ಹೆಣ್ಣು ತನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನೂ ತೆಕ್ಕೆಗೆಳೆದುಕೊಳ್ಳುತ್ತಾಳೆ. ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾಳೆ ಎನ್ನುವುದಕ್ಕೆ ನಿದರ್ಶನ. ಆ ಅವನ ಕೋಪವನ್ನು ಅವ ಹೇಳದೆಯೇ ಅವಳು ಗ್ರಹಿಸುತ್ತಾಳೆ. ಮೊದಲಿಗೆ ಹೆಣ್ಣೊಬ್ಬಳು ಗಂಡನ್ನು ಬಯಸುವುದು ಒಂದು ರೀತಿ ಬಂಡಾಯದ ದನಿ ಎನಿಸುತ್ತದೆಯಾದರೂ ಪದ್ಯ ಮಧ್ಯಭಾಗದಿಂದ ಬೇರೊಂದು ಮಜಲಿಗೆ ಹೊರಳಿಕೊಳ್ಳುತ್ತದೆ. ಗಂಡನ್ನು ವರ್ಣಿಸುತ್ತಾ ಸಾಗುವ ಕವಿತೆ, ಅದನ್ನು ಲೋಕ ಗ್ರಹಿಸುವ ರೀತಿಯನ್ನು ವಿಡಂಬನೆ ಮಾಡುತ್ತದೆ. ಆದರೆ ಅರ್ಧದಿಂದ ಮುಂದಕ್ಕೆ ಹೊರಳಿಕೊಳ್ಳುವಾಗ ಊಹಿಸಲಾಗದ ತಿರುವೊಂದು ಕಾಣಿಸಿಕೊಳ್ಳುತ್ತದೆ. ಮತ್ತದು ಕವಿತೆಯ ಮೂಲ ಆಶಯದಂತೆಯೂ ಕಾಣಿಸಿಕೊಳ್ಳುತ್ತದೆ. ಲೋಕ ತನ್ನ ಪೂರ್ವಾಗ್ರಹ ಪೀಡಿತ ದೃಷ್ಟಿಯನ್ನು ಬದಲಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ.
ಆಶಾ ಜಗದೀಶ್ ಅಂಕಣ
ಹೊಚ್ಚ ಹೊಸ ತಲೆಮಾರಿನ ಕವಯಿತ್ರಿಯರು ಬಹಳ ಭರವಸೆ ಹುಟ್ಟಿಸುತ್ತಾ ಪ್ರಮಾಣಾತ್ಮಕವಾಗಿ ಬರೆಯುತ್ತಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಬೆಳವಣಿಗೆಯ ಹೊಸದೇ ಮಜಲೆನಿಸುತ್ತದೆ. ಇಲ್ಲಿ ಬರೀ ಕಣ್ಣೀರು, ಗೋಳಾಟ, ಹತಾಶೆ, ಸ್ವಮರುಕವಷ್ಟೇ ಇಲ್ಲ ಎಂಬುದು ಕೆಂಪು ಶಾಯಿಯಿಂದ ಗೆರೆ ಎಳೆದಿಡಬೇಕಾದ ವಿಚಾರ. ವಿಸ್ತುವಿನ ವಿಚಾರದಲ್ಲಾಗಲೀ ಪ್ರಸ್ತುತಿಯ ವಿಚಾರದಲ್ಲಾಗಲೀ ಯಾವ ರಾಜೀ ಬೇಡದ ಈ ಕವಿತೆಗಳು ಆತ್ಮವಿಶ್ವಾಸದ ಗಾಢ ಪರಿಮಳವನ್ನು ಹೊರಸೂಸುತ್ತವೆ.
ಒಮ್ಮೆ ನಾನೊಂದು ಬಿಮ್ಮನೆ ಮೈತುಂಬಿಕೊಂಡ ತೋಟಕ್ಕೆ ಬಂದೆ. ಓಹ್ ಅದೆಷ್ಟು ಚಂದ ಚಂದದ ಹೂಗಳು ಅಲ್ಲಿ… ಅವುಗಳ ಬಣ್ಣ, ಸುವಾಸನೆ, ಸೊಬಗು, ವಯ್ಯಾರ, ಆಕಾರ… ಯಾವುದನ್ನು ಹೆಚ್ಚು ಅಂತಾಗಲೀ ಕಡಿಮೆ ಅಂತಾಗಲೀ ಹೇಳಲು ಸಾಧ್ಯವಿರಲಿಲ್ಲ.ನೆಲಕ್ಕಂಟಿ ಬೆಳೆದ ಪುಟ್ಟ ಸಸ್ಯದ ಅತೀ ಸಣ್ಣ, ಕಣ್ಣಿಗೆ ಬೀಳದಷ್ಟು ಪುಟ್ಟಾತಿಪುಟ್ಟ ಗುಲಾಬಿ ಬಣ್ಣದ ಹೂ, ಹಳದಿ ಬಣ್ಣದ ಹೂ ಸಹ ಅದೆಷ್ಟು ಆತ್ಮವಿಶ್ವಾಸದಿಂದ ಚೆಲುವು ತುಂಬಿಕೊಂಡು ನಿಂತಿತ್ತು… ಈ ವೈವಿಧ್ಯಮಯ ಪುಷ್ಪಗಳ ಚೆಲುವನ್ನು ಆಸ್ವಾದಿಸುವ ಅವಕಾಶ ನನ್ನದಾದುದೇ ನನಗೆ ದೊರಕಿದ ಭಾಗ್ಯ.
ಇಂತಹುದೇ ಒಂದಷ್ಟು ಚೆಲುವಾದ ಕವಿತೆಗಳನ್ನು ಮತ್ತು ಕವಯಿತ್ರಿಯರನ್ನು ಈ ಲೇಖನದ ಮೂಲಕ ತರಲು ಪ್ರಯತ್ನಿಸಿದ್ದೇನೆ ಇಲ್ಲಿ… ಇಲ್ಲಿನ ವೈವಿಧ್ಯಮಯ ಕವಿತೆಗಳು ಖುಷಿಕೊಡುತ್ತಲೇ ನಮ್ಮನ್ನು ಅಚ್ಚರಿಗೊಳಿಸುತ್ತವೆ…
ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಭುವನಾ ಹಿರೇಮಠ್ ಅಂತಹ ಕವಯಿತ್ರಿಯರಲ್ಲಿ ಒಬ್ಬರು. ಹೊಚ್ಚ ಹೊಸದೆನಿಸುವ, ಇಂದಿನ ಕಂಗ್ಲೀಷ್ ಯುಗದ ಪ್ರತಿಬಿಂಬದಂತೆ ಬರೆಯುವ ಇವರ ಕವಿತೆಗಳು ತಮ್ಮ ತೀವ್ರತೆಯಿಂದ ನಮ್ಮನ್ನು ಸೆಳೆಯುತ್ತವೆ. “ಟ್ರಯಲ್ ರೂಮಿನ ಅಪ್ಸರೆಯರು” ಇವರ ಮೊದಲ ಸಂಕಲನ. ಇತ್ತೀಚೆಗೆ ಕಾವ್ಯದೊಂದಿಗೆ ಪ್ರಯೋಗಕ್ಕಿಳಿದವರಂತೆ ಬರೆಯುತ್ತಿರುವ ಇವರ ಕವಿತೆಗಳು ಹೊಸ ಮಗ್ಗಲಿಗೆ ತಿರುಗಿಕೊಂಡಿರುವುದು ಸ್ಪಷ್ಟ.
“ಪ್ರತಿ ರಾತ್ರಿಗೂ ನಿಲ್ಲದೆ ಉರುಳುತ್ತಲೇ ಇರುವ ಕಾಲ
ಈ ಬೀದಿಗಳಲ್ಲಿ ಆ ಆಗಸದಲ್ಲಿ
ಮನೆಮನೆಗಳ ಪಡಸಾಲೆಯಲ್ಲಿ
ಅಡ್ಡಗೋಡೆಗಳ ಸಣ್ಣ ಸಣ್ಣ ಮಾಡುಗಳಲ್ಲಿ
ಮೊಸರಾಗುವ ಕುಡಿಕೆಗಳಲ್ಲಿ
ಯಾರ ಅರಿವಿಗೂ ಬರದೆ ವೇದ್ಯವಾಗಿ ಸಾಗುತಿರಲು
ನಾನು ನೀನು ಯಾವ ಮರದ ಚಿಗುರು
ಹಸಿರಾಗಿಯೇ ಇರಲು”
ಅಲ್ಲವೇ ಮತ್ತೆ ಕಷ್ಟ ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತದೆಯೇ… ರಾಗ ದ್ವೇಷಗಳಿಲ್ಲದೆಯೂ ಮನುಷ್ಯನ ಬದುಕು ಪೂರ್ಣವಾಗುತ್ತದಾದರೂ ಹೇಗೆ… ಅದು ಸಾಮಾನ್ಯರಿಗಂತೂ ಕಷ್ಟವೇ ಕಷ್ಟ… ನಾವೆಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರು ತಾನೇ…. ಭೂಮಿಯ ಮೇಲಿನ ಒಂದು ಸಣ್ಣ ಕಲ್ಲಿಗಿರುವ ಶಾಶ್ವತತೆಯೂ ಮನುಷ್ಯನಿಗಿರುವುದಿಲ್ಲ. ಇದರ ವಾಸ್ತವ ತಿಳುವಳಿಕೆಯಿಂದಲೇ ನೆನಪನ್ನು ಶಾಶ್ವತಗೊಳಿಸಲು ಹೊರಡುವ, ಹೋರಾಡುವ ಮನಸ್ಥಿತಿ ಮನುಷ್ಯನದು.
“ಸ್ವರಮೇಳದ ಕದ ತೆರೆದುಕೊಳ್ಳುತ
ಕಣ್ಣ ಕ್ಯಾಲಿಡೋಸ್ಕೋಪಿನಲಿ
ಹಚ್ಚ ಹಸಿರು ಕಡುಗೆಂಪಿನ ನೆರಳು ಬೆಳಕಿನಾಟ
ಸಾವಿರ ಸಾವಿರ ಚಂದ್ರರಿಗೆ ಜನ್ಮನೀಡುವ ಸಾವಿರಮಲ್ಲಿಗೆ ದಳಗಳು ಕಿಟಕಿಯ ಸರಳುಗಳನೆ ರೆಂಬಿಕೊಂಡು ಹೊರಳಾಡುತಿರಲು,
ಹಣ್ಣು ಕಾಯಿಗಳನೆ ತಬ್ಬುವ ಏಕಾಂಗಿ ಮರಗಳು
ತರಂಗಗಳಲೆ ಜೀವ ಬಿಡುವ
ಏರಿಳಿತಗಳ ನಡುವೆ
ನಾನು ನೀನು ಯಾವ ನದಿಗೆ ತರ್ಪಣ
ದೇವ ದೇವತೆಯರೆಲ್ಲ ನಿರಂತರ ಧ್ಯಾನದಲ್ಲಿರಲು”
ಇಲ್ಲಿ ಭುವನಾ ಬಳಸುವ ರೂಪಕಗಳು ಯೋಚಿಸದಿರಲು ಬಿಡುವುದಿಲ್ಲ. ಕನಸು ಕಾಣುವ, ಕನಸ ಹಿಡಿಯಲು ಹಂಬಲಿಸುವ ಕಣ್ಣುಗಳಲ್ಲಿ ನೂರಾರು ಕನಸ ಒಲುಮೆಯ ಚಿತ್ರಗಳು… ಸಣ್ಣ ಬೆಳಕಿಂಡಿ ಸಾಕು ಅವುಗಳು ಸಂಖ್ಯೆ ಹೆಚ್ಚಿಸಿಕೊಳ್ಳಲು… ಆದರೆ ವಾಸ್ತವದ ಸಂತೆಯ ವ್ಯಾಪರವೇ ವಿಚಿತ್ರ. ಒಂದು ಕೊಟ್ಟರೆ ಎರೆಡನ್ನು ಬೇಡುತ್ತದೆ… ಅದರ ರಕ್ತದಾಹಕ್ಕೆ ಹೂಕನಸುಗಳ ಮಾರಣಹೋಮ ಈಡಲ್ಲ. ಮತ್ತು ಕೇಳಬೇಕಾದ ಕಿವಿಯೇ ಕಿವುಡಾಗಿರುವಾಗ….
“ಒಂದು ರಾತ್ರಿ
ಒಂದು ಬೆಳಗಿಗೆ ಸಾಕ್ಷಿಯಾಗುತ್ತಲೇ
ನಡೆದು ನಡೆದು
ಎಲ್ಲಿ ಸೇರುವುದು
ಎಲ್ಲಿ ಅಗಲುವುದು
ಹಿಡಿಯಷ್ಟು ಮಣ್ಣು
ಹಿಡಿಯಷ್ಟು ಏಕಾಂತ
ಕಲ್ಲು ಚಪ್ಪಡಿ ಎಳೆದು
ಮಸಣದ ಕಟ್ಟೆ ಕಟ್ಟಿ
ಅಪರೂಪಕ್ಕೊಮ್ಮೆ ಅರಳುವ
ಬ್ರಹ್ಮಕಮಲವ ಸುರಿದು ಸಿಂಗರಿಸುವರು
ನಮ್ಮನು
ಎರಡೆರಡು ಗೋರಿಗಳಲಿ
ಪ್ರತ್ಯೇಕವಾಗಿ
ಎರಡೆರಡು ದೇವತೆಗಳು
ಹಠ ಹಿಡಿಯುತ್ತಾರೆ
ಪ್ರತ್ಯೇಕ ನೈವೇದ್ಯಕ್ಕಾಗಿ”
(ಭುವನಾ ಹಿರೇಮಠ)
ಯಾವುದನ್ನೇ ಆಗಲೀ ಮೇಲು ಕೀಳು ಮಾಡುವ ಬೇರ್ಪಡಿಸುವ ಏನೊಂದೂ ಈ ಭೂಮಿಯಲ್ಲಿಲ್ಲ. ಆದರೂ ದೇವರನ್ನೂ ಪ್ರತ್ಯೇಕಿಸಿಕೊಳ್ಳುವ ನಮ್ಮ ಸಣ್ಣ ಬುದ್ಧಿ ಸಾವಿನಲ್ಲೂ ಅದನ್ನೇ ಕಾಣಬಯಸುತ್ತದೆ. ಆದರೆ ಸಾವಿನ ನಂತರ ಶಕ್ತಿಯ ರೂಪದಲ್ಲಿ ಶಕ್ತಿಯನ್ನು ಕೂಡುವಾಗ ಯಾವ ಅಡೆತಡೆಗಳೂ ಬಾಧಿಸಲಾರವು.
ಬೆಂಗಳೂರಿನಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಶುಭಾ ನಾಡಿಗ್(ದೇವಯಾನಿ)ರವರು ಸೌಮ್ಯ ಆದರೆ ದಿಟ್ಟ ಕವಿತೆಗಳನ್ನು ಬರೆಯುವಂತವರು. ಅವರ ಕವಿತೆಗಳು ಬಿಚ್ಚು ಕವಿತೆಗಳಲ್ಲ. ಸಾಕಷ್ಟು ಹೆಣ್ಣು ಮಕ್ಕಳ ಸಾಮಾನ್ಯ ಮನಸ್ಥಿತಿಯ ಪ್ರತೀಕ ಅವು. ಹಾಗಾಗಿಯೇ ಅವು ನಮ್ಮೊಂದಿಗೆ ನಸುನಕ್ಕು ಮಾತಿಗಿಳಿಯುತ್ತವೆ.
ಕವಿತೆ ನಕ್ಕಿತು
ಕವಿತೆಯೊಂದು ಸೋತು
ಕುಳಿತಿದೆ
ನಡೆ ಒಂದು ಕಪ್
ಕಾಫಿ ಕುಡಿಯುವ
ಎಂದೆ
ಕವಿತೆ ತಲೆಯಲುಗಿಸಿತು
ಮೊನ್ನೆ ಕುಡಿದ
ಪಾನೀ ಗಂಟಲ
ಕೆಡಿಸಿಬಿಟ್ಟಿದೆ ನೋಡು
ಈಗ ಕಾಫಿ
ಕುಡಿಯಲೂ ಭಯ
ಎಂದು ಅವಲತ್ತುಕೊಂಡಿತು.
ಕವಿತೆಯೊಂದು
ಸೋತು ಕುಳಿತಿದೆ
ಕೆದರಿದ ತಲೆ,
ಕಣ್ಣಗುಳಿಯ ಕಪ್ಪು
ಯಾಕೋ ಖೇದವಾಯಿತು
ತಲೆಬಾಚಿ ಅಲಂಕರಿಸಿಕೊ
ಎಂದು ಕರೆದೆ
ಕನ್ನಡಿ ಹಿಡಿದೆ
ಕವಿತೆ ಪಕಪಕ ನಕ್ಕಿತು
ನನಗೆ ಕನ್ನಡಿಯ
ಹಂಗೇ ಎಂದು
ಮುಖ ತಿರುಗಿಸಿತು
ಕವಿತೆಯೊಂದು
ಸೋತು ಕುಳಿತಿದೆ
ಹಸಿವಾಗಿದೆಯೇನೊ
ನಡೆ ಹೊಟ್ಟೆಗಿಷ್ಟು ಹಾಕುವ
ಎಂದೆ
ಕವಿತೆ ಮುಖ
ಕಿವಿಚಿತು
ತಿಂದದ್ದನ್ನೇ ಅರಗಿಸಿಕೊಳ್ಳಲಾಗದೆ
ನರಳಿರುವೆ
ಇಲ್ಲ ಇಂದು
ಉಪವಾಸ ಎಂದಿತು
ಕವಿತೆಯೊಂದು
ಸೋತು ಕುಳಿತಿದೆ
ಕೈ ಹಿಡಿದೆ
ಗಲ್ಲವೆತ್ತಿ ಕಣ್ಣಲ್ಲಿ ಕಣ್ಣಿಟ್ಟೆ
ಕವಿತೆ ಗಳಗಳ
ಅತ್ತೇ ಬಿಟ್ಟಿತು
ಹೆಗಲಿಗೊರಗಿ
ಹಗುರಾಯಿತು
ಕೈ ಹಿಡಿದು ಎದ್ದೆ
ನಕ್ಕು ಜೊತೆ
ನಡೆಯಿತು
(ದೇವಯಾನಿ)
ಎಷ್ಟು ಮುದ್ದು ಈ ಕವಿತೆ…. ಕಣ್ಮುಚ್ಚಿ ಆಹಾ ಎಂದು ಉದ್ಗಾರ ತೆಗೆಯುವಷ್ಟು… ನಮ್ಮೆಲ್ಲ ಕಷ್ಟ ಸುಖದಲ್ಲಿ ಕವಿತೆ ಪಾತ್ರವಾಗಿ, ಪಾತ್ರಾಧಾರಿಯಾಗಿ ಬಂದು ಓಲೈಸಿ ಲಾಲಿಸುವ ಕವಿತೆಗಳ ಒಂದು ದೊಡ್ಡ ದಂಡೇ ಇದೆ. ಆದರೆ ಫಾರ್ ಎ ಚೇಂಜ್ ಇಲ್ಲಿ ಶುಭಾ ಅವರು ತಾವೇ ಕವಿತೆಯನ್ನು ಲಾಲಿಸಿ ಆಡಿಸಿರುವುದು ತೊಟ್ಟಿಲ ಕೂಸನ್ನು ನವಿರಾಗಿ ತಟ್ಟಿ ಮಲಗಿಸಿದಷ್ಟೇ ಕೋಮಲವಾಗಿ ಉಲಿದಂತೆ ಮುದವೆನಿಸುತ್ತದೆ.
ನಾವೇನನ್ನು ಬಯಸುತ್ತಿರುವೆವೋ ಅದನ್ನೇ ಆರೋಪಿಸಿ ಕಲ್ಪಿಸಿಕೊಳ್ಳುವುದೂ ಸಹ ಮನುಷ್ಯನ ಒಂದು ಸಹಜ ಗುಣ. ಇಲ್ಲಿ ಕವಿತೆಯನ್ನು ಗೆಳೆಯನಂತೆ ಪಕ್ಕದಲ್ಲಿ ಕೂರಿಸಿಕೊಂಡು (ತಮ್ಮದೇ ಆಶಯವನ್ನು ಮಾತಾಗಿಸಿತ್ತಾ) ಮಾತನಾಡಿಸುವುದು, ಕವಿತೆಯ ನೋವನ್ನು ಹಂಚಿಕೊಂಡು ಸಂತೈಸುವುದು ಚಂದ ಎನಿಸುತ್ತದೆ. ಅದಕ್ಕೆ ಬೇಕಾದ ಮೆಲು ಮಾತಿನ ನಿರೂಪಣೆ ಸೂಕ್ತವಾಗಿದೆ.
ವಿದ್ಯಾರಶ್ಮಿಯವರು ಬೆಂಗಳೂರಿನಲ್ಲಿ ನೆಲೆಸಿರುವವರು, ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವವರು, ಸೃಜನಾತ್ಮಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಕ್ರಿಯಾತ್ಮಕವಾಗಿಟ್ಟುಕೊಂಡಿರುವ ಮೆಲು ಮಾತಿನ ಸ್ನಿಗ್ಧ ನಗುವಿನ ಒಡತಿ…. ಇವರ ಕವಿತೆಗಳೂ ಅಷ್ಟೇ ಚಂದ. ಮುಖ್ಯವಾಗಿ ನಗರ ಕೇಂದ್ರಿತ, ಅತ್ಯಾಧುನಿಕ ವೇಗದ ಜೀವನ ಇವರ ಕಾಳಜಿಯಾಗಿ ಕವಿತೆಗಳಾಗಿರುವುದು ಬಹಳ ಗಮನೀಯ. ‘ಗೌರಿ ದುಃಖ’ದ ಬಗ್ಗೆ ಬರೆಯುತ್ತಲೇ ರಿಸೈಕಲ್ ಬಿನ್ನಿನ ಬಗ್ಗೆಯೂ ಚಂದದ ಕವಿತೆ ಕಟ್ಟಬಲ್ಲರು ವಿದ್ಯಾರಶ್ಮಿ. ಇಯರ್ ಫೋನ್ ಗಳ ಬಗ್ಗೆ ಬರೆದ ಇವರದೊಂದು ಕವಿತೆ ಹೀಗಿದೆ ನೋಡಿ…
“ಇಯರ್ ಫೋನ್ ನ ವೈರುಗಳು
ಆ ತುದಿಯ ಎಳೆದು ಬಿಡಿಸಹೋದರೆ
ಈ ತುದಿ ಒಳಗೆ ನುಸುಳಿ ಸಿಕ್ಕುಸಿಕ್ಕು
ಈ ತುದಿಯ ಬಿಡಿಸಿದರೆ
ಆ ತುದಿ ಕಗ್ಗಂಟು.
ಅರ್ಥವಾದನೆಂದು ಭಾಸವಾಗಿಸಿ,
ಅಲ್ಲೆಲ್ಲೋ ಅಪರಿಚಿತನಂತೆ ನಿಲ್ಲುವ
ಥೇಟ್ ಅವನ ಹಾಗೆಯೇ
ಈ ಇಯರ್ ಫೋನ್ ನ ವೈರುಗಳು
ಸರಳವೆನಿಸುವ ಸಂಬಂಧದ ಎಳೆಗಳೂ ಸಹ ಇದೇ ರೀತಿ ಒಮ್ಮೊಮ್ಮೆ ಅವಸರದ ಎಳೆತಕ್ಕೆ ಸಿಕ್ಕಿ ಕಗ್ಗಂಟಾಗಿಬಿಡುತ್ತವೆ. ಎಲ್ಲ ಗೊತ್ತು ಅವನ ಬಗ್ಗೆ ಎಂದುಕೊಳ್ಳುವಾಗಲೇ ಅವನದೊಂದು ಅಪರಿಚಿತ ಮುಖ ಎದುರು ಬಂದು ನಿಲ್ಲುತ್ತದೆ. ಆದರೆ…
“ಎಳೆದು ಎರಡೂ ತುದಿಗಳ
ಕಿವಿಗಿಡುವ ಧಾವಂತ,
ಸಮಯವಿಲ್ಲದೆ ಒರಟಾಗಿ ಎಳೆದಾಡಿದರೆ
ತುಂಡಾಗುವ ಭಯ,
ಬೆರಳೇ ನಡುವೆ ಸಿಕ್ಕಿ ನರಳುವ ಎಚ್ಚರ
ಸೈರಣೆಯಿಂದ ಬಿಡಿಸಬೇಕು
ಎಳೆದೆಳೆದು ಹರವಬೇಕು,
ಕೊನೆಗೊಲಿಯುತ್ತವೆ ಅವನಂತೆ
ಈ ಇಯರ್ ಫೋನ್ ನ ವೈರುಗಳು”
ಆದರೆ ಸಂಬಂಧದ ಎಳೆಗಳಿಗೂ ಇಯರ್ ಫೋನಿನ ಎಳೆಗಳಂತೇ ಸಾವಕಾಶ ಬಿಡಿಸಿಕೊಂಡು ಸರಿಮಾಡಿಕೊಳ್ಳಬೇಕಾದ ವ್ಯವಧಾನ ಬೇಕಿರುತ್ತದೆ. ಕೊನೆಗೊಮ್ಮೆ ಬಿಡಿಸಿಕೊಂಡು ಕೂತಾಗ…
“ಎಲ್ಲ ಬಿಡಿಸಿ ಕಿವಿಗೆ ಹಾಕಿ ಕುಳಿತರೆ
ನಿರಂತರ ದನಿಪ್ರವಾಹ
ಒಲವ ಮೊರೆತದಂತೆ…
ಹೇಳಿದ್ದು, ಕೇಳಿದ್ದು ಮುಗಿದ ಬಳಿಕ
ಮತ್ತೆ ಮಡಿಸಿ ಮೂಲೆಗೆಸೆಯಬಾರದು,
ಆಗಾಗ ಕೈಗೆತ್ತಿ, ಬಿಡಿಸಿ ಕಿವಿಗಂಟಿಸಬೇಕು,
ಒಲವನು ಎದೆಯಲಿ ಕಾಪಿಡುವಂತೆ,
ಮರೆತರೆ ಗಂಟಾಗುವುವು ಬಲುಬೇಗ
ಈ ಇಯರ್ ಫೋನ್ ನ ವೈರುಗಳು”
(ವಿದ್ಯಾರಶ್ಮಿ ಪೆಲತ್ತಡ್ಕ)
ಜೀವನವೂ ಇಯರ್ ಫೋನಿನ ಗಂಟುಗಳನ್ನು ಹೋಲುತ್ತವಾದ್ದರಿಂದ ಕಗ್ಗಂಟಾಗಲು ಬಿಡದೆ ಆಗಾಗ ಬಳಸಿ, ಒಪ್ಪವಾಗಿಸಿಟ್ಟುಕೊಳ್ಳಬೇಕಾಗುತ್ತದೆ ವಾಹನಗಳನ್ನು ಆಗಾಗ ಸರ್ವೀಸ್ ಮಾಡಿಸಿಟ್ಟುಕೊಳ್ಳುವಂತೆ….
ದಾವಣಗೆರೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಮಂಜುಳಾ ಹಿರೇಮಠ್ ಕವಿತೆಗೆಂದು ಹಂದರ ಹಾಕಿಟ್ಟು ಅದರ ಮೇಲೆ ತುಪ್ಪದ ಹೀರೇಕಾಯಾದರೂ ಸರಿ ಮಲ್ಲಿಗೆ ಬಳ್ಳಿಯನ್ನಾದರೂ ಸರಿ ಚಂದ ಹಬ್ಬಿಸಿಬಿಡುವವರು. ಅವರ ಸಾಕಷ್ಟು ಕವಿತೆಗಳು ಪ್ರತಿಮಾತ್ಮಕ. ಸರಳವೆನಿಸುವ ಆದರೆ ಗಾಢ ಪರಿಣಾಮವನ್ನುಂಟು ಮಾಡುವ ಇವರ ಕವಿತೆಗಳು ಪ್ರತಿಮೆಯ ಪಾತ್ರೆಯಲ್ಲಿ ಆಕಾರ ಪಡೆದುಕೊಳ್ಳುವುದನ್ನು ನೋಡುವುದೇ ಒಂದು ಚಂದ.
ನನಗೆ ಕಂಡಂತೆ
ಕೇಳಿದ ಕೆಲವೇ ಕ್ಷಣಗಳಲ್ಲಿ
ಹಬೆಯಾಡುವ ತಿಂಡಿ ಪ್ಲೇಟನ್ನು
ಮುಂದಿಟ್ಟು ಮುಗುಳ್ನಗುವ
ಸಪ್ಲೈಯರ್ ಮುಖದಲ್ಲಿ
ಅಮ್ಮ ಕಂಡಂತಾಗುತ್ತದೆ …
ಕಾರಿನ ಬಾಗಿಲು ತೆರೆದು ಕೂರಿಸಿ
ಜೋಪಾನ ಮಾಡಿ
ಆಫೀಸ್, ಮನೆ ತಲುಪಿಸುವ
ಡ್ರೈವರ್, ಅಪ್ಪನ ನೆನಪು
ತರುತ್ತಾನೆ…
ಬಾಗಿಲ ಪಕ್ಕದ ಸ್ಟೂಲಿನ ಮೇಲೆ ಕೂತು
ಕಾಯುವುದೊಂದೇ ಕಾಯಕ ಮಾಡಿ
ಕಾರಿನವರೆಗೂ ಬಿಟ್ಟುಕೊಡುವ
ವಾಚ್ಮನ್ ಕೈಯ್ಯಲ್ಲಿ
ಅಣ್ಣನಿಗೆ ಕಟ್ಟಿದ ರಾಖಿ
ನಾನಿರುವೆ ಎಂದಂತೆನಿಸುತ್ತದೆ …
ಬಿದ್ದಾಗ ಬೆರಳು ಕೊಡುವ
ಎದ್ದಾಗ ಬೆನ್ನು ತಟ್ಟುವ
ಗೆಳೆಯರ ದಂಡು
ಥೇಟ್ ಬಂಧು ಬಳಗದಂತೆ
ಅಲ್ಲಾ ಅದಕೂ ಮಿಗಿಲಂತೆ
ಅನಿಸಿಬಿಡುತ್ತದೆ…
ಹುಂಡಿ ತುಂಬಿಸಿ
ಮೊಳಕಾಲೂರಿ ಎಷ್ಟೇ
ಪೂಸಿಹೊಡೆದರೂ, ದಿವ್ಯಮೌನಿ
ದೇವರೇ ನೀನೆ ಎಲ್ಲರಿಗಿಂತ ಬಲು
ದುಬಾರಿ…
ಕೋಪ ಹೊಗೆಯಾಡುತ್ತದೆ …
ಪುರುಸೊತ್ತೆಲ್ಲಿದೆ ನನಗೆ?
ಈ ಮೇಲಿನವರೆಲ್ಲ
ನಿನಗೆ ಸಿಗುವಂತೆ ಮಾಡಿದ್ದು ನಾನೆ
ಮೌನವಾಗಿ ಗರ್ಭಗುಡಿ ಗೊಣಗಿದ್ದು
ನನಗಂತೂ ಕೇಳಿಸುವುದಿಲ್ಲ…!”
(ಮಂಜುಳಾ ಹಿರೇಮಠ)
ಈ ಕವಿತೆಯನ್ನೋದಿ ಮುಗಿಸಿದಾಗ ಮತ್ತೆ ಜಿ.ಎಸ್.ಎಸ್. ನೆನಪಾದರು. ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ…. ಎನ್ನುವ ಹಾಗೆ ಧಾವಂತದ ಬದುಕಿಗೆ ಜೀವಂತ ಬದುಕನ್ನು ಬಲಿ ಕೊಟ್ಟು ಶುಷ್ಕ ಜೀವನ ನಮ್ಮದಾಗಿಸಿಕೊಂಡ ನಮಗೆ ಅಂತರಂಗದ ಅಪ್ಪಟ ಮಾನವಿಕ ದನಿಗಳು ಕೇಳದೇ ಹೋಗಿಬಿಡುತ್ತವೆ ಎಂದು ಈ ಕವಿತೆ ಓದಿಯಾದ ಮೇಲೆ ನಮ್ಮ ಬಗ್ಗೆ ನಮಗೇ ಒಂದು ರೀತಿಯ ಮರುಕ ಮಿಶ್ರಿತ ಕೋಪ ಹುಟ್ಟುತ್ತದೆ.
ಅಂಕೋಲಾದ ನಾಗರೇಖಾ ಗಾಂವ್ಕರ್ ಅವರದು ಮತ್ತೊಂದೇ ವಿಶೇಷ ರೀತಿಯ ಪದ್ಯಗಳು. ಇವರ ಕವಿತೆಗಳಲ್ಲಿ ಸಮಾಜದಲ್ಲಿ ತುಳಿತಕ್ಕೊಳಗಾದವರೆಲ್ಲ ಬಂದು ತಮ್ಮ ಹಾಡ ಪಾಡಿ ಓದುಗರಲ್ಲಿ ದಟ್ಟ ವಿಷಾದ ಕವಿಸಿ ಹೋಗುತ್ತಾರೆ. ಲವಲವಿಕೆಯಿಂದಲೇ ಎಲ್ಲವನ್ನು ಹೇಳುವ ನಾಗರೇಖಾರನ್ನು, ವಾಸ್ತವದ ನಿಷ್ಠುರತೆ ತಾನು ಮರೆಯಾಗದಂತೆ ಸುಪ್ತವಾಗಿ ಅವರ ಬರಹದೊಳಗೆ ಸೇರಿಕೊಂಡುಬಿಡುತ್ತದೆ.
ಶತಶತಮಾನಗಳ ತಲೆಬರಹ.
ತಪ್ಪುವ ಹಾದಿಗಳ ಗುಂಟ
ಅರಿವಿನ ಸೂಡಿ ಸಿಗಬಹುದೇ
ಎಂದು ಹುಡುಕುತ್ತಲೇ ಇದ್ದಾರೆ ಜನ
ದಂದುಗಗಳ ಸಾಲೇ ಸಾಲು
ಎದುರಾಗುತ್ತ
ಬೇಸತ್ತ ಮನಸ್ಸುಗಳು
ಒಂದನ್ನೊಂದು ಹದ ತಪ್ಪುತ್ತಲೇ
ಬದುಕ ಹದಕ್ಕೆ
ಕಾಯಿಸಿಕೊಳ್ಳುವ ಕನಸು
ನನಸಾಗದ ಹಾದಿಯ ಮೇಲೆ
ಸೌಧ ಕಟ್ಟುತ್ತಿದ್ದಾರೆ
ಶತಶತಮಾನಗಳಿಂದ ಜನ.
ಹಾವಿನ ಹಾದಿಯನ್ನು
ಹೂವೆಂದುಕೊಂಡು
ನಂಜಿಗೆ ಬಲಿಯಾಗುತ್ತಾರೆ ಜನ.
ಮದ್ಯದ ಕಡಲಿಗೆ ಮುಗಿಬಿದ್ದು
ಮದ್ದೆ ಸಿಗದೇ
ಮಾರಿಕೊಂಡ ಮನಸ್ಸಿನ ಕೂಪದೊಳಗಿನ ನೆನಪುಗಳ
ಒಂದೊಂದಾಗಿ ಗೋರಿಯೊಳಗೆ
ಹೂತು ಹಾಕುತ್ತಲೇ
ಮರೆತು ಅದನ್ನೆ
ಎದೆಯ ಹಾಡಾಗಿಸಿಕೊಳ್ಳುತ್ತಿದ್ದಾರೆ
ಶತಶತಮಾನಗಳಿಂದ ಜನ”
ಯಾವುದನ್ನೇ ಆಗಲೀ ಮೇಲು ಕೀಳು ಮಾಡುವ ಬೇರ್ಪಡಿಸುವ ಏನೊಂದೂ ಈ ಭೂಮಿಯಲ್ಲಿಲ್ಲ. ಆದರೂ ದೇವರನ್ನೂ ಪ್ರತ್ಯೇಕಿಸಿಕೊಳ್ಳುವ ನಮ್ಮ ಸಣ್ಣ ಬುದ್ಧಿ ಸಾವಿನಲ್ಲೂ ಅದನ್ನೇ ಕಾಣಬಯಸುತ್ತದೆ. ಆದರೆ ಸಾವಿನ ನಂತರ ಶಕ್ತಿಯ ರೂಪದಲ್ಲಿ ಶಕ್ತಿಯನ್ನು ಕೂಡುವಾಗ ಯಾವ ಅಡೆತಡೆಗಳೂ ಬಾಧಿಸಲಾರವು.
ನಂಜಿನ ಹಾದಿಯಲ್ಲಿ ನಡೆಯುವ ಗೋರಿಯಿಂದೆದ್ದು ಬಂದ ಜನದ ವರ್ತನೆಯಲ್ಲಾದರೂ ಇನ್ನೆಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯ…
“ಯಾವ ಎತ್ತರಕ್ಕೆ ಏರಿದರೂ
ಜಾರುವ ಭಯದಲ್ಲೇ
ಬಸವಳಿಯುತ್ತಾರೆ ಜನ
ಬೆಳಕನ್ನು ಮುತ್ತಿಕ್ಕುವ ಆಸೆಗೆ
ಬಲಿಬಿದ್ದು ಕೈ ತಪ್ಪಿ
ಬೆಂಕಿಯನ್ನು
ಅಪ್ಪಿ ಸುಟ್ಟ ಗಾಯದ ನೋವಿಗೆ
ಮುಲಾಮು ಹಚ್ಚುತ್ತ
ಮುಲುಗುಡುತ್ತಿದ್ದಾರೆ
ಶತಶತಮಾನಗಳಿಂದಲೂ ಜನ.
ಪರಂಪರೆಯ ಮೊರದಲ್ಲಿ ಬದಲಾವಣೆಯ ಅಕ್ಕಿ
ಆರಿಸುತ್ತ
ಕಸವರವನ್ನು ಕಸವೆಂದು
ತೆಗೆತೆಗೆದು ಚೆಲ್ಲುತ್ತಿದ್ದಾರೆ ಜನ.
ನೆಮ್ಮದಿಯ ಹುಡುಕುತ್ತ,
ದೇಗುಲದ ಘಂಟೆಗಳ
ಬಾರಿಸುತ್ತ ಪರಮಾತ್ಮ ಎನ್ನುತ್ತ
ಪಂಥಗಳ ಕಟ್ಟಿಕೊಳ್ಳುತ್ತಲೇ ನಡೆದಿದ್ದಾರೆ
ಶತಶತಮಾನಗಳಿಂದ ಜನ.
(ನಾಗರೇಖಾ)
ಇತಿಹಾಸ ಮತ್ತೆ ಮತ್ತೆ ಮರುಕಳಿಸುತ್ತದೆ ಎನ್ನುವ ಮಾತು ಎಷ್ಟು ಸತ್ಯವೋ ಇತಿಹಾಸದ ಯಾದಿಯಲ್ಲಿ ಮನುಷ್ಯನ ಮರೆವೂ ಮತ್ತೆ ಮತ್ತೆ ಕಾಣಿಸಿಕೊಳ್ಳುವ ವೈಕಲ್ಯವೇ… ನೆನಪನ್ನೆ ಸರಕಾಗಿಸಿಕೊಳ್ಳುತ್ತಾ, ಹೊಸ ಬೆಳಕು ಎನ್ನುವ ಭ್ರಮೆಯಲ್ಲಿಯೇ ಬಿದ್ದು ಕುಣಿಯುವ ತಲೆಗಳೂ ಸಹ ಮತ್ತೆ ಮತ್ತೆ ಬೀಳುವವೇ… ಇಂತಹ ಸತ್ಯದ ಹುಡುಕಾಟ ಯಾರ ಬರಹಕ್ಕೂ ಹೊರತಲ್ಲ… ಹಾಗಾಗಿಯೇ ಇವು ಸೂಕ್ಷ್ಮ ಮನಸಿನ ನಾಗರೇಖಾರನ್ನೂ ಕಾಡಿವೆ.
ಚಿಕ್ಕಮಗಳೂರಿನ ಹೆದ್ದುರ್ಗದವರಾದ ನಂದಿನಿ ತಮ್ಮ ಬರಹ ಮತ್ತು ಆಲೋಚನೆಯಲ್ಲಿ ಸ್ಪಷ್ಟತೆ ಹೊಂದಿರುವ ದಿಟ್ಟ ಹೆಣ್ಣುಮಗಳು. ಅವರ ಕವಿತೆ ಒಂದೇ ಗತಿಯಲ್ಲಿ ಜುಳು ಜುಳು ಹರಿಯುವ ನದಿಯಂತೆ. ಇಂತಹ ನದಿ ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಲ್ಲ. ಪ್ರಶಾಂತತೆಯನ್ನು ತೋರುವ ನದಿಯೊಳಗೆ ಸೆಳೆದುಕೊಳ್ಳುವ, ತಣ್ಣಗೆ ಮುಗಿಸಿ ಬಿಡುವ ಒಳಹರಿವಿದೆ, ಕಾಣದೆ ಮುಗುಮ್ಮಾಗಿ ಕುಳಿತ ಸುಳಿಯಿದೆ. ಇದ್ದಕ್ಕಿದ್ದಂತೆ ಅಬ್ಬರಿಸಿಬಿಡುವ ಶಕ್ತಿಯೂ ಅದಕ್ಕಿದೆ.
ಈ ಎಲ್ಲಾ ಲಕ್ಷಣಗಳನ್ನೂ ನಂದಿನಿಯವರ ಒಟ್ಟು ಕವಿತೆಗಳಲ್ಲಿ ಕಾಣಬಹುದು. ಈಗ ಹೇಳಲು ಹೊರಟ “ನಿಷ್ಠೆ” ಕವಿತೆಯೂ ಇಂತಹದ್ದೇ ಬಗೆಯದ್ದು.
ಬೆತ್ತಲಾಗು ಎಂದೊಡನೆ
ನೀ ಹಾಗೇಕಾದರೂ
ಬಟ್ಟೆ ಕಳಚಬೇಕಿತ್ತು, ಹೇಳು
ಸಾಧ್ಯವಿಲ್ಲ ಅನ್ನಬಹುದಿತ್ತು
ಈಗ ಬೇಡ ಅನ್ನಬಹುದಿತ್ತು
ನಾಳೆ ನೋಡುವಾ
ಅಥವಾ ಕತ್ತಲಾಗಲಿ
ಕಾರಣ ನೂರಿದ್ದವು
ಹೀಗೆ ಶುರುವಾಗುವ ಈ ಕವಿತೆ ಗಂಡು ಹೆಣ್ಣಿನ ನಡುವಿನ ಸಂಬಂಧವನ್ನು ನಿಕಷಕ್ಕೆ ಒಡ್ಡುತ್ತಾ ಹೋಗುತ್ತದೆ. ದಾಂಪತ್ಯದ ಅವಿಭಾಜ್ಯ ಅಂಗವಾಗಿರುವ ಲೈಂಗಿಕತೆಯ ವಿಚಾರದಲ್ಲಿ ಹೆಣ್ಣು ನಿಷ್ಠಳಾಗಿರುವಷ್ಟೇ ಗಂಡೂ ನಿಷ್ಠನಾಗಿರಬೇಕೆಂದು ಹೆಣ್ಣೊಬ್ಬಳು ಬಯಸುವುದು ಸಹಜ. ಕನಿಷ್ಠ ಪಕ್ಷ ನಿಷ್ಠನಾಗಿರುವಂತೆ ತೋರಿಸಿಕೊಂಡಿದ್ದರೂ ನನ್ನ ಅಸ್ತಿತ್ವವಾಗಿರುವ ನಂಬಿಕೆಯ ಬುಡ ಅಲ್ಲಾಡುತ್ತಿರಲಿಲ್ಲ. ಅಷ್ಟಾದರೂ ದಯೆ ತೋರಬಹುದಿತ್ತು ಎನಿಸುವಂತೆ ಹೇಳುವ ದನಿಯನ್ನಿಲ್ಲಿ ಗುರುತಿಸಬಹುದು. ಹೆಣ್ಣು ಇಷ್ಟು ಮಟ್ಟಿಗಿನ ಸ್ಥಿತಿಸ್ಥಾಪಕತ್ವವನ್ನು ತೋರುವುದು ಯಾವತ್ತಿಗೂ ಅಚ್ಚರಿಯೇ. ಇಂದಿಗೂ ಅವಳು ಹೀಗೇ (ಸ್ವರೂಪ ಬದಲಾಗಿರಬಹುದು) ಯೋಚಿಸುವುದು, ಮುರಿದರೂ ಬಾಗಲೊಲ್ಲೆನೆಂಬ ಗಂಡಿನ ಗಂಡಸತ್ವವೂ (ಅದು ಅವನದೊಬ್ಬನದೇ ಸ್ವತ್ತಲ್ಲ… ಅದು ಬೇರೆ ವಿಚಾರ) ನಿತ್ಯ ಮುಖಾಮುಖಿಯಾಗುವುದು ತಪ್ಪಿಲ್ಲ.
“ಮುಚ್ಚಲೇ ಬೇಕಿದ್ದ ನಿನ್ನ
ಕಲೆಗಳ ಕುರಿತು
ನಿಗಾವಹಿಸಬೇಕಿತ್ತು”
ಹೆಣ್ಣು ಸಂಸಾರದ ಚೌಕಟ್ಟು ಮುರಿಯದಿರುವಂತೆ ನೋಡಿಕೊಳ್ಳಲು ಈ ಇಷ್ಟನ್ನೂ ಸಹಿಸಲು ತಯಾರಾಗಿಬಿಡುತ್ತಾಳಲ್ಲ ಎಂದು ಮರುಕ ಹುಟ್ಟುವುದರ ಜೊತೆಗೆ ಹೆಮ್ಮೆಯಾಗುತ್ತದೆ. ಕಾರಣ ಅದು ಅವಳಿಂದ ಮಾತ್ರ ಸಾಧ್ಯ. ಸಂಸಾರದ ಚೌಕಟ್ಟಿನಾಚೆ ಸರಿದೂ ಮತ್ತೆ ಒಳ ಸೇರುವ ಅವಕಾಶವೂ ಗಂಡಿಗೆ ಸಿಗುವುವಷ್ಟು ಸುಲಭವಾಗಿ ಹೆಣ್ಣಿಗೆ ಸಿಗುವುದಿಲ್ಲ. ಅವಕಾಶ ಮುಕ್ತವಾಗಿದ್ದರೂ ಅಘೋಷಿತ ನ್ಯಾಯಾಧೀಶರಂತೆ ವರ್ತಿಸುವ ಮನಸುಗಳ ನಿರಂಕುಶ ವರ್ತನೆಗೆ ಚೌಕಟ್ಟಿಲ್ಲ.
“ನನ್ನಿನಿಯನೇ
ಕಲೆಯೊಂದಿಗೂ
ಕೊಳೆಯೊಂದಿಗೂ
ಪ್ರೀತಿಸಬಲ್ಲೆ ನಾ
ನಿನ್ನನ್ನು”
ಗಂಡನೆನ್ನಿಸಿಕೊಳ್ಳುವ ನೀನು ಹೇಗಿದ್ದರೂ ಏನೇ ಆಗಿದ್ದರೂ ನಾ ನಿನ್ನನ್ನು ನೀನಿರುವಂತೆ ಪ್ರೀತಿಸಬಲ್ಲೆ ಎನ್ನುವ ಈ ಮಾತು ಸಾಕ್ಷಾತ್ ಹೆಣ್ಣಿನ ಮಾತೇ.. ಹೆಣ್ಣು ಯಾರನ್ನೇ ಆಗಲೀ ಒಮ್ಮೆ ಪ್ರೀತಿಸಿದರೆ ಆಯ್ತು ಜೀವನ ಪರ್ಯಂತ ಕಾಪಾಡಿಕೊಳ್ಳುವ ರೀತಿ ಇದು. ಆದರೆ ಅದೇ ಸಮಯದಲ್ಲಿ ಈ ಮನಸ್ಥಿತಿ ಗಂಡಿಗೆ ಸಾಧ್ಯವಾ ಎಂಬ ಯೊಚನೆ ಕಾಡುತ್ತದೆ.
“ಎಲ್ಲಾ ಕಂಡದ್ದಕ್ಕೆ
ಈಗ
ಸಲ್ಲದ ನೆಪವೊಡ್ಡಿ
ನೀನೇ ದೂರಾಗುತ್ತೀ
ಬದಿಗೆ ಸರಿಯುತ್ತೀ
ಮತ್ತು ಅಲ್ಲಿ ಆ ಜಾಗದಲ್ಲಿ
ನಿನಗೂ ಅರಿವಾಗುತ್ತೆ
ನಿಷ್ಠೆ ಬೇಡುವುದು
ಎಷ್ಟು ಕಷ್ಟವೆಂದು
ಮತ್ತೆ ತಾನೇ ತಾನಾಗಿಯೇ ಬೆತ್ತಲಾಗಿ, ಆದಮೇಲೆ ಆದೆ ಎಂಬ ಕಾರಣಕ್ಕೆ ಸಲ್ಲದ ನೂರಾರು ನೆಪವೊಡ್ಡಿ ದೂರಾಗಲು ಪ್ರಯತ್ನಿಸುವ ಗಂಡು ಪಾಪಪ್ರಜ್ಞೆಯಿಂದ ನರಳುವಾಗಲೂ ತನ್ನ ಪೊಳ್ಳು ಅಹಮ್ಮನ್ನು ಬಿಟ್ಟುಕೊಡಲು ತಯಾರಾಗದಿರುವುದು ಜಿಗುಪ್ಸೆ ಹುಟ್ಟಿಸುತ್ತದೆ. ನಿಷ್ಠನಾಗಿರದ ತಾನು ಅವಳಿಂದ ಅದೇ ನಿಷ್ಠೆಯನ್ನು ಬಯಸುತ್ತಾನಾದರೂ ಹೇಗೆ? ಹೋಗಲಿ ಕನಿಷ್ಠ ನಿನ್ನಂತರಂಗಕ್ಕಾದರೂ ನಿಷ್ಠೆಯನ್ನು ಬೇಡುವುದು ಎಷ್ಟು ಕಷ್ಟ ಎಂಬುದು ಅರ್ಥವಾಗಿರುತ್ತದೆ ಎನ್ನುವ ಖಚಿತ ಸಾಲುಗಳೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.
“ನಿಷ್ಠೆ”ಯ ರೀತಿಯಲ್ಲೇ ನನ್ನನ್ನು ಸೆಳೆದ ಮತ್ತೊಂದು ಕವಿತೆ ರೇಣುಕಾ ರಮಾನಂದರ “ಅವನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ” ಕವಿತೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರಾದ ರೇಣುಕಾ, ಇತ್ತೀಚಿನ ತಮ್ಮ ಗಮನಾರ್ಹ ಕವಿತೆಗಳಿಂದ ಎಲ್ಲರನ್ನೂ ಸೆಳೆದವರು. ಎಂ.ಎ.ಪದವೀಧರರು ಮತ್ತು ವೃತ್ತಿಯಿಂದ ಶಿಕ್ಷಕಿ. ಇವರ ಬಹುಚರ್ಚಿತ ಕವನ ಸಂಕಲನ “ಮೀನು ಪೇಟೆಯ ತಿರುವು”.
ಮೀನು ಪೇಟೆಯ ತಿರುವು ಸಂಕಲನದಲ್ಲಿರುವ “ಅವನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ” ಎನ್ನುವ ಈ ಕವಿತೆ ಬಹಳಷ್ಟು ಕಾರಣಕ್ಕೆ ಮತ್ತೆ ಮತ್ತೆ ಇಷ್ಟವಾಗುತ್ತದೆ ಮತ್ತು ಓದಿಸಿಕೊಳ್ಳುತ್ತದೆ
“ಯಾವಾಗಲಾದರೊಮ್ಮೆ ಅವನು
ತನ್ನ ಕಡುಗೆಂಪು ಕಮಲದಳಗಳಂತ
ಮುದ್ದು ಧಿಮಾಕು ತುಟಿ ಚಾಚಿ
ಈಗಲಾದರೂ
ಆಗಬಾರದ್ದು ಆಗಿಹೋಗಲೆಂಬಂತೆ”
ಹೀಗೆ ಶುರುವಾಗುವ ಕವಿತೆ, ಹಿಂದಿನಿಂದಲೂ ಕೆಂಪು ತುಟಿಗಳೆಂದರೆ ಹೆಣ್ಣಿಗೆ ಮಾತ್ರ ಹೋಲಿಸಬಹುದಾದ ರೂಪಕ ಎನ್ನುವ ಹಾಗೆ ಬಳಸಿಕೊಂಡು ಬಂದ ರೂಪಕವನ್ನು ಗಂಡಿಗೆ ಹೋಲಿಸಿ ಬರೆಯುವ ಮೂಲಕ ಹೊಸ ಸಂವೇದನೆಯನ್ನು ಹುಟ್ಟುಹಾಕುತ್ತದೆ.
ಛೇ
ಅಷ್ಟೂ ಗೊತ್ತಾಗುವುದಿಲ್ಲವೇ
ಅವನು ಸಿಟ್ಟಿನಲ್ಲಿದ್ದಾನೆ
ಈಗ ಅವನು ದುಃಖದಲ್ಲಿದ್ದಾನೆ ಅಥವಾ
ಗಹನ ಚಿಂತನೆಯಲ್ಲಿ….
ಎನ್ನುವ ಸಾಲುಗಳು ಹೆಣ್ಣು ತನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನೂ ತೆಕ್ಕೆಗೆಳೆದುಕೊಳ್ಳುತ್ತಾಳೆ. ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾಳೆ ಎನ್ನುವುದಕ್ಕೆ ನಿದರ್ಶನ. ಆ ಅವನ ಕೋಪವನ್ನು ಅವ ಹೇಳದೆಯೇ ಅವಳು ಗ್ರಹಿಸುತ್ತಾಳೆ. ಮೊದಲಿಗೆ ಹೆಣ್ಣೊಬ್ಬಳು ಗಂಡನ್ನು ಬಯಸುವುದು ಒಂದು ರೀತಿ ಬಂಡಾಯದ ದನಿ ಎನಿಸುತ್ತದೆಯಾದರೂ ಪದ್ಯ ಮಧ್ಯಭಾಗದಿಂದ ಬೇರೊಂದು ಮಜಲಿಗೆ ಹೊರಳಿಕೊಳ್ಳುತ್ತದೆ.
ಗಂಡನ್ನು ವರ್ಣಿಸುತ್ತಾ ಸಾಗುವ ಕವಿತೆ, ಅದನ್ನು ಲೋಕ ಗ್ರಹಿಸುವ ರೀತಿಯನ್ನು ವಿಡಂಬನೆ ಮಾಡುತ್ತದೆ. ಆದರೆ ಅರ್ಧದಿಂದ ಮುಂದಕ್ಕೆ ಹೊರಳಿಕೊಳ್ಳುವಾಗ ಊಹಿಸಲಾಗದ ತಿರುವೊಂದು ಕಾಣಿಸಿಕೊಳ್ಳುತ್ತದೆ. ಮತ್ತದು ಕವಿತೆಯ ಮೂಲ ಆಶಯದಂತೆಯೂ ಕಾಣಿಸಿಕೊಳ್ಳುತ್ತದೆ. ಲೋಕ ತನ್ನ ಪೂರ್ವಾಗ್ರಹ ಪೀಡಿತ ದೃಷ್ಟಿಯನ್ನು ಬದಲಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ.
“ದಯವಿಟ್ಟು ಕೇಳಿ
ಕೆಂಪಗಿನ ಅಧರಗಳ ಜೊತೆ
ಸಂತೈಸುವ ಎದೆಯನ್ನೂ ಹೊಂದಿರುವ
ಆತ ಓರ್ವ ಅಪ್ಪನಿಗೆ ಅಹುದು
ಅದೇ ತುಟಿಯಿಂದ ಆಗಾಗ ಮುದ್ದಿಸಿರುತ್ತಾನೆ
ಮಗಳ ಮುಂಗುರುಳನ್ನು
ಕೂಟ ಮುಗಿದ ಮೇಲೆ ಬೆವರಿದ ಪತ್ನಿಯ ನೊಸಲನ್ನು
ವಿದಾಯದ ಗಳಿಗೆಯಲ್ಲಿ ಸಹೋದರಿಯ ಬೈತಲೆಯನ್ನು
ಅವ್ವ ಸತ್ತಾಗ ತುತ್ತಿಟ್ಟ ಅಂಗೈನ್ನು
ಅಪರೂಪಕ್ಕೊಮ್ಮೆ ನಡುಗುತ್ತ ನನ್ನಂತಹ
ಪ್ರೇಯಸಿಯ ಗುಲಾಬಿ ಕೆನ್ನೆಯನ್ನು
ಇಷ್ಟಕ್ಕೇ…
ರಾತ್ರಿ ಯಾರು ಯಾರೆಲ್ಲ
ಬಂದುಹೋಗುತ್ತಾರೆಂದು ಗಟ್ಟಿಸಿ ಕೇಳಿಬಿಟ್ಟಿರಿ ನೀವು…”
ದಯವಿಟ್ಟು ನಿಮ್ಮ ಪಾಡಿಗೆ ನೀವಿದ್ದು ಬಿಡಿ ಮತ್ತು ನಮ್ಮನ್ನು ನಮ್ಮ ಪಾಡಿಗೆ… ಎಂದು ಕವಿತೆ ಹೇಳುತ್ತದೆಯಾದರೂ ಕೊನೆಯಲ್ಲಿ ಸಮಾಜ ಆ ಅವಳಿಗೆ ಕೊಡುವ ಎರಡು ಆಯ್ಕೆಯನ್ನು ಹೇಳುವಾಗ ವಿಷಾದ ಹುಟ್ಟಿಸಿಬಿಡುತ್ತದೆ.
“ನಿನಗಿರುವುದು ಎರೆಡೇ ಆಯ್ಕೆ
ಮೊನ್ನೆ ಸತ್ತವಳ ಎರಡು ಬೊಗಸೆ ಬೂದಿಯ
ಕುರಿತಾಗಿ ಉಘೇ ಉಘೇ ಎಂಬಂತಹ ಒಂದು ಕವಿತೆ
ಇಲ್ಲಾ ಸಾಮೂಹಿಕ ಆತ್ಮಾರ್ಪಣೆಯ
ಕುರಿತಾಗಿ ಒಂದು ನಿಗಿ ನಿಗಿ ಕಥೆ
ಬರೆಯಬಲ್ಲೆಯಾದರೆ
ಈಗಲೂ ನಿನಗೆ ಮಾಫಿಯಿದೆ”
ರೇಣುಕಾರ ಈ ಕವಿತೆ ತನ್ನ ನಿರೂಪಣೆಯಿಂದ, ಸಂಯಮದಿಂದಾಗಿ ಮನಸಿನಲ್ಲಿ ಬಹಳ ಕಾಲ ಉಳಿಯುತ್ತದೆ.
ಇಲ್ಲಿ ಹೇಳಲು ಹೊರಟ ಮತ್ತೊಂದು ಕವಿತೆ ಅನುರಾಧಾ ಪಿ. ಸಾಮಗ ಅವರ “ಮುಷ್ಕರವೊಡ್ಡುವೊಂದು ಯೋಚನೆ” ಕವಿತೆ. ಮೂಲತಃ ಉಡುಪಿಯವರಾದರೂ ಮೈಸೂರಿನಲ್ಲಿ ನೆಲೆಸಿರುವ ಅನುರಾಧಾರ ಕವಿತೆಗಳ ಲಯ ಮತ್ತು ಲಾಲಿತ್ಯ ಬಹಳ ಇಷ್ಟವಾಗುತ್ತದೆ. ಭಾವಗೀತೆಗಳನ್ನು ಸುಂದರಾವಾಗಿ ಹಾಡಬಲ್ಲ ಅನುರಾಧಾರವರು ಭಾವಗೀತೆಯ ಲಯ ಮತ್ತು ಚೌಕಟ್ಟನ್ನೂ ದುಡಿಸಿಕೊಳ್ಳುತ್ತಾರೆ. ಒಂದು ಚಂದದ ನೀರವ ಮೊರೆವ ಅಲೆ ಹಿಂದೆ ಹೊರಟಂತೆ ಕೈ ಹಿಡಿದು ಸೆಳೆದುಕೊಳ್ಳುವ ಗುಣ ಅವರ ಈ “ಮುಷ್ಕರವೊಡ್ಡುವೊಂದು ಯೋಚನೆ” ಕವಿತೆಗಿದೆ. ಇದೊಂದು ಮಾರ್ಮಿಕ ಕವಿತೆ.
“ಮುಷ್ಕರವೊಡ್ಡುವೊಂದು ಯೋಚನೆ ರೆಪ್ಪೆ ಮೇಲಿನ ಹಾದಿಗೆ
ಕನಸು ತಂತಿ ಮಿಡಿದು ಬಗೆರಾಗ ಮೆರವಣಿಗೆ ಹೊರಡುವ ಬೀದಿಗೆ
ಹೃದಯದುಂಬಿದೊಂದು ಪಲುಕೇ ಕಲ್ಲಬಂಡೆಯನೂ ಹೊರಿಸಿದರೆ
ಎದೆಯಿಂದಾಚೆ ಚಿಮ್ಮೀತಾದರೂ ಹೇಗೆ ಹೇಳು ಭಾವವಾದರೂ ಜೀವಜಲವಾದರೂ”
ಹೀಗೆ ಶುರುವಾಗುವುದು ಕವಿತೆ ರಕ್ತ ಮಾಂಸದ ಪುಟ್ಟ ಮಿಡಿವ ಹೃದಯಕ್ಕೆ ಬರಸಿಡಿಲು ಬಡಿದರೆ ತಡೆದೀತಾದರೂ ಹೇಗೆ ಎನ್ನುವ ಭಾವದಲ್ಲಿ ಪ್ರಶ್ನಿಸುತ್ತಾ ಹೋಗುವ ಕವಿತೆ ವಿಷಾದದಲ್ಲಿ ಮುಗಿಯದೆ ಆಶಾವಾದಿಯಾಗುತ್ತ ಹೋಗುತ್ತದೆ. ನೋಯುವ ನೋಯಿಸಿಕೊಳ್ಳುವ ಆಟದ ಸೂತ್ರಧಾರ ಮತ್ತಾರೋ ಇದ್ದಾನೆ ಎನ್ನುತ್ತದೆ.
“ಕತ್ತಲಾಚೆಗೆ ಅಚ್ಚಬಿಳಿಯೆಳೆತರುವ ಹೊತ್ತಿಗೆ
ಕಾಯುವವನಿನ್ನೂ ನಿದ್ದೆಯಲಿದ್ದಾಗ
ಪ್ರತಿ ನಸುಕಿಗೂ ಮುನ್ನ ಜಡಿದ ಬೀಗ ತುಸು ತೆರೆದು, ಮುಚ್ಚಿದ್ದು ಕಂಡವರಾರು ಹೇಳು”
“ಮೌನವಲ್ಲ, ನೆಲವದುರಿಸುವ ನೃತ್ಯ ಬೇಕವಗೆ; ಬಲು ಜೋರಿನವನು
ಬಿಡದೆ ಅಂತರಂಗದ ಮೃದಂಗ ನುಡಿಸುವವನು
ಚಾಚಿಕೊಂಡ ಆ ಕಿವಿಯ ಕಣ್ಮುಚ್ಚಿ ಕಾಣಬಲ್ಲವನು
ಅವಳೇನೂ ಕಮ್ಮಿಯಿಲ್ಲ; ಕೀಲಿಗೊಂಚಲಲೇ ಬಣ್ಣದ ಪಕಳೆಯರಳುತಾವೆ
ಘಮಕೆ ನರ್ತಿಸುವ ಗಾಳಿಯಲೆಗಂಟಿಸಿ ಅವನೂರಿಗೆ ಅಟ್ಟುತಾಳೆ”
ಪ್ರೀತಿಯೆಂಬುದು ಮಾತ್ರ ಯಾವ ಗಡಿಗೂ ತಡೆಯುವ ಶಕ್ತಿಯಿಲ್ಲದ ಅಮರ್ತ್ಯದ ದೈತ್ಯ ಪಕ್ಷಿ. ಅವನು ಕರೆಯುತ್ತಾನೆ ಮತ್ತವಳು ಬರುತ್ತಾಳೆ ಅಷ್ಟೇ. ಯಾವ ರೂಪವಾದರೂ ಸರಿ.
“ಲೋಕ ಹೇಳುವುದು, ‘ಗುರುವಿನ ಗುಲಾಮನಾಗದೆ ಮುಕುತಿಯಿಲ್ಲ’
ಗುರುವಿನ ಮಾತು, ‘ಆಸೆಯಿದ್ದವನ ದುಃಖ ಬಿಡುವುದಿಲ್ಲ’
ಈ ಮನಸಿಗೋ ಮುಕ್ತಿ ಬೇಕಿಲ್ಲ, ದುಃಖದ ಭಯವಿಲ್ಲ”
ಈ ಜಗತ್ತು ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯುವುದಿಲ್ಲವೆನ್ನುತ್ತದೆ, ಆ ಗುರುವೋ ಆಸೆಯೇ ದುಃಖಕ್ಕೆ ಮೂಲ ಎನ್ನುತ್ತಾನೆ. ಆದರೆ ನನಗೆ ಮುಕ್ತಿಯು ಬೇಕಿಲ್ಲ ದುಃಖದ ಭಯವಿಲ್ಲ. ಹಾಗಾಗಿ ಆಸೆ ಪಡುವುದಷ್ಟೆ ನನ್ನ ಧರ್ಮ ಎನ್ನುವ ಧೋರಣೆಗೆ ಕವಿತೆ ತಲುಪುತ್ತದೆ.
“ಇಂಥ ಇವರದೊಂದೂರಿನ ಅಂಥದೊಂದು ಬೀದಿಯಲಿ
ಮುಷ್ಕರಗಳು ನೆಲಕಚ್ಚುತಾವೆ,
ರಾಗ ಮತ್ತೆ ಮತ್ತೆ ಗರಿಬಿಚ್ಚುತಾವೆ
ಇಷ್ಟಕ್ಕೂ ಅನುರಾಗವೆಂದರೇನು ಹೇಳು,
ರಾಗವನನುಸರಿಸುವ ಹಾಡು,
ಆಸೆ ಮುನ್ನಡೆಸುವ ಜಾಡು..”
ಕೊನೆಗೂ ಆಸೆ ತೆಕ್ಕೆಯ ಸೇರಿ ಸುಖಿಸುವುದನ್ನೇ ನೆಚ್ಚಿಕೊಳ್ಳುತ್ತಾ ಕವಿತೆ, ಇದೇ ಬದುಕು ಹೀಗೇ ಬದುಕುತ್ತೇನೆ ಎನ್ನುತ್ತಾ ಮತ್ತೊಂದು ಪ್ರಾರಂಭಕ್ಕೆ ಹೊರಳುತ್ತದೆ. ಇಂತಹ ಆಶಾವಾದವೇ ಅನುರಾಧಾರ ಕವಿತೆಗಳ ವಿಶೇಷ ಚಂದ.
ಇಲ್ಲಿನ ಒಂದೊಂದು ಕವಿತೆಯೂ ಭಿನ್ನ ಮಾದರಿ, ಭಾಷೆಯನ್ನು ದುಡಿಸಿಕೊಂಡ ರೀತಿಯಿಂದಾಗಿ ವಿಶೇಷವೆನಿಸುತ್ತವೆ. ಅಷ್ಟರ ಮಟ್ಟಿಗೆ ತಮ್ಮದೇ ಸಿಗ್ನೇಚರ್ ಹೊಂದಿರುವ ಈ ಎಲ್ಲ ಕವಯಿತ್ರಿಯರೂ ಆಶಾಭಾವ ಮೂಡಿಸುತ್ತಾರೆ….
(ಮುಂದುವರಿಯುತ್ತದೆ)
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”