿ ಬ್ಯಾರಲ್, ಮಿಡ್ಲಿಸ್ಕೂಲು ಫೀಲ್ಡಿನ ಅಂಚು, ಚಿಕ್ಕಮಗಳೂರು ರಸ್ತೆಗೆ ತಲುಪಿಸ್ತಿದ್ದ ಮೂರು ಕಿಲೋಮೀಟರಿನ ತುಂಡು ದಾರಿ ಮುಂತಾದ ಅವಕಾಶಗಳಲ್ಲಿ ಕದ್ದುಮುಚ್ಚೀನೇ ನಡೆಯುತ್ತಿದ್ದ ನಮ್ಮೂರಿನಲ್ಲಿ, ಅದಕ್ಕೊಂದು ಪ್ರದರ್ಶಕ ತಿರುವು ಸಿಕ್ಕದ್ದು ‘ಟೈಟಾನಿಕ್’ ಅನ್ನೋ ಮಾಯಾವಿ ಸಿನಿಮಾ ತೆರೆಗೆ ಬರುವ ಸ್ವಲ್ಪವೇ ಮೊದಲು. ಇಂಥದ್ದೊಂದು ಕ್ರಾಂತಿ ಮಾಡಿದ್ದು ತರೀಕೆರೆಯ ಎಸ್‌ಜೆಎಂ ಕಾಲೇಜಿನ ಸ್ಟೂಡೆಂಟ್ಸು.
ಅವತ್ತೊಂದಿನ ಬೆಳಗ್ಗೇನೇ ಶಾಲೆಯಲ್ಲಿ ಗೌಜಿ. ನಮ್ಮ ಮೇಸ್ಟ್ರುಗಳೆಲ್ಲ ಸೇರಿ, ಎರಡು ಕೊಠಡಿಗಳನ್ನು ಕಾಲೇಜು ಹುಡುಗ-ಹುಡುಗೀರಿಗೆ ಬಿಟ್ಟುಕೊಟ್ರು. ನಮ್ಮೆಲ್ರನ್ನೂ ಸೇರಿಸಿ, “ಇವ್ರೆಲ್ಲ ಎನ್ನೆಸ್ಸೆಸ್ ಕ್ಯಾಂಪಿಗೆ ಅಂತ ಬಂದಿದ್ದಾರೆ. ಹತ್ ದಿನ ಇಲ್ಲೇ ಉಳೀತಾರೆ. ಅವ್ರ ಜೊತೆ ನಾವೆಲ್ಲ ಊರನ್ನು ಕ್ಲೀನ್ ಮಾಡೋ ಕೆಲ್ಸ ಮಾಡ್ಬೇಕು ತಿಳೀತಾ?” ಅಂತ ಭಾಷಣ ಮುಗಿಸಿದವರು ನಮ್ ಪಿಇ ಟೀಚರ್ರು. ಅವ್ರ ಮಾತಲ್ಲಿನ ‘ನಾವೆಲ್ಲ’ ಅನ್ನೋದ್ರಲ್ಲಿ ಯಾರ್ಯಾರೆಲ್ಲ ಇದ್ರೋ ಗೊತ್ತಿಲ್ಲ, ಆದ್ರೆ ಅವರಂತೂ ಆ ಹತ್ತು ದಿನದಲ್ಲಿ ಒಂದು ದಿನವೂ ಮೈ ಬಗ್ಗಿಸಿದ್ದನ್ನು ನಾವ್ಯಾರೂ ಕಾಣ್ಲಿಲ್ಲ.
ನಮ್ಮದಂತೂ ಕ್ಲಾಸುಗಳಿಗೆ ಮಾಸ್ ಚಕ್ಕರ್ ಹೊಡೆಯೋ ಕಿಲಾಡಿ ಹಬ್ಬ. ಕೇಳಿದ್ರೆ, “ಸಾರ್… ಎನ್ನೆಸ್ಸೆಸ್ ಕ್ಯಾಂಪ್‌ನವ್ರ ಜೊತೆ ಹೋಗಿದ್ವಿ,” ಅನ್ನೋ ಉರು ಹೊಡೆದ ಉತ್ತರ ನಾಲಿಗೆ ತುದೀಲಿ. ಊರ ಕೆರೆ ಏರಿ, ಬಾವಿ, ಚರಂಡಿ, ರಸ್ತೆ, ಶಾಲೆಯ ಫೀಲ್ಡೆಲ್ಲ ಎಂಟೇ ದಿನದಲ್ಲಿ ಉಗಾದಿಗೆ ಹೊಸ ಬಟ್ಟೆ ತೊಟ್ಟಂತೆ ಚಂದ ಆದ್ವು. ಕೊನೆಯ ಎರಡು ದಿನ ಈಶ್ವರ ದೇಗುಲದ ಬಳಿಯ ಕಲ್ಯಾಣಿ ಕ್ಲೀನ್ ಮಾಡೋ ಕೆಲಸ. ಹಿಂದೊಮ್ಮೆ ಅದರಲ್ಲಿ ನೀರಿತ್ತು ಅನ್ನೋದನ್ನು ಸ್ವತಃ ಕಲ್ಯಾಣಿಯೇ ಮರೆತುಹೋಗುವಷ್ಟು ಹೂಳು. ಗುದ್ದಲಿ, ಪಿಕಾಸಿ, ಹಾರೆಗಳು ಢಳಗುಟ್ಟಿದ್ವು. ಒಣಗಿದ ಹೆಂಟೆ ಮಣ್ಣು, ಹಸಿ ಉದುರು ಮಣ್ಣು ಮುಗಿದ ನಂತರ ಶುರುವಾಗಿದ್ದು ಕೆಸರುಮಣ್ಣಿನ ಕಾರುಬಾರು.
ಊರ ಒಂದಷ್ಟು ಜನ, ಕ್ಯಾಂಪಿನ ಸ್ಟೂಡೆಂಟ್ಸು, ನಾವು, ನಮ್ ಮೇಸ್ಟ್ರುಗಳು… ಇಷ್ಟೂ ಮಂದಿ, ಕಲ್ಯಾಣಿಯ ತಳದಿಂದ ಮೇಲಕ್ಕೆ ಒಟ್ಟು ಹನ್ನೆರಡು ಸಾಲಿನಲ್ಲಿ ಅಲ್ಲಲ್ಲಿ ನಿಂತಿದ್ವಿ. ಬಾಂಡ್ಲಿಯಲ್ಲಿ ತುಂಬಿದ ಕೆಸರುಮಣ್ಣು, ಕೆಲವೇ ಸೆಕೆಂಡುಗಳಲ್ಲಿ ಮೇಲ್ತುದಿ ತಲುಪಿ, ಕಲ್ಯಾಣಿ ಪಕ್ಕದ ತೋಟದ ಬದಿಗೆ ಬೀಳ್ತಿತ್ತು. ಇನ್ನೇನು ಕಲ್ಯಾಣಿಯ ತಳ ಕಾಣಿಸ್ತು ಅನ್ನುವಾಗ, ಕೆಳಗಿದ್ದವರಿಂದ, “ನೀರೂ…ನೀರ್ ಬಂತು…” ಅನ್ನೋ ಹರ್ಷೋದ್ಗಾರ. ಸುಸ್ತಾಗಿದ್ರೂನೂ ಎಲ್ರ ಕಣ್ಣೂ ಹೊಳೆದ್ವು. ಖುಷಿ ಉಕ್ಕತೊಡಗಿತು. ಸೊಂಟಕ್ಕೆ ಕೆಂಪು ದುಪಟ್ಟಾ ಕಟ್ಟಿಕೊಂಡಿದ್ದ ಆ ತುಂಟ ಹುಡುಗಿ, ಹತ್ತಡಿ ದೂರದಲ್ಲಿ ನಿಂತಿದ್ದ ತನ್ನ ಸಹಪಾಠಿ ಮೇಲೆ ಪಾಯಸದಂಥ ಕೆಸರು ಎರಚಿದ್ದು ಆವಾಗ್ಲೇ. ಕತೆಗಳಾಚೆಗಿನ ನಿಜದಲ್ಲಿ ನಾ ಕಂಡ ಮೊಟ್ಟಮೊದಲ ರೊಮ್ಯಾಂಟಿಕ್ ದೃಶ್ಯವದು.
ಚಿಕ್ಕಮಗಳೂರು ರಸ್ತೆಗೆ ತಲುಪಿಸ್ತಿದ್ದ ಮೂರು ಕಿಲೋಮೀಟರಿನ ತುಂಡು ದಾರಿ ಮುಂತಾದ ಅವಕಾಶಗಳಲ್ಲಿ ಕದ್ದುಮುಚ್ಚೀನೇ ನಡೆಯುತ್ತಿದ್ದ ನಮ್ಮೂರಿನಲ್ಲಿ, ಅದಕ್ಕೊಂದು ಪ್ರದರ್ಶಕ ತಿರುವು ಸಿಕ್ಕದ್ದು ‘ಟೈಟಾನಿಕ್’ ಅನ್ನೋ ಮಾಯಾವಿ ಸಿನಿಮಾ ತೆರೆಗೆ ಬರುವ ಸ್ವಲ್ಪವೇ ಮೊದಲು.
ಕ್ಯಾಂಪಿನ ಹತ್ತೂ ದಿನ ಸಂಜೆಯಿಂದ ತಡರಾತ್ರಿವರೆಗೆ ತರಹೇವಾರಿ ಕಾರ್ಯಕ್ರಮ. ಒಣ ಭಾಷಣ ತೆಗೆದೊಗೆದು ಬಾಕಿ ಎಲ್ಲಕ್ಕೂ ನಮ್ಮ ಹಾಜರಿ. ಹಾಗೆ, ಆ ಕಾರ್ಯಕ್ರಮಗಳಿಗೆ ರಾತ್ರಿ ಹೊತ್ತಿನಲ್ಲಿ ಅಡ್ಡಾಡುವಾಗ, ನಮ್ಮೂರಿನ ಮಂಕುಬಡಿದ ಬೀದಿದೀಪಗಳ ನಡುವಿನ ಅಸ್ಪಷ್ಟ ಬೆಳಕಿನ ದಾರಿಗಳಲ್ಲಿ ಒಂದಷ್ಟು ಜೋಡಿಗಳು ಪರಸ್ಪರ ಹೆಗಲು ಬಳಸಿ ನಡೀತಿದ್ದ ದೃಶ್ಯಗಳು ಸಿನಿಮಾದ್ದು ಮಾತ್ರವೇನೋ ಎನ್ನುವಷ್ಟು ರೊಮ್ಯಾಂಟಿಕ್ಕಾಗಿಯೂ ರೋಮಾಂಚಕವಾಗಿಯೂ ಕಂಡು ದಂಗುಬಡಿಸಿದ್ದು ಹೌದು. ಈ ಸಂಗತಿ ಕೂಡ ಅದ್ಹೇಗೋ ಊರ ಹರಟೆಮಲ್ಲರ ಬಾಯಿಗೆ ಸಿಕ್ಕಿ ಪುರಾಣವಾಗಿತ್ತು.
ಅಂತೂ ಸತತ ಹತ್ತು ದಿನ ಊರ ಕಸ ಹೊಡೆದು ಚಂದ ಮಾಡಿ, ಅದೇ ಊರವರಿಂದ ಶಹಬ್ಬಾಷ್‌ಗಿರಿ ಜೊತೆ ಹಲವು ಪುಕಾರುಗಳ ಉಡುಗೊರೆ ಪಡೆದ ಸ್ಟೂಡೆಂಟ್ಸು ಜಾಗ ಖಾಲಿ ಮಾಡಿದರು. ನಮಗೆಲ್ಲ ಬದುಕೇ ಖಾಲಿ-ಖಾಲಿ ಅನ್ನಿಸಿಬಿಟ್ಟಿತು. ಕ್ಲಾಸುಗಳೆಲ್ಲ ಇದ್ದಕ್ಕಿದ್ದಂತೆ ತಲೆ ಚಕ್ಕರ್ ತರಿಸುವ ಮಟ್ಟಕ್ಕೆ ಜಾಳಾದವು. ಇನ್ನೊಂದೆಡೆ, ಊರ ಕಸದ ಜೊತೆಗೆ ಜನರು ಕೂಡ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿದ್ದರು. ಕತೆ ಹಿಂಗಿರುವಾಗಲೇ, ‘ಟೈಟಾನಿಕ್’ ಅನ್ನೋ ಮೋಹಕ ಸುಂಟರಗಾಳಿ ತರೀಕೆರೆಯ ಟಾಕೀಸನ್ನು ಅಪ್ಪಳಿಸಿತ್ತು.
ಹದಿಹರೆಯದ ಪ್ರೀತಿ-ಪ್ರೇಮದ ಬಗೆಗೆ ನಾನಾ ಬಗೆಯ ಪೂರ್ವಗ್ರಹ, ಪುಕಾರುಗಳ ಇಡುಗಂಟು ಹೊದ್ದುಕೊಂಡಿದ್ದ ನಮ್ಮೂರಿನ ಮಂದಿಗೆ ಮೊಗೆಮೊಗೆದು ಪ್ರೀತಿಯ ಪಾಯಸ ಉಣಬಡಿಸಿದ್ದು ವಿನ್‌ಸ್ಲೆಟ್ – ಡಿಕ್ಯಾಪ್ರಿಯೋ ಜೋಡಿ. ಅದ್ಯಾವ ಮಹಾನುಭಾವರು, ಅದ್ಯಾವ ಗಳಿಗೆಯಲ್ಲಿ ನಮ್ಮೂರಿನ ಮಂದಿಯ ತಲೆಯೊಳಗೆ ‘ಟೈಟಾನಿಕ್’ ಹುಳು ಬಿಟ್ಟಿದ್ದರೋ ಕಾಣೆ. “ಹಡಗು ಮುಳುಗೋ ಸಿನ್ಮಾ ನೋಡೋಕೆ ಹೋಗ್ತಿದ್ದೀವಿ,” ಅಂತ ಹಲ್ಕಿರಿಯುತ್ತ, ಕೂಲಿಯನ್ನೂ ಬಿಟ್ಟು ಬಸ್ಸು ಹತ್ತಿದ್ದ ನಮ್ಮೂರ ಮಂದಿಯ ಹುರುಪು ನೆನೆದರೆ ಹೆಮ್ಮೆ, ಪ್ರೀತಿ. ಆ ಸಿನಿಮಾ ತರೀಕೆರೆಯ ಟಾಕೀಸಿನಲ್ಲಿ ಇದ್ದ ಅಷ್ಟೂ ದಿನ ಊರಿನ ಒಂದಲ್ಲ ಒಂದು ತಲೆ ಮಾರ್ನಿಂಗ್ ಶೋ ಕಂಡದ್ದಿದೆ. ನನಗೆ ಬುದ್ಧಿ ಬಂದ ನಂತರದಲ್ಲಿ, ಹೀಗೆ ಊರಿಗೆ ಊರೇ ಪಟ್ಟಣಕ್ಕೆ ಹೋಗಿ ನೋಡಿಬಂದ ಸಿನಿಮಾ ಬೆರಳೆಣಿಕೆಯಷ್ಟು. ‘ಆಕಸ್ಮಿಕ,’ ‘ಒಡಹುಟ್ಟಿದವರು’ ಆದ್ಮೇಲೆ ಅಂಥದ್ದೊಂದು ಜೋಶ್ ಹುಟ್ಟುಹಾಕಿದ್ದು ‘ಟೈಟಾನಿಕ್.’ ಆಮೇಲೆ, ವಿಷ್ಣುವರ್ಧನ್ ಅಭಿನಯದ ‘ಯಜಮಾನ’ಕ್ಕೂ ಹೀಗೆಯೇ ಅಭಿಮಾನ ಹರಿದಿತ್ತು. ಆದರೆ, ಭಾಷೆಯ ಗಂಧವೂ ಗೊತ್ತಿಲ್ಲದ ಅಪ್ಪಟ ಪ್ರೇಮಕತೆಯೊಂದನ್ನು ನಮ್ಮೂರಿನ ಮಂದಿ ಮುತ್ತಿಕೊಂಡ ಪರಿ ಬೆರಗಿಗೆ ಸರಿಸಮ.
‘ಟೈಟಾನಿಕ್’ ತೆರೆಕಂಡ ವರ್ಷ ನಮ್ಮೂರಿನಲ್ಲಿ ಎರಡು ದೊಡ್ಡ ಪುಕಾರು ಚಾಲ್ತಿಯಲ್ಲಿದ್ದವು. ಒಂದು, ಎನ್ನೆಸ್ಸೆಸ್ ಕ್ಯಾಂಪ್ ಮಾಡಿದ ಎಸ್‌ಜೆಎಂ ಕಾಲೇಜಿನ ಹುಡುಗೀರು ಜೋರು. ಎರಡನೆಯದು, ಕುವೆಂಪು ಯುನಿವರ್ಸಿಟಿ ಹುಡುಗೀರು, ಹುಡುಗರನ್ನು ಗೋಳು ಹುಯ್ದುಕೊಳ್ಳೋದ್ರಲ್ಲಿ ಎತ್ತಿದ ಕೈ. ಅದ್ಯಾವ ಮೋಟುತಲೆಗಳು ಇಂಥ ಮೋಹಕ ಪುಕಾರುಗಳನ್ನು ತೇಲಿಬಿಟ್ಟಿದ್ದರೋ ಕಾಣೆ. ಆದರೆ, ಆ ವರ್ಷ ಈ ಪಟ್ಟಿಗೆ ಸೇರಿದ ‘ಟೈಟಾನಿಕ್’ ಕುರಿತ ಪುಕಾರು ಮಾತ್ರ, ನಮ್ಮೂರಿನ ಒಣ ಧಿಮಾಕಿನ ಮಂದಿ ಪೇಟೆಗೆ ಹೋದಾಗಲೆಲ್ಲ ಪ್ರೇಮದ ಮುಲಾಮು ಹಚ್ಚಿ, ಹಣೆಗೊಂದು ನೆಮ್ಮದಿಯ ಪಟ್ಟಿ ಬಿಗಿದು, ಎದೆಯಲ್ಲಿ ಹೊಸಬೆಳಕು ತುಂಬಿ ವಾಪಸು ಬಸ್ಸು ಹತ್ತಿಸಿತ್ತು.
ಹದಿಹರೆಯದ ಪ್ರೇಮದ ಉತ್ಕಟತೆ ಕಾಣಿಸುವ ಮೇರುಕಾವ್ಯ ‘ಟೈಟಾನಿಕ್’ ಕುರಿತು, ‘ಹಡಗು ಮುಳುಗುವ ಸಿನಿಮಾ’ ಅಂತಷ್ಟೇ ಪುಕಾರು ಹಬ್ಬಿಸಿದ ಆ ಮಹಾನುಭಾವರು ಸಿಕ್ಕರೆ, ನಾನಂತೂ ಉದ್ದಂಡ ನಮಸ್ಕಾರ ಹಾಕೋಕೆ ಕಾದಿರುವೆ.