ಹೆಂಗಸರು ಇದೇ ರೀತಿ ತಮ್ಮ ಸಂಜೆಗಳನ್ನು ಕಳೆಯಲು ಸಾಧ್ಯವೇ? ಅಡಿಗೆಮನೆಯ ಜವಾಬ್ದಾರಿ, ಮಕ್ಕಳ ದೇಖರೇಖಿ, ನೆಂಟರಿಷ್ಟರ ಉಪಚಾರ ಮುಂತಾದವುಗಳು ಹೆಣ್ಣಿನ ಸಂಜೆ, ಇಳಿಸಂಜೆಗಳನ್ನು ಕಬಳಿಸುವುದು ವಾಸ್ತವ ಸಂಗತಿ. ಸಂಜೆ ಗಂಡು ಮಾಡುವ `ಚಿಲ್ಲಿಂಗ್’ ಚಟುವಟಿಕೆಗಳನ್ನು ಹೆಣ್ಣು ಮಾಡಿದರೆ ಅವಳನ್ನು ಬೀದಿ ಬಸವಿ, ಬೇಜವಾಬ್ದಾರಿ ಹೆಣ್ಣು, ಚೆಂಗ್ಲು ಹೊಡೆಯುವವಳು ಎಂದೆಲ್ಲ ಅಂದು ಆಡಿ ಕೆಟ್ಟ ಹಣೆಪಟ್ಟಿಗಳನ್ನು ಹಚ್ಚಲಾಗುತ್ತದೆ. ಸನ್ನಿವೇಶ ಹೀಗಿರುವಾಗ, ಹೆಣ್ಣುಗಳು ಸಾಯಂಕಾಲಗಳಲ್ಲಿ ಮನೆಯಿಂದ ಹೊರಗೇ ಬರದಿರುವಾಗ ಅವರ ನಡುವೆ ಸ್ನೇಹ ಸಂಬಂಧಗಳು ಮೂಡುವುದು ಹೇಗೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಒಂಭತ್ತನೆಯ ಬರಹ

ನೇರವಾಗಿ ವಿಷಯಕ್ಕೆ ಬರುತ್ತೇನೆ. ಹೆಂಗಸರ ನಡುವೆ ಅರ್ಥಪೂರ್ಣ ಸಂಬಂಧಗಳು ಬೆಳೆಯಲು ಗಂಡಾಳಿಕೆ ಬಿಡುವುದಿಲ್ಲ. ಯೋಚಿಸಿ ನೋಡಿ.

ಹುಟ್ಟಿದ ಮನೆಯನ್ನು ಹೆಣ್ಣು ತೊರೆಯುತ್ತಾಳೆ. ಸಾಂಪ್ರದಾಯಿಕ ತಾಯಿ ತನ್ನ ಮಗಳನ್ನು ಇವಳು ಕುಲಕ್ಕೆ ಹೊರಗಾಗುವವಳು, ಬೇರೆ ಮನೆಗೆ ಹೋಗುವವಳು, ಪರಭಾರೆ ಎಂದೇ ಬೆಳೆಸುತ್ತಾಳೆ! `ಮದುವೆಯಾಗುವ ತನಕ ತಾವು ರಕ್ಷಿಸಿಟ್ಟುಕೊಳ್ಳಬೇಕಾದ ಇನ್ನೊಬ್ಬರ ಆಸ್ತಿ’ ಎಂದು ಹೆಣ್ಣುಮಕ್ಕಳನ್ನು ಪರಿಗಣಿಸುತ್ತಾರೆ. ಮದುವೆಯ ವಿಧಿಯಾಚರಣೆಯಲ್ಲಿ ಕನ್ಯೆಯನ್ನು ಇನ್ನೊಂದು ಮನೆಗೆ `ದಾನ’ ಮಾಡುತ್ತಾರೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ಗಾದೆಮಾತೇ ಇದೆ. ಅಂದರೆ ತಾನು ಹುಟ್ಟಿದ ಮನೆಯಲ್ಲೇ ಬೇರೂರಲು ಹೆಣ್ಣುಮಗುವಿಗೆ ಅವಕಾಶ ಇಲ್ಲ! ಬಂದ ಅಲ್ಪಸ್ವಲ್ಪ ಬೇರನ್ನು ಮದುವೆಯಲ್ಲಿ ಕಿತ್ತು ಹಾಕಲಾಗುತ್ತದೆ.

ಇನ್ನು ತನ್ನ ಯೌವನ ಕಾಲದಲ್ಲಿ ಮದುವೆಯಾದ ಮನೆಯಲ್ಲಿ ಹೆಣ್ಣು ಬದುಕಬೇಕಾದ ರೀತಿಯನ್ನು ನೋಡಿ. ಅಲ್ಲಿ ಅತ್ತೆ ಎಂಬ `ಸಾಂಪ್ರದಾಯಿಕ ಶತ್ರು’ ಮತ್ತು ವಾರಗತ್ತಿಯರು ಎಂಬ `ಸ್ಪರ್ಧಾಳುಗಳು’ ಅವಳಿಗಾಗಿ ಕಾಯುತ್ತಿರುತ್ತಾರೆ! ಅತ್ತೆ ಸೊಸೆ ಜಗಳ ಎಂಬುದು ಜನಜನಿತವಾದ ನಾಣ್ಣುಡಿ ಆಗಿಬಿಟ್ಟಿದೆ ಅಲ್ಲವೇ? ಮಗ ಮತ್ತು ಗಂಡ ಎಂಬ ದ್ವಿಪಾತ್ರಾಭಿನಯ ಮಾಡಬೇಕಾದ ಪರಿಸ್ಥಿತಿಯಲ್ಲಿರುವ ಒಬ್ಬ ಗಂಡನ್ನು ನಾನಾ-ನೀನಾ ಎಂದು ಪೈಪೋಟಿಯಿಂದ `ವಶಪಡಿಸಿಕೊಳ್ಳುವ’ ಹೋರಾಟಕ್ಕೆ ಗಂಡಾಳಿಕೆಯು ಎರಡು ಪೀಳಿಗೆಯ ಹೆಣ್ಣುಗಳನ್ನು ಹಚ್ಚುತ್ತದೆ, ಮತ್ತು ಜಗಳಗಂಟಿಯರು ಎಂದು ಅವರನ್ನು ಜನ್ಮೇಪಿ ದೂಷಿಸುತ್ತದೆ. ಅಹಹಾ ಲೈಂಗಿಕ ರಾಜಕಾರಣವೇ! ಇದೋ ಪ್ರಪಂಚದ ಪ್ರತಿ ಹೆಂಗಸು ಕೂಡ ದೊಡ್ಡ ನಮಸ್ಕಾರ ಮಾಡಬೇಕಲ್ಲ ನಿನಗೆ! ಗಂಡಾಳಿಕೆಯ ಲೋಕದ ಅತ್ಯಂತ ಜನಪ್ರಿಯ ಮಾತು ಅಂದರೆ ಅದು `ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬುದು! ಈ `ಶತ್ರುಗಳು’ ಆಗಿದ್ದು ಯಾಕೆ, ಹೇಗೆ, ಮತ್ತು ಈ ಹೋರಾಟಭೂಮಿಯನ್ನು ತಯಾರು ಮಾಡಿದವರು ಯಾರು ಎಂದು ಎಂದಾದರೂ ನಾವು ಯೋಚಿಸಿದ್ದೇವೆಯೇ?

ಮದುವೆಯಾದ ಮೇಲೆ ಹೆಣ್ಣು ತನ್ನ ಅಸ್ತಿತ್ವವನ್ನೇನು, ತನ್ನ ಹುಟ್ಟುಹೆಸರನ್ನೇ ಕಳೆದುಕೊಳ್ಳುತ್ತಾಳೆ, ಕೆಲವು ಸಾಂಪ್ರದಾಯಿಕ ಮನೆಗಳಲ್ಲಿ. ಅಲ್ಲಿ ಅವಳಿಗೆ ಬೇರೆ ಹೆಸರಿಡಲಾಗುತ್ತದೆ, ಅಂದರೆ ಅವಳ ಗಂಡನ ಹೆಸರಿಗೆ ಅಥವಾ ಅವಳ ಅತ್ತೆಮನೆಗೆ ಹೊಂದುವ ಹೆಸರನ್ನು ಇಡಲಾಗುತ್ತದೆ! ಇಂತಹ ಸಂದರ್ಭಗಳನ್ನು ನಾನು ನಮ್ಮ ನೆಂಟರ ಬಳಗದಲ್ಲೇ ಕಣ್ಣಾರೆ ನೋಡಿದ್ದೇನೆ.

ಮನೆಯ ಒಳಗಿನ ಹೆಣ್ಣು ಸಂಬಂಧಗಳದ್ದು ಈ ಚಂದವಾದರೆ ಇನ್ನು ಮನೆಯ ಹೊರಗಿನ ಹೆಣ್ಣು ಸಂಬಂಧಗಳ ಕಥೆಯೇನು, ಗಮನಿಸೋಣವೇ? ಮನೆಯ ಹೊರಗೆ ತಾನು ಯಾವ ಹೆಣ್ಣುಗಳನ್ನು ಮಾತಾಡಿಸುತ್ತೇನೆ, ಯಾರ ಜೊತೆ ಓಡಾಡುತ್ತೇನೆ ಎಂಬುದಕ್ಕೆ ಹೆಣ್ಣುಮಗಳಿಗೆ ಮನೆಯೊಳಗಿನ ಸದಸ್ಯರ ಒಪ್ಪಿಗೆ ಮುದ್ರೆ ಬೇಕು. ಸಾಮಾಜಿಕ ಆರ್ಥಿಕ ಅಂತಸ್ತು, ಜಾತಿ, ಧರ್ಮ ಮುಂತಾದ ಅನೇಕ ಅಡ್ಡಿಗಳಿಂದ ಬಾಧಿತವಾದ ಕ್ಷೇತ್ರ ಇದು. ಇದೆಲ್ಲವನ್ನೂ ದಾಟಿ ಮನೆಯ ಹೊರಗಿನ ಹೆಣ್ಣುಸಂಬಂಧಗಳು ಉಳಿಯಬೇಕು ಎಂಬುದು ಸುಲಭದ ಮಾತಲ್ಲ.

ಮದುವೆಯಾದಾಗ ಹೆಣ್ಣು ತನ್ನೆಲ್ಲ ಬಾಲ್ಯ ಸ್ನೇಹಿತೆಯರ ಸಂಪರ್ಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಅವಳ ಬೇರೇ ಕಿತ್ತು ಹೋಗುತ್ತಿದೆ ಎಂದ ಮೇಲೆ ಆ ಪರಿಸರವನ್ನು ಆಧರಿಸಿ ಬೆಳೆದ ಸ್ನೇಹಗಳ ಕಥೆಯೂ ಅದೇ ತಾನೇ.

ಒಂದು ವೇಳೆ ಗಂಡನ ಮನೆಯ ಆಸರೆ ತಪ್ಪಿ ಹೋದ ಹೆಣ್ಣುಮಕ್ಕಳ ಗತಿ ನೋಡಿ, ಅವಳಿಗೆ ತನ್ನದು ಎನ್ನಲು ಒಂದು ಮನೆ ಇರುವುದಿಲ್ಲ. ತವರುಮನೆ, ಅಣ್ಣನ ಮನೆ, ತಮ್ಮನ ಮನೆ ಹೀಗೆ `ಯಾವುದೋ ಒಂದು ಮನೆ’ಯಲ್ಲಿ ಅವಳು ಜೀವನ ಮಾಡಬೇಕಾಗುತ್ತದೆ. ಇಪ್ಪತ್ತನೇ ಶತಮಾನದ ಕಾದಂಬರಿ, ನಾಟಕಗಳಲ್ಲಿ ಬರುವ ವಿಧವೆಯರ ಪಾತ್ರಗಳನ್ನು ನೆನಪಿಸಿಕೊಳ್ಳಿ. ಅದೆಷ್ಟು ಫಣಿಯಮ್ಮಗಳು, ನಾಗತ್ತೆಗಳು, ಪುಟ್ಟಮ್ಮತ್ತೆಗಳು… ಬೇರಿಲ್ಲದ ಗಿಡಗಳು, ದಿಕ್ಕು ತಪ್ಪಿದ ಜೀವಗಳು ಅವರು.

ಇನ್ನು ಉದ್ಯೋಗ ಕ್ಷೇತ್ರದ ಸ್ತ್ರೀಸಂಬಂಧಗಳು – ಬಹುತೇಕ ಅವು ಮೇಲುಮೇಲಿನ ಒಡನಾಟಗಳು ಅಷ್ಟೆ. ಕೆಲಸ ಮುಗಿಸಿ `ಮನೆಗೆ ಹೋಗುವ’ ಚಿಂತೆಯಲ್ಲೇ ಸದಾ ಇರುವ ಉದ್ಯೋಗಿನಿಯರು ತಮ್ಮೊಡನಾಡುವ ಹೆಂಗಸರ ಜೊತೆ ಅರ್ಥಪೂರ್ಣ ಸ್ನೇಹ-ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಕಷ್ಟಸಾಧ್ಯವಾಗಿರುತ್ತದೆ. ವೃತ್ತಿಯ ಒತ್ತಡಗಳು, ವೃತ್ತಿಮಾತ್ರ‍್ಯ, ಅಧಿಕಾರ ಶ್ರೇಣೀಕರಣದ ಇಕ್ಕಟ್ಟುಗಳು ಸ್ತ್ರೀವೃತ್ತಿಸ್ನೇಹದ ಇಕ್ಕಟ್ಟುಗಳನ್ನು ಹೆಚ್ಚು ಮಾಡುತ್ತವೆಯೇ ಹೊರತು ಕಡಿಮೆ ಮಾಡುವುದಿಲ್ಲ. ನಿವೃತ್ತಿಯ ನಂತರವೂ ಉಳಿಯುವ ಗಟ್ಟಿವೃತ್ತಿಬಂಧಗಳು ಹೆಂಗಸರ ನಡುವೆ ಉಂಟಾಗುವುದು ಅಲ್ಲೊಂದು ಇಲ್ಲೊಂದು ಅಷ್ಟೆ.

*****

ಇನ್ನು ಸಂಜೆ ಹಾಗೂ ರಾತ್ರಿಗಳ ವಿಷಯಕ್ಕೆ ಬರೋಣ. ವಾಸ್ತವವಾಗಿ ಕೆಲಸದ ನಂತರದ ಹೊತ್ತೆಂದರೆ ಅದು ಇಷ್ಟಮಿತ್ರರೊಡನೆ ಸಂಬಂಧ, ಸಂಪರ್ಕ ಬೆಳೆಸುವ ಹೊತ್ತು. ಇದು ನಮ್ಮ ಬದುಕಿನ ವಿಧಾನದಲ್ಲಿ ಗಂಡಸರಿಗೆ ಸಿಗುವಷ್ಟು ಸುಲಭವಾಗಿ ಹೆಂಗಸರಿಗೆ ಸಿಗುವುದಿಲ್ಲವೆಂಬುದನ್ನು ನಾವು ಗಮನಿಸಬೇಕು. ಕೆಲಸದ ನಂತರ ಗೆಳೆಯರೊಂದಿಗೆ ಸುತ್ತಾಟ, ಹರಟೆ, ಕ್ಲಬ್ಬುಗಳಲ್ಲಿ ಇಸ್ಫೀಟಾಟ, ಕುಡಿತ, ಮೋಜುಮಸ್ತಿ ಇವು ಅನೇಕ ಗಂಡಸರಿಗೆ ಸಹಜ ವಿಚಾರಗಳು.

ಇವುಗಳನ್ನು ಮಾಡಲು ಅವರು ಯಾರ ಅನುಮತಿಯನ್ನೂ ತೆಗೆದುಕೊಳ್ಳಬೇಕಿಲ್ಲ. ಅಬ್ಬಬ್ಬಾ ಅಂದರೆ `ಮನೆಯಲ್ಲಿ ಹೇಳಿದರಾಯಿತು’ ಅಷ್ಟೇ. ಸಂಜೆ, ಇಳಿಸಂಜೆಗಳಲ್ಲಿ ತಮ್ಮ ಖುಷಿಗಾಗಿ ಗಂಡಸರು ಇರುವುದೇ, ಇರಬೇಕಾದ್ದೇ ಹೀಗೆ ಎಂದು ಗಂಡಾಳಿಕೆಯ ಮನೆಗಳು, ಸಮಾಜಗಳು ಒಪ್ಪಿಬಿಟ್ಟಿವೆ. ಸಿನಿಮಾ, ಟಿವಿಯಂತಹ ಜನಪ್ರಿಯ ಮಾಧ್ಯಮಗಳು ಸಹ ಮತ್ತೆ ಮತ್ತೆ ಈ ಬಿಂಬಗಳನ್ನು ತೋರಿಸಿ ಇದಕ್ಕೆ ಪುಷ್ಟಿ ನೀಡುತ್ತವೆ. ಆದರೆ ಹೆಂಗಸರು ಇದೇ ರೀತಿ ತಮ್ಮ ಸಂಜೆಗಳನ್ನು ಕಳೆಯಲು ಸಾಧ್ಯವೇ? ಅಡಿಗೆಮನೆಯ ಜವಾಬ್ದಾರಿ, ಮಕ್ಕಳ ದೇಖರೇಖಿ, ನೆಂಟರಿಷ್ಟರ ಉಪಚಾರ ಮುಂತಾದವುಗಳು ಹೆಣ್ಣಿನ ಸಂಜೆ, ಇಳಿಸಂಜೆಗಳನ್ನು ಕಬಳಿಸುವುದು ವಾಸ್ತವ ಸಂಗತಿ. ಸಂಜೆ ಗಂಡು ಮಾಡುವ `ಚಿಲ್ಲಿಂಗ್’ ಚಟುವಟಿಕೆಗಳನ್ನು ಹೆಣ್ಣು ಮಾಡಿದರೆ ಅವಳನ್ನು ಬೀದಿ ಬಸವಿ, ಬೇಜವಾಬ್ದಾರಿ ಹೆಣ್ಣು, ಚೆಂಗ್ಲು ಹೊಡೆಯುವವಳು ಎಂದೆಲ್ಲ ಅಂದು ಆಡಿ ಕೆಟ್ಟ ಹಣೆಪಟ್ಟಿಗಳನ್ನು ಹಚ್ಚಲಾಗುತ್ತದೆ. ಸನ್ನಿವೇಶ ಹೀಗಿರುವಾಗ, ಹೆಣ್ಣುಗಳು ಸಾಯಂಕಾಲಗಳಲ್ಲಿ ಮನೆಯಿಂದ ಹೊರಗೇ ಬರದಿರುವಾಗ ಅವರ ನಡುವೆ ಸ್ನೇಹ ಸಂಬಂಧಗಳು ಮೂಡುವುದು ಹೇಗೆ?

*****

ಹಳ್ಳಿಗಳಲ್ಲಿ ರಾಗಿ ಬೀಸುವಾಗ, ಹೊಲದ ಕೆಲಸ ಮಾಡುವಾಗ, ನೀರು ತರುವಾಗ, ಬಟ್ಟೆ ಒಗೆಯುವಾಗ ಹೆಂಗಸರ ನಡುವೆ ಆತ್ಮೀಯ ಸಂಬಂಧಗಳು ಏರ್ಪಡುವ ಅವಕಾಶ ಇತ್ತು. ಉದಾಹರಣೆಗೆ ಕೆರೆಗೆ ಹಾರ ಜನಪದ ಕಥನ ಕವನದ ಗೆಳತಿಯ ಪಾತ್ರ, ಕೆಎಸ್‌ನ ಅವರ `ಶ್ಯಾನುಭೋಗರ ಮಗಳು’ ಹಾಡಿನಲ್ಲಿ ಕವನದ ನಾಯಕಿ ಸೀತಾದೇವಿಯು ತನ್ನನ್ನು ನೋಡಲು ಬಂದ ಗಂಡು ತನಗೇಕೆ ಇಷ್ಟವಾಗಲಿಲ್ಲ ಎಂದು ಗೆಳತಿಯ ಬಳಿ ಹೇಳುವುದು…. ಇಂತಹ ಸಂಬಂಧಗಳಿಗೆ ಸಾಹಿತ್ಯಸಾಕ್ಷಿ ನೀಡಿವೆ.

ನಗರಗಳಲ್ಲಿ ಕಿಟ್ಟಿಪಾರ್ಟಿ ಸಂಸ್ಕೃತಿ, ಭಜನಾ ಮಂಡಳಿಯಲ್ಲಿ ಹಾಡು ಹೇಳಲು ಒಟ್ಟಿಗೆ ಹೋಗುವುದು, ನಗೆಕೂಟಗಳು ಇಂಥವು ಹೆಂಗಸರಲ್ಲಿ ಒಂದಷ್ಟು ಒಡನಾಟವನ್ನು ಉಂಟು ಮಾಡಿದರೂ ಇವೆಲ್ಲವೂ ಗಂಡ- ಅತ್ತೆ-ಮಾವನ `ಒಪ್ಪಿಗೆ’ಯಿಂದಲೇ ನಡೆಯಬೇಕಾದ ಪಂಜರದೊಳಗಿನ ಚಟುವಟಿಕೆಗಳೇ ಎಂಬುದನ್ನು ಮರೆಯಲಾಗದು.

ನಾಟಕ ಕ್ಷೇತ್ರದಲ್ಲಿ, ಸಿನಿಮಾಗೆ ಹಾಡು ಬರೆಯುವ ಚಟುವಟಿಕೆ, ಸಿನಿಮಾ ನಿರ್ದೇಶನ ಮುಂತಾದ `ಸಮಯದ ಪರಿವೆ ಇರಬಾರದ’ ಕ್ಷೇತ್ರಗಳಲ್ಲಿ ಭಾಗವಹಿಸುವ ಹೆಂಗಸರ ಸಂಖ್ಯೆ ಎಷ್ಟು ಕಡಿಮೆ ಎಂಬುದನ್ನು ನೆನೆದಾಗ ಎಂತಹ ಬಂಧಿತ ಬಾಳು ಹೆಂಗಸರದ್ದು ಎಂದು ನಮಗೆ ಅರ್ಥ ಆಗುತ್ತದೆ.

ಇಷ್ಟೆಲ್ಲ ಮಾತುಗಳ ಅರ್ಥ ಏನು? ಹೆಂಗಸರು ಮನೆ ಮಕ್ಕಳನ್ನು ನೋಡಿಕೊಳ್ಳಬಾರದು, ಸದಾ ಮನಸುಖರಾಣಿಯರಾಗಿ ತಮಗೇನಿಷ್ಟವೋ ಅದನ್ನೇ ಮಾಡುತ್ತಿರಬೇಕು ಎಂದೇ? ಅಲ್ಲ. ಖಂಡಿತ ಅಲ್ಲ. ನಮ್ಮ ಸಮಾಜದಲ್ಲಿನ ವಿವೇಕಿಗಳು, ಪ್ರಜ್ಞಾವಂತರು `ಸ್ವಂತ ಸಮಯದ ಮೇಲೆ ಹಿಡಿತ’ ಎಂಬ ವಿಷಯದಲ್ಲಿ ಗಂಡಸರಿಗೂ ಹೆಂಗಸರಿಗೂ ಇರುವ `ಲಿಂಗಾಧಾರಿತ ವ್ಯತ್ಯಾಸ’ (ಜೆಂಡರ್ ಗ್ಯಾಪ್) ವನ್ನು ಅರ್ಥಮಾಡಿಕೊಳ್ಳಬೇಕು, ಅದನ್ನು ನಿವಾರಿಸಲು ಏನಾದರೂ ಸಕಾರಾತ್ಮಕವಾದದ್ದನ್ನು ಮಾಡಬೇಕು ಎಂಬ ಅರಿವನ್ನುಂಟುಮಾಡುವುದಷ್ಟೇ ಈ ಬರವಣಿಗೆಯ ಉದ್ದೇಶ. `ಸದಾ ಮನೆ ಮಕ್ಕಳನ್ನು ನೋಡಿಕೊಳ್ಳುವ ನನ್ನ ತಾಯಿ/ಅಕ್ಕ/ತಂಗಿ/ಹೆಂಡತಿಗೆ ಒಂದು ಬಿಡುವು ಬೇಕು, ಎಂದಾದರೊಂದು ಸಂಜೆ, ಇಳಿಸಂಜೆಯಲ್ಲಿ ತನಗೆ ಇಷ್ಟವಾದ ಚಟುವಟಿಕೆಗಳನ್ನು ಮಾಡುವ ಅವಕಾಶ ಅವಳಿಗೆ ಸಿಗಬೇಕು, ಇದಕ್ಕಾಗಿ ನಾನು ಒಂದೊಂದು ದಿನ ಸಂಜೆ ಮನೆಯ ಜವಾಬ್ದಾರಿ ತೆಗೆದುಕೊಂಡು ಅವಳಿಗೆ ಬಿಡುವು ಕೊಡಬೇಕು, ಒಬ್ಬ ಸ್ವತಂತ್ರ ಮನಸ್ಸಿನ ವ್ಯಕ್ತಿಯಾಗಿ ಅವಳಿಗೆ ಈ ಸಂತೋಷ ಪಡುವ ಹಕ್ಕಿದೆ’ ಎಂಬುದನ್ನು ನಮ್ಮ ಗಂಡುಲೋಕ ಅರ್ಥ ಮಾರಿಕೊಳ್ಳಬೇಕು ಎಂಬ ವಿನಂತಿ ಇದು ಅಷ್ಟೆ.

ಈ ಸಲಹೆಯನ್ನು ಪರಿಪಾಲಿಸುವುದು ಮೇಲ್ನೋಟಕ್ಕೆ ಸುಲಭ ಎನ್ನಿಸಿದರೂ ಗಂಡಾಳಿಕೆಯ ಶತಮಾನಗಳಷ್ಟು ಹಳೆಯ ಅಭ್ಯಾಸಗಳ ಹಿನ್ನೆಲೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಆಚರಿಸುವುದು ಸುಲಭವಲ್ಲ. ಹೆಣ್ಣನ್ನು ಸದಾ ಅಧೀನ ಸ್ಥಿತಿಯಲ್ಲಿಯೇ ನೋಡಿರುವ ಗಂಡು ಸಮಾಜಕ್ಕೆ ಅವಳು ತನ್ನ ಅನುಕೂಲಕ್ಕಾಗಿ ಇರುವ ಒಂದು ಭೋಗವಸ್ತು ಎಂಬ ಧೋರಣೆ ಅಂತರ್ಗತವಾಗಿದೆ. ಅದು ಬದಲಾಗುವ ತನಕ ಅವಳನ್ನು ಒಬ್ಬ ವ್ಯಕ್ತಿ ಎಂದು ನೋಡಲು ಆ ಸಮಾಜಕ್ಕೆ ಸಾಧ್ಯವಿಲ್ಲ. ಎಲ್ಲಿ ತನಕ ಹೆಣ್ಣನ್ನು ಒಬ್ಬ ವ್ಯಕ್ತಿ ಎಂದು ಒಂದು ವ್ಯವಸ್ಥೆ ನೋಡುವುದಿಲ್ಲವೋ ಅಲ್ಲಿಯವರೆಗೆ ಅದಕ್ಕೆ ಅವಳ ಆಯ್ಕೆಗಳ ಬಗ್ಗೆ ಮತ್ತು ವ್ಯಕ್ತಿಸ್ವಾತಂತ್ರ್ಯದ ಬಗ್ಗೆ ಗೌರವ ಇರಲು ಸಾಧ್ಯವಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ 2025ರಲ್ಲಿ ಇರುತ್ತೇವೆ. ಈ ಕಾಲಮಾನದಲ್ಲಿ ಸ್ತ್ರೀಸಂಬಂಧಗಳ ಸ್ಥಿತಿಗತಿ ಏನು ಎಂದು ಅವಲೋಕಿಸಿದರೆ ನಮಗೆ ಕೆಲವು ಕುತೂಹಲಕರ ವಿಷಯಗಳು ಅರಿವಿಗೆ ಬರುತ್ತವೆ.

1. ಸ್ತ್ರೀಯರು ತಮ್ಮ ಚರಿತ್ರೆಯ ಪುನರ್‌ಲೇಖನ ಮಾಡುತ್ತಿದ್ದಾರೆ, ಉದಾಹರಣೆಗೆ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ, ಮಹಿಳಾ ವಿಜ್ಞಾನಿಗಳ ಚರಿತ್ರೆ, ರಂಗನಟಿಯರ ಚರಿತ್ರೆ ….. ಹೀಗೆ. ಪುರುಷಪ್ರಧಾನ ಚರಿತ್ರೆಯ ಸಂಕಥನಗಳ ಮರಳಿನಲ್ಲಿ ಹೂತುಹೋದ ತಮ್ಮ ತಾಯಂದಿರ ಚರಿತ್ರೆಯನ್ನು ಅವರು ಮರಳಿ ನಿರ್ಮಿಸಿಕೊಳ್ಳುತ್ತಿದ್ದಾರೆ.

2. ಈವರೆಗೂ ಕೇವಲ ಪುರುಷರದು ಎಂದು ಭಾವಿಸಲಾಗುತ್ತಿದ್ದ ಕ್ಷೇತ್ರಗಳಿಗೆ (ಸೈನ್ಯ, ಭಾರೀವಾಹನಗಳ ಚಾಲನೆ, ನಾಟಕಮಂಡಳಿ-ಯಕ್ಷಗಾನ ಮಂಡಳಿಗಳ ನಾಯಕತ್ವ ….. ಇಂಥವು) ಸ್ತ್ರೀಯರು ಕಾಲಿಡುತ್ತಿರುವುದು ಮಾತ್ರವಲ್ಲ, ಪರಸ್ಪರರ ಇರವನ್ನು ಗುರುತಿಸಿ, ಪುರಸ್ಕರಿಸಿ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಕೆಡಬ್ಲ್ಯೂಎಎ ಅವಾರ್ಡ್ಸ್, ಐಡಬ್ಲ್ಯೂಎಎ ಅವಾರ್ಡ್ಸ್ ಇಂತಹ ವ್ಯವಸ್ಥೆಗಳಲ್ಲಿ, ಮಹಿಳೆಯರು ಮುಂಚೂಣಿಯಲ್ಲಿ ನಿಂತು ಮಹಿಳೆಯರನ್ನು ಗುರುತಿಸುವುದು, ಗೌರವಿಸುವುದು ಒಂದು ಒಳ್ಳೆಯ ಹೆಜ್ಜೆ.

3. ಹೆಂಗಸಿನ ಸ್ವಾತಂತ್ರ್ಯಕ್ಕೆ ಮತ್ತು ಸ್ತ್ರೀಯರ ಪರಸ್ಪರ ಸಂಬಂಧ-ಸಂಪರ್ಕಗಳಿಗೆ ಪ್ರೋತ್ಸಾಹ ನೀಡದ ಪಿತೃಪ್ರಧಾನ ವ್ಯವಸ್ಥೆಯ ಮದುವೆಯನ್ನು ಆಧುನಿಕ ಪೀಳಿಗೆಯ ಯುವತಿಯರು ಸಂಶಯದಿಂದ ನೋಡುತ್ತಿರುವುದು ಮದುವೆಯ ಸಾಂಪ್ರದಾಯಿಕ ನೆಲೆಯು ಬದಲಾಗಬೇಕು ಮತ್ತು ಸ್ತ್ರೀಗೆ ಅಲ್ಲಿ ಸಿಗುತ್ತಿರುವ ಗೌರವ ಹೆಚ್ಚಾಗಬೇಕು ಎಂಬುದರ ಸೂಚನೆ ಅಲ್ಲವೇ?

4. ಸಿನಿಮಾ ಮುಂತಾದ ರೂಪಲಾವಣ್ಯ, ಪ್ರದರ್ಶನಗಳಿಗೆ ಪ್ರಾಮುಖ್ಯ ಇರುವ ಜೊತೆಗೆ ವಿಪರೀತ ಗಂಡಾಳಿಕೆ ಇರುವ ಕ್ಷೇತ್ರಗಳಲ್ಲಿ ಗುಪ್ತವಾಗಿ ನಡೆಯುವ ಸ್ತ್ರೀಶೋಷಣೆಯನ್ನು `ಮೀಟೂ’ ಅಭಿಯಾನಗಳು ಬೆಳಕಿಗೆ ತರುತ್ತಿವೆ ಎಂಬುದು ಸ್ತ್ರೀಯರ ನಡುವೆ ಹೆಚ್ಚುತ್ತಿರುವ ಒಗ್ಗಟ್ಟಿಗೆ ಸಂಕೇತವಾಗಿದೆ.

5. ಈ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಹೆಂಗಸರು ಗೆಳತಿಯರಾಗಿ ಅಥವಾ ಪ್ರೇಮಿಗಳಾಗಿ (ನಮ್ಮ ಸಮಾಜದಲ್ಲಿ ಈಗೀಗ ಪ್ರಕಟಗೊಳ್ಳಲು ಸಂಕೋಚಿಸದೆ ಕಂಡುಬರುತ್ತಿರುವ ವಿದ್ಯಮಾನ ಇದು ಅಂದರೆ ಸ್ತ್ರೀ-ಸ್ತ್ರೀ ಸಹಜೀವನ) ತಮ್ಮಷ್ಟಕ್ಕೆ ತಾವು ಜೀವಿಸುವುದು ಕಂಡುಬರುತ್ತಿದೆ. ಈವರೆಗಿನ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಅಂದರೆ `ಗಂಡ-ಹೆಂಡತಿ-ಮಕ್ಕಳು ಒಂದು ಘಟಕವಾಗಿ ಜೀವಿಸುವ’ ಗಂಡಾಳಿಕೆಯ ನಿಡುಗಾಲದ ಮೂಲವ್ಯವಸ್ಥೆಯು ಸಣ್ಣದಾಗಿ ಅಲ್ಲಾಡುತ್ತಿರುವುದಕ್ಕೆ, ಪ್ರಶ್ನಿಸಲ್ಪಡುತ್ತಿರುವುದಕ್ಕೆ ಇದು ಸಾಕ್ಷಿ ಅಲ್ಲವೇ? ಇದೇ ವಸ್ತುವನ್ನು ಹೊಂದಿದ್ದು, 2015ರಲ್ಲಿ ಪ್ರಕಟಗೊಂಡ ಕಾವ್ಯ ಕಡಮೆ ಅವರ `ಪುನರಪಿ’ ಕಾದಂಬರಿಯನ್ನು ನಾವು ಗಮನಿಸಬಹುದು. ಈಚೆಗೆ ನಾನು ಯೂಟ್ಯೂಬಿನಲ್ಲಿ ನೋಡಿದ ತಮಿಳು ಭಾಷೆಯ ಕಿರುಚಿತ್ರವೊಂದರಲ್ಲಿ ತಾಯಿ ಎಷ್ಟು ಪ್ರಯತ್ನಿಸಿದರೂ ಮಗಳಿಗೆ ವರ ಸಿಗುತ್ತಿಲ್ಲ ಎಂದು ಪೇಚಾಡುತ್ತಿದ್ದಾಗ, ನಿರಂತರ ವಧುಪರೀಕ್ಷೆ, ಗಂಡು ಸಿಗಲಿಲ್ಲ ಎಂಬ ಭರ್ತ್ಸ್ಯನೆಗಳಿಂದ ಬೇಸತ್ತ ಆ ಯುವತಿ ಕೊನೆಯಲ್ಲಿ, ತನ್ನ ತಂಗಿಯನ್ನು ಸ್ಕೂಟರಿನಲ್ಲಿ ಕೂರಿಸಿಕೊಂಡು ಗಾಡಿ ಓಡಿಸುತ್ತಾ ಹೇಳುತ್ತಾಳೆ “ಏನೀಗ ಮದುವೆಯಾಗದಿದ್ರೆ? ಹೀಗೇ ಕೆಲಸಕ್ಕೆ ಹೋಗಿ ಬಂದುಕೊಂಡು, ರಜೆಯಲ್ಲಿ ಪ್ರವಾಸ, ಸಿನಿಮಾ ಅಂತ ತಿರುಗಾಡಿಕೊಂಡು ಇದ್ದುಬಿಡೋದು. ಮದುವೆಯಾಗದಿದ್ರೆ ಬದುಕಕ್ಕೆ ಆಗಲ್ಲವೇನು?”: ಅವಳು ಕೇವಲ ತನ್ನ ತಂಗಿಯನ್ನು ಕೇಳಿದ ಪ್ರಶ್ನೆ ಇದು ಅನ್ನಿಸಲಿಲ್ಲ ನನಗೆ.

ಕೊನೆಗೂ ಜೀವನದಲ್ಲಿ ಮುಖ್ಯ ಆಗುವುದು ಮಾನವ ಸಂಬಂಧಗಳೇ. ಆದರೆ ಎಲ್ಲಿ ವ್ಯಕ್ತಿಸ್ವಾತಂತ್ರ್ಯಕ್ಕೆ ಗೌರವ ಇಲ್ಲವೋ ಅಲ್ಲಿ ಮಾನವ ಚೇತನ ಉಸಿರುಗಟ್ಟಿದಂತೆ ಒದ್ದಾಡುತ್ತದೆ. ಈ ಮಾತು ಲಿಂಗ, ಜಾತಿ, ಬಣ್ಣ, ಜನಾಂಗ, ದೇಶ, ಕಾಲ, ಪೀಳಿಗೆ…. ಎಲ್ಲಾ ಭೇದಗಳನ್ನು ಮೀರಿದ ಸತ್ಯ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ಹೆಂಗಸರ ಸ್ವಾತಂತ್ರ್ಯ ಹಾಗೂ ಕರ್ತೃತ್ವ(ಏಜೆನ್ಸಿ ಅನ್ನುವ ಅರ್ಥದಲ್ಲಿ) ಗಳಿಗೆ ಬೆಲೆ ಸಿಗುತ್ತದೆ ಹಾಗೂ ಎಲ್ಲ ಸಂಬಂಧಗಳೂ ಸಖ್ಯದ ಹಾಡಾಗುತ್ತವೆ. ಈ ಕಾಲ ಬರುವ ತನಕ ಸ್ತ್ರೀಯರು ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸಬೇಕಾಗುತ್ತದೆ.