”ಭಗವಂತಾ ಈ ಚಂದ್ರನಿಗೇನು ಆಟ? ಸುಪಾರಿ ಪಡೆದ ರೌಡಿಗಳಂತೆ ಮೋಡಗಳು ಅಡ್ಡಗಟ್ಟುವಾಗ ಸಿನೆಮಾ ಹೀರೋದಂತೆ ಮತ್ತೆ ಮತ್ತೆ ಅವನ್ನೆಲ್ಲ ದೂರ ಸರಿಸಿ ನನ್ನ ನೋಡಿ ನಗುತ್ತಲೇ ಇದ್ದಾನೆ. ಆದರೆ ನಾನು ನಾಚುತ್ತಿಲ್ಲ. ಅವನ ನಾಯಕಿಯಾಗುತ್ತಿಲ್ಲ. ಯಾಕೋ ಮನಸೆಲ್ಲಾ ಬಾಲ್ಯಕ್ಕೆ ನೆಟ್ಟಿದೆ. ದೂರದಲ್ಲೆಲ್ಲೋ ಹನಿಯಾಡಿದಂತೆ ಶ್ರೀಗಂಧ ಸದೃಶ ಮಣ್ಣ ವಾಸನೆ.. ಹೋಳೀ ಹುಣ್ಣಿಮೆಗೆ ಮಳೆಯಾಗುವುದಂತೆ. ಕಾಮದಹನದ ಬೂದಿ ಕದರುವ ಮಳೆ ಈಶ್ವರನೇ ತರಿಸುತ್ತಾನಂತೆ. ಇಲ್ಲದಿದ್ದರೆ ಕೇಡುಗಾಲವಂತೆ. ಇಂದು ಮಳೆಸುರಿದಿದೆ. ಆದರೆ ಎದೆಯ ಬೆಂಕಿ ಆರಿಲ್ಲ ನೋಡು…”
ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳು.
ಇಲ್ಲಿ ಇಂತಹ ನಟ್ಟನಡುರಾತ್ರಿಯಲ್ಲಿ ಗಾಳಿಗೂ ಪುಳಕವೇಳುವ ಹೊತ್ತಿನಲ್ಲಿ ಈ ಹೋಳಿ ಹುಣ್ಣಿಮೆಯ ಪೂರ್ಣಚಂದ್ರನನ್ನು ನೆತ್ತಿಯ ಮೇಲೆ ತೂಗಾಡಿಸಿಕೊಂಡು ಬರೆಯಹೊರಟಿದ್ದೇನೆ.ನನ್ನದೇ ಪ್ರತಿಬಿಂಬವನ್ನು ಅವನಲ್ಲಿ ಅರಸುತ್ತಾ ಎಷ್ಟು ಕಲೆಗಳು ಹೀಗೆ ಶಾಶ್ವತವಾಗಿ ಉಳಿದುಹೋಗಿರಬಹುದೆಂದು ಯೋಚಿಸುತ್ತಿದ್ದೇನೆ.ಎಲ್ಲೋ ಕಳೆದುಹೋಗಿರುವ ಅಮ್ಮ ಎಂಬ ನೀನು… ನಿನ್ನ ಅರಸದೇ ಖಾಲಿ ಉಳಿದ ಮನಸಿಗೆ ಏನೋ ಬುದ್ಧಿ ಹೇಳಿ ಸುಮ್ಮನಾಗಿಸುವ ನಾನು… ಬೆನ್ನು ಬಾಗಿರುವ ಇನ್ಯಾವುದೋ ಮುದುಕಿಯನ್ನು ಕಂಡಾಗ ನೀನು ಈಗ ಹೇಗಿರಬಹುದೆಂಬ ಭಯಂಕರ ಆಲೋಚನೆಯೊಂದು ಹುಟ್ಟಿ ನಾನು ಹೆದರಿ ನೀರಾಗುತ್ತೇನೆ. ನಿನ್ನ ನೆನಪೇ ನನ್ನ ಇರಿದು ಕೊಲ್ಲುತ್ತದೆ.
ಯಾವುದೋ ಸರ್ಕಾರಿ ಆಸ್ಪತ್ರೆಯ ಮೂಲೆಯೊಂದರಲ್ಲಿ ನೀನು ನನ್ನ ಹಡೆದ ದಿನ ಅಲ್ಲಿ ಡಾಕ್ಟರೇ ಇರಲಿಲ್ಲವಂತೆ..! ನಿನ್ನ ನೋವು ಕೇಳಲು ಗಂಡನೋ ಅಮ್ಮನೋ ಯಾರೊಬ್ಬರೂ ಇಲ್ಲದೇ ನೀನೇ ಯಾರದೋ ಹೆಗಲಿಗೆ ಜೋತುಬಿದ್ದು ಆಸ್ಪತ್ರೆ ಸೇರಿದೆಯಂತೆ. ಅಲ್ಲಿದ್ದ ಏಳು ಜನ ನರ್ಸಿಂಗ್ ಹುಡುಗಿಯರೇ ಸಪ್ತಮಾತೃಕೆಯರಂತೆ ಬಂದು ನನ್ನನ್ನು ನಿನ್ನ ಹೊಟ್ಟೆಯಿಂದ ಬೇರ್ಪಡಿಸಿದರಂತೆ. ಕರುಳಬಳ್ಳಿ ಕತ್ತರಿಸಿ ನಾನೊಂದು ಮೂಲೆ ನೀನೊಂದು ಮೂಲೆ ಮಾಡಿದರಂತೆ. ಆ ಸಪ್ತ ಮಾತೃಕೆಯರೇ ಖುದ್ದು ನಿಂತು ನಿನ್ನಿಂದ ನನ್ನ ಯಾಕೆ ದೂರ ಮಾಡಿದರೋ ಇಂದಿಗೂ ಹೊಳೆಯುತ್ತಿಲ್ಲ. ಆದರೆ ನಾನೂ ಹೆಣ್ಣಲ್ಲವಾ? ಅದೇ ಕರುಳ ಬಳ್ಳಿ ನನ್ನಲ್ಲೂ ಚಿಗುರಿ ಟಿಸಿಲೊಡೆದಿದೆ ಕಣೇ… ಈಗ ಆ ಟಿಸಿಲು ಹಸಿರಾಗಿ ಬೆಳೆದು ಹೂ ಬಿಟ್ಟಿದೆ. ಹಾಗೆ ಕತ್ತರಿಸಿ ಉಳಿದ ಕರುಳು ಹೀಗೆ ಬೇರಾಗಿ ಬೆಳೆದು ಮರವಾಗುವುದು ಹೇಗೆ? ಎಂಬ ಆಶ್ಚರ್ಯದ ಪ್ರಶ್ನೆಗೆ ಮರದ ಬುಡದಂತಹ ಗಟ್ಟಿ ಹೆಣ್ಣು ನೀನೇ ಉತ್ತರಿಸಬೇಕು. ನಿನ್ನಿಂದ ಬೇರ್ಪಟ್ಟು ನಾನು ಬೆಳೆದ ಪರಿಯನ್ನು ನೆನಪಿದ್ದಷ್ಟೂ ಅಥವಾ ನೆನಪಿಟ್ಟುಕೊಳ್ಳಬೇಕಾದಷ್ಟು ಬರೆದು ಹೃದಯದ ಭಾರ ಇಳಿಸಿಕೊಳ್ಳುವ ತೀರ್ಮಾನಕ್ಕೆ ಬಂದಿರುವೆ. ಆಗಸದ ಚಂದಿರನೂ ಒಂದು ಕಣ್ಣು ಮುಚ್ಚಿ ಇನ್ನೊಂದರಲ್ಲಿ ಕದ್ದು ನೋಡುತ್ತಿದ್ದಾನೆ. ಅವನೋ ಮಹಾನ್ ಆಟಗಾರ, ನಾನೋ ಪಕ್ಕಾ ಮಾಯಕಾತಿ. ಒಬ್ಬರಿಗೊಬ್ಬರು ಸಖತ್ ಯಾಮಾರಿಸಿಕೊಂಡು ಕಥೆ ಹೇಳಿಕೊಳ್ಳುತ್ತಿದ್ದೇವೆ ನೋಡಿಲ್ಲಿ…
ಮೊದಲ ಗರ್ಭದಲ್ಲೇ ಹೆಣ್ಣು ಹುಟ್ಟಿತೆಂದು ಮೂಗು ಮುರಿದ ಮನೆಯಲ್ಲಿ ನೀನು ನನಗೆ ಹೇಗೆ ಮೊಲೆ ಹಾಲೂಡಿಸಿದ್ದಿರಬಹುದು? ಹೇಗೆ ಅನ್ನ ತಿನ್ನಿಸಿದ್ದಿರಬಹುದು? ಏನೆಲ್ಲಾ ನೋವುಂಡು ಹಬ್ಬಕ್ಕೆ ನನಗೆ ಹೊಸಾ ಬಟ್ಟೆ ಕೊಡಿಸಿರಬಹುದು? ಕಲಿತ ರಾಕ್ಷಸರ ಸುಸಂಸ್ಕೃತ ಸೋಗಿನ ಅರಗಿನ ಅರಮನೆಯ ರಾಣಿ ನೀನು. ಅಲ್ಲಿಯ ನತದೃಷ್ಟ ರಾಜಕುಮಾರಿ ನಾನು. ನನ್ನ ನಂತರ ಒಂದು ಗಂಡು ಹುಟ್ಟಿದ ಮೇಲೆ ನನ್ನ ಸ್ಥಿತಿ ಹೇಗಿರಬಹುದೋ, ನೀನು ನಂತರದಲ್ಲಿ ಪೂರ್ತಿಯಾಗಿ ಏನೂ ಹೇಳದಿದ್ದರೂ ನನ್ನ ಎಳೇ ಮನಸಿನಲ್ಲಿ ಕೆಲವೊಂದು ಚಿತ್ರಗಳು ಅಚ್ಚಾಗಿ ಹೋಗಿವೆ. ಮತ್ತವು ಎಂದೂ ಮಾಸುವುದಿಲ್ಲ. ಎರಡೂ ಕೈ ಕಟ್ಟಿ ಹಿಡಿದು ಕಪಾಳಕ್ಕೆ ಬಾರಿಸುತ್ತಿದ್ದ ಅಜ್ಜ, ದಿನವಿಡೀ ನಿಂತರೂ, ಹತ್ತಿರ ಹತ್ತಿರವೇ ಸುಳಿದರೂ ಎಂದೂ ದಕ್ಕದ ಯಾರೊಬ್ಬರ ತೊಡೆಯ ಸಿಂಹಾಸನ, ಎಲ್ಲರದ್ದೂ ಮುಗಿದ ಮೇಲೆ ಪುಟ್ಟ ಹೆಜ್ಜೆಯಿಟ್ಟು ಓಡಾಡಿ ನಾನು ಸಂಗ್ರಹಿಸಿ ಕೊಡುತ್ತಿದ್ದ ಆ ಕಾಫಿ ಲೋಟಗಳು, ಹಿತ್ತಿಲ ಬಂಡೆಯ ಬಳಿ ರಾಶಿ ರಾಶಿ ಬಟ್ಟೆ ಒಗೆಯುವಾಗ ಥೇಟು ಪಕ್ಕದ ಮನೆಯ ಕೆಲಸದ ಹೆಂಗಸಂತೆ ಬೆವರು ಕಟ್ಟಿರುತ್ತಿದ್ದ ಹರವಾದ ನಿನ್ನ ಬಿಳೀ ಹಣೆ, ಎಂದೂ ಕೆಡದ ಕಾಸಗಲದ ನೊಸಲ ಸಿಂಧೂರ, ಆಟ ಆಡಲು ಅನುಮತಿಗಾಗಿ ನಾನು ಗಂಟೆಗಟ್ಟಲೇ ಕಾಯುತ್ತಿದ್ದ ಆ ಮರದ ಮಂಚದ ಅಂಚು, ಹಾಗೆ ನಾನು ನಿಂತದ್ದನ್ನು ಕಣ್ಣೆತ್ತಿಯೂ ನೋಡದೇ ಯಾವುದೋ ಪುಸ್ತಕದ ಪುಟಗಳನ್ನು ಗಹನವಾಗಿ ತಿರುವಿಹಾಕುತ್ತಿದ್ದ ಮಂಚದಲ್ಲಿ ಪವಡಿಸಿರುತ್ತಿದ್ದ ಅಪ್ಪ, ಅವನ ಶುಭ್ರ ಬಿಳಿಯ ಪಂಚೆ ಹಾಗೂ ಬನೀನು, ದೇವರ ಮನೆಗೆ ಅಂಟಿಕೊಂಡಿರುತ್ತಿದ್ದ, ಆದರೆ ಎಂದೂ ದೇವರಂತೆ ಕಾಣಿಸದ ಬಿರುಗಣ್ಣಲ್ಲೇ ತೀರಿಕೊಂಡ ಚಿಕ್ಕಜ್ಜ, ಮಾತುಮಾತಿಗೂ ನಿನ್ನ ಮೂತಿ ಸೊಣೆಯುತ್ತಿದ್ದ ನನ್ನ ಚಂದದ ಸೋದರತ್ತೆಯರು, ನನಗಾಗಿ ಯಾರೂ ಎಂದೂ ಹಿಡಿದು ತರದ ಆದರೆ ನಾನು ಎಂದೆಂದಿಗೂ ಕಾಯುತ್ತಲೇ ನಿಂತಿದ್ದ ಆ ಚಾಕೊಲೇಟು… ಎಲ್ಲವೂ…
ಯಾವುದೋ ಸರ್ಕಾರಿ ಆಸ್ಪತ್ರೆಯ ಮೂಲೆಯೊಂದರಲ್ಲಿ ನೀನು ನನ್ನ ಹಡೆದ ದಿನ ಅಲ್ಲಿ ಡಾಕ್ಟರೇ ಇರಲಿಲ್ಲವಂತೆ..! ನಿನ್ನ ನೋವು ಕೇಳಲು ಗಂಡನೋ ಅಮ್ಮನೋ ಯಾರೊಬ್ಬರೂ ಇಲ್ಲದೇ ನೀನೇ ಯಾರದೋ ಹೆಗಲಿಗೆ ಜೋತುಬಿದ್ದು ಆಸ್ಪತ್ರೆ ಸೇರಿದೆಯಂತೆ. ಅಲ್ಲಿದ್ದ ಏಳು ಜನ ನರ್ಸಿಂಗ್ ಹುಡುಗಿಯರೇ ಸಪ್ತಮಾತೃಕೆಯರಂತೆ ಬಂದು ನನ್ನನ್ನು ನಿನ್ನ ಹೊಟ್ಟೆಯಿಂದ ಬೇರ್ಪಡಿಸಿದರಂತೆ. ಕರುಳಬಳ್ಳಿ ಕತ್ತರಿಸಿ ನಾನೊಂದು ಮೂಲೆ ನೀನೊಂದು ಮೂಲೆ ಮಾಡಿದರಂತೆ. ಆ ಸಪ್ತ ಮಾತೃಕೆಯರೇ ಖುದ್ದು ನಿಂತು ನಿನ್ನಿಂದ ನನ್ನ ಯಾಕೆ ದೂರ ಮಾಡಿದರೋ ಇಂದಿಗೂ ಹೊಳೆಯುತ್ತಿಲ್ಲ. ಆದರೆ ನಾನೂ ಹೆಣ್ಣಲ್ಲವಾ? ಅದೇ ಕರುಳ ಬಳ್ಳಿ ನನ್ನಲ್ಲೂ ಚಿಗುರಿ ಟಿಸಿಲೊಡೆದಿದೆ ಕಣೇ… ಈಗ ಆ ಟಿಸಿಲು ಹಸಿರಾಗಿ ಬೆಳೆದು ಹೂ ಬಿಟ್ಟಿದೆ. ಹಾಗೆ ಕತ್ತರಿಸಿ ಉಳಿದ ಕರುಳು ಹೀಗೆ ಬೇರಾಗಿ ಬೆಳೆದು ಮರವಾಗುವುದು ಹೇಗೆ?
ಭಗವಂತಾ..! ಈ ಚಂದ್ರನಿಗೇನು ಆಟ? ಸುಪಾರಿ ಪಡೆದ ರೌಡಿಗಳಂತೆ ಮೋಡಗಳು ಅಡ್ಡಗಟ್ಟುವಾಗ ಸಿನೆಮಾ ಹೀರೋದಂತೆ ಮತ್ತೆ ಮತ್ತೆ ಅವನ್ನೆಲ್ಲ ದೂರ ಸರಿಸಿ ನನ್ನ ನೋಡಿ ನಗುತ್ತಲೇ ಇದ್ದಾನೆ. ಆದರೆ ನಾನು ನಾಚುತ್ತಿಲ್ಲ. ಅವನ ನಾಯಕಿಯಾಗುತ್ತಿಲ್ಲ. ಯಾಕೋ ಮನಸೆಲ್ಲಾ ಬಾಲ್ಯಕ್ಕೆ ನೆಟ್ಟಿದೆ. ದೂರದಲ್ಲೆಲ್ಲೋ ಹನಿಯಾಡಿದಂತೆ ಶ್ರೀಗಂಧ ಸದೃಶ ಮಣ್ಣ ವಾಸನೆ.. ಹೋಳೀ ಹುಣ್ಣಿಮೆಗೆ ಮಳೆಯಾಗುವುದಂತೆ. ಕಾಮದಹನದ ಬೂದಿ ಕದರುವ ಮಳೆ ಈಶ್ವರನೇ ತರಿಸುತ್ತಾನಂತೆ. ಹಳೇ ಮನೆಯ ಪಕ್ಕದ ಕೆಂಪಜ್ಜಿಯು ನೀನು ಹೇಳಿದ್ದನ್ನೇ ಹೇಳಿದ್ದಳು, ಕಾಮಣ್ಣನ ಮಳೆ ವುಯ್ಬೇಕು ಮಗಾ… ಮುಕ್ಕಣ್ಣನ ಬೆಂಕಿ ಆರಬ್ಯಾಡ್ವಾ… ಇಲ್ಲದಿದ್ದರೆ ಕೇಡುಗಾಲವಂತೆ. ಇಂದು ಮಳೆಸುರಿದಿದೆ. ಆದರೆ ಎದೆಯ ಬೆಂಕಿ ಆರಿಲ್ಲ ನೋಡು…
೨. ಹಳದಿ ಲಂಗದ ತುಂಬ ಕೆಂಪು ನೀರ ಚಿತ್ತಾರ.
ಮಗುತನ ಎಲ್ಲರಿಗೂ ಚಂದ. ಜವಾಬ್ದಾರಿಗಳಿಲ್ಲದ, ನೋವು ನಲಿವುಗಳ ವ್ಯತ್ಯಾಸವಿಲ್ಲದ, ನಾನೋ-ನೀನೋ ಅನ್ನುವ ಅಹಂ ಇರದ ದಿನಗಳು ಯಾರಿಗೆ ತಾನೇ ಪ್ರಿಯವಲ್ಲ ಹೇಳು? ಅದಕ್ಕೇ… ಎಲ್ಲರೂ ಬಾಲ್ಯ ಮರುಕಳಿಸಲೀಂತ ಬಯಸೋದು, ನನ್ನಂತಹವರ ಹೊರತಾಗಿ! ಬಾಲ್ಯವೆಂಬ ಸಿಹಿ ಎಲ್ಲಿತ್ತೋ ಹೇಗಿತ್ತೋ ಎಂದೂ ಅನುಭವಿಸಿದ ನೆನಪಿಲ್ಲ. ನಿನಗೆ ನೆನಪಿದೆಯಾ ಆ ದಿನ? ಅಪ್ಪ ನೀನು ಇನ್ನಿಲ್ಲದ ಅವ್ಯಾಹತ ಮನಸ್ತಾಪವನ್ನು ಮನಸಾರೆ ಅನುಭವಿಸುತ್ತಿದ್ದಿರಿ. ಇತ್ತೀಚೆಗೆ ಆ ಮನಸ್ತಾಪ, ರಾತ್ರಿಗೆ ಮುಗಿಯದೇ ಬೆಳಗೆದ್ದರೂ ಮುಂದುವರೆಯುತ್ತಿತ್ತು. ನಾನು ಆಡಿ ಆಡಿ ರೋಸಿ ನಿನ್ನ ಮಡಿಲಿಗೆ ಬಂದರೆ ಅಪ್ಪುತ್ತಿದ್ದೆಯಾದರೂ ಹಾಗೇ ಮೆಲ್ಲಗೆ ನನಗೆ ಅರಿವಾಗದಂತೆ ಪಕ್ಕಕ್ಕೆ ಸರಿಸಿ ಎದ್ದೇಳುತ್ತಿದ್ದೆ. ಅಮ್ಮ ಬಾ… ಅಮ್ಮ ಬಾ… ಕೂಗೀ ಕೂಗೀ ನನಗೂ ಸಾಕಾಗಿತ್ತು. ಅಪ್ಪನ ಬಳಿ ಹೋಗಿ ನಿಂತರೆ `ಏನು ಮಗೂ…’ ಅನ್ನುವದರ ವಿನಃ ಇನ್ನೊಂದು ಬೇರೆ ಪದವಿಲ್ಲ. ನಾನೊಂದಿಷ್ಟು ತರಲೆ ಮಾಡಲು ಅವಕಾಶವಿರುವ ನಿನ್ನ ಬಳಿ ಬಿಟ್ಟು ಬೇರೆ ಯಾರ ಬಳಿ ಹೋಗಲಿ ಹೇಳು?
`ತವರಿಂದ ನಾಲ್ಕಾಣೆ ತರದಿದ್ದರೂ ಗತ್ತಿಗೇನೂ ಕಡಿಮೆಯಿಲ್ಲ’ ಅಪ್ಪನಂದ. ನೀನಾದರೂ ಸುಮ್ಮನಿದ್ದೆಯಾ? ಯಾವ ದೆವ್ವ ಹೊಕ್ಕ ಗಳಿಗೆಯೋ ನಿನ್ನ ಮೌನಕ್ಕಂದು ಬಾಯಿ ಬಂದುಬಿಟ್ಟಿತ್ತು.
”ಹೌದು, ಗತ್ತಿನ ವಂಶವೇ ನಮ್ಮದು. ನಮ್ಮ ಮುತ್ತಾತ ಪಾಳೇಗಾರರ ದೀವಾನರು. ನಮ್ಮ ವಂಶ ಜಮೀನ್ದಾರಿಯದ್ದು. ನಿಮ್ಮ ಹಾಗೆ ಉಪ್ಪು ನೀರು ಬೇಡಿ ಬದುಕಿದ ವಂಶವಲ್ಲ. ನಾಲ್ಕಾರು ಜನಕ್ಕೆ ಉಡಿ ತುಂಬಾ ನೀಡಿ ಹರಕೆ ಹಾಕಿಸಿಕೊಂಡವರು. ಗತಿಗೆಟ್ಟವರಲ್ಲ.. ತಿಳೀತಾ? ವರದಕ್ಷಿಣೆ ಕೇಳ್ತೀರಲ್ಲ ನಾಚಿಕೆಯಾಗಲ್ವಾ? ಗಂಡಸಲ್ವಾ ದುಡೀತಿಲ್ವಾ..? ನಿಮ್ಮ ತಂಗೀ ಮನೇಲಿ ಅವರು ದುಡ್ಡು ಕೇಳಿದರೆ ಅದಕ್ಕೆ ನಾನು ಬಲೀನಾ?”
ಅವನ ಕೆಂಗಣ್ಣು ಆಗಲೇ ಧಗಧಗಿಸುತ್ತಿತ್ತು. ಮಾಮೂಲಿ ಜಗಳವೇನೋ ನನಗೆ ನೋಡಿದ್ದೇ.. ಆದರೆ ಅವತ್ತು ನೀನು ಅಷ್ಟು ಮಾತಾಡಿದ್ದು ಸಿಕ್ಕಾಪಟ್ಟೆ ಆಶ್ಚರ್ಯವಾಗಿತ್ತು. ನಾನು ಬಿಟ್ಟ ಬಾಯಿ ಬಿಟ್ಟಂತೆ ನಿಮ್ಮಿಬ್ಬರನ್ನೂ ನೋಡುತ್ತಾ ನಿಂತುಬಿಟ್ಟೆ. ಹೊರಗೆ ಆಟವಾಡುತ್ತಾ ಕೂತಿದ್ದ ತಮ್ಮನಿಗೆ ಯಾವುದರ ಪರಿವೆಯೂ ಇರಲಿಲ್ಲ. ಮುಖ ಹೊರಳಿಸಿ ಅವನನ್ನೊಮ್ಮೆ ನೋಡಿದೆ. ವಾಪಸ್ ತಿರುಗುವಷ್ಟರೊಳಗೆ ನೀನು ಕೂಗಿದ ಕೂಗು… ಓಹ್! ಇಂದೂ ಮರೆತಿಲ್ಲ. ಅದಾಗಲೇ ರೂಮಿನ ಮೂಲೆಯಲ್ಲಿ ಗುಬ್ಬಿಯಂತೆ ಮುದುಡಿ ಕುಳಿತಿದ್ದ ನೀನು, ಎದುರಿಗೆ ಯಮನಂತೆ ನಿಂತಿದ್ದ ಅಪ್ಪ, ರೂಮಿನ ಬಾಗಿಲಲ್ಲೇ ನಿಂತು ಹಾಕೋ ಇನ್ನೂ ಎರಡು.. ಕೊಬ್ಬಿದಾಳೆ ನಮ್ಮನೇಲಿ ಸುಖವಾಗಿದ್ದೂ ಇದ್ದೂ… ಹೀಗೇ ಏನೇನೋ ಅಸಂಬದ್ಧ ಆರೋಪ ಮಾಡುತ್ತಾ ನಿಂತಿದ್ದ ಚಿಕ್ಕ ತಾತ, ಪಕ್ಕದ ರೂಮಿನಲ್ಲಿ ಗುಸುಗುಸು ಸಾಗೇ ಇತ್ತು. ಚಿಕ್ಕಪ್ಪ ಹಾಗೂ ಇಬ್ಬರು ಅತ್ತೆಯರು ಅದೇನೋ ಬಹಳ ಗಹನವಾಗಿ ಮಾತಾಡುತ್ತಿದ್ದರು. ಮೆಲ್ಲನೆ ಅಲ್ಲಿಗೆ ಹೋದೆ. ನನಗೆ ಅವರು ಮಾತಾಡುತ್ತಿರೋದು ಏನು ಎಂಬ ಕುತೂಹಲ ಎಳ್ಳಷ್ಟೂ ಇರಲಿಲ್ಲ. ನನಗೆ ಯಾರಾದರೊಬ್ಬರು ಪರಿಸ್ಥಿತಿ ತಣ್ಣಗಾಗಿಸುವ ಹಿತವರ ಸಹಾಯ ಬೇಕಿತ್ತು. ಅಪ್ಪ ಹೊಡೆದಾಗಲೆಲ್ಲಾ ನೀನು ದಿನಗಟ್ಟಲೇ ಅಳುತ್ತಿದ್ದೆ. ಅಂದು ಅಪ್ಪ ಜೋರಾಗೇ ಹೊಡೆಯುತ್ತಿದ್ದ. ನೀನು ಈ ಏಟುಗಳನ್ನು ತಾಳಲಾರದೇ ಬಹಳ ದಿನಗಳವರೆಗೆ ಅಳುತ್ತಲೇ ಉಳಿದುಬಿಡಬಹುದು. ಆಗ ನಾನು ಪೂರ್ತಿ ಒಂಟಿಯಾಗಿಬಿಡುವ ಭಯ ಕಾಡುತ್ತಿತ್ತು . ಯಾರಾದರೊಬ್ಬರನ್ನು ಸಂಧಾನಕ್ಕಾಗಿ ಕರೆಯಬೇಕಿತ್ತು. ಪಾರತ್ತೇನೇ ಇದಕ್ಕೆಲ್ಲಾ ಸರಿ ಅಂತ ಅನಿಸ್ತು. ಒಂದೇ ಉಸುರಿಗೆ ಓಡಿದೆ ಅವಳ ಬಳಿಗೆ… ಯಾಪಾಟಿ ರಭಸದಲ್ಲಿ ಓಡಿದ್ದೆ ಅಂದರೆ ಅದ್ಯಾವ ಕ್ಷಣ ಅದೇನೆಡವಿ ಬಿದ್ದೆನೋ ಗೊತ್ತೇ ಆಗಲಿಲ್ಲ. ಅರಿವಾದಾಗ ರೂಮಿನ ಟೇಬಲಿನ ಕಾಲ ಕೆಳಗೆ ತಲೆಕೆಳಗಾಗಿ ಕೂತಿದ್ದೆ. ಹಾಕಿದ್ದ ಹಳದೀ ಲಂಗವೆಲ್ಲಾ ಕೆಂಪುನೀರಿನ ಚಿತ್ತಾರದಲ್ಲಿ ತೋಯ್ದು ಹೋಗಿತ್ತು. ಮುರಿದ ಹಲ್ಲಿನ ಚೂರೊಂದು ಪಕ್ಕದಲ್ಲೇ ಬಿದ್ದಿತ್ತು. ನಂಗೇನೋ ನೋವಾಗುತ್ತಿದೆ, ಅಳುವಷ್ಟು ಉರಿಯುತ್ತಿದೆಯೆಂದು ತಿಳಿಯಲು ಸ್ವಲ್ಪ ಹೊತ್ತಾಯಿತು. `ಆಆಆ…’ ಅಂತ ನಾನು ರಾಗ ತೆಗೆದು ಅಳುವ ಹೊತ್ತಿಗೆ ಅತ್ತೆಯರು ಬಂದು ಅಕ್ಕಪಕ್ಕ ನಿಂತಿದ್ದರು. ಸ್ವಲ್ಪ ದೂರದಲ್ಲಿದ್ದ ಚಿಕ್ಕಪ್ಪ, `ಆಯಿತು, ಇವಳು ಏನೋ ಒಂದು ರಾಮಾಯಣ ಶುರು ಮಾಡಿದ್ದಾಯಿತು… ಅಲ್ಲಿ ಇವರಮ್ಮಂದು, ಇಲ್ಲಿ ಇವಳದ್ದು..’ ಅಂದ. ಆ ಕ್ಷಣ ನನಗೆ ಭಗವಂತ ಶಕ್ತಿ ಕೊಟ್ಟಿದ್ದರೆ ಅವನನ್ನು ಗುದ್ದಿ ಗುದ್ದಿಯೇ ಕೊಂದುಬಿಡುತ್ತಿದ್ದೆ ಅನ್ನಿಸಿತು. ಪಕ್ಕದ ರೂಮಿನಿಂದ ನಿನ್ನ ದನಿ ಕೇಳಿಸುತ್ತಿತ್ತು, `ಇರ್ರೀ ಒಂದು ಗಳಿಗೆ, ಮಗು ನೋಡಿ ಬರುತೀನಿ, ಅಳ್ತಿದೆ. ಏನಾಗಿದೆಯೋ ಏನೋ… ಬಂದು ಹೊಡೆಸ್ಕೋತೀನಿ ಇರೀ..’
ನಿನ್ನ ದನಿ ಕೇಳುತ್ತಲೇ ಇತ್ತು. ಅಪ್ಪ ಮೃಗವಾಗೇ ಮುಂದುವರೆದಿದ್ದ. ”ಅದೇನೂ ಸಾಯಲ್ಲ ಬಿಡು. ನಿಮ್ಮ ವಂಶದ ಹಾಗೆ ಗಟ್ಟಿಪಿಂಡ. ಅಷ್ಟಕ್ಕೂ ಅಲ್ಲಿ ಪಾರೂ, ಮೀರಾ ಗೌರಿ ಎಲ್ಲ ಇದ್ದಾರೆ. ನೋಡ್ಕೋತಾರೆ. ಅವರಿಗೂ ಅಣ್ಣನ ಮಗು ಅನ್ನೋ ಜವಾಬ್ದಾರಿಯಿದೆ. ಏನು ನಿನಗೊಬ್ಬಳಿಗೇ ಮಗುವಲ್ಲ ಅದು.” ಅವನು ಹಾಗೆ ಹೇಳುತ್ತಿರುವಾಗ ಪಕ್ಕದ ಕೋಣೆಯಲ್ಲಿ ನನ್ನ ಸುತ್ತ ನಿಂತವರು ಏನೇನೋ ಹೇಳಿಕೊಳ್ಳುತ್ತಿದ್ದರು. ಅದು ನಿನಗೆ ಕೇಳಿಸಿತಾ ಅಮ್ಮಾ..?
ನನಗೆ ಯಾರಾದರೊಬ್ಬರು ಪರಿಸ್ಥಿತಿ ತಣ್ಣಗಾಗಿಸುವ ಹಿತವರ ಸಹಾಯ ಬೇಕಿತ್ತು. ಅಪ್ಪ ಹೊಡೆದಾಗಲೆಲ್ಲಾ ನೀನು ದಿನಗಟ್ಟಲೇ ಅಳುತ್ತಿದ್ದೆ. ಅಂದು ಅಪ್ಪ ಜೋರಾಗೇ ಹೊಡೆಯುತ್ತಿದ್ದ. ನೀನು ಈ ಏಟುಗಳನ್ನು ತಾಳಲಾರದೇ ಬಹಳ ದಿನಗಳವರೆಗೆ ಅಳುತ್ತಲೇ ಉಳಿದುಬಿಡಬಹುದು. ಆಗ ನಾನು ಪೂರ್ತಿ ಒಂಟಿಯಾಗಿಬಿಡುವ ಭಯ ಕಾಡುತ್ತಿತ್ತು . ಯಾರಾದರೊಬ್ಬರನ್ನು ಸಂಧಾನಕ್ಕಾಗಿ ಕರೆಯಬೇಕಿತ್ತು. ಪಾರತ್ತೇನೇ ಇದಕ್ಕೆಲ್ಲಾ ಸರಿ ಅಂತ ಅನಿಸ್ತು. ಒಂದೇ ಉಸುರಿಗೆ ಓಡಿದೆ ಅವಳ ಬಳಿಗೆ… ಯಾಪಾಟಿ ರಭಸದಲ್ಲಿ ಓಡಿದ್ದೆ ಅಂದರೆ ಅದ್ಯಾವ ಕ್ಷಣ ಅದೇನೆಡವಿ ಬಿದ್ದೆನೋ ಗೊತ್ತೇ ಆಗಲಿಲ್ಲ. ಅರಿವಾದಾಗ ರೂಮಿನ ಟೇಬಲಿನ ಕಾಲ ಕೆಳಗೆ ತಲೆಕೆಳಗಾಗಿ ಕೂತಿದ್ದೆ. ಹಾಕಿದ್ದ ಹಳದೀ ಲಂಗವೆಲ್ಲಾ ಕೆಂಪುನೀರಿನ ಚಿತ್ತಾರದಲ್ಲಿ ತೋಯ್ದು ಹೋಗಿತ್ತು. ಮುರಿದ ಹಲ್ಲಿನ ಚೂರೊಂದು ಪಕ್ಕದಲ್ಲೇ ಬಿದ್ದಿತ್ತು. ನಂಗೇನೋ ನೋವಾಗುತ್ತಿದೆ, ಅಳುವಷ್ಟು ಉರಿಯುತ್ತಿದೆಯೆಂದು ತಿಳಿಯಲು ಸ್ವಲ್ಪ ಹೊತ್ತಾಯಿತು.
”ಥೂ ಒಳ್ಳೇ ಕರ್ಮದ್ದು, ಈಗ್ಯಾಕೆ ಓಡಿಬಂದು ಬಿತ್ತೋ”
”ಹಲ್ಲು ಬಿಟ್ಟು ಇನ್ನೇನೇನು ಮುರಿದುಹೋಗಿದೆ ನೋಡೇ… ಇಲ್ಲಾ ನಮ್ಮ ತಲೆ ಮೇಲೆ ಬಂದ್ರೆ ಕಷ್ಟ”
”ಏನಾಗಲ್ಲ ಬಿಡ್ರೇ… ಏನ್ ಸತ್ತೋಗಿದೆಯಾ? ಬದುಕಿದೆ. ಸ್ವಲ್ಪ ಏಟಾಗಿದೆ. ಆ ರಕ್ತ ಒರಸ್ರಿ. ಆಮೇಲೆ ಮಿಕ್ಕಿದ್ದು ನೋಡಿದ್ರಾಯ್ತು”
”ಅಯ್ಯೋ, ನಂಗೆ ರಕ್ತ ಅಂದ್ರೇನೇ ಭಯ ಅಂತ ನಿಂಗೊತ್ತಿಲ್ವೇನೋ ಶ್ಯಾಮೀ… ನೀನೇ ಬಂದು ಒರ್ಸು. ನಿಂಗೂ ಅಣ್ಣನ ಮಗು ಅಲ್ವಾ”
”ಏ ಹೋಗೇ… ಒರಸೋದು ತಿಕ್ಕೋದು ತೊಳಿಯೋದು ಎಲ್ಲಾ ಹೆಂಗಸ್ರ ಕೆಲ್ಸ. ನಂಗೇನ್ ಕರ್ಮ! ಇದ್ರೆ ಇರಲಿ ಹೋದ್ರೆ ಹೋಗ್ಲಿ. ಇನ್ನೊಂದು ಗಂಡಿಲ್ವಾ ಅವನ ವಂಶ ಬೆಳಗೋಕೆ…
ಏ ಥೂ… ಏನು ಮಾತಾಡ್ತಿಯೋ, ನಾವೂ ಹೆಣ್ಣು ಹುಟ್ಟಿಲ್ವಾ ಇಲ್ಲಿ?”
”ನೀವಿರೋ ಕರ್ಮಕ್ಕೇ… ಇಷ್ಟೊಂದು ಒದ್ದಾಟ. ನಾನು ಅಣ್ಣ ಇಬ್ಬರೇ ಆಗಿದ್ದರೆ ಬರೀ ವರದಕ್ಷಿಣೆ ಮಾತ್ರ ಬಂದಿರೋದು. ನಿಮ್ಮೊಬ್ಬೊಬ್ರಿಂದ ಎಷ್ಟು ಖರ್ಚು ಗೊತ್ತಾ”
ಯಾಕೆ ಬರಲಿಲ್ಲ ನೀನು? ಎಷ್ಟು ರಕ್ತ ಹರೀತು ಗೊತ್ತಾ? ಕೆನ್ನೆ ಬನ್ನಿನ ಹಾಗೆ ಊದಿಹೋಗಿತ್ತು. ನೋವಿಗೆ ಒಂದೇ ಸಮ ಕಣ್ಣಲ್ಲಿ ನೀರು ಹರೀತಿತ್ತು. ಅದಕ್ಕಿಂತಲೂ ಮೀರಿ ನೀನು ಬರಲಿಲ್ಲವೆಂಬ ನೋವೇ ಚೀರಿ ಚೀರಿ ಅಳೋಹಾಗೆ ಮಾಡಿತ್ತು. ನೀನೂ ನಾನೂ ಪಕ್ಕಪಕ್ಕದ ರೂಮಲ್ಲೇ ಅಳುತ್ತಾ ಕೂತಿದ್ವಿ. ನಾನು ನಿನ್ನ ನೋಡಲಿಲ್ಲ. ನೀನು ನನ್ನ ನೋಡಲಿಲ್ಲ. ರೂಮುಗಳು ಹಾಗೇ ಕತ್ತಲಾದವು. ಸೂರ್ಯನಿಗೂ ಬೇಸರಾಗಿ, ಈ ನಾಟಕ ನೋಡೀ ನೋಡೀ ಸಾಕಾಗಿ ಮುಳುಗಿಹೋದ. ಅಮಾವಾಸ್ಯೆ ರಾತ್ರಿ ಅಲ್ವಾ… ಚಂದಿರನೂ ಗೈರುಹಾಜರಿ. ಕತ್ತಲು ಅಭೋ ಅಂತ ತುಂಬಿ ತೂರಾಡುತ್ತಿತ್ತು. ಅಪ್ಪ, ಚಿಕ್ಕಪ್ಪ, ಚಿಕ್ಕಜ್ಜ, ಅತ್ತೆಯರು, ನಮ್ಮಜ್ಜ ಎಲ್ಲರೂ ನೀನು ಹೇಳುತ್ತಿದ್ದ ಕಥೆಗಳಲ್ಲಿ ಬರುತ್ತಿದ್ದ ರಾಕ್ಷಸರಂತೆ ಕಾಣುತ್ತಿದ್ದರು. ಈಗ ನನ್ನ ಕಂಠದಿಂದ ಬಿಕ್ಕುವ ದನಿ ಮಾತ್ರವೇ ಹೊರಬರುತ್ತಿತ್ತು. ಕೆನ್ನೆಯ ಮೇಲೆ ಉಪ್ಪುನೀರು ಕರೆಗಟ್ಟಿತ್ತು. ಹಳದೀ ಲಂಗದ ಮೇಲೆ ರಕ್ತ ಕೇಸರೀ ಹೂಗಳು ಮೂಡಿದ್ದವು.
(ಮುಂದುವರಿಯುವುದು)
(ಮುಖಪುಟ ಚಿತ್ರ: ಅಮೃತಾ ಶೇರ್ ಗಿಲ್)
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.
ಇದು ಗೋಡೆ ಮೇಲೆ ಉಗುರು ಆಡಿಸಿದ ಹಾಗೆ ಇರಿಟೇಟಿಂಗ್ ಆಗಿದೆ. ಆದರೆ ಓದಲೇಬೇಕು. ಒಂದು ನಗುವ ಹೆಣ್ಣು ಮಗುವಿಗೆ ನೂರು ಅಳುವ ಹೆಣ್ಣುಮಕ್ಕಳಿದ್ದಾರೇನೋ ನಮ್ಮ ದೇಶದಲ್ಲಿ.
ನೀವು ಹೇಳುತ್ತ ಹೋಗಿ. ಓದಲು ಕಾಯುತ್ತಿರುತ್ತೇನೆ.
ನೆಟ್ಟಗೆ ನಿಂತ ನನ್ನ ಬೆನ್ನು ಮತ್ತು ನನ್ನ ಅದೃಷ್ಟವನ್ನು ನೆನಪಿಸಿಕೊಳ್ಳಲು. ಎಲ್ಲಿಯಾದರೂ ಕಾಣಿಸುವ ಅಡಗಿದ ಅದೃಷ್ಟದವರ ಜತೆಗೆ ನಿಲ್ಲಲು.
ಮನುಷ್ಯನ ಮೂಲಗುಣವೇ ಕ್ರೌರ್ಯ ಇರಬಹುದು ಅನಿಸುತ್ತಿದೆ.