ಸ್ಯಾನೆ ಟೇಮಿದ್ರೆ ಉಂಗುರ ಸೆಂದಾಗಿ ಮಾಡ್ತಿದ್ವಿ. ವೈನಾಗಿ ಜಡೆ ಹೆಣ್ದು ಅದುನ್ನ ಬೆಳ್ಳಿನ್ ಗಾತ್ರುಕ್ಕೆ ಸರ್ಯಾಗಿ ಬಗ್ಗಿಸಿ, ಸುತ್ತಿ‌ ಬಾಲ ಇಲ್ದಂಗೆ ಮಾಡೀವಿ. ಆತ್ರ ಇದ್ರೆ ತಿಥಿ ಮಾಡ್ಸಾ ಐನೋರು ದರ್ಬೇನಾಗೆ (ಒಣಗಿದ್ ಹುಲ್ಲು) ಸುಮ್ಕೆ ಒಂದು ಗಂಟು ಆಕಿ, ಬೆಟ್ಟಷ್ಟು ಉದ್ದೂಕೆ ನಿಟಾರ್ ಅಂತ ನಿಂತಿರಾ ಹುಲ್ಲು ಕೊಟ್ಟು ಉಂಗ್ರ ಆಕ್ಕಳಿ ಅಂಬಲ್ವೇ ಅಂಗೇ ನಾವೂ ಸುಮ್ಕೆ ಒಂದು ಗಂಟು ಹಾಕಿ, ಉದ್ದೂಕೆ ಗರಿ ಅಂಗೇ ಬುಟ್ಟು, ಕೈಯಾಗೆ ಏರ್ಸಿ ಓಡ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮತ್ತಷ್ಟು ಅವರ ಬಾಲ್ಯದ ಆಟಗಳನ್ನು ಕುರಿತ ಬರಹ

ಹುಡುಗು ಮುಂಡೇವು,‌ ತುಡುಗು ಬುದ್ಧಿ ಅಂಬ್ತ ಬಯ್ಯಿಸಿಕಂಡೇ‌ ಯಾವ್ದೂ ಬಿಡ್ದಂಗೆ ಮಾಡ್ತಿದ್ವಿ. ಬಯ್ಗ್ಳು ಕಿವಿ ಮ್ಯಾಗಾಸಿ ಅಂಗೇ ಗಾಳೀನಾಗೆ ಒಂಟೋಯ್ತಿದ್ವು.

ಆಟಾಂದ್ರೆ ಇಂತದ್ದೆ ಅಂಬ್ತಿರಲಿಲ್ಲ.‌ ಯಾವ ಸಾಮಾನೂ ಇಲ್ದೋದ್ರೂ ನಡೀತಿತ್ತು.

ಚುರುಕ್ ಮುಟ್ಟಿಸಾಟ

ಹುಣಿಸೆ ಪಿತ್ತವೋ ಇಲ್ಲಂದ್ರೆ ಆಳ್ವಿಂದ ಬೀಜ್ವೋ ತಕ್ಕಂಡು ಬಿಸಿಲಾಗೆ ಬಂಡೆ ಮ್ಯಾಗಿಟ್ಟು ರಪರಪಾಂತ ಉಜ್ಜಿ ರೆಡಿ ಇಕ್ಕಂತಿದ್ವಿ. ಯಾರಾನಾ ಪ್ರೆಂಡ್ಸು ಹತ್ರ ಬಂದೇಟ್ಗೆ ಕೈಮ್ಯಾಗೋ ಕಾಲ್‌ಮ್ಯಾಗೋ ಟಪುಕ್ಕಂತ ಇಕ್ಕೋದು. ಬಿಸ್ಲಾಗೆ ಕಾದಿರ್ತಿತ್ತಲ್ಲ, ಚೆಂದಾಗಿ ಚುರುಕ್ ಮುಟ್ಟುತ್ತಿತ್ತು. ಅವ್ರು ಕುಯ್ಯೋ ಮರ್ರೋ ಅಂಬ್ತ ಕಿರುಚ್ಕಂಡು ಅಟ್ಟಾಡಿಸ್ಕಂಡು ಬರಾರು. ಸುಸ್ತಾಗಾಗಂಟ ಓಡಿ ಓಡಿ, ಯಾವ್ದಾನ ಮರುದ್ ಬೊಡ್ಡೆಗೆ ಆತ್ಗಂಡು, ಭಸ್ಮಾಸ್ರನಂಗೆ ತಲೆ ಮ್ಯಾಕೆ ಕೈಯಿಟ್ಗಂಡು (ಭಸ್ಮಾಸುರನಂಗೆ) ಟೈಂಪ್ಲೀಸು ಅಂಬೋದು. ಆಟೊತ್ಗೆ ಅವ್ರಿಗೂ ಯಾತುಕ್ಕೆ ಅಟ್ಟಾಡಿಸ್ಕಂಡು ಬತ್ತಿದ್ದೀವಿ ಅಂಬ್ತ ಮರ್ತೋಗೋದು. ಆಟ ಅಂಬ್ತಾನೇ ತಿಳ್ಕಂಡು, ಅವ್ರೂ ದೆಕ್ಲು ಮರುದ್ ಬುಡುಕ್ಕೆ ಕುಂತು ಉಸ್ ಅಂತ ಕಾಲು ಚಾಚೋರು. ಕೈ ಮ್ಯಾಗ್ಳ‌ ಬರೇನೂ ಚುರ್ ಅಂಬಾದು‌ ನಿಂತಿರ್ತ್ತಿತ್ತಲ್ಲ, ಮರ್ತ್ಕಣಾರು.

ಪೇಪರ್ ಬಟ್ಟಲು

ಮನೆ ಆಟ ಆಡ್ತಿದ್ವಿ. ನಮ್ತಾವ ಮಣ್ಣಿನ ಸಣ್ಣ ಕುಡಿಕೆಗಳು ಇರ್ತಿದ್ವು. ಅದ್ರಾಗೆ ಅನ್ನ, ಸಾರು, ಮುದ್ದೆ ಅಂತ ಯೋಳ್ಕಂಡು ಆಡ್ತಿದ್ವಿ. ಮಣ್ಣಿನ ಸಣ್ಣ ಒಲೇನೂ ಇರ್ತಿತ್ತು. ಇವುಕ್ಕೆ ಮುಚ್ಚಳ ಅಂತ ಪುಟಾಣಿ ತಟ್ಟೆ ಇರ್ತಿದ್ವು. ಎಲ್ಲಾನೂ ನಮ್ಮ ಕೂಟೇನೇ(ಜೊತೇನೇ) ಇರ್ಬೇಕೂಂತಿಲ್ಲ. ಎಲ್ಲಾರೂ ಕೂಡಿ ಆಡಾವಾಗ ನಮ್ ತಾವ ಏನೈತೆ ಅದ್ನ ತಕಾ ವಾಗಾದು. ಓಸೂ ಜನುದ್ ಸಾಮಾನ್ ಸೇರ್ತು ಅಂದ್ರೆಗಾನಿ ಬೇಜಾನ್ ಆಗ್ತಿದ್ವು. ಅಮ್ಯಾಕೆ ಅದ್ರಾಗೆ ಕಳ್ಳೆ ಪಪ್ಪು, ಕಳ್ಳೆ ಬೀಜ, ಉಪ್ಪು ಮೆಣಸಿನಕಾಯಿ, ಹುಣಿಸೆಹಣ್ಣು, ಜೀರಿಗೆ ಅದೂ ಇದೂ ಮನ್ಯಾಗಿಂದ ಅಮ್ಮುನ್ನ ಕಾಡ್ಸಿ ಎತ್ತಾಕ್ಕಂಡು ಬತ್ತಿದ್ವಿ. ಮನೆ ಅಂದ್ ಮ್ಯಾಗೆ ಊಟ ಇರ್ಲಿಕ್ಕೇ ಬೇಕು ಅಂಬೋದು ನಮ್ಮ ನೇಮ.

ಒನ್ನೊಂದು ಕಿತ ಹಬ್ಬ ಗಿಬ್ಬ ಹತ್ರ ಬಂದಾಗ, ಅರ್ಸಣ ಕುಂಕುಮಕ್ಕೆ ಕರ್ಯಾ ಆಟವೂ ಇದ್ರಾಗೆ ಸೇರ್ಕಂತಿತ್ತು‌. ಅದುಕ್ಕೆ ಬಟ್ಟಲು ಬೇಕಲ್ಲ. ನಮ್ತಾವ ಎಲ್ಲಿದ್ದಾತು. ಪೇಪರ್ ತಕಂಡು ಅದ್ರಾಗೆ ಬಟ್ಟಲು ಮಾಡ್ಕಂತಿದ್ವಿ. ನಮ್ಮ‌ ಚಿಕ್ಕರಾಮಪ್ಪ ಬಲು ನೀಟಾಗಿ ಮಾಡ್ಕೊಡ್ತಿದ್ದ. ಅಮ್ಮಣ್ಣಿ ಕಾಜಗ ತಕಂಬಾ ಅಂಬೋನು. ತಕಂಡೋದ್ರೆ ಏಸು ಚೆಂದಾಗಿ ಬಟ್ಟಲು, ದೋಣಿ, ಬೀಸಣ್ಗೆ ಎಲ್ಲನೂವೇ ಮಾಡ್ತಿದ್ದ ಅಂಬ್ತೀನಿ. ‌ಒಂದೇ ಪೇಪರ್ನಾಗೆ ಆಕಡೀಕ್ಕೆ ಈಕಡೀಕ್ಕೆ ಎಲ್ಡು ಬಟ್ಟಲು. ಮಧ್ಯದಾಗೆ ಚಿಕ್ಕದೊಂದು ಬಟ್ಟಲು. ಒನ್ನೊಂದು ಕಿತ ಎಲ್ಲೋ ಬೀದ್ಯಾಗಿದ್ದಾಗ ಆಡ್ಬೇಕೂಂತ ಮಾಡ್ಕಂತೀವಪ್ಪ. ಆವಾಗ ನಮ್ ತಾವ ಪ್ಯಾಪ್ರೂ ಗತಿ ಇರಲ್ಲ. ಆಗೇನ್ ಮಾಡೀವು, ನಮ್ ಕೈಯೇ ಬಟ್ಲು‌. ಎಲ್ಡೂ ಅಂಗೈ ಒಂದ್ರಾಗೊಂದು ತೂರ್ಸಿ, ಬಟ್ಟಲಾ ಮಾಡ್ಕಂಡು, ಅದ್ರಾಗೇ ಒಬ್ರು ಮಣ್ಣು ಹೊಯ್ದು, ಅರ್ಸಣ ಕುಂಕ್ಮ ಕೊಡೀವು. ಯಾವ್ದೂ ಬುಡ್ದಂಗೇಯಾ ಏನೂ ಇರ್ದೀರೂ ನಮ್‌ ಮನ್ಸಾಗೇ ಎಲ್ಲಾ ಅನ್ಕಂತಿದ್ವಿ. ಇದೂ ಒಂತರುಕ್ಕೆ ಕಣ್ಕಟ್ಟು(ಮೋಡೀ ಆಟ ಅಂಬ್ತ ಹಳ್ಯಾಗೆ ಆಡ್ಸಾರು. ಇಲ್ದಿರಾ ಸಾಮಾನ್ ಇರಾ ಅಂಗೆ ಕಣ್ಗೆ ಮೋಸಾ ಮಾಡಾರು)

ಅರ್ಸಣ ಕುಂಕುಮ

ಬಟ್ಟಲಾಗೆ ತುಂಬ್ಸಾಕೆ ಏನು ಮಾಡ್ತಿದ್ವಿ ಗೊತ್ತಾ? ಮಣ್ಣು ತಕಾ ಬಂದು ತುಂಬ್ತಿದ್ವಿ. ಅದೇ ನಮ್ಗೆ ಅರ್ಸಣ ಕುಂಕುಮ. ಸಣ್ಣ ಕಲ್ಲು ಆರ್ಸಗಂಡು ಬಂದ್ರೆ ಮಧ್ಯದಾಗಿರಾ ಸಣ್ಣ ಬಟ್ಟಲಾಗೆ ಅಕ್ಷತೆ ಅಂತ ಹಾಕೀವಿ. ಈ ತರುಕ್ಕೆ ನಮ್ಗೆ ಐಡೀರಿಯಾ ಯೆಂಗ್ ಬತ್ತೂಂತ ಗೊತ್ತಾ? ನಮ್ಮಜ್ಜಿ ನಾಗರಪಂಚ್ಮೀನಾಗೆ‌ ಯೋಳೋ ಕತ್ಯಾಗೆ ಏಳು ಜನ ಅಣ್ಣಂದ್ರ ಮುದ್ದಿನ್ ತಂಗೀಗೆ ಸಾಕ್ಸಾತ್ ಸಿವಪ್ಪನೇ ಪ್ರತ್ಯಕ್ಸ ಆಗ್ ಬುಟ್ಟು, ಅಯ್ಯಾ ಕೂಸೆ ಪೂಜೆ ಸಾಮಾನ್ ಇಲ್ಲಾಂತ ಯಾಕ್ ಗೋಳ್ಗರೀತೀಯಾ? ನಿನ್ ಮುಂದ್ಲ ಕಲ್ಲು ಮಣ್ಣು ಇಲ್ವಾ, ಅವೇಯಾ ನಿನ್ ಪೂಜೀ ಸಾಮಾನು ‌ಅಂಬ್ತ ತಿಳ್ಕಳಕೇಳಿದ್‌ ಮ್ಯಾಗೇ ನಮ್ದ್ಯಾವ ತೊಪ್ಪಲು ಕಣೇಳಿ? ಅದ್ಕೇಯಾ ನಾವೂ ಸತ ಅವುನ್ನೇ ತಂದು ಪೂಜೆ ಮಾಡ್ತಿದ್ವಿ.‌ ಅಕ್ಕಪಕ್ಕುದ್ ಮನ್ಯೋರ್ನ(ಇಬ್ಬರು ಮೂರು ಜನ ಬ್ಯಾರೆ ಬ್ಯಾರೆ ಮನೇ ಅಮ್ತ ಮಾಡ್ಕಂಡು) ಕರ್ದು ಅರ್ಸಣ ಕುಂಕುಮ ಕೊಡೋದು. ಪಟುಗ್ದ (ಸ್ಪಟಿಕ)ಹುವ್ವಂತೂ ಮಸ್ತಾಗಿ ಸಿಗ್ತಿತ್ತಲ್ಲ. ದ್ಯಾವ್ರಿಗೂ ಏರ್ಸಿ, ಬಂದೋರ್ಗೆ ಮುಡ್ಯಾಕೂ ಕೊಟ್ಟು, ನಾವೂ ಮುಡ್ಕಂತಿದ್ವಿ. ಆಮ್ಯಾಕೆ ಚರ್ಪು ಕೊಡ್ಬೇಕಲ್ಲ, ಅದೇ ಕಳ್ಳೆಪಪ್ಪು, ಕಳ್ಳೆ ಬೀಜ ಇಲ್ಲಾಂದ್ರೆ ಹುಣಿಸೆಹಣ್ಣು ಕುಟ್ಟಿ‌ ಮಡಗಿ ಅದ್ನೇಯಾ ಕೋಸಂಬ್ರಿ ಅಂತ್ಲೋ, ಕಾಳಿನ್ ಉಸುಳಿ ಅಂತ್ಲೋ, ಬಾಳೆ ಅಣ್ಣು, ಕಳ್ಳೆಪಪ್ಪಿನ ಪುಡಿ ಅಂತ್ಲೋ ನಮ್ಮನ್ಯಾಗೆ ಇದು ಅಂಬ್ತ ಒಬ್ಬೊಬ್ರು ಒನ್ನೊಂದು ಯೋಳ್ಕಂಡು ಕೊಡ್ತಿದ್ವಿ.

ಅಕಸ್ಮಾತ್ತಾಗಿ ನಮ್ಮ ಅಕ್ಕಂದ್ರು ಏನಾರಾ ಆಡಾಕೆ ಬಂದ್ರೆ, ಅವ್ರು ಮನೆ ನೋಡ್ಕಣಾರು. ನಮ್ಮುನ್ನ ಇಸ್ಕೂಲ್ಗೆ ಕಳ್ಸಾರು. ಮನೆ ಕಸ ಉಡುಗಿ(ಗುಡಿಸಿ) ನೀವು ಇಸ್ಕೂಲ್ಗೆ ಹೋಗಿ. ನಾವು ಅಡ್ಗೆ ಮಾಡ್ತೀವಿ ಅಂಬ್ತ, ನಮ್ತಾವಲೇ ಎಲ್ಲಾ ಸಾಮಾನು ತರ್ಸಾರು. ಅವುರ್ ಕ್ಯೋಳಿದ್ರೆ ಮನ್ಯಾಗೆ ಬಯ್ಗುಳ ಬೀಳ್ತಿತ್ತಿಲ್ಲ. ಈಸು ದೊಡ್ಡೊರಾಗಿ ಅದೆಂತದು ನಾಚ್ಗೆ ಆಗಾಕಿಲ್ವೇ ಅಂಬ್ತ ಪೂಜೆ ಮಾಡ್ತಿದ್ರಲ್ಲ. ನಾವು ತಂದ್ಕೊಟ್ಟು, ಕಸ ಉಡುಗಿ, ಮನೆ ಸಾರ್ಸಿ, ನಿರುಮ್ಮಳವಾಗಿ ಇಸ್ಕೂಲ್ಗೆ ಹೋಗ್ ಬರಾಣಿ. ಇವು ಅಡ್ಗೆ ಮಾಡಿರ್ತವೆ, ತಿನ್ ಕಂಬಾಣಿ ಅಂಬ್ತ, ಬಂದು ನೋಡಿದ್ರೆಗೀನ, ಇವು ಹುಣಿಸೆಹಣ್ಣು ಕುಟ್ಟಿ ಚೆಂದಾಗಿ ಬಳ್ಕಂಡು ತಿಂದು, ಕುಡಿಕೆ ತಳ್ದಾಗೆ ಎಲ್ಲೋ ವಸಿ ನಮ್ಗೆ ಶಾಸ್ತ್ರುಕ್ಕೇಂತ ಮಡ್ಗಿ‌ ಎದ್ದೋಡೋಗಿರ್ತಿದ್ವು.

ಶಾಪ ಹಾಕ್ಕಂಡು ನಾವೂ ಮನೀಗೋಗಿ ಅಮ್ಮುಂಗೆ ಚಾಡಿ ಯೋಳಿ, ಬಯ್ಸಾಗಂಟ ಜೀವ ತಣ್ಣಗಾಗ್ತಿರ್ಲಿಲ್ಲ. ಇನ್ನೊಂದು ಕಿತ ನಮ್ ಜೊತೆ ಆಟುಕ್ಕೆ ಬಂದ್ರೆ ಅಂಬ್ತ ಯೋಳೀರೂ ಸುತ ಮಾರ್ನೇ ದಿನ್ವೇ ಮರ್ತು ಸೇರಿಸ್ಕಂತಿದ್ವಿ. ಇಲ್ಲದಿದ್ರೆ ನಮ್ಗೆ ಮರಾಳಿ(ಬೈಂಡಿಂಗ್) ಹಾಕಾದು, ಬುಕ್ಕು ಹೊಲ್ದು ಕೊಡಾದು, ಯಾವಾಗಾನ ನಾಕು ಕಾಲಿಂದು, ಎಂಟು ಕಾಲಿಂದು ಜಡೆ ಹೆಣ್ಯಾದು, ತಲೆ ನೆವೆ ಆದ್ರೆ ಹೇನು, ಸೀರು ತೆಗೆಯಾದು ಎಲ್ಲಾ ಮಾಡಾಕಿಲ್ಲ ಅಂಬ್ತ ಎದುರ್ಸಿ ಮಡಗ್ತಿದ್ರು. ಯಾಸೆಟ್ಗೆ ಆಳಾಗೋಗ್ಲಿ ಅಂತಾವ ನಾವೂ ಸುಮ್ಕಾಗ್ತಿದ್ವಿ. ಇಲ್ಲ್ದಿದ್ರೆಗಾನಿ ಯೋನೂ? ಬ್ಯಾರೆ ದಾರೀನೂ ಇರ್ಲಿಲ್ಲಾ ಬುಡಿ.

ಪ್ಲಾಸ್ಟಿಕ್ ಕವರ್ರು

ಆಗಿನ್‌ ಕಾಲ್ದಾಗೆ ಪ್ಲಾಸ್ಟಿಕ್ ಕವರ್ರು ಸ್ಯಾನೆ ಅಪ್ರೂಪ. ಒಂದು ಪ್ಲಾಸ್ಟಿಕ್ ಕವರ್ ಸಿಕ್ಕೀರೆ ಸಾಕತ್ಲಾಗೆ, ಅದ್ರಾಗೂ ಆಟಕ್ಕೆ ಜೈ ಅಂಬೋದೇ. ಕವರ್ನಾಗೆ ಬಲೂನಿನ್ ತರ ಗಾಳಿ ಉರುಬಿ ದೊಡ್ಡದು ಮಾಡಾದು. ಟಪ್ ಅಂಬ್ತ ಗುದ್ದಿ ಒಡ್ಯಾದು. ಟೇಮಿಲ್ದೇ ಇದ್ರೆ ಒಂದೇ ಕಿತ ಹೊಡ್ದಿ, ಮುಗ್ಸಾದು. ಪುರುಸತ್ತಾಗಿದ್ರೆ ಸಣ್ಣ ಸಣ್ಣವು ಹತ್ತೋ ಇಪ್ಪತ್ತೋ ಸಣ್ಣ ಬೆಟ್ಟಿನ ಗಾತ್ರುಕ್ಕೆ ಮಾಡಿ ಟಪ್‌ ಅನ್ಸಿ ಚಪ್ಪಾಳೆ ತಟ್ಟಾದು.

ಸ್ಯಾಮಂತಿ ಗುಡ್ಡೆಗ್ಳು

ಮಳ್ಳಾಗೆ ಆಡ್ತಿದ್ದಿದ್ದು. ಇಬ್ಬರು ಕೂಡ್ಕಂಡು ಆಡ್ತಿದ್ವಿ. ಒಬ್ಬ್ರು ಒಂದೆಲ್ಡು ನಿಮಿಸ ಬಚ್ಚಿಟ್ಕೋಬೇಕು. ಅಷ್ಟರಾಗೆ ಇನ್ನೊಬ್ರು ಮಳ್ಳಾಗೆ(ಮರಳಿನಲ್ಲಿ) ಅಲ್ಲಲ್ಲಿ ಸಣ್ಣವು ದೊಡ್ಡವು ಗುಡ್ಡೆ ಮಾಡಿ ಓಡಿ ಬರ್ಬೇಕು. ಅವ್ರು ಬರಾ ಅಷ್ಟರಾಗೆ ಜಲ್ಜಲ್ದಿ ಗುಡ್ಡೆ ಮಾಡ್ಬೇಕು. ಕಂಡುಹಿಡಿಯಾಕಾಗ್ದಂಗೆ ಮರೇಲೆಲ್ಲ ಗುಡ್ಡೇ ಮಾಡ್ಬೇಕು. ಪುಟಾಣೀವು ಬ್ಯಾಗ್ನೆ ಕಾಣಾಕಿಲ್ಲ. ಒನ್ನೊಂದು ಕಿತ ಮೂವತ್ತು ನಲವತ್ತು ಮಾಡಿ ಓಡೋಗೀವಿ. ಓಸೂ ಗುಡ್ಡೆಯಾ ಕಂಡುಹಿಡೀನಿಲ್ಲಾಂದ್ರೆ ನಾವು ಗೆದ್ದಂಗೆ.

ಸರಿಗಮಪದನಿಸ

ದಾರ್ಯಾಗೆ ಬರಾವಾಗ ಹೊತ್ತೋಗ್ಬೇಕಲ್ಲ. ಜತ್ಯಾಗಿರೋರ್ತಾವ ಈ ಆಟ ಆಡ್ಕಂಡು ಬತ್ತಿದ್ವಿ. ಬೇಲೀನಾಗೆ ಒಂದು ಹುವ್ವ ಬಿಡ್ತಿತ್ತು. ಅದ್ರ ದಂಟು ಹಸುರ್ ಬಣ್ಣುದ್ದು. ಉದ್ದೂಕೆ, ಸಣ್ಣುಕೆ ಪರ್ಕೆ ಕಡ್ಡಿ ತರುಕ್ಕಿರ್ತಿತ್ತು. ಅದ್ರ ತುದೀನಾಗೆ ಈಸೇ ಈಸು ಗಾತ್ರುದ್ದು, ಒಳ್ಳೆ ಶಲ್ಟಿನ ಗುಂಡಿ ತರುಕ್ಕೆ ಹಳ್ದೀ ಬಣ್ಣುದ ಹುವ್ವ.‌ ಅದ್ರ ಮದ್ಯದಾಗೆ ವಸಿ ಬಿಳೀ ಬಣ್ಣ. ಅದ್ರ ದಂಟು ಬಲು ನಾಜೂಕು.‌ ತೇಟು ಏಳು ಮಲ್ಲಿಗೆ ತೂಕುದ್ ರಾಜಕುಮಾರಿ ಅಂಗೇಯಾ. ಉಗ್ರಾಗೆ ವಸಿ ಮೆಲ್ಲಗೆ ಮುಟ್ಟೀರೂ ಸಾಕು ಪಚಕ್ಕಂತ ಉದ್ರಿ ಬೀಳ್ತಿತ್ತು. ನಾವು ಒಂದು ದಂಟು ಇಟ್ಕಂಡು ಪಕ್ಕದಾಗಿರೋರ್ಗೆ ಸರಿಗಮಪದನಿಸ ನಿನ್ ಜುಟ್ಟೆಗರಿಸ ಅಂತ ರಾಗ್ವಾಗಿ ಹಾಡ್ಕಂತಾ ದಂಟು ಮುಟ್ಟೀರೇ ಸಾಕು ಹುವ್ವ ಆಟೆತ್ರ ಎಗ್ರಿ ಬೀಳಾದು. ಅವ್ರು ಇನ್ನೊಂದು ದಂಟು ಕಿತ್ತು ಮಡಿಕ್ಕಂಡಿರೋರು. ನಮ್ಗೆ ತೋರ್ಸಿ, ನಿಮ್ ಅಜ್ಜಿ ತಲೆ ಡುಂ ಅಂತ್ಲೋ, ತಾತುನ್ ತಲೆ ಕಚಕ್ ಅಂತ್ಲೋ ಯೋಳ್ಕಂಡು ಹುವ್ವ ಮ್ಯಾಕೆ ಎಗುರ್ಸೋರು. ನಮ್ ಪಾಲ್ಗೆ ಇದೂ ಮಜ್ವಾಗಿತ್ತು. ಸ್ಯಾನೆ ಕೋಪ ಬಂದ್ರೆ ನಿನ್ ತಲೆ ಪಚಕ್ ಅಂಬ್ತಾವಾ ಇಲ್ಲಾಂದ್ರೆ ನಿನ್ ಜುಟ್ಟು ಕಚಕ್ ಅಂಬ್ತ ಕಣ್ಣು‌ ಮೂಗು ಬಾಯಿ ವಕ್ರವಾಗಿ ತಿರುಗಿಸ್ಕಂಡು ಎಕ್ಕರಿಸೋರು (ಅಣಕಿಸು).

ಚಿಲ್ಲಿ ದಾಂಡು

ಚಿಣ್ಣಿ ನಮ್ಮೂರ್ನಾಗೆ ಚಿಲ್ಲಿ‌ ಆಗಿತ್ತು. ಎಲ್ಡು ಕೋಲಿನ್ ಆಟ. ಒಂದು ಕೋಲು ಬದ್ನೇಕಾಯಿನಷ್ಟು ಉದ್ದುಕಿದ್ರೆ ಇನ್ನೊಂದು ಲಟ್ಟಣಿಗೇಗಿಂತ ರವಷ್ಟು ಜಾಸ್ತಿ ಉದ್ದುಕಿರ್ತಿತ್ತು. ಲಟ್ಟಣಿಗೇ ಅಂಗೇ ನೈಸ್ ಮಾಡಿ ಇಟ್ಕಂತಿದ್ವಿ. ಸಣ್ಣು ಕೋಲಿಗೆ ಚಿಲ್ಲಿ, ದೊಡ್ಡುದುಕ್ಕೆ ದಾಂಡು ಅಂಬ್ತಿದ್ವಿ. ಹುಡುಗ್ರು ಸ್ಯಾನೆ ಆಡ್ತಿದ್ರು. ನಾವೂ ಅಪ್ರೂಪುಕ್ಕೆ ಆಡೀವು.

ಗೋಲೀ ಸಾಲ

ಗೋಲಿ ಆಡಾಕೆ ಇಷ್ಟ. ಮೂರು ಗುಂಡಿ ತೋಡಿ ದೂರ್ದಿಂದ(ಗೆರೆ ಮ್ಯಾಗ್ಲಿಂದ) ಗೋಲಿ ಇಟ್ಕಂಡು ಎಬ್ಬೆಟ್ಟಿನಾಗೆ ಹೊಡ್ಯಾದು.‌ ಅದು ಯಾವ್ದಾನಾ ಗುಂಡೀ ಒಳೀಕ್ ಬಿತ್ತಾ, ಗೋಲಿ ನಮ್ದೇ. ನಾವ್ ಗೋಲಿ ಆಡೀರೆ ಹಿರೇರು ಹುಡುಗೀರಾಗಿ ನಾಚ್ಗೇ ಆಗಲ್ವೇ ಅಂಬೋರು. ಅದ್ಕೇ ಮನೆಗ್ಳಾಗೆ ಕುಂತು ಗೋಲಿ ಆಡೋವು. ದೊಡ್ಡ ಗೋಲಿ ತಕಂಡು ಸಣ್ಣ ಗೋಲೀಗೆ ಎಬ್ಬೆಟ್ಟಿನಾಗೆ ಹೊಡುದ್ರೆ ಅದು ಮುಂದಿರಾ ಗೋಲಿಗೆ ತಗುಲಿ ಆ ಗೋಲಿ ಗೆರೆ ದಾಟ್ಕಂಡು ಹೋದ್ರೆ ನಮ್ದು ಅಂತ ಲೆಕ್ಕ. ಗೋಲೀ ಕಾಲಿ ಆದ್ರೆ ಐದು ಹತ್ತು ಗೋಲೀ ಸಾಲಾನೂ ತಕಂತಿದ್ವಿ. ಸಾಲ ತೀರ್ಸಾಗಂಟ ಆಟ್ವೂ ಸಾಗ್ತಿತ್ತು. ಕೊನೀಗೆ ಅವ್ರವ್ರ ಗೋಲಿ ಸಿಕ್ಕ ಮ್ಯಾಗೇನೆ ಆಟ ಕೊನಿ ಮುಟ್ತಿತ್ತು.

ಹೆಸ್ರು ಬರ್ಯಾ ಆಟ

ಸ್ಯಾನೆ ದಪ ಇಸ್ಕೂಲ್ನಾಗೆ ಆಡ್ತಿದ್ವಿ. ಒಂದು ಹತ್ತು ಜನ ಸೇರ್ಕಂಡು ಆಡೀವು. ಒಂದು ಅಕ್ಸರ ಕೊಟ್ರೆ ಅಂದ್ರೆ ಕ ಅನ್‌ಕಳಿ. ಕ ದಿಂದ ಸುರುವಾಗೋ ಮನುಸ್ಯರ ಹೆಸ್ರು, ಪ್ರಾಣಿ ಹೆಸ್ರು, ತಿಂಡಿ ಹೆಸ್ರು, ಅಡ್ಗೇ ಮನೆ ಸಾಮಾನಿನ್ ಹೆಸ್ರು, ಸಿನ್ಮಾ ಹಾಡಿನ್ ಸಾಲು ಇಂಗೇ ಐದೋ ಆರೋ ರಕ ಬರೀಬೇಕೂಂತ ನೇಮ ಮಾಡ್ಕಂತಿದ್ವಿ. ಅದ್ರಾಗೂ ಯಾರೂ ಬರೀದಿದ್ದುದ್ದ ನಾವು ಬರ್ದಿವಿ ಅಂದ್ರೆ ರವಷ್ಟು ಮಾಕ್ಸು ಜಾಸ್ತಿ. ಕ ಅಂದ್ರೆ ಕಮಲಿ, ಕರಡಿ, ಕರ್ಬೇವು, ಕಜ್ಜಾಯ ಬರ್ದು ಕ ದಿಂದ ಸುರುವಾಗೋ ಹಾಡು ಬರೀಬೇಕು. ಮಳೆ ಸುರ್ಯಾವಾಗ, ಪೀಟಿ ಪಿರ್ಡಲ್ಲಿ ಆಡಾಕೆ ಬಿಡ್ತಿರ್ಲಿಲ್ಲ. ಆಗ ಸಾಲಿ ಒಳ್ಗೇ ಕುಂತು ಇಂತಾ ಆಟ ಆಡೀವಿ. ಮನ್ಯಾಗೂ ನಂಟರು ಪಂಟರು ಬಂದಾಗ, ಸ್ಯಾನೆ ಮಕ್ಳು ಇರ್ತಿದ್ರಲ್ಲ, ಆಗ ಆಡೀವು. ದೊಡ್ಡೋರ ತಾವ ಹೋಗಿ ಯಾರೂ ಬರೀದಿದ್ದಿದ್ದ ಯೋಳಿ ಅಂಬ್ತ ಪ್ರಾಣ ತೆಗೀತಿದ್ವಿ. ಪ್ಯಾಟೇಗ್ಳಿಂದ ಬಂದಿರಾ ನಂಟರಾದ್ರೆ ಅದೆಂತೆಂತದೋ ತಿಂಡಿ ಹೆಸ್ರು, ಮನುಸ್ಯರ ಹೆಸ್ರು, ವಸಾ ಸಿನ್ಮಾ ಹಾಡು ಯೋಳಿ ಕೊಡಾರು. ನಮ್ಗೇ ಬೋ ಕುಸಿ.

ಹುವ್ವ ಏರ್ಸೋದು

ಇಸ್ಕೂಲ್ ತಾವ ದೊಡ್ಡ ಮರ ಇತ್ತು. ಅದ್ರಾಗೆ ಬಿಳೇ ಬಣ್ಣುದ್ ಹುವ್ವ ಬುಡ್ತಿತ್ತು. ನೋಡಾಕೆ ತೇಟು ಸುಗಂಧರಾಜ ಇದ್ದಂಗೇಯ. ಆದ್ರೆ ಇನ್ನಾ ಉದ್ದುಕಿರ್ತಿತ್ತು. ಸುಗಂಧರಾಜ ದಳ ಮುದುರ್ಕಂಡು, ಗಟ್ಟಿಯಾಗಿ, ಭಾರ್ವಾಗಿ ಇರ್ತೈತೆ. ಇದ್ರಾಗೆ ನಾಕು ದಳ ಇರ್ತೈತೆ.‌ ವಸಿ ಸೀಳ್ಕಂಡಂಗೆ ಇರಾದ್ರಿಂದ ದೂರ್ದಿಂದ ಎಂಟು ದಳವೇನೋ ಅಂಬಂಗೆ ಕಾಣುಸ್ತೈತೆ. ಹುವ್ವ ಅಳ್ಳಿಕಂಡಿರ್ತೈತೆ (ಅರಳು). ಮೃದುವಾಗಿರ್ತೈತೆ. ಹಗೂರುಕ್ಕೆ ಇರ್ತೈತೆ. ಓಸು ದೂರದಗಂಟ ಮಲ್ಲಿಗೇ ಹುವ್ವಿನಂಗೇ ಗಂ ಗಂ ಅಂಬ್ತಿರ್ತೈತೆ. ಆದ್ರೆ ಎತ್ತುರ್ದ ಮರದ ಮ್ಯಾಗೆ ಅಳ್ಳಿರ್ತೈತೆ. ಅದ್ಕೇಯಾ ಇದುನ್ನ ಆಕಾಶ ಮಲ್ಲಿಗೆ ಅಂಬ್ತಿದ್ವಿ. ಇದು ನೆಲುದ್ ಮ್ಯಾಗೆಲ್ಲಾ ಬಿದ್ದು ಮರದಡೇಗೆಲ್ಲ ಹೂವಿನ್‌ ಹಾಸ್ಗೇ ಆಗಿರ್ತಿತ್ತು. ಪೈಪೋಟಿ ಮ್ಯಾಗೆ ಅದುನ್ನ ಆರುಸ್ಕಂತಿದ್ವಿ. ಆರ್ಸಾವಾಗ ಲಂಗವೇ ಚೀಲ ನಮ್ಗೆ. ಆರ್ಸಿ ಆರ್ಸಿ ಅದ್ರಾಗೇ ಹಾಕ್ಕಂತಿದ್ವಿ. ಲಂಗ ಮುದುರ್ಕಂಡು ಎಲ್ರೂ ಒಂದು ತಾವ ಕುಂತು ಲಂಗ ಉದುರ್ಸಿದ್ರೆ ಮುಂದೆ ರಾಶಿ ಹುವ್ವ ಗುಡ್ಡೆ ಬೀಳೋದು. ಯಾರ ಗುಡ್ಡೆ ದೊಡ್ಡದು ಅಂಬೋದು ಮೊದುಲ್ನೆ ‌ಪೈಪೋಟಿ. ಅದಾದ್ ಮ್ಯಾಗೆ ಹುವ್ವ ಏರ್ಸೋ ಪೈಪೋಟಿ. ಇದುಕ್ಕೆ ದಾರ ಗೀರ ಬ್ಯಾಡ್ವೇ ಬ್ಯಾಡಾಗಿತ್ತು. ಹುವ್ವಿನ ಹಿಂದ್ಲಾಗಡೆ ತುದೀಗಿರಾ ಪುಟಾಣಿ ಹಸ್ರು ಗಂಟು ಕಿತ್ತರೆ, ಒಂದ್ರ ತುದೀಗೆ ಇನ್ನೊಂದು ತುದೀ ಸೇರಿಸ್ಕಂತ ವಾಗಾದು. ಅಂಗೇ ಉದ್ದೂಕೆ ಮಾಡ್ತಾ ಹೋಗಾದು. ಯಾರ್ ಹಾರ ದೊಡ್ಡದು ಅಂಬೋದು ಇನ್ನೊಂದು ಪೈಪೋಟಿ. ಅದ್ರಾಗೂ ಜಗ್ಳ. ಒಂದು ಹುವ್ವ ಉದ್ದ ಜಾಸ್ತಿ ಇದ್ರೆ ಇನ್ನೊಂದು ಹುವ್ವ ಗಿಡ್ಡ ಇರ್ತೈತೆ. ಇದ್ನ ಕೊನೆಗಾಣ್ಸಾಕೆ ಹುವ್ವದ ಲೆಕ್ಕ ತಕಂತಿದ್ವಿ. ಅದಾದ್ ಮ್ಯಾಗೆ ಆಟ ಸುರು ಆಗ್ತಿತ್ತು. ಮನೆ ಆಟಾ, ಮದ್ವೆ ಆಟಾ ಅದೂ ಇದೂ ಅಂತ.

ಮನೆ ಆಟ

ಮನೆ ಆಟ್ದಾಗೆ ಕೆಲ್ಸ ಹಂಚ್ಕಂತಿದ್ವು. ಎಂಟತ್ತು ಜನ ಸೇರಿರ್ತಿದ್ವಿ. ಒಬ್ರು ಮನೆ ಉಡುಗೋದು. ಅಲ್ಲೇ ಮುತ್ತುಗ್ದ ಎಲ್ಯೋ ಗಣೇಸ್ನ ಹುವ್ವಿನ ಎಲೇನೋ ಅಗ್ಲ ಇರಾ ಯಾವ್ದಾನಾ ಒಂದು ಕತ್ರಿಸಿ ತಂದು ಕಸ್ಬರಿಗೆ(ಕಸಬರಿಗೆ) ಮಾಡ್ಕಂಡು ಕಸ ಅನ್ನಾದು(ಗುಡಿಸಾದು). ಇನ್ನೊಬ್ರು ಅಡ್ಗೆ ಮಾಡಾದು. ಇಬ್ರು ಹತ್ತುರ್ದಾಗೇ ಇದ್ದ ನಾಗರ ಕಟ್ಟೆಗೆ ವಾಗಾದು. ಒಬ್ಳು ನಾಗ್ರ ಕಲ್ಲ ಎಲೇನಾಗೆ ಒರ್ಸಿ ಕಿಲೀನ್ ಮಾಡುದ್ರೆ, ಇನ್ನೊಬ್ಳು ಆಕಾಶ ಮಲ್ಗೆ ಹುವ್ವದ ಹಾರಾ ಹಾಕಿ ಅಲಂಕಾರ ಮಾಡಾಳು.‌ ಒಬ್ಳು ಹಿಟ್ಟು ಮಿಲ್ ಮಾಡ್ಸಕಂಡು ಬರಾಕೇಂತ ಹೋದ್ರೆ, ಒಬ್ಳು ಪಕ್ಕದಾಗೇ ಇದ್ದ ಮರ್ದಾಗೆ ಹುಣಿಸೆ ಕಾಯಿ ಕೀಳೋಳು. ಒಬ್ಳು ಅದ್ನ ಕುಟ್ಟೋಳು. ಇನ್ನೊಬ್ಬಳು ಅದ್ನ ಬಳ್ದು ಎಲೇ‌ ಮ್ಯಾಗೆ ಹಾಕಾಳು. ಆಮ್ಯಾಲೆ ಎಲ್ಲಾ ಸೇರ್ಕಂಡು ತಿಂದು, ಎಲೆ ನಾಕಿ(ನೆಕ್ಕಿ) ಹೊಂಡೋವು.

ಇನ್ನಾ ಟೇಮಿದ್ರೆ ಇಬ್ಬರನ್ನ‌ ಗಂಡು ಹೆಣ್ಣು ಮಾಡಿ ಕುಂಡ್ರುಸೀವಿ. ಒಬ್ರು ಐನೋರು. ಒ‌ಬ್ರು ಅಡ್ಗೆ ಬಟ್ರು. ಗಂಡು ಹೆಣ್ಗೆ ಅದೇ ಆಕಾಶ ಮಲ್ಲಿಗೇ ಹಾರ ಹಾಕೀವಿ.‌ ಮದಿವೀಗೆ ಬಂದ ಮುತ್ತೈದೇರ್ಗೂ ಅದ್ನೇ ಹಂಚಾದು. ಬಂದೋರು ಮುಯ್ಯಿ ಓದಿಸ್ಬೇಡ್ವೇ. ಸಣ್ಣ ಕಲ್ಲು, ಪೇಪರ್ ತುಂಡು ಓದಿಸೋದು. ಇಷ್ಟು ವರಹ ಅಂಬ್ತ ಐನೋರು ವಾದಿ(ಓದಿ) ಯೋಳೋರು. ಮುಯ್ಯಿ ಕೊಟ್ ಮ್ಯಾಗೆ ಬಟ್ರು ಊಟ ಹಾಕ್ಬೇಕಲ್ಲ. ಎಲ್ರೂ ಕೂಡ್ಕಂಡು ಪಕ್ಕದ ಮರ್ದಾಗೆ ಇದ್ದ ಗಸಗಸೆ ಅಣ್ಣು, ಬೇಲಿ ಹಣ್ಣು, ಹುಳಿ ಸೊಪ್ಪು, ಹುಣ್ಸೇ ಚಿಗ್ರು, ದಾಸವಾಳದ ಹುವ್ವ, ರೇಷ್ಮೆ ಹಣ್ಣು, ದೊಡ್ಡಪತ್ರೆ ಎಲೆ, ತುಳಸೀ ಎಲೆ ಇನ್ನಾ ಏನಾರ ಹಣ್ಣು ಆಯ್ಕಂ ಬರೀವಿ. ಮುತ್ತುಗ್ದ ಎಲೇ ಕಿತ್ಕಂ ಬಂದು ನೆಲುದ್ ಮ್ಯಾಗೆ ಹಾಸೀವಿ. ಎಲ್ರೂ ಕುಂತು ಮ್ಯಾಗೆ ಬಟ್ರು ತರಾವರಿ ಪದಾರ್ಥ ಹೆಸ್ರು ಯೋಳ್ಕಂಡು ಬಡ್ಸೋರು. ‌ನಮುಗ್ ಗೊತ್ತಿರಾ ಸೀ ತಿಂಡೀ ಎಸ್ರು, ಕೋಸುಂಬ್ರಿ, ಹೋಳ್ಗೆ, ಅನ್ನ, ಪಾಯ್ಸ‌ ಅದೂ ಇದೂ ಯೋಳ್ಕಂಡು ಎಲೇ ತುಂಬಾ ಹಣ್ಣು, ಎಲೆ, ಹುವ್ವ ಆಕುಸ್ಕಂಡು ಮೇಯ್ತಿದ್ವಿ. ಇದೊಂದು ತರಾ ಹುಚ್ಚುಚ್ಚಾಟ. ಇಂಗೇ ಮನೇ ಆಟ್ದಾಗೂ ಸ್ಯಾನೇ ರಕಮು ಆಡ್ತಿದ್ವಿ.

ಬುಗುರಿ

ಮಾಮೂಲಿ ಬುಗ್ರಿ ಮರದಾಗೆ ಮಾಡಿರ್ತಿದ್ರು. ಅದ್ನ ದಾರ್ದಾಗೆ ಸುತ್ತಿ ಬೀಸಿ ನಿಧಾನುಕ್ಕೆ ಕೆಳೀಕ್ ಬಿಟ್ರೆಗಾನಿ ಒಂದು ನಿಮಿಸುದ್ ತಂಕ ಸುತ್ತಾದು. ಅಂಗೇ ಬುಡಾದೂ ಎಲ್ರಿಗೂ ಬರಾಕಿಲ್ಲ. ಸ್ಯಾನೆ ಪೈಪೋಟಿ ಇತ್ತು ಅದುಕ್ಕೆ. ಚೆಂದಾಗಿ ಬರಾರು ಇದ್ರಾಗೆ ಸೇರ್ಕಂಡು ಆಡಾರು. ನಾವೂ ಸಣ್ಣ ಐಕ್ಳು ಸುತ್ತೂರ ನಿಂತು ನೋಡೀವು. ಎಲ್ಡು ಪಾಲ್ಟಿ ಮಾಡ್ಕಂತಿದ್ವು. ವಸಿ ಜನ ಒಬ್ಬೊಬ್ಬ್ರಿಗೆ ಜೈಕಾರ ಹಾಕ್ತಿದ್ವಿ.

ನಮ್ಕೆ ಆ ಬುಗ್ರಿ ಆಡ್ಸಾದು ಬರಾಕಿಲ್ವಲ್ಲ. ಏನ್ಮಾಡೀವು, ಪೂವರ್ಸಿ(ಪೂವರ್ಷಿ) ಕಾಯಿ ತಂದು ಒಣಾಕಾದು. ಅದು ಒಣ್ಗಿದ ಮ್ಯಾಗೆ ಅದ್ರಾಗೆ ಬುಗ್ರಿ ತರುಕ್ಕೆ ಆಡಾದು. ಅದೂ ಬೇಸಾಗಿ ತಿರುಗ್ತಿತ್ತು.

ಇನ್ನೊಂದು ನೀಲಗಿರಿ ಮರುದ್ ಕಾಯಿಗ್ಳು.‌ ಒಳ್ಳೆ ಮೆಣಸಿನ್ ಕಾಳಿನ ಗಾತ್ರ. ದ್ರಾಕ್ಷಿ ಗೊಂಚಲಿನಂಗೆ ಇರ್ತಿತ್ತು. ನೀಲಗಿರಿ ಮರ ಎತ್ತುರುಕ್ಕೆ ಇರ್ತಿತ್ತಲ್ಲ. ಒಣಗಿದ್ ಕಾಯಿಗ್ಳು‌ ಕೆಳೀಕ್ ಬೀಳ್ತಿದ್ವು. ಅದ್ನ ಆರ್ಸಗಂಡು ಬರೀವಿ.‌ ಅದ್ರಾಗೂ ಬುಗುರಿ ಆಡೀವು. ಎಷ್ಟು ಚೆಂದಾಗಿ ತಿರುಗ್ತಿತ್ತು ಅಂದ್ರೆ. ನಾವೂ ಪೈಪೋಟಿ ಮಾಡ್ಕಂತಿದ್ವಿ. ಯಾರ್ ಬುಗ್ರಿ ಸ್ಯಾನೆ ಹೊತ್ತು ತಿರುಗ್ತೈತೆ ಅಂಬ್ತ.

ಇನ್ನಾ ಗಣೇಶ್ನ ಹಬ್ಬದಾಗೆ ಪೆಟ್ಲಂಗೋವಿ ಮಾರಾರು. ಮರ್ದಾಗೆ ಮಾಡಿರ್ತಿದ್ರು. ಅದ್ನ ಒಂದು ದಪ ತಕಾ ಬಂದ್ರೆ ಐದಾರು ವರ್ಸ ಮಡಿಕ್ಕಂತಿದ್ವಿ. ಇಲ್ಲಾಂದ್ರೆ ಅಣ್ಣುಂದೋ, ಅಕ್ಕುಂದೋ ಕೊಡಾರು. ಅದ್ಕೇಂತ ಮುಂಗುರ್ಳಿ ಕಾಯಿ ಗೊಂಚ್ಲು ಹುಡಿಕ್ಕಾ ಬರೀವಿ. ಮುಂಗುರ್ಳಿ ಕಾಯಿಗ್ಳನ್ನ ಪೆಟ್ಲಂಗೋವೀ ಒಳೀಕ್ಕಾಗಿ ಜೋರಾಗಿ ಕುಟ್ಟಿದ್ರೆ ಪಟ್ ಅಂಬ್ತ ಸದ್ದು ಬತ್ತಿತ್ತು. ಎಲ್ಲಾರ್ ಮನೇಗೂ ಹೋಗಿ ಗಣೇಶುನ್ನ ನೋಡಾದು. ಅಡ್ಡ ಬಿದ್ದು, ಕೈಯಾಗಿರಾ ಪೆಟ್ಲಂಗೋವಿ ತಕಂಡು ಒಂದು ಕಿತ ಟಪ್ ಅಂಬ್ಸಿ ಮುಂದಿನ ಗಣೇಶುಂಗೆ ಹೊಂಡಾದು. ಆಗೆಲ್ಲಾ ಹಳ್ಳೀಗ್ಳಾಗೆ ಎಲ್ಲಾರ್ ಮನ್ಯಾಗೂ ಎಲ್ಲಿ ಗಣೇಶುನ್ನ ಕುಂಡ್ರಿಸ್ತಿದ್ರು? ಎಲ್ಲೋ ನಾಕು‌ ಮನ್ಯಾಗೆ. ರಾಮ್ರ ಗುಡ್ಯಾಗೆ ಕುಂಡ್ರಿಸೋರು. ಅವುನ್ನೇ ನೋಡ್ಕಂಡು ಪೆಟ್ಲಂಗೋವಿ ಆಡ್ಕಂಡು ಬರೀವಿ. ಇದ್ಕೇಂತ ಮುಂಗುರ್ಳಿ ಕಾಯಿಗ್ಳ ಆರ್ಸಾದೇ ಆ ಟೇಮ್ನಾಗೆ ದೊಡ್ಡ ಕ್ಯಾಮೆ ಆಗಿತ್ತು.

ತೆಂಗಿನ್ ಗರಿ ಗಿರಗಿಟ್ಲೆ

ಉದ್ರಿರಾ ತೆಂಗಿಂಗರೀಯಾ ನಾಕೈದು ಜನ ಸೇರ್ಕಂಡು ಎಳ್ಕಾ ಬರಾದು. ಯಾರ್ದಾನಾ ಮನೆ ತಾವ್ಕೆ ಎಳ್ದಾಕಿ ಎಲ್ರೂ ಸುತ್ತೂರ ಕುಂತ್ಕಣಾದು. ಅದ್ರಾಗೆ ಪೀಪಿ, ಕೈಗೆ ವಾಚು, ಉಂಗ್ರ, ಗಿರಗಿಟ್ಲೆ, ಹುವ್ವ ಮಾಡೀವು. ತೆಂಗಿನ್ ಗರಿ ಸೀಳಿ ಇವುನ್ನ ಮಾಡಾದು. ಅದ್ರಾಗೇ‌ ಮದ್ಯದಾಗೆ ದಿಂಡು ಇರ್ತೈತಲ್ಲ, ಅದುನ್ ಸೀಳಿ ಕಡ್ಡಿ ಮಾಡ್ಕಂತಿದ್ವಿ. ಸಣ್ಣುಗೆ ಬೇಕಿದ್ರೆ ತುದೀಗ್ಳುದ್ದು, ದಪ್ಪ ಬೇಕಾದ್ರೆ ಬುಡುದ್ದೂ ಸೀಳಿ ಚುಚ್ಚುತುದ್ವಿ. ಪರ್ಕೆ ಕಡ್ಡೀನೂ ಚುಚ್ಚುತಿದ್ವಿ. ಗಿರಗಿಟ್ಲೇಗಾರೆ ಕೈಯಾಗಿಟ್ಕಣಾಕೆ ಮೊಣಕೈ ಉದ್ದ ಕಡ್ಡಿ ಬೇಕಿತ್ತು. ಯಾವ್ದಾನಾ ಗಿಡ್ದಾಗೆ ಕತ್ರಿಸಿ ತರಾದು. ಎಲ್ಲಾರ್ದೂ ಮಾಡಿದ್ದು ಆದ್ ಮ್ಯಾಗೆ, ಕೈಯಾಗೆ ವಾಚು ಕಟ್ಕಂಡು, ಬೆಟ್ಟಿಗೆ ಉಂಗ್ರ ಏರ್ಸಿಕಂಡು, ತಲ್ಯಾಗೆ ಹುವ್ವ ಮುಡ್ಕಂಡು, ಬಾಯಾಗೆ ಪೀಪಿ ಊಬ್ಕಂಡು( ಊದುತ್ತಾ), ಗಿರ್ಗಿಟ್ಲೇಯಾ ಗಾಳ್ಯಾಗೆ ಅಲ್ಲಾಡಿಸ್ಕಂಡು ಓಡೋಗೋದು. ಯಾರ್ ಗಿರ್ಗಿಟ್ಲೆ ಚೆಂದಾಕಿ ತಿರುಗ್ತೈತೆ ಅಂಬೋದ್ರ ಮ್ಯಾಗೆ ಇದ್ರ ಚೆಂದ ಇರ್ತಿತ್ತು. ಅವುರ್ ಗಿರಗಿಟ್ಲೆ ಚೆಂದ ಅಂತ ಎಲ್ರೂ ಕೂಡಿ ತೀರ್ಮಾನ ತಕಂತಿದ್ವಿ.

ಸ್ಯಾನೆ ಟೇಮಿದ್ರೆ ಉಂಗುರ ಸೆಂದಾಗಿ ಮಾಡ್ತಿದ್ವಿ. ವೈನಾಗಿ ಜಡೆ ಹೆಣ್ದು ಅದುನ್ನ ಬೆಳ್ಳಿನ್ ಗಾತ್ರುಕ್ಕೆ ಸರ್ಯಾಗಿ ಬಗ್ಗಿಸಿ, ಸುತ್ತಿ‌ ಬಾಲ ಇಲ್ದಂಗೆ ಮಾಡೀವಿ. ಆತ್ರ ಇದ್ರೆ ತಿಥಿ ಮಾಡ್ಸಾ ಐನೋರು ದರ್ಬೇನಾಗೆ (ಒಣಗಿದ್ ಹುಲ್ಲು) ಸುಮ್ಕೆ ಒಂದು ಗಂಟು ಆಕಿ, ಬೆಟ್ಟಷ್ಟು ಉದ್ದೂಕೆ ನಿಟಾರ್ ಅಂತ ನಿಂತಿರಾ ಹುಲ್ಲು ಕೊಟ್ಟು ಉಂಗ್ರ ಆಕ್ಕಳಿ ಅಂಬಲ್ವೇ ಅಂಗೇ ನಾವೂ ಸುಮ್ಕೆ ಒಂದು ಗಂಟು ಹಾಕಿ, ಉದ್ದೂಕೆ ಗರಿ ಅಂಗೇ ಬುಟ್ಟು, ಕೈಯಾಗೆ ಏರ್ಸಿ ಓಡ್ತಿದ್ವಿ.

ಇಂಗೇ ಒಂದಾ ಎಲ್ಡಾ ಹುಚ್ಚುಚ್ಚಾಟಗ್ಳು. ಸುತ್ತಾ ಮುತ್ತಾ ಏನ್ ಸಿಗ್ತೈತಿ ಅದ್ರಾಗೇ ನಮ್ ಕಾರ್ಬಾರು. ಕಾಸಿಲ್ಲ ಕಜ್ಜಾಯವಿಲ್ಲ. ಬೂಮ್ತಾಯಿ ಕೊಡಾಳೂ. ನಾವೂ ಎಲ್ಡೂ ಕೈ ಮುಗ್ದು ತಕಂಡು ಆನಂದ್ವ ಎದ್ಯಾಗೆ ತುಂಬ್ಕಂತಿದ್ವಿ. ಬೂಮ್ತಾಯ್ನೂ ಚೆಂದಾಗಿ ನೋಡ್ಕಂತಿದ್ವಿ.

ಅಕ್ಷಂತೆ ಕಲ್ಲು

ಕೆರೇ ತಾವ್ಲೋ, ನದೀ ತಾವ್ಲೋ ಹೋದಾಗ ನುಣ್ಣಕಿರಾ(ನೈಸ್) ಕಲ್ನ ಆರ್ಸಗಂಡು ಬರಾದು. ನಮ್ದು ನಂಜನಗೂಡು ಮನೆದ್ಯಾವ್ರು.‌ ನಮ್ಮಪ್ಪ ವರ್ಸುಕ್ಕೊಂದು ದಪ ಕರ್ಕೋ ಹೋಗಾರು. ಬೋ ಕುಸೀ ನಮ್ಗೆ. ದ್ಯಾವ್ರನ್ನ ನೋಡಾಕಲ್ಲ. ಮದ್ಲು ಕಪಿಲಾ‌ ನದೀಗೆ ಸ್ನಾನುಕ್ಕೆ ಬೆಳ್ ಬೆಳಗಾನಾ ಕರ್ಕೋ ವಾಗಾರು. ಚಳ್ಯಾಗೆ ನಡುಕ್ಕಂಡು ನದೀ ದಡ್ದಾಗೆ ಕಲ್ಲು ಆರ್ಸಾದು ನಮ್ ಕೇಮೆ. ಅಕ್ಷಂತೆ ಕಲ್ಲಾಡಾಕೆ, ಚಕ್ಕಾಬಾರ್ದಾಗೆ ನಮ್‌ ಕಾಯಿ ಮಾಡ್ಕಣಾಕೆ ಆಗ್ತಿತ್ತು. ನಾವು ನಂಜನಗೂಡ್ಗೆ ವಾಗೋ ಸುದ್ದಿ ಬಂದೇಟ್ಗೇ ಗೆಣತೀರು ಬಂದು ಬಲು ಪಿರೂತಿಯಿಂದ ಮಾತಾಡಾರು. ಅಮ್ಮಿ ನಮ್ಗೂ ವಸಿ ನೈಸುಕಿರಾ ಕಲ್ಲು ಆರ್ಸಗಂಡು ಬಾರಮ್ಮಿ‌ ಅಂಬ್ತ ಬಾಯ್ತುಂಬಾ ಕ್ಯಾಳ್ಕಂಡು ಕಳುಸ್ ಕೊಡ್ತಿದ್ರು. ಅದ್ರಾಗೆ ನಮಿಗೆ ಯಾರು ಪಿರೂತಿನೋ ಅವುರ್ಗೆಲ್ಲ ನೆಪ್ಪಿಟ್ಟುಗಂಡು ಕಲ್ಲು ಆರ್ಸಿ ತರಾ ಕೆಲ್ಸ ನಮ್ದು. ಹಿರೇರು ಸ್ನಾನ ಮಾಡ್ ಬಾರಮ್ಮಿ ಅಂದ್ರೆ, ಹೂ ಅಂಬ್ತ ಶಾಸ್ತ್ರುಕ್ಕೆ ಮೂರು ಕಿತ ಮುಳುಗಾಕಿ, ಮೈಯೂ ಉಜ್ಜದೆ, ಆಯ್ತು ಅಂಬ್ತೇಳಿ ಓಡೋಗಿ ಕಲ್ಲೂ ಆರ್ಸಾ ಕೆಲ್ಸ. ಲಂಗುದ್ ತುಂಬಾ ಕಲ್ಲು ತುಂಬ್ಕಂಡು ಅಪ್ಪ ಅಮ್ಮುನ್ ತಾವ ಬಯ್ಸಿಕಂಡು, ಕೆಳಿಕ್ ಸುರಿಯಮ್ಮಿ, ವಸಾ ಲಂಗ ಅಂದ್ರೂ ಕಿವೀಗೇ ಬೀಳ್ದಂಗೆ ಓಡೋಗೀವು. ಒನ್ನೊಂದು ದಪ ಎಲ್ಡು ಏಟೂ ಬೀಳಾವು. ಆದ್ರೂ‌ ಕೊಡುವ್ ಕಂಡಿ ಮುಂದೋಗೋದು. ಈಗ್ನಂಗೆ ಕವರ್ರು ಪವರ್ರು ಇದ್ದಿದ್ರೆ, ಅದ್ರಾಗೆ ತುಂಬ್ಕಂಡಿ ಬರ್ಬೋದಿತ್ತು. ನಾವಾಡ್ತಿದ್ದಿದ್ ಅಕ್ಷಂತೆ ಕಲ್ಲಿನ ಕತೆ ಇದು. ಒನ್ನೊಂದ್ಲ ಒಂದು, ಒಂದೆರ್ಡ್ಲ ಎಲ್ಡು, ಒಂದು ಮೂರ್ಲ ಮೂರು ಅನ್ ಕಂಡು ರಾಗ್ವಾಗಿ ಲೆಕ್ಕ ಯೋಳ್ಕಂಡು, ಎಲ್ಡೂ ಕೈಯಾಗೆ ಕಲ್ಲು ಮಡಿಕ್ಕಂಡು ಅಕ್ಷಂತೆ ಕಲ್ಲು(ಅಚ್ಚಿನ ಕಲ್ಲು) ಆಡ್ತಿದ್ರೆ ಸುತ್ತೂರ ಎಲ್ಲಾ ಹುಡುಗೀರೂ ಜೊತ್ಯಾಗೆ ರಾಗ ಎಳೀತಿದ್ರು.

ಇನ್ನಾ ಸಾಕು ಈ ಆಟುಗ್ಳ ಕತೆ ಅಂಬ್ತೀನಿ. ಇದು ನಿಲ್ಲಾ ಮಟ ಕಾಣೆ. ಇದ್ನ ಬುಟ್ಟೂ ಎಲ್ಲಾರೂ ಆಡೋವಂಗೇ ಅಟ್ಟಗುಣಿ ಮನೇ, ಪಗಡೆ ಅವೂ ಇವೂ ಆಡೀವು. ಎಳೇ ವಯಸಿನ್ ಆಟುಗ್ಳು ಇಂಗೇ ಬಲ್ ಮಜಾ ಕೊಡಾವು. ಇಂತಾ ನೂರೆಂಟು ಆಟಗ್ಳು ನಮ್ಮುನ್ನ ದೊಡ್ಡೋರು ಮಾಡಿರೋವು. ಅವುನ್ನ ಮರ್ಯಾಕಾಗ್ತೈತೆ??