ತಂಗಿ ಬುತ್ತಿ ಹೊತ್ತುಕೊಂಡು ಬಂದೋಳು, ಅಣ್ಣಂದ್ರು ಎಲ್ಲಿ ಅಂಬ್ತ ಹುಡಿಕ್ಯಾಡೀಳು. ಆಮ್ಯಾಕೆ ಅಲ್ಲಿ ಬಿದ್ದಿದ್ರಲ್ಲ ಎಲ್ಲಾ ಅಣ್ಣಂದ್ರೂ… ಎಬ್ಬಿಸಿದ್ರೆ ಯೋಳ್ತಿಲ್ಲ. ಸ್ಯಾನೆ ದುಕ್ಕ ಆಯ್ತು. ಬೋರಂತ ಅಳೋಕೆ ಸುರು ಮಾಡೀಳು. ಮ್ಯಾಲೆ ಆಕಾಸ್ದಾಗೆ ಸಿವ ಪಾರೋತಿ ಸಂಚಾರ ಹೊಂಟಿದ್ರು. ಪಾರೋತಿಗೆ ಯಾರೋ ಅಳೋ ಸದ್ದು ಕೇಳ್ತೋ. ಗಂಡಂಗೆ ಯಾರೋ ಹೆಣ್ಣು ಮಗು ಅಳೋ ಸದ್ದು ಬರ್ತಾ ಐತೆ. ಹೋಗಿ ನೋಡೋಮಾಂತ ಬೋ ಹಠ ಮಾಡಿದ್ಲು. ಸಿವ ಇದ್ದೋನೇ, ಥೋ ಈ ಹೆಣ್ಣುಮಕ್ಕಳ ಕಾಟ ಇದ್ದಿದ್ದೇಯಾ, ನೆಮ್ದಿಯಾಗಿ ಸಂಚಾರ ಹೋಗೋಕೂ ಬಿಡಾಕಿಲ್ಲಾ ಅಂಬ್ತ ಯೋಳಿ, ಆ ತಂಗಿ ತಾವ್ಕೆ ಕರ್ಕೊಂಡು ಬಂದ.
ಹಳ್ಳಿಗಳಲ್ಲಿ ನಾಗರಪಂಚಮಿ ಹಬ್ಬದ ಆಚರಣೆ ಹಾಗೂ ಅದರ ಸುತ್ತ ಇರುವ ಕತೆಗಳ ಕುರಿತು ಸುಮಾ ಸತೀಶ್ ಬರಹ ನಿಮ್ಮ ಓದಿಗೆ
ಹುತ್ತಗಟ್ಟೋದು ಗೆದ್ದಲಲ್ವೇ? ನಾಗ ಯಾವಾಗ ಹುತ್ತಗಟ್ಟಿದ್ದು ? ಎಲ್ಲಿ ? ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳೋದು ಬ್ಯಾಡಾ ಬುಡಿ. ಇದು ಮನದ ಮಿದು ಮಣ್ಣಿನಲ್ಲಿ ಹುತ್ತಗಟ್ಟಿದ ನಾಗನೆಂಬ ಅತಿರಂಜಿತ ಕತೆಗಳ ಒಡೆಯ. ಕತೆಗಳೊಳಗಿನ ಭ್ರಮಾಲೋಕ ಬಾಲ್ಯವನ್ನು ಬಸಿದಿತ್ತು.
ನಾಗರಪಂಚಮಿ ಹಬ್ಬ ಶ್ರಾವಣದಲ್ಲಿ ಬಲು ಪ್ರೀತಿಯಿಂದ ಆಚರಿಸೋ ಹಬ್ಬ. ಶ್ರಾವಣದ ಸಾಲಿನಲ್ಲಿ ಮೊದಲ ಹಬ್ಬ. ಸಂಬಂಧಗಳನ್ನು ಬೆಸೆಯುವ ಜನಪದರ ಮನೆಯ ಸಂಭ್ರಮ. ಮದುವೆ ದೂರ ಮಾಡಿದ ಅಣ್ಣ ತಂಗೀರನ್ನು, ಒಡಹುಟ್ಟಿದವರನ್ನು, ತವರೆಂಬ ತವನಿಧಿಯಲ್ಲಿ ಮರುಕೂಡಿಸುವ ಸೇತುವೆ.
ಬಾಲ್ಯದ ಪಂಚಮಿ ಹಬ್ಬದ ನೆನಪು…. ಹೊತ್ತು ಕಣ್ಣು ಬಿಡುವ ಮುಂಚೆಯೇ ಅಜ್ಜಿ, ಅಮ್ಮ ಪೂಜೆ ಬುಟ್ಟಿ ಹೊತ್ತು, ಮಡಿಯಲ್ಲಿ, ಜೂಗರಿಸುತ್ತಿದ್ದ ನಮ್ಮನ್ನೂ ಎಳೆದೊಯ್ಯುತ್ತಿದ್ದುದು ನಾಗರಕಟ್ಟೆಗೆ. ಅಲ್ಲಾಗಲೇ ಊರ ಹೆಣ್ಣುಮಕ್ಕಳ ದಂಡು. ಸಹಾಯಕ್ಕೇಂತ ಗಂಡುಮಕ್ಕಳು. ಗಂಡು ಹೈದರಿಗೆ ಸಹಾಯದ ನೆಪದಲ್ಲಿ ಬರಲು ಜೋರು ಸೆಳೆತವೂ ಇತ್ತು. ಪೂಜೆ ಆದ ತಕ್ಷಣ ಅಲ್ಲೇ, ಬೆನ್ನು ತೊಳೆಸಿಕೊಂಡು, ಆರತಿ ಬೆಳಗಿಸಿಕೊಂಡು ಅಕ್ಷತೆ ಎರೆಸಿಕೊಳ್ಳಲು ಸಂಭ್ರಮದಿಂದ ಕಾಯುವ ಮನಸಿನೊಡನೆ ಜೊತೆಗೂಡುತ್ತಿದ್ದರು. ಹೊಸ ವಲ್ಲಿ ಬಟ್ಟೆ ನೀರಲ್ಲಿ ನೆನೆಸಿ, ನಾಗರನ ಮುಂದಿಟ್ಟು, ಅರಿಸಿನದ ದಾರ ಮೂರೂ ಕಲ್ಲು ಸೇರಿಸಿ ಸುತ್ತಿ, ಹಾಲು ಎರೆದು, ನೈವೇದ್ಯಕ್ಕೆ, ನೆನೆಸಿದ ಅಕ್ಕಿ, ಕಡಲೆಕಾಳು, ಚಿಗಳಿ, ತಂಬಿಟ್ಟು, ಬಾಳೆಹಣ್ಣು ಇಟ್ಟು, ಆರತಿ ಬೆಳಗೋದನ್ನೇ ಕಾದು ಕೂರುತ್ತಿದ್ದೆ. ಅದಾದ ಮೇಲೆ ಅಜ್ಜಿ ಎಲ್ಲ ಹುಡುಗರನ್ನೂ ಕೂರಿಸಿಕೊಂಡು ಕತೆ ಹೇಳುತ್ತಿದ್ದಳು. ವರ್ಷ ವರ್ಷವೂ ಅದೇ ಕತೆ ಕೇಳುತ್ತಿದ್ರೂ, ಪ್ರತಿ ಬಾರಿಯೂ ಹೊಸದರಂತೆಯೇ ಕುತೂಹಲ ಕೆರಳಿಸುವ ಕತೆ. ಯಾಕೋ ಗೊತ್ತಿಲ್ಲ, ಇವತ್ತಿಗೂ ಈ ಕತೆ ಮನದಲ್ಲಿ ಅಚ್ಚೊತ್ತಿದೆ. ಹಾಗಾಗಿ ಪಂಚಮಿಯ ದಿನ ನನ್ನ ಮಗನನ್ನು ಕೂರಿಸಿ ನಾನೂ ಇದೇ ಕತೆಯನ್ನು ಹೇಳುತ್ತೇನೆ.
“ಒಂದು ಊರ್ನಾಗೆ ಒಬ್ಬ ರಾಜ ಇದ್ದ. ಆ ರಾಜಂಗೆ ಏಳು ಜನ ಗಂಡುಮಕ್ಕಳು. ಕೊನೇಗೆ ಒಬ್ಬಾನೊಬ್ಬಳು ಪುಟ್ಟ ತಂಗಿ ಹುಟ್ಟಿದ್ಳು. ಅವಳೂಂದ್ರೆ ಅಣ್ಣಂದ್ರು ಬೋ ಪಿರೂತಿ ಮಾಡ್ತಿದ್ರು. ಅವ್ಳು ಏಸು ಸುಖವಾಗಿ ಬೆಳೆದಿದ್ಲೂ ಅಂದ್ರೆ ಹಾಲೂ ತುಪ್ಪದಾಗೇ ಕೈತೊಳಿಸ್ತಿದ್ರು. ಅಣ್ಣಂದ್ರು ದಿನಾ ಹೊಲತಾವ್ಕೆ ಬ್ಯಾಸಾಯ ಮಾಡಾಕೆ ಹೋಗ್ತಿದ್ರು. ತಂಗ್ಯವ್ವ ದಿನಾ ಅವರ್ಗೆ ಬುತ್ತಿ ತಕಂಡು ಹೋಗ್ತಿದ್ಲು. ಒಂದು ದಿನ ಮಟಮಟ ಮಧ್ಯಾಹ್ನ… ಅಣ್ಣಂದ್ರು ಹೊಲಾ ಉಳ್ತಾ ಉಳ್ತಾ, ಕಾಣದಂಗೆ ಅಲ್ಲಿದ್ದ ಹುತ್ತಾನೂ ಉತ್ತುಬಿಟ್ರು. ಅದರಾಗೆ ಮನಗಿದ್ದ ನಾಗಪ್ಪ ಹೆಡೆ ಎತ್ಕೊಂಡು ರೋಸದಿಂದ ಬಂದೋನೆ, ಏಳೂ ಜನ್ವಾ ಕಚ್ಚಿದ. ಎಲ್ರೂ ಅಲ್ಲೇ ನೊರೆ ಕಾರ್ಕೊಂಡು ಬಿದ್ದೋದ್ರು.
ತಂಗಿ ಬುತ್ತಿ ಹೊತ್ತುಕೊಂಡು ಬಂದೋಳು, ಅಣ್ಣಂದ್ರು ಎಲ್ಲಿ ಅಂಬ್ತ ಹುಡಿಕ್ಯಾಡೀಳು. ಆಮ್ಯಾಕೆ ಅಲ್ಲಿ ಬಿದ್ದಿದ್ರಲ್ಲ ಎಲ್ಲಾ ಅಣ್ಣಂದ್ರೂ… ಎಬ್ಬಿಸಿದ್ರೆ ಯೋಳ್ತಿಲ್ಲ. ಸ್ಯಾನೆ ದುಕ್ಕ ಆಯ್ತು. ಬೋರಂತ ಅಳೋಕೆ ಸುರು ಮಾಡೀಳು. ಮ್ಯಾಲೆ ಆಕಾಸ್ದಾಗೆ ಸಿವ ಪಾರೋತಿ ಸಂಚಾರ ಹೊಂಟಿದ್ರು. ಪಾರೋತಿಗೆ ಯಾರೋ ಅಳೋ ಸದ್ದು ಕೇಳ್ತೋ. ಗಂಡಂಗೆ ಯಾರೋ ಹೆಣ್ಣು ಮಗು ಅಳೋ ಸದ್ದು ಬರ್ತಾ ಐತೆ. ಹೋಗಿ ನೋಡೋಮಾಂತ ಬೋ ಹಠ ಮಾಡಿದ್ಲು. ಸಿವ ಇದ್ದೋನೇ, ಥೋ ಈ ಹೆಣ್ಣುಮಕ್ಕಳ ಕಾಟ ಇದ್ದಿದ್ದೇಯಾ, ನೆಮ್ದಿಯಾಗಿ ಸಂಚಾರ ಹೋಗೋಕೂ ಬಿಡಾಕಿಲ್ಲಾ ಅಂಬ್ತ ಯೋಳಿ, ಆ ತಂಗಿ ತಾವ್ಕೆ ಕರ್ಕೊಂಡು ಬಂದ. ಯಾಕಮ್ಮಾ ಅಳ್ತಿದ್ದೀಯ ಅಂತ ಕ್ಯೋಳ್ದಾಗ, ಅವಳು ಕತೆಯೆಲ್ಲಾ ಯೋಳಿದ್ಲು. ಅದ್ಕೇ ಸಿವಾ ಇದ್ದೋನು, ಅಲ್ಲ ಕಣಮ್ಮಾ, ಇವತ್ತು ಶ್ರಾವಣ ಪಂಚಮಿ. ನಾಗಪ್ಪನ್ನ ಪೂಜೆ ಮಾಡ್ಬೇಕು. ನಿಮ್ಮ ಅಣ್ಣಂದ್ರು ಹುತ್ತ ಉತ್ತು ಬಿಟ್ಟೌರೆ. ನಾಗಪ್ಪ ಕ್ವಾಪದಿಂದ ಕಚ್ಚೌನೆ. ನೀನು ಒಂದ್ ಕೆಲ್ಸ ಮಾಡು. ಈಗ್ಲೇ ಇಲ್ಲೇ ನಾಗಪ್ಪನ್ನ ಪೂಜೆ ಮಾಡು… ಅಂದ್ರೆ ನಿಮ್ಮಣ್ಣಂದ್ರು ಬದ್ಕಿ ಬರ್ತಾರೆ… ಅಂತಂದ. ಆ ಹುಡುಗಿ ಆಗ ನನ್ ತಾವ ಪೂಜೇ ಮಾಡಾಕೆ ಸಾಮಾನೇ ಇಲ್ಲ ಅಂತ ಇನ್ನೊಸಿ ಜೋರಾಗಿ ಅಳ್ತಾಳೆ. ಸಿವಪ್ಪ ಯೋಳ್ದ. ನೋಡವ್ವ, ಇಲ್ಲಿರೋ ಮಣ್ಣ ಅರಿಸಿನ, ಕುಂಕ್ಮ ಮಾಡ್ಕೋ. ಮರಳೆ ಅಕ್ಷತೆ. ರಾಗಿ ಎಲೇನೆ ಎಲೆ. ಸಣ್ಣ ಕಲ್ಲು ಅಡಿಕೆ ಮಾಡ್ಕೋ. ಮಣ್ಣ ಕಲ್ಸಿ ಚಿಗಳಿ, ತಂಬಿಟ್ಟು ಮಾಡು. ಮನ್ಸಾಗೆ ಬಕ್ತಿಯಿಂದ ಪೂಜೆ ಮಾಡಿ, ಅಕ್ಷತೆ ನಿಮ್ಮ ಅಣ್ಣಂದ್ರು ಮ್ಯಾಕೆ ಹಾಕು, ಎದ್ದು ಬರ್ತಾರೆ ಅಂತ ಯೋಳಿ ಸಿವ ಪಾರೋತಿ ಹೊಂಟೋದ್ರು. ಈ ತಂಗಿ ಅಂಗೇ ಪೂಜೆ ಮಾಡಿ ಅಣ್ಣಂದ್ರ ಮ್ಯಾಲೆ ಅಕ್ಷತೆ ಹಾಕಿದ್ ತಕ್ಷಣ ಅವ್ರು ಮ್ಯಾಲೆದ್ದು, ನಾವ್ಯಾಕೆ ಇಲ್ಲಿ ಮನಗಿದ್ದೀವಿ ಅಂಬ್ತ ಕೇಳಿದ್ಕೆ, ತಂಗಿ ಎಲ್ಲಾ ಕತೆ ಯೋಳಿದ್ಲು. ಬೋ ಸಂತೋಸ ಆಗಿ ಅಣ್ಣಂದ್ರು ಇನ್ ಮ್ಯಾಕೆ ಪಂಚಮಿ ಹಬ್ಬದ ದಿನ ಎಲ್ಲಿದ್ರೂ, ತಂಗ್ಯವ್ವನ್ನ ತವರೀಗೆ ಕರ್ಸಬೇಕು. ಅವಳು ನಾಗಪ್ಪನ್ನ ಪೂಜೆ ಮಾಡಿ ಅಕ್ಷತೆ ಕೊಡಬೇಕು ಅಂತ ಠರಾವು ಹೊಂಡ್ಸಿದ್ರು. ಅವಳ್ಗೆ ಉಡುಗೋರೆ ಕೊಟ್ಟು ಖುಸಿ ಮಾಡಿದ್ರು.”
ಈ ಕತೆ ನನಗೆ ನಿತ್ಯನೂತನ. ಶಿವ ಜನಪದರ ಮನದ ದೇವ. ಪೂಜೆಗೆ ವೈಭವದ ಸಾಮಾನು ಬೇಡಲಿಲ್ಲ. ಭಕ್ತಿಯೊಂದಿದ್ದರೆ ಸಾಕು ಅಂದ. ಪ್ರಕೃತಿಯ ಜೊತೆ ಮನುಷ್ಯ ಸಹಬಾಳ್ವೆ ನಡೆಸೋಕೆ ಕಲಿಸುವ ಕತೆ. ನಾಗ ನಮ್ಮ ಸ್ನೇಹಿ ಅಂತ ಹೇಳುವಂಥದ್ದು.
ಇಷ್ಟು ಕತೆ ಹೇಳಿ, ಅಜ್ಜಿ ಅಲ್ಲಿದ್ದ ಚಿಗಳಿ, ತಂಬಿಟ್ಟು ಕೊಡ್ತಿದ್ರು. ಅಲ್ಲಿಂದ ಹುತ್ತಕ್ಕೆ ಕರೆದೊಯ್ದು, ಹಾಲೆರೆದು, ಹಸಿಯಾದ ಹುತ್ತದ ಮಣ್ಣನ್ನು ಭಕ್ತಿಯಿಂದ ಮೃತ್ತಿಕೆ ಅಂತ ತೆಗೆದು ನಮಗೆಲ್ಲ ಕಣ್ಣು, ಕಿವಿಗೆ ಸವರುತ್ತಿದ್ದರು. ಒಂದಷ್ಟು ಮಣ್ಣನ್ನು ಒಣಗಿಸಿ ಇಡುತ್ತಿದ್ದರು. ಮನೆಯಲ್ಲಿ ಯಾರಿಗೇ ಆಗಲಿ ಯಾವಾಗಲಾದರೂ ಕಿವಿ ನೋವು, ಸೋರುವುದು ಅಥವಾ ಕಣ್ಣುಕುಟಿಗೆ, ಕಣ್ಣು ಕೆಂಪಾಗುವುದು ಆದರೆ ಸಾಕು, ಓ ಇದು ನಾಗಪ್ಪಂದೇಯಾ ಆಟ ಅಂತ ನಿರ್ಧರಿಸಿಬಿಡುತ್ತಿದ್ದರು. ಒಣಗಿಸಿದ ಹುತ್ತದ ಮಣ್ಣನ್ನು ನೆನೆಸಿ, ಹಸಿ ಮಾಡಿ ಅದನ್ನು ಹಚ್ಚಿ, ನಾಗಪ್ಪನಿಗೆ ಹಾಲೆರೆಯುವುದಾಗಿ ಹರಕೆ ಮಾಡುತ್ತಿದ್ದರು. ಅಂತೂ ವೈದ್ಯರ ಕಾಟವಿಲ್ಲದೆ ವಾಸಿಯಾಗುತ್ತಿತ್ತು. ಉಷ್ಣಕ್ಕೆ ಆದದ್ದು ತಂಪಾದ ಹುತ್ತದ ಮಣ್ಣಿನಿಂದ ವಾಸಿಯಾಗುತ್ತಿತ್ತು. ಆದರೆ ಅದು ತಿಳಿಯದೆ, ನಮ್ಮಿಂದ ಏನೋ ತಪ್ಪಾಗಿದೆ ಅಂತ ನಾಗಪ್ಪನ ಮೇಲಿನ ಭಯ ಇದರಿಂದ ಇನ್ನೂ ಜಾಸ್ತಿ ಆಗುತ್ತಿತ್ತು. ಹುತ್ತದ ಪೂಜೆ ಮುಗಿಸಿ ಮನೇಗೆ ಬಂದು ಬೇಯಿಸಿದ ಕಡುಬು ಮಾಡಿಕೊಡುತ್ತಿದ್ದರು ನಮ್ಮಜ್ಜಿ. ಪಾಪ.. ಬಲು ಕಷ್ಟದ ಕೆಲಸ ಕಡುಬು ಮಾಡುವುದು. ತಾಳ್ಮೆ, ಸಮಯವನ್ನು ಬೇಡುತ್ತಿತ್ತು. ಹಾಗಾಗಿ ಮನೆಯ ಎಲ್ಲ ಹೆಣ್ಣುಮಕ್ಕಳ ಜೊತೆ ಗಂಡಸರೂ ಕುಂತು ಕಡುಬು ಒತ್ತುತ್ತಿದ್ರು. ಕಾಯಿ, ಬೇಳೆ, ಗಸಗಸೆ, ಎಳ್ಳು, ಕಾರದ ಕಡುಬು ಅಂತ ಐದು ರಕ ಮಾಡ್ತಿದ್ರು. ಪಂಚಮಿಯ ಖುಷಿಗೆ ಇದೂ ಒಂದು ಕಾರಣ ಆಗ್ತಿತ್ತು. ನಾವೂ ಉಂಡೆ ಮಾಡಿಕೊಡುವ ನೆಪದಲ್ಲಿ ಹಸಿ ಕಡುಬು ಗುಳುಂ ಮಾಡುತ್ತಿದ್ದೆವು.
ಇದಿಷ್ಟು ಹಬ್ಬದ ಕತೆಯಾದ್ರೆ, ನಾಗಪ್ಪನ ಕುರಿತು ಪೂರ್ತಿ ಹೇಳಿದಂತಾಗಲ್ಲ. ಬಾಲ್ಯದಿಂದಲೂ ನಮ್ಮ ಪುರಾಣ ಕತೆಗಳು, ಜನಪದ ಕತೆಗಳು, ಚಂದಮಾಮ ಕತೆಗಳು ನಾಗರಹಾವನ್ನು ಅತಿರಂಜಿತವಾಗಿ ಕಟ್ಟಿಕೊಟ್ಟು ನಮ್ಮ ಮನದಲ್ಲಿ ಬೇರೊಂದು ಲೋಕವನ್ನೇ ಸೃಷ್ಟಿಸಿತ್ತು. ಗದ್ದೆ ಬಯಲುಗಳಲ್ಲಿ ಹಾವು ಸರ್ವೇ ಸಾಮಾನ್ಯ. ಆದ್ರೆ ಅದನ್ನು ಶತ್ರು ಅಂತ ದೂರ ತಳ್ಳದೆ, ಮಿತ್ರ ಅಂತ ತೀರಾ ಸಲುಗೇನೂ ಇಟ್ಕೊಳ್ಳದೆ, ದೇವ್ರು ಅಂತ ಪೂಜೆ ಮಾಡೋದು ರೂಡಿ. ನಂಬಿಕೆ ಅನ್ನೋ ದಾರದಲ್ಲಿ, ಭಯ ಅನ್ನೋ ಸೂಜಿ ಹಾಕಿ, ಭಕ್ತಿ ಅನ್ನೋ ಹೂವನ್ನು ಪೋಣಿಸಿ ಪೂಜಿಸೋದು ನಡೆದುಕೊಂಡು ಬಂದ ಸಂಪ್ರದಾಯ.
ಈ ಹಾವಿನ ಜೊತೆ ನನ್ನ ಬಾಲ್ಯಕಾಲದ ಬಲು ಕತೆಗಳು ಗಂಟಾಗಿವೆ. ಕೆಲವು ಕಾಕತಾಳೀಯವಾದರೂ ಅತಿಮಾನುಷ ಶಕ್ತಿಯ ಕಲ್ಪನೆಯಿಂದ ಹರಡಿವೆ. ನಮ್ಮ ಹೊಲದಲ್ಲಿ ಕದಿರಿ ನರಸಿಂಹನ ಗುಡಿ ಇತ್ತು. ಪ್ರತಿ ಶನಿವಾರ ಅಪ್ಪ ಪೂಜೆ ಮಾಡಿಕೊಂಡು ಬರುತ್ತಿದ್ದರು. ಒಂದು ದಿನ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ರಾತ್ರಿಯಾಯಿತು. ಎಲ್ಲಿಯೇ ಹೋಗಲಿ, ಎಷ್ಟೇ ರಾತ್ರಿಗೆ ಹಿಂತಿರುಗಲಿ, ಒಮ್ಮೆ ಹೊಲಕ್ಕೆ ಹೋಗಿ ಬರುವ ಪರಿಪಾಠವಿತ್ತು. ಅವತ್ತೂ ಹಾಗೇ, ಕತ್ತಲೆಯಲ್ಲಿ ಬ್ಯಾಟರಿ ಹಿಡಿದು ಹೋಗಿದ್ದಾರೆ. ಒಳಗೆ ಹೋಗುವ ಹಾದಿಗೆ ಅಡ್ಡಲಾಗಿ ನಾಗರಹಾವೊಂದು ಮಲಗಿದೆ. ಪಾಪ ರಾತ್ರಿಯ ಸಮಯ. ಅದರ ಪಾಡಿಗೆ ಅದು ಹೊಲದ ಬದಿಯಲ್ಲಿತ್ತು. ತಕ್ಷಣ ಅಪ್ಪನಿಗೆ ಯಾಕಪ್ಪಾ ಏನು ಅನಾಹುತವಾಗಿದೆ. ನಾಗಪ್ಪ ಕಾಣಿಸಿಕೊಂಡ ಅಂತ ಅನ್ನಿಸಿದಾಗ, ಶನಿವಾರ ಅಂತ ನೆನಪಾಗಿದೆ. ಓ.. ಪೂಜೆ ಮರೆತಿದ್ದೇನೆ ಅಂತ ಯೋಚಿಸಿ, ತಕ್ಷಣ ವಾಪಸ್ ಮನೆಗೆ ಬಂದು, ಹಣ್ಣು ಕಾಯಿ ಕೊಂಡೊಯ್ದು ಪೂಜೆ ಮಾಡಿಕೊಂಡು ಬಂದರಂತೆ. ಈ ಸುದ್ದಿಗೆ ಅಂತೆ ಕಂತೆಗಳ ಸಂತೆಯೂ ಸೇರಿಕೊಂಡಿತು. ಗುಡಿಯ ಪೂಜಾರಪ್ಪ ಉಪ್ಪಾರ್ರ ಕೋಡಪ್ಪ “ಹೂ ಕಣ್ರಪ್ಪಾ. ಗುಡೀ ಸುತ್ತಮುತ್ತ ಸ್ವಾಮಿ ಕಾಯ್ಕೊಂಡೌನೆ. ಮುಟ್ಟುಚಟ್ಟು ಆದ್ರೆ ಒಳಗೆ ಬುಸಬುಸ ಸದ್ದು, ಸರಬರ ಸದ್ದು ಕೇಳಿಸ್ತೈತೆ. ನಾನು ತಕ್ಸಣ, ಗಂಜಲ ಸೆಲ್ಲಿ ಸಾಂತಿ ಮಾಡ್ತಿವ್ನಿ” ಅಂತ ಹೇಳಿದ್ದು ಸುತ್ತಾ ಇರೋ ಜನರಲ್ಲಿ ಭಕ್ತಿ ಜಾಸ್ತಿ ಮಾಡಿತ್ತು.
ಇನ್ನೊಮ್ಮೆ ನಮ್ಮ ಮನೆಯೊಳಗೆ ಹಾವು ಬಂದಿತ್ತು. ಆಗ ನೀರಗಂಟಿ ಹನುಮಂತಪ್ಪ ತನ್ನ ಬಳಿ ಸದಾ ಇರುತ್ತಿದ್ದ ಚೂಪಾದ ಕೋಲಿನ ತುದಿಯಲ್ಲಿ ಒತ್ತಿ ಹಿಡಿದು ಆಚೆ ಹಾಕಿದ್ದ. ಆಮೇಲೆ ಮನೆಯಲ್ಲಿ ಪೂಜೆ ಮಾಡಿಸಿದ್ರು. ಆ ಸಮಯದಲ್ಲಿ ನೋಡಬೇಕಿತ್ತು, ನಾಗಪ್ಪನ ಬಗ್ಗೆ ನಮ್ಮ ಹಳ್ಳಿ ಜನರ ಪುಂಖಾನುಪುಂಖ ಕತೆಗಳು ಸುರುಳಿ ಬಿಚ್ಚಿದ ಬಗೆಗೆ ಕಣ್ಣು ಬಾಯಿ ಬಿಟ್ಟು ಕೇಳುತ್ತಿದ್ದ ನಾವೆಲ್ಲ, ಹೆದರಿ ಬೆವರಿದ್ದಂತೂ ನಿಜ.
ನಮ್ಮ ಮನೆ ಮುಂದೆ ವಿಶಾಲ ಅಂಗಳ ಇತ್ತು. ಕಲ್ಲುಚಪ್ಪಡಿ ಹಾಕಿಸಿದ್ರು. ಅಲ್ಲಿ ರಾತ್ರಿಯಾದ್ರೆ ಸಾಕು ಊರಿನ ಜನರೆಲ್ಲಾ ಬಂದು ಕುಂತು ಕಾಲಕ್ಷೇಪ ಮಾಡ್ತಿದ್ರು. ಆಗ ಅವರ ಕಲ್ಪನೆಗೆ ರೆಕ್ಕೆಪುಕ್ಕ ಕೊಟ್ಟು ಕತೆಗಳನ್ನು ಸ್ವಾರಸ್ಯವಾಗಿ ಹೇಳುತ್ತಿದ್ದರು. ನಿಜದ ತಲೆಮೇಲೆ ಹೊಡೆದಂತೆ ಹೇಳ್ತಿದ್ರೆ ಮೈ ರೋಮಗಳು ನಿಟಾರ್ ಅಂತ ನಿಲ್ಲುತ್ತಿದ್ದವು. ಹಾವು ನಮ್ಮ ಮನೆಗೆ ಬಂದು ಹೋದ ಸುದ್ದಿಗೆ ಬಂದ ಕತೆಗಳು ನೂರಾರು. ಯಾವುಯಾವುದೋ ಘಟನೆಗೆ ಸಾಕ್ಷಿಯಾಗಿ, ಮುಟ್ಟು ಅಂಟುಗಳಿಗೆ ತಳಕು ಹಾಕಿ, ಹಾವಿನ ಪುರಾಣ ಸೃಷ್ಟಿಸುತ್ತಿದ್ದ ಇವರಿಗೆ ಬ್ರಹ್ಮನ ತಲೆಯೂ ಮಣಿಯಬೇಕಿತ್ತು. ಆಗ ಹಾವಿನ ದ್ವೇಷದ ಸುದ್ದಿ ಬಂತು. ರಾಮಾಯ್ಣ, ಮಾಬಾರ್ತದಾಗೇ ನೋಡಿಲ್ವೇ ಹಾವಿನಬಾಣಗಳ ಶಕ್ತಿ. ಒಂದು ಕಿತ ಬುಟ್ಟಾಂದ್ರೆ ತರಗುಟ್ಟೋಗ್ತಿದ್ರು. ಆ ಜ್ವಾಲೆ ಅಂಬೋಳ ಕತೆ ಕೇಳಿಲ್ವೇ, ಸೇಡು ತೀರ್ಸಿಕೊಳ್ಳಾಕೆ, ಸತ್ತರೂ ಹಾವಿನ ಬಾಣ ಆಗಿ, ಅರ್ಜುನನಂತ ಅರ್ಜುನನನ್ನೆ ಸಾಯಿಸ್ಲಿಲ್ವೇ.. ತೆಗೆತೆಗಿ..ರಾಮಾಣ್ಯ, ಮಾಬಾರ್ತ ಅಂತ ನೀ ಯಾವ್ ಕಾಲದ್ ಕತೆ ಯೋಳೀವೆ? ಹಾವುಗಳೂ ಮನುಸರ ರೂಪಾ ಹಾಕ್ಕೊಂಡು ಬರ್ತವೆ. ಮೊನ್ನೆ ನಮ್ಮ ಚಿಗಪ್ಪನ ಊರ್ನಾಗೆ ಯಾರೋ ಹಾವ್ನ ಸಾಯಿಸಿದ್ರಂತೆ. ಅದ್ಕೇ ಹಾವೂ ಮನುಸ್ಯರ ರೂಪ್ದಾಗೇ ಬಂದು ಸೇಡು ತೀರಿಸ್ಕೊಂತಂತೆ.. ಯೇ.. ಅದೇನ್ ಬುಡು ಬುಡು. ಇಲ್ಲಿ ಕ್ಯೋಳು. ಮೊನ್ನೆ ನಮ್ ಬಾಮೈದಾ ಬಂದಿದ್ದ. ಅವ್ನು ಹೊಲ್ದಾಗೆ ಹುಲ್ಲು ಕತ್ರಿಸೋವಾಗ, ಗೊತ್ತಾಗ್ದಂಗೆ ನಾಗಪ್ಪನ ತಲೆ ಕತ್ತರಿಸಾಕವ್ನೆ. ಬೋ ಬಯ ಬಿದ್ದು ಮನೆ ತಾವ್ಕೆ ಓಡಿ ಬಂದು, ಕದ ಇಕ್ಕಂಡವ್ನೆ. ಆದ್ರೆ ಆ ಹಾವಿನ ತಲೆ ಇವನ ಹಿಂದೇನೇ ಬಂದು, ಮನೆ ಮುಂದಿರೋ ಬಿಲದಾಗೆ ಸೇರಿಕೊಂಡೈತೆ. ಇವನು ಈಚಿಕ್ ಬಂದ್ರೆ, ಅವನ್ ಮಾತಿನ್ ಸದ್ದಿಗೇ ಹಾವಿನ್ ತಲೇ ಆಚೀಕ್ ಬರ್ತಿತ್ತಂತೆ. ಅವನು ಹೆದ್ರಿ, ಜರಾನೇ ಬಂದಿದ್ದೋ. ಆಮ್ಯಾಕೆ ಪೂಜೆ ಮಂತ್ರ ಎಲ್ಲಾ ಮಾಡ್ಸಿದ್ ಮ್ಯಾಲೇನೆ ಸರೋಗಿದ್ದು.. ಅಯ್ಯೋ ಯಾವೂರಿಂದೋ ಕತೆ ಯೋನ್ ಯೋಳೀಯೇ, ನಮ್ ಕದ್ರಪ್ಪನ ಗುಡೀ ತಾವ ಯೋಳೆಡೆ ಸರ್ಪ ಐತಂತೆ. ನಮ್ಮ ತಾತ ಯೋಳ್ತಿತ್ತು. ಯಾರಾರ ತಪ್ಪು ಮಾಡೀರೇ, ದ್ಯಾವ್ರಿಗೆ ಅಪಚಾರ ಆದ್ರೆ ಸೈಸ್ಕೊಳಾಕಿಲ್ವಂತೆ.. ಹಿಂಗೇ ಸರೊತ್ತಿನ ತಂಕ ಮುಗಿಯದ ಇವರ ವರ್ಣಮಯ ಕತಾ ಪ್ರಪಂಚದಲ್ಲಿ ಯಾರು ಹೆದರುತ್ತಿದ್ರೋ ಬಿಡ್ತಿದ್ರೋ, ನಾವಂತೂ ಮಕ್ಕಳು ಹೆದ್ರಿ ತೊಪ್ಪೆಯಾಗಿ, ಮುದುರಿ ಅಮ್ಮನ ಮಡಿಲು ಸೇರ್ತಿದ್ವಿ. ಅವತ್ತಿಂದ್ಲೂವೇ ಹಾವೂ ಅಂದ್ರೆ ಒಂದು ವಿಶೇಷ ಜಾಗ ಇದೆ ಮನದ ಬಿಲದಲ್ಲಿ.
ನಾಗರಹಾವೆ ಹಾವೊಳು ಹೂವೆ ಬಾಗಿಲ ಬಿಲದಲಿ ನಿನ್ನಯ ಠಾವೆ ಪಂಜೆ ಮಂಗೇಶರಾಯರ ಈ ಸಾಲುಗಳನ್ನು ಹಾಡುತ್ತಲೇ ಕಳೆದ ಬಾಲ್ಯದ ಕಲ್ಪನೆಯ ಬುತ್ತಿಯಲ್ಲಿ, ಇಚ್ಛಾರೂಪಿ ನಾಗಗಳಿಗೆ ವಿಶೇಷ ಜಾಗವಿದೆ. ಅತೀಂದ್ರಿಯ ಶಕ್ತಿಯುಳ್ಳ ನಾಗಪ್ಪ ನಮ್ಮ ಮನದಲ್ಲಿ ಯಾವತ್ತೂ ಸೂಪರ್ ಹೀರೋ.. ಅಥವಾ ಹೀರೋಯಿನ್ನು. ಕೆಟ್ಟ ಶಕ್ತಿಗಳನ್ನು ನಿಯಂತ್ರಿಸಲು, ಒಳ್ಳೆಯವರ ಕರ ಹಿಡಿಯುವ ಈ ನಾಗಲೋಕದ ನೀರೆಯರು, ತಮ್ಮ ನಾಗರಾಜನನ್ನು ಹುಡುಕಿ ಬುವಿಗೆ ಬರುವ ಕತೆಗಳು ಎಂದೂ ಮರೆಯಲಾಗದ ಚಿತ್ರಗಳು. ಪಂಚಮಿ ಹಬ್ಬದ ನೆನಪಿನೊಂದಿಗೇ ತಳಕು ಹಾಕಿಕೊಂಡ ನೂರಾರು ಕತೆಗಳಲ್ಲಿ ಇವು ಕೆಲವಷ್ಟೆ.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.