ಆ ದೊಡ್ಡ ಹೆಣ್ಣಾಮೆ ಬಹಳಷ್ಟು ಲೆಕ್ಕಾಚಾರ ಹಾಕಿ ಸಾವಿರಾರು ಮೈಲು ದೂರದಿಂದ ಈಜಿ ಬಂದಿರಬಹುದು. ಭೂಮಿಯ ಅಯಸ್ಕಾಂತೀಯ ಗುಣಗಳು ಈ ಹೆಣ್ಣಿಗೆ ತವರಿನ ದಾರಿಯನ್ನು ತೋರಿಸಿರಬಹುದು. ಕಡಲಿನ ಒಳ ಅಲೆಗಳ ಹರಿವು, ಆಕಾಶದ ತಾರೆಗಳ ಲೆಕ್ಕಾಚಾರ, ಕಡಲ ಭರತ ಇಳಿತಗಳ ಪಂಚಾಂಗ, ಹೊಟ್ಟೆಯೊಳಗಿನ ಮೊಟ್ಟೆಗಳ ಜಾತಕದ ಗೋಚಾರಫಲ ಎಲ್ಲವೂ ಇದ್ದಿರಬಹುದು. ಆದರೆ ಎಲ್ಲೋ ಲೆಕ್ಕ ತಪ್ಪಿದಂತೆ ಇಳಿ ಹಗಲ ಹೊತ್ತೇ ಸೂರ್ಯ ಮುಳುಗುವ ಮೊದಲೇ ಈ ಆಮೆ ಪ್ರಸವ ಮುಗಿಸಿ ವಾಪಾಸು ಹೋಗುವ ಆತುರದಲ್ಲಿ ಇದ್ದ ಹಾಗಿತ್ತು.
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಕಥಾನಕದ ಹತ್ತನೆಯ ಕಂತು.
ಇದನ್ನು ಬರೆಯುವ ಹೊತ್ತಲ್ಲಿ ಇದು ನಡೆದಾಗ ನಿಜಕ್ಕೂ ನಾನು ಅಲ್ಲಿದ್ದೆ ಎಂದು ನಂಬಲಾಗುತ್ತಿಲ್ಲ. ಕಣ್ಣಾರೆ ಕಂಡಿದ್ದರೂ ಕನಸಿನಲ್ಲಿ ನೋಡಿದಂತಿದೆ. ನಾನು ನೋಡಿದ್ದು ನಿಜವಿರಬಹುದೇ ಎಂದು ಇದೀಗ ಸ್ವಲ್ಪ ಹೊತ್ತಿಗೆ ಮೊದಲು ಮತ್ತೆ ಅಲ್ಲಿಗೆ ಹೋಗಿ ನೋಡಿ ಬಂದೆ. ನಾನು ನೋಡಿದ್ದು ನಿಜವಾಗಿಯೂ ಸತ್ಯ ಅನ್ನುವುದಕ್ಕೆ ಸಾಕ್ಷಿಯಾಗಿ ಆ ಜಾಗದಲ್ಲಿ ನಾಲ್ಕಾರು ಕಲ್ಲುಗಳನ್ನಿಟ್ಟು ಗುರುತು ಮಾಡಿದ್ದರು. ನಾಳೆ ಬಹುಶಃ ಈ ಜಾಗವನ್ನು ಸುರಕ್ಷಿತ ಪ್ರದೇಶ ಎಂದು ಘೋಷಿಸಬಹುದು. ಅದಾಗಿ ಇನ್ನು ಸುಮಾರು ಎರಡೂವರೆ ತಿಂಗಳು ಕಳೆದರೆ ಅಂದರೆ ಒಂದು ದೊಡ್ಡ ಮಳೆಗಾಲದ ನಡುವೆ ಒಂದು ಇರುಳು ಈ ಮರಳು ಗುಂಡಿಯನ್ನು ತಮ್ಮ ಕೋಮಲ ಕೈಗಳಿಂದ ಮೆಲ್ಲಗೆ ಬಗೆದು ನೂರಾರು ಹಸಿರು ಕಡಲಾಮೆ ಮರಿಗಳು ಸಾಲುಸಾಲಾಗಿ ಹೊರಬರುತ್ತವೆ. ಆಗ ಸುಂಯ್ಯೋ ಹುಯ್ಯುವ ಮಳೆಯಲ್ಲಿ, ಗಾಳಿಯ ಅಬ್ಬರದಲ್ಲಿ ಮೋಡಗಳ ನಡುವಿನ ಚಂದ್ರ, ನಕ್ಷತ್ರಗಳ ಆಕಾಶದ ಬೆಳಕಲ್ಲಿ ಕಡಲ ನೀರು ಹೊಳೆಯುತ್ತವೆ. ಆ ಬೆಳಕನ್ನು ಗುರಿಯಾಗಿಟ್ಟುಕೊಂಡ ಈ ಮರಿಗಳು ಕಡಲ ನೀರಿಗೆ ಇಳಿದು ಮಾಯವಾಗುತ್ತವೆ.
ಆಗ ಪುಣ್ಯವಿದ್ದರೆ ಇನ್ನೂ ಇಲ್ಲಿದ್ದರೆ, ಬದುಕಿದ್ದರೆ ನಾನೂ ಅದನ್ನು ನೋಡುತ್ತೇನೆ ಎಂದುಕೊಂಡು ಆ ಜಾಗದ ಒಂದೇ ಒಂದು ಫೋಟೋ ತೆಗೆದು ಹಿಂತಿರುಗಿದ್ದೇನೆ.
ನಿನ್ನೆ ಸಂಜೆ ಕೊರೋನಾ ಕರ್ಫ್ಯೂ ಮತ್ತು ಉಪವಾಸ ವ್ರತ ಮುಗಿಸುವ ಹೊತ್ತು. ಉಳಿದ ದಿನಗಳಲ್ಲಾದರೆ ದ್ವೀಪದ ಈ ನಿರ್ಜನ ಮೂಲೆಯಲ್ಲಿ ಒಂದಿಬ್ಬರು ಮೀನುಗಾರರಾದರೂ ಗಾಳ ಹಿಡಿದುಕೊಂಡು ನಿಂತಿರುತ್ತಾರೆ. ಒಂದಿಷ್ಟು ಸಂಸಾರಗಳೂ, ಒಂದಿಬ್ಬರು ಪ್ರೇಮಿಗಳೂ ಸೂರ್ಯ ಮುಳುಗುವುದನ್ನು ನೋಡುತ್ತಾ ಮರಳಲ್ಲಿ ಕುಳಿತಿರುತ್ತಾರೆ. ಉಪವಾಸದ ದಿನಗಳ ಸಂಜೆಯಲ್ಲಿ ಇಷ್ಟು ದೂರದ ಮೂಲೆಗೆ ಯಾರೂ ಬರುವವರಿಲ್ಲ. ಅದರ ಜೊತೆ ಕರ್ಫ್ಯೂ ಕಾರಣ ಒಂದು ನರಪಿಳ್ಳೆಯೂ ಸುಳಿಯುವ ಹಾಗಿಲ್ಲ. ನಾನಾದರೋ ಕರ್ತವ್ಯ ನಿಮಿತ್ತ ಓಡಾಡಬಹುದು. ಹಾಗೆ ಕರ್ತವ್ಯ ಮುಗಿಸಿ ಖಿನ್ನನಾಗಿ ಕಡಲಿನ ಈ ಮೂಲೆಗೆ ಬಂದು ಕುಳಿತಿದ್ದೆ. ಒಂದು ಜೋಡಿ ಕ್ರೌಂಚ ಪಕ್ಷಿಗಳ ಹೊರತಾಗಿ ಉಳಿದೆಲ್ಲ ಕಡಲ ಹಕ್ಕಿಗಳೂ ವಾಪಾಸಾಗಿದ್ದವು. ಇನ್ನು ಏನಿದ್ದರೂ ಕಡಲ ಮರಳಲ್ಲಿ ಏಡಿಗಳು ಮತ್ತು ಶಂಕುಹುಳುಗಳ ಸಾಮ್ರಾಜ್ಯ. ಆ ಕ್ರೌಂಚಪಕ್ಷಿಗಳಾದರೋ ಹಾಳಾಗಿ ಬಿದ್ದಿದ್ದ ಹಳೆಯ ಹಡಗೊಂದರ ಮುಂಭಾಗದ ತುದಿಯೇರಿ ನಿಂತು ತಾವೇ ಅದನ್ನು ನಡೆಸುತ್ತಿರುವ ಕಪ್ತಾನರೇನೂ ಎನ್ನುವ ಹಾಗೆ ಹುಸಿ ಬಿಂಕದಲ್ಲಿ ಕುಳಿತಿದ್ದೆವು.
ಬಹುಶಃ ಹಕ್ಕಿಗಳೂ ಮನುಷ್ಯರ ಹಾಗೆ ಭ್ರಮಾಧೀನರಾಗುವ ಕಾಲ ಬಂದಿರಬಹುದು ಎಂದು ಅತ್ತ ಕಡೆ ಕ್ಯಾಮರಾ ಹೊರಳಿಸುತ್ತಿದ್ದಂತೆ ಪಕ್ಕದಲ್ಲೇ ಮರಳು ಬಗೆಯುವ ಸದ್ದು ಕೇಳಿಸುತ್ತಿತ್ತು.
ನೋಡಿದರೆ ಅದೊಂದು ದೊಡ್ಡ ಹಸಿರು ಹೆಣ್ಣು ಕಡಲಾಮೆ. ಮೊಟ್ಟೆ ಹಾಕಲು ಅದಾಗಲೇ ಗುಳಿತೋಡಿ ಬಹುತೇಕ ಮೊಟ್ಟೆಗಳನ್ನು ಇಟ್ಟು ಮುಗಿಸಿ ಇನ್ನೂ ಉಳಿದಿರುವ ಮೊಟ್ಟೆಗಳನ್ನು ಇಡುವ ಪ್ರಸವ ವೇದನೆ ಅನುಭವಿಸುತ್ತಾ ಅದೇ ನೋವಿನ ಕಣ್ಣಲ್ಲಿ ಅಪರಿಚಿತನೂ ಆಗಂತುಕನೂ ಆದ ನನ್ನನ್ನು ಭಯದಿಂದಲೂ, ಅನುಮಾನದಿಂದಲೂ ನೋಡುತ್ತಿತ್ತು. ಹಸಿರು ಕಡಲಾಮೆ ಅಂದರೆ ಅದರ ಬಣ್ಣ ಹಸುರಾಗಿದೆ ಎಂಬ ಅರ್ಥವಲ್ಲ. ಅದರ ದೇಹದಲ್ಲಿರುವ ಕೊಬ್ಬಿನ ಬಣ್ಣ ಹಸಿರು ಅದಕ್ಕೆ. ಅದರ ದೇಹದ ಕೊಬ್ಬಿನ ಬಣ್ಣ ಹಸಿರು ಯಾಕೆಂದರೆ ಅದು ತಿನ್ನುವುದು ಕಡಲ ತಳದಲ್ಲಿರುವ ಹಸಿರು ಸಸ್ಯ ಮತ್ತು ಪಾಚಿಗಳನ್ನು. ಈ ಹಸಿರು ಕೊಬ್ಬಿಗೆ ಒಂದು ಕಾಲದಲ್ಲಿ ಬಹಳ ಬೇಡಿಕೆ ಇತ್ತು. ಮನುಷ್ಯರು ಮೊಟ್ಟೆಹಾಕಲು ತೀರಕ್ಕೆ ಬರುವ ಈ ಬೃಹತ್ ಹೆಣ್ಣು ಕಡಲಾಮೆಗಳನ್ನು ಕೊಂದು ಅದರ ಕೊಬ್ಬನ್ನು ನಾಡ ದೋಣಿಗಳಿಗೆ ಬಣ್ಣ ಬಳಿಯಲು ಬಳಸುತ್ತಿದ್ದರು. ಹತ್ತಾರು ವರ್ಷಗಳ ಕಾಲ ನೀರಲ್ಲಿ ಲಂಗರು ಹಾಕಿ ನಿಲ್ಲಿಸಿದರೂ ಈ ಹಸಿರು ಬಣ್ಣದಿಂದಾಗಿ ದೋಣಿಗಳು ಹಾಳಾಗುತ್ತಿರಲಿಲ್ಲ. ಮೊಟ್ಟೆ ಇಡಲು ತೀರಕ್ಕೆ ಬರುತ್ತಿದ್ದ ಈ ಹೆಣ್ಣು ಕಡಲಾಮೆಗಳನ್ನು ಹಿಡಿದು ಅದರ ಮಾಂಸವನ್ನೂ ಮೊಟ್ಟೆಗಳನ್ನೂ ಉಕ್ಕಿನ ಕವಚದ ಹಾಗಿರುವ ಅದರ ಚಿಪ್ಪನ್ನೂ ಬಳಸುತ್ತಿದ್ದರು.
ಈಗೀಗ ಈ ಕಡಲಾಮೆಗಳು ಮನುಷ್ಯ ವಾಸಿಸುವ ತೀರಗಳಿಗೆ ಬರಲು ಹೆದರುತ್ತವೆ. ಆದರೆ ಅವುಗಳ ಕುಲಾಚಾರ ಹೇಗಿದೆ ಅಂದರೆ ಗರ್ಭ ಧರಿಸಿದ ಹೆಣ್ಣು ಕಡಲಾಮೆ ಮೊಟ್ಟೆ ಇಡಲು ಪುನಃ ತಾನು ಮೊಟ್ಟೆಯೊಡೆದು ಹೊರಬಂದ ಕಡಲ ತೀರಕ್ಕೇ ಬರಬೇಕಾಗುತ್ತದೆ. ಇದು ಅವುಗಳ ವಂಶವಾಹಿನಿಯಲ್ಲೇ ಬರೆದಿಟ್ಟಿರುವ ಕುಲಾಚಾರ! ಅದೆಷ್ಟು ಸಾವಿರ ಹರದಾರಿ ಸಾಗರದೊಳಗೆ ಈಜಿ ದೂರಹೋಗಿದ್ದರೂ ಪ್ರಸವ ವೇದನೆಯ ಹೊತ್ತಲ್ಲಿ ಮರಳಿ ತವರಿಗೆ ಬರಬೇಕಾಗುತ್ತದೆ. ಅದು ಅದರ ಕುಲದ ಕರ್ಮ. ಮೊಟ್ಟೆ ಇಡಲು ಹೆಣ್ಣಾಮೆ ತವರಿಗೆ ಮರಳಲೇ ಬೇಕು. ಗಂಡು ಆಮೆಗೆ ಗಂಡು ಮನುಷ್ಯರ ಹಾಗೆ ಅಂತಹ ಗಹನ ಜೈವಿಕ ಕರ್ಮಗಳೇನೂ ಇಲ್ಲ. ಅದೆಷ್ಟು ಕ್ಷಿಪ್ರವಾಗಿ ಸಾಧ್ಯವೋ ಅಷ್ಟು ಕ್ಷಿಪ್ರವಾಗಿ ಹೆಣ್ಣಾಮೆಯನ್ನು ಗರ್ಭವತಿಯಾಗಿ ಮಾಡಿದರೆ ಸಾಕು. ಆ ಮೇಲೆ ಹಾಯಾಗಿ ಕಡಲೊಳಗೆ ಓಡಾಡಿಕೊಂಡಿರುತ್ತವೆ. ಈ ಬೃಹತ್ ಪ್ರಸವ ವೇದನೆಯ ಸಂಕಟಗಳು ಕಳೆದು ಮತ್ತೆ ಗರ್ಭವತಿಯಾಗಲು ಈ ಹೆಣ್ಣಾಮೆಗೆ ಇನ್ನೂ ಎರಡು ವಸಂತಗಳಾದರೂ ಬೇಕು.
ಆದರೆ ಗಂಡಾಮೆಗಳಿಗೆ ಕಾಲದ ಹಂಗೂ ಇಲ್ಲ.!
ಆ ಹೆಣ್ಣು ಹಸಿರು ಕಡಲಾಮೆ ನನ್ನ ಕಡೆಗೆ ತನ್ನ ಕುಂಡೆ ತಿರುಗಿಸಿ ತನ್ನ ಹಿಂಭಾಗದ ನಖವಿರುವ ಪಾದಗಳಿಂದ ಒದ್ದೆ ಮರಳನ್ನು ಬಗೆದು ಗುಳಿ ತೋಡಿ ಮೊಟ್ಟೆಗಳನ್ನಿಟ್ಟು ಮತ್ತೆ ಆ ಗುಳಿಯನ್ನು ಮುಚ್ಚುತಿತ್ತು. ತಾಯ್ತನದ ನೋವಲ್ಲಿದ್ದ ಆ ಹೆಣ್ಣಾಮೆ ನಡುನಡುವೆ ಒಂಚೂರು ತಲೆಯೆತ್ತಿ ನನ್ನ ನೋಡಿ ಮತ್ತೆ ಮುಂದುವರಿಸುತ್ತಿತ್ತು. ಎಷ್ಟು ಅಸಹಾಯಕಳಾದ ತಾಯಿ! ಸಾಧಾರಣವಾಗಿ ಇವುಗಳು ತೀರಕ್ಕೆ ಬರುವುದು ಯಾರೂ ಇಲ್ಲದ ಇರುಳುಗಳಲ್ಲಿ. ಯಾರೂ ಕಾಣದ ಹಾಗೆ ಕಡಲ ಅಲೆ ತಲುಪುವಷ್ಟು ತೀರದಲ್ಲಿ ಗುಳಿತೋಡಿ, ಮೊಟ್ಟೆ ಇಟ್ಟು, ಮೊದಲಿದ್ದ ಹಾಗೆಯೇ ಗುಳಿಮುಚ್ಚಿ, ಅಲ್ಲೇನೂ ನಡೆದೇ ಇಲ್ಲವೇನೋ ಎಂಬಂತೆ ಯಾರೂ ಕಾಪಾಡದ ತನ್ನ ಅಸಹಾಯಕ ಮೊಟ್ಟೆಗಳನ್ನು ಅಲ್ಲೇ ಬಿಟ್ಟು ವಾಪಾಸಾಗಬೇಕಿತ್ತು. ಹೀಗೆ ವಾಪಾಸಾಗುವುದು ಹೆಣ್ಣು ಜೀವಿಯೊಂದರ ಇರುವ ಅಲ್ಪಸ್ವಲ್ಪ ಸ್ವಾತಂತ್ರ್ಯದ ಸಂಕೇತ ಎಂದು ನೀವು ಹೇಳಬಹುದು. ಆದರೆ ಯೋಚಿಸಿ ನೋಡಿ. ತಾನು ಇಡುವ ನೂರಾರು ಮೊಟ್ಟೆಗಳಿಂದ ಹೊರಬರುವ ಮರಿಗಳಲ್ಲಿ ಎಷ್ಟು ಉಳಿದವು. ಎಷ್ಟು ಆಕಾಶದಲ್ಲಿ ಹಾರುವ ಹಕ್ಕಿಗಳಿಗೆ, ಎಷ್ಟು ಕಡಲಲ್ಲಿ ಕಾಯುವ ಮೀನುಗಳಿಗೆ, ಎಷ್ಟು ಮನುಷ್ಯರ ಲಾಲಸೆಗಳಿಗೆ ಆಹಾರವಾದವು ಎಂಬ ಅರಿವೇ ಇಲ್ಲದ ತಾಯೊಬ್ಬಳ ಸ್ವಾತಂತ್ರ್ಯ! ಆದರೆ ಪುರುಷನಾಗಿದ್ದರೆ ತವರ ಸುಖವೂ ಇಲ್ಲ.
ಆ ದೊಡ್ಡ ಹೆಣ್ಣಾಮೆ ಬಹಳಷ್ಟು ಲೆಕ್ಕಾಚಾರ ಹಾಕಿ ಸಾವಿರಾರು ಮೈಲು ದೂರದಿಂದ ಈಜಿ ಬಂದಿರಬಹುದು. ಭೂಮಿಯ ಅಯಸ್ಕಾಂತೀಯ ಗುಣಗಳು ಈ ಹೆಣ್ಣಿಗೆ ತವರಿನ ದಾರಿಯನ್ನು ತೋರಿಸಿರಬಹುದು. ಕಡಲಿನ ಒಳ ಅಲೆಗಳ ಹರಿವು, ಆಕಾಶದ ತಾರೆಗಳ ಲೆಕ್ಕಾಚಾರ, ಕಡಲ ಭರತ ಇಳಿತಗಳ ಪಂಚಾಂಗ, ಹೊಟ್ಟೆಯೊಳಗಿನ ಮೊಟ್ಟೆಗಳ ಜಾತಕದ ಗೋಚಾರ ಫಲ ಎಲ್ಲವೂ ಇದ್ದಿರಬಹುದು. ಆದರೆ ಎಲ್ಲೋ ಲೆಕ್ಕ ತಪ್ಪಿದಂತೆ ಇಳಿ ಹಗಲ ಹೊತ್ತೇ ಸೂರ್ಯ ಮುಳುಗುವ ಮೊದಲೇ ಈ ಆಮೆ ಪ್ರಸವ ಮುಗಿಸಿ ವಾಪಾಸು ಹೋಗುವ ಆತುರದಲ್ಲಿ ಇದ್ದ ಹಾಗಿತ್ತು. ಹಾಗೆ ನೋಡಿದರೆ ನನ್ನ ಕಣ್ಣೆದುರೇ ನಡೆಯುತ್ತಿರುವ ಆಳಸಾಗರ ಜೀವಲೋಕದ ಒಂದು ಅನೂಹ್ಯ ಘಟನೆ. ಆದರೆ ಆ ಹೆಣ್ಣಾಮೆಗಾದರೋ ಅದೊಂದು ನೀಗಿಕೊಳ್ಳಲೇಬೇಕಾದ ಜೈವಿಕ ಕರ್ಮ. ಬಹುಶಃ ಇದರದ್ದು ನಾಲ್ಕನೆಯದೋ ಆರನೆಯದೋ ಪ್ರಸವ ಇರಬಹುದು. ಆರನೆಯ ಬಾರಿಗೂ ಅದೇ ತೀರಕ್ಕೆ ಮರಳಬೇಕಾದ ಪ್ರಾರಬ್ಧ ಕರ್ಮ. ಒಂದು ಸಲ ಮುಗಿದರೆ ಸಾಕು ಅಂತಲೂ ಅನ್ನಿಸಿರಬಹುದು.
ಹೀಗೆ ಏನೇನೋ ಅಂದುಕೊಳ್ಳುತ್ತಾ ಅದರ ಖಾಸಗೀತನಕ್ಕೆ ತೊಂದರೆಯಾಗದ ಹಾಗೆ ಫೋಟೋ ತೆಗೆಯುತ್ತಿದ್ದೆ.
ಆ ಮಹಾತಾಯಿ ಒಬ್ಬಳು ಶಿಸ್ತುಗಾರ್ತಿ ಮನೆವಾರ್ತೆಯಾಕೆಯ ಹಾಗೆ ಗುಳಿಯನ್ನು ನೀಟಾಗಿ ಮುಗಿಸಿ, ಮೊದಲಿದ್ದ ಹಾಗೆಯೇ ಹುಲ್ಲು ಕಸ ಕಡ್ಡಿಗಳನ್ನು ಸಾಧ್ಯವಾದಷ್ಟು ಮೊದಲಿದ್ದ ಹಾಗೆಯೇ ಮುಚ್ಚಿ, ತಲೆಯೆತ್ತಿ ನನ್ನನೊಮ್ಮೆ ದೀರ್ಘವಾಗಿ ನೋಡಿ ಮೆಲ್ಲನೆ ಕಡಲಕಡೆ ನಡೆಯತೊಡಗಿತು. ಬವಳಿ ಸುಸ್ತಾಗಿದ್ದ ತಾಯಿ. ಅದಕ್ಕೆ ಬಹುಶಃ ಮನುಷ್ಯ ಲೋಕದ ಜೈವಿಕ ಕರ್ಮಗಳ ಕುರಿತ ಅರಿವು ಇದ್ದ ಹಾಗಿತ್ತು.
‘ಗಂಡಸು ನೆಲದಲ್ಲಿದರೂ ಗಂಡಸೇ, ಕಡಲೊಳಗಿದ್ದರೂ ಗಂಡಸೇ, ನಿಮ್ಮದು ಒಂದು ಜನ್ಮವಾ’ ಎಂದು ಬೈದ ಹಾಗಿತ್ತು.
‘ಗಂಡಸರ ಪ್ರಸವ ವೇದನೆಗಳು ನಿನಗೇನು ಗೊತ್ತು ತಾಯೀ’ ಎಂದು ಅದನ್ನು ಅಲೆಗಳ ತನಕ ಬೀಳುಕೊಂಡೆ.
ಅದು ಕಡಲ ನೀರು ಮೈಗೆ ಸೋಕುತ್ತಿದ್ದಂತೆಯೇ ತನ್ನ ಆಜಾನುಬಾಹುಗಳನ್ನು ಬೀಸುತ್ತಾ ಕಡಲಲ್ಲಿ ಲೀನವಾಯಿತು. ಅದು ಓಡುತ್ತಿದ್ದ ವೇಗ ನೋಡಿದರೆ ಅಲ್ಲೇ ಎಲ್ಲೋ ಒಂದು ಕಡೆ ಅದರ ಪ್ರಿಯಕರ ಗಂಡಾಮೆ ಸಾಂತ್ವನ ಹೇಳಲು ಕಾಯುತ್ತಿದ್ದ ಹಾಗೆ ಇತ್ತು.
ನನಗೆ ನಿಜಕ್ಕೂ ಸಂಕಟವಾಗಿದ್ದು ಆ ಹೆಣ್ಣಾಮೆ ತೀರದಿಂದ ವಾಪಾಸು ತೆರಳುವಾಗ ನಡುವೆ ಇದ್ದ ಬೆಣಚು ಕಲ್ಲಿನ ಪುಟ್ಟ ಬಂಡೆಗಳನ್ನು ದಾಟಲು ಪಡುತ್ತಿದ್ದ ಕಷ್ಟ ಮತ್ತು ಹಾಗೆ ದಾಟುತ್ತಿದ್ದಾಗ ಅದರ ಕಣ್ಣುಗಳಲ್ಲಿ ಕಾಣುತ್ತಿದ್ದ ಅಸಹಾಯಕತೆ.
ನನಗೆ ಯಾಕೋ ಈಗ ಇದನ್ನು ಬರೆಯುತ್ತಾ ಇನ್ನಷ್ಟು ತಳಮಳವಾಗುತ್ತಿದೆ.
ಈ ಹೆಣ್ಣು ಕಡಲಾಮೆಯ ಫೋಟೋವನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ.
ಬಹುಶಃ ಅದರ ಕಣ್ಣುಗಳು ಘಾಸಿಗೊಂಡಿದೆ ಮತ್ತು ಅದಕ್ಕೆ ಏನೂ ಕಾಣಿಸುತ್ತಿರಲಿಲ್ಲ ಅನಿಸುತ್ತಿದೆ. ಬಹುಶಃ ಅದಕ್ಕೇ ಅದು ಸಮಯ ತಪ್ಪಿ ಅಲ್ಲಿಗೆ ಬಂದಿದೆ ಎಂದೂ ಅನಿಸುತ್ತಿದೆ. ಬಹುಶಃ ಅದು ನಿಜವಿರಲಿಕ್ಕಿಲ್ಲ. ಇದೂ ಕೇವಲ ಒಂದು ಭಯವಾಗಿರಬಹುದು ಅಂತಲೂ ಅನಿಸುತ್ತಿದೆ.
ಯಾಕೋ ಇವತ್ತು ಇದನ್ನು ಬರೆಯಲೇಬೇಕೆನಿಸಿತು, ಮಿನಿಕಾಯ್ ಕತೆಗಳು ಮುಂದಿನ ಕಂತಿನಿಂದ ಮತ್ತೆ.
(ಮರೆತ ವಿಷಯ: ಅಲ್ಲಿಂದ ವಾಪಾಸಾಗುವಾಗ ಸಾಗರ ವನ್ಯಜೀವಿ ಪಡೆಯ ಗೆಳೆಯರಿಗೆ ಕಡಲಾಮೆ ಮೊಟ್ಟೆಯಿಟ್ಟ ಸ್ಥಳದ ವಿವರ ತಿಳಿಸಿದೆ. ಅವರು ಇನ್ನು ಕಡಲಾಮೆ ಮರಿಗಳು ಹೊರಬರುವವರೆಗೆ ಅದನ್ನು ಕಾಯುತ್ತಾರೆ. ಇನ್ನು ಅಲ್ಲಿ ಹೋದಾಗ ಮಾತನಾಡಲು ಇನ್ನೂ ಒಂದಿಷ್ಟು ಗೆಳೆಯರು ಸಿಗುತ್ತಾರೆ. ಈ ಹಸಿರು ಕಡಲಾಮೆಗಳ ಜೀವನ ವೃತ್ತಾಂತ ನೋಡಬಯಸುವವರು green turtle ಎಂದು ಟೈಪ್ ಮಾಡಿದರೆ ತಿಂಗಳುಗಟ್ಟಲೆ ಓದುವಷ್ಟು ವಿವರಗಳು ದೊರೆಯುತ್ತವೆ)
(ಮುಂದುವರಿಯುವುದು)
ಮಿನಿಕಾಯ್ ಕಥಾನಕ ಮೊದಲ ಕಂತಿನಿಂದ ಓದಲು ಇಲ್ಲಿ ಕ್ಲಿಕ್ ಮಾಡಿ
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
ಕಡಲಾಮೆಯೊಡನೆಯ ಸಂಭಾಷಣೆ ಸೊಗಸಾಗಿದೆ.
ಮೊಟ್ಟೆ ಒಡೆದು ನೂರಾರು ಆಮೆಗಳು ಆಕಾಶದ ಬೆಳಕಲ್ಲಿ ತೆವಳಿ ಕಡಲ ಸೇರಬೇಕಾದ ಇವು ಕೆಲವು ಕಡೆ ಕಡಲ ಅಂಚಿನಲ್ಲಿ ಬೆಳೆದ ನಗರಗಳ ಬೆಳಕೇ ಕಡಲಿಗೆ ದಾರಿ ಎಂದು ಮೋಸ ಹೋಗಿ ನಗರದೆಡೆಗೆ ತೆವಳುತ್ತವೆಯಂತೆ ಮತ್ತೆ ಅವುಗಳನ್ನು ಕಡಲಿಗೆ ಸೇರಿಸಲು ನಾಗರೀಕರು ಕಾರ್ಯಕರ್ತರಾಗಿ ಹೋಗಿ ಸೇವೆ ಸಲ್ಲಿಸುತ್ತಾರಂತೆ.ರಾತ್ರಿ ಮೊಟ್ಟೆಗಳನ್ನು ಇಡುವ ತಾಯಿ,ರಾತ್ರಿಯಲ್ಲೆ ಮೊಟ್ಟೆಗಳನ್ನು ಒಡೆದು ಹೊರ ಬರುವ ಮರಿಗಳು ನಿಜಕ್ಕೂ ಆಶ್ಚರ್ಯ.
ಇದರ ಮುಂದಿನ ಕಂತಿಗೆ ಕಯುತ್ತಿದ್ದೇನೆ.
ಯಾಕೋ ಈ ಗದ್ಯ ಓದುತ್ತಿದ್ದರೆ ರಶೀದ್ ಸರ್ ಮಂಗಳಲೋಕದ ಜೀವಿ ಅನಿಸುತ್ತೆ.ಓದುತ್ತಾ ಓದುತ್ತಾ ಭಾವಪರವಶ ಮಾಡಿಬಿಟ್ಟಿತು.ಪ್ರತಿಕಂತೂ ಒಂದಕಾಕಿಂತ ಒಂದು ಚಂದ.
ಅದೆಷ್ಟು ಆಪ್ತವಾಗಿ ಕಣ್ಣಿಗೆ ಕಟ್ಟುವಂತೆ ಮತ್ತೆ ಆಳಕ್ಕಿಳಿಯುವಂತೆ ಕಡಲಾಮೆಗಳ ಕತೆಯನ್ನು ಹೇಳ್ಳುತ್ತೀರಿ! ನಿಮ್ಮ ಬರಹದಲ್ಲಿರುವ ಅಸ್ಮಿತೆ ಇನ್ನಾರ ಬರಹಗಳಲ್ಲೂ ಕಾಣಸಿಕದು.