Advertisement
ಹಿರಿಯ ಕವಿ ಎಚ್‌. ಎಸ್. ವೆಂಕಟೇಶಮೂರ್ತಿ ನಿಧನ

ಹಿರಿಯ ಕವಿ ಎಚ್‌. ಎಸ್. ವೆಂಕಟೇಶಮೂರ್ತಿ ನಿಧನ

ಕನ್ನಡದ ಹಿರಿಯ ಕವಿ ಎಚ್‌. ಎಸ್. ವೆಂಕಟೇಶಮೂರ್ತಿ ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಸುಮಾರು ಆರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶಾ ರಂಗದಲ್ಲೂ ತಮ್ಮ ಸಾಹಿತ್ಯ ಕಾರ್ಯವನ್ನು ವಿಸ್ತರಿಸಿಕೊಂಡಿದ್ದರು. ಭಾವಗೀತೆಗಳೆಂದರೆ ಎಚ್.ಎಸ್.ವಿ. ಎನ್ನುವಷ್ಟು ಜನಪ್ರಿಯತೆಯನ್ನು ಹೊಂದಿ, ಭಾವಕವಿಯೆಂದೇ ಪ್ರಸಿದ್ಧರಾಗಿದ್ದರು.

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ
ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ….

ಕನ್ನಡದ ಪ್ರಖ್ಯಾತ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಇಂದು ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ತಮ್ಮ ಭಾವಗೀತೆಗಳಿಂದ ಕನ್ನಡದ ಮನೆಮನಗಳಲ್ಲಿ ಹೆಸರಾಗಿದ್ದ ಎಚ್.ಎಸ್‌.ವಿ. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ತಮ್ಮ ಬರಹವನ್ನು ವ್ಯಾಪಿಸಿಕೊಂಡಿದ್ದವರು. ಭಾವಗೀತೆಗಳು, ನಾಟಕಗಳು, ಮಕ್ಕಳ ಸಾಹಿತ್ಯ, ವಿಮರ್ಶೆ, ಅನುವಾದ, ಕಾದಂಬರಿ, ಪ್ರವಾಸ ಕಥನ ಹೀಗೆ ಸಾಹಿತ್ಯದ ಬಹುತೇಕ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದ್ದರು. ಯಾವುದೇ ಸುಗಮ ಸಂಗೀತದ ಕಾರ್ಯಕ್ರಮಗಳು, ಇವರು ರಚಿಸಿದ ಹಾಡಿಲ್ಲದೇ ಹೋದಲ್ಲಿ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಇವರ ಭಾವಗೀತೆಗಳು ಎಷ್ಟು ಸುಪ್ರಸಿದ್ಧವೋ, ಹಾಡುವ ಗಾಯಕರಿಗೂ ಅವು ಅಷ್ಟೇ ಮೆಚ್ಚಿನವು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ 3-06-1944ರಲ್ಲಿ ಜನಿಸಿದ್ದ ಎಚ್.ಎಸ್.ವೆಂಕಟೇಶಮೂರ್ತಿಯವರು, 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡ ನಂತರ ಬೆಂಗಳೂರಿಗೆ ಬಂದವರು ನಂತರ ಅಲ್ಲೇ ನೆಲೆಸಿದರು.

ಎಚ್‌.ಎಸ್.ವಿ. ಜನರ ಮನಸ್ಸಿನ ಹಲವು ಭಾವಗಳನ್ನು ಹಾಡಾಗಿಸಿದ್ದರು. ಇಷ್ಟು ಕಾಲ ಒಟ್ಟಿಗಿದ್ದು, ಲೋಕದ ಕಣ್ಣಿಗೆ ರಾಧೆಯು ಕೂಡ, ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸ್ಸು, ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು, ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ… ಹೀಗೆ ಇನ್ನೂ ಹತ್ತು ಹಲವು ಅವರು ರಚಿಸಿದ್ದ ಹಾಡುಗಳು ಅವು ಧ್ವನಿ ಸುರುಳಿಯಲ್ಲಿ ಬಂದಾಗಿನಿಂದ ಇಂದಿನವರೆಗೂ ಜನರ ಪ್ರೀತಿಯ ಗೀತೆಗಳೇ….

ಪರಿವೃತ್ತ, ಬಾಗಿಲು ಬಡಿವ ಜನಗಳು, ಸಿಂದಬಾದನ ಆತ್ಮಕಥೆ, ಒಣ ಮರದ ಗಿಳಿಗಳು, ಸೌಗಂಧಿಕ, ಇಂದುಮುಖಿ, ಎಲೆಗಳು ನೂರಾರು, ಭೂಮಿಯೂ ಒಂದು ಆಕಾಶ, ಮೊದಲಾದುವು ಅವರ ಪ್ರಮುಖ ಕವನ ಸಂಕಲನಗಳು. ಬಾಣಸವಾಡಿಯ ಬೆಂಕಿ, ಮತ್ತು ಪುಟ್ಟಾರಿಯ ಮತಾಂತರ ಕಥಾ ಸಂಕಲನಗಳು. ತಾಪಿ, ಅಮಾನುಷರು, ಕದಿರನ ಕೋಟೆ ಮತ್ತು ಅಗ್ನಿಮುಖಿ ಅವರ ಜನಪ್ರಿಯ ಕಾದಂಬರಿಗಳು. ನೂರು ಮರ, ನೂರು ಸ್ವರ, ಮೇಘದೂತ, ಮತ್ತು ಆಕಾಶದ ಹಕ್ಕು ವಿಮರ್ಶಾ ಸಂಕಲನಗಳು. ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಗ್ನಿವರ್ಣ ಅವರ ಪ್ರಸಿದ್ಧ ನಾಟಕಗಳು. ಕಾಳಿದಾಸನ ಋತುಸಂಹಾರವನ್ನು ಋತುವಿಲಾಸ ಹೆಸರಲ್ಲಿ ಸೊಗಸಾಗಿ ಅನುವಾದಿಸಿದ್ದಾರೆ. ಹಕ್ಕಿಸಾಲು ಮತ್ತು ಹೂವಿನ ಶಾಲೆ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಮಕ್ಕಳ ಕವಿತೆಗಳ ಸಂಕಲನ.

ಎಚ್‌ಎಸ್‌ವಿ ಅವರು ಕನ್ನಡ ಚಿತ್ರರಂಗಕ್ಕೂ ತಮ್ಮ ಕೊಡುಗೆ ನೀಡಿದ್ದರು. ಅವರು “ಚಿನ್ನಾರಿ ಮುತ್ತ”, “ಕೋಟ್ರೇಶಿ ಕನಸು”, “ಅಮೆರಿಕಾ ಅಮೆರಿಕಾ”, “ಮೈತ್ರಿ”, “ಕಿರಿಕ್ ಪಾರ್ಟಿ” ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ರಚಿಸಿದ್ದರು. “ಮುಕ್ತ”, “ಮಹಾಪರ್ವ” ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಬರೆದಿದ್ದಾರೆ.

ಎಚ್‌ಎಸ್‌ವಿ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ “ಕಥನ ಕವನ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ (2013) ಲಭಿಸಿದೆ. ಅವರು 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ “ಹಸಿರು ರಿಬನ್” ಚಿತ್ರದ ಹಾಡಿಗೆ 66ನೇ ಫಿಲ್ಮ್‌ಫೇರ್ ದಕ್ಷಿಣ ಪ್ರಶಸ್ತಿಯಲ್ಲಿ ಕನ್ನಡ ವಿಭಾಗದ ಅತ್ಯುತ್ತಮ ಗೀತ ರಚನೆ ಪ್ರಶಸ್ತಿ ಲಭಿಸಿದೆ….

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Hgopalakrishna

    ಸ್ನೇಹಿ ಸಜ್ಜನ ಮತ್ತು ಭಾವಜೀವಿ. ಯಾರೂ ಶತ್ರುಗಳೇ ಇಲ್ಲದ ಯಾವುದೇ ಬಣಕ್ಕೂ ಸೇರದ ಜನಪ್ರಿಯ ಕವಿ. ಮುಂದಿನ ಜ್ಞಾನಪೀಠ ಪ್ರಶಸ್ತಿ ಇವರಿಗೇ ಬರಬಹುದು ಎಂದು ಕಾಯುತ್ತಿದ್ದ ಜನತೆಯನ್ನು ಬಿಟ್ಟು ದೂರದ ಪ್ರಪಂಚಕ್ಕೆ ಹಾರಿದ್ದಾರೆ. ಅವರ ಅಗಲಿಕೆ ಒಬ್ಬ ಆತ್ಮೀಯ ಬಂಧು ವೊಬ್ಬರ ಕಣ್ಮರೆಯ ಭಾವ.
    ಹಿರಿಯ ಕವಿಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ