ನಡುಮಂಟಪದ ಒಳಛಾವಣಿಯಂತೂ ಅತ್ಯಾಕರ್ಷಕ. ನೀವು ನೋಡಿರಬಹುದಾದ ಭುವನೇಶ್ವರಿಯ ಮಾದರಿಗಳಲ್ಲೇ ದೊಡ್ಡದೆನಿಸುವ ಒಳಛಾವಣಿಯನ್ನು ತಾವರೆಯ ಹೂವಿನ ಮಾದರಿಯಲ್ಲಿ ಬಿಡಿಸಿ ಅಲಂಕರಿಸಿರುವ ಬಗೆಯನ್ನು ವರ್ಣಿಸಲು ಮಾತುಗಳು ಸಾಲವು. ಸೂಕ್ಷ್ಮ ಕೆತ್ತನೆಗೆ ಹೆಸರಾದ ಪ್ರಸಿದ್ಧ ಹೊಯ್ಸಳ ಗುಡಿಗಳನ್ನೂ ಮೀರಿಸಿದ ಕಲೆಯ ಬೆಡಗನ್ನು ಇಲ್ಲಿನ ಒಳಛಾವಣಿಯ ವಿನ್ಯಾಸಗಳು ತೋರ್ಪಡಿಸುವುವೆಂದರೆ ಅತಿಶಯೋಕ್ತಿಯಲ್ಲ. ಭುವನೇಶ್ವರಿಗೆ ಆಧಾರವಾಗಿ ನಿಂತ ಕಂಬಗಳು ತಿರುಗಣೆಯ ಸೊಬಗಿನ ವಿನ್ಯಾಸದವು. ಇವುಗಳ ಮೇಲಂಚಿನಲ್ಲಿ ಅಷ್ಟದಿಕ್ಪಾಲಕರೇ ಮೊದಲಾದ ದೇವತೆಗಳನ್ನು ಚಿತ್ರಿಸಲಾಗಿದೆ. ದೇವಾಲಯದ ಮಂಟಪದಲ್ಲಿ ಐವತ್ತಕ್ಕೂ ಹೆಚ್ಚಿನ ಕಂಬಗಳಿವೆಯೆಂದಮೇಲೆ ನಿರ್ಮಾಣದ ವೈಶಾಲ್ಯವನ್ನು ನೀವು ಊಹಿಸಿಕೊಳ್ಳಬಹುದು.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತೆಂಟನೆಯ ಕಂತು

 

ಕಲ್ಯಾಣದ ಚಾಲುಕ್ಯರ ಕಾಲದ ಸೊಗಸಾದ ನಿರ್ಮಾಣಗಳಲ್ಲಿ ಹಾನಗಲ್ಲಿನ ತಾರಕೇಶ್ವರ ದೇವಾಲಯವನ್ನು ಹೆಸರಿಸಲೇಬೇಕು. ಹುಬ್ಬಳ್ಳಿಯಿಂದ ಸುಮಾರು ಎಪ್ಪತೈದು ಕಿ.ಮೀ. ದೂರದಲ್ಲಿರುವ ಹಾನಗಲ್ಲನ್ನು ಜಿಲ್ಲಾಕೇಂದ್ರವಾದ ಹಾವೇರಿಯಿಂದ ತಲುಪಲು ನಲವತ್ತು ಕಿಲೋಮೀಟರ್ ಕ್ರಮಿಸಬೇಕು. ಪಾನುಂಗಲ್ ಎಂಬ ಮೂಲಹೆಸರಿನ ಈ ಪ್ರದೇಶಕ್ಕೆ ಪೌರಾಣಿಕ ನಂಟನ್ನು ಕಲ್ಪಿಸಿ ಇದು ಮಹಾಭಾರತ ಕಾಲದ ವಿರಾಟನಗರವಾಗಿತ್ತೆಂದು ಹೇಳುವುದಿದೆ.

ಕದಂಬ ಅರಸರ ಆಳ್ವಿಕೆಯ ಕಾಲಕ್ಕೆ ಪ್ರಮುಖ ನಗರಗಳಲ್ಲೊಂದಾಗಿದ್ದ ಹಾನಗಲ್ಲು ಕಲ್ಯಾಣದ ಚಾಲುಕ್ಯರ ಕೈವಶವಾಗುವ ಮೊದಲು ಹೊಯ್ಸಳ ಮತ್ತು ಶಿಲಾಹಾರರ ಆಡಳಿತಕ್ಕೂ ಒಳಪಟ್ಟಿತ್ತಂತೆ. ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ಸು. 1120ರ ವೇಳೆಗೆ ಕದಂಬತೈಲಪನೆಂಬ ಮಾಂಡಳಿಕರಾಜನು ಈ ದೇಗುಲವನ್ನು ಕಟ್ಟಿಸಿರಬೇಕೆಂದು ಹೇಳಲಾಗಿದೆ.

ಬಹು ವಿಶಾಲವಾದ ಪ್ರದೇಶದಲ್ಲಿ ಕಟ್ಟಲಾಗಿರುವ ಈ ದೇವಾಲಯದ ಮುಖಮಂಟಪಗಳು, ಕಕ್ಷಾಸನಗಳು, ಮಂಟಪದ ಸುತ್ತಲಿನ ಕಂಬಗಳು, ನವರಂಗ, ಅಂತರಾಳ (ಒಳಗುಡಿ) ಹಾಗೂ ಗರ್ಭಗುಡಿಗಳು ತಮ್ಮ ವಿಸ್ತಾರದಿಂದಲೇ ನೋಡುಗರಿಗೆ ಅಚ್ಚರಿಯುಂಟುಮಾಡುತ್ತವೆ. ಗರ್ಭಗುಡಿಯ ಮೇಲಿನ ಶಿಖರವು ಸೂಕ್ಷ್ಮಕೆತ್ತನೆಯುಳ್ಳ ಹಾರತೋರಣಗಳಿಂದಲೂ, ಹಂಸಾದಿ ಪಕ್ಷಿಗಳು, ಸಿಂಹಮುಖ ಮೊದಲಾದವುಗಳಿಂದಲೂ ಹಿಂದುಮುಂದು ಚಾಚಿಕೊಂಡಂತೆ ಬಿಡಿಸಿದ ಚಿತ್ತಾರಗಳಿಂದಲೂ ಶೋಭಿಸುತ್ತದೆ. ನಾಲ್ಕು ಸ್ತರಗಳಲ್ಲಿ ರೂಪುಗೊಂಡ ಗೋಪುರದ ಮೇಲುಭಾಗದಲ್ಲಿ ಗಾರೆಯಿಂದ ಮಾಡಿದ ವೇದಿ. ಇದರ ಮೇಲೆ ಕಳಶವಿತ್ತೆಂದು ತೋರುತ್ತದೆ. ಶಿಖರದ ಮುಂದೆ ಚಾಚಿದ ಶುಕನಾಸಿಯ ಮೇಲುಭಾಗದಲ್ಲಿ (ಹೊಯ್ಸಳ ಗುಡಿಗಳಲ್ಲಿ ತೋರುವಂತೆ) ಹುಲಿಯೊಡನೆ ಹೋರಾಡುವ ವೀರನ ಶಿಲ್ಪವಿದೆ.

ಗರ್ಭಗುಡಿಯ ಮುಂಭಾಗದಲ್ಲಿ ಹಲವು ದಿಕ್ಕುಗಳಿಂದ ಪ್ರವೇಶವನ್ನು ಕಲ್ಪಿಸಲಾಗಿರುವ ಮಂಟಪಗಳ ನಿರ್ಮಾಣ ವಿನ್ಯಾಸವೇ ಮನೋಹರ. ಈ ಮಂಟಪಗಳ ಉದ್ದಕ್ಕೂ ಕಕ್ಷಾಸನಗಳು. (ಒರಗುಬೆಂಚು) ಈ ಆಸನಗಳ ಒರಗುಗೋಡೆಯ ಹೊರಭಾಗದಲ್ಲಿ ಕಿರುಗೋಪುರಗಳನ್ನು ಹೊತ್ತ ಕಂಬಗಳಂತಹ ರಚನೆ. ಕಿರುಗೋಡೆಯ ಮೇಲಂಚಿನ ಪಟ್ಟಿಕೆಯಲ್ಲಿ ನರ್ತಕಿ ಹಾಗೂ ವಾದ್ಯಗಾರರ ಕಿರುಶಿಲ್ಪಗಳು ಇವೆ. ಪ್ರವೇಶದ್ವಾರದ ಚೌಕಟ್ಟಿನಲ್ಲೂ ಬಗೆಬಗೆಯ ಅಲಂಕಾರ. ಬಾಗಿಲುವಾಡದ ಮೇಲುಭಾಗದಲ್ಲಿ ಗಜಲಕ್ಷ್ಮಿ, ನರ್ತಿಸುತ್ತಿರುವ ಗಣೇಶ ಮೊದಲಾದ ದೇವತೆಗಳ ಬಿಂಬಗಳನ್ನು ಚಿತ್ರಿಸಿದೆ.

ಒಳಮಂಟಪದ ಕಂಬಗಳ ಮೇಲೆ ಅನೇಕ ದೇವತೆಗಳ ಉಬ್ಬುಶಿಲ್ಪಗಳು ಗಮನಸೆಳೆಯುತ್ತವೆ. ಹಲವು ದೇವಕೋಷ್ಠ (ವಿಗ್ರಹಗಳನ್ನಿರಿಸಿರುವ ಗೂಡು)ಗಳಿದ್ದು ಇವುಗಳಲ್ಲಿ ಸೂರ್ಯ, ವಿಷ್ಣು , ಬ್ರಹ್ಮ ಮತ್ತಿತರ ವಿಗ್ರಹಗಳನ್ನು ಕಾಣಬಹುದು. ಹೊರಚಾಚಿಕೊಂಡಂತಿರುವ ಮಂಟಪವೊಂದರಲ್ಲಿ ಪುರಾತತ್ವ ಇಲಾಖೆಯವರು ಇನ್ನೂ ಹಲವು ಮೂರ್ತಿಗಳನ್ನು ಇರಿಸಿದ್ದಾರೆ. ಗರ್ಭಗುಡಿಯ ದಾರವಂದದ ಕೆತ್ತನೆ ಸುಂದರವಾಗಿದೆ. ಮೇಲೆ ಶಾರ್ದೂಲಗಳು ಎತ್ತಿಹಿಡಿದ ಚಿತ್ತಾರದ ತೋರಣ. ದೇವಾನುದೇವತೆಗಳಿಂದ ಪರಿವೃತರಾಗಿ ನಡುವೆ ತ್ರಿಮೂರ್ತಿಗಳೇ ನಿಂತಿದ್ದಾರೆ. ಆಚೀಚೆಗೆ ತಂತಮ್ಮ ವಾಹನಗಳನ್ನೇರಿದ ಗಣೇಶ ಸುಬ್ರಹ್ಮಣ್ಯರು ಇದ್ದಾರೆ. ಗರ್ಭಗುಡಿಯಲ್ಲಿ ತಾರಕೇಶ್ವರ ಲಿಂಗವೂ ಅದಕ್ಕೆ ಅಭಿಮುಖವಾಗಿ ಗುಡಿಯ ಹೊರಗೆ ಚಿಕ್ಕ ನಂದಿಯ ವಿಗ್ರಹವೂ ಇವೆ.

ನಡುಮಂಟಪದ ಒಳಛಾವಣಿಯಂತೂ ಅತ್ಯಾಕರ್ಷಕ. ನೀವು ನೋಡಿರಬಹುದಾದ ಭುವನೇಶ್ವರಿಯ ಮಾದರಿಗಳಲ್ಲೇ ದೊಡ್ಡದೆನಿಸುವ ಈ ಒಳಛಾವಣಿಯನ್ನು ತಾವರೆಯ ಹೂವಿನ ಮಾದರಿಯಲ್ಲಿ ಬಿಡಿಸಿ ಅಲಂಕರಿಸಿರುವ ಬಗೆಯನ್ನು ವರ್ಣಿಸಲು ಈ ಮಾತುಗಳು ಸಾಲವು. ಸೂಕ್ಷ್ಮ ಕೆತ್ತನೆಗೆ ಹೆಸರಾದ ಪ್ರಸಿದ್ಧ ಹೊಯ್ಸಳ ಗುಡಿಗಳನ್ನೂ ಮೀರಿಸಿದ ಕಲೆಯ ಬೆಡಗನ್ನು ಇಲ್ಲಿನ ಒಳಛಾವಣಿಯ ವಿನ್ಯಾಸಗಳು ತೋರ್ಪಡಿಸುವುವೆಂದರೆ ಅತಿಶಯೋಕ್ತಿಯಲ್ಲ.

ಈ ಭುವನೇಶ್ವರಿಗೆ ಆಧಾರವಾಗಿ ನಿಂತ ಕಂಬಗಳು ತಿರುಗಣೆಯ ಸೊಬಗಿನ ವಿನ್ಯಾಸದವು. ಇವುಗಳ ಮೇಲಂಚಿನಲ್ಲಿ ಅಷ್ಟದಿಕ್ಪಾಲಕರೇ ಮೊದಲಾದ ದೇವತೆಗಳನ್ನು ಚಿತ್ರಿಸಲಾಗಿದೆ. ಈ ದೇವಾಲಯದ ಮಂಟಪದಲ್ಲಿ ಐವತ್ತಕ್ಕೂ ಹೆಚ್ಚಿನ ಕಂಬಗಳಿವೆಯೆಂದಮೇಲೆ ನಿರ್ಮಾಣದ ವೈಶಾಲ್ಯವನ್ನು ನೀವು ಊಹಿಸಿಕೊಳ್ಳಬಹುದು. ನಡುಮಂಟಪದ ಮೇಲುಭಾಗದಲ್ಲಿ ಮೊಗುಚಿಟ್ಟ ಹೂವಿನ ಆಕಾರದ ಏಳು ಸ್ತರಗಳ ಶಿಖರವು ವಿಶಿಷ್ಟವಾಗಿದೆ.

(ಚಿತ್ರಗಳು: ಲೇಖಕರವು)

ದೇವಾಲಯದ ಸುತ್ತುಗೋಡೆಯ ಮೇಲೆ ಕಿರುಗೋಪುರಗಳನ್ನು ಹೊತ್ತ ಕಂಬಗಳ ರಚನೆ. ಮಂಟಪಗಳ ಮೇಲುಪಟ್ಟಿಕೆಯ ಮೇಲೆ ನರ್ತಕಿಯರು, ಮಿಥುನಶಿಲ್ಪಗಳು, ಯೋಧರು ಕಂಡುಬರುತ್ತಾರೆ. ರಾಮಾಯಣದ ಹಲವು ಕಥಾನಕಗಳನ್ನೂ ಶ್ರೀಕೃಷ್ಣನ ಬಾಲಲೀಲೆಗಳನ್ನೂ ಅಲ್ಲಲ್ಲಿ ಚಿತ್ರಿಸಿರುವುದನ್ನು ಕಾಣಬಹುದು. ಸೇತುಬಂಧಕ್ಕಾಗಿ ಹೊರಟ ಕಪಿಗಳು, ರಾಮನಿಂದ ಮಾರೀಚವಧೆ, ಶ್ರೀಕೃಷ್ಣನು ಶಕಟಾಸುರನನ್ನು ಕೊಲ್ಲುವುದು, ಕಾಳೀಯಮರ್ದನ ಮೊದಲಾದವು ಇಲ್ಲಿನ ಪಟ್ಟಿಕೆಗಳಲ್ಲಿ ಚಿತ್ರಿತವಾಗಿವೆ.

ಇದೇ ದೇವಾಲಯಸಂಕೀರ್ಣದಲ್ಲಿರುವ ಗಣೇಶನ ದೇವಾಲಯವೂ ವಿಶಿಷ್ಟನಿರ್ಮಾಣಶೈಲಿಯಿಂದ ಗಮನಸೆಳೆಯುತ್ತದೆ. ತೆರೆದ ಮಂಟಪವಿರುವ ಗುಡಿ ಚಿಕ್ಕದಾದರೂ ಅಪೂರ್ವವಾದ ನಾಗರಶೈಲಿಯ ನಿರ್ಮಾಣ ಇದರ ವಿಶೇಷ. ತುರುವೇಕೆರೆಯ ಮೂಲೆಶಂಕರ ಹಾಗೂ ನುಗ್ಗೇಹಳ್ಳಿಯ ಸದಾಶಿವ ದೇವಾಲಯಗಳಲ್ಲಿ ಕಾಣುವಂತಹ ವಿನ್ಯಾಸವನ್ನು ಇದು ಹೋಲುತ್ತದೆ. ಈ ಗುಡಿಯ ಮುಖ್ಯಶಿಖರದ ಸುತ್ತ ಒಂದರ ಹಿಂದೊಂದು ಶಿಖರಗಳು ಮೇಲೆದ್ದುಕೊಂಡಂತೆ ಕಾಣುವುದೇ ಈ ವಿಶೇಷ. ಸುತ್ತುಗೋಡೆಯೂ ಈ ಶಿಖರಗಳನ್ನು ಆಧರಿಸಿ ನಿಂತಂತೆ ವಿನ್ಯಾಸಗೊಳಿಸಿರುವುದು ನಿರ್ಮಿತಿಯ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.