ಇಂಡಿಯದ ದೇವರುಗಳಿಗೆ ಸಿಡ್ನಿಯಲ್ಲಿ ಈಗೀಗ ಹಲವು ದೇವಸ್ಥಾನಗಳಿವೆ. ಅಲ್ಲದೆ ಇಂಡೋಚೀನ ದೇಶಗಳಿಂದ ವಲಸೆ ಬಂದವರ ಬೌದ್ಧ ದೇವಸ್ಥಾನಗಳೂ, ಮುಸಲ್ಮಾನರ ಮಸೀದಿಗಳೂ ಅಲ್ಲಲ್ಲಿ ಇವೆ. ಚರ್ಚುಗಳ ಬಗ್ಗೆಯಂತೂ ಹೇಳುವುದೇ ಬೇಡ. ಮುರುಗನ್, ವೆಂಕಟೇಶ್ವರ, ಮಹಾಲಕ್ಷ್ಮಿ, ಗುಹಾಂತರ ಶಿವ, ಎಂಬೆಲ್ಲಾ ಪಾರಂಪರಿಕ ಇಂಡಿಯನ್ ದೇವರುಗಳ ದೇವಸ್ಥಾನವಲ್ಲದೆ ಸ್ವಾಮಿ ನಾರಾಯಣ, ಹರೇ ಕೃಷ್ಣದಂತಹ ಆಧುನಿಕ ಮಠ/ದೇವಸ್ಥಾನಗಳೂ ಅವತರಿಸಿವೆ. ಎಲ್ಲೆಡೆ ವಾರದ ಪೂಜೆ, ಮಂಗಳಾರತಿ, ಭಕ್ತಮಂಡಲಿಯ ಭಜನೆ, ಹರಿಕಥೆಯಂತಹ ಹಲವು ಆಟಗಳೂ ತಪ್ಪದೆ ನಡೆಯುತ್ತವೆ. ವಲಸಿಗರಿಗೆ ಕೈಯಲ್ಲೊಂದಿಷ್ಟು ದುಡ್ಡು ಕೂಡಿದೊಡನೆ, ಲೌಕಿಕ ಕಿರಿಕಿರಿಗಳು ಕಡಿಮೆಯಾದೊಡನೆ, ತುಸು ಸ್ಥಿರವಾಗಿ ನೆಲೆ ನಿಂತೊಡನೆ ದೈವಭಕ್ತಿ ನುಗ್ಗಿಬಂದು, ಉಕ್ಕಿ ಹರಿಯುವುದನ್ನು ಕಣ್ಣಾರೆ ಕಂಡಿದ್ದೇನೆ. ಎದೆಯೊಳಗೆ, ಮನದೊಳಗೆ ಹೊತ್ತು ತಂದದ್ದು ಧುತ್ತೆಂದು ಪ್ರದರ್ಶನಕ್ಕೆ ನಿಲ್ಲುತ್ತದೆ. ಸಾಮುದಾಯಿಕ ಅಂಶಗಳು ಅದರೊಡನೆ ಸೇರಿಕೊಂಡು ಇಲ್ಲದಿದ್ದರೆ ಆಗದು ಎಂಬಂತೆ ಸುತ್ತಿಕೊಂಡು ಬಿಡುತ್ತದೆ.
ಈ ಪರಿಯ ಭಕ್ತರೆಲ್ಲಾ ದೇವಸ್ಥಾನಗಳ ವ್ಯಾಪಾರಕ್ಕೆ ಸಮೃದ್ಧ ಗ್ರಾಹಕರಾಗಿ ಮಾರ್ಪಡುತ್ತಾರೆ. ದಾನ, ಸೇವೆಯೆಂದು “ಕೃತಾರ್ಥ ಭಾವ” ಕಟ್ಟಿಕೊಡುವ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಅದರ ಪರಿಣಾಮವಾಗಿ ಸಿಮೆಂಟು, ಮರ ಅಥವಾ ಆಧುನಿಕ ಪ್ಲಾಸ್ಟಿಕ್ ಬಳಸಿ ಅಗ್ಗವಾಗಿ ಕಟ್ಟಿದ ದೇವಸ್ಥಾನಗಳಿಗೆ ಹೊನ್ನ ಕಲಶಗಳು ಒದಗಿಬರುತ್ತದೆ. ಹೊರಗೆ ಇದು ಆಗುತ್ತಿದ್ದಂತೆ ಈ ದೇವಸ್ಥಾನಗಳು ನಡೆಸುವ ಕಮಿಟಿಗಳಲ್ಲಿ ಒಳಜಗಳ ಹುಟ್ಟಿಕೊಳ್ಳುತ್ತದೆ. ಪ್ರತಿಷ್ಠೆ, ಹಣ, ಶಕ್ತಿಯ ದೊಂಬರಾಟ ಹಬ್ಬಿಕೊಳ್ಳುತ್ತದೆ. ಒಂದು ದೇವಸ್ಥಾನ ಹೋಳಾಗಿ ಪಕ್ಕಪಕ್ಕದಲ್ಲಿ ಎರಡಾಗುತ್ತವೆ. ಜನಸ್ತೋಮವೂ ಒಡೆಯುತ್ತದೆ. ಸಮುದಾಯವೂ ಒಡೆಯುತ್ತದೆ. ಯಾಕೋ ಇವೆಲ್ಲಾ ಪುನರಾವರ್ತನೆಯೇ ಆದ್ದರಿಂದ ಇಲ್ಲಿ ಹೆಚ್ಚು ವಿಸ್ತರಿಸುವುದರಲ್ಲಿ ಅರ್ಥವಿಲ್ಲ.
ಆದರೆ, ಸಿಡ್ನಿಯಲ್ಲಿರುವ ಅತಿ ಹಳೆಯ ದೇವಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಸಂಗತಿ ಮಾತ್ರ ತುಂಬಾ ರೋಚಕವಾಗಿತ್ತು. ಅದು ಇಂಡಿಯದ ಸಮುದಾಯವನ್ನು ಮೀರಿ ಆಸ್ಟ್ರೇಲಿಯದ ಸಮಾಜದಗಲಕ್ಕೂ ಹರಡಿ ಚರ್ಚಿತವಾಯಿತು. ಮೊದಲಿಗೆ ಆ ಹಳೆಯ ದೇವಸ್ಥಾವನ್ನು, ದೇವಸ್ಥಾನ ಅನ್ನುವುದಕ್ಕಿಂತ ದೇವಸ್ಥಾನಗಳ ಕಾಂಪ್ಲೆಕ್ಸ್ ಅನ್ನಬೇಕೇನೋ. ಬೇರೆ ಬೇರೆ ಭಕ್ತಪರಂಪರೆಗೆ ಒಗ್ಗುವಂತಹ ಇಂಡಿಯದ ದೇವರುಗಳ ಒಕ್ಕೂಟವೇ ಆ ದೇವಸ್ಥಾನದ ನಿಜವಾದ ಸಕ್ಸಸ್ಸಿಗೆ ಕಾರಣ ಅನ್ನಬಹುದು. ಸಿಡ್ನಿಯ ಹೊರಗೆ ದೂರದಲ್ಲಿ ಚೆಂದವಾದ ದೊಡ್ಡ ಜಾಗವನ್ನು ಕೊಂಡು, ಕಾಡು ಸವರಿ ಕಟ್ಟಿರುವ ದೇವಸ್ಥಾನ ಅದು. ಅಲ್ಲಿ ಪ್ರತಿವರ್ಷವೂ ಹಲವು ಹಬ್ಬ-ಹರಿದಿನ ನಡೆಯುತ್ತದೆ. ರಜಾದಿನಗಳಲ್ಲಿ ಬೆಳಗಿನ ತಿಂಡಿ, ಕಾಫಿಗೆ ದೇವಸ್ಥಾನದ ಸೇವಾರ್ಥಿಗಳು ಹಣಪಡೆಯದೇ ನಡೆಸುವ ಕ್ಯಾಂಟೀನಿದೆ. ಅದರಿಂದ ಬಂದ ದುಡ್ಡೆಲ್ಲಾ ದೇವಸ್ಥಾನದ ಬೊಕ್ಕಸಕ್ಕೇ ಸಲ್ಲುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ.
ಅಂತಹ ದೇವಸ್ಥಾನದ ಪುನರುಜ್ಜೀವನಕ್ಕೆ ಅದರ ಕಮಿಟಿ ಮನಸ್ಸು ಮಾಡಿತು. ಹಲವು ವರ್ಷಗಳ ಹಿಂದಿನ ಮಾತಿದು. ಬದಲಾದ ಭಕ್ತವೃಂದದ ಡೆಮಾಗ್ರಫಿಗೆ ಹೊಂದುವಂತೆ ಹೊಸ ದೇವರನ್ನು ಸೇರಿಸುವ ಕೆಲಸ ಅಗತ್ಯ ಅನಿಸಿತು. ಅವಕ್ಕೆ ಹೊಸ ಕಲಶ, ಗೋಪುರ, ವಿಗ್ರಹಗಳಿಂದ ಕೂಡಿದ ಹೊರಾಂಗಣವನ್ನೆಲ್ಲಾ ಕಟ್ಟುವ ಬೃಹತ್ ಕನಸನ್ನು ಕಂಡ ಕಮಿಟಿಯು ಅದನ್ನು ನಿಜವಾಗಿಸಲು ಕಂಕಣಬದ್ಧವಾಯಿತು. ಅದಕ್ಕಾಗಿ ಭಕ್ತಾದಿಗಳಿಂದ ದುಡ್ಡಿನ ಹೊಳೆ ಹರಿಯಿತು. ಆ ಹೊಳೆ ಹರಿಸಲು, ಶಾಸ್ತ್ರೀಯ ಸಂಗೀತ ಸಂಜೆಗಳಂತಹ ಹಲವು ಚಟುವಟಿಕೆ ಏರ್ಪಟ್ಟಿತು. ಬಹುಶಃ ಅಂದುಕೊಂಡದ್ದಕ್ಕಿಂತ ಹೆಚ್ಚೇ ದುಡ್ಡು ದಕ್ಕಿರಬೇಕು. ಭಕ್ತರ ಭಕ್ತಿಯ ನಿಜವಾದ ಬಲ, ಹರವು ಕಮಿಟಿಗೆ ಮೊದಲೇ ಗೊತ್ತಿತ್ತೋ ಇಲ್ಲವೋ, ಆಗಂತೂ ಖಾತ್ರಿಯಾಯಿತು. ಇಂಡಿಯದಿಂದ ವಿಗ್ರಹ ಕೆತ್ತನೆಯ ಕೆಲಸಕ್ಕೆ ಹಲವು ಮಂದಿಯನ್ನು ಕರೆಸಿಕೊಂಡು ದೇವಸ್ಥಾನ ಕಟ್ಟುವ ಕೆಲಸ ಸಿಕ್ಕಾಪಟ್ಟೆ ಜೋರಾಗಿ ನಡೆಯಲು ತೊಡಗಿತು.
ಅದರೆ ಈ ಎಲ್ಲಾ ಸುಕಾರ್ಯಕ್ಕೆ ಇದ್ದಕ್ಕಿದ್ದಂತೆ ಅನಪೇಕ್ಷಿತ ತಡೆ ಬಂದೊದಗಿತು. ಇಲ್ಲಿಯ ಯೂನಿಯನ್ ಒಂದು ಕೆಲಸದ ಸೈಟಿಗೆ ಹೇಳದೆ ಕೇಳದೆ ಬಂದುಬಿಟ್ಟಿತು. ಅಲ್ಲಿಯ ಕೆಲಸಗಾರರ ಸ್ಥಿತಿಗತಿಗಳ ಬಗ್ಗೆ ತನಗೆ ಬಂದಿದ್ದ ಕಂಪ್ಲೇಂಟಿನ ಹಿಂದಿನ ಸತ್ಯವನ್ನು ಅದು ಕಣ್ಣಾರೆ ನೋಡಲು ಬಂದಾಗ ಕಂಡಿದ್ದಕ್ಕೆ ದಂಗುಬಡಿದು ಹೋಯಿತು. ದೇವಾಸ್ಥಾನದ ಬಳಿಯ ಕಿರಿದಾದ ಮೇಕ್-ಶಿಫ್ಟ್ ಕೋಣೆ ಒಂದೊಂದರಲ್ಲೇ ನಾಕಾರು ಕೆಲಸಗಾರರನ್ನು ತುಂಬಿಸಿ ಬಿಟ್ಟಿದ್ದರು. ಕೆಲಸಗಾರರಿಗೆ ಕೊಡಬೇಕಾದ ಕನಿಷ್ಟ ವೇತನದ ವಿಷಯದಲ್ಲೂ ಕಾನೂನಿನ ಉಲ್ಲಂಘನೆಯಾಗಿತ್ತು. ಅವರ ಪಾಸ್‌ಪೋರ್ಟ್ ಎಲ್ಲ ಒಡೆಯರ ಕೈಯಲ್ಲಿ ಸೇರಿಕೊಂಡಿತ್ತು. ಕೆಲಸಗಾರರು ಬೇಕೆಂದಾಗ ಹೊರಗೆ ಹೋಗದಂತೆ ದಿಗ್ಬಂಧನವಿತ್ತು. ತಮ್ಮ ಯಾವುದೇ ಹಕ್ಕಿನ ಬಗ್ಗೆಯೂ ಕೆಲಸಗಾರರಿಗೆ ಹೇಳಿರಲಿಲ್ಲ. ಕೆಲಸಗಾರರ ಸ್ಥಿತಿ ನಿಜವಾಗಿಯೂ ಬಾಂಡೆಡ್ ಲೇಬರಿನಂತೇ ಇತ್ತು ಎಂದು ಮನಗಂಡ ಯೂನಿಯನ್ ಅದನ್ನು ದೊಡ್ಡ ಸುದ್ದಿ ಮಾಡಿತು.
ರೇಡಿಯೋ ಪತ್ರಿಕೆಗಳಲ್ಲಿ ವಿಷಯದ ಚರ್ಚೆ ನಡೆಯಿತು. ಕಂಪ್ಲೇಂಟ್ ಕೊಟ್ಟವರು ಯಾರಿರಬಹುದು ಎಂದು ಇಂಡಿಯದವರಲ್ಲಿ ಹಲವು ದಿನ ಗುಸುಗುಸು ನಡೆಯಿತು. ಈ ದೇವಸ್ಥಾನಕ್ಕೆ ಹರಿದ ಹಣದ ಹೊಳೆಯನ್ನು ಸಹಿಸಲಾರದೆ ಇನ್ನೊಂದು ದೇವಸ್ಥಾನದವರು ಮಾಡಿರಬಹುದು ಎಂದು ಕೆಲವರ ಅಂಬೋಣ. ಕೆಲಸದವರಲ್ಲೇ ಯಾರಿಗೋ ಸಿಟ್ಟು ಬಂದು ಹೇಳಿಬಿಟ್ಟಿರಬಹುದು ಎಂದು ಇನ್ನು ಕೆಲವರ ಅನಿಸಿಕೆ. ಕೆಲಸದವರ ಸ್ಥಿತಿ ನೋಡಲಾರದೆ ಕಣ್ಣೀರು ಮಿಡಿದ ಭಕ್ತರ ಕಿತಾಪತಿ ಇರಬಹುದು ಎಂದೂ ಹೇಳುತ್ತಿದ್ದರು. ಆಸ್ಟ್ರೇಲಿಯದವರಿಗೆ ಇಂಡಿಯದವರ ಮೇಲೆ ಹೊಟ್ಟೆಕಿಚ್ಚು, ಅದಕ್ಕೇ ಹೀಗೆ ಮಾಡಿದ್ದಾರೆ ಎಂದು ಹಲವರ ಅನಿಸಿಕೆ.
ಇದೆಲ್ಲಕ್ಕೆ ಕಲಶಪ್ರಾಯದಂತೆ ಕೇಳಿಬಂದ ಅಧಿಕೃತ ಮಾತು ಮಾತ್ರ ಎಂದಿಗೂ ಮರೆಯಲಾಗದ್ದು. ಎ.ಬಿ.ಸಿ ರೇಡಿಯೋದಲ್ಲಿ ಕಮಿಟಿಯ ಪ್ರೆಸಿಡೆಂಟರನ್ನು ಮಾಡಿದ ಸಂದರ್ಶನದಲ್ಲಿ “ಏಕೆ ಹೀಗೆ ಕೆಲಸಗಾರರನ್ನು ಕೆಟ್ಟದಾಗಿ ನೋಡಿಕೊಂಡಿರಿ” ಎಂದು ಕೇಳಿದಾಗ ಆ ಅಧ್ಯಕ್ಷ ಮಹಾಶಯರು ಹೇಳಿದ್ದು ದಂಗುಬಡಿಸುವಂತಿತ್ತು. ಅವರನ್ನೆಲ್ಲಾ ಸಾಮಾನ್ಯ ಕೆಲಸಗಾರರು ಎಂದು ನೋಡುವುದೇ ತಪ್ಪು, ಅವರು ದೇವರ ಕೆಲಸಗಾರರು. ರಾಜ ಮಹಾರಾಜರ ಕಾಲದಿಂದಲೂ ಭಾರತದಲ್ಲಿ ದೇವಸ್ಥಾನದ ಕೆಲಸಕ್ಕೆ ಶಿಲ್ಪಿಯಿಂದ ಹಿಡಿದು ಮಣ್ಣುಹೊರುವ ಕೆಲಸಗಾರರೆಲ್ಲಾ ಹಣ ಪಡೆಯದೇ, ಸೇವಾರ್ಥ ಮಾಡುವ ಪರಂಪರೆಯಿದೆ. ಇದು ಹಾಗೆಯೇ. ಇದು ಆಸ್ಟ್ರೇಲಿಯನ್ನರಿಗೆ ಅರ್ಥವಾಗದ್ದು ಎಂದರು. ಎರಡಂತಸ್ತಿನ ಬಂಗಲೆಗಳಲ್ಲಿ ವಾಸ ಮಾಡುವ ಭಕ್ತರ ಈ ಮುಂದಾಳಿನ ಮಾತಿನಲ್ಲಿ ಮನುಷತ್ವವನ್ನು ದುರ್ಬೀನಿಡಿದು ಹುಡುಕಬೇಕಿತ್ತು. ದೈವಭಕ್ತಿ ನೆತ್ತಿಗೇರಿ ಬರುವ ವಿಸ್ಮೃತಿಯಲ್ಲಿ ಇವೆಲ್ಲಾ ತಪ್ಪಲ್ಲ ಅನಿಸಬಹುದೇನೋ. ರೇಡಿಯೋದವರು ಕಕ್ಕಾವಿಕ್ಕಿಯಾಗುವುದಿರಲಿ ನನ್ನಂತಹ ಹಲವರು ನಾಚಿಕೆ, ಬೇಸರ ಹಾಗು ಸಿಟ್ಟು ಎಲ್ಲವೂ ಮಿಳಿತಗೊಂಡ ಅನುಭಾವದಲ್ಲಿ ಸಿಲುಕಿ ಬೆರಗಿನಲ್ಲಿ ಉಳಿದೆವು.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.