ಶಾಂತಿ ನಿಲಯದ ಮೊದಲ ಮಹಡಿಯಲ್ಲಿದ್ದ ಸಿಸ್ಟರ್ ಬಂದು “ಮೊದಲು ಯಾರು ಬೆಡ್ ಹತ್ತಿರ ಹೋದವರು” ಎಂದರೆ ಮತ್ತೂ ಉತ್ತರವಿರಲಿಲ್ಲ. ಕಡೆಗೆ ನಿದ್ರೆಮಾಡಲು ಯಾರು ಚಡಪಡಿಸುತ್ತಾರೆ.. ಪ್ರತಿದಿನ ಬೆಡ್ ತೆಗೆಯಲು ಮೊದಲು ಯಾರು ಹೋಗುತ್ತಾರೆ ಇತ್ಯಾದಿ ಪ್ರಶ್ನೆಗಳು ಬರುತ್ತಿದ್ದವು. ಯಾವಾಗಲೂ ನಿದ್ರೆ ಮಾಡಲು ಕಾತರಿಸುವವರನ್ನು ಇನ್ನಷ್ಟು ಸತಾಯಿಸಬೇಕು ಅನ್ನುವುದು ಅವರ ಆಸೆಯಾಗಿತ್ತು. ಅಷ್ಟರಲ್ಲಿ ನಿದ್ರಾದೇವಿ ಎಲ್ಲರ ಮೇಲೆ ಬಂದು ನಿಧಾನವಾಗಿ ಒಂದೊಂದು ಸುತ್ತು ಸೊಂಟ ತಿರುಗಿಸುವ, ಆಕಳಿಸುವ ದೃಶ್ಯಗಳು ಹೆಚ್ಚಾದಾಗ ವಾರ್ಡನ್ ಮತ್ತು ಅಟೆಂಡರ್ ಅದು ಚಿಕ್ಕ ಹಾವು; ಅದರ ಅಮ್ಮ ನಿಮ್ಮ ಬೆಡ್‌ಗಳ ಅಡಿಯಲ್ಲಿ ಇರಬಹುದು ಎಂಬ ಹುಸಿ ಬಾಂಬ್ ಸಿಡಿಸಿದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನಾರನೆಯ ಕಂತು ನಿಮ್ಮ ಓದಿಗೆ
ಮಡಿಕೇರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಗದ್ದುಗೆಯೂ ಒಂದು. ಅರಸುಮನೆತನದವರ ಸಮಾಧಿಗಳು ಅಲ್ಲಿರುವುದು. ಹಿಂದಿನ ಸಂಚಿಕೆಯಲ್ಲಿ ಜನಸಾಮಾನ್ಯರ ಸ್ಮಶಾನದ ಬಗ್ಗೆ ಹೇಳಿದ್ದೆ. ಈ ಸಂಚಿಕೆಯಲ್ಲಿ ಅರಸು ಮನೆತನದವರ ಗದ್ದುಗೆ ಬಗ್ಗೆ ಹೇಳುವೆ. ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ಅವನ ಪತ್ನಿ ಮಹದೇವಿಯವರ ಸಮಾಧಿ ಮಧ್ಯದಲ್ಲಿದೆ, ಬಲದಲ್ಲಿ ಲಿಂಗರಾಜರ ಮತ್ತು ಎಡದಲ್ಲಿ ಅವರ ಗುರುಗಳು ರುದ್ರಪ್ಪನವರ ಗದ್ದುಗೆಗಳು ಇವೆ. ಒಟ್ಟಾರೆ ಮೂರು ಸಮಾಧಿಗಳು ಇರುವ ಗದ್ದುಗೆಗಳಲ್ಲಿ ಈಶ್ವರ ಲಿಂಗಗಳೂ ಇದ್ದು ಇಂದಿಗೂ ನಿತ್ಯಪೂಜೆಗಳು ಜರುಗುತ್ತವೆ.
ಇವುಗಳನ್ನು ಗೋರಿಗಳೆಂದೂ ಕರೆಯಬಹುದು. ಇವು ನಿರ್ಮಾಣವಾಗಿರುವುದು ಮಹಮದೀಯ ಶೈಲಿಯಲ್ಲಿ. ಮಧ್ಯದಲ್ಲಿ ಸಮಾಧಿ ಸುತ್ತಲೂ ಕಟ್ಟಡ ನಿರ್ಮಿಸಿ ನಾಲ್ಕೂ ಬದಿಯಲ್ಲಿ ಗೋಪುರಗಳನ್ನು ನಿರ್ಮಿಸಿ ಅಲ್ಲಿ ನಂದಿ ವಿಗ್ರಹಗಳನ್ನು ಕೆತ್ತಲಾಗಿದೆ. ಟಿಪ್ಪು ಸುಲ್ತಾನನೊಂದಿಗೆ ಹೋರಾಡಿ ಮಡಿದ ವೀರರಾಜನ ಅಧಿಕಾರಿಗಳು ಬಿದ್ದಂಡ ಬೋಪು ಮತ್ತು ಬಿದ್ದಂಡ ಸೋಮಯ್ಯ ಅರ್ಥಾತ್ ತಂದೆ ಮಗನ ಸಮಾಧಿಗಳೂ ಹತ್ತಿರವಿವೆ. ಈ ಗದ್ದುಗೆ ಎಂಬ ಐತಿಹಾಸಿಕ ಸ್ಥಳ ಮಡಿಕೇರಿಯ ಕಡೆಯ ಭಾಗದಲ್ಲಿ ಬರುತ್ತದೆ. ಏನಾದರೂ ಜಾಥಗಳು ಮೆರವಣಿಗೆಗಳು ಇದ್ದರೆ ಇಲ್ಲಿಂದಲೇ ಪ್ರಾರಂಭವಾಗಿ ಗಾಂಧಿಮಂಟಪದಲ್ಲಿ ಮುಕ್ತಾಯವಾಗುತ್ತವೆ. ಸಾಧಾರಣ ಮೂರರಿಂದ ನಾಲ್ಕು ಕಿಲೋಮೀಟರ್ ರಸ್ತೆ ಶಾಲಾಮಕ್ಕಳು ಪ್ರೊಸೆಶನ್ ಎಂದರೆ ಭಯ ಪಡುವ ಕಾಲವೊಂದಿತ್ತು. ಈ ಗದ್ದುಗೆಯನ್ನು ದಾಟಿ ಮುಂದುವರೆದರೆ ಅಬ್ಬಿ ಜಲಪಾತಕ್ಕೆ ಹೋಗಬಹುದು. ಇನ್ನೊಂದು ಕವಲು ದಾರಿಯಲ್ಲಿ ಹೋದರೆ ರಾಜರಾಜೇಶ್ವರಿ ದೇವಾಲಯ ಸಿಗುತ್ತದೆ. ಅಲ್ಲಿ ಬೃಹತ್ ಶಿವನ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದಾರೆ. ಮಡಿಕೇರಿಯ ಹೊರವಲಯಕ್ಕೆ ಸೇರಿದ್ದ ಈ ಸ್ಥಳಗಳು ನಗರಕ್ಕೆ ಸೇರಿವೆ.
ಇಲ್ಲಿಯೇ ಸ್ವಲ್ಪ ಮುಂದೆ ಹೋದರೆ ಜವಹರ್ ನವೋದಯ ವಿದ್ಯಾಲಯ ಮತ್ತು ಜಿಲ್ಲಾ ಕೇಂದ್ರ ಕಾರಾಗೃಹವಿರುವುದು. ಈ ಬದಿಯಿಂದ ನಮ್ಮ ಶಾಲೆಗೆ ಅನೇಕರು ನಡೆದೇ ಬರುತ್ತಿದ್ದರು. ಇವೆಲ್ಲಾ ಕಾಡುದಾರಿಗಳೆ… ಮಳೆಗಾಲದಲ್ಲಿಯಾದರೆ ಇಲ್ಲಿ ಜಿಗಣೆಗಳ ಕಾಟ. ಕಾಲಿಗೆಲ್ಲ ಅಂಟಿಕೊಂಡಿರುತ್ತಿದ್ದವು. ಅವುಗಳು ಸಾಕಷ್ಟು ರಕ್ತ ಹೀರಿ ದೊಡ್ಡದಾಗಿ ದೊಪ್ಪನೆ ಕೆಳಗೆ ಬಿದ್ದಾಗ ಅದು ಅಂಟಿಕೊಂಡಿದ್ದವರ ಕಾಲಲ್ಲಿ ರಕ್ತ ಸೋರುತ್ತಿರುತ್ತಿತ್ತು. ಅದನ್ನು ಮೊದಲು ನೋಡಿದವರ ಅಬ್ಬರ ಅಬ್ಬಬ್ಬಾ ಅನ್ನಿಸುತ್ತಿತ್ತು. ಬೊಬ್ಬೆ ಹೊಡೆದು ಅಕ್ಕ ಪಕ್ಕದ ಕ್ಲಾಸಿನ ಹುಡುಗಿಯರನ್ನು ಸೇರಿಸಿಬಿಡುತ್ತಿದ್ದರು. “ಇಷ್ಟೇತಾನೆ!” ಎನ್ನುವಂತೆ ಅಟೆಂಡರ್ ಕೈಮೊರ ಮತ್ತು ಕಡ್ಡಿಪೊರಕೆಯಿಂದ ರಕ್ತಹೀರಿ ಸುಸ್ತಾಗಿ ಬಿದ್ದ ಜಿಗಣೆಯನ್ನೊಮ್ಮೆ ಕಾಲಲ್ಲಿ ಹೊಸಕಿ ಕಸದ ಬುಟ್ಟಿಗೆ ಹಾಕುತ್ತಿದ್ದರು. ಇನ್ನು ಕೆಲವರು ಜಿಗಣೆ ಅಂಟಬಾರದೆಂದು ಸುಣ್ಣ ಇತ್ಯಾದಿಗಳನ್ನು ಸವರಿಕೊಂಡು ಬರುತ್ತಿದ್ದರು. ಇವುಗಳ ನಡುವೆ ಅಲ್ಲಲ್ಲಿ ಹಾವುಗಳ ಕಾಟ. ವಿಷಪೂರಿತ, ವಿಷರಹಿತ, ನಾಗರ, ಗೋಧಿ ನಾಗರ ಹೀಗೆಲ್ಲಾ ಮನುಷ್ಯ ಯಾರಿಗೆ ಹೆದರದೆ ಇದ್ದರೂ ಹಾವಿಗಂತೂ ಹೆದರಿಯೇ ಹೆದರುತ್ತಾನೆ. ಈ ಹಾವುಗಳು ಹಸುಗಳ ಕೆಚ್ಚಲಿಗೆ ಸುತ್ತಿಹಾಕಿಕೊಂಡಿದ್ದು, ಸೌದೆಕೊಟ್ಟಿಗೆಯಲ್ಲಿ ಇದ್ದದ್ದು ಇವುಗಳೆ ಇಂದಿನ ಬ್ರೇಕಿಂಗ್ ನ್ಯೂಸಿನ ಹಾಗೆ ಮೇಲಿಂದ ಮೇಲೆ ಕೇಳುತ್ತಿದ್ದವು.
ನಾನೇ ಅನುಭವಿಸಿದ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇರುವ ಹಾವಿನ ಕುರಿತ ಸನ್ನಿವೇಶಗಳನ್ನು ಇಲ್ಲಿ ಹೇಳಲೇಬೇಕು. ನಾನು ಆಗಿನ್ನೂ ಎರಡನೆ ತರಗತಿ ಕಲಿಯುತ್ತಿದ್ದೆ. ಮನೆಗೆ ಮಿನಿ ಲಾರಿಯೊಂದರಲ್ಲಿ ಸೌದೆ ತರಿಸಿದ್ದರು. ಅದನ್ನ ಓರಣವಾಗಿ ಒಟ್ಟಿದ ನಂತರ ಮನೆಯವರೆಲ್ಲ ವಿರಾಮ ತೆಗೆದುಕೊಳ್ಳುತ್ತಾ ನನಗೆ ಏನೋ ತರಲು ಹೇಳಿದರು. ತಕ್ಷಣಕ್ಕೆ ನಾನದನ್ನು ತರಲು ಹೋಗುವಾಗ ಹಾಗೆ ಬಾಗಿಲ ಸೆರೆಯಲ್ಲಿ ಬ್ಯಾಕ್ ಡೋರ್ ಎಂಟ್ರಿ ಕೊಡುತ್ತಿದ್ದ ಹಾವನ್ನು ಕಂಡು ಕಿಟ್ಟನೆ ಕಿರುಚಿದೆ. ಎಲ್ಲರು ತಿರುಗಿ ನೋಡಿ ಹಾವನ್ನು ಓಡಿಸಿದರು. ಅದನ್ನು ‘ಕಟ್ಟುಹಾವು’ ಎಂದು ದೊಡ್ಡವರು ಮಾತನಾಡಿಕೊಳ್ಳುತ್ತಿದ್ದರು. ತುಂಬಾ ದಿನಗಳವರೆಗೆ ಆ ಬಾಗಿಲ ಸೆರೆ ನೋಡಿದರೆ ಭಯವಾಗುತ್ತಿತ್ತು. “ನಾಗರ ಹಾವೆ ಹಾವೊಳು ಹೂವೆ ಬಾಗಿಲ ಬಿಲದಲಿ ನಿನ್ನಯ ಠಾವೆ” ಎಂಬ ಪಂಜೆಯವರ ಪದ್ಯ ಪದೇ ಪದೇ ನೆನಪಿಗೆ ಬರುತ್ತಿತ್ತು.
ಮಲೆನಾಡು ವಾಸಿಗಳಿಗೆ ಹಾವುಗಳು ಅಪರೂಪವಲ್ಲ. ಆದರೂ ದಿಗಿಲು ಇದ್ದದ್ದೆ ಅಲ್ವ! ನಮ್ಮ ಮನೆಯಲ್ಲಿ ನಾನೇ ದೊಡ್ಡವಳು. ನನ್ನ ತಮ್ಮಂದಿರು ಚಿಕ್ಕವರು. ಯಾವಾಗಲೂ ನನ್ನ ಪೆನ್ಸಿಲ್ ಬಾಕ್ಸ್ ತೆರೆದು ಪೆನ್ಸಿಲ್, ರಬ್ಬರ್, ಸ್ಕೇಲ್ ತೆಗೆದುಕೊಂಡು ಆಚೀಚೆ ಮಾಡಿ ಬಿಡುತ್ತಿದ್ದರು. “ಶಾಲೆಯಲ್ಲಿ ಚಿತ್ರ ಬಿಡಿಸಲು ಕೊಟ್ಟಿದ್ದಾರೆ” ಎಂದೇ ಅವರಿಬ್ಬರ ಬಳಿಯೂ ಜಗಳ ಮಾಡಿಕೊಂಡೆ ಟೀಪಾಯಿಯ ಮೇಲೆ ಡ್ರಾಯಿಂಗ್ ಶೀಟ್ ಹರಡಿಕೊಂಡು ಚಿತ್ರ ಬಿಡಿಸುತ್ತಿದ್ದೆ. ಮೆಲ್ಲಗೆ ಏನೋ ಸದ್ದಾಯಿತು. ನೋಡಿದರೆ ಕಡುಕಪ್ಪನೆ ಬಣ್ಣದ ಉದ್ದದ ಹಾವೊಂದು ಸುತ್ತು ಹಾಕುತ್ತಿತ್ತು. ಅದಕ್ಕೆ ಮುಂದೆ ಹೋಗಲು ಹಾಲ್‌ನಲ್ಲಿ ಹರಡಿದ್ದ ಕ್ವಾಯರ್ ಮ್ಯಾಟ್ ತಡೆಯುತ್ತಿತ್ತು. ಆಗ ಕೆಳಗೆ ಕೂತವಳು ತಟ್ಟನೆ ಸೋಫ ಮೇಲೇರಿ, ಹಾವು! ಹಾವು! ಎಂದು ಕಿರುಚಿದರೆ ಯಾರೂ ತಕ್ಷಣಕ್ಕೆ ಬರಲೇ ಇಲ್ಲ. ಕಿರುಚಿ ಕಿರುಚಿ ನನ್ನ ಸ್ವರ ಕೀರಲಾಗಿತ್ತು. ಮತ್ತೆ ನಮ್ಮಮ್ಮ ನೋಡಿ “ಎಲ್ಲಿ ಹಾವು?” ಎಂದರು ನಾನು “ಮರ! ಮರ!” ಎಂದೆ ಅವರೋ ಮನೆಯ ಎದುರಿದ್ದ ಮರವನ್ನು ನೋಡಿ ಇಲ್ಲ! ಇಲ್ಲ! ಎನ್ನುತ್ತಿದ್ದರು. ಅವರು ತಕ್ಷಣಕ್ಕೆ ಮ್ಯಾಟ್ ಗಮನಿಸಿದರೆ ಅದು ಅಲ್ಲೇ ಇತ್ತು. ಅದೂ ಗಾಬರಿಯಾಗಿ ಎಲ್ಲಿ ಹೋಗಬೇಕೆಂದು ತಿಳಿಯದೆ ಸುತ್ತಲೂ ತಿರುಗುತ್ತಿತ್ತು. ಆ ಹೊಳೆಯುವ ಗಾಢ ಕಪ್ಪು ಬಣ್ಣ ಮತ್ತೆ ನೆನಪಾದಾಗ ಇನ್ನೂ ಮೈಕೊಡಹುವ ಹಾಗೆ ಆಗುತ್ತದೆ. ಮೊದಲೆ ಆ ದಿನ ನಾನು ನನ್ನ ತಮ್ಮಂದಿರ ಜೊತೆ ಜಗಳ ಮಾಡಿಕೊಂಡಿದ್ದ ಕಾರಣದಿಂದ ಅವರಿಬ್ಬರೂ ಸರಸರನೆ ಬಾ! ಸರ! ಸರ! ಮರ! ಮರ! ಎಂದು ಬಹಳ ದಿನಗಳವರೆಗೆ ಅಣಕಿಸುತ್ತಿದ್ದರು.
ಕಾಲೇಜು ದಿನಗಳಲ್ಲೂ ಒಮ್ಮೆ ಹಾಗೆ ಮನೆಯೊಳಗೆ ಬಂದ ಹಾವು ದಾರಿಕಾಣದೆ ಹೆಣಗಾಡುತ್ತಿತ್ತು. ನಮ್ಮಸದ್ದು ಹೆಚ್ಚಾಗಿ ಡೈನಿಂಗ್ ಟೇಬಲ್ ಕಾಲಿಗೆ ಸುತ್ತು ಹಾಕಿಕೊಂಡಿತ್ತು. ನಮ್ಮಪ್ಪ “ಹೊರಗೆ ಯಾರಾದರೂ ಇದ್ದರೆ ಕರೆದುಕೊಂಡು ಬಾ. ಇದು ಭಯಂಕರವಾಗಿದೆ. ಒಬ್ಬರ ಕೈಯಲ್ಲಿ ಓಡಿಸುವುದಕ್ಕಾಗಲ್ಲ” ಎಂದರು. ನಾನು, ನಮ್ಮಮ್ಮ ಅಲ್ಲೇ ಡ್ಯೂಟಿ ಮುಗಿಸಿ ಹೋಗುತ್ತಿದ್ದವರನ್ನು ಕರೆದರೆ ಅವರು ಬರಲು ಹಿಂದು ಮುಂದು ನೋಡುತ್ತಿದ್ದರು. ಆನಂತರ ನಮ್ಮ ತಂದೆ ಒಳಗಿಂದಲೇ “ಸ್ವಲ್ಪ ಹೆಲ್ಪ್ ಮಾಡಿ” ಎಂದು ಕರೆದಾಗ ಮುಜುಗರವಿಲ್ಲದೆ ಒಳ ಬಂದು ಆ ಕೇರೆ ಹಾವನ್ನು ಯಶಸ್ವಿಯಾಗಿ ಓಡಿಸಿದರು.
ಕಾಡು ರೋಸ್ ಗಿಡಗಳಿಂದ ಮೊದಲ್ಗೊಂಡು ಹೈಬ್ರಿಡ್ ರೋಸ್‌ಗಳವರೆಗೆ ಎಲ್ಲಾ ಜಾತಿಯ ರೋಸ್ ಗಿಡಗಳನ್ನು ಕಲೆಕ್ಟ್ ಮಾಡಿ ಆ ಗಿಡಗಳನ್ನು ಆರೈಕೆ ಮಾಡುವುದೇ ನಮ್ಮಮ್ಮನ ಹವ್ಯಾಸ. ಯಾವಾಗಲೂ ಗಿಡಗಳ ನಡುವೆಯೇ ಇರುತ್ತಿದ್ದರು. ಒಂದು ದಿನ ಹಾಗೆ ಸುತ್ತಲೂ ಬೆಳೆದಿದ್ದ ಕಳೆಯನ್ನು ಕುಳಿತು ತೆಗೆಯುವಾಗ ನಾಗರ ಹಾವೊಂದು ಹೆಡೆ ಬಿಚ್ಚಿ ಹಾಗೇ ಅವರ ಹಿಂದೆ ಇತ್ತು. ಆ ಬಗ್ಗೆ ತಿಳಿಯದೆ ನಮ್ಮಮ್ಮ ಕಳೆ ತೆಗೆಯುತ್ತಲೇ ಇದ್ದರು. ಆ ಹಾವನ್ನು ನಮ್ಮ ಪಕ್ಕದಮನೆಯವರು ಮೊದಲು ನೋಡಿ ಹೆದರಿಕೆ ಆದರೂ ನಮ್ಮಮ್ಮನನ್ನು ಮೆಲ್ಲಗೆ ಮಾತನಾಡಿಸಿ ಗೇಟ್ ಬಳಿ ಹೋಗುವ ಹಾಗೆ ಮಾಡಿ ಮತ್ತೆ ಕಣ್ಸನ್ನೆ ಮಾಡಿ ಹಾವಿರುವುದನ್ನು ತೋರಿಸಿದರು. ನಮ್ಮಮ್ಮ ತಿರುಗಿ ನೋಡುವುದಕ್ಕೂ ಅದು ಹೆಡೆ ಮಡಿಚಿಕೊಂಡು ಬೇರೆ ಗಿಡಗಳ ಒಳಗೆ ನುಗ್ಗಿ ಆಚೆ ಹೋಗುವುದಕ್ಕೂ ಒಂದೆ ಆಯಿತು. ಆ ಕ್ಷಣದಲ್ಲಿ ಪಕ್ಕದ ಮನೆಯವರು ಹಾವಿದೆ ಎಂದು ಹೇಳಿದರೂ ಕಷ್ಟ! ಹೇಳದೆ ಇದ್ದರೂ ಕಷ್ಟ! ಅನ್ನುವ ಸಂದಿಗ್ಧ ಪರಿಸ್ಥಿತಿ ಎದುರಿಸಿದ್ದರು. ಆ ದಿನವನ್ನವರು ನಿಭಾಯಿಸಿದ ಜಾಣ್ಮೆಗೆ ಇವತ್ತಿಗೂ ಥ್ಯಾಂಕ್ಸ್ ಹೇಳಲೇಬೇಕು.
ನಮ್ಮ ಶಾಲೆಯ ಸುತ್ತಮುತ್ತಲಲ್ಲಿಯೂ ಹಾವುಗಳಿಗೆ ಊಸರವಳ್ಳಿಗಳಿಗೇನು ಕಡಿಮೆಯಿರಲಿಲ್ಲ. ಇಂಗ್ಲಿಶ್‌ನಲ್ಲಿ ‘ಚಮೇಲಿಯನ್’ ಅನ್ನುವ ಪಠ್ಯವಿತ್ತು ಅದೇ ‘ಚಮೇಲಿಯನ್’ ಎಂದರೆ ‘ಊಸರವಳ್ಳಿ’ ಅಲ್ವ! ಅದು ಬಣ್ಣ ಬದಲಾಯಿಸುತ್ತದೆ ಎಂದೆಲ್ಲಾ ತಿಳಿದ ಬಳಿಕ ಊಸರವಳ್ಳಿಯ ಬಣ್ಣಗಳನ್ನು ನೋಡಬೇಕು ಅನ್ನುವ ವಾಂಛೆ ನಮ್ಮ ತರಗತಿಯವರಿಗೆ ಹೆಚ್ಚಾಗಿ ಅದನ್ನು ಮುಟ್ಟಲು ಹೋಗಿ ಬಾಲದಲ್ಲಿ ಹೊಡೆಸಿಕೊಂಡು ಕೈ ಊದಿಸಿಕೊಂಡಿದ್ದಳು ರೀನಾ ಎನ್ನುವ ಸಹಪಾಠಿ. ಪಿ.ಟಿ. ಗೆ ಬಿಟ್ಟಾಗ ಹಾವಿನ ಪೊರೆಯನ್ನು ನೋಡುವುದು.. ಅದನ್ನು ಬಂದು ಪಿ.ಟಿ. ಟೀಚರಿಗೆ ವರದಿ ಒಪ್ಪಿಸುವುದು ನಮ್ಮ ಚಾಳಿ. ಆಗ ಅವರು ಅವರು ಇಷ್ಟೇನಾ? ಮಾಡ್ಲಿಕೆ ಕೆಲ್ಸ ಇಲ್ವ! ನಾನ್ಸೆನ್ಸ್ ಗರ್ಲ್ಸ್…! ಎನ್ನುವುದು ಇಂಥದ್ದೆಲ್ಲಾ ಆಗಿಂದಾಗ್ಗೆ ನಡೆ ಶಾಲೆಯಲ್ಲಿ ನಡೆಯುತ್ತಿದ್ದವು.
ಮಳೆಗಾಲದಲ್ಲಿಯಾದರೆ ಇಲ್ಲಿ ಜಿಗಣೆಗಳ ಕಾಟ. ಕಾಲಿಗೆಲ್ಲ ಅಂಟಿಕೊಂಡಿರುತ್ತಿದ್ದವು. ಅವುಗಳು ಸಾಕಷ್ಟು ರಕ್ತ ಹೀರಿ ದೊಡ್ಡದಾಗಿ ದೊಪ್ಪನೆ ಕೆಳಗೆ ಬಿದ್ದಾಗ ಅದು ಅಂಟಿಕೊಂಡಿದ್ದವರ ಕಾಲಲ್ಲಿ ರಕ್ತ ಸೋರುತ್ತಿರುತ್ತಿತ್ತು. ಅದನ್ನು ಮೊದಲು ನೋಡಿದವರ ಅಬ್ಬರ ಅಬ್ಬಬ್ಬಾ ಅನ್ನಿಸುತ್ತಿತ್ತು. ಬೊಬ್ಬೆ ಹೊಡೆದು ಅಕ್ಕ ಪಕ್ಕದ ಕ್ಲಾಸಿನ ಹುಡುಗಿಯರನ್ನು ಸೇರಿಸಿಬಿಡುತ್ತಿದ್ದರು. “ಇಷ್ಟೇತಾನೆ!” ಎನ್ನುವಂತೆ ಅಟೆಂಡರ್ ಕೈಮೊರ ಮತ್ತು ಕಡ್ಡಿಪೊರಕೆಯಿಂದ ರಕ್ತಹೀರಿ ಸುಸ್ತಾಗಿ ಬಿದ್ದ ಜಿಗಣೆಯನ್ನೊಮ್ಮೆ ಕಾಲಲ್ಲಿ ಹೊಸಕಿ ಕಸದ ಬುಟ್ಟಿಗೆ ಹಾಕುತ್ತಿದ್ದರು.
ಇವೆಲ್ಲಕ್ಕಿಂತ ಚಿಕ್ಕದೊಂದು ಹಾವು ಬೋರ್ಡಿಂಗ್ ವಾಸಿಗಳ ಹಾಸಿಗೆ ಹತ್ತಿರ ಓಡಾಡಿದ್ದು ದೊಡ್ಡ ವಿಚಾರವಾಗಿತ್ತು. ಹತ್ತನೆಯ ತರಗತಿ ಎಂದರೆ ಈಗಿನ ಹಾಗೆ ಕಾಮನ್ ಆಗಿಲಿಲ್ಲ. ಹತ್ತನೆ ತರಗತಿಯಲ್ಲಿ ಪಾಸು ಮಾಡುವುದು ಅನ್ನುವುದಕ್ಕಿಂತ 80% ಅಂಕಗಳನ್ನು ಪಡೆದರೆ ಹುಡುಗ ಅಥವಾ ಹುಡುಗಿ ಆಗಬಹುದು ಪರವಾಗಿಲ್ಲ ಅನ್ನುವ ಕಾಲ. ನಮ್ಮ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಮಾಧ್ಯಮದಲ್ಲೂ ಬೋಧನೆ ಇತ್ತು. ಕನ್ನಡ ಮೀಡಿಯಂ ಅಂದರೆ ಒಂದು ರೀತಿ ಎರಡನೆ ದರ್ಜೆ ಎನ್ನುವಂತೆ ಇಂಗ್ಲಿಶ್ ಅಂದರೆ ಮಿಗಿಲು ಅನ್ನುವ ಭಾವ ಹಲವರಲ್ಲಿತ್ತು. ನಾವು ಹತ್ತನೆ ತರಗತಿ ಪರೀಕ್ಷೆ ತಯಾರಿಗಾಗಿ ಮಡಿಕೇರಿ ನಗರದಲ್ಲಿಯೇ ಮನೆಯಿದ್ದರೂ ಬೋರ್ಡಿಂಗ್ ಸೇರಬೇಕಿತ್ತು. ಕನ್ನಡ ಮಾಧ್ಯಮದವರು ಒಂದೆಡೆ ಇಂಗ್ಲಿಶ್ ಮಾಧ್ಯಮದವರು ಒಂದೆಡೆ….. ಶಾಲಾ ಸಂಕೀರ್ಣ ಬಿಟ್ಟು ರಸ್ತೆ ದಾಟಿದರೆ ಶಾಂತಿನಿಲಯ ಅನ್ನುವ ದೊಡ್ಡ ಕಟ್ಟಡ. ಅದು ಕನ್ನಡ ಹುಡುಗಿಯರ ವಾಸಸ್ಥಾನ. ನಮ್ಮ ಅಷ್ಟೂ ಬೆಡ್‌ಗಳು ಒಂದೆಡೆ.. ಅದು ಬೆಡ್‌ಗಳ ಪರ್ವತವೇ ಅನ್ನಿ. ಬಕೆಟ್, ಸೋಪ್, ಬ್ರಷ್ ಇತ್ಯಾದಿಗಳನ್ನು ಒಂದೆಡೆ ಇರಿಸಬೇಕಾಗಿತ್ತು. ಒಂದು ರಾತ್ರಿ ನಾವು ಹಾಸಿಗೆ ಬಿಡಿಸಲು ಹೋಗುವಾಗ ಚಿಕ್ಕ ಹಾವು ಕಾಣಿಸಿತು. ಅದು ಹಾಸಿಗೆ ಹತ್ತಿರ ಇನ್ನೂ ಬಂದಿರಲಿಲ್ಲ. ಬರುತ್ತಿತ್ತೋ? ಇಲ್ಲವೋ? ಗೊತ್ತಿಲ್ಲ? ಆದರೂ ದೊಡ್ಡ ಗಲಾಟೆ ಎದ್ದು ‘ಶಾಂತಿ ನಿಲಯ’ ‘ಅಶಾಂತಿ’ ನಿಲಯವಾಗಿತ್ತು. ವಾರ್ಡನ್ ಬಂದು ಹಾವು ಓಡಿಸುವುದ? ಮಕ್ಕಳ ಗಲಾಟೆಯನ್ನು ಕಡಿಮೆ ಮಾಡುವುದ? ಎಂದು ತಿಳಿಯದೆ ಹಾಗೇ ಇರಬೇಕಾದರೆ, ಸುದ್ದಿ ತಿಳಿದ ಅಟೆಂಡರ್ ದೊಡ್ಡ ಬಡಿಗೆ ಸಮೇತ ಅಲ್ಲಿಗೆ ಬಂದಿದ್ದರು. ಅವರು ವೀರಾವೇಶದಿಂದ ಬರುವುದನ್ನು ಹಾವು ನೋಡಿತೋ ಇಲ್ಲವೋ ಗೊತ್ತಿಲ್ಲ! ಇನ್ನೊಮ್ಮೆ ಬರುವೆ ಎನ್ನುತ್ತಲೇ ಬಾಗಿಲಿಂದಲೇ ಆಚೆ ಹೋಯಿತು.
ಅಟೆಂಡರ್ “ನಾನು ಅಷ್ಟು ಕಷ್ಟ ಪಟ್ಟು ಬಡಿಗೆ ತಂದಿದ್ದೇನೆ. ಹಾಗಾಗಿ ನಾನು ಯಾರಿಗಾದರೂ ಹೊಡೆಯಲೇ ಬೇಕು” ಎಂದು ಅಲ್ಲಿ ಇದ್ದವರನ್ನು ಅಟ್ಟಾಡಿಸುತ್ತಿದ್ದರು. ವಾರ್ಡನ್ ಎಲ್ಲರನ್ನು ಅಟ್ಟಾಡಿಸುವುದಕ್ಕಿಂತ ಮೊದಲು ಯಾರು ನೋಡಿದರು ಅವರನ್ನು ಬೆರೆಸಿ ಹೊಡೆಯಿರಿ ಎಂಬ ಉಚಿತ ಸಲಹೆ ಕೊಟ್ಟರು (ಬೆರೆಸು ಎಂದರೆ ಓಡಿಸಿ ಹಿಡಿ ಅಥವಾ ಬೆನ್ನಟ್ಟು ಎಂದರ್ಥ) ಯಾರು? ಯಾರು? ಫಸ್ಟಿಗೆ ನೋಡಿದ್ದು ಯಾರು? ಎಂದರೆ ಸದ್ದೇ ಇಲ್ಲ ಶಾಂತಿ ನಿಲಯದಲ್ಲಿ ಪಿನ್ ಬಿದ್ದರೂ ಕೇಳಿಸುವಷ್ಟು ಶಾಂತಿ ಆವರಿಸಿತು. ನಮ್ಮ ಮೌನವನ್ನು ಕಂಡು ವಾರ್ಡನ್ ಹಾಗು ಅಟೆಂಡರ್ಗೆ ಇನ್ನಷ್ಟು ನಮ್ಮನನ್ನು ಕಾಡಬೇಕು ಅನ್ನಿಸುತ್ತಿತ್ತು. ಮುಸಿಮುಸಿನಗುತ್ತಾ ಕಡೆಗೆ ಯಾರು ಗಲಾಟೆಯ ರೂವಾರಿ ಎಂದು ಹುಡುಕುವ ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ.
ಶಾಂತಿ ನಿಲಯದ ಮೊದಲ ಮಹಡಿಯಲ್ಲಿದ್ದ ಸಿಸ್ಟರ್ ಬಂದು “ಮೊದಲು ಯಾರು ಬೆಡ್ ಹತ್ತಿರ ಹೋದವರು” ಎಂದರೆ ಮತ್ತೂ ಉತ್ತರವಿರಲಿಲ್ಲ. ಕಡೆಗೆ ನಿದ್ರೆಮಾಡಲು ಯಾರು ಚಡಪಡಿಸುತ್ತಾರೆ.. ಪ್ರತಿದಿನ ಬೆಡ್ ತೆಗೆಯಲು ಮೊದಲು ಯಾರು ಹೋಗುತ್ತಾರೆ ಇತ್ಯಾದಿ ಪ್ರಶ್ನೆಗಳು ಬರುತ್ತಿದ್ದವು. ಯಾವಾಗಲೂ ನಿದ್ರೆ ಮಾಡಲು ಕಾತರಿಸುವವರನ್ನು ಇನ್ನಷ್ಟು ಸತಾಯಿಸಬೇಕು ಅನ್ನುವುದು ಅವರ ಆಸೆಯಾಗಿತ್ತು. ಅಷ್ಟರಲ್ಲಿ ನಿದ್ರಾದೇವಿ ಎಲ್ಲರ ಮೇಲೆ ಬಂದು ನಿಧಾನವಾಗಿ ಒಂದೊಂದು ಸುತ್ತು ಸೊಂಟ ತಿರುಗಿಸುವ, ಆಕಳಿಸುವ ದೃಶ್ಯಗಳು ಹೆಚ್ಚಾದಾಗ ವಾರ್ಡನ್ ಮತ್ತು ಅಟೆಂಡರ್ ಅದು ಚಿಕ್ಕ ಹಾವು; ಅದರ ಅಮ್ಮ ನಿಮ್ಮ ಬೆಡ್‌ಗಳ ಅಡಿಯಲ್ಲಿ ಇರಬಹುದು ಎಂಬ ಹುಸಿ ಬಾಂಬ್ ಸಿಡಿಸಿದರು. ಅಷ್ಟರಲ್ಲಿ ನುಲಿಯುತ್ತಿದ್ದ ಸೊಂಟಗಳು ನೆಟ್ಟಗಾದವು. ಇರಲಿ ಎನ್ನುತ್ತಾ ಎಲ್ಲರ ಹಾಸಿಗೆಯನ್ನು ತೆಗೆಸಿ ನೋಡಿ ಪರಿಶೀಲಿಸಿ, ಬಿಡಿಸಿ ಮಲಗುವವರೆಗೂ ಅಲ್ಲಿದ್ದು ಹೊರಟರು. ಆದರೆ ನಮ್ಮ ಹುಡುಗಿಯರು ಬಿಡಬೇಕಲ್ಲ. ಬೇಗ ನಿದ್ರೆ ಹೋಗುತ್ತಿದ್ದವರ ಹತ್ತಿರ ಹೋಗಿ ‘‘ಬುಸ್ ಬುಸ್’’ ಎನ್ನುತ್ತಿದ್ದರು. ಕೆಲವರು ಹೆದರಿದರೆ ಇನ್ನು ಕೆಲವರು ‘‘ಪುಸ್ ಪುಸ್’’ ಎನ್ನುತ್ತಾ ನಿದ್ರೆಗೆ ಜಾರಿದರು. ಆದರೂ ಒಂದೆರಡು ಕಡೆ ‘‘ಕಟುಂ ಕಟುಂ’’ ಸದ್ದು ಬರುತ್ತಿತ್ತು…. ಅದೂ ಸಾಮಾನ್ಯವಾಗಿತ್ತು ಬಿಡಿ! ಕಡಲೆ ಮಿಟಾಯಿಯನ್ನು ಜೇಬಲ್ಲಿಟ್ಟು ತಿನ್ನುವವರ ಬಳಗವದು ಎಂದು ತಿಳಿದಿದ್ದ ಕಾರಣ ಎಲ್ಲರೂ ಆ ಸದ್ದಿಗೆ ತಲೆಕೆಡಿಸಿಕೊಳ್ಳದೆ ನಿದ್ರೆಗೆ ಹೋದೆವು. ಅಂತೂ ಪ್ರಕ್ಷುಬ್ಧ ನಿಲಯ ಪ್ರಶಾಂತವಾಯಿತು.
ನಡೆದ ಘಟನೆಯ ಭಯಕ್ಕೋ ಏನೋ ಸಹಪಾಠಿ ಹರಿಣಾಕ್ಷಿಗೆ ಮಧ್ಯರಾತ್ರಿ ತೀವ್ರ ಜಲಭಾದೆ ಕಾಣಿಸಿಕೊಂಡಿದೆ. ಅತೀ ತುರ್ತು ಎಂದಾಗ ಮಾತ್ರ ಉಪಯೋಗಿಸಬಹುದಾದ ವಾಶ್ ರೂಮಿಗೆ ಹೋಗಿದ್ದಾಳೆ… ಸರಿ ಬೆಳಗಾಯಿತು… 8 ಗಂಟೆಗೆ ತಿಂಡಿ ತಿಂದು ಮುಗಿಸುವ ಹೊತ್ತಿಗೆ ‘ಶಾಂತಿನಿಲಯ’ ರಾತ್ರಿಗಿಂತ ಪ್ರಕ್ಷುಬ್ಧವಾಗಿತ್ತು. ಸಿಸ್ಟರ್ ಮೇರಿಲೋಬೊ ಹಿಂದೆಂದಿಗಿಂತ ದೊಡ್ಡ ಸ್ವರದಲ್ಲಿ ಬೈಯ್ಯುತ್ತಿದ್ದರು “ನೀವೇನು ಹೆಣ್ಣು ಮಕ್ಕಳ ಪಿಶಾಚಿಗಳ? ಹೀಗೆ ಕಾಟ ಕೊಡ್ತೀರಲ್ಲ! ನಿನ್ನೆ ರಾತ್ರಿ ನಿದ್ರೆ ಮಾಡಲು ಬಿಟ್ಟಿಲ್ಲ! ಬೆಳಗ್ಗೆ ನೋಡಿದರೆ ಹೀಗೆ ಹೈಜಿನ್ ಇಲ್ಲ..! ನಿಮ್ಮ ಮನೆಯಲ್ಲಿ ಹೀಗೆ ಮಾಡ್ತೀರ…? ಎಲ್ಲರೂ ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗಿ ಮುಖ ತೋರಿಸಬೇಡಿ …! ಛೇ…!” ಎನ್ನುತ್ತಿದ್ದರೆ ಅನೇಕರಿಗೆ ಸಧ್ಯ ಕಳುಹಿಸಿದರೆ ಸಾಕಲ್ಲ ದೇವರೆ ಎಂದು ಮನದಲ್ಲಿಯೇ ಮೊರೆ ಇಡುತ್ತಿದ್ದರು. ಹಾಗೆ ತನಿಖೆ ಮುಂದುವರೆಸುತ್ತಾ ರಾತ್ರಿ ಎಮರ್ಜೆನ್ಸ್ ವಾಶ್ ರೂಮಿಗೆ ಯಾರು ಹೋಗಿದ್ದು ಎಂಬ ಪ್ರಶ್ನೆ ಬಂದಾಗ ಹೇಳದಿದ್ದರೆ ವಿಧಿಯಿಲ್ಲ ಎನ್ನುವಂತೆ ಹರಿಣಾಕ್ಷಿ ಕೈ ಎತ್ತಿದಳೂ. ಪಾಪ ಮಾಡದ ತಪ್ಪಿಗೆ ಆ ದಿನ ಶಿಕ್ಷೆ ಅನುಭವಿಸಿದಳು.
ಅವಳು ಒಪ್ಪಿಕೊಳ್ಳುತ್ತಿದ್ದಂತೆ ಸ್ಯಾನಿಟರಿ ಪ್ಯಾಡನ್ನು ಅಲ್ಲೇ ಹಾಕಿದ ಆರೋಪ ಬಂದಿತು. ಆದರೆ ಆಕೆ ಆ ತಪ್ಪನ್ನು ಮಾಡಿರಲಿಲ್ಲ. ಮೂಕವಾಗಿ ಅಲ್ಲೆ ಇದ್ದ ತಗಡನ್ನು ತೆಗೆದು ವಾಶ್ ರೂಮಿನಲ್ಲಿ ಹಾಕಲಾಗಿದ್ದ ಬಳಸಿದ ಪ್ಯಾಡನ್ನು ತೆಗೆಯಲು ಮುಂದಾದಳು. ಮಾಡದ ತಪ್ಪಿಗೆ ಆಕೆಗೆ ಶಿಕ್ಷೆಯಾಗಿತ್ತು. ಹರಿಣಾಕ್ಷಿ ದಿನವೆಲ್ಲಾ ಕೂಗುತ್ತಿದ್ದಳು. (ಕೊಡಗಿನಲ್ಲಿ ಅಳು ಎನ್ನುವುದಕ್ಕೇ ಕೂಗುವುದು ಎನ್ನುತ್ತಾರೆ ಮೈಸೂರು ಕನ್ನಡದಲ್ಲಿ ‘ಕೂಗು’ ಎಂದರೆ ‘ಕರೆ’ಯುವುದು ಎಂದು ಉತ್ತರ ಕರ್ನಾಟಕದಲ್ಲಿ ‘ಖರೆ’ ಎಂದರೆ ಸತ್ಯ ಎಂದು. ಕರೆ>ಖರೆ ಆದರೂ ಉಚ್ಛರಿಸುವಾಗ ಅಲ್ಪಪ್ರಾಣವೆ ಬರುತ್ತದೆ) ಅವಳನ್ನು ಸಮಾಧಾನಿಸಲು ಅನೇಕರು ಪ್ರಯತ್ನ ಪಟ್ಟಷ್ಟು ಅವಳ ಅಳು ಹೆಚ್ಚಾಗುತ್ತಿತ್ತು. ನಾನು ಹಾಗೂ ಜಯಶ್ರೀ “ನಾವು ಮಾತನಾಡಿಸುವುದು ಬೇಡ. ಅವಳೇ ಸಮಾಧಾನವಾಗಬೇಕು” ಎಂದು ಮಾತನಾಡಿಕೊಂಡೆವು. ಈ ನೆನಪು ತಪ್ಪು ಮಾಡಿದವರಿಗೆ ಈ ದಿನ ನೆನಪು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹರಿಣಾಕ್ಷಿಯಲ್ಲಿ ಎಂದಾದರು ಅವರು ಕ್ಷಮೆ ಕೇಳಲೇಬೇಕು!
ಹರಿಣಾಕ್ಷಿ ಪ್ಯಾಡ್ ತೆಗೆದು ಆಚೆ ಹಾಕಲು ಹೋದಂತೆ ಅವಳ ಹಿಂದೆ ಹೋದ ಸಿಸ್ಟರ್‌ಗೆ ಶಾಂತಿ ನಿಲಯದ ಹಿಂದೆ ಹೋದರು ಹೆಚ್ಚಾಗಿರುವುದು ತಿಳಿದು ಅದನ್ನು ತೆಗೆಯುವ ಕೆಲಸ ಮಾಡಲು ಅಟೆಂಡರ್ಗೆ ಹೇಳಿದರು. ಆ ದಿನವೆಲ್ಲಾ ಹೊದರನ್ನು ತೆಗೆಯುವುದು ಬೆಂಕಿ ಹಾಕುವುದು ಇದೇ ಆಗಿತ್ತು. ಅಲ್ಲಿಯೇ ಓದಲು ಕುಳಿತ ನಾವು ಮನಸ್ಸಿನಲ್ಲೇ “ಬಡಿಗೆ ಅಂಕಲ್ ರಾತ್ರಿ ಅಟ್ಟಿಸಿಕೊಂಡು ಬಂದಿದ್ರ ನಿನ್ನೆ ಈಗ ಕ್ಲೀನ್ ಮಾಡಿ…..” ಎನ್ನುತ್ತಾ ಮನಸ್ಸಿನಲ್ಲಿಯೇ ಸಂತೋಷ ಅನುಭವಿಸಿದ್ದೆವು.
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.