ಈ ಚಿತ್ರದಲ್ಲಿ ಯಾವ ಪಾತ್ರಗಳಿಗೂ ಹೆಸರಿಲ್ಲ. ವಿಶ್ವದ ಯಾವುದೇ ಭಾಗಕ್ಕೂ ಈ ಕಥನ ಅನ್ವಯಿಸಲು ಸಾಧ್ಯ. ಇಂಥದೊಂದು ನೋವು ತುಂಬಿದ ದೇಶದಲ್ಲಿ ಯಾವ ಬಗೆಯ ಆಯ್ಕೆಯ ಸ್ವಾತಂತ್ರ್ಯವಿಲ್ಲದೆ ಹೆಣ್ಣಾಗಿ ಹುಟ್ಟಿದ್ದಷ್ಟೆ ಅವಳ ಪಾಡು. ಅದರ ವೃತ್ತಾಂತಗಳನ್ನು ಅವಳ ಸ್ವಗತದ ಮೂಲಕ ತಿಳಿಸುತ್ತಾಳೆ. ಹೆಣ್ಣಾಗಿ ಹುಟ್ಟುವುದೇ ನೋವು ತುಂಬಿಕೊಳ್ಳಲು ಎಂಬ ವಿಷಯ ಪರಿಪಾಠವಾಗಿರುವ ಅಂಶ ಆಫ್ಘಾನಿಸ್ತಾನಕ್ಕೆ ಮಾತ್ರ ಅನ್ವಯಿಸುವಂಥದಲ್ಲ. ಇದನ್ನು ಪ್ರಪಂಚದ ಉದ್ದಗಲದಲ್ಲಿ ಕಾಣಬಹುದು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಅಫ್ಘಾನಿಸ್ತಾನದ ʻದ ಪೇಷನ್ಸ್ ಸ್ಟೋನ್ʼ ಸಿನಿಮಾದ ವಿಶ್ಲೇಷಣೆ
ಅದು ಯುದ್ಧಗಳಿಂದ ಛಿದ್ರಗೊಂಡ ಆಫ್ಘಾನಿಸ್ಥಾನ. ಅಲ್ಲಿನ ನಗರದಲ್ಲೊಂದು ವಿರೂಪಗೊಂಡ ಮನೆ. ಒಳಗೆ ಕಿಟಕಿ ಒಡೆದು ಗಾಜುಗಳ ಚೂರು. ಹೊರಗೆ ದೂಳಿನ ಸುಗ್ಗಿ. ಮನೆಯೊಳಗೂ ಅದರ ಅವಾಂತರ. ಎಲ್ಲೆಂದರಲ್ಲಿ ಮೆತ್ತಿ ಗೋಡೆಯೆಲ್ಲ ಮಸುಕು. ಒಳಗೆ ಕಣ್ಣಿಗೆ ರಾಚುವ ಬಡತನ. ಸುತ್ತ ಅರೆಖಾಲಿಯಾದರೂ ಇರುವ ಮಂಕು ವಸ್ತುಗಳ ನಡುವೆ ಅವಳು. ಸುಮಾರು ಮೂವತ್ತರ ತರುಣಿ. ಇನ್ನೊಂದು ಕಡೆ ಅಲ್ಲಾಡುವ ಇಳಿಬಿದ್ದ ಹಳೆಯ ಕರ್ಟನ್ನುಗಳು. ಅಲ್ಲಿ ಒಂದು ಕಡೆ ಅಲ್ಲಾಡದೆ ಹಾಸಿಗೆ ಮೇಲೆ ಮಲಗಿದ ನಡುವಯಸ್ಸಿನ ಬಿಳಿಕೂದಲಿನ ಅವಳ ಗಂಡ.. ಕಣ್ಣುಬಿಟ್ಟುಕೊಂಡು ಮಲಗಿದ ಅವನ ಬಾಯೊಳಗೆ ನೀರುಣಿಸುವ ಸಣ್ಣ ಪ್ಲಾಸ್ಟಿಕ್ ಪೈಪು. ಕಿಟಕಿಯಲ್ಲಿ ನಿಂತು ನೋಡಿದರೆ ಬಂದೂಕಿನ ಹೊಡೆತಕ್ಕೆ ಉರುಳಿಬಿದ್ದ ಹಲವಾರು ಮನೆಯ ಗೋಡೆಯ ಚೂರುಗಳು.
ದಿಕ್ಕಿಲ್ಲದ ಅವಳಿಗೆ ಅವಳಿಗೆ ಮೂಲೆಯಲ್ಲಿ ಕುಳಿತು ಬಿಟ್ಟಗಣ್ಣಿನಿಂದ ನೋಡುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕಣ್ಣುಗಳನ್ನು ತೆರೆದರೂ ಮಾತನಾಡದೆ ಮಲಗಿದಾತನ ಬಳಿಗೆ ಬಂದು ತಾನಾಡುವ ಮಾತು ಕೇಳಿಸುತ್ತಿದೆಯೇ ಎಂದು ಮತ್ತೆ ಮತ್ತೆ ಪ್ರಯತ್ನಿಸುವ ಅವಳು. ಎಲ್ಲಕ್ಕೂ ಅವನ ಉತ್ತರ ಸೊನ್ನೆ.
ಬೇರೇನು ಮಾಡಲು ತೋಚದೆ ಗಂಡನ ಕುತ್ತಿಗೆ ಹತ್ತಿರ ಆಗ ಗಾಯವನ್ನು ಪರೀಕ್ಷಿಸುತ್ತಾಳೆ. ಅದರೊಳಗೆ ಕಾದಾಟದಲ್ಲಿ ಹೊಕ್ಕ ಗುಂಡು ಇದೆ ಎನ್ನುವುದು ಅವಳಿಗೆ ತಿಳಿದ ವಿಷಯ. ರೂಮನ್ನು ಮನೆಯನ್ನು ಆವರಿಸುವ ಮೌನ. ಬೆದರಿದ ಕಣ್ಣುಗಳ ಆಕೆ ಅಂತರಂಗದಲ್ಲಿ ಅಡಗಿದ ಒಂದೊಂದೇ ವಿಷಯಗಳನ್ನು ಸ್ವಗತದಲ್ಲಿ ತಿಳಿಸುತ್ತಾ ಹೋಗುತ್ತಾಳೆ. ಕುತ್ತಿಗೆಗೆ ಗುಂಡು ಹೊಕ್ಕು ಎದ್ದೇಳಲು ಸಾಧ್ಯವಿರದಿದ್ದರೂ ಒಬ್ಬಳನ್ನೇ ಬಿಟ್ಟು ಮನೆಯವರೆಲ್ಲ ಹೊರಟು ಹೋಗಿರುತ್ತಾರೆ. ಅನ್ಯ ಮಾರ್ಗವಿಲ್ಲದೆ ಅವನನ್ನು ಕಾಯುತ್ತ ಕೂತಿರುವ ಅವಳು ಸ್ವಗತದಲ್ಲಿ, ʻನೋವು ತಿನ್ನುವವರು ನೀವು ಅನುಭವಿಸಬೇಕಾದವರು ನಾವುʼ ಎನ್ನುತ್ತಾಳೆ. ಅವನನ್ನೇ ದಿಟ್ಟಿಸುತ್ತ, ʻಪ್ರೇಮಿಸುವುದು ಹೇಗೆಂದು ತಿಳಿಯದವರು ಯುದ್ಧ ಮಾಡುತ್ತಾರೆʼ ಎಂದು ಹೇಳುತ್ತಾಳೆ.
ಅವಳು ಸ್ವಗತದಲ್ಲಿ ಮಾತನಾಡುವುದು ತನ್ನೆಲ್ಲ ಜೀವನಾನುಭವವನ್ನು ಕುರಿತು. ಚಿಕ್ಕಹುಡುಗಿಯಾಗಿದ್ದಾಗ ಮುತ್ತು ಮದುವೆ ಮತ್ತು ಅಂತರದ ವರ್ಷಗಳನ್ನು ಕುರಿತು ಕೇಳುವವರ ಮನಸ್ಸುಗಳನ್ನು ಸೆಳೆಯುವ ಹಾಗೆ ಮಂದಗತಿಯ ಲಯದಲ್ಲಿ ಮಾತನಾಡುತ್ತ ಹೋಗುತ್ತಾಳೆ. ಹೀಗೆ ತೆರೆದುಕೊಳ್ಳುತ್ತದೆ 2012ರ ಅರೀಕ್ ರಹಿಮಿ ನಿರ್ದೇಶನದ ʻದ ಪೇಷನ್ಸ್ ಸ್ಟೋನ್ʼ ಚಿತ್ರ. ಕಥನದ ನಿರೂಪಣೆಯ ಇವೆಲ್ಲವೂ ಸೂಕ್ತ ಸಮೀಪ ಮುಂತಾದ ಚಿತ್ರಿಕೆಗಳಲ್ಲಿ ಲಭಿಸುತ್ತವೆ.
ಕಾಬೂಲ್ ನಲ್ಲಿ ಬಾಲ್ಯವನ್ನು ಕಳೆದ ಅರೀಕ್ ರಹಿಮಿ ಇಪ್ಪತ್ಮೂರನೆ ವಯಸ್ಸಿನಲ್ಲಿ ಸೋವಿಯತ್ ಆಕ್ರಮಣದಿಂದ ಎಲ್ಲ ಬಿಕ್ಕಟ್ಟುಗಳಿಂದ ಸಿಲುಕಿ, ಉಸಿರಾಡಲು ಕಷ್ಟವೆನಿಸಿದ ತನ್ನ ದೇಶದಿಂದ ದೂರವಾಗಲು ಬಯಸಿ ಫ್ರಾನ್ಸ್ ತಲುಪುತ್ತಾನೆ. ಅಲ್ಲಿ ಅವನಿಗೆ ಹಲವು ಬಣ್ಣಗಳ ಭವಿಷ್ಯಮಾರ್ಗದ ಲೋಕಗಳು ಗೋಚರಿಸುತ್ತವೆ. ತನ್ನ ಮನೋಧರ್ಮಕ್ಕೆ ಅನುಗುಣವಾಗಿ ಸಾಹಿತ್ಯದ ಮಾರ್ಗವನ್ನು ಹಿಡಿದು, ಎರಡು ಕಾದಂಬರಿಗಳು ಮತ್ತು ನಾಲ್ಕು ನಾಟಕಗಳನ್ನು ಬರೆದ ನಂತರ ಅವುಗಳಲ್ಲಿ ಎರಡನ್ನು ಚಲನಚಿತ್ರವಾಗಿ ಪರಿವರ್ತಿಸಿದ್ದಾನೆ. ಗ್ರಾಂಥಿಕ ವಾಕ್ಯಗಳ ಸಾಲುಗಳಲ್ಲಿನ ಕಥನವನ್ನು ದೃಶ್ಯರೂಪಕ್ಕೆ ಪರಿವರ್ತಿಸಲು ಪ್ರಯತ್ನಿಸಿದಾಗ ಪದಗಳ ನಡುವೆ, ವಾಕ್ಯಗಳ ನಡುವೆ ಇರುವ ಭಾವದ ಅಂಶಗಳನ್ನು ಬಹುಬಗೆಯ ಬಣ್ಣ, ಪಾತ್ರಗಳ ಅಭಿನಯ, ಭಾವಗಳಿಗೆ ತಕ್ಕ ಹಿನ್ನೆಲೆ ಸಂಗೀತ ಇವೆಲ್ಲವುಗಳ ಒಟ್ಟಾರೆ ವಿನ್ಯಾಸದಿಂದ ತನ್ನ ಆಶಯ ಪೂರೈಸಿಕೊಳ್ಳಲು ಸಾಧ್ಯ ಎನ್ನುವುದನ್ನು ಅರಿತುಕೊಳ್ಳುತ್ತಾನೆ. ಇವೆಲ್ಲದರ ಪರಿಣಾಮವೇ ಗಿರ್ಜೋನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ʻದ ಪೇಷನ್ಸ್ ಸ್ಟೋನ್ʼ ಗೆ ಲಭಿಸಿದ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟಿ ಪ್ರಶಸ್ತಿಗಳು ಲಭಿಸುತ್ತವೆ. ಇದಕ್ಕೆ ಮುಂಚಿತವಾಗಿಯೇ ಅವನ ಕಾದಂಬರಿಗೆ ಪ್ರತಿಷ್ಠಿತ ಗಾಂಕೋರ್ಟ್ ಬಹುಮಾನ ದೊರಕಿರುತ್ತದೆ.
ಚಿತ್ರದಲ್ಲಿ ಯಾವ ಪಾತ್ರಗಳಿಗೂ ಹೆಸರಿಲ್ಲ. ವಿಶ್ವದ ಯಾವುದೇ ಭಾಗಕ್ಕೂ ಈ ಕಥನ ಅನ್ವಯಿಸಲು ಸಾಧ್ಯ. ಇಂಥದೊಂದು ನೋವು ತುಂಬಿದ ದೇಶದಲ್ಲಿ ಯಾವ ಬಗೆಯ ಆಯ್ಕೆಯ ಸ್ವಾತಂತ್ರ್ಯವಿಲ್ಲದೆ ಹೆಣ್ಣಾಗಿ ಹುಟ್ಟಿದ್ದಷ್ಟೆ ಅವಳ ಪಾಡು. ಅದರ ವೃತ್ತಾಂತಗಳನ್ನು ಅವಳ ಸ್ವಗತದ ಮೂಲಕ ತಿಳಿಸುತ್ತಾಳೆ. ಹೆಣ್ಣಾಗಿ ಹುಟ್ಟುವುದೇ ನೋವು ತುಂಬಿಕೊಳ್ಳಲು ಎಂಬ ವಿಷಯ ಪರಿಪಾಠವಾಗಿರುವ ಅಂಶ ಆಫ್ಘಾನಿಸ್ತಾನಕ್ಕೆ ಮಾತ್ರ ಮಾತ್ರ ಅನ್ವಯಿಸುವಂಥದಲ್ಲ. ಇದನ್ನು ಪ್ರಪಂಚದ ಉದ್ದಗಲದಲ್ಲಿ ಕಾಣಬಹುದು.
ಚಿತ್ರದಲ್ಲಿನ ಆಕೆ ತನ್ನ ಬಾಲ್ಯವನ್ನು ತೆರೆದಿಡುವಾಗ ಕಂಪನ ಅವಳಿಗಷ್ಟೇ ಅಲ್ಲ, ನೋಡುವವರಿಗೂ ಕೂಡ. ಅಪ್ಪ ಎನಿಸಿಕೊಂಡವನಿಗೆ ಮರಿಕೋಳಿಗಳ ಹೋರಾಟದ ಜೂಜಿನ ಗೀಳು. ಗುಂಪು ಕಟ್ಟಿಕೊಂಡು ಆಡುವ ವಿಲಕ್ಷಣ ಆಟದಲ್ಲಿ ಕೇವಲ ಹಣವಷ್ಟೇ ಕೊನೆಯಲ್ಲ. ಅಲ್ಲಿ ಹಣ ಖಾಲಿಯಾದಾಗ ತನ್ನ ಹೆಣ್ಣುಮಕ್ಕಳನ್ನು ಪಣವಾಗಿ ಇಡುತ್ತಾರೆ. ಹಾಗಾದಾಗಲೇ ತನ್ನ ಅಕ್ಕ ಯಾರೊಬ್ಬನ ಮನೆಗೋ ಹೋದದ್ದನ್ನು ನೋಡಿರುತ್ತಾಳೆ. ಗಂಟಲು ಒಣಗುವ ಇಂತಹ ಪ್ರಕರಣ ನಡೆದಾಗಲೂ ಅವಳ ಅಪ್ಪನಿಗೆ ಏನೂ ಅನ್ನಿಸುವುದಿಲ್ಲ. ಅವರಿಗೆ ತಮ್ಮ ವ್ಯಸನದ ಬಗ್ಗೆ ಮಾತ್ರ ಕಾಳಜಿ. ಅಪ್ಪ ಮಾಡಿದ ಹೀನ ಕೃತ್ಯಕ್ಕೆ ಅಮ್ಮನಾಗಲಿ, ಇನ್ನು ಬೇರೆಯವರಾಗಲಿ ಉಸಿರೆತ್ತುವಂತಿಲ್ಲ. ಗಂಡಸು ಇರುವುದೇ ಆಳುವುದಕ್ಕೆ. ಹೆಂಗಸು ಗಂಡಿನ ಅಡಿಯಾಳಷ್ಟೆ ಎಂದು ತೀರ್ಮಾನವಾದ ಪರಂಪಾಗತ ನಡವಳಿಕೆ ಮುಂದುವರಿಯುವುದು ಬಿಟ್ಟರೆ ಬೇರೆಲ್ಲ ವ್ಯರ್ಥ. ಪ್ರಪಂಚದಲ್ಲಿ ಈ ಹೆಣ್ಣಿನ ದುರವಸ್ಥೆಗಳನ್ನು ಬಿಂಬಿಸುವ ಚಿತ್ರಗಳಿಗೆ ಲೆಕ್ಕವಿಲ್ಲ, ನಿಜ. ಆದರೆ ಕಥನದ ಸ್ವರೂಪ, ನಿರೂಪಣಾ ವಿಧಾನ ಮುಂತಾದವುಗಳ ಪ್ರತ್ಯೇಕತೆಯಿಂದ ವಿಶಿಷ್ಟವೆನಿಸುವುದು ಸುಲಭವಲ್ಲ. ಅಂಥದೊಂದು ವಿಶೇಷತೆಯನ್ನು ʻದ ಪೇಷನ್ಸ್ ಸ್ಟೋನ್ ʼ ಒಳಗೊಂಡಿದೆ.
ಕಣ್ಣುಗಳನ್ನು ತೆರೆದರೂ ಮಾತನಾಡದೆ ಮಲಗಿದಾತನ ಬಳಿಗೆ ಬಂದು ತಾನಾಡುವ ಮಾತು ಕೇಳಿಸುತ್ತಿದೆಯೇ ಎಂದು ಮತ್ತೆ ಮತ್ತೆ ಪ್ರಯತ್ನಿಸುವ ಅವಳು. ಎಲ್ಲಕ್ಕೂ ಅವನ ಉತ್ತರ ಸೊನ್ನೆ.
ಅರೀಕ್ ರಹಿಮಿ ಚಿತ್ರಕ್ಕೆ ಹೆಸರಿಡುವುದಕ್ಕೆ ಪರ್ಷಿಯಾದ ಮಿಥ್ಯೆಯನ್ನು ಬಳಸಿಕೊಂಡಿದ್ದಾನೆ. ಅದರಲ್ಲಿ ಕಲ್ಲುಗುಂಡಿಗೆ ಮನಸ್ಸಿನೊಳಗೆ ಹುದುಗಿಟ್ಟ ಗುಟ್ಟುಗಳನ್ನೆಲ್ಲಾ ಹೇಳುತ್ತಾ ಹೋಗಬಹುದು. ಅದು ಸುಮ್ಮನೆ ಸ್ವೀಕರಿಸುತ್ತಾ ಹೋಗುತ್ತದೆ. ಇನ್ನಷ್ಟು ಮತ್ತಷ್ಟು ಗುಟ್ಟುಗಳು ಅಲ್ಲಿ ಶೇಖರವಾಗುತ್ತದೆ. ಆದರೆ ಅದಕ್ಕೂ ಒಂದು ಮಿತಿ ಉಂಟು. ಇನ್ನು ತಡೆಯಲಾಗುವುದಿಲ್ಲ ಎಂದಾಗ ಆ ಕಲ್ಲುಗುಂಡು ಸಿಡಿದು ಛಿದ್ರವಾಗುತ್ತದೆ. ಹಾಗೆಂದೇ ಇವುಗಳಿಂದಾಗಿ ʻಪೇಷನ್ಸ್ ಸ್ಟೋನ್ʼ ಎನಿಸಿಕೊಂಡಿದೆ.
ಈಗ ಅವಳ ಮದುವೆಯ ಪ್ರಸಂಗ. ಮದುವೆಯ ಎಂಗೇಜ್ಮೆಂಟ್ ಕುರಿತಂತೆ ದೊಡ್ಡ ಅಂಗಳದಲ್ಲಿ ಸಾಕಷ್ಟು ಹೆಣ್ಣುಮಕ್ಕಳು, ಹೆಂಗಸರು ಸೇರಿರುವ ಕಡೆ ತರುಣಿಯೊಬ್ಬಳು ಸಂತೋಷದಿಂದ ಡಾನ್ಸ್ ಮಾಡುತ್ತಿರುತ್ತಾಳೆ. ನಿಶ್ಚಿತಾರ್ಥಕ್ಕೆ ಮದುವೆಯಾಗಲಿರುವ ಗಂಡು ಬಂದಿರುವುದಿಲ್ಲ. ಅವನು ಅಲ್ಲೆಲ್ಲೋ ದೂರ ಹೋರಾಟದಲ್ಲಿ ನಿರತ. ಅವನ ಫೋಟೋ ಮಾತ್ರ ಸಭೆಯಲ್ಲೊಂದು ಕಡೆ ಇರುತ್ತದೆ. ಇದು ಒಂದಾದರೆ ಮದುವೆಯಲ್ಲಿಯೂ ಅಷ್ಟೇ. ಈಗ ಅದೇ ಸಭಾಂಗಣ ಹುಡುಗಿಯ ಕುಣಿತದ ಹಿಂದೆ ಅಷ್ಟು ದೂರದಲ್ಲಿರುವ ಮದುವೆಯ ಗಂಡಿನ ಫೋಟೋ ಎದುರು ಹೋರಾಟದಲ್ಲಿ ಉಪಯೋಗಿಸುವ ಚಾಕು ಇರುತ್ತದೆ.
ಗಂಡ ಎನಿಸಿಕೊಂಡವನು ಬರುವುದು ಯಾವಾಗಲೋ. ಮದುವೆಯಾದ ಹತ್ತು ವರ್ಷಗಳಲ್ಲಿ ಹೆಂಡತಿಯೊಡನೆ ಜೊತೆಗಿದ್ದದ್ದು ಎರಡು-ಮೂರು ವರ್ಷ ಮಾತ್ರ. ಮನೆಗೆ ಬಂದಾಗಲೂ ಹೆಂಡತಿಯ ಜೊತೆ ಮಾತಿಲ್ಲ, ನಲಿದಾಟವಿಲ್ಲ. ಇದೊಂದು ಸಂಗತಿಯಾದರೆ ಮದುವೆಯಾದ ಅವನ ಜೊತೆ ಮೊದಲ ರಾತ್ರಿ ಕಳೆದ ಪ್ರಸಂಗವೂ ವಿಚಿತ್ರದಲ್ಲಿ ವಿಚಿತ್ರ. ಗಂಡ ಮತ್ತು ಅವನ ಮನೆಯವರು ಅಲ್ಲಿಯವರೆಗೂ ತಾನು ಕನ್ಯೆಯಾಗಿದ್ದವಳು ಎನ್ನುವುದನ್ನು ಎದುರು ನೋಡುತ್ತಿರುತ್ತಾರೆ ಎಂಬ ಅತ್ಯಂತ ಮುಖ್ಯವಾದ ಸಂಗತಿ ಅವಳಿಗೆ ಗೊತ್ತಿರುತ್ತದೆ. ಗಂಡಿನ ಸಂಗವಾದದ್ದು ಆ ದಿನವಷ್ಟೇ ಎನ್ನುವುದನ್ನು ಖಚಿತವಾಗಲು ಕನ್ಯಾಪೊರೆ ಕಳಚಿದಾಗ ಉಂಟಾಗುವ ರಕ್ತಸ್ರಾವ ಅವಶ್ಯಕವಾಗುತ್ತದೆ ಎನ್ನುವುದನ್ನು ಬಲ್ಲಳು. ಇದನ್ನು ಖಚಿತಪಡಿಸಿಕೊಳ್ಳಲು ಆ ತರುಣಿ ತನ್ನದೇ ಆದ ಮಾರ್ಗ ಹಿಡಿದಿರುತ್ತಾಳೆ. ಗಂಡನ ಸಂಗದಲ್ಲಿ ಕಳೆಯುವ ಆ ಮೊದಲ ರಾತ್ರಿಯ ಅವಧಿಯಲ್ಲಿ ತಾನು ಋತುಮತಿಯಾಗಿರುವ ಸಂಗತಿಯನ್ನು ಹೇಳಿರುವುದಿಲ್ಲ. ಹೀಗಾಗಿ ಅವಳ ಅಗತ್ಯ ಪೂರೈಸುತ್ತದೆ. ತಾನು ಬೀಸಿದ ಈ ಅಸ್ತ್ರಕ್ಕೆ ಎದುರಿಲ್ಲ ಎನ್ನುವುದನ್ನು ಸಿದ್ಧಪಡಿಸಿರುತ್ತಾಳೆ. ಈ ಸಮಸ್ಯೆಯಿಂದ ಪಾರಾದೆನೆಂದರೆ ಅವಳಿಗಿನ್ನೊಂದು ಕಾದಿರುತ್ತದೆ.
ಮದುವೆಯಾಗಿ ಕೆಲವು ತಿಂಗಳುಗಳು ಕಳೆದರೂ ಅವಳು ಗರ್ಭಿಣಿ ಆಗದಿರುವುದು ಅವಳ ಅತ್ತೆಗೆ ಅತಿ ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಹೆಣ್ಣೊಂದು ಮದುವೆಯಾಗುವುದು ಮಕ್ಕಳನ್ನು ಹೆರುವುದಕ್ಕೆ ಮಾತ್ರ ಎಂದು ಎಂದಿನಿಂದಲೂ ಬಂದ ನಿಲುವಿಗೇ ಆಕೆಯೂ ಬದ್ಧ. ಹಾಗಾಗಿಯೇ ಸೊಸೆ ಮಕ್ಕಳು ಪಡೆಯುವುದಕ್ಕೆ ಯೋಗ್ಯಳಲ್ಲ ಎಂದು ತನ್ನ ಮಗನಿಗೆ ಇನ್ನೊಂದು ಮದುವೆ ಮಾಡಿಸುವ ಹವಣಿಕೆಯಲ್ಲಿ ಅತ್ತೆ ಇರುವುದು ತರುಣಿಗೆ ಗೊತ್ತಾಗುತ್ತದೆ. ಇದನ್ನೂ ಅವಳು ನಿಭಾಯಿಸಿ, ಸಮಸ್ಯೆ ನಿವಾರಣೆ ಮಾಡಿಕೊಳ್ಳುವುದು ಬೇರೆ ರೀತಿಯಲ್ಲಿ.
ಆ ತರುಣಿಗೆ ತಾನು ಒಬ್ಬಳೇ ಮನೆಯಲ್ಲಿ ಇರುವುದರಿಂದ ಯಾರಾದರೂ ತನ್ನ ಮೇಲೆ ಅತ್ಯಾಚಾರ ಮಾಡಿದರೆ ಗತಿಯೇನು ಎನ್ನುವ ಭಯ. ಗುಂಡೇಟು ತಿಂದು ಮಲಗಿರುವ ಗಂಡನಿಂದ ರಕ್ಷಣೆ ಅಸಾಧ್ಯ ಎನ್ನುವುದು ಆಕೆಗೆ ತಿಳಿದಿರುವ ಸಂಗತಿ. ಹೀಗೆಂದೇ ಹಗಲಿರುಳು ಭಯದಿಂದ ಕಳೆಯುವ ಅವಳು ದೂರದ ಸಂಬಂಧಿಯೊಬ್ಬಳನ್ನು ಈ ಬಗ್ಗೆ ವಿಚಾರಿಸುತ್ತಾಳೆ. ಅವಳಾದರೂ ಈ ಎಲ್ಲ ಸಂಕಟಗಳಿಂದ ದೂರವಾದಳು. ತಾನು ಹಾಗಿರುವುದಕ್ಕೆ ಅವಳಿಗೆ ಸ್ವಲ್ಪವೂ ಬೇಸರವಿಲ್ಲ. ಅವಳೊಬ್ಬಳು ವೇಶ್ಯೆ. ಆಕೆಯ ದೃಷ್ಟಿಯಲ್ಲಿ ತನಗೆ ಸರಿ ಎನಿಸಿದಂತೆ ಬಾಳಲು ಯಾವ ಮಾರ್ಗವಾದರೂ ಸರಿ ಎನ್ನುವುದು ಅವಳ ನಿಲುವು. ಆಕೆ ತರುಣಿಗೆ ಹೇಳುವುದಿಷ್ಟೇ: ಯಾರಾದರೂ ಅತ್ಯಾಚಾರಕ್ಕೆ ಪ್ರಯತ್ನಿಸಿದರೆ ಅವರಿಗೆ, ನಾನು ವೇಶ್ಯೆ ಎಂದು ಹೇಳು. ಅವರು ಹತ್ತಿರ ಸುಳಿಯುವುದಿಲ್ಲ, ಎಂದು ನಗು ತೂರಿ ಹೇಳಿರುತ್ತಾಳೆ.
ಅದೊಂದು ದಿನ ಮನೆಯ ಆಚೆ ಸುತ್ತಮುತ್ತ ಗುಂಡುಗಳ ಸುರಿಮಳೆ. ದೂಳಿನ ಕಿಟಕಿಯ ಬಳಿ ಯಾವನೋ ಬಂದೂಕು ಹಿಡಿದ ಕಮಾಂಡರ್ ಪ್ರತ್ಯಕ್ಷ. ಅವನೊಂದಿಗೆ ಇನ್ನೊಬ್ಬ ಕೂಡ. ಕಮಾಂಡರ್ ಒಳಗೆ ಬಂದು ಅವಳಿಗೆ ಅಡ್ಡವಾಗಿ ನಿಲ್ಲಿತ್ತಾನೆ. ಕಣ್ಣರಳಿಸಿ ತನ್ನ ಅಭಿಲಾಷೆ ಹೇಳುವ ಮೊದಲೇ ಅವಳು ಸಿದ್ಧಪಡಿಸಿಕೊಂಡ ಮಾತನ್ನು ಅವನ ಮುಖಕ್ಕೆ ರಪ್ಪೆಂದು ರಾಚುತ್ತಾಳೆ. ಕೇಳಿಸಿಕೊಂಡ ಅವನು ಮುಖ ಕಿವುಚಿ ಹಿಂದಕ್ಕೆ ಸರಿಯುತ್ತಾನೆ. ತನ್ನ ಮಾತುಗಳು ಫಲಕಾರಿಯಾದದ್ದು ಅವಳಿಗೆ ಇನ್ನಿಲ್ಲದಷ್ಟು ಖುಷಿ ತಂದರೆ ಅದರಲ್ಲಿ ನಾವೂ ಭಾಗಿಯಾಗುತ್ತೇವೆ. ಸುತ್ತಲಿನ ಅರೆಗತ್ತಲಿನಲ್ಲಿಯೂ ಬೆಳಕಿನ ಕಿರಣ ಹರಿದಾಡುತ್ತದೆ. ಆ ಕಮಾಂಡರ್ ಜೊತೆಗೆ ಬಂದವನು ಆಗಷ್ಟೇ ಮೀಸೆ ಬಲಿತ ಯುವಕ. ಅವಳ ಹತ್ತಿರ ಕೆಟ್ಟದಾಗಿ ನಡೆದುಕೊಳ್ಳುವ ಧಾವಂತ ಇರುವುದಿಲ್ಲ. ಮಾತಿಲ್ಲದೆಯೇ ಒಳಗೆ-ಹೊರಗೆ ಓಡಾಡಿ ಹೋದವನು ಕೆಲವು ದಿನಗಳ ನಂತರ ಮತ್ತೆ ಹಾಜರ್. ಈಗ ಉಗ್ಗುದನಿಯಲ್ಲಿ ಮಾತನಾಡಲು ಶ್ರಮಿಸುವ ಅವನ ಮುಗ್ಧವೆನಿಸುವ ರೀತಿ ಅವಳಿಗೆ ಮೆಚ್ಚುಗೆಯಾಗುತ್ತದೆ. ಅವಳು ಒಪ್ಪಿಗೆಯನ್ನು ಸೂಚಿಸಿದ ನಂತರವೇ ಅವನಿಗೆ ಧೈರ್ಯ. ಮುಂದೆ ಹೆಜ್ಜೆ ಇಡುತ್ತಾನೆ. ಅವಳ ಮುಖದಲ್ಲಿ ಮಂದಹಾಸದ ಮಿನುಗು. ಅವನ ಸಂಗದಲ್ಲಿ ಅವಳಿಗೊಂದು ರೀತಿಯ ವಿಜಯ ದೊರೆಯುತ್ತದೆ. ಬೇರೆಲ್ಲ ಸಂದರ್ಭಗಳಲ್ಲಿ ಗಂಡಿನ ಅಪೇಕ್ಷೆಗೆ ಅನುಸಾರವಾಗಿಯೇ ನಡೆಯಬೇಕಾಗಿದ್ದ ಅವಳಿಗೆ ಅವನನ್ನು ವಿನಯಪೂರ್ಣ ವಿದ್ಯಾರ್ಥಿಯ ಹಾಗೆ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈ ಸಂಬಂಧ ಇಬ್ಬರಿಗೂ ಬೇರೆ ಬೇರೆ ರೀತಿಯಲ್ಲಿ ಸಂತೃಪ್ತಿ ಒದಗಿಸುತ್ತದೆ.
ಹಜಾರದಲ್ಲಿ ಗಾಳಿಗೆ ಬಿಗಿತ ಹೆಚ್ಚಾಗುತ್ತದೆ. ಒಳಗೆ ಹುದುಗಿದ ಇನ್ನಷ್ಟು ಗುಟ್ಟುಗಳು ಹೊರಗೆ ಬರಲು ಬಯಸುತ್ತಿರುತ್ತವೆ. ಮಕ್ಕಳನ್ನು ಆ ದೂರದ ಸಂಬಂಧಿಯ ಬಳಿ ಬಿಟ್ಟು ಬರುತ್ತಾಳೆ. ಗುಟ್ಟುಗಳು ಹೊರಬರಲು ಹಾತೊರೆಯುತ್ತ ಇನ್ನು ತಡೆಯಲಾಗದೆ ಬಿರಿಯುವ ರೀತಿಯಲ್ಲಿ ತನ್ನ ಗಂಡನಿಗೆ ಮುಖ್ಯವಾದ ಸಂಗತಿಗಳನ್ನು ಹೇಳುತ್ತಾಳೆ.
ಹೊರಗಣ್ಣು ಮುಚ್ಚಿರುವ ಗಂಡ ನಿದ್ದೆ ಮಾಡುತ್ತಿದ್ದಾರೆಯೇ ಅಥವಾ ಸತ್ತು ಹೋಗಿದ್ದಾನೆಯೇ ಹೇಗೆಂದು ಪರೀಕ್ಷಿಸುತ್ತಾಳೆ. ನಂತರ ಅವನು ತಾನು ಹೇಳುವುದನ್ನು ಕೇಳಿಸಿಕೊಳ್ಳಲು ಸಾಧ್ಯ ಎಂದು ಖಚಿತಪಡಿಸಿಕೊಂಡು ಒಳಗಿದ್ದ ತನ್ನು ಗುಟ್ಟನ್ನು ಹೊರಹಾಕುತ್ತಾಳೆ: ನೀನು ನಿಜವಾದ ಗಂಡಸೇ ಆಗಿರಲಿಲ್ಲ. ನಿನ್ನಮ್ಮ ತಪ್ಪು ತಿಳಿದಿದ್ದರು. ನನಗೆ ಆದ ಮಕ್ಕಳು ಆಗಿರುವುದು ನಿನ್ನಿಂದಲ್ಲ. ಇಬ್ಬರು ಮಕ್ಕಳು ಇಬ್ಬರು ಬೇರೆ ಬೇರೆಯವರಿಂದ ಆಗಿವೆ ಎಂದು ಹೇಳುತ್ತಿದ್ದಂತೆ ಅವಳ ಗಂಡ ಕೊಂಚ ಅಲುಗಾಡುತ್ತಾನೆ. ಆಗಲೇ ಅವಳಿಗೆ ಅವನಿಗೆ ಅಷ್ಟು ಶಕ್ತಿ ಇದೆ ಎಂದು ತಿಳಿಯುತ್ತದೆ. ಅನಂತರ ಅವಳ ಕುತ್ತಿಗೆ ಹಿಚುಕಲು ಪ್ರಯತ್ನಿಸುತ್ತಾನೆ. ಆಗ ಅವಳು ಬೇರೆ ದಾರಿಯಿಲ್ಲದೆ ಆಶ್ಚರ್ಯವಾಗುವ ರೀತಿಯಲ್ಲಿ ವರ್ತಿಸುತ್ತಾಳೆ.
ಚಿತ್ರದ ಅವಧಿಯುದ್ದಕ್ಕೂ ಬೇರೆಬೇರೆ ಭಾವಗಳನ್ನು ಸಮರ್ಥವಾಗಿ ಪ್ರದರ್ಶಿಸುತ್ತ, ಅದಕ್ಕೆ ಅನುಗುಣವಾದ ಅಭಿನಯವನ್ನು ಪ್ರಕಟಿಸುತ್ತ ಪಾತ್ರ ನಿರ್ವಹಿಸುವ ನಟಿ(ಗೋಲ್ಶಿತೆ ಫರಹಾನಿ)ಯನ್ನು ಮೆಚ್ಚಲೇಬೇಕು. ಇದಕ್ಕೆ ಮೊದಲು ಈ ನಟಿ ಅಸ್ಗರ್ ಫರ್ಹಾದಿಯ ʻಅಬೌಟ್ ಎಲ್ಲಿʼ ಚಿತ್ರದಲ್ಲಿಯೂ ಸಮರ್ಥ ಅಭಿನಯವನ್ನು ನೀಡಿರುವುದನ್ನು ನೆನಪಿಸಿಕೊಳ್ಳಬಹುದು. ಅನೇಕ ಕಾರಣಗಳಿಂದ ವಿಶಿಷ್ಟ ಚಿತ್ರವನ್ನು ಪ್ರಸ್ತುತಪಡಿಸಿದ ಅರೀಕ್ ರಹಿಮಿಗೆ ಶಭಾಷ್ ಎನ್ನದಿದ್ದರೆ ಹೇಗೆ?
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.