ಹೊಲೆಯ ತಿಮ್ಮು ಒಂದು ದಿನ ನಮ್ಮಲ್ಲಿಗೆ ಉಪ್ಪಿನಕಾಯಿ ಬೇಡುವುದಕ್ಕೆ ಬಂದಿದ್ದ. ನಮ್ಮ ತಾಯಿ ಹುಳುವಾದ ಸ್ವಲ್ಪ ಉಪ್ಪಿನಕಾಯಿಯನ್ನು ಕುದಿಸಿ ಒಂದು ಎಲೆಯಲ್ಲಿ ಹಾಕಿ ಅಂಗಳದ ಮೂಲೆಯಲ್ಲಿಟ್ಟು ತೆಗೆದುಕೊಂಡು ಹೋಗೆಂದಳು. ನಾನು ಅವನ ಎದುರಿನಲ್ಲಿಯೇ “ಹುಳುವಾದ ಉಪ್ಪಿನಕಾಯಿ ಏಕೆ ಕೊಟ್ಟೆ” ಎಂದು ಕೇಳಿಬಿಟ್ಟೆ. ತಾಯಿಯು ಸಿಟ್ಟುಗೊಂಡು ನನಗೆ ಹೊಡೆಯಬಂದರು. ನಾನು ನಗುತ್ತಾ ತೋಟಕ್ಕೆ ಓಡಿದೆ. ಓಡುವ ಭರದಲ್ಲಿ ಫಕ್ಕನೆ ತೋಟದಲ್ಲಿಯ ಕೆರೆಯಲ್ಲಿ ಬಿದ್ದುಬಿಟ್ಟೆ. ತಿಮ್ಮುವು ಅತ್ತಿತ್ತ ನೋಡಿ ಕೆರೆಯಲ್ಲಿ ಹಾರಿಕೊಂಡು ಬಹಳ ಪೇಚಾಟದಿಂದ ನನ್ನನ್ನು ಎತ್ತಿ ಮೇಲೆ ತಂದ.
ಡಾ. ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬೀರಾಯನ ಕಾಲದ ಕಥಾ ಸರಣಿಯಲ್ಲಿ ಭಾರತೀಬಾಯಿ ಪಣಿಯಾಡಿಯವರು ಬರೆದ ಕತೆ “ಹುಟ್ಟು ಕೆಟ್ಟೇ?”
ಪ್ರಕಟಣೆ
ಧರ್ಮೋದ್ಧಾರಕ ಸಂಘ ಪ್ರ. ನಂ. 5
ಈ ದಿನ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಪೌಳಿಯಲ್ಲಿ ಧರ್ಮವೀರರಾದ ಶ್ರೀ ಗೋಪೀನಾಥಶರ್ಮರು ಅಸ್ಪೃಶ್ಯರೊಡನೆ ಉಂಡ ತಮ್ಮ ಮಗನನ್ನು ಕರ್ತವ್ಯಪಾಲನೆಗಾಗಿ ಮನೆಯಿಂದ ಹೊರಡಿಸಿದ ಬಗ್ಗೆ ಧರ್ಮಪ್ರೇಮಿಗಳ ಪರವಾಗಿ ಅವರಿಗೆ ಧನ್ಯವಾದ ಕೊಡುವುದಕ್ಕಾಗಿ ಸಾರ್ವಜನಿಕ ಸಭೆ ಜರಗಲಿರುವುದು. ಪಂಡಿತವರ್ಯ ಮಾಧವಾಚಾರ್ಯರು ಅಧ್ಯಕ್ಷರಾಗಲೊಪ್ಪಿರುವರು.
ಉಡುಪಿ,
ಪ್ರಧಾನಮಂತ್ರೀ,
3-9-1932
ಧರ್ಮೋದ್ಧಾರಕ ಸಂಘ
ಪ್ರಜಾಬಂಧು
2-11-1932
ಉಡುಪಿ : ಇಲ್ಲಿಯ ಸನಾತನಿಗಳ ನೇತೃಗಳಾದ ಮಾಧವಾಚಾರ್ಯರ ಮೇಲೆ ಸ್ಥಳೀಯ ಕೋರ್ಟಿನಲ್ಲಿ, ಮೊದಲು ಅಸ್ಪೃಶ್ಯಜಾತಿಯವಳಾಗಿದ್ದು ಈಗ ವೇಶ್ಯಾವೃತ್ತಿಯಲ್ಲಿರುವ ದುರ್ಗಾಬಾಯಿಯು ಒಂದು ವಿಚಿತ್ರ ದಾವೆ ಹೂಡಿದ್ದಾಳೆ. ತನಗೆ ಇತ್ತೀಚೆಗೆ ಹುಟ್ಟಿದ ಹೆಣ್ಣು ಮಗುವೊಂದು ಶ್ರೀ ಆಚಾರ್ಯರಿಂದಾದುದೆಂದೂ ಆ ಮೇಲೆ ಅವರು ತನ್ನನ್ನು ತ್ಯಜಿಸಿ ಬೇರೊಬ್ಬಳನ್ನು ಹಿಡಿದುದರಿಂದ ತನಗೆ ಅವರು ರೂಪಾಯಿ 25/-ರ ಮಾಸಿಕ ವೇತನವನ್ನು ತೆರಬೇಕೆಂದೂ ಆಕೆಯ ವಾದ.
ಪ್ರಜಾಬಂಧು
4-8-1933
ಉಡುಪಿ : ಕೆಲವು ತಿಂಗಳುಗಳ ಹಿಂದೆ ಶ್ರೀ ಮಾಧವಾಚಾರ್ಯರ ಮೇಲೆ ದುರ್ಗಾಬಾಯಿ ಎಂಬವಳು ಹೂಡಿದ ಪರಿಹಾರದ್ರವ್ಯದ ದಾವೆಯು ಆಚಾರ್ಯರಿಗೆ ವಿರುದ್ಧ ತೀರ್ಮಾನವಾಗಿ ಅವರು ರೂಪಾಯಿ 500/-ರ ಪರಿಹಾರ ದ್ರವ್ಯವನ್ನು ಒಂದೇ ಗಂಟಿನಿಂದ ತೆರಬೇಕೆಂದಾಯಿತು.
ಮಾನಪತ್ರ
ಪತಿತೋದ್ಧಾರಕ ಶ್ರೀ ಕೃಷ್ಣಶರ್ಮರ ಸನ್ನಿಧಿಯಲ್ಲಿ:
ಇಂದು ತಮ್ಮ ಹುಟ್ಟೂರಾದ ಉಡುಪಿಯಲ್ಲಿ ತಮ್ಮನ್ನು ಎದುರುಗೊಳ್ಳುತ್ತಿರುವಾಗ ನಮ್ಮ ಹೃದಯವು ಬಡಿಯುತ್ತಿದೆ. 13 ವರ್ಷಗಳ ಕೆಳಗೆ ತಮ್ಮನ್ನು ಇದೇ ನಾಡಿನಿಂದ ನಾವು ಹೊರಡಿಸಿದ್ದೆವು. ಆದರೆ ಕ್ಷಮಾಮಯರಾದ ತಾವು ಈ ತಪ್ಪನ್ನು ಕ್ಷಮಿಸಿ ತಮ್ಮ ದರ್ಶನವನ್ನು ನಮಗೆ ಕರುಣಿಸಿದುದಕ್ಕೆ ನಮ್ಮ ಧನ್ಯವಾದಗಳನ್ನು ಹೇಳಲು ಬಾಯಿ ಸಾಲದಾಗಿದೆ.
ಪತಿತರ ಉದ್ಧಾರಕ್ಕಾಗಿ ತಾವು ತಮ್ಮ ಜೀವನವನ್ನು ಅರ್ಪಿಸಿದ್ದೀರಿ. ಅದಕ್ಕಾಗಿ ದೇಶತ್ಯಾಗಿಗಳಾದಿರಿ. ಸರ್ವ ಕಷ್ಟಗಳನ್ನು ಅನುಭವಿಸಿದಿರಿ. ತಮ್ಮ ವಿರೋಧಿಗಳಾಗಿದ್ದ ನಮ್ಮ ಹೃದಯಗಳನ್ನು ಪರಿವರ್ತಿಸಿದಿರಿ. ಇಂದು ಸಾರ್ವಜನಿಕ ಸಮ್ಮತಿಯಿಂದ ನಮ್ಮ ನಾಡಿನ ಈ ಮಹಾಲಿಂಗೇಶ್ವರ ದೇವಸ್ಥಾನವನ್ನು ಅಸ್ಪೃಶ್ಯರಿಗಾಗಿ ತೆರೆದಿಕ್ಕಿ ನಮ್ಮ ನಾಡಿನಲ್ಲಿ ತಮ್ಮ ಹೆಸರನ್ನು ಸ್ವರ್ಣಾಕ್ಷರಗಳಿಂದ ಕೆತ್ತಿಸುವ ಕೃಪೆ ಮಾಡಬೇಕು.
ನಾವು ಮಾಡಿದ ಅಪಕಾರಗಳಿಗಾಗಿ ಕ್ಷಮೆ ಬೇಡಲು ನಾಲಗೆ ಬಾರದು. ಆದರೆ ತಾವು ನಮ್ಮನ್ನು ಕ್ಷಮಿಸಿದ್ದೀರಿ. ಶ್ರೀ ಮಹಾಲಿಂಗೇಶ್ವರನು ತಮಗೆ ಚಿರಾಯುರಾರೋಗ್ಯಗಳನ್ನು ದಯಪಾಲಿಸಿ ತಮ್ಮಿಂದ ದೀನೋದ್ಧಾರ ಕಾರ್ಯಗಳನ್ನು ಇನ್ನೂ ಮಾಡಿಸಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ.
ಉಡುಪಿ
ಇತಿ,
ತಾ. 15-3-1945 ಪುರಜನರು
ಪತಿತೋದ್ಧಾರಕ ಶ್ರೀ ಕೃಷ್ಣಶರ್ಮರ ಆತ್ಮವೃತ್ತ
ನನ್ನನ್ನು ಮನೆಯಿಂದ ಹೊರಡಿಸಿದ್ದು-ಅಧ್ಯಾಯ 3
ನನಗೆ ಆಗ ಎಂಟು ವರ್ಷಗಳು ತುಂಬುತ್ತಾ ಬಂದಿದ್ದವು. ನಮ್ಮೂರಲ್ಲಿ ಇದ್ದ ಒಂದು ಶಾಲೆಯಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದೆ. ನಮ್ಮ ತರಗತಿಯಲ್ಲಿ ಅಸ್ಪೃಶ್ಯ ಹುಡುಗನೊಬ್ಬನು ವಿದ್ಯಾಭ್ಯಾಸ ಮಾಡುತ್ತಿದ್ದನು. ಆತನ ಹೆಸರು ತಿಮ್ಮು. ಅವನನ್ನು ಪ್ರತ್ಯೇಕವಾದ ಬೆಂಚಿನ ಮೇಲೆ ಕುಳ್ಳಿರಿಸುವುದನ್ನು ನೋಡಿ ನನಗೆ ಸಹಜವಾಗಿಯೇ ಕುತೂಹಲವಾಗುತ್ತಿತ್ತು. ನಮ್ಮ ತಂದೆಯವರು ಒಮ್ಮೊಮ್ಮೆ “ಶಾಲೆಗಳಿಗೆಲ್ಲ ಹೊಲೆಯರನ್ನು ಬರಗೊಳಿಸುತ್ತಾರೆ. ಈ ನೀಚರು ಬಂದು ಧರ್ಮವೆಲ್ಲಾ ಹಾಳಾಗುತ್ತೆ” ಎನ್ನುತ್ತಿದ್ದುದು ನನಗೆ ನೆನಪಿದೆ. ಹೊಲೆಯರನ್ನು ಮುಟ್ಟುವುದು ಅಷ್ಟೊಂದು ಹೀನವೇನೆಂದು ನನಗೆ ಗೊತ್ತಾಗುತ್ತಿರಲಿಲ್ಲ. ನಾನು ತಾಯಿಯನ್ನು ಕೇಳಿದೆ. ಸಮರ್ಪಕ ಉತ್ತರ ದೊರೆಯಲಿಲ್ಲ. “ಬೆಕ್ಕು ನಾಯಿಗಳನ್ನು ಮುಟ್ಟುತ್ತೇವಲ್ಲಾ” ಎಂದು ನಾನು ಪ್ರಶ್ನಿಸಿದೆ. ಆಕೆ ಹೇಳಿದಳು: “ಹಾಗೆಲ್ಲಾ ಮಾತಾಡಬಾರದು. ಅವರು ಹೊಲೆಯರು, ಮಧು-ಮಾಂಸ ತಿನ್ನುತ್ತಾರೆ, ಕರ್ರಗಿದ್ದಾರೆ, ಬ್ರಹ್ಮ ವರ್ಚಸ್ಸಿಲ್ಲ, ಅವರನ್ನು ಮುಟ್ಟಿದರೆ ಬ್ರಾಹ್ಮಣ್ಯ ಕೆಟ್ಟು ಹೋಗುತ್ತದೆ” ಎಂದು. ನಾನು ಕೇಳಿದೆ:- “ಹಾಗಾದರೆ ಬೇರೆ ಶೂದ್ರರು ತಿನ್ನುತ್ತಾರಲ್ಲ” – ಅವಳು ಸಿಟ್ಟುಗೊಂಡು “ಮುಟ್ಟಿದರೆ ಕಣ್ಣು ಹೊಟ್ಟಿಹೋಗುತ್ತದೆ” ಎಂದು ಬೆದರಿಕೆ ಹಾಕಿದಳು. ನಾನು ಸುಮ್ಮನಾದೆ.
ಹೊಲೆಯ ತಿಮ್ಮು ಒಂದು ದಿನ ನಮ್ಮಲ್ಲಿಗೆ ಉಪ್ಪಿನಕಾಯಿ ಬೇಡುವುದಕ್ಕೆ ಬಂದಿದ್ದ. ನಮ್ಮ ತಾಯಿ ಹುಳುವಾದ ಸ್ವಲ್ಪ ಉಪ್ಪಿನಕಾಯಿಯನ್ನು ಕುದಿಸಿ ಒಂದು ಎಲೆಯಲ್ಲಿ ಹಾಕಿ ಅಂಗಳದ ಮೂಲೆಯಲ್ಲಿಟ್ಟು ತೆಗೆದುಕೊಂಡು ಹೋಗೆಂದಳು. ನಾನು ಅವನ ಎದುರಿನಲ್ಲಿಯೇ “ಹುಳುವಾದ ಉಪ್ಪಿನಕಾಯಿ ಏಕೆ ಕೊಟ್ಟೆ” ಎಂದು ಕೇಳಿಬಿಟ್ಟೆ. ತಾಯಿಯು ಸಿಟ್ಟುಗೊಂಡು ನನಗೆ ಹೊಡೆಯಬಂದರು. ನಾನು ನಗುತ್ತಾ ತೋಟಕ್ಕೆ ಓಡಿದೆ. ಓಡುವ ಭರದಲ್ಲಿ ಫಕ್ಕನೆ ತೋಟದಲ್ಲಿಯ ಕೆರೆಯಲ್ಲಿ ಬಿದ್ದುಬಿಟ್ಟೆ. ನನ್ನ ತಾಯಿಗೆ ಈಜು ಬರುತ್ತಿರಲಿಲ್ಲ. ತಂದೆ ಮನೆಯಲ್ಲಿರಲಿಲ್ಲ. ಹತ್ತಿರದಲ್ಲಿ ಮನೆಗಳೂ ಇರಲಿಲ್ಲ. ತಿಮ್ಮುವು ಅತ್ತಿತ್ತ ನೋಡಿ ಕೆರೆಯಲ್ಲಿ ಹಾರಿಕೊಂಡು ಬಹಳ ಪೇಚಾಟದಿಂದ ನನ್ನನ್ನು ಎತ್ತಿ ಮೇಲೆ ತಂದ.
ನನಗೆ ಅನೇಕ ದಿನಗಳವರೆಗೆ ಕಣ್ಣು ಹೊಟ್ಟಿ ಹೋಗುವುದೋ ಎಂದು ಹೆದರಿಕೆ ಇತ್ತು! ಆದರೆ ಹಾಗೆ ಆಗದಿದ್ದುದನ್ನು ನೋಡಿ ಆಶ್ಚರ್ಯವಾಯಿತು. ಆಮೇಲೆ ನಾನು ತಿಮ್ಮುವನ್ನು ಸರಾಗವಾಗಿ ಮುಟ್ಟುವುದಕ್ಕೆ ಮೊದಲು ಮಾಡಿದೆ. ಒಂದೆರಡು ವರ್ಷ ಈ ವಿಷಯವು ನಮ್ಮ ತಂದೆ ತಾಯಿಗಳಿಗೆ ತಿಳಿದಿರಲಿಲ್ಲ. ಅವರಿಗೆ ಗೊತ್ತಾದಾಗ ಅವರು ನನ್ನನ್ನು ಹೊಡೆದು ಮೃತ್ತಿಕೆ ಹಾಕಿ ಸ್ನಾನ ಮಾಡಿಸಿ ಬೇರೆ ಯಜ್ಞೋಪವೀತ ಹಾಕಿಸಿದರು. ಇದರಿಂದಾಗಿ ನನ್ನ ಅಪನಂಬಿಕೆಯೇನೂ ಕಡಿಮೆಯಾಗಲಿಲ್ಲ. ಅಷ್ಟರಲ್ಲಿ ಎಲ್ಲೆಲ್ಲಿಯೂ ಅಸ್ಪೃಶ್ಯತಾ ನಿವಾರಣೆಯ ಚಳವಳವು ಹೂಡಲ್ಪಟ್ಟಿತ್ತು. ನಮ್ಮಲ್ಲಿನ ಬ್ರಾಹ್ಮಣರಲ್ಲಿ ಮುಕ್ಕಾಲು ಪಾಲು ಈ ಚಳವಳಕ್ಕೆ ವಿರುದ್ಧವಾಗಿದ್ದರು. ಅಲ್ಲದೆ ಬ್ರಾಹ್ಮಣೇತರರಲ್ಲಿಯೂ ತುಂಬಾ ಜನರು ವಿರೋಧಿಗಳಿದ್ದರು. ಮಧ್ಯಜಾತಿಯ ಈ ಬ್ರಾಹ್ಮಣೇತರರು ತಾವು ತಮ್ಮಿಂದ ಕೀಳುಜಾತಿಯವರನ್ನು ತಿರಸ್ಕರಿಸುತ್ತಿದ್ದರೂ ಕೂಡ ಬ್ರಾಹ್ಮಣರು ಮಾತ್ರ ತಮ್ಮನ್ನು ಕೊಂಚ ತಿರಸ್ಕರಿಸಿದರೆ ಸಿಟ್ಟುಗೊಳ್ಳುತ್ತಿದ್ದರು. ಇದೆಲ್ಲಾ ನನಗೆ ದೊಡ್ಡ ಸಮಸ್ಯೆಯಾಗಿತ್ತು. ಆಗ ಅಸ್ಪೃಶ್ಯತಾ ನಿವಾರಣೆಯ ಚಳವಳವು ಉನ್ನತ ಸ್ಥಿತಿಯಲ್ಲಿತ್ತು. ನನಗಾಗ ಹದಿನೈದು ವರುಷ.
ಅಸ್ಪೃಶ್ಯರಲ್ಲೊಬ್ಬನು ಸ್ವಲ್ಪ ಕಲಿತಿದ್ದವನು ಒಂದು ದಿನ ಸುಧಾರಕರ ಬೆಂಬಲದಿಂದ ಒಂದು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದನು. ಆತನು ತಿಮ್ಮುವಿನ ಚಿಕ್ಕಪ್ಪನಾಗಿದ್ದನು. ಅವನು ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಎತ್ತಿ ಮಾತನಾಡಿದೊಡನೆಯೇ ನಮ್ಮ ಸನಾತನಿಗಳ ಕೋಪವು ಮಿತಿ ಮೀರಿ ಅವನನ್ನು ಕಲ್ಲುಗಳಿಂದಲೂ ಇಟ್ಟಿಗೆಗಳಿಂದಲೂ ಹೊಡೆದು ಗಾಯಗೊಳಿಸಿದರು. ಅಲ್ಲಿನವರೆಗೆ ನಾನು ಈ ಚಳವಳದ ವಿಷಯ ತಟಸ್ಥನಾಗಿದ್ದೆ. ಈ ಅತ್ಯಾಚಾರವನ್ನು ಕಂಡು ನನ್ನ ಲಕ್ಷ್ಯವನ್ನು ನಾನು ನಿರ್ಧರಿಸಿದೆ. ಅದೇ ತಿಂಗಳಲ್ಲಿ ನಮ್ಮೂರಿನ ಸುಧಾರಕರು ಮಾಡಿದ ಸಹಪಂಕ್ತಿ ಭೋಜನದಲ್ಲಿ ಅದೇ ಅಸ್ಪೃಶ್ಯನು ತಯಾರಿಸಿದ ಅಡಿಗೆಯನ್ನು ನಾನೂ ಉಂಡೆ. ನಮ್ಮ ತಂದೆಯವರಿಗೆ ಇದು ತಿಳಿದು ಬಂದ ಕೂಡಲೇ ಅವರು ನನ್ನನ್ನು ಮನೆಯಿಂದ ಹೊರಡಿಸಿದರು. ಆಮೇಲೆಯೇ ನನ್ನ ನಿಜವಾದ ಜೀವನವು ಪ್ರಾರಂಭವಾಯಿತೆನ್ನಬಹುದು.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.