ಆಸ್ಟ್ರೇಲಿಯಾದಲ್ಲಿ  ಜೂಲಿಯಾ ಪ್ರಧಾನಮಂತ್ರಿಯಾದ ಹೊಸತರಲ್ಲೇ ಆಕೆಯ ಬಗ್ಗೆ ನಾನಾತರಹದ ಸುದ್ದಿಗಳು, ಅಪನಿಂದನೆಗಳು, ಅವಹೇಳನಕಾರಿ ಮಾತುಗಳು ಹುಟ್ಟಿದ್ದವು. ಉದಾಹರಣೆಗೆ, ಆಕೆಯ ಮನೆ ಅಡುಗೆಮನೆಯ ಫೋಟೋವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, ‘ನೋಡಿ, ಅಡುಗೆಮನೆ ಎಷ್ಟು ಖಾಲಿಯಾಗಿ ಬರಡುಬರಡಾಗಿದೆ, ಆಕೆ ಅಡುಗೆ ಮಾಡುವುದಿಲ್ಲ, ಆಕೆಗೆ ತಾಯ್ತನವೂ ಇಲ್ಲ, ಇಂಥಾ ಹೆಣ್ಣು ನಮ್ಮ ಸಮಾಜಕ್ಕೆ ಮಾದರಿಯಾಗಬಲ್ಲರೇ ಎಂದು ವಿಡಂಬನೆ ಮಾಡಲಾಗಿತ್ತು’.  ಆದರೆ ವಿರೋಧ ಪಕ್ಷದ ನಾಯಕ ಟೋನಿ ಆಬ್ಬೊಟ್ ಎಂಥಾ ಅತ್ಯುತ್ತಮ ಮಾದರಿ ಸಂಸಾರಸ್ಥ ಎಂದು ಬಿಂಬಿಸಲಾಗಿತ್ತು. ಆಸ್ಟ್ರೇಲಿಯಾದ ಮೊದಲ ಮಹಿಳಾ ಪ್ರಧಾನಿ ಎದುರಿಸಿದ ಸವಾಲುಗಳ ಬಗ್ಗೆ ವಿನತೆ ಶರ್ಮ ಆಸ್ಟ್ರೇಲಿಯಾ ಪತ್ರದಲ್ಲಿ ಬರೆದಿದ್ದಾರೆ. 

 

ನಮ್ಮೂರು ಅಂದರೆ ಈ ಕೆಳಗಿನ ಲೋಕದಲ್ಲಿರುವ ಆಸ್ಟ್ರೇಲಿಯಾ ಒಮ್ಮೊಮ್ಮೆ ನಿಂತನೀರಾದಂತೆ ಅನಿಸುತ್ತದೆ. ಆಗೆಲ್ಲ ನಾನು ಗೊಣಗುವುದು ‘ಯಾಕೋ ಈ ದೇಶ ಡೆಡ್ ಕಂಟ್ರಿ ಅನ್ನೋ ಭಾವನೆಯನ್ನು ತರುತ್ತಿದೆ; ನಾನು ಹಾಗೆಂದುಕೊಂಡರೂ ನಮ್ಮೂರು ಸ್ಥಬ್ಧವಾಗಿಲ್ಲ. ಒಂದು ಊರು ಎಂದಿಗೂ ಸ್ತಬ್ದವಾಗುವುದಿಲ್ಲ. ಅಲ್ಲಿ ಒಂದು ಜನಜೀವನವಿರುತ್ತದೆ. ಅಂದರೆ, ದಿನನಿತ್ಯದ ಬದುಕು, ಬದುಕು ನಡೆಸಲು ನಡೆಯುವ ಎಲ್ಲ ಕಾರುಬಾರುಗಳು ಸದಾ ನಡೆಯುತ್ತಲೇ ಇರುತ್ತವೆ. ಬದುಕಿನಲ್ಲಿ ನಿರಂತರ ಚಲನೆಯಿದ್ದೆ ಇರುತ್ತದೆ. ಊರು ನಿಂತನೀರಾದರೂ ನೀರಿನಡಿಯಲ್ಲಿ ಅದೊಂದು ಹರಿವು ಇದ್ದೇ ಇರುತ್ತದೆ. ಅದು ನಮ್ಮ ಮೇಲ್ನೋಟಕ್ಕೆ ಕಾಣಿಸದಾದಾಗ ಯಾಕೋ ನಿಂತನೀರಿನಂತೆ ಭಾಸವಾಗುತ್ತದೆ,’ ಎಂದು ನನ್ನ ಸ್ವಗತ. ಯಾರಾದರೂ ಹೋಗಿ ಅದರಲ್ಲಿ ಒಂದಷ್ಟು ಕೈಕಾಲಾಡಿಸಿ ಕೆದಕಬಾರದೆ ಎನ್ನುವ ಆಸೆ ಹುಟ್ಟುವುದು ಅಸಹಜವಲ್ಲ.

ಹಾಗೆ ಕೆದಕುವ ಕಿತಾಪತಿ ಆಗಾಗ ನಡೆಯುತ್ತದೆ, ಅಂಥಾ ಕಡು ಬೇಸರ ತರಿಸುವ ದೇಶವೇನಲ್ಲ ಇದು, ಎನ್ನುವುದನ್ನು ಖಾತ್ರಿ ಪಡಿಸಿದ್ದು ಹೋದ ವಾರ ನೋಡಿದ ಒಂದು ಟೆಲಿವಿಷನ್ ಕಾರ್ಯಕ್ರಮ. ಆಸ್ಟ್ರೇಲಿಯಾದ ಪ್ರಪ್ರಥಮ ಮಹಿಳಾ ಪ್ರಧಾನಮಂತ್ರಿಯಾಗಿ ಕೆಲಕಾಲ ಅಧಿಕಾರದಲ್ಲಿದ್ದ ಜೂಲಿಯಾ ಗಿಲ್ಲಾರ್ಡ್ ಅನುಭವಿಸಿದ ಅವಹೇಳನೆ, ಅಪಮಾನಗಳ ಬಗ್ಗೆ ಕಾರ್ಯಕ್ರಮ ಮತ್ತಷ್ಟು ಬೆಳಕು ಚೆಲ್ಲಿತ್ತು. ಕಾಕತಾಳೀಯವೆಂಬಂತೆ ಕಾರ್ಯಕ್ರಮ ಪ್ರಸಾರದ ಹಿಂದಿನ ದಿನವಷ್ಟೇ ಜೂಲಿಯಾರಿಗೆ ಕಡು ಕಾಟ ಕೊಟ್ಟ ಆಗಿನ ವಿರೋಧಪಕ್ಷದ ನಾಯಕ ಟೋನಿ ಅಬ್ಬೊಟ್ ಕೂಡ ಟೆಲಿವಿಷನ್ ವರದಿಯಲ್ಲಿ ಕಾಣಿಸಿಕೊಂಡು ಅರೆಕ್ಷಣ ಮಿಂಚಿ ಮಾಯವಾಗಿದ್ದರು. ಅವರಿಬ್ಬರನ್ನೂ ಪರದೆಯ ಮೇಲೆ ನೋಡಿದ್ದು ಈ ದೇಶದಲ್ಲಿ ಅಪರೂಪಕ್ಕೆ ನಡೆಯುವ ರಾಜಕೀಯ ವಿಡಂಬನೆಗಳ ನೆನಪುಗಳನ್ನು ಬಡಿದೆಬ್ಬಿಸಿತ್ತು.

ಜೂಲಿಯಾ ಗಿಲ್ಲಾರ್ಡ್ ಮೊಟ್ಟಮೊದಲ ಮಹಿಳಾ ಪ್ರಧಾನಮಂತ್ರಿ ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ಮುಖ್ಯ ರಾಜಕೀಯ ಪಕ್ಷವಾದ ಲೇಬರ್ ಪಾರ್ಟಿಯ ನಾಯಕತ್ವವನ್ನು ವಹಿಸಿದ್ದ ಮೊಟ್ಟಮೊದಲ ಮಹಿಳೆ ಎನ್ನುವ ಖ್ಯಾತಿಯನ್ನೂ ಪಡೆದಿದ್ದಾರೆ. ಅವರಾದ ನಂತರ ಇಲ್ಲಿಯವರೆಗೂ ಮತ್ತೊಬ್ಬ ಮಹಿಳಾ ರಾಜಕೀಯ ನಾಯಕಿ ರಾಷ್ಟ್ರಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿಲ್ಲ ಎನ್ನುವುದು ಗುರುತಿಸಬೇಕಾದ ವಿಷಯ.

ಯುನೈಟೆಡ್ ಕಿಂಗ್ಡಮ್ ಒಕ್ಕೂಟದಲ್ಲಿನ ವೇಲ್ಸ್ ದೇಶದಲ್ಲಿ ಜನಿಸಿದ ಜೂಲಿಯಾ ತಮ್ಮ ಬಾಲ್ಯದಲ್ಲಿ ಆಸ್ಟ್ರೇಲಿಯಾಗೆ ಬಂದು ನೆಲೆಸಿದ್ದು. ಅಲ್ಲಿಂದ ಮುಂದೆ ಬೆಳೆಯುತ್ತಾ, ಓದುತ್ತಾ, ಅನೇಕ ರಾಜಕೀಯ ಸಂಬಂಧಿತ ಪಾತ್ರಗಳನ್ನೂ ವಹಿಸುತ್ತಾ ಮುಂಚೂಣಿಗೆ ಬಂದು ದೇಶದ ಪ್ರಮುಖ ರಾಜಕಾರಣಿಯಾಗಿ ಗುರುತಿಸಿಕೊಂಡರು. ಅವರದ್ದು ಅಪ್ಪಟ ಆಸ್ಟ್ರೇಲಿಯನ್ ಇಮೇಜ್. ಪ್ರಧಾನಮಂತ್ರಿಯಾಗಿ ಜೂಲಿಯಾ ಕೇವಲ ಮೂರೇಮೂರು ವರ್ಷಗಳು ಮಾತ್ರ (೨೦೧೦-೨೦೧೩) ಅಧಿಕಾರದಲ್ಲಿದ್ದು. ಇದ್ದಕ್ಕಿದ್ದಂತೆ ಅವರು ಆ ಪಟ್ಟಕ್ಕೆ ಬಂದರು ಮತ್ತು ಅಷ್ಟೇ ಕ್ಷಿಪ್ರವಾಗಿ ರ್ಗಮಿಸಿದರು.

ಪ್ರಧಾನ ಮಂತ್ರಿಯನ್ನು ಆ ಪಟ್ಟಕ್ಕೆ ಏರಿಸುವ, ಬೀಳಿಸುವ ಕೆಲಸ ಬಹುಮಟ್ಟಿಗೆ ಪರದೆಯ ಹಿಂದೆ ನಡೆಯುತ್ತದೆ. ‘ಆಡಿಸಿ ನೋಡು, ಬೀಳಿಸಿ ನೋಡು’ ಎಂಬ ಆಟದ ಸೂತ್ರವನ್ನು ಹಿಡಿದವರು ದೇಶದ ಮೈನಿಂಗ್ ಬಾಸ್ ಗಳು ಮತ್ತು ಅತಿ-ಶ್ರೀಮಂತರು. ಇವರುಗಳ ಹಣವು ರಾಜಕೀಯ ಪಾರ್ಟಿಗಳನ್ನು ಬೆಳೆಸುವುದು, ತದುಕುವುದು. ಅಂತೆಯೇ, ಚುನಾವಣೆಯಲ್ಲಿ ಗೆದ್ದ ರಾಜಕೀಯ ಪಕ್ಷದಲ್ಲಿ ಯಾರು ಎಷ್ಟು ಮತ್ತು ಯಾವ ಅಧಿಕಾರವನ್ನು ಹಿಡಿಯಬೇಕು ಎಂಬುದನ್ನೂ ಕೂಡ ಬಹುಮಟ್ಟಿಗೆ ಹಣವುಳ್ಳ ಬಾಸ್ ಗಳೆ ನಿರ್ಧರಿಸುತ್ತಾರಂತೆ. ಕಳೆದ ದಶಕದಲ್ಲಿ ಅವರುಗಳು ಆಡುವ ಪಗಡೆಯಾಟದಲ್ಲಿ ಬಲಿಯಾದವರು ಮತ್ತು ಬಳಸಲ್ಪಟ್ಟವರನ್ನು ನೆನೆಸಿಕೊಂಡರೆ ಅದು ಪ್ರಧಾನಿಯಾಗಿ ಪಟ್ಟಕ್ಕೆ ಬಂದ ಮತ್ತು ತಮ್ಮನ್ನು ಪಟ್ಟದಿಂದ ಇಳಿಸಿದಾಗ ಗಳಗಳನೆ ಅತ್ತು ಬಿಕ್ಕಿದ ಕೆವಿನ್ ರಡ್, ಮತ್ತು ಆ ಕೂಡಲೇ ಪಟ್ಟವನ್ನೇರಿದ ಮತ್ತು ತಾನು ಗದ್ದುಗೆಯಲ್ಲಿ ಕೂತಷ್ಟು ದಿನಗಳೂ ಚಿತ್ರಹಿಂಸೆಯನ್ನನುಭವಿಸಿದ ಜೂಲಿಯಾ ಗಿಲ್ಲಾರ್ಡ್.

ವಕೀಲೆ ಜೂಲಿಯಾ ತಮ್ಮ ಯೂನಿವರ್ಸಿಟಿ ದಿನಗಳಿಂದಲೇ ರಾಜಕೀಯದಲ್ಲಿ ತರಬೇತಿ ಪಡೆಯುತ್ತ ನುರಿತವರು. ರಾಜಕೀಯ ಜೂಟಾಟವಾಡುವುದು ಹೇಗೆ ಮತ್ತು ದಾಳಗಳನ್ನು ಉರುಳಿಸುವುದು ಹೇಗೆ ಅನ್ನುವ ವಿಷಯದಲ್ಲಿ ಅವರಿಗೆ ಪರಿಣಿತಿಯಿತ್ತು. ಪ್ರಧಾನಿ ಪಟ್ಟಕ್ಕೆ ಬರುವ ಮುನ್ನ ಮಂತ್ರಿಯಾಗಿದ್ದೂ ಅಲ್ಲದೆ ಕೆವಿನ್ ರಡ್ ನಾಯಕತ್ವದ ಸರಕಾರದಲ್ಲಿ ಡೆಪ್ಯುಟಿ ಪ್ರಧಾನ ಮಂತ್ರಿಯಾಗಿದ್ದರು. ರಡ್ ನಾಯಕತ್ವವು ಮಣ್ಣುಮುಕ್ಕುವಂತೆ ಮಾಡಿದ್ದಲ್ಲಿ ಜೂಲಿಯಾ ಪಾತ್ರ ಬಹಳಷ್ಟು ಇತ್ತು ಎನ್ನುವ ವಾದವಿದೆ. ಅದರಲ್ಲಿ ನಿಜವೂ ಇದೆ. ಆದರೆ ಎಲ್ಲರಿಗೂ ಇರುವಂತೆ ತನ್ನದೆ ಮಹದಾಸೆಯಿಂದ ಪ್ರಧಾನಿಯಾದರೂ ಜೂಲಿಯಾ ಮಹಿಳೆ, ಮೊದಲ ಮಹಿಳಾ ಪ್ರಧಾನಿ ಎನ್ನುವ ಕಾರಣದಿಂದ ಬಹುಜನರ ನಿಂದನೆಗೆ ಪಾತ್ರರಾಗಿದ್ದು ಬಹಳ ದುರದೃಷ್ಟಕರ.

ಮುಂದೆ ರಾಜಕೀಯದಿಂದ ನಿವೃತ್ತಿಯಾದ ನಂತರ ಜೂಲಿಯಾ ಹೇಳಿದ್ದು ದೇಶದ ಪ್ರಧಾನಮಂತ್ರಿ ಸ್ಥಾನದಲ್ಲಿದ್ದುಕೊಂಡು ಗಂಡಸರು ಅನುಭವಿಸುವ ಸಾಮಾನ್ಯ ಮಟ್ಟದ ಒತ್ತಡಕ್ಕಿಂತಲೂ ಅತಿ ಹೆಚ್ಚು ಒತ್ತಡವನ್ನು ತಾನು ಅನುಭವಿಸಿದ್ದು ಹೆಣ್ಣು ಎಂಬ ಕಾರಣದಿಂದ; ಇದು ಜಗತ್ತಿನ ಲಿಂಗತಾರತಮ್ಯತೆ ಸಮಸ್ಯೆಗೆ ಕನ್ನಡಿ ಹಿಡಿಯುತ್ತದೆ.

ಮುಂದೆ ಬೆಳೆಯುತ್ತಾ, ಓದುತ್ತಾ, ಅನೇಕ ರಾಜಕೀಯ ಸಂಬಂಧಿತ ಪಾತ್ರಗಳನ್ನೂ ವಹಿಸುತ್ತಾ ಮುಂಚೂಣಿಗೆ ಬಂದು ದೇಶದ ಪ್ರಮುಖ ರಾಜಕಾರಣಿಯಾಗಿ ಗುರುತಿಸಿಕೊಂಡರು. ಅವರದ್ದು ಅಪ್ಪಟ ಆಸ್ಟ್ರೇಲಿಯನ್ ಇಮೇಜ್.

ಜೂಲಿಯಾ ಪ್ರಧಾನಮಂತ್ರಿಯಾದ ಹೊಸತರಲ್ಲೇ ಆಕೆಯ ಬಗ್ಗೆ ನಾನಾತರಹದ ಸುದ್ದಿಗಳು, ಅಪನಿಂದನೆಗಳು, ಅವಹೇಳನಕಾರಿ ಮಾತುಗಳು ಹುಟ್ಟಿದ್ದವು. ಉದಾಹರಣೆಗೆ, ಆಕೆಯ ಮನೆ ಅಡುಗೆಮನೆಯ ಫೋಟೋವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ನೋಡಿ, ಅಡುಗೆಮನೆ ಎಷ್ಟು ಖಾಲಿಯಾಗಿ ಬರಡುಬರಡಾಗಿದೆ, ಆಕೆ ಅಡುಗೆ ಮಾಡುವುದಿಲ್ಲ, ಆಕೆಗೆ ತಾಯ್ತನವೂ ಇಲ್ಲ, ಇಂಥಾ ಹೆಣ್ಣು ನಮ್ಮ ಸಮಾಜಕ್ಕೆ ಮಾದರಿಯಾಗಬಲ್ಲರೇ ಎಂದು ವಿಡಂಬನೆ ಮಾಡಲಾಗಿತ್ತು. ಇದಕ್ಕೆ ವಿರುದ್ಧವಾಗಿ ವಿರೋಧ ಪಕ್ಷದ ನಾಯಕ ಟೋನಿ ಆಬ್ಬೊಟ್ ಎಂಥಾ ಅತ್ಯುತ್ತಮ ಮಾದರಿ ಸಂಸಾರಸ್ಥ, ಮೂರು ಹೆಣ್ಣು ಮಕ್ಕಳ ತಂದೆ, ತನ್ನ ಧರ್ಮವನ್ನು ಎತ್ತಿಹಿಡಿಯಲು ಸ್ವಲ್ಪವೂ ಹಿಂಜರಿಯುವುದಿಲ್ಲ ಎಂದೆಲ್ಲಾ ಹೊಗಳಿಕೆ ಬರುತ್ತಿತ್ತು. ಸಂಸತ್ತಿನಲ್ಲಿ, ಪತ್ರಿಕೆಗಳಲ್ಲಿ ಆಕೆಯ ಬಗ್ಗೆ ಸದಾ ನಗಾಡುವುದೇ ಒಂದು ಗೀಳಾಗಿತ್ತು. ಜ್ಯೂಲಿಯಾರ ಒಡನಾಡಿಯನ್ನು ಕೂಡ ಬಿಡದೆ ಆಡಿಕೊಂಡು ಆತನ ಹೇರ್ ಡ್ರೆಸ್ಸಿಂಗ್ ವೃತ್ತಿಯನ್ನು ಲೇವಡಿಮಾಡಿ, ಪ್ರಧಾನಮಂತ್ರಿಗಳು ದಿನಕ್ಕೊಂದು ಬಗೆಯ ಹೇರ್ ಸ್ಟೈಲಿನಲ್ಲಿ ಬರಬಹುದು, ಆಕೆ ಅದೃಷ್ಟವಂತೆ – ಮನೆಯಲ್ಲಿ ಆತನೇ ಅಡುಗೆ ಮಾಡುತ್ತಾನೆ, ಅವಳ ಕೂದಲನ್ನು ತೊಳೆದು ಬಾಚಿ ಸ್ಟೈಲ್ ಮಾಡುತ್ತಾನೆ, ಎಂದೆಲ್ಲ ಅಂದಿದ್ದರು.

ಆದರೆ ಜುಲಿಯಾರ ಅಧಿಕಾರದ ಎರಡನೇ ಮತ್ತು ಮೂರನೇ ವರ್ಷಗಳಲ್ಲಿ ಆಕೆಯನ್ನು ಲೇವಡಿ ಮಾಡುವುದು ಅತಿರೇಕಕ್ಕೇರಿತ್ತು. ಅವರ ದೇಹ, ಮೈಮಾಟದ ಬಗ್ಗೆ, ಮಾತನಾಡುವ ಶೈಲಿ, ತಲೆಕೂದಲಿನ ಬಣ್ಣ, ಹಾಕಿಕೊಳ್ಳುವ ಉಡುಪುಗಳ ವಿನ್ಯಾಸ ಎಲ್ಲವನ್ನೂ ವರ್ಣರಂಜಿತಗೊಳಿಸುತ್ತ ಪತ್ರಿಕೆಗಳು ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದವು. ಸಾಕುನಾಯಿಗಳ ಆಟಕ್ಕೆಂದು ಜ್ಯೂಲಿಯರನ್ನು ಹೋಲುವ ಪ್ಲಾಸ್ಟಿಕ್ ಗೊಂಬೆಗಳನ್ನು ತಯಾರಿಸಿ ನಾಯಿಗಳು ಅವನ್ನು ಜಗಿಯುವ ಫೋಟೋಗಳೂ ಬಂದಿದ್ದವಂತೆ. ಒಂದು ರೆಸ್ಟೋರೆಂಟ್ ತನ್ನ ಊಟತಿಂಡಿ ಪಟ್ಟಿಯಲ್ಲಿ ‘ಜೂಲಿಯಾ ಗಿಲ್ಲಾರ್ಡ್ ಕೆಂಟುಕಿ ಫ್ರೈಡ್ ಕ್ವೇಲ್’ ಎನ್ನುವ ಖಾದ್ಯವಿದೆ ಎಂದು ಆ ಖಾದ್ಯದ ವಿವರಣೆಯನ್ನು ಆಕೆಯ ದೇಹಕ್ಕೆ ಹೋಲಿಸಿತ್ತು. ಸಂಸತ್ತಿನಲ್ಲಿ ಹಲವರು ಈ ಅಸಹ್ಯದ ಬಗ್ಗೆ ಜಿಗುಪ್ಸೆ ವ್ಯಕ್ತಪಡಿಸಿ ಕೋಪ ವ್ಯಕ್ತಪಡಿಸಿದ್ದರು.

ತನ್ನ ಬಗ್ಗೆ ಮಾಡುತ್ತಿದ್ದ ಅಪಪ್ರಚಾರವನ್ನು ಎತ್ತಿಕೊಂಡು ಒಮ್ಮೆ ಜೂಲಿಯಾ ಸಂಸತ್ತಿನಲ್ಲಿ ಬಹಳ ನೊಂದುಕೊಂಡು ಖಾರವಾಗಿ ಪ್ರತಿಕ್ರಿಯಿಸುತ್ತಾ ತನ್ನ ತಂದೆ ತನಗೆ ಹೇಳಿದ್ದ ಒಳ್ಳೆಯ ಮಾರ್ಗದರ್ಶನದ ಮಾತನ್ನು ನೆನಪಿಸಿಕೊಂಡರು.

ದೇಶದ ಹೆಸರುವಾಸಿ ರೇಡಿಯೋ ಕಮೆಂಟೇಟರ್ ಒಬ್ಬರು ಅದಕ್ಕೆ ಪ್ರತಿಕ್ರಿಯಿಸಿ ಜುಲಿಯಾರ ಆ ಮಾತನ್ನು ಕೇಳಿ ಆಕೆಯ ತಂದೆ ಅಪಮಾನದಿಂದ ಕುಗ್ಗಿಹೋಗಿ ಹೃದಯಾಘಾತಕ್ಕೊಳಗಾದರು ಎಂದು ಬಹಳ ಅಸಹ್ಯವಾಗಿ ಅಪಹಾಸ್ಯ ಮಾಡಿದ್ದರು. ಇದು ದೊಡ್ಡ ವಿಷಯವಾಗಿ ಸಂಸತ್ತಿನಲ್ಲಿ ಪುನಃ ಚರ್ಚೆಗೆ ಬಂದು ಆ ಕಮೆಂಟೇಟರ್ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯ ಬಂದು ಆತ ಇನ್ನಷ್ಟು ಉಡಾಫೆ ವರ್ತನೆಯನ್ನೇ ತೋರಿದ್ದರು ಎನ್ನುವುದು ಈ ದೇಶದಲ್ಲಿ ಚಾಲ್ತಿಯಿರುವ ಪುರುಷಾಧಿಕಾರ ಮನೋಭಾವನೆಯನ್ನು ತೋರುತ್ತದೆ.

ಜೂಲಿಯಾರ ಅಧಿಕಾರದ ಕೊನೆಯ ದಿನಗಳಲ್ಲಿ ಆಕೆಯನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಮತ್ತು ಆಕೆಯ ನಾಯಕತ್ವಕ್ಕೆ ಬರುತ್ತಿದ್ದ ಅನೇಕ ರೀತಿಯ ಪ್ರತಿರೋಧದ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿತ್ತು. ಅವರ ಪಕ್ಷದವರು ಗುರುತಿಸಿದಂತೆ ಹೆಣ್ಣಾದ್ದರಿಂದ ಅವರಿಗೆ ಅನಗತ್ಯ ಕಿರುಕುಳವನ್ನು ಕೊಡಲಾಗಿತ್ತು. ‘ಟಫ್’ ನಡವಳಿಕೆ ತೋರಿದರೆ ಆಕೆಯ ಹೆಣ್ತನದ ಬಗ್ಗೆ ಕೊಂಕುಮಾತು ಬರುತ್ತಿತ್ತು. ‘ಮೃದು’ ಭಾವ ತೋರಿದರೆ ಅವಳು ದುರ್ಬಲಳು ಎಂದು ಜನ ಆಡಿಕೊಳ್ಳುತ್ತಿದ್ದರು. ಸಾರ್ವಜನಿಕ ಜೀವನದಲ್ಲಿ ‘ಟಫ್’ ಗಂಡಸರು ಜೂಲಿಯಾ ಒಬ್ಬಳು ವಿಚ್, ಆದ್ದರಿಂದ ‘ditch the witch’ ಎನ್ನುವ ಮಂತ್ರವನ್ನು ಜಪಿಸುತ್ತಿದ್ದರು.

ಆ ಮಂತ್ರವನ್ನು ಒಂದು ತಂತ್ರವನ್ನಾಗಿ ರೂಪಿಸಿದ ಖ್ಯಾತಿ ಟೋನಿ ಅಬ್ಬೊಟ್ ಅವರದ್ದು. ಈತ ಮಾಡಿದ್ದ ಸೆಕ್ಸಿಸ್ಟ್ (ಲಿಂಗವಾದಿ) ಲೇವಡಿ, ಕುಚೋದ್ಯ ಮತ್ತು ಅಪಹಾಸ್ಯಕ್ಕೆ ಕೊನೆಯೇ ಇರಲಿಲ್ಲ. ಅವಕಾಶ ಸಿಕ್ಕಲಿ, ಸಿಕ್ಕದಿರಲಿ, ಟೋನಿ ಅಬ್ಬೊಟ್ ಒಂದು ಸೆಕ್ಸಿಸ್ಟ್ ಲೇವಡಿಯನ್ನು ಮಾಡಿಯೇ ಮಾಡುತ್ತಿದ್ದರು. ನಿಜವಾಗಿಯೂ ಈತ ಹೆಣ್ಣುಮಕ್ಕಳ ತಂದೆಯೇ ಎನ್ನುವ ಪ್ರಶ್ನೆಯೇಳುತ್ತಿತ್ತು. ಆದರೆ ಆತನ ಲೇವಡಿಯನ್ನು ಪ್ರೀತಿಸುವ, ಆರಾಧಿಸುವ ಜನರೇ ಎಲ್ಲೆಲ್ಲೂ ಇದ್ದರು. ಅಂದರೆ ಇದು ಮಹಿಳಾ ನಾಯಕತ್ವವನ್ನು ಒಪ್ಪುವ, ಸ್ವೀಕರಿಸುವ ಸಮಾಜವಲ್ಲ, ಇನ್ನೂ ಹಿಂದುಳಿದಿರುವ ಪುರುಷಪ್ರಧಾನ ಸಮಾಜ ಎನ್ನುವುದು ಕಾಣಿಸುತ್ತಿತ್ತು.

ಕೊನೆ ತಿಂಗಳುಗಳಲ್ಲಿ ಜೂಲಿಯಾರ ಪಕ್ಷದವರೇ (ಅವರ ಹಿಂದಿದ್ದ ಕುಮ್ಮಕ್ಕು ಅದೇ ಹಣವಿದ್ದ ಹದ್ದುಗಳದ್ದು) ಆಕೆಯನ್ನು ಪಟ್ಟದಿಂದ ಇಳಿಸುವ ಮಾತು ಕೇಳಿಬರುತ್ತಿತ್ತು. ರಾಜಕೀಯದಲ್ಲಿ ಅದೇನೂ ಹೊಸದಲ್ಲ ಅಥವಾ ಆಘಾತವನ್ನುಂಟು ಮಾಡುವ ನಡೆಯೂ ಅಲ್ಲ. ಆದರೆ ಅನಿರೀಕ್ಷಿತ ರೀತಿಯಲ್ಲಿ ಜೂಲಿಯಾರ ನಿರ್ಗಮನ ಭಾಷಣವು ಜಾಗತಿಕಮಟ್ಟದಲ್ಲಿ ಚಲನೆಯುನ್ನುಂಟು ಮಾಡಿತು. ಹೋದ ಭಾನುವಾರ ನಾನು ಟಿವಿ ಪರದೆಯಲ್ಲಿ ಆಕೆಯ ಆ ಭಾಷಣವನ್ನು ಮತ್ತೊಮ್ಮೆ ಕೇಳಿದಾಗ, ನೋಡಿದಾಗ ಅಬ್ಬಾ ಎನಿಸಿತು. ಈ ದೇಶದಲ್ಲಿ ಆಗಾಗ ಅಲ್ಲೊಂದು ಇಲ್ಲೊಂದು ಹೀಗೆ ಸಂಚಲನವನ್ನುಂಟು ಮಾಡುವ ಘಟನೆಗಳು ನಡೆದು ಸದ್ಯ, ಇದು ನಿಂತನೀರಲ್ಲ. ನಾವೆಲ್ಲಾ ಇನ್ನೂ ಜೀವಂತವಾಗಿದ್ದೀವಿ ಅನ್ನಿಸಿ ಸಮಾಧಾನವಾಗುತ್ತದೆ.

ಇಷ್ಟಕ್ಕೂ ಜೂಲಿಯಾ ಆಡಿದ ಆ ಮಾತುಗಳು ಏನು, ಯಾಕೆ ಎನ್ನುವುದು ಆಸಕ್ತಿ ಹುಟ್ಟಿಸುವ ವಿಷಯ. ಆಕೆಯ ನೇತೃತ್ವದಲ್ಲಿ ಅಧಿಕಾರದಲ್ಲಿದ್ದ ಸರ್ಕಾರವೇನೂ ಕಲ್ಮಶವಿಲ್ಲದ, ಕಳಂಕವಿಲ್ಲದ ಮತ್ತು ಯಾವಾಗಲೂ ಸತ್ಯವನ್ನೇ ಪಾಲಿಸಿದ ಸರಕಾರವಾಗಿರಲಿಲ್ಲ. ಹಲವಾರು ಏಳುಬೀಳುಗಳೊಡನೆ ನಡೆಯುತ್ತಿದ್ದ ಸರಕಾರವದು. ಅದಕ್ಕೆ ಸಂಪೂರ್ಣ ಮತವೂ ಇರಲಿಲ್ಲ. ಆದರೆ ಇದೆಲ್ಲಕ್ಕೂ ಮೀರಿ ಮಹಿಳಾ ಪ್ರಧಾನಮಂತ್ರಿ ಎಂಬ ಕಾರಣಕ್ಕಾಗಿ ಅವರ ಸರಕಾರವನ್ನು ಇನ್ನಷ್ಟು ದುರ್ಬಲಗೊಳಿಸುವ ಪ್ರಯತ್ನಗಳು ಸದಾ ನಡೆಯುತ್ತಿದ್ದವು.

೨೦೧೩ ರ ಅದೊಂದು ದಿನ ವಿರೋಧಪಕ್ಷದ ನಾಯಕ ಟೋನಿ ಅಬ್ಬೊಟ್ ‘ಸದನದ ಸ್ಪೀಕರ್ ರಾಜೀನಾಮೆ ನೀಡಬೇಕು, ಆತನ ಮೇಲೆ ‘ಸೆಕ್ಸಿಸ್ಟ್’ ನಿಂದನೆ ದಾಖಲಾಗಿದೆ, ಅವನ ಸೆಕ್ಸಿಸ್ಟ್ ವರ್ತನೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಮಂತ್ರಿ ಹೊರಬೇಕು, ಅವರ ಪಕ್ಷಕ್ಕೆ ಸೇರಿದ್ದ ಸ್ಪೀಕರ್ ಅಯೋಗ್ಯ’, ಎಂದು ವಾದಿಸಿದರು. ಅವರ ವಾದವನ್ನು ಕೇಳುತ್ತಾ ಮೌನವಾಗಿ ಕೂತಿದ್ದ ಜೂಲಿಯಾ ಕತ್ತುಬಗ್ಗಿಸಿ ಒಂದಷ್ಟು ಬರೆಯುತ್ತಿದ್ದರು. ಟೋನಿಯ ವಾದ ಮುಗಿದು ಪ್ರತಿವಾದವನ್ನು ಮಂಡಿಸಲು ಜೂಲಿಯಾ ಎದ್ದು ನಿಂತರು. ನಿಂತು ಅನಿರೀಕ್ಷಿತ ರೀತಿಯಲ್ಲಿ ವಾಕ್ ಪ್ರವಾಹವನ್ನು ಹರಿಬಿಟ್ಟರು.

‘ಸದನದ ಸ್ಪೀಕರ್ ಒಬ್ಬ ಸೆಕ್ಸಿಸ್ಟ್ ಎಂದು ನಿಂದಿಸುತ್ತಿರುವ ಈ ಟೋನಿ ಅಬ್ಬೊಟ್ ಏನು ಸತ್ಯಹರಿಶ್ಚಂದ್ರನೇ? ಇವನು ಎಂಥಾ ಸೆಕ್ಸಿಸ್ಟ್ ಎಂದು ನಾನು ಪುರಾವೆ ಸಹಿತ ಹೇಳುತ್ತೀನಿ ಕೇಳಿ’ ಎನ್ನುತ್ತಾ ‘ನಾನು ಹೆಣ್ಣೆಂಬ ಕಾರಣವನ್ನು ಇಟ್ಟುಕೊಂಡು ಟೋನಿ ಅಬ್ಬೊಟ್ ತನ್ನನ್ನು ಯಾವ್ಯಾವ ರೀತಿಗಳಲ್ಲಿ ನಿಂದಿಸಿದ್ದಾರೆ, ಈತ ಒಬ್ಬ misogynist ಆಗಿದ್ದು ತನ್ನ ಸರಕಾರದ ಸದಸ್ಯರ ಮೇಲೆ ಗೂಬೆ ಕೂರಿಸಿ ದೇಶದ ಜನತೆಯನ್ನು ದಾರಿ ತಪ್ಪಿಸಿದ್ದಾರೆ,’ ಎಂದು ಬಹಳ ತೀಕ್ಷ್ಣವಾಗಿ ಎತ್ತಿಹಿಡಿದರು. ‘ಇಂಥ ಅಯೋಗ್ಯನಿಂದ ನಾನು ಹೇಳಿಸಿಕೊಳ್ಳಬೇಕೇ, ಕಲಿತುಕೊಳ್ಳಬೇಕೇ? ಇಲ್ಲ, ಎಂದೆಂದಿಗೂ ಇಲ್ಲ’ ಎಂದು ಖಚಿತದನಿಯಲ್ಲಿ ಘೋಷಿಸಿದರು. ಅವರು ಒತ್ತಿ ಹೇಳಿದ ‘ನಾಟ್ ನೌ, ನಾಟ್ ಎವರ್’ ಮಾತು ಪ್ರಪಂಚದ ಹಲವು ದೇಶಗಳಲ್ಲಿ ರೋಮಾಂಚನಕಾರಿ ಸಂಚಲನವನ್ನು ಉಂಟುಮಾಡಿತು. ಕಾಲೇಜು ಹುಡುಗಿಯರು, ಮಹಿಳಾ ಉದ್ಯೋಗಿಗಳು, ರಾಜಕೀಯ ನಾಯಕರು ಎಂಬಂತೆ ಹಲವು ವಲಯಗಳಲ್ಲಿ ಅವರ ಮಾತು ಪ್ರಸಿದ್ಧಿಯಾಯ್ತು. ಕೆಲದೇಶಗಳಲ್ಲಿ ಅವರ ಮಾತುಗಳನ್ನು ಪುನರುಚ್ಛರಿಸುತ್ತಾ ಜನರು ಮಹಿಳಾಹಕ್ಕುಗಳಿಗೆ ಹೊಸ ಬಣ್ಣವನ್ನು ಲೇಪಿಸಿದರು.

ಆದರೆ ಆಸ್ಟ್ರೇಲಿಯಾದೊಳಗೆ ಅವರ ಆ ಕೊನೆ ಭಾಷಣವನ್ನು ಅನೇಕರು, ಮುಖ್ಯವಾಗಿ ರಾಜಕೀಯ ನಾಯಕರು ಮತ್ತು ಪತ್ರಿಕಾವಲಯ, ಖಂಡಿಸಿದರು. ಅವರ ಕೊನೆಮಾತಿಗೆ ಕುಪ್ರಸಿದ್ಧಿಯ ಬಣ್ಣವನ್ನು ಬಳಿದು ಇನ್ನಷ್ಟು ಮೂದಲಿಸಿದರು. ಮೂರು ದಿನಗಳ ನಂತರ ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿ ರಾಜಕೀಯ ನಿವೃತ್ತಿ ಘೋಷಿಸಿ ಹೊರ ನಡೆದರು. ಅದಾದ ನಂತರ ಜಾಗತಿಕ ಮಟ್ಟದಲ್ಲಿ ಜೂಲಿಯಾ ಹಲವಾರು ಗುರುತರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ಭಾಷಣಗಳು ಮತ್ತಷ್ಟು ಪ್ರಸಿದ್ಧಿಯಾಗಿವೆ. ಅವರ ಪುಸ್ತಕಗಳು ಇನ್ನಷ್ಟು ಮಾರಾಟವಾಗಿವೆ. ಆಸ್ಟ್ರೇಲಿಯಾದಲ್ಲಿ ಅವರನ್ನು ಇಷ್ಟಪಡುವ ಮತ್ತು ಗೌರವಿಸುವ ಮಹಿಳೆಯರು ಹೆಚ್ಚಿದ್ದಾರೆ. ದೇಶದ ಹೊರಗೆ ಅವರ misogyny ಭಾಷಣ ಇನ್ನೂ ಜೀವಂತವಾಗಿದೆ. ಅವರ ‘ನಾಟ್ ನೌ, ನಾಟ್ ಎವರ್’ ಕರೆ ಇನ್ನೂ ಮೊಳಗುತ್ತಿದೆ.