“ನಾನು ನನಗಿಂತ ಎರಡು ಅಡಿ ಉದ್ದ ಇದ್ದ ಇವನ ಆಕಾರವನ್ನೂ ಇವನ ಮಾತಿನ ದರ್ಪವನ್ನೂ ನೋಡಿ ಕೊಂಚ ಹೆದರಿ “ನನಗೆ ದಂಗೆ” ಎಂದರೇನೆಂಬುದೇ ತಿಳಿಯದು. ‘ಟೊಂಗೆ’ ಎಂಬ ಶಬ್ದ ಮಾತ್ರ ಗೊತ್ತು. ನಾನೊಬ್ಬ ಬಡವ; ಮನೆಗೆ ಹೋಗಲು ಇಲ್ಲಿಗೆ ಬಂದೆ” ಎಂದು ಅವನೊಡನೆ ಹೇಳುತ್ತಿದ್ದಾಗಲೇ ಇನ್ನೊಬ್ಬ ಸಿಪಾಯಿ ಬಂದು ‘ನಮ್ಮ ಭೀತಿ ಇಲ್ಲದೆ ಈ ಬಂದೂಕು ಹೀಗೆ ಹಿಡಿದುಕೊಂಡಿರುವೆಯಲ್ಲ! ಎಲಾ ಗಡ್ಡದವನೇ! ನಿನಗೆಷ್ಟು ಸೊಕ್ಕೋ!” ಎಂದು ಕೇಳಿದ.
ನಾನು : “ಈ ದಂಬೂಕು ನನ್ನದು; ಅದನ್ನು ಹೊತ್ತ ಹೆಗಲು ನನ್ನದು. ಹಾಗಿರುವಾಗ ನನ್ನ ದಂಬೂಕು ನಾನು ಹಿಡಿದುಕೊಳ್ಳಲು ನಿಮ್ಮ ಭೀತಿ ಏನು? ಹೊಳೆ ನೀರಿಗೆ ಡೊಣ್ಯಪ್ಪ ನಾಯಕನ ಅಪ್ಪಣೆಯೇ?”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು‘ ಸರಣಿಯ ಎಂಟನೆಯ ಕಥಾನಕ
ನಾಟಕ ನೋಡಿ ಅಲ್ಲಿಂದ ಹೊರಬಂದು ಮುಂದೆ ಸಾಗುವಾಗ ಅಲ್ಲೊಂದು ದೊಡ್ಡ ಮೈದಾನು. ಅಲ್ಲಿ ಹಲವು ಮಂದಿ ಇರುವೆ ಸಾಲುಗಟ್ಟಿದಂತೆ ಸಾಲಾಗಿ ನಿಂತಿದ್ದರು. ತಲೆಗೆ ಕೆಂಪು ರುಮಾಲು; ಮೈಗೆ ಕಪ್ಪು ಅಂಗಿ ಚಲ್ಲಣ. ಅವರ ಕೈಯಲ್ಲಿ ನನ್ನ ಕೋವಿಯಾಕಾರದ ಏನೋ ಒಂದಿತ್ತು. ಪಕ್ಕದಲ್ಲೇ ಕೈಕೋಳ, ದೊಣ್ಣೆ. ನಾನು ಅಲ್ಲೇ ನಿಂತು ನೋಡುತ್ತಿದ್ದ ಇನ್ನೊಬ್ಬನೊಡನೆ ಇದೇನೆಂದು ಕೇಳಿದೆ. ಅವನು, “ಯಾರೋ ಭಾರಿ ಆಫೀಸರರು ಬರುತ್ತಾರಂತೆ; ಅದಕ್ಕಾಗಿ ಅವರ ಮುಂದೆ “ಕಬಾತು” ಮಾಡಿ ತೋರಿಸಲಿಕ್ಕೆ ಈ ಪೋಲೀಸರು ಆ “ಕಬಾತ್” ಅಭ್ಯಾಸವನ್ನು ಗಟ್ಟಿ ಮಾಡುತ್ತ ಇದ್ದಾರೆ” ಅಂದ.
ನಾನು : “ಕಬಾಬು” ಅಂದರೆ? ಇವರಿಗೆ ಕಬಾಟು ಬಾಗಲು ಕಿಡಿಕಿ ಮೊದಲಾದವನ್ನು ಮಾಡಲಿಕ್ಕೂ ಅಭ್ಯಾಸ ಮಾಡಿಸುತ್ತಾರೆಯೇ?”
ಅವನು : “ಹಾಗಲ್ಲವಯ್ಯ ‘ಕಬಾಟು’ ಅಲ್ಲ; ‘ಕವಾಯತು”
ನಾನು : “ಅದು ಸಾಯಲಿ; ಅವರ ಕೈಯಲ್ಲಿ ಇದೆಯಲ್ಲ, ಅದೇನು?”
ಅವನು : “ದಂಬೂಕು (ಬಂದೂಕು)”
ನಾನು : “ನನ್ನ ಹೆಗಲ ಮೇಲೆ ಇರುವುದೇನು?”
ಅವನು : “ಅದೂ ದಂಬೂಕು”
ನಾನು : “ಕೋವಿ ಅಲ್ಲವೇ?”
ಅವನು : “ಶುದ್ಧ ತಪ್ಪು; ಕೋವಿಯಲ್ಲ – ದಂಬೂಕು”
ನಾನು : “ಹಾಗಾದರೆ ಕೋವಿಗೂ ದಂಬೂಕಿಗೂ ಏನು ಹೆಚ್ಚು ಕಡಿಮೆ?”
ಅವನು : “ಇಲಿ ಹೆಗ್ಗಣ ಹಕ್ಕಿ ಹೊಡೆದರೆ ಅದು “ಕೋವಿ” ; ಮನುಷ್ಯ, ಮಂಗ, ಮೃಗಗಳನ್ನು ಹೊಡೆದರೆ ಅದು ‘ದಂಬೂಕು’
ನಾನು : “ಇದು ಇಲಿ ಹೆಗ್ಗಣ ಹಕ್ಕಿಯನ್ನೂ ಹೊಡೆಯುವುದಿಲ್ಲ;ಮನುಷ್ಯ ಮಂಗ ಮೃಗಗಳನ್ನೂ ಹೊಡೆಯುವುದಿಲ್ಲ”
ಅವನು : “ಅದರೂ ಇದು ದಂಬೂಕೇ! ಏನೋ ಕೆಟ್ಟು ಹೋಗಿರಬಹುದು; ಸರಿ ಮಾಡಿಸು”
ನಾನು : “ಸರಿಯಾಗಿ ಇದ್ದಾಗಲೂ ಹೊಡೆದು ನೋಡಿದ್ದೇನೆ; ಒಂದು ನುಸಿಯೂ ಸಾಯಲಿಲ್ಲ!”
ಅವನು : “ಬ್ರಹ್ಮಾಸ್ತ್ರದಿಂದಲೂ ಆ ನುಸಿ ಸಾಯಬಾರದೆಂದೇ ಬ್ರಹ್ಮನ ವರ; ಎಲ್ಲ ಮುನಿಸಿಪಾಲಿಟಿಗಳ ಯಾವತ್ತು ಮನೆ, ಸ್ಥಳಗಳಲ್ಲಿಯೂ ಅದು ವಂಶಪರಂಪರೆಯಾಗಿ ಬಾಡಿಗೆ ಇಲ್ಲದೆ ಸುಖ ಸಂಸಾರ ಮಾಡಿಕೊಂಡಿರಲೆಂದೇ ವಿಷ್ಣುವಿನ ವರ; ಕ್ಷಣಕ್ಷಣಕ್ಕೂ ಅದರ ಮಕ್ಕಳು ಮರಿಗಳು ಲಕ್ಷಗಟ್ಟಲೆಯಲ್ಲಿ ಹೆಚ್ಚಿ, ಹಗಲಿರುಳೂ ಮನುಷ್ಯನ ಮೈ ಕೈ ಕಡಿದು, ನಿದ್ರಾಭಂಗ ಮಾಡಿ, ಅವನ ಅಹಂಕಾರ ಮುರಿಯಲೆಂದೇ ಮಹೇಶ್ವರನ ವರ ಎಂದು ನಮ್ಮ ಅಜ್ಜಿ ಹೇಳುತ್ತಿದ್ದಳು. ಹಾಗಾದ್ದರಿಂದ, ದಂಬೂಕಿನ ಏಟಿಗೆ ನುಸಿ ಎಂದಿಗೂ ಸಾಯದು. ಅದು ಹ್ಯಾಗೂ ಇರಲಿ; ಈಗ ನೀನು ಇದು ದಂಬೂಕೇ, ಕೋವಿಯೋ ಎಂಬ ಸಂಶಯ ತಂದು ಹಾಕಿದ್ದರಿಂದ, ಅದನ್ನು ಸೂಕ್ಷ್ಮವಾಗಿ ನೋಡಿ ಹೇಳಬೇಕಾಯಿತು. ನಿನ್ನ ಕೋವಿಯನ್ನಿತ್ತ ತಾ!”
ನಾನು ಕೋವಿಯನ್ನು ಅವನ ಕೈಗೆ ಕೊಟ್ಟೆ. ಅವನು ತಿರುಗಿಸಿ ನೋಡಿ ಪರೀಕ್ಷಿಸಿ ‘ಇದು ಹಳೆಯದು; ಹರುಕು ಮುರುಕು; ಸವೆದು ಹೋಗಿದೆ; ಮಣ್ಣೂ ಹಿಡಿದಿದೆ; ಆದರೂ ಇದು ದಂಬೂಕೇ ಹೌದಯ್ಯ’ ಎಂದು ಹೇಳಿ ಅಲ್ಲಿಂದ ತನ್ನ ಕೆಲಸಕ್ಕೆ ಹೊರಟು ಹೋದ.
ಅಷ್ಟರಲ್ಲಿ ಪೋಲೀಸರ “ಕಬಾಟು” ಭರದಿಂದ ಆರಂಭವಾಗಿತ್ತು; ಯಾರೋ ಒಬ್ಬನೇ ಬೇರೆಯಾಗಿ ಎದುರಿಗೆ ನಿಂತು ಯಾವ ಭಾಷೆಯಲ್ಲಿಯೋ ಏನೇನೋ ಹೇಳುತ್ತಿದ್ದ. ನಾನು ಕೊಂಚ ದೂರದಲ್ಲಿ ನಿಂತುಕೊಂಡು ಇದ್ದದ್ದರಿಂದ ಅವನು ಗಟ್ಟಿಯಾಗಿ ಒದರುವ ಶಬ್ದಗಳು ಮಾತ್ರ ಕೇಳಿಸುತ್ತಿದ್ದುವು. ಅವನು ಮೊದಲು – “ಟಿಂಚನ್” (ಅಂದರೆ “ಎಟೆನ್ಶನ್” = ಲಕ್ಷ್ಯ) ಅಂದ; ಸರಿ; ಪೋಲೀಸರೆಲ್ಲರೂ ಕಣ್ಣು ಅರಳಿಸಿ, ರೆಪ್ಪೆ ಹಾಕದೆ, ಮುಖ ತಲೆ ಎತ್ತಿ, ಕೈಕಾಲು ಜೋಡಿಸಿ, ಮರಕಟ್ಟಿದ ಹಾಗೆ, ಚಿತ್ತಾರದ ಗೊಂಬೆಗಳ ಹಾಗೆ ಮೌನವಾಗಿ ನೆಟ್ಟಗೆ ನಿಂತರು. ‘ಟಿಂಚನ್’ ಅಂದರೆ ಎಲ್ಲಿ ಅಲ್ಲಿ ನೆರೆದವರಿಗೆಲ್ಲ ಕಾಂಚಾನ ಕೊಡುವರೋ ಎಂದು ನಾನು ಹಾರೈಸಿಕೊಂಡಿದ್ದದ್ದು ವ್ಯರ್ಥವಾಯಿತು.
ಆ ಮೇಲೆ ಅವನು ಒಂದೊಂದೇ ಶಬ್ದ ಹೇಳುತ್ತಾ ಹೋದ; ಅವರು ಅಭ್ಯಾಸ ಮಾಡುತ್ತಾ ಬಂದರು. ಅವರು ದಂಬೂಕು ಎತ್ತಿದರು; ಹೆಗಲಿಗೇರಿಸಿದರು; ಇಳಿಸಿದರು; ಮರಳಿ ದಂಬೂಕು ಎತ್ತಿ ಮುಂದಕ್ಕೆ ಹಿಡಿದರು. ಅವರು ಗುಂಡು ಹಾರಿಸಿ ಅದು ನನಗೆ ತಗುಲಬಹುದೆಂದು ನನ್ನ ಎದೆಯಲ್ಲಿ ಅವಲಕ್ಕಿ ಕುಟ್ಟತೊಡಗಿ ನಾನು ನಿಂತಲ್ಲಿಂದ 10 ಮಾರು ಹಿಂದೆ ಸರಿದೆ. ಆ ಮೇಲೆ ಅವರು ದಂಬೂಕು ಹಾರಿಸದ್ದನ್ನು ಕಂಡು, “ನನ್ನ ಕಡೆಗೆ ಗುರಿ ಇಟ್ಟು ಹೊಡೆಕೊಂಡು ತಿರುಗಿ ಮೊದಲಿದ್ದಲ್ಲಿಗೇ ಬಂದು ನಿಂತೆ. ಆಗ – ನಮ್ಮೂರಲ್ಲಿ ಮಣ್ಣು ತುಳಿಯುತ್ತಾರಲ್ಲ ಕುಂಬಾರರು. ಹಾಗೆ ‘ಲೈಟ್’ (‘ರೈಟ್=ಬಲಗಾಲು) “ಲಪಾಟ್” (“ಲೆಫ್ಟ್” = ಎಡಗಾಲು) ಅಂತ ಬಾಯಲ್ಲಿ ಹೇಳಿಕೊಂಡು ಇವರೆಲ್ಲ ಕಾಲು ಬಡಿಯುತ್ತಿದ್ದರು. ಆ ಮೇಲೆ ಅವನು “ಕುಯಿಕ್ ಮಾರ್ಚಿ” (“ಕ್ವಿಕ್ ಮಾರ್ಚ್”= ಬೇಗ ನಡೆಯಿರಿ) ಅಂದ ಕೂಡಲೇ ಅವರು ಬೇಗ ಬೇಗ ಧಡಬಡ ನಡೆದರು. ‘ರೈಟ್ ಅಬೊಟ್ರನ್’ (‘ರೈಟ್ ಎಬೌಟ್ ಟರ್ನ್’= ಬಲ ದಿಕ್ಕಿಗೆ ತಿರುಗಿ) ಎಂದ ಕೂಡಲೇ ಬಲ ದಿಕ್ಕಿಗೆ ತಿರುಗಿದರು. ‘ದಸ್ಬಸ್’ (‘ಡಿಸ್ಬರ್ಸ್=ಚೆದುರಿ) ಅನ್ನುತ್ತಲೇ ಎಲ್ಲರೂ ಅಲ್ಲಿಂದ ಹೊರಡಲಾರಂಬಿಸಿದರು.
ನಾನು ಅಲ್ಲಿಂದ ಹೊರಟು ನಾಲ್ಕು ಹೆಜ್ಜೆ ಮುಂದೆ ಬರುವುದರೊಳಗಾಗಿ ನನ್ನ ಹಿಂದಿನಿಂದ ಒಬ್ಬ ಗಿಡ್ಡ ಮನುಷ್ಯ ಬಂದು, ತುದಿಗಾಲ ಮೇಲೆ ನಿಂತು ಉದ್ದ, ಮನುಷ್ಯನಾಗಿ ನನ್ನ ಕಿವಿಯಲ್ಲಿ ‘ನೀನು ಡಿಟೆಕ್ಟಿವನೋ?’ (ಪತ್ತೆದಾರ) ಎಂದು ಮೆಲ್ಲಗೆ ಕೇಳಿದ. ನಾನು ತಿರುಗಿ ನೋಡಿ, ‘ನಾನು ಟಕ್ಕಿನವ’ನೋ ಎನ್ನಲು ನೀನು ಯಾರು?’ ಎಂದು ಕೇಳಿದೆ.
“ನಾನು ಈ ಊರ ಹೆಡ್ ಕಾನ್ಸ್ಟೇಬಲ್” ಎಂದು ಅವನು ಗರ್ವದಿಂದ ನುಡಿಯುತ್ತಲೇ ‘ಓಹೋ! ನೀನೇಯೋ – ಆ ಹೆಡ್ಡ – ಕನಿಷ್ಟ-ಅಬಲ?’ ನನ್ನ ವಿಚಾರ ನಿನಗೆ ಬೇಡ; ಸುಮ್ಮನೆ ಹೋಗು’ ಎಂದು ಗದರಿಸಿದೆ. ಅವನು ಹೊರಟುಹೋದ.
ಆ ಮೇಲೆ ಎರಡು ಹೆಜ್ಜೆ ಹಾಕುವಷ್ಟರಲ್ಲೇ ಒಬ್ಬ ಬಂದು – ‘ಇಲ್ಲಿನ ದಫೇದಾರ ನಾನು; ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ನೀನೆಲ್ಲಿಗೆ ಹೊರಟೆ? ಹೇಳು!’ ಎಂದು ಕೇಳಿದ.
ನಾನು : “ಏನಯ್ಯ! ಇದು ಬಂದೂಕಲ್ಲ; ದಂಬೂಕೆಂಬುದು ನಿನಗೆ ತಿಳಿಯದೆ? ನನ್ನ ವಿಚಾರ ನಿನಗೆ ಬೇಡ; ಸುಮ್ಮನೆ ಹೋಗು!”
ದಫೆ : ‘ಸುಮ್ಮನೆ ಹೋಗು?’ ಮುಚ್ಚು ಬಾಯಿ ಕಳ್ಳ! ಈ ಬಂದೂಕು ಹಿಡಿದುಕೊಂಡು ನೀನೇನು ಇಲ್ಲಿ ದಂಗೆ ಎಬ್ಬಿಸಲು ಬಂದಿರುವೆಯ?”
ನಾನು ನನಗಿಂತ ಎರಡು ಅಡಿ ಉದ್ದ ಇದ್ದ ಇವನ ಆಕಾರವನ್ನೂ ಇವನ ಮಾತಿನ ದರ್ಪವನ್ನೂ ನೋಡಿ ಕೊಂಚ ಹೆದರಿ “ನನಗೆ ದಂಗೆ” ಎಂದರೇನೆಂಬುದೇ ತಿಳಿಯದು. ‘ಟೊಂಗೆ’ ಎಂಬ ಶಬ್ದ ಮಾತ್ರ ಗೊತ್ತು. ನಾನೊಬ್ಬ ಬಡವ; ಮನೆಗೆ ಹೋಗಲು ಇಲ್ಲಿಗೆ ಬಂದೆ” ಎಂದು ಅವನೊಡನೆ ಹೇಳುತ್ತಿದ್ದಾಗಲೇ ಇನ್ನೊಬ್ಬ ಸಿಪಾಯಿ ಬಂದು ‘ನಮ್ಮ ಭೀತಿ ಇಲ್ಲದೆ ಈ ಬಂದೂಕು ಹೀಗೆ ಹಿಡಿದುಕೊಂಡಿರುವೆಯಲ್ಲ! ಎಲಾ ಗಡ್ಡದವನೇ! ನಿನಗೆಷ್ಟು ಸೊಕ್ಕೋ!” ಎಂದು ಕೇಳಿದ.
ನಾನು : “ಈ ದಂಬೂಕು ನನ್ನದು; ಅದನ್ನು ಹೊತ್ತ ಹೆಗಲು ನನ್ನದು. ಹಾಗಿರುವಾಗ ನನ್ನ ದಂಬೂಕು ನಾನು ಹಿಡಿದುಕೊಳ್ಳಲು ನಿಮ್ಮ ಭೀತಿ ಏನು? ಹೊಳೆ ನೀರಿಗೆ ಡೊಣ್ಯಪ್ಪ ನಾಯಕನ ಅಪ್ಪಣೆಯೇ?”
ಈ ಮಾತು ಕೇಳಿ ಸಿಪಾಯಿಯ ಮುಖದ ಮೇಲೆ ಸಿಟ್ಟು ಕುಣಿಯುತ್ತಾ ಇದ್ದದ್ದು ಕಂಡಿತು. ಸಿಟ್ಟು ಮಾಡಿ ಕೆಟ್ಟು ಹೋದವರ ಕಥೆ ನೆನಪಾಯಿತು. ಊರ್ವಶಿ ಮೇಲೆ ಸಿಟ್ಟು ಮಾಡಿ ಅರ್ಜುನ ಕೆಟ್ಟ; ಶೂರ್ಪನಖಿ ಮೇಲೆ ಕೋಪಿಸಿಕೊಂಡು ರಾಮ ಹಾಳಾದ; ದ್ರೌಪದಿ ಮೇಲೆ ಮುನಿಸು ತೋರಿಸಿ ಕೌರವ ರಾಜ್ಯ ಕಳೆದುಕೊಂಡ; ಇನ್ನು ಹೆಂಡತಿ ಮೇಲೆ ರೇಗಿಕೊಂಡು ಗಂಡ, ಹುಡುಗರ ಮೇಲೆ ಕ್ರೋಧ ತಾಳಿ ಐಗಳು – ತೊಂದರೆಗೆ ಗುರಿಯಾದ್ದುಂಟು. ಹಾಗೆ ಅಂಥಂಥವರ ಪಾಡೇ ಇಂಥಿಂಥದಾಗಿರುವಾಗ, ಇನ್ನು ಈ ಸಿಪಾಯಿಯ ಪಾಡೇನು? ಇವನೂ ಕೋಪ ಮಾಡಿಕೊಂಡು ವೃಥ ಕೆಟ್ಟು ಹೋಗುತ್ತಾನಲ್ಲ! ಎಂತ ಮನಸ್ಸಿನಲ್ಲೇ ಯೋಚಿಸಿ – “ಸಿಟ್ಟು ಬಂತೇ, ಅದನ್ನು ಕಟ್ಟಿಕೊಳ್ಳಬೇಡಯ್ಯ! ನಮ್ಮ ಅಜ್ಜಿ ಮೇಲೆ ಅಜ್ಜ ಸಿಟ್ಟು ಮಾಡಿ ಜಗಳವಾಡಿ, ಎದೆಯೊಡೆದು, ಆಗಲೇ ನೆಗೆದು ಬಿದ್ದು ಹೋದ!” ಅಂದೆ.
ಸಿಪಾಯಿ : ‘ಹೊಟ್ಟೆ ಉರಿಯುವ ಮಾತಿಗೆ ಸಿಟ್ಟು ಯಾಕೆ?’ ಎಂದು ‘ಚಕ್ಕಂದವಾಡಲು ನೋಡುತ್ತೀಯಾ? ಮಾತು ಮರೆಸಿದರೂ ಬಂದ ಕೆಲಸ ಮರೆಯುವವ ನಾನಲ್ಲ. ಈಗ ಹೇಳು! ನಿನ್ನ ಕೈಯಲ್ಲಿ ಆ ಬಂದೂಕು ಇದೆಯಲ್ಲ…’
ನಾನು : (ಅರ್ಧದಲ್ಲೇ ತಡೆದು) “ಯಾವ ಬಂದೂಕು? ಬಂದೂಕು? ಚಿಃ! ಇದು ದಂಬೂಕು!”
ಸಿಪಾಯಿ : “ಹಾಗೂ ಆಗಲಿ; ಅದಕ್ಕೆ “ಲೈಸನ್” ಇದೆಯೇ? ಹೇಳು!”
ನಾನು : “ಬಂದೂಕಿಗಾದರೆ ‘ನ್ಯೂಸೆನ್ಸ್’ (ಜನೋಪದ್ರವ ಎಂದರ್ಥ) ಬೇಕಾದೀತು; ದಂಬೂಕಿಗೂ ಬೇಕೇ?”
ಸಿಪಾಯಿ : “ನ್ಯೂಸೆನ್ಸ್’ ಅಲ್ಲ; ‘ಲೈಸೆನ್ಸ್!’ ಅಂದರೆ ಇದನ್ನು ಹಿಡಿಯಲು ಸರಕಾರದ ಅಪ್ಪಣೆ! ಅದನ್ನು ಪಡೆದಿದ್ದೀಯ?”
ನಾನು : ‘ನಾನರಿಯೆ; ನಾನಾಗಿ ಕೇಳಿದ್ದಿಲ್ಲ; ಬೇರೆಯವರಾಗಿ ಹೇಳಿದ್ದಿಲ್ಲ – ನನ್ನ ಕೈಯಲ್ಲಿ ನನ್ನ ದಂಬೂಕು ಹಿಡಿಯಲಿಕ್ಕೆ ‘ನಾನ್ಸೆನ್ಸ್’ (ಅರ್ಥವಿಲ್ಲದ್ದು) ಬೇಕೆಂದು ನನಗೇನು ಗೊತ್ತು?’
ಸಿಪಾಯಿ : ‘ನಾನ್ಸೆನ್ಸ್’ ಅಲ್ಲವಯ್ಯ; ‘ಲೈಸೆನ್ಸ್’ ಎಂದು ಎಷ್ಟು ಸಲ ಹೇಳಬೇಕು? ‘ಲೈಸೆನ್ಸ್’ ಇಲ್ಲದೆ ಇದನ್ನು ಹಿಡಿಯಲಿಕ್ಕೆ ಇದು ನಿಮ್ಮ ಹಿಂದಿನ ದೊರೆ ಟಿಪ್ಪು ಸುಲ್ತಾನರ ದರಬಾರಲ್ಲ; ಕುಂಪಣಿ ಸರಕಾರದ ದವಲತ್ತು. ಈಗ ನೀನು “ಲೈಸನ್” ಇಲ್ಲದೆ ಬಂದೂಕು ಹಿಡಿದಿದ್ದರೆ ದೊಡ್ಡ ಮೊಕದ್ದಮೆಯಾಗಿ ನಿನಗೆ ಮಾತ್ರವಲ್ಲ – ನಿನ್ನ ಹೆಂಡತಿ, ತಾಯಿ ಮೊದಲಾದವರಿಗೆಲ್ಲ ಗಡಿಪಾರು ಶಿಕ್ಷೆಯೋ ನೇಣು ಹಾಕುವ ದಂಡನೆಯೋ ಆಗಿ ಹೋಗುತ್ತದೆ.”
ಕೆಲವರಿಗೆ ಅವರ ತಾಯಿಯರನ್ನು ದೂಷಿಸಿದರೆ, ಬೈದರೆ ಅವಮಾನಿಸಿದರೆ ಪರಮ ಸಂತೋಷ; ಅದೇ ಹೆಂಡಂದಿರ ಮಾತೆತ್ತಿದರೆ ಮಹಾ ಕೋಪ. ನನಗೆ ಎರಡೂ ಇಲ್ಲ; ನಾನೆಂದೆ-
‘ಅಷ್ಟು ಮಾಡು ಮಹಾರಾಯ! ನನ್ನ ಹೆಂಡತಿಯನ್ನು ಮೊದಲು ಗಡೀಪಾರು ಮಾಡಿಸು; ಆ ಮೇಲೆ ಅವಳ ತಾಯನ್ನು ನೇಣು ಹಾಕಿಸು; ಆದರೆ ನನ್ನನ್ನು ಮಾತ್ರ ಬಿಟ್ಟುಬಿಡು; ನಿನ್ನ ಹೆಸರು ಹೇಳಿಕೊಂಡು ಬದುಕಿರುತ್ತೇನೆ.”
ಸಿಪಾಯಿ : “ಅದೆಲ್ಲ ಭೋಗಾರದುಃಖ ಬೇಡ; ಲೈಸನ್ಸ್’ ಇದೆಯೋ ಇಲ್ಲವೋ ಅಷ್ಟು ಹೇಳು.”
ಸಿಪಾಯಿಯ ಮಾತುಗಳೆಲ್ಲ ನನಗೆ ಆಶ್ಚರ್ಯವಾಗಿ ತೋರಿದುವು. ‘ಆ ಒಳ್ಳೆ ದೊರೆ ಟಿಪ್ಪು ಸುಲ್ತಾನರ ಆಳಿಕೆ ಕಾಲದಲ್ಲಿ ಆ ಗ್ರಾಮದ ನಾವೆಲ್ಲ ಆತನ ಪ್ರಜೆಗಳಾಗಿ ಅಂಥದೇನೂ ಕುಂದುಕೊರತೆ ಇಲ್ಲದೆ, ಅಂಥದೇನೂ ತೆರಿಗೆ ಕಂದಾಯದ ಭಾರ ಇಲ್ಲದೆ, ಇದ್ದದ್ದರಲ್ಲಿ ಸುಖಜೀವನ ಮಾಡುತ್ತ ಇದ್ದದ್ದು ನನಗೆ ಗೊತ್ತಿತ್ತು. ಆತ ಮುಸಲ್ಮಾನನಾಗಿದ್ದರೂ ಹಿಂದೂ ದಿವಾನ (ಮುಖ್ಯ ಮಂತ್ರಿ) ರನ್ನೇ ನೇಮಿಸಿಕೊಂಡಿದ್ದ; ಹಲವು ಹಿಂದೂ ದೇವಸ್ಥಾನಗಳಿಗೆ ಉಂಬಳಿ ಉತ್ತಾರ ಬಿಟ್ಟಿದ್ದ; ಶೃಂಗೇರಿ ಶಾರದಾ ಪೀಠವನ್ನು ಸುಲಿಯಲು ಮರಾಠಿಯವರು ಬರುತ್ತಾರೆ ಎಂದು ಕೇಳಿದಾಗ “ನಾನಿದ್ದೇನೆ; ಹೆದರಬೇಡಿ” ಅಂತ ಧೈರ್ಯ ಹೇಳಿದ್ದ; ತನ್ನ ದೇಶ ಅತಂತ್ರವಾಗಬಾರದು, ತನ್ನ ಉಸಿರಾಡುವವರೆಗೂ ಪರಾಧೀನವಾಗಲು ಬಿಡಬಾರದು ಎಂಬ ಪ್ರತಿಜ್ಞೆ ಮಾಡಿದವರಂತೆ ತನ್ನ ದೇಶದ ಮೇಲಿನ ಅಭಿಮಾನದಿಂದ ಯಾವ ಕಪ್ಪು ಬಿಳೀ ಶತ್ರುಗಳಿಗೂ ಡೊಗ್ಗು ಸಲಾಂ ಹಾಕದೆ, ಅವರ ವಿರುದ್ಧ ಯುದ್ಧಕ್ಕೇ ಹೊರಟಿದ್ದ – ಎಂಬುದನ್ನು ಜನರ ಬಾಯಿಂದ ಕೇಳಿದ್ದೆ. ಅಂಥ ಸುಲ್ತಾನನನ್ನು ಫಿರಂಗಿಯವರು ದಂಬೂಕಿನಿಂದ ಹೊಡೆದು ಬಿಟ್ಟಿದ್ದರೆ?’ ಎಂದು ಯೋಚಿಸುತ್ತಿದ್ದಾಗ, ಸಿಪಾಯಿ – ‘ಒಳ್ಳೆಮಾತಿನಲ್ಲಿ ‘ಲೈಸನ್ಸ್’ ತೋರಿಸು; ಇಲ್ಲದಿದ್ದರೆ ನಿನ್ನ ಮೇಲೆ ರಾಜದ್ರೋಹ’ದ ದೊಡ್ಡ ಮೊಕದ್ದಮೆಯಾಗುವುದು. ಆ ಕಟ್ಟಿ (ಆಕ್ಟು=ಕಾಯಿದೆ) ನಲ್ಲಿ ಹಾಗೇ ಇದೆ” ಎಂದು ಅಬ್ಬರಿಸಿದ.
ನಾನು : “ನನ್ನ ದಂಬೂಕಿಗಿರುವುದು ಒಂದೇ ಹಿತ್ತಾಳಿ ಕಟ್ಟು; ತೋರುವುದಿಲ್ಲವೇ?”
ನಮ್ಮಿಬ್ಬರೊಳಗೆ ಹೀಗೆ ಮಾತುಕಥೆ ನಡೆಯುತ್ತಿರುವಾಗಲೇ, ಮತ್ತೊಬ್ಬ ಸಿಪಾಯಿ ನನ್ನ ಕಡೆಗೆ ಬಂದ; ಅವನ ಹಿಂದೆ ಬಿಳಿ ಫಿರಂಗಿಯವನೊಬ್ಬನೂ ಬಂದ. ಅವನು ಕ್ಷಣ ಕಾಲ ನನ್ನನ್ನು ಪಾದದಿಂದ ತಲೆಯವರೆಗೂ ಚೆನ್ನಾಗಿ ನೋಡಿ ‘ಅರಿಷ್ಟ (‘ಎರೆಸ್ಟ್’=ಕೈದು ಮಾಡು) ಎಂದು ಆ ಸಿಪಾಯಿಗಳಿಗೆ ಹೇಳಿ ಹೊರಟು ಹೋದ. ಅವರು ನನ್ನ ದಂಬೂಕನ್ನು ಕಸಿದುಕೊಂಡರು. ಇದೆಂಥ ‘ಅರಿಸ್ಟ’ ಕೆಲಸ ಮಾಡುತ್ತೀರೆಂದರೂ ಕೇಳದೆ, ‘ದಮ್ಮಯ್ಯ, ಬೇಡ’ ಎಂದರೂ ಬೇಡಿ ತೊಡಿಸಿದರು. ‘ಯಾಕೆ, ಏನು ಮಾಡುತ್ತೀರಿ?’ ಎಂದಾಗ ‘ನಡೆಯೋ, ಬಾಯಿ ಮುಚ್ಚಿಕೊಂಡು’ ಎಂದು ನನ್ನ ಕತ್ತು ಹಿಡಿದು ತಳ್ಳಿದರು. ನಾನು ನಿರುಪಾಯನಾಗಿ ಅವರೊಡನೆ ಹೋದೆ. ನನ್ನ ಹಿಂದೆಯೊಬ್ಬ ಸಿಪಾಯಿ; ಮುಂದೆಯೊಬ್ಬ ಸಿಪಾಯಿ; ಮಧ್ಯದಲ್ಲಿ ನಾನು – ಅಶೋಕವನದ ಹನುಮನ ಹಾಗೆ.”
ಕಥೆಯ ಹಿನ್ನೆಲೆ
1947 ರಲ್ಲಿ ಪ್ರಕಟವಾದ ‘ಮುರುಕು ದಂಬೂಕು’ ಕಾದಂಬರಿ ‘ರಿಪ್ ವ್ಯಾನ್ ವಿಂಕಲ್’ ಕತೆಯಿಂದ ಪ್ರೇರಿತವಾದ ಕಾದಂಬರಿ. ಇದನ್ನು ಹುರುಳಿ ಭೀಮರಾಯರು ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸುವ ಪ್ರಚ್ಛನ್ನ ಉದ್ದೇಶದಿಂದ ಬರೆದಿರಬಹುದೆನ್ನುವುದಕ್ಕೆ ಕಥಾನಕದಲ್ಲಿ ಸಾಕ್ಷಿಗಳು ಸಿಗುತ್ತವೆ. ಈ ಕಾದಂಬರಿಯ ನಾಯಕ ವಿ. ಚಿತ್ರಮೂರ್ತಿಯು ಪತ್ನಿ ಮತ್ತು ಅತ್ತೆಯನ್ನು ಬೆದರಿಸಲು, ಬೇರೆ ಮದುವೆ ಮಾಡಿಕೊಂಡು ಬರುವೆನೆಂಬ ಸುದ್ದಿ ಹಬ್ಬಿಸಿ ನಾಲ್ಕು ದಿನದ ಮಟ್ಟಿಗೆ ತನ್ನ ಬಾಲ್ಯ ಸ್ನೇಹಿತನ ಮನೆಗೆ ಹೊರಡುತ್ತಾನೆ. ದಾರಿಯಲ್ಲಿ ಒಬ್ಬ ಅಪರಿಚಿತ ಮುದುಕ ಸಿಕ್ಕಿ, ಅವನು ತಂದಿದ್ದ ಮದ್ಯವನ್ನು ಮೂರ್ತಿ ಕುಡಿದು ಐವತ್ತು ವರ್ಷಗಳ ನಿದ್ದೆಗೆ ಬೀಳುತ್ತಾನೆ.
ಈ ಪ್ರಸಂಗವನ್ನು ಸಾಂಕೇತಿಕವಾಗಿ ಸ್ವೀಕರಿಸಿದರೆ ಪರಕೀಯರು ಬಂದು ನಮ್ಮನ್ನು ವಂಚಿಸಿ, ನಮ್ಮನ್ನು ನಿದ್ದೆಗೆ ತಳ್ಳಿದ್ದನ್ನು ಇದು ಸೂಚಿಸುತ್ತದೆ. “ಕ್ರಮಶಃ ದೆಸೆದಿಕ್ಕೆಲ್ಲಿ, ಆಗಸವೆಲ್ಲಿ, ಎಲ್ಲಿ ಭೂಮಿ ಎಂಬಂತೆ ಹಬ್ಬಿತು ತಮ!” ಎಂದು ಮೂರ್ತಿ ಈ ಸಂದರ್ಭದಲ್ಲಿ ಹೇಳುತ್ತಾನೆ. ಅವನಿಗೆ ಎಚ್ಚರವಾದಾಗ ಬ್ರಿಟಿಷರ ಆಡಳಿತ ವ್ಯವಸ್ಥೆ ಊರಿನಲ್ಲಿ ಜಾರಿಯಲ್ಲಿತ್ತು. ಮೊದಲು ಬಿಳಿಯರಿಂದಲೇ ಬಂದಿದ್ದ ಕೋವಿಯನ್ನು ಮೂರ್ತಿ ಹಿಡಿದುಕೊಂಡಿದ್ದ. ಅದೀಗ ಗೆದ್ದಲು ಹಿಡಿದು ಹರಕು ಮುರುಕಾಗಿ ಹೋಗಿತ್ತು. ಅದನ್ನು ಬಂದೂಕು ಎನ್ನದೆ ‘ದಂಬೂಕು’ ಎಂದೇ ಮೂರ್ತಿ ಹೇಳುತ್ತಿರುತ್ತಾನೆ. ಬಂದೂಕು ಹಿಡಿದುಕೊಂಡುದಕ್ಕಾಗಿ ಮೂರ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಮೂರ್ತಿಯ ಮುರುಕು ದಂಬೂಕು ಮತ್ತು ಉದ್ದನೆಯ ಗಡ್ಡ ಇವುಗಳನ್ನು ನೋಡಿ ಅವನು ನಾನಾ ಸಾಹೇಬನೆಂದು ಭಾವಿಸಿ, ಬಂಧಿಸಿ ಕೋರ್ಟಿಗೆ ಹಾಜರು ಪಡಿಸುತ್ತಾರೆ. ವಿಚಿತ್ರಮೂರ್ತಿ ತನ್ನ ಐವತ್ತು ವರ್ಷಗಳ ನಿದ್ದೆಯಿಂದೆದ್ದು ಬರುವಾಗಿನ ಸಂದರ್ಭದಿಂದ ಆರಿಸಿದ ಭಾಗ ಕೆಳಗಿನದು. ಅವನು ಟಿಪ್ಪು ಸುಲ್ತಾನರ ಕಾಲದಲ್ಲಿ ಮಲಗಿದವನು, ಎದ್ದಾಗ ಬ್ರಿಟಿಷ್ ಆಳ್ವಿಕೆ ಬಂದಿರುತ್ತದೆ.
ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ
ಹುರುಳಿ ಭೀಮರಾವ್
ದಕ್ಷಿಣ ಕನ್ನಡ ಜಿಲ್ಲೆಯ ಆದ್ಯ ಪತ್ರಕರ್ತರೂ, ಹಾಸ್ಯ ಸಾಹಿತಿಗಳೂ, ಕಾದಂಬರಿಕಾರರೂ ಆದ ಹುರುಳಿ ಭೀಮರಾಯರು ದಕ್ಷಿಣ ಕನ್ನಡದ ನವೋದಯದ ಒಬ್ಬ ಮುಖ್ಯ ಸಾಹಿತಿಗಳಾಗಿದ್ದಾರೆ. ಮಂಗಳೂರಿನ ನವೋದಯ ಕಾಲದ ಪ್ರಸಿದ್ಧ ಪತ್ರಿಕೆ ‘ಕಂಠೀರವ’ದ ಸಂಪಾದಕರಾಗಿ, ‘ಮುರುಕು ದಂಬೂಕು’ (1947) ಮತ್ತು ‘ಹಾಸನ್ ಟೋಪಿ’ (1952) ಎಂಬ ಪ್ರಸಿದ್ಧ ಕಾದಂಬರಿಗಳ ಲೇಖಕರಾಗಿ ಅವರು ಖ್ಯಾತರು. ಹುರುಳಿ ಭೀಮರಾಯರು (1889 – 1970) ಉಡುಪಿಯಲ್ಲಿ ಸ್ವಲ್ಪ ಕಾಲ ಸಂಸ್ಕೃತ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ನಂತರ ಕಲ್ಲಿಕೋಟೆಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದರು (1916). ಅದನ್ನು ಬಿಟ್ಟು ಅಲ್ಲಿನ ನೆಡುಂಗಾಡಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿ, ಬ್ಯಾಂಕಿನ ಮಂಗಳೂರು ಶಾಖೆಗೆ ವರ್ಗವಾಗಿ ಬಂದರು. ಮಂಗಳೂರಿಗೆ ಬಂದ ಸ್ವಲ್ಪ ಕಾಲದಲ್ಲಿಯೇ ನೆಡುಂಗಾಡಿ ಬ್ಯಾಂಕ್ ಮುಚ್ಚಿದ್ದರಿಂದ ಅವರು ಜೀವನೋಪಾಯಕ್ಕಾಗಿ ಸ್ವತಂತ್ರ ಪತ್ರಕರ್ತರಾದರು. ‘ಸುವಾಸಿನಿ’, ಶ್ರೀಕೃಷ್ಣ ಸೂಕ್ತಿ, ಸ್ವದೇಶಾಭಿಮಾನಿ ಪತ್ರಿಕೆಗಳಿಗೆ ಅವರು ಬರೆಯುತ್ತಿದ್ದರು. ಮೊದಲು ‘ಕಂಠೀರವ’ ಒಪ್ಪೊತ್ತಿನ ಸಂಪಾದಕರಾಗಿ ಕೆಲಸಮಾಡುತ್ತಿದ್ದರು. ನಂತರ ‘ಕಂಠೀರವ’ದ ಪೂರ್ಣಾವಧಿ ಸಂಪಾದಕರಾಗಿ (1932 – 1967) ತಮ್ಮ ಹರಿತವಾದ ಬರಹಗಳಿಂದ ಮತ್ತು ಹಾಸ್ಯ ಬರಹಗಳಿಂದ ಆ ಪತ್ರಿಕೆಯನ್ನು ಒಂದು ಮುಖ್ಯ ಪತ್ರಿಕೆಯಾಗಿ ರೂಪಿಸಿದ್ದರು. ಇದರ ಜತೆಗೆ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಪ್ರತಿನಿಧಿಯಾಗಿ ಕೆಲಸ ಮಾಡಿದರು. ನಂತರ ಅವರ ಜೀವನ ಮಂಗಳೂರಿನಲ್ಲಿಯೇ ಕಳೆಯಿತು.
ಹುರುಳಿ ಭೀಮರಾಯರು ಕೆಲಸ ಮಾಡುತ್ತಿದ್ದ ಪತ್ರಿಕೆ ‘ಕಂಠೀರವ’ ಬ್ರಿಟಿಷರ ಪರವಾಗಿದ್ದ ಪತ್ರಿಕೆ. ಅದಕ್ಕೆ ಕಾರಣ ಅದರ ಯಜಮಾನರಾದ ಬೋಳಾರ ವಿಠಲರಾಯರು. ಅವರ ತಂದೆ ತಹಶೀಲ್ದಾರರಾಗಿದ್ದು ಬ್ರಿಟಿಷ್ ಸರಕಾರದ ಬಗ್ಗೆ ಗೌರವಭಾವ ತಾಳಿದ್ದರು. ಅದೇ ಪ್ರವೃತ್ತಿ – ಮನೋಭಾವ ಇವರಿಗೂ ಬಂದಿತ್ತು. ವಿಠಲರಾಯರಿಗೆ ಗಾಂಧೀ ಚಳವಳಿ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಹಾನುಭೂತಿ ಇತ್ತೇ ವಿನಹ ಪ್ರತ್ಯಕ್ಷವಾಗಿ ಅವರು ಅದನ್ನು ಬೆಂಬಲಿಸಲೇ ಇಲ್ಲ. “ಅವರ ಈ ಮನೋಗುಣಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಸ್ವಾಭಿಮಾನಿಗೆ, ರಾಷ್ಟ್ರಹಿತ ಪ್ರತಿಪಾದಕನಾಗಬೇಕೆನ್ನುವವನಿಗೆ ಇಂತಹ ಕಟ್ಟುನಿಟ್ಟಿನ ನಿರ್ಬಂಧ ಸರಿಬೀಳದಿದ್ದರೂ, ಕಾಲಕ್ಕೆ ತಕ್ಕುದಾಗಿ ನಡೆದುಕೊಳ್ಳಬೇಕಾದ ಪಾಡು ನಮ್ಮದಾಗಿತ್ತು” ಎಂದು ಭೀಮರಾಯರು ದಾಖಲಿಸಿದ್ದಾರೆ.(‘ವಿಕ್ರಮ’, ವಿಜಯದಶಮಿ ಸಂಚಿಕೆ – 1969).
ಸ್ವತಃ ಹುರುಳಿ ಭೀಮರಾಯರು ಪ್ರಾರಂಭದಲ್ಲಿ ಕಾಂಗ್ರೆಸ್ ಪಕ್ಷದ ವಿರೋಧಿಯಾಗಿದ್ದ ಜಸ್ಟಿಸ್ ಪಾರ್ಟಿಯ ಬೆಂಬಲಿಗರಾಗಿದ್ದರು. ಮದ್ರಾಸ್ ಪ್ರೆಸಿಡೆನ್ಸಿಯ ಜಸ್ಟಿಸ್ ಪಾರ್ಟಿ (ಸದರ್ನ್ ಇಂಡಿಯಾ ಲಿಬರಲ್ ಫೆಡರೇಶನ್) 1916 ರಲ್ಲಿ ಸ್ಥಾಪಿತವಾಗಿದ್ದ ಬ್ರಾಹ್ಮಣೇತರ ಸಮುದಾಯಗಳ ಪಕ್ಷ. ಸರಕಾರಿ ನೌಕರಿಗಳಲ್ಲಿ ಬ್ರಾಹ್ಮಣರ ಪ್ರಾಬಲ್ಯವನ್ನು ವಿರೋಧಿಸಿ ಹುಟ್ಟಿಕೊಂಡಿದ್ದ ಪಕ್ಷ. 1920 ರಿಂದ ನಡೆದ ಐದು ಮಹಾಚುನಾವಣೆಗಳಲ್ಲಿ ನಾಲ್ಕನ್ನು ಗೆದ್ದಿತ್ತು. 1937 ರಲ್ಲಿ ಕಾಂಗ್ರೆಸ್ ಪಕ್ಷ ಗೆದ್ದುಬಂದ ಮೇಲೆ ಅದರ ಪ್ರಭಾವ ಕಡಿಮೆಯಾಯಿತು. ಆದರೆ ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿಯವರು ಅದರ ರಾಜಕೀಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಅದನ್ನು ದ್ರಾವಿಡ ಕಳಗ ಚಳುವಳಿಯಾಗಿ ರೂಪಿಸಿದರು. ಜಸ್ಟಿಸ್ ಪಾರ್ಟಿ ಬ್ರಾಹ್ಮಣವಿರೋಧಿ ಚಳುವಳಿಯಾಗಿತ್ತು. ಅವರ ನಿಲುವು ಎಷ್ಟರಮಟ್ಟಿಗೆ ಇತ್ತೆಂದರೆ ದೇಶಕ್ಕೆ ಸ್ವಾತಂತ್ರ್ಯಬಂದರೆ ಬ್ರಾಹ್ಮಣರು ಆಡಳಿತದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇರುವುದರಿಂದ ಬ್ರಿಟಿಷರೇ ಮುಂದುವರಿಯಲಿ ಎಂದಿತ್ತು. ಅದಕ್ಕಾಗಿ ಅವರು ಗಾಂಧೀಜಿಯವರಿಗೂ, ಕಾಂಗ್ರೆಸಿಗೂ, ಅನ್ನೀ ಬೆಸೆಂಟರ ಹೋಂ ರೂಲ್ ಚಳುವಳಿಗೂ ವಿರುದ್ಧವಾಗಿದ್ದರು. ಈ ಪಕ್ಷ ಮೇಲುವರ್ಗದ ಶೂದ್ರರ ಹಿತಾಸಕ್ತಿಯನ್ನು ಮಾತ್ರ ಪರಿಗಣಿಸುವುದೆಂದು ಅರಿವಾಗಿ ಮುಸ್ಲಿಮರು ಮತ್ತು ದಲಿತರು ಇದರಿಂದ ದೂರವಾದ ಮೇಲೆ ಪಕ್ಷ ಅವನತಿ ಹೊಂದಿತು.
ಹುರುಳಿ ಭೀಮರಾಯರು ತಾತ್ವಿಕವಾಗಿ ಜಸ್ಟಿಸ್ ಪಾರ್ಟಿಯ ಜತೆಗೆ ಇದ್ದರೆಂದು ಹೇಳುವುದಕ್ಕಾಗುವುದಿಲ್ಲ, ಕೇವಲ ವೈಯಕ್ತಿಕ ನೆಲೆಯಲ್ಲಿ, ತಮ್ಮ ಮಿತ್ರರಾಗಿದ್ದ ಆ ಪಕ್ಷದ ನಾಯಕರಿಗೆ ಬೆಂಬಲವಾಗಿದ್ದರು. ಅವರ ಸ್ವತಂತ್ರ ಬರಹಗಳೆಲ್ಲ ಪ್ರಚ್ಛನ್ನವಾಗಿ ಬ್ರಿಟಿಷ್ ವಿರೋಧಿಯೇ ಆಗಿದ್ದವು. ಹುರುಳಿಯವರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಭಿಮಾನವುಳ್ಳವರಾಗಿದ್ದರು ಮತ್ತು ಬ್ರಿಟಿಷರಿಗೆ ವಿರೋಧವಾಗಿದ್ದರು.
‘ಮುರುಕು ದಂಬೂಕು’ ಟಿಪ್ಪು ಸುಲ್ತಾನನ ಆಳ್ವಿಕೆ ಮುಗಿದು ಬ್ರಿಟಿಷ್ ಆಳ್ವಿಕೆ ಪ್ರಾರಂಭವಾದಾಗಿನ ಸ್ಥಿತ್ಯಂತರದ ಕಾಲದ ಕಥಾನಕ. ಹೊಸ ವ್ಯವಸ್ಥೆ, ವಿದೇಶೀ ಭಾಷೆಗೆ ನಾಯಕ ವಿ. ಚಿತ್ರಮೂರ್ತಿ ತೋರಿಸುವ ವಿಶಿಷ್ಟ ಲೇವಡಿ – ಪ್ರತಿಭಟನೆ ನಗು ಬರಿಸುತ್ತದೆ. ಈ ಮಾತು ನೇರವಾಗಿದೆ: ‘ಆ ಒಳ್ಳೆ ದೊರೆ ಟಿಪ್ಪು ಸುಲ್ತಾನರ ಆಳಿಕೆ ಕಾಲದಲ್ಲಿ ಆ ಗ್ರಾಮದ ನಾವೆಲ್ಲ ಆತನ ಪ್ರಜೆಗಳಾಗಿ ಅಂಥದೇನೂ ಕುಂದುಕೊರತೆ ಇಲ್ಲದೆ, ಅಂಥದೇನೂ ತೆರಿಗೆ ಕಂದಾಯದ ಭಾರ ಇಲ್ಲದೆ, ಇದ್ದದ್ದರಲ್ಲಿ ಸುಖಜೀವನ ಮಾಡುತ್ತ ಇದ್ದದ್ದು ನನಗೆ ಗೊತ್ತಿತ್ತು. ಆತ ಮುಸಲ್ಮಾನನಾಗಿದ್ದರೂ ಹಿಂದೂ ದಿವಾನ (ಮುಖ್ಯ ಮಂತ್ರಿ) ರನ್ನೇ ನೇಮಿಸಿಕೊಂಡಿದ್ದ; ಹಲವು ಹಿಂದೂ ದೇವಸ್ಥಾನಗಳಿಗೆ ಉಂಬಳಿ ಉತ್ತಾರ ಬಿಟ್ಟಿದ್ದ; ಶೃಂಗೇರಿ ಶಾರದಾ ಪೀಠವನ್ನು ಸುಲಿಯಲು ಮರಾಠಿಯವರು ಬರುತ್ತಾರೆ ಎಂದು ಕೇಳಿದಾಗ “ನಾನಿದ್ದೇನೆ; ಹೆದರಬೇಡಿ” ಅಂತ ಧೈರ್ಯ ಹೇಳಿದ್ದ; ತನ್ನ ದೇಶ ಅತಂತ್ರವಾಗಬಾರದು, ತನ್ನ ಉಸಿರಾಡುವವರೆಗೂ ಪರಾಧೀನವಾಗಲು ಬಿಡಬಾರದು ಎಂಬ ಪ್ರತಿಜ್ಞೆ ಮಾಡಿದವರಂತೆ ತನ್ನ ದೇಶದ ಮೇಲಿನ ಅಭಿಮಾನದಿಂದ ಯಾವ ಕಪ್ಪು ಬಿಳೀ ಶತ್ರುಗಳಿಗೂ ಡೊಗ್ಗು ಸಲಾಂ ಹಾಕದೆ, ಅವರ ವಿರುದ್ಧ ಯುದ್ಧಕ್ಕೇ ಹೊರಟಿದ್ದ – ಎಂಬುದನ್ನು ಜನರ ಬಾಯಿಂದ ಕೇಳಿದ್ದೆ. ಅಂಥ ಸುಲ್ತಾನನನ್ನು ಫಿರಂಗಿಯವರು ದಂಬೂಕಿನಿಂದ ಹೊಡೆದು ಬಿಟ್ಟಿದ್ದರೆ?”.
ಮೂರ್ತಿಯನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿ ವಿಚಾರಣೆ ನಡೆಸುವ ಪ್ರಕ್ರಿಯೆಯಲ್ಲಿ ದಫೇದಾರ, ಸಿಪಾಯಿ, ಜೂರರ್, ನ್ಯಾಯಾಧೀಶ ಇವರೆಲ್ಲರ ಮಾತುಗಳನ್ನು – ಮುಖ್ಯವಾಗಿ ಇಂಗ್ಲಿಷ್ ಆಡಳಿತ ವ್ಯವಸ್ಥೆಯ ಲೈಸೆನ್ಸ್, ಸರ್ಟಿಫಿಕೇಟು, ಡಾಕ್ಟರ್, ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್, ಆ್ಯಕ್ಟ್, ಅರೆಸ್ಟ್ ಇತ್ಯಾದಿ ಶಬ್ದಗಳನ್ನು ವಿಕೃತಗೊಳಿಸಿಯೇ ಮಾತಾಡುವ ಮೂಲಕ ಮೂರ್ತಿ ಬ್ರಿಟಿಷರ ಆಡಳಿತ ವ್ಯವಸ್ಥೆಯನ್ನು ಲೇವಡಿ ಮಾಡುತ್ತಾನೆ. ಬಿಳಿಯ ನ್ಯಾಯಾಧೀಶನ ಎದುರಿಗೆ ಮೂರ್ತಿ ತನ್ನನ್ನು ‘ನಾವು’ ಎಂದು ಬಹುವಚನದಿಂದಲೇ ಕರೆದುಕೊಳ್ಳುತ್ತಾನೆ. ಅವನ ಸ್ವಾಭಿಮಾನವನ್ನು ರಾವಣನ ಆಸ್ಥಾನದಲ್ಲಿ ಲಾಂಗೂಲಾಸದ ಮೇಲೆ ಕುಳಿತ ಹನುಮಂತನ ಸ್ವಾಭಿಮಾನಕ್ಕೆ ಹೋಲಿಸಬಹುದು. (ಮೂರ್ತಿ ತನ್ನನ್ನು ಬಂಧಿಸಿದ ಸನ್ನಿವೇಶವನ್ನು ಹೀಗೆಯೇ ಹೋಲಿಸುತ್ತಾನೆ – “ನನ್ನ ಹಿಂದೆಯೊಬ್ಬ ಸಿಪಾಯಿ; ಮುಂದೆಯೊಬ್ಬ ಸಿಪಾಯಿ; ಮಧ್ಯದಲ್ಲಿ ನಾನು – ಅಶೋಕವನದ ಹನುಮಂತನ ಹಾಗೆ!”).
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.