ಈ ನಾಚುಕೆಮುಳ್ಳಿನ ಹೂವಿಗೂ ಎಷ್ಟೊಂದು ಸೌಂದರ್ಯ ಎಂದು ನೋಡುತ್ತಿದ್ದೆ. ಇದೇನು ಹೀಗೆ ಇದ್ದಕ್ಕಿದ್ದ ಹಾಗೆ ತಿಂದೇ ಬಿಡುವ ಹಾಗೆ ನೋಡುತ್ತಿದ್ದೀಯಲ್ಲ ಎಂದು ಅದೂ ಗಾಳಿಗೆ ಸಣ್ಣಗೆ ತಲೆ ಅಲ್ಲಾಡಿಸುತ್ತಾ ತನ್ನ ಅಸಮ್ಮತಿಯನ್ನು ತೋರಿಸುತ್ತಿತ್ತು. ಸಣ್ಣದಿರುವಾಗ ಮುಟ್ಟಿದರೆ ಮುನಿಯುತ್ತದೆಯೆಂದು ಮತ್ತೆ ಮತ್ತೆ ಮುಟ್ಟುತ್ತಾ ತುಳಿಯುತ್ತಾ ಗೋಳು ಹೊಯ್ದುಕೊಳ್ಳುತ್ತಿದ್ದ ಅಸಹಾಯಕ ಮುಳ್ಳಿನ ಗಿಡ.
ಆಗ ಇದರ ಹೂವಿನ ಚಂದವನ್ನು ಕಾಣುವ ಸಹನೆಯೆಲ್ಲಿತ್ತು? ಈಗ ಕಾಲನ ಹೊಡೆತಕ್ಕೆ ಸಿಲುಕಿರುವ ಈ ನಡುಗಾಲದಲ್ಲಿ ಈ ನಾಚುಕೆಮುಳ್ಳಿನ ಹೂವಿನ ವಯ್ಯಾರ ಬೇರೆ! ನೋಡುನೋಡುತ್ತಿದ್ದಂತೆ ಪುಟ್ಟ ಚಿಟ್ಟೆಯೊಂದು ಕಾಡುಹೂವೊಂದರ ಮೇಲೆ ಕುಳಿತು ತನ್ನ ಕೆಲಸದಲ್ಲಿ ತೊಡಗಿತು. ನೋಡಿದರೆ ಅದರ ಪಕ್ಕದ ಕಾಡುಹೂವೊಂದರ ಮೇಲೂ ಇನ್ನೊಂದು ಚಿಟ್ಟೆ. ಒಂದು ವೇಳೆ ಎಲ್ಲಾದರೂ ಇಲ್ಲಿ ನಿಲ್ಲದೇ ಮುಂದೆ ಹೋಗಿದಿದ್ದರೆ ಜೀವನಪೂರ್ತಿ ಕಾಣದೇ ಹೋಗುತ್ತಿದ್ದ ಅಪರಿಮಿತ ಚೆಲುವಿನ ಈ ಹೂಗಳು. ಒಂದು ಕಾಡು ಗಿಡವಂತೂ ತನ್ನ ಒಂದೊಂದು ಎಲೆಯನ್ನು ಸುರುಟಿ ಇಟ್ಟುಕೊಂಡು ಮೆಲ್ಲಗೆ ಹೂವಂತೆ ಅರಳಿಸಲು ಕಾಯುತ್ತಿತ್ತು.
ಯಾರೋ ಕಾಡು ಸವರುತ್ತಾ ಕಾಲುದಾರಿ ಮಾಡುತ್ತಾ ಹೊರಟವರು ಅದರ ಆ ಗಿಡದ ಅರ್ದದಷ್ಟನ್ನು ಕತ್ತಿಯಿಂದ ಸವರಿ ಮುಂದೆ ಸಾಗಿದ್ದರು. ಆದರೂ ಹಠಬಿಡದೆ ಉಳಿದಿರುವ ಇನ್ನೊಂದು ಎಲೆಯನ್ನು ಹೂವಂತೆ ಅರಳಿಸಲು ಅದು ಕಷ್ಟಪಡುತ್ತಿರುವಂತೆ ಕಾಣಿಸುತ್ತಿತ್ತು. ಏನಾಗಿ ಹುಟ್ಟಿದರೂ ಪರವಾಗಿಲ್ಲ, ಅದರೆ ಜನರು ಓಡಾಡುವ ದಾರಿಯಲ್ಲಿ ಗಿಡವಾಗಿ ಹುಟ್ಟುವ ಪಾಡು ಯಾರಿಗೂ ಬೇಡ ಮಾರಾಯಾ ಎಂದು ನಾನು ನಡೆಯುತ್ತಿದ್ದೆ.
ನಾನು ಹೊರಟಿದ್ದುದು ಇಲ್ಲಿ ಮಡಿಕೇರಿಯ ಬಳಿಯ ಇಳಿಜಾರೊಂದರಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಹಳೆಯ ಕಾಲದ ಒಬ್ಬರು ಡಾಕ್ಟರನ್ನು ನೋಡಲು. ಸುಮಾರು ನೂರಾಅರವತ್ತೈದು ವರ್ಷಗಳ ಹಿಂದೆ ಸ್ಕಾಟ್ ಲಾಂಡಿನ ಶ್ರೀಮಂತನೊಬ್ಬ ಕಟ್ಟಿಸಿದ ಕಾಫಿ ತೋಟದ ಬಂಗಲೆಯಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಇವರು ಲಂಡನ್ನಿನಲ್ಲಿ ಮನೋಚಿಕಿತ್ಸೆಯನ್ನು ಓದಿದವರು. ಆದರೆ ಈ ಊರಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಕಡಿಮೆಯಿರುವುದರಿಂದ ಹತ್ತಿರವಿರುವ ಸರಕಾರೀ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸಾಮಾನ್ಯ ವೈದ್ಯರಾಗಿ ಕೆಲಸ ಮಾಡಿದವರು. ಇವರಿಗೆ ಈಗ ಹತ್ತಿರ ಹತ್ತಿರ ತೊಂಬತ್ತರ ವಯಸ್ಸು. ಇವರು ಇಲ್ಲಿನ ಬಹಳ ದೊಡ್ಡ ಮನೆತನಕ್ಕೆ ಸೇರಿದವರು. ಇವರ ಅಜ್ಜ ಬ್ರಿಟಿಷರ ಕೊಡಗು ರಾಜ್ಯದಲ್ಲಿ ನ್ಯಾಯಾದೀಶರಾಗಿದ್ದವರು. ಇವರ ತಂದೆಯೂ ಅಷ್ಟೇ ನ್ಯಾಯಾದೀಶರಾಗಿದ್ದವರು. ಆದರೆ ಇವರು ಯಾಕೋ ಲಂಡನ್ನಿಗೆ ತೆರಳಿ ಮನೋಚಿಕಿತ್ಸೆಯನ್ನು ಕಲಿತವರು ಬಡವರಿಗೆ ಔಷದಿ ಕೊಡುತ್ತಾ ಇಲ್ಲಿಯೇ ಉಳಿದರು.
ಹಿಂದೆ ಒಮ್ಮೆ ಇವರ ಬಳಿ ಹಳೆಯ ಕಾಲದ ಕಥೆಗಳನ್ನು ಕೇಳಲು ಹೋದಾಗ ನನ್ನ ಕಥೆಯೆಲ್ಲವೂ ಇದರಲ್ಲೇ ಇದೆ ಎಂದು ಅಚ್ಚುಮಾಡಿದ ಹಾಳೆಯೊಂದನ್ನು ಕೊಟ್ಟಿದ್ದರು. ಮೊದಲಿಗೆ ತೋಟವನ್ನೂ ಬಂಗಲೆಯನ್ನೂ ಕಟ್ಟಿಸಿದ ಸ್ಕಾಟಿಷ್ ಶ್ರೀಮಂತನ ಕಥೆ. ನಂತರ ಬ್ರಿಟಿಷರ ಕಾಲದಲ್ಲಿ ನ್ಯಾಯಾದೀಶನಾಗಿದ್ದ ಅಜ್ಜನ ಕತೆ. ಅವರ ನಂತರ ನ್ಯಾಯಾದೀಶನಾಗಿದ್ದ ಅಪ್ಪನ ಕತೆ. ನಂತರ ತನ್ನದೇ ಚುಟುಕು ಕಥೆ. ಕೆಲವು ಹೆಸರುಗಳು, ಕೆಲವು ಇಸವಿಗಳು. ಏನೂ ಅಂತಹ ವಿಶೇಷಗಳಿಲ್ಲದೆ ಏನೂ ಅತಿರೇಕಗಳಿಲ್ಲದೆ ಇದು ಹೀಗೇ ನಡೆಯಬೇಕಾಗಿತ್ತು ಅದರಂತೆ ನಡೆಯಿತು ಎನ್ನುವಂತಹ ಅಚ್ಚು ಮಾಡಿದ ಹಾಳೆ ಅದು. ಕುತೂಹಲ ತೋರಿಸಿದವರಿಗೆ ಅದನ್ನು ಕೊಟ್ಟು ಸುಮ್ಮನಾಗಿಸುತ್ತಿದ್ದ ಆ ಡಾಕ್ಟರು ನನಗೂ ಅದನ್ನು ಕೊಟ್ಟು ಟೀ ಕುಡಿಸಿ ಕಳಿಸಿದ್ದರು.
ಎರಡನೆಯ ಸಲ ಹೋದಾಗ ಕತ್ತಲಾಗಿತ್ತು. ಹೊರಗಡೆ ಆಕಾಶದಲ್ಲಿ ಕೊಂಚವೇ ಬೆಳಕಿತ್ತು. ಆ ಕೊಂಚ ಬೆಳಕಿನಲ್ಲೇ ಆ ಡಾಕ್ಟರು ತಮ್ಮ ಹಳೆಯ ಬಂಗಲೆಯ ಕದವನ್ನು ತೆರೆದು ಒಳಗೆ ಕರೆದೊಯ್ದಿದ್ದರು. ಆ ಹಳೆಯ ಕಾಲದ ಬ್ರಿಟಿಷ್ ಬಂಗಲೆಯೊಳಗೆ ನೂರಾರು ವರ್ಷಗಳಷ್ಟು ಹಳೆಯ ಬಿಲಿಯರ್ಡ್ಸ್ ಟೇಬಲ್ಲೂ, ಅಷ್ಟೇ ಹಳೆಯ ಕಾಲದ ಪಿಂಗಾಣಿಯ ಕಲಾಕೃತಿಗಳೂ, ಗೋಡೆಗಳ ಮೇಲೆ ಹಳೆಯ ಕಾಲದ ಬ್ರಿಟಿಷ್ ಚಿತ್ರಗಾರರ ತೈಲವರ್ಣದ ಚಿತ್ರಗಳೂ, ರಾಜಾ ರವಿವರ್ಮನ ಮರಿಮೊಮ್ಮಗಳಾದ ರುಕ್ಮಿಣಿವರ್ಮ ರಚಿಸಿದ ಅರೆನಗ್ನ ಕಲಾಕೃತಿಗಳೂ ಆ ಹೊರಟುಹೋಗುತ್ತಿರುವ ಬೆಳಕಿನಲ್ಲಿ ನಿಟ್ಟುಸಿರುಡುತ್ತಿರುವಂತೆ ಕಾಣಿಸುತ್ತಿದ್ದವು.
ಇತಿಹಾಸದ ಭಾರದಲ್ಲಿ ಜಗ್ಗಿ ಹೋಗಿರುವಂತೆ ಕಾಣಿಸುತ್ತಿದ್ದ ಮನೋಚಿಕಿತ್ಸಕ ಡಾಕ್ಟರು ತಮ್ಮ ಕುರಿತು ಏನೂ ಮಾತಾಡದೆ ಆ ಕಲಾಕೃತಿಗಳ ಕಾಲ ಅವುಗಳ ಹಿನ್ನೆಲೆ ಇತ್ಯಾದಿಗಳನ್ನು ವಿವರಿಸುತ್ತಾ ಆ ಬಂಗಲೆಯೊಳಗೆ ನೆರಳಿನಂತೆ ಓಡಾಡುತ್ತಿದ್ದರು. ಅವರು ಮಲಗುತ್ತಿದ್ದ ಮಂಚದ ಬಳಿ ಉರಿಯುತ್ತಿದ್ದ ಅಗ್ಗಿಷ್ಟಿಕೆಯ ಬೆಂಕಿ, ಅವರ ತಲೆದಿಂಬಿನ ಬಳಿ ಬಿದ್ದುಕೊಂಡಿದ್ದ ನೋವು ನಿವಾರಕ ತೈಲ ಮತ್ತು ಅವರ ಎದುರಿಗಿದ್ದ ಹಳೆಯಕಾಲದ ಟೀಪಾಯಿಯ ಮೇಲೆ ಹಣ್ಣಾಗದೆ ಉಳಿದಿದ್ದ ರಸಬಾಳೆಯ ಒಂದು ಚಿಪ್ಪು- ಇವು ಮೂರನ್ನು ಬಿಟ್ಟರೆ ಆ ಬಂಗಲೆಯೊಳಗೆ ಉಳಿದಿದ್ದ ಉಳಿದ ಎಲ್ಲವೂ ಕಾಲದ ಯಾವುದೋ ಒಂದು ಕಪಾಟಿನೊಳಗಡೆ ಸೇರಿಹೋಗಿರುವಂತೆ ಅನಿಸುತ್ತಿತ್ತು.
‘ಡಾಕ್ಟರೇ. ನಿಜವಾಗಿಯೂ ನೀವು ಏನು? ಈಗ ನಿಮಗೆ ಏನನಿಸುತ್ತಿದೆ? ಇಲ್ಲಿ ಈ ಕಾಫಿ ಕಾಡೊಳಗೆ ಒಂಟಿಯಾಗಿ ಇರುವಾಗ ನೀವು ಏನನ್ನು ಯೋಚಿಸುತ್ತಿರುತ್ತೀರಿ ಎಂಬುದನ್ನು ಮುಂದೆ ಯಾವತ್ತಾದರೂ ಬೇಟಿಯಾದಾಗ ಹೇಳಿ. ಇನ್ನೊಮ್ಮೆ ಬರುತ್ತೇನೆ. ನಿಮಗೆ ಕಿರಿಕಿರಿ ಮಾಡುತ್ತಿರುವುದ್ದಕ್ಕೆ ಕ್ಷಮಿಸಿ’ ಎಂದು ಹೊರಟು ಬಂದಿದ್ದೆ. ‘ಹಾಗೇನಿಲ್ಲ, ನಾನೊಬ್ಬ ಪೂರ್ತಿಪ್ರಮಾಣದ ಬೆಳೆಗಾರ ಮತ್ತು ಅಲ್ಪಕಾಲೀನ ಮನೋಚಿಕಿತ್ಸಕ. ಅದಲ್ಲದೆ ಬೇರೇನೂ ಹೇಳಲು ನನ್ನ ಬಳಿ ಇಲ್ಲ. ಆದರೂ ನೀನು ಪ್ರಯತ್ನಿಸು’ ಎಂದು ಅವರು ಬೀಳ್ಕೊಟ್ಟಿದ್ದರು. ನೂರುದಿನಗಳ ಕಾಲ ನಿರಂತರ ಸುರಿದ ಮಳೆಗೆ ಜರ್ಜರಿತವಾಗಿದ್ದ ಕಾಫಿಗಿಡಗಳೂ ನೆರಳಿನಮರಗಳೂ ಹುಲ್ಲುಗರಿಕೆಗಳೂ ನಿದಾನಕ್ಕೆ ಚೇತರಿಸಿಕೊಂಡು ನಸುಬಿಸಿಲಲ್ಲಿ ನಗಲು ನೋಡುತ್ತಿದ್ದವು. ಹಳೆಯಬಂಗಲೆಯ ಒಂಟಿ ಮನೋಚಿಕಿತ್ಸಕ ಡಾಕ್ಟರನ್ನು ಮತ್ತೆ ಕಾಣಲು ಹೊರಟಿದ್ದ ನಾನು ಕಾಡುಹೂಗಳ ಚೆಲುವಿಗೆ ಸಿಲುಕಿ ನೆಲನೋಡಿ ತಗ್ಗಾದ ಹಾದಿಯಲ್ಲಿ ನಡೆಯುತ್ತಿದ್ದೆ. ಎದುರಿನ ತಿರುವಿನಲ್ಲಿ ಒಬ್ಬಾತ ಪಾಶ್ಚಿಮಾತ್ಯ ಪ್ರವಾಸಿ ನನ್ನ ಹಾಗೆಯೇ ಒಂಟಿಯಾಗಿ ನೆಲನೋಡುತ್ತಾ ನಡೆದು ಬರುತ್ತಿದ್ದವನು ಹತ್ತಿರ ಬಂದಾಗ ಮುಗುಳ್ನಕ್ಕ.
ಆತ ಮೂಲತಃ ದಕ್ಷಿಣ ಆಫ್ರಿಕಾದವನು. ಆತನ ಮುತ್ತಾತಂದಿರು ಇನ್ನೂರು ವರ್ಷಗಳ ಹಿಂದೆ ಇಂಗ್ಲೆಂಡಿನಿಂದ ವಲಸೆ ಹೊರಟು ಕೇಪ್ ಟೌನಿನ ಸುತ್ತಮುತ್ತ ಬೇಸಾಯ ಶುರುಮಾಡಿದವರು. ಆಮೇಲೆ ಬೇಸಾಯ ಬೇಸರವಾಗಿ ನಗರದಲ್ಲಿ ಸಣ್ಣಪುಟ್ಟ ಉದ್ಯೋಗಗಳನ್ನು ಕೈಗೊಂಡು ಬದುಕಿದ್ದವರು. ಈತನ ಅಜ್ಜನಿಗೆ ಆಫ್ರಿಕಾದ ವರ್ಣಬೇಧ ಅಸಹ್ಯ ಬರಿಸಿತ್ತಂತೆ. ಆತ ಮಹಾತ್ಮಾ ಗಾಂಧಿಯ ಪರಮ ಅನುಯಾಯಿಯಾಗಿದ್ದನಂತೆ. ಹಾಗಾಗಿ ಈತನಿಗೂ ಭಾರತವೆಂದರೆ ಪ್ರೀತಿ. ವರ್ಷಕ್ಕೆ ಆರು ತಿಂಗಳು ಕಟ್ಟಡ ವಿನ್ಯಾಸಕಾರನಾಗಿ ಆಸ್ಟ್ರೇಲಿಯಾದಲ್ಲಿ ದುಡಿಯುವ ಈತ ಉಳಿದ ಆರು ತಿಂಗಳು ಲೋಕ ಸುತ್ತುತ್ತಿರುತ್ತಾನೆ. ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಈತ ಇಲ್ಲಿರುವ ಜಲಪಾತವೊಂದನ್ನು ನೋಡಲು ಬಂದಿದ್ದ. ಇದೇ ದಾರಿಯಲ್ಲಿ ಈ ಮನೋಚಿಕಿತ್ಸಕ ಡಾಕ್ಟರು ಸಿಕ್ಕಿದ್ದರಂತೆ. ಈತನನ್ನು ಜೀಪಿನಲ್ಲಿ ಹತ್ತಿಸಿಕೊಂಡು ಜಲಪಾತ ತೋರಿಸಿದ್ದರಂತೆ.ತಮ್ಮ ಬಂಗಲೆಗೆ ಕರೆದುಕೊಂಡು ಹೋಗಿ ಟೀ ಕುಡಿಸಿ ತಮ್ಮ ಮನೆತನದ ಕತೆ ಇರುವ ಅಚ್ಚುಮಾಡಿಸಿಟ್ಟಿದ್ದ ಹಾಳೆಯನ್ನು ಕೊಟ್ಟಿದ್ದರಂತೆ.
ಈತನಿಗೂ ಅವರ ಉಳಿದ ಕಥೆಗಳನ್ನು ಕೇಳುವ ಆಸೆ. ಅದಕ್ಕಾಗಿ ಮತ್ತೆ ಬಂದಿದ್ದ. ಡಾಕ್ಟರಿಲ್ಲದ ಬಂಗಲೆಯನ್ನು ದೂರದಿಂದಲೇ ನೋಡಿ ವಾಪಾಸು ನಡೆದು ಬರುತ್ತಿದ್ದ. ‘ಮನೋಚಿಕಿತ್ಸಕ ಡಾಕ್ಟರಿಗೆ ಹುಷಾರಿಲ್ಲ. ಬೆಂಗಳೂರಲ್ಲಿದ್ದಾರೆ ಎಂದು ಗೇಟಿಂದಲೇ ವಾಪಾಸು ಕಳಿಸಿದರು’ ಎಂದು ಆತ ಬೇಸರದಲ್ಲಿ ನಕ್ಕ. ‘ಹಾಗಾದರೆ ನಾನೂ ಹೋಗಿ ಪ್ರಯೋಜನವಿಲ್ಲ. ನಿನ್ನ ಜೊತೆ ವಾಪಾಸು ನಡೆಯುತ್ತೇನೆ’ ಎಂದು ನಾನೂ ವಾಪಾಸು ನಡೆಯತೊಡಗಿದೆ. ‘ನಿಮ್ಮ ಭಾರತದಲ್ಲೂ, ನನ್ನ ದಕ್ಷಿಣ ಆಫ್ರಿಕಾದಲ್ಲೂ ಬ್ರಿಟಿಷರು ಎಷ್ಟೊಂದು ಅವಾಂತರಗಳನ್ನೂ ಏಕಾಂಗಿಗಳನ್ನೂ ಸೃಷ್ಟಿಮಾಡಿರುವರು’ಆತ ಕೊಂಚ ಉದ್ವಿಗ್ನನಾಗಿಯೇ ಅನ್ನುತ್ತಿದ್ದ. ‘ಹೌದು ಮಾರಾಯ ಈ ಕಾಡುಹೂಗಳ ರಾಜ್ಯದಲ್ಲಿ ಇನ್ನೇನೆಲ್ಲ ದುಗುಡಗಳಿವೆಯೋ’ ಎಂದು ನಾನೂ ಅಂದುಕೊಳ್ಳುತ್ತಿದ್ದೆ. ನಾವಿಬ್ಬರೂ ಆ ಸಂಜೆ ಬಹಳ ಹೊತ್ತು ಈ ಮನೋಚಿಕಿತ್ಸಕ ಡಾಕ್ಟರ ಕುರಿತು ಮಾತನಾಡುತ್ತಾ ಕುಳಿತಿದ್ದೆವು. ಯಾವ ಕೋನದಿಂದ ಮಾತನಾಡಿದರೂ ಕೊನೆಗೆ ಈ ಡಾಕ್ಟರು ಬಹಳ ಒಳ್ಳೆಯವರಾಗಿಯೇ ಕಾಣಿಸಿಕೊಳ್ಳುತ್ತಿದ್ದರು.
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.