Advertisement
ಸ್ನೇಹ-ಸಂಬಂಧಗಳ ಮೊಕದ್ದಮೆಗಳಲ್ಲಿ ಸಾಕ್ಷಿ ಕೊಡಬೇಕಾದವರು ನಿರಪರಾಧಿಗಳೇ!: ವಿನಾಯಕ ಅರಳಸುರಳಿ ಅಂಕಣ

ಸ್ನೇಹ-ಸಂಬಂಧಗಳ ಮೊಕದ್ದಮೆಗಳಲ್ಲಿ ಸಾಕ್ಷಿ ಕೊಡಬೇಕಾದವರು ನಿರಪರಾಧಿಗಳೇ!: ವಿನಾಯಕ ಅರಳಸುರಳಿ ಅಂಕಣ

ನಿಜವಾದ ಸಂಗತಿಯೇನೆಂದರೆ ಎಷ್ಟೋ ಬಾರಿ ಇಂಥಾ ಅಪವಾದ, ಅಪನಂಬಿಕೆಗಳು ಆ ಕ್ಷಣಕ್ಕೆ ಹುಟ್ಟಿದವುಗಳಾಗಿರುವುದೇ ಇಲ್ಲ. ಒಬ್ಬ ವ್ಯಕ್ತಿಯ ಸ್ನೇಹ, ಸಾಂಗತ್ಯದಲ್ಲಿರುವಾಗಲೇ ಮನುಷ್ಯ ಇಂಥಾದ್ದೊಂದು ಅಗಲಿಕೆಗೆ ತಯಾರಿ ಮಾಡಿಕೊಳ್ಳುತ್ತಿರುತ್ತಾನೆ. ತನಗೆ ಇಷ್ಟವಾಗದ ಆತನ ವ್ಯಕ್ತಿತ್ವಗಳನ್ನು ಹೆಕ್ಕಿಟ್ಟುಕೊಳ್ಳುತ್ತಿರುತ್ತಾನೆ! ಇಂಥಾದ್ದೊಂದು ಸಮಯ ಬಂದಾಗ ಥಟ್ಟನೆ ಅವನ್ನೆಲ್ಲ ಆಚೆ ತೆಗೆದು ‘ಅಕಾರ್ಡಿಂಗ್ ಟೂ ಆ್ಯಕ್ಟ್ ತ್ರೀ ನಾಟ್ ಟೂ’ ಎಂದು ಅವನ್ನು ಹಾಜರುಪಡಿಸಿಯೇ ಬಿಡುತ್ತಾನೆ. ಎಲ್ಲೋ ತಮಾಷೆಗೆ ಆಡಿದ ಮಾತಿನ ಪಳೆಯುಳಿಕೆಯನ್ನು ಎದುರಿಟ್ಟು ‘ಅವತ್ತು ಹೀಗಂದಿದ್ದೆ ನೆನಪಿದೆಯಾ?’ ಎಂದು ಇಲ್ಲದ ಅರ್ಥ ಕಲ್ಪಿಸಿ ಬಿಡುತ್ತಾನೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

ಬಹಳ ಹಿಂದೆಲ್ಲೋ ಓದಿದ ನೆನಪು. ಯಾವುದೇ ಸ್ನೇಹ ಅಥವಾ ಸಂಬಂಧದಲ್ಲಿ ‘ನೀನು ನನಗೆ ಇಷ್ಟು ಮುಖ್ಯ’ ಎಂದು ಹಾಗೂ ನಾವು ಏನೂ ಮಾಡದೆ ನಮ್ಮವರಿಂದಲೇ ಬಂದ ಅಪವಾದವೊಂದರಲ್ಲಿ ‘ನಾನು ಅಮಾಯಕ’ ಎಂದು ಸಾಬೀತು ಪಡಿಸುವುದು – ಈ ಎರಡೂ ಅತ್ಯಂತ ಕಷ್ಟದ, ಮುಜುಗರದ, ದುಃಖದ ಹಾಗೂ ದುರಂತಕಾರಿಯಾದ ಸಂಗತಿಯಂತೆ.

ಅಂಥಾದ್ದೊಂದು ಘಟನೆ ಧುತ್ತೆಂದು ಎದುರಾಗುತ್ತದೆ. ಎಂದಿನಂತೆ ಚಾಲ್ತಿಯಲ್ಲಿದ್ದ ಒಡನಾಟವೊಂದು ಇದ್ದಕ್ಕಿದ್ದಂತೆಯೇ ಮಾತನಾಡುವುದನ್ನು ಕಡಿಮೆ ಮಾಡುತ್ತದೆ. ಏನೋ ತೊಂದರೆಯಾಗಿರಬೇಕು ಎಂದುಕೊಳ್ಳುತ್ತೇವೆ. ದಿನ, ಎರಡು ದಿನಕ್ಕೆ ಎಲ್ಲವೂ ಸರಿಯಾಗುತ್ತದೆಂದು ಕಾಯುತ್ತೇವೆ. ಆದರೆ ಏನೂ ಸರಿಯಾಗುವುದಿಲ್ಲ. ಬಾಯ್ಬಿಟ್ಟು ಕೇಳಿದರೂ ಅರ್ಧರ್ಧ ಉತ್ತರಗಳು. ಮಾಡಿದವರಿಗೆ ಗೊತ್ತಿಲ್ಲವೇ ಮಾಡಿದ ತಪ್ಪು? ಎಂಬ ಕೊಂಕು. ಕೊನೆಗೊಮ್ಮೆ ಎಲ್ಲಿಂದಲೋ ಗೊತ್ತಾಗುತ್ತದೆ: ಅವರಿಗೆ ಏನೋ ತೊಂದರೆಯಾಗಿದೆ. ಯಾರೊಂದಿಗೋ ಜಗಳವೋ, ಇನ್ಯಾರಿಂದ ಅವಮಾನವೋ ದೊರಕಿದೆ ಹಾಗೂ ಅವರು ಅದಕ್ಕೆಲ್ಲ ನೀವು ಕಾರಣ ಎಂದುಕೊಂಡಿದ್ದಾರೆ!

ಅಚ್ಚರಿಯಾಗುತ್ತದೆ. ಹೀಗೊಂದು ಹಗ್ಗ ಜಗ್ಗಾಟ ನಡೆದಿದೆಯೆನ್ನುವ ಸಂಗತಿಯೇ ಗೊತ್ತಿಲ್ಲದ ಮೊಕದ್ದಮೆಯಲ್ಲೂ ಅವರು ನಿಮ್ಮನ್ನು ಅಪರಾಧಿಯೆಂದು ತೀರ್ಮಾನಿಸಿ ಕಟಕಟೆಯಲ್ಲಿ ನಿಲ್ಲಿಸಿ ಬಿಟ್ಟಿದ್ದಾರೆ. ಯಾವುದೇ ವಿಚಾರಣೆಯಿಲ್ಲದೆಯೇ ತೀರ್ಪು ಘೋಷಿಸಿಬಿಟ್ಟಿದ್ದಾರೆ! ಇಷ್ಟು ದಿನ ಎಷ್ಟೆಲ್ಲ ಆತ್ಮೀಯತೆಯಲ್ಲಿ ಒಡನಾಡುತ್ತಿದ್ದ ಸ್ನೇಹ ಇಷ್ಟೊಂದು ತೆಳುವಾದ ಎಳೆಯ ಮೂಲಕ ಬೆಸೆದಿತ್ತೇ ಎಂದು ಅಚ್ಚರಿಯೂ, ಬೇಸರವೂ ಆಗುತ್ತದೆ. ಸಣ್ಣ ಕಂಪನಕ್ಕೆ ಕುಸಿಯಬಹುದಾದ ಪಾಯದ ಮೇಲೆ ಅಷ್ಟು ಭವ್ಯವಾದ ಸ್ನೇಹದ ಮಹಲು ಕಟ್ಟಿಕೊಂಡಿದ್ದೆವೇ ಎಂದು ಖೇದವಾಗುತ್ತದೆ.

ಎಲ್ಲೋ ಓದಿದ ಕಥೆಯೊಂದು ನೆನಪಿಗೆ ಬರುತ್ತಿದೆ. ಅದೊಂದು ಹಳ್ಳಿ. ಅಲ್ಲೊಬ್ಬ ಹುಡುಗಿ ಇನ್ನೊಬ್ಬ ಹುಡುಗನನ್ನು ಪ್ರೀತಿಸಿಕೊಂಡಿರುತ್ತಾಳೆ. ಆ ಹಳ್ಳಿಯಾಚೆ ಒಂದು ಬೆಟ್ಟವಿರುತ್ತದೆ. ಅಲ್ಲೊಬ್ಬ ಸನ್ಯಾಸಿ ತನ್ನ ಪಾಡಿಗೆ ಪೂಜೆ, ತಪ್ಪಸ್ಸು ಮಾಡಿಕೊಂಡಿರುತ್ತಾನೆ. ಅವನೆಂದಿಗೂ ಇಳಿದು ಹಳ್ಳಿಗೆ ಬಂದಿರುವುದಿಲ್ಲ. ಹೀಗಿರುವಾಗೊಂದು ದಿನ ಆ ಹುಡುಗಿ ಮದುವೆಯಾಗದೆಯೇ ಗರ್ಭವತಿಯಾಗುತ್ತಾಳೆ. ಆ ವಿಷಯ ಆಕೆಯ ಮನೆಯವರಿಗೆ ತಿಳಿಯುತ್ತದೆ. ಊರವರೆಲ್ಲ ಪಂಚಾಯ್ತಿ ಸೇರಿ ಇದಕ್ಕೆ ಯಾರು ಕಾರಣ? ಎಂದು ಕೇಳಿದಾಗ ಪ್ರಿಯಕರನನ್ನು ಹಿಡಿದು ಕೊಡುವ ಮನಸ್ಸಿಲ್ಲದ ಆಕೆ ಆ ಕ್ಷಣಕ್ಕೆ ಏನು ಹೇಳುವುದೋ ತೋಚದೇ ‘ಗುಡ್ಡದ ಮೇಲಿನ ಸನ್ಯಾಸಿಯೇ ಇದಕ್ಕೆ ಕಾರಣ’ ಎನ್ನುತ್ತಾಳೆ. ಊರವರೆಲ್ಲ ಗುಂಪಾಗಿ ಬೆಟ್ಟ ಹತ್ತುತ್ತಾರೆ. ಸನ್ಯಾಸಿಯ ಕುಠೀರಕ್ಕೆ ಹೋಗಿ ಅವನಿಗೆ ದಬಾಯಿಸುತ್ತಾರೆ. ನೀನು ಹೀಗೆಲ್ಲ ಮಾಡಿದ್ದೀ ಎಂದು ಬೈದಾಡುತ್ತಾರೆ. ಕತ್ತಿನ ಪಟ್ಟಿ ಹಿಡಿಯುತ್ತಾರೆ. ಆದರೆ ಏನೊಂದೂ ಮರುವಾದ ಹೂಡದ ಸನ್ಯಾಸಿ “ಹೌದೇ?” ಎಂದು ಕೇಳುತ್ತಾನೆ. ಜನ ಅಲ್ಲಿಗೇ ಬಿಡುವುದಿಲ್ಲ. ಮದುವೆಯಾಗದೇ ಹುಟ್ಟಿದ ಮಗುವನ್ನು ತಂದು ಕುಠೀರದಲ್ಲಿ ಬಿಟ್ಟು ಹೋಗುತ್ತಾರೆ. ಸನ್ಯಾಸಿ ಏನೊಂದೂ ಹೇಳದೆಯೇ ಅದರ ಪಾಲನೆ ಮಾಡುತ್ತಾನೆ.

ಕೆಲ ಸಮಯದ ಬಳಿಕ ಆ ಹುಡುಗಿಗೆ ಪಶ್ಚಾತ್ತಾಪ ಕಾಡುತ್ತದೆ. ಈ ಸುಳ್ಳಿನ ಸಾಮ್ರಾಜ್ಯ ಸಾಕು ಎನಿಸುತ್ತದೆ. ತನ್ನ ಮಗು ಹಾಗೂ ಅದರ ತಂದೆಯನ್ನೊಳಗೊಂಡ ಸಂಸಾರ ಬೇಕೆನಿಸುತ್ತದೆ. ಕೊನೆಗೂ ಆಕೆ ಧೈರ್ಯ ಮಾಡಿ ಅಮ್ಮನಿಗೆ ಸತ್ಯ ಹೇಳುತ್ತಾಳೆ. ಅದು ಅಪ್ಪನಿಗೆ ದಾಟಿ, ಊರಿನ ಹಿರಿಯರನ್ನು ತಲುಪಿ, ಅವರೆಲ್ಲರೂ ಆಕೆಯನ್ನು ಜರಿಯುತ್ತಾರೆ. ಬಾಯ್ಬಾಯಿ ಬಡಿದುಕೊಳ್ಳುತ್ತಾ ಗುಡ್ಡ ಹತ್ತಿ ಸನ್ಯಾಸಿಯ ಕುಠೀರದೆದುರು ನಡು ಬಗ್ಗಿಸಿ ನಿಲ್ಲುತ್ತಾರೆ. ಯಾವ ಕೈಯಲ್ಲಿ ಆತನ ಕತ್ತಿನ ಪಟ್ಟಿ ಹಿಡಿದಿದ್ದರೋ ಅದೇ ಕೈಯನ್ನು ಮುಗಿದು “ನಮ್ಮಿಂದು ತಪ್ಪಾಯ್ತು ಸ್ವಾಮಿ. ನಮ್ಮನ್ನು ಕ್ಷಮಿಸಿ. ಈ ಮಗು ನಿಮ್ಮದಲ್ಲ. ಅದನ್ನು ಅದರ ನಿಜವಾದ ತಾಯಿ-ತಂದೆಗೆ ಒಪ್ಪಿಸುತ್ತೇವೆ” ಎನ್ನುತ್ತಾರೆ. ಅವರ ಮಾತೆಲ್ಲವ ಕೇಳಿಸಿಕೊಂಡ ಸನ್ಯಾಸಿ “ಹೌದೇ?” ಎನ್ನುತ್ತಾನೆ. ಮಗುವನ್ನು ಅವರಿಗೆ ಕೊಟ್ಟು ಕಳಿಸಿ, ಹಿಂದೆ ಅಪವಾದ ಬಂದ ದಿನ ಇದ್ದಷ್ಟೇ ನಿರುಮ್ಮಳನಾಗಿ ತನ್ನ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ.

ಇಲ್ಲಿ ಆತ ಸನ್ಯಾಸಿ. ಎಲ್ಲವನ್ನೂ ತೊರೆದವನು. ಮನುಷ್ಯ ಲೋಕದ ಪ್ರಸಿದ್ಧಿ, ಅಪವಾದಗಳ ಕ್ಷಣಿಕತೆಯನ್ನು ಅರ್ಥ ಮಾಡಿಕೊಂಡವನು. ಬೆನ್ನಿಗೆ ಇರಿದ ಬಾಣವನ್ನೂ, ತಲೆಯ ಮೇಲೆ ಹಾಕಿದ ಹೂವನ್ನೂ ಸಮನಾಗಿ ಸ್ವೀಕರಿಸುವವನು. ಆದರೆ ನಾವು ನರ ಮನುಷ್ಯರು. ನಮ್ಮದಲ್ಲದ ತಪ್ಪಿಗೆ ಕಟಕಟೆ ಏರಿದಾಗ ನೂರೊಂದು ವಾದ ಹೂಡುತ್ತೇವೆ. ಸಾಕ್ಷಿಗಳಿಗಾಗಿ ತಡಕಾಡುತ್ತೇವೆ. ನನ್ನನ್ನು ನಂಬೀ ಎಂದು ಹುಯಿಲಿಡುತ್ತೇವೆ. ನಾವು ವಾದ ಮಾಡಿದಷ್ಟೂ ಎದುರಾಳಿಯ ಅಪನಂಬಿಕೆ ಗಟ್ಟಿಯಾಗುತ್ತಲೇ ಹೋಗುತ್ತದೆ. ಅವನ ದನಿಯಲ್ಲಿನ‌ ಇರಿತ ಹರಿತವಾಗುತ್ತಾ ಹೋಗುತ್ತದೆ. ನಾವು ನೊಂದಷ್ಟೂ ಆತ ಏನನ್ನೋ ಸಾಧಿಸಿದಂತೆ ಒಳಗೊಳಗೇ ಖುಷಿ ಪಡುತ್ತಾ,‌ ನಾವು ಕುಸಿದಷ್ಟೂ ತಾನು ಎತ್ತರವಾಗುತ್ತಾ ಹೋಗುತ್ತಾನೆ. ತಮಾಷೆಯ ಹಾಗೂ ದುರಂತದ ಸಂಗತಿಯೇನೆಂದರೆ ಇಂಥಾ ಸ್ನೇಹ-ಸಂಬಂಧಗಳ ಮೊಕದ್ದಮೆಗಳಲ್ಲಿ ಮಂದಿ ಅಪರಾಧಿಗಳಿಗಿಂತ ಹೆಚ್ಚಾಗಿ ನಿರಪರಾಧಿಗಳ ಬಳಿಯೇ ಸಾಕ್ಷಿ ಕೇಳುತ್ತಾರೆ! ಸಾಕ್ಷಿ ಒದಗಿಸಿದಷ್ಟೂ ನಾವು ಅಪರಾಧಿಗಳಾಗುತ್ತಲೇ ಹೋಗುತ್ತೇವೆ.

ನಿಜವಾದ ಸಂಗತಿಯೇನೆಂದರೆ ಎಷ್ಟೋ ಬಾರಿ ಇಂಥಾ ಅಪವಾದ, ಅಪನಂಬಿಕೆಗಳು ಆ ಕ್ಷಣಕ್ಕೆ ಹುಟ್ಟಿದವುಗಳಾಗಿರುವುದೇ ಇಲ್ಲ. ಒಬ್ಬ ವ್ಯಕ್ತಿಯ ಸ್ನೇಹ, ಸಾಂಗತ್ಯದಲ್ಲಿರುವಾಗಲೇ ಮನುಷ್ಯ ಇಂಥಾದ್ದೊಂದು ಅಗಲಿಕೆಗೆ ತಯಾರಿ ಮಾಡಿಕೊಳ್ಳುತ್ತಿರುತ್ತಾನೆ. ತನಗೆ ಇಷ್ಟವಾಗದ ಆತನ ವ್ಯಕ್ತಿತ್ವಗಳನ್ನು ಹೆಕ್ಕಿಟ್ಟುಕೊಳ್ಳುತ್ತಿರುತ್ತಾನೆ! ಇಂಥಾದ್ದೊಂದು ಸಮಯ ಬಂದಾಗ ಥಟ್ಟನೆ ಅವನ್ನೆಲ್ಲ ಆಚೆ ತೆಗೆದು ‘ಅಕಾರ್ಡಿಂಗ್ ಟೂ ಆ್ಯಕ್ಟ್ ತ್ರೀ ನಾಟ್ ಟೂ’ ಎಂದು ಅವನ್ನು ಹಾಜರುಪಡಿಸಿಯೇ ಬಿಡುತ್ತಾನೆ. ಎಲ್ಲೋ ತಮಾಷೆಗೆ ಆಡಿದ ಮಾತಿನ ಪಳೆಯುಳಿಕೆಯನ್ನು ಎದುರಿಟ್ಟು ‘ಅವತ್ತು ಹೀಗಂದಿದ್ದೆ ನೆನಪಿದೆಯಾ?’ ಎಂದು ಇಲ್ಲದ ಅರ್ಥ ಕಲ್ಪಿಸಿ ಬಿಡುತ್ತಾನೆ. ನಗುನಗುತ್ತಲೇ ಮಸೆಯುವ ಈ ಪರಿಯ ಚೂರಿಗಳ ಬಗ್ಗೆ ನನಗೆ ಅಚ್ಚರಿಯಿದೆ. ಅವರ ಮಾತು, ಆತ್ಮೀಯತೆ, ಒಂದೇ ತಟ್ಟೆಯಿಂದ ಎತ್ತಿ ತಿಂದ ಊಟ, ಒಂದೇ ತುಣುಕಿನಿಂದ ಮುರಿದುಕೊಂಡ ಸಿಹಿ.. ಇವನ್ನೆಲ್ಲ ನಾವು ಆತ್ಮೀಯತೆಯೆಂದು ನಂಬಿರುವ ಹೊತ್ತಿಗೇ ಅಲ್ಲೊಂದು ಅಪನಂಬಿಕೆ ತಣ್ಣಗೆ ಹರಿಯುತ್ತಿತ್ತೇ? ಎಷ್ಟೆಲ್ಲ ಆತ್ಮೀಯತೆಯಿರುವ ಸ್ನೇಹಗಳಿಗೂ ‘ಬೆಸ್ಟ್ ಬಿಫೋರ್ ಟ್ವೆಲ್ವ್ ಮಂತ್ಸ್’ ಎಂಬೊಂದು ಎಕ್ಸ್‌ಪೈರೀ ಡೇಟಿನ ಚೀಟಿ ಅಂಟಿಸಿ ಕಳುಹಿಸುವವರು ಯಾರು?

ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೆಂದರೆ ಯಾವ ಸ್ನೇಹ, ಸಂಬಂಧವನ್ನೇ ಆಗಲಿ ವಾದ, ಸಾಕ್ಷಿ, ಮೊಕದ್ದಮೆಗಳ ಮೂಲಕ ಉಳಿಸಿಕೊಳ್ಳಲಾಗುವುದಿಲ್ಲ. ಯಾವ ಸಾಕ್ಷಿಯೂ ಇಲ್ಲದೆಯೇ ಅಥವಾ ಸಾಂದರ್ಭಿಕ ಸಾಕ್ಷಿಗಳ ಆಧಾರದ ಮೇಲೆ ಅನುಮಾನವನ್ನು ಒಳಗೆ ಬಿಟ್ಟುಕೊಂಡು ನಮ್ಮನ್ನು ದೂರ ನಿಲ್ಲಿಸುವ ಸಂಬಂಧ ‘ನೀನೆಂದರೆ ನನಗೆ ಇಷ್ಟು ಆತ್ಮೀಯ’ ಎಂಬ ಯಾವ ಸಮಜಾಯಿಷಿಗೂ ಯೋಗ್ಯವಲ್ಲ. ಎರಡು ಮಾತು, ಒಂದು ವಿವರಣೆ, ಅದನ್ನೂ ಮೀರಿ ಇನ್ನೊಂದು ಬಿನ್ನಹ… ಅಲ್ಲಿಗೆ ಮುಗಿಯಬೇಕು ನಮ್ಮ ವಾದ. ಸರಿ ಹೋಗುವ, ನಮ್ಮನ್ನು ಕಳೆದುಕೊಳ್ಳಲು ಇಚ್ಛಿಸದ ಯಾವುದೇ ಅನುಬಂಧವನ್ನು ಉಳಿಸಿಕೊಳ್ಳಲು ಇಷ್ಟು ಸಾಕು. ಆದರಾಚೆಗೂ ಆತ ತನ್ನ ಅನುಮಾನ, ಅಪವಾದಗಳಲ್ಲೇ ಉಳಿದನೋ? ಊರಾಚೆಯ ಗುಡ್ಡದ ಒಂಟಿ ಸನ್ಯಾಸಿಯಂತೆ ಹೌದೇ? ಎಂದೊಂದು ಮುಗುಳ್ನಗೆ ಬೀರಿ ನಡೆದು ಬಿಡಬೇಕು ಮುಂದೆ.

ಹಾಗಾದರೆ ಎಲ್ಲವೂ ಅಷ್ಟು ಸುಲಭಕ್ಕೆ ಹರಿದುಕೊಳ್ಳಬಲ್ಲ ನಂಟುಗಳೇ?

ಮನುಷ್ಯ ಲೋಕದ ನಂಟು, ಗಂಟುಗಳ ಸಂರಚನೆಯೇ ಅಂಥದ್ದು. ಒಂದು ಕೋಪಕ್ಕೆ, ಒಂದು ಅನುಮಾನಕ್ಕೆ-ಅವಮಾನಕ್ಕೆ ತುಂಡಾಗುವಂತಿದ್ದರೆ ಒಂದೋ ಇಲ್ಲಿ ಸಂಬಂಧಗಳೇ ಇರುತ್ತಿರಲಿಲ್ಲ. ಇಲ್ಲಾ ಅಪವಾದಗಳಿರುತ್ತಿರಲಿಲ್ಲ. ಆದರೆ ಎಂಟು ಕಾಲಿನ ಆಕ್ಟೋಪಸ್‌ನಂತೆ ನಮ್ಮೆಲ್ಲರ ಒಡನಾಟಗಳು. ಒಂದೊಂದು ಕತ್ತರಿಸಿ ಹೋಗುತ್ತ, ಮತ್ತದು ತನ್ನಷ್ಟಕ್ಕೆ ತಾನೇ ಚಿಗುರುತ್ತ, ಎಲ್ಲ ಕಡಿದ ಮೇಲೂ ಏನೋ ಒಂದು ಎಳೆ ಉಳಿದು ಹೋಗುತ್ತ, ಅದರ ಸುತ್ತಲೇ ಹೊಸ ಬೆಸುಗೆ ಬೆಳೆಯುತ್ತ.‌. ಎರಡು ಮನಸ್ಸುಗಳ ನಡುವಿನ ಸೇತುವೆಯಲ್ಲಿ ಸ್ನೇಹ-ಪ್ರೀತಿಗಳು ಹರಿಯುವಂತೆಯೇ ಕೋಪ, ಕದನ, ಪೈಪೋಟಿಗಳೂ ಹರಿಯುತ್ತಿರುತ್ತವೆ. ಎತ್ತೆತ್ತಲೋ ಎಳೆಯುವ ಎಳೆತಗಳು, ನೂರು ಕವಲಿನ ದಾರಿಗಳು, ಅನುರೂಪವಾಗಿ ಕಾಣುವ, ಆದರೆ ಇನ್ಯಾರದೋ ಪಾಲಾಗಿರುವ ಆಮಿಷಗಳು ಹಾಗೂ ಇವೆಲ್ಲದರಾಚೆಗೂ ಮರಳಿ ಒಂದೇ ಕೇಂದ್ರಕ್ಕೆ ಬೆಸೆದ ನೈತಿಕ ಬಿಗಿತಗಳು… ಸಮಾಜದ ನಾನಾ ಗುರುತ್ವಗಳ ಸೆಳೆತಕ್ಕೆ ಸಿಕ್ಕಿ ಬೀಳುತ್ತಲೇ ಮೂಲ ಕಕ್ಷೆಯಲ್ಲಿ ತಿರುಗುತ್ತವೆ ಸಂಬಂಧಗಳು. ಮೂಲ ಕೀಲಿಗಳಿಂದ ಹೊಂದದ ಬೀಗಗಳನ್ನು ತೆರೆಯುವ ಒದ್ದಾಟಗಳು, ತೆರೆಯುವ ಪ್ರಯತ್ನದಲ್ಲಿ ಒಂದಕ್ಕೊಂದು ಹೊಂದಿಕೊಂಡು ಬಿಡುವ ಅಚ್ಚರಿಗಳು, ದಶಕಗಳ ಸಹಯಾನದಾಚೆಗೂ ಬೇರೆಯೇ ಆಗಿ ಉಳಿಯುವ, ಅಳಿಯುವ ದುರಂತಗಳು… ಒಟ್ಟಾರೆ ಬದುಕೆನ್ನುವುದು ವ್ಯಕ್ತಿತ್ವಗಳ ನಡುವಿನ ಕದನ.

ಎಷ್ಟೋ ಸಲ ನಾವು ಒಂದು ಸಂಬಂಧಕ್ಕಾಗಿ, ಸ್ನೇಹಕ್ಕಾಗಿ ಏನೆಲ್ಲ ಮಾಡಿದೆವು ಹಾಗೂ ಆ ಪ್ರಯತ್ನ ಎಷ್ಟೆಲ್ಲ ಏಕ ಮುಖವಾಗಿತ್ತು ಎಂಬ ಪಟ್ಟಿಯನ್ನು ಹಾಜರು ಪಡಿಸುತ್ತೇವೆ. ಕೆಲವೊಮ್ಮೆ ಅನುಬಂಧವೊಂದನ್ನು ಉಳಿಸಿಕೊಳ್ಳಲಿಕ್ಕೆ ಏನೇನು ಮಾಡಿದೆವು ಎನ್ನುವುದಕ್ಕಿಂತ ಆ ವ್ಯಕ್ತಿ ನಮಗೆ ಬೇಕೆ ಬೇಡವೇ ಎನ್ನುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಒಮ್ಮುಖವಾದ ಒಲವನ್ನು ಹರಿಸಬೇಕಾಗುತ್ತದೆ. ಆ ಹೃದಯದ ಒಣ ನೆಲ ಪಸೆಯಾಡುವಷ್ಟು ಆತ್ಮೀಯತೆಯನ್ನು ಚೆಲ್ಲಿ ಕರಗಿದೆಯಾ ಎಂದು ಕೇಳಬೇಕಾಗುತ್ತದೆ. ಕರಗಿದರೆ ಅದರಲ್ಲಿ ನಾವೂ ಒಂದಾಗಬೇಕಾಗುತ್ತದೆ.

ನೂರು ಮಳೆಗಳಾಚೆಗೂ ನೆಲವೊಂದು ಬರಡಾಗಿಯೇ ಉಳಿದರೆ?

ಅರ್ಥ ಮಾಡಿಕೊಳ್ಳಬೇಕಾಗುತ್ತದೆ: ಅದು ಹಸಿರು ಚಿಗುರುವ ಮನವೇ ಅಲ್ಲ! ಅದು ಯಾವುದೋ ಸಾಂದರ್ಭವೊಂದು ಸೃಷ್ಟಿಸಿದ ಕ್ಷಣಿಕ ಆತ್ಮೀಯತೆಯ ಇಂಧನದಲ್ಲಿ ಇಷ್ಟು ದಿನ ಉರಿದ ಸ್ನೇಹವೇ ಹೊರತು ಎಣ್ಣೆ ಖಾಲಿಯಾದಾಗಲೂ ಉರಿಯುವ ಶಾಶ್ವತ ಹಣತೆಯಲ್ಲ. ಅದರ ಸಮಯ ಇದ್ದದ್ದೇ ಇಷ್ಟು. ಮುಗಿಯಬೇಕಿತ್ತು, ಮುಗಿದಿದೆ. ಉರಿಯುವುದೆಲ್ಲ ಉರಿದು ಕರಿ ಬತ್ತಿಯಷ್ಟೇ ಉಳಿದು ಹೋಗಿರುವ ಈ ಸಂಬಂಧಕ್ಕೆ ಎಷ್ಟು ಆತ್ಮೀಯತೆಯ ಎಣ್ಣೆ ಸುರಿದರೂ ವ್ಯರ್ಥವೇ. ಸುರಿದಷ್ಟೂ ರಾಡಿ. ಹಚ್ಚಿದಷ್ಟೂ ಕತ್ತಲು. ಹೊರಟುಬಿಡಬೇಕು. ಕೊನೆಯದೊಂದು ಮುಗುಳ್ನಗೆ ಬೀರಿ ನಡೆದುಬಿಡಬೇಕು.

ಕಾರ್ಪೋರೇಟ್ ಲೋಕದಲ್ಲಿ, ಸೋಶಿಯಲ್ ಮೀಡಿಯಾದ ಗಲ್ಲಿಗಳಲ್ಲಿ ಹಬ್ಬಿಕೊಂಡಿರುವ ಇಂದಿನ ಬದುಕಿನಲ್ಲಿ ಇಂಥಾ ಹತ್ತಾರು ಕ್ಷಣಿಕ ಸ್ನೇಹಗಳು ಅನುದಿನವೂ ಚಿಗುರಿ ಚಿಗುರಿ ಬಾಡುತ್ತಲೇ ಇರುತ್ತವೆ. ತಮ್ಮ ತಮ್ಮ ಇತಿಮಿತಿಗಳಲ್ಲಿ ಅವೆಲ್ಲವೂ ಸುಂದರವೇ. ಅವುಗಳ ಸೀಮಿತತೆಯನ್ನು ಅರ್ಥ ಮಾಡಿಕೊಂಡು, ಬೇಕಾದಾಗ ನುಣುಚಿಕೊಂಡು ಹೋಗಲು ಅನುವು ಮಾಡಿಕೊಡುವಂಥಾ ಹಗುರವಾದ ಬಿಗಿತದಲ್ಲಿ ಕೈ ಬೆಸೆದುಕೊಂಡೇ ನಡೆಯಬೇಕು ಅವುಗಳ ಜೊತೆ. ಏನನ್ನೋ ಸಾಬೀತು ಮಾಡುವ ಮಹದುದ್ದೇಶವಿಲ್ಲದ, ಈ ಕ್ಷಣದ ಏಕಾಕಿತನವನ್ನು, ಪಕ್ಕದ ಸೀಟಿನ ಖಾಲಿತನವನ್ನು ತುಂಬಲಷ್ಟೇ ಬಂದಿರುವ ಅವನ್ನು ಅವುಗಳದ್ದೇ ಆದ ಸ್ವಂತಿಕೆಗಳ ಜೊತೆಗೇ ಸ್ವೀಕರಿಸುವುದು ಹಾಗೂ ಬಿಟ್ಟುಕೊಡುವುದು ದೇಹಕ್ಕೂ, ಮನಸ್ಸಿಗೂ ಒಳ್ಳೆಯದು.

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ