ಆ ಸಭೆಯಲ್ಲಿ ಭಾಗವಹಿಸಿದ್ದ ಉಗ್ರಗಾಮಿಗಳ ನಾಯಕ 35 ವರ್ಷದವನಿರಬಹುದು. ಆತ ತನ್ನ ಹೆಂಡತಿ ಮತ್ತು ಮಗುವಿನ ಜೊತೆ ಬಂದಿದ್ದ. ಸಭಿಕರ ಮಧ್ಯದಿಂದ ಆತ ಉಗ್ರಗಾಮಿಗಳ ಪ್ರತಿನಿಧಿಯಾಗಿ ಕಾಶ್ಮೀರ ಸಮಸ್ಯೆ ಕುರಿತು ಮಾತನಾಡಿದ. ಕಾಶ್ಮೀರದಲ್ಲಿ ಎನ್‌ಕೌಂಟರಲ್ಲಿ ಸತ್ತ ಸುಮಾರು 60 ಸಾವಿರ ಯುವಕರ ಹೆಸರು, ವಯಸ್ಸು ಮುಂತಾದ ವಿವರಗಳುಳ್ಳ ಕಂಪ್ಯೂಟರ್ ಲಿಸ್ಟ್ ತಂದಿದ್ದ. ಅದರ ಜೊತೆಗಿದ್ದ ಇನ್ನೊಂದು ಲಿಸ್ಟಲ್ಲಿ ಅತ್ಯಾಚಾರಕ್ಕೊಳಗಾದ 65 ಸಾವಿರ ಕಾಶ್ಮೀರ ಯುವತಿಯರ ಹೆಸರು ಮುಂತಾದ ವಿವರಗಳಿರುವುದಾಗಿ ತಿಳಿಸಿದ. ಅವುಗಳನ್ನು ಸಭೆಗೆ ಒಪ್ಪಿಸುವ ಮೊದಲು ಸೈನಿಕರ ಬಗ್ಗೆ ಉಗ್ರವಾಗಿ ಮಾತನಾಡಿದ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 59ನೇ ಕಂತು ನಿಮ್ಮ ಓದಿಗೆ.
ನಾನು ಏಳನೆಯ ಇಯತ್ತೆಯಲ್ಲಿದ್ದಾಗ ನೆಹರೂ ನಿಧನರಾದರು. ಆಗ ಪರೀಕ್ಷೆ ಸಮೀಪಿಸುತ್ತಿತ್ತು. ನಾವಿಗಲ್ಲಿಯ ಸಂತ ಸೇನಾ ಬೀದಿಯಲ್ಲಿ ದಕ್ಷಿಣದಿಂದ ಉತ್ತರ ದಿಕ್ಕಿಗೆ ಹೋಗುವಾಗ ಎಡಬದಿಗೆ ಕಾಕಾ ಕಾರ್ಖಾನೀಸರ ಹರಿಜನ ಬೋರ್ಡಿಂಗ್ ಇದ್ದರೆ ಅದರ ಎದುರುಗಡೆ ಪ್ರೊ. ಜಿ.ಬಿ. ಸಜ್ಜನ ಸರ್ ಮನೆ ಇದ್ದು ಪಕ್ಕದಲ್ಲೇ ಅವರ ಸಂಬಂಧಿಕರ ದೊಡ್ಡಿ ಇತ್ತು. ಅದು ಸುಮಾರು 120 ಅಡಿ ಉದ್ದ ಮತ್ತು 40 ಅಡಿ ಅಗಲ ಇದ್ದಿರಬಹುದು. ಸುತ್ತಲೂ ಗೋಡೆ ಕಟ್ಟಿದ್ದರು. ಅದಾದ ಕೂಡಲೆ ನಮ್ಮ ಬಾಡಿಗೆ ಮನೆ ಇತ್ತು. ಬೆಲ್ಲದ ಮನೆತನದವರ ಮೂರಂಕಣದ ಎರಡು ಮನೆಗಳಲ್ಲಿ ಮೊದಲ ಮನೆಗೆ ಆ ಕಂಪೌಂಡ್ ಗೋಡೆ ಹತ್ತಿಕೊಂಡಿತ್ತು. ಎರಡನೆಯ ಮನೆಯಲ್ಲಿ ನಾವು ವಾಸವಿದ್ದೆವು.
ಒಂದೂವರೆ ಗೇಣಗಲ ಬೀಸುವಕಲ್ಲಿನ ಆಟಿಗೆ ಸಾಮಾನಿನ ಮೇಲ್ಭಾಗ ನಮ್ಮ ಮನೆಯಲ್ಲಿ ಬಿದ್ದಿತ್ತು. ಅದನ್ನು ಕಟ್ಟಿಗೆಯಿಂದ ಸುಂದರವಾಗಿ ತಯಾರಿಸಲಾಗಿತ್ತು. ಅದು ನನಗೆ ಕಟ್ಟಿಗೆ ಗಾಲಿಯಾಗಿತ್ತು. ಒಂದು ದಿನ ರಸ್ತೆ ಮೇಲೆ ಆಟ ಆಡುವಾಗ ಆ ಗಾಲಿಯನ್ನು ಜೋರಾಗಿ ಎಸೆದೆ ಅದು ಉರುಳುತ್ತ ಹೋಗಿ, ತಮ್ಮ ಮನೆ ಮುಂದೆ ಕುಳಿತಿದ್ದ ಸಜ್ಜನ ಸರ್ ಅವರ ಅಜ್ಜಿಗೆ ಬಡಿಯಿತು. ಅವರ ವಯಸ್ಸು ನೂರಕ್ಕೆ ಸಮೀಪದಲ್ಲಿರಬಹುದು. ಅದು ಕಣ್‌ಪಟ್ಟಿಗೆ (ಕಿವಿಯ ಪಕ್ಕಕ್ಕೆ ಸ್ವಲ್ಪ ಮೇಲ್ಗಡೆ) ಬಡಿದ ಕಾರಣ ಬುಳುಬುಳು ರಕ್ತ ಸೋರತೊಡಗಿತು. ನನ್ನ ಜಂಘಾಬಲವೇ ಉಡುಗಿ ಹೋಯಿತು. ಆದರೆ ಆ ಮನೆಯವರು ಏನೂ ಹೇಳಲಿಲ್ಲ. ಅಜ್ಜಿಗೆ ಒಳಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿದರು.
ನನ್ನ ತಾಯಿ ತಂದೆ ಬಹಳ ನೋವುಂಡರು. ನನಗೋ ಅಪಮಾನದಿಂದಾಗಿ ಸಜ್ಜನ ಸರ್ ಮನೆಯ ಮುಂದಿನಿಂದ ನಮ್ಮ ಮನೆಗೆ ಹೋಗಿ ಬರುವ ಧೈರ್ಯ ಸಾಲಲಿಲ್ಲ. ಹೀಗಾಗಿ ಉತ್ತರದ ಕಡೆಯಿಂದ ಹೋಗಿ ಬಲಕ್ಕೆ ಹೊರಳಿ ಹಿಂಬದಿಯ ರಸ್ತೆಯಿಂದ ಮುಂದೆ ಸಾಗುತ್ತಿದ್ದೆ. ಪರೀಕ್ಷೆಯ ನಂತರವೂ ಇದೇ ರೀತಿ ನನ್ನ ಚಲನವಲನ ಮುಂದುವರಿಯಿತು. ಪರೀಕ್ಷೆ ಪರಿಣಾಮ ಹೊರಬಿದ್ದಾಗ ನನಗೆ ಶೇಕಡಾ 85ರಷ್ಟು ಮಾರ್ಕ್ಸ್ ಬಂದದ್ದು ಓಣಿಯಲ್ಲಿ ಸುದ್ದಿಯಾಯಿತು. ಅದು ಸಜ್ಜನ ಸರ್ ಕಿವಿಗೂ ಬಿತ್ತು. ಅವರು ಮನೆತನಕ ಬಂದು ಕೂಗಿದರು. ನಾನು ಗಾಬರಿಯಿಂದ ಹೊರಗೆ ಬಂದೆ. ಅವರು ನನ್ನ ಪರೀಕ್ಷೆ ಪರಿಣಾಮ ನೋಡಿ ಖುಷಿಯಾಗಿದ್ದರ ಬಗ್ಗೆ ತಿಳಿಸಿ 25 ರೂಪಾಯಿ ಕೊಟ್ಟರು. ಅಷ್ಟೊಂದು ಹಣವನ್ನು ನನ್ನ ಕೈಯಲ್ಲಿ ಹಿಡಿದಾಗ ಮನದಲ್ಲಿ ವಿಚಿತ್ರ ಸಂಚಲನವಾಯಿತು. ನಾನು ಕಣ್ಣುಗಳಲ್ಲೇ ಕೃತಜ್ಞತೆ ಸೂಚಿಸುತ್ತ ಬೆಪ್ಪಾಗಿ ನಿಂತೆ. ಸರ್ ಹೋದ ಮೇಲೆ ಹಣವನ್ನು ತಾಯಿಯ ಕೈಗೆ ಕೊಟ್ಟೆ.
ಎಂಟನೆಯ ಇಯತ್ತೆಗೆ ಬೇಕಾದ ಪುಸ್ತಕ, ನೋಟ್‌ಬುಕ್, ಬಟ್ಟೆ ಬರೆ ಮುಂತಾದವುಗಳಿಗಾಗಿ ಒಂದಿಷ್ಟು ಹಣ ಕೂಡಿಸಬೇಕಿತ್ತು. ಅಲ್ಲಿಯವರೆಗೆ ಚಪ್ಪಲಿ ಇದ್ದಿಲ್ಲವಾದ್ದರಿಂದ ಚಪ್ಪಲಿ ಹೊಲಿಸುವ ಮನಸ್ಸಾಯಿತು. ಬೇಸಗೆ ರಜೆ ವೇಳೆ ಬಿಸ್ಕಿಟ್ ಕಾರ್ಖಾನೆಯೊಂದರಲ್ಲಿ ಕೆಲಸ ಸಿಕ್ಕಿತು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದುಡಿಯುವ ಕೆಲಸ ಅದು. ಕೂಲಿ ದಿನಕ್ಕೆ ಒಂದು ರೂಪಾಯಿ. ಯಾವ ರಜೆಯೂ ಇಲ್ಲ. ಪಾರ್ಲೆ- ಜಿ ಬಿಸ್ಕಿಟ್ ರೀತಿಯ ಬಿಸ್ಕಿಟ್ ಮಾತ್ರ ಅಲ್ಲಿ ತಯಾರಾಗುತ್ತಿದ್ದವು. ಅದು ವಿದ್ಯುಚ್ಛಕ್ತಿಯ ಹಂಗಿಲ್ಲದ ಬಿಸ್ಕಿಟ್ ಕಾರ್ಖಾನೆಯಾಗಿತ್ತು. ಕೈಯಿಂದ ತಿರುವುವ ಮಿಕ್ಷರ್ ಯಂತ್ರಗಳು ಅಲ್ಲಿದ್ದವು. ಆ ಯಂತ್ರಗಳಿಗೆ ಎರಡೂ ಕಡೆಗಳಲ್ಲಿ ಚಕ್ರಗಳಿದ್ದು ಅವುಗಳನ್ನು ತಿರುವಲು ಹ್ಯಾಂಡಲ್ ಇದ್ದವು. ಯಂತ್ರದಲ್ಲಿ ಮಗದುಮ್ ಸಕ್ಕರೆ ಮತ್ತು ಮೈದಾ ಹಿಟ್ಟು ಸುರಿದ ನಂತರ ಅವು ಒಂದಾಗಿ ಪೇಸ್ಟ್ ಆಗುವತನಕ ಇಬ್ಬರು ಸೇರಿ ಅಕ್ಕಪಕ್ಕ ಎದುರು ಬದರಾಗಿ ಗಾಲಿ ತಿರುಗಿಸುತ್ತಿದ್ದೆವು. ತಾಯಿ ನಸುಕಿನಲ್ಲಿ ರೊಟ್ಟಿ ಮಾಡಿ ಕಟ್ಟಿಕೊಟ್ಟ ಬುತ್ತಿಯನ್ನು ಮಧ್ಯಾಹ್ನ 1 ಗಂಟೆಗೆ ಇತರ ಕೂಲಿ ಗೆಳೆಯರ ಕೂಡ ಬಿಚ್ಚುತ್ತಿದ್ದೆ. ಊಟಕ್ಕೆ 15 ನಿಮಿಷಗಳ ಬಿಡುವು. ಅಷ್ಟರೊಳಗಾಗಿ ಊಟ ಮುಗಿಸಲು ಆ ಸಿಂಧೀ ಮಾಲಿಕ ಒತ್ತಾಯಿಸುತ್ತಿದ್ದ. ಊಟವಾದ ನಂತರ ಮತ್ತೆ ಅದೇ ತಿರುಗಿಸುವ ಕೆಲಸ. ಊಟವಾದ ನಂತರ ಬಿಸ್ಕಿಟ್‌ಗಾಗಿ ಆ ಪೇಸ್ಟ್ ತಯಾರಿಸುವುದು ನರಕಯಾತನೆ. ನಮ್ಮೆಲ್ಲರ ಭಾರವನ್ನು ಹಾಕಿ ಪೇಸ್ಟ್ ತಯಾರಿಸಿದ ನಂತರ ಅದರಿಂದ ಬಿಸ್ಕಿಟ್ ತಯಾರಿಸಲು ಅಚ್ಚಿಗೆ ಹಾಕುತ್ತಿದ್ದರು. ಆ ಪೇಸ್ಟು ಯಂತ್ರದ ಅಚ್ಚುಗಳ ಬಾಯಿಗೆ ಸಿಕ್ಕಿ, ಬಿಸ್ಕಿಟ್ ರೂಪ ತಾಳಿ, ಕಬ್ಬಿಣದ ಪ್ಲೇಟಲ್ಲಿ ನಾಲ್ಕಾರು ಸಾಲುಗಳಾಗಿ ಹೊರ ಬರುತ್ತಿತ್ತು. ಅದು ಕೂಡ ಕೈ ಕೆಲಸವೆ ಆಗಿತ್ತು. ತದನಂತರ ಆ ಹಸಿ ಬಿಸ್ಕಿಟ್ ಸುಡಲು ಭಟ್ಟಿ ತಯಾರಾಗಿರುತ್ತಿತ್ತು. ಆ ಭಟ್ಟಿಯ ಮುಂದೆ ಕುಳಿತವನ ಕೈಚಳಕ ಮರೆಯದಂಥದ್ದು. ಚಡ್ಡಿ, ಬನಿಯನ್ ಮೇಲೆ ಕುಳಿತ ಆ ವ್ಯಕ್ತಿ, ಕಟ್ಟಿಗೆಯ ಉದ್ದನೆಯ ಹಿಡಿಯ ಮುಂದಿನ ಅಗಲವಾದ ಹಲಗೆಯ ಮೇಲೆ ಆ ಹಸಿ ಬಿಸ್ಕಿಟ್ ಪ್ಲೇಟು ಬರುವಂತೆ ತಿವಿದು ಭಟ್ಟಿಯ ಒಳಗೆ ಇಡುತ್ತಿದ್ದ. ತದನಂತರ ಈ ಮೊದಲೇ ಭಟ್ಟಿಯಲ್ಲಿಟ್ಟಿದ್ದ ಪ್ಲೇಟುಗಳನ್ನು ಒಂದೊಂದಾಗಿ ಹೊರ ತೆಗೆಯುತ್ತ, ಆ ಜಾಗದಲ್ಲಿ ಮತ್ತೆ ಹಸಿ ಬಿಸ್ಕಿಟ್‌ಗಳ ಪ್ಲೇಟ್ ಇಡುತ್ತ, ನಿರಂತರ ಕ್ರಿಯಾಶೀಲವಾಗಿ ಕಾರ್ಯಮಗ್ನನಾಗಿರುತ್ತಿದ್ದ. ಆಗ ಆತ ಮಾನವ ಯಂತ್ರದಂತೆಯೆ ಕಾಣುತ್ತಿದ್ದ. ಭಟ್ಟಿಗೆ ಬೇಕಾದ ಬೆಂಕಿಗೆ ಉರುವಲು ಕಟ್ಟಿಗೆ ತುಂಡುಗಳನ್ನು ಹಾಕಲಾಗುತ್ತಿತ್ತು, ಆ ಬೆಂಕಿ ಸಮಾನಾಂತರವಾಗಿ ಹರಡುವಂತೆ ನೋಡಿಕೊಳ್ಳಲಾಗುತ್ತಿತ್ತು. ಒಳಗಿನ ಕಬ್ಬಿಣದ ಸರಳುಗಳ ಮೇಲೆ ಪ್ಲೇಟುಗಳನ್ನು ಸಮಯಕ್ಕೆ ಸರಿಯಾಗಿ ಇಟ್ಟು ಸರಿಯಾದ ಸಮಯಕ್ಕೆ ಹೊರಗೆ ತೆಗೆಯುವುದು ನಡೆದೇ ಇರುತ್ತಿತ್ತು. ಚಾಕಚಕ್ಯತೆಯಿಂದ ಈ ಕಾರ್ಯ ಮಾಡದಿದ್ದರೆ ಬಿಸ್ಕಿಟ್‌ಗಳು ಹಸಿಬಿಸಿಯಾಗುತ್ತಿದ್ದವು, ಇಲ್ಲವೆ ಹೆಚ್ಚು ಸುಟ್ಟು ತಿನ್ನಲು ಅಯೋಗ್ಯವಾಗುತ್ತಿದ್ದವು. ಚೆನ್ನಾಗಿ ತಯಾರಾದ ಬಿಸ್ಕಿಟ್‌ಗಳನ್ನು ಪ್ಯಾಕ್ ಮಾಡಿ, ಡಬ್ಬಿಯಲ್ಲಿ ತುಂಬಿ ಆ ಸಿಂಧಿ ಮಾಲೀಕನ ಹೋಲ್‌ಸೇಲ್ ಅಂಗಡಿಗೆ ಕಳುಹಿಸಲಾಗುತ್ತಿತ್ತು.
ಇದು ಕಠಿಣವಾದ ಕೆಲಸವಾದ್ದರಿಂದ ಹುಡುಗರು ಬಹಳ ದಿನಗಳವರೆಗೆ ಈ ಕೆಲಸವನ್ನು ಮುಂದುವರಿಸುತ್ತಿರಲಿಲ್ಲ. ನಾವು ಮೂವರು ಗೆಳೆಯರು ಸುಮಾರು 40 ದಿನಗಳವರೆಗೆ ಅಲ್ಲಿ ಕೆಲಸ ಮಾಡಿರಬಹುದು. ಅದೊಂದು ನರಕಯಾತನೆ ಎನ್ನುವ ಹಾಗಿತ್ತು. ಆ ಬಿಸ್ಕಿಟ್ ರಾಶಿಯ ವಾಸನೆಯಿಂದಾಗಿ ಊಟ ಕೂಡ ರುಚಿಸುತ್ತಿರಲಿಲ್ಲ.
ನನ್ನ ಜೊತೆಗಿನ ಇಬ್ಬರು ಗೆಳೆಯರಲ್ಲಿ ಒಬ್ಬರು ಬಾಬು ಗಚ್ಚಿನಕಟ್ಟಿ ಎಂಬವರು. ಅವರು ಬೆಂಗಳೂರಲ್ಲಿ ಎಎಸ್‌ಪಿ ಆಗಿ ನಿವೃತ್ತರಾಗಿದ್ದಾರೆ. ಇನ್ನೊಬ್ಬನ ಹೆಸರು ಮರೆತಿದ್ದೇನೆ. ನಮಗಿಂತ ಎರಡು ವರ್ಷ ಸೀನಿಯರ್ ಇದ್ದ ಅವನು ಏನಾದನೋ ಗೊತ್ತಿಲ್ಲ. ಆತ ಆ ಕಾರ್ಖಾನೆಯಲ್ಲೇ ಪರಿಚಯವಾಗಿದ್ದು.
ಎಂಟನೆಯ ಇಯತ್ತೆಯಲ್ಲಿದ್ದಾಗ ಜ್ಯೂನಿಯರ್ ಎನ್.ಸಿ.ಸಿ.ಯಲ್ಲಿ ಇದ್ದುದಾಗಿ ಆತ ತಿಳಿಸಿದ. ನಾವು ಬಿಸ್ಕಟ್‌ಗಾಗಿ ಪೇಸ್ಟ್ ತಯಾರಿಸುವಾಗ ಇಬ್ಬರೂ ಎದುರುಬದಿರಾಗಿ ಚಕ್ರ ತಿರುಗಿಸುವ ವೇಳೆ, ಆತ ತನ್ನ ಕಾಶ್ಮೀರ ಪ್ರವಾಸದ ಘಟನೆಯನ್ನು ಹೇಳಿದ. ಬೆಸ್ಟ್ ಎನ್.ಸಿ.ಸಿ. ಕ್ಯಾಂಡಿಡೇಟ್‌ಗಳಲ್ಲಿ ಒಬ್ಬನಾಗಿ ಆತ ಕಾಶ್ಮೀರ ಕ್ಯಾಂಪಿಗೆ ಸೆಲೆಕ್ಟ್ ಆಗಿದ್ದ. ಕ್ಯಾಂಪಲ್ಲಿ ಒಂದು ದಿನ ಕಾಶ್ಮೀರದ ಪಹಲ್‌ಗಾವನಿಂದ ಈಗ ಮಿನಿ ಸ್ವಿಡ್ಜರ್‌ಲ್ಯಾಂಡ್ ಎಂದು ಕರೆಯಿಸಿಕೊಳ್ಳುವ ಪ್ರದೇಶಕ್ಕೆ ಹೋಗುವಾಗ ನಡೆದ ಘಟನೆಯನ್ನು ವಿವರಿಸಿದ. ಅಲ್ಲಿಗೆ ಕುದುರೆಯ ಮೇಲೆಯೆ ಹೋಗಬೇಕು. ಮೊದಲಿಗೆ ಈ ಕೆಡೆಟ್‌ಗಳಿಗೆ ಸ್ವಲ್ಪ ಟ್ರೇನಿಂಗ್ ಕೊಟ್ಟರಂತೆ. ದಂಡಪುಂಡನಾಗಿದ್ದ ಆತ ಕುದುರೆ ಸವಾರಿ ಮಾಡುವುದನ್ನು ಬಹುಬೇಗ ಕಲಿತ ಅಲ್ಲಿನ ಮಿಲಿಟರಿ ಅಧಿಕಾರಿಯೊಬ್ಬರ ಮಗಳೂ ಈ ಕೆಡೆಟ್‌ಗಳ ಜೊತೆಗೆ ಬರುವವಳಿದ್ದಳು. ‘ಅವಳಿಗೆ ಕುದುರೆ ಸವಾರಿಯ ಟ್ರೇನಿಂಗ್ ಕೊಡುವ ಜವಾಬ್ದಾರಿ ನನ್ನ ಮೇಲೆ ಬಿದ್ದಿತು. ಆಗ ನಾವಿಬ್ಬರೂ ಬಹಳ ಕ್ಲೋಸ್ ಆದೆವು’ ಎಂದು ಖುಷಿಯಿಂದ ಹೇಳಿದ. ಅವನ ಕಾಶ್ಮೀರ ಕ್ಯಾಂಪ್ ಮತ್ತು ಪ್ರವಾಸದ ವರ್ಣನೆ ಖುಷಿ ಕೊಟ್ಟಿತು.
1964ರ ರಜೆಯಲ್ಲಿ ಈ ಬಿಸ್ಕಿಟ್ ಕಾರ್ಖಾನೆಯಲ್ಲಿ ದುಡಿದ ಅನುಭವ ಮತ್ತು ಕಾಶ್ಮೀರದ ಜ್ಯೂನಿಯರ್ ಎನ್.ಸಿ.ಸಿ. ಕ್ಯಾಂಪ್ ಬಗ್ಗೆ ಕೇಳಿದ ನೆನಪುಗಳು ಮನದಲ್ಲಿ ಉಳಿದವು.
ತಾಯಿ ನಸುಕಿನಲ್ಲಿ ರೊಟ್ಟಿ ಮಾಡಿ ಕಟ್ಟಿಕೊಟ್ಟ ಬುತ್ತಿಯನ್ನು ಮಧ್ಯಾಹ್ನ 1 ಗಂಟೆಗೆ ಇತರ ಕೂಲಿ ಗೆಳೆಯರ ಕೂಡ ಬಿಚ್ಚುತ್ತಿದ್ದೆ. ಊಟಕ್ಕೆ 15 ನಿಮಿಷಗಳ ಬಿಡುವು. ಅಷ್ಟರೊಳಗಾಗಿ ಊಟ ಮುಗಿಸಲು ಆ ಸಿಂಧೀ ಮಾಲಿಕ ಒತ್ತಾಯಿಸುತ್ತಿದ್ದ. ಊಟವಾದ ನಂತರ ಮತ್ತೆ ಅದೇ ತಿರುಗಿಸುವ ಕೆಲಸ. ಊಟವಾದ ನಂತರ ಬಿಸ್ಕಿಟ್‌ಗಾಗಿ ಆ ಪೇಸ್ಟ್ ತಯಾರಿಸುವುದು ನರಕಯಾತನೆ.
1973ರಲ್ಲಿ ಮಿಲಿಟರಿ ಸೇವೆಯಲ್ಲಿದ್ದ ಆದ್ಯ ವಿಜಯಕ್ಕನ ಪತಿಯ ಭೇಟಿಯಾಯಿತು. ಅವರು ಜಮ್ಮು ಮತ್ತು ಕಾಶ್ಮೀರದ ಲದಾಕ್‌ನಲ್ಲಿ ಸೇವೆ ಸಲ್ಲಿಸಿ ಬಂದಿದ್ದರು. ಅಲ್ಲಿಯ ಚಳಿ ಮೈನಸ್ 40 ಡಿಗ್ರಿ ಸೆಲಿಸಿಯಸ್ ದಾಟಿ ಹೋಗುತ್ತಿತ್ತು. ಇಂಥ ಚಳಿ ತಡೆಯುವ ಬ್ಯಾಗ್‌ಗಳಲ್ಲಿ ಮಲಗುವ ಅನುಭವ ಕೇಳಿದಾಗ ಬಹಳ ಕಸಿವಿಸಿಯಾಗಿತ್ತು. ಆದರೆ ಕಾಶ್ಮೀರ ಅನುಭವಕ್ಕಾಗಿ ಮನಸ್ಸು ಹಾತೊರೆಯುತ್ತಿತ್ತು.
1999ರ ಮೇ ತಿಂಗಳಲ್ಲಿ ನೆದರ್‌ಲ್ಯಾಂಡ್ಸ್ ದೇಶದ ರಾಜಧಾನಿ ಹೇಗ್‌ನಲ್ಲಿ ‘ಹೇಗ್ ಪೀಸ್ ಎಕಾರ್ಡ್’ (ಹೇಗ್ ಶಾಂತಿ ಒಪ್ಪಂದ)ದ 200ನೇ ವರ್ಷದ ಆಚರಣೆ ನಡೆಯಿತು. ಅದು ‘ಹೇಗ್ ಪೀಸ್ ಅಪೀಲ್’ ಸಮ್ಮೇಳನವಾಗಿತ್ತು. 1799ರಲ್ಲಿ ಅಲ್ಲಿನ ರಾಜ ನೆರೆ ದೇಶದವರೊಂದಿಗೆ ಶಾಂತಿಯ ಒಪ್ಪಂದ ಮಾಡಿಕೊಂಡಿದ್ದ. ಅದು ಐರೋಪ್ಯ ದೇಶಗಳಲ್ಲಿ ಶಾಂತಿಯ ಮೊದಲ ಒಪ್ಪಂದವಾಗಿತ್ತು. ಹೀಗಾಗಿ ಅದಕ್ಕೆ ಐತಿಹಾಸಿಕ ಮಹತ್ವ ಬಂದಿದೆ. ಇನ್ನೂರನೇ ವರ್ಷಾಚರಣೆಯನ್ನು 100 ದೇಶಗಳ 8000 ಜನ ಪ್ರತಿನಿಧಿಗಳು ಸೇರಿ ವಿಜೃಂಭಣೆಯಿಂದ ಮಾಡಿದರು. ಬಹುತೇಕ ಎಲ್ಲ ರಾಷ್ಟ್ರಗಳ ನಾಯಕರು ಇಲ್ಲವೆ ಅವರ ಅಧಿಕೃತ ಪ್ರತಿನಿಧಿಗಳು ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆಗ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಅವರು ಸಮ್ಮೇಳನದ ಉದ್ಭಾಟನೆ ಮಾಡಿದರು.
‘ಫಾಯರ್ ಫ್ಲಾಯ್ಸ್’ ಸಂಘಟನೆಯ ಮುಖ್ಯಸ್ಥ ಸಿದ್ಧಾರ್ಥ ಅವರು ಕರ್ನಾಟಕದಿಂದ ನನ್ನನ್ನು ತಮ್ಮ ಸಂಘಟನೆಯ ಪ್ರತಿನಿಧಿಯಾಗಿ ನೆದರ್‌ಲ್ಯಾಂಡ್ಸ್‌ಗೆ ಕಳುಹಿಸಿದರು. ಒಟ್ಟು 15 ದಿನಗಳ ಪ್ರವಾಸ ಅದಾಗಿತ್ತು. ಈ ಶಾಂತಿ ಸಮ್ಮೇಳನದ ಜೊತೆಗೇ ಆಮ್ಟ್ಸರ್ಡ್ಯಾಂ ನಗರದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳ ಜೊತೆಗೆ ನಡೆಯುವ ಸಾಂಸ್ಕೃತಿಕ ವಿಚಾರ ಸಂಕಿರಣದಲ್ಲಿ ಭಾಗವಹಿಸಬೇಕಿತ್ತು. ಕೊನೆಯ ದಿನಗಳಲ್ಲಿ ಹೇಗ್‌ನಲ್ಲಿ ನಡೆಯುವ ಶಾಂತಿ ಒಪ್ಪಂದದ 200ನೇ ವರ್ಷದ ಆಚರಣೆಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಬೇಕಿತ್ತು.
ಹೇಗ್‌ನಲ್ಲಿನ ಕಾಂಗ್ರೆಸ್ ಸೆಂಟ್ರಂ ಹೆಸರಿನ ಸಭಾಭವನ 8000ಕ್ಕೂ ಹೆಚ್ಚಿನ ಆಸನಗಳನ್ನು ಹೊಂದಿತ್ತು. ಪ್ರತಿದಿನ ನೂರಾರು ದೇಶಗಳ ಸಮಸ್ಯೆಗಳ ಕುರಿತು ಸಭಾಭವನದ ಸುತ್ತಮುತ್ತಲಿನ ವಿವಿಧ ಚಿಕ್ಕ ಸಭಾಭವನಗಳಲ್ಲಿ ವಿಚಾರಸಂಕಿರಣಗಳು ನಡೆಯುತ್ತಿದ್ದವು. ಅವುಗಳಲ್ಲಿ ಕಾಶ್ಮೀರ ಸಮಸ್ಯೆ ಕುರಿತ ವಿಚಾರಸಂಕಿರಣದಲ್ಲಿ ನಾನು ಸಭಿಕನಾಗಿ ಭಾಗವಹಿಸಿದೆ. ವೇದಿಕೆಯ ಮೇಲೆ ಭಾರತದ ನೌಕಾಪಡೆಯ ಎಡ್ಮಿರಲ್ ಆಗಿದ್ದ ರಾಮದಾಸ್ ಇದ್ದರು. ಪಾಕಿಸ್ತಾನದ ಪ್ರಮುಖ ಚಿಂತಕರು, ಕಾಶ್ಮೀರೀ ಪಂಡಿತರ ಪ್ರತಿನಿಧಿಗಳು, ಕಾಶ್ಮೀರ ಮುಸ್ಲಿಮರ ಪ್ರತಿನಿಧಿಗಳು ವೇದಿಕೆಯ ಮೇಲೆ ಇದ್ದರು. ಈಸ್ಟ್ ತೈಮೋರ್‌ನ ಹೋರಾಟಗಾರ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಜೋಸ್ ರಾಮೋಸ್ ಹೊರ್ಟಾ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು.
ಈ ವಿಚಾರಸಂಕಿರಣದಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಲು ಕಾಶ್ಮೀರದ ಉಗ್ರರನ್ನೂ ಆಹ್ವಾನಿಸಲಾಗಿತ್ತು. ಅವರು ವಿವಿಧ ಕಡೆಗಳಿಂದ ಬಂದವರಾಗಿದ್ದರು. ಮೊದಲೇ ಒಪ್ಪಂದ ಮಾಡಿಕೊಂಡ ಪ್ರಕಾರ ಅವರನ್ನು ಬಂಧಿಸುವ ಹಾಗಿರಲಿಲ್ಲ. ಸಮ್ಮೇಳನ ಮುಗಿದ ನಂತರ ಅವರು ತಾವು ಬಂದ ಸ್ಥಳಕ್ಕೆ ಸುರಕ್ಷಿತವಾಗಿ ಹೋಗುವ ವ್ಯವಸ್ಥೆ ಮಾಡಲಾಗಿತ್ತು.
ಪಾಕಿಸ್ತಾನದಿಂದ ಬಂದ ಕಾರ್ಮಿಕ ನಾಯಕ ಕರಾಮತ್ ಅಲಿ ಜೊತೆ ವಿವಿಧ ಎನ್.ಜಿ.ಒ.ಗಳ ಸುಮಾರು 200 ಮಹಿಳೆ ಮತ್ತು ಪುರುಷರು ಬಂದಿದ್ದರು. ಅವರಲ್ಲಿ ಅನೇಕ ಹಿಂದು ಮಹಿಳೆಯರು ಮತ್ತು ಪುರುಷರು ಇದ್ದರು. ಅವರೆಲ್ಲ ಕಾಶ್ಮೀರ ಸಮಸ್ಯೆ ಕುರಿತ ಸೆಮಿನಾರ್‌ನಲ್ಲಿ ಭಾಗವಹಿಸಿದ್ದರು.
ಆ ಸಭೆಯಲ್ಲಿ ಭಾಗವಹಿಸಿದ್ದ ಉಗ್ರಗಾಮಿಗಳ ನಾಯಕ 35 ವರ್ಷದವನಿರಬಹುದು. ಆತ ತನ್ನ ಹೆಂಡತಿ ಮತ್ತು ಮಗುವಿನ ಜೊತೆ ಬಂದಿದ್ದ. ಸಭಿಕರ ಮಧ್ಯದಿಂದ ಆತ ಉಗ್ರಗಾಮಿಗಳ ಪ್ರತಿನಿಧಿಯಾಗಿ ಕಾಶ್ಮೀರ ಸಮಸ್ಯೆ ಕುರಿತು ಮಾತನಾಡಿದ. ಕಾಶ್ಮೀರದಲ್ಲಿ ಎನ್‌ಕೌಂಟರಲ್ಲಿ ಸತ್ತ ಸುಮಾರು 60 ಸಾವಿರ ಯುವಕರ ಹೆಸರು, ವಯಸ್ಸು ಮುಂತಾದ ವಿವರಗಳುಳ್ಳ ಕಂಪ್ಯೂಟರ್ ಲಿಸ್ಟ್ ತಂದಿದ್ದ. ಅದರ ಜೊತೆಗಿದ್ದ ಇನ್ನೊಂದು ಲಿಸ್ಟಲ್ಲಿ ಅತ್ಯಾಚಾರಕ್ಕೊಳಗಾದ 65 ಸಾವಿರ ಕಾಶ್ಮೀರ ಯುವತಿಯರ ಹೆಸರು ಮುಂತಾದ ವಿವರಗಳಿರುವುದಾಗಿ ತಿಳಿಸಿದ. ಅವುಗಳನ್ನು ಸಭೆಗೆ ಒಪ್ಪಿಸುವ ಮೊದಲು ಸೈನಿಕರ ಬಗ್ಗೆ ಉಗ್ರವಾಗಿ ಮಾತನಾಡಿದ. ಫೇಕ್ ಎನ್‌ಕೌಂಟರ್‌ನಲ್ಲಿ ಕಾಶ್ಮೀರಿ ಯುವಕರ ಕೊಲೆ ಮತ್ತು ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಿದ. ಈ ಸಾವು ಮತ್ತು ಅತ್ಯಾಚಾರಗಳ ಹೊಣೆಯನ್ನು ಸೈನಿಕರ ಮೇಲೆ ಹೊರೆಸುತ್ತ ಕೆಟ್ಟ ರೀತಿಯಲ್ಲಿ ಟೀಕಿಸಿದ. ಆಗ ಅಧ್ಯಕ್ಷತೆ ವಹಿಸಿದ್ದ ಜೋಸ್ ರಾಮೋಸ್ ಹೊರ್ಟಾ ಅವರು ‘ನಾನೂ ಬೀದಿ ಹೋರಾಟದಿಂದಲೇ ಬಂದಿದ್ದೇನೆ. ಆದರೆ ಇದು ಬೀದಿ ಅಲ್ಲ, ವಿಚಾರ ಸಂಕಿರಣ. ವಿಚಾರ ಸಂಕಿರಣದ ಸಭ್ಯತೆಯನ್ನು ಮೀರಿ ಜಗಳದ ರೀತಿಯಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲʼ ಎಂದು ಎಚ್ಚರಿಸಿದಾಗ ಆತ ಗಂಭೀರವಾಗಿ ಮಾತನಾಡತೊಡಗಿದ.
ಆ ಸಂದರ್ಭದಲ್ಲಿ ಎಡ್ಮಿರಲ್ ರಾಮದಾಸ್, ಕಾಶ್ಮೀರೀ ಪಂಡಿತರ ಪ್ರತಿನಿಧಿಗಳು ಮತ್ತು ಪಾಕಿಸ್ತನ ವಿಚಾರವಾದಿಗಳ ಪ್ರತಿನಿಧಿಗಳು ಬಹಳ ಸಂವೇದನಾಶೀಲರಾಗಿ ಮಾತನಾಡಿದರು. ಯುದ್ಧ ಮತ್ತು ಉಗ್ರಗಾಮಿ ಚಟುವಟಿಕೆಗಳ ಕ್ರೌರ್ಯದಿಂದ ಶಾಂತಿಭಂಗ ಉಂಟಾಗಿ ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಜೋಸ್ ರಾಮೋಸ್ ಹೊರ್ಟಾ ಅವರು ಮಾರ್ಮಿಕವಾಗಿ ಅಧ್ಯಕ್ಷೀಯ ಮಾತುಗಳನ್ನಾಡಿರು. ಆ ವಿಚಾರ ಸಂಕಿರಣದಲ್ಲಿ ಯಾವ ನಿರ್ಣಯ ಕೈಗೊಳ್ಳಲಾಯಿತು ಎಂಬುದು ನೆನಪಿಲ್ಲ.
ಸಮ್ಮೇಳನದಲ್ಲಿ ಭಾರತದ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಕೂಡಿಯೆ ಇರುತ್ತಿದ್ದೆವು. ಆಗ ಭಾರತ ಪಾಕ್ ಸಮಸ್ಯೆ ಕುರಿತು ಮುಕ್ತ ಮನಸ್ಸಿನಿಂದ ಮಾತನಾಡುತ್ತಿದ್ದೆವು.
ಪ್ರಧಾನಿ ನವಾಜ್ ಶರೀಫ್ 1998ರಲ್ಲಿ ಪರ್ವೇಜ್ ಮುಷರ್ರಫ್‌ನನ್ನು ಜನರಲ್ ಹುದ್ದೆಗೇರಿಸಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಮಾಡಿದರು. ಆದರೆ ಅದೇ ವರ್ಷ ಅಕ್ಟೋಬರ್ 12ರಂದು ಆತನನ್ನು ಹುದ್ದೆಯಿಂದ ವಜಾ ಮಾಡಿದರು. ಆದರೆ ಜನರಲ್ ಪರ್ವೇಜ್ ಮುಷರ್ರಫ್ ಶೀಘ್ರವೆ ಕ್ಷಿಪ್ರಕ್ರಾಂತಿ ಮಾಡಿದ. ಪ್ರಧಾನಿ ನವಾಜ್ ಶರೀಫರನ್ನು ಪದಚ್ಯುತಗೊಳಿಸಿ ಅಕ್ಟೋಬರ್ 17ರಂದು ಪಾಕಿಸ್ತಾನದ ಮುಖ್ಯ ಕಾರ್ಯನಿರ್ವಾಹಕನಾಗುವುದರ ಮೂಲಕ ಸರ್ವಾಧಿಕಾರಿಯಾದ. ನವಾಜ್ ಶರೀಫ್ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ಕಳಿಸಿದ. (ನಂತರ ಮುಷರ್ರಫ್ 20.06.2001ರಿಂದ 18.08.2008ರ ವರೆಗೆ ಪಾಕಿಸ್ತಾನದ 10ನೇ ಅಧ್ಯಕ್ಷನಾದ. ಆತನ ಪಕ್ಷ ಆಲ್ ಪಾಕಿಸ್ತಾನ ಮುಸ್ಲಿಂ ಲೀಗ್. 1945ನೇ ಆಗಸ್ಟ್ 11ರಂದು ಹಳೆ ದೆಹಲಿಯಲ್ಲಿ ಜನಿಸಿದ್ದ ಆತ 2023ನೇ ಫೆಬ್ರವರಿ 5ರಂದು ದುಬೈನಲ್ಲಿರುವ ಅಮೆರಿಕ ಆಸ್ಪತ್ರೆಯಲ್ಲಿ ನಿಧನನಾದ.)
‘ನವಾಜ್ ಶರೀಫ್ ಭ್ರಷ್ಟ, ಆದ್ದರಿಂದ ಪರ್ವೇಜ್ ಮುಷರ್ರಫ್ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾನೆ. ಆದರೆ ಸ್ವಲ್ಪೇ ದಿನಗಳಲ್ಲಿ ಮಿಲಿಟರಿ ಅಧಿಕಾರಿಗಳು ಭ್ರಷ್ಟಾಚಾರದ ಚಟುವಟಿಕೆಗಳಲ್ಲಿ ತಲ್ಲೀನರಾಗಿ ಭಾರಿ ಆಸ್ತಿಯ ಕುಳಗಳಾಗುತ್ತಿದ್ದಾರೆ’ ಎಂದು ಪಾಕಿಸ್ತಾನದ ಪ್ರತಿನಿಧಿ ಗುಂಪಿನಲ್ಲಿದ್ದ ಒಬ್ಬ ಯುವತಿ ನನ್ನ ಕೂಡ ಮಾತನಾಡುವಾಗ ತಿಳಿಸಿದಳು. ಆಗ ತಾನೆ ಕಾರ್ಗಿಲ್ ಯುದ್ಧ ಪ್ರಾರಂಭವಾಗಿತ್ತು. ‘ನವಾಜ್ ಶರೀಫ್‌ಗಿಂತಲೂ ಮುಷರ್ರಫ್‌ಗೆ ಕಾರ್ಗಿಲ್ ಯುದ್ಧ ಬೇಕಿತ್ತು. ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನದ ಜನರ ಗಮನವನ್ನು ಆರ್ಥಿಕ ಸಮಸ್ಯೆಗಳ ಕಡೆಗೆ ಹರಿಯದಂತೆ ನೋಡಿಕೊಳ್ಳುವುದು ಮತ್ತು ಮಿಲಿಟರಿ ಆಡಳಿತದ ಬಗ್ಗೆ ಜನರು ತಲೆಕೆಡಿಸಿಕೊಳ್ಳದಂತೆ ಮಾಡುವುದು ಪರ್ವೇಜ್ ಉದ್ದೇಶವಾಗಿದೆ’ ಎಂದು ಆಕೆ ಟೀಕಿಸಿದಳು. ಆದರೆ ಭ್ರಷ್ಟಾಚಾರದ ವಿಚಾರದಲ್ಲಿ ಶರೀಫ್‌ಗಿಂತ ಮುಷರ್ರಫ್ ವಾಸಿ ಎಂದು ಹೇಳಿದ್ದು ನನ್ನನ್ನು ಯೋಚನೆಗೆ ಹಚ್ಚಿತು. ಏತನ್ಮಧ್ಯೆ ಕಾಶ್ಮೀರದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಹೋಯಿತು.
1999ನೇ ಮೇ 3ರಿಂದ ಪಾಕಿಸ್ತಾನ ಯುದ್ಧ ಪ್ರಾರಂಭಿಸಿ ಲೈನ್ ಆಫ್ ಕಂಟ್ರೋಲ್ ಬಳಿಯ ಕಾರ್ಗಿಲ್ ಪ್ರದೇಶದ ಮೇಲೆ ಆಕ್ರಮಣಕಾರಿ ಯುದ್ಧ ಸಾರಿತು. ಕಾರ್ಗಿಲ್ ವಶಪಡಿಸಿಕೊಂಡು ಸಿಯಾಚಿನ್ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನು ಅದು ಹೊಂದಿತ್ತು. ಭಾರತೀಯ ಸೈನ್ಯ ರಕ್ಷಣಾತ್ಮಕ ಯುದ್ಧದೊಂದಿಗೆ ಪಾಕಿಸ್ತಾನ ಸೈನ್ಯವನ್ನು 1999ನೇ ಜುಲೈ 26ರಂದು ಹಿಮ್ಮೆಟ್ಟಿಸಿ ವಿಜಯ ಸಾಧಿಸಿತು.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.