ನೋಡಲು ಸುಂದರವಾಗಿದ್ದರೆ ಅವರು ಕೆಟ್ಟವರೇ ಆಗಿರಬೇಕು. ಅಹಂಕಾರಿ, ಸ್ವಾರ್ಥಿ, ಸಮಯಸಾಧಕಿ, ಅವಕಾಶವಾದಿಯೇ ಆಗಿರಬೇಕೆಂಬ ಮೌಢ್ಯ ಉಸಿರುಗಟ್ಟಿಸುತ್ತದೆ. ನಮ್ಮ ಧಾರಾವಾಹಿಗಳಂತೂ ನಾಯಕಿಗಿಂತ ಸುಂದರಿಯಾದ ಲೇಡಿ ವಿಲನ್‌ಗಳನ್ನು ತೋರಿಸಿ ಜನರ ಮೌಢ್ಯಕ್ಕೆ ಪುಷ್ಟಿ ನೀಡುತ್ತವೆ. ದೇವರು ಕೊಟ್ಟ ರೂಪ. ಅದರಲ್ಲಿ ಅವರದ್ದೇನು ತಪ್ಪು? ಎಂದು ನೋಡಲು ಸುಮಾರಾಗಿರುವವರ ಪರ ವಹಿಸುವ ಸಮಾಜವೇ, ಚೆಂದ ಇರುವವರನ್ನು “ದೇವರು ಕೊಟ್ಟ ರೂಪ. ಅವರನ್ನೇಕೆ ಶಿಕ್ಷಿಸಬೇಕು?” ಎಂದು ಯೋಚಿಸುವುದಿಲ್ಲ. ಪ್ರತಿ ಬಾರಿಯೂ ಪ್ರತಿ ಸಾಧನೆಯನ್ನೂ ತನ್ನ ಯೋಗ್ಯತೆಯಿಂದಲೇ ಸಾಧಿಸಿದ್ದು ಎಂದು ಋಜುವಾತು ಮಾಡಿಕೊಂಡು ಓಡಾಡಬೇಕಾದ ಶಿಕ್ಷೆಯನ್ನು ಸುಂದರಿಯರು ಭರಿಸಬೇಕು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

ಇದೊಂದು ಸಾಲು ಎಬ್ಬಿಸಿದ ರಾಡಿ ಇದೆಯಲ್ಲ ಹೇಳಿದರಷ್ಟೇ ಅರ್ಥವಾಗುವ ಅಧ್ಯಾಯವದು. ಕೊರೋನಾ ಸಮಯದಲ್ಲಿ ನಾವೆಲ್ಲರೂ ಮನೆಯ ನಾಲ್ಕುಗೋಡೆಯೊಳಗೆ ಬಂಧಿಯಾಗಿ, ದಿನಕ್ಕೆ ನಾಲ್ಕು ಬಾರಿ ರುಚಿರುಚಿಯಾಗಿ ಮಾಡಿ ಬಡಿಸುತ್ತಾ, ಉಜ್ಜಿದ್ದನ್ನೇ ಉಜ್ಜಿ ತೊಳೆದು ಕೈ ಸವೆಸುತ್ತಾ, ಹಳೆಯ ಹವ್ಯಾಸಗಳನ್ನು ನೆನಪು ಮಾಡಿಕೊಂಡು ಸುತ್ತಲಿನ ಕರಾಳ ವಾಸ್ತವವನ್ನು ಕ್ಷಣಕಾಲವಾದರೂ ಮರೆಯಲು ಪ್ರಯತ್ನಿಸುತ್ತಾ ಇರುವಾಗಿನ ಕಥೆ. ಸಾಮಾಜಿಕ ಜಾಲತಾಣಗಳೇ ನಮ್ಮನ್ನು ರಂಜಿಸುವ, ರಂಜನೆಗೆ ಹೊಸ ಹೊಸ ದಾರಿಗಳನ್ನು ತೋರುವ ಗುರುವಾಗಿತ್ತು. ನಾವು ಓದಿದ ಪುಸ್ತಕ, ನೋಡಿದ ಸಿನಿಮಾ, ಮಾಡಿದ ಅಡುಗೆ, ಬರೆದ ಚಿತ್ರ, ಜೀವವುಳಿಸಿದ ಔಷಧಿ, ಹೊಟ್ಟೆಯಲ್ಲಿ ಕತ್ತರಿಯಾಡಿಸಿದ ಪರಿಸ್ಥಿತಿ ಎಲ್ಲವನ್ನೂ ಎಫ್.ಬಿ.ಯಲ್ಲಿ ಹಂಚುತ್ತಾ ಕುಳಿತಿದ್ದೆವು. ಆಗ ಬರೆದ ಕವಿತೆಯೊಂದರ ಸಾಲಿನಲ್ಲಿ “ಹಾದಿಖರ್ಚಿಗೆ ನಿನ್ನ ಮುದ್ದಿರಲು ಸಾಕು” ಎಂದಿದ್ದೇ ಒಂದಷ್ಟು ಜನರ ಕುಹಕ, ಕೆಂಗಣ್ಣಿಗೆ ಕಾರಣವಾಗಿತ್ತು. “ಮದುವೆಯಾಗಿ ಎಂಟು ಹತ್ತು ವರ್ಷವಾದ ಮೇಲೆ ಯಾವ ಹೆಂಡತಿ ತಾನೆ ಗಂಡನಿಗೆ ಇಷ್ಟು ಸಿಹಿಯಾಗಿ ಪದ್ಯ ಬರೆಯುತ್ತಾಳೆ? ಏನೇ ಪ್ರೀತಿಸಿ ಮದುವೆಯಾದರೂ, ಒಂದೆರಡು ವರ್ಷದಲ್ಲೇ ಮನೆ, ಸಂಸಾರ, ಮಕ್ಕಳು, ಖಾಯಿಲೆ ಅಂತ ಭೂಮಿಗಿಳಿದು ನಡೆಯಬೇಕು. ಹೀಗೆ ಹಾದಿಬೀದಿ ಸುತ್ತುವ ರಮ್ಯ ಕನಸಿನ ಕವಿತೆ ಬರೆದಿದ್ದಾಳೆ ಎಂದರೆ ಒಂದೋ ಜನರ ಮುಂದೆ ಆಡುತ್ತಿರುವ ನಾಟಕ ಇದು, ಇಲ್ಲವೆಂದರೆ ಮತ್ಯಾವುದೋ ಪ್ರೇಮಿಗೆ ಕೊಡುತ್ತಿರುವ ಗುಟ್ಟಾದ ಸನ್ನೆಯಿದು” ಅಂತ ಮೂರು ದಿನ ಚರ್ಚೆಯಾಯಿತು.

ಅವರವರಲ್ಲೇ ಚರ್ಚೆ ನಡೆಸಿದರೆ ಏನು ಉಪಯೋಗ? ಬರೆದವರಿಗೆ ಬಿಸಿ ಮುಟ್ಟಿಸದಿದ್ದರೆ ಕೆಂಡ ಕಾಯಿಸಿ ಉರಿ ಹಚ್ಚಿದ್ದು ವ್ಯರ್ಥವಾಗುವುದಿಲ್ಲವೆ? ಸೂಕ್ತ ಸಂದೇಶವಾಹಕರನ್ನು ಹುಡುಕಿ ಕಳುಹಿಸಿದ್ದರು. “ಏನೇ ಇದು ಅಸಹ್ಯ? ಫೇಸ್ ಬುಕ್ ಅಲ್ಲಿ ಪ್ರೇಮಕವಿತೆ ಬರ್ಕೊಂಡು ಕೂತಿದ್ದೀಯಂತೆ. ಅತ್ತೆ ಮನೆ ಸೊಸೆಯಾಗಿ, ಇಂತಹ ಕೆಲಸ ಮಾಡಿದ್ದೀಯಲ್ಲ ಚೂರಾದ್ರೂ ಭಯ ಬೇಡ್ವೇನೆ? ನಾಳೆ ನಿನ್ನ ಗಂಡನೋ, ಓರಗಿತ್ತಿಯೋ ಈ ಕವಿತೆ ಓದಿದ್ರೆ ಪರಿಸ್ಥಿತಿ ಏನಾಗುತ್ತೆ ಗೊತ್ತಾ? ಜನ ತಲೆಗೊಂದು ಮಾತಾಡ್ತಿದ್ದಾರೆ. ನಿನ್ನ ಒಳ್ಳೆಯದಕ್ಕೆ ಹೇಳ್ತಿದ್ದೀನಿ. ಕತೆ, ಕವಿತೆ, ನಾಟಕ, ಕುಣಿತ ಏನಿದ್ರೂ ಮದುವೆಗೆ ಮುಂಚೆ ಸರಿ. ಆಮೇಲೆ ಗಂಭೀರವಾಗಿರಬೇಕು. ಹುಚ್ಚುಚ್ಚಾರ ಬರೆಯೋದು ಅದನ್ನು ಅಲ್ಲಿ ಇಲ್ಲಿ ಕಳಿಸೋದು. ಛೀ ಅಸಹ್ಯ ಕಣೇಮಾ. ಇಷ್ಟಕ್ಕೂ ನೀನು ಅದೇನು ಕವಿತೆ ಬರೆದಿದ್ದೀಯೋ ನಾನು ಓದಿಲ್ಲ. ಆದರೆ ಈಗಿಂದೀಗಲೇ ಡಿಲಿಟ್ ಮಾಡು. ಮರ್ಯಾದೆಯಾಗಿ ಸಂಸಾರ ಮಾಡ್ಕೊಂಡು ಇರು. ಉಪ್ಪು ಸೊಪ್ಪಿಗಿಲ್ಲದ ಕವಿತೆಯಿಂದ ಜೀವನ ಹಾಳು ಮಾಡ್ಕೋಬೇಡ” ಅಂದಿದ್ದಳು.

ಇದು ಸಾಹಿತ್ಯ, ಸಿನಿಮಾ, ಕಲೆಯನ್ನು ದೂರವಿಟ್ಟು ನಮ್ಮ ಪಾಡಿಗೆ ನಾವು ಬದುಕಿದರಷ್ಟೇ ಸುಭಗರು ಎಂದು ತಿಳಿದುಕೊಂಡವರ ವಾದ. ಇನ್ನು ಈ ಕ್ಷೇತ್ರದಲ್ಲೇ ಇದ್ದು, ಒಬ್ಬರ ಏಳಿಗೆಯನ್ನು ಸಹಿಸಲಾಗದ, ಗಾಳಿಸುದ್ದಿಗೆ ರೆಕ್ಕೆಪುಕ್ಕ ಕಟ್ಟಿ, ಬಣ್ಣಬಳಿದು ಹಂಚುವ ಜನರಿಗೂ ಕೊರತೆಯಿಲ್ಲ. “ನೋಡೋಕೆ ಚೆಂದ ಇದ್ದರೆ ಆಯಿತು. ಜನ ಪುಸ್ತಕದೊಳಗೆ ಏನಿದೆ ಅಂತ ಓದೋಷ್ಟು ಪುರುಸೊತ್ತಾಗಿಲ್ಲ. ಅವಳ ಅಂದ ಚೆಂದ, ಬಿಂಕ ಬಿನ್ನಾಣಕ್ಕೆ ಮರುಳಾಗಿ ಮೆಚ್ಚಿಸೋಕೆ ಅಂತ ಖರೀದಿಸ್ತಾರೆ. ಪ್ರಶಸ್ತಿನೂ ಅಷ್ಟೇ. ಇವಳಿಗಿಂತ ಚೆನ್ನಾಗಿ ಬರೆಯೋ ಎಷ್ಟು ಸಾವಿರ ಜನ ಇಲ್ಲ. ಒಳಗೊಳಗೆ ಏನೋ ಡೀಲಿಂಗ್ ನಡೆದಿರತ್ತೆ. ಕೊಟ್ಟಿರುತ್ತಾರೆ.” ಅಂತ ಷರಾ ಬರೆಯುತ್ತಾರೆ.

ನೋಡಲು ಸುಂದರವಾಗಿದ್ದರೆ ಅವರು ಕೆಟ್ಟವರೇ ಆಗಿರಬೇಕು. ಅಹಂಕಾರಿ, ಸ್ವಾರ್ಥಿ, ಸಮಯಸಾಧಕಿ, ಅವಕಾಶವಾದಿಯೇ ಆಗಿರಬೇಕೆಂಬ ಮೌಢ್ಯ ಉಸಿರುಗಟ್ಟಿಸುತ್ತದೆ. ನಮ್ಮ ಧಾರಾವಾಹಿಗಳಂತೂ ನಾಯಕಿಗಿಂತ ಸುಂದರಿಯಾದ ಲೇಡಿ ವಿಲನ್‌ಗಳನ್ನು ತೋರಿಸಿ ಜನರ ಮೌಢ್ಯಕ್ಕೆ ಪುಷ್ಟಿ ನೀಡುತ್ತವೆ. ದೇವರು ಕೊಟ್ಟ ರೂಪ. ಅದರಲ್ಲಿ ಅವರದ್ದೇನು ತಪ್ಪು? ಎಂದು ನೋಡಲು ಸುಮಾರಾಗಿರುವವರ ಪರ ವಹಿಸುವ ಸಮಾಜವೇ, ಚೆಂದ ಇರುವವರನ್ನು “ದೇವರು ಕೊಟ್ಟ ರೂಪ. ಅವರನ್ನೇಕೆ ಶಿಕ್ಷಿಸಬೇಕು?” ಎಂದು ಯೋಚಿಸುವುದಿಲ್ಲ. ಪ್ರತಿ ಬಾರಿಯೂ ಪ್ರತಿ ಸಾಧನೆಯನ್ನೂ ತನ್ನ ಯೋಗ್ಯತೆಯಿಂದಲೇ ಸಾಧಿಸಿದ್ದು ಎಂದು ಋಜುವಾತು ಮಾಡಿಕೊಂಡು ಓಡಾಡಬೇಕಾದ ಶಿಕ್ಷೆಯನ್ನು ಸುಂದರಿಯರು ಭರಿಸಬೇಕು.

ಆದರೆ ಈ ವಿಷಯಕ್ಕೆ ಇರುವ ಮತ್ತೊಂದು ಮಗ್ಗುಲನ್ನು ಹೇಳದಿದ್ದರೆ ಮೋಸವಾಗುತ್ತದೆ. ನಿಜಕ್ಕೂ ಕಲೆ, ಸಾಹಿತ್ಯ, ಸಂಗೀತ, ನಟನೆಯ ಮೇಲಿನ ಪ್ರೀತಿಯಿಂದಲೇ ಹತ್ತಿರವಾಗುವವರು, ಬೆನ್ನಿಗೆ ನಿಲ್ಲುವವರು ಇದ್ದಾರೆ. ಬರೆದಿದ್ದನ್ನು ಓದಿ ಪ್ರಾಮಾಣಿಕವಾಗಿ ಅನಿಸಿಕೆ ಹಂಚಿಕೊಳ್ಳುವ, ತಪ್ಪು ಒಪ್ಪುಗಳನ್ನು ಮುಲಾಜಿಲ್ಲದೆ ಎತ್ತಿ ಹಿಡಿಯುವ, ಸೋತೆ ಎನ್ನುವಾಗ ಧೈರ್ಯ ಹೇಳುವ, ಗೆದ್ದಾಗ ಬೀಗದಂತೆ ಪ್ರೀತಿಯಿಂದಲೇ ತಲೆ ಮೊಟುಕುವ ಜನರಿದ್ದಾರೆ. ಹಾಗಾಗಿ ಸಣ್ಣತನ, ಕಪಟಗಳ ಮುಖ ನೋಡಿ, ನಮ್ಮ ನೆಮ್ಮದಿಯ ಮೂಲವನ್ನು ಕಡಿಯುವ ಅಗತ್ಯವಿಲ್ಲ. ಮನಸ್ಸಿಗೆ ಹಿತವೆನಿಸುವ, ಯಾರಿಗೂ ಕೆಡುಕಿಲ್ಲದ ಹವ್ಯಾಸವನ್ನು ಪೋಷಿಸಿಕೊಳ್ಳುವುದು, ವೃತ್ತಿ-ಪ್ರವೃತ್ತಿಗಳನ್ನು ಮುಂದುವರೆಸುವುದು, ಸ್ವತಂತ್ರ ಅಭಿಪ್ರಾಯನ್ನು ರೂಢಿಸಿಕೊಂಡು ಹೇಳಬೇಕಾದಲ್ಲಿ ಹೇಳುವುದು ನಮ್ಮ ವ್ಯಕ್ತಿತ್ವದ ಘನತೆಯನ್ನು ಹೆಚ್ಚಿಸುತ್ತದೆ. ಕೊಂಕು ಮಾತಿಗೆ ಹೆದರಿ ಮೂಲೆ ಸೇರುವುದಕ್ಕಿಂತ, ಎದುರಿಸಿ ಕೃತಿಯಲ್ಲಿ ತೋರುವುದು ಆತ್ಮವಿಶ್ವಾಸದ ನಡೆ. ಅಷ್ಟಕ್ಕೂ, ಜೀವಿಯೆಂದರೆ ಬರೀ ದೇಹವಲ್ಲ. ಒಳಗಿನ ಬುದ್ಧಿ, ಭಾವ, ಮನಸ್ಸು, ಆತ್ಮಗಳನ್ನು ಗುರುತಿಸಿ, ಗೌರವಿಸೋಣ. ಅಲ್ಲವೇ?