ಸಂಗಂ ಯುಗದಲ್ಲಿ ಅಶೋಕನ ಕಾಲಕ್ಕಿಂತಲೂ ಹೆಚ್ಚಿನ ಪ್ರಗತಿ ಕಲೆಯಲ್ಲುಂಟಾಯಿತು. ಪೂನಾದ ಸಮೀಪ ‘ಬಾಜʼ ಎಂಬಲ್ಲಿ ಕ್ರಿ.ಪೂ. ಇದೇ ಶತಮಾನದಲ್ಲಿ ಒಂದು ‘ವಿಹಾರ’ವನ್ನು ಕಡೆದಿರುವರು. ಈ ಕಲೆಯು ವಾಸ್ತವಿಕತೆಯಿಂದ ಕೂಡಿದೆ. ಮುಂಬಯಿಯ ಕಾರ್ಲೆ ಎಂಬಲ್ಲಿ ಕಲ್ಲಿನಿಂದಲೇ ಮಾಡಿದ ಚೈತ್ಯಾಲಯವು ಉತ್ಕೃಷ್ಟವಾಗಿದೆ. ಜುನಾರ್, ನಾಸಿಕ, ಅಜಂತ ಮುಂತಾದೆಡೆಗಳಲ್ಲಿಯೂ ಉತ್ತಮ ಚೈತ್ಯಾಲಯಗಳಿವೆ. ಕೆತ್ತನೆಯ ಕೆಲಸಗಳಿಂದ ಕೂಡಿದ ಬೃಹತ್ ಸ್ತೂಪದ ಹೆಬ್ಬಾಗಿಲು ಪ್ರಸಿದ್ಧವಾಗಿದೆ. ಅದರಲ್ಲಿ ಬೌದ್ಧ ಜಾತಕ ಕತೆಗಳು ಕೆತ್ತಲ್ಪಟ್ಟಿವೆ. ಬುದ್ಧನ ಜಾತಕ ಕತೆಗಳನ್ನು ಕೆತ್ತಿದ ಚಿತ್ರಗಳಿರುವ ಸಾಂಚಿಯ ಸ್ತೂಪದ ಹೆಬ್ಬಾಗಿಲುಗಳು ಪರಿಪೂರ್ಣವಾಗಿದ್ದು ಸುಂದರವಾಗಿವೆ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಕೊನೆಯ ಬರಹ ಇಲ್ಲಿದೆ.
ಹತ್ತು ಮತ್ತು ಹದಿನಾಲ್ಕನೆಯ ಶತಮಾನದ ಕಾಲದಲ್ಲಿ ಹಿಂದೂ ಮತವು ಹೊಸ ಮಾರ್ಪಾಟುಗಳನ್ನು ಪಡೆದು ಜನರ ಮೆಚ್ಚುಗೆಗೆ ಪಾತ್ರವಾಯಿತು. ಕಾರಣಗಳು; 1. ಕುಮಾರಿಲ ಭಟ್ಟರು ವೈದಿಕ ಧರ್ಮವನ್ನು ಎತ್ತಿಹಿಡಿದು ಪ್ರಚಾರ ಮಾಡಿದರು. ಅಲ್ಲದೆ ಶಂಕರಾಚಾರ್ಯರು ಬೌದ್ಧ ಮತದ ಶೂನ್ಯವಾದವನ್ನು ತೀವ್ರವಾಗಿ ಖಂಡಿಸಿ, ಜನರು ಹಿಂದೂ ಮತಕ್ಕೆ ಬರುವಂತೆ ಮಾಡಿದರು. 2. ಹೊಸ ಹಿಂದೂ ಮತವು ಅನುಮಾನಕ್ಕೆಡೆಮಾಡುವಂತಹ ಅಶ್ವಮೇಧಾದಿ ಯಾಗಗಳಿಗೆ ಪ್ರಾಧಾನ್ಯತೆ ಕೊಡಲಿಲ್ಲ. ಮಾತ್ರವಲ್ಲದೆ ಜನಪ್ರೀತಿಗೆ ಪಾತ್ರವಾದ ಕೆಲವು ಬೌದ್ಧ ತತ್ವಗಳನ್ನು ತನ್ನೊಳಗೆ ಅಳವಡಿಸಿಕೊಂಡಿತು. ದೇವಸ್ಥಾನ, ಪೂಜೆ, ಉತ್ಸವ, ಜಾತ್ರೆಗಳಿಗೆ ಪ್ರಾಧಾನ್ಯತೆ ದೊರೆತು ಹಿಂದೂ ಮತವು ಜನಮನವನ್ನು ಆಕರ್ಷಿಸತೊಡಗಿತು. 3. ಹೆಚ್ಚುಕಡಿಮೆ ಬೌದ್ಧ ಮತದ ರೀತಿಯಲ್ಲಿಯೇ ಬೆಳೆದು, ಶೈವ, ವೈಷ್ಣವ ಮತಗಳೂ ಜನರನ್ನು ಹೆಚ್ಚು ಹೆಚ್ಚಾಗಿ ತಮ್ಮೆಡೆಗೆ ಆಕರ್ಷಿಸಿದವು. ವೈಷ್ಣವರು ಬುದ್ಧನನ್ನು ವಿಷ್ಣುವಿನ ಅವತಾರವೆಂದು ನಂಬತೊಡಗಿದರು. 4. ರಾಜರು ಶೈವ ಮತ್ತು ವೈಷ್ಣವ ಮತಗಳನ್ನವಲಂಬಿಸಿ, ಅವುಗಳ ಪ್ರಚಾರಕ್ಕಾಗಿ ದೇವಾಲಯಗಳನ್ನು ಕಟ್ಟಿಸುವುದು ಪದ್ಧತಿಯಾಯಿತು. ದಕ್ಷಿಣದಲ್ಲಿ ಚೋಳರು, ಪಲ್ಲವರು, ಹೊಯ್ಸಳರು ಅನೇಕ ದೇವಾಲಯಗಳನ್ನು ಕಟ್ಟಿಸಿದರು. 5. ಬೌದ್ಧ ಸಂಘಗಳು ಧರ್ಮವನ್ನು ಪ್ರಚಾರ ಮಾಡುತ್ತಿದ್ದ ಕ್ರಮದಲ್ಲಿ ಮಠಗಳನ್ನು ಸ್ಥಾಪಿಸಿ ಹಿಂದೂ ಮತದ ಪ್ರಚಾರ ಮಾಡುವುದನ್ನು ಶಂಕರಾಚಾರ್ಯರು ಮೊದಲು ಮಾಡಿದರು.
ದೇಶದ ನಾನಾ ಕಡೆಗಳಲ್ಲಿ ಉಂಬಳಿಯನ್ನು ಹೊಂದಿದ ಮಠಗಳು ಸ್ಥಾಪಿಸಲ್ಪಟ್ಟುವಲ್ಲದೆ, ಮಠಾಧೀಶರಾದ ಸನ್ಯಾಸಿಗಳು ಧರ್ಮಪ್ರಚಾರವನ್ನು ಉತ್ಸಾಹದಿಂದ ಕೈಗೊಳ್ಳುತ್ತಿದ್ದರು. ಅನ್ನದಾನ, ವಿದ್ಯಾದಾನಗಳನ್ನು ಮಠಗಳು ಮಾಡುತ್ತಿದ್ದುವಲ್ಲದೆ, ಧರ್ಮಬೋಧೆಗೂ ವ್ಯವಸ್ಥೆಯಿತ್ತು. 6. ಬೌದ್ಧ ಧರ್ಮವು ಈ ಕೆಳಗಿನ ಕಾರಣಗಳಿಗಾಗಿ ಅವನತಿ ಹೊಂದಿದುದು ಹಿಂದೂ ಮತದ ಪ್ರಾಬಲ್ಯಕ್ಕೆ ಕಾರಣವಾಯಿತು. ಬೌದ್ಧ ಧರ್ಮದ ಅವನತಿಗೆ ಕಾರಣಗಳು: (1) ಬಂಗಾಳದ ಪಾಲ ಅರಸರ ಅನಂತರ ಯಾವ ಅರಸರೂ ಬೌದ್ಧ ಧರ್ಮವನ್ನು ಬೆಂಬಲಿಸಲಿಲ್ಲ. (2) ಬೌದ್ಧ ಸನ್ಯಾಸಿಗಳು ಹಿಂದಿನಂತೆ ಜನರೊಂದಿಗೆ ಬೆರೆತು ಧರ್ಮಪ್ರಚಾರ ಮಾಡಲು ಉತ್ಸುಕರಾಗಲಿಲ್ಲ. ಅವರು ಬರೇ ವಿಲಾಸಿಗಳಾಗಿದ್ದು ಜನರ ಸಂಪರ್ಕದಲ್ಲಿ ಇರಲಿಲ್ಲ. (3) ಬೌದ್ಧ ಮತದಲ್ಲಿ ಹಲವು ಶಾಖೆಗಳಾಗಿ ಬುದ್ಧನು ಬೋಧಿಸಿದ ಸರಳ ಧರ್ಮದಿಂದ ತುಂಬಾ ಮಾರ್ಪಾಟುಗಳನ್ನು ಹೊಂದಿತು. ಮಹಾಯಾನ ಬೌದ್ಧ ಮತವು ಮೂರ್ತಿಪೂಜೆ, ಉತ್ಸವಗಳನ್ನು ಒಳಗೊಂಡು ಕಠಿಣ ವಿಚಾರಗಳಿಂದ ಕೂಡಿತ್ತು. ಅಲ್ಲದೆ ಬೌದ್ಧ ಸನ್ಯಾಸಿಗಳು ತತ್ವಜ್ಞಾನಕ್ಕೂ, ಸಂಸ್ಕೃತ ಭಾಷೆಗೂ ಪ್ರಾಧಾನ್ಯತೆಯನ್ನು ಕೊಡತೊಡಗಿ ಜನಸಾಮಾನ್ಯರ ಮೆಚ್ಚುಗೆಯನ್ನು ಕಳಕೊಳ್ಳುವಂತಾಯಿತು. (4) ಮುಸ್ಲಿಮರು ಬೌದ್ಧ ವಿಹಾರಗಳನ್ನು ಮತ್ತು ದೇವಾಲಯಗಳನ್ನು ನಾಶಪಡಿಸುತ್ತಿದ್ದುದರಿಂದ ಸಂಕಷ್ಟಕ್ಕೊಳಗಾದ ಬೌದ್ಧ ಸನ್ಯಾಸಿಗಳು ನೇಪಾಳ, ಟಿಬೆಟಿನ ಕಡೆಗೆ ವಲಸೆ ಹೋದರು. ಹೊಸ ಹಿಂದೂ ಮತವು ಬೌದ್ಧಮತದ ಅವಶೇಷಗಳಿಂದ ಒಡಗೂಡಿದ್ದುದರಿಂದ ಹಿಂದೂ ಮತವನ್ನು ತ್ಯಜಿಸಿ ಬೌದ್ಧ ಮತವನ್ನು ಸೇರುವ ಅವಶ್ಯಕತೆಯು ಕಂಡುಬರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಬೌದ್ಧ ಮತವು ಕ್ಷೀಣಿಸಿ ಹಿಂದೂ ಮತವು ಮೇಲ್ಮೆಯನ್ನು ಪಡೆಯಿತು.
ಶೈವ ಮತ
ಪುರಾತನ ದ್ರಾವಿಡರ ಕಾಲದಲ್ಲಿ ಪಶುಪತಿಯ ಆರಾಧನೆಯು ಪ್ರಚಲಿತವಾಗಿತ್ತು. ಕ್ರಮೇಣ ಆರ್ಯ-ದ್ರಾವಿಡ ಜನಾಂಗಗಳು ಮಿಳಿತಗೊಂಡಾಗ ವೇದದ ರುದ್ರನೊಂದಿಗೆ ದ್ರಾವಿಡರ ಶಿವನು ಸೇರಿ, ಮಂಗಳ ಸ್ವರೂಪನಾದ ಶಂಕರನು ಉಂಟಾದನು. ಕ್ರಿ.ಶ. ಎರಡನೆಯ ಶತಮಾನದಲ್ಲಿಯೇ ಶೈವ ಮತವು ಅಸ್ತಿತ್ವದಲ್ಲಿತ್ತು. ಪಲ್ಲವರ ಕಾಲದಲ್ಲಿ ಅಪ್ಪರ್, ಸುಂದರರ್ ಮೊದಲಾದ 63 ನಾಯನ್ಮಾರರು (ಶೈವ ಪಂಡಿತರು) ಶೈವ ಮತವನ್ನು ಪ್ರಚಾರ ಮಾಡಿದರು. ಪರಮೇಶ್ವರನು ದಯಾಮಯನೆಂದೂ, ಸ್ತ್ರೀ ಪುರುಷ, ಉಚ್ಚ ನೀಚ ಭೇದವಿಲ್ಲದವನೆಂದೂ, ಯಾರು ಬೇಕಾದವರೂ ಭಕ್ತಿಯಿಂದ ಅವನನ್ನು ಪೂಜಿಸಿ ಮೋಕ್ಷವನ್ನು ಹೊಂದಬಹುದೆಂದೂ ಬೋಧಿಸಿದು. ಇದು ಪ್ರಚಾರವಾಗಿ, ದಕ್ಷಿಣದಲ್ಲಿ ಬೌದ್ಧ ಜೈನ ಮತಗಳು ಕುಂಠಿತಗೊಂಡುವು.
ವೀರಶೈವ ಮತ
ಭಾರತದ ಉಳಿದೆಡೆ ಶೈವಮತವು ವೈದಿಕ ಮತದೊಂದಿಗೆ ಮಿಲನಗೊಂಡಿದ್ದರೆ, ಕನ್ನಡ ನಾಡಿನಲ್ಲಿ ವೀರಶೈವವೆಂಬ ಹೆಸರಿನಿಂದ ಹುಟ್ಟಿದ ಅದೇ ಮತವು ಬೇರೆಯೇ ಆಗಿ ಬೆಳೆಯಿತು. ಇದರ ಪ್ರವರ್ತಕರು ಬಸವೇಶ್ವರರು. ಜಾತಿ ಮತ ಲಿಂಗ ಭೇದವಿಲ್ಲದೆ, ಸರ್ವಶಕ್ತನಾದ ಶಿವನನ್ನು ಅನನ್ಯ ಭಕ್ತಿಯಿಂದ ಪೂಜಿಸಿ ಶಿವೈಕ್ಯ ಹೊಂದಬಹುದು ಎಂದು ಅವರು ಬೋಧಿಸಿದರು. ಶಿವನನ್ನು ಲಿಂಗದ ರೂಪದಿಂದ ಪುಜಿಸುವರಲ್ಲದೆ, ಅದನ್ನು ಧರಿಸುವ ಕಾರಣ ಈ ಮತದವರನ್ನು ಲಿಂಗಾಯತರೆಂದೂ ಕರೆಯುವರು. ಶಿವಶರಣರು ಸರಳವಾದ ಕನ್ನಡ ವಚನಗಳಲ್ಲಿ ತಮ್ಮ ಧರ್ಮವನ್ನು ಸಾರಿರುವರು.
ವೈಷ್ಣವ ಮತ
ಬೌದ್ಧ ಮತವು ಅಹಿಂಸೆಗೆ ಪ್ರಾಧಾನ್ಯತೆಯನ್ನು ಕಲ್ಪಿಸಿಕೊಟ್ಟಿತಲ್ಲದೆ ಬುದ್ಧನನ್ನು ವಿಷ್ಣುವಿನ ಒಂಭತ್ತನೆ ಅವತಾರವಾಗಿ ಪರಿಗಣಿಸಿತು. ಜಾತಿ ಭೇದವಿಲ್ಲದೆ ವಿಷ್ಣುವನ್ನು ಭಕ್ತಿಯಿಂದ ಆರಾಧಿಸಿ ಮೋಕ್ಷವನ್ನು ಪಡೆಯಬಹುದು ಎಂದು ದಾಸರು, ಆಳ್ವಾರರು. ಯತಿಗಳೇ ಮೊದಲಾದವರು ವಾದಿಸಿದರು. ಮಥುರೆಯಲ್ಲಿ ರಾಧಾಕೃಷ್ಣರ ಪ್ರೇಮಮಯ ಜೀವನವು ಆರಾಧಿಸಲ್ಪಟ್ಟಿತು. ಮಹಾರಾಷ್ಟ್ರದಲ್ಲಿ ವಿಷ್ಣುವು ವಿಠೋಬನಾಗಿ ಭಕ್ತಿಯಿಂದ ಪೂಜಿಸಲ್ಪಡುತ್ತಾನೆ. ವಿಷ್ಣುವನ್ನೇ ರುಕ್ಮಿಣೀಪತಿಯನ್ನಾಗಿಯೂ ಭಜಿಸುವರು. ಈ ಕ್ರಾಂತಿಕಾರಿ ವೈಷ್ಣವ ಮತವು ಜಾತಿ ನಿರ್ಬಂಧಗಳನ್ನು ತೊಡೆದು ಹಾಕಿ, ಕೆಳ ಜಾತಿಯವರಿಗೂ, ಸ್ತ್ರೀಯರಿಗೂ ಸಮಾಜದಲ್ಲಿ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿತು.
ಜೈನ ಮತದ ಇಳಿಗಾಲ
ಅಹಿಂಸೆಗೆ ಅತೀವ ಪ್ರಾಧಾನ್ಯತೆಯ್ನು ಕೊಟ್ಟುದರಿಂದಲೂ, ಕಾಲದಿಂದ ಕಾಲಕ್ಕೆ ಆಗತಕ್ಕ ಬದಲಾವಣೆಗಳು ಆಗದೆ ಇದ್ದುದರಿಂದಲೂ ಇಡೀ ಹಿಂದೂ ದೇಶದಲ್ಲಿ ಒಮ್ಮೆಯೂ ಜೈನ ಮತವು ಪ್ರಚಾರ ಪಡೆಯಲಿಲ್ಲ. ರಜಪೂತರ ಬಳಿಕ ಗುಜರಾತಿನಲ್ಲಿಯೂ, ಹೊಯ್ಸಳ ಬಿಟ್ಟಿದೇವನು (ವಿಷ್ಣುದೇವ) ವೈಷ್ಣವ ಪಂಥಕ್ಕೆ ಸೇರಿದ ಮೇಲೆ ಕನ್ನಡ ನಾಡಿನಲ್ಲಿಯೂ ಜೈನ ಮತದ ಪ್ರಾಬಲ್ಯವು ಕಡಿಮೆಯಾಯಿತು. ಆದರೂ ಜೈನ ಮತವು ಸಂಪೂರ್ಣವಾಗಿ ನಾಶವಾಗದೆ ಗುಜರಾತ್, ಕರ್ನಾಟಕಗಳಲ್ಲಿ ಇಂದಿಗೂ ಪ್ರಭಾವಶಾಲಿಯಾಗಿದೆ.
ಇಸ್ಲಾಂ ತತ್ವ
ಅರೇಬಿಯಾದ ಅಬ್ದುಲ್ ಎಂಬವರಿಗೆ ಆಮಿನ ಎಂಬವಳಲ್ಲಿ ಕ್ರಿ.ಶ. 570ರಲ್ಲಿ ಮತಪ್ರವರ್ತಕ ಮಹಮ್ಮದರು ಜನಿಸಿದರು. ಇವರು ಇಸ್ಲಾಂ ಮತವನ್ನು ಪ್ರಚಾರಕ್ಕೆ ತಂದರು. ಈ ಮತದ ಅನುಯಾಯಿಗಳನ್ನು ಮುಸ್ಲಿಮರೆಂದು ಕರೆಯುತ್ತಾರೆ. ಭಾರತದಲ್ಲಿಯೂ ಬಹಳಷ್ಟು ಮುಸ್ಲಿಮರಿರುವ ಕಾರಣ ಇಸ್ಲಾಮಿನ ಮುಖ್ಯ ತತ್ವಗಳ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿದೆ. 1. ದೇವರು ಎಲ್ಲಾ ವಿಷಯಗಳಿಗೂ ಕಾರಣಕರ್ತನು. ದೇವರಿರುವುದು ಒಬ್ಬನೇ. ಭಾವನಾತೀತನಾದ ದೇವರಿಗೆ ಆಕಾರವನ್ನು ಕೊಡುವುದು ಪಾಪಕಾರಕವಾದುದರಿಂದ ಮೂರ್ತಿಪೂಜೆ ಮಾಡಬಾರದು. 2. ಆತ್ಮ: ನಿರ್ಮಲವಾದ ಆತ್ಮವು ಕರ್ಮದ ಫಲದಿಂದ ಬದಲಾಗುತ್ತದೆ. ಎಂದರೆ, ಬೆಳವಣಿಗೆಯಿರುವ ಈ ಆತ್ಮವು ಒಳ್ಳೆಯ ಕರ್ಮಗಳಿಂದ ಪರಿಪೂರ್ಣತೆಯನ್ನು ಹೊಂದುತ್ತದೆ. ತನ್ನ ಪಾಪ ಪುಣ್ಯಗಳ ವಿವೇಚನಾಶಕ್ತಿಯಿಂದ ಪಾಪದ ತುಳಿತಕ್ಕೆ ಸಿಕ್ಕದೆ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಸಾಧನೆಯನ್ನು ಹೊಂದಿಕೊಂಡು. 3. ಜೀವನದ ಧ್ಯೇಯ: ಆತ್ಮದ ಪರಿಪೂರ್ಣತೆ, ಎಂದರೆ ಸ್ವಪ್ರಯತ್ನದಿಂದ ತನ್ನ ಗುರಿಯನ್ನು ಸೇರುವುದು- ಇದುವೇ ಜೀವನದ ಧ್ಯೇಯ. ದೇವರು ಈ ಕಾರ್ಯದಲ್ಲಿ ನೆರವಾಗುತ್ತಾನೆ. 4. ಪುನರುತ್ಥಾನ: ಪ್ರಪಂಚದಲ್ಲಿ ತಾನು ಮಾಡಿದ ತಪ್ಪುಗಳಿಗೆ ಫಲವನ್ನುಣ್ಣುವ ದಿನ – ಪುನರುತ್ಥಾನದ ದಿನ. ಅಂದು ಕರ್ಮಕ್ಕೆ ತಕ್ಕ ಫಲವು ದೊರಕಿಯೇ ದೊರಕುವುದು. 5. ತಕ್ದೀರ್: ಎಂದರೆ ಅಳತೆಮಾಡಿ ಕೊಡುವುದು ಎಂದರ್ಥ. ಎಲ್ಲವೂ ದೇವರಿಂದ ನಿಶ್ಚೈಸಲ್ಪಟ್ಟ ವಿಧಿಯಂತೆ ನಡೆಯುತ್ತದೆ.
ಅಲ್ಲಾಹುವಿನಲ್ಲಿ – ಪುನರುತ್ಥಾನದಲ್ಲಿ ನಂಬಿಕೆ. ಪ್ರಾರ್ಥನೆ – ಉಪವಾಸ – ಮೆಕ್ಕಾ ಯಾತ್ರೆ (ಹಜ್) – ದಾನಧರ್ಮ – ಕೊಟ್ಟ ಮಾತು ನಡೆಸುವುದು – ತಾಳ್ಮೆ ಇತ್ಯಾದಿ ಮೂಲ ತತ್ವಗಳು.
ಸೂಫಿ ಪಂಥ
ಸೂಫಿಗಳೆಂದರೆ ಮುಸ್ಲಿಂ ಸಾಧುಗಳು. ಇವರು ಇಸ್ಲಾಮಿಗೆ ಹೊಂದಿಕೊಂಡಿದ್ದರೂ ತಮ್ಮದೇ ಆದ ತತ್ವವೊಂದನ್ನು ಅನುಷ್ಠಾನಿಸುತ್ತಿದ್ದರು. ಭಾವನಾತೀತನಾದ ದೇವರೊಬ್ಬನೇ ಸತ್ಯ. ಅವನು ನಿರ್ಗುಣನಾಗಿರುತ್ತಾನೆ. ಆದರೆ ಸಗುಣನಾಗಿಯೂ ಕಾಣಿಸಬಲ್ಲನು. ಆಗ ಪ್ರಪಂಚ ಗೋಚರಿಸುತ್ತದೆ. ಪ್ರಪಂಚ ಬರಿಯ ಮಾಯೆ. ನಾವು ಕಾಣುವ ವಸ್ತುಗಳೆಲ್ಲಾ ದೇವರ ನಾನಾ ರೂಪಗಳು, ಎಂದರೆ ಮಾಯೆ. ನಿಜವಾಗಿ ದೇವರಿಗೆ ರೂಪವಿಲ್ಲ. ಇನ್ನು ಕೆಲವು ಸೂಫಿಗಳು ದೇವರು ಸಾಕಾರನೆಂದೂ, ಪ್ರಪಂಚವು ಸತ್ಯವೆಂದೂ ನಂಬಿದ್ದರು.
ದೇವರನ್ನು ಭಕ್ತಿಯಿಂದ ತಿಳಿಯಬಹುದು. ಭಕ್ತಿ ಮಾರ್ಗವು ಸೂಫಿ ಧರ್ಮದ ವಿಶೇಷತೆ. ಸೂಫಿಗಳಲ್ಲಿ ಮೊಯಿನುದ್ದೀನ್ ಚಿಷ್ತಿಯು ಸ್ಥಾಪಿಸಿದ ಚಿಷ್ತಿ ಪಂಥದವರು ಹೆಚ್ಚು ಮಂದಿ ಭಾರತದಲ್ಲಿರುವರು. ಪಾಶ್ಚಾತ್ಯರು ಇಲ್ಲಿಗೆ ಬಂದ ಮೇಲೆ ಸೂಫಿಗಳ ಆಲಸ್ಯ, ಮೂಢ ನಂಬಿಕೆಗಳಿಂದಾಗಿ ಈ ಧರ್ಮವು ಅಳಿಯಿತು.
ನಾಲ್ಕನೆಯ ಭಾಗ: ಸಾಹಿತ್ಯ
ಚಾಣಕ್ಯ (ಮೌರ್ಯರ ಕಾಲ): ಚಾಣಕ್ಯ ಅರ್ಥಾತ್ ಕೌಟಿಲ್ಯನ “ಅರ್ಥಶಾಸ್ತ್ರವು” ಉತ್ತಮ ರಾಜ್ಯಸೂತ್ರ ಗ್ರಂಥವಾಗಿದೆ. ವಿದ್ಯಾಭ್ಯಾಸ ಕ್ರಮದ ಅಸ್ತಿವಾರ ಹಾಕಿದ ಕೃತಿ ಇದು.
ಬಾದರಾಯಣ (ಕ್ರಿ.ಪೂ. 300): ಶಂಕರ, ಮಧ್ವ, ರಾಮಾನುಜರಿಂದ ವ್ಯಾಖ್ಯಾನಿಸಲ್ಪಟ್ಟ “ಬ್ರಹ್ಮಸೂತ್ರವು” ಬಾದರಾಯಣನಿಂದ ಮೌರ್ಯರ ಕಾಲದಲ್ಲಿ ಬರೆಯಲ್ಪಟ್ಟಿತು. ಇದರಲ್ಲಿ ಅವನು ವೈದಿಕ ಧರ್ಮವನ್ನು ಕ್ರಮಗೊಳಿಸಲು ಪ್ರಯತ್ನಿಸಿದ್ದಾನೆ.
ಜೈಮಿನಿ (ಮೌರ್ಯರ ಕಾಲ): ಮೀಮಾಂಸ ಸೂತ್ರವನ್ನು ಬರೆದನು.
ತಿರುವಲ್ಲುವಾರ್ (ಸಂಗಂ ಕಾಲ): ಮೈಲಾಪುರದ ನೇಕಾರ ಕುಟುಂಬದಲ್ಲಿ ಜನಿಸಿದ ತಿರುವಲ್ಲುವಾರ್ 1220 ಪದ್ಯಗಳ “ತರುಕ್ಕುರಲ್ ಎಂಬ ಕಾವ್ಯವನ್ನು ರಚಿಸಿದನು. ಜಾಗತಿಕ ಪ್ರಪಂಚದ ಮಗುವಾದ ಮನುಷ್ಯನ ಜೀವನವು ಧರ್ಮ, ಅರ್ಥ, ಕಾಮಗಳಿಂದ ಕೂಡಿರಬೇಕು. ರಾಜನೀತಿ, ಪ್ರಣಯ, ಕ್ಷಮಾದಾನ ಇತ್ಯಾದಿಗಳು ಇವನ ಕಾವ್ಯವಿಷಯಗಳಾಗಿವೆ. ಇದು ತಮಿಳಿನಲ್ಲಿದೆ.
ಸಿತ್ತಲೆ ಸತ್ತನಾರ್ (ಸಮಗಂ ಕಾಲ): ಸಿತ್ತಲೆ ಸತ್ತನಾರ್ ಎಂಬವನಿಂದ ತಮಿಳಿನಲ್ಲಿ ರಚಿಸಲ್ಪಟ್ಟ “ಮಣಿಮೇಖಲೈ” ಒಂದು ಬೌದ್ಧ ಕಾವ್ಯ. ಹೀನಯಾನ ಬೌದ್ಧ ತತ್ವಗಳು ಇದರಲ್ಲಿ ಚರ್ಚಿಸಲ್ಪಟ್ಟಿವೆ.
ಇಲಂಗೂ ಅಡಿಗಳ್ (ಸಂಗಂ ಕಾಲ): ಚೇರ ಅರಸ ಸೆಂಗುಟ್ಟುವನ್‍ನ ತಮ್ಮ ಇಲಂಗೂ ಅಡಿಗಳ್ “ಸಿಲಪ್ಪದಿಕಾರಂ” ಎಂಬ ತಮಿಳು ಕಥನ ಕಾವ್ಯದ ಕರ್ತೃ. ಜೈನ ಕವಿಯಾದ ಈತನ ಈ ಕಾವ್ಯ ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾಗಿದೆ.
ಭಾಸ (ಕ್ರಿ.ಪೂ. 2ನೇ ಶತಮಾನ): ಭಾಸನು ವೈಷ್ಣವ ಕವಿಯಾಗಿದ್ದು ರಾಮಾಯಣ, ಮಹಾಭಾರತಗಳಿಂದ ವಸ್ತುಗಳನ್ನಾಯ್ದು ಹದಿಮೂರು ಉತ್ತಮ ನಾಟಕಗಳನ್ನು ಸಂಸ್ಕೃತದಲ್ಲಿ ಬರೆದಿರುವನು.
ಭರತ (ಕ್ರಿ.ಪೂ. 2ನೇ ಶತಮಾನ): “ನಾಟ್ಯಶಾಸ್ತ್ರ”ವನ್ನು ಬರೆದನು.
ಕಾಳಿದಾಸ (ಕ್ರಿ.ಶ. 5ನೆ ಶತಮಾನದ ಪೂರ್ವಾರ್ಧ): ಪ್ರಪಂಚದ ನೂರು ಉತ್ತಮ ಸಾಹಿತ್ಯ ಕೃತಿಗಳನ್ನು ತೆಗೆದುಕೊಂಡರೆ, ಅವುಗಳಲ್ಲಿ ಇವನ “ಶಾಕುಂತಲಾ” ನಾಟಕವು ಒಂದಾಗಿರುತ್ತದೆ. “ಶಾಕುಂತಲಾ” ಅಲ್ಲದೆ, “ಮಾಲವಿಕಾಗ್ನಿಮಿತ್ರ” ಮತ್ತು ‘ವಿಕ್ರಮೋರ್ವಶೀಯ” ಎಂಬ ಇನ್ನೆರಡು ನಾಟಕಗಳನ್ನೂ, “ರಘುವಂಶ,’ ‘ಕುಮಾರಸಮಭವ,’ ಎಂಬ ಕಾವ್ಯಗಳನ್ನೂ,“ಮೇಘದೂತ,” “ಋತುಸಂಹಾರ” ಎಂಬ ಖಂಡಕಾವ್ಯಗಳನ್ನೂ ಕಾಳಿದಾಸನು ಬರೆದಿದ್ದಾನೆ. ಇವೆಲ್ಲವೂ ಸಂಸ್ಕೃತದಲ್ಲಿವೆ.
ವಿಶಾಖದತ್ತ (ಕ್ರಿ.ಶ. ಆರನೇ ಶತಮಾನ): ಕೌಟಿಲ್ಯನು ನಾಯಕನಾಗಿರುವ “ಮುದ್ರಾರಾಕ್ಷಸ” ಎಂಬ ನಾಟಕವನ್ನು ಬರೆದನು. ಚಂದ್ರಗುಪ್ತ ಮೌರ್ಯನ ರಾಜ್ಯಸ್ಥಾಪನೆ ಇದರ ಕಥಾವಸ್ತು. ಭಾಷೆ ಸಂಸ್ಕೃತ.
ಶೂದ್ರಕ (ಗುಪ್ತರ ಕಾಲ): ಶೂದ್ರಕನ “ಮೃಚ್ಛಕಟಿಕ” (‘ಮಣ್ಣಿನ ಬಂಡಿ’) ಎಂಬ ನಾಟಕವು ಕಲಾದೃಷ್ಟಿಯಿಂದ ಉತ್ತಮವಾದುದು. ಭಾಷೆ ಸಂಸ್ಕೃತ.
ಭಾರವಿ (ಕ್ರಿ.ಶ. ಆರನೇ ಶತಮಾನ): ಪಂಚ ಮಹಾಕಾವ್ಯಗಳಲ್ಲೊಂದಾದ ‘ಕಿರಾತಾಜುನೀಯ”ವನ್ನು ಭಾರವಿಯು ಬರೆದಿರುವನು. ಇದು ಅರ್ಥಗಾಂಭೀರ್ಯಕ್ಕೆ ಹೆಸರಾಗಿದೆ. ‘ಭಾರವೀರರ್ಥಗೌರವಂ’.
ದಂಡಿ (ಕ್ರಿ.ಶ. ಆರನೇ ಶತಮಾನ): ದಂಡಿಯು “ಕಾವ್ಯಾದರ್ಶ”ವೆಂಬ ಲಕ್ಷಣ ಗ್ರಂಥ, “ದಶಕುಮಾರ ಚರಿತೆ” ಎಂಬ ಗದ್ಯ ಕಾವ್ಯವನ್ನೂ ಬರೆದಿರುವನು.
ವಿಷ್ಣು ಶರ್ಮ (ಗುಪ್ತರ ಕಾಲ): ವಿಷ್ಣು ಶರ್ಮನ “ಪಂಚತಂತ್ರ” ಕಥಾರೂಪದಲ್ಲಿ ಶಿಕ್ಷಣ ಮತ್ತು ನೀತಿಬೋಧೆಯನ್ನು ಮಾಡುತ್ತದೆ. ಅತಿ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡ ಪುಸ್ತಕಗಳಲ್ಲಿ ಇದು ಎರಡನೆಯದು.
ಅಮರಸಿಂಹ (ಗುಪ್ತರ ಕಾಲ): ಅಮರಸಿಂಹನಿಂದ ಪದ್ಯಲಯದಲ್ಲಿ ಕ್ರೋಢೀಕರಿಸಲ್ಪಟ್ಟ “ಅಮರಕೋಶ” ಒಂದು ಸಂಸ್ಕೃತ ನಿಘಂಟು.
ವಾತ್ಸ್ಯಾಯನ (ಕ್ರಿ.ಶ. 300): ವಾತ್ಸ್ಯಾಯನನು “ಕಾಮಸೂತ್ರ”ವನ್ನು ಬರೆದನು.
ಹರ್ಷ (ಕ್ರಿ.ಶ. ಏಳನೇ ಶತಮಾನ): ಸಾಮ್ರಾಟ್ ಹರ್ಷವರ್ಧನನು ಕವಿಗಳಿಗೆ ಆಶ್ರಯದಾತನಾಗಿದ್ದನಲ್ಲದೆ, ತಾನೇ ಸ್ವತಃ “ರತ್ನಾವಳಿ,’ “ನಾಗಾನಂದ,” ಮತ್ತು “ಪ್ರಿಯದರ್ಶಿಕಾ” ಎಂಬ ಮೂರು ನಾಟಕಗಳನ್ನು ಬರೆದನು.
ಭಾರತದ ಉಳಿದೆಡೆ ಶೈವಮತವು ವೈದಿಕ ಮತದೊಂದಿಗೆ ಮಿಲನಗೊಂಡಿದ್ದರೆ, ಕನ್ನಡ ನಾಡಿನಲ್ಲಿ ವೀರಶೈವವೆಂಬ ಹೆಸರಿನಿಂದ ಹುಟ್ಟಿದ ಅದೇ ಮತವು ಬೇರೆಯೇ ಆಗಿ ಬೆಳೆಯಿತು. ಇದರ ಪ್ರವರ್ತಕರು ಬಸವೇಶ್ವರರು. ಜಾತಿ ಮತ ಲಿಂಗ ಭೇದವಿಲ್ಲದೆ, ಸರ್ವಶಕ್ತನಾದ ಶಿವನನ್ನು ಅನನ್ಯ ಭಕ್ತಿಯಿಂದ ಪೂಜಿಸಿ ಶಿವೈಕ್ಯ ಹೊಂದಬಹುದು ಎಂದು ಅವರು ಬೋಧಿಸಿದರು.
ಬಾಣಭಟ್ಟ (ಹರ್ಷನ ಕಾಲ): ಬಾಣನು ಹರ್ಷನ ಆಶ್ರಯಿಯಾಗಿದ್ದು, “ಕಾದಂಬರಿ” ಮತ್ತು “ಹರ್ಷವರಿತೆ” ಎಂಬ ಎರಡು ಗದ್ಯ ಗ್ರಂಥಗಳನ್ನು ಬರೆದಿರುವನು. ಸಂಸ್ಕಸ್ಕೃತ.
ಯಶೋವರ್ಮನ್ (730-770): ಕನೋಜದ ಅರಸ ಯಶೋವರ್ಮನ್ “ರಾಮಭ್ಯುದಯ”ವೆಂಬ ಗ್ರಂಥಗಳನ್ನು ಸಂಸ್ಕೃತದಲ್ಲಿ ಬರೆದನು.
ಭವಭೂತಿ (ಎಂಟನೇ ಶತಮಾನ): ಬೀರಾರಿನ ಭವಭೂತಿಯು “ಮಾಲತೀ ಮಾಧವ,” “ಉತ್ತರ ರಾಮಚರಿತ,” ಮತ್ತು “ಮಹಾವೀರ ಚರಿತೆ”ಗಳೆಂಬ ಮೂರು ಸಂಸ್ಕೃತ ನಾಟಕಗಳನ್ನು ಬರೆದು ವಿಖ್ಯಾತನಾದನು. “ಉತ್ತರ ರಾಮಚರಿತವು” ಪಂಡಿತರ ಮೆಚ್ಚುಗೆಗೆ ಪಾತ್ರವಾಗಿದೆ.
ನೃಪತುಂಗ (814-880): ರಾಷ್ಟ್ರಕೂಟರ ದೊರೆಯಾದ ನೃಪತುಂಗನು “ಕವಿರಾಜಮಾರ್ಗ” ಎಂಬ ಕನ್ನಡ ಲಕ್ಷಣ ಗ್ರಂಥನ್ನು ಬರೆದನು. ಕನ್ನಡದ ಮೊತ್ತ ಮೊದಲ ಗ್ರಂಥವಿದು. ನೃಪತುಂಗನು “ಪ್ರಶ್ನೋತ್ತರ ರತ್ನಮಾಲಾ” ಎಂಬ ಸಂಸ್ಕೃತ ಗ್ರಂಥವನ್ನು ಕೂಡ ಬರೆದನೆಂದು ಹೇಳುತ್ತಾರೆ.
ಮಹೇಂದ್ರವರ್ಮ (600-630): ಪಲ್ಲವ ಅರಸನಾದ ಮಹೇಂದ್ರವರ್ಮನು “ಮತ್ತ ವಿಲಾಸ” ಎಂಬ ಪ್ರಹಸನವೊಂದನ್ನು ಬರೆದನು, ಭಾಷೆ ಸಂಸ್ಕೃತ.
ಬಿಲ್ಹಣ (ಕಲ್ಯಾಣಿಯ ಅರಸ ವಿಕ್ರಮಾದಿತ್ಯನ ಕಾಲ): ಚರಿತ್ರಕಾರನಾದ ಬಿಲ್ಹಣನು ಕಲ್ಯಾಣಿಯ ಅರಸ ಆರನೇ ವಿಕ್ರಮಾದಿತ್ಯನ ಆಶ್ರಯವನ್ನು ಪಡೆದಿದ್ದು, “ವಿಕ್ರಮಾಂಕ ಚರಿತೆ”ಯನ್ನು ಬರೆದನು. ಇದು ತನ್ನ ಸ್ವಾಮಿಯ ಚರಿತ್ರೆಯಾಗಿದೆ. ಸಂಸ್ಕೃತ ಭಾಷೆಯಲ್ಲಿದೆ.
ಭೊಜ ರಾಜ (1010-1055): ಪರಮರರ ಅರಸನಾದ ಬೋಜನು ಅನೇಕ ಸಾಹಿತ್ಯಕೃತಿಗಳನ್ನು ರಚಿಸಿದ್ದನು. ಈತನ ಚಂಪೂ ರಾಮಾಯಣವು ಜನಾದರಣೆಯನ್ನು ಗಳಿಸಿದೆ. “ಸರಸ್ವತೀ ಕಂಠಾಭರಣ” ಮತ್ತು “ಶೃಂಗಾರ ಪ್ರಕಾಶಕ”ಗಳು ಈತನಿಂದ ರಚಿಸಲ್ಪಟ್ಟ ಎರಡು ಲಕ್ಷಣ ಗ್ರಂಥಗಳು. ಸಂಸ್ಕೃತ ಭಾಷೆಯಲ್ಲಿದೆ.
ಕೃಷ್ಣ ಮಿಶ್ರ (ಚಂಡೇಲರ ಕೀರ್ತಿವರ್ಮನ ಕಾಲ): ಸಂಸ್ಕೃತ ಕವಿ ಕೃಷ್ಣ ಮಿಶ್ರನು ಚಂಡೇಲ ಅರಸ ಕೀರ್ತಿವರ್ಮನ ಆಶ್ರಯಿಯಾಗಿದ್ದು, “ಪ್ರಬೋಧ ಚಂದ್ರೋದಯ” ಎಂಬ ನಾಟಕವನ್ನು ಬರೆದಿರುವನು.
ಶ್ರೀಹರ್ಷ (12ನೇ ಶತಮಾನ): ಗಹದ್ವಾಲ ಅರಸ ಜಯಚಂದ್ರನ ಆಶ್ರಯದಲ್ಲಿ ಶ್ರೀಹರ್ಷನು “ನೈಷಧೀಯ” ಮಹಾಕಾವ್ಯವನ್ನು ರಚಿಸಿದನು.
ಪಂಚಮಹಾಕಾವ್ಯಗಳಲ್ಲಿ ಇದು ಒಂದಾಗಿ ಅರ್ಥಗಾಂಭೀರ್ಯಕ್ಕೆ ಹೆಸರಾಗಿದೆ.
ಆದಿಕವಿ ಪಂಪ (941): ಆದಿಕವಿ ಪಂಪನು “ಆದಿಪುರಾಣ”ವೆಂಬ ಜೈನಕಾವ್ಯವನ್ನೂ, “ವಿಕ್ರಮಾಜುನ ವಿಜಯ”ವೆಂಬ ಲೌಕಿಕ ಕಾವ್ಯವನ್ನೂ ಬರೆದನು. ಎರಡೂ ಚಂಪೂ ಕಾವ್ಯಗಳು ಚಾಲುಕ್ಯ ಅರಿಕೇಸರಿಯ ದಂಡನಾಯಕನಾದ ಕನ್ನಡ ಕವಿ ಈತ.
ರನ್ನ (949): ಕನ್ನಡ ಕವಿ ರನ್ನನು “ಅಜಿತಪುರಾಣ” ಮತ್ತು “ಸಾಹಸಭೀಮವಿಜಯ” ಎಂಬ ಚಂಪೂ ಕಾವ್ಯಗಳನ್ನು ಬರೆದನು. ಜೈನ ಬಳೆಗಾರ ಕುಲದವನಾದ ಈತನು ಚಾಲುಕ್ಯ ಅರಸ ತೈಲಪನ ಆಸ್ಥಾನದಲ್ಲಿದ್ದನು.
ನಯಸೇನ (1112): ಜೈನ, ಕನ್ನಡ ಕವಿ ನಯಸೇನನು “ಧರ್ಮಾಮೃತ’ವೆಂಬ ಕಾವ್ಯವನ್ನು ಬರೆದನು.
ರಾಘವಾಂಕ (1165): ಕನ್ನಡಕವಿ ರಾಘವಾಂಕನು ವೀರಶೈವನಾಗಿದ್ದು, “ಹರಿಶ್ಚಂದ್ರಕಾವ್ಯ,” “ಸಿದ್ಧರಾಮ ಪುರಾಣ,” “ಸೋಮನಾಥ ಚರಿತೆ” ಎಂಬ ಕಾವ್ಯಗಳನ್ನು ಬರೆದನು. ಈತನು ಹರಿಹರನ ಸೋದರಳಿಯ.
ಹರಿಹರ (1165): ವೀರಶೈವ ಕನ್ನಡ ಕವಿ ಹರಿಹರನು “ಗಿರಿಜಾ ಕಲ್ಯಾಣ,” “ಪಂಪಾಶತಕ” ಮತ್ತು ಕೆಲವು ಶತಕಗಳನ್ನೂ ಬರೆದಿರುವನು. ಹೊಯ್ಸಳ ನರಸಿಂಹನ ಕರಣಿಕರ ಕುಲತಿಲಕನಾಗಿದ್ದನು.
ನೇಮಿಚಂದ್ರ (1170): ಜೈನ ಕನ್ನಡ ಕವಿ ನೇಮಿಚಂದ್ರನು “ಲೀಲಾವತಿ” ಮತ್ತು “ನೇಮಿನಾಥ ಪುರಾಣ”ಗಳೆಂಬ ಕಾವ್ಯಗಳನ್ನು ಬರೆದಿದ್ದಾನೆ.
ರುದ್ರಭಟ್ಟ (1180): ಇವನು ಬ್ರಾಹ್ಮಣ ಕವಿ. “ಜಗನ್ನಾಥವಿಜಯ”ವನ್ನು ಬರೆದಿದ್ದಾನೆ. ವೀರಬಲ್ಲಾಳನ ಕಾಲದಲ್ಲಿ ಇದ್ದಿರಬಹುದೆಂದೂ, ಕೃತಿಶಾರದಾಭ್ರ ಚಂದ್ರಾತಪ, ಕವಿರಾಜನೆಂಬ ಬಿರುದಾಂಕಿತನೆಂದೂ ಹೇಳುತ್ತಾರೆ.
ಪಾಲ್ಕುರಿಕೆ ಸೋಮನಾಥ (1195): ವೀರಶೈವ ಕವಿ, ಕನ್ನಡದಲ್ಲಿ ಸೋಮೇಶ್ವರ ಶತಕವನ್ನು ಬರೆದನು.
ಜನ್ನ (1209): “ಯಶೋಧರ ಚರಿತೆ,” “ಅನಂತನಾಥ ಪುರಾಣ”ಗಳನ್ನು ಬರೆದ ಜೈನ ಕವಿ. ಹೊಯ್ಸಳರ ಆಶ್ರಯವನ್ನು ಪಡೆದಿದ್ದನು.
ಕುಮಾರವ್ಯಾಸ (15ನೇ ಶತಮಾನ): ಕುಮಾರವ್ಯಾಸನೆಂಬ ಕಾವ್ಯನಾಮದಿಂದ ಪ್ರಸಿದ್ಧನಾದ ಗದುಗಿನ ನಾರಣಪ್ಪ ಬರೆದ ಕರ್ಣಾಟ ಭಾರತ ಕಥಾಮಂಜರಿಯು ಕುಮಾರವ್ಯಾಸ ಭಾರತವೆಂದು ವಿಖ್ಯಾತವಾಗಿದೆ.
ಲಕ್ಷ್ಮೀಶ (1700): ‘ಕರ್ನಾಟಕವಿ ಚೂತವನ ಚೈತ್ರ’ನಾದ ಲಕ್ಷ್ಮೀಶನು ಬ್ರಾಹ್ಮಣ ಕವಿ. ಇವನು “ಜೈಮಿನಿ ಭಾರತ”ವನ್ನು ಕನ್ನಡದಲ್ಲಿ ಬರೆದನು.
ಐದನೆ ಭಾಗ: ಶಿಲ್ಪಕಲೆ
ಮೌರ್ಯರ ಕಾಲ
ಚಂದ್ರಗುಪ್ತನ ಕಾಲದಲ್ಲಿ ಮರದಲ್ಲಿ ಕೆತ್ತನೆ ಕೆಲಸಗಳನ್ನು ಮಾಡುತ್ತಿದ್ದರು. ಅವು ಜೀರ್ಣವಾಗಿ ಹೋದುದರಿಂದ ಇಂದು ಸಿಗುವ ಅವಶೇಷಗಳು ಅಷ್ಟೇನಿಲ್ಲ.
ಬೌದ್ಧ ಕಲೆ. ಈ ಕಲೆಯ ಹುಟ್ಟು ಮಹಾಪರಿನಿಬ್ಬಣ ಸುತ್ತದಲ್ಲಿ ಕಂಡುಬರುತ್ತದೆ. ಇವು ಶಾಂತಿ, ಕರುಣೆ, ದಯೆ ಮತ್ತು ಬುದ್ಧನ ಇತರ ಗುಣಗಳ ಪ್ರತೀಕಗಳಾಗಿವೆ. ಇವುಗಳಲ್ಲಿ ಬುದ್ಧನು ಕಪಿಲವಸ್ತುವನ್ನು ಬಿಡುವುದು – ಮಾರನೊಡನೆ ಹೋರಾಡುವುದು – ಮತ್ತು ಜಾತಕಕತೆಗಳು – ಚಿತ್ರಿತವಾಗಿವೆ.
ಸ್ತಂಭಗಳು. ಅಶೋಕನ ಸ್ತಂಭಗಳು ಏಕಶಿಲೆಗಳಿಂದ ಮಡಿದ್ದು 40-50 ಅಡಿಗಳಷ್ಟು ಎತ್ತರದಲ್ಲಿವೆ. ಇವು ಲೋಹದ ಹೊಳಪನ್ನು ಹೊಂದಿವೆ. ಇಂತಹ ಸ್ತಂಭಗಳು ಸಾರನಾಥ, ಅಲಹಾಬಾದ್, ಕಾಂಚಿ ಮೊದಲಾದೆಡೆಗಳಲ್ಲಿ ಸ್ತಂಭಗಳ ಕೆಳ ಬದಿಗಳಲ್ಲಿ ಕಡೆದು ನಿಲ್ಲಿಸಿದ ಸಿಂಹವೇ ಮೊದಲಾದ ಪ್ರಾಣಿಗಳ ಶಿಲ್ಪಗಳಿವೆ.
ಗ್ರೀಕ್ ಮತ್ತು ಇರಾನೀ ಕಲೆಗಳ ಪ್ರಭಾವ. ಗ್ರೀಕ್, ಇರಾನೀ ದೇಶಗಳೊಂದಿಗೆ ಮೌರ್ಯರು ಇಟ್ಟುಕೊಂಡಿದ್ದ ಸಂಪರ್ಕದ ಪರಿಣಾಮವಾಗಿ, ಭಾರತದಲ್ಲಿ ಆ ದೇಶಗಳ ಕಲೆಗಳು ಪ್ರಭಾವ ಬೀರಿವೆ. ಸ್ತಂಭಗಳ ಮೇಲೆ ಪ್ರಾಣಿಗಳು, ಅವುಗಳನ್ನಲಂಕರಿಸಿದ ರೀತಿಗಳು ಗ್ರೀಕಿನಿಂದ ಬಂದರೆ, ಸ್ತಂಭಗಳ ಘಂಟಾಕಾರದ ತುದಿಗಳು ಇರಾನಿನಿಂದ ಬಂದುವು.
ಸಂಗಂ ಯುಗ
ಸಂಗಂ ಯುಗದಲ್ಲಿ ಅಶೋಕನ ಕಾಲಕ್ಕಿಂತಲೂ ಹೆಚ್ಚಿನ ಪ್ರಗತಿ ಕಲೆಯಲ್ಲುಂಟಾಯಿತು. ಪೂನಾದ ಸಮೀಪ ‘ಬಾಜʼ ಎಂಬಲ್ಲಿ ಕ್ರಿ.ಪೂ. ಇದೇ ಶತಮಾನದಲ್ಲಿ ಒಂದು ‘ವಿಹಾರ’ವನ್ನು ಕಡೆದಿರುವರು. ಈ ಕಲೆಯು ವಾಸ್ತವಿಕತೆಯಿಂದ ಕೂಡಿದೆ. ಮುಂಬಯಿಯ ಕಾರ್ಲೆ ಎಂಬಲ್ಲಿ ಕಲ್ಲಿನಿಂದಲೇ ಮಾಡಿದ ಚೈತ್ಯಾಲಯವು ಉತ್ಕೃಷ್ಟವಾಗಿದೆ. ಜುನಾರ್, ನಾಸಿಕ, ಅಜಂತ ಮುಂತಾದೆಡೆಗಳಲ್ಲಿಯೂ ಉತ್ತಮ ಚೈತ್ಯಾಲಯಗಳಿವೆ. ಕೆತ್ತನೆಯ ಕೆಲಸಗಳಿಂದ ಕೂಡಿದ ಬೃಹತ್ ಸ್ತೂಪದ ಹೆಬ್ಬಾಗಿಲು ಪ್ರಸಿದ್ಧವಾಗಿದೆ. ಅದರಲ್ಲಿ ಬೌದ್ಧ ಜಾತಕ ಕತೆಗಳು ಕೆತ್ತಲ್ಪಟ್ಟಿವೆ. ಬುದ್ಧನ ಜಾತಕ ಕತೆಗಳನ್ನು ಕೆತ್ತಿದ ಚಿತ್ರಗಳಿರುವ ಸಾಂಚಿಯ ಸ್ತೂಪದ ಹೆಬ್ಬಾಗಿಲುಗಳು ಪರಿಪೂರ್ಣವಾಗಿದ್ದು ಸುಂದರವಾಗಿವೆ. ಮಥುರಾದಲ್ಲಿ ಹೀನಯಾನ ಬೌದ್ಧ ನೀತಿಗೆ ವಿರುದ್ಧವಾಗಿ ಸ್ತ್ರೀಯರ ಚಿತ್ರಗಳು ಕೆತ್ತಲ್ಪಟ್ಟಿವೆ. ಗುಂಟೂರಿನ ಸಮೀಪದ ಅಮರಾವತಿಯ ಸ್ತೂಪವು ಶಿಲ್ಪಕಲೆಗೆ ಹೆಸರಾಗಿದ್ದು, ‘ಬುದ್ಧನ ಜನ್ಮ’ವು ಸುಂದರವಾಗಿದೆ. ನಾಗಾರ್ಜುನಕೊಂಡದ ಶಿಲ್ಪವು ಜಾತಕ ಕತೆಗಳನ್ನೊಳಗೊಂಡಿದೆ. ಬುದ್ಧನ ಮೊದಲನೆಯ ಧರ್ಮೋಪದೇಶದ ಚಿತ್ರವು ಅತೀ ಸುಂದರವಿದೆ. ಅಜಂತ ಗುಹೆಗಳ ಚಿತ್ರಕಲೆಗಳು ಬೇರೆ ಬೇರೆ ಕಾಲಕ್ಕೆ ಸೇರಿದುವಾಗಿವೆ. ಇದರ ಮೊದಲ ಭಾಗವು ಶಾತವಾಹನರ ಕಾಲದ್ದು. ಇಲ್ಲಿ ‘ಕುಳಿತುಕೊಂಡಿರುವ ಸ್ತ್ರೀ’ ಮತ್ತು ‘ಆನೆ’ ಆಕರ್ಷಕವಾಗಿವೆ.
ಗುಪ್ತರ ಕಾಲ
ಗುಪ್ತರ ಕಾಲದ ಹೆಚ್ಚಿನ ಕಲೆಗಳೂ ಭಾರತಕ್ಕೆ ದಂಡೆತ್ತಿ ಬಂದ ಹೂಣರು ಮತ್ತು ಮುಸಲ್ಮಾನರಿಂದ ಹಾಳುಗೆಡವಲ್ಪಟ್ಟಿವೆ. ದೇವಘಡ್, ಮಥುರೆಯ ದೇವಾಲಯಗಳು, ಮಥುರೆಯ ಬುದ್ಧನ ಮೂರ್ತಿ, ಸುಲ್ತಾನ್‌ಗಂಜಗಜ್‌ನ ತಾಮ್ರದ ಬುದ್ಧನ ಮೂರ್ತಿಗಳು ಉತ್ತಮ ಶಿಲ್ಪಗಳಾಗಿವೆ. ‘ಶುದ್ಧ ಹಿಂದೂ ಕಲೆಯ ಕಾಲ’ವೆಂದು ಪರಿಗಣಿಸಲ್ಪಟ್ಟ ಅವಧಿ ಇದು. ಗುಪ್ತರ ಈ ಕಾಲದಲ್ಲಿ ಭಾರತದ ವರ್ಣಚಿತ್ರಕಲೆಯು ಸಿಲೋನಿನ ತನಕ ಪಸರಿಸಿತು. ಬಾಘೆ, ಅಜಂತ, ಸಿಲೋನಿನ ಸೈಜಿರಿಯಾಗಳಲ್ಲಿ (ಸಿಂಹಗಿರಿ) ಇದರ ಅವಶೇಷಗಳನ್ನು ಕಾಣಬಹುದು.
ಚಾಲುಕ್ಯರು
ವಾಸ್ತುಶಿಲ್ಪ, ಶಿಲ್ಪ, ವರ್ಣಚಿತ್ರಕಲೆಗಳು ಚಾಲುಕ್ಯರಿಂದ ಪ್ರೋತ್ಸಾಹಿಸಲ್ಪಟ್ಟುವು. ಅಜಂತದ ಚಿತ್ರಕಲೆಗಳಲ್ಲಿ ‘ಬುದ್ಧನ ಸಂದಿಗ್ಧ ಪರಿಸ್ಥಿತಿ,’ ‘ಎರಡನೆಯ ಪುಲಿಕೇಶಿಯು ಪರ್ಶಿಯಾದ ರಾಯಭಾರಿಯನ್ನು ಸ್ವೀಕರಿಸುತ್ತಿರುವುದು’ ತುಂಬ ಮನೋಜ್ಞವಾಗಿವೆ. ಎಲ್ಲೋರದಲ್ಲಿ ಕೈಲಾಸದ ಕೆಳ ನಿಂತ ರಾವಣ, ನರ್ತಿಸುವ ಶಿವ, ನರಸಿಂಹಾವತಾರದ ಮೂರ್ತಿಗಳು ಮನೋಹರವಾಗಿವೆ. ಅಲ್ಲದೆ ಬಾದಾಮಿ, ಐಹೊಳೆಗಳಲ್ಲಿ ಚಾಲುಕ್ಯರು ಕಟ್ಟಿಸಿದ ದೇವಾಲಯಗಳೂ ಇವೆ. ಇವುಗಳಲ್ಲಿ ರಾಮಾಯಣದ ಕಥೆಗಳ ಕೆತ್ತನೆಗಳಿಂದ ಕೂಡಿದ ವಿರೂಪಾಕ್ಷ ದೇವಾಲಯವು ಪ್ರಸಿದ್ಧವಾಗಿದೆ.
ರಾಷ್ಟ್ರಕೂಟರು
ಒಂದನೆ ಕೃಷ್ಣನು ಎಲ್ಲೋರದಲ್ಲಿ ಕಲ್ಲಿನಲ್ಲಿಯೇ ಕಡೆದು ಮಾಡಿದ ಕೈಲಾಸ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯದೊಳಗಿನ ಕೆತ್ತನೆ ಕೆಲಸಗಳೆಲ್ಲ ವಿಚಿತ್ರವಾಗಿವೆ. ಈ ದೇವಾಲಯವು ಭೂಲೋಕದ ವಿಸ್ಮಯಗಳಲ್ಲೊಂದಾಗಿದೆ ಎನ್ನಬಹುದು. ಗಂಗಾವತರಣ ಮತ್ತು ರಾವಣನು ಕೈಲಾಸ ಗಿರಿಯನ್ನು ಕೀಳಲು ಪ್ರಯತ್ನಿಸುವ ಚಿತ್ರಗಳು ಸುಂದರವಾಗಿವೆ. ಎಲಿಫೆಂಟಾದ ಶಿಲ್ಪಗಳು ಕೂಡ ರಾಷ್ಟ್ರಕೂಟರ ಕಾಲದಲ್ಲೇ ನರ್ಮಿತವಾದುವು.
ಪಲ್ಲವರು
ಪಲ್ಲವ ವಂಶದ ಎಲ್ಲಾ ಅರಸರೂ ಕಲಾ ಪ್ರೋತ್ಸಾಹಕರಾಗಿದ್ದು, ದ್ರಾವಿಡ ಶೈಲಿಯನ್ನು ಬೆಂಬಲಿಸಿದವರು. ಶಿಲಾ ವಾಸ್ತು ಕ್ರಮವು ತಮಿಳು ನಾಡಿನಲ್ಲಿ ಪಲ್ಲವರಿಂದ ಮೊದಲಾಯಿತು. ಮಹಾಬಲಿಪುರಂ: ಇದೊಂದು ದೇವಳ ಸಮುಚ್ಚಯ. ಸಮುದ್ರದ ಹತ್ತಿರ ಶಿವ ದೇವಾಲಯವೂ, ಸ್ವಲ್ಪ ದೂರದಲ್ಲಿ ಕಲ್ಲುಗಳಲ್ಲಿ ಕೊರೆದ ಏಳು ಗೋಪುರಗಳಿವೆ, ಮತ್ತು ಐದು ರಥಗಳು (ಯುಧಿಷ್ಟಿರ, ಭೀಮ, ಅರ್ಜುನ, ಸಹದೇವ, ದ್ರೌಪದಿ). ಪಲ್ಲವರ ಹೆಸರನ್ನು ಚಿರಸ್ಥಾಯಿಯಾಗಿ ಇರಿಸಬಲ್ಲ ಕೃತಿಗಳು ಇವು. ಪಲ್ಲವರಂ ಮೊದಲಾದೆಡೆಗಳಲ್ಲಿ ಪಲ್ಲವರು ನಿರ್ಮಿಸಿದ ಗುಹೆಗಳಿವೆ. ಎತ್ತರವಾದ ಬಂಡೆಕಲ್ಲುಗಳಲ್ಲಿ ಅನೆಕ ಚಿತ್ರಗಳು ಕೆತ್ತಲ್ಪಟ್ಟಿವೆ. ಕಾಂಚಿಯ ಗಣೇಶ, ಕೈಲಾಸನಾಥ, ಶಿವ ದೇವಾಲಯಗಳು ಪಲ್ಲವರು ಕಟ್ಟಿಸಿದ ದೇವಾಲಯಗಳಲ್ಲಿ ಪ್ರಮುಖವಾಗಿವೆ.
ಗಾಂಧಾರ ಶಿಲ್ಪ ಕಲೆ
ಕಣಿಷ್ಕನ ಕಾಲದಲ್ಲಿ (ಕುಶಾನ ವಂಶ) ಈ ನೂತನ ಶಿಲ್ಪ ಕಲೆ (ಗಾಂಧಾರಾ / ಕಂದಹಾರ್) ಪ್ರಾರಂಭವಾಯಿತು. ಗ್ರೀಕ್, ರೋಮನ್, ಹಿಂದೂ ಕಲೆಗಳ ಮಿಶ್ರಣವೇ ಈ ಗಾಂಧಾರ ಶಿಲ್ಪ ಕಲೆ. ಬೆಕ್ಟ್ರಿಯಾದ ಶಿಲ್ಪಿಗಳು ಬುದ್ಧನ ಮೂರ್ತಿಗಳನ್ನು, ಜಾತಕ ಕತೆಗಳನ್ನು ಕೆತ್ತುವುದರಲ್ಲಿ ತಮ್ಮ ಕೈವಾಡವನ್ನು ತೋರಿಸಿದರು. ಅನೇಕ ಬುದ್ಧನ ಪ್ರತಿಮೆಗಳು, ಪೇಶಾವರದ ಬೌದ್ಧ ಸ್ತೂಪಗಳು ಗಾಂಧಾರಾ ಶಿಲ್ಪಗಳಾಗಿವೆ. ಆದರೆ ಈ ಶಿಲ್ಪವು ಕ್ರಿ.ಶ. ಮೂರನೆಯ ಶತಮಾನದವರೆಗೆ ಮಾತ್ರ ಉಳಿಯಿತು.
ಹೊಯ್ಸಳರು
ವಿಷ್ಣುವರ್ಧನನಿಂದ ಬೇಲೂರಿನಲ್ಲಿ ನಿರ್ಮಿತವಾದ ಚೆನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ಸೋಮನಾಥಪುರದ ದೇವಸ್ಥಾನಗಳು ದಖ್ಖಣ ಮಾದರಿಯವುಗಳಲ್ಲದೆ, ಅವುಗಳ ಮೇಲೆ ಅದ್ಭುತ ಕೆತ್ತನೆಯ ಕೆಲಸಗಳಿವೆ. ಹೊಯ್ಸಳೇಶ್ವರ ದೇವಸ್ಥಾನದಲ್ಲಿ ರಾಮಾಯಣವು ಕೆತ್ತಲ್ಪಟ್ಟಿದೆ. ಇದರಲ್ಲಿ ಕೆತ್ತಿದ ಆನೆಗಳೇ ಎರಡು ಸಾವಿರಕ್ಕಿಂತ ಹೆಚ್ಚಿವೆ. ಕೆತ್ತನೆ ಕೆಲಸವಿಲ್ಲದ ಒಂದಿಂಚು ಸ್ಥಳ ಕೂಡ ಇದರಲ್ಲಿಲ್ಲ. ಈ ಶಿಲ್ಪಕಲೆಗಳಲ್ಲಿ ದಖ್ಖಣ ಮಾದರಿಯ ಕಲೆಯು ಪರಿಪೂರ್ಣತೆಯನ್ನು ಹೊಂದಿದೆ. ಈ ವಿಚಾರದಲ್ಲಿ ಹೊಯ್ಸಳರಿಗೆ ಜನರು ಋಣಿಗಳಾಗಬೇಕಾಗಿದೆ.
ಮುಸ್ಲಿಂ ವಾಸ್ತುಶಿಲ್ಪ
ಭಾರತದಲ್ಲಿ ಮೊದಲು ಟರ್ಕಿ ವಾಸ್ತುಶಿಲ್ಪ ಕಲೆಯು ಉಪಯೋಗಿಸಲ್ಪಡುತ್ತಿತ್ತು. ಕ್ರಮೇಣ ಅದರೊಂದಿಗೆ ಹಿಂದೂ ಕಲೆಯು ಬೆರೆತುಕೊಂಡಿತು. ಮುಸ್ಲಿಂ ಶಿಲ್ಪಗಳಲ್ಲಿ ಮಸೀದಿಗಳು, ಗೋರಿಗಳು, ಅರಮನೆ, ಕೋಟೆಗಳು ಪ್ರಧಾನವಾಗಿವೆ. ಹಿಂದೂ ವಾಸ್ತುಶಿಲ್ಪಕ್ಕೂ, ಮುಸ್ಲಿಂ ವಾಸ್ತುಶಿಲ್ಪಕ್ಕೂ ಒಂದು ಪ್ರಧಾನ ವ್ಯತ್ಯಾಸವಿದೆ. ಹಿಂದೂ ಶಿಲ್ಪದಲ್ಲಿ ಪ್ರತಿಮೆಗಳು ಬಹಳ. ಆದರೆ ಮುಸ್ಲಿಂ ಶಿಲ್ಪದಲ್ಲಿ ಪ್ರತಿಮೆಗಳ ಸುಳಿವೇ ಇಲ್ಲ. ಬದಲು ಗುಮ್ಮಟ, ಕಮಾನಿನಾಕೃತಿಯ ಬಾಗಿಲುಗಳು, ರೇಖಾಚಿತ್ರಗಳನ್ನು ಬಳಸುತ್ತಾರೆ.
242 ಅಡಿಎತ್ತರದ ಕುತುಬ್ ಮಿನಾರ್ ಭಾರತದಲ್ಲಿ ಮುಸ್ಲಿಮರ ಮೊದಲ ಕಟ್ಟಡ. ಕ್ರಮೇಣ ದಖ್ಖಣದಲ್ಲಿ ಆದಿಲ್‍ಶಾಹಿ ವಂಶದ ಅರಸರು ಕಟ್ಟಿಸಿದ ಗೋಲ್‌ಗುಂಬಝ್, ಹುಮಾಯೂನ್, ಅಕ್ಬರ್, ಶಾಜಹಾನರು ಕಟ್ಟಿಸಿದ ಕಟ್ಟಡಗಳು ಪ್ರಖ್ಯಾತವಾದುವು. ಸಿಕ್ರಿಪಟ್ಟಣ, ಹುಮಾಯೂನನ ಗೋರಿಗಳು ಸುಂದರವಾಗಿವೆ. ಶಾಜಹಾನನು ಕಟ್ಟಿಸಿದ ಜುಮ್ಮಾಮಸೀದಿ, ತಾಜ್‌ಮಹಲ್, ಮೋತಿಮಸೀದಿ ಮತ್ತು ಕೋಟೆಗಳು ಜಗತ್ಪ್ರಸಿದ್ಧವಾಗಿವೆ. ಸಸಾರಂ ಎಂಬಲ್ಲಿ ಒಂದು ಸರೋವರದ ತಡಿಯಲ್ಲಿ ಹಾಲುಗಲ್ಲಿನಿಂದ ರಚಿತವಾದ ಶೇರ್‍ಷಹಾನಗೋರಿ ಸೌಂದರ್ಯದಲ್ಲಿ ತಾಜ್‌ಮಹಲನ್ನು ಸರಿಗಟ್ಟಬಲ್ಲುದು.
ಉಪಸಂಹಾರ
ಭಾರತದ ಪ್ರಾಚೀನ ಸಂಸ್ಕೃತಿಯು ಅಗಾಧವಾಗಿದೆ.. ಲೋಕದ ಎಲ್ಲೆಡೆಗಳಲ್ಲಿಯೂ ಅದು ಪ್ರಸಾರವಾಗಿದೆ. ಲೋಕದಲ್ಲಿ ಮೊತ್ತಮೊದಲು ಸಂಸ್ಕೃತಿಯಲ್ಲಿ ಮುಂದುವರಿದುದು ಭಾರತವಾಗಿದೆ. ಭಾರತದ ಸಂಸ್ಕೃತಿಯನ್ನು ಉಳಿಸಿಕೊಂಡು ಜಗತ್ತಿನಲ್ಲಿ ಭಾರತಕೀರ್ತಿಕೇತನವನ್ನು ಹಾರಿಸಬೇಕಾದುದು ಭಾರತೇಯರಾದ ನಮ್ಮ ಕರ್ತವ್ಯವಾಗಿದೆ. ನಾವು ಮುಂದುವರಿದುದು ಸಾಲದು; ನಮ್ಮ ಪುರಾತನ ಸಂಸ್ಕೃತಿಯು ಇಂದು ಮಾಯವಾಗಿದೆ; ಅದನ್ನು ನಾವು ಬೆಳಗಿಸಬೇಕು; ಪುಷ್ಟೀಕರಿಸಬೇಕು; ತನ್ಮೂಲಕ ಜನಾಂಗದ ಏಳಿಗೆಯನ್ನು ಸಾಧಿಸಬೇಕು; ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಬೇಕು.
ಇತಿ ಶಮ್
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.